ಪ್ರಕಾಶಕರು, ಲೇಖಕರ ಮತ್ತು ಓದುಗರ ನಡುವಿನ ಬಹುಮುಖ್ಯ ಕೊಂಡಿ. ಅವರ ಸಹಾಯವಿಲ್ಲದೇ ಯಾವುದೇ ಲೇಖಕರ ಕೃತಿಯು ಓದುಗರನ್ನು ತಲುಪಲು ಸಾಧ್ಯವಿಲ್ಲ. ನಮ್ಮ ಭಾಷೆಯಲ್ಲಿ ಯಾವೆಲ್ಲ ತರಹದ ಸಾಹಿತ್ಯ ಕೃಷಿ ನಡೆಯುತ್ತಿದೆ ಅನ್ನುವುದನ್ನು ಓದಿ, ಓದುಗರ ಮುಂದಿಟ್ಟಾಗಲೇ ಒಬ್ಬ ಓದುಗನಿಂದ ಮತ್ತೊಂದು ಓದುಗ ಹುಟ್ಟಿಕೊಳ್ಳುವುದು. ಅದರ ಜೊತೆಗೇ ಎಂಥ ಪ್ರಕಾರದ ಪುಸ್ತಕವನ್ನು ಓದುಗರ ಕೈಗಿಡಬೇಕು, ಮತ್ತೆ ಓದುಗನಿಗೆ ಪುಸ್ತಕ ತಲುಪಿಸುವ ಮಾರ್ಗಗಳೇನು ಎಂಬುದೂ ಈ ಹೊತ್ತಿನಲ್ಲಿ ಚರ್ಚಿಸಬೇಕಾದ ವಿಷಯ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕೆಲವು ಪ್ರಕಾಶಕರು ಕೆಂಡಸಂಪಿಗೆಯೊಟ್ಟಿಗೆ ಮಾತನಾಡಿದ್ದು, ಅವರ ಆಲೋಚನೆಗಳು, ಸಮಸ್ಯೆಗಳು ಮತ್ತು ಅವರ ದೃಷ್ಟಿಯಲ್ಲಿ ಈಗಿನ ಓದುಗರ ಮನಃಸ್ಥಿತಿ ಹೇಗಿದೆ ಎಂಬುದನ್ನು ಇಲ್ಲಿ ಹಂಚಿಕೊಂಡಿದ್ದಾರೆ ರೂಪಶ್ರೀ ಕಲ್ಲಿಗನೂರ್‌

ಇದು ತಂತ್ರಜ್ಞಾನದ ಯುಗ. ಈಗೆಲ್ಲ ಕೇವಲ ಡಿಜಿಟಲ್‌ ಮಾಧ್ಯಮದಲ್ಲಿ ಜನ ಕಾಲ ಕಳೆಯುತ್ತಿದ್ದಾರೆ. ಕುಂತರೂ ನಿಂತರೂ ನಿನ್ನದೇ ಧ್ಯಾನ ಎನ್ನುವಂತೆ, ಫೋನಿನಲ್ಲಿ ಇಡೀ ದಿನ ಕಳೆಯುತ್ತಾರೆ. ಬಿಟ್ಟರೆ, ಕಂಪ್ಯೂಟರ್ರು ಐಪ್ಯಾಡ್‌ನದ್ದೇ ಹಾವಳಿ… ಅಂಥದ್ದರಲ್ಲಿ ಒಂದಷ್ಟು ಬಿಡುವುಮಾಡಿಕೊಂಡು, ಊರೆಲ್ಲ ಅಲೆದಾಡುವ ಮನವನ್ನು ಒಂದೆಡೆಗೆ ಕಟ್ಟಿಹಾಕಿ ಯಾರು ಪುಸ್ತಕ ಓದ್ತಾರೆ? ಅಷ್ಟು ವ್ಯವಧಾನ ಯಾರಿಗಿದೆ ಹೇಳಿ… ಅದರಲ್ಲೂ ಕುದುರೆಯ ಮೇಲೆ ಕೂತು ಮಾಯಾಮೃಗವನ್ನು ಅರಸಿ ಹೊರಟಂತಿರುವ ಈ ಜಗತ್ತು, ತನ್ನ ಬಿಡುವಿನ ದಿನಚರಿಯಲ್ಲಿ ಒಂದಷ್ಟು ಸಮಯ ಮಾಡಿಕೊಂಡು, ಕಥೆ ಕವನಗಳನ್ನ… ಆತ್ಮಚರಿತ್ರೆಗಳನ್ನ, ಲಲಿತ ಪ್ರಬಂಧಗಳ ಸಂಕಲವನ್ನ ಓದಲಿಕ್ಕೆ ಸಾಧ್ಯವಾ? ಎಲ್ಲ ಪ್ರಶ್ನೆಗಳಿಗೂ ಉತ್ತರ ಸುಲಭವಾಗಿ ಗೂಗಲ್ಲಿನಲಿ ಸಿಗೋವಾಗ, ಪುಸ್ತಕ ಯಾಕೆ ಓದಬೇಕು? ಅಂತನ್ನುವ ಪ್ರಶ್ನೆಗಳು ಈಗ್ಗೆ ಎಂಟ್ಹತ್ತು ವರ್ಷಗಳಿಂದ ಬಾಣಗಳಂತೆ ತೂರಿ ಬರುವಾಗಲೂ, ಹೊಸ ಹೊಸ ಪ್ರಕಾಶಕರು… ಹೊಸ ಹೊಸ ಬರಹಗಾರರು ಉದಯಿಸುತ್ತಿದ್ದಾರಲ್ಲ? ಕವಿತೆಯನ್ನು ಯಾರು ಓದ್ತಾರೆ ಸ್ವಾಮಿ ಅನ್ನುವವರ ನಡುವೆಯೂ “ಇರಲಿ ಬಿಡಿ… ಕವಿಗಳೂ ಬೆಳಕಿಗೆ ಬರಲಿ…” ಎಂದು ಬೆನ್ನು ತಟ್ಟುವ ಪ್ರಕಾಶಕರು ಸಾಕಷ್ಟು ಇಲ್ಲದಿದ್ದರೂ ಇಲ್ಲವೇ ಇಲ್ಲ ಎನ್ನಲಾಗದು. ಕಾವ್ಯದ ಶಕ್ತಿಯ ಪರಿಚಯವಿರುವ ಪ್ರಕಾಶಕರು ಲಾಭದ ಆಸೆಯನ್ನು ಕೈಬಿಟ್ಟು ಬರೀ ಕಾವ್ಯದ ಮೇಲಿನ ಪ್ರೀತಿಗಾಗಿಯೇ ಕವನ ಸಂಕಲನಗಳನ್ನು ಪ್ರಕಟಿಸುತ್ತಾರೆ. ಬೇರೆ ಭಾಷೆಯ ಒಳ್ಳೆಯ ಕವಿಗಳ ಇಡಿಇಡೀ ಕವನ ಸಂಕಲನಗಳನ್ನೇ ಅನುವಾದಿಸಿಸಿ, ಕನ್ನಡ ಓದುಗರ ಮುಂದಿಟ್ಟು, ಬೇರೆ ಭಾಷೆಯ ಕವಿತೆಗಳು ಹೇಗಿವೆ? ನಮ್ಮ ಭಾಷೆಯ ಕಾವ್ಯ ಎಲ್ಲಿದೆ? ನಾವು ಅಳವಡಿಸಿಕೊಳ್ಳಬಹುದಾದ ವಿಷಯಗಳು ಏನಾದರೂ ಇವೆಯೇ ಎಂಬುದನ್ನ ಆಲೋಚಿಸುವಂತೆ ಬರಹಗಾರರನ್ನು ಪ್ರಚೋದಿಸುತ್ತವೆ. ಇದಕ್ಕೆ ಪ್ರಕಾಶಕರ ಅಭಿರುಚಿ, ಸಹಕಾರ ಬರಹ ಮುಖ್ಯ. ಪ್ರಕಾಶಕರು, ಲೇಖಕರ ಮತ್ತು ಓದುಗರ ನಡುವಿನ ಬಹುಮುಖ್ಯ ಕೊಂಡಿ. ಅವರ ಸಹಾಯವಿಲ್ಲದೇ ಯಾವುದೇ ಲೇಖಕರ ಕೃತಿಯು ಓದುಗರನ್ನು ತಲುಪಲು ಸಾಧ್ಯವಿಲ್ಲ…

(ಪ್ರಕಾಶ್‌ ಕಂಬತ್ತಳ್ಳಿ)

ಬೆಂಗಳೂರಿನಂಥ ದೊಡ್ಡ ನಗರದಲ್ಲೇ ನಾಲ್ಕೈದು ಪುಸ್ತಕ ಮಳಿಗೆಯಿವೆಯಷ್ಟೇ. ಅದರಲ್ಲಿ ಗಾಂಧೀಬಜಾ಼ರಿನಲ್ಲಿರುವ ಅಂಕಿತ ಪುಸ್ತಕ ಮಳಿಗೆ ಓದುಗರಿಗೆ ಚಿರಪರಿಚಿತ. ಪ್ರತಿ ತಿಂಗಳಿಗೆ ಮೂರ್ನಾಲ್ಕು ಪುಸ್ತಕಗಳನ್ನಾದರೂ ಪ್ರಕಟಿಸುವ ಅದರ ಮಾಲೀಕರಾದ ಪ್ರಕಾಶ್‌ ಕಂಬತ್ತಳ್ಳಿಯವರು ಮಾತನಾಡುತ್ತಾ..
“ಹೊಸ ತಲೆಮಾರಿನವರು ಕನ್ನಡ ಓದುವುದಿಲ್ಲ. ನಮ್ಮ ಸಾಮಾನ್ಯ ಓದುಗರೆಲ್ಲ ನಲವತ್ತರ ವಯೋಮಾನದ ನಂತರದವರೇ. ಶಾಲೆಗಳಲ್ಲಿ ಮಕ್ಕಳು ಕನ್ನಡ ಕಲಿಯುತ್ತಿಲ್ಲ. ಕನ್ನಡ ಕಲಿಯದೇ, ಎಂಜಿನಿಯಂಗ್‌, ಮೆಡಿಸಿನ್‌ ಮಾಡಿಬಿಡಬಹುದು. ಹಾಗಾಗಿ ಹೊಸ ತಲೆಮಾರಿನ ಗ್ರಾಹಕರ, ಓದುಗರ ಸಂಖ್ಯೆಯಲ್ಲಿ ಇಳಿತವಿವೆ. ಹಾಗಾಗಿ ಕಳೆದ ಹತ್ತು ವರ್ಷದ ಹಿಂದೆಯಿದ್ದ ಮಾರುಕಟ್ಟೆ ಈಗಿಲ್ಲ. ಗ್ರಂಥಾಲಯದ ಸಪೋರ್ಟ್‌ ಇರುವುದರಿಂದ ಒಂದಷ್ಟು ನಡೆದುಕೊಂಡು ಹೋಗ್ತಿದೆ. ಕಥೆ, ಕಾದಂಬರಿಗಳ ಜೊತೆ ಆರೋಗ್ಯ ಮತ್ತು ಆಧ್ಯಾತ್ಮದ ಕುರಿತ ಪುಸ್ತಕಗಳು ಹೆಚ್ಚು ಮಾರಾಟವಾಗುತ್ತವೆ. ಕವಿತೆ, ವಿಮರ್ಶೆ ಹಾಗೂ ಲಲಿತ ಪ್ರಬಂಧಗಳು ಶೆಲ್ಫಿನಿಂದ ಇಳಿಯುವುದಿಲ್ಲ. ಅವೆಲ್ಲಕ್ಕಿಂತ ಈಗಿನ ಓದುಗರ ಅಭಿರುಚಿಯೂ ಬದಲಾಗಿದ್ದು, ಹಿಂದೆ ಡಿಟೆಕ್ಟಿವ್‌ ಪ್ರಕಾರ ಪ್ರಚಲಿತದಲ್ಲಿದ್ದಂತೆ, ಈಗ ಕ್ರೈಮ್‌ ಕುರಿತು ಪುಸ್ತಕಗಳು ಕತೆ ಕಾದಂಬರಿಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ.

ಇನ್ನೊಂದು ಸಮಸ್ಯೆಯೆಂದರೆ ಹೊಸ ಮಳಿಗೆಗಳು ಹೆಚ್ಚಿನ ರೀತಿಯಲ್ಲಿ ಬರುತ್ತಿಲ್ಲ. ಹಾಗಂತ ಪ್ರಕಾಶನ ಕಡಿಮೆಯಿಲ್ಲ… ಪುಸ್ತಕ ಬರೆದ ಲೇಖಕರೇ ಪುಸ್ತಕ ಪ್ರಕಟಿಸುತ್ತಿದ್ದಾರೆ. ಪಿಓಡಿ (Print on demand) ಈಗ ಹೆಚ್ಚು ಪ್ರಚಾರ ಪಡೆದುಕೊಳ್ತಿದೆ. ಪ್ರಕಾಶಕರಾದರೆ, ತಮ್ಮ ಬಳಿ ಬರುವ ಪುಸ್ತಕವನ್ನು ಸರಿಯಾಗಿ ಓದಿ, ಅದರ ಮೌಲ್ಯದ ಕುರಿತು ಯೋಚಿಸಿ, ಸರಿಯೆನ್ನಿಸಿದ ಮೇಲೆ ಅದನ್ನು ೧೦೦೦ ಪ್ರತಿಗಳನ್ನು ಮುದ್ರಿಸುತ್ತಾರೆ. ಕೆಲವೊಮ್ಮೆ ಹಾಗೆ ಮುದ್ರಿಸಿದ ಪುಸ್ತಕ ಓದುಗರಿಗೆ ಇಷ್ಟವಾಗದೇ ಹೋದಲ್ಲಿ, ಪುಸ್ತಕಗಳು ಮಾರಾಟವಾಗದೇ ಪ್ರಕಾಶಕರಿಗೆ ನಷ್ಟವಾಗುತ್ತದೆ. ಆದರೆ ಪಿಓಡಿಯಲ್ಲಿ ಹಾಗಿಲ್ಲ. ಇಲ್ಲಿ ಯಾರೂ ಕ್ವಾಲಿಟಿ ಚೆಕ್‌ ಮಾಡಲು ಇರುವುದಿಲ್ಲ. ಲೇಖಕ ತಾನು ಬರೆದ ಪುಸ್ತಕವನ್ನು ಐವತ್ತೋ ಅಥವಾ ನೂರು ಪ್ರತಿಗಳನ್ನು ಮುದ್ರಿಸಿ, ಲೇಖಕರೆನ್ನಿಸಿಕೊಳ್ಳುತ್ತಾನೆ. ಪ್ರತಿಗಳು ಖರ್ಚಾದರೆ ಸರಿ ಇಲ್ಲವಾದರೆ ತಮ್ಮದೊಂದು ಪುಸ್ತಕ ಬಂದಿದೆ ಎನ್ನುವುದೊಂದು ಅವರ ಹೆಸರಿಗೆ ಸೇರುತ್ತದೆ. ಅವರ ಪುಸ್ತಕ ಮಾರಾಟದ ಟ್ರಯಲ್‌ ನೋಡಿದ ಹಾಗಾಗುತ್ತದೆ. ಅಂತರ್ಜಾಲ ಮಾಧ್ಯಮದಲ್ಲಿ ಪ್ರಚಾರ ಮಾಡಿ, ಪುಸ್ತಕ ಮಾರಾಟಮಾಡುತ್ತಾರೆ. ಹೀಗಾದಲ್ಲಿ ಒಂದು ಪುಸ್ತಕ ಮಳಿಗೆಯದ್ದೋ ಅಥವಾ ಒಬ್ಬ ಪ್ರಕಾಶಕನದ್ದೋ ಅಗತ್ಯವೇ ಬೀಳುವುದಿಲ್ಲ. ಆದರೆ ಪುಸ್ತಕ ಅಂಗಡಿಗೆ ಬಂದರೆ ನಾವು ಅಲ್ಲಿರುವ ಬೇರೆ ಹೊಸ ಪುಸ್ತಕಗಳನ್ನೂ ನೋಡಿ, ಕೊಳ್ಳಬಹುದು. ಆದರೆ ಆನ್‌ಲೈನ್‌ನಲ್ಲಿ ಕಂಡದ್ದನ್ನು ಕೊಳ್ಳಬೇಕಷ್ಟೇ. ಕಾರಂತ ಬೀಚಿ, ಸಾಯಿಸುತೆ ಎಂಕೆ ಇಂದಿರಾ ಅವರ ಕೃತಿಗಳನ್ನ ಪ್ರಕಟಿಸಿದ ಬೆಂಗಳೂರಿನ ಮೊಟ್ಟ ಮೊದಲ ಪುಸ್ತಕ ಮಳಿಗೆ ಗೀತಾ ಏಜೆನ್ಸಿಯೇ ಮುಚ್ಚಿಹೋಯಿತು. ಹಾಗಾಗಿ ಪ್ರಕಾಶನದ, ಪುಸ್ತಕದ ಮಾರಾಟದ ಸ್ವರೂಪದ ಜೊತೆಜೊತೆಗೆ ಓದುಗರೂ ಬದಲಾಗ್ತಾಯಿದ್ದಾರೆ. ನಾವೆಲ್ಲ ಹಳೆಯ ಕಾಲದವರಾಗುತ್ತಿದ್ದೇವೆ…” ಎಂದು ಹೇಳುತ್ತಾರೆ.

(ಅಕ್ಷತಾ ಹುಂಚದಕಟ್ಟೆ)

ಓದುಗರಲ್ಲಿ ಬೇರೆ ಬೇರೆ ಅಭಿರುಚಿಯಿರುವವರಂತೆ ಪ್ರಕಾಶಕರಲ್ಲಿರೂ ಭಿನ್ನ ಆಸಕ್ತಿ ಮತ್ತು ಕಾಳಜಿಯ ಪ್ರಕಾಶಕರೂ ಇದ್ದರೆ. ಕೆಲವೊಬ್ಬರಿಗೆ ಎಂಥ ಪುಸ್ತಕಗಳನ್ನು ತಲುಪಿಸಬೇಕೆಂಬುವ ಚಿಂತೆಯಾದರೆ, ಮತ್ತೆ ಕೆಲವು ಪ್ರಕಾಶನದವರಿಗೆ ನಾವು ಏನನ್ನು ಓದಿಸಬೇಕು ಎನ್ನುವ ಬಗೆಗೆ ಚಿಂತೆಯಿರುತ್ತದೆ. ಇದರ ಕುರಿತು ಮಾತನಾಡುತ್ತಾ… “ಪುಸ್ತಕವನ್ನ ಹೇಗೆ ಪ್ರಕಟ ಮಾಡುತ್ತೀವೋ ಹಾಗೇ ಓದುಗರನ್ನು ಸೃಷ್ಟಿಸೋ ಜವಾಬ್ದಾರಿಯೂ ಪ್ರಕಾಶಕರದ್ದೇ ಆಗಿರತ್ತೆ. ಯಾವುದೇ ಪ್ರಕಾರದ ಸಾಹಿತ್ಯಕ್ಕೂ ಓದುಗರು ಇಲ್ಲವೇಇಲ್ಲ ಅಂತಿಲ್ಲ. ಸದಭಿರುಚಿಯ ಮತ್ತು ವೈಚಾರಿಕ ಓದುಗರನ್ನು ಸೃಷ್ಟಿಸೋದು ನಮ್ಮ ಅಹರ್ನಿಶಿ ಪ್ರಕಾಶನದ ಉದ್ದೇಶ. ಒಳ್ಳೇ ಪುಸ್ತಕ ಬಂದರೆ ತಾನು ಓದುಗರು ಒಳ್ಳೆಯದನ್ನ ಓದಲು ಸಾಧ್ಯ? ಮೂಲಭೂತವಾಗಿ ನಾನು ಕವಿಯೇ ಆಗಿರುವುದರಿಂದ ಕಾವ್ಯದ ಮೇಲೆ ನನಗೆ ಆಸ್ಥೆಯಿರುವ ಕಾರಣ, ನಾನು ಕವಿತೆಗಳನ್ನು ಪ್ರಕಟಿಸುತ್ತೇನೆ. ಕವಿತೆಗೆ ಸೀಮಿತ ಸಂಖ್ಯೆಯ ಓದುಗರಿದ್ದಾರೆಂದರೆ ಅವರಿಗಾಗಿಯಾದರೂ ನಾನು ಕವಿತೆಗಳನ್ನು ಪ್ರಕಟಿಸ್ತೀನಿ. ಕವಿತೆಗಳು ತುಂಬಾ ಚನ್ನಾಗಿ ಬರುವ ಕಾಲದಲ್ಲಿ ಓದುಗ ಲೋಕ ಅದನ್ನು ಕೊಂಡು ಓದಿದೆ. ಆದ್ರೆ ಅದು ತೀರಾ ಲಾಭದಾಯಕವಲ್ಲ. ಅಲ್ಲದೇ ಇಷ್ಟು ಕವಿಗಳು ಹುಟ್ಟಲು ಸಾಧ್ಯವಿಲ್ಲ. ಕವಿತಾ ಸಂಕಲನದ ಜೊತೆಗೆ ಕವಿತೆಯ ಓದುಗರೂ ಹುಟ್ಟುತ್ತಾರೆ. ಪ್ರಕಾಶನ ಒಂಥರ ಕೃಷಿಯಿದ್ದ ಹಾಗೆ. ನಾನು ಭತ್ತ ಬೆಳೀತೀನಾ, ಹಣ್ಣುಗಳನ್ನ ಬೆಳೀತೀನಾ, ಅಥವಾ ತಂಬಾಕು ಬೆಳಿತೀನಾ ಅನ್ನುವ ಅರಿವಿರಬೇಕು. ಓದುಗರ ಮನಸ್ಸಿನ ಆರೋಗ್ಯ ವೃದ್ಧಿಸುವ ಪುಸ್ತಕಗಳನ್ನೇ ಪ್ರಕಟಿಸುತ್ತೀನ, ಅಥವಾ ಬೇರೆ ದಾರಿಯಲ್ಲಿ ಹೋಗುತ್ತೀನ ಅನ್ನುವುದು ಪ್ರಕಾಶಕರ ನಿರ್ಧಾರ. ನನಗೆ ಹೂವು ಹಣ್ಣು ಬೆಳೆಸುವ ಆಸೆ.

ಇದು ಕೃಷಿಯೆಂದು ಹೇಳುವಾಗ, ನಮಗೆ ಅಷ್ಟೇ ಜವಾಬ್ದಾರಿ ಇರುವುದಿಲ್ಲ. ಕೃಷಿಕರ ಹಾಗೆ ಬೆಳೆದು, ಅದನ್ನು ಮಾರಾಟ ಮಾಡುವ ಎರಡು ಜವಾಬ್ದಾರಿ ಪ್ರಕಾಶಕರಿಗಿರುತ್ತದೆ. ಜೊತೆಗೆ ಹೇಗೆ ಕೃಷಿಕ ಮಳೆ ಬಂದೋ, ನೆರೆ ಬಂದೋ ಅಥವಾ ಬರ ಬಂದೋ, ಒಳ್ಳೆಯ ಬೆಳೆ ಬೆಳೆದೂ ನಷ್ಟ ಅನುಭವಿಸುತ್ತಾನೋ ಹಾಗೇ ನಮಗೂ ಆಗುತ್ತದೆ. ತೀರಾ ಇಷ್ಟಪಟ್ಟು, ಇದನ್ನು ಓದುಗರಿಗೆ ತಲುಪಿಸಲೇಬೇಕು ಅಂತ ಕಷ್ಟಪಟ್ಟು ಮಾಡಿದ ಕೃತಿಗಳನ್ನು ಓದುಗರು ಎತ್ತಿಕೊಳ್ಳುವುದೇ ಇಲ್ಲ. ಆಗ ನಮಗೆ ನಿಜಕ್ಕೂ ಬೇಸರ ಆದರೂ ಸದಭಿರುಚಿಯ ಪುಸ್ತಕಗಳನ್ನು ತಲುಪಿಸುವ ಜವಾಬ್ದಾರಿಯಿಂದ ಜಾರಿಕೊಳ್ಳಲಾಗುವುದಿಲ್ಲ. ಅದರಲ್ಲೂ ಕೊರೋನಾ ಕಾಲದ ನಂತರದಲ್ಲಿ, ಹಳೆಯ ಪುಸ್ತಕಗಳನ್ನು ಕೇಳುವವರ ಸಂಖ್ಯೆಯಲ್ಲಿ ಕೇಳುವವರ ಸಂಖ್ಯೆಯೂ ಕ್ಷೀಣಿಸುತ್ತಿದೆ. ಬರೀ ಹೊಸ ಪುಸ್ತಕಗಳನ್ನು, ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಸಿಕ್ಕ ಪುಸ್ತಕಗಳನ್ನು ಮಾತ್ರವೇ ಕೇಳಿ ಕೊಳ್ಳುತ್ತಾರೆ. ಹೊಸ ಪುಸ್ತಕಗಳನ್ನ ಕಡೆಗೇ ಅವರ ಗಮನವಿರುತ್ತದೆ. ಈಗ್ಗೆ ಹತ್ತು ವರ್ಷಗಳಲ್ಲಿ ಬಂದ ಕೃತಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೇಳುವವರು ಇರುವುದಿಲ್ಲ… ಅದಕ್ಕೆ ಏನು ಮಾಡಬೇಕಿದೆ ಎನ್ನುವುದರ ಬಗ್ಗೆ ಯೋಚಿಸಬೇಕಿದೆ.” ಎನ್ನುತ್ತಾರೆ ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ.

ಕುದುರೆಯ ಮೇಲೆ ಕೂತು ಮಾಯಾಮೃಗವನ್ನು ಅರಸಿ ಹೊರಟಂತಿರುವ ಈ ಜಗತ್ತು, ತನ್ನ ಬಿಡುವಿನ ದಿನಚರಿಯಲ್ಲಿ ಒಂದಷ್ಟು ಸಮಯ ಮಾಡಿಕೊಂಡು, ಕಥೆ ಕವನಗಳನ್ನ… ಆತ್ಮಚರಿತ್ರೆಗಳನ್ನ, ಲಲಿತ ಪ್ರಬಂಧಗಳ ಸಂಕಲವನ್ನ ಓದಲಿಕ್ಕೆ ಸಾಧ್ಯವಾ? ಎಲ್ಲ ಪ್ರಶ್ನೆಗಳಿಗೂ ಉತ್ತರ ಸುಲಭವಾಗಿ ಗೂಗಲ್ಲಿನಲಿ ಸಿಗೋವಾಗ, ಪುಸ್ತಕ ಯಾಕೆ ಓದಬೇಕು?

(ಮೋಹನ್‌)

“ಪ್ರಸ್ತುತ ಕಾಲಘಟ್ಟದಲ್ಲಿ ಓದುಗರ ಸಂಖ್ಯೆ ಇದೆ. ಆದರೆ ಗುಣಮಟ್ಟದ ಸಾಹಿತ್ಯದ ಕೊರತೆ ಸ್ವಲ್ಪ ಕಡಿಮೆ ಇದೆ. ಹಳೇ ವಿಷಯಗಳೇ ಮತ್ತೆ ಮತ್ತೆ ಪುನರಾವರ್ತಿತವಾಗುತ್ತಿವೆಯೆ ಹೊರತು ತೀರಾ ಹೊಸದಾದ ಸಾಹಿತ್ಯ ಬರುತ್ತಿರುವುದು ಕಡಿಮೆ. ವಿಶೇಷ ರೀತಿಯ ಸಾಹಿತ್ಯ ರಚನೆ ಇಲ್ಲ. ಕೆಲವೇ ಲೇಖಕರ ಪುಸ್ತಕಗಳು ಹಿಟ್‌ ಆಗುತ್ತಾ ಮಾರಾಟವಾಗುತ್ತಿವೆ. ಹಿಂದಿಗಿಂತ ಪುಸ್ತಕ ಮಾರಾಟದಲ್ಲಿ ಸ್ವಲ್ಪ ಕೊರತೆ ಕಂಡರೂ ತೀರಾ ಕುಗ್ಗಿಹೋಗಿಲ್ಲ… ವರ್ಷದಲ್ಲಿ ನಾವು ಐದಾರು ಕವನ ಸಂಕಲನಗಳನಂತೂ ಪ್ರಕಟಿಸುತ್ತೇವೆ. ಉತ್ಕೃಷ್ಟ ಸಾಹಿತ್ಯ ಯಾವುದೇ ಪ್ರಕಾರದದ್ದಿರಲಿ. ಉತ್ತಮ ಸಾಹಿತ್ಯ ಹಿರಿಯರದ್ದಿರಲಿ, ಕಿರಿಯರದ್ದೇ ಇರಲಿ, ನಾವು ಪ್ರಕಟಿಸುತ್ತೇವೆ. ಪುಸ್ತಕವೇ ನಮ್ಮ ಉದ್ಯಮ ಹಾಗೂ ಬದ್ಧತೆ ಆಗಿರುವುದರಿಂದ, ಎಂಥ ಪುಸ್ತಕ ಓದುಗರನ್ನು ತಲುಪಬೇಕು ಎಂಬುದು ಪ್ರಕಾಶಕರಾಗಿ ನಮ್ಮ ಜವಾಬ್ದಾರಿಯೂ ಇದೆ. ಪುಸ್ತಕ ಪ್ರಕಾಶಕನಾಗಿ, ಪುಸ್ತಕೋದ್ಯಮ ಹಿಂದೆ ಬಿದ್ದಿದೆ ಎಂದು ನನಗೆ ಅನ್ನಿಸುತ್ತಿಲ್ಲ.” ಎನ್ನುತ್ತಾರೆ ಕಳೆದ ಇಪ್ಪತ್ತು ವರ್ಷಗಳಿಂದ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಗೀತಾಂಜಲಿ ಪಬ್ಲಿಕೇಷನ್ಸ್‌ ಮಾಲೀಕರಾದ ಮೋಹನ್‌.

ಹೌದು ಇದು ತೀರಾ ಬದಲಾಗುತ್ತಿರುವ ಕಾಲಘಟ್ಟ. ಹಿಂದೆಲ್ಲ ಒಂದು ಟ್ರೆಂಡ್‌ ಬದಲಾಗಬೇಕಿದ್ದರೆ ಸಾಕಷ್ಟು ಸಮಯ ಬೇಕಿತ್ತು. ಎಲ್ಲ ಮಾರ್ಗಗಳೂ ತೀರಾ ನಿಧಾನಗತಿಯಲ್ಲಿ ಸಾಗಿ, ಬೆಳೆದು, ನಂತರ ಮತ್ತೊಂದು ಟ್ರೆಂಡಿಗೆ ಹಾರುತ್ತಿದ್ದರು. ಈಗ ಎರಡು ಮೂರು ವರ್ಷಕ್ಕೆ ಅಂದಿದ್ದದ್ದು ಇಂದಿಲ್ಲ ಅನ್ನುವಂತಾಗಿದೆ. ಆಕರ್ಷಣೆಯ ಭರದಲ್ಲಿ ಈಜುತ್ತಿರುವ ಜನಸ್ತೋಮಕ್ಕೆ, ಮಾರ್ಕೆಟ್ಟಿನಲ್ಲಿ ಸುಮ್ಮನೆ ತನ್ನ ಪಾಡಿಗೆ ಕೂತು ಪುಸ್ತಕ ಮಾರುವ ಪುಸ್ತಕ ಮಳಿಗೆಗಳು ಕಣ್ಣಿಗೆ ಬೀಳುತ್ತಿಲ್ಲ.

(ವೀರಕಪುತ್ರ ಶ್ರೀನಿವಾಸ್)

“ಕನ್ನಡ ಪುಸ್ತಕೋದ್ಯಮ ಬಹಳ ಶ್ರೀಮಂತವಾಗಿದೆ. ಕಳೆದ ವರ್ಷ ಗ್ರಂಥಾಲಯ ಇಲಾಖೆಗೆ ಆಯ್ಕೆಯಾದ ಪುಸ್ತಕಗಳ ಸಂಖ್ಯೆ ೭೦೦೦. ಆ ಲೆಕ್ಕದಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ದಿನಕ್ಕೆ ಎರಡು ಪುಸ್ತಕಗಳಾದರೂ ಬಿಡುಗಡೆಯಾಗುತ್ತಿವೆ ಎಂಬುದು ಸ್ಪಷ್ಟ. ಗ್ರಂಥಾಲಯಕ್ಕೆ ಸೇರದೇ, ಹೊರಗಡೆ ಬಿಡುಗಡೆಗೊಂಡು, ಸಾಹಿತ್ಯ ವಲಯದ ಬಳಗದಲ್ಲಿ, ಓದುಗರಲ್ಲಿ ಮಾರಾಟಗೊಳ್ಳುವ ಪುಸ್ತಕದ ಸಂಖ್ಯೆಯೇ ಬೇರೆ. ಅದರ ಹೊರತಾಗಿಯೂ ಫೇಸ್‌ಬುಕ್‌ನಂಥ ಮಾಧ್ಯಮವನ್ನು ಬಳಸಿಕೊಂಡು ಬರೆಯುವವರ ಸಂಖ್ಯೆಯಂತೂ ಕಡಿಮೆಯಿಲ್ಲದ ಕಾರಣ, ಬೇರೆಲ್ಲ ಭಾಷೆಗಳಿಗಿಂತ ಕನ್ನಡದಲ್ಲೆ ಹೆಚ್ಚು ಹೆಚ್ಚು ಪುಸ್ತಕಗಳು ಪ್ರಕಟಗೊಳ್ಳುತ್ತಿವೆಯೆಂದಮೇಲೆ ಕನ್ನಡ ಪುಸ್ತಕಗಳು ಬರುತ್ತಿಲ್ಲವೆಂದು ಹೇಳಲಾಗದು. ಪ್ರಕಟವಾಗುತ್ತಿರುವ ಪುಸ್ತಕಗಳ ಮಾಹಿತಿ ಓದುಗರಿಗೆ ಸಿಗುತ್ತಿಲ್ಲವೆನ್ನುವುದೇ ಇದರರ್ಥ.

ನನ್ನ ಸ್ನೇಹಿತರಿಗೆ ಕರ್ನಾಟಕದಲ್ಲಿ ಎಷ್ಟು ಬಾರ್‌ಗಳಿವೆ ಎಂದು ಕೇಳಿದಾಗ ಪಟ್ಟಂತ ೮೧೦೦ ಎಂದು ಉತ್ತರ ಕೊಟ್ಟರು. ಆಗ ನನಗೆ ನಮ್ಮ ಕರ್ನಾಟಕದಲ್ಲಿ ಪುಸ್ತಕ ಮಳಿಗೆಗಳು ಎಷ್ಟಿರಬಹುದು ಎಂಬ ಪ್ರಶ್ನೆ ಮೂಡಿ ಯೋಚಿಸಿದರೆ, ಬೆಂಗಳೂರಲ್ಲಿ ಒಂದು ಐದಾರು, ಬೇರೆ ಬೇರೆ ಜಿಲ್ಲೆಗಳಲ್ಲಿ ಎರಡರಿಂದ ಮೂರು… ಎಂದು ಎಲ್ಲವನ್ನು ಎಣಿಸಿ ನೋಡಿದರೆ ನಲವತೈದು ಮಳಿಗೆಗಳ ಲೆಕ್ಕ ಸಿಕ್ಕತು. ಲೆಕ್ಕಕ್ಕೆ ಸಿಕ್ಕದೇ ಹೋದದ್ದು ಮೂರ್ನಾಲ್ಕು ಇದ್ದಿರಬಹುದಷ್ಟೇ. ೮೦೦೦ ಬಾರುಗಳಿರುವ ರಾಜ್ಯದಲ್ಲಿ ೪೭ ಪುಸ್ತಕ ಮಳಿಗೆಗಳಿವೆಯೆಂದರೆ ಯೋಚಿಸಿ… ಪುಸ್ತಕ ಸಂಸ್ಕೃತಿ ಎತ್ತ ಹೋಗುತ್ತಿರಬಹುದೆಂದು. ಇದು ನಿಜಕ್ಕೂ ಯೋಚಿಸಬೇಕಾದ ವಿಷಯ. ಬೆಂಗಳೂರಿನಲ್ಲಿ ಊಟಕ್ಕೆ ಬಟ್ಟೆಗೆ ಅಂದರೆ ಹೆಜ್ಜೆಹೆಜ್ಜೆಗೂ ಅಂಗಡಿ ಮಾಲ್‌ಗಳು ಸಿಗುತ್ತವೆ, ಆದರೆ ಪುಸ್ತಕ ಕೊಳ್ಳಲು ಗಾಂಧಿನಗರಕ್ಕೆ ಅಥವಾ ಗಾಂಧೀಬಜಾರಿಗೇ ಓಡಬೇಕು. ದಿನಬಳಕೆಗೆ ಬಳಸಿ ಬಿಸಾಡುವಂಥ ವಸ್ತುಗಳನ್ನು ಹೇಗೆಲ್ಲ ಮಾರ್ಕೆಟಿಂಗ್‌ ಮಾಡಿ ಹಳ್ಳಿ ಹಳ್ಳಿಗೂ ತಲುಪುವಂತೆ ಮಾಡುತ್ತಾರಲ್ಲವೇ? ಆದರೆ ಅದೇ ಹಳ್ಳಿಗೆ ಹೋಗಿ ಒಂದು ಪುಸ್ತಕದ ಮಳಿಗೆಯನ್ನು ಹುಡುಕಿದರೆ ಸಿಗುತ್ತದ? ಖಂಡಿತವಾಗಿಯೂ ಇಲ್ಲ. ಹಾಗಾಗಿ ಮಗುವಿಗೊಂದು ಮರ ನೆಡುವಂತೆ, ಪ್ರತಿ ಮನೆಯ ಮಗುವಿಗೊಂದು ಗ್ರಂಥಾಲಯ ಮಾಡಿ ಎಂಬ ಕಿವಿ ಮಾತು ಹೇಳಬೇಕಿದೆ.


ಜಗತ್ತು ಎಷ್ಟೇ ಮುಂದುವರೆದು, ಡಿಜಿಟಲ್‌ ಉಪಕರಣಗಳಲ್ಲಿ ಸಾಹಿತ್ಯ ಬಂದರೂ, ಪುಸ್ತಕ ಹಿಡಿದು ಓದುವುದೇ ಜ್ಞಾನಾರ್ಜನೆಗೆ ಪೂರಕ ಎನ್ನುವಾಗ, ಪುಸ್ತಕೋದ್ಯಮವೂ ಮೈಕೊಡವಿಕೊಂಡು ಎದ್ದು, ಬದಲಾಗುತ್ತಿರುವ ಜಗತ್ತಿನ ಜೊತೆಗೆ ತಾನೂ ಹೆಜ್ಜೆಯಿಡುತ್ತಾ, ಕಾರ್ಪೋರೇಟ್‌ ಶೈಲಿಯಲ್ಲಿ ತನ್ನನ್ನು ತಾನು ಟ್ಯೂನಪ್‌ ಮಾಡಿಕೊಳ್ಳುವುದು ಅನಿವಾರ್ಯ…” ಎನ್ನುತ್ತಾರೆ ವೀರಲೋಕ ಬುಕ್ಸ್‌ನ ರೂವಾರಿ ವೀರಕಪುತ್ರ ಶ್ರೀನಿವಾಸ್.