ಮತ್ತೊಂದು ಸೆಪ್ಟೆಂಬರು. ಮತ್ತೊಮ್ಮೆ ತೆರಿಗೆಯ ಆವರ್ತವೆಂದು ವರ್ಷಪೂರ್ತಿಯ ಲೇವಾದೇವಿಯ ಕಡತವನ್ನು ತೆರೆದು ಯಾರಿಗೆಷ್ಟು, ನನಗೆಷ್ಟು ಅಂತ ನಿನ್ನೆಯವರೆಗೆ ನೋಡಿದ್ದಾಯಿತು. ಮೂರು ದೊಡ್ಡ ಸಾಲಗಳ, ಎರ‍ಡು ಆದಾಯಗಳ, ಕಂಡಲ್ಲುಜ್ಜಿ ಅಂಡು ಸವೆಯಿಸಿಕೊಂಡ ಮೂರ‍್ನಾಕು ಕಾರ್ಡುಗಳ ವಿವರಗಳನ್ನು ಫೈಲಿಸಿ ಆಡಿಟರೆನ್ನುವ ಅಭಿನವ ನಕ್ಷತ್ರಿಕನಿಗೆ ಈಗಷ್ಟೇ ಕಳಿಸಿಕೊಟ್ಟಿದ್ದಾಯಿತು. ಸಿಕ್ಕಿತೆಂದು ಫೋನು ಮಾಡಿದ ಅವನಿಂದ ಮುಕ್ಕಾಲು ತಾಸು ಮಾತಾದವು. ಇಕನಾಮಿಕ್ಸೆಂದರೆ ದೊಡ್ಡ ಜಿರೋ ಅಂತಿರುವ ನನಗೆ ಈ ಮಾತುಗಳಿಂದ ನಿಜಕ್ಕೂ ಇವತ್ತು ಅಮಿತಾತೀತ ಕರ್ಣಾನಂದವಾಗಿದೆ. ಕಿವಿಗಳು ಎಡದಿಂದ ಬಲದವರೆಗೆ ಮೋರೆಯಗಲಕ್ಕೂ ಕೊರೆಸಿಕೊಂಡು ತೂರಿದ್ದೆಲ್ಲ ಸೋರುವಷ್ಟು ತೂತು ತೆರೆದಿವೆ.

ಈ ಸಲವೂ ಒಂದೈದು ಕಟ್ಟಲಿಕ್ಕಾಗಬಹುದು ಅಂತ ಆಡಿಟರು ಹೇಳಿದ್ದು ಕೇಳಿಯೂ ಕೇಳದ ಹಾಗೆ ಕಿವುಡಾಗಿದ್ದೇನೆ. ಎರಡು ವರ್ಷಗಳ ದುಡಿಮೆಯಷ್ಟನ್ನೂ ಮನೆಯೆನ್ನುವ ಭಾರೀ ವೆಚ್ಚದ ಮೇಲೆ ಹೊಯ್ದು ಖಾಲಿ ಖಾಲಿಯಿರುವ ನನ್ನ ಕೈಗಳ ಹಪಾಹಪೀ ಸಂದರ್ಭದಲ್ಲಿ ಅವನು ಹೇಳಿದ ಯಾವುದೂ ಪುಳಕ ತರಲಿಲ್ಲ. ಎಂದಿನಂತೆ ಅಲ್ಲಿಷ್ಟು ಇಲ್ಲಿಷ್ಟು ಇನ್ವೆಸ್ಟ್ ಮೆಂಟ್ ಮಾಡಬೇಕಿತ್ತು ಅನ್ನುವ ಮಾತುಗಳೆಲ್ಲ ಹುನ್ನಾರವೆನಿಸಿವೆ. ಮೂವತ್ತಕ್ಕೆ ಇನ್ನೂ ಮೂರು ವಾರಗಳಿವೆಯಲ್ಲ- ಹೇಗೋ ಸಂದುಕೊಂಡರಾಯಿತು ಎನ್ನುವ ನಿರಾಳದಲ್ಲಿ, ಹೇಗೋ ಸಂದಾಯವಾಗುತ್ತದೆಂಬ ನಂಬುಗೆಯಲ್ಲಿ ಉಳಿದಿದ್ದೇನೆ.

ನಿನ್ನೆ ಕ್ಲಯಂಟೊಬ್ಬರು ನಾನ್ನೂರು ಕೋಟಿ ವೆಚ್ಚದ ಪರಮಾತಿ ವಿಶೇಷಗಳಿರುವ ಆಸ್ಪತ್ರೆಯೊಂದನ್ನು ಕಟ್ಟುವ ಬಗ್ಗೆ ಅರೆತಾಸು ಕೊರೆದಿದ್ದರು. ನನಗೆ ಕೊಡಲಿಕ್ಕಿರುವ ಜುಜುಬಿ ಲಕ್ಷ ಚಿಲ್ಲರೆ ಫೀಸಿಗೇ ತಾರಮ್ಮಯ್ಯ ತೋರಿಸುತ್ತಿರುವ ಈ ಮಹಾಶಯ ಹೀಗೊಂದು ಸೂಪರ್ ಸ್ಪೆಷಾಲಿಟೀ ಹಾಸ್ಪಿಟಲಿನ ಅಂದಾಜು ಮಾಡುತ್ತಿರುವುದರ ಬಗ್ಗೆ ಯಾಕೋ ನಗು ಬಂತು. ನಕ್ಕುಬಿಟ್ಟೆ. ದುಡ್ಡು ಹೇಗೆ ಹೊಂಚುತ್ತೀರಿ? -ಅಂದಾಗ ಸೂರಿಗೆ ತೋರುಬೊಟ್ಟು ತೋರಿ, ಮೇಲೆ ಫಿಕ್ಸ್ಡ್ ಡೆಪಾಸಿಟಿದೆಯಲ್ಲ… ಅಲ್ಲಿಂದ ತರುತೀನಿ ಅಂತ ನಕ್ಕರು! ನನ್ನ ನಗೆ ಅವರೊಟ್ಟಿಗೆ ಸಶಬ್ದವಾಗಿತ್ತು…. ಈಗ ನಾನು ಅವರು ತೋರಿದ ಅದೇ ಆಕಾಶದಿಂದಲೇ ನನ್ನ ಠೇವಣಿಯನ್ನು ಈ ಕರಭಾರದ ಸಲುವಾಗಿ ಹೇಗೆ ಇಳಿಸಬಹುದೆಂದು ಲೆಕ್ಕ ಮಾಡುತ್ತಿದ್ದೇನೆ. ಈ ವಿಷಯವನ್ನು ಆಡಿಟರಿಗೆ ಹೇಳಿದರೆ, ‘ನಿಮಗೊಂದು ಮಾತು ಹೇಳಲಾ? ಇದು ಮಾಡಿದರೆ ಎಲ್ಲ ಸುಸೂತ್ರ ಆಗುತ್ತೆ… ಹೇಗಿದ್ದರೂ ಪಕ್ಷ ನಡೀತಿದೆ. ಏನು ಮಾಡಬೇಕೋ ಮಾಡಿ. All your ancestors will be around on this planet now. You need to please them, that’s about it!!’ ಎಂಬ ಸಲಹೆ ಕೊಟ್ಟ. ಮಹಾಲಯಕ್ಕೆ ಇನ್ನೂ ಸಮಯವಿದೆಯಲ್ಲ -ಅಂದೆ.

‘ಅಮಾವಸ್ಯೆ ದಿವಸ ಮಾಡೋದೇ ಬೇರ‍ೆ. ಅದು ಪಕ್ಷದಾಚೆಯ ಲೆಕ್ಕ ಆಗುತ್ತೆ… ಏನಿದ್ದರೂ ಈಗ ಮಾಡಬೇಕೂ..’

ಈಗೇನು ಮಾಡಬೇಕೆಂಬ ಉಸಾಬರಿಯಲ್ಲಿ ಕೇಳಿ ತಿಳಿದುಕೊಳ್ಳುವ ಹೊತ್ತಿಗೇ ಈ ಗೆಳತಿ ಎದುರಿಗೆ ಮೈದೋರಿದಳು. ‘ಸರ್… ಅಮೇಲೆ ಮಾಡುತೀನಿ’ ಅಂತ ಫೋನಿಟ್ಟಿದ್ದಾಯಿತು. ಅವಳೆದುರು ಟ್ಯಾಕ್ಸ್ ರಿಟರ್ನ್ಸಿನ ಗೋಳು ಹೇಳಿಕೊಂಡೆ. ಮೇಜಿನ ಮೇಲೆ ಚೆಂಡು ಗಾತ್ರದ ತಿರುಪತಿ ಲಾಡುವಿಟ್ಟು, ‘ಒಂದು ಸಲ ನನ್ನ ಜತೆ ದರ್ಶನಕ್ಕೆ ಬಾ… ಯಾಕೆ ಹಣಕಾಸು ಸುಧಾರಿಸೋಲ್ಲ ನೋಡುತೀನಿ…’ ಅಂದಳು. ‘ಅವನೆದುರಿಗೆ ಶರಣು ಅಂತ ಕೂತರೆ ಏನಾದರೂ ಆಗಲೇಬೇಕು. ಯಾವಾಗ ಹೋಗೋಣ ಹೇಳೂ…’ ಅವಳು ಹೀಗೆಲ್ಲ ಪಟ್ಟು ಹಿಡಿದು ಕುಳಿತಾಗ ವಿಪರೀತ ಫಜೀತಿಯಾಯಿತು. ಒಟ್ಟಿನಲ್ಲಿ, ವರ್ಷಾವರೀ ಭೂಪರ್ಯಟನೆಗೆಂದು ಬಂದಿರುವ ಈ ಪೂರ್ವಿಕರನ್ನು ಸಂತೈಸುವುದೋ, ಬೆಟ್ಟದ ಮೇಲೆ ಕಲ್ಲಾಗಿ ನಿಂತಿರುವ ಇವಳು ನಂಬುವ ಅವನಿಗೆರಗುವುದೋ ಎನ್ನುವ ಜಿಜ್ಞಾಸೆಯಾಯಿತು.

ತಿರುಪತಿಯ ಅಂತರಾಳದಲ್ಲಿ ಈ ಗೆಳತಿಗೆ ಸಾರ್ವಜನಿಕರು ಗಂಟೆಗಟ್ಟಲೆ ನಿಲ್ಲುವ ಸರತಿಯಾಚೆಗೆ, ನೇರ‍ ಸಾಕ್ಷಾತ್ ಬ್ರಹ್ಮಾಂಡನಾಯಕನೆದುರು ಮುಕ್ಕಾಲು ತಾಸು ಕುಳಿತು ಪ್ರಾರ್ಥಿಸಲು ನಿನ್ನೆ ಅನುವು ಮಾಡಿಕೊಡಲಾಯಿತಂತೆ. ಬೆಳಗಿನ ಏಕಾಂತಸೇವೆಯಲ್ಲಿ ಇವಳು ಎರಡು ಕೀರ್ತನೆಗಳನ್ನು ಹಾಡಿದಳಂತೆ. ಇವಳ ಸೇವೆಗೆ ಒಲಿದು ಅರ್ಚಕರು ದೇವರ ಅಂಗವಸ್ತ್ರವನ್ನು ದಯಪಾಲಿಸಿದರಂತೆ… ಇವಳು ಇಷ್ಟೆಲ್ಲ ಆಸ್ಥೆಯಿಂದ ಹೇಳಿಕೊಂಡಾಗ, ‘ಅಂಗವಸ್ತ್ರ ಅಂದರೆ…?’ ಎಂದು ಕೃತಕ ಕುತೂಹಲದಿಂದ ಪ್ರಶ್ನಿಸಿದೆ. ‘ಅಂಗವಸ್ತ್ರ ಅಂದರೆ ಲಂಗೋಟಿ…’ ಅಂತಂದು ನಕ್ಕಳು. ನನಗೂ ನಗೆ ತಡೆಯಲಾಗಲಿಲ್ಲ. ಯೂ ಮೀನ್ ಬಿಕಿನಿ? -ಎಂದು ಕೆಣಕಿ ನಗು ಮುಂದುವರೆಸಿದೆ. ‘What are you planning to do with that?!’ ಕೂಡಲೇ ಎರಡೂ ಕರಗಳಿಂದ ಗಲ್ಲ ಬಡಿದುಕೊಂಡು, ‘Don’t make fun of that!!’ ಎಂದು ಗದರಿದವಳು, ಹಾಗೇ ಉಗ್ಗಿದ ನಗು ತಡೆಯಲಾಗದೆ, ‘ನಂಗೂ ಏನು ಮಾಡಬೇಕೂಂತ ಗೊತ್ತಾಗುತಿಲ್ಲ ಕಣೋ!!’ ಅಂದಳು. ‘ನೀನಾದರೂ ಹೇಳೂ, ಒಂದಲ್ಲ ಅಂತ ಆರಿದೆಯೋ…’ ಎಂದಾಗ ಇದಕ್ಕೇನು ಪರಿಹಾರವೆಂದು ಇಬ್ಬರೂ ತಲೆಕೆಡಿಸಿಕೊಂಡೆವು.

ಅವಳು ಹೋದ ಬಳಿಕ ನನ್ನೆದುರಿಗಿರುವ ಸಂದಿಗ್ಧ ಇನ್ನಷ್ಟು ಕಡಿದಾಗುತ್ತಿದೆ. ಮೂರು ವಾರದಲ್ಲಿ ಐದಾರು ಲಕ್ಷಗಳನ್ನು ತೆರಿಗೆಗೆಂದು ಎಲ್ಲಿ ಹೊಂಚುವುದೆಂಬ ಚಿಂತೆ ಕಾಡುತ್ತಿದೆ. ಈ ಆಡಿಟರನ್ನೇ ಕೇಳೋಣವೆಂದುಕೊಂಡರೆ ಅವನು ಹೇಳುವ ಪರಿಹಾರಗಳಲ್ಲಿ ಸಾಕಷ್ಟು ಲೌಕಿಕವೂ ಇವೆ, ಅಷ್ಟೇ ಅಲೌಕಿಕವೂ ಇವೆ. ಎಲ್ಲಿಂದಾದರೂ ಸಾಲ ಮಾಡೋಣ… ಈಗಿನ ಸಂಕಷ್ಟದಿಂದ ಆಚೆ ಬರೋದು ಮೊದಲು ನೋಡು -ಅಂತ ತಿಂಗಳು ತಿಂಗಳಿನ ಬಡ್ಡಿಯವರಿಗೆ ನನ್ನ ನಿಯತ್ತು ಒತ್ತೆಯಿಡಿಸಿಬಿಡುತ್ತಾನೆ. ಸದ್ಯದ ಮುಸೀಬತು ಕಳೆಯಿತಾದರೆ ಅವನಿರಲಿ, ನಾನೂ ಈ ಕುರಿತು ತಲೆಗೆ ಹಚ್ಚಿಕೊಳ್ಳುವುದಿಲ್ಲ…. ಇನ್ನು ದೇವರು, ದಿಂಡರು ಅಂತಲೂ ಸಲಹೆಗಳನ್ನೂ ಕೊಡುತ್ತಾನೆ. ಇವತ್ತು ಸಿಕ್ಕ ಹಾಗೆ ಎದುರಾಗಲೆಲ್ಲ ಈ ಗೆಳತಿಯೂ ಇದೇ ನೇರಕ್ಕೆ ಪುಕ್ಕಟೆ ಉಪದೇಶಕ್ಕೆ ತೊಡಗುತ್ತಾಳೆ. ಲೌಕಿಕ ಕಾಮನೆಗಳನ್ನು ಕೈಗೂಡಿಸಿಕೊಳ್ಳಲು ದೇವರುಗಳನ್ನೂ, ಪೂರ್ವಿಕರನ್ನೂ ಮೊರೆ ಹೋಗುವುದೆಷ್ಟು ಸರಿ ಅಂತ ಒಮ್ಮೊಮ್ಮೆ ಇಬ್ಬರನ್ನೂ ತರಾಟೆ ತೆಗೆದುಕೊಂಡಿದ್ದಿದೆ.

ಈ ಕುರಿತು ನನಗೆ ಗೊತ್ತಿರುವ ಸಂನ್ಯಾಸಿಯೊಬ್ಬರಲ್ಲಿ ಈಚೆಗೆ ಅರಿಕೆಯಿಟ್ಟು ನನ್ನ ಸಂದೇಹಗಳನ್ನು ತೀರಿಸಿರೆಂದು ಬಿನ್ನಹಿಸಿದ್ದೆ. ನನ್ನದೇ ವಯಸ್ಸಿನ ಆಸುಪಾಸಿನಲ್ಲಿರುವ ಈ ಸ್ವಾಮೀಜಿ ಕಳೆದ ವಾರ ಹೊಸತೊಂದು ಆಶ್ರಮವನ್ನು ಕಟ್ಟಿಸಬೇಕೆನ್ನುವ ಇರಾದೆಯಿಂದ ತಮ್ಮ ಅಂತರಂಗದ ಭಕ್ತರೊಡಗೂಡಿ ಆಫೀಸಿಗೆ ಬಂದಿದ್ದರು. ಇಷ್ಟಕಾಮ್ಯಾರ್ಥವಾದ ಪ್ರಾರ್ಥನೆಗಳು ಬರೇ ತಾತ್ಕಾಲಿಕ ಪರಿಹಾರಗಳೆಂದು ಹೇಳಿ ನನ್ನ ಚಿಂತನೆಯನ್ನು ಅನುಮೋದಿಸಿದ್ದರು. ನನ್ನ ಆಡಿಟರು ಹೇಳುವ ಸಾಲದ ನೆರವಿಗೂ, ಇಂತಹ ಶಾಂತಿಪರಿಹಾರಗಳಿಗೂ ವ್ಯತ್ಯಾಸವಿಲ್ಲವೆಂದು ಆಗ ಅನಿಸಿ ಕೊಂಚ ನಿರಾಳವೆನಿಸಿ, ನನ್ನೊಳಗಿನ ವಿಚಾರಗಳು ನಿಚ್ಚಳಿಸಿದ್ದವು.

ಇವತ್ತು ಮಧ್ಯಾಹ್ನ ಸ್ವಾಮೀಜಿ ಮತ್ತೆ ಬಂದರು. ಆಶ್ರಮದ ಸ್ಥೂಲವಿನ್ಯಾಸವಿರುವ ನಕಾಶೆಯನ್ನು ಅವರೆದುರು ಹರವಿದರೆ ಅದರ ಒಂದೊಂದೂ ಅವಯವವನ್ನು ಎಂಥದೋ ಅಸಂಗತ ಎಣಿಕೆಗಳಿಂದ ತಪಾಸಣೆಗೆ ತೊಡಗಿಬಿಟ್ಟರು. ಹೆಬ್ಬಾಗಿಲು ಇಲ್ಲಿರಬಾರದು ಅಂತ ಅವರ ಬದಿಗಿದ್ದ ಭಕ್ತ ಅಲ್ಲಗಳೆಯುತ್ತಲೇ ನನಗೆ ಧಸಕ್ಕೆಂದಿತು. ಮುಖ್ಯದ್ವಾರವನ್ನು ಬದಲಿಸುವುದೆಂದರೆ ಇಡೀ ವಿನ್ಯಾಸವೇ ಬದಲಿಸುವುದೆಂದು ಅರ್ಥ!! ಸ್ವಾಮೀಜಿ ತಮ್ಮ ಬದಿ ಚೀಲದಿಂದ ಪುಟ್ಟ ಕರಂಡಕವನ್ನು ತೆರೆದು, ಅದರೊಳಗಿನಿಂದ ಚಿಟಿಕೆಯಷ್ಟು ಅಕ್ಷತೆ ಹಿಡಿದು ನಕಾಶೆಯ ಮೇಲೆ ಚೆಲ್ಲಿದರು. ಒಮ್ಮೆಗೆ ನಾಲ್ಕು ಕಾಳುಗಳ ಹಾಗೆ ಅಕ್ಷತೆಯನ್ನು ಬದಿಗೆ ಸರಿಸಿದರು. ಸರಿಸುತ್ತ, ಸರಿಸುತ್ತ ಕೊನೆಗೆ ಬರೇ ಮೂರು ಕಾಳುಳಿದವು. ಕಣ್ಣು ಮುಚ್ಚಿ ಏನೋ ಗುನುಗಿಕೊಂಡು, ಆಗಿಬರೋಲ್ಲ ವಸ್ತಾರೆ… ಅಂತ ರಾಗವೆಳೆದರು!! ನನಗೆ ರೇಗಿ ಹೋಯಿತು. ತೀರಾ ಮುಜುಗರದಿಂದ ಹೆಬ್ಬಾಗಿಲು ಯಾಕೆ ನಾನು ಹೇಳಿದಲ್ಲಿರಬೇಕೆಂದು ಸಮರ್ಥನೆಗೆ ತೊಡಗಿದೆ. ಎದುರಿಗಿದ್ದವರಲ್ಲಿ ಯಾರೂ ಮಣಿಯಲಿಲ್ಲ. ‘ಕ್ಷಮಿಸಿ, ನಾನು ಇಂಥವನೆಲ್ಲ ನಂಬೋದಿಲ್ಲ. ನಿಮಗೆ ಅನುಕೂಲವಾಗುವವರ ಹತ್ತಿರ ಮಾಡಿಸಿಕೊಳ್ಳಿ…’ ಎಂದು ದಿಟ್ಟವಾಗಿ ಹಾಳೆ ಮಡಿಚಿ ಬದಿಗಿಟ್ಟೆ. ಸ್ವಾಮಿಗಳಿಗೆ ಕಸಿವಿಸಿಯಾಗಿರಬೇಕು, ಎದ್ದು ನಿಂತು- ‘ಎಲ್ಲಾ ದೈವೇಚ್ಛೆ… ಈ ಪ್ಲ್ಯಾನೊಂದು ತಗೊಂಡು ಹೋಗಬಹುದೆ?’ ಎಂದು ಮಡಿಚಿದ ಡ್ರಾಯಿಂಗು ಕೈಗೆತ್ತಿಕೊಂಡರು. ಒಲ್ಲದ ಮನಸಿನಿಂದ ಅದನ್ನು ಸಲ್ಲಿಸಿ ಬೀಳ್ಕೊಟ್ಟೆ. ನಾಲ್ಕು ದಿವಸಗಳ ಕೆಲಸ ವೃಥಾ ಕಾಲಹರಣವೆನಿಸಿತು.

ಹೀಗೆ ಏನೂ ಕೈಗೂಡಲೊಲ್ಲದ ಈ ದಿವಸಗಳ ಮಹಿಮೆಗೆ ಏನನ್ನುವುದು? ಕೆಟ್ಟ ದಿವಸಗಳೆನ್ನುವುದೆ? ಗ್ರಹಚಾರವೆಂತಲೇ…? ಒಟ್ಟಿನಲ್ಲಿ ಹೀಗೇನೋ ಇರಬಹುದೆ? ಕೂಡಲೇ ಆಡಿಟರು ಹೇಳಿದ ಸಲಹೆಗಳೂ, ಗೆಳತಿಯ ಕಿವಿಮಾತುಗಳೂ ನೆನಪಾದವು. ಇನ್ನು ಯೋಚಿಸಿದಷ್ಟೂ ರಾಡಿಯೆಂದುಕೊಂಡು ಈಗ ಕತೆಯೊಂದನ್ನು ಬರೆಯಲು ತೊಡಗಿದ್ದೇನೆ. ದೈವಕೌಪೀನೇಯಮ್ ಅಂತ ಅದನ್ನು ಹೆಸರಿಸಬೇಕೆನಿಸುತ್ತಿದೆ.