”ಅಂಗವೈಕಲ್ಯವು ಬರೇ ಆರೋಗ್ಯ ಸಮಸ್ಯೆಯಲ್ಲ, ಅದು ಅಭಿವೃದ್ಧಿ ಮತ್ತು ಮಾನವ ಹಕ್ಕುಗಳ ಸಮಸ್ಯೆಯೂ ಹೌದೆಂದು ವಾದಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದವರು. ತಾನು ನಂಬಿದ ತಾನು ಆಡಿದ ತಾನು ಯೋಚಿಸಿದ ಧೋರಣೆಗಳನ್ನು ಮಾರ್ಗಗಳನ್ನು ಸ್ವತಃ ಆಚರಿಸಿ ಅನುಷ್ಠಾನಿಸಿ ತೋರಿಸಿದವರು. ವಿಶಿಷ್ಟ ಚೇತನರ ಹಕ್ಕುಗಳಿಗೋಸ್ಕರ ಸರಕಾರ, ನ್ಯಾಯಾಲಯದ ಬಾಗಿಲನ್ನು ತಟ್ಟುತ್ತಿದ್ದ ಅವರು ವೀಲ್ ಚೇರ್ ದೂಡಿಕೊಂಡೇ ಬೀದಿಗಿಳಿದು ಪ್ರತಿಭಟನೆಯ ಕೂಗುಗಳನ್ನೂ ಕೂಗಿದವರು”
ಭಾರತದ ವಿಶಿಷ್ಟ ಚೇತನರ ಹೋರಾಟದ ಬೆನ್ನಹುರಿಯಾಗಿದ್ದ ಜಾವೇದ್ ಅಬಿದಿಯವರ ನೆನಪು ಮಾಡಿಕೊಂಡಿದ್ದಾರೆ ಯೋಗೀಂದ್ರ ಮರವಂತೆ.

 

ತಮ್ಮನ್ನು ಹೊರಲಾರದ ಕಾಲುಗಳ ಕಾರಣ “ವೀಲ್ ಚೇರ್” ಮೇಲೆ ಕುಳಿತು ಓಡಾಡುತ್ತಿದ್ದರೂ ದಶಕಗಳ ಕಾಲ ಭಾರತದಲ್ಲಿ ವಿಶಿಷ್ಟ ಚೇತನರ ಹಕ್ಕುಗಳ ಚಳವಳಿಗೆ ಉಸಿರು ಮತ್ತು ಜೀವ ತುಂಬಿದವರು ಅವರು. ತಮ್ಮ ದೇಹದ ಕೆಲ ಭಾಗಗಳು ಕ್ಷೀಣಿಸಿದ್ದರೂ ಸಮಾಜ ಮತ್ತು ಸಂಸ್ಕೃತಿ ಅಸಡ್ಡೆಯಿಂದ ನೋಡುತ್ತಿದ್ದ ಒಂದು ದುರ್ಬಲ ಸಮೂಹದ ಸಧೃಢ ಧ್ವನಿ ಆಗಿದ್ದವರು. ಭಾರತದಲ್ಲಷ್ಟೇ ಅಲ್ಲದೆ ದಕ್ಷಿಣ ಏಷಿಯಾದ ಅಶಕ್ತರ ಪ್ರತಿನಿಧಿ ಎನಿಸಿದ್ದವರು. ಅಂಗವೈಕಲ್ಯವು ಬರೇ ಆರೋಗ್ಯ ಸಮಸ್ಯೆಯಲ್ಲ, ಅದು ಅಭಿವೃದ್ಧಿ ಮತ್ತು ಮಾನವ ಹಕ್ಕುಗಳ ಸಮಸ್ಯೆಯೂ ಹೌದೆಂದು ವಾದಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದವರು. ತಾನು ನಂಬಿದ ತಾನು ಆಡಿದ ತಾನು ಯೋಚಿಸಿದ ಧೋರಣೆಗಳನ್ನು ಮಾರ್ಗಗಳನ್ನು ಸ್ವತಃ ಆಚರಿಸಿ ಅನುಷ್ಠಾನಿಸಿ ತೋರಿಸಿದವರು. ವಿಶಿಷ್ಟ ಚೇತನರ ಹಕ್ಕುಗಳಿಗೋಸ್ಕರ ಸರಕಾರ, ನ್ಯಾಯಾಲಯದ ಬಾಗಿಲನ್ನು ತಟ್ಟುತ್ತಿದ್ದ ಅವರು “ವೀಲ್ ಚೇರ್” ದೂಡಿಕೊಂಡೇ ಬೀದಿಗಿಳಿದು ಪ್ರತಿಭಟನೆಯ ಕೂಗುಗಳನ್ನೂ ಕೂಗಿದವರು. ಒಂದು ಪರಿಣಾಮಕಾರಿ ಚಳವಳಿಯನ್ನು ಯಾವ ತರಹ ರೂಪಿಸಬೇಕು ಮತ್ತು ಚಳವಳಿಯ ನಾಯಕತ್ವ ಹೇಗಿರಬೇಕು ಎಂದು ಉದಾಹರಣೆಯಾಗಿ ಕಣ್ಮುಂದೆ ಬರುವವರು, ಈಗ ನೆನಪು ಮಾತ್ರ.

ಜಾವೇದ್ ಅಬಿದಿ ಈಗಿಲ್ಲ. ಅಂದರೆ ವಿಶಿಷ್ಟ ಚೇತನ ರು ಇನ್ನು ಮುಂದಿನ ತಮ್ಮ ಹೋರಾಟವನ್ನು ಅವರವರೇ ನೋಡಿಕೊಳ್ಳಬೇಕು ಎಂದರ್ಥವೂ ಆದೀತು. ದೆಹಲಿಯಲ್ಲಿ ಪ್ರತಿಭಟನೆಯ ಪತಾಕೆಗಳನ್ನು ಹಿಡಿದು ಅದೆಷ್ಟೋ ಚಳವಳಿಗಳನ್ನು ನಡೆಸುತ್ತಿದ್ದಾಗ ನಿಮ್ಮ ಹಕ್ಕುಗಳಿಗಾಗಿ ನೀವೇ ಎದ್ದು ನಿಲ್ಲಬೇಕು, ನಿಮ್ಮ ಹೋರಾಟ ನೀವೇ ಮಾಡಬೇಕು ಎಂದೇ ತಾನು ಪ್ರತಿನಿಧಿಸುತ್ತಿದ್ದ ಸಮೂಹಕ್ಕೆ ಹೇಳುತ್ತಿದ್ದರು. ಈ ವರ್ಷದ ಮಾರ್ಚ್ 4ರಂದು ದೆಹಲಿಯಲ್ಲಿ ನಿಧನರಾದ ಅಬಿದಿಯವರಿಗೆ 53 ವರ್ಷ ವಯಸ್ಸಾಗಿತ್ತು. ಅವರು 1965ರಲ್ಲಿ ಉತ್ತರಪ್ರದೇಶದ ಅಲಿಘರದಲ್ಲಿ ಹುಟ್ಟಿದರು. ಹುಟ್ಟುವಾಗಲೇ ಬೆನ್ನುಹುರಿಯ ಸಮಸ್ಯೆಯಿಂದ ಬಳಲುತ್ತಿದ್ದವರು ತಮ್ಮ 15ನೆಯ ವರ್ಷದಿಂದಲೇ “ವೀಲ್ ಚೇರ್” ಬಳಸುವಂತಾಯಿತು. ಮುಂದೆ ತಮ್ಮ ಕುಟುಂಬದೊಂದಿಗೆ ಅಮೆರಿಕಾಗೆ ವಲಸೆ ಹೋದವರು ಅಲ್ಲಿಯೇ ಸ್ವಲ್ಪ ಮಟ್ಟಿನ ಶುಶ್ರೂಷೆ ಪಡೆದು ನಂತರ ಪದವಿ ಶಿಕ್ಷಣವನ್ನು ಮುಗಿಸಿದರು. 1989ರಲ್ಲಿ ಪತ್ರಿಕೋದ್ಯಮದ ಉದ್ಯೋಗ ಅರಸುತ್ತ ಭಾರತಕ್ಕೆ ಮರಳಿದರು. ಅಲ್ಲಿಂದ ಮುಂದೆ ಭಾರತದ ವಿಶಿಷ್ಟ ಚೇತನರ ಪ್ರಮುಖ ಧ್ವನಿಯಾದರು. ಹುಟ್ಟುತ್ತಲೇ ಮೊದಲ ಹೋರಾಟವನ್ನು ತಮ್ಮ ಆರೋಗ್ಯ ಮತ್ತು ಸ್ವಾಸ್ಥ್ಯದೊಂದಿಗೆ ಆರಂಭಿಸಿದವರು, ಏರಿದ್ದು ಪ್ರಾಕೃತಿಕ ಮತ್ತು ಸಾಮಾಜಿಕ ಸವಾಲುಗಳ ಪರ್ವತವನ್ನು, ನೀಡಿದ್ದು ವಿಶಿಷ್ಟ ಚೇತನ ಸಮೂಹಕ್ಕೆ ಸಿಂಹ ಬಲವನ್ನು.

1970ರ ದಶಕದಲ್ಲಿ ಅಂಗವಿಕಲರ ಹಕ್ಕುಗಳ ದನಿ ಅಲ್ಲೊಂದು ಇಲ್ಲೊಂದು ವೈಯಕ್ತಿಕ ನೆಲೆಯಲ್ಲಿ ಅತ್ಯಂತ ಕ್ಷೀಣವಾಗಿ ಕೇಳುವುದು ಶುರು ಆಗಿತ್ತು. ಮೂಲಸೌಕರ್ಯಗಳ ಕೊರತೆ, ಸಾಮಾಜಿಕ ತಿರಸ್ಕಾರ, ಕಾನೂನಿನ ಬಲವಿಲ್ಲದೆ ವಿಶಿಷ್ಟ ಚೇತನರ ಮಟ್ಟಿಗೆ ಕರಾಳವಾಗಿದ್ದ ಕಾಲವೂ ಹೌದು ಅದು. ಹುಟ್ಟಿನಿಂದ ಅಥವಾ ಆಮೇಲೆ ಪಡೆದ ದೈಹಿಕ ಅಥವಾ ಮಾನಸಿಕ ಊನವನ್ನು ಪೂರ್ವಜನ್ಮದ ಪಾಪವೋ ಅಥವಾ ತಾತ್ಸಾರಕ್ಕೆ ತುತ್ತಾದ ಪ್ರಾಣಿಯಂತೆಯೋ ವಸ್ತುವಿನಂತೆಯೋ ಪರಿಗಣಿಸುತ್ತಿದ್ದ ದುರ್ಭರ ದಿನಗಳವು. ಅಶಕ್ತರ ಬಗ್ಗೆ ಇಂತಹ ನೋಟ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನ ಎಲ್ಲ ಭಾಗಗಳಲ್ಲೂ ಒಂದಲ್ಲ ಒಂದು ಕಾಲದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಇದ್ದುದೆ. ಅಮೇರಿಕಾ ಇಂಗ್ಲೆಂಡ್ ಆಸ್ಟ್ರೇಲಿಯಾ ಮತ್ತಿತರ ದೇಶಗಳು ಕೂಡ ತಮ್ಮಲ್ಲಿ ನಡೆದ ಚಳವಳಿಗಳ ಕಾರಣದಿಂದಲೇ ತಮ್ಮ ದೃಷ್ಟಿಕೋನವನ್ನು ಪರಾಮರ್ಶಿಸಿಕೊಂಡು 1990ರ ನಂತರವೇ ಕಾನೂನಿನ ಬಲವನ್ನು ವಿಶಿಷ್ಟ ಚೇತನರಿಗೆ ನೀಡಿದವು. ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಸಮಾನತೆಗಳ ವಿಷಯ ಬಂದಾಗ ಜಗತ್ತಿಗೆ ಮಾದರಿಯಾಗಬಲ್ಲ ಬ್ರಿಟನ್ ಕೂಡ ವಿಶಿಷ್ಟ ಚೇತನರ ಭೇದನೀತಿಯ ಕಾನೂನನ್ನು ಜಾರಿಗೆ ತಂದಿದ್ದು 1995ರಲ್ಲಿಯೇ. ಮತ್ತೆ ಆ ಕಾನೂನಿನ ಜಾರಿಯ ಹಿಂದೆ ಲಕ್ಷಾಂತರ ಬ್ರಿಟಿಷ್ ಜನರ ನೂರಾರು ಚಳವಳಿಗಳು ಕೆಲಸ ಮಾಡಿವೆ.

ಪರಂಪರಾನುಗತವಾಗಿ ನಾವು ನೋಡುತ್ತಲೇ ಬಂದ ಅಸಮಾನತೆಗಳು ನಮ್ಮ ಕಣ್ಣಿಗೆ ಬೀಳುವುದೇ ಇಲ್ಲ ಅಥವಾ ಅವು ಸಹಜವಾಗಿ ಜಗತ್ತು ನಡೆಯುವ ರೀತಿಯಾಗಿಯೇ ಕಂಡು ನ್ಯೂನತೆಗಳು ಅಂತ ಅನಿಸುವುದೇ ಇಲ್ಲ. ನನ್ನ ಮನೆಯ, ನನ್ನ ಮಕ್ಕಳ, ನನ್ನ ಒಡಹುಟ್ಟಿದವರ ಸಮಸ್ಯೆಗಳು ಮಾತ್ರ ನನ್ನ ಸಮಸ್ಯೆಯಾಗುತ್ತವೆ; ನೆರೆಮನೆಯ, ಇನ್ನೊಂದು ಊರಿನ, ನನಗೆ ಪರಿಚಯ ಇಲ್ಲದ, ಸಂಬಂಧ ಇಲ್ಲದವರ ತೊಂದರೆಗಳು ನೋವುಗಳು ಕಾಣಿಸುವುದೇ ಇಲ್ಲ. ಬಹುಷ್ಯ ಇದು ಮನುಷ್ಯರ ಕಣ್ಣಿನ ಒಂದು ಮೂಲಭೂತ ದೋಷವೇ ಇರಬೇಕು. ಸ್ವಾತಂತ್ರ್ಯದ ನಂತರ ಭಾರತದಲ್ಲಿ ಅಶಕ್ತರ ಆಸರೆಯಾಗಿ ನಡೆದ ಚಳವಳಿಗಳಲ್ಲಿ ಮುಖ್ಯವಾದುದು ಬಾಬಾ ಆಮ್ಟೇ ಅವರ ಕುಷ್ಠರೋಗಿಗಳ ಪರವಾದ ಚಳವಳಿ. ವಿಶಿಷ್ಟ ಚೇತನರ ಚಳವಳಿಯ ಮೇಲೂ ಬಾಬಾ ಆಮ್ಟೇಯವರ ಚಳವಳಿಯ ಪ್ರಭಾವ ಇತ್ತು. ಒಂದು ಸಾಮಾಜಿಕ ಪಿಡುಗಿಗೆ ಧ್ವನಿ ಕೊಡುವ ಚಳವಳಿ ಇನ್ನೊಂದು ಸಾಮಾಜಿಕ ತಾರತಮ್ಯದ ಹೋರಾಟಕ್ಕೆ ಕಿಡಿಹೊತ್ತಿಸಿದ ಉದಾಹರಣೆಗಳಲ್ಲಿ ಇದೂ ಒಂದು. ವಿಶ್ವದಾದ್ಯಂತ ವಿಶಿಷ್ಟ ಚೇತನರ ಹಕ್ಕುಗಳಿಗೆ ದನಿ ಬರುವಾಗ ಭಾರತದಲ್ಲೂ ಹೆಚ್ಚು ಹೆಚ್ಚು ಕೂಗುಗಳು ಕೇಳಿದವು ಬಂದವು. ಭಾರತದ ಮೊಟ್ಟಮೊದಲ ಬಾರಿಗೆ ವಿಶಿಷ್ಟ ಚೇತನರ ಹಕ್ಕುಗಳ ಕಾನೂನು 1995ರಲ್ಲಿ ಜಾರಿಗೆ ತಂತು. ಇದರ ಹಿನ್ನೆಲೆಯಲ್ಲಿ ಜಾವೇದರ ತೀವ್ರ ಹೋರಾಟ ಇತ್ತು, ವಿಶಿಷ್ಟ ಚೇತನರ ದಂಡನ್ನು ಸಂಸತ್ತು ಭವನದ ಮುಂದೆ ಒಗ್ಗೂಡಿಸಿ ದೊಡ್ಡ ಪ್ರತಿಭಟನೆಯನ್ನು ಮಾಡಿದ್ದರು. ವಿಶಿಷ್ಟ ಚೇತನರ ಧ್ವನಿಯಾಗಿ ಗುರುತಿಸಲ್ಪಟ್ಟಿದ್ದ ಕಾರಣ ಅವರು 1995ರ ಕರಡು ಕಾನೂನು ರಚನಾ ಸಮಿತಿಯಲ್ಲಿ ಇದ್ದರು. ವಿಶಿಷ್ಟ ಚೇತನರಿಗೆ ಮೀಸಲಾತಿ ನೀಡಬೇಕೆಂದು ಪ್ರಚಾರ ನಡೆಸಿದರು, ಇದರ ಫಲವಾಗಿ 1995 ರಲ್ಲಿ ಮೊದಲ ಬಾರಿಗೆ ವಿಶಿಷ್ಟ ಚೇತನರಿಗೆ ಉದ್ಯೋಗಗಳಲ್ಲಿ 1% ಮೀಸಲಾತಿ ನೀಡಲಾಯಿತು.

1990ರಲ್ಲಿ ಸಂಘಟನೆಗಳನ್ನು ಕಟ್ಟಿಕೊಂಡು ಹೋರಾಟಕ್ಕಿಳಿದಿದ್ದ ಅವರು ವಕೀಲರಂತೆ ವಿಶಿಷ್ಟ ಚೇತನರ ಹಕ್ಕುಗಳ ಬಗ್ಗೆ ವಾದಿಸಿದರು, ಪ್ರತಿಪಾದಿಸಿದರು. ಮತಗಟ್ಟೆಗಳನ್ನು ಪ್ರವೇಶಿಸಲು ವಿಶಿಷ್ಟ ಚೇತನರು ಬಳಸಬಹುದಾದ ಇಳಿಜಾರು ವ್ಯವಸ್ಥೆ ಇರಬೇಕೆಂದು ೨೦೦೪ರಲ್ಲಿ ಭಾರತದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದರು. ಆ ಪತ್ರವನ್ನೇ ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿಯಾಗಿ ದಾಖಲಿಸಲಾಯಿತು. ಮತ್ತೆ ಅರ್ಜಿಯ ಕೇಳಿಕೆಯನ್ನು ಅಂಗೀಕರಿಸಿ ಮತಗಟ್ಟೆಗಳಲ್ಲಿ ವಿಶಿಷ್ಟ ಚೇತನರ ಪ್ರವೇಶಕ್ಕೆ ಅನುಕೂಲವಾಗುವ ವ್ಯವಸ್ಥೆ ಮಾಡಲು ಸರ್ವೋಚ್ಛ ನ್ಯಾಯಾಲಯ ನಿರ್ದೇಶಿಸಿತು. ದೇಶದಲ್ಲಿ ವಿಶಿಷ್ಟ ಚೇತನರು ಎಷ್ಟಿದ್ದಾರೆಂದು ಸರಿಯಾಗಿ ತಿಳಿಯದ ಅಥವಾ ತಿಳಿಯ ಬಯಸದ ಪರಿಸ್ಥಿತಿಯಲ್ಲಿ ವಿಶಿಷ್ಟ ಚೇತನರಿಗಾಗಿಯೇ ಪ್ರತ್ಯೇಕ ಜನಗಣತಿ ಆಗಬೇಕೆಂದು ಕೋರಿದರು. ಅಲ್ಲಿಯ ತನಕವೂ ವಿಶಿಷ್ಟ ಚೇತನರು ಒಂದೋ ಜನಗಣತಿಯಿಂದ ಪೂರ್ತಿ ಹೊರಗಿದ್ದರು ಅಥವಾ ಭಾಗಶಃ ಹೊರಗಿದ್ದರು. 2011ರಲ್ಲಿ ವಿಸ್ತೃತವಾದ ವಿಶಿಷ್ಟ ಚೇತನ ಜನಗಣತಿ ನಡೆಯಿತು. ಅಂದಿನ 121 ಕೋಟಿ ಜನಸಂಖ್ಯೆಯಲ್ಲಿ ಸುಮಾರು ಎರಡೂವರೆ ಕೋಟಿ ಜನರು (2.2%) ವಿಶಿಷ್ಟ ಚೇತನರೆಂದು ದಾಖಲಾಯಿತು. ಯಾವ ಯಾವ ಬಗೆಯ ಸ್ಥಿತಿಗಳನ್ನು ವಿಶಿಷ್ಟ ಚೇತನ ಎಂದು ಕರೆಯಬಹುದೆನ್ನುವ ಮಾನದಂಡದ ಭಿನ್ನತೆಯ ಕಾರಣದಿಂದಲೋ ಏನೋ ಭಾರತದ ವಿಶಿಷ್ಟ ಚೇತನರ ಗಣತಿ ವಿಶ್ವಸಂಸ್ಥೆಯ ಲೆಕ್ಕಾಚಾರಕ್ಕಿಂತ ಬಹಳ ಕಡಿಮೆ ಸಂಖ್ಯೆ ತೋರಿಸಿತ್ತು. ಆದರೂ ಈ ಗಣತಿ ವಿಶಿಷ್ಟ ಚೇತನರ ಸಂಬಂಧಿ ಯೋಚನೆ ಮತ್ತು ಯೋಜನೆಗಳಿಗೆ ತಳಪಾಯ ಒದಗಿಸಿತು.

ಅವರ ಹೋರಾಟದ ದಾರಿ ಹೂವಿನ ಹಾದಿಯಾಗಿರಲಿಲ್ಲ, ಹೋರಾಟದಷ್ಟೇ ನಿರಂತರ ಅಡೆತಡೆಗಳೂ ಎದುರಾಗುತ್ತಿದ್ದವು. ೨೦೧೪ರಲ್ಲಿ ತಾವು ಬಯಸಿದಂತೆ ವಿಶಿಷ್ಟ ಚೇತನರ ಹಕ್ಕುಗಳ ಕಾನೂನಿನ ವಿಸ್ತರಣೆ ಅನುಷ್ಠಾನ ಆಗದಿರುವುದು ಅವರಿಗೆ ನಿರಾಶೆಯನ್ನು ತಂದಿತ್ತು. ಮುಂದೆ ಸ್ವಲ್ಪ ತಡವಾಗಿ, 2016ರಲ್ಲಿ ವಿಶಿಷ್ಟ ಚೇತನರ ಹಕ್ಕುಗಳ ಸುಧಾರಿತ ಕಾನೂನು ಜಾರಿಗೆ ಬಂದಾಗ ಹಲವು ಸಂಘಟನೆಗಳು, ಚಳವಳಿಯ ಕಾರ್ಯಕರ್ತರು ಅತೃಪ್ತಿಯನ್ನು ಸೂಚಿಸಿದ್ದರು. ಜಾವೇದ್ ಅಬಿದಿಯವರು ಪರಿಪೂರ್ಣತೆಯನ್ನು ಹಿತದ ಶತ್ರು ಎಂದು ಪರಿಗಣಿಸುತ್ತಿದ್ದವರು. 2016ರ ಕಾನೂನಿನಲ್ಲಿ ವಿಶಿಷ್ಟ ಚೇತನರ ಬೇಡಿಕೆಗಳಿಗೆ ಪರಿಪೂರ್ಣ ಸುಧಾರಣೆಗಳಿಲ್ಲದಿದ್ದರೂ ಹಲವು ಉತ್ತಮ ಅಂಶಗಳನ್ನು ಅವರು ಗುರುತಿಸಿದ್ದರು. ಅಂದಿನ ಪರಿಸ್ಥಿತಿಗಳ ಚೌಕಟ್ಟಿನಲ್ಲಿ ಇದಕ್ಕಿಂತ ಹೆಚ್ಚಿನ ಸುಧಾರಣೆ ಸಾಧ್ಯವಿರಲಿಲ್ಲ ಎನ್ನುತ್ತಾ 2016ರಲ್ಲಿ ಜಾರಿಗೆ ಬಂದ ಸುಧಾರಣೆಗಳನ್ನು ಸ್ವಾಗತಿಸಿದರು. Disable ( ಅಶಕ್ತ) ಎಂದು ಆಂಗ್ಲಭಾಷೆಯಲ್ಲಿ ಕರೆಸಿಕೊಳ್ಳುವ ಶಬ್ದ ಅನುವಾದಿತ ಮತ್ತು ಆಡಳಿತ ಭಾಷೆಗಳಲ್ಲಿ ಅಂಗವಿಕಲ ಎಂದು ತುರ್ಜುಮೆ ಆಗಿದ್ದೆ ನಮ್ಮ ದೇಶದ ಅಶಕ್ತರ ಮೊದಲ ದುರಂತ ಇರಬೇಕು. ಯಾರನ್ನು ಮತ್ತು ಯಾವುದನ್ನು ವಿಶಿಷ್ಟ ಚೇತನರ ಪಟ್ಟಿಗೆ ಸೇರಿಸುವುದೆಂಬುದೇ ಮೂಲಭೂತವಾಗಿ ನಿರ್ಲಕ್ಷ್ಯಕ್ಕೊಳಗಾದ ವಿಷಯವಾಗಿತ್ತು ಅದು. ದೇಹದ ಭಾಗಗಳಿಗೆ ಸಂಬಂಧಿಸಿದ ಕೆಲವು ನ್ಯೂನತೆಗಳು ಮಾತ್ರವೇ ಅಂಗವಿಕಲತೆ ಎಂಬ ಆಡಳಿತ ಭಾಷೆಯ ಕಲ್ಪನೆಯಲ್ಲಿ ದಶಗಳ ಕಾಲ ನಿಜವಾಗಿಯೂ “Disabled ” ಎನಿಸಿ ಸೂಕ್ತ ಸಹಾಯ ಸೌಲಭ್ಯಗಳನ್ನು ಪಡೆಯಬೇಕಾದವರು ಪಡೆಯದ ಸ್ಥಿತಿ ಇತ್ತು. ೧೯೯೫ರಲ್ಲಿ ಮೊದಲ ಬಾರಿಗೆ ಜಾರಿಯಾಗಿದ್ದ ಅಂಗವಿಕಲರ ಹಕ್ಕಿನ ಕಾನೂನಿನಲ್ಲಿ ಬರಿಯ 7 ಬಗೆಯ ಅಶಕ್ತತೆಗಳನ್ನು ಮಾತ್ರ ಅಂಗವೈಕಲ್ಯದ ಪಟ್ಟಿಗೆ ಸೇರಿಸಲಾಗಿತ್ತು. 2016ರ ಕಾನೂನಿನಲ್ಲಿ 21 ಬಗೆಯ ವೈಕಲ್ಯ ಸ್ಥಿತಿಗಳನ್ನು ಸೇರಿಸಲಾಯಿತು. ಅಂಗವಿಕಲತೆಯ ಹಲವು ರೂಪಗಳಾದ ದೈಹಿಕ, ಮಾನಸಿಕ, ಆನುವಂಶಿಕ ಅಥವಾ ಆಮೇಲೆ ಪಡೆದ, ರಕ್ತಕ್ಕೆ ಸಂಬಂಧಿಸಿದ ಸ್ಥಿತಿಗಳನ್ನು ಅವಲೋಕಿಸುವ ಮೂಲಕ ಅಂಗವೈಕಲ್ಯತೆಯ ವಿಶಾಲತೆಯನ್ನು ಹೆಚ್ಚಿಸಲಾಯಿತು. ಜೊತೆಗೆ 2016ರ ಕಾನೂನು ವಿಶಿಷ್ಟ ಚೇತನರನ್ನು ನಿಂದಿಸುವ ನಡವಳಿಕೆಗೆ ಶಿಕ್ಷೆ ಮತ್ತು ಜುಲ್ಮಾನೆಯನ್ನು ವಿಧಿಸಿತು. ಕೆಲಸಗಳಲ್ಲಿ ವಿಶಿಷ್ಟ ಚೇತನರಿಗೆ ಮೀಸಲಾತಿಯನ್ನು 5% ಗೆ ಹೆಚ್ಚಿಸಲಾಯಿತು. ಇಂತಹ ಪರಿವರ್ತನೆಗಳ ಹಿಂದೆ ಅಬಿದಿ ಮತ್ತು ಸಂಘಟನೆಗಳ ಚಳವಳಿಯ ಮಹತ್ವದ ಪಾತ್ರ ಇತ್ತು.

1970ರ ದಶಕದಲ್ಲಿ ವಿಶಿಷ್ಟ ಚೇತನರ ಹಕ್ಕುಗಳ ದನಿ ಅಲ್ಲೊಂದು ಇಲ್ಲೊಂದು ವೈಯಕ್ತಿಕ ನೆಲೆಯಲ್ಲಿ ಅತ್ಯಂತ ಕ್ಷೀಣವಾಗಿ ಕೇಳುವುದು ಶುರು ಆಗಿತ್ತು. ಮೂಲಸೌಕರ್ಯಗಳ ಕೊರತೆ, ಸಾಮಾಜಿಕ ತಿರಸ್ಕಾರ, ಕಾನೂನಿನ ಬಲವಿಲ್ಲದೆ ವಿಶಿಷ್ಟ ಚೇತನರ ಮಟ್ಟಿಗೆ ಕರಾಳವಾಗಿದ್ದ ಕಾಲವೂ ಹೌದು ಅದು. ಹುಟ್ಟಿನಿಂದ ಅಥವಾ ಆಮೇಲೆ ಪಡೆದ ದೈಹಿಕ ಅಥವಾ ಮಾನಸಿಕ ಊನವನ್ನು ಪೂರ್ವಜನ್ಮದ ಪಾಪವೋ ಅಥವಾ ತಾತ್ಸಾರಕ್ಕೆ ತುತ್ತಾದ ಪ್ರಾಣಿಯಂತೆಯೋ ವಸ್ತುವಿನಂತೆಯೋ ಪರಿಗಣಿಸುತ್ತಿದ್ದ ದುರ್ಭರ ದಿನಗಳವು. ಅಶಕ್ತರ ಬಗ್ಗೆ ಇಂತಹ ನೋಟ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನ ಎಲ್ಲ ಭಾಗಗಳಲ್ಲೂ ಒಂದಲ್ಲ ಒಂದು ಕಾಲದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಇದ್ದುದೆ. ಅಮೇರಿಕಾ ಇಂಗ್ಲೆಂಡ್ ಆಸ್ಟ್ರೇಲಿಯಾ ಮತ್ತಿತರ ದೇಶಗಳು ಕೂಡ ತಮ್ಮಲ್ಲಿ ನಡೆದ ಚಳವಳಿಗಳ ಕಾರಣದಿಂದಲೇ ತಮ್ಮ ದೃಷ್ಟಿಕೋನವನ್ನು ಪರಾಮರ್ಶಿಸಿಕೊಂಡು 1990ರ ನಂತರವೇ ಕಾನೂನಿನ ಬಲವನ್ನು ವಿಶಿಷ್ಟ ಚೇತನರಿಗೆ ನೀಡಿದವು.

ಪರಿವರ್ತನೆಯ ಗಾಳಿಯಿಂದ ಇತ್ತೀಚಿಗೆ ಆಡಳಿತ ಪರಿಭಾಷೆಯಲ್ಲಿ ಅಂಗವಿಕಲ ಎನ್ನುವ ಶಬ್ದ ಮರೆಯಾಗಿ ವಿಶಿಷ್ಟ ಚೇತನರು ಎನ್ನುವ ಶಬ್ದ ಬಳಸಲ್ಪಡುತ್ತಿವೆ. ಹಳೆಯ ಶಬ್ದ ಹೋಗಿ ಹೊಸ ಅರ್ಥದ ಶಬ್ದಗಳ ಬಳಕೆ, ಸುಧಾರಿತ ಕಾನೂನುಗಳು ಇವೆಲ್ಲ ವಿಶಿಷ್ಟ ಚೇತನರ ಬದುಕಿಗೆ, ಹೋರಾಟಕ್ಕೆ ಹೆಚ್ಚು ಬಲ ತಂದಿವೆ. ಹೊಸ ಶಬ್ದಗಳು ಸರಕಾರಿ ಕಡತಗಳಲ್ಲಿ ನುಸುಳಿದರೂ, ಸುಧಾರಿತ ಕಾನೂನುಗಳು ವಿಶಿಷ್ಟ ಚೇತನರನ್ನು ಸಮಾಜದೊಳಗೆ ಹಿಂದಿಗಿಂತ ಹೆಚ್ಚು ಪಾಲ್ಗೊಳ್ಳುವಂತೆ ಮಾಡಿದರೂ ಇನ್ನೂ ಆಗಬೇಕಾದ ಸುಧಾರಣೆಗಳು ಬಹಳಷ್ಟಿವೆ. ಸರಿ ಸುಮಾರು ಭಾರತದಲ್ಲಿ ವಿಶಿಷ್ಟ ಚೇತನರ ಹಕ್ಕುಗಳ ಕಾನೂನು ಅನುಷ್ಠಾನಕ್ಕೆ ಬಂದ ಸಮಯದಲ್ಲಿಯೇ ಬ್ರಿಟನ್ ನಂತಹ ದೇಶಗಳಲ್ಲೂ ಇದೆ ವಿಚಾರವಾಗಿ ಕಾನೂನು ಕಾರ್ಯರೂಪಕ್ಕೆ ಬಂದಿತ್ತು. ಕಾನೂನಿನ ಚೌಕಟ್ಟಿನ ಹೊರಗೂ ಬ್ರಿಟನ್ ನಂತಹ ದೇಶಗಳು ವಿಶಿಷ್ಟ ಚೇತನರ ಬದುಕಿನ ಹೆಜ್ಜೆಹೆಜ್ಜೆಗಳಲ್ಲೂ ಹೆಚ್ಚು ಅನುಕೂಲಗಳನ್ನು ಆಯ್ಕೆಗಳನ್ನು ನೀಡುವತ್ತ ವಿಶೇಷ ಮುತುವರ್ಜಿ ವಹಿಸಿವೆ. ಅಶಕ್ತರ ಆರೈಕೆ ಬರೇ ಸರಕಾರಗಳ ಹೊಣೆಯಲ್ಲ ಎಂದು ಇಡೀ ಸಮಾಜವೇ ವಿಶಿಷ್ಟ ಚೇತನರಿಗೆ ಸಮಾನ ಸ್ವೀಕೃತಿಯನ್ನು ನೀಡಿದೆ. ಸರಕಾರೇತರ ಕಚೇರಿಗಳಿಂದ ಹಿಡಿದು ಶಾಪಿಂಗ್ ಮಳಿಗೆಗಳವರೆಗೆ ಶಾಲೆಗಳಿಂದ ಹಿಡಿದು ಆಸ್ಪತ್ರೆಗಳವರೆಗೆ ಮನೆಯ ಹೊರಗಿನ ಬದುಕಿನ ಪ್ರತಿ ಆಯಾಮದಲ್ಲೂ ವಿಶಿಷ್ಟ ಚೇತನರಿಗೆ ವಿಶೇಷ ಸ್ಥಾನ ಮತ್ತು ಗೌರವಪೂರ್ಣ ಉಪಚಾರಗಳು ಸಿಗುತ್ತವೆ. ವಿಶಿಷ್ಟ ಚೇತನರ ವಾಹನಗಳಿಗೆ ಅತ್ಯಂತ ಆಯಕಟ್ಟಿನ ನಿಲ್ದಾಣಗಳನ್ನು ಕಾದಿರಿಸಿರುತ್ತಾರೆ, ಅವರಿಗೆ ವಿಶೇಷ ಸೌಲಭ್ಯ ಇರುವ ಶೌಚಾಲಯಗಳ ವ್ಯವಸ್ಥೆ ದೇಶದೆಲ್ಲೆಡೆ ಇರುತ್ತದೆ, ಸಾರಿಗೆ ವಾಹನಗಳಲ್ಲಿ ಅವರಿಗಾಗಿಯೇ ಮೀಸಲಾದ ಅನುಕೂಲಕರವಾದ ಆಸನಗಳನ್ನು ಮಾಡಿಟ್ಟಿರುತ್ತಾರೆ, ಹೀಗೆ ಪಟ್ಟಿ ಬೆಳೆಯುತ್ತದೆ.


ಇಂತಹ ಅನುಕೂಲಗಳು ಸೌಲಭ್ಯಗಳು ಭಾರತದಲ್ಲೂ ದೊರಕಬೇಕಾಗಿದೆ. ವಿಶಿಷ್ಟ ಚೇತನರ ಚಳವಳಿಗೆ ಶಕ್ತಿ ತುಂಬಿದ, ದಿಕ್ಕು ತೋರಿಸಿದ, ಹೋರಾಡಿ ಯಶಸ್ಸು ದೊರಕಿಸಿದ ಚೇತನಕ್ಕೆ ಆಗ ನಿಜವಾದ ಶ್ರದ್ಧಾಂಜಲಿ ಸಿಗಬಹುದು. ಅಬಿದಿ ತಮ್ಮ ಚಳವಳಿಗಳಲ್ಲಿ ಹೇಳುತ್ತಿದ್ದಂತೆ ತಮ್ಮ ಹೋರಾಟವನ್ನು ತಾವೇ ಮುಂದುವರಿಸಬೇಕಾದ ಅನಿವಾರ್ಯತೆ ವಿಶಿಷ್ಟ ಚೇತನರ ಮುಂದಿದೆ. ತಮ್ಮ ಒಂದು ಪ್ರಮುಖ ಧ್ವನಿಯನ್ನು ಕಳೆದುಕೊಂಡರೂ ವಿಶಿಷ್ಟ ಚೇತನ ಚಳವಳಿಯ ಕಾವು ಆರದೆ ಸುಧಾರಣೆಗಳ ವ್ಯಾಪ್ತಿಯನ್ನು ಹೆಚ್ಚಿಸುವ ಕೆಲಸ ಮುಂದುವರಿಯಬೇಕಾಗಿದೆ. ಅಬಿದಿಯವರು ಹಾಕಿಕೊಟ್ಟ ದಾರಿ ಮತ್ತು ತುಂಬಿದ ಸ್ಪೂರ್ತಿ ಬರಿಯ ವಿಶಿಷ್ಟ ಚೇತನರಿಗೆ ಮಾತ್ರ ಮಾದರಿಯಾಗದೆ, ಎಲ್ಲೆಲ್ಲಿ ಹಕ್ಕುಗಳ ಅತಿಕ್ರಮಣ ನಡೆಯುತ್ತದೆಯೋ ಎಲ್ಲೆಲ್ಲಿ ಸುಧಾರಣೆಗಳು ಬೇಕೋ ಅಲ್ಲೆಲ್ಲ ಅನುಸರಣೀಯವಾಗಿದೆ.