ಅಯ್ಯಪ್ಪ ಪಣಿಕ್ಕರರ ಓದುವ ಕೋಣೆ

ಕೋಣೆಯ ಪ್ರವೇಶ
ಬಾಗಿಲಿಗೆ ಬೀಗ
ಚೌಕಟ್ಟಿನ ಮೂಲೆಗೆ ಜೇಡ ಜಾಲ
ಕಟ್ಟಿಗೆಯ ಆತ್ಮ ಹೊಕ್ಕ ಗೆದ್ದಲು
ಹೇಗೊ ಹುಡುಕಿಕೊಂಡಿವೆ ದಾರಿ;
ಇರುವೆಗಳ ಸರಾಗ ಚಲನೆ.
ಕಬ್ಬಿಣದ ವಿಕಾರಳ ಬೀಗ ಸಡಿಲಿಸಿದೆ ಬಾಹು
ಲಟಿಕೆ ಮುರಿದ ಬಾಗಿಲ ಮೈ
ರೊಯ್ಯನೆ ನುಗ್ಗಿದ ಗಾಳಿಯಲ್ಲಿ
ಅಯ್ಯಪ್ಪ ಪಣಿಕ್ಕರರ ಉಸಿರು.

ತೆರೆದ ಹಾಳೆಗಳಲ್ಲಿ ಜೀವದ ಬಸಿರು
ಚಿತ್ತ ಕಾಟು ಕೂಟುಗಳ ಲೋಕದಲ್ಲೆ
ಊರ್ವಶಿ ಪುರೂರವರ ಬೇಟದಾಟ
ಟೈಪರೈಟರಿನ ಚಿಕ್ಕ ಚಿಕ್ಕ ಕೊರಕಲುಗಳಲ್ಲಿ
ಭಾವ ವಿಭಾವ ಅನುಭಾವದ ನೀರ ನೆಲೆ.
ಬದುಕಿನ ಪಾತಾಳಕ್ಕೆ ಹಿಡಿದ ಭೂತಗನ್ನಡಿ
ಒಡೆದ ಕನ್ನಡಿಯಲ್ಲಿ ಬುದುಕಿನ ಆಲಾಪ.

ಬೆರಳ ತುದಿಯಲ್ಲಿ ಪೆನ್ನಿನ ಮಸಿ
ಕಪಾಟುಗಳ ಪುಸ್ತಕ ಸರಣಿಯಲ್ಲಿ
ಪಣಿಕ್ಕರರ ಬೆರಳ ಅದೃಶ್ಯ ಕಂಪನ.
ಗೆರೆ ಗುರುತು ಟಿಪ್ಪಣಿಯ ನಿಬಿಡ ಲೋಕ
ಎದ್ದು ನಿಂತಿವೆ ಪೂರ್ವ ಪಶ್ಚಿಮ.
ಕಟ್ಟಿಗೆಯ ಮಜಬೂತು ಖುರ್ಚಿಯಲ್ಲಿ
ಇನ್ನೂ ಪವಡಿಸಿದೆ ಅಮೂರ್ತ ದೇಹ.

ಪಕ್ಕದಲ್ಲೆ ತಲೆಯೇರಿದ ಟೊಪ್ಪಿಗೆ
ಕಪ್ಪು ಫ್ರೇಮಿನ ಕನ್ನಡಕದಲ್ಲಿ
ಹಲವು ದೇಶಗಳ ವಕ್ರೀಭವನದ ಬೆಳಕು
ಆ್ಯಶ್ ಟ್ರೇ ಒಳಗೆ ಸುಳಿವ ಹೊಗೆಯ ಸ್ತಬ್ಧಚಿತ್ರ
ರೇಡಿಯೊಕ್ಕೀಗ ದಶಕಗಳ ಮೌನ
ಕೋಣೆಯುದ್ದಕ್ಕೂ ಹಲವು ಪಾತ್ರಗಳ
ನಿರಂತರ ನಾದ ತರಂಗ ಗಾನ.

ಊರ್ವಶಿ ಗೀತ ನಾಟಕ (ಅಯ್ಯಪ್ಪ ಪಣಿಕ್ಕರರ ಕೃತಿಗಳು, ಅನುವಾದ : ಸಿ.ರಾಘವನ್, ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ, 2003)
ವಿಕ್ರಮ ವಿಸಾಜಿ ಮೂಲತಃ ಬೀದರ ಜಿಲ್ಲೆಯ ಭಾಲ್ಕಿಯವರು
ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದದಲ್ಲಿ ಪ್ರಾಧ್ಯಾಪಕ.
ತಮಾಷಾ, ಗೂಡು ಕಟ್ಟುವ ಚಿತ್ರ, ವಿಕ್ರಮ ವಿಸಾಜಿ ಕವಿತೆಗಳು, ಬಿಸಿಲ ಕಾಡಿನ ಹಣ್ಣು (ಕವನ ಸಂಗ್ರಹಗಳು), ಬೆಳಗಿನ ಮುಖ, ನಾದಗಳು ನುಡಿಯಾಗಲೇ (ವಿಮರ್ಶೆ), ರಸಗಂಗಾಧರ, ರಕ್ತ ವಿಲಾಪ (ನಾಟಕ), ಕಂಬಾರರ ನಾಟಕಗಳು, ಮತ್ತೆ ಬಂತು ಶ್ರಾವಣ (ಸಂಪಾದನೆ), ನುಡಿ ಬಾಗಿನ (ಸಂಪಾದನೆ, ಅಮರೇಶ ನುಗಡೋಣಿ ಅವರೊಂದಿಗೆ) ಸೇರಿದಂತೆ ಹಲವು ಕೃತಿಗಳನ್ನು ಬರೆದಿದ್ದಾರೆ