ಆಗ ರಸ್ತೆಗಳು ಅಷ್ಟು ಸರಿ ಇಲ್ಲದ್ದರಿಂದ ಮಡಿಕೇರಿಯಿಂದ ಬೆಂಗಳೂರಿಗೆ ಪ್ರಯಾಣಿಸಲು ಏಳರಿಂದ ಎಂಟು ಗಂಟೆ ಸಮಯ ಬೇಕಿತ್ತು. ನಮ್ಮ ಸರಕಾರಿ ಕೆಂಪು ಬಸ್ಸಿನ ಪ್ರಯಾಣ ನಿಮಗೆಲ್ಲರಿಗೂ ಖಂಡಿತ ತಿಳಿದೇ ಇರುತ್ತದೆ. ಸೊಂಟ ಕುಲುಕಿಸಿಕೊಂಡು, ರಸ್ತೆಯ ಗುಂಡಿಗಳಲ್ಲಿ ಏಳುತ್ತಾ ಬೀಳುತ್ತಾ ಮುಂದೆ ಸಾಗಿದ ಬಸ್ಸನ್ನು ಮಂಡ್ಯದಲ್ಲಿ ತಿಂಡಿಗೆಂದು ನಿಲ್ಲಿಸಿದರು. ನಾನು ಕೆಳಗೆ ಇಳಿದು ಬಂದೆ. ಚಂದ್ರಶೇಖರನು ನನ್ನ ಜೊತೆಯಲ್ಲಿ ಬಂದು ನನ್ನ ಪಕ್ಕದಲ್ಲೇ ನಿಂತ. ಅಲ್ಲಿಗೆ ನನಗೆ ಯಾಕೋ ಸ್ವಲ್ಪ ಮುಜುಗರ ಆಗಲು ತೊಡಗಿತು.
ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’ ಸರಣಿಯಲ್ಲಿ ಡಾಕ್ಟರಿಗೇ ಬಂದ ‘ಜಾಮೀನುರಹಿತ ವಾರಂಟ್‌’ ಕಥೆ

 

ಕಾನೂನಿನ ಪ್ರಕಾರ ಒಬ್ಬ ಸಾಕ್ಷಿಯನ್ನು ಒಂದು ಸರಿಯಾದ ದಿನ, ಸಮಯ ಮತ್ತು ಸ್ಥಳಕ್ಕೆ ಬಂದು, ಸಾಕ್ಷ್ಯ ಕೊಡಲು, ಮತ್ತು ಬಾರದಿದ್ದರೆ, ಜುಲ್ಮಾನೆ ಯಾ ಶಿಕ್ಷೆ ಎಂದು ನಿರ್ಬಂಧಿಸುವ ಒಂದು ಪತ್ರಕ್ಕೆ ಸಮನ್ಸ್ ಎಂದು ಹೇಳುತ್ತಾರೆ.

ಯಾವುದೇ ಕೇಸಿನಲ್ಲಿ ತನಗೆ ಏನು ತಿಳಿದಿದೆ ಎಂಬುದನ್ನು ನ್ಯಾಯಾಲಯಕ್ಕೆ ಹೋಗಿ ಕಟಕಟೆಯಲ್ಲಿ ನಿಂತು ಹೇಳುವುದು ಆ ವ್ಯಕ್ತಿಯ ಕರ್ತವ್ಯವಾಗಿರುತ್ತದೆ. ಆ ಕೇಸಿನ ಬಗ್ಗೆ ನ್ಯಾಯಾಲಯಕ್ಕೆ ಹೋಗದಿದ್ದರೆ, ಅಥವಾ ಅದಕ್ಕೆ ಪೂರಕವಾದ ವಿವರಗಳನ್ನು ಹೇಳದೆ ಇದ್ದರೆ, ಅವರಿಗೆ ಕೆಲವೊಮ್ಮೆ ನ್ಯಾಯಾಲಯ ಶಿಕ್ಷೆಗಳನ್ನು ಕೊಡಬಹುದು.

ಸಮನ್ಸ್ ನಲ್ಲಿ ಕೆಲವು ವಿಧಗಳಿವೆ. ಮೊದಲು ಬರುವುದು ಸಾಮಾನ್ಯ ಸಮನ್ಸ್. ಅಂದು ಹೋಗದಿದ್ದರೆ ನಂತರ ಬರುವುದು ಜಾಮೀನು ಸಹಿತ ಅಥವಾ ಬೈಲೇಬ್ಲ್ ವಾರಂಟ್. ಇದನ್ನು ತಪ್ಪಿಸಿಕೊಂಡರೆ ನಿಮಗೆ ಕೋರ್ಟಿನಿಂದ ಕೊಡುವುದು ಜಾಮೀನು ರಹಿತ (ನಾನ್ ಬೈಲೇಬಲ್‌ ) ವಾರಂಟ್. ಕೊನೆಯದರಲ್ಲಿ ನೀವು ಯಾವ ಕಾರಣಕ್ಕೂ ಕೋರ್ಟಿಗೆ ಹೋಗುವುದನ್ನು ತಪ್ಪಿಸಿ ಕೊಳ್ಳಲು ಸಾಧ್ಯವಿಲ್ಲ.

ಈ ಸಮನ್ಸ್ ಎಂಬುದು ಜನರ ಮನಸ್ಸಿನಲ್ಲಿ ಒಂದು ದೊಡ್ಡ ಹೆದರಿಕೆಯನ್ನು ಹುಟ್ಟಿಸಿರುತ್ತದೆ. ಸಾಧಾರಣವಾಗಿ ಪೊಲೀಸರು ಮನೆಗೆ ಬರುವುದನ್ನು ಗಾಬರಿಯ ದೃಷ್ಟಿಯಿಂದ ನೋಡುವ ಕಾಲವೂ ಇತ್ತು. ಸಮನ್ಸ್ ತೆಗೆದುಕೊಂಡು ಪೊಲೀಸ್ ಮನೆಗೆ ಬಂದು ಬಾಗಿಲು ಬಡಿದು ಅದರಲ್ಲಿ ತಮ್ಮ ಹೆಸರಿದೆ ಎಂದು ಹೇಳುವಾಗ ಜನರು ತಮ್ಮನ್ನು ಅರೆಸ್ಟ್ ಮಾಡಿ ಕರೆದುಕೊಂಡು ಹೋಗಲು ಬಂದಿದ್ದಾರೆ ಎಂದೇ ತಿಳಿಯುವ ಸಾಧ್ಯತೆ ಇತ್ತು. ಅದರಲ್ಲಿ ನಮೂದಿಸಿದ ದಿನದಲ್ಲಿ ಯಾವುದೇ ಕೆಲಸ ಕಾರ್ಯಗಳು ಇದ್ದರೂ, ಮನೆಯಲ್ಲಿ ಸಮಾರಂಭಗಳು ಇದ್ದರೂ ಅದನ್ನು ಬಿಟ್ಟು ಹೋಗಲೇ ಬೇಕಾದ ಒಂದು ಭಾಧ್ಯತೆ. ಯಾವುದೋ ಒಂದು ಕೇಸಿನಲ್ಲಿ ನಮ್ಮ ಹೆಸರು ತಳುಕಾಗಿ, ಸಾಕ್ಷಿ ಹೇಳಲೆಂದು ಒಪ್ಪಿದ ತಪ್ಪಿಗೆ ನಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ಕೋರ್ಟಿಗೆ ಹೋಗಿ ನಿಲ್ಲಬೇಕಾದ ಪರಿಸ್ಥಿತಿ. ಅಲ್ಲಿ ಹನ್ನೊಂದು ಗಂಟೆಗೆ ಕೇಸ್ ಕರೆಯಲು ಶುರು ಮಾಡಿದ್ದು, ಕೆಲವೊಮ್ಮೆ ಹನ್ನೆರಡು ಗಂಟೆಯವರೆಗೂ ಮುಂದುವರಿಯುತ್ತಿರುತ್ತದೆ. ಸಂಬಂಧಿತ ವ್ಯಕ್ತಿ ಅಲ್ಲಿಯೇ ನಿಂತೂ ನಿಂತು ಕೊನೆಗೆ ಹೆಸರು ಕರೆದು, ಕೇಸನ್ನು ಮುಂದಿನ ದಿನಾಂಕಕ್ಕೆ ಮುಂದೂಡಲಾಗಿದೆ ಎಂಬ ಮಾತು ಕೇಳಿ ಪೆಚ್ಚು ಮೋರೆ ಹಾಕಿಕೊಂಡು ಮನೆಗೆ ಹೊರಡುವುದು ಬಹಳ ದುಃಖದಾಯಕ ಕೆಲಸ.

ಅನೇಕ ಬಾರಿ ಈ ಸಮನ್ಸ್‌ನಲ್ಲಿ ಯಾವುದೇ ವಿವರಗಳು ಇಲ್ಲದೆ ದಿನಾಂಕ ಮತ್ತು ಅಪರಾಧಿ ಹೆಸರು ಮಾತ್ರ ಇದ್ದು ನಾವು ಯಾವ ವಿಷಯದಲ್ಲಿ ಕೋರ್ಟಿಗೆ ಹೋಗಬೇಕು ಎಂಬುದು ಗೊತ್ತಾಗುವುದೇ ಇಲ್ಲ. ಕೆಲವು ತಜ್ಞರಿಗೆ, ವೈದ್ಯರಿಗಂತೂ ಇದು ಬಹಳ ತ್ರಾಸದಾಯಕ ವಿಷಯ. ಕೋರ್ಟಿಗೆ ಹೋಗಬೇಕಾದರೆ ನಾವು ಆ ಕೇಸಿಗೆ ಸಂಬಂಧ ಪಟ್ಟಂತಹ ಎಲ್ಲಾ ರೆಕಾರ್ಡುಗಳನ್ನು ತೆಗೆದುಕೊಂಡು ಹೋಗಬೇಕಾದದ್ದು ನಮ್ಮ ಕರ್ತವ್ಯ. ಅದರಲ್ಲಿ ಬರೀ ಪೊಲೀಸ್ ಠಾಣೆಯ ಕ್ರೈಂ ನಂಬರ್, ಹಾಜರಾಗ ಬೇಕಾಗಿರುವ ಕೋರ್ಟ್, ದಿನಾಂಕ, ಅಪರಾಧಿಯ ಹೆಸರು ಮಾತ್ರ ಇರುವುದರಿಂದ ನಮಗೆ ಬಾಕಿ ವಿವರಗಳು ಗೊತ್ತಾಗುವುದೇ ಇಲ್ಲ. ಯಾವುದೇ ಪುಸ್ತಕದ ರೆಕಾರ್ಡ್‌ಗಳು ಇಲ್ಲದೆ ಹೋದರೆ ಅಲ್ಲಿ ಕೋರ್ಟಿನಿಂದ ನಮಗೆ ಛೀಮಾರಿ ಖಂಡಿತ. ಹೀಗಾಗಿ ಅನೇಕ ಬಾರಿ ಜನರು ಸಮನ್ಸ್ ಹಿಡಿದುಕೊಂಡು ಬಂದ ವಾಹಕರ ಜೊತೆ ಜಗಳಕ್ಕೆ ನಿಲ್ಲುವುದು ಕೂಡಾ ಇರುತ್ತದೆ. ಆದರೆ ಆ ವ್ಯಕ್ತಿಗೆ ಇದರ ಬಗ್ಗೆ ಯಾವುದೇ ವಿವರಗಳು ತಿಳಿದಿರುವುದಿಲ್ಲ. ಕೋರ್ಟಿನಲ್ಲಿ ಕೊಟ್ಟದ್ದನ್ನು ತಂದು ನಮಗೆ ತಲುಪಿಸುವುದಷ್ಟೆ ಅವರ ಕೆಲಸ. ಹಳ್ಳಿಗಳಂತೂ ಮನೆಯ ಗಂಡಸರು ಹೊರಗೆ ಕೆಲಸಕ್ಕೆ ಹೋಗಿ, ಅಲ್ಲಿದ್ದವರಿಗೆ ಇದರ ಬಗ್ಗೆ ಯಾವುದೇ ಸುಳಿವು ಇಲ್ಲದೇ ಗಾಬರಿಗೊಳ್ಳುವ ಸಾಧ್ಯತೆ ಹೆಚ್ಚು. ಮನೆಯಲ್ಲಿ ಯಾರೂ ಇಲ್ಲದಿದ್ದರೆ ಇನ್ನೂ ಹೆಚ್ಚು ತೊಂದರೆ. ಸಮನ್ಸ್ ಅನ್ನು ಅಲ್ಲೇ ಗೋಡೆಗೆ ಅಂಟಿಸಿ ಹೋದರೆ ಅದು ಗಾಳಿಯಲ್ಲಿ ಹಾರಿ ಇನ್ನೆಲ್ಲೋ ಹೋಗಿ, ಆ ಜನ ಕೋರ್ಟಿಗೆ ಹಾಜರಾಗದೆ, ವಾರಂಟ್ ಬಂದಾಗ ಇನ್ನೂ ಪಜೀತಿ. ಸಾಮಾನ್ಯರ ಪರಿಸ್ಥಿತಿ ಅಲ್ಲಿರಲಿ. ನನ್ನನ್ನೂ ಸೇರಿ ನಮ್ಮ ಎಲ್ಲಾ ವೈದ್ಯ ಮಿತ್ರರಿಗೆ ಬಂದ ಮೊಟ್ಟಮೊದಲ ಸಮನ್ಸ್ ಯಾವುದೊ ಒಂದು ವಿಚಿತ್ರ ಭಾವನೆಗಳನ್ನು ತಂದಿತ್ತು. ಕೋರ್ಟ್ ಏನು ಎಂಬುದನ್ನು ಬರೇ ಸಿನಿಮಾ, ಸೀರಿಯಲ್ ನಲ್ಲಿ ಮಾತ್ರ ನೋಡಿದ್ದ ಎಲ್ಲರಿಗೂ ಅದೇನೋ ತಳಮಳ.. ನಾವೇ ಏನೋ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರೀತಿಯ ಹೆದರಿಕೆ. ಅಲ್ಲಿ ನಮ್ಮನ್ನು ಹೇಗೆ ನಡೆಸಿಕೊಳ್ಳುವರೋ, ಏನು ಪ್ರಶ್ನೆ ಕೇಳಬಹುದು ಎಂದೆಲ್ಲಾ ಯೋಚನೆ. ಯಾಕೆಂದರೆ ಈಗಲೂ ಕೋರ್ಟ್ ಎಂಬ ಸ್ಥಳಕ್ಕೆ ಅದರದೇ ಆದ ವಿಶಿಷ್ಟತೆ ಇದೆ. ಒಳಗೆ ಹೋಗುವಾಗ ತಲೆಬಗ್ಗಿಸಿ, ನಮಸ್ಕಾರ ಮಾಡುತ್ತಾ ಹೋಗುವ ವಕೀಲರು ಜನರು, ಅಲ್ಲಿನ ಮೌನ ವಾತಾವರಣ, ನ್ಯಾಯಾಧೀಶರು ಕುರ್ಚಿಯ ಬಳಿ ಬರುವ ಗತ್ತು ಮತ್ತು ಆಗ ಎಲ್ಲರೂ ಎದ್ದು, ಬಗ್ಗಿ ಮಾಡುವ ನಮಸ್ಕಾರ. ಇದೆಲ್ಲಾ ಒಂದು ಅತಿ ವಾಸ್ತವಿಕ ಭಾವನೆಗಳು (surreal feelings.)

ಇದು ಕಾನೂನಿನ ಪ್ರಕಾರ ಸಮನ್ಸ್ ಎಂದರೆ ಏನು, ಎತ್ತ. ಈಗ ನನ್ನ ಸಮನ್ಸ್ ಕಥೆ ಕೇಳಿ!!

ಬೆಂಗಳೂರಿನಿಂದ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ವರ್ಗವಾಗಿ, ಬಂದು ಒಂದು ವರ್ಷ ಕಳೆದಿತ್ತು. ಒಂದು ದಿನ ಹೊರರೋಗಿ ವಿಭಾಗದಲ್ಲಿ ಕುಳಿತಿದ್ದ ಸಮಯದಲ್ಲಿ ಬಂದ ಒಬ್ಬ ಪೊಲೀಸ್ ಕಾನ್ಸ್ಟೇಬಲ್, ಪಟ್ ಅಂತ ಶೂಸ್ ಅನ್ನು ನೆಲಕ್ಕೆ ಅಪ್ಪಳಿಸಿ, ಸಲ್ಯೂಟ್ ಹೊಡೆದ. ತಲೆ ಎತ್ತಿ ನೋಡಿದರೆ ಪರಿಚಯ ಇಲ್ಲದ ಪೊಲೀಸ್.

ಏನಪ್ಪಾ ನೀವು ಯಾರು, ನನ್ನಿಂದ ಏನಾಗಬೇಕು ಎಂದು ಕೇಳಿದೆ.

ಸಾರ್, ನಾನು ಬೆಂಗಳೂರು ಕಂಟೋನ್ಮೆಂಟ್ ಪೊಲೀಸ್ ಸ್ಟೇಷನ್ನಿಂದ ಬಂದ ಪೊಲೀಸ್. ನಿಮಗೆ ಒಂದು ಎನ್.ಬಿ.ಡಬ್ಲ್ಯೂ, ಅಂದರೆ ಜಾಮೀನು ರಹಿತ ವಾರಂಟ್ ಇದೆ. ಕೋರ್ಟ್ ನಾಳೆಯೆ ಇದೆ. ನೀವು ಬರಲೇಬೇಕು ಎಂದ.

ವಿಧಿ ವಿಜ್ಞಾನದ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಕಾನೂನಿನ ಬಗ್ಗೆ ಕೂಡ ನಮಗೆ ಕಲಿತುಕೊಳ್ಳಲು ಇದ್ದುದ್ದರಿಂದ ಜಾಮೀನು ರಹಿತ ವಾರೆಂಟ್ ಏನು ಎಂಬುದರ ಬಗ್ಗೆ ನನಗೆ ಸರಿಯಾಗಿ ತಿಳಿದಿತ್ತು. ಕೂಡಲೇ ಕೇಳಿದೆ. ನನಗೆ ಎನ್.ಬಿ.ಡಬ್ಲ್ಯೂ ಇರಲು ಸಾಧ್ಯವೇ ಇಲ್ಲ, ಯಾಕೆಂದರೆ ಈವರೆಗೆ ನನಗೆ ಬಂದ ಯಾವ ಸಮನ್ಸ್ ಅನ್ನು ನಾನು ತಿರಸ್ಕರಿಸಲಿಲ್ಲ ಮತ್ತು ಎಲ್ಲಾ ಕೋರ್ಟಲ್ಲಿ ನಾನು ಸಾಕ್ಷಿ ಹೇಳಿದ್ದೇನೆ.

“ನನಗೆ ಅದೆಲ್ಲ ಗೊತ್ತಿಲ್ಲ ಸರ್, ನಾನು ಒಬ್ಬ ಪ್ರೊಸೆಸ್ ಸರ್ವರ್ ಅಥವಾ ಸಂದೇಶ ವಾಹಕ ಮಾತ್ರ. ನಿಮಗೆ ಇದನ್ನು ತಲುಪಿಸಲು ಕೋರ್ಟಿನಲ್ಲಿ ಕೊಟ್ಟಿದ್ದಾರೆ, ನಾನು ತಂದಿದ್ದೇನೆ. ಬೆಂಗಳೂರಿಂದ ಬಂದಿದ್ದೇನೆ. ತೆಗೆದುಕೊಳ್ಳಿ” ಎಂದ. ಸಹಿ ಹಾಕಿ, ತೆಗೆದು ನೋಡಿದರೆ ನಾನು ಒಂದು ತಿಂಗಳ ಹಿಂದೆ ಬೆಂಗಳೂರಿಗೆ ಹೋಗಿ ಕೋರ್ಟಲ್ಲಿ, ಅಂದು ನ್ಯಾಯಾಧೀಶರು ರಜೆ ಇದ್ದುದರಿಂದ ಸಾಕ್ಷಿ ನಡೆಯದೆ ವಾಪಸ್ ಬಂದಿದ್ದ ಒಂದು ಕೇಸ್.

ಇದರಲ್ಲಿ ಓರ್ವ ಹೆಂಗಸು ನೇಣು ಹಾಕಿದ ಸ್ಥಿತಿಯಲ್ಲಿ ಕಂಡು ಬಂದು, ಮೊದಲು ಅಸ್ವಾಭಾವಿಕ ಮರಣವೆಂದು ಪರಿಚ್ಛೇದ 174 ರ ಅಡಿ ದಾಖಲಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಕುತ್ತಿಗೆ ಹಿಚುಕಿದ ಲಕ್ಷಣಗಳು ಕಂಡು ಬಂದದ್ದರಿಂದ, ನಂತರ ಕೊಲೆ ಮಾಡಿ ತೂಗು ಹಾಕಲಾಗಿದೆ ಎಂದು ಸೆಕ್ಷನ್ 302 ದಾಖಲು ಮಾಡಿ, ಆಕೆಯ ಗಂಡನನ್ನು ಬಂಧಿಸಲಾಗಿತ್ತು.

ಈ ಕೇಸಿನಲ್ಲಿ ನಾನು ಒಂದು ಸರ್ತಿ ಕೋರ್ಟಿಗೆ ಹೋಗಿ ಬಂದಿದ್ದೇನೆ. ಆದುದರಿಂದ ನನಗೆ ಹೇಗೆ ಎನ್. ಬಿ. ಡಬ್ಲ್ಯೂ ಎಂದೆ. ಅದಕ್ಕೆ ಅವನ ಉತ್ತರ ಒಂದೇ.

ಸರ್ ನಾನು ಬರೀ ಸಮನ್ಸ್ ಕೊಡಲು ಬಂದವನು, ನನಗೆ ವಿವರ ಗೊತ್ತಿಲ್ಲ. ಆದರೆ ನಿಮಗೆ ವಾರೆಂಟ್ ಇದೆ. ಆದುದರಿಂದ ನೀವು ನಾಳೆ ಕೋರ್ಟಿಗೆ ಬರಲೇಬೇಕು.

ಇಷ್ಟೆಲ್ಲಾ ಅವನ ಹತ್ತಿರ ಮಾತನಾಡುತ್ತಿದ್ದಾಗ ನಮ್ಮ ಮಡಿಕೇರಿಯ ನಗರ ಪೊಲೀಸ್ ಕಾನ್ಸ್ಟೇಬಲ್ ಅಲ್ಲಿಗೆ ಬಂದರು. ಕೈಯಲ್ಲಿದ್ದ ಟೆಲಿಗ್ರಾಂ ಅನ್ನು ತೋರಿಸಿದರು. ಅದು ಜಿಲ್ಲೆಯ ಮುಖ್ಯ ಪೊಲೀಸ್ ಅಧಿಕಾರಿ ಅವರಿಗೆ ಬಂದ ಟೆಲಿಗ್ರಾಂ.. ಡಾಕ್ಟರ್ ಸೂರ್ಯಕುಮಾರ್ ಅವರ ಸಾಕ್ಷಿ ಕೋರ್ಟ್ ನಲ್ಲಿ ನಾಳೆ ಇದೆ. ಆದುದರಿಂದ ಇದನ್ನು ಜಾರಿ ಮಾಡಿ, ಅಗತ್ಯವಿದ್ದರೆ, ಅವರನ್ನು ಬಂಧಿಸಿ ಬೆಂಗಳೂರಿಗೆ ಕರೆ ತರಲು ಸಹಾಯ ಮಾಡಬೇಕು!!!

ಇಲ್ಲಿ ವಿಷಯ ಸ್ವಲ್ಪ ತಿಳ್ಕೊಳ್ಳಿ. ವಾರಂಟು ಏನು ದೊಡ್ಡದಲ್ಲ. ನಾನು ಒಂದು ಕೊಲೆಯ ಕೇಸಿನಲ್ಲಿ ಬರಿ ಶವಪರೀಕ್ಷೆಯನ್ನು ಮಾಡಿದ ಸಾಕ್ಷಿ ಅಷ್ಟೇ. ಮರಣೋತ್ತರ ಪರೀಕ್ಷೆಯ ಬಗ್ಗೆ ಮಾತ್ರ ನಾನು ಸಾಕ್ಷಿ ಹೇಳಲು ಇರುವುದು. ನಾನು ಆ ದಿನ ಕಂಡದ್ದನ್ನು, ಪರೀಕ್ಷಿಸಿ ಬರೆದದ್ದರ ಬಗ್ಗೆ ಮತ್ತು ಅದರ ಮೇಲೆ ಯಾವುದಾದರೂ ಮಾಹಿತಿ ಕೇಳಿದರೆ ಹೇಳುವುದು ಅಷ್ಟೇ ನನ್ನ ಕೆಲಸ. ಆದರೆ ನನ್ನನ್ನೇ ಅಗತ್ಯವಿದ್ದರೆ ಬಂಧಿಸಿ ಅಂತ ಒಂದು ಕೋರ್ಟಿನಿಂದ ಟೆಲಿಗ್ರಾಂ!!.

ಇದು ನೋಡಿ ನಮ್ಮ ವ್ಯವಸ್ಥೆಯ ಒಂದು ವಿಪರ್ಯಾಸ.

ಕೊಲೆ ಮಾಡಿದ ವ್ಯಕ್ತಿಗಳು ಜಾಮೀನಿನ ಮೇಲೆ ಹೊರಬಂದು ಎಲ್ಲೆಡೆ ಸುತ್ತಾಡುತಿರುತ್ತಾರೆ. ಆದರೆ ಸಾಕ್ಷಿ ಹೇಳುವ ವೈದ್ಯನನ್ನು ಬಂಧಿಸುವಂತೆ ಒಂದು ಮುಸುಕಿನ ಒಳಗಣ ಬೆದರಿಕೆಯ ಪತ್ರ.

ಇನ್ನು ಏನು ಮಾಡಲೂ ಆಗುವುದಿಲ್ಲವೆಂದು ಹೊರಗಡೆ ನಿಂತಿದ್ದ ಮೂವತ್ತು, ನಲ್ವತ್ತು ರೋಗಿಗಳನ್ನು ಅಲ್ಲೇ ಬಿಟ್ಟು ಮನೆಗೆ ಬಂದೆ. ನನ್ನ ಬಟ್ಟೆಗಳನ್ನು ತೆಗೆದು, ಬ್ಯಾಗಿಗೆ ಹಾಕಿ, ಊಟವಾದರೂ ಮಾಡುವ ಎನ್ನುವಷ್ಟರಲ್ಲಿ ಬಾಗಿಲಿನ ಗಂಟೆ ಹೊಡೆದುಕೊಂಡಿತು. ಯಾರಿರಬಹುದು ಎಂದು ಬಾಗಿಲು ತೆಗೆದು ನೋಡಿದರೆ ಬೆಂಗಳೂರು ಪೊಲೀಸ್ ಚಂದ್ರಶೇಖರ್.!

ಯಾಕಪ್ಪಾ ಏನು ವಿಶೇಷ ಎಂದು ಕೇಳಿದರೆ, ಏನು ಇಲ್ಲ, ಹೊರಟಿದ್ದೀರಾ ಎಂದು ನೋಡಲು ಬಂದೆ ಎಂದ.

” ನಿನ್ನ ಊಟ ಆಯ್ತಾ ಅಥವಾ ಇಲ್ಲಿ ನಮ್ಮ ಮನೆಯಲ್ಲಿ ಊಟ ಮಾಡುತ್ತೀಯಾ” ಎಂದು ಕೇಳಿದೆ.

“ಬೇಗ ಊಟ ಮುಗಿಸಿ ಬಂದೇ ಸರ್” ಅಂದ…

ಮನೆಯ ಮುಂದಿನ ಕೋಣೆಯಲ್ಲಿ ಅವನನ್ನು ಕುಳ್ಳಿರಿಸಿ ನಾನು ಹೋಗಿ ಊಟ ಮಾಡಿದೆ. ನನ್ನ ಬ್ಯಾಗ್ ತೆಗೆದುಕೊಂಡು ಹೊರಗೆ ಬಂದೆ. ಮಡಿಕೇರಿಯ ಬಸ್ ನಿಲ್ದಾಣಕ್ಕೆ ಹೋಗಿ ಒಂದು ಗಂಟೆಗೆ ಬಸ್ಸನ್ನು ಏರಿದೆವು.

ಸಾಕ್ಷಿ ಹೇಳಲೆಂದು ಒಪ್ಪಿದ ತಪ್ಪಿಗೆ ನಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ಕೋರ್ಟಿಗೆ ಹೋಗಿ ನಿಲ್ಲಬೇಕಾದ ಪರಿಸ್ಥಿತಿ. ಅಲ್ಲಿ ಹನ್ನೊಂದು ಗಂಟೆಗೆ ಕೇಸ್ ಕರೆಯಲು ಶುರು ಮಾಡಿದ್ದು, ಕೆಲವೊಮ್ಮೆ ಹನ್ನೆರಡು ಗಂಟೆಯವರೆಗೂ ಮುಂದುವರಿಯುತ್ತಿರುತ್ತದೆ.

ಚಂದ್ರಶೇಖರ್ ಬಂದು ನನ್ನ ಪಕ್ಕದಲ್ಲೇ ಕುಳಿತ.! ಕಂಡಕ್ಟರ್ ಟಿಕೆಟ್ ಕೊಡಲು ಬಂದಾಗ ಆತ, ಸಾರ್ ನಾನು ಟಿಕೆಟ್ ತೆಗೆದುಕೊಳ್ಳುತ್ತೇನೆ ಅಂದ.

“ನೀವು ಯಾಕೆ ತೆಗೆದುಕೊಳ್ಳಬೇಕು. ನಾನು ಹೋಗುತ್ತಾ ಇರೋದು ಕೋರ್ಟಿಗೆ. ಕೋರ್ಟಿನವರು ನನಗೆ ಅದಕ್ಕೆಂದೇ ಕೊಡುವ ಪ್ರವಾಸ ಭತ್ಯೆ ಇದೆ. ನಿಮ್ಮ ಟಿಕೆಟ್ ನೀವು ತೆಗೆದುಕೊಳ್ಳಿ” ಎಂದೆ.

ಅವನ ಹತ್ತಿರ ಪೊಲೀಸರಿಗೆ ಕೊಡುವ ಪ್ರಯಾಣ ಪತ್ರ ಇದ್ದುದರಿಂದ ಅವನಿಗೆ ಟಿಕೆಟ್ ಇರಲಿಲ್ಲ.

ಆಗ ರಸ್ತೆಗಳು ಅಷ್ಟು ಸರಿ ಇಲ್ಲದ್ದರಿಂದ ಮಡಿಕೇರಿಯಿಂದ ಬೆಂಗಳೂರಿಗೆ ಸಾಧಾರಣ ಏಳರಿಂದ ಎಂಟು ಗಂಟೆ ಸಮಯ ಬೇಕಿತ್ತು. ನಮ್ಮ ಸರಕಾರಿ ಕೆಂಪು ಬಸ್ಸಿನ ಪ್ರಯಾಣ ನಿಮಗೆಲ್ಲರಿಗೂ ಖಂಡಿತ ತಿಳಿದೇ ಇರುತ್ತದೆ. ಸೊಂಟ ಕುಲುಕಿಸಿಕೊಂಡು, ರಸ್ತೆಯ ಗುಂಡಿಗಳಲ್ಲಿ ಏಳುತ್ತಾ ಬೀಳುತ್ತಾ ಮುಂದೆ ಸಾಗಿದ ಬಸ್ಸನ್ನು ಮಂಡ್ಯದಲ್ಲಿ ತಿಂಡಿಗೆಂದು ನಿಲ್ಲಿಸಿದರು. ನಾನು ಕೆಳಗೆ ಇಳಿದು ಬಂದೆ. ಚಂದ್ರಶೇಖರನು ನನ್ನ ಜೊತೆಯಲ್ಲಿ ಬಂದು ನನ್ನ ಪಕ್ಕದಲ್ಲೇ ನಿಂತ. ಅಲ್ಲಿಗೆ ನನಗೆ ಯಾಕೋ ಸ್ವಲ್ಪ ಮುಜುಗರ ಆಗಲು ತೊಡಗಿತ್ತು. ಬೆಳಗ್ಗಿನಿಂದಲೂ ಚಂದ್ರಶೇಖರ ನೆರಳಿನಂತೆ, ಬೆನ್ನಿಗೆ ಬಿದ್ದ ಬೇತಾಳನ ಪರಿ ಇರುವಂತಹ ಭಾವನೆ ಬರತೊಡಗಿತು. ಯಾಕೋ ಕಸಿವಿಸಿ ಆಗಲು ಶುರು ಆಯ್ತು. ಆದರೂ ಅದೇನೋ ನನ್ನ ಮನಸ್ಸಿನ ಭಾವನೆ ಇರಬೇಕು ಎಂದು ಕಾಫಿ ಕುಡಿದು, ಮತ್ತೆ ಬಸ್ಸಿನಲ್ಲಿ ಏರಿ ಕುಳಿತೆ.

ಸುಮಾರು 8.30 ಸಮಯದಲ್ಲಿ ಬೆಂಗಳೂರಿನ ಮೈಸೂರು ರಸ್ತೆಯ ಬಸ್ ಸ್ಟಾಪ್ ಬಳಿ ಬಸ್ಸು ನಿಂತು ಅಲ್ಲಿ ಕೆಲವರು ಇಳಿದರು. ಚಾಮರಾಜಪೇಟೆಯಲ್ಲಿ ಇದ್ದ ವೈದ್ಯಕೀಯ ಹಾಸ್ಟೆಲ್‌ನಲ್ಲಿ ನನ್ನ ಕೆಲವು ಮಿತ್ರರು ಇದ್ದುದರಿಂದ ಅವರ ರೂಮಿನಲ್ಲಿ ಉಳಿದುಕೊಳ್ಳುವುದು ಎಂದು ನಾನು ನಿಶ್ಚಯಿಸಿ ಚಾಮರಾಜಪೇಟೆ ಬಸ್ ಸ್ಟಾಪಿನಲ್ಲಿ ಇಳಿಯಲು ತಯಾರಿ ಮಾಡಿಕೊಂಡೆ. ಮುಂದೆ ಸಾಗುತ್ತಿದ್ದ ಬಸ್ಸಲ್ಲಿ ಆತ ಮೆಲ್ಲಗೆ ಹೇಳಿದ,

“ನಾನು ಒಬ್ಬನೇ ಇಲ್ಲಿ ರೂಮಿನಲ್ಲಿ ಇರುವುದು. ನೀವು ಕೂಡ ರಾತ್ರಿ ನನ್ನ ರೂಮಿನಲ್ಲಿ ಉಳಿದು ಕೊಳ್ಳಬಹುದು”
ಅಲ್ಲಿಗೆ ನನ್ನ ಪಿತ್ತ ನೆತ್ತಿಗೇರಿತ್ತು.

“ನಾನು ಎಲ್ಲಿ ಉಳಿದುಕೊಳ್ಳಬೇಕು, ಬೇಡಾ ಎಂಬುದನ್ನು ನೀನು ಹೇಳುವುದು ನಿಶ್ಚಯಿಸುವುದು ಬೇಡ. ಹಾಸ್ಟೆಲಿನಲ್ಲಿ ನನ್ನ ಮಿತ್ರರು ಇದ್ದಾರೆ, ನಾನು ಅಲ್ಲಿಗೆ ಹೋಗುತ್ತೇನೆ.” ಎಂದೆ.
ಆಗ ಮೆಲ್ಲಗೆ ಬಾಯಿಬಿಟ್ಟ.

“ಸರ್ಕಾರಿ ವಕೀಲರು ಹೇಳಿದ್ದಾರೆ, ಎಲ್ಲಿ ಹೋದರೂ ನಿಮ್ಮ ಜೊತೆಯಲ್ಲಿಯೇ ಇರಬೇಕು. ನನ್ನ ಕಣ್ಣ ದೃಷ್ಟಿಯಿಂದ ನೀವು ಎಲ್ಲೂ ತಪ್ಪಿಸಿಕೊಳ್ಳಬಾರದು. ಹಾಗೆಯೇ ಬೆಳಗ್ಗೆ ಹತ್ತೂವರೆ ಗಂಟೆಗೆ ಕೋರ್ಟಿಗೆ ಒಟ್ಟಿಗೆ ಕರೆದುಕೊಂಡು ಬರಬೇಕು” ಎಂದು..!! ಹೇಗಿದೆ ನೋಡಿ ವರಸೆ.

ಅಷ್ಟರಲ್ಲಿ ಬಸ್ ಸ್ಟಾಪ್ ಬಂತು. ನಾನು ಬೇಗ ಎದ್ದು, ಅವನನ್ನು ಪಕ್ಕಕ್ಕೆ ತಳ್ಳಿ, ಬ್ಯಾಗ್ ತೆಗೆದುಕೊಂಡು, ಅವನ ಪ್ರತಿಕ್ರಿಯೆಗೆ ಕಾಯದೇ, ಅವನು ಏನನ್ನೂ ಹೇಳುವ ಮೊದಲು ಇಳಿದು ಹೋಗಿಬಿಟ್ಟೆ.

ಮರುದಿನ….
ಕೋರ್ಟ್ ಸಾಧಾರಣವಾಗಿ ಹನ್ನೊಂದು ಗಂಟೆಗೆ ಶುರುವಾಗುವುದು. ಆದರೆ ನನಗೆ ಮಾಡಲು ಬೇರೆ ಏನು ಕೆಲಸ ಇಲ್ಲದಿದ್ದುದರಿಂದ ಅಲ್ಲಿಗೆ ಹತ್ತೂವರೆ ಗಂಟೆಗೆ ತಲುಪಿದ್ದೆ.

ಹನ್ನೊಂದು ಗಂಟೆಗೆ ಸರಿಯಾಗಿ ನ್ಯಾಯಾಧೀಶರು ಬಂದು, ಕೇಸ್ ಕರೆಯಲು ಶುರುಮಾಡಿದರು. ಸ್ವಲ್ಪ ಸಮಯದಲ್ಲಿ, ಕೋರ್ಟಿನ ದಫೆದಾರ ಸೂರ್ಯಕುಮಾರ ಸೂರ್ಯಕುಮಾರ, ಸೂರ್ಯಕುಮಾರ್ ಎಂದು ಮೂರು ಬಾರಿ ದೊಡ್ದ ಸ್ವರದಲ್ಲಿ ಕೂಗಿದ. ನಾನು ಮುಂದೆ ಹೋಗಿ ನಿಂತೆ. ಸ್ವಲ್ಪ ಕಾಯಿರಿ. ನಂತರ ನಿಮ್ಮನ್ನು ಕರೆಯುತ್ತಾರೆ ಎಂದರು.

ಸರಿ ಎಂದು ನಾನು ಅಲ್ಲಿ ಪಕ್ಕದಲ್ಲಿ ನಿಂತುಕೊಂಡೆ. ಅರ್ಧ ಗಂಟೆ ಆದ ಮೇಲೆ ನನ್ನನ್ನು ಒಳಗೆ ಕರೆದರು. ಅಲ್ಲಿ ಹೋಗಿ ಕಟಕಟೆಯ ಒಳಗೆ ಪ್ರವೇಶ ಮಾಡಿದೆ. ಬೆಂಚ್ ಕ್ಲರ್ಕ್ ಬಂದು, ದೇವರ ಮುಂದೆ ಎಂದು ಹೇಳಲು ತೊಡಗಿದರು. ಅವರಿಗೆ ಮುಂದುವರೆಯಲು ಆಸ್ಪದ ಕೊಡದೇ, ದೇವರ ಮುಂದೆ ಪ್ರಮಾಣ ಮಾಡಿ ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ ಎಂದು ಒಂದೇ ಉಸಿರಿಗೆ ಬಡ ಬಡಿಸಿದೆ.

ನ್ಯಾಯಾಧೀಶರು ದುರುಗುಟ್ಟಿಕೊಂಡು ನನ್ನನ್ನು ನೋಡಿದರು.

‘ಏನು ಡಾಕ್ಟರ್, ಬೆಂಗಳೂರು ಬಿಟ್ಟು ಹೋದ ಮೇಲೆ ಕೋರ್ಟ್ ಅನ್ನುವುದನ್ನು ಮರೆತು ಬಿಟ್ಟಿದ್ದೀರಾ. ನಿಮ್ಮನ್ನು ಅರೆಸ್ಟ್ ಮಾಡಿ ಕರೆದುಕೊಂಡು ಬರುವಂತೆ ಯಾಕೆ ಮಾಡಿದಿರಿʼ ಎಂದರು..

ಸಾಧಾರಣ ಕೋರ್ಟಿನಲ್ಲಿ ಈ ತರದ ಪ್ರಸಂಗಗಳು ಬರುವುದಿಲ್ಲ. ಪ್ರತಿಜ್ಞಾ ವಿಧಿ ಆದಕೂಡಲೇ ಸರಕಾರಿ ವಕೀಲರು ನಮ್ಮನ್ನು ಪ್ರಶ್ನೆ ಮಾಡಲು ಶುರುಮಾಡುತ್ತಾರೆ. ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಆದ ಮೇಲೆ ಆರೋಪಿಯ ಕಡೆ ವಕೀಲರ ಪಾಟಿ ಸವಾಲು. ಅದು ಮುಗಿದ ನಂತರ ನ್ಯಾಯಾಧೀಶರು ಕೋರ್ಟ್ ಪ್ರಶ್ನೆ ಎಂದು ಕೆಲವು ಪ್ರಶ್ನೆಗಳನ್ನು ಕೇಳುವುದು ಸಾಮಾನ್ಯ. ಇಲ್ಲಿ ಅದರ ವಿರುದ್ಧವಾಗಿತ್ತು. ಮೊದಲೇ ನ್ಯಾಯಾಧೀಶರು ಗರಂ ಆಗಿದ್ದಂತೆ ಕಂಡು ಬಂತು.

ಕೋರ್ಟಿನಲ್ಲಿ ನಾವು ಹೆಚ್ಚು ಮಾತನಾಡಬಾರದು ಎಂಬ ಒಂದು ಅಲಿಖಿತ ಕಾನೂನು ಇದೆ. ಆದರೂ ನನಗೆ ತಡೆದುಕೊಳ್ಳಲು ಆಗಲಿಲ್ಲ. ಧೈರ್ಯ ಮಾಡಿ,

“ನನ್ನ ಯಾವ ತಪ್ಪಿಗೆಂದು ಈ ಕಠಿಣ ಶಬ್ದಗಳನ್ನು ನೀವು ಹೇಳುತ್ತೀರಿ” ಎಂದು ನಯವಾಗಿ ನಾನು ಕೇಳಿದೆ.

“ಸಾಕ್ಷಿ ಹೇಳಲು ಬರಲು ನಿಮಗೆ ಎಷ್ಟು ಬಾರಿ ಸಮನ್ಸ್ ಕಳಿಸಬೇಕು” ಎಂದು ದೊಡ್ಡ ದನಿಯಲ್ಲಿ ಕೇಳಿದರು.

ನಾನು ಹೇಳಿದೆ. “ಹೌದು. ಎರಡು ಬಾರಿ ಕಳುಹಿಸಿದ್ದರು. ಕಳೆದ ತಿಂಗಳು ನಾನು ಬಂದಿದ್ದೆ. ಆದರೆ ಮಹಾಸ್ವಾಮಿಗಳು ತಾವು ರಜೆಯಲ್ಲಿ ಇದ್ದೀರಿ” ಎಂದೆ.

ನ್ಯಾಯಾಧೀಶರು ಸ್ವಲ್ಪ ಗಲಿಬಿಲಿಗೊಂಡಂತೆ ಕಂಡುಬಂತು.

“ಏನು ನೀವು ಬಂದಿದ್ದೀರಾ, ನಾನು ರಜೆಯಲ್ಲಿದ್ದೆನಾ ಆಗ?” ಅಂದರು.
ಹಿಂದೆ ಬಂದಾಗ ಕೊಟ್ಟ ಕೋರ್ಟಿನ ಹಾಜರ್ ಸರ್ಟಿಫಿಕೇಟು ನನ್ನ ಜೇಬಿನಲ್ಲಿ ಇತ್ತು. ಅದನ್ನ ತೆಗೆದು ನ್ಯಾಯಾಧೀಶರಿಗೆ ತೋರಿಸಿದೆ.

ಓದಿ ನೋಡಿದ ಅವರ ಮುಖದಲ್ಲಿ ಮತ್ತೆ ಪುನಃ ಸಿಟ್ಟು ಕಂಡುಬಂತು.

ಕೂಡಲೇ ಸರಕಾರಿ ವಕೀಲರ ಕಡೆ ತಿರುಗಿ ಅವರನ್ನು ಕೇಳಿದರು.

“ನೀವು ನನಗೆ ಹೇಳಿದ್ದು ವೈದ್ಯರು ಈ ಕೇಸಿನಲ್ಲಿ ಬರಲೇ ಇಲ್ಲ ಎಂದು. ನನಗೆ ಸುಳ್ಳು ಹೇಳಿ, ಅವರ ಮೇಲೆ ವಾರಂಟ್ ಜಾರಿ ಮಾಡುವಂತೆ ಮಾಡಿದ್ದೀರಿ. ಏನಿದು” ಎಂದರು.

ಸರಕಾರಿ ವಕೀಲರು ತಲೆ ತಗ್ಗಿಸಿ ನಿಂತಿದ್ದರು. ಅಲ್ಲಿಗೆ ನ್ಯಾಯಾಧೀಶರಿಗೆ ವಿಷಯ ಏನು ಎಂಬುದು ಸ್ವಲ್ಪ ಅರ್ಥವಾದಂತೆ, ತಿಳಿದಂತೆ, ಕಂಡುಬಂತು. ಅವರು ಸರ್ಕಾರಿ ವಕೀಲರಿಗೆ ಹೇಳಿದರು,

“ಹೌದು ನನಗೆ ಗೊತ್ತು. ಇವತ್ತು ನಿಮ್ಮ ಸರಕಾರಿ ಕೆಲಸದ ಕೊನೆಯ ದಿನ, ಹಾಗಾಗಿ ಈ ಕೇಸನ್ನು ಇಂದು ಏನಾದರೂ ಮಾಡಿ ಮುಗಿಸಬೇಕು ಎಂದು ನೀವು ಪ್ಲಾನ್ ಮಾಡಿದಂತೆ ಕಾಣುತ್ತದೆ. ಇದರಲ್ಲಿ ಏನೋ ಒಂದು ಒಳ ಗುಟ್ಟು ಇದೆ.”

ನನ್ನತ್ತ ಮುಖಮಾಡಿದ ನ್ಯಾಯಾಧೀಶರ ಮುಖ ಈಗ ತುಂಬಾ ಸೌಮ್ಯವಾಗಿತ್ತು. ನನ್ನ ನೋಡಿ ಅಂದರು “ಡಾಕ್ಟ್ರೇ ಕ್ಷಮಿಸಿ. ಇಲ್ಲಿ ಏನೋ ಒಂದು ದೊಡ್ಡ ಮಸಲತ್ತು ನಡೆಯುತ್ತಿದೆ. ಬೇರೆ ಎಲ್ಲಾ ಸಾಕ್ಷಿಗಳ ವಿಚಾರಣೆ ಮುಗಿದಿದೆ. ಆದರೆ ಈ ಕೊಲೆಯಲ್ಲಿ ನಿಮ್ಮ ಸಾಕ್ಷಿ ಬಹು ಮುಖ್ಯ. ಈ ವಕೀಲರು ಇಂದು ನಿವೃತ್ತಿ ಹೊಂದುತ್ತಿದ್ದಾರೆ. ನಾಳೆ ಬೇರೆಯವರಿಂದ ನಿಮ್ಮ ಪರೀಕ್ಷೆ ಮಾಡಿಸಬೇಕು ಎಂದು ನನಗೆ ಈಗ ತೋಚುತ್ತಿದೆ. ನಿಮಗೆ ಕಷ್ಟ ಆದರೂ ಪರವಾಗಿಲ್ಲ, ದಯವಿಟ್ಟು ನಾಳೆ ಬನ್ನಿ” ಎಂದು ಸರಕಾರಿ ವಕೀಲರನ್ನು ನೋಡುತ್ತಾ ಕುಹಕದ ಧ್ವನಿಯಲ್ಲಿ ಹೇಳಿದರು.

ಸಾಧಾರಣವಾಗಿ ನನಗೆ ಯವತ್ತೂ ಕೋರ್ಟಿನಲ್ಲಿ ಆಗಲಿ, ವಕೀಲರಿಂದ ಆಗಲಿ ತೊಂದರೆ ಆಗಿರಲಿಲ್ಲ. ನನ್ನ ಅವರ ಭಾಂದವ್ಯ ಸದಾ ಚೆನ್ನಾಗಿರುತ್ತಿತ್ತು.

ಒಲ್ಲದ ಮನಸ್ಸಿನಿಂದ ಕಟಕಟೆಯಿಂದ ಕೆಳಗಿಳಿದು ಬಂದ ನಾನು ಕೋರ್ಟಿನ ವರಾಂಡಕ್ಕೆ ಬರುವಾಗ, ನನ್ನ ಪರಿಚಯದ ವಕೀಲರೊಬ್ಬರು ನನ್ನ ಜೊತೆ ಕಾಲು ಹಾಕುತ್ತಾ ನಿಧಾನವಾಗಿ ಕಥೆ ಏನು ಎಂದು ವಿವರಿಸಿದರು.

ಅಂದು ನನ್ನನ್ನು ಸರಿಯಾದ ಯಾವ ಪ್ರಶ್ನೆಗಳನ್ನು ಕೇಳದೆ, ಅದು ಬರೇ ಆತ್ಮಹತ್ಯೆ ಎಂಬಂತೆ ಬಿಂಬಿಸಿ, ಆರೋಪಿಗೆ ಸಹಾಯ ಮಾಡುವಂತೆ ಅಲ್ಲೊಂದು ಡೀಲ್ ಕುದುರಿತ್ತು. ವಾರಂಟ್ ಕೊಟ್ಟು ಅರ್ಜೆಂಟ್ ಮಾಡದಿದ್ದರೆ, ನಾನು ಮುಂದಿನ ಯಾವುದಾದರೂ ಒಂದು ದಿನ ಬಂದಾಗ, ಹೊಸ ವಕೀಲರು, ಸರಿಯಾದ ಪ್ರಶ್ನೆ ಕೇಳಿ, ಸರಿ ಉತ್ತರ ಸಿಕ್ಕಿ, ಆರೋಪಿಗೆ ಸಜೆ ಆಗುತ್ತಿತ್ತು. ಅದನ್ನು ತಡೆಯಲು, ಇದು ಒಂದು ಅಡ್ಡ ದಾರಿ.

ಎಷ್ಟು ವಿಚಿತ್ರ ನೋಡಿ. ಅವರು ಮಾಡಿಕೊಂಡ ಒಳ ಒಪ್ಪಂದದಿಂದ, ನನ್ನನ್ನು ಅಷ್ಟು ದೂರದಿಂದ ಒಬ್ಬ ಕೈದಿಯಂತೆ ಕರೆದುಕೊಂಡು ಬಂದು, ನಾನು ಏನೇನೊ ಕಷ್ಟವನ್ನು ಅನುಭವಿಸುವ ಪರಿಸ್ಥಿತಿಯನ್ನು ಸೃಷ್ಟಿ ಮಾಡಿ ಬಿಟ್ಟಿದ್ದರು.

ಯಾವ ತಪ್ಪಿಲ್ಲದಿದ್ದರೂ, ಇನ್ಯಾರದ್ದೋ ಲಾಭಕ್ಕೆ ವಾರಂಟ್ ಎಂಬ ಮಾಯಾ ಬಜಾರ್ ಒಳಗೆ ನನ್ನನ್ನು ತಳ್ಳಲಾಗಿತ್ತು.!