ಈ ಕಾದಂಬರಿಯ ಎರಡನೆಯ ಅಧ್ಯಾಯ ಶುರುವಾಗುವುದು ರೇಚಲ್ ತೀರಿಕೊಂಡ ಹತ್ತು ವರ್ಷಗಳ ನಂತರ. ಮಣಿ ಹಾವು ಕಚ್ಚಿ ಮೃತನಾದಾಗ ಅವನ ಮಕ್ಕಳೆಲ್ಲ ಅಂತ್ಯಕ್ರಿಯೆಗಾಗಿ ಸೇರಿದಾಗ ಮತ್ತೆ ಸಲೋಮಿಯ ಹೆಸರಿಗೆ ಮನೆ ವರ್ಗಾಯಿಸುವ ಮಾತು ಬರುತ್ತದೆ. ಆಂಟನ್ ಆಮೋರಳ ಸಾಥ್ ನೀಡಿದರೂ ಹಿರಿಯಕ್ಕ ಆಸ್ಟ್ರಿಡ್ ಅಸಮ್ಮತಿ ಸೂಚಿಸುತ್ತಾಳೆ. ಅಷ್ಟಕ್ಕೂ ಸಲೋಮಿಯ ಹೆಸರಿನಲ್ಲಿಯೇ ಇರಬೇಕು ಎಂಬ ಹಠ ಏಕೆ?
‘ಕಾವ್ಯಾ ಓದಿದ ಹೊತ್ತಿಗೆ’ ಅಂಕಣದಲ್ಲಿ ‘ದ ಪ್ರಾಮಿಸ್’ ಕಾದಂಬರಿಯ ಬಗ್ಗೆ ಬರೆದಿದ್ದಾರೆ ಕಾವ್ಯಾ ಕಡಮೆ

 

ಈ ವರ್ಷದ ಬೂಕರ್ ಪ್ರಶಸ್ತಿ ಪಡೆದ ಸೆಲೆಬ್ರೇಟೆಡ್ ಕಾದಂಬರಿ ‘ದ ಪ್ರಾಮಿಸ್’ ಹೇಳುವುದು ಅತ್ಯಂತ ಸರಳವಾದ ಕತೆಯನ್ನು. ಸೌಥ್ ಆಫ್ರಿಕಾ ದೇಶದ ವರ್ಣ ಸಂಘರ್ಷವನ್ನು ತೋರದೆಯೂ ತೋರುವ ಕೆಲಸವ ಕಾದಂಬರಿಕಾರ ಡೇಮನ್ ಗಾಲ್ಗಟ್ ಅತ್ಯಂತ ಪ್ರಾಮಾಣಿಕವಾಗಿ ಮಾಡಿದ್ದಾರೆ.

ಕತೆ ನಡೆಯುವುದು ಸೌಥ್ ಆಫ್ರಿಕಾ ದೇಶದ ಪ್ರಿಟೋರಿಯಾ ಪ್ರಾಂತ್ಯದ ಹೊರವಲಯದಲ್ಲಿರುವ ಫಾರ್ಮ್ ಒಂದರಲ್ಲಿ. ತಲೆಮಾರುಗಳಿಂದ ಈ ಫಾರ್ಮನ್ನು ಸ್ವಾರ್ಥ್ ಎಂಬ ಕುಟುಂಬದವರು ನೋಡಿಕೊಳ್ಳುತ್ತಿದ್ದಾರೆ. ಮಣಿ ಮತ್ತು ರೇಚಲ್- ಮಧ್ಯವಯಸ್ಕ ಗಂಡ ಹೆಂಡತಿ; ಆಂಟನ್, ಆಸ್ಟ್ರಿಡ್, ಆಮೋರ್- ಇವರ ಮಕ್ಕಳು. ಸಲೋಮಿ ಎಂಬ ಕಪ್ಪು ಹೆಣ್ಣು ಈ ಮನೆಯ ಕೆಲಸದಾಳು. ಈ ಕಾದಂಬರಿ ನಾಲ್ಕು ವಿಶಾಲ ಭಾಗಗಳಲ್ಲಿ ಹರಡಿಕೊಂಡಿದೆ. ವಿಶೇಷವೆಂದರೆ ಈ ನಾಲ್ಕೂ ಭಾಗಗಳು ಸ್ವಾರ್ಥ್ ಕುಟುಂಬದ ನಾಲ್ವರ ಅಂತ್ಯಕ್ರಿಯೆಯ ಸುತ್ತ ಹರಡಿಕೊಂಡಿದೆ. ಆದರೆ ಇಡೀ ಕಾದಂಬರಿಯ ಹೃದಯವಿರುವುದು ಒಂದೇ ಸಂಗತಿಯಲ್ಲಿ, ಅದು ವರ್ಷಗಳ ಹಿಂದೆ ಒಬ್ಬರು ಇನ್ನೊಬ್ಬರಿಗೆ ಕೊಟ್ಟ ವಚನದಲ್ಲಿ, ಮತ್ತದನ್ನು ನಡೆಸಿಕೊಡಲಾರದ ದಾಷ್ಟ್ರ್ಯದಲ್ಲಿ.

ಕಾದಂಬರಿ ಶುರುವಾದಾಗ ಆಫ್ರಿಕಾದಲ್ಲಿ ಇನ್ನೂ ವರ್ಣಭೇದ ನೀತಿ (ಅಪಾರ್ಥೆಡ್) ಪ್ರಚಲಿತವಿದ್ದ ಕಾಲ. 1994ರ ತನಕ ಒಂದಲ್ಲ ಒಂದು ರೀತಿಯಲ್ಲಿ ಸೌಥ್ ಆಫ್ರಿಕಾದಲ್ಲಿ ಬಳಕೆಯಲ್ಲಿದ್ದ ವರ್ಣಭೇದ ನೀತಿಯ ಪ್ರಕಾರ ಬಹುಸಂಖ್ಯೆಯ ಕಪ್ಪು ಜನ ಆಸ್ತಿ ಹೊಂದುವಂತಿರಲಿಲ್ಲ. ಈ ಎಳೆಯ ಮೇಲೆ ಕಾದಂಬರಿ ಶುರುವಾಗುತ್ತದೆ.

ಮನೆಯೊಡತಿ ರೇಚಲ್ ಕ್ಯಾನ್ಸರಿನಿಂದ ಹಾಸಿಗೆ ಹಿಡಿದಿರುವ ಸನ್ನಿವೇಶದಿಂದ ಪ್ರಾರಂಭವಾಗುವ ಕಾದಂಬರಿ ಸ್ವಾರ್ಥ್ ಕುಟುಂಬದ ಒಳಗಡೆಯೇ ಇರುವ ಬಿರುಕುಗಳನ್ನು ಬಿಡಿಸಿಡುತ್ತದೆ. ಕುಟುಂಬದವರು, ಸಂಬಂಧಿಕರೆಲ್ಲ ಮಾತಿಗೆ ಆಗುವವರೇ ವಿನಃ ಅನಾರೋಗ್ಯದಿಂದ ಹಾಸಿಗೆ ಹಿಡಿದವರ ಸೇವೆಗೆ ನಿಲ್ಲದವರು. ದೊಡ್ಡ ಮಗ ಆಂಟನ್ ಆಗ ಸೇನೆಯಲ್ಲಿರುತ್ತಾನೆ. ಮಗಳು ಆಸ್ಟ್ರಿಡ್ ತನ್ನ ಆಡಂಬರದ ಲೋಕದಲ್ಲೇ ತಾನಿರುವವಳು. ಕೊನೆಯ ಮಗಳು ಆಮೋರ್ ಈಗಷ್ಟೇ ಹದಿಮೂರರ ಹರೆಯದವಳು. ಫಾರ್ಮನ್ನು ಸುತ್ತಾಡುತ್ತ ತನ್ನೊಟ್ಟಿಗೇ ತಾನು ಸಂವಹಿಸುವ ಮಹಾಮೌನಿ.

ರೇಚಲ್‌ಳ ದಿನನಿತ್ಯದ ಸೇವೆಯ ಜೊತೆಗೆ ಮನೆಯ ಎಲ್ಲ ಕೆಲಸ ನಿಭಾಯಿಸಲು ಕೆಲಸದಾಳು ಸಲೋಮಿ ಇರಲೇಬೇಕು. ಫಾರ್ಮಿಗೆ ಅಂಟಿಕೊಂಡೇ ಇರುವ ‘ಲೊಂಬಾರ್ಡ್ ಪ್ಲೇಸ್’ನಲ್ಲಿ ಅವಳು ವಾಸವಿದ್ದಾಳೆ. ಈ ಮನೆ ಸ್ವಾರ್ಥ್ ಕುಟುಂಬಕ್ಕೇ ಸೇರಿದ್ದು. ಸಲೋಮಿ ಹೆಚ್ಚು ಕಡಿಮೆ ರೇಚಲ್‌ಳದ್ದೇ ವಯಸ್ಸಿನವಳು. ಆಂಟನ್, ಆಸ್ಟ್ರಿಡ್, ಆಮೋರ್‍ರನ್ನು ಎತ್ತಾಡಿಸಿ ಬೆಳೆಸಿದವಳು ಅವಳು. ಸಾಯುವ ಮುನ್ನ ರೇಚಲ್, ತನ್ನ ಗಂಡ ಮಣಿಯನ್ನು ಕರೆದು ಈಗ ಸಲೋಮಿ ವಾಸವಿರುವ ಲೊಂಬಾರ್ಡ್ ಪ್ಲೇಸನ್ನು ಅವಳ ಹೆಸರಿಗೇ ಮಾಡಿಕೊಡಬೇಕು ಎಂದು ಪ್ರಮಾಣ ಮಾಡಿಸಿಕೊಂಡು ಜೀವ ಬಿಡುತ್ತಾಳೆ. ಈ ಮಾತುಕತೆ ಕಿರಿಯ ಮಗಳು ಆಮೋರ್‌ಳ ಮುಂದೆಯೇ ನಡೆದಿರುತ್ತದೆ.

ಮನೆಯೊಡತಿ ರೇಚಲ್ ಕ್ಯಾನ್ಸರಿನಿಂದ ಹಾಸಿಗೆ ಹಿಡಿದಿರುವ ಸನ್ನಿವೇಶದಿಂದ ಪ್ರಾರಂಭವಾಗುವ ಕಾದಂಬರಿ ಸ್ವಾರ್ಥ್ ಕುಟುಂಬದ ಒಳಗಡೆಯೇ ಇರುವ ಬಿರುಕುಗಳನ್ನು ಬಿಡಿಸಿಡುತ್ತದೆ. ಕುಟುಂಬದವರು, ಸಂಬಂಧಿಕರೆಲ್ಲ ಮಾತಿಗೆ ಆಗುವವರೇ ವಿನಃ ಅನಾರೋಗ್ಯದಿಂದ ಹಾಸಿಗೆ ಹಿಡಿದವರ ಸೇವೆಗೆ ನಿಲ್ಲದವರು.

ಮರಣ ಶಯ್ಯೆಯಲ್ಲಿದ್ದ ರೇಚಲ್ ಗಂಡನ ಬಳಿ ತೆಗೆದುಕೊಳ್ಳುವ ಎರಡು ವಚನಗಳಲ್ಲಿ ಅಲ್ಲಿನ ತನಕ ಅದುಮಿಟ್ಟ ಬಂಡಾಯವನ್ನು ತೋರುವುದು ವಿಶೇಷವಾದುದು. ಅವುಗಳಲ್ಲಿ ಸಲೋಮಿಯ ಹೆಸರಿಗೇ ಲೊಂಬಾರ್ಡ್ ಪ್ಲೇಸನ್ನು ಮಾಡಿಕೊಡಬೇಕು ಎನ್ನುವುದು ಒಂದಾದರೆ, ತಾನು ಹುಟ್ಟಿದ ಜ್ಯೂವಿಶ್ ಪಂಥಕ್ಕೇ ಮತ್ತೆ ಸೇರಿ, ಅಂತ್ಯಸಂಸ್ಕಾರವೂ ಅವರಂತೆಯೇ ಆಗಬೇಕು ಎನ್ನುವುದು ಇನ್ನೊಂದು. ಮಣಿಗೆ ತನ್ನ ಪ್ರಿಯ ಹೆಂಡತಿ ಸಾಯುವ ಕಾಲಕ್ಕೆ ಹೀಗೆ ತನ್ನ ವಿವಾಹಪೂರ್ವ ಪಂಥಕ್ಕೆ ಸೇರುವುದು ನುಂಗಲಾರದ ತುತ್ತು. ತನ್ನ ಕುಟುಂಬದ ಫಾರ್ಮಿನಲ್ಲಿ ಮುಂದೊಂದು ದಿನ ತನ್ನನ್ನು ಹೂಳುವ ಸ್ಥಳದ ಪಕ್ಕವೇ ತನ್ನ ಹೆಂಡತಿಯನ್ನು ಹೂಳುವ ಇರಾದೆ ಅವನದು. “ಶೀ ಬಿಲಾಂಗ್ಸ್ ಹಿಯರ್” ಎನ್ನುವ ವಾದ ಅವನದು. ಆದರೆ ಸತ್ತ ಮೇಲೆಯಾದರೂ ಅವನ ಪಕ್ಕ ಮಲಗುವುದಿಲ್ಲ ಎಂದು ನಿರ್ಧರಿಸಿದ ರೇಚಲ್ ಬಹುದೊಡ್ಡ ಕ್ರಾಂತಿಕಾರಿಯಂತೆ ಕಾಣಿಸುತ್ತಾಳೆ.

ರೇಚಲ್‌ಳ ಮರಣದ ನಂತರ ಮಣಿ ಸಲೋಮಿಯ ಹೆಸರಿಗೆ ಆಕೆ ವಾಸವಾಗಿರುವ ಲೊಂಬಾರ್ಡ್ ಪ್ಲೇಸನ್ನು ಮಾಡಿಕೊಡಲು ಆಗುವುದಿಲ್ಲ. ಮನಸ್ಸಿರುವುದಿಲ್ಲ ಅನ್ನುವುದು ಒಂದು ನೆಪವಾದರೆ ಕರಿಯರು ಆಸ್ತಿ ಹೊಂದಬಾರದು ಎಂಬ ವರ್ಣಭೇದ ನೀತಿ ಇನ್ನೊಂದು ಕಾರಣವಾಗುತ್ತದೆ. ಎಲ್ಲರೂ ಈ ಬಗ್ಗೆ ಉಪೇಕ್ಷೆ ತೋರಿದರೂ ಕಿರಿಯ ಮಗಳು ಆಮೋರ್ ಮಾತ್ರ ಈ ವಿಷಯವನ್ನು ಮುನ್ನಲೆಗೆ ತರುತ್ತಲೇ ಇರುತ್ತಾಳೆ. ಇವರೆಲ್ಲರ ಸಹವಾಸವೇ ಸಾಕು ಎಂದು ಅವಳು ಮನೆ ಬಿಟ್ಟು ಹೋಗುವವರೆಗೂ ಬಂದು ಮುಟ್ಟುತ್ತದೆ.

ಎರಡನೆಯ ಅಧ್ಯಾಯ ಶುರುವಾಗುವುದು ರೇಚಲ್ ತೀರಿಕೊಂಡ ಹತ್ತು ವರ್ಷಗಳ ನಂತರ. ಮಣಿ ಹಾವು ಕಚ್ಚಿ ಮೃತನಾದಾಗ ಅವನ ಮಕ್ಕಳೆಲ್ಲ ಅಂತ್ಯಕ್ರಿಯೆಗಾಗಿ ಸೇರಿದಾಗ ಮತ್ತೆ ಸಲೋಮಿಯ ಹೆಸರಿಗೆ ಮನೆ ವರ್ಗಾಯಿಸುವ ಮಾತು ಬರುತ್ತದೆ. ಆಂಟನ್ ಆಮೋರಳ ಸಾಥ್ ನೀಡಿದರೂ ಹಿರಿಯಕ್ಕ ಆಸ್ಟ್ರಿಡ್ ಅಸಮ್ಮತಿ ಸೂಚಿಸುತ್ತಾಳೆ. ಅಷ್ಟಕ್ಕೂ ಸಲೋಮಿಯ ಹೆಸರಿನಲ್ಲಿಯೇ ಇರಬೇಕು ಎಂಬ ಹಠ ಏಕೆ? ಆ ಮನೆಯಲ್ಲಿ ಅವಳದೇ ಕುಟುಂಬವಲ್ಲವೇ ವಾಸವಿರುವುದು? ಅದಕ್ಕಿಂಥ ಹೆಚ್ಚಿನದಕ್ಕೆ ಅವಳೇಕೆ ಆಸೆಪಡಬೇಕು ಎಂಬುದೇ ಸಂಬಂಧಿಕರೆಲ್ಲರ ವಾದವೂ. ಜೊತೆಗೆ ಈ ಸಮಯದಲ್ಲಿ ಸೌತ್ ಆಫ್ರಿಕಾದಲ್ಲಿ ಅಪಾರ್ತೆಡ್ ಕೂಡ ಮುಗಿದಿದೆ. ಆದರೂ ಸಲೋಮಿಯ ಹೆಸರಿಗೆ ಲೊಂಬಾರ್ಡ್ ಪ್ಲೇಸ್ ವರ್ಗಾವಣೆ ಆಗುವುದಿಲ್ಲ.

ಮೂರನೆಯ ಅಧ್ಯಾಯದಲ್ಲಿ ಆಸ್ಟ್ರಿಡ್ ಡಕಾಯಿತನೊಬ್ಬನ ಗುಂಡಿನ ದಾಳಿಗೆ ಬಲಿಯಾದಾಗ ಆಂಟನ್ ಮತ್ತು ಆಮೋರಳ ನಡುವೆ ಸಲೋಮಿಯ ವಿಷಯಕ್ಕೆ ಮತ್ತೆ ಜಗಳವಾಗುತ್ತದೆ. ಈಗ ಆಂಟನ್ ಫಾರ್ಮಿನಲ್ಲೇ ಹೆಂಡತಿಯೊಂದಿಗೆ ವಾಸವಾಗಿದ್ದಾನೆ. ಹಿಂದೊಂದು ಕಾಲದಲ್ಲಿ ತಂದೆ ತಾಯಿಗೆ ಮಾಡಿದ ಪ್ರಮಾಣವನ್ನು ನಡೆಸಿಕೊಡುವುದು ಅವನಿಗೆ ಸಧ್ಯದ ಅನಿವಾರ್ಯತೆಯೇನಲ್ಲ.

ಕೊನೆಯ ಅಧ್ಯಾಯದಲ್ಲಿ ಆಂಟನ್ ಕೂಡ ಸಾವು ತಂದುಕೊಳ್ಳುತ್ತಾನೆ. ಸ್ವಾರ್ಥ್ ಕುಟುಂಬದ ಕೊನೆಯ ಕುಡಿ ಆಮೋರ್ ಮಾತ್ರವೇ ಈಗ ಬದುಕಿರುವವಳು. ಅವಳು ಮೂವತ್ತು ವರ್ಷಗಳ ಹಿಂದೆ ತನ್ನ ತಾಯಿಯು ತಂದೆಯಿಂದ ಪಡೆದ ವಚನವನ್ನು ನಡೆಸಿಕೊಡುತ್ತಾಳೆಯೇ? ಕೊನೆಗಾದರೂ ಆ ಲೊಂಬಾರ್ಡ್ ಪ್ಲೇಸ್ ಸಲೋಮಿಯ ಹೆಸರಿಗೆ ವರ್ಗಾವಣೆಯಾಗುತ್ತದೆಯೇ? ಕಾದಂಬರಿ ಓದಿಯೇ ತಿಳಿಯಬೇಕು.

ಒಂದು ಪ್ರಮಾಣವನ್ನೇ ಕಥನದ ಆತ್ಮದಲ್ಲಿಟ್ಟುಕೊಂಡು ಮುನ್ನೂರು ಪುಟದ ಕಾದಂಬರಿ ಬರೆಯಲು ಧೈರ್ಯ ಬೇಕು. ಈಗಾಗಲೇ ಒಂಬತ್ತು ಕಾದಂಬರಿಗಳನ್ನು ಪ್ರಕಟಿಸಿರುವ, ಸ್ವತಃ ನಾಟಕಕಾರರೂ ಆಗಿರುವ ಡೇಮನ್ ಗಾಲ್ಗಟ್ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಕಾದಂಬರಿ ಲೋಕಕ್ಕೆ ಹೊಸತೆನಿಸುವ, ತಾನು ನಿಂತ ಆಯತದ ಕುರಿತು ಕೊನೆಯವರೆಗೂ ಗುಟ್ಟು ಬಿಟ್ಟು ಕೊಡದ ‘ಫ್ಲೆಕ್ಸಿಬಲ್’ ನಿರೂಪಕ/ಕಿಯೂ ಈ ಪ್ರಯಾಣದಲ್ಲಿ ಲೇಖಕರ ಸಾಥ್ ಕೊಡುತ್ತಾನೆ/ಳೆ ಎನ್ನುವುದು ಸುಳ್ಳಲ್ಲ.