ಸರಿಸುಮಾರು ಇಪ್ಪತ್ತು ದಿನಗಳಿಂದ ಈ ಕಥೆಯನ್ನು ರೂಪಕವಾಗಿಸಿಕೊಂಡು ಯೋಚಿಸುತ್ತಿದ್ದೇನೆ. ವಿಭೂತಿಪುರುಷರ ಉತ್ತುಂಗ ಸ್ಥಿತಿಯ ಬಗ್ಗೆ ನನಗೆ ಇಂದಿಗೂ ತಿಳಿದಿಲ್ಲ. ಅವರು ಎಲ್ಲದರಲ್ಲೂ ಸೌಂದರ್ಯ ಕಾಣಲು ಬಯಸುವವರು. ಆದರೆ ನಾನು ಆ ಸೌಂದರ್ಯದ ಬಗೆಗೆ ನಿತ್ಯ ಅನುಮಾನಗಳನ್ನ ಇಟ್ಟುಕೊಂಡಿರುವವನು. ತಮಾಷೆ ಮಾಡುತ್ತ ಎಲ್ಲವನ್ನೂ ತೇಲಿಸುತ್ತ ಜಗತ್ತನ್ನು ಸುಂದರ ಗೋಳವನ್ನಾಗಿ ಪರಿವರ್ತಿಸಿಕೊಳ್ಳುವವರ ಬಗೆಗೆ ನನ್ನಲ್ಲಿ ಗೌರವವೇನೊ ಇದೆ. ಹಾಗೆಯೇ ದಾರಿಹೋಕನಿಗೆ ಆದ ಜ್ಞಾನೋದಯದ ಬಗೆಗೂ ಚಕಾರಗಳಿವೆ.
ಎನ್.ಸಿ. ಮಹೇಶ್‌ ಬರೆಯುವ ‘ರಂಗ ವಠಾರ’ ಅಂಕಣ

 

ಹಿಂದೆ ಒಂದು ಕಥೆ ಓದಿದ್ದ ನೆನಪು. ಅದು ಬುದ್ಧನಿಗೆ ಸಂಬಂಧಿಸಿದ್ದೋ ಅಥವಾ ಬೇರೊಬ್ಬ ವಿಭೂತಿಪುರುಷನಿಗೆ ಸಂಬಂಧಿಸಿದ್ದೋ ಸರಿಯಾಗಿ ನೆನಪಾಗುತ್ತಿಲ್ಲ. ಕಥೆ ಇಷ್ಟೇ- ಆ ವಿಭೂತಿಪುರುಷ ಧ್ಯಾನಸ್ಥನಾಗಿ ಮಂಟಪದಲ್ಲಿ ಕೂತಿದ್ದಾನೆ. ದಾರಿಹೋಕನೊಬ್ಬ ಅವನನ್ನು ಕಂಡು ಧ್ಯಾನದ ಹೆಸರಿನಲ್ಲಿ ಹೀಗೆ ಕೂತು ಸೋಗಲಾಡಿ ಆಗುವ ಬಗ್ಗೆ ಇನ್ನಿಲ್ಲದಂತೆ ಬೈಯಲು ಆರಂಭಿಸುತ್ತಾನೆ. ಎಷ್ಟು ಬೈದರೂ ವಿಭೂತಿಪುರುಷನ ಮುಖದಲ್ಲಿ ಒಂದು ಎಳೆ ಕದಲುವುದಿಲ್ಲ. ತಟಸ್ಥನಾಗಿ ಹಾಗೇ ಕೂತಿರುತ್ತಾನೆ. ಬೈದು ಬೈದು ಸೋತ ದಾರಿಹೋಕ ದಣಿದು ‘ಇಷ್ಟು ಬೈದರೂ ನಿನಗೇನೂ ಅನಿಸ್ತಿಲ್ಲವಾ..?’ ಅಂತ ಕೇಳ್ತಾನೆ. ಆಗ ವಿಭೂತಿಪುರುಷ ಪ್ರಶಾಂತಭಾವದಲ್ಲಿ ಕಣ್ತೆರೆದು ಕಿರುನಗೆ ನಕ್ಕು ‘ನೀಯೇನೋ ನನಗೆ ಬಲವಂತವಾಗಿ ಕೊಡಲಿಕ್ಕೆ ಬರ್ತೀಯ.. ನಾನು ಅದನ್ನು ತೆಗೆದುಕೊಳ್ಳಲಿಕ್ಕೆ ನಿರಾಕರಿಸಿದರೆ ಏನ್ ಮಾಡ್ತೀಯಾ?’ ಅಂತ ಕೇಳ್ತಾನೆ. ದಾರಿಹೋಕ ಗೊಂದಲಕ್ಕೆ ಒಳಗಾಗಿ ‘ಇನ್ನೇನು ಮಾಡೋದು ಸುಮ್ಮನಾಗ್ತೀನಿ’ ಅಂತಾನೆ. ವಿಭೂತಿಪುರುಷ ಮತ್ತೆ ನಕ್ಕು ‘ಹಾಗೇ ನೀ ಬೈದದ್ದನ್ನ ನಾನು ತೆಗೆದುಕೊಳ್ಳಲಿಲ್ಲ’ ಎನ್ನುತ್ತಾನೆ. ಆಮೇಲೆ ದಾರಿಹೋಕನಿಗೆ ಜ್ಞಾನೋದಯವಾಯಿತು ಎನ್ನುವಲ್ಲಿಗೆ ಕಥೆ ಮುಗಿಯುತ್ತದೆ.

ಸರಿಸುಮಾರು ಇಪ್ಪತ್ತು ದಿನಗಳಿಂದ ಈ ಕಥೆಯನ್ನು ರೂಪಕವಾಗಿಸಿಕೊಂಡು ಯೋಚಿಸುತ್ತಿದ್ದೇನೆ. ವಿಭೂತಿಪುರುಷರ ಉತ್ತುಂಗ ಸ್ಥಿತಿಯ ಬಗ್ಗೆ ನನಗೆ ಇಂದಿಗೂ ತಿಳಿದಿಲ್ಲ. ಅವರು ಎಲ್ಲದರಲ್ಲೂ ಸೌಂದರ್ಯ ಕಾಣಲು ಬಯಸುವವರು. ಆದರೆ ನಾನು ಆ ಸೌಂದರ್ಯದ  ಬಗೆಗೆ ನಿತ್ಯ ಅನುಮಾನಗಳನ್ನ ಇಟ್ಟುಕೊಂಡಿರುವವನು. ತಮಾಷೆ ಮಾಡುತ್ತ ಎಲ್ಲವನ್ನೂ ತೇಲಿಸುತ್ತ ಜಗತ್ತನ್ನು ಸುಂದರ ಗೋಳವನ್ನಾಗಿ ಪರಿವರ್ತಿಸಿಕೊಳ್ಳುವವರ ಬಗೆಗೆ ನನ್ನಲ್ಲಿ ಗೌರವವೇನೊ ಇದೆ. ಹಾಗೆಯೇ ದಾರಿಹೋಕನಿಗೆ ಆದ ಜ್ಞಾನೋದಯದ ಬಗೆಗೂ ಚಕಾರಗಳಿವೆ. ಆದರೆ ಈ ಪ್ರತಿರೋಧವನ್ನ ಸ್ವೀಕರಿಸದ ಜಗತ್ತಿನ ಎದುರು ಮಿಡುಕುವುದು ಯಾಕೆ ಅಂದುಕೊಳ್ಳುವಾಗ ನನ್ನ ಇಷ್ಟದ ರಂಗಭೂಮಿ ಹಾಗೂ ಒಟ್ಟು ಬದುಕಿನ ಬಗೆಗೆ ತಟಸ್ಥ ಭಾವ ಹುಟ್ಟಲು ಕಾರಣವಾಗುತ್ತದೆ.

ಈ ಹೊತ್ತು ನಾನು ಅದೇ ಸ್ಥಿತಿಯಲ್ಲಿದ್ದೇನೆ. ಇದು ವಿಮರ್ಶೆ ಮತ್ತು ಟೀಕೆಯನ್ನ ವಸ್ತುನಿಷ್ಠವಾಗಿ ತೆಗೆದುಕೊಳ್ಳಲಿಕ್ಕೆ ಬರದ ಕಾಲ ಎಂದು ಗೊತ್ತಾಗುತ್ತಿದೆ. ವಂದಿಮಾಗತನ ಮಾತ್ರ ಇಂದು ಸಲ್ಲುವ ಸರಕಾಗಿದೆ. ಅದು ನಮ್ಮನ್ನು ಬೆಳೆಸುತ್ತದೆ ಕೂಡ. ಆದರೆ ನಾವು ಚೂರು ನಿಷ್ಠುರ ತಾಳಿದರೆ ಸಾಕು ಸೋಷಿಯಲ್ ಮೀಡಿಯಾಗಳಲ್ಲಿ ಜನ ಕಾರ್ಯಪ್ರವೃತ್ತರಾಗುತ್ತಾರೆ. ಅಲ್ಲಿ ಸಭ್ಯತೆಯ ಎಲ್ಲೆ ಮೀರಿ ಬರವಣಿಗೆ ವಿಜೃಂಭಿಸುತ್ತದೆ. ಈ ಸಲುವಾಗಿ ಕೆಲವರು ಧ್ಯಾನಸ್ಥ ಯೋಗಿಗಳಾಗಬಹುದು; ಆದರೆ ದಾರಿಹೋಕ ಆಗಲಿಕ್ಕೂ ಒಂದು ಮನಸ್ಥಿತಿ ಬೇಕಲ್ಲ? ಯೋಗಿಯ ಸುಂದರ ಪ್ರಪಂಚ ಮತ್ತು ಧ್ಯಾನಸ್ಥ ಸ್ಥಿತಿಯ ಬಗೆಗೆ ನಂಬಿಕೆ ಹುಟ್ಟದವರು ಹಾಗೂ ಜ್ಞಾನ ಉದಯಿಸಿಕೊಂಡ ದಾರಿಹೋಕನೂ ಆಗಲು ಇಚ್ಛಿಸದವರು ನನ್ನ ರೀತಿಯಲ್ಲಿ ತಟಸ್ಥರಾಗುತ್ತಾರೆ. ಜ್ಞಾನೋದಯ ಬೇರೆ, ತಾಟಸ್ಥ್ಯ ಬೇರೆ.

ನನ್ನದು ತಾಟಸ್ಥ್ಯ. ಇಷ್ಟು ದೀರ್ಘ ಪೀಠಿಕೆ ನೀಡಲೂ ಕಾರಣವಿದೆ. ನಾನು ಹೇಳುವುದನ್ನು ತೆಗೆದುಕೊಳ್ಳಲು ಬಾರದಿದ್ದರೆ ಹೇಳುವ ಉಮೇದಿಯೇ ಹೊರಟುಹೋಗುತ್ತದೆ. ನನಗಾಗಿರುವುದೂ ಅದೇ.

ಇಂಥ ಹೊತ್ತಲ್ಲೇ ನಮ್ಮ ರಂಗತಂಡ ಹಾಗೂ ಮೊತ್ತೊಂದು ತಂಡ ಜಂಟಿಯಾಗಿ ಒಂದು ರಂಗೋತ್ಸವ ಆಯೋಜಿಸಲು ಮುಂದಾಯಿತು. ಒಂದು ತಿಂಗಳ ಕಾಲ ನಡೆಯುವ ನಾಟಕೋತ್ಸವ. ಒಟ್ಟು ಹತ್ತು ನಾಟಕಗಳು. ಪ್ರತಿ ಶನಿವಾರ ಮತ್ತು ಭಾನುವಾರ ಮಾತ್ರ ನಾಟಕ ಪ್ರದರ್ಶನ.
ಆದರೆ ಇದು ವೈರಾಣುಗಳು ಕಾಲ. ಕೊರೋನ ಮತ್ತೆ ಖಾತೆ ತೆರೆದು ಜೋರಾಗಿ ರನ್ ಸ್ಕೋರ್ ಮಾಡುತ್ತಿದೆ. ಒಮಿಕ್ರಾನ್ ತನ್ನ ನಡಿಗೆಯ ವೇಗ ಹೆಚ್ಚಿಸಿಕೊಳ್ಳುತ್ತಿದೆ. ಈಗ ಇದನ್ನು ಮೀರಿ ಡೆಲ್ಟಾಕ್ರೋನ್ ಪತ್ತೆ ಆಗಿದೆ ಅಂತ ಸಂಶೋಧಕರು ಹೆಕ್ಕಿ ತೆಗೆದು ಭಯ ಹೆಚ್ಚು ಮಾಡಿದ್ದಾರೆ.
ಇಂಥ ಸಂದರ್ಭದಲ್ಲಿ ರಂಗತಂಡಗಳು ನಾಟಕಗಳನ್ನು ಪ್ರದರ್ಶಿಸುವುದು ಕಷ್ಟದ ಸಂಗತಿ. ಆದರೆ ಉಮೇದು ಇದೆಯಲ್ಲ- ಅದಕ್ಕೆ ಈ ಯಾವುದೂ ಅಡ್ಡಿ ಅನಿಸುವುದಿಲ್ಲ. ರಂಗಮಂದಿರದವರ ಜೊತೆ ಒಂದು ಮೀಟಿಂಗ್ ಕೂರುತ್ತಾರೆ. ರಂಗಮಂದಿರದ ಬಾಡಿಗೆ ಕಟ್ಟುವುದು ಕಷ್ಟ; ಟಿಕೆಟ್ ಕಲೆಕ್ಷನ್‌ನಲ್ಲಿ ಅರ್ಧ ಭಾಗ ನಿಮಗೆ ಕೊಡುತ್ತೇವೆ. ನಾಟಕ ಪ್ರದರ್ಶಿಸಲು ಅವಕಾಶ ನೀಡಿ ಎನ್ನುವುದು ಮೀಟಿಂಗ್‌ನಲ್ಲಿ ಸಲ್ಲಿಸಲಾದ ಅಹವಾಲು.
ಅಚ್ಚರಿಯ ಸಂಗತಿ ಅಂದರೆ ರಂಗಮಂದಿರದವರು ಇದಕ್ಕೆ ಒಪ್ಪಿ ಆಯೋಜನೆಗೊಂಡ ರಂಗೋತ್ಸವ ಇದು. ಸರಿ ಹತ್ತು ನಾಟಕಗಳು ಯಾವುದಾಗಿರಬೇಕು ಅಂತ ಪ್ರಶ್ನೆ ಬಂದಾಗ ಗಂಭೀರ ನಾಟಕಗಳ ಪ್ರತಿಪಾದಕರು ಮತ್ತು ಕಾಮಿಡಿ ನಾಟಕಗಳ ಪ್ರತಿಪಾದಕರು ಒಟ್ಟು ತಂತಮ್ಮ ವಾದ ಮಂಡಿಸಿ ಕಡೆಗೆ ಬ್ಯಾಲೆನ್ಸ್ ಹೆಸರಿನಲ್ಲಿ ಒಂದು ರಂಗೋತ್ಸವ ಆಯೋಜಿಸಿದರು. ಗಂಭೀರ ಮತ್ತು ಕಾಮಿಡಿ ನಾಟಕಗಳ ಬಗ್ಗೆ ನನ್ನಲ್ಲಿ ಸ್ಪಷ್ಟ ನಿಲುವುಗಳಿವೆ. ಆದರೆ ಕೇಳಿಸಿಕೊಳ್ಳುವ ಕಿವಿಗಳು ಯಾರಿಗಿವೆ? ಗಂಭೀರ ನಾಟಕಗಳ ಪ್ರತಿಪಾದಕರು ಆ ನಾಟಕಗಳನ್ನು ನಾಟ್ ರೀಚಬಲ್ ಮಾಡಿಬಿಡುತ್ತಾರೆ. ಹಾಗೇ ಕಾಮಿಡಿ ನಾಟಕಗಳನ್ನ ಮಾಡುವವರು ಜನ ನಗುವ ಭರಕ್ಕೆ ಉಮೇದು ಹೆಚ್ಚಿಸಿಕೊಂಡು ಮಸಾಲೆ ಹೆಚ್ಚು ಬೆರೆಸಿ ಹದಕೆಡಿಸುತ್ತಾರೆ. ಇಷ್ಟು ಹೇಳಿದಾಗ ‘ಅದು ಹೇಗೆ?’ ಎಂದು ಕೇಳುವ ಪ್ರಮೇಯ ಇಬ್ಬರೂ ಸೃಷ್ಟಿಸಿಕೊಳ್ಳುವುದಿಲ್ಲ. ಹೇಳಿದರೆ ಕೇಳಿಸಿಕೊಳ್ಳುವುದೂ ಇಲ್ಲ. ಮತ್ತು ಬರೆದರೆ ಪ್ರಕಟಿಸುವುದೂ ಇಲ್ಲ. ನಾನು ತಟಸ್ಥ.

ಅದೇ ಹೊತ್ತು ಕರೋನ ವಿಜೃಂಭಿಸಿ ನಾಟಕೋತ್ಸವ ರದ್ದಾಗಿ ಮುಂದೂಡಲಾಯಿತು. ಇದು ಸಾಲದು ಎಂಬಂತೆ ಸರ್ಕಾರಿ ರಂಗಮಂದಿರಗಳ ಬಾಡಿಗೆಯನ್ನ ಹೆಚ್ಚಿಸುವ ಬಗ್ಗೆ ಚರ್ಚೆ ಮುನ್ನೆಲೆಗೆ ಬಂತು. ‘ರಂಗಮಂದಿರದ ಬಾಡಿಗೆ ದರ ಹೆಚ್ಚಿಸುವುದು ಖಂಡಿತ’ ಎಂಬ ಸುದ್ದಿ ಹೊರಟಿತು. ಪ್ರೈವೇಟ್ ರಂಗಮಂದಿರಗಳ ಹೆಚ್ಚಿನ ಬಾಡಿಗೆ ದರ ಭರಿಸಲು ಸಾಧ್ಯವಾಗದ ಬಹಳಷ್ಟು ಕಲಾವಿದರು ಸರ್ಕಾರಿ ರಂಗಮಂದಿರಗಳಿಗೆ ಆದ್ಯತೆ ಕೊಡುತ್ತಿದ್ದರು. ಆದರೆ ಈಗ ಚಿತ್ರ ಬಿಗಡಾಯಿಸಲು ಆರಂಭಿಸಿದೆ. ಪತ್ರಿಕೆಯೊಂದರ ವರದಿ ಆಧರಿಸಿ ಒಬ್ಬರು ಪತ್ರಕರ್ತರು ನನಗೆ ಕರೆಮಾಡಿ ‘ಕಲಾತಂಡಗಳಿಗೆ ಪ್ರಾಯೋಜನೆಯ ಹಣವನ್ನು ತಿಂಗಳುಗಳಾದರೂ ಕೊಡಲಾಗದ, ವಿವಿಧ ಪ್ರಶಸ್ತಿ ಪುರಸ್ಕೃತರಿಗೆ ಹಣ ನೀಡಲಾಗದೆ ಸತಾಯಿಸುವಂಥಹ ‘ಆರ್ಥಿಕ ದಿಕ್ಕೆಟ್ಟ’ ಸ್ಥಿತಿಗೆ ತಲುಪಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದೀಗ ರಂಗಮಂದಿರಗಳ ಬಾಡಿಗೆ ದರ ಹೆಚ್ಚಿಸುವ ಮೂಲಕ ಹಣ ಸಂಗ್ರಹಕ್ಕೆ ಮುಂದಾಗಿರುವುದು ನಿಜ’ ಅನ್ನೋ ಮಾತುಗಳು ಕೇಳಿಬರ್ತಿವೆ. ನೀವು ಏನು ಹೇಳ್ತೀರಿ ಸರ್ ಈ ಬಗ್ಗೆ..?’ ಎಂದು ಕೇಳಿದರು.

ಈ ಸಂಗತಿ ನನಗೂ ತಿಳಿದಿತ್ತು. ನಗರದ ರವೀಂದ್ರ ಕಲಾಕ್ಷೇತ್ರದ ಒಂದು ಪಾಳಿಯ ಬಾಡಿಗೆ ಮೂರು ಸಾವಿರ ಇತ್ತು. ಅದನ್ನು ಹತ್ತು ಸಾವಿರಕ್ಕೆ ಏರಿಕೆ ಮಾಡುವ ಬಗ್ಗೆ ಮಾತುಕಥೆ ನಡೆಯುತ್ತಿದೆ. ನಯನ ರಂಗಮಂದಿರದ ಬಾಡಿಗೆ ಎರಡು ಸಾವಿರವಿದ್ದದ್ದು ಐದು ಸಾವಿರಕ್ಕೆ ಏರಿಸುವ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಒಂದು ಕಡೆ ವಾದ. ಪ್ರಸ್ತಾವನೆ ಸಲ್ಲಿಕೆ ಆಗಿದ್ದು ಸಚಿವರ ಸಹಿ ಕೂಡ ಆಗಿದೆ ಎಂದು ಹೇಳುವವರೂ ಇದ್ದಾರೆ. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ‘ ಸದ್ಯಕ್ಕಿನ್ನೂ ತೀರ್ಮಾನವಾಗಿಲ್ಲ. ಚಿಂತನೆ ನಡೆದಿದೆ ಅಷ್ಟೇ’ ಎಂದಿರುವುದೂ ನನ್ನ ಗಮನದಲ್ಲಿ ಇತ್ತು.

ಥಿಯೇಟರ್ ಸರ್ಕಲ್ ಹೊರಗಿರುವವರಿಗೆ ಈ ಸಂಗತಿ ಬೇರೆಯಾಗಿ ಕಾಣಿಸುತ್ತದೆ. ಆದರೆ ಇದರ ಅಸಲಿಯತ್ತು ಅರ್ಥವಾಗುವುದು ರಂಗದಲ್ಲಿ ತೊಡಗಿಸಿಕೊಂಡಿರುವವರಿಗೆ ಮಾತ್ರ. ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಲು ನನ್ನಲ್ಲಿ ಸಾಕಷ್ಟು ನಿಷ್ಠುರ ಮಾತುಗಳಿದ್ದವು. ಆದರೆ ಹಾಗೆ ಹೇಳಿದರೆ ಅವರು ಪ್ರಕಟಿಸುತ್ತಾರೆಯೇ? ಇದು ದೊಡ್ಡ ಪ್ರಶ್ನೆ.

‘ಹೇಳ್ತೇನೆ. ಆದರೆ ಅದನ್ನ ಹಾಗೇ ಪ್ರಕಟಿಸ್ತೀರಾ ಹೇಳಿ.. ಹಾಗಿದ್ದರೆ ಮಾತ್ರ ಹೇಳ್ತೇನೆ’ ಅಂತಂದೆ. ಪತ್ರಕರ್ತರು ನಕ್ಕು ತೇಲಿಸಿ ಏನೇನೊ ಮಾತಾಡಿ ಫೋನಿಟ್ಟರು. ನನಗೇನೂ ಬೇಸರ ಅನಿಸಲಿಲ್ಲ. ರಂಗಮಂದಿರಗಳ ಬಾಡಿಗೆ ದರ ಹೆಚ್ಚಿಸಿರುವುದರ ಬಗ್ಗೆ ಡಿಪ್ಲಮಾಟಿಕ್ ಆಗಿ ಮಾತಾಡುವ ಅಪಾಯದಿಂದೇನೊ ತಪ್ಪಿಸಿಕೊಂಡೆ. ಅಷ್ಟರ ಮಟ್ಟಿಗೆ ನಾನು ತಟಸ್ಥ. ಆದರೆ ಹೀಗೆ ಮಾತು ನಿಲ್ಲಿಸಿದರೆ ಅನ್ಯರು ಮಿಡುಕಲು ಆರಂಭಿಸುತ್ತಾರೆ. ಅದನ್ನು ಕೇಳಿಸಿಕೊಳ್ಳದ ವಿದ್ಯೆಯೊಂದನ್ನ ಸಿದ್ಧಿ ಮಾಡಿಕೊಳ್ಳಬೇಕು. ಅಷ್ಟಾದರೆ ನಿರುಮ್ಮಳವಾಗಬಹುದು.

ಯೋಗಿಯ ಸುಂದರ ಪ್ರಪಂಚ ಮತ್ತು ಧ್ಯಾನಸ್ಥ ಸ್ಥಿತಿಯ ಬಗೆಗೆ ನಂಬಿಕೆ ಹುಟ್ಟದವರು ಹಾಗೂ ಜ್ಞಾನ ಉದಯಿಸಿಕೊಂಡ ದಾರಿಹೋಕನೂ ಆಗಲು ಇಚ್ಛಿಸದವರು ನನ್ನ ರೀತಿಯಲ್ಲಿ ತಟಸ್ಥರಾಗುತ್ತಾರೆ. ಜ್ಞಾನೋದಯ ಬೇರೆ, ತಾಟಸ್ಥ್ಯ ಬೇರೆ.

ಈ ನಿರ್ಲಿಪ್ತ ಭಾವದ ಸಿದ್ದಿಯಲ್ಲಿ ನಾನು ತೊಡಗಿಕೊಳ್ಳಲು ಕಸರತ್ತು ನಡೆಸುತ್ತಿದ್ದ ವೇಳೆ ಹಿರಿಯ ರಂಗಕರ್ಮಿ ಬಸಲಿಂಗಯ್ಯ ಹಿರೇಮಠ ಅವರು ತಮ್ಮ ರಂಗಪಯಣ ಮುಗಿಸಿರುವ ಸುದ್ದಿ ಬಂದಿದೆ. ಬಿ.ವಿ. ಕಾರಂತರ ಜೊತೆಗೂಡಿ ಸಂಗೀತ ಸಂಯೋಜನೆಯಲ್ಲಿ ತೊಡಗಿಸಿಕೊಂಡಿದ್ದವರು ಎಂದು ಕೇಳಿದ್ದ ನೆನಪು. ಜನಪದ ಅವರ ಇಷ್ಟದ ಕ್ಷೇತ್ರ. ಹಾಡಲಿಕ್ಕೆ ನಿಂತರೆ ಅವರದೇ ಛಾಪು ಮತ್ತು ಖದರು. ಹನ್ನೆರಡು ಗಂಟೆಗಳ ಶ್ರೀಕೃಷ್ಣ ಪಾರಿಜಾತ ನಾಟಕವನ್ನ ಮೂರು ಗಂಟೆಗೆ ಇಳಿಸಿ ವಿದೇಶಗಳಲ್ಲಿ ಅದನ್ನು ಪ್ರದರ್ಶಿಸಿ ಹೆಗ್ಗಳಿಕೆ ಗಳಿಸಿದವರು. ಗೆಳೆಯರ ಬಳಿ ಇವರ ಬಗ್ಗೆ ಮಾತಾಡುತ್ತಿದ್ದಾಗ ‘ಹುಲಿಯೂ ಹುಟ್ಟಿತ್ತಾ ಕಿತ್ತೂರ ನಾಡಾಗ..’ ಹಾಡು ಕೇಳಬೇಕು ನೀವು…’ ಅಂದರು.

ಅವರ ನಿರ್ಗಮನದ ಸುದ್ದಿ ಓದಿ ಮುಗಿಸುವಷ್ಟರಲ್ಲಿ ಮತ್ತೊಬ್ಬರು ಹಿರಿಯ ರಂಗಕರ್ಮಿ ಎಂ. ಶ್ಯಾಮರಾಯ ಆಚಾರ್ಯ ಮಡಂತ್ಯಾರು ಅವರೂ ನಿರ್ಗಮಿಸಿರುವುದು ತಿಳಿಯಿತು. ವೃತ್ತಿಯಲ್ಲಿ ಅವರು ಕಾಷ್ಠ ಶಿಲ್ಪಿ. ಆದರೆ ನಾಟಕವನ್ನು ಹವ್ಯಾಸವಾಗಿ ಸ್ವೀಕರಿಸಿ ತುಳು ಮತ್ತು ಕನ್ನಡ ನಾಟಕಗಳಲ್ಲಿ ಅಭಿನಯಿಸಿದ್ದರು. ತುಳು ಕಾಮಿಡಿ ನಾಟಕಗಳು ಅದ್ಭುತವಾಗಿರುತ್ತದೆ ಎಂದು ಆ ರಂಗದ ಬಗ್ಗೆ ಹೆಚ್ಚು ಕೆದುಕುತ್ತಿದ್ದ ವೇಳೆ ಮತ್ತೆಮತ್ತೆ ಕೇಳಿ ಬಂದಿದ್ದ ಹೆಸರು ಶ್ಯಾಮರಾಯರದು. ಅವರ ರಚನೆಯ ನಾಟಕಗಳು ಹಲವು. ಬೆಚ್ಚನೆತ್ತರ್, ಉಂಗಿಲ ಸಾಕ್ಷಿ, ಪೆಟ್ಟಾಯಿ ಪಿಲಿ, ಬರುವುದ ಬಿಲೆ, ಪೊರ್ಲು ನಾಲಿಗ್ ಉರ್ಲು, ಉಂದು ಮಾತಾ ದಾಯೆ, ಎನ್ನಲೆಕ್ಕ ಆವಡೆ..? ನೂರಾರು ಪ್ರದರ್ಶನಗಳನ್ನು ಕಂಡಿದ್ದವು.

(ಚಂದ್ರಶೇಖರ ಪಾಟೀಲ)

ಎಷ್ಟೆಲ್ಲ ಕೊಡುಗೆ ಇದೆ ಇವರದು ಎಂದುಕೊಳ್ಳುವಷ್ಟರಲ್ಲೇ ಚಂಪಾ ಅವರ ನಿರ್ಗಮನದ ಸುದ್ದಿ ಹರಿದಾಡಲು ಆರಂಭಿಸಿತು. ಅವರ ಬರವಣಿಗೆಯ ತೀಕ್ಷ್ಣತೆ, ಹೋರಾಟದ ಗುಣ, ಕವಿ ಹೃದಯ- ಈ ಎಲ್ಲದರ ಆಚೆಗೆ ಅವರು ನನಗೆ ನಾಟಕಕಾರರಾಗಿ ತುಂಬ ಇಷ್ಟ. ಅವರ ‘ಅಪ್ಪ’ ನಾಟಕ ಓದಿದಾಗ ಅದು ನನ್ನಲ್ಲಿ ತರಂಗಗಳನ್ನು ಎಬ್ಬಿಸಿ ಕಲಕಿತ್ತು. ಅವರ ನಾಟಕಗಳನ್ನು ಹಾಗೆ ಸುಲಭಕ್ಕೆ ನಿರ್ಣಯಿಸಿಕೊಳ್ಳಲು ಆಗುತ್ತಿರಲಿಲ್ಲ. ಅಂಥದ್ದರಲ್ಲಿ ನಾನು ನ್ಯಾಷನಲ್ ಕಾಲೇಜಿನಲ್ಲಿ ಮೇಷ್ಟ್ರಾಗಿ ಪಾಠ ಹೇಳುವುದರ ಜೊತೆಗೆ ಅಂತರ ತರಗತಿ ರಂಗಸ್ಪರ್ಧೆಗಳನ್ನು ಆಯೋಜಿಸುತ್ತಿದ್ದಾಗ ಪಿಯು ಹುಡುಗರು ವರ್ಷವರ್ಷವೂ ಚಂಪಾ ಅವರ ನಾಟಕಗಳನ್ನ ಪ್ರದರ್ಶಿಸಲು ಮುಂದಾಗುತ್ತಿದ್ದರು. ಕುಂಟಕುಂಟ ಕುರವತ್ತಿ, ಗೋಕರ್ಣದ ಗೌಡಶಾನಿ ನಾಟಕಗಳು ಇರುತ್ತಿದ್ದವು. ಆ ಹುಡುಗರಿಗೆ ಆ ವಯಸ್ಸಿಗೆ ಅಸಂಗತ ನಾಟಕಗಳ ಬಗ್ಗೆ ತಿಳಿದಿರಲಿಲ್ಲ. ಅದರ ಪರಿಕಲ್ಪನೆಯೂ ಇರಲಿಲ್ಲ. ಅವರಿಗೆ ನಾಟಕದಲ್ಲಿ ಕಡಿಮೆ ಪಾತ್ರಗಳಿರಬೇಕಿತ್ತು ಅಷ್ಟೇ. ಈ ಕಾರಣಕ್ಕೆ ಅವರು ಆರಿಸಿಕೊಳ್ಳುತ್ತಿದ್ದದ್ದು ಚಂಪಾ ಅವರ ನಾಟಕಗಳನ್ನ. ‘ಅಲ್ರಯ್ಯಾ ‘ ಕುಂಟಕುಂಟ ಕುರುವತ್ತಿ’ ನಾಟಕ ಏನು ಹೇಳ್ತಿದೆ ಹೇಳಿ ನೋಡುವ..?’ ಎಂದು ಪ್ರಶ್ನಿಸಿದರೆ ‘ಕಡಿಮೆ ಕ್ಯಾರೆಕ್ಟರ್‍ಗಳಿವೆ ಸರ್… ಸೆಲೆಕ್ಟ್ ಮಾಡಿಕೊಂಡ್ವಿ..’ ಅನ್ನುತ್ತಿದ್ದರು. ನಾನು ನಗುತ್ತಿದ್ದೆ. ಆ ತರಗತಿಯ ಮೇಷ್ಟ್ರೂ ಕೂಡ ‘ಸಾಕು ಸುಮ್ನಿರಿ.. ಕೂಡಾಕೊಂಡ್ರೆ ನಾಟಕ ಮಾಡ್ಸೋಕೆ ಆಗಲ್ಲ..’ ಅನ್ನುತ್ತಿದ್ದರು. ಇವರು ಕೂಡುಹಾಕಿಕೊಂಡು ನಾಟಕ ಮಾಡಿಸಲು ಕಷ್ಟ ಅಂತ ಚಂಪಾ ಅವರ ನಾಟಕಗಳನ್ನ ಆರಿಸಿಕೊಳ್ಳುತ್ತಿದ್ದದ್ದು ಅಚ್ಚರಿ ಮತ್ತು ಮಜ ತರಿಸುತ್ತಿತ್ತು. ನಾನು ನಗುತ್ತ ಸಕಲೆಂಟು ಕೆಲಸಗಳಲ್ಲಿ ಮುಳುಗಿಬಿಡುತ್ತಿದ್ದೆ.

ತೀರಿ ಹೋದ ಈ ಎಲ್ಲ ಹಿರಿಯರ ಕೊಡುಗೆಗಳನ್ನ ನೆನೆಯುತ್ತಿದ್ದೆ. ಇಂದಿನವರು ತಮ್ಮ ಬಗೆಗಿನ ಧ್ಯಾನ ಬಿಟ್ಟು ಇವರೆಲ್ಲ ಬಗ್ಗೆ ತಿಳಿಯುವ ಕಾಲ ನಿರ್ಮಾಣವಾಗುತ್ತದೆಯೇ ಎಂದು ಯೋಚಿಸುತ್ತಿದ್ದೆ. ಅದೇ ವೇಳೆ ಮಿತ್ರರಾದ ಮಹದೇವ ಹಡಪದ ಅವರು ತಮ್ಮ ವಾಟ್ಸಪ್ ಸ್ಟೇಟಸ್‌ನಲ್ಲಿ ಚಂಪಾ ಅವರ ಒಂದು ಪದ್ಯವನ್ನು ಹಂಚಿಕೊಂಡಿದ್ದರು. ಓದಿದಾಗ ಚೆಂದ ಅನಿಸಿತು.

ಸತ್ತವರು ಎಲ್ಲಿ ಹೋಗುತ್ತಾರೆ?
ಸತ್ತವರು ಎಲ್ಲೂ ಹೋಗುವುದಿಲ್ಲ..
ಇದ್ದವರ ನೆನಪಿನ ಗುದ್ದಿನಲ್ಲಿ
ಗುದ್ದಲಿಯಾಗುತ್ತಾರೆ.
ಅವರ ಶ್ವಾಸೋಚ್ಛಾಸದ ಹಳ್ಳಕೊಳ್ಳಗಳಲ್ಲಿ
ಹಾವಾಗಿ ಹರಿದಾಡುತ್ತಾರೆ.
ಅವರ ಆಕಾಶದ ತುಂಬ
ಹುಡಿಯಾಗಿ ಅಡರುತ್ತಾರೆ.
ಹಕ್ಕಿಯಾಗಿ ರೆಕ್ಕೆ ಬಿಚ್ಚುತ್ತಾರೆ.
ಚಿಕ್ಕೆಯಾಗಿ ಚಿಮುಕುತ್ತಾರೆ.

ಎಲ್ಲಿಯ ತನಕ?
ಇದ್ದವರು ಸಾಯುವ ತನಕ.

ಸತ್ತವರು ಎಲ್ಲಿ ಹೋಗುತ್ತಾರೆ?
ಸತ್ತವರು ಎಲ್ಲೂ ಹೋಗುವುದಿಲ್ಲ

– ಪದ್ಯ ಓದಿದ ಮೇಲೆ ನನ್ನಲ್ಲೊಂದು ಪ್ರಶ್ನೆ ಚಿಗಿಯಿತು. ಹೌದೇ ಇರುತ್ತಾರೆಯೇ? ಹಾಗೆ ಇರಲು ಅವರು ಮೊದಲು ತಿಳಿದಿರಬೇಕಲ್ಲ. ಹಾಗೆ ತಿಳಿಯಬೇಕಾದರೆ ತಮ್ಮ ಬಗೆಗೆ ಧ್ಯಾನ ಬಿಟ್ಟು ಉಳಿದವರ ಕೊಡುಗೆ ಬಗ್ಗೆ ತಿಳಿಯುವ ಮನಸ್ಥಿತಿ ನಿರ್ಮಾಣವಾಗಬೇಕಲ್ಲ. ಬೇಕಿದ್ದರೆ ಇಂದು ಹಲವರನ್ನು ಗಮನಿಸಿ.. ಅವರು ತಾವು…

ಬೇಡ ಬಿಡಿ… ಹೇಳಿ ಪ್ರಯೋಜನವಿಲ್ಲ…