ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರಲಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಅನುವಾದಕರು ತಮ್ಮ ಕವಿತೆಯನ್ನು ಇ-ಮೇಲ್ ಮೂಲಕ editor@kendasampige.com360degree.com ಈ ವಿಳಾಸಕ್ಕೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. 

…..ಒಬ್ಬಳು

ಅವನಿಲ್ಲೇ ಇದ್ದಾನೆ
ಎದುರಿಗೇ
ಕೋವಿಯ ಕುದುರೆಯಲ್ಲಿ
ಸಾವಿನ ಬೆರಳು ಮೀಟುತ್ತ

ಸೆಟೆದು ನಿಂತವರೆಲ್ಲ
ಬಿದ್ದು ಮಲಗಿದರು ಚೆಲ್ಲಾಪಿಲ್ಲಿ
ಕಣ್ಣೆದುರೆ

ಹೆಗಲಿಗಿನ್ನೂ ವಯಸು ಜಗ್ಗಿದಂತಿಲ್ಲ
ಮೊದಲ ಸಲ ಗಡ್ಡ ಮಾಡಿಕೊಂಡಾದ
ಗಾಯ ಸಹಿತ ಮಾಸಿಲ್ಲ
ತಿದ್ದಿದ ಕದಪು, ಗದ್ದ ಚೂಪು
ಕಸುವು ಖಂಡದ ಮೀನ-
ಚಂದವೆನ್ನಲು ಯಾವ ಅಡ್ಡಿಯಿಲ್ಲ

ಸಾವಿಗೂ ಹೀಗೆ
ಸುಂದರಾಂಗ ಹರೆಯವಿದೆಯೆಂದು
ಗೊತ್ತಿದ್ದರೆ ಮುತುವರ್ಜಿಯಿಂದ
ಅಣಿಗೊಂಡೇ ಬರಬಹುದಿತ್ತು

ಅಂತ ಕೊನೆಗೂ ಪೇಚಾಡಿಕೊಂಡೇ
ಮೈ ಚೆಲ್ಲಿದಳು

(ರೇಖಾಚಿತ್ರ: ರೂಪಶ್ರೀ ಕಲ್ಲಿಗನೂರು)