ಸಿನಿಕತನದಲ್ಲಾಗಲೀ, ಅಸಹಾಯಕತೆಯಲ್ಲಾಗಲೀ ಇವರು ಅಳುತ್ತಾ, ಹಣೆಬರೆಹವನ್ನು ಹಳಿಯುತ್ತಾ ಕೂಡುವುದಿಲ್ಲ. ಹೀಗಿದ್ದಾಗಲೂ ಬಿಗಿಹುಬ್ಬಿನ ಕಾರ್ಪಣ್ಯದ, ಶಠತ್ವದ ಬದುಕನ್ನೂ ಇವರು ನಡೆಸುವುದಿಲ್ಲ. ಬದಲಿಗೆ ಅದೇ ಜೀವನೋತ್ಸಾಹದ, ಲವಲವಿಕೆಯ ವ್ಯಕ್ತಿತ್ವವನ್ನು ಕೊನೆಯವರೆಗೂ ಉಳಿಸಿಕೊಳ್ಳುತ್ತಾರೆ. ತಿಳಿಗೇಡಿಯನ್ನು ಕಟ್ಟಿಕೊಂಡೇ ಬದುಕನ್ನು ಗೆಲ್ಲುತ್ತಾ ಹೋಗುವ ಈ ಹೆಣ್ಣು ಮಕ್ಕಳು ಇವರಿಬ್ಬರೂ ಮನೆಯಲ್ಲಿಲ್ಲದ ಹೊತ್ತಿನಲ್ಲಿ ಆತ ಮಿತಿಮೀರಿ ತಿಂದ ಜಾಮೂನಿನ ಕಾರಣಕ್ಕೆ ಕಳೆದುಕೊಳ್ಳುವುದು ವಿಕಟ ವ್ಯಂಗ್ಯದಂತೆ ನಮಗೆ ಕಾಣಿಸುತ್ತದೆ. ಆತ ಮಾಡಿದ ಏನೆಲ್ಲ ಅನಾಹುತಗಳನ್ನು ಜೀರ್ಣಿಸಿಕೊಂಡು ಬದುಕು ನಡೆಸಿದವರಿಗೆ ಆತನಿಗೆ ಜೀರ್ಣಿಸಿಕೊಳ್ಳಲಾಗದ ಸಿಹಿಯ ಕಾರಣಕ್ಕಾಗಿ ಕಳೆದುಕೊಳ್ಳುವುದೆಂದರೆ ಅದೆಂಥ ವ್ಯಂಗ್ಯ, ಅದೆಂಥ ದುರಂತ!
ಶೋಭಾ ಗುನ್ನಾಪೂರ ಕಥಾ ಸಂಕಲನ “ಭೂಮಿಯ ಋಣ”ಕ್ಕೆ ಎಂ.ಎಸ್. ಆಶಾದೇವಿ ಬರೆದ ಮುನ್ನುಡಿ

ಶ್ರೀಮತಿ ಶೋಭಾ ಗುನ್ನಾಪೂರ ಅವರ ಕಥೆಗಳು ನನ್ನಲ್ಲಿ ಆಶ್ಚರ್ಯ ಮತ್ತು ಸಂತೋಷ ಎರಡನ್ನೂ ಕೊಟ್ಟಿವೆ. ಇವರ ವ್ಯಕ್ತಿತ್ವ ಮತ್ತು ಬದುಕು ಎರಡೂ ನಮ್ಮಲ್ಲಿ ಗೌರವವನ್ನು ಹುಟ್ಟಿಸುತ್ತವೆ ಎನ್ನುವುದು ನಿಜ. ಅದನ್ನು ಸಕಾರಣವಾಗಿ ಹೆಚ್ಚಿಸುವುದು ಇವರ ಈ ಹೊಚ್ಚ ಹೊಸ ಕಥೆಗಳು.

ಯಾಕಾಗಿ ಬರೆಯುತ್ತೇವೆ? ಒಂದು ಕಥಾ ಸಂಕಲನಕ್ಕೂ, ಕವಿತಾ ಸಂಕಲನಕ್ಕೂ ಆಗುವಷ್ಟು ಸರಕು ಎಲ್ಲರಲ್ಲಿಯೂ ಇರುತ್ತದೆ ಎನ್ನುವ ಮಾತಿನ ಬಗೆಗೆ ನಮಗೆ ಅನುಮಾನಗಳು ಇರಬೇಕಿಲ್ಲ. ಆದರೆ ಪ್ರಶ್ನೆ ಇರುವುದು ಬರೆಯುವ ತುರ್ತು ಕಲೆಯ ಮಾಂತ್ರಿಕ ಸ್ಪರ್ಶವನ್ನು ಪಡೆಯುವುದರಲ್ಲಿ. ಹೊಸತನದಿಂದ ಓದುಗರನ್ನೆ ಸೆಳೆಯುವ ಪ್ರಕ್ರಿಯೆಗೆ ಪ್ರತಿಭೆಯ ಬಲವೂ ದಕ್ಕಿದರೆ ಆ ಭಾಷೆಗೆ ಹೊಸ ಲೇಖಕರು ಸಿಕ್ಕರೆಂದೇ ಅರ್ಥ. ಕಥಾ ವಸ್ತುವನ್ನು ತನ್ನೊಬ್ಬಳ/ನ ವ್ಯಕ್ತಿಗತ ತುರ್ತಿನಿಂದ ಹೊರತಂದು ಸಾರ್ವಜನಿಕಗೊಳಿಸುವ ಭಿತ್ತಿಯನ್ನು ಸೃಷ್ಟಿಸುವುದೇ ಕಲೆಯ ಮೂಲ ಸವಾಲು. ನನ್ನದು ನನ್ನದು ಮಾತ್ರವಲ್ಲ ಎನ್ನುವುದೇ ಯಾವುದೇ ಕಲಾಭಿವ್ಯಕ್ತಿಯ ಗುರಿ ಮತ್ತು ಸಾರ್ಥಕತೆಯ ನೆಲೆ.

(ಶೋಭಾ ಗುನ್ನಾಪೂರ)

ಶೋಭಾ ಅವರ ’ಭೂಮಿಯ ಋಣ’ ಸಂಕಲನವು ವ್ಯಕ್ತಿಗತ ಶೋಧ ಮತ್ತು ಸಾಮಾಜಿಕ ಶೋಧದ ಎರಡೂ ಆಯಾಮಗಳನ್ನು ಹೊಂದಿದೆ. ಮುಖ್ಯವಾದ ಮಾತೆಂದರೆ, ಎರಡನ್ನೂ ಅದು ತಳಸ್ತರದ ಬದುಕಿನಿಂದಲೇ ಮಾಡುತ್ತದೆ ಎನ್ನುವುದು. ಶೋಭಾ ಅವರು ನಿರಂತರವಾಗಿ ಜನಮುಖೀ ಕೆಲಸಗಳಲ್ಲಿ ಅವರನ್ನು ತೊಡಗಿಸಿದ ಕಾರಣದಿಂದಲೇ ಇರಬೇಕು, ಸಾಮಾನ್ಯವಾಗಿ ಈ ವಸ್ತುವನ್ನು ಆರಿಸಿಕೊಂಡ ಕಥೆಗಳಲ್ಲಿ ಇರುವ ವ್ಯಗ್ರತೆಯಾಗಲೀ ಆಕ್ರೋಶವಾಗಲೀ ಕಾಣಿಸುವುದಿಲ್ಲ. ಅದರೊಂದಿಗೆ ಇವರ ದೃಷ್ಟಿಕೋನ ಮತ್ತು ನಿಲುವುಗಳಲ್ಲಿನ ಸಂಯಮ, ಪ್ರಬುದ್ಧತೆಯೂ ಸೇರಿದೆ. ಸಂದರ್ಭ ಮತ್ತು ವಾಸ್ತವಕ್ಕೆ ನಾವು ಪ್ರತಿಕ್ರಿಯಿಸುವ ರೀತಿಯೇ ಸವಾಲುಗಳನ್ನು ನಾವು ನಿಭಾಯಿಸುವುದರ ದಿಕ್ಸೂಚಿಯಾಗಿರುತ್ತದೆ. ಬಡತನದ ಹಲವು ದಾರುಣ ಮಾದರಿಗಳನ್ನು ಚಿತ್ರಿಸುವಾಗಲೂ ಶೋಭಾ ಅವರು ಉಳಿಸಿಕೊಳ್ಳುವ ಸಂಯಮವೇ ಅವರ ಕತೆಗಳನ್ನು ಗೆಲ್ಲಿಸುತ್ತದೆ. ಶೋಭಾ ಅವರ ಮುಂದಿನ ಕತೆಗಳ ಬಗ್ಗೆ ಭರವಸೆ ಮತ್ತು ಕುತೂಹಲ ಮೂಡುವುದೂ ಇದೇ ಕಾರಣಕ್ಕಾಗಿ.

ಬರೆಯಬೇಕೆನ್ನುವ ಆಸೆಯು ದುರ್ದಮ್ಯ ಒತ್ತಡವಾದಾಗ ಮಾತ್ರ ಕಲೆಯ ಉಗಮವಾಗುತ್ತದೆ. ಇದರಲ್ಲಿ ಅವಸರ ಸಲ್ಲದು. ಕತೆಯೋ ಕವಿತೆಯೋ ಅದು ತಾನಾಗಿ ಹೊರಬರಲು ಕಾಯಬೇಕು. ಇಲ್ಲಿನ ಹಲವಾರು ಕತೆಗಳಿಗೆ ಶೋಭಾ ಅವರು ಕಾದಿದ್ದಾರೆ.

ಈ ಸಂಕಲನದ ಬಹುಪಾಲು ಕತೆಗಳು ಸ್ತ್ರೀಕೇಂದ್ರಿತವಾಗಿವೆ. ಇದು ಉದ್ದೇಶಪೂರ್ವಕವೋ ಸಹಜವೋ ಎನ್ನುವುದು ಮುಖ್ಯವಲ್ಲ. ಆ ವಸ್ತುವನು ಇವರು ಹೇಗೆ ನಿರ್ವಹಿಸಿದ್ದಾರೆ ಎನ್ನುವುದೇ ಮುಖ್ಯ. ಇವರ ಒಟ್ಟೂ ಕತೆಗಳನ್ನು ಒಂದು ಮೂಲಕೇಂದ್ರದ ಮೂಲಕ ಪ್ರವೇಶಿಸುವುದಾದರೆ ಹೆಣ್ಣಿನ ಧಾರಣ ಶಕ್ತಿಯನ್ನು ತನಗೂ ಲೋಕಕ್ಕೂ ಮನದಟ್ಟು ಮಾಡಿಕೊಳ್ಳುವ ಮತ್ತು ಮಾಡಿಸುವ ಆಶಯದವು. ಸ್ವತಃ ಹೆಣ್ಣಿಗೇ ತನ್ನ ಈ ಅಸಾಧಾರಣ ಗುಣ ಬೆರಗು ಹುಟ್ಟಿಸುತ್ತದೆ. ಬದುಕು ಮುಗಿದೇ ಹೋಯಿತು, ಅಥವಾ ಬದುಕಿನ ಬಿಕ್ಕಟ್ಟುಗಳು ತನ್ನನ್ನು ಮುಗಿಸಿಬಿಡುತ್ತವೆ ಎಂದು ಅವಳೇ ಹೆದರಿಕೊಳ್ಳುವಾಗಲೂ ಅದು ಯಾವ ಶಕ್ತಿ ತನ್ನನ್ನು ಮತ್ತೆ ಬದುಕಿನೊಂದಿಗೆ ಸೆಣಸುವಂತೆ ಮಾಡುತ್ತದೆ ಎನ್ನುವುದು ಎಷ್ಟೋ ಬಾರಿ ಅವಳಿಗೇ ತಿಳಿಯುವುದಿಲ್ಲ. ಅಮೂರ್ತ ನೆಲೆಯಲ್ಲಿ ಬದುಕು ಮತ್ತು ಅಮೂರ್ತ ನೆಲೆಯಲ್ಲಿ ಮೌಲ್ಯ ವ್ಯವಸ್ಥೆಗಳು ಹೆಣ್ಣನ್ನು ಹಣಿಯಲು ಏನೆಲ್ಲ ಸವಾಲುಗಳನ್ನು ಸತತವೆಂಬಂತೆ ಒಡ್ಡುತ್ತಲೇ ಇರುವಾಗ ಹೆಣ್ಣು ಬಹುತೇಕ ಸಂದರ್ಭಗಳಲ್ಲಿ ನಗು ನಗುತ್ತಲೇ ಲೀಲಾಜಾಲವಾಗಿ ಎಂಬಂತೆ ಎದುರಿಸುವ ಇಲ್ಲಿನ ಕಥೆಗಳು ನಮಗೆ ಪ್ರಿಯವಾಗುತ್ತಾ ಹೋಗುತ್ತವೆ. ಎರವಲು ತಂದ ಅಥವಾ ಸಾಮಾಜಿಕ ಆಕ್ರೋಶದ ಕಾರಣಕ್ಕಾಗಿ ಹೆಣ್ಣನ್ನು ವೈಭವೀಕರಿಸುವ ಯಾವ ಪ್ರಯತ್ನವನ್ನೂ ಕತೆಗಾರ್ತಿಮಾಡುವುದಿಲ್ಲ. ವಾಸ್ತವವಾದಿ ನೆಲೆಯಲ್ಲಿಯೇ ಈ ಕತೆಗಳು ಮೈತಳೆದಿವೆ.

ಮೊದಲ ಕತೆ ಬೇಗೆಯ ಇಬ್ಬರು ನಾಯಕಿಯರನ್ನು ನೋಡಿದಾಗಲೇ ಈ ಅಂಶ ಸ್ಪಷ್ಟವಾಗುತ್ತದೆ. ದುಂಡವ್ವ ಮತ್ತು ಜೀಜಾಬಾಯಿ. ದೇವೇಂದ್ರನಂತಹ ತಿಳುವಳಿಕೆ ಸಾಲದ ಮಗನನ್ನು ಬೆಳೆಸಲು ಮತ್ತು ಅಂತಹ ಗಂಡನನ್ನು ಸಂಭಾಳಿಸಲು ಅವರು ನಡೆಸುವುದು ಭಗೀರಥ ಪ್ರಯತ್ನವನ್ನೇ, ಆದರೆ ಅದನ್ನು ಅವರು ತಮ್ಮ ಬದುಕಿನ ಸಹಜ ಗತಿಯ ಅಖಂಡತೆಯಲ್ಲಿಯೇ ನಿರ್ವಹಿಸುತ್ತಾರೆ. ಆ ಕಾರಣಕ್ಕಾಗಿ ಅವರಲ್ಲಿ ಸ್ವಮರುಕವೂ ಇಲ್ಲ, ಲೋಕದ ಮರುಕವನ್ನೂ ಅವರು ಬಯಸುವುದಿಲ್ಲ. ಹೆಣ್ಣಿನ ಹುಟ್ಟುಗುಣವಾದ ದೃಢತೆಯಿಂದ ಅವರು ದೇವೇಂದ್ರನನ್ನು ತಮ್ಮ ಬದುಕಿನ ಭಾಗದಂತೆ ನಡೆಸಿಕೊಂಡು ಹೋಗುತ್ತಾರೆ.

ಬಡತನದ ಹಲವು ದಾರುಣ ಮಾದರಿಗಳನ್ನು ಚಿತ್ರಿಸುವಾಗಲೂ ಶೋಭಾ ಅವರು ಉಳಿಸಿಕೊಳ್ಳುವ ಸಂಯಮವೇ ಅವರ ಕತೆಗಳನ್ನು ಗೆಲ್ಲಿಸುತ್ತದೆ. ಶೋಭಾ ಅವರ ಮುಂದಿನ ಕತೆಗಳ ಬಗ್ಗೆ ಭರವಸೆ ಮತ್ತು ಕುತೂಹಲ ಮೂಡುವುದೂ ಇದೇ ಕಾರಣಕ್ಕಾಗಿ.

ಸಿನಿಕತನದಲ್ಲಾಗಲೀ, ಅಸಹಾಯಕತೆಯಲ್ಲಾಗಲೀ ಇವರು ಅಳುತ್ತಾ, ಹಣೆಬರೆಹವನ್ನು ಹಳಿಯುತ್ತಾ ಕೂಡುವುದಿಲ್ಲ. ಹೀಗಿದ್ದಾಗಲೂ ಬಿಗಿಹುಬ್ಬಿನ ಕಾರ್ಪಣ್ಯದ, ಶಠತ್ವದ ಬದುಕನ್ನೂ ಇವರು ನಡೆಸುವುದಿಲ್ಲ. ಬದಲಿಗೆ ಅದೇ ಜೀವನೋತ್ಸಾಹದ, ಲವಲವಿಕೆಯ ವ್ಯಕ್ತಿತ್ವವನ್ನು ಕೊನೆಯವರೆಗೂ ಉಳಿಸಿಕೊಳ್ಳುತ್ತಾರೆ. ತಿಳಿಗೇಡಿಯನ್ನು ಕಟ್ಟಿಕೊಂಡೇ ಬದುಕನ್ನು ಗೆಲ್ಲುತ್ತಾ ಹೋಗುವ ಈ ಹೆಣ್ಣು ಮಕ್ಕಳು ಇವರಿಬ್ಬರೂ ಮನೆಯಲ್ಲಿಲ್ಲದ ಹೊತ್ತಿನಲ್ಲಿ ಆತ ಮಿತಿಮೀರಿ ತಿಂದ ಜಾಮೂನಿನ ಕಾರಣಕ್ಕೆ ಕಳೆದುಕೊಳ್ಳುವುದು ವಿಕಟ ವ್ಯಂಗ್ಯದಂತೆ ನಮಗೆ ಕಾಣಿಸುತ್ತದೆ. ಆತ ಮಾಡಿದ ಏನೆಲ್ಲ ಅನಾಹುತಗಳನ್ನು ಜೀರ್ಣಿಸಿಕೊಂಡು ಬದುಕು ನಡೆಸಿದವರಿಗೆ ಆತನಿಗೆ ಜೀರ್ಣಿಸಿಕೊಳ್ಳಲಾಗದ ಸಿಹಿಯ ಕಾರಣಕ್ಕಾಗಿ ಕಳೆದುಕೊಳ್ಳುವುದೆಂದರೆ ಅದೆಂಥ ವ್ಯಂಗ್ಯ, ಅದೆಂಥ ದುರಂತ! ಇದನ್ನು ಹೀಗೂ ನೋಡಬಹುದು ಎನ್ನಿಸುತ್ತದೆ. ಹೆಣ್ಣಿನ ಅಸಾಧಾರಣ ಶಕ್ತಿಯ ಎದುರಿಗೆ ಪ್ರಕೃತಿಯೇ ತೀರಾ ಸಾಧಾರಣ ಎನ್ನಿಸಿ ಬಿಡುತ್ತದೆ. ಬದುಕಿನ ಅನೂಹ್ಯ ತಿರುವುಗಳೆದುರಿಗೆ ಮನುಷ್ಯರ ಅಸಹಾಯಕತೆಯನ್ನೂ ಈ ಅಂತ್ಯ ಹೇಳುತ್ತಿದೆ ನಿಜ. ಆದರೆ ಅಗ್ನಿಪರೀಕ್ಷೆಗಳನ್ನೇ ಹಾದ ಹೆಣ್ಣು ಮಕ್ಕಳನ್ನು ಸಾಧಾರಣ ಜಾಮೂನು ಸೋಲಿಸಿಬಿಡುವುದು ಮಾತ್ರ ಬದುಕಿನ ವಿಲಕ್ಷಣತೆಯನ್ನು, ಅನಿಶ್ಚಿತತೆಯನ್ನು ಘನವಾಗಿ ಧ್ವನಿಸುತ್ತದೆ. ಸ್ವಲ್ಪ ಉಚಾಯಿಸಿ ಹೇಳಬಹುದಾದರೆ, ಗಂಡಿನ ಮಿತಿಯನ್ನೂ ಇದು ಹೇಳಬಹುದೆ? ತುಸು ಕ್ರೌರ್ಯದಂತೆ ಇದು ಕಾಣಿಸುತ್ತದೆ ಎನ್ನುವುದರ ಅಂದಾಜಿದೆ ನನಗೆ. ಆದರೆ ಲಲಿತಾ ಸಿದ್ದಬಸವಯ್ಯನವರ ಲವಾಜಮೆ ಕವಿತೆಯನ್ನೊಮ್ಮೆ ನೆನಪಿಸಿಕೊಳ್ಳಿ, ರಾಗಿಯಲ್ಲಿನ ಮಣ್ಣು ಕಲ್ಲುಗಳನ್ನೂ ಅರಗಿಸಿಕೊಳ್ಳಬಲ್ಲ ಹೆಣ್ಣಿನ ಶಕ್ತಿಯನ್ನೂ ತುಸುವೇ ಹೆಚ್ಚು ಕಡಿಮೆಯಾದರೂ ಅರಗಿಸಿಕೊಳ್ಳಲಾಗದ ಗಂಡಿನ ಅಶಕ್ತಿಯನ್ನೂ ಆ ಕವಿತೆ ಹೇಳುತ್ತದೆಯಷ್ಟೇ. ಬದುಕಿನ ಬಿಕ್ಕಟ್ಟುಗಳಲ್ಲಾದರೂ ಅಷ್ಟೇ ಹೆಣ್ಣು ಎದುರಿಸುವಷ್ಟು ಸ್ಥೈರ್ಯದಿಂದ ಗಂಡು ಬದುಕಿನ ಸವಾಲುಗಳನ್ನು ಎದುರಿಸುವುದು ಕಷ್ಟ.

ನನಗೆ ಪ್ರಿಯವಾದ ಇತರ ಕತೆಗಳೆಂದರೆ, ‘ಭೂಮಿಯ ಋಣ’, ’ತಿರುವು’ ಹಾಗೂ ’ಏಳು ಮಕ್ಕಳ ತಾಯಿ’ ’ನಮ್ಮೂರ ಗೊಲ್ಲಾಳ’ ಕತೆಯೂ ಒಳ್ಳೆಯ ಕತೆ. ಶತಮಾನಗಳಿಂದ ಮಾನವರನ್ನು ಪೊರೆದ ನಂಬಿಕೆಯೇ ಜೀವಕ್ಕೆ ಮುಳುವಾದಾಗ ಏಳುವ ಪ್ರಶ್ನೆ ಕೇವಲ ಅಂತಃಕರಣದ್ದು ಮತ್ತು ಭಾವುಕತೆಯದ್ದು ಮಾತ್ರವಲ್ಲ, ಅದು ಜೀವವನ್ನು ತೆಗೆಯುವ, ಜೀವನಗಳನ್ನೂ ತೆಗೆಯುವ ಸಾಧ್ಯತೆಯನ್ನೂ ಅದು ಧ್ವನಿಸುತ್ತದೆ. ಜಾತ್ರೆ ಎನ್ನುವುದು ಕೊನೆಗೂ ಸಾಮೂಹಿಕವಾದ ಶೋಷಣೆಯ ಒಂದು ಮಾದರಿಯಷ್ಟೇ. ಮಾನವೀಯವಾಗಬೇಕಾದ ಧರ್ಮವೇ ಅಮಾನವೀಯವಾದ ಎಲ್ಲ ವ್ಯವಸ್ಥೆಗಳ ಮೂಲವಾಗುವ ಮೂಲಕ ಮನುಷ್ಯರ ವ್ಯಕ್ತಿತ್ವಗಳನ್ನೇ ಅಮಾನ್ಯಗೊಳಿಸಿಬಿಡುವುದರ ಸ್ಪಷ್ಟ ಆಚರಣೆ ಇದು. ಪುರೋಹಿತಶಾಹಿಯು ತಾನೆಷ್ಟೇ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ್ದಾದರೂ ಬಹು ಸಂಖ್ಯಾತರನ್ನು, ಅಮಾಯಕರನ್ನು ತನ್ನ ಶೋಷಣೆಯ ಪರಿಧಿಯೊಳಗೆ ಸೇರಿಸಿಕೊಳ್ಳುವ, ಅವರನ್ನು ತನ್ನ ಕೈಗೊಂಬೆಯಂತೆ ಕುಣಿಸುವ ಎಲ್ಲದರ ಸಂಕೇತ ಜಾತ್ರೆ. ಯಾವುದು ನಿಜದಲ್ಲಿ ಸಾಂಸ್ಕೃತಿಕ ಆಚರಣೆಯಾಗಬಹುದೋ ಅದು ತನ್ನ ಆಶಯದಲ್ಲಿಯೇ ಇರುವ ಸ್ವಾರ್ಥ ಮತ್ತು ಪಟ್ಟಭದ್ರ ಗುಣಗಳಿಂದಾಗಿ ಅಮಾನವೀಯವಾಗುವುದನ್ನೇ ಸೂಚಿಸುತ್ತದೆ. ಇಲ್ಲಿ ಪ್ರಶ್ನೆ ಗೊಲ್ಲಾಳನ ಸಾವಿನ ಆಕಸ್ಮಿಕತೆಯದ್ದಲ್ಲ, ಬದಲಿಗೆ ಇದನ್ನೂ ಪಟ್ಟಭದ್ರರು ತಮ್ಮ ನಂಬಿಕೆಗೆ ಪೂರಕವಾಗಿಯೇ ಬಳಸಿಕೊಳ್ಳುವುದರಲ್ಲಿ ಪಡೆಯುವ ಯಶಸ್ಸಿನದ್ದು. ಮುಂದಿನ ವರ್ಷಗಳಲ್ಲಿ ಗೊಲ್ಲಾಳನ ಆಚರಣೆಯೂ ಸೇರುತ್ತದೆ ಎನ್ನುವುದು ಏನನ್ನು ಹೇಳುತ್ತದೆ? ಇನ್ನಷ್ಟು ಮತ್ತಷ್ಟು ಗೊಲ್ಲಾಳರು ಬರುತ್ತಲೇ ಇರಬೇಕೆಂದು. ಈ ಪಟ್ಟಿಯಲ್ಲಿ ತಪ್ಪಿಯೂ ಮೇಲ್ಜಾತಿಯವರು ಬರುವುದನ್ನು ಅದು ಒಪ್ಪುವುದಿಲ್ಲ. ತಳವರ್ಗದವರಾದರೂ ತಮ್ಮವರೊಬ್ಬರಿಗೆ ಸಿಕ್ಕ ಹುತಾತ್ಮ ಪಟ್ಟದಲ್ಲಿ ಬೀಗಿಯೇ ಬೀಗಿದ್ದು.

(ಡಾ. ಎಂ.ಎಸ್. ಆಶಾದೇವಿ)

ಭೂಮಿಯ ಋಣ ಕತೆಯಲ್ಲಿ ಮತ್ತೆ ಹಳಿ ತಪ್ಪಿದ ಬದುಕನ್ನ್ನು ಹಳಿಗೆ ತರುವ ಹೆಣ್ಣಿನ ಚಿತ್ರಣವೇ ಕಾಣಿಸುತ್ತದೆ. ಕಲಿತವನೆಂದು ಮದುವೆ ಮಾಡಿಕೊಂಡವನ ಸೋಮಾರಿತನವನ್ನು ಒಂದು ಹಂತದವರೆಗೆ ಮೌನವಾಗಿ ಸಹಿಸುವ ಸಕ್ಕೂಬಾಯಿ ನಿಧಾನವಾಗಿ ಸೂತ್ರಗಳನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳುತ್ತಾಳೆ. ಮೈಬಗ್ಗಿಸಿ ದುಡಿದೇ ಗೊತ್ತಿಲ್ಲದವನನ್ನು ಮುಂಬೈನಂತಹ ಶಹರಿಗೆ ಕರೆದೊಯ್ಯುತ್ತಾಳೆ. ದುಡಿಮೆಯ ಮಹತ್ವವನ್ನು ಮಾತ್ರವಲ್ಲ ಅದರ ಸುಖವನ್ನೂ ಅವನಿಗೆ ತೋರಿಸುತ್ತಾಳೆ. ಆಕಸ್ಮಿಕ ದುರ್ಘಟನೆಯಲ್ಲಿ ಗಂಡನ ದೇಹ ಮನಸ್ಸುಗಳೆರಡೂ ಬಳಲಿದಾಗ ಮತ್ತೆ ಆತನನ್ನು ಬದುಕಿನ ಕಡೆಗೆ ತಿರುಗಿಸುತ್ತಾಳೆ. ತನ್ನ ಎಳೆಯ ಮಕ್ಕಳನ್ನು ಅತ್ತೆಯ ಬಳಿ ಬಿಟ್ಟಿರುವ ನೋವನ್ನು ನುಂಗಿಕೊಂಡು ತನ್ನಿಡೀ ಸಂಸಾರ ಘನತೆಯಿಂದ ಬದುಕಲು ಬೇಕಾದದ್ದೆಲ್ಲವನ್ನೂ ನಿರ್ವಂಚನೆಯಿಂದ ಮಾಡಿ ಅದರಲ್ಲಿ ಗೆಲ್ಲುತ್ತಾಳೆ.

ತಿರುವ ಕತೆಯಲ್ಲಾದರೂ ಸುಮ ಮಾತ್ರವಲ್ಲ ಅವಳ ತಾಯಿ, ಅಜ್ಜಿಯರೂ ಅವಳಿಗೆ ಬೈಯ್ಯುತ್ತಲೆ ನೆರವಾಗುವ ಬಗೆಯಲ್ಲಿ ಪ್ರತಿರೋಧದ ಒಂದು ಮಾದರಿಯೇ ಹುಟ್ಟಿ ಬಿಡುತ್ತದೆ. ಮೇಲ್ನೋಟಕ್ಕೆ ಸುಮಾಳ ಆಯ್ಕೆಯ ಬದುಕಿನ ಸ್ವಾತಂತ್ರ‍್ಯವನ್ನು ವಿರೋಧಿಸಿದರೂ ಅವರು ಯಾರೂ ಸುಮಾಳ ಬದುಕು ಅಲ್ಲಿಗೆ ಮುಗಿಯಿತೆಂದು ತೀರ್ಮಾನಿಸುವುದಿಲ್ಲ. ಹೇಗಾದರೂ ಅವಳ ಬದುಕು ನೇರ್ಪುಗೊಳಿಸಲು ಅವಳ ಗೆಳತಿ ಕೊಟ್ಟ ಸಲಹೆಯನ್ನು ಒಪ್ಪಿ ಅವಳ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಹಕರಿಸುತ್ತಾರೆ. ಕೊನೆಗಾದರೂ ಅವಳ ಅಂತರ್ ಧರ್ಮೀಯ ಮದುವೆಯನ್ನೂ ಆ ಕುಟುಂಬದ ಹೆಣ್ಣು ಮಕ್ಕಳು ಜೀರ್ಣಿಸಿಕೊಳ್ಳುವಷ್ಟು ಬೇಗ ಗಂಡಸು ಜೀರ್ಣಿಸಿಕೊಳ್ಳುವುದಿಲ್ಲ. ಈ ತಿರುವನ್ನು ಕತೆಗಾರ್ತಿ ವ್ಯಕ್ತಿಗತ ಪಲ್ಲಟದಷ್ಟೇ ಸಾಮಜಿಕ ಪಲ್ಲಟದ್ದ್ದೂ ಹೌದೆನ್ನುವ ತೀವ್ರತೆಯಲ್ಲಿ ಮಂಡಿಸುತ್ತಾರೆ. ಆದ್ದರಿಂದಲೇ ಈ ಕತೆಗಳಿಗೆ ಪ್ರಸ್ತುತತೆ ತಾನೇ ತಾನಾಗಿ ಒದಗಿ ಬರುತ್ತದೆ.

ಕೆಲವು ಕತೆಗಳು ತೀರಾ ಸರಳ ಹಾಗೂ ಸೂತ್ರಬದ್ಧ ಎನ್ನಿಸುತ್ತವೆ. ಇವುಗಳ ಕಡೆಗೆ ಕತೆಗಾರ್ತಿ ಹೆಚ್ಚಿನ ಗಮನ ಕೊಡುವುದು ಇವರ ಮುಂದಿನ ಸಾಹಿತ್ಯದ ಪ್ರಯಾಣದ ದೃಷ್ಟಿಯಿಂದ ತೀರಾ ಅಗತ್ಯ. ಶೋಭಾ ಅವರ ಶಕ್ತಿಯೆಂದರೆ ಅವರ ಸಮೃದ್ಧ ಜೀವನಾನುಭವ. ಆ ಜೀವನಾನುಭವಕ್ಕೆ ಶಕ್ತಿ ಬರಬೇಕಾದ್ದು ಅವರು ಬಿಗಿಯಾದ ಭಾಷಾ ಕಟ್ಟಡದಿಂದ ಮತ್ತು ಸೂತ್ರಬದ್ಧತೆಯಿಂದ ಹೊರಬರುವುದರಿಂದ. ಇದು ಸಲಹೆ, ವಿಮರ್ಶೆಯ ಜವಾಬ್ದಾರಿ ಎನ್ನುವ ದೃಷ್ಟಿಯಿಂದ ಹೇಳುತ್ತಿದ್ದೇನೆಯೇ ಹೊರತು, ಉಪದೇಶವೆಂದು ಖಂಡಿತಾ ಅಲ್ಲ.

ಶೋಭಾ ಅವರಿಗೆ ಕಥಾ ಪ್ರಪಂಚದಲ್ಲಿ ಒಳ್ಳೆಯ ಸ್ವಾಗತ ಸಿಗಲಿ, ಈ ಶಕ್ತ ಕತೆಗಾರ್ತಿ ಕನ್ನಡಕ್ಕೆ ಅತ್ಯುತ್ತಮ ಕತೆಗಳನ್ನು ಕೊಡಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ. ಕನ್ನಡಕ್ಕೆ ಒಳ್ಳೆಯ ಕತೆಗಳ ಮೂಲಕ ಪ್ರವೇಶ ಪಡೆಯುತ್ತಿರುವ ಈ ಸಮಾಜಮುಖಿ ಲೇಖಕಿಗೆ ಅಭಿನಂದನೆಗಳು ಹಾಗೂ ಸ್ವಾಗತ.

(ಕೃತಿ: ಭೂಮಿಯ ಋಣ (ಕಥಾಸಂಕಲನ), ಲೇಖಕಿ: ಶೋಭಾ ಗುನ್ನಾಪೂರ, ಪ್ರಕಾಶಕರು: ವೈಷ್ಣವಿ ಪ್ರಕಾಶನ, ಬೆಲೆ: 100)