‘ನೀವೇ ಸರಿ, ಅರವಿಂದರಾಯರೇ. ಮಕ್ಕಳನ್ನು ಬಹಳ ಚೆನ್ನಾಗಿ ಬೆಳೆಸಿದ್ದೀರಿ’ ಇನ್ನೂ ಅವರ ಮಾತು ಮುಗಿದಿಲ್ಲ. ಎಲ್ಲಿಂದ ಬಂತೋ ಒಂದು ದೊಡ್ಡ ಅಲೆ, ಅಲ್ಲಿ ಕೂತಿದ್ದವರನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿಬಿಟ್ಟಿತು. ಕಣ್ಣು ಮುಚ್ಚಿ ಬಿಡುವುದರಲ್ಲಿ ಎಲ್ಲ ಮರಳು, ಎಲ್ಲೆಲ್ಲೂ ನೀರು. ಜನರ ಕೂಗು, ಹಾಹಾಕಾರ. ಸುಕನ್ಯ ಕಣ್ಣು ಬಿಟ್ಟಾಗ ಹತ್ತಿರ ಯಾರೂ ಕಾಣುತ್ತಿಲ್ಲ. ‘ವಿನೂ, ವಿಶೂ’ ಜೋರಾಗಿ ಕೂಗುತ್ತಾ ಇಡೀ ಸಮುದ್ರದ ದಡದಲ್ಲಿ ಹುಚ್ಚು ಹಿಡಿದಂತೆ ಓಡುತ್ತಿದ್ದಾಳೆ. ದೂರದಲ್ಲಿ ಅರವಿಂದ ಕಾಣುತ್ತಾನೆ. ಆತನೂ ಕಂಗಾಲಾಗಿದ್ದಾನೆ. ಇಬ್ಬರೂ ಹುಡುಕಿದರೂ ಎಲ್ಲೆಲ್ಲೂ ವಿನಯ, ವಿಶೂರ ಪತ್ತೆಯಿಲ್ಲ.
ಗುರುಪ್ರಸಾದ್‌ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್”ನ ಐದನೆಯ ಕಂತು ನಿಮ್ಮ ಓದಿಗಾಗಿ

ವಿಶೂ, ಸುಪ್ರೀತ ಮನೆಗೆ ಬಂದಾಗ ರಾತ್ರಿ ಹತ್ತುಗಂಟೆಯಾಗಿತ್ತು. ಅವರಿಬ್ಬರೂ ಬರುತ್ತಿದ್ದುದನ್ನೇ ಕಾಯುತ್ತಿದ್ದವಳಂತೆ ರತ್ನಾ ಸುಪ್ರೀತನ ಸೂಟ್‌ಕೇಸನ್ನು ಆತನ ಕೈಯಿಂದ ಇಸಕೊಂಡು ಸೀದಾ ಹೋಗಿ ಬೇಸ್‌ಮೆಂಟಿನ ರೂಮಿನಲ್ಲಿಟ್ಟಳು. ಸುಪ್ರೀತನ ಮುಖದಲ್ಲಿ ಅಚ್ಚರಿ ಕಂಡರೂ ಆತ ಇದಕ್ಕೆ ಯಾವ ವಿರೋಧವನ್ನೂ ವ್ಯಕ್ತಪಡಿಸಲಿಲ್ಲ. ಸುಕನ್ಯಾ ಎಣಿಸಿದ್ದಂತೆ ಸುಪ್ರೀತ ಸಿಂಗ್ ಗಡ್ಡ, ಮೀಸೆ, ಟರ್ಬನ್ ಇರುವ ಸರದಾರಜಿಯಾಗಿರಲಿಲ್ಲ. ಮುಖವಿರಲಿ, ಅರೆತೋಳಿನ ಶರ್ಟಿನ ಹೊರಗೆ ಕಾಣುವ ಮೊಣಕೈ, ಮುಂಗೈ, ಬೆರಳುಗಳು ಎಲ್ಲವೂ ನುಣುಪಾಗಿ ಮಿನುಗುತ್ತಿದ್ದವು. ತಲೆಗೂದಲನ್ನು ಜೆಲ್ ಹಚ್ಚಿ ಮೋಹಾಕಿನಂತೆ ಎತ್ತಿದ್ದ. ಬಿಳಿಯ ಅಂಗಿ ಮತ್ತು ಹಾಕಿದ್ದ ಜೀನ್ಸ್ ಎರಡೂ ಅಗತ್ಯಕ್ಕಿಂತ ತೀರಾ ಬಿಗಿಯಾಗಿದೆ ಎನಿಸಿತು. ಅಂಗಿಯ ಹೊರಗೆ ಕಾಣುವ ತೋಳಿನ ಮೇಲೆ ದೊಡ್ಡದಾದ ಹಚ್ಚೆಯಿತ್ತು. ಚುಚ್ಚಿಸಿಕೊಂಡಿದ್ದ ಮಾಟವಾದ ಎಡಹುಬ್ಬು ಮತ್ತು ಎಡಗಿವಿಗಳಲ್ಲಿ ಒಂದೊಂದು ಸಣ್ಣ ರಿಂಗು. ಅವನ ವೇಶಭೂಷಣವನ್ನು ನೋಡಿ ಸುಕನ್ಯಳಿಗೆ ಅಲ್ಲಿ ಮೆರೆಯುವುದಕ್ಕಿಂತ ಹೆಚ್ಚಾಗಿ ದಂಗೆಯಿದೆ, ಯಾವುದೋ ಪ್ರತಿಭಟನೆಯಿದೆ ಅನ್ನಿಸಿಬಿಟ್ಟಿತು. ‘ಹಲೋ ಆಂಟೀ’ ಎಂದು ಹಸ್ತ ಲಾಘವಿಸಲು ಕೈಮುಂದೆ ಮಾಡಿದಾಗ ಬೆರಳಿನ ಉಗುರುಗಳೂ ಕೆತ್ತಿದಂತೆ ಮಿರಿಮಿರಿ ಮಿಂಚುತ್ತಿದ್ದುದನ್ನು ಗಮನಿಸಿದಳು. ಹಿಂಜರಿಯುತ್ತಲೇ ಕೈಕುಲುಕಿ ಪಕ್ಕದಲ್ಲಿದ್ದ ಅರವಿಂದನ ಕಿವಿಯಲ್ಲಿ ‘ಪೆಡಿಕ್ಯುರ್ ಮಾಡಿಸಿಕೊಂಡಿದ್ದಾನ್ರೀ’ ಎಂದು ‘ಶ್’ ಎನಿಸಿಕೊಂಡು ಸುಮ್ಮನಾದಳು.

ವಿಶೂ ಬಂದಾಗನಿಂದ ಒಂದೇ ಸಮನೆ ಮಾತಾಡುತ್ತಲೇ ಇದ್ದ. ‘ಅಮ್ಮ, ನಾವು ಈಗ ತಾನೇ ಒಂದು ಪ್ರಾಜೆಕ್ಟ್ ಮಾಡಿ ಮುಗಿಸಿದವು. ‘ವೇಕ್ ಅಪ್’ ಅಂತ ಒಂದು ಡಾಕ್ಯುಮೆಂಟರಿ. ಸಿಖ್ಖರ ಮೇಲೆ ಇದುವರೆಗೂ ಆಗಿರುವ ಹಲ್ಲೆ ಈ ಚಿತ್ರದ ವಸ್ತು. ಇಂದಿರಾಗಾಂಧಿ ಹತ್ಯೆ ಆದ ಮೇಲೆ ಆದ ಡೆಲ್ಲಿ ಗಲಾಟೆಯ ಕ್ಲಿಪಿಂಗ್‌ಗಳನ್ನೂ ಇದರಲ್ಲಿ ಬಳಸಿಕೊಂಡಿದ್ದೇವೆ. ಆ ವಿಡಿಯೋ ಕ್ಲಿಪ್‌ಗಳ ಒಡೆಯರ ಅನುಮತಿಗೆ ಅಂತ ನಾವು ಹೊಡೆದಾಡಿದ್ದು ಅಷ್ಟಿಷ್ಟಲ್ಲ. ಸುಪ್ರೀತನದೇ ಸ್ಕ್ರಿಪ್ಟಿಂಗು, ಎಡಿಟಿಂಗು ಎಲ್ಲ. ನಾನು ನಿನಗೆ ಸುಪ್ರೀತನನ್ನು ಸರಿಯಾಗಿ ಪರಿಚಯ ಮಾಡಿಸಿಕೊಡಲೇ ಇಲ್ಲ ಅಲ್ಲವಾ? ಇವನಪ್ಪ ಅಮ್ಮ ಎಲ್ಲ ಸಿಡ್ನೀಲಿರ್ತಾರೆ. ಅಲ್ಲಿ ಇವರದ್ದು ಒಂದು ಇಂಡಿಯನ್ ರೆಸ್ಟೊರೆಂಟಿದೆ. ಆದರೆ, ಈತ ನನ್ನ ಹಾಗೆ ಸಿನೆಮಾ ಮಾಡೋದು ಹೇಗೆ ಅಂತ ಕಲಿಯೋಕೆ ನ್ಯೂಯಾರ್ಕಿಗೆ ಬಂದಿದಾನೆ. ಸುಪ್ರೀತ್, ನೀನೇ ಹೇಳು’ ಎಂದು ಅವನ ಪಕ್ಕ ಕೂತ.

‘ನಾನೇನು ಹೇಳೋದು, ಎಲ್ಲ ನೀನೇ ಹೇಳಿಬಿಟ್ಟಿದ್ದೀಯಲ್ಲ. ಆಂಟಿ, ಆಸ್ಟ್ರೇಲಿಯಾದಲ್ಲಿ ನಮ್ಮದು ಮೂರನೇ ಪೀಳಿಗೆ. ನಮ್ಮಜ್ಜ 1940ರಲ್ಲಿಯೇ ಚಂಡೀಗಢದಿಂದ ಅಲ್ಲಿಗೆ ಹೋಗಿದ್ದರಂತೆ. ನಮ್ಮಪ್ಪ ಹುಟ್ಟಿದ್ದು ಅಲ್ಲಿಯೇ. ಅಮ್ಮ ಆಸ್ಟ್ರೇಲಿಯನ್, ಹೆಸರು ಲಿಂಡಾ ಅಂತ. ಇಬ್ಬರೂ ಸೇರಿ ಒಂದು ರೆಸ್ಟೋರೆಂಟು ನಡೆಸುತ್ತಾರೆ. ನನಗೆ ಮೂರುಜನ ಅಕ್ಕಂದಿರಿದ್ದಾರೆ. ಇಬ್ಬರು ಇಂಗ್ಲೆಂಡಲ್ಲಿದ್ದಾರೆ. ಒಬ್ಬಳು ಸ್ಯಾನ್ಫ್ರಾನ್ಸಿಸ್ಕೋದಲ್ಲಿ. ನಾನು ನ್ಯೂಯಾರ್ಕಿಗೆ ಬಂದು ಎರಡು ವರ್ಷ ಆಯಿತು. ಕಾಲೇಜು ಮುಗಿಸೋದರೊಳಗೆ ಈ ಪ್ರಾಜೆಕ್ಟ್ ಮುಗಿಸಬೇಕು ಅಂತ ಅಂದುಕೊಂಡಿದ್ದೆ. ಎಲ್ಲ ಮುಗೀತಾ ಇದೆ. ಮೇನ್‌ಸ್ಟ್ರೀಮ್ ಸಿನೆಮಾ ಮಾಡೋಕೆ ಬಜೆಟ್ ಇಲ್ಲ. ನೋಡೋಣ. ಎಲ್ಲ ಏನಾಗುತ್ತೆ ಅಂತ. ವಿಶೂ ನನಗೆ ಈ ಪ್ರಾಜೆಕ್ಟಲ್ಲಿ ಬಹಳ ಸಹಾಯ ಮಾಡಿದ. ಎಲ್ಲ ರೀತಿಯಲ್ಲೂ. ಇವನಿಲ್ಲದೇ ಇದ್ದರೆ ನನಗೆ ಈ ಕೆಲಸ ಮಾಡಿ ಮುಗಿಸೋಕೆ ಆಗುತ್ತ ಇರಲಿಲ್ಲ. ಥ್ಯಾಂಕ್ಸ್ ಡಾರ್ಲಿಂಗ್’ ಎಂದು ಮುಷ್ಟಾಮುಷ್ಟಿ ಹೈಫೈ ಮಾಡಿದರು.

ಸುಕನ್ಯಾ ಯಾವ ವಿಷಯಕ್ಕೆ ಹತಾಶಳಾಗಬೇಕು ಎಂದು ಗೊತ್ತಾಗದೇ ‘ನಿಮ್ಮಕ್ಕಂದಿರಿಗೆ ಮದುವೆಯಾಗಿದೆಯಾ?’ ಎಂದು ಕೇಳಿಬಿಟ್ಟಳು.
ಸುಕನ್ಯಾಳ ಮೊದಲ ಪ್ರಶ್ನೆಯೇ ತನ್ನಕ್ಕಂದಿರ ಮದುವೆಯಿಂದ ಶುರುವಾಗಿದ್ದನ್ನು ನೋಡಿ, ಸುಪ್ರೀತನಿಗೆ ಆಶ್ಚರ್ಯವಾದರೂ ‘ಆಗಿದೆ, ಆಂಟಿ. ನೋಡಿ, ಫೋಟೋಗಳನ್ನು ತೋರಿಸುತ್ತೀನಿ’ ಎಂದು ಹೇಳಿ ತನ್ನ ಫೋನಿನಲ್ಲಿದ್ದ ಫೋಟೋಗಳನ್ನು ತೋರಿಸಲು ಹೋದ. ‘ಇರಲಿ, ಇರಲಿ. ಆಮೇಲೆ ನೋಡೋಣ’ ಎಂದು ಸುಮ್ಮನಾದಳು. ಆಕೆಗೂ ಏಕ್‌ದಂ ಹೀಗೆ ಗುರುತಿರದ ಕುಟುಂಬದ ಚಿತ್ರಗಳನ್ನು ನೋಡುವ ಉಮೇದಿರಲಿಲ್ಲ.

ಸುಪ್ರೀತನ ಅಪ್ಪನೇ ಆ ಕಾಲದಲ್ಲೇ ಲಿಂಡಾ ಅನ್ನುವವಳನ್ನು ಮದುವೆ ಮಾಡಿಕೊಂಡಿದ್ದಾನೆ. ಈತ ಮಾತಾಡುತ್ತಿದ್ದಾಗ, ಕೈ ಬಾಯಿ ತಿರುಗಿಸುತ್ತಾನೆ, ಬರೇ ಮೂಗಿನಲ್ಲಿ ಮಾತಾಡುತ್ತಾನೆ, ಮೈಕೈ ಎಲ್ಲಾ ನುಣ್ಣಗೆ ಹುಡುಗಿಯರ ತರ ಮಾಡಿಕೊಂಡಿದ್ದಾನೆ. ಹುಬ್ಬಿಗೆ, ಕಿವಿಗೆ ಹರಳು.

ಸುಕನ್ಯಾ ಹೆಚ್ಚು ಮಾತಾಡಲಿಲ್ಲ. ಸುಪ್ರೀತ, ವಿಶೂ ಇಬ್ಬರೂ ಮಾತಾಡುತ್ತಲೇ ಇದ್ದರು. ಕೇಳಿಸಿಕೊಂಡು ಇಬ್ಬರಿಗೂ ಊಟ ಬಡಿಸಿದಳು. ‘ವಾವ್ ಆಂಟಿ, ಈ ಪಾಸ್ತಾ ತುಂಬಾ ಚೆನ್ನಾಗಿದೆ. ಈ ಸಾಸನ್ನು ನೀವೇ ಮಾಡಿದ್ದಾ, ಅಥವಾ ಅಂಗಡಿಯಿಂದ ತಂದಿದ್ದಾ. ವಿಶೂನೂ ತುಂಬಾ ಚೆನ್ನಾಗಿ ಮಾಡುತ್ತಾನೆ.’ ಸುಪ್ರೀತ ಮಾತಾಡುತ್ತಲೇ ಊಟ ಮುಗಿಸಿದ.

ಅಡುಗೆ ಮನೆ ಕೆಲಸ ಮುಗಿಯುತ್ತಾ ಬಂದಿತ್ತು. ಅಲೀಶ ಮಲಗಲಿಕ್ಕೆಂದು ಮೇಲಿನ ಬೆಡ್‌ರೂಮಿಗೆ ಹೋಗಲು ಸಿದ್ಧಳಾಗುತ್ತಿದ್ದಾಗ ಸುಕನ್ಯಾಳಿಗೆ ತಡಕೊಳ್ಳಲಾಗದೇ ಆಕೆಯನ್ನು ಅಡುಗೆ ಮನೆಗೆ ಕರೆದು ‘ನಿನಗೇನನ್ನಿಸುತ್ತೆ, ವಿಶೂನ ಸ್ನೇಹಿತನನ್ನು ನೋಡಿದರೆ?’ ಎಂದಳು.

ಏಕ್‌ದಂ ಬಂದ ಈ ಪ್ರಶ್ನೆಗೆ ಯಾವ ರೀತಿ ಉತ್ತರಿಸಬೇಕು ಎಂದು ಗೊತ್ತಾಗದೇ ಅಲಿಶಾ ಪ್ರಶ್ನಾರ್ಥಕವಾಗಿ ಮತ್ತೆ ಸುಕನ್ಯಾಳ ಮುಖ ನೋಡಿದಳು.
‘ಐ ಮೆಂಟ್ ದ ಫ್ಲಂಬೊಯೆನ್ಸ್. ಇಡೀ ಜಗತ್ತಿಗೆ ಗೊತ್ತಾಗಬೇಕಾ ಈತ ಜಿ-ಏ-ವೈ ಅಂತ. ನಂ ವಿಶೂನ ನೋಡು. ಎಷ್ಟು ಡೀಸೆಂಟಾಗಿದಾನೆ’ ಎಂದಳು. ಪದವನ್ನು ಬಿಡಿಸಿದರೆ ಸುತ್ತಲಿನವರಿಗೆ ಅರ್ಥವಾಗುವುದಿಲ್ಲ ಎಂಬುವಂತೆ.

ಅಲಿಶಾಗೆ ನಗು ಬಂದರೂ ‘ಮಾ, ಕೆಲವೊಮ್ಮೆ ಇಂಥ ಪ್ರಶ್ನೆಗೆ ಹೇಗೆ ಉತ್ತರ ಕೊಡಬೇಕು ಅಂತ ಗೊತ್ತಾಗೋದಿಲ್ಲಮ್ಮ. ಅವನಿಗೆ ಹೇಗೆ ಸರಿ ಅನ್ನಿಸುತ್ತೋ ಹಾಗೆ ಆತ ಬಟ್ಟೆ ಹಾಕ್ಕೊತಾನಮ್ಮ. ಅದರಲ್ಲಿ ಏನು ತಪ್ಪು. ಈಗ ನಾವು ಹೆಂಗಸರು ಬೇರೆ ಬೇರೆ ತರ ಹಾಕೊಳ್ಳಲ್ವಾ’ ಎಂದಳು, ಇದು ಯಾವ ದೊಡ್ಡ ವಿಷಯವೇ ಅಲ್ಲವೆಂಬಂತೆ.

‘ಆದರೂ ನಾವು ಯಾವ ತರ ಬಟ್ಟೆ ಹಾಕ್ಕೊಂಡರೂ ಅದಕ್ಕೊಂದು ಹೆಣ್ಣುತನ ಇರುತ್ತಲ್ವೇನೇ? ಅದಕ್ಕೇ ತಾನೇ ಬಟ್ಟೆಗೆ ಒಂದು ಘನತೆ ಬರೋದು?’
‘ಮಾ, ಇದು ಅಮೆರಿಕಾ. ಯಾರು ಹೇಗೆ ಬೇಕಾದರೂ ಡ್ರೆಸ್ ಮಾಡಿಕೋಬಹುದು.’

‘ಅಲಿಶಾ, ನನಗೆ ಇವೆಲ್ಲ ಗೊತ್ತಾಗೊದಿಲ್ಲ ಅಂತಾನೇ ತಿಳಕೊ. ನಾನು ಹಳೇ ಕಾಲದವಳು, ಸರಿ. ನನಗೆ ನಿಮ್ಮ ಪೀಳಿಗೆ ಬಗ್ಗೆ ಗೊತ್ತಿರೋದು, ಟೀವಿ ಸೀರಿಯಲ್ ನೋಡಿ, ಹಾಲಿವುಡ್ ಸಿನೆಮಾ ನೋಡಿ. ಸಿನೆಮಾದಲ್ಲಿ ಸ್ಟೀರಿಯೋಟೈಪ್ ಮಾಡ್ತಾರೆ ಅಂತ ಡೈರೆಕ್ಟರುಗಳನ್ನು ನಾವೇ ಬಯ್ತೀವಿ. ಇಲ್ಲಿ ಸುಪ್ರೀತನ್ನ ನೋಡಿದರೆ ಅಂಥ ಸಿನೆಮಾದಿಂದ ನೇರವಾಗಿ ಎದ್ದುಬಂದ ಹಾಗೆ ಕಾಣ್ತಾನಲ್ಲೇ. ವಿಶೂ ಹಾಗೆ ಇರೋಕ್ಕೇನು?’

‘ಮಾ, ನಿಮಗೆ ಹೇಗೆ ಹೇಳಲಿ, ನಾನು? ನಿಮಗೆ ಬುಚ್ ಮತ್ತೆ ಲಿಪ್‌ಸ್ಟಿಕ್ ಅನ್ನೋ ಪದಗಳ ಅರ್ಥ ಗೊತ್ತಾ? ಈ ಸಂಬಂಧಗಳಲ್ಲಿ?’
ಅವಳಿಗೆ ಆ ಪದಗಳ ಅರ್ಥ ಗೊತ್ತಿರದಿದ್ದರೂ ಗೊತ್ತಾಗುವುದು ಬೇಕಿಲ್ಲ ಅನ್ನಿಸಿತು ‘ಅಮ್ಮಾ, ಮಾರಾಯಿತಿ, ದಯವಿಟ್ಟು ನನಗೆ ಹೇಳಬೇಡಮ್ಮ. ನನಗೆ ಗೊತ್ತಾಗೋದೂ ಬೇಡ. ನಿಮಗೆ ಹೇಗೆ ಬೇಕೋ ಹಾಗೇ ಇರಿ. ನಾ ಮಲಗ್ತೀನಿ. ಬೆಳಿಗ್ಗೆ ಬೇಗ ಏಳಬೇಕು?’ ಎಂದು ಅಡುಗೆಮನೆ ದೀಪ ಆರಿಸಿ ಸೀದಾ ಬೆಡ್‌ರೂಮಿಗೆ ಬಂದು ಮಲಗಿಬಿಟ್ಟಳು. ಅರವಿಂದ ಯಾವಾಗಲೋ ಮಲಗಿಯಾಗಿತ್ತು.

*****

ಫ್ಲಾರಿಡಾ ಮಾಧ್ವ ಸಂಘದವರು ಮಯಾಮಿ ಬೀಚಿನಲ್ಲಿ ರಾಯರ ಆರಾಧನೆ ಮಾಡುತ್ತಾ ಇದ್ದಾರೆ. ಬೀಚಿನ ಒಂದು ಭಾಗವನ್ನು ಬಿಡಿಸಿಕೊಂಡಿದ್ದಾರೆ. ಆ ಕಡೆ, ಈ ಕಡೆ ರಿಸಾರ್ಟಿನ ಬೀಚಿನಲ್ಲಿರುವವರು ಕಣ್ಣಿಗೆ ಬೀಳಬಾರದು ಎಂದು ಎಲ್ಲ ಕಡೆ ಶಾಮಿಯಾನ ಹಾಕಲಾಗಿದೆ. ಗಂಡಸರೆಲ್ಲರೂ ಬಲವಾಗಿ ಮುದ್ರೆ ಹಾಕಿ ಮರಳ ಮೇಲೆ ಹಾಕಿದ್ದ ಶಾಮಿಯಾನದ ನೆರಳಿನಲ್ಲಿ ಊಟಕ್ಕೆ ಕೂತಿದ್ದಾರೆ. ಅಂದು ಮಧ್ಯಾರಾಧನೆ. ಎಲ್ಲ ಕಡೆ ಸಂಭ್ರಮ. ನ್ಯೂಜರ್ಸಿಯ ಮಠದಿಂದ ಸ್ವಾಮಿಗಳು ಬಂದು ನಿಂತು ಎಲ್ಲವನ್ನೂ ನಡೆಸಿಕೊಡುತ್ತಿದ್ದಾರೆ. ಮರಳಿನ ಮಧ್ಯೆ ಸುಂದರ ಸಮುದ್ರದ ದಡದಲ್ಲಿ ಬೃಂದಾವನ ಅಲಂಕೃತವಾಗಿ ನಿಂತಿದೆ. ಅರವಿಂದ, ಸುಕನ್ಯಾ ಇಬ್ಬರೂ ವಿನಯ, ವಿಶೂನ ಜತೆ ಮುಂದೆ ಕೂತಿದ್ದಾರೆ. ಮಕ್ಕಳಿಬ್ಬರೂ ಜೋರಾಗಿ ಎಲ್ಲರ ಜತೆ ರಾಘವೇಂದ್ರ ಅಷ್ಟೋತ್ತರ ಹೇಳುತ್ತಿದ್ದಾರೆ. ಸುಕನ್ಯಾ ಅಭಿಮಾನದಿಂದ ಮಕ್ಕಳನ್ನು ನೋಡುತ್ತಿದ್ದಾಳೆ. ಪಕ್ಕದಲ್ಲಿದ್ದ ಗೆಳತಿ ವೈಷ್ಣವಿಯ ಮಗಳು ಪ್ರಾರ್ಥನಾ ಕೂಡ ರೇಷ್ಮೆ ಲಂಗ ಉಟ್ಟು, ಎರಡು ಜಡೆ ಕಟ್ಟಿ ಅಮ್ಮ ಬೇಡವೆಂದರೂ ‘ಕೋಕಾಕೋಲ’ ಅನ್ನು ಕುಡಿಯುತ್ತಾ ಕೂತಿದ್ದಾಳೆ. ಯಾರೋ ಕೆಂಪು ಮಡಿ ಉಟ್ಟವರು ಬಂದು ‘ಏ ಹುಡುಗಿ, ರಾಯರ ಆರಾಧನೆಯಲ್ಲಿ ಕೋಕಕೋಲ ಕುಡೀತೀಯ. ಹೋಗಿ ಎಸೆದು ಬಾ’ ಎಂದು ಜೋರು ಮಾಡುತ್ತಾರೆ. ಹಾಗೆಯೇ ‘ಆ ಹುಡುಗರನ್ನು ನೋಡು. ಎಷ್ಟು ಸ್ಪಷ್ಟವಾಗಿ ಮಂತ್ರ ಹೇಳುತ್ತಿದ್ದಾರೆ. ನೀವೇ ಸರಿ, ಅರವಿಂದರಾಯರೇ. ಮಕ್ಕಳನ್ನು ಬಹಳ ಚೆನ್ನಾಗಿ ಬೆಳೆಸಿದ್ದೀರಿ’ ಇನ್ನೂ ಅವರ ಮಾತು ಮುಗಿದಿಲ್ಲ. ಎಲ್ಲಿಂದ ಬಂತೋ ಒಂದು ದೊಡ್ಡ ಅಲೆ, ಅಲ್ಲಿ ಕೂತಿದ್ದವರನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿಬಿಟ್ಟಿತು. ಕಣ್ಣು ಮುಚ್ಚಿ ಬಿಡುವುದರಲ್ಲಿ ಎಲ್ಲ ಮರಳು, ಎಲ್ಲೆಲ್ಲೂ ನೀರು. ಜನರ ಕೂಗು, ಹಾಹಾಕಾರ. ಸುಕನ್ಯ ಕಣ್ಣು ಬಿಟ್ಟಾಗ ಹತ್ತಿರ ಯಾರೂ ಕಾಣುತ್ತಿಲ್ಲ. ‘ವಿನೂ, ವಿಶೂ’ ಜೋರಾಗಿ ಕೂಗುತ್ತಾ ಇಡೀ ಸಮುದ್ರದ ದಡದಲ್ಲಿ ಹುಚ್ಚು ಹಿಡಿದಂತೆ ಓಡುತ್ತಿದ್ದಾಳೆ. ದೂರದಲ್ಲಿ ಅರವಿಂದ ಕಾಣುತ್ತಾನೆ. ಆತನೂ ಕಂಗಾಲಾಗಿದ್ದಾನೆ. ಇಬ್ಬರೂ ಹುಡುಕಿದರೂ ಎಲ್ಲೆಲ್ಲೂ ವಿನಯ, ವಿಶೂರ ಪತ್ತೆಯಿಲ್ಲ.

ನಡುರಾತ್ರಿಯಲ್ಲಿ ಧಡಕ್ಕನೆ ಎಚ್ಚರವಾಯಿತು. ಮೈಬೆವರುತ್ತಿತ್ತು. ಪಕ್ಕದಲ್ಲಿ ಅರವಿಂದ ಗಾಢವಾದ ನಿದ್ರೆಯಲ್ಲಿದ್ದಾನೆ. ಅಬ್ಬಾ, ಎಂಥ ಹುಚ್ಚು ಕನಸು. ಮಯಾಮಿ ಬೀಚಿನಲ್ಲಿ ಯಾರು ರಾಯರ ಆರಾಧನೆ ಮಾಡುತ್ತಾರೆ? ಫ್ಲಾರಿಡಾದವರು ಮಾಡಿದರೂ ಮಿನೆಸೊಟದಲ್ಲಿರುವ ತಾವು ಯಾಕೆ ಅಲ್ಲಿಗೆ ಹೋಗುತ್ತೇವೆ? ಅಸಲಿಗೆ, ಸುಕನ್ಯಾಗೆ ನೆನಪಿರುವ ಹಾಗೆ ಆಕೆ ಕಡೆಯ ಬಾರಿ ರಾಯರ ಆರಾಧನೆಗೆ ಹೋಗಿದ್ದು ಭದ್ರಾವತಿಯಲ್ಲಿ ಸುಮಾರು ಐವತ್ತು ವರ್ಷದ ಹಿಂದೆ. ಮಧ್ಯಾರಾಧನೆ ಅನ್ನುವ ಪದವೂ ಆಕೆಗೆ ಮರೆತುಹೋಗಿತ್ತು. ಅಲ್ಲಿ ವೈಷ್ಣವಿಯ ಮಗಳು ಯಾಕೆ ಕೋಕಕೋಲ ಕುಡಿಯುತ್ತಾ ಕೂತಿದ್ದಾಳೆ? ಅಲ್ಲಿ ವಿನೂ, ವಿಶೂಗೆ ಏನಾಯ್ತು? ಹುಚ್ಚು, ಹುಚ್ಚು ತನಗೆ. ಹಾಳಾದ ದೇಶ ಇದು. ಕನಸೂ ನೆಟ್ಟಗೆ ಬೀಳಲ್ಲ. ಅಡುಗೆ ಮನೆಗೆ ಹೋಗಿ ಒಂದು ಲೋಟ ನೀರು ಬಗ್ಗಿಸಿಕೊಂಡು ಕುಡಿದಳು. ವಿಶೂ ಅನ್ನು ಭಾರತಕ್ಕೆ ಕರಕೊಂಡು ಹೋಗಿ ಉಪನಯನ ಮಾಡಿಸಿಕೊಂಡು ಬಂದು ಗಾಯತ್ರೀ ಮಂತ್ರವನ್ನು ಹೇಳಬೇಕಾದರೆ ನಾಲಿಗೆ ಹೊರಳದೆ ಭೂರ್ಭೂರ್ಭೂರ್ ಎಂದು ಮುದ್ದಾಗಿ ಕಷ್ಟಪಟ್ಟದ್ದನ್ನು ನೋಡಿ ತಾನೇ ‘ಪರವಾಗಿಲ್ಲ ಕಣೋ. ಒಂದು ನಮಸ್ಕಾರ ಮಾಡಿ ಏಳು’ ಎಂದರೂ ಆತ ಕಷ್ಟಪಟ್ಟು ಇಂಟರ್ನೆಟ್ಟೆಲ್ಲ ಹುಡುಕಿ ಸಂಧ್ಯಾವಂದನೆಯ ಮಂತ್ರ ಕಲಿತದ್ದು ಇನ್ನೂ ನಿನ್ನೆ ಮೊನ್ನೆ ಎನ್ನುವ ಹಾಗೆ ನೆನಪಿದೆ. ವಿನಯನಿಗೂ ಚಿಕ್ಕಂದಿನಲ್ಲಿಯೇ ಉಪನಯನ ಮಾಡಿದ್ದರೂ ಆತ ಈಜುವಾಗ ಎಲ್ಲರೂ ನೋಡುತ್ತಾರೆ ಎಂದು ಜನಿವಾರವನ್ನು ತೆಗೆದು ಇಟ್ಟುಬಿಟ್ಟಿದ್ದ. ಆದರೆ, ವಿಶೂಗೆ ಮೊದಲಿನಿಂದಲೂ ಅಮ್ಮ ಮನೆಯಲ್ಲಿ ಮಾಡುತ್ತಿದ್ದ ಪೂಜೆ ಪುನಸ್ಕಾರದಲ್ಲಿ ಆಸಕ್ತಿ, ಚಿಕ್ಕಂದಿನಿಂದಲೇ ಕಾರಿನಲ್ಲಿ ಸ್ಕೂಲಿಗೆ ಬಿಡಲು ಅಮ್ಮ ಕರಕೊಂಡು ಹೋಗುತ್ತಿದ್ದಾಗ ಪೂರ ರಾಘವೇಂದ್ರ ಅಷ್ಟೋತ್ತರವನ್ನು ಹೇಳುತ್ತಿದ್ದ. ವಿನಯನಿಗಿಂತ ಚೆನ್ನಾಗಿ ಈಜುತ್ತಿದ್ದರೂ ಯಾವಾಗ ಈಜಲಿಕ್ಕೆ ಹೋದರೂ ಜನಿವಾರವನ್ನು ಉಡಿದಾರದಂತೆ ಈಜುವ ಚಡ್ಡಿಯೊಳಗೆ ಕಟ್ಟಿಕೊಂಡಿರುತ್ತಿದ್ದ. ಎರಡು ವರ್ಷದ ಹಿಂದೆ ಮನೆಯಲ್ಲಿ ಗಣೇಶನ ವ್ರತಕ್ಕೆ ಆತನಿಗೆ ಮನೆಗೆ ಬರಲಿಕ್ಕೆ ಪುರುಸೊತ್ತಾಗಲಿಲ್ಲ ಎಂದು ಇಡೀ ಪೂಜೆಯನ್ನು ನ್ಯೂಯಾರ್ಕಿನಿಂದಲೇ ಸ್ಕೈಪಿನಲ್ಲಿ ನೋಡಿದ್ದ. ಅವನ ವಾರಿಗೆಯ ಭಾರತೀಯ ಹುಡುಗರಿಗೂ ಇದು ಕೊಂಚ ವಿಚಿತ್ರ ಎನಿಸಿತ್ತು.

‘ನನಗೆ ನಿಮ್ಮ ಪೀಳಿಗೆ ಬಗ್ಗೆ ಗೊತ್ತಿರೋದು, ಟೀವಿ ಸೀರಿಯಲ್ ನೋಡಿ, ಹಾಲಿವುಡ್ ಸಿನೆಮಾ ನೋಡಿ. ಸಿನೆಮಾದಲ್ಲಿ ಸ್ಟೀರಿಯೋಟೈಪ್ ಮಾಡ್ತಾರೆ ಅಂತ ಡೈರೆಕ್ಟರುಗಳನ್ನು ನಾವೇ ಬಯ್ತೀವಿ. ಇಲ್ಲಿ ಸುಪ್ರೀತನ್ನ ನೋಡಿದರೆ ಅಂಥ ಸಿನೆಮಾದಿಂದ ನೇರವಾಗಿ ಎದ್ದುಬಂದ ಹಾಗೆ ಕಾಣ್ತಾನಲ್ಲೇ. ವಿಶೂ ಹಾಗೆ ಇರೋಕ್ಕೇನು?’

ವಿಶೂ ಇನ್ನೂ ಜನಿವಾರ ಹಾಕಿಕೊಳ್ಳುತ್ತಾನಾ? ಸುಪ್ರೀತನಿಗೆ ಏನು ಹೇಳುತ್ತಾನೆ ಆತ. ಸುಪ್ರೀತನಿಗೆ ಸ್ವಲ್ಪವಾದರೂ ಭಾರತದ ನಂಟಿದೆ. ಜನಿವಾರ ಅಂದರೆ ಏನು ಅಂಥ ಅರ್ಥವಾದರೂ ಆಗಬಹುದು.

ಯಾಕೋ ಆಕೆಗೆ ಹೋಗಿ ವಿಶೂ ಇನ್ನೂ ಜನಿವಾರ ಹಾಕಿಕೊಂಡಿದ್ದಾನೆಯೋ ಇಲ್ಲವೋ ನೋಡಬೇಕೆನಿಸಿತ್ತು. ತನಗೆ ಬಂದ ಆ ಗಳಿಗೆಯ ವಿಚಾರವನ್ನು ತಾನೇ ನಿರಾಕರಿಸುವ ಮೊದಲು ಹೋಗಿ ನೋಡಿಕೊಂಡು ಬಂದುಬಿಡೋಣವೆಂದು ಸೀದಾ ವಿಶೂನ ರೂಮಿನ ಮುಂದೆ ಹೋಗಿ ನಿಂತಳು. ಬಾಗಿಲು ಮುಂದೆ ಮಾಡಿತ್ತು. ಮನಸ್ಸಿನಲ್ಲಿ ಏನೇನೋ ಯೋಚನೆ. ಒಳಗೆ ಸುಪ್ರೀತ ಇದ್ದರೆ?

ಏನಾದರಾಗಲೀ ಎಂದು ಮುಂದೆ ಮಾಡಿದ್ದ ಬಾಗಿಲನ್ನು ನಿಧಾನವಾಗಿ ತಳ್ಳಿ ಒಳಗೆ ಹೋದಳು. ಮಂದ ಬೆಳಕಿನಲ್ಲಿ ಮಲಗಿದ್ದ, ವಿಶೂ. ಅದೇ ವಿಶೂ. ತಾನು ಡಯಾಪರ್ ಬದಲಿಸಿದ ವಿಶೂ. ತಾನು ಶೂಲೇಸು ಕಟ್ಟಿದ ತನ್ನ ಕಂದ. ಹತ್ತು ವರ್ಷದ ಹಿಂದೆ ಹೇಗೆ ಒಂದು ಸಣ್ಣ ಬರ್ಮುಡಾ ಹಾಕಿ ಎಂಥ ಚಳಿಯಿದ್ದರೂ ಬರೇ ಬೆತ್ತಲೆದೆಯಲ್ಲಿ ಮಲಗಿದ್ದನೋ ಇಂದೂ ಹಾಗೇ ಮಲಗಿದ್ದ. ಎದೆ ಬರಿದಾಗಿತ್ತು. ಒಬ್ಬನೇ ಮಲಗಿದ್ದಾನೆ. ಪಕ್ಕದಲ್ಲಿ ಸುಪ್ರೀತ ಇಲ್ಲ.

ಅಳು ಉಮ್ಮಳಿಸಿ ಬಂತು, ಆಕೆಗೆ. ಏನು ಮಾಡಿದರೂ ತಡೆಯಲಾಗಲಿಲ್ಲ, ಆಕೆಗೆ. ಬಿಕ್ಕಿಬಿಟ್ಟಳು.

‘ವಾಟ್ ದ ಹೆಕ್’ ಎಂದು ಎದ್ದ, ವಿಶೂ. ‘ಅಮ್ಮ, ಏನಿದು. ಇಷ್ಟು ಹೊತ್ತಲ್ಲಿ. ಆರ್ ಯು ಓಕೆ? ಯಾಕೆ ಅಳ್ತಾ ಇದ್ದೀಯಾ?’

ದಡಬಡನೆ ರೂಮಿನಿಂದ ಹೊರಗೆ ಓಡಲು ಪ್ರಯತ್ನಿಸಿದಳು. ‘ಮಾಮ್, ಸ್ಟಾಪ್. ಇಷ್ಟು ಹೊತ್ತಲ್ಲಿ, ನನ್ನ ರೂಮಲ್ಲಿ ಏನು ಮಾಡ್ತಾ ಇದ್ದೀಯ? ನಾನು ಇಲ್ಲಿಯೇ ಮಲಗಿದ್ದೀನೋ ಇಲ್ಲವೇ ಬೇಸ್‌ಮೆಂಟಿಗೆ ಹೋಗಿದ್ದೀನೋ ಅಂತ ಪರೀಕ್ಷೆ ಮಾಡಕ್ಕೆ ಬಂದಿಯಾ?’

‘ಇಲ್ಲ ವಿಶೂ, ಇಲ್ಲ ಕಂದಾ. ನನಗೆ ಏನೋ ಕೆಟ್ಟ ಕನಸು ಬಿತ್ತು. ಮಯಾಮಿ ಬೀಚಿನಲ್ಲಿ ರಾಯರ ಆರಾಧನೆಯಲ್ಲಿ ನಾನು ನಿನ್ನ, ವಿನಯನ್ನ ಇಬ್ಬರನ್ನೂ ಕಳೆದುಕೊಂಡು ಬಿಟ್ನೋ’ ಎಂದು ಜೋರಾಗಿ ಅಳತೊಡಗಿದಳು.

ತಲೆಬುಡ ಅರ್ಥವಾಗದ ವಿಶೂ ‘ಅಮ್ಮ, ಎಚ್ಚರ ಮಾಡಿಕೋ. ಏನು ಮಾತಾಡುತ್ತಾ ಇದೀ ಎಂದು ನಿನಗೆ ಗೊತ್ತಾಗುತ್ತಾ ಇದೆಯಾ, ಹೇಗೆ? ಎಲ್ಲಿ ಮಯಾಮಿ ಬೀಚು, ಎಂಥ ರಾಯರ ಆರಾಧನೆ? ವಾಟ್ ಈಸ್ ಆರಾಧನೆ. ನಿನಗೆ ವೈನು ಕುಡಿದದ್ದು ಜಾಸ್ತಿ ಆಯ್ತು ಅನ್ನಿಸುತ್ತೆ. ಡ್ಯಾಡೀನ ಎಬ್ಬಿಸಿದ್ಯಾ’

‘ವಿಶೂ, ನೀನು ನನಗೆ ಭಾಷೆ ಕೊಟ್ಟಿದ್ದಿ, ನೆನಪಿದೆಯಾ? ಯಾವತ್ತೂ ಜನಿವಾರ ತೆಗೆಯಲ್ಲ ಅಂತ. ಈಗ ನಿನ್ನ ಮೈಮೇಲೆ ಜನಿವಾರ ಇಲ್ಲ. ಇದ್ದಿದ್ದರೆ ನಿನಗೇನೂ ಆಗ್ತಾ ಇರಲಿಲ್ಲ. ಎಲ್ಲ ಚೆನ್ನಾಗಿರ್ತಿತ್ತು.’

ಅಮ್ಮ ಕನಸನ್ನು ಕುರಿತು ಹೇಳುತ್ತಿದ್ದಾಳೋ ಅಥವಾ?
‘ಅಮ್ಮ, ಜನಿವಾರ ಎಲ್ಲೂ ಹೋಗಿಲ್ಲ. ಇಲ್ಲೇ ಇದೆ.’ ಎಂದು ಅಂಡರ್ವೇರ್ ಒಳಗಿಂದ ತೆಗೆದು ತೋರಿಸಿದ.

ಸುಕನ್ಯಾಳಿಗೆ ಸ್ವರ್ಗವೇ ಸಿಕ್ಕಷ್ಟು ಖುಶಿಯಾಯಿತು, ‘ಕಂದಾ, ನನಗೆ ಗೊತ್ತು. ನೀನು ನನ್ನ ಮಾತು ಮೀರಲ್ಲ ಅಂತ.’ ಎಂದವಳೇ ಹೋಗಿ ವಿಶೂನನ್ನು ಗಟ್ಟಿಯಾಗಿ ತಬ್ಬಿಕೊಂಡು ‘ಏನೇ ಆದರೂ ಅದನ್ನು ನೀನು ತೆಗೀಬೇಡ. ದುಷ್ಟಶಕ್ತಿಗಳಿಂದ ಅದು ನಿನ್ನನ್ನು ರಕ್ಷಿಸುತ್ತೆ’

ವಿಶೂಗೆ ಏನು ಮಾತಾಡಬೇಕೆಂದು ಗೊತ್ತಾಗದೇ ‘ಅಮ್ಮಾ, ದುಷ್ಟಷಕ್ತಿಗಳು ಅಂದರೆ ಏನು?’

‘ಇವಿಲ್ ಫೋರ್ಸಸ್ ಪುಟ್ಟಾ’

‘ಲೈಕ್ ಸುಪ್ರೀತ್’

‘ನೋ ಪುಟ್ಟಾ, ನೋ. ಪ್ಲೀಸ್ ನನ್ನ ನಂಬು. ನಾ ಬಂದಿದ್ದು ನಿಜವಾಗಿಯೂ ನಿನ್ನ ಮೈಮೇಲೆ ಜನಿವಾರ ಇದೆಯೋ ಇಲ್ಲವೋ ಅನ್ನೋದನ್ನು ಪರೀಕ್ಷಿಸೋಕೆ. ನನಗೆ ನಿಜವಾಗಿಯೂ ಕನಸು ಬಿತ್ತು.’

‘ಅಮ್ಮ. ನನಗೆ ಇಪ್ಪತ್ತಾರು ವರ್ಷ. ಇನ್ನೂ ಮಗು ಅಲ್ಲ. ನನಗರ್ಥ ಆಗುತ್ತೆ.’

‘ಪುಟ್ಟಾ, ಮೈ ಬೇಬಿ. ನನಗೆ ಇವೆಲ್ಲ ಈಗ ಕಷ್ಟ ಆಗ್ತಾ ಇದೆ ಕಣೋ. ನನಗಿಂತಾ ನಿನಗೆ ಕಷ್ಟ ಅನ್ನೋದೂ ನನಗ್ಗೊತ್ತು. ಆದರೆ, ನೀನೂ ನನ್ನ ಜಾಗದಲ್ಲಿದ್ದು ನನ್ನ ಮನಸ್ಥಿತಿಯನ್ನು ಒಮ್ಮೆ ಊಹಿಸಿಕೋ. ಇನ್ನೊಂದು ಸ್ವಲ್ಪ ದಿನ. ಆಮೇಲೆ ಎಲ್ಲ ಅಡ್ಜಸ್ಟ್ ಆಗುತ್ತೆ.’

‘ಅಮ್ಮಾ, ನಿನಗೆ ಮಾನ್ಯವಾಗೋ ಹಾಗೆ ನಮ್ಮ ಸಂಬಂಧ ಇದ್ದಿದ್ದರೆ ನನ್ನಷ್ಟು ಖುಷಿ ಪಡೋನು ಯಾರೂ ಇಲ್ಲ, ಅದು ನಿನಗೆ ಗೊತ್ತಿದೆ ಅಂದ್ಕೋತೀನಿ. ನೀನು ಒಳ್ಳೇ ಮಕ್ಕಳನ್ನು ಬೆಳೆಸಿದ್ದೀಯ. ಅಷ್ಟು ಮಾತ್ರ ನಿಜ’

ಐದು ನಿಮಿಷ ಹಾಗೇ ವಿಶೂನನ್ನು ತಬ್ಬಿ ಹಿಡಿದಿದ್ದಳು. ಆ ಆಪ್ಪುಗೆಯಲ್ಲಿ ಒಂದು ರೀತಿ ನಿರಾಶೆ, ಅನುಸಂಧಾನ, ತಪ್ಪೊಪ್ಪಿಗೆ ಎಲ್ಲವನ್ನೂ ನಿವೇದಿಸಿಕೊಂಡಂತಿತ್ತು. ತನ್ನ ಮುಂದಿನ ಹಾದಿ ಕೊಂಚ ಸ್ಪಷ್ಟವಾಗುತ್ತಿತ್ತು. ಭದ್ರಾವತಿಗೆ ಒಮ್ಮೆ ಫೋನು ಮಾಡಿಬಿಡೋಣ ಎಂದು ತನ್ನ ಬೆಡ್‌ರೂಮಿಗೆ ಹೋದಳು.

(ಮುಂದುವರೆಯುವುದು…)