ಹಸಿವು, ನಿರಾಶ್ರಯ, ಬಡತನ ಮುಂತಾದ ಅನಿಷ್ಟಗಳನ್ನು ಒಪ್ಪಿತ ಪರಿಸ್ಥಿತಿಯಂತೆ ನೋಡುವ ಮನಸ್ಥಿತಿ ಭಾರತೀಯ ಸಮಾಜದಲ್ಲಿ ಹಾಸುಹೊಕ್ಕಾಗಿದೆ. ಒಂದಿಷ್ಟು ಭಿಕ್ಷೆ ಎಲ್ಲಕ್ಕೂ ಉತ್ತರವೆಂದು ನಾವು ಭಾವಿಸುತ್ತೇವೆ. ’ಕರುಣೆ’ಯ ಭಾರವನ್ನು ಒಲುಮೆಗೆ ಪರ್ಯಾಯವಾಗಿ ಭಾವಿಸುವುದರ ದುರಂತವನ್ನು ಕನ್ನಡ ಕಾವ್ಯ ಕುವೆಂಪು, ಪುತಿನ ಅವರಂಥಹವರ ಮೂಲಕ ಕಂಡಿರಿಸಿದೆ. ಆದರೆ ಈಗಿನ ಸಬಾಲ್ಟ್ರನ್ ಬರವಣಿಗೆ ಭಿನ್ನ ದೃಷ್ಟಿಕೋನದಿಂದ ಇದನ್ನು ನೋಡಲು ಪ್ರಯತ್ನಿಸುತ್ತಿದೆ ಎನ್ನಿಸುತ್ತದೆ.ಈ ಅನಿಸಿಕೆಗೆ ಪೂರಕವಾಗಿ ಈ ಬಗೆಯ ನೋಟಗಳು ವಿಲ್ಸನ್ ಅವರ ಕಾವ್ಯವನ್ನು ಸರಿಸುಮಾರಾಗಿ ಆಕ್ರಮಿಸಿದೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ವಿಲ್ಸನ್ ಕಟೀಲ್ ಅವರ “ನಿಷೇಧಕ್ಕೊಳಪಟ್ಟ ಒಂದು ನೋಟು” ಕವನ ಸಂಕಲನದ ಕುರಿತು ವಿಜಯರಾಘವನ್ ಬರಹ

ಫುಟ್‌ಪಾತು

ಈ ಫುಟ್‌ ಪಾತನ್ನು
ಪಾದಗಳಿಗಿಂತಲೂ ಹೆಚ್ಚು
ಬೆನ್ನುಗಳು ಸ್ಪರ್ಶಿಸಿವೆ

ಈ ಫುಟ್‌ ಪಾತಿಗೆ
ಕಸಕ್ಕಿಂತಲೂ ಹೆಚ್ಚು
ಕನಸುಗಳನ್ನು ಎಸೆಯಲಾಗಿದೆ

ಈ ಫುಟ್‌ ಪಾತು
ಮಳೆಗಿಂತಲೂ ಹೆಚ್ಚು
ಕಣ್ಣೀರಲ್ಲಿ ತೊಯ್ದಿದೆ

ಈ ಫುಟ್‌ ಪಾತನ್ನು
ನಗರಪಾಲಿಕೆಗಿಂತಲೂ ಹೆಚ್ಚು
ಅನಾಥರು ಪ್ರೀತಿಸಿದ್ದಾರೆ

ಇದು ವಿಲ್ಸನ್ ಕಟೀಲ್ ಅವರ “ನಿಷೇಧಕ್ಕೊಳಪಟ್ಟ ಒಂದು ನೋಟು” ಸಂಕಲನದ ಕೊನೆಯ ಪದ್ಯ. ಇಲ್ಲಿನ ನಾಲ್ಕೂ ಪಾದಗಳಲ್ಲಿ ಒಂದು ಬಗೆಯ ಅಸಮ ಸಮೀಕರಣವನ್ನು ಮಾಡಲಾಗಿದೆ. ಪಾದಗಳು ಮತ್ತು ಬೆನ್ನು, ಕಸ ಮತ್ತು ಕನಸು, ಮಳೆ ಮತ್ತು ಕಣ್ಣೀರು, ನಗರಪಾಲಿಕೆ ಮತ್ತು ಅನಾಥರು ಇವು ಆ ಬಗೆಯ ಕಟ್ಟುವಿಕೆಯಲ್ಲಿನ ವಸ್ತುಗಳು. ಮೊದಲ ಮೂರು ಪಾದಗಳ ನಿರ್ವಹಣೆ ಸುಂದರವಾಗಿದೆ. ಇದು ಯಾರೂ ಗ್ರಹಿಸಬಲ್ಲ, ಚೆನ್ನಾಗಿದೆ ಎಂದು ಒಪ್ಪಬಲ್ಲ ಸಂರಚನೆ.

ಕವನ ಕಟ್ಟುವ ಬಗೆಯ ಕುರಿತು ಅತ್ಯುತ್ಸಾಹ ಪ್ರಕಟಿಸದ ಕಾಲ ಇದು. ಆದರೆ ವಿಲ್ಸನ್ ಇಲ್ಲಿ ಮಾಡಿರುವ ಕೆಲಸ ಗಮನಿಕೆಗೆ ಸೂಕ್ತವಾದದ್ದು. ಆದರೆ ಮೇಲಿನ ಮೊದಲ ಮೂರು ಪಾದಗಳ – ಪಾದಗಳು ಮತ್ತು ಬೆನ್ನು, ಕಸ ಮತ್ತು ಕನಸು, ಮಳೆ ಮತ್ತು ಕಣ್ಣೀರು, – ನಿರೂಪಣೆಯ ದಾಟಿ ಕೊನೆಯ ಪಾದದ ನಗರಪಾಲಿಕೆ ಮತ್ತು ಅನಾಥರು ಎಂಬಲ್ಲಿಗೆ ಬರುವಾಗ ಮೇಲಿನ ರೂಪಕಾತ್ಮಕತೆಯನ್ನು ಬಿಟ್ಟುಕೊಟ್ಟು ಸಾಮಾಜಿಕತೆಯ ಸರಳೀಕೃತ ಚಿತ್ರದ ವರ್ಣನೆಯಾಗಿಬಿಡುತ್ತದೆ. ವಸ್ತುವೊಂದರ ನಿರ್ವಹಣೆಯ ಹಿಂದೆ ಇರುವ ಸಾಮಾಜಿಕ ಬದ್ಧತೆ ವಸ್ತು ಸ್ವಯಂ ಭರಿಸಬಲ್ಲ ನಿರ್ವಹಣೆಯ ಭಾರಕ್ಕಿಂತ ಹೆಚ್ಚಿನ ಪ್ರಾಧಾನ್ಯತೆ ಗಳಿಸಿಕೊಂಡಾಗ ಆಗುವ ಅಂತಿಮ ಪರಿಣಾಮವೇನು? ಅದು ನಿರ್ವಹಣೆಯ ಕ್ರಮವನ್ನು ಹೇಗೆ ಬದಲಿಸಬಲ್ಲದು ಎನ್ನುವ ಕುತೂಹಲಗಳು ಇಲ್ಲಿ ಮೂಡುತ್ತವೆ.

ಇವತ್ತಿನ ಕಾವ್ಯದಲ್ಲಿ ಸಬಾಲ್ಟ್ರನ್ (Subaltern) ನೆಲೆಯಿಂದ ಹುಟ್ಟುವ ಕಾವ್ಯ ಇಂತಹ ಭಾರವನ್ನು ಹೊತ್ತುಕೊಂಡು ನಡೆಯುತ್ತಿದೆ. ರಜನೀಶ್ ಮಿಶ್ರಾ ತಮ್ಮ ಲೇಖನದ ಸಬಾಲ್ಟ್ರನ್ ಐಡೆನ್ಟಿಟಿ ಅಂಡ್ ಲಿಟರೇಚರ್ ಎಂಬ ಪ್ರಬಂಧದಲ್ಲಿ ಹೇಳುವಂತೆ ಸಾಹಿತ್ಯವೆನ್ನುವುದು ಬಾಹ್ಯದ ವಿವಿಧ ಸಮಾಜೋ ಆರ್ಥಿಕ ಕಾರಣಗಳ ಮತ್ತು ಸಂಬಂಧಿಸಿದ ಮನುಷ್ಯನ ಮಾನಸಿಕ ಸಂವೇದನೆಗಳ ಸಂಘರ್ಷದ ಅಭಿವ್ಯಕ್ತಿ. ಈ ಸಂಘರ್ಷ ನಡೆಯುವುದು ಮಾನವನ ಮನಸ್ಸಿನಲ್ಲಿ. ಅದು ಪರವಾದರೂ, ವಿರುದ್ಧವಾದರೂ ಅದರ ರಂಗಸ್ಥಳ ಈ ಮನಸ್ಸೇ. ಪರವಾದುದು ಎಂದಾದರೆ ಅದರ ಕಾರ್ಯಾಚರಣೆ ಮತ್ತು ಪರಿಣಾಮ ಒಂದು ಬಗೆಯಾಗಿ ಇರುತ್ತದೆ. ಇನ್ನೊಂದು ಅದರ ವಿರುದ್ಧವಾಗಿ ನಡೆಯುವಂಥದ್ದು. ಸಮಾಜದಲ್ಲಿನ ವಿರುದ್ಧದ ಪ್ರತೀಗಾಮಿ ಮನಸ್ಸುಗಳು, ಅಗತ್ಯ ಕಾವ್ಯಸಂವೇದನೆಯನ್ನು ರೂಢಿಸಿಕೊಂಡಂತೆ ತೋರುತ್ತಿಲ್ಲ. ಆದರೆ ಪರವಾದ ಸಂವೇದನೆಯು ಚಾರಿತ್ರಿಕ ಶೋಷಣೆಗಳ ವಿರುದ್ಧ ಕಾವ್ಯರಚನೆಯಲ್ಲಿ ತೊಡಗಿ ಅಲ್ಲಿಂದ ಮುಂದೆ ಹೋಗಿ ಬಲುಬೇಗ ಶಿಖರವನ್ನು ತಲುಪಿಬಿಟ್ಟ ಹಾಗಿದೆ.

ಮೇಲೆ ಚರ್ಚಿಸಿದ ಈ ಸಂವೇದನೆ ಹೊಸ ತಲೆಮಾರಿನ ಸಬಾಲ್ಟ್ರನ್ ನೆಲೆಯ ಲೇಖಕರಲ್ಲಿ ಬಹಳವಾಗಿ ಕಂಡುಬರುತ್ತಲಿದೆ. ಅಲ್ಲಿನ ಪ್ರತಿಮೆಗಳಲ್ಲಿ ಬಹಳವಾಗಿ ಬಳಕೆಯಾಗುವುದು ಬುದ್ಧನ, ಬುದ್ಧತನದ, ತಾಯಿಯ, ಹೆಣ್ಣಿನ, ಶೋಷಣೆಯ, ಬೀದಿಗೆ ಬಿದ್ದವರ ಚಿತ್ರಗಳು; ಇದಕ್ಕೆ ಬೆನ್ನೆಲುಬಾಗಿ ಅಂಬೇಡ್ಕರರ ಮತ್ತು ಅವರ ಪ್ರತಿಪಾದನೆಯ ಹಿಂದಿನ ಸ್ಥೂಲ ಚಿತ್ರಣಗಳು. ಇದನ್ನು ಹೇಳುವಾಗ ಕಣ್ಣಿಗೆ ಕಟ್ಟುವ ಚಿತ್ರಗಳ ಬದಲಿಗೆ ಖಂಡನಾ ವಿಷಯದಲ್ಲಿ ತೊಡಗದೆ ಒಡಲಾಳವನ್ನು ಸಂಯಮದಿಂದ ಪ್ರಕಟಿಸುವ ಕಾವ್ಯವೂ ಹೇರಳವಾಗಿ ಬರೆಯಲ್ಪಡುತ್ತಿದೆ ಎನ್ನುವುದನ್ನು ಸಹ ನಾವು ನೆನಪಿನಲ್ಲಿಡಬೇಕು. ಮಿಶ್ರಾ ಹೇಳುವಂತೆ ಸಾಹಿತ್ಯಕ್ಕೆ ಕ್ರಾಂತಿಕಾರಿ ಮತ್ತು ಪ್ರತಿಕ್ರಿಯಾತ್ಮಕವಾದ ಕಾರ್ಯಕ್ಷಮತೆಯಿದೆ. ಅದೇ ಸಾಹಿತ್ಯವನ್ನು ಒಂದು ಸಮರ್ಥ ಸಾಧನವನ್ನಾಗಿಸುವುದು. ಈ ಸಾಧನವನ್ನು ಸುಧಾರಣೆಯ ಸಂದರ್ಭಗಳಲ್ಲಿ ಧಾರಾಳವಾಗಿ ಬಳಸಿಕೊಳ್ಳಲಾಗಿದೆ. ಆದರೆ ಭಾರತೀಯ ಸಂದರ್ಭದಲ್ಲಿ ಇಲ್ಲೊಂದು ಬಗೆಯ ಕಂದರ ನಿರ್ಮಾಣವಾಗುತ್ತದೆ. ಹಾಗಾಗಿ ಸಾಹಿತ್ಯದ ಪರಿಣಾಮ ಕ್ಷಮತೆಯ ಕುರಿತು ಸಂಶಯಗಳೂ ಮೂಡುತ್ತವೆ. ಇದನ್ನೇ ಮಿಶ್ರಾ ಸಬಾಲ್ಟ್ರನ್ ಮನುಷ್ಯ ಶೋಷಕರ ಭಾಷೆ ಮತ್ತು ಆಟಗಳನ್ನು ಕಲಿತುಕೊಂಡಿದ್ದಾನೆ. ಹಳೆಯ ಮಂದಿಯ ಭಾಷೆಯ ಮೇಲೆ ಹಿಡಿತ ಸಾಧಿಸಿದ್ದಾನೆ. ಅದರ ಮೂಲಕವೇ ತನ್ನ ಅಭಿವ್ಯಕ್ತಿಯನ್ನು ಸಾದರಪಡಿಸುತ್ತಿದ್ದಾನೆ. ಇದೇ ರಿಚ್ ಮತ್ತು ಸ್ಟ್ರೇಂಜ್. ಆದರೆ ಈ ಸೃಷ್ಟಿಯು ಎಸ್ತೆಟಿಕ್ಸ್ ಮತ್ತು ರೆಟಾರಿಕಲ್ ನಿಲುವುಗಳನ್ನು ಹೊಂದಿಲ್ಲವೆಂಬುದೇ ಗಮನಾರ್ಹ ವಿಚಾರ ಎಂದಿದ್ದಾರೆ.

ನಿಜಕ್ಕೂ ಸಬಾಲ್ಟ್ರನ್ ಸಾಹಿತ್ಯದ ರೂಪಕಾತ್ಮಕತೆಗೆ ಬಲ ಬರುವುದು ಹೊಸ ಮೆಟಫರ್‌ ಗಳಿಂದ. ಆದರೆ ಇಂದಿನ ಈ ಮಾರ್ಗವು ಅದನ್ನು ಬಿಟ್ಟುಕೊಟ್ಟು ವಸ್ತುವಿನ ನಗ್ನಾವಸ್ಥೆಯನ್ನು ಹಾಗೆಯೇ ಬಿಡಿಸಿಡುವತ್ತ ತುಡಿಯುತ್ತಿದೆ. ಇದು ಒಂದು ಬಗೆಯಲ್ಲಿ ಸುಲಭದ ರಚನಾ ಮಾರ್ಗ. ಇದು ಅಮೃತಕ್ಕೆ ಹಾರುವ ಗರುಡನ ರೂಪಕವನ್ನು ಬಿಟ್ಟುಕೊಟ್ಟ ಮಾದರಿ. ಶೇಕ್ಸ್ ಪಿಯರ್‌ ನ ‘ಟೆಂಪೆಸ್ಟ್’ ನಾಟಕದಲ್ಲಿ ಬರುವ ಕಾಲಿಬನ್‌ ನ ಚಿತ್ರಣದಂತೆ. ಅವನು ದೆವ್ವವೊಂದರ ಮಗ, ಅರ್ಧ ಮೃಗ ಅರ್ಧ ಮನುಷ್ಯ. ಸಮಕಾಲೀನ ಸಬಾಲ್ಟ್ರನ್ ಬದುಕು ಏನೇನನ್ನು ಬಗೆದರೂ ಇಂದಿಗೂ ಇದೇ ದೃಷ್ಟಿಕೋನದಲ್ಲಿ ಕಾಣಲಾಗುತ್ತಿದೆ ಎನ್ನುವುದು ದೌರ್ಭಾಗ್ಯ.

ಹಸಿವು, ನಿರಾಶ್ರಯ, ಬಡತನ ಮುಂತಾದ ಅನಿಷ್ಟಗಳನ್ನು ಒಪ್ಪಿತ ಪರಿಸ್ಥಿತಿಯಂತೆ ನೋಡುವ ಮನಸ್ಥಿತಿ ಭಾರತೀಯ ಸಮಾಜದಲ್ಲಿ ಹಾಸುಹೊಕ್ಕಾಗಿದೆ. ಒಂದಿಷ್ಟು ಭಿಕ್ಷೆ ಎಲ್ಲಕ್ಕೂ ಉತ್ತರವೆಂದು ನಾವು ಭಾವಿಸುತ್ತೇವೆ. ’ಕರುಣೆ’ಯ ಭಾರವನ್ನು ಒಲುಮೆಗೆ ಪರ್ಯಾಯವಾಗಿ ಭಾವಿಸುವುದರ ದುರಂತವನ್ನು ಕನ್ನಡ ಕಾವ್ಯ ಕುವೆಂಪು, ಪುತಿನ ಅವರಂಥಹವರ ಮೂಲಕ ಕಂಡಿರಿಸಿದೆ. ಆದರೆ ಈಗಿನ ಸಬಾಲ್ಟ್ರನ್ ಬರವಣಿಗೆ ಭಿನ್ನ ದೃಷ್ಟಿಕೋನದಿಂದ ಇದನ್ನು ನೋಡಲು ಪ್ರಯತ್ನಿಸುತ್ತಿದೆ ಎನ್ನಿಸುತ್ತದೆ. ಈ ಅನಿಸಿಕೆಗೆ ಪೂರಕವಾಗಿ ಈ ಬಗೆಯ ನೋಟಗಳು ವಿಲ್ಸನ್ ಅವರ ಕಾವ್ಯವನ್ನು ಸರಿಸುಮಾರಾಗಿ ಆಕ್ರಮಿಸಿದೆ. ಇಂಥದರ ನಡುವೆ ‘ಬಾಲ್ಯವನ್ನು ಕಳೆದುಕೊಂಡ’ ವಿಲ್ಸನ್ ಅವರ ಕಾವ್ಯ ಸಂವೇದನೆಯ ಅಭಿವ್ಯಕ್ತಿ ಕ್ರಮದಿಂದಾಗಿ ನಮ್ಮ ಗಮನ ಸೆಳೆಯುತ್ತದೆ. ಹೊಸ ಮತ್ತು ತನ್ನದೇ ಮಾಡಿಕೊಂಡ ಬಗೆಯ ಮಾತುಗಳ ವಿಲ್ಸನ್ ಪ್ರಬುದ್ಧತೆಯ ಕಡೆಗೆ ಹೆಜ್ಜೆ ಹಾಕುತ್ತಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತವೆ. ಈ ದಿಕ್ಕಿನತ್ತ ಅವರ ಪಯಣದ ಹಾದಿಯನ್ನಿಷ್ಟು ಪರಿಶೀಲಿಸುವುದು ಅಗತ್ಯ.

‘ನಿನ್ನ ಸೆರಗ ಹೂಗಳಿಗೆ ಬೀಡಿಯೆಲೆಯದೇ ಘಾಟು’ ಎಂದು ಶುರುವಾಗುವ ‘ಬೀಡಿ ಕಟ್ಟುವ ಹುಡುಗಿಗೆ’ ಕವಿತೆಯ ಸಾಲುಗಳೆಷ್ಟು ಸಮರ್ಥವಾಗಿವೆ ಎಂದರೆ ಒಂದು ಹೊಸ ಸಾಧ್ಯತೆ ಇಲ್ಲಿ ತೆರೆದುಕೊಳ್ಳುತ್ತದೆ. ಪರಿಹಾರವಾಗದ ಈ ಸ್ಥಿತಿಯ ಕೊನೆಗೆ ‘ಉರಿವ ಬದುಕಿನ ಬೂದಿ ಉದುರಿ ಬೀಳುತ್ತದೆ’. ಅಲ್ಲಿನ ಪ್ರಯತ್ನಗಳು ವಿಫಲವಾದ ಬಗೆ ಎಂತಿದೆ ಎಂದರೆ ‘ನಿನ್ನೊಲೆಯಲ್ಲಿ ಬೆಳಕಾಗಲು ನನ್ನ ಸಂತತಿ ಕೊರೆದ ಕಡ್ಡಿಗಳೆಷ್ಟೋ’ ಎಂಬಂತೆ. ಅಂದರೆ ಸಾಂಘಿಕ ಪ್ರಯತ್ನಗಳು ಸಸ್ಟೈನ್ ಆಗದೆ ಸೋಲುವ ಪರಿ ಕವಿಗೆ ನಿಚ್ಚಳವಾಗಿದೆ. ಪರಿಹಾರವೇ ಇಲ್ಲವೆಂಬ ಗಾಢ ನಿಟ್ಟುಸಿರಿನ ಸ್ಥಿತಿ ಎಲ್ಲೆಡೆ ಹಬ್ಬಿರುವುದನ್ನು ಪ್ರಾದೇಶಿಕ ರೂಪಕದ ಮೂಲಕ ವಿವರಿಸಿಕೊಳ್ಳಲಾಗಿದೆ.

ಹೀಗೇ ಒಂದು ಬಲೂನು ಹಿಡಿದ ಹುಡುಗಿ ಅಪಘಾತಕ್ಕೆ ಈಡಾಗಿ ಮರಣಿಸುವ ಚಿತ್ರ ‘ಬಲೂನು, ಮಕ್ಕಳು, ರಸ್ತೆ’ ಕವಿತೆಯಲ್ಲಿದೆ. ‘ರಸ್ತೆಯ ಮೇಲೆ ಹೊರಳುವ ಬಲೂನು ಮಗುವಿನ ಉಸಿರನ್ನು ಇನ್ನೂ ಹಿಡಿದುಕೊಂಡಿದೆ’ ಎಂಬ ಹೃದಯ ವಿದ್ರಾವಕ ಚಿತ್ರವನ್ನು ಕಟ್ಟುವ ಕವಿತೆ ಕವಿತೆಗೆ ಒಂದು ಪರ್ಪಸ್ ಬೇಕೆಂಬ ಇರಾದೆಯಲ್ಲಿ ಎರಡು ಪಾದ ಮುಂದಿಟ್ಟು ಹಿಂದೆ ಕವಿತೆ ನೀಡಿದ ಅನುಭವಕ್ಕೆ ಎರವಾಗಿದೆ. ಇದು ಬಹಳ ಕವಿಗಳ ದೌರ್ಬಲ್ಯವೂ ಆಗಿದೆ ಎನ್ನುವುದನ್ನು ಗಮನಿಸದಿದ್ದರೆ ವಿಲ್ಸನ್ ಕಾವ್ಯವನ್ನು ದುರ್ಬಲವೆಂದು ತಿಳಿಯುವ ಪ್ರಸಂಗ ಉದ್ಭವಿಸಿಬಿಡಬಹುದು.

ವಸ್ತುವೊಂದರ ನಿರ್ವಹಣೆಯ ಹಿಂದೆ ಇರುವ ಸಾಮಾಜಿಕ ಬದ್ಧತೆ ವಸ್ತು ಸ್ವಯಂ ಭರಿಸಬಲ್ಲ ನಿರ್ವಹಣೆಯ ಭಾರಕ್ಕಿಂತ ಹೆಚ್ಚಿನ ಪ್ರಾಧಾನ್ಯತೆ ಗಳಿಸಿಕೊಂಡಾಗ ಆಗುವ ಅಂತಿಮ ಪರಿಣಾಮವೇನು? ಅದು ನಿರ್ವಹಣೆಯ ಕ್ರಮವನ್ನು ಹೇಗೆ ಬದಲಿಸಬಲ್ಲದು ಎನ್ನುವ ಕುತೂಹಲಗಳು ಇಲ್ಲಿ ಮೂಡುತ್ತವೆ.

ನಿಷೇಧಕ್ಕೊಳಪಟ್ಟ ಒಂದು ನೋಟು ಸ್ಪಷ್ಟವಾಗಿ ನೋಟು ಅಮಾನ್ಯೀಕರಣಗೊಂಡು ಬಡಬಗ್ಗರ ಮೇಲೆ ಅತ್ಯಾಚಾರವಾದಂತೆ ಭಾವಿಸಿ ಬರೆದ ಕವಿತೆ. ಈ ನೋಟಿನ ಅವಸ್ಥಾಂತರಗಳಲ್ಲಿ ಬದುಕಿನಲ್ಲಿ ಸಂಪಾದನೆಗಿರುವ ಘೋರ ಹಾಗೂ ನಾಗರಿಕ ವಿಧಾನಗಳ ಉಲ್ಲೇಖವಿದೆ. ವಾಸ್ತವವಾಗಿ ನೋಟು ಅಮಾನ್ಯೀಕರಣದಿಂದ ಬಡವರಿಗೆ ಕೂಲಿ ಸಿಗದೆ ಹೋಗಿರುವಂಥ, ಭೂ ವಹಿವಾಟಿನವರಿಗೆ ಲೆಕ್ಕ ಸಿಗದವರಿಗೆ ತೊಂದರೆಯಾದದ್ದು ಮುಂತಾದ ಸತ್ಯಗಳು ಇವೆಯೇ ಹೊರತು ಮೋದಿ ಆಡಳಿತವನ್ನು ಕನ್ನಡ ಕಾವ್ಯ ಮತ್ತು ಸಂಪರ್ಕ ಮಾಧ್ಯಮಗಳು ಬಿಂಬಿಸಿದಂತೆ ಅಲ್ಲ; ಟೀಕಿಸಿದಷ್ಟಲ್ಲ ಸಹ ಎನ್ನುವುದು, ಮತ್ತು ನೋಟು ಬದಲಿಸಿಕೊಳ್ಳಲು ಜನರಿಗೆ ಹೇರಳ ಅವಕಾಶ ಕಲ್ಪಿಸಲಾಗಿತ್ತು ಎಂಬುದು ಸ್ವತಹ ಬ್ಯಾಂಕ್‌ ನ ಹಿರಿಯ ಅಧಿಕಾರಿಯಾಗಿದ್ದ ನನಗೆ ತಿಳಿದಿದೆ. ಇದೇ ಬಗೆಯ ಆ್ಯಂಟಿ ಮೋದಿ ಕವಿತೆ ‘ಕಿತ್ತಳೆಯ ಅಚ್ಚೇ ದಿನ್’. ಈ ಬಗೆಯ ಕವಿತೆಗಳು ಜನಪ್ರಿಯತೆಯ ಹಂಬಲದ ರಚನೆಗಳು. ಕಾರ್ಪೊರೇಟ್ ಆಸ್ಪತ್ರೆಗಳ ಚಿತ್ರಗಳ ಬಿಡಿಸುವ ಕವಿತೆಯೂ ಹೊಸ ಅನುಭವವೇನನ್ನೂ ಕೊಡುವುದಿಲ್ಲ. ಆದರೆ ಖಗೋಳದ ರಸಪ್ರಶ್ನೆಗಳು ಕವಿತೆಗೆ ಬಂದರೆ ಅದು ಹಂಗು ತೊರೆದ ವಿಷಣ್ಣ ಕವಿತೆ. ವಸ್ತುವನ್ನು ಖಚಿತವಾಗಿ ಕಾವ್ಯಕ್ಕೊಗ್ಗಿಸುವ ಕಲೆ ವಿಲ್ಸನ್ ಅವರಿಗೆ ಒದಗಿ ಬಂದಿರುವುದು ಇಲ್ಲಿ ಪ್ರಕಟವಾಗುತ್ತದೆ.

ಪುಟ್ಟ ಪುಟ್ಟ ಸಾಲುಗಳಲ್ಲಿ ಪ್ರಖರ ಜೀವನಾನುಭವವನ್ನು ಹಿಡಿದಿಡುವ ಶಕ್ತಿ ವಿಲ್ಸನ್ ಅವರಿಗೆ ಇರುವುದನ್ನು ನಾವು ಸ್ವತಂತ್ರ ಸಾಲುಗಳು, ಮರಳ ಮೇಲೆ ಗೀಚಿದ್ದು, ಗಡಿ ನುಸುಳಿದ ಕವಿತೆ, ರೇಖಾಗಣಿತದ ಕವಿತೆಗಳು ಮುಂತಾದ ಕವಿತೆಗಳಲ್ಲಿ ಕಾಣಬಹುದು. ಪ್ರಬುದ್ಧ ಅಲೆಗಳೆಂದಿಗೂ ದೀಪಸ್ಥಂಭದ ಬೆಳಕನ್ನು ಬೆಳದಿಂಗಳೆಂದು ಭ್ರಮಿಸುವುದಿಲ್ಲ ಎನ್ನುವಲ್ಲಿ,

ದಡದ ಮೇಲೆ ಬರೆದೆ –
ಪರಶುರಾಮನಿಗೆ ಸೋತ ಸಮುದ್ರ
ಕ್ಷಣದಲ್ಲಿ ಅಲೆಯೊಂದು ಅದನ್ನು ಅಳಿಸಿ
ತನ್ನತನವನು ಗೆದ್ದಿತು – ಎನ್ನುವ ಮಾತುಗಳು ಧ್ವನಿಪೂರ್ಣವಾಗಿವೆ. ಹಾಗೆಯೇ ತ್ರಿಭುಜ ಎಂಬ ಕಿರಿಯ ಭಾಗದಲ್ಲಿ ಸಂಬಂಧಗಳನ್ನು ನೇರ್ಪುಗೊಳೀಸುವ ಹಂಬಲವಿದೆ.

ಈ ಮೊದಲು ವಿವರಿಸಿದ ಎಸ್ತೆಟಿಕ್ ಅಥವಾ ರೆಟರಿಕಲ್ ನಿಲುವಿನ ಗೈರುಹಾಜರಿ ನಮಗೆ ಪದೇ ಪದೇ ಮುಖಾಮುಖಿಯಾಗುತ್ತದೆ. ಇರುವುದರಲ್ಲಿ ಅನುಭವವ ಹಿಗ್ಗಲಿಸುವ ಬಗೆಯ ಸಬಾಲ್ಟ್ರನ್ ಅಭಿವ್ಯಕ್ತಿಗೆ ಸ್ಪಷ್ಟ ನಿದರ್ಶನವಾಗಿ ನಾವು ತಮಟೆ ಕವಿತೆಯನ್ನು ನೋಡಬಹುದು. ಇದು ಜನರಿಗೆ ಅಗತ್ಯವಾಗಿರುವ ತುರ್ತು ಅಭಿವ್ಯಕ್ತಿಯ ಬರೆಹವಾದರೂ ಇಲ್ಲಿ ಕಲಾತ್ಮಕತೆಯು ತನ್ನ ಕರಗಳನ್ನು ಮುಂಚಾಚಿರುವುದನ್ನು ಗಮನಿಸಬಹುದು. ಇದರಲ್ಲಿ ಬಾವಲಿಯ ತೊಗಲಿನಿಂದ ತಮಟೆ ಮಾಡಿ ಬಾರಿಸುವ ಮಗನಿದ್ದಾನೆ. ಅವನದೂ ಸಬಾಲ್ಟ್ರನ್ ಅಭಿವ್ಯಕ್ತಿ. ಅದರ ಚಾಚು ಕಲೆಯೆ ಬದುಕನ್ನು ಇಮಾನ್ಸಿಪೇಟ್ ಮಾಡುವುದೆಂಬ ‘ಅವನ ಅಭಿವ್ಯಕ್ತಿಗೆ ಅಡ್ಡಿಪಡಿಸದ’ ಆ ಮೂಲಕ ಕಲೆಯಿಂದ ಮಹತ್ತರವಾದ ಅಂಚಿನ ಜನರಿಗೆ ಅಗತ್ಯವಾದ, ಜರೂರಿನ ಇಮಾನ್ಸಿಪೇಟರಿ ಸಂದರ್ಭ ಸೃಷ್ಟಿಯಾಗುವುದು ಎನ್ನುವ ನಂಬಿಕೆಯವರೆಗೂ ಕವಿತೆ ಮುಂದುವರೆದಿದೆ.

ವಿಲ್ಸನ್ ಗೆಲ್ಲುವುದು ಸೂಕ್ಷ್ಮ ವಿಚಾರಗಳನ್ನು ಕವಿತೆಯಾಗಿಸುವುದರಲ್ಲಿ. ಉದಾಹರಣೆಗೆ ಅಜ್ಜಿ ಕವಿತೆಯನ್ನು ಗಮನಿಸಬಹುದು.

‘ಅವಳಿ ಮರುಭೂಮಿಗಳಂತೆ
ಅವಳ ಗಲ್ಲಗಳು
ಒಣಮರಳಿನ ಅಲೆ ಚಿತ್ತಾರ
ನೆರಿಗೆಗಳು
ಅವೂ ಕಂಪಿಸುವುದುಂಟು
ಕಂಬನಿ ಜಾರಿದಾಗ’ – ಎಂದು ಪ್ರಾರಂಭವಾಗುವ ಕವಿತೆ ಕಾಯುವ ಅಜ್ಜಿ ಮತ್ತು ದೂರದ ಊರಿನ ಬಂಗಲೆಯಲ್ಲಿ ಒಂಟಿ ಆಡಿಕೊಳ್ಳುವ ಮೊಮ್ಮಗ ಎರಡನ್ನೂ ಮುಖಾಮಖಿಯಾಗಿಸಿ ಬದುಕಿನ ಪ್ಯಾರಡಾಕ್ಸ್ ಅನ್ನು ನಿರೂಪಿಸುತ್ತದೆ. ಕಾವ್ಯನಿರ್ಮಾಣದ ತಾಂತ್ರಿಕತೆಯನ್ನು ವಿಲ್ಸನ್ ಬಳಸುವ ಪರಿಗೆ ಜಾಮೆಟ್ರಿ ಬಾಕ್ಸಿನೊಳಗೆ ಕವಿತೆಯನ್ನು ನೋಡಬೇಕು. ಹಾಳೆಯ ಅಂಚಲ್ಲಿ ತಾನು ಹೆತ್ತ ಮಗುವಿನ ಚಿತ್ರವನ್ನು ಯಾರಾದರೂ ಹರಿದುಬಿಟ್ಟರೆ ಎಂದು ತವಕಿಸುವ ಪೆನ್ಸಿಲ್ ಏನೇನನ್ನೆಲ್ಲ ಹಿಡಿದಿರಿಸಿಕೊಂಡಿದೆ. ಒಂದೇ ಜಾಮೆಟ್ರಿ ಬಾಕ್ಸಿನಲ್ಲಿದ್ದರೂ ಅಲ್ಲಿನ ಪರಿಕರಗಳು ಹೇಗೆ ಘಟಕಗಳಾಗಿ ಪ್ರತ್ಯೇಕಿಸಲ್ಪಟ್ಟಂತೆ ಇಡಿಯನ್ನು ಬಿಟ್ಟು ಬಿಡಿಯಾಗಿ ಚಿಂತಿಸುವ ಕವಿತೆ ಧ್ಯಾನಿಸುವುದು ವಿಶ್ವಕುಟುಂಬವನ್ನು.

ಚಿಟ್ಟೆಗಿಂತ ಹಗುರ ನನ್ನ ಕವಿತೆ
ಕಾಗದವನ್ನೇ ಒದ್ದು, ಥಟ್ಟನೆ
ಗಾಳಿಯಲಿ ಹಾರಿ ಹೋಯಿತು – ಎಂಬ ಹಂಗಿಲ್ಲದ ಕವಿತೆ ಬರೆಯುವ ಕವಿ ಬಣ್ಣಿಸುವುದು ಕಾವ್ಯ ಮೈದಳೆಯುವ ನಾನಾ ಅವಸ್ಥೆಗಳನ್ನು. ಅವಕ್ಕೆ ಪಾಂಡಿತ್ಯದ ಹಂಗಿಲ್ಲ ಎಂದು ಭಾವಿಸುವ ಕವಿಯ ಕವಿತೆ ಹಾರಿ ಹೋಗುವುದು ವಿದ್ವಾಂಸನ ಮಾತುಗಳಿಂದ. ಕಾವ್ಯಕ್ಕೆ ಗೊತ್ತಿದೆ ತಾನು ಬಂಧಿಯಲ್ಲ ಎಂದು. ತಾನು ಹಾರಿ ಹೋಗಿ ಎಲ್ಲಿ ಬೇಕಾದರೂ ನೆಲೆನಿಂತು ಹಾಡಬಲ್ಲೆನೆಂಬ ವಿಶ್ವಾಸ ಕವಿತೆಗಿದೆ. ಜೊತೆಗೆ ಕವಿತೆ ಹುಟ್ಟುವುದು ಹಲವು ಅವಸ್ಥೆಗಳಲ್ಲಿ. ಅದು ಪ್ರಶ್ನೋತ್ತರ ರೂಪದಲ್ಲಿದೆ. ಈ ಬಗೆಯ ಪ್ರಶ್ನೋತ್ತರ ವಿಲ್ಸನ್ ಅವರ ತಂತ್ರಗಳಲ್ಲೊಂದು. ಇದು ಸಂವಹನವನ್ನು ಸುಲಭ ಮಾಡುತ್ತದೆ. ಅರ್ಥಗಳು ಹೊಳೆದುಬಿಡುತ್ತವೆ. ಇದೇ ಬಗೆಯ ತಂತ್ರಗಾರಿಕೆಯನ್ನು ಹಳ್ಳ ದಾಟುವಾಗ ಕವಿತೆಯಲ್ಲಿಯೂ ಕಾಣಬಹುದು. ಆದರೆ ಈ ಕವಿತೆಯ ಕಡೆಯ ಭಾಗ ಬೇರೆಯೇ ತಾತ್ವಿಕತೆಯ ಕಡೆಗೆ ನಡೆಯುತ್ತದೆ. ಅದು ಸರಿಯಾಗಿ ಶಿಲ್ಪದಲ್ಲಿ ಅಡಕಗೊಂಡಂತೆ ಭಾಸವಾಗುವುದಿಲ್ಲ.

ರಾಜಕೀಯ, ಸಾಮಾಜಿಕ ಅವ್ಯವಸ್ಥೆ, ಸಮಾಜವನ್ನು ಕಿತ್ತು ತಿನ್ನುವ ವೇಶ್ಯಾವೃತ್ತಿಯಂತಹ ಪಿಡುಗುಗಳ ಬಗ್ಗೆ ಈ ಸಂಕಲನದಲ್ಲಿ ಕವಿತೆಗಳಿವೆ. ಕವಿಯ ಸಾಮಾಜಿಕ ಎಚ್ಚರವನ್ನು ಈ ಕವಿತೆಗಳು ಪರಿಶೀಲಿಸುತ್ತಾವಾದರೂ(ಉದಾ: ವಯಸ್ಕರಿಗೆ ಮಾತ್ರ) ಭಾವೋದ್ದೀಪನೆಯು ಅವುಗಳಿಗೆ ಸಾಧ್ಯವಾಗುವುದಿಲ್ಲ; ಎಂದಿಗೂ ವರದಿ ಕಾವ್ಯವಾಗಲಾರದು. ಸಾಮಾಜಿಕ ಎಚ್ಚರವನ್ನು ಪ್ರತಿಪಾದಿಸುವ ಧರ್ಮ ಮತ್ತು ಮರ ಕವಿತೆಯೂ ಅಂತಿಮವಾಗಿ ವರ್ತಮಾನದಲ್ಲಿ ಕಣ್ಣು ನೆಟ್ಟು ಓದುಗನ ಚಿಂತನೆಗೆ ಬಾಂದುಕಲ್ಲು ನೆಟ್ಟುಬಿಡುತ್ತದೆ. ಹೋರಾಟದ ನೆನಪು ಮಾಡಿಸುವ ಕಯ್ಯೂರಿನ ಒಂದು ಭೇಟಿ ಕಮ್ಯೂನಿಷ್ಟ್ ಮ್ಯಾನಿಫೆಸ್ಟೋ ರೂಪದಲ್ಲಿದೆ.

ಕತ್ತೆತ್ತಿ ಮೇಲೆ ನೋಡಿದರೆ
ಕತ್ತಲ ಕಳೆ ಕೀಳಲೆತ್ತಿದ
ಕತ್ತಿಯಂಚಲಿ ಮಿನುಗು ನಕ್ಷತ್ರ
ನಾಳಿನ ಸೂರ್ಯ – ಎನ್ನುವ ಕವಿಯ ಕಣ್ಣಿಗೆ ಚಿತ್ರ ಶುಭದ ಮುಂಬರುವಿನ ಸಂಕೇತವಾಗಿ ಕಾಣುತ್ತದೆ. ಇದು ವಾಸ್ತವದ ಆಚೆಗೂ ಮಿನುಗಲೆತ್ನಿಸುವ ಛಲ. ಜೊತೆಗೊಂದು ನಂಬಿಕೆಯೂ ಬೆಳೆದಿದೆ ಅದು ಮರಳುವಾಗ ಕಾಲಿಗಂಟಿದ್ದು ಕಯ್ಯೂರಿನ ಮಣ್ಣು. ಅದಕ್ಕಿದೆ ಕಲ್ಲು ಮುಳ್ಳುಗಳನ್ನು ಮೆಟ್ಟಿ ನಡೆಸುವ ಶಕ್ತಿ. ಅದು ತನಗೆ ಬಂದಿದೆಯೆಂಬ ಭಾವ. ಇಡೀ ಕವಿತೆ ನಂಬಿಕೆಯ ಆಧಾರದಲ್ಲಿ ಕೆಲಸ ಮಾಡುತ್ತದೆ. ವಾಸ್ತವದ ಮೇಲೆ ಅಲ್ಲ.

ಪರಿಪೂರ್ಣ ರಚನೆಯ ಮಾದರಿ ‘ಮೊದಲ ವೀಕ್ಷಣೆಗಳು’ ಕವಿತೆಯಲ್ಲಿದೆ. ಹಣೆ ತುಂಬ ಮಿನುಗುತ್ತಿದ್ದ ಬೆವರ ಹನಿ= ನಕ್ಷತ್ರ, ಅಕ್ಕಿ ಆರಿಸುವಾಗ ಅವ್ವ ಎತ್ತಿಟ್ಟ ಕಲ್ಲು ಚೂರು= ಕ್ಷುದ್ರಗ್ರಹ, ಕಂಡ ಮೊದಲ ಸೂರ್ಯ= ಅಮ್ಮ ಹಚ್ಚುತ್ತಿದ್ದ ಒಲೆ, ಕಂಡ ಮೊದಲ ಚಂದಿರ= ಅಮ್ಮನ ಕೈನ ಬಳೆ, ಕಂಡ ಮೊದಲ ಗ್ರಹಣ= ಅಪ್ಪನ ಸಾವಿನಲ್ಲಿ ಕಂಡ ಅಮ್ಮನ ಮುಖ. ಇಲ್ಲಿ ಸಾವಧಾನ ಸಾಗುವ ನಡೆಯಿದೆ. ಪ್ರತಿ ಸಂಕೇತಕ್ಕೂ ಭಿನ್ನ ಅರ್ಥಗಳಿವೆ. ಸಂಬಂಧದ ವ್ಯಾಖ್ಯೆಯಿದೆ. ಇದೇ ರೀತಿಯ ಕಿರುಗವಿತೆ ನಿರ್ಬಂಧ. ಇಲ್ಲಿ ಆಲೋಚನೆ ಸಾಮಾಜಿಕ. ಇದರ ಅರ್ಥವಿಸ್ತಾರಕ್ಕೆ ಅವಕಾಶಗಳಿವೆ, ಗೋರಕ್ಷಕರವರೆಗೂ. ಪೊಲಿಟಿಕಲ್ ಸಟೈರಿನಂತೆ ಕಾಣುವ ರಾಮ ರಾಮ ಕವಿತೆ ಸಮೂಹ ಸನ್ನಿಯ ಭಕ್ತರ ಬಗ್ಗೆ ತೋರುವ ಧೋರಣೆ ನಾಗರಿಕವಾದದ್ದು. ಇದೇ ಬಗೆಯಲ್ಲಿ ಮನುಷ್ಯನನ್ನು ಚೀಟಿಗಳನ್ನಾಗಿಸುವ ಆಡಳಿತದ ಕ್ರಮವನ್ನು ದಿವ್ಯ-ವ್ಯಂಗ್ಯದ ಮೂಲಕ ದರ್ಶಿಸುವ ಕವಿತೆ ‘ಸಾಕ್ಷಿ.’ ಸಾಮಾನ್ಯ ಮನುಷ್ಯನಿಗೆ ಇವು ಅವಷ್ಟೇ ಆಗಿ ತೋರುವಂಥದ್ದು. ಅವರಾದರೋ ಎಂಥವರು? ಯಾರದೋ ಕೈ ರೇಖೆಗಳಲ್ಲಿ ತಮ್ಮ ಬದುಕ ಹುಡುಕುವ ಭವಿಷ್ಯ ಹೇಳುವವರು. ಸಂತೆ ಕವಿತೆಯು ಇದನ್ನು ಕುರಿತು ಹೇಳುವುದರ ಜೊತೆ ಇನ್ನೆರಡು ಪ್ರತಿಮೆಗಳನ್ನು ಕೊಡುತ್ತದೆ. ಈ ಕವಿತೆಯ ಶಿಲ್ಪವೂ ಬಿಡಿಚಿತ್ರಗಳ ರೂಪದಲ್ಲಿದ್ದು ವಿಲ್ಸನ್ ಈ ಬಗೆಯ ಕಟ್ಟೋಣದಲ್ಲಿ ಹೊಂದಿರುವ ಹಿಡಿತವನ್ನು ಸೂಚಿಸುತ್ತದೆ. ಇದೇ ಬಗೆಯ ಶಿಲ್ಪದ ಕವಿತೆ ನಮ್ಮನೆಯ ಟಿವಿ.

ವಿಲ್ಸನ್ ಹಲವೆಡೆ ಸಾರ್ವತ್ರಿಕ ಸತ್ಯವೂ, ಜಗಜ್ಜಾಹೀರು ಆಗಿರುವುದೂ ಆದ ಚಿತ್ರಣಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತಾರೆ. ಅದರಲ್ಲಿ ಒಂದು ಹಾಲೋಕಾಸ್ಟ್‌ನ ಚಿತ್ರ ಕಟ್ಟಲೆತ್ನಿಸುವ ಯಾತನಾ ಶಿಬಿರದ ಚಿತ್ರಗಳು ಎಂಬ ಕವಿತೆ. ಇದನ್ನು ಸಾರ್ವತ್ರೀಕರಿಸಲು ವರ್ತಮಾನದಲ್ಲೂ ಇದು ಜೀವಂತವೆಂಬಂತೆ ಕಾಣಿಸಲು ಕವಿ ನಡೆಸಿರುವ ಕೊಲಾಜ್ ಕ್ರಿಯೆ ಆಸಕ್ತಿದಾಯಕವಾಗಿದೆ. ಇದು ಭಾವನಾತ್ಮಕತೆಗಿಂತ ಹೆಚ್ಚು ಐಡಿಯೊಲಾಜಿಕಲ್ ಪ್ರಯತ್ನವಾಗಿದೆ. ಈ ಇತಿಹಾಸದುದ್ದಕ್ಕೂ ಹರಿದು ಬಂದಿರುವ ಬಗೆಬಗೆಯ ಹಾಲೊಕಾಸ್ಟ್‌ಗಳ, ಪರ್ಸಿಕ್ಯೂಷನ್‌ಗಳ ಮರುಕಳಿಸುವ ಚಿತ್ರಗಳು ಮನುಷ್ಯ ಮನಸ್ಸಿನ ಮೇಲೆ ಉಂಟು ಮಾಡಿರುವ ಪ್ರಭಾವಗಳು ಕಾಲಾನುಸಾರಿಯಾಗಿದೆ. ಈ ಎಚ್ಚರದಿಂದ ಬರೆಯಲಾದ ಕವಿತೆ ಇನ್ನೇನನ್ನೋ ಹೇಳಲು ಸಾಧ್ಯವಿತ್ತೆಂಬ ನಿರಾಶೆಯನ್ನು ಉಳಿಸಿದರೂ ಕೊನೆಯ ಭಾಗದ ಈ ಮಾತುಗಳು ಕವಿಯ ಈ ದಿನದ ಎಲ್ಲ ಸೂಕ್ಷ್ಮಜ್ಞರೆನಿಸಿಕೊಳ್ಳುವ ಜನರ ಯಾತನೆಯನ್ನು ದಾಖಲಿಸಿವೆ, ಹೊಸ ಎಚ್ಚರವನ್ನು ಬಯಸುತ್ತಲಿವೆ.

ಈಗ
ಇತಿಹಾಸದ
ಈ ಕಪ್ಪು ಬಿಳುಪು ಮಾಸುಚಿತ್ರಗಳಿಗೆ
ಹಸಿನೆತ್ತರಿನಿಂದ ರಂಗು ಬರಿಸಲು
ಹೊಂಚು ಹಾಕುತ್ತಿದೆ ಕಾಲ

ಅತ್ಯಾಧುನಿಕ ಕ್ಯಾಮೆರಾಗಳು
ಸಜ್ಜುಗೊಳ್ಳುತ್ತಿವೆ…
ಹೊಚ್ಚ ಹೊಸ ದೃಶ್ಯಗಳನ್ನು
‘ಸೆರೆ’ ಹಿಡಿಯಲು!

ವಿಲ್ಸನ್ ಅಪರೂಪದ ಚಿತ್ರಗಳನ್ನು ತುಣುಕುಗಳಲ್ಲಿ ಇಡಬಲ್ಲರೆಂದು ಹಿಂದೆಯೇ ಹೇಳಲಾಗಿದೆ. ಸರಳಾಚೆಯ ಸಾಲುಗಳು ಕವಿತೆಯ ಕೊನೆಯ ತುಣುಕನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು:

ನಾಳೆ ಬಿಡುಗಡೆ
ಗೋಡೆಯ ಕಲ್ಲುಗಳೇ
ನಿಮ್ಮನ್ನು ಮುಟ್ಟುವುದಿಲ್ಲವಿಂದು
ಅವಳ ಹೂ ಸ್ಪರ್ಶಕ್ಕೆ
ದೇಹವನ್ನು ಒಗ್ಗಿಸಿಕೊಳ್ಳಬೇಕಿದೆ!

ಇದು ಬರಿಯ ಶಬ್ದವನ್ನಲ್ಲದೆ ಅದರ ಎಲ್ಲ ಸಾಧ್ಯತೆಗಳ ಪೂರ್ಣಬಿಂಬವನ್ನೂ ಹಿಡಿದಿಡುತ್ತಿದೆ.

ವ್ಯಂಗ್ಯದಲ್ಲಿ ವಿಷಾಧವನ್ನು ಅಡಗಿಸುವ ವಿಲ್ಸನ್ ಅವರ ಕಾವ್ಯ ಮನೋಭಾವವನ್ನು ರೂಪಿಸಿರಬಹುದಾದ ಹಲವು ಎಲಿಮೆಂಟುಗಳನ್ನು ಕಾವ್ಯ ಶರೀರದಲ್ಲಿ ಗುರುತಿಸಬಹುದು. ನಾಟಕ ಮುಗಿದು ವೇದಿಕೆಯ ಹಿಂಬದಿ ಬಿದ್ದಿದ್ದ ಕರುಳು ಹರಿದ ದಿಂಬು ಕಾಣುವ ಕವಿ ಭಾವಿಸುವುದು ಆ ನಿಷ್ಠುರ ವಾಸ್ತವದ ಬೆಳಕು ಹರಿವಲ್ಲಿ ನಾಟಕದ ಬಸುರಿ ಅದನ್ನು ಜಾರಿಸಿ ಹೋಗಿರುವಳೆಂದು. ‘ಸಂಸ್ಕಾರಗಳು’ ಮಲದ ಗುಂಡಿ ಶುಚಿಗೊಳಿಸುವ ‘ನನ್ನವರ’ ಬಗಲಿಗೆ ನಿಂತು ಮೇಲಿನವರಲ್ಲಿ ತುಂಬಿರಬಹುದಾದ ಮಲ, ಅಂಧಕಾರ, ಪ್ರತಿಷ್ಠೆಗಳನ್ನು ಪ್ರಶ್ನಿಸುತ್ತದೆ. ಇಲ್ಲಿ ವ್ಯಂಗ್ಯಕ್ಕೆ ಸಿಲುಕದ ಆಕ್ರೋಶವಿದೆ. ಮತ್ತೆ ಹಿಂಸೆಯಿಂದಲೇ ಮುಕ್ತಿಯೆಂಬ ಮಾನಸಿಕತೆ ಎದ್ದು ನಿಲ್ಲುತ್ತದೆ. ಗಾಂಧಿಯೊಡನೆ ಹಾರಿಹೋದ ಅಹಿಂಸೆಯು ಬಂದೂಕಿನ ನಡುವೆ ಬದುಕುತ್ತಿದೆ. ಬಂದೂಕಿನ ಕೊರಳ ನಡುವಿಂದ ಶಾಂತಿ ಮಂತ್ರ ಪಠಿಸುತ್ತೇನೆ ಎಂದು ಮುಂದಿನ ಕವನ ‘ಗಾಂಧಿ ನನಗಿಷ್ಟ’ ಪ್ರತಿಪಾದಿಸುತ್ತಿದೆ. ನಾವು ಏಕ ಕಾಲದಲ್ಲಿ ಗಾಂಧಿಯನ್ನೂ, ಶಾಂತಿಯನ್ನೂ ಕಳೆದುಕೊಂಡಿರುವುದು ಇಲ್ಲಿ ಕಣ್ಣಿಗೆ ರಾಚುವಂತೆ ಚಿತ್ರಿತವಾಗಿದೆ.

ವಿಲ್ಸನ್ ಅವರ ಕಾವ್ಯ ಒಂದು ಮಿತಿಗೊಳಪಟ್ಟು ಸಬಾಲ್ಟ್ರನ್ ಬದುಕಿನ ಸಂಕಟಗಳನ್ನು ಸ್ವಮರುಕವಿಲ್ಲದೆ ಬದುಕುತ್ತದೆ, ಪ್ರತಿರೋಧಿಸುತ್ತದೆ. ಅದು ಆ ಬದುಕಿನ ಎಲ್ಲ ಅನಿಷ್ಟಗಳಿಗೂ ಮೂಲವನ್ನು ಹುಡುಕುವಾಗ ಆಯ್ದುಕೊಳ್ಳುವ ದಾರಿ ಯಾರೂ ತುಳಿಯದ್ದೇನಲ್ಲ. ಬದುಕಿನ ಅರ್ಥಗಳ ಅನ್ವೇಷಣೆಯಲ್ಲಿ ಭಾಷೆ, ಸಂಯಮ ಮತ್ತು ಅಭಿವ್ಯಕ್ತಿ ಗೆಲ್ಲುವುದು ಸೋಲುವುದು ಇವೆರಡನ್ನೂ ಈ ಕಾವ್ಯದಲ್ಲಿ ಕಾಣಬಹುದಾಗಿದೆ. ವಿಶ್ವರೂಪಾತ್ಮಕತೆಯಿಂದ ಏಕರೂಪಾತ್ಮಕತೆಗೆ ಸಾಗುವ ಕಾವ್ಯಪಯಣದಲ್ಲಿ ಎಲ್ಲರೂ ಸಾಗುತ್ತಿರುವ ಹಾದಿಯು ಅಂಬೇಡ್ಕರ್ ಚಿಂತನೆಗಳಿಂದ ಎಷ್ಟು ಪ್ರಭಾವಿತವಾಗಿದೆಯೋ ಅಷ್ಟೇ ಮಟ್ಟಿಗೆ ನಿವಾರಣೆಯಾಗದ ಸಾಮಾಜಿಕ ಅಸಮಾನತೆಯಿಂದಲೂ ಪ್ರಭಾವಿತವಾಗಿದೆ. ಆದರೆ ಇಲ್ಲಿ ಸಂಚಲನೆಯನ್ನು ಕುರಿತ ಅನುಮಾನಗಳೂ ಇವೆ. ಬಯಲಿಗೆ ಬಂದ ಆದರ್ಶ-ಪ್ರತಿರೋಧಗಳ ಆಶಯಗಳಲ್ಲಿ ಹುಟ್ಟಿದ, ಸಬಾಲ್ಟ್ರನ್ ಸಮುದಾಯಗಳಿಗೆ ತಲುಪುತ್ತಿದ್ದ ಗೇಯಕಾವ್ಯ ಪರಂಪರೆಯನ್ನು ತೊರೆದು ಈ ಕಾವ್ಯ ಯಾರು ಅದದನ್ನೇ ಓದಿಕೊಂಡು ಬಂದಿದ್ದಾರೋ ಅವರವರನ್ನೇ ತಲುಪುತ್ತಿದೆ.

ಕೌಟುಂಬಿಕ ಸಮಸ್ಯೆಗಳು, ಸಾಮಾಜಿಕ ಸಂಕಟಗಳು, ಅವುಗಳ ಪರಿಣಾಮಗಳನ್ನು ಹಸಿ ಹಸಿ ಗದ್ಯದಲ್ಲಿ ತಲುಪಿಸುವ ಪ್ರಯತ್ನಗಳೊಂದು ಕಡೆ, ಮತ್ತೆ ಮತ್ತೆ ಅದೇ ವಸ್ತುವನ್ನು ತಡಕುವ ಕಾವ್ಯ ರಚನೆಯ ಭರಾಟೆ ಒಂದು ಕಡೆ. ಇವು ನಿಷ್ಪ್ರಯೋಜಕವೆಂದು ನಾನು ಭಾವಿಸುವುದಿಲ್ಲ. ಪ್ರತಿರೋಧದ ಸದ್ದು ಎಂದಿಗೂ ಅಡಗಬಾರದು. ಆದರೆ ಪ್ರಶ್ನೆಯಿರುವುದು ಆಶಯ ಮತ್ತು ಕಲಾತ್ಮಕ ಅಭಿವ್ಯಕ್ತಿ ಇವೆರಡರ ನಡುವೆ. ವಿಲ್ಸನ್ ಅವರ ಆಶಯವು ಸ್ವ ದಿಂದ ಪರಕ್ಕೆ ವಲಸೆ ಹೋಗಿರುವುದಂತೂ ನಿಜ ಎಂದು ಈ ಸಂಕಲನ ಅರುಹುತ್ತದೆ.