ನನ್ನ ಶಿಕ್ಷಕಿ ಗೆಳತಿಯೊಬ್ಬಳಿದ್ದಾಳೆ. ಅವಳಿಗೆ ವಯಸ್ಸು ಐವತ್ತು ದಾಟಿದರೂ ಇನ್ನೂ ಮೂವತ್ತರ ಆಚೆಯೀಚೆಯಂತೆ ಕಾಣುತ್ತಾಳೆ. ನಾವು ಸಿಕ್ಕಾಗಲೆಲ್ಲಾ ಅವಳನ್ನು ಪೀಡಿಸೋದು ನಿನ್ನ ಸೌಂದರ್ಯದ ರಹಸ್ಯ ಏನು? ಅಂತ. ಬಹುಶಃ ಇದು ಅವಳಿಗೆ ಮಾಮೂಲಿಯಾಗಿ ಸಾವಿರದ ಒಂದನೇಯ ಪ್ರಶ್ನೆಯಾಗಿರಬಹುದು. ಅವಳು ಅಷ್ಟೇ ಅದನ್ನು ಸಹಜವಾಗಿ ಕೇಳಿ ನಕ್ಕು ಸುಮ್ಮನಾಗುತ್ತಿದ್ದಳೇ ವಿನಃ ತನ್ನ ವಯಸ್ಸನ್ನು ಎಂದೂ ಬಿಟ್ಟು ಕೊಡುತ್ತಿರಲಿಲ್ಲ. ನಾವು ಮತ್ತೂ ಬಿಡದೇ ಯೋಗ ಮಾಡುತ್ತೀಯ? ಉಪವಾಸ ಮಾಡ್ತೀಯಾ ಅಂತ ಪ್ರಶ್ನೆ ಹಾಕಿದರೆ, ಆಕೆಯೋ ಅದೊಂದು ದೊಡ್ಡ ಸಂಗತಿಯೇ ಅಲ್ಲವೆಂಬಂತೆ ನನಗೆ ತುಂಬಾ ವರ್ಷಗಳವರೆಗೆ ವಯಸ್ಸು ಮೂವತ್ತಒಂಬತ್ತೇ ಆಗಿತ್ತು ಎನ್ನುತ್ತಾಳೆ. – ಹೀಗೆ ವಯೋವಿಲಾಸದ ಲಹರಿಗಳನ್ನು ಬಣ್ಣಿಸಿದ್ದಾರೆ
ಸ್ಮಿತಾ ಅಮೃತರಾಜ್‌ ಸಂಪಾಜೆ 

 

ಬಾಲ್ಯದಲ್ಲಿ ಅಮ್ಮಂದಿರನ್ನು ಗಮನಿಸುತ್ತಾ ಬಂದ ನಾವುಗಳು ಸಾಮಾನ್ಯವಾಗಿ ಅಮ್ಮನ್ನನ್ನೇ ಅನುಕರಿಸಲು ಪ್ರಯತ್ನಿಸುತ್ತೇವೆ. ಅದರಲ್ಲಿ ವಿಶೇಷವಾಗಿ ಹೆಣ್ಮಕ್ಕಳು. ನಾವುಗಳು ಅವರ ತದ್ರೂಪರು ಎಂಬಂತೆ ಅವರ ಹಾವ ಭಾವಗಳನ್ನೆಲ್ಲಾ ಅನುಕರಿಸುತ್ತಾ ಅವರಂತಾಗಲು ಪ್ರಯತ್ನಿಸುತ್ತಿರುತ್ತೇವೆ. ಎಷ್ಟೆಂದರೂ ನಾವುಗಳು ಅವರ ಚರ್ಯೆಯನ್ನು ಪ್ರಬಿಂಬಿಸುವ ವಾರಸುದಾರರು ತಾನೇ? ಅದಕ್ಕಾಗಿಯೇ ಇರಬೇಕು ಅಮ್ಮಂದಿರು ಸೆರಗು ಕಟ್ಟಿ ಆಚೆ ಈಚೆ ಓಡುತ್ತಾ, ತಿಂಡಿ, ಊಟ ತಯಾರಿ ಮಾಡುತ್ತಾ, ಆಚೆಮನೆ ಮದುವೆಗೆ ಈಚೆ ಮನೆ ನಾಮಕರಣಕ್ಕೆ ಅಲಂಕಾರ ಮಾಡಿಕೊಂಡು ಹೋಗುವಾಗ ನಿಜಕ್ಕೂ ಯಾವುದೋ ಒಂದು ನವಿರು ಆಸೆಯೊಂದು ಎಳೆಯ ಮನಸಲ್ಲಿ ಹಾದು ಹೋಗುತ್ತಿತ್ತು.

ಆರು ದಿನವೂ ಹಾಕುವ ನೀಲಿ ಬಿಳಿ ಲಂಗ ಜಂಪರ್, ಓದು, ಮನೆಕೆಲಸ, ಪರೀಕ್ಷೆ ಇವುಗಳೆಲ್ಲದರಿಂದಲೂ ಮುಕ್ತಿ ಸಿಗಬೇಕೆಂದರೆ, ಬೇಗ ಓದು ಮುಗಿಸಿ, ಆದಷ್ಟೂ ಬೇಗ ದೊಡ್ಡವಳಾಗಿ ಅಮ್ಮನಂತಾಗಬೇಕೆಂದು ಹಾತೊರೆದದ್ದು ನೂರಕ್ಕೆ ನೂರು ದಿಟ. ಪ್ರತೀ ಹುಟ್ಟಿದ ದಿನವನ್ನು ಸಂಭ್ರಮದಿಂದ ಆಚರಿಸಿದ್ದೇ ಆಚರಿಸಿದ್ದು. ಬಾಲ್ಯದ ಬಾಗಿಲು ದಾಟಿ ಹರೆಯದ ಹೊಸಿಲಿಗೆ ಬಂದು ನಿಂತದ್ದೊಂದೇ ಗೊತ್ತು. ವಯಸ್ಸಿಗೆ ಅದೆಂತ ವೇಗ ಅಂತೀರಿ? ಈಗ ಅಮ್ಮನ ಏಕಪಾತ್ರಾಭಿನಯ ಬಲು ಕಷ್ಟದ್ದು ಅಂತನ್ನಿಸಿ ಮಕ್ಕಳಿಗೆ ನನ್ನಮ್ಮ ಹೇಳಿದ ಅದೇ ಮಾತನ್ನ ಓದು ಓದು ಅಂತ ಪುನರುಚ್ಚರಿಸುತ್ತಿದ್ದೇನೆ. ಅದಿರಲಿ, ವಿಷಯ ಅದಲ್ಲ. ಅಮ್ಮನಾಗುವುದೆಂದರೆ ಸಾಮಾನ್ಯ ಸಂಗತಿಯಲ್ಲ. ಅದು ದಿವ್ಯ ಅನುಭೂತಿಯೇ. ಪ್ರಾಯ ಏರುತ್ತಲೇ ಹೋಗುತ್ತಿದೆಯಲ್ಲ ಅನ್ನುವುದೇ ದೊಡ್ಡ ಆತಂಕ. ಯಾವುದೋ ಘನ ಕಾರ್ಯಕ್ಕೆ ಹೊರಟವರಂತೆ ವಯಸ್ಸು ಹಿಂತಿರುಗಿ ತುಸು ಹೊತ್ತು ನೋಡಲು ತಾಳ್ಮೆಯಿಲ್ಲದಂತೆ ಬಿರಬಿರನೆ ಹೆಜ್ಜೆ ಹಾಕುತ್ತಿದೆ. ಬಾಲ್ಯ ಯೌವನ ಮುಪ್ಪು ಈ ಮೂರು ಮಜಲುಗಳನ್ನು ಒಬ್ಬ ಮನುಷ್ಯನಿಗೆ ಜೀವಿತಾವಧಿಯಲ್ಲಿ ತೋರಿಸಬೇಕೆಂಬ ಅದರ ಕೆಲಸ ಘನಂಧಾರಿಯಲ್ಲದೆ ಮತ್ತಿನ್ನೇನು?

ಬಹುಶಃ ಯಾವುದೇ ಆಮಿಷಕ್ಕೆ ಒಳಗಾಗದೆ ನಿಯತ್ತಿನಿಂದ ಕೆಲಸಮಾಡುವ ಅದರ ಬದ್ಧತೆಗೆ ಎಲ್ಲ ಮರೆತು ಒಮ್ಮೆ ತಲೆಬಾಗಲೇ ಬೇಕು. ಆದರೂ ಇತ್ತಿತ್ತಲಾಗಿ ಯಾರಾದರೂ ನಿಮ್ಮ ವಯಸ್ಸೆಷ್ಟು ಅಂತ ನೇರ ಕಣ್ಣು ನೋಡುತ್ತಾ ಪ್ರಶ್ನೆ ಹಾಕಿದರೆ ನಿಜಕ್ಕೂ ಭಯಂಕರ ಮಂಡೆ ಬಿಸಿ ಶುರುವಾಗಿ ಬಿಡುತ್ತದೆ. ಇದು ಸಹಜವೇ ಆದರೂ ಎಷ್ಟೆಲ್ಲಾ ಜಟಿಲ ಸಂದರ್ಭಗಳನ್ನು ನಿಭಾಯಿಸಿದ್ದೇವೆ, ಮುಳ್ಳು ಕಂಟಿಗಳನ್ನು ಬಲು ಎಚ್ಚರಿಕೆಯಿಂದ ಹಾರಿ ಬಂದಿದ್ದೇವೆ. ಪಾತಾಳ ಇಳಿದು, ಆಕಾಶ ಹತ್ತಿ, ಗಾಳಿಯಲ್ಲಿ ಹಾರಿ, ನೀರಿನಲ್ಲಿ ತೇಲಿ, ಸುಡುವಾಗ್ನಿಯಿಂದ ಎದ್ದು ಬಂದರೂ ಕಾಲವನ್ನು ಹಿಡಿತದೊಳಗೆ ಹಿಡಿದಿಟ್ಟು ಕೊಳ್ಳಲು ಸಾಧ್ಯವಾಗದೇ ಇರುವುದೇ ಬದುಕಿನ ಬಹು ದೊಡ್ಡ ಸೋಲು ಅಂತನ್ನಿಸುತ್ತದೆ. ಬಿಡಿ, ಇನ್ನೇನು ಮಾಡೋಕಾಗುತ್ತೆ? ಇದು ಒಂದಿಬ್ಬರ ಸೋಲು ಅಲ್ವಲ್ಲಾ? ಅಂತ ಸಮರ್ಥನೆ ಮಾಡಿಕೊಂಡು ಇಲ್ಲದ ವೇದಾಂತವನ್ನೆಲ್ಲಾ ತಲೆಯೊಳಗೆ ಇಳಿ ಬಿಟ್ಟು ಓಡುತ್ತೇವೆ.

ಮಜಾ ಅಂದರೆ ಕುತ್ತಿಗೆಯಲ್ಲಿ ಕರಿಮಣಿ ಕಂಡಾಕ್ಷಣ ಅಕ್ಕಪಕ್ಕದವರು ಆಂಟಿ ಅಂತ ನಾಮಕರಣ ಮಾಡಿ ಬಿಡುತ್ತಾರೆ. ನನ್ನ ಕರಿಮಣಿ ಸರವನ್ನು ಯಾವಾಗಲೂ ಒಳ ಬದಿಗೆ ಹಾಕಿಕೊಂಡಿರುವುದ್ದಕ್ಕೋ ಏನೋ ಅದೆಷ್ಟೋ ವರುಷಗಳವರೆಗೆ ನನಗೆ ಅಕ್ಕಾ ಅಂತ ಕರೆಸಿಕೊಳ್ಳುವ ಭಾಗ್ಯ ಒದಗಿ ಬಂದಿತ್ತು. ವಯಸ್ಸಿನ ಕಲೆಯನ್ನು ಅಳಿಸಿ ಹಾಕಲು ಸಾಧ್ಯವೇ? ಪತ್ತೆ ಹಚ್ಚಿದವರಂತೆ ಈಗ ಏಕ್ ದಂ ಎಲ್ಲರೂ ಆಂಟೀ ಅಂತ ಕರೆಯುವಾಗ ಪಾದಕ್ಕೆ ಮುಳ್ಳು ಚುಚ್ಚಿದಂತೆ ತಡವರಿಸೋಕೆ ಶುರು ಮಾಡುತ್ತೇನೆ. ನಡಿಗೆ ಕುಂಟುತ್ತದೆ. ನುಂಗಲೂ ಆಗದ ಉಗುಳಲೂ ಆಗದ ಬಿಸಿ ತುಪ್ಪ. ಬಹುಶಃ ಹೆಚ್ಚಿನವರ ಮನಸ್ಥಿತಿ ಇದುವೇ ಅನ್ನುವುದಕ್ಕೆ ಮೊನ್ನೆಯೊಂದು ಸಾಕ್ಷಿ ಸಿಕ್ಕಿ ಬಿಟ್ಟಿತ್ತು.

ಮಕ್ಕಳನ್ನು ಪ್ರವಾಸಕ್ಕೆಂದು ಕರೆತಂದ ಶಿಕ್ಷಕಿಯೊಬ್ಬರನ್ನ ಅಪರಿಚಿತನೊಬ್ಬ ಏನೋ ಕೇಳುವ ಸಲುವಾಗಿ ಆಂಟೀ ಅಂದಿದ್ದನಂತೆ. ಸಿಸ್ಟರ್ ಅಂತ ಕರೆಯಲಾಗದಿದ್ದರೂ ಮೇಡಂ ಅಂತಾದರೂ ಕರೆಯಬಹುದಿತ್ತಲ್ಲಾ ಅಂತ ತನಗಾದ ನೋವನ್ನು ತೋಡಿಕೊಂಡಿದ್ದರು. ಆಂಟಿಯ ಪ್ರಾಯವಾದರೂ ಚಿಕ್ಕವಳಂತೆ ತಾನು ತೋರುತ್ತಿದ್ದೇನೆ ಅನ್ನೋ ಅವರ ಆತ್ಮವಿಶ್ವಾಸದ ಬಲೂನಿಗೆ ಸೂಜಿ ಚುಚ್ಚಿತ್ತೋ? ಅಥವಾ ತಾನಿನ್ನೂ ಎಳೆ ಪ್ರಾಯದ ಹುಡುಗಿಯಂತೆ ಕಾಣುತ್ತಿದ್ದೇನೆ ಅನ್ನುವ ಭ್ರಮೆಯಲ್ಲಿ ಅವರಿದ್ದರೋ ಒಂದೂ ಗೊತ್ತಿಲ್ಲ.

ಮೊನ್ನೆಯೊಮ್ಮೆ ಯಾವುದೋ ಕಾರಣಕ್ಕೆ ನಾವೆಲ್ಲಾ ಗೆಳತಿಯರು ಒಂದೆಡೆ ಸೇರಿದ್ದೆವು. ಮಾತಿನ ನಡುವೆ ವಯಸ್ಸಿನ ಸಂಗತಿಯೊಂದು ಹಾದು ಹೋಗಿ ಅದುವೇ ಚರ್ಚೆಯ ವಿಷಯವಾಯಿತು. ಹಾಗೇ ಮಾತಾಡುತ್ತಾ ಮಾತಾಡುತ್ತಾ ಎಲ್ಲರ ವಯಸ್ಸು ಹಂಚಿಕೊಂಡೆವು. ಕೆಲವರು ವಯಸ್ಸಿಗಿಂತ ಹಿರಿಯರಾಗಿ ಕಾಣುತ್ತಿದ್ದದ್ದು, ಇನ್ನು ಕೆಲವರು ವಯಸ್ಸಿಗಿಂತ ಕಿರಿಯರಾಗಿ ಕಾಣುತ್ತಿದ್ದದ್ದು ಈ ಕುರಿತು ಅನೇಕ ರೋಚಕ ಸಂಗತಿಗಳು ಮಾತಿನ ಎಡೆಯಲ್ಲಿ ತೂರಿ ಬಂದವು. ಕೆಲವರನ್ನು ನಾವು ನೋಡುತ್ತಲೇ ಇದ್ದೇವೆ, ಅವರು ನಾವು ಬಾಲ್ಯದಲ್ಲಿ ಹೇಗಿದ್ದರೋ ಈಗಲೂ ಹಾಗೇ ಇದ್ದಾರೆ. ಅವರಿಗೆ ವಯಸ್ಸೇ ಆಗೋದಿಲ್ಲವಾ? ಅಂತ ನಕ್ಕಿದ್ದೆವು.

ಪಾತಾಳ ಇಳಿದು, ಆಕಾಶ ಹತ್ತಿ, ಗಾಳಿಯಲ್ಲಿ ಹಾರಿ, ನೀರಿನಲ್ಲಿ ತೇಲಿ, ಸುಡುವಾಗ್ನಿಯಿಂದ ಎದ್ದು ಬಂದರೂ ಕಾಲವನ್ನು ಹಿಡಿತದೊಳಗೆ ಹಿಡಿದಿಟ್ಟು ಕೊಳ್ಳಲು ಸಾಧ್ಯವಾಗದೇ ಇರುವುದೇ ಬದುಕಿನ ಬಹು ದೊಡ್ಡ ಸೋಲು ಅಂತನ್ನಿಸುತ್ತದೆ. ಬಿಡಿ, ಇನ್ನೇನು ಮಾಡೋಕಾಗುತ್ತೆ?

ತಮ್ಮ ನಿಜವಾದ ವಯಸ್ಸಿಗಿಂತ ಕಡಿಮೆ ತೋರುವುದಕ್ಕೆ ಯಾರಿಗೆ ತಾನೇ ಇಷ್ಟವಿಲ್ಲ? ನನ್ನ ಗೆಳತಿಯೊಬ್ಬಳು ಯಾವಾಗಲೂ ಮಾತಿಗೆ ಸಿಕ್ಕಾಗ ನನಗೆ ಎಷ್ಟು ವಯಸ್ಸಿನವಳಂತೆ ಕಾಣುತ್ತೇನೆ ಹೇಳು ನೋಡೋಣ ಅಂತ ನನಗೆ ಯಾವಾಗಲೂ ದುಂಬಾಲು ಬೀಳುತ್ತಿದ್ದಳು. ಅವಳಿಗೆ ನಿರಾಸೆ ಮಾಡಬಾರದು ಅನ್ನೋ ನಿಟ್ಟಿನಲ್ಲಿ ನೀನು ಹತ್ತು ವರ್ಷ ಸಣ್ಣಗೆ ಕಾಣುತ್ತಿ ಅಂತ ಸುಖಾ ಸುಮ್ಮನೆ ಸುಳ್ಳೊಂದನ್ನ ಹೇಳಿ ಅವಳ ಮುಖದಲ್ಲಿ ಮಂದಹಾಸದ ನಗುವನ್ನು ಬೀರಲು ಕಾರಣವಾಗಿದ್ದೆ. ಜೊತೆಗೆ ಪದೇ ಪದೇ ಅದೇ ವಿಷಯ ಕೇಳಿ ಅವಳ ಕೊರೆತ ಕಾಟದಿಂದ ನಾನು ತಪ್ಪಿಸಿಕೊಂಡಿದ್ದೆ. ಯಾವುದೋ ಕಾರ್ಯಕ್ರಮವೊಂದರಲ್ಲಿ ನನ್ನ ಇಪ್ಪತ್ತು ವರುಷದ ಹಿಂದಿನ ಕಾಲೇಜು ಗುರುಗಳು ಸಿಕ್ಕಿದ್ದರು. ಮಾತಿನ ಮಧ್ಯೆ, ಸರ್.. ನಮಗೆಲ್ಲಾ ವಯಸ್ಸಾಯಿತು, ನಿಮಗೆ ವಯಸ್ಸೇ ಆಗೋದಿಲ್ಲವಾ? ಅಂದೆ. ಅವರ ಮುಖದಲ್ಲಿ ಎದ್ದು ಕಾಣುತ್ತಿದ್ದ ಖುಷಿಯನ್ನು ಅಳೆಯಲು ಸಾಧ್ಯವಾಗಲಿಲ್ಲ. ಬಹುಶಃ ಆ ಖುಷಿಯೇ ಅವರ ವಯಸ್ಸನ್ನು ಮತ್ತಷ್ಟು ಕಡಿಮೆ ಮಾಡುತ್ತಿತ್ತೋ ಏನೋ.

ನನ್ನ ಶಿಕ್ಷಕಿ ಗೆಳತಿಯೊಬ್ಬಳಿದ್ದಾಳೆ. ಅವಳಿಗೆ ವಯಸ್ಸು ಐವತ್ತು ದಾಟಿದರೂ ಇನ್ನೂ ಮೂವತ್ತರ ಆಚೆಯೀಚೆಯಂತೆ ಕಾಣುತ್ತಾಳೆ. ನಾವು ಸಿಕ್ಕಾಗಲೆಲ್ಲಾ ಅವಳನ್ನು ಪೀಡಿಸೋದು ನಿನ್ನ ಸೌಂದರ್ಯದ ರಹಸ್ಯ ಏನು? ಅಂತ. ಬಹುಶಃ ಇದು ಅವಳಿಗೆ ಮಾಮೂಲಿಯಾಗಿ ಸಾವಿರದ ಒಂದನೇಯ ಪ್ರಶ್ನೆಯಾಗಿರಬಹುದು. ಅವಳು ಅಷ್ಟೇ ಅದನ್ನು ಸಹಜವಾಗಿ ಕೇಳಿ ನಕ್ಕು ಸುಮ್ಮನಾಗುತ್ತಿದ್ದಳೇ ವಿನಃ ತನ್ನ ವಯಸ್ಸನ್ನು ಎಂದೂ ಬಿಟ್ಟು ಕೊಡುತ್ತಿರಲಿಲ್ಲ. ನಾವು ಮತ್ತೂ ಬಿಡದೇ ಯೋಗ ಮಾಡುತ್ತೀಯ? ಉಪವಾಸ ಮಾಡ್ತೀಯಾ ಅಂತ ಪ್ರಶ್ನೆ ಹಾಕಿದರೆ, ಆಕೆಯೋ ಅದೊಂದು ದೊಡ್ಡ ಸಂಗತಿಯೇ ಅಲ್ಲವೆಂಬಂತೆ ನನಗೆ ತುಂಬಾ ವರ್ಷಗಳವರೆಗೆ ವಯಸ್ಸು ಮೂವತ್ತಒಂಬತ್ತೇ ಆಗಿತ್ತು. ಈಗ ಕೆಲವು ವರುಷಗಳಿಂದೀಚೆಗೆ ವಯಸ್ಸು ನಲವತ್ತೊಂಬತ್ತು ದಾಟುತ್ತಿಲ್ಲ ಅಂತ ನಕ್ಕಿದ್ದಳು. ನಾನು ನಿಮಗ್ಯಾರಿಗೂ ನಿರಾಸೆ ಮಾಡೋದಿಲ್ಲ ಹಾಗಾಗಿ ನಾನು ರಿಟೈರ್ ಆಗೋದಿಕ್ಕೆ ಮುಂಚೆಯೇ ಸ್ವಯಂ ನಿವೃತ್ತಿ ತೆಗೆದುಕೊಳ್ಳುವೆ. ನನ್ನ ವಯಸ್ಸು ನಿಮಗೆ ಯಾವೊತ್ತೂ ಕುತೂಹಲದ ವಿಷಯವಾಗಿರಬೇಕೆಂದೇ ಬಯಸುತ್ತೇನೆ ಅಂತ ಹೊಟ್ಟೆ ಬಿರಿಯುವಷ್ಟು ನಕ್ಕಿದ್ದಳು.

ಎಲಾ! ಇವಳಾ! ತನಗೆ ತಾನೇ ತನ್ನ ವಯಸ್ಸನ್ನ ಕಡಿಮೆ ಮಾಡಿಕೊಂಡು ಎಷ್ಟು ಸುಖವಾಗಿದ್ದಾಳಲ್ಲ ಅಂತ ನಿಜಕ್ಕೂ ಅಸೂಯೆಯಾಗಿತ್ತು. ನಾವೆಲ್ಲಾ ಇಲ್ಲಿ ನಲವತ್ತಕ್ಕೆ ಮುಂಚೆಯೇ ವೃದ್ಧಾಪ್ಯವನ್ನು ಅವಾಹಿಸಿಕೊಂಡು ಬಡ ಬಡಿಸುವಾಗ ಇನ್ನೇನು ಆಗಲು ಸಾಧ್ಯ? ಮನಸ್ಸೇ ಮಹಾದೇವ.

ಒಂದಷ್ಟು ವರುಷದ ಹಿಂದೆ ಬಹುಕಾಲ ಗಟ್ಟಿ ಮುಟ್ಟಾಗಿ ಬಾಳಿ ಬದುಕಿದವರಿದ್ದಾರೆ. ಆದರೆ ಅವರಿಗೆ ವಯಸ್ಸನ್ನು ಮರೆಮಾಚಲು ಸಾಧ್ಯವಾಗುತ್ತಿರಲಿಲ್ಲ. ಬಹುಶಃ ಈಗಿನ ಪ್ರಸಾಧನಗಳು ತುಸು ಹೊತ್ತಿನವರೆಗೆ ನಮ್ಮನ್ನು ಲವಲವಿಕೆಯಿಂದ ತೋರಿಸುತ್ತಾ ಮುಖದ ನಿರಿಗೆಗಳನ್ನು ಮುಚ್ಚುವಲ್ಲಿ ಸಫಲವಾಗುತ್ತಿದೆ ಅನ್ನುವುದು ಸೌಂದರ್ಯ ಪ್ರಿಯರ ಭಾಗ್ಯ. ಅದಕ್ಕೇ ಇರಬೇಕು ಪ್ರಸಾಧನದೊಳಗೆ ಹುದುಗಿ ಕೊಂಡಂತೆ ಇರುವ ಸಿನೇಮಾ ಕಲಾವಿದರು ಬಹುತೇಕ ಮೇಕಪ್ ಇಲ್ಲದೆ ನಮಗೆ ಕಾಣಿಸಿಕೊಳ್ಳದೇ ಇರುವುದು.

ನನ್ನಜ್ಜಿಗೆ 35ಕ್ಕೆ ನನ್ನಮ್ಮನಿಗೆ ಮದುವೆ ಮಾಡಿಸಿ ಹಿರಿತನವನ್ನು ಅವಾಹಿಸಿಕೊಂಡಿದ್ದರು. ನನ್ನಮ್ಮ ಅದರ ಮುಂದುವರಿದ ಭಾಗವೆಂಬಂತೆ ನಲವತ್ತಕ್ಕೆ ಜವಾಬ್ದಾರಿ ಹೆಗಲಿಗೇರಿಸಿ ಕೊಂಡಿದ್ದರು. ಆದರೆ ನಾನಂತೂ ಅವರಷ್ಟು ಬೇಗ ಅವರಂತೆ ಆಗಲು ಸುತಾರಾಂ ಒಪ್ಪದೆ ನನಗಿನ್ನೂ ವಯಸ್ಸೇ ಅಗಿಲ್ಲ ಅನ್ನೋ ಭ್ರಮೆಯಲ್ಲಿಯೇ ಇದ್ದೇನೆ. ಈ ಭ್ರಮೆ ಯಾವ್ಯಾಯವ ರೂಪದಲ್ಲಿ ಇದೆಯೆಂದರೆ ನಿಜಕ್ಕೂ ಸಣ್ಣಗೆ ನಗುವೊಂದು ಒಳಗಿನಿಂದ ಎದ್ದು ಬರುತ್ತದೆ. ಅಜ್ಜಿಯನ್ನು ದೊಡ್ಡಮ್ಮನೆಂದು ಕರೆಯಿಸಿಕೊಳ್ಳುತ್ತಾ, ಅಥವಾ ಅಮ್ಮಮ್ಮನೆಂದು ಕರೆಯಿಸಿಕೊಳ್ಳುತ್ತಾ ತುಸು ಸಮಾಧಾನ ಅನುಭವಿಸಿಕೊಳ್ಳುತ್ತಿದ್ದಾರೆ.

ಅಚಾನಕ್ ಮೊನ್ನೆಯೊಂದು ಸಮಾರಂಭದಲ್ಲಿ ಒಬ್ಬಳು ಹುಡುಗಿ ಕಾಣಸಿಕ್ಕಳು. ಇವಳನ್ನು ಎಲ್ಲೋ ನೋಡಿದ್ದೇನಲ್ಲ ಅಂತ ತಲೆ ಕೆರೆದು ಕೊಂಡು ಯೋಚಿಸುವಾಗ ನನ್ನ ಕಾಲೇಜಿನ ಸಹಪಾಠಿಯೊಬ್ಬಳ ಮುಖ ಹಾದು ಹೋಯಿತು. ಅವಳಂತೆಯೇ ಇದ್ದಾಳಲ್ಲ? ಆದರೆ ಅವಳಾಗಿರಲಾರಳು ಇವಳು, ಇಷ್ಟು ತೆಳ್ಳಗೆ ಅದೇ ಎಳಸು ಮೊಗ, ಬಹುಶಃ ಆಕೆಯ ಸಂಬಂಧಿಯೋ, ಮಗಳೋ ಆಗಿರ ಬೇಕೆಂದು ಭಾವಿಸಿ, ಮೆಲ್ಲಗೆ ಅವಳ ಬಳಿ ಹೋಗಿ ನಿಮ್ಮನ್ನು ಎಲ್ಲೋ ನೋಡಿದಂತಿದೆ ಅಂತ ಮೆಲ್ಲನೆ ಕೇಳಿಯೇ ಬಿಟ್ಟೆ. ನನ್ನ ಕಾಲೇಜು ದಿನಗಳಲ್ಲಿ ಇಂತವಳೊಬ್ಬಳು ಇದ್ದಳು, ನಿಮಗೆ ಅವರು ಗೊತ್ತಾ ಅಂತ. ಆಕೆ ತಕ್ಷಣ ಊರಗಲ ಮುಖ ಮಾಡಿಕೊಂಡು ಹೌದು ಆಕೆ ನಾನೇ! ಅಂದು ಬಿಡಬೇಕೆ? ನಿಜಕ್ಕೂ ಅರೆಕ್ಷಣ ಗೊಂದಲವುಂಟಾಗಿ ನನ್ನ ತಲೆ ಸ್ಥಿಮಿತಕ್ಕೆ ಬರಲು ಕೆಲವು ನಿಮಿಷಗಳೇ ಹಿಡಿಯಿತೆನ್ನಿ.

ನಿಜ ಹೇಳಬೇಕೆಂದರೆ ನಾನು ನಿನ್ನ ಸಹಪಾಠಿ ಅಂತ ಆಕೆಗೆ ತಿಳಿಸಲು ನಾನೆಷ್ಟು ಪಡಿಪಾಟಲು ಪಟ್ಟಿರಬಹುದೆಂಬುದನ್ನ ನೀವೇ ಊಹಿಸಿಕೊಳ್ಳಿ. ಸಾವರಿಸಿಕೊಂಡು ಏನು ನಿನ್ನ ಚೆಲುವಿನ ಒಳಗುಟ್ಟು ಅಂದಾಗ ಏನಿಲ್ಲಪ್ಪಾ ಎರಡು ಕೆ.ಜಿ. ತೂಕ ಏರಿದೆ ಅದನ್ನ ಕಡಿಮೆ ಮಾಡಿಕೊಳ್ಳಲು ಹೆಣಗಾಡುತ್ತಿರುವೆ ಎನ್ನುತ್ತಾ ನಕ್ಕಾಗ ಪಕ್ಕದಲ್ಲಿದ್ದ ನನ್ನ ಗೆಳತಿ, ಆಕೆ ಇನ್ನೂ ಮದುವೆಯಾಗಿಲ್ಲ ನೋಡು, ಮತ್ತೆ ಹೇಗೆ ವಯಸ್ಸಾಗುತ್ತೆ ಅಂತ ನನ್ನ ತಿವಿದಿದ್ದಳು. ಹೌದಲ್ವಾ! ಅಂತ ನನಗೂ ನಿಧಾನಕ್ಕೆ ಜ್ಞಾನೋದಯವಾಗಿ ನಕ್ಕಿದ್ದೆ. ಇರಲಿ ಬಿಡು, ಕೆಲವರಿಗಾದರೂ ಈ ಮಂಡೆ ಬಿಸಿ ಇಲ್ಲದೆ, ನಿರಾಳವಾಗಿರಲಿ ಅಂತ ಗುಸು ಗುಸು ಮಾತಾಡುತ್ತಾ ನಮ್ಮ ತಲೆಬಿಸಿಗಳು ನಮ್ಮನ್ನು ಹೇಗೆ ಹಣ್ಣು ಮಾಡುತ್ತವೆ ಅಂತ ಅಲವತ್ತುಕೊಳ್ಳುತ್ತಾ ಊಟದ ಹಾಲಿಗೆ ಹೋಗಿ ಊಟಕ್ಕೆ ಕುಳಿತಾಗ ಆಕೆ ಅದಾಗಲೇ ಊಟ ಮುಗಿಸಿ ನಾನು ಸಿಹಿಯನ್ನು ಕಣ್ಣೆತ್ತಿಯೂ ನೋಡಿಲ್ಲಪ್ಪಾ ಅಂತ ಕಣ್ಣಲ್ಲೇ ನಮ್ಮ ಊಟದ ಎಲೆಯನ್ನು ಅಳೆಯುತ್ತಾ ಹೇಳಿದಾಗ ನನ್ನ ಬಾಳೆಲೆಯ ತುದಿಯ ಕೇಸರಿ ಭಾತ್, ಪಾಯಸ ಹೋಳಿಗೆ ಅವಳನ್ನೇ ದುರುಗುಟ್ಟಿ ನೋಡಿದಂತೆ ಭಾಸವಾಯಿತು.