ಈ ನೆನಪು ಏಕೆ ಉಳಿದಿದೆ ಎಂದರೆ, ಜನ ಈ ಬಡ ವಯೋವೃದ್ಧರ ಕಾಲಿಗೆ ಏಕೆ ಬೀಳುತ್ತಾರೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಬ್ಯಾಂಕಿಗೆ ಭೇಟಿ ಕೊಡಬೇಕಾದ ಪ್ರಸಂಗವಿದ್ದಾಗ ಹಳಕಟ್ಟಿಯವರು ಆ ಬೃಹತ್ ದೇವಾಲಯದ ಮುಂದೆ ನಿಧಾನವಾಗಿ ಹಾಯ್ದು ಬ್ಯಾಂಕ್ ಕಚೇರಿಗೆ ಹೋಗುವ ಸಂದರ್ಭದಲ್ಲಿ ಹೆಣ್ಣುಮಕ್ಕಳು ಮತ್ತು ಪುರುಷರು ಅವರ ಕಾಲುಮುಟ್ಟಿ ನಮಸ್ಕಾರ ಮಾಡುತ್ತಿದ್ದರು. ಅವರು ಕೈ ಸನ್ನೆಯ ಮೂಲಕ ಮೌನದಲ್ಲಿ ಅವರಿಗೆ ಹರಸುತ್ತ ತಮ್ಮದೇ ಧ್ಯಾನದಲ್ಲಿ ಮುಂದೆ ಸಾಗುತ್ತಿದ್ದರು.
ರಂಜಾನ್ ದರ್ಗಾ ಬರೆಯುವ “ನೆನಪಾದಾಗಲೆಲ್ಲ” ಸರಣಿಯ ಇಪ್ಪತ್ತೊಂಭತ್ತನೆಯ ಕಂತು

ನಾನು ಬಹುಶಃ 5ನೇ ಇಯತ್ತೆಯಲ್ಲಿರಬಹುದು. ವಿಜಯ (ಈಗಿನ ಅಮೀರ ಟಾಕೀಜ್) ನಿರ್ಮಾಣವಾಗಿತ್ತು. ವಿಜಾಪುರದಲ್ಲಿ ಇದು ಆ ಕಾಲದ ಹೊಸ ಮಾದರಿಯ ಸುಸಜ್ಜಿತ ಟಾಕೀಜ್ ಆಗಿತ್ತು. ಖ್ಯಾತ ಕಲಾವಿದೆ ಅಮೀರಬಾಯಿ ಕರ್ನಾಟಕಿಯ ಸಹೋದರ ದಸ್ತರೀರಸಾಬ್ ಬೀಳಗಿಯವರ ಟಾಕೀಜ್ ಅದು. ಅಮೀರಬಾಯಿ ಕರ್ನಾಟಕಿ ಅಖಂಡ ವಿಜಾಪುರ ಜಿಲ್ಲೆಯ ಬೀಳಗಿಯವರು. ಸ್ವಾತಂತ್ರ್ಯಪೂರ್ವದಲ್ಲೇ ಈ ಕಲಾವಿದೆ ಮುಂಬೈ ಸೇರಿ ‘ಕರ್ನಾಟಕಿ’ ಎಂದು ಅಡ್ಡಹೆಸರು ಹೆಸರಿಟ್ಟುಕೊಂಡು ಕರ್ನಾಟಕದ ಕೀರ್ತಿಯನ್ನು ಮಹಾರಾಷ್ಟ್ರದಲ್ಲಿ ಹಬ್ಬಿಸಿದವರು. ನರಸೀ ಮೆಹತಾ ಅವರ ವೈಷ್ಣವಜನತೋ ಭಜನೆಯನ್ನು ಅಮೀರಬಾಯಿಯವರು ಹಾಡುವುದನ್ನು ಕೇಳಿ ಗಾಂಧೀಜಿಯವರೇ ತಲೆದೂಗಿದ್ದರು! ಅವರ ನಿಧನದ ನಂತರ ವಿಜಯ ಟಾಕೀಜ್ ಅವರ ಹೆಸರಿನಲ್ಲಿ ಅಮೀರ ಟಾಕೀಜ್ ಆಯಿತು.

ನಾನು ತೆಗ್ಗಿನ ಸಾಲಿಯಿಂದ ನಾವಿಗಲ್ಲಿಗೆ ಹೋಗಬೇಕಾದರೆ ಎರಡು ದಾರಿಗಳಿದ್ದವು. ಒಂದು ವಿಜಯ ಟಾಕೀಜನ್ನು ಎಡಕ್ಕೆ ಮಾಡಿಕೊಂಡು ಹೋಗುವುದು. ಇನ್ನೊಂದು ಒಳದಾರಿ. ಅದು ಎಸ್.ಎಸ್. ಹೈಸ್ಕೂಲ್ ಕಂಪೌಂಡ್‌ಗೆ ಹತ್ತಿಕೊಂಡಿತ್ತು. ಕಂಪೌಂಡನ್ನು ಬಲಕ್ಕೆ ಮಾಡಿಕೊಂಡು ಸ್ವಲ್ಪ ದೂರ ಸಾಗಿದ ಮೇಲೆ ಮತ್ತೆ ಬಲಕ್ಕೆ ಹೊರಳುವುದು. ನಂತರ ಎಡಕ್ಕೆ ಹೊರಳುವುದು. ಅದನ್ನು ಕ್ರಮಿಸಿದ ನಂತರ ಬರುವ ದಾರಿಯನ್ನು ಕ್ರಾಸ್ ಮಾಡಿ ಮುಂದಿನ ದಾರಿ ಹಿಡಿದು ಸಾಗಿ ಮುಂದುವರಿದರೆ ಎಡಕ್ಕೆ ಗಚ್ಚಿನಮಠ. ಅದನ್ನು ದಾಟಿ ಐದು ನಿಮಿಷ ಮುಂದುವರಿದರೆ ನಾವಿಗಲ್ಲಿ.

ಈ ಒಳದಾರಿಯಲ್ಲಿ ಯಾವುದೇ ಗದ್ದಲ ಇರುತ್ತಿದ್ದಿಲ್ಲ. ಆದರೆ ಅಲ್ಲಿ ನಮ್ಮ ಮನೆಯ ಹತ್ತಿರದ ಯುವತಿಯೊಬ್ಬಳು ನಿಂತಿರುತ್ತಿದ್ದಳು. ಅವಳ ವಯಸ್ಸು 16 ಇರಬಹುದು. ಆಕೆಯ ತಾಯಿ ಸೊಲ್ಲಾಪುರದ ಕಡೆಯವಳು. ಆಕೆಗೆ ಒಬ್ಬ ತಮ್ಮ ಮತ್ತು ತಂಗಿ ಇದ್ದರು. ಅವರದು ಮುಸ್ಲಿಂ ಕುಟುಂಬ. ಆದರೆ ಆಕೆಯ ತಾಯಿ ಗಂಡನನ್ನು ಬಿಟ್ಟು ಮೂರೂ ಮಕ್ಕಳನ್ನು ಕಟ್ಟಿಕೊಂಡು ಒಬ್ಬ ಮಾಂತ್ರಿಕನ ಜೊತೆ ಓಡಿ ಬಂದಿದ್ದಳು. ಆತ ತೆಳ್ಳಗೆ ಎತ್ತರವಾಗಿದ್ದ. ಆ ಹೆಂಗಸಿಗಿಂತಲೂ ಸ್ವಲ್ಪ ವಯಸ್ಸಾದವನ ಹಾಗೆ ಕಾಣುತ್ತಿದ್ದ. ಆತ ಮಿತಭಾಷಿಯಾಗಿದ್ದು ಆ ಮೂರು ಮಕ್ಕಳ ತಾಯಿಯ ಜೊತೆ ಅನ್ಯೋನ್ಯವಾಗಿದ್ದ. ಅವರು ನಮ್ಮ ಎದುರಿನ ಚಾಳಿನಲ್ಲಿದ್ದರು. ‘ಮಾಂತ್ರಿಕನ ಜೊತೆಗಿದ್ದವಳು’ ಎಂಬ ಕಾರಣದಿಂದ ನಾವಿಗಲ್ಲಿಯ ಜನ ಅವಳ ತಂಟೆಗೆ ಹೋಗುತ್ತಿದ್ದಿಲ್ಲ. ಆ ಮಾಂತ್ರಿಕ ಏನಾದರೂ ಮಾಡಿದರೆ? ಎಂಬ ಪ್ರಶ್ನೆ ಬಹುಶಃ ಅವರಿಗೆ ಕಾಡುತ್ತಿದ್ದಿರಬಹುದು. ಆ ತಾಯಿ ಮತ್ತು ಮಕ್ಕಳ ಜೀವನವಿಧಾನ ಮುಸ್ಲಿಂ ರೀತಿಯಲ್ಲೇ ಇತ್ತು. ಆತನೂ ಅದನ್ನು ಒಪ್ಪಿಕೊಂಡು ಅವರ ಜೊತೆ ಬದುಕಿದ್ದ. ಅಮಾವಾಸ್ಯೆ ದಿನ ಒಂದಿಷ್ಟು ಹೆಚ್ಚಿಗೆ ಜನ ಅವನ ಬಳಿ ಬರುತ್ತಿದ್ದರು. ಅದೇನೋ ಮಾಟ ಮಂತ್ರದಲ್ಲಿ ರಾತ್ರಿ ಬಹಳ ಹೊತ್ತಿನವರೆಗೆ ತಲ್ಲೀನನಾಗಿರುತ್ತಿದ್ದ. ಆತನ ಮನೆಯಲ್ಲಿ ಒಮ್ಮೆ ವಿವಿಧ ಮಾಂತ್ರಿಕ ವಸ್ತುಗಳ ಜೊತೆ ಬಾಣಂತಿಯ ಎಲುಬು ನೋಡಿ ಭಯಪಟ್ಟಿದ್ದೆ. ತದನಂತರ ಅವರ ಮನೆಯ ಕಡೆಗೆ ಹೋಗಲಿಲ್ಲ. ಅವನ ಧಂದಾ ಚೆನ್ನಾಗಿಯೆ ನಡೆದಿತ್ತು. ಹೊಟ್ಟೆಪಾಡಿಗೆ ಬೇಕಾಗುವಷ್ಟು ಹಣ ಗಳಿಸುತ್ತಿದ್ದ. ಆತ ಒಂದು ದಿನ ಸಡನ್ನಾಗಿ ಸತ್ತುಬಿಟ್ಟ. ರಾತ್ರಿ ಮಲಗಿದವನು ಬೆಳಿಗ್ಗೆ ಏಳಲೇ ಇಲ್ಲ. ಜನ ಏನೇನೋ ಆಡಿಕೊಂಡರು. ಅವನ ಮಾಂತ್ರಿಕ ಶಕ್ತಿಯೇ ತಿರುಗುಬಾಣವಾಗಿದ್ದರಿಂದ ಸತ್ತ ಎಂಬ ತೀರ್ಮಾನ ಅನೇಕರದಾಗಿತ್ತು. ಇವೆಲ್ಲ ಮಾತುಗಳು ರಸ್ತೆಯ ಮೇಲೆಯೆ ನಡೆಯುತ್ತಿದ್ದವು. ನಾನು ವಿಚಿತ್ರ ಕುತೂಹಲದಿಂದ ಕೇಳುತ್ತಿದ್ದೆ. ಸೊಲ್ಲಾಪುರದಿಂದ ಆ ಮಾಂತ್ರಿಕನ ತಂದೆ ಬಂದ. ಆತನೂ ಮಗನ ಹಾಗೆ ತೆಳ್ಳಗೆ ಎತ್ತರವಾಗಿದ್ದ. ಆತನ ಕೂಡ ಓಣಿಯ ಜನ ಮಾತನಾಡುತ್ತಿದ್ದರು. ಆತ ಬಹಳ ದುಃಖಿಯಾಗಿದ್ದರೂ ಗಂಭೀರವಾಗಿದ್ದ. “ನನ್ನ ಮುಂದೆ ನನ್ನ ಮಗ ಹೋಗಬಾರದಾಗಿತ್ತು” ಎಂದು ಹೇಳಿದ್ದು ಇಂದಿಗೂ ನೆನಪಿದೆ.

(ಲದ್ದಿಕಟ್ಟಿ ಹನುಮಂತ ದೇವರ ಗುಡಿ)

ತಾಯಿ ಮಕ್ಕಳು ಬಹಳ ದುಃಖಿಸುತ್ತ ಜೋರಾಗಿ ಅಳುತ್ತಿದ್ದರು. ಅಂತಿಮ ಸಂಸ್ಕಾರ ಮುಗಿದ ಮೇಲೆ ಆತನ ತಂದೆ ಸೋಲಾಪುರಕ್ಕೆ ಹೊರಟು ಹೋದ. ನಂತರ ಶುರುವಾಯಿತು ಆ ಹೆಣ್ಣುಮಗಳ ಗೋಳಿನ ಕತೆ. ಸ್ವಲ್ಪ ದಿನ ಹಾಗೂ ಹೀಗೂ ಕಳೆದಳು. ಕೂಡಿಟ್ಟ ಹಣ ಮುಗಿಯಿತು. ಓಡಿ ಬಂದದ್ದರಿಂದ ವಾಪಸ್ ತವರು ಮನೆಗೆ ಹೋಗುವ ಹಾಗಿಲ್ಲ. ಗಂಡನ ಮನೆ ಬಗ್ಗೆಯಂತೂ ಯೋಚಿಸಲಿಕ್ಕೂ ಆಗದು. ಉಪವಾಸ ಬೀಳುವ ಪ್ರಸಂಗಗಳ ಪ್ರಾರಂಭವಾದವು. ಕೊನೆಗೆ ಅವರಿಗೆ ಹದಿಹರೆಯದ ಮಗಳೇ ಆಸರೆ ಆದಳು. ಗಿರಾಕಿಗಳನ್ನು ಕಾಯುತ್ತ ಆ ಸಂದಿಯಲ್ಲಿ ನಿಲ್ಲುತ್ತಿದ್ದಳು. ನಾನು ಅಲ್ಲಿಂದ ಹೋಗುವಾಗ ಅವಳಿಗೆ ಬಹಳ ನಾಚಿಕೆ ಆಗುತ್ತಿತ್ತು. ನನಗೂ ಏನೋ ಕಸಿವಿಸಿ. ಹೀಗಾಗಿ ಆ ಸಮೀಪದ ದಾರಿ ಹಿಡಿಯದೆ ಸ್ವಲ್ಪ ದೂರದ ದಾರಿ ಹಿಡಿದೆ. ವಿಜಯ ಟಾಕೀಜ್ ಎಡಕ್ಕೆ ಮಾಡಿಕೊಂಡು ಮುಂದೆ ಸಾಗಿ ಲದ್ದಿಕಟ್ಟಿ ಹನುಮಂತ ದೇವರ ಪೌಳಿಯೊಳಗಿಂದ ಅಲ್ಲೇ ಇದ್ದ ಅಬ್ದುಲ್ಲನ ಹಿಟ್ಟಿನ ಗಿರಣಿಯ ಸಪ್ಪಳ ಕೇಳುತ್ತ ನಾವಿಗಲ್ಲಿ ಸೇರುತ್ತಿದ್ದೆ. ಲದ್ದಿಕಟ್ಟಿ ಹನುಮಂತ ದೇವರ ಗುಡಿ ನನಗೆ ಬಹಳ ಆಕರ್ಷಕವಾಗಿ ಕಾಣುತ್ತಿತ್ತು. ಗುಡಿಯ ಮುಂದೆ ಶತಮಾನದಷ್ಟು ಹಳೆಯದಾದ ಅಶ್ವತ್ಥ ವೃಕ್ಷವಿತ್ತು. ಅದರ ಕೊಂಬೆಗಳು ಎಲ್ಲೆಡೆ ಚಾಚಿ ಆ ಹುರಿಮಂಜು ಬಣ್ಣದ ಗುಡಿಯ ಸೌಂದರ್ಯವನ್ನು ಹೆಚ್ಚಿಸಿದ್ದವು. ಆ ಪೌಳಿಗೆ ಹತ್ತಿಕೊಂಡೇ ಕೆಲ ಬಡವರ ಪುಟ್ಟ ಮನೆಗಳಿದ್ದವು. ಬಹುಶಃ ಹಿಟ್ಟಿನ ಗಿರಣಿ ಮತ್ತು ಈ ಪುಟ್ಟಮನೆಗಳು ಹನುಮಂತದೇವರ ಗುಡಿಯ ಆಸ್ತಿಯಲ್ಲೇ ಸೇರಿರಬಹುದು. ಅಲ್ಲಿನ ಒಂದು ಪುಟ್ಟ ಮನೆಯಲ್ಲಿ ನನ್ನ ಸಹಪಾಠಿ ಮಲ್ಲಪ್ಪ ಹುಡೇದ ಇರುತ್ತಿದ್ದ. ಆತನ ನಿರಕ್ಷರಿ ತಂದೆ ಬ್ರಿಟಿಷರ ಮಿಲಿಟರಿಯಲ್ಲಿ ಸಿಪಾಯಿ ಆಗಿ ಸೇರಿ ಬಹಳ ವರ್ಷಗಳೇ ಹಿಂದೆಯೆ ನಿವೃತ್ತರಾಗಿದ್ದರು. ಅವರ ಮಿಲಿಟರಿ ಕ್ಯಾಂಪ್ ಒಂದು ಸಲ ಆಗ್ರಾದಲ್ಲಿದ್ದಾಗ ತಾಜಮಹಲ್ ನೋಡುವ ಆಸೆ ಇತ್ತಂತ್ತೆ. ಆದರೆ ಯಾರಿಗೂ ಹೇಳುವ ಹಾಗಿರಲಿಲ್ಲ. ಹೀಗಾ ಮಿಲಿಟರಿ ವ್ಯಾನ್‌ನಲ್ಲಿ ಕುಳಿತು ಹೋಗುವಾಗ ದೂರದಿಂದಲೇ ನೋಡುವ ಅವಕಾಶ ಸಿಕ್ಕಿತು ಎಂದು ಹೇಳಿದಾಗ ಅವರ ಬಗ್ಗೆ ಕನಿಕರ ಎನಿಸಿತ್ತು. ಪಾಪ ತಾಜಮಹಲ ಮುಂದೆ ಇದ್ದರೂ ಅಲ್ಲಿಗೆ ಹೋಗಿ ನೋಡಲಿಕ್ಕಾಗಲಿಲ್ಲ. ಎಂಥ ಮಿಲಿಟರಿ ಅಧಿಕಾರಿಗಳು. ಮನುಷ್ಯರ ಭಾವನೆಗಳಿಗೆ ಬೆಲೆ ಇಲ್ಲವೆ ಎಂದು ಮನದಲ್ಲೇ ಮರುಗಿದ್ದೆ.

ಅವರಿಗೆ ಬೆನ್ನುನೋವು ಕಾಡುತ್ತಿತ್ತು. ರಾಮದುರ್ಗ ಬೆಟ್ಟದಲ್ಲಿ ಸಹಜವಾಗಿ ಬೆಳೆಯುವ ಕಳ್ಳಿಯ ಹಾಲನ್ನು ಬೆನ್ನುನೋವು ಇರುವಲ್ಲಿ ಹಚ್ಚಿಕೊಂಡರೆ ವಾಸಿಯಾಗುವುದೆಂದು ಒಂದೆರಡು ಕಳ್ಳಿಯ ಕಂಟಿಗಳನ್ನು ಯಾರಿಂದಲೋ ತರಿಸಿದ್ದರು. ಬೆನ್ನಿಗೆಲ್ಲ ಆ ಕಳ್ಳಿಯ ಹಾಲು ಹಚ್ಚಿಕೊಂಡಾಗ ನೋವು ಕಡಿಮೆಯಾಗುವುದೆಂದು ಹೇಳಿದ್ದರು. ಅವರ ಮಾತು ಬಹಳ ಕಡಿಮೆ. ಆರೋಗ್ಯವೂ ಅಷ್ಟಕಷ್ಟೆ. ಮಲ್ಲಪ್ಪನ ತಾಯಿ ಅಡತಿ ಅಂಗಡಿಯಲ್ಲಿ ತಳಾ ಮಾಡುತ್ತಿದ್ದಳು. ಅಂದರೆ ಅಡತಿ ಅಂಗಡಿಯಲ್ಲಿ ಪುಕ್ಕಟೆ ಕಸಗುಡಿಸುವುದು. ಆಗ ಕೂಡಿಸಿಡುವ ವಿವಿಧ ಪ್ರಕಾರದ ಕಾಳುಗಳೇ ಕೂಲಿ. ಅವುಗಳಿಗೆ ಕೂಡಿಗ್ಗಾಳು ಎನ್ನುತ್ತಾರೆ. ಅವುಗಳನ್ನು ಬೇರ್ಪಡಿಸಿ ಚುಂಗಡಿ ಅಂಗಡಿಯಲ್ಲಿ ಮಾರಿ ಜೀವನ ಸಾಗಿಸಬೇಕಿತ್ತು. ಜನ ಹೇಗೋ ಬದುಕುತ್ತಿದ್ದರು. ಈಗಿನ ಕಾಲದ ಉದ್ವಿಗ್ನತೆ ಮಾತ್ರ ಆ ದಿನಗಳಲ್ಲಿ ಕಂಡುಬರುತ್ತಿರಲಿಲ್ಲ.

(ಶಹಾಪುರ ಅಗಸಿ)

ನಾನು 5ನೇ ಇಯತ್ತೆ ಇದ್ದಾಗ ಅಥವಾ ಅದಕ್ಕೂ ಸ್ವಲ್ಪ ಮುಂಚೆ ಭಯಾನಕವಾದ ಕೋಮುಗಲಭೆಯ ಕ್ರೌರ್ಯವನ್ನು ಮೊದಲ ಬಾರಿಗೆ ಅನುಭವಿಸಿದೆ.

ನಮ್ಮ ಮನೆಗೆ ಸಮೀಪದಲ್ಲಿ ಒಬ್ಬ ಐನಾರ ಇದ್ದ. ಆತ ಬಹಳೇ ಸಂಭಾವಿತ ವ್ಯಕ್ತಿಯಾಗಿದ್ದ. ಜನರು ಆತನನ್ನು ಗೌರವದಿಂದ ಕಾಣುತ್ತಿದ್ದರು. ಆತ ನಮ್ಮ ಮನೆಗೂ ಭಿಕ್ಷೆಗೆ ಬಂದು “ಗುರು ಸೈಪಾಕದಲ್ಲಿ ಭಿಕ್ಷೆ” ಎಂದು ಹೇಳುತ್ತಿದ್ದ. ನನ್ನ ತಾಯಿ ಗೌರವದಿಂದ ಆತನ ಜೋಳಿಗೆಗೆ ಒಂದು ಬೊಗಸೆ ಹಿಟ್ಟು ಹಾಕುತ್ತಿದ್ದಳು. ಆ ಜೋಳಿಗೆಗೆ ಬಹಳಷ್ಟು ಬಾಯಿಗಳಿದ್ದವು. ಜೋಳದ ಹಿಟ್ಟು, ಗೋದಿ ಹಿಟ್ಟು, ಸಜ್ಜೆ ಹಿಟ್ಟು ಹೀಗೆ ವಿವಿಧ ಹಿಟ್ಟು ಮತ್ತು ಕಾಳುಗಳಿಗೆ ಬೇರೆ ಬೇರೆ ಖಾನೆಗಳನ್ನು ಆ ಜೋಳಿಗೆ ಹೊಂದಿತ್ತು. ಆತ ಕಾಲಿಗೆ ಸ್ವಲ್ಪ ದೊಡ್ಡದಾದ ಗೆಜ್ಜೆ ಕಟ್ಟುತ್ತಿದ್ದುದರಿಂದ ಅದರ ನಾದ ನನಗೆ ಹಿಡಿಸುತ್ತಿತ್ತು. ಆತ ಹಿಟ್ಟು ಪಡೆದು ಮುಂದೆ ಹೋಗುವುದನ್ನೇ ನಾದ ಕೇಳುತ್ತ ನೋಡುತ್ತಿದ್ದೆ.

(ಲಿಂಗದ ಗುಡಿ)

ಲಿಂಗಾಯತರ ಶವಸಂಸ್ಕಾರದ ವೇಳೆ ಆತ ಮುಂದಿರುತ್ತಿದ್ದ. ರುದ್ರಭೂಮಿಗೆ ಹೋಗಿ ಶವದ ಮೇಲೆ ಕಾಲಿಟ್ಟು ಅಂತಿಮ ಸಂಸ್ಕಾರವನ್ನು ನೆರವೇರಿಸುವ ಹಕ್ಕು ಆತನದಾಗಿತ್ತು. ನಗರದ ಮುಳ್ಳಗಸಿಯಿಂದ ಶಹಾಪುರ ಅಗಸಿ ದಾಟಿ ರುದ್ರಭೂಮಿಗೆ ಹೋಗುವ ದಾರಿಯಲ್ಲಿ ಬಲಗಡೆ ಬೃಹತ್ತಾದ ಐತಿಹಾಸಿಕ ಮಸೀದಿ ಇದೆ. ಶವಯಾತ್ರೆಯಾಗಲಿ ಅಥವಾ ಯಾವುದೇ ಮೆರವಣಿಗೆಯಾಗಲಿ ಮಸೀದಿ ಬಳಿ ಬಂದಾಗ, ಆ ಸ್ಥಳ ದಾಟುವವರೆಗೆ ಬಾಜಾ ಭಜಂತ್ರಿ ಮತ್ತು ಹಲಗೆ ಬಾರಿಸದೆ ಮೌನವಾಗಿ ಸಾಗುವುದು ವಾಡಿಕೆಯಾಗಿದೆ. ಇದು ಎಲ್ಲ ಮಸೀದಿಗಳಿಗೂ ಅನ್ವಯಿಸುವುದು. ಒಂದು ಸಲ ಸಿದ್ಧೇಶ್ವರ ವಿಮಾನದಲ್ಲಿ ಲಿಂಗಾಯತ ವೃದ್ಧೆಯೊಬ್ಬಳ ಶವಯಾತ್ರೆ ಹೊರಟಿತ್ತು. (ಬೆತ್ತದಿಂದ ಅಥವಾ ಕಬ್ಬಿಣದ ಸಳಿಗಳಿಂದ ಕಳಸದ ಗುಡಿಯ ಆಕಾರದಂತೆ ಆ ‘ವಿಮಾನ’ ತಯಾರಿಸಿದ್ದು. ಅದನ್ನು ನಾಲ್ಕು ಮರಿ ಬಾಳೆಯ ಗಿಡಗಳು ಮತ್ತು ಹೂವಿನ ಹಾರಗಳಿಂದ ಸಿಂಗರಿಸಿದ ನಂತರ ಮೇಲೆ ಹೂವಿನಿಂದ ತಯಾರಿಸಿದ ಕಳವನ್ನು ಇಡುತ್ತಾರೆ. ಅದರಲ್ಲಿ ಶವವನ್ನು ಸಿಂಗರಿಸಿ ಕೂಡಿಸಿರುತ್ತಾರೆ. ಈ ಶವ ಸಾಗಿಸುವ ಒಂದೆರಡು ವಿಮಾನಗಳನ್ನು ಸಿದ್ಧೇಶ್ವರ ಗುಡಿಯ ಪೌಳಿಯಲ್ಲಿ ಇಡುತ್ತಿದ್ದುದರಿಂದ ಅವುಗಳಿಗೆ ‘ಸಿದ್ಧೇಶ್ವರ ವಿಮಾನ’ ಎಂದು ಕರೆಯುತ್ತಾರೆ. ಹೆಣವನ್ನು ಹಲಗೆ ಬಾರಿಸುತ್ತ ಮತ್ತು ಗರ್ನಾಲಿನಿಂದ ಮದ್ದು ಸಿಡಿಸುತ್ತ ಮೆರವಣಿಗೆಯಲ್ಲಿ ಒಯ್ಯುತ್ತಾರೆ.) ಈ ಐನಾರ ವ್ಯಕ್ತಿಯ ಪ್ರಚೋದನೆಯಿಂದಾಗಿ ಆ ದಿನ ಹಲಗೆ ಬಾರಿಸುವುದನ್ನು ನಿಲ್ಲಿಸದೆ ವೃದ್ಧೆಯ ಶವದ ಮೆರವಣಿಗೆ ಮುಂದೆ ಹೋಗುವಾಗ ನಮಾಜು ಮಾಡಲು ಬರುತ್ತಿದ್ದವರು ತಕರಾರು ಮಾಡಿದರು. ಆದರೆ ಆ ಐನಾರ ಕೇಳಲಿಲ್ಲ. ಜಗಳ ಹೊಡೆದಾಟದ ಸ್ಥಿತಿ ತಲುಪಿದಾಗ ಮೆರವಣಿಗೆಯಲ್ಲಿದ್ದವರು ಹೆದರಿ ಹೆಣವನ್ನು ರಸ್ತೆಯ ಮೇಲೆ ಬಿಟ್ಟು ಓಡಿದರು. ಸಾಯಂಕಾಲ ಶಾಲೆ ಬಿಡುವ ಹೊತ್ತಿಗೆ ನಗರದಲ್ಲಿ ಕೋಮುಗಲಭೆ ಶುರುವಾಯಿತು. ನಾವು ಮಕ್ಕಳು ಗುಂಪು ಗುಂಪಾಗಿ ಕೋಳಿಯ ಮರಿಗಳ ಹಾಗೆ ಗಾಬರಿಗೊಂಡು ನಡಗುತ್ತ ಸಂದಿಗೊಂದಿಗಳ ಮೂಲಕ ಮನೆ ಸೇರಿದೆವು. ದಂಗೆಯ ಭಯದಲ್ಲಿ ಮೂರಂಕಣ ಮನೆಯಲ್ಲಿದ್ದ ಮನೆಯವರೆಲ್ಲ ಮಿಸುಗಾಡದೆ ರಾತ್ರಿ ಕಳೆದೆವು. ಮರುದಿನ ಹಗಲಲ್ಲಿ ಪುಂಡ ಹುಡುಗರು ಮುಸ್ಲಿಮರ ಮನೆಗಳಿಗೆ ಕಲ್ಲು ಹೊಡೆಯುತ್ತ, ‘ಪಾಕಿಸ್ತಾನಕ ಹೋಗ್ರಿ’ ಎಂದು ಕೂಗುತ್ತ ಬೀದಿ ಬೀದಿ ಸುತ್ತುತ್ತಿದ್ದರು. ಇದು ಬಾಲ್ಯದಲ್ಲಿ ಅನುಭವಿಸಿದ ಮೊದಲ ಭಯಾನಕ ಘಟನೆಯಾಗಿತ್ತು.

(ಡಾ. ಫ.ಗು. ಹಳಕಟ್ಟಿ)

ವಿಜಾಪುರದ ಸಿದ್ಧೇಶ್ವರ ದೇವಾಲಯದ ಪಕ್ಕದಲ್ಲಿದ್ದ ಬೇವಿನ ಮರದ ಕೆಳಗೆ ನನ್ನ ಅಜ್ಜಿ (ತಾಯಿಯ ತಾಯಿ) ಬಾಳೆಹಣ್ಣು ಮಾರುತ್ತಿದ್ದಳು. ಫ.ಗು. ಹಳಕಟ್ಟಿ (2.7.1880 – 29.6.1964) ಶರಣರ ಶ್ರಮದ ಫಲವಾದ ಸಿದ್ಧೇಶ್ವರ ಬ್ಯಾಂಕ್ ಈ ಬೇವಿನ ಮರಕ್ಕೆ ಎದುರಾಗಿ ರಸ್ತೆ ಆಚೆ ಬದಿ ಇದೆ. ನಾನು ಶಾಲೆ ಬಿಟ್ಟ ನಂತರ ಬಹಳ ಸಲ ನನ್ನ ಅಜ್ಜಿಯ ಕಡೆಗೆ ಹೋಗುತ್ತಿದ್ದೆ. ಕೆಲ ಸಂದರ್ಭದಲ್ಲಿ ಹಳಕಟ್ಟಿಯವರು ಪುಟ್ಟ ಪುಟ್ಟ ಹೆಜ್ಜೆ ಇಡುತ್ತ ಬರುವುದನ್ನು ನೋಡಿದ್ದೇನೆ. ಅವರು ಕ್ಯಾನ್ವಾಸ್ ಬೂಟು, ಧೋತರ, ಉದ್ದನೆಯ ಕೋಟು ಮತು ಪೇಟಾ ಸುತ್ತಿಕೊಂಡಿರುತ್ತಿದ್ದರು. ಅವೆಲ್ಲ ಹಳೆಯದಾಗಿ ಅಲ್ಲಲ್ಲಿ ಹರಿದಿರುತ್ತಿದ್ದವು.

ಸೊಲ್ಲಾಪುರದಿಂದ ಆ ಮಾಂತ್ರಿಕನ ತಂದೆ ಬಂದ. ಆತನೂ ಮಗನ ಹಾಗೆ ತೆಳ್ಳಗೆ ಎತ್ತರವಾಗಿದ್ದ. ಆತನ ಕೂಡ ಓಣಿಯ ಜನ ಮಾತನಾಡುತ್ತಿದ್ದರು. ಆತ ಬಹಳ ದುಃಖಿಯಾಗಿದ್ದರೂ ಗಂಭೀರವಾಗಿದ್ದ. “ನನ್ನ ಮುಂದೆ ನನ್ನ ಮಗ ಹೋಗಬಾರದಾಗಿತ್ತು” ಎಂದು ಹೇಳಿದ್ದು ಇಂದಿಗೂ ನೆನಪಿದೆ.

ಈ ನೆನಪು ಏಕೆ ಉಳಿದಿದೆ ಎಂದರೆ, ಜನ ಈ ಬಡ ವಯೋವೃದ್ಧರ ಕಾಲಿಗೆ ಏಕೆ ಬೀಳುತ್ತಾರೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಬ್ಯಾಂಕಿಗೆ ಭೇಟಿ ಕೊಡಬೇಕಾದ ಪ್ರಸಂಗವಿದ್ದಾಗ ಹಳಕಟ್ಟಿಯವರು ಆ ಬೃಹತ್ ದೇವಾಲಯದ ಮುಂದೆ ನಿಧಾನವಾಗಿ ಹಾಯ್ದು ಬ್ಯಾಂಕ್ ಕಚೇರಿಗೆ ಹೋಗುವ ಸಂದರ್ಭದಲ್ಲಿ ಹೆಣ್ಣುಮಕ್ಕಳು ಮತ್ತು ಪುರುಷರು ಅವರ ಕಾಲುಮುಟ್ಟಿ ನಮಸ್ಕಾರ ಮಾಡುತ್ತಿದ್ದರು. ಅವರು ಕೈ ಸನ್ನೆಯ ಮೂಲಕ ಮೌನದಲ್ಲಿ ಅವರಿಗೆ ಹರಸುತ್ತ ತಮ್ಮದೇ ಧ್ಯಾನದಲ್ಲಿ ಮುಂದೆ ಸಾಗುತ್ತಿದ್ದರು. ಈ ದೃಶ್ಯ ಇಂದಿಗೂ ಕಣ್ ತುಂಬಿಕೊಂಡಿದೆ.

ಮುಂದೆ ಆರನೆಯ ಇಯತ್ತೆಗೆ ಬರುವಷ್ಟರಲ್ಲಿ ಅವರು ವಚನಲೋಕದವರೆಂಬ ಅರಿವುಂಟಾಯಿತು. ಏಳನೇ ಇಯತ್ತೆಗೆ ಬಂದಾಗ ಅವರು ಲಿಂಗೈಕ್ಯರಾದ ಸುದ್ದಿ ಹಬ್ಬಿತು. ಅವರ ನೆನಪು ಮನದಲ್ಲಿ ಮನೆ ಮಾಡಿದ್ದರಿಂದ ಕಸಿವಿಸಿಯಾಯಿತು. ಸಿದ್ಧೇಶ್ವರ ದೇವಾಲಯದ ಕಡೆಗೆ ಹೋದೆ. ಅಷ್ಟೊತ್ತಿಗಾಗಲೇ ಪಾರ್ಥಿವ ಶರೀರದ ಯಾತ್ರೆ ದೇವಾಲಯದ ಮುಂದಿನಿಂದ ಸಾಗುತ್ತಿತ್ತು. ಮುಖ ನೋಡಲು ಮುಂದೆ ಹೋದೆ. ನಾನು ನೋಡಿದ ಹಳಕಟ್ಟಿ ಅಜ್ಜ ಇವರೇನಾ ಎಂದು ದಿಗಿಲಾಯಿತು. ಅವರಿಗೆ ಮೀಸೆ ಇರಲಿಲ್ಲ. ಪಾರ್ಥಿವ ಶರೀರಕ್ಕೆ ಒಂದು ರೀತಿಯ ಮಂದ ಕೆಂಪು ಬಣ್ಣದ ಮೀಸೆ ಇದ್ದವು. ಕುರುಚಲು ಗಡ್ಡ ಬೆಳೆದಿತ್ತೆಂಬ ನೆನಪು. ಅವರು ಬಹಳ ದಿನಗಳಿಂದ ಬೇನೆಬಿದ್ದ ಕಾರಣ ಈ ರೂಪ ಬಂದಿದೆ ಎಂದು ಮೇಲ್ನೋಟಕ್ಕೇ ಅನಿಸುತ್ತಿತ್ತು.

ಶವಯಾತ್ರೆಯಲ್ಲಿ ಹೇಳಿಕೊಳ್ಳುವಷ್ಟು ಜನರಿರಲಿಲ್ಲ! ನಾನು ಕೊನೆಯವರೆಗೂ ಈ ಯಾತ್ರೆಯಲ್ಲಿ ಪಾಲ್ಗೊಂಡೆ. ಬಿ.ಎಲ್.ಡಿ.ಇ. ಸಂಸ್ಥೆಯ ಆವರಣದಲ್ಲಿ ಅಮರಗಣಂಗಳ ಪ್ರತೀಕವಾದ 770 ಲಿಂಗಗಳುಳ್ಳ ಲಿಂಗದ ಗುಡಿಯ ಬಳಿ ಶವಸಂಸ್ಕಾರದ ವ್ಯವಸ್ಥೆಯಾಗಿತ್ತು.

(ಡಾ. ಫ.ಗು. ಹಳಕಟ್ಟಿ ಸ್ಮಾರಕ ಭವನ)

ಆ ಸಂದರ್ಭದಲ್ಲಿ ನನಗೆ ಬೇಸರ ಬರಿಸಿದ ಒಂದು ಘಟನೆ ನಡೆಯಿತು. ಪಾರ್ಥಿವ ಶರೀರವನ್ನು ಕುಣಿಯಲ್ಲಿ ಕೂಡಿಸಿದ ಮೇಲೆ, ಈ ಹಿಂದೆ ಕೋಮುಗಲಭೆಗೆ ಕಾರಣವಾಗಿದ್ದ ಆ ಐನಾರ ವ್ಯಕ್ತಿ ಪಾರ್ಥಿವ ಶರೀರದ ತಲೆಯ ಮೇಲೆ ಕಾಲಿಟ್ಟು ಅದೇನೋ ಗುಣುಗಿದ. ಇಂಥ ಒಬ್ಬ ಸಾಮಾನ್ಯ ವ್ಯಕ್ತಿ ಆ ಮಹಾನ್ ವ್ಯಕ್ತಿಯ ಶವದ ತಲೆಯ ಮೇಲೆ ಕಾಲಿಟ್ಟಿದ್ದನ್ನು ನನಗೆ ನೋಡಲಿಕ್ಕಾಗಲಿಲ್ಲ.

‘ಆ ದೊಡ್ಡ ವ್ಯಕ್ತಿಯ ತಲೆಯ ಮೇಲೆ ಈ ಸಣ್ಣ ವ್ಯಕ್ತಿಯ ಕಾಲು’ ಒಂದು ರೂಪಕವಾಗಿ ಮನದಲ್ಲಿ ಮನೆ ಮಾಡಿದೆ. ಹಳಕಟ್ಟಿ ಅವರ ಶವ ಸಂಸ್ಕಾರದ ವೇಳೆ ಕೋಮುಗಲಭೆಯ ಆ ನೆನಪುಗಳು ಮರುಕಳಿಸಿದವು.

ಶವ ಸಂಸ್ಕಾರದ ನಂತರ ಲಿಂಗದ ಗುಡಿಯ ಬಳಿಯೆ ಸಂತಾಪ ಸಭೆ ನಡೆಯಿತು. ಮಾತನಾಡಿದವರಲ್ಲಿ ಅಂಜುಮನ್ ಕಾಲೇಜಿನ ಪ್ರಿನ್ಸಿಪಾಲ್ ತಾಳಿಕೋಟಿ ಸರ್ ಅವರೂ ಒಬ್ಬರಾಗಿದ್ದರು. ಅವರದು ಸುಂದರ ಹಾಗೂ ಘನತೆವೆತ್ತ ವ್ಯಕ್ತಿತ್ವ. ಅವರು ಹಳಕಟ್ಟಿಯವರ ಬಗ್ಗೆ ಉರ್ದು ಭಾಷೆಯಲ್ಲಿ ಎಷ್ಟು ಭಾವಪೂರ್ಣವಾಗಿ ಮಾತನಾಡಿದರೆಂದರೆ, ಅಂದೇ ನನ್ನ ಮನದಲ್ಲಿ ವಚನದ ಬೀಜ ಬಿದ್ದಿತು.

(ಬರಗಾಲ ನಿವಾರಣಾ ಸಂಸ್ಥೆ)

ಫಕೀರಪ್ಪ ಗು. ಹಳಕಟ್ಟಿಯವರಷ್ಟು ನೋವನ್ನುಂಡು ವಚನ ಸಾಹಿತ್ಯಕ್ಕೆ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಿದ ಇನ್ನೊಬ್ಬರನ್ನು ನಾನು ನೋಡಿಲ್ಲ. ವಚನ ಸಂಪಾದನೆ, ಶಿಕ್ಷಣ, ಕೃಷಿ, ರಾಜನೀತಿ, ಬರಗಾಲ ನಿರ್ವಹಣೆ ಮುಂತಾದ ಕ್ಷೇತ್ರಗಳಲ್ಲಿನ ಅವರ ಸೇವೆ ಐತಿಹಾಸಿಕವಾಗಿದೆ. ಅವರು ಜನಸೇವೆಗಾಗಿ 30 ಸಂಸ್ಥೆಗಳನ್ನು ಹುಟ್ಟುಹಾಕಿದ್ದರು. ಆದರೆ ಬಡತನವೇ ಅವರ ಆಸ್ತಿಯಾಗಿತ್ತು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ. ಗಜೇಂದ್ರಗಡಕರ ಅವರು ವಕೀಲ ವೃತ್ತಿಯಲ್ಲಿದ್ದಾಗ ಇವರ ಜ್ಯೂನಿಯರ್ ಆಗಿದ್ದವರು. ಹಳಕಟ್ಟಿಯವರು ವಕೀಲರಾಗಿ ಮುಂದುವರಿದಿದ್ದರೆ, ನ್ಯಾಯಾಧೀಶ ಹುದ್ದೆಯನ್ನು ಸ್ವೀಕರಿಸಿದ್ದರೆ ನನಗಿಂತ ಮುಂಚೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗುತ್ತಿದ್ದರು ಎಂದು ಅವರು ಭಾಷಣವೊಂದರಲ್ಲಿ ಹೇಳಿದ್ದಾಗಿ ಹಿರಿಯರಿಂದ ಕೇಳಿದ್ದೇನೆ.

(ಡಾ. ಫ.ಗು. ಹಳಕಟ್ಟಿ ಸಮಾಧಿ)

ಫಕೀರಪ್ಪ ಗು. ಹಳಕಟ್ಟಿ ಅವರು ಗುರುಬಸಪ್ಪ ಮತ್ತು ದಾನಮ್ಮನವರ ಹಿರಿಯ ಮಗನಾಗಿ 1880ನೇ ಜುಲೈ 2 ರಂದು ಧಾರವಾಡದಲ್ಲಿ ಜನಿಸಿದರು. ಮೂರನೇ ವಯಸ್ಸಿನಲ್ಲಿ ತಮ್ಮ ತಾಯಿಯನ್ನು ಕಳೆದುಕೊಂಡರು. 1903ರಲಿ ವಚನ ಸಾಹಿತ್ಯಕ್ಕೆ ಸಂಬಂಧಿಸಿದ ತಾಳೆಗ್ರಂಥಗಳನ್ನು ಸಂಗ್ರಹಿಸುವ ಕಾರ್ಯ ಪ್ರಾರಂಭಿಸಿದರು. 1904ರಲ್ಲಿ ಮುಂಬೈನಲ್ಲಿ ಕಾನೂನು ಪದವಿ ಪಡೆದರು. ನಂತರ ಧಾರವಾಡ ನ್ಯಾಯಾಲಯದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸೇವೆ ಸಲ್ಲಿಸಿದರು. ಕೊನೆಗೆ ವಿಜಾಪುರದಲ್ಲಿ ಸ್ವತಂತ್ರವಾಗಿ ವಕೀಲ ವೃತ್ತಿ ಪ್ರಾರಂಭಿಸಿದರು. 1910ರಲ್ಲಿ ಬಿಜಾಪುರ ಲಿಂಗಾಯತ್ ಡಿಸ್ಟ್ರಿಕ್ ಎಜ್ಯುಕೇಷನ್ (ಬಿ.ಎಲ್.ಡಿ.ಇ) ಸಂಸ್ಥೆ ಪ್ರಾರಂಭಿಸಿದರು. 1912ರಲ್ಲಿ ಸಿದ್ಧೇಶ್ವರ ಬ್ಯಾಂಕ್ ಸ್ಥಾಪಿಸಿ ಅಧ್ಯಕ್ಷತೆಯ ಜವಾಬ್ದಾರಿಯನ್ನು ನಿರ್ವಹಿಸಿದರು. 1915ರಲ್ಲಿ ವಕೀಲ ವೃತ್ತಿ ಬಿಟ್ಟು ವಚನ ಸಂಗ್ರಹ, ಸಂಶೋಧನೆ ಮತ್ತು ಪ್ರಕಟಣೆಯಲ್ಲಿ ಮಗ್ನರಾದರು. ಆಗ ಬಡತನ ಜೊತೆಗೂಡಿತು. 1920ರಲ್ಲಿ ಮುಂಬೈ ವಿಧಾನ ಪರಿಷತ್ ಸದಸ್ಯರಾದರು. 1922ರಲ್ಲಿ ಬಸವೇಶ್ವರ ವಚನಗಳ ಇಂಗ್ಲಿಷ್ ಅನುವಾದ ಪ್ರಕಟಿಸಿದರು. 1925ರಲ್ಲಿ ವಚನಗ್ರಂಥಗಳ ಮುದ್ರಣಕ್ಕಾಗಿ ವಿಜಯಪುರದಲ್ಲಿ ಇದ್ದ ಮನೆಯನ್ನು ಮಾರಿ‘ಹಿತಚಿಂತಕ ಮುದ್ರಣಾಲಯ’ ಸ್ಥಾಪಿಸಿದರು. 1926ರಲ್ಲಿ ‘ಶಿವಾನುಭವ’ ಎಂಬ ತ್ರೈಮಾಸಿಕ ಪತ್ರಿಕೆ ಪ್ರಾರಂಭಿಸಿದರು. 1926ರಲ್ಲಿ ಬಳ್ಳಾರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. 1928ರಲ್ಲಿ ಸಾಮಾಜಿಕ, ರಾಜಕೀಯ ಮತ್ತು ಕರ್ನಾಟಕ ಏಕೀಕರಣದಂಥ ವಿಷಯಗಳಿಗಾಗಿ ‘ನವಕರ್ನಾಟಕ’ ಪತ್ರಿಕೆ ಪ್ರಾರಂಭಿಸಿದರು. 1928ರಲ್ಲಿ ಧಾರವಾಡದಲ್ಲಿ ನಡೆದ ಕರ್ನಾಟಕ ಏಕೀಕರಣ ಪರಿಷತ್ತಿನ ಮೂರನೆಯ ಸಮ್ಮೇಳನಾಧ್ಯಕ್ಷರಾದರು. 1931ರಲ್ಲಿ ಮುಂಬೈ ವಿಶ್ವವಿದ್ಯಾಲಯದ ಸಿನೆಟ್ ಸದಸ್ಯರಾದರು. 1933ರಲ್ಲಿ ಧಾರವಾಡದಲ್ಲಿ ನಡೆದ 10ನೇ ಅಖಿಲ ಭಾರತ ವೀರಶೈವ ಮಹಾಸಭಾದ ಸರ್ವಾಧ್ಯಕ್ಷರಾದರು. 1934ರಲ್ಲಿ ವಿಜಾಪುರದಲ್ಲಿ ಬರಗಾಲ ನಿವಾರಣೆಗಾಗಿ ಆರಂಭಿಸಿದ. ‘ವಿಲ್ಸನ್ ಯಾಂಟಿ ಫ್ಯಾಮಿನ್ ಇನ್‍ಸ್ಟಿಟ್ಯೂಟ್’ ಕಾರ್ಯದರ್ಶಿಗಳಾದರು. 1956ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಿ.ಲಿಟ್ ಪದವಿಗೆ ಭಾಜನರಾದರು. 1964ನೇ ಮೇ 25ರಂದು ಪತ್ನಿ ಭಾಗೀರಥಿ ಲಿಂಗೈಕ್ಯರಾದರು. 1964ನೇ ಜೂನ್ 29ರಂದು ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರು ಲಿಂಗೈಕ್ಯರಾದರು.

ವಚನ ಸಂಪಾದನಾ ಪಿತಾಮಹ, ತ್ಯಾಗಮೂರ್ತಿ ಡಾ. ಫ.ಗು. ಹಳಕಟ್ಟಿಯವರು 12ನೇ ಶತಮಾನದ ವಚನಕಾರರಿಗೆ ಸಮನಾಗಿ ಬದುಕಿ ನಮ್ಮ ಬದುಕಿಗೆ ದಾರಿದೀಪವಾದರು.

(ಚಿತ್ರಗಳು: ಸುನೀಲಕುಮಾರ ಸುಧಾಕರ)