ಅವಳು ಜೀವ್‌ಮಾನದಾಗೆ, ಅಷ್ಟೊಂದು ಬಳೆ ತೊಟ್ಟುಕೊಂಡಿರ್‍ಲಿಲ್ಲ. ಅವ್ವನ ತವರಲ್ಲಿ, ಅವಳ ಬೆನ್ನಿಂದಲ, ತಮ್ಮನೊಬ್ಬನು ಮೇಷ್ಟ್ರಾಗಿದ್ದವನು. ಊರ ಮಾರಮ್ಮನ ಜಾತ್ರೆಯೊಂದಕ್ಕೆ ಕರಿಸಿಕೊಂಡು. ಏಷ್ಟೊ ವರುಷಕ್ಕೆ ಬಂದಿದ್ದೀಯಕ್ಕ, ಮುಂದುಕ್ಕೆ ಇರೋವರ್ಯಾರೊ? ಸಾಯೋವರ್ಯಾರೊ? ನೀನು ತೊಟ್ಟೇ ತೊಟ್ಟುಕೊಬೇಕೆನುತ, ಬಳೆ ಮಲಾರದವನನ್ನ ಕರೆಸಿ. ಒಂದೊಂದು ಕ್ಯೆಗೆ ಎರೆಡೆರೆಡು ಡಸನ್ನಿನಷ್ಟು, ನೂರು ರೂಪಾಯಿನ ಬಳೆ ತೊಡಿಸಿ, ನೆಟ್ಟಗಿನ್ನ ಹದಿನೈದು ದಿನವಾಗಿರಲಿಲ್ಲ. ಏನು ತಗದ್ರು ತಗೀತೀನಿ, ಕ್ಯೆಯ್ಯಾಗಳ ಬಳೆ ಮಾತ್ರ ಬಿಚ್ಚಲ್ಲ ಸಾ, ನೋಡಿಸಾ ಮುತ್ಯೆದೆ ಬಳೆ ಬಿಚ್ಚುಸಬ್ಯಾಡಿ ಸಾ, ಒಡಿಬ್ಯಾಡ್ರಿ ಸಾ, ಅನುತ ಇನ್ನಿಲ್ಲದಂಗೆ ಬೇಡಿಕೊಂಡ್ಲು.
ವಿಜಯಾ ಮೋಹನ್‌ ಬರೆದ ಕತೆ “ತಿಂಗಳ ಬೆಳಕು” ನಿಮ್ಮ ಈ ಭಾನುವಾರದ ಓದಿಗೆ

 

ಆ ರಾತ್ರಿ ಹಾಲೂಯಿದು ಹಾಲೆತ್ತುವಂತ, ಬೆಳ್ಳನೆಯ ಬೆಳದಿಂಗಳು. ಅದು ರವ ರವನೆ ಮೈಯ್ಯಾದ ಮೈಗೆಲ್ಲ. ಕಚ್ಚಿಕೊಳ್ಳುವ ಬೇಸಿಗೆಯ ಬಿಸಿಲು ಕಕ್ಕುತ್ತಿರುವ ಸೆಕೆ, ಲೋಕ್‌ದಾಗಿರೊ ಕಪ್ಪು ಕತ್ತಲೆಯ, ಮಸುಕನ್ನ ಮೊಗ್ಗುಲಿಗೆ ಸರಿಸುತ್ತ. ಕಣ್ಣಿಗಿಂಪಾಗಿ ಕಂಡು, ನಿಗಿ ನಿಗಿ ನಗುತ್ತಿರುವ ಚಂದ್ರನನ್ನು, ಗಳಿಗೆಗೊಂದು ಸಲ ತಬ್ಬಿ. ಮರೆ ಮಾಡುತ್ತಿರುವ, ಮೋಡದೆದೆಯೊಳಗಿನ ಮುಂಗುರುಳು. ಹಜಾರದ ಹಾಸುಗಲ್ಲಿನ ಮೇಲೆ ಕುಳಿತಿರುವ, ಅವ್ವನೆದೆಯ ಬಿಕ್ಕಳಿಕೆಗಳು, ಅವು ಅಲ್ಲೆ ಅವಳೆದೆಯಾಗೆ ತಾಮಸವಾಗಲೆಂದು. ಆಗಾಗ ತೀಡುವ ತಂಗಾಳಿ, ಗಂಗಳದ ತುಂಬ ಹರಡಿಕೊಂಡ, ತೆಳ್ಳಗಿರುವ ಹಬೆಯಾಡುವ ಮುದ್ದೆ. ಅದರ ಕೆಳಗಂಟಿಕೊಂಡಿರುವ, ಹಸಿ ಕಾಳಿನ ಸಪ್ಪೆಸರು. ಉಂಡರೆ ಇನ್ನೊಂದಿಷ್ಟು ಉಂಬಾನೆ ಅನ್ನುವ ಅಮೃತದಂತ ಸಾರು. ಹಜಾರದ ಮೂಲೆಯೊಳಗೆ, ಹಿಂದಾಗಿದ್ದು ಮುಂದಾಗುವಂತ, ಅವಳ ಎದೆಯಾಗೆ ಉಕ್ಕುವ ಗೆಪುತಿಗಳ ನುಂಗುತ್ತ, ಕೈ ತೊಳೆದ ಅಪ್ಪನ ನೆನಪಲ್ಲಿ. ಈಗೆರೆಡು ದಿವಸದ ಕೆಳಗೆ, ಊರಿಗೆ ಬಂದೋದ ಮಗ. ಮತ್ತೆ ಮೊಮ್ಮಗನ ಮಾತುಗಳು, ರವ ರವನೆ ಬೀಸಿ ಬೀಸಿ. ಅಪ್ಪನೆದೆಯ ನಿರಾಳಗಳು ತ್ರಾಣ ಕಳುಕೊಂಬಲಾಗಿ. ಎತ್ತಕಡೆ ಒಳ್ಳಾಡೀರು ಅವನ ಕಣ್ಣಿಗೆ ನಿದ್ದೆ ಕಚ್ಚದಾಯಿತು.

ತಾತ ತಾತನೆಂದು ಓಡೋಡಿ ಬಂದು, ಅಪ್ಪನ ಕೊರಳ ತುಂಬ ಜೋಮಾಲೆಯಂತೆ, ಆ ಪುಟ್ಟ ಕೈಯಿಗಳಲ್ಲಿ ಜೋತಾಡಿದ, ಮೊಮ್ಮಗನ ಸಣ್ಣ ಸಣ್ಣ ತೋಳುಗಳು, ಅಪ್ಪನ ಕುತ್ತಿಗೆಯನ್ನು ತಬ್ಬಿಕೊಂಡ. ಆ ಸಮೇವಿನಲ್ಲಿ. ಅಪ್ಪನಿಗಂಟಿಕೊಂಡಿದ್ದ. ದಿಮಾಕುಗಳೆಲ್ಲ ಕರಗಿ ನೀರಾಗಿದ್ದವು. ತಾತ ಇದೇನ್ ಪ್ರಾಣಿ ಗೊತ್ತ? ಎಲ್ಲಿ ಹಗ್ಗ ಕೊಡು. ಇಲ್ಲಿ ಕೊಡು ಮತ್ತೆ, ಎಂದು ಅಪ್ಪ ಇನ್ನು ಕುಂಡಿಕೆಳಗಿನ ನೆಲವನ್ನ ಬಿಟ್ಟು.. ನೆಟ್ಟಗೆ ಎದ್ದು ಮೊಮ್ಮಗನ ಕೈಗೆ ಹಗ್ಗ ಕೊಟ್ಟಿರಲಿಲ್ಲ. ಅಷ್ಟೊತ್ತಿಗಾಗ್ಲೆ ಅಪ್ಪನ ಕೈಯಿಂದ ರಪ್ಪನೆ ಹಗ್ಗ ಕಿತ್ತುಕೊಂಡು, ಇದು ಬೊಫೆಲೊ ತಾತ. ಇದು ಬೊಫೆಲೊ, ಎಂದ. ಆ ಮುಗ್ದ ಮೊಮ್ಮಗನ ಇಂಗ್ಲೀಷುನ್ನ.. ಅರ್ಥೈಸಿಕೊಂಬದ ಅಪ್ಪ, ಅಲ್ಲ ಕಂದ ಇದುನ್ನ ಎಮ್ಮೆ ಅಂತಾರ್ ಕಣಲ. ಎಂದು ಒತ್ತಿ ಒತ್ತಿ ಹೇಳಿದ ತಾತನ ಮಾತಿಗೆ, ಅಪ್ಪ ತಾತುಂಗೆ ಇದು ಎಂತ ಪ್ರಾಣಿ ಅನ್ನೋದೆ ಗೊತ್ತಿಲ್ಲ. ಇದುನ್ನ ಎಮ್ಮೆ ಎಮ್ಮೆ ಅಂತ ಅನ್ನುತ್ತೆ ಎಂದು ಹಗ್ಗವಿಡುದು ಕೇಕೆಯೊಡೆಯುತ್ತ, ಪಕ ಪಕನೆ ನಕ್ಕ ಆ ಮೊಮ್ಮಗನನ್ನು, ಬಸ ಬಸನೆ ಉಸಿರು ಕಕ್ಕಿ, ತನ್ನ ಕೊಂಬು ಕಿವಿಗಳನ್ನ, ಲಳನ ಲಳನೆ ಕೊಡವಿ. ದೊಡ್ಡ ಬ್ಯಾಟರಿ ಕಣ್ಣೊಳಗಿನ ಬೆಳಕು ಉಗುತು ಗುರಾಯಿಸಿದ ಎಮ್ಮೆಗು. ವಿಚಿತ್ರವಾಗಿ ಕಂಡ ಮೊಮ್ಮಗ, ಅವನ ಆಸೆ ತಣಿಯುವಷ್ಟೊತ್ತು. ಎಮ್ಮೆಯ ಹಗ್ಗ ಇಡುಕೊಂಡು. ಹಸಿರು ಗಿಡ ಗೆಂಟೆಯ ಮಧ್ಯೆ, ಬಾಯೊಳಗೆ ಬಗೆದ ಹುಲ್ಲು ತಿನ್ನುವ, ಎಮ್ಮೆಯನ್ನ, ಅಚ್ಚ ಕನ್ನಡದಲ್ಲಿ ಎಮ್ಮೆಯೆಂದು ಒಪ್ಪಿ ಕೊಂಬದ. ಆ ಕಂದನ ತಬ್ಬಲಿ ಮನಸ್ಸು, ಇಂತ ಎಷ್ಟೊ ಪದಗಳನ್ನ, ಅರ್ಥೈಸಿಕೊಂಬದ ಬದುಕಿಗೆ, ಬಲಿಯಾಗುವ ಎದಾರಿನ ನಡು ಮಧ್ಯ ಇರುವ ಬೆಂಗಳೂರಲ್ಲಿ, ಬದುಕು ಕಟ್ಟಿಕೊಂಡ, ಮಗ ಮತ್ತು ಸೊಸೆಯೆಂಬೋರು. ಯಾವಾಗ್‌ಲು ಕೆಲಸ ಕೆಲಸ, ಬಿಡುವಿಲ್ಲದ ದುಡಿಮೆ, ಊರು ಬ್ಯಾಡ, ಕೇರಿ ಬ್ಯಾಡ, ಬಂದು ಬಳಗ ಮೊದ್ಲೆ ಬ್ಯಾಡಂತ, ಬದುಕು ನೀಚ್‌ತಿರೊವರು. ಅದರಾಗು ಮದುವೆಯಾದ ಹೊಸೊಸದ್ರಲ್ಲಿ, ಅಪ್ಪ ಅಮ್ಮನೆಂದರೆ, ಮಗ ವಿಪರೀತ ಮುತುವರ್ಜಿಲಿ ಇದ್ದವನು.. ಬರ್‍ಬರ್‍ತಾ ಎಷ್ಟು ಬೇಕೊ ಅಷ್ಟ್ರಂಗಾದ. ಸೊಸೆಯಾದವಳು ಹಬ್ಬ ಹರಿದಿನಗಳಲ್ಲಿ, ಏನೊ ಅಂಗೆ ಬಂಗಕ್ಕೆ ಬರ್‍ತಿದ್ದವಳು. ನೆಟ್ಟಗೆ ಮಾತಿಲ್ಲ, ಮಕವಿಲ್ಲದಂಗಿರುತ್ತಿದ್ದಳು. ಅವಳ ತವರೂರಲ್ಲಾದ್ರೆ, ವಾರಗಳ ಗಟ್ಲೆ ಇದ್ದು ಹೋಗ್‌ತಾಳೆ, ಇಲ್ಲಿ ನಮ್ಮನೆಯಲ್ಲಾದ್ರೆ, ಬೆಳಿಗ್ಗೆ ಬಂದ್ರೆ ಸಂಜಿಗಾಗ್ಲೆ ಗಂಟು ಮೂಟೆ ಕಟ್ಟುತಿರ್‍ತಾಳೆ. ಅದುಕ್ಕಸರಿಯಾಗಿ ಅವಳಿಗೆ, ಹಳ್ಳಿ ಬದುಕಂದ್ರೆ ಇಡಸಲ್ಲ. ಸುಮ್ಮನೆ ನಮ್ಮುನ್ನ ಬರ್ರಿ ಬರ್ರಿ ಅನುತ. ಬಲವಂತ ಮಾಡ್ ಬ್ಯಾಡಿ. ಇದ್ದುದ್ರಾಗೆ ಇಟ್ಟೋ ಸೊಪ್ಪೊ ಉಂಡು, ಇರಾದ್ ಕಲೀರಿ. ನಮಗ್‌ ನೋಡೀರೆ ಅಲ್ಲಿ, ತಿಕಾ ವರುಸ್‌ಕಾಣಾಕ್ ಪುರುಸೊತ್ತಿಲ್ಲ. ಸುಮ್ಮನ್ಯಾಕ್ ನಿಷ್ಟುರ ಮಾಡ್‍ತೀರ? ಅನುತ ಮಗನೆಂಬೊ ಮುಠ್ಠಾಳ್‌ನೆ, ಅವಳಿಗೆ ತಾಳ ಹಾಕ್‌ತಿರುವಾಗ. ಅವಳು ಕಂಡೋರ್ ಮನೆ ಹುಡುಗೀನ ನಾವೇನನ್ನು ಬೇಕು? ಅಂಬೊ ನಿಲುವನ್ನ ಅರ್ಥ ಮಾಡಿಕೊಂಡರು ಸಹ. ಇತ್ತಿತ್ಲಾಗೆ ಮಗ ಸೊಸೆ ಅಂಬೋರು, ಊರಿಗ್ ಬರ್‍ಲಿಲ್ಲವಲ್ಲ? ಅಂಬೊ ಕೊರಗು, ಅದು ಸುಮ್ಮನೆ ನಿರುಮ್ಮಳವಾಗಿ. ಇರಾಕ್ ಬಿಡ್‍ದೋಯಿತು. ಎಲ್ಲಿ ಕುಂತ್ರಲ್ಲೆ ಜೀವ ಮಿಸುಗಾಡಂಗಾಗಿ. ತಾಮಸವಿಲ್ಲದ ಅಪ್ಪ, ಮತ್ತು ಅಮ್ಮ. ಯಾಕೊ ಮೊಮ್ಮಗನ್ನಾರ, ನೋಡ್‍ಕಂಡು ಬರಾನ. ಅನುತ. ಬೆಂಗಳೂರಿಗೆ ಹೋದ ಅವ್ವ ಮತ್ತು ಅಪ್ಪನನ್ನು. ನೆಟ್ಟಗೆ ಮಾತಾಡುಸ್‌ದಂಗೆ, ಒಳಗೆ ಸೇರ್‍ಕಂಡು, ಎಷ್ಟೊ ಹೊತ್ತಿಗೆ ಯಾವಾಗ್ ಬಂದ್ರಿ, ಅಂದ ಸೊಸೆ. ಮಖದೊಳು ಗಿಚ್ಚೀರೆ ಒಂದುತೊಟ್ಟು ರಕುತವಿಲ್ಲದಂಗಿತ್ತು, ಅದೇ ಸಮೇವನಾಗೆ ಆವತ್ತೆ ಅವರಪ್ಪನು ಬಂದಿದ್ದ.

ಅವನಿನ್ನು ನೆಟ್ಟಗಿನ್ನ ಬಾಗ್ಲಿಗೆ ಬಂದಿರಲಿಲ್ಲ. ಎಲ್ಲಿ ಇಲ್ಲದ ಇಡುಗರದೊಳಗೆ(ಸಂಬ್ರಮ)ಅವರಪ್ಪುನ್ನ ಮಾತಾಡಿಸಿದ್ದು ಮಾತಾಡಿಸಿದ್ದೆ. ಆ ಮೊಮ್ಮಗನೆಂಬೋನು, ಎಲ್ಲೋ ಟೂಸನ್ನಿಗೆ ಅನುತ ಹೋಗಿ ಬಂದವನು ಸೊಸೆಯ ಅಪ್ಪುನ್ನ ತಾತ ತಾತನೆಂದು, ಮೈ ಮ್ಯಾಲೆ ಬಿದ್ದು ಉಳ್ಳಾಡಿ, ವ್ಯೆಬೋಗವುಂಡುಡುಗ. ಇವರ ಕಡಿಕ್ಕೆ ನೆಟ್ಟಗೆ, ಮಕಾ ಕೊಡದಂಗೆ ಹೋಡಾಡ್‌ಬುಟ್ಟಿದ್ದ. ಅಂತ ಏಸೊ ಬ್ಯಾಸರಿಕೆಗಳೊಳಗೆ. ಹೊತ್ತು ಗೊತ್ತಿಲ್ಲದೆ ಬರುವ, ಸಂಕಟಗಳನ್ನ ಅದುಮಿಕೊಂಡು, ಕಣ್ಣೀರು ಉಣುತ್ತಿದ್ದ ಅವ್ವನಿಗೆ, ಅದರಾಗು ಬೆಂಗಳೂರೆಂದರೆ ಅತಿಯಾಗಿ ಮೂಗು ಮುರಿಯುವ ಅವಳ ಬದುಕಲ್ಲಿ ನಡೆದ ಒಂದು ಘಟನೆ, ಅದನ್ನ ಮರಿಯಾನ ಅಂದ್ರೆ, ಮರಿಯಾಕ್ ಆಗ್‌ದಿರೊಂತ ಘಟನೆಯೊಂದು ನಡೆದು, ಅವಳ ಬ್ಯಾಸರಿಕೆಗೆ, ಅದೊಂದು ತೂಕವಿರುದ ಗೆಪುತಿಯಾಗಿ(ನೆನಪು) ಈಗಲು ಕಾಡಾಕಿಡಿಯಿತು.

ಈಗ್ಗೆ ಎರುಡೊರುಷದ ಕೆಳಗೆ, ಅವ್ವ ಹೊಳವನಳ್ಳಿಯ ಕಣ್ಣಿನ ಕ್ಯಾಂಪೊಂದರಲ್ಲಿ ಬೆಂಗಳೂರಿನ ಆಸ್‌ಪತ್ರೆಗೆ ಸೇರ್‍ಕಂಡ್ಲು. ಅಲ್ಲಿ ಅವರು ಮಾಡಿದ ಎಲ್ಲ ಚೆಕಪ್ಪುಗಳನ್ನು ಸಯಿಸಿಕೊಂಡು ಕುಂತಿರುವಾಗ, ಅದೇ ಆಸ್ಪತ್ರೆಯ ಸಿಬ್ಬಂದಿಗಳು ಬಂದು ತಗೀರಿ ತಗೀರಿ ನಿಮ್ಮ ಕ್ಯೆಯಾಗೆ, ಕೊಳ್ಳಾಗೆ, ಕಿವಿಯಾಗೆ, ಇರೊ ವಡವೆ ವಸ್ತ್ರವನ್ನೆಲ್ಲ ತಗೀಬೇಕಂದ್ರು.. ಕಿವಿಯಾಗಳ ವಾಲೆ ಬಿಚ್ಚಿಕೊಂಡು, ಸೆರಗಿಗೆ ಗಂಟು ಕಟ್ಟಿಕೊಂಡ್ಲು. ಮೂಗನಾಗಳ ಬೇಸ್ತ್ರಿ ಕೂಡ ಬಿಚ್ಚೀಳು, ಕತ್ತಿನಾಗಳ ಕರಿಮಣಿನು ಬಿಚ್ಚಿಕೊಂಡ್ಲು, ಮೂವತ್ತೆರಡು ವರುಷದಿಂದ, ಕಾಲುಬೆರಳು ಬಿಡದೆ, ಕಚ್ಚಿಕೊಂಡಿದ್ದ ಕಾಲುಂಗರವನ್ನ, ಅದೆಂತದ್ದೊ ಇಕ್ಕಳದೊಳಗೆ ಬಿಚ್ಚಿಸೀರು. ಕೈ ತುಂಬ ತೊಟ್ಟುಕೊಂಡಿದ್ದ ನಾಕು ಡಸನ್ ಬಳೆ. ಅವಳು ಜೀವ್‌ಮಾನದಾಗೆ, ಅಷ್ಟೊಂದು ಬಳೆ ತೊಟ್ಟುಕೊಂಡಿರ್‍ಲಿಲ್ಲ. ಅವ್ವನ ತವರಲ್ಲಿ, ಅವಳ ಬೆನ್ನಿಂದಲ, ತಮ್ಮನೊಬ್ಬನು ಮೇಷ್ಟ್ರಾಗಿದ್ದವನು. ಊರ ಮಾರಮ್ಮನ ಜಾತ್ರೆಯೊಂದಕ್ಕೆ ಕರಿಸಿಕೊಂಡು. ಏಷ್ಟೊ ವರುಷಕ್ಕೆ ಬಂದಿದ್ದೀಯಕ್ಕ, ಮುಂದುಕ್ಕೆ ಇರೋವರ್ಯಾರೊ? ಸಾಯೋವರ್ಯಾರೊ? ನೀನು ತೊಟ್ಟೇ ತೊಟ್ಟುಕೊಬೇಕೆನುತ, ಬಳೆ ಮಲಾರದವನನ್ನ ಕರೆಸಿ. ಒಂದೊಂದು ಕ್ಯೆಗೆ ಎರೆಡೆರೆಡು ಡಸನ್ನಿನಷ್ಟು, ನೂರು ರೂಪಾಯಿನ ಬಳೆ ತೊಡಿಸಿ, ನೆಟ್ಟಗಿನ್ನ ಹದಿನೈದು ದಿನವಾಗಿರಲಿಲ್ಲ. ಏನು ತಗದ್ರು ತಗೀತೀನಿ, ಕ್ಯೆಯ್ಯಾಗಳ ಬಳೆ ಮಾತ್ರ ಬಿಚ್ಚಲ್ಲ ಸಾ, ನೋಡಿಸಾ ಮುತ್ಯೆದೆ ಬಳೆ ಬಿಚ್ಚುಸಬ್ಯಾಡಿ ಸಾ, ಒಡಿಬ್ಯಾಡ್ರಿ ಸಾ, ಅನುತ ಇನ್ನಿಲ್ಲದಂಗೆ ಬೇಡಿಕೊಂಡ್ಲು. ಅವಳ ಯಾವ ಸೆಂಟಿಮೆಂಟ್ಲು ದ್ವನಿಗು ಸೊಪ್ಪು ಹಾಕದ ಆಸ್ಪತ್ರೆಯವರು ಕೈಯ್ಯೆ ಕೊಡದಿರೊ ಅವ್ವನನ್ನು, ಸರ್ ಸರಿಯಾಗಿ ಬ್ಯೆದು ಕೆಯ್ಯಾಗಳ ಕೆಳಕ್ಕೊಂದು ತಟ್ಟೆ ಇಟ್ಟುಕೊಂಡು. ಇದ್ ಬದ್ ಬಳೇನೆಲ್ಲ ನುಣ್ಣುಗೆ ಕುಟ್ಟಿ ಕುಟ್ಟಿ ಪುಡಿ ಮಾಡ್ಕಂಡೋದ್ರು..

ಇಷ್ಟುದಿನ ಲಕ ಲಕನೆಂಬಗಿದ್ದ ಕ್ಯೆಯ್ಯಿ, ಯಾತುಕ್ಕು ಬ್ಯಾಡದಂತ ಮೊಂಡುಗೈಯ್ಯಾಗಿ ಅವಳ ಮುಂದಿದ್ದ ಇಡಿಸಾಮ್ರಾಜ್ಯವೆಲ್ಲ. ಇಂಗೆ ನಗುತ್ಯೆತೇನೊ? ಅನ್ನುವಂತ ಎದೆಯ ನಿಸೂರನ್ನೆಲ್ಲ ಕಿತ್ತುಕೊಂಡು. ಒಂದೇಒಂದು ಗಳಿಗ್ಗೆ, ಏನೂ ಇಲ್ಲದ ತಿರುಬೋಕಿಯಾದ್‌ನೇನೊ? ಅನ್ನಂಗೆ ಮಾಡ್ ಬಿಟ್ಟರು, ಕಿವಿಗೆ ಕೊಳ್ಳಿಗೆ ಸಂಕಟಪಡದ, ಅವ್ವನ ಕ್ಯೆಯ್ಯಾಗೊಂದು ಬಳೆ ಇಲ್ಲದಂಗ್ ಮಾಡಿದ. ಆ ತಬ್ಬಲಿತನದ ಆಸ್ಪತ್ರೆನ, ನೋಡುತ್ತಿದ್ದೋಳ ಕಣ್ಣಿನ ಮುಂದೆ, ಪರಂಗಿಯರಂತ ಬಿಳಿ ಬಣ್ಣದ ಹುಡುಗಿ, ಯವ್ವ ಯವ್ವ ಸುಣ್ಣದ ಗೋಡೆಯಂತೆ ಕಾಣ್‌ತಿದ್ದ, ಸಿಸ್ಟ್ರು ಎಂಬೊ ಹುಡುಗಿ ಓಡಾಡ್‌ತಿದ್ಲು. ಅವಳು ಅಗಗ್ಲ ಕಣ್ಣಿಗೆ ಡ್ರಾಪ್ಸ್ ಬಿಡಾಕ್ ಬರೋಳು. ನಮ್ ಕಾಲಿಗೆ ಮುಳ್ಳು ತುಳುದ್ರೆ, ಅದು ನೋವು ಸಾಯಲಿ, ಆ ಮುಳ್ಳು ಈಚಿಕ್ ಬರಲಿ ಅಂತ, ನಾವೆಂಗೆ ಎಕ್ಕದಾಲು ಬಿಡುತ್ತೀವೊ? ಅಂಗೆ ನಮ್ ಕಣ್ಣಾಗಿನ ಪೊರೆ ಅಂಬೋದು ನೆನೆಯಲಿ ಅಂತ, ಅಗಗ್ಲ ಬಂದು ಬಂದು, ಬಿಡುತ್ತಿದ್ದ ಡ್ರಾಪ್‌ಗಾಗಲಿ, ಮೈಯ್ಯಾಗಿರೊ ಬಿ, ಪಿ, ಚೆಕ್ ಮಾಡುವಾಗಾಗ್ಲಿ ದೊಡ್ಡಕ್ಕ ಎಂದು ಬರೆಸಿದ್ದ ಅವ್ವನ ಹೆಸರನ್ನ, ದೂಡಕ್ಕ ಯಾರು? ದೂಡಕ್ಕ ಯಾರು? ಎಂದು ಕೇಳಿಕೊಂಡು ಬರ್ತಿದ್ದ, ಆ ಕೆಂಪು ಪರಂಗಿಯಂತ ಹುಡಗಿಯ ಮ್ಯಾಲೆ ಸಿಟ್ಟೆಂಬೋದು ತಟ ತಟನೆ ಸಿಡಿಯುತ್ತಿತ್ತು. ಅಲ್ಲಮ್ಮಣ್ಣಿ ನಿನ್ ನಾಲಿಗೇನು ಚರ್ಮದ್ದೆ, ನನ್ ನಾಲಿಗೇನು ಚರ್ಮದ್ದೆ, ನನ್ನುನ್ನ ದೊಡ್ಡಕ್ಕ ಅಂತ ಕರ್‍ದ್ರೆ. ನಿನ್ ನಾಲಿಗೆಯೇನು ತೂತ್ ಬೀಳ್‍ತೈತಾ? ಎಂದು ಆ ಕೆಂಪು ಪರಂಗಿಯರ ಹುಡುಗಿಯನ್ನ, ಬಾಯಿ ತಡೀದಂಗೆ ಬೈದು ಬಂದ ಬೆನ್ನಲ್ಲೆ ಅವಳ ಕಣ್ಣ ದೃಷ್ಟಿ ಲಕ ಲಕನೆಂದು ನಿಚ್ಚಳವಾಗಿ ಕಾಣ್‌ತಿದ್ದ ಸಮೇವಿನಾಗೆ(ಸಂದರ್ಬ) ಅವ್ವನ ಜೊತೇಲಿ ಕಣ್ಣಾಪ್ರೇಶನ್ನಿಗೆ ಹೋಗಿದ್ದ ಗೆಳತಿ ಆ ಕಲ್ಲು ಮನೆ ಮಂಜಿಯೆಂಬೋಳು. ಹೊಲದಾಗಳ ಹುಲ್ಲು ಬಗೆಯುವ, ಹುಲ್ಲಾರಿ ಜೊತೆ ಕುಂತುಕೊಂಡು. ವರ್ಷ ಎರಡೊರುಷವಾದ್ರು ಬಿಡದಂಗೆ ದೂಡಕ್ಕ ದೂಡಕ್ಕನೆಂದು ಊರೆಲ್ಲ ಟಾಂ ಟಾಂ ಹೊಡೆದು ಅವ್ವನಿಗೆ ಅವಳು ಕಿತ್ರು ಬರದಂತ ನ್ಯಾಸ್ತದವಳನ್ನು(ಗೆಳತಿ) ಎದ್ರಾಕ್‍ಳಕಾಗ್‍ದೆ ಒದ್ದಾಡ್‌ಬುಟ್ಲು.

ಅವಳಿಗೆ ದೊಡ್ಡಕ್ಕನೆಂಬ ಹೆಸರು ಅವಳೆದೆಯಾಗೆ ಗಲ ಗಲನೆ ಮೀಟುವಂತ ಉತ್ತುಮವಾದ, ಹೆಸರಾಗಿ ರಿಂಗುಣಿಸುತ್ತಿತ್ತು. ಅವ್ವನ ಅಜ್ಜಿಯ ಹೆಸರನ್ನ, ಅವರ ಅಪ್ಪ ಅಮ್ಮ ದೊಡ್ಡಕ್ಕನೆಂದು, ಪ್ರೀತಿಯಿಂದ ಕಟ್ಟಿ ಕರೆದ. ಅವಳ ಎದೆ ಕಳ್ಳಿಗೆ ಸುತ್ತಿಕೊಂಡಂತ ಅಪರೂಪದ ಹೆಸರಾಗಿ ಅವಳಿಗೆ ಆ ಹೆಸರೆಂದರೆ ಇಡಿಸಲಾರ್‍ದ, ಸೇರು ಪಾವಿನಂತ ಸಂತಸವಾಗ್‌ತಿತ್ತು. ಅಂತ ಆನಂದದ ದೊಡ್ಡಕ್ಕನೆಂಬ ಹೆಸರು ಇಂತದ್ದೊಂದು ಬೆಂಗಳೂರೆಂಬ, ಮಾಯಾ ನಗರದಲ್ಲಿ ಮೈಲಿಗೆಯಾಗಿದ್ದನ್ನು ಸಹಿಸದ ಅವ್ವ, ಅವಳ ಮುಂದೆ ಈಗ ಮೊಮ್ಮಗ. ಎಮ್ಮೆನ ಎಮ್ಮೆ ಎಂದು, ಒಪ್ಪಿಕೊಳ್ಳದ… ಘನ ಘೋರ ಸತ್ಯವನ್ನು ಅರಗಿಸಿಕೊಳ್ಳಲಾಗದೆ, ಇದೆ ಬಟಾಬಯಲಿನ ಬೆಳದಿಂಗಳ ರಾಶಿಯೊಳಗೆ ತಾತ ಇಂತ ಬೆಳಕು ನಮ್ ಬೆಂಗಳೂರಾಗಿಲ್ಲ ತಾತ ಎಂದು ಮುದ್ದು ಮುದ್ದಾಗಿ, ಮುಖವರಳಿಸಿ ಹೇಳುತ್ತ ತಾತನ ತೋಳಿನೊಳಗೆ ತಲೆಯಾನಿಸಿ ಹಟ್ಟಿ ಬಯಲಲ್ಲಿ ಹಾಸಿದ್ದ, ಜಮ್ಮಿನ ಚಾಪೆ ಮೇಲೆ ಅಂಗಾತವಾಗಿ ಮಲಗಿದ. ಮೊಮ್ಮಗನ ಮುಖದ ತುಂಬ, ಆ ಮೋಡದೊಟ್ಟೆ ಬಗೆದು ಆಟವಾಡುತ್ತಿದ್ದ. ಆ ನಿಗಿ ನಿಗಿ ಚಂದ್ರನ ಬೆಳಕು ಮುತ್ತಿಕ್ಕುತ್ತಿರುವಾಗ ಲೇ ಕಂದ ಇಲ್ಲಿ ಹುಟ್ಟಿರೊ ಚಂದ್ರ.. ಬೆಂಗಳೂರಾಗು ಹುಟ್ಟಿದಾನ್ ಕಣಲ, ಲೋಕಕ್ಕೆಲ್ ಒಬ್ಬನೆ ಚಂದ್ರ ಕಣಪ್ಪ, ಎಂದ ತಾತನ ಮಾತನ್ನ ತಳ್ಳಿ ಹಾಕಿ, ತಾತ ನಿನಗರ್ಥ ಆಗಲ್ಲ ಬಿಡು ತಾತ, ನಮ್ಮ ಬೆಂಗಳೂರಲ್ಲಿ ಈ ಜುಜುಬಿ ಚಂದ್ರುನ್ನ ಯಾರು ನೋಡಾಕೋಗಲ್ಲ. ಯಾವಾಗ್ ಹುಟ್ಟುತ್ತಾನೊ? ಯಾವಾಗ್ ಸಾಯ್‌ತ್ತಾನೊ? ಇದ್ರ ನಾಕರಷ್ಟು ಬೆಳಕು, ದಿನಾ ರಾತ್ರಿ ನಮ್ ಬೆಂಗಳೂರಾಗೆ ಝಗಝಗವೆನ್ನುತಿರುತೈತೆ. ಅಲ್ಲಿ ಬೆಳಕ್ಯಾವುದೊ? ಬೆಳದಿಂಗಳಾವುದೊ? ನಾವು ಆರು ಗಂಟೆಗೆಲ್ಲ ಒಳಕ್ ಸೇರ್‍ಕಂತೀವಿ ಎಂದ ಮೊಮ್ಮಗನ ಮಾತಿಗೆ. ತಾತ ತೆಪ್ಪಗಾಗಿ ತಲೆ ಗೋಣಾಡಿಸುವಂತಾದ. ಅಂಗೆ ಸುಮ್ಮನಿರಲಾರದ, ಅಪ್ಪನ ನಿರುಮ್ಮಳಗಳು ಮಿಸುಕಾಡಿದಂತಾಗಿ, ಅವನು ಉಂಡು ಬೆಳದ, ಬೆಳದಿಂಗಳ ರಾಶಿಯನ್ನ ಮತ್ತೆ ಮತ್ತೆ ಚಪ್ಪರಿಸಿಕೊಂಡ.

ಯಾವಾಗ್‌ಲು ಕೆಲಸ ಕೆಲಸ, ಬಿಡುವಿಲ್ಲದ ದುಡಿಮೆ, ಊರು ಬ್ಯಾಡ, ಕೇರಿ ಬ್ಯಾಡ, ಬಂದು ಬಳಗ ಮೊದ್ಲೆ ಬ್ಯಾಡಂತ, ಬದುಕು ನೀಚ್‌ತಿರೊವರು. ಅದರಾಗು ಮದುವೆಯಾದ ಹೊಸೊಸದ್ರಲ್ಲಿ, ಅಪ್ಪ ಅಮ್ಮನೆಂದರೆ, ಮಗ ವಿಪರೀತ ಮುತುವರ್ಜಿಲಿ ಇದ್ದವನು.. ಬರ್‍ಬರ್‍ತಾ ಎಷ್ಟು ಬೇಕೊ ಅಷ್ಟ್ರಂಗಾದ.

ಅಪ್ಪನ ಕಾಲದಲ್ಲಿ, ಅವರ ಅವ್ವ ಕದ್ರಿ ಹುಣ್ಣೇವಿನ ಬೆಳದಿಂಗಳೊಳಗೆ. ಓಣಿ ಹೆಂಗಸರನ್ನ ಕೂಡಿಸಿಕೊಂಡು, ಆ ಬಟಾಬಯಲೊಳಗೆ ಅವಳ ಜನುಮಾದ, ಜಲುಮವೆಲ್ಲ ಹಾಲುಕ್ಕಿಸುತ್ತ, ಮೋಡದ ಸಾಮ್ರಾಜ್ಯದೊಳಗೆಲ್ಲ. ಮೀಸೆ ಉರಿಮಾಡುತ್ತಿದ್ದ. ನಿಗಿ ನಿಗಿ ಚಂದ್ರನೆಂಬೋನು, ಜಲ ಜಲನೆ ಸುರಿಸುವ, ಹಾಲು ಬೆಳದಿಂಗಳೆಂಬೊ, ಹಟ್ಟಿ ಬಯಲೊಳಗೆ ಹಸುವಿನ ಸಗಣಿ ತಂದು, ಬಟುವಾಗಿ ಸಾರಿಸಿ ರಂಗೋಲಿ ಹಿಟ್ಟಿನೊಳಗೆ, ಸಣ್ಣ ಸಣ್ಣ ಚಂದ್ರುನ್ನ, ಅಲ್ಲಲ್ಲಿ ಪೂರ್ಣ ಚಂದ್ರುನ್ನ, ಮದ್ಯೆ ಮದ್ಯೆ ನಿಗಿ ನಿಗಿ ನಕ್ಷತ್ರುಗಳನ್ನ ಬಿಡಿಸಿ… ಅರಿಶಿನ ಕುಂಕುಮವಿಕ್ಕಿ, ಅಲ್ಲೆ ಪಕ್ಕದಲ್ಲೆ ಅಕ್ಕಿ ಲೋಟವಿಕ್ಕಿ, ಅದರೊಳಗೆ ಘಮ ಘಮನೆನ್ನುವ, ಊದುಕಡ್ಡಿಯನ್ನು ಕುಚ್ಚಿ, ಭಯ ಭಕುತಿಯಿಂದ, ಓಣಿ ಹೆಂಗಸರ ದನಿಗೆ ದನಿಯಾಗಿ, ಆ ಚಿತ್ತಾರದ ಚಂದ್ರಮ್ಮನ್ನನ್ನು ಒಪ್ಪಿಸಲು… ಒಕ್ಕೊಕ್ಕೆ ಬೀಪು ಗಿಂಜೇ ಚಂದ್ರಮ್ಮ. ಎರೇರಿ ರಾಸಿ ಪೋಯೆ ಚಂದ್ರಮ್ಮ. ರಾಸಿ ಕೊಲ್‍ತಾಮು ರಾವೆ. ರತ್ನಾಲು ಚಿಲಕ, ಚಿಲಕಾಕಿ ಸಿಂಗಾರಮೆಂತನ್ನ ಕದ್ದೆ, ವಿಘ್ನಾಲಿರುಣಾಲೆ, ಚಂದ್ರಮ್‍ಕಿ ಗೆಜ್ಜೇಲೇಸ್ ತರ್‍ಣಾಲೆ. ಎನ್ನವ ತೆಲುಗಿನ ಜನಪದ ಗೀತೆಯನ್ನು ಅಪ್ಪನ ಅವ್ವ, ಕೇರಿ ಹೆಂಗಸರ ದನಿಗೆ, ದನಿ ಸೇರಿಸಿ, ಅವಳ ನರಉಬ್ಬುವಂತೆ ಎಳೆಯುವ ಹಾಡಿಗೆ, ಕಣ್ಣಾಗಿನ ಬೆಳಕು ಕೊಳ್ಳೆ ಹೋಗುವ ಮುಂಚೆಯೆ, ಪಳ ಪಳನೆಂದು ಪಂಚೆ ಬಾಗ್ಲೊಳಗೆ, ಉರಿದ ಹೊಲೆಯಲ್ಲಿ, ಕುದ್ದ ಕೋಲುಬಾಯಾಗಿನ ಹಿಟ್ಟನ್ನ ಕೆರುಕೊಂಡು ಉಂಡು, ದಾಪುಗಾಲಾಗೆ ಬಂದು, ದಣಿವಾರಿಸಿಕೊಂಡು ಕುಂತುಗಂತಿದ್ದ, ಕೇರಿ ಹೆಂಗಸರ ಕಲರವದೊಳಗೆ, ದಿನಾ ರಾತ್ರಿ ಆ ಬೆಳದಿಂಗಳ ಚಂದ್ರಮ್ಮನನ್ನು, ಜನಾದ್‍ಜನವೆಲ್ಲ ಕುಂತು, ಸರುವತ್ತಿನ ತಂಕ ಪೂಜಿಸಿ, ರಕ ರಕದ ಹಾಡು ಕಟ್ಟಿ, ರಂಜಿಸುತ್ತಿದ್ದ ಹೆಂಗಸರ ಮದ್ಯೆ… ನಮ್ಮೂರ ಮಡಿವಾಳ ಮಲ್ಲಕ್ಕನೆಂಬೋಳು, ಅವಳ ತಲೆ ಕೂದ್ಲು ಎಷ್ಟವ್ವೊ., ಅಷ್ಟೊಂದು ಪದ ಪೇರಿಸಿಕೊಂಡು. ಹಾಡು ಹೇಳುವ ನಮ್ಮೂರ ಮಿನಿ ಜಾನಕಿಯಾಗಿ, ಕಣ್ಣಿಗೆ ಕಾಣುತ್ತಿದ್ದ ಮಲ್ಲಕ್ಕನಂತವರು, ಆ ಹುಣ್ಣಿಮೆ ಬೆಳದಿಂಗಳ ಚಂದ್ರಮ್ಮನನ್ನು, ಹದಿನೈದು ರಾತ್ರಿ ಎಡಬಿಡದಂಗೆ ಪೂಜೆ ಮಾಡಿ, ಹದಿನಾರನೆ ಕೊನೆದಿನ, ಆ ಸೊಂದಿ ಗೊಂದಿಗಳ, ಪಡ್ಡೆ ಹುಡುಗರನ್ನೆಳೆಕೊಂಡು, ಅದ್ರಾಗೆ ಒಂದು ಗಂಡಿನ ವೇಷ, ಮತ್ತೆ ಒಂದು ಹೆಣ್ಣಿನ ವೇಷವನ್ನ ಹಾಕಿಸುತ್ತಿದ್ದರು.

ಅದ್ರಾಗು ಅಪ್ಪ ಹೆಣ್ಣು ಗರಳವನು, ಅವನ ಹಾವ ಬಾವಕ್ಕೆ, ಹೆಣ್ಣಿನ ಏಸ(ವೇಷ) ಚೆನ್ನಾಗೊಪ್ಪುತೈತೆ ಅನುತ, ಅವರ ಅವ್ವ ಅಂದ್ರೆ ನಮ್ಮಜ್ಜಿ, ಅವಳ ಪೆಟ್ಟಿಗೆಯ ತಳದಾಗಿನ, ತಣ ತಣನೆಂಬ ಚಮುಕಿಯ ಸ್ಯಾಲೆ ಹುಡುಸಿ. ಹೆಣ್ಣು ಮಾಡಿ ಕುಂಡ್ರುಸ್‍ತಿದ್ಲಂತೆ. ಅಂಗೆ ಕುಂಡ್ರಿಸಿದ ಗಂಡು ಹೆಣ್ಣಿಗೆ, ಮನ್ ಮನೆಯಾಗು ವಸೂಲಿ ಮಾಡಿದ ದುಡ್ಡಿನಾಗೆ, ಕಳಸ ಕನ್ನಡಿಯಿಕ್ಕಿ ಹಣ್ಣು ಹೂವಿಕ್ಕಿ, ಕುಂಡ್ರಿಸಿ ಬಿಡುತ್ತಿದ್ದರಂತೆ, ಲೇ ಸಾಕು ಬಿಡ್ರಮ್ಮಣ್ಣಿ ಸರುವೊತ್ತಾಯಿತು. ಅಂದ್ರು ಬಿಡದಂಗೆ, ಮಡಿವಾಳಮಲ್ಲಕ್ಕನ ದನಿಗೆ ದನಿಸೇರಿಸುವ, ಸೋಬಾನದ ಪದದೊಳಗೆ. ಮದುವೆ ಕಾರ್ಯವ ಮುಕ್ತಾಯ ಗೊಳಿಸಿ, ಬೆಲ್ಲ ಕುಟ್ಟಿ ಕಾಯಿತುರುದು, ಅರವಲೊತ್ತಿದ ಅವಲಕ್ಕಿಯ ಪಲಾರವಂಚಿ, ಅಲ್ಲಿ ಕುಂಡ್ರಿಸಿದ ಗಂಡು ಹೆಣ್ಣಿನ ಮೆರವಣಿಗೆಯನ್ನು ಹೊಲ್ಡಿಸಿ, ಆ ಮೆರವಣಿಗೆ ಮದ್ಯೆಯೆ ಒಬ್ಬೊಬ್ಬರೆ ಮನೆಸೇರ್‍ಕತಿದ್ದರು. ಇನ್ನು ಅಂಗು ಇಂಗು ತೂಗುಡುಸೊವರ. ಮದ್ಯೆ ಮುಗಿಯುವ. ತಿಂಗಳ ಬೆಳಕೆಂಬೊ ಚಂದ್ರಮ್ಮನ ಹಬ್ಬದಾಗೆ, ವರ್ಸ ವರ್ಸವು ಹೆಣ್ಣಾಗಿ, ಆ ಚಂದಮಾಮನ ಬೆಳದಿಂಗಳಲ್ಲಿ, ಮುದ್ದು ಚಂದ್ರಮ್ಮನಂತೆ ಕಾಣುತ್ತಿದ್ದ ನಮ್ಮಪ್ಪ. ಅಲ್ಲಿಂದೀಚಿಗೆ ನಮ್ಮೂರ ನೆಲದಲ್ಲಿ, ವೈಬೋಗದ ಸಂಪತ್ತಿನಂತಿದ್ದ, ಪೌರಾಣಿಕ ನಾಟಕದಲ್ಲಾಗಲಿ. ಸಾಮಾಜಿಕ ನಾಟಕದೊಳಗಾಗಲಿ, ಯಕ್ಷಗಾನದಲ್ಲಾಗಲಿ, ಕೋಲಾಟದ ಕುಣಿತದಲ್ಲಾಗಲಿ, ಬಾಬಯ್ಯನ ಕುಣಿತದಲ್ಲಾಗಲಿ, ಹೆಣ್ಣಿನ ಪಾತ್ರವನ್ನೇ ಹೆಚ್ಚಾಗಿ ಮಾಡುತ್ತ ಬಂದ ಅಪ್ಪನನ್ನು, ಊರೊಂದುಕಡೆಯಿಂದ. ಹೆಣ್ಣು ಸಂಗನೆಂದು ಜಗಜ್ಜಾಹೀರಾತು ಮಾಡೀರಂತೆ.

ಅಪ್ಪ ಅವನ ಎಳೆ ತನದಿಂದ, ಉಂಡು ಬಂದ ಬೆಳದಿಂಗಳ ರಾತ್ರಿಯೊಳಗೆ, ಹುಡುಗ ಹುಡುಗಿಯರ ಗುಂಪು ಕಟ್ಟಿಕೊಂಡು, ಗುಲ್ಟೋರಿಯಾಟ, ಲಗೋರಿಯಾಟ, ಅಡಕ ಬುಡಕ ಸಾಲಿನಾಟ, ಕಣ್ಣಾಮುಚ್ಚಾಲೆಯಾಟದಲ್ಲಿ, ಅವನೆ ಮುಂದೆ ಬಿದ್ದು ಮುಖಂಡನಾಗಿ ಮೆರಿತಿದ್ದನಂತೆ. ಅಂತದ್ದೆ ಒಂದು ಬೆಳದಿಂಗಳ ರಾತ್ರಿಯೊಳಗೆ, ಊರಮುಂದಲ ಚಾವಡೀಲಿ, ಶ್ರೀಕೃಷ್ಣ ಸಂದಾನವೆಂಬ ಹರಿಕತೆ ಕೇಳಾಕೋಗಿದ್ದಾಗ, ಅಲ್ಲಿ ಕೇಳ್‍ತ ಕೇಳ್‍ತ, ನಮ್ಮ ಹಟ್ಟಿಬಯಲ ಚಂದ್ರಮ್ಮನಿಗು, ಇಲ್ಲಿ ಊರುಮುಂದಲ ಚಂದ್ರಮ್ಮನಿಗು, ಯೇರು. ಪೇರೇನಾರ ಐತೆನೊ? ಅಂದುಕೊಂಡು ಅಂಗಾತ ಮಲಗಿಬಿಟ್ಟಿದ್ದನಂತೆ, ಆಗಿನ್ನ ಹನ್ನೊಂದು ವರ್ಷದ ಅಪ್ಪ, ತೂಕಡಿಸಿ ತೂಕಡಿಸಿ, ನಿದ್ದಿಗೆ ಜಾರಿದವನಿಗೆ, ಅವನ ಬೆನ್ನಿಂದೆ ಮಲಗಿದ್ದ, ಕಪ್ಪು ನಾಯಿಯೊಂದಕ್ಕು, ಅಪ್ಪನಿಗು ಜಂಟಿ ಮಾಡಿ, ನಾಯಿಯ ಬೆನ್ನಿಗು, ಅಪ್ಪನ ಬೆನ್ನಿಂದಲ ಬನೀನಿಗು ಸೇರಿಸಿ. ಯಾರೊ ಪುಂಡು ಹುಡುಗುರು, ಬಿಗಿಯಾಗಿ ಕಟ್ಟಿದ್ರಂತೆ. ಅದುನ್ನ ಯಾರು ಗಮನಸ್‍ದಂಗೆ, ಅವರ ಪಾಡಿಗವರು ಇದ್ದವರನ್ನೆಲ್ಲ. ಯಣ ಯಾರೊ, ನನಗು ಈ ನಾಯಿಗು, ದಾರ ಕಟ್ಟೆವರೆ. ಈ ದಾರ ಬಿಚ್ಚರಣ, ಎಂದು ಅಪ್ಪನಿಗೆ ನಿಚ್ಚಳವಾಗಿ ಎಚ್ಚರವಾದ ಮೇಲೆ, ಅವನ ಬೆನ್ನಿಂದಲ ನಾಯಿಯ ಕಡೆ ಕೈತೋರಿಸಿಕೊಂಡು, ಯಾರ್ಯಾರಿಗೊ ಹೇಳಿನಂತೆ, ಆ ಹರಿಕತೆದಾಸರ ಕತೆಯ ಹಬ್ಬರಕ್ಕು, ಮತ್ತು ಹಾರ್ಮೊನಿ ತಬಲದ ಶಬುದಕ್ಕು, ಯಾರುನೆಟ್ಟಗೆ ಅಪ್ಪನ ಮಾತು ಕೇಳಿಸಿಕೊಂಡಿರಲಿಲ್ಲ. ಅಂಗೆ ಯಾರು ಕೇಳಿಸಿ ಕೊಂಬದ. ಅರ್ದ ರಾತ್ರಿಲು. ತಿರುಗಿ ಅದೇ ಚಂದ್ರನ, ತೇಲು ಮುಳುಗಾಟವನ್ನ ದಿಟ್ಟಿಸುತ್ತಿದ್ದ. ಅಪ್ಪ ತಿರುಗಿ ಅಂಗೆ ಕಣ್ಣು ಜೂಗರಿಸಿದ್ದ. ಅಪ್ಪ ಮತ್ತು ನಾಯಿಯನ್ನು, ನಿಚ್ಚಳವಾಗಿ ಬೆಳಕರಿದರು, ಯಾರು ಬಿಚ್ಚಿರಲಿಲ್ಲವಂತೆ. ಕತೆ ಮುಗುದು ಇಷ್ಟೊತ್ತಾದ್ರು, ಯಾಕೊ ನನ್ನುಡುಗ ಮನಿಗ್ ಬರಲಿಲ್ಲವಲ್ಲ? ಎಂಬ ದಿಗಿಲಿನೊಳಗೆ ಅಪ್ಪನ ಅಮ್ಮ ಊರು ಮುಂದಲ ಚಾವಡಿ ಹತ್ರಕ್ಕೆ ಹುಡಿಕ್ಕೆಂಡು ಬರೊವತ್ತಿಗೆ ಅಪ್ಪನ ಸುತ್ಲು ವರಸೆಯಾಗುವ, ಕೆಲವು ಗಂಡಸರು ಸುತ್ತಿಕೊಂಡು. ಲೇ ಯಾಕ್ಲ? ಈ ಕರೆ ನಾಯಿನ ಇಂಗ್ ಗಂಟಾಕ್‍ಂಡಿದ್ದೀಯ? ಎಂದವನ ಮಾತಿಗೆ, ಊನ್ಲ ಇದು ಎಂಗು ಗಂಡು ನಾಯಿ, ನೀನೆಂಗು ಹೆಣ್ಣು ಸಂಗ, ಚೆನ್ನಾಗೈತಲ ಜೋಡಿ, ಎಂದು ಇನ್ನೊಬ್ಬನು ಅಂಗುಸ್‍ತಿರುವಾಗ, ಲೇ ಯಾವಾಗ್‍ಮಾಡಾನ್ಲ ನಿನಗು ಇದುಕ್ಕು ಮದುವೆ? ಎಂದು ಹಾಡ್‍ಕಂಡು ನಗತ್ತಿದ್ದ ಗಂಡಸರನ್ನೆಲ್ಲ. ತಳ್ಳಿಕೊಂಡು ಬಂದ ಅಜ್ಜಿ, ತೂ ಪಾಪುರ್‍ನನಮಕ್ಕಳ, ಕಿತ್ತೋದ್ ನನ್‌ಮಕ್ಕಳ, ನನ್ನುಡುಗುನ್ನ ಈ ನಾಯಿಗ್‌ಕಟ್ಟಾಕಿ, ಸೆಕ್ಕಂದವಾಡ್‌ತಿದ್ದೀರಲ್ಲಲ? ನನ್ನುಡುಗ ಅಂದ್ರೆ ನಿಮಗೆಲ್ಲ ಎಂಗ್ ಕಾಣ್‌ತಾನ್ಲ? ನಿಮ್ ಕಣ್ಣಿಗ್ ಕೆಂಡ ಸುರಿಯ, ಎಂದು ಅವ್ಯಾಚವಾಗಿ ಬೈದು, ಆ ನಾಯಿಯಿಂದ ಬಿಡಿಸಿಕೊಂಡು ಬಂದ, ಅಪ್ಪನ ಅಮ್ಮ, ವರುಸೊಂಬತ್ತು ಕಾಲವಾದ್ರು. ಯಾವೋನೊ ತಲ್ ಮಾಸಿದ್ ನನ ಗಡ್ಡೆ, ನಮ್ಮಪ್ಪಯ್ಯನ್ನು-ನಾಯಿನು, ಜಂಟಿಮಾಡಿ ಕಟ್ಟಾಕ್ ಬುಟ್ಟಿದ್ದ. ಅವನ ಕೈಯ್ಯೇಂಬೋದು ಅಲ್ಲೇ ಸೇದೋಗ್‌ಲಿ. ಎಂದು ಬೈಕೊಳ್ಳುತ್ತಿದ್ದ ಅವರ ಅಮ್ಮ, ಈ ನನ್ ಗಡ್ಡೇನು ಅಂತವನೆ, ಉಂಬೊ ಇಟ್ಟು ಬುಟ್ಟು, ಮಾಡೊ ಬದುಕು ಬಿಟ್ಟು, ಬೆಳದಿಂಗಳು ಬೆಳದಿಂಗಳು ಅಂತ ಅದೇನ್ ಸಾಯ್‌ತೀಯಲೆ? ಎಂದು ಆಗಾಗ ಅಪ್ಪನ ಅವ್ವ, ಹುಣ್ಣಿಮೆ ಬೆಳದಿಂಗಳು ಹುಟ್ಟಿತೆಂದರೆ ಬೈತಾನೆ ಇರೋಳಂತೆ. ಅಂಗಾದ್ರು ಅಪ್ಪನ ಬದುಕು ಮಾತ್ರ.. ಆ ಬೆಳದಿಂಗಳ ಬದುಕಿನೊಳಗೆ ಇಮ್ಮಡಿಯಾಗಿ ಸಾಗುತ್ತಲೆ ಬಂದಿತು.

ಬೆಂಗಳೂರಿನಿಂದ ಬಂದ ಮೊಮ್ಮಗ, ಬೆಳಕರಿದು ಎದ್ದ ಮ್ಯಾಲೆ, ತಾತ ನಿಮ್ಮಳ್ಳೀಲಿ ಇಂತ ಪ್ಯಾನು ಐತಾ? ನಮ್ ಬೆಂಗಳೂರಲ್ಲಿ ನಿಮ್ ಪ್ಯಾನಿಗಿಂತ, ನಮ್ ಟೇಬಲ್ ಪ್ಯಾನೆ ಚೆನ್ನಾಗೈತೆ ಅಂದ. ಅಯ್ಯೋ ಗಮಾರ್‍ಕ, ಇದು ಪ್ಯಾನಲ್ಲವೊ? ಇದುನ್ನ ರಾಟೆ ಅಂತಾರೆ ಅಂದ ತಾತನ ಮಾತಿಗೆ, ಅಯ್ಯೊ ಈ ತಾತುಂಗೆ ಯಾವುದನ್ನ, ಎಂಗೆಂಗ್ ಕರೀಬೇಕು ಅಂಬೋದೆ ಗೊತ್ತಿಲ್ಲ? ಎಂದು ಚಪ್ಪಾಳೆ ತಟ್ಟಿ ಕೊಂಡು, ನಕ್ಕ ಮೊಮ್ಮಗನ ಮಾತಿಗೆ, ಬೇಸರವಾಗದೆ ಅಪ್ಪನ ಬದುಕು ಬಾಳೆಂಬೊ, ಅಗಾದ್‌ವಾದ ದಿನಗಳು, ಕಣ್ಣಿಗೆ ಕಟ್ಟಿ ಕೊಂಡವು. ಬೆಳಗಿನಿಂದ ಸಂಜೆ ತಕ, ಬೇಸಾಯದ ಬದುಕಿನೊಳಗೆ, ಒಂದು ಘಳಿಗೆಯು ಅದ್ವಾನ ಮಾಡ್‌ದಂಗೆ, ಹೈರಾಣವಾಗುತ್ತಿದ್ದವನು, ಎಲ್ಲರಂಗೆ ಊರಿಗ್ ಮುಂಚೆ, ಹೊಟ್ಟುತುಂಬ ಉಂಡು, ಉಸ್ಸಂತ ಮಲಗ್‌ದೋನಲ್ಲ.

ಊರೂರ್‍ಗೆ ಮಾರ್‍ಕಂಡು ಬರ್ತಿದ್ದ, ಬುಡೇನ್ ಸಾಬರಿಂದ ಕೊಂಡ್‌ಕಳತಿದ್ದ, ಕುರಿ ಬಂಡವನ್ನ(ಉಣ್ಣೆ) ಕರೀದಿಸಿ, ಅಂಜಿ ಹೊಡಕಂಡು, ಇದೇ ಬಟಾಬಯಲ ಬೆಳದಿಂಗಳಲ್ಲಿ. ಸರುವತ್ತಿನ ತಂಕ ಕುಂತು ಬಿಡುತ್ತಿದ್ದನು. ಅಂತ ಹಾಲು ಚೆಲ್ಲಿದ ಹಜಾರದ ಬೆಳದಿಂಗಳು. ಮರೆಯಾಗುತ್ತ ಮೈ ಸೋತರು, ಅಪ್ಪ ಮಾತ್ರ ಅವನಿಂಗಟಿಕೊಂಡ ಬದುಕಲ್ಲಿ, ಯಾವತ್ತು ಸೋತವನಲ್ಲ. ನೆನೆದ ಹುಣಸೆ ಬೀಜವನ್ನ, ಹಟ್ಟಿ ಬಯಲ ಗುಂಡು ಬಂಡೆಯೊಳಗೆ, ರುಬ್ಬಿ ರುಬ್ಬಿ. ಸರಿ ಕಾಯಿಸುತ್ತಿದ್ದದ್ದು ಇದೆ ಬಯಲ ಬೆಳದಿಂಗಳಲ್ಲಿ. ಅಮ್ಮ ಮಬ್ಬಿಗೆದ್ದು ಮರ ಮರದಕೆಳಗೆ.. ಹಾದುಕೊಂಡು ಬಂದಿದ್ದ. ಗುಲುಕೆ ಗುಲುಕೆ ಬೇವಿನಣ್ಣುನ್ನ, ಈ ಹಜಾರದ ಮೂಲೆ ತುಂಬ ಸುರುಕೊಂಡು. ಕಾಲುಗಳಲ್ಲಿ ತುಳಿದು ತುಳಿದು ಸೋಸಿದ್ದು, ದಿನ್ನೆ ದಿಬ್ಬೆಲ್ಲ ಆಲಾಪಿಸಿ ಹಾಯುತ್ತಿದ್ದ ಮಂಕರಿಗಟ್ಟಲೆಯ, ವಂಗೆ ಕಾಯಿ ಕುಟ್ಟಿದ್ದು. ಅಪ್ಪನ ಪಾಲಿಗೆ ಬಂದಿದ್ದ ಎರಡು ಹುಣಸೆ ಮರದ ಹಣ್ಣು ಕುಟ್ಟಿ.. ಬೀಜ ಸೋಸಿ, ನಾರು ಬಿಡಿಸಿದ್ದು, ಕಣ್ಣಾಮುಚ್ಚಾಲೆಯಾಡುವ ಕರೆಂಟುನ್ನ ನಂಬಿಕೊಳ್ಳದೆ, ಗೂಡೆ ಗೂಡೆ ರಾಗಿ ಬೀಸಿದ್ದು, ಗದ್ದೆ ಕುಯಿದ ಕಣಗಾಲದ ದಿನಗಳಲ್ಲಿ, ಕುಪ್ಪೆ ಭತ್ತ ಬಡಿದದ್ದು, ಇದೇ ರಾಶಿ ರಾಶಿ ಬೆಳದಿಂಗಳ ಬಗೆದು, ಮನದಣಿಯೆ ಬದುಕು ಮಾಡಿದ. ಅಪ್ಪನ ಊಟವೆಂದರೆ, ಸಿಕ್ಕುಲು ಕಾಳಿನ ಸಪ್ಪನೀರಾಗಲಿ, ಬದನೆ ಕಾಯಿಯ ಬಜ್ಜಿಯಾಗಲಿ, ಉಳ್ಳಿ ಕಾಳಿನ ಸ್ವಾಡಿಗೆಯಾಗಲಿ, ಮಸಕಾಂಬರವಾಗಲಿ, ಅವ್ವ ಆಯಾಯ ದಿನದ ಉಂಬಳಕ್ಕೆ, ಹೊಂಚಿಕೊಂಡು ಮಾಡ್‌ತಿದ್ದ ಸಾರಿನೊಳಗೆ ಸುಡಾ ಸುಡಾ, ಮುದ್ದೆ ಮುರಿದು ಉಂಡನೆಂದರೆ, ಜಲ ಜಲನೆ ಬೆವತ, ಬ್ಯಾಸಿಗೆ ಬೆವರಿಗೆ ಮೈಯ್ಯೊಡ್ಡಿ. ಅದೇ ಹಟ್ಟಿ ಬಯಲೊಳಗೆ ಸೇರುವ. ಓಣಿ ಹೆಂಗಸರ ಕೂಟೆ. ಸೆಕ್ಕಂದದ ಪದ ಪೋಣಿಸಿ, ಅವರನ್ನೆಲ್ಲ ಹೊಟ್ಟೆ ಬಿರಿಯಂಗೆ, ಇಗ್ಗಾ ಮುಗ್ಗಾ ನಗಿಸುತ್ತಿದ್ದ. ಅಂಗೆ ಪಕ ಪಕನೆ ನಕ್ಕ ಹೆಂಗಸರ ನಗುವಿಗೆ, ಆ ರಾಶಿ ರಾಶಿ ಬೆಳದಿಂಗಳು ಕೂಡ, ಗಲ ಗಲನೆ ನಗುತ್ತಿತ್ತು.

ಅಪ್ಪನಿಗಿದ್ದದ್ದು ಒಬ್ಬನೆ ಒಬ್ಬ ಮಗ. ಒಬ್ಬರಿಂದೆ ಒಬ್ರು, ಬರಿ ಹೆಣ್ಣುಮಕ್ಕಳೆ ಮೂವರಾದ್ರು ಅನುತ. ಒಂದು ವಂಸದ ಹೆಸರೇಳಾಕೆ ಗಂಡುದಿಕ್ಕವಿಲ್ಲ. ನಾವು ಸತ್ತರೆ ಕೊಳ್ಳಿ ಇಕ್ಕೋರು ಗತಿಯಿಲ್ಲವೆಂದು, ಊರೂರಿನದೇವರಿಗೆಲ್ಲ ಅರಕೆ ಹೊತ್ತುಕೊಂಡು. ಹಡದಿದ್ದ ಈ ಗಂಡುಮಗನ ಮ್ಯಾಲೆ, ಎಲ್ಲಿ ಇಲ್ಲದ ಅಕ್ಕರೆ ಇಟ್ಟುಕೊಂಡು ಸಾಕೀರು. ಉಂಬಾದ್ರಾಗೆ, ಉಡಾದ್ರಾಗೆ, ತಿಂಬಾದ್ರಾಗೆ, ತೇಗಾದ್ರಾಗೆ, ಮೂರು ಹೆಣ್ಣು ಮಕ್ಕಳಿಗಿನ್ನ ಎರಡು ಮೆಟ್ಲು ಜಾಸ್ತಿ, ಗನಂದಾರಿಯಾಗಿ ಸಾಕಿದ ಮಗುನ್ನ.. ಯಪ್ಪ ಹಬ್ಬ ಹರಿದಿನುಕ್ಕಾದ್ರು, ನಿನ್ನೆಂಡ್ರು ಮಕ್ಕಳನ್ನ ಕರಕೊಂಡು, ಊರಿಗ್ ಬಾರ್‍ಲ ಅಂದ್ರೆ.. ಅಮ್ಮೊ ಹೊತ್ತು ಗೊತ್ತೇಂಬೋದ್ರ ಬೆಲೆ ನಿನ್‍ಗೇನ್ ಗೊತ್ತೈತೆ? ಇಲ್ಲಿ ನಮ್ ಪಾಡು ನಮಗೆ ಗೊತ್ತು, ನಿನಗೇನು? ಅಡಿಕೆಲೆ ಚೀಲೊಂದಿದ್ರೆ ಪರ್‍ಪಂಚ್‌ವೆ ನನ ಮುಂದೈತೆ ಅಂಬೋಳು. ನಿನಗು ನಮಗು ಒಂದೇನೆ ಅನುತ. ಆ ತಾಯಿಯಾದವಳ ಪ್ರೀತಿಯನ್ನು ನಿಮಷವೆಂಬೋವೊತ್ತಿಗೆ, ನಿಸೂರಾಗಿ ತಗದಾಕುತ್ತಿದ್ದ ಮಗನ ಮಾತಿಗೆ, ಯಾವ ಹಬ್ಬ ಹರಿದಿನಕ್ಕು ರಜೆ ಕೊಡಲ್ಲವೆಂಬ ಕಂಪನಿವೊಳಗೆ… ಬಲ್ಲಿ ಮರಿಯಾಗಿ ತೂರಿ, ಅಲ್ಲಿ ದುಡ್ಡು ದುಡ್ಡು ಅಂಬೊ, ತಬ್ಬಲಿಯ ಗೋಪುರ ಏರಾಕ್ ನೋಡ್‌ತಿರೊ.. ಮಗನ ಬದುಕಿಗೆ ಕ್ವಾಪ ಹೆಚ್ಚಾಗಿ, ಅವನ್ ದುಡ್ಡಿನ್ ಕಿವೆ ಕೀಳಾ? ಇವತ್ತು ಬಂದು ಬಳಗ, ತಾವು ತಡಿ, ಅಂಬೋದ್ ಕಳ್‍ಕಂಡ್ ಮ್ಯಾಲೆ, ಅವನು ಏಸ್ ಮೂಟೆ ದುಡ್ಡಿಕ್ಕೀರು ಏನ್ ಬಂತು? ಎನ್ನುವ ಅವ್ವನ ಏರುದ್ವನಿಯಾಗೆ, ಅಲ್ಲ ಯಾವತ್ತಾರ ಒಂದಿನ ನಮ್ಮಳ್ಳೀಂಗಿಗ್ ಬಂದು, ಕುಂತು ಮನಗ್‌ಲಿಲ್ಲ, ನಮ್ಮ ಬದುಕು ಬಾಳುನ್ನಾಗ್ಲಿ, ನಮ್ಮೂರಾಗಿರೊ ಅತಾರುಗಳನ್ನಾಗ್‌ಲಿ, ಕಣ್ಣಾಗಿಂಗೆ ನೋಡಸ್‌ದಂಗೆ ಬೆಳಸಿರೊ, ಮೊಮ್ಮಗನ ಮಾತು ಗೆಪುತಿಯಾಗಿ… ಎಮ್ಮೇನ ಎಮ್ಮೆಯೆಂದು ಒಪ್ಪಿಕೊಂಬದ, ನೂಲು ತಗಿಯೊ ರಾಟೆನ ಪ್ಯಾನು ಎಂಬುವ, ಹುಡುಗ, ಹಾಲೋಕುಳಿ ಚೆಲ್ಲಿ ಆನಂದದಲ್ಲಿ ತೇಲುತ್ತಿರುವ, ಬೆಳದಿಂಗಳ ಚಂದ್ರುನ್ನ, ಜುಜುಬಿ ಚಂದ್ರನೆಂದ ಮೊಮ್ಮಗ, ಮುಂದೊಂದುದಿನ, ಇವುನು ನ್ಯಾಯವಾಗಲು ನನ್ನ ವಂಶದ ಹೆಸರೇಳ್‌ತಾನೊ? ಇಲ್ವೊ? ಎಂಬ ಸಂಕಟದೊಳಗೆ, ಊರು ಮುಂದಿನ ಈಶ್ವರನ ಗುಡಿ ಮುಂದೆ, ಇದೆ ಹುಣ್ಣಿಮೆಯ ಬೆಳದಿಂಗಳ ಭಜನೆಯೊಳಗೆ, ತಾನೆತ್ತ ಮಕ್ಕಳು ತನಗಿಲ್ಲದ ಮ್ಯಾಲೆ… ಮೊಮ್ಮಕ್ಕಳ್ಯಾರಿಗಯ್ಯ ಲಿಂಗವೆ? ಎಂದು ಎತ್ತರದ ದ್ವನಿಯಲ್ಲಿ, ತಂಬೂರಿ ಬಾರಿಸಿಕೊಂಡು., ಹೇಳುತ್ತಿದ್ದ ನಾಯಕರ ನಾಗಜ್ಜನ ತತ್ವಪದವೊಂದು ಕಿವಿಗಪ್ಪಳಿಸಿ, ಅಪ್ಪನ ಕಣ್ಣಲ್ಲಿ ತೊಟ್ಟಿಕ್ಕಿದ ಕಣ್ಣಿರನ್ನೆ ನಿಚ್ಚಳವಾಗಿ ನೋಡಿದ ಬೆಳದಿಂಗಳ ಚಂದ್ರ, ಆಗಾಗ ಮೋಡದೊಟ್ಟೆ ಬಗೆಯುತ್ತಿದ್ದವನು.. ಅಲ್ಲೇ ನಿಂತುಮಕನಾಗಿನಿಂತು, ಒಂದರಗಳಿಗೆ ಅವನು ನಿಗಿ ನಿಗಿ ಎನ್ನುತ್ತಿದ್ದ ಚಂದ್ರ ನಿಶ್ಯಬುದನಾದ.