ವಿಜಾಪುರಕ್ಕೆ ಬಂದಮೇಲೆ ಬಹಳ ದಿನಗಳ ನಂತರ ನಾವು ಟಾಂಗಾದಲ್ಲಿ ಜೋಡಗುಂಬಜ ದರ್ಗಾಕ್ಕೆ ಹೋಗಿ ವಾಪಸ್ ಮನೆಯ ಸಮೀಪ ಬರುತ್ತಿರುವಾಗ ಅಲ್ಲೀಬಾದಿಯಲ್ಲಿ ನಾವು ಸಾಕಿದ ನಾಯಿ ಕಂಡಿತು. ಕಂಡೊಡನೆ ಅದು ಟಾಂಗಾದ ಬೆನ್ನು ಹತ್ತಿತು. ಅದರ ಅವಸ್ಥೆ ನೋಡಿ ನನ್ನ ಕರುಳು ಕಿತ್ತುಬಂದಂತಾಯಿತು. ನಾನು ಮುಟ್ಟುವ ಸ್ಥಿತಿಯಲ್ಲಿ ಅದು ಇರಲಿಲ್ಲ. ಆ ತೆಳ್ಳನೆಯ ಬಿಳಿ ನಾಯಿಯ ಮೈತುಂಬ ಚಿಕ್ಕ ಚಿಕ್ಕ ಹುಣ್ಣುಗಳಾಗಿ ರಕ್ತದ ಬಿಂದುಗಳಂತೆ ಕಾಣುತ್ತಿದ್ದವು. ಅದು ಬಹಳ ಆಯಾಸಗೊಂಡಿತ್ತು. ಆದರೆ ಟಾಂಗಾದ ಬೆನ್ನು ಬಿಡಲಿಲ್ಲ. ಮನೆ ಬಂದಿತು.
ರಂಜಾನ್ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ ಒಂಭತ್ತನೆಯ ಕಂತು.

ಅಂತೂ ಗಂಟುಮೂಟೆ ಕಟ್ಟಿಕೊಂಡು ಅಲ್ಲೀಬಾದಿಯಿಂದ ವಿಜಾಪುರಕ್ಕೆ ಬಂದಾಯಿತು. ಮನೆ ಚಿಕ್ಕದಿದ್ದರೂ ಮನೆಮುಂದೆ ಒಂದೆರಡು ದನಗಳನ್ನು ಕಟ್ಟುವಷ್ಟು ಮತ್ತು ಅಂಗಳದಲ್ಲಿ ಮಲಗುವಷ್ಟು ಸ್ಥಳಾವಕಾಶ ಇತ್ತು.

ಹೇಗೋ ಬದುಕುತ್ತಿದ್ದೆವು. ಯಾವುದೇ ಕಷ್ಟ ಅಥವಾ ತೊಂದರೆಗಳು ನಮಗೆ ಬಾಧಿಸಲು ಸಾಧ್ಯವಿರಲಿಲ್ಲ. ಸಮಸ್ಯೆಗಳನ್ನು ಎದುರಿಸುತ್ತ ಮುಂದೆ ಸಾಗುವುದು ಮಾತ್ರ ಮನೆಯವರಿಗೆ ಗೊತ್ತಿತ್ತು. ನಾನು ಮತ್ತು ನನ್ನ ಇಬ್ಬರು ತಮ್ಮಂದಿರು ಚಿಕ್ಕವರಾಗಿದ್ದರಿಂದ ನಮ್ಮ ತಾಯಿ ತಂದೆ ಎಲ್ಲವನ್ನೂ ಹೇಗೆ ನಿಭಾಯಿಸುತ್ತಿದ್ದರು ಎಂಬುದೂ ನಮಗೆ ಗೊತ್ತಾಗುತ್ತಿರಲಿಲ್ಲ. ಹಸಿವಾದಾಗ ಊಟ ಸಿಗುತ್ತಿತ್ತು. ನಿದ್ದೆ ಬಂದಾಗ ಸಿಕ್ಕ ಜಾಗದಲ್ಲಿ ಮಲಗುತ್ತಿದ್ದೆವು. ನಮ್ಮ ಹಸು ‘ಗಂಗಾ’ ಹಾಲಿನ ಸಮಸ್ಯೆಯನ್ನು ಬಗೆ ಹರಿಸಿತ್ತು.

(ಇಲಾಚಿ ಹುಣಸಿಕಾಯಿ)

ವಿಜಾಪುರಕ್ಕೆ ಬಂದ ನಂತರ ಸ್ವಲ್ಪ ದಿನಗಳವರೆಗೆ ಕಾಲರಾದಿಂದಾಗಿ ಅಜ್ಜಿ ಬಹಳ ಸುಸ್ತಾಗಿದ್ದಳು. ಕಾಲರಾ ರೋಗಪೀಡಿತಳಾಗಿದ್ದ ಅವಳು ಅಶಕ್ತಳಾಗಿ ಬಚ್ಚಲಿನಲ್ಲಿ ವಾಂತಿ ಮಾಡಿಕೊಳ್ಳುವಾಗ ನಾನು ಬಹಳ ಕಸಿವಿಸಿ ಪಡುತ್ತಿದ್ದೆ. ಚಿಮಣಿ (ಸೀಮೆ ಎಣ್ಣೆಯ ಬುಡ್ಡಿ) ಬೆಳಕಿನಲ್ಲಿ ಕಂಡ ಆ ನೋವಿನ ದೃಶ್ಯ ಇನ್ನೂ ನೆನಪಿದೆ.

ಆ ಕಾಲದಲ್ಲಿ ವಿಜಾಪುರ ಪಟ್ಟಣ ಒಂದು ಬೃಹತ್ತಾದ ಹಳ್ಳಿಯ ಹಾಗೆ ಇತ್ತು. ಆದರೆ ನಮಗೆ ಹಳ್ಳಿಯಲ್ಲಿ ಪುಕ್ಕಟೆ ಸಿಗುತ್ತಿದ್ದ ಹುಂಚಿಕಪ್ (ಹುಣಿಸೆಬೀಜ), ಇಲಾಚಿ ಹುಣಸಿಕಾಯಿ, ಗೋಳಿಪಲ್ಲೆ, ಸಿಂದೀಹಣ್ಣು (ಸೇಂದಿಹಣ್ಣು), ಸೇಂಗಾ, ಬಾರಿಕಾಯಿ (ಬೋರೆಹಣ್ಣು) ಮುಂತಾದವು ಇಲ್ಲಿ ಮಾರಾಟದ ವಸ್ತುಗಳಾಗಿದ್ದವು. ನಮ್ಮ ಹಾಗೇ ಇರುವ ಬಡಜೀವಿಗಳು ಅವುಗಳನ್ನು ಮಾರುತ್ತಿದ್ದರು.

ಅಜ್ಜಿ ಸ್ವಲ್ಪ ದಿನಗಳಲ್ಲಿ ಎಂದಿನಂತೆ ಕ್ರಿಯಾಶೀಲಳಾದಳು. ನಾವಿದ್ದ ಪ್ರದೇಶವೊಂದು ವಿಚಿತ್ರ ಓಣಿಯಾಗಿತ್ತು. ಸಿದ್ಧೇಶ್ವರ ಗುಡಿಯಿಂದ ಬರುವ ರಸ್ತೆ, ಮುಂದೆ ಸಾಗಿದಂತೆ ಬಿಎಲ್‌ಡಿಇ ರಸ್ತೆಯಾಗುವುದು. ಎಡಗಡೆ ಎಸ್.ಎಸ್. ಹೈಸ್ಕೂಲ್ ಆಟದ ಮೈದಾನವಿದೆ. (ಅದಕ್ಕೆ ಆಗ ಕಲ್ಲಿನ ಗೋಡೆಯ ಆವರಣವಿತ್ತು. ಈಗ ಬಿ.ಎಲ್.ಡಿ.ಇ. ಸಂಸ್ಥೆಯವರು ಆ ಗೋಡೆ ತೆಗೆದು ಆಟದ ಮೈದಾನವನ್ನು ಸ್ವಲ್ಪ ಕಡಿಮೆ ಮಾಡಿ ಸಾಲು ಅಂಗಡಿಗಳನ್ನು ಕಟ್ಟಿದ್ದಾರೆ. ಹೀಗಾಗಿ ಅಂಗಡಿಗಳೇ ‘ಗೋಡೆ’ ನಿರ್ಮಿಸಿವೆ.)

(ನೀರು ಪೂರೈಕೆ ಗಂಜ್)

ಹಾಗೇ ಸ್ವಲ್ಪದೂರ ಸಾಗಿದ ಮೇಲೆ ಬಲಗಡೆ ಆದಿಲಶಾಹಿ ಕಾಲದ ನೀರು ಪೂರೈಕೆ ಗಂಜ್ ಸಿಗುವುದು. (ಜಗತ್ತಿನಲ್ಲಿ ಮೊದಲಿಗೆ ರೋಮ್ ನಗರದಲ್ಲಿ ನೀರು ಪೂರೈಕೆಯಾದ ದಾಖಲೆ ಇದೆ. ತದನಂತರ ನೀರು ಪೂರೈಕೆ ವ್ಯವಸ್ಥೆಯಾಗಿದ್ದು ಆದಿಲಶಾಹಿ ಕಾಲದ ವಿಜಾಪುರದಲ್ಲಿ. ಬೇಗಂ ತಾಲಾಬ್ ಎಂಬ ಕೆರೆಯಿಂದ ಇಂಥ ಗಂಜ್‌ಗಳ ಮೂಲಕ ವಿಜಾಪುರ ರಾಜಧಾನಿಗೆ ಕುಡಿಯುವ ನೀರಿನ ಪೂರೈಕೆಯಾಗುತ್ತಿತ್ತು. ಅಷ್ಟೇ ಅಲ್ಲದೆ ವಿಜಾಪುರದ ಎಲ್ಲ ಬೃಹತ್ ಇಮಾರತುಗಳ ಮುಂದಿನ ಪುಷ್ಕರಣಿಗಳು ನೀರಿನಿಂದ ತುಂಬಿರುತ್ತಿದ್ದವು. ಇತ್ತೀಚಿನ ದಶಕಗಳಲ್ಲಿ ನಗರ ಬೆಳೆದಂತೆಲ್ಲ ಕಟ್ಟಡ ನಿರ್ಮಾಣಕ್ಕಾಗಿ ಪಾಯಾ (ಅಡಿಪಾಯ) ಅಗೆಯುವಾಗ ಆದಿಲಶಾಹಿ ಕಾಲದ ಬಹಳಷ್ಟು ನೀರಿನ ಕೊಳವೆಗಳು ಒಡೆದುಹೋದ ಕಾರಣ ಪುಷ್ಕರಣಿಗಳಿಗೆ ನೀರು ಪೂರೈಕೆಯಾಗುತ್ತಿಲ್ಲ.) ನೆಲದಿಂದ ಸ್ವಲ್ಪ ಎತ್ತರದಲ್ಲಿ ಈ ಗಂಜ್‌ಗೆ ಚಿಕ್ಕ ಕಮಾನುಗಳಿದ್ದವು. ಅವುಗಳಲ್ಲಿ ಒಬ್ಬ ಮಾತ್ರ ಕೂಡುವಷ್ಟು ಸ್ಥಳಾವಕಾಶವಿದೆ. ನಂತರದ ದಿನಗಳಲ್ಲಿ ಅದು ನನ್ನ ಖಾಸಗಿತನದ ಸ್ಥಳವಾಯಿತು. ಬೇಸಗೆಯ ಬಿಸಿಲಿನ ತಾಪ ಸಹಿಸಿಕೊಳ್ಳಲಿಕ್ಕಾಗದ ಸಂದರ್ಭದಲ್ಲಿ ಒಬ್ಬನೇ ಹೋಗಿ ಆ ಕಮಾನಿನಲ್ಲಿ ಕೂಡುತ್ತಿದ್ದೆ. ಎತ್ತರದ ಗಂಜ್‌ನಿಂದಾಗಿ ಸುಡುಬಿಸಿಲು ಹತ್ತದೆ ವಾತಾವರಣ ಒಂದಿಷ್ಟು ತಂಪಾಗಿರುತ್ತಿತ್ತು.)

ಗಂಜ್‌ನಿಂದ ಸ್ವಲ್ಪ ಮುಂದೆ ಬಂದು ಬಲಕ್ಕೆ ಹೊರಳಿದಾಗ ಮೊದಲಿಗೆ ಭಜಂತ್ರಿ ಗಲ್ಲಿ ಕಾಣುವುದು. ಅಲ್ಲಿಂದ ಮುಂದೆ ಸಾಗಿದಾಗ ಮದ್ದಿನ ಖಣಿ ಓಣಿ ಕಾಣುವುದು. ಖಣಿಯ ಕಂಪೌಂಡ ಗೇಟ್ ಎದುರಿನ ರಸ್ತೆಯ ಬಲಬದಿಗೆ ಒಂದು ಮೂರಂಕಣದ ಬಾಡಿಗೆ ಮನೆ ನಮ್ಮದಾಗಿತ್ತು. ಎದುರಿಗೆ ಇರುವ ಕಂಪೌಂಡ್ ಗೇಟ್ ಒಳಗಡೆ ಹೋದರೆ ಶಂಕರಲಿಂಗ ಗುಡಿ ಕಣ್ಣಿಗೆ ಬೀಳುವುದು. ಅದರ ಹಿಂದೆ ಹಾಸ್ಟೆಲ್ ಕಟ್ಟಡ ಮತ್ತು ಮುಂದುಗಡೆ ಬೃಹತ್ತಾದ ಮದ್ದಿನ ಖಣಿ ಇದೆ. ಭಜಂತ್ರಿ ಗಲ್ಲಿ ದಾಟಿದ ಮೇಲೆ ಮುಂದೆ ಬರುವ ರಸ್ತೆ ಬಲಗಡೆಯ ಬಹಳಷ್ಟು ಮನೆಗಳು ಮಧ್ಯಮ ವರ್ಗದವರ ಮನೆಗಳಾಗಿದ್ದವು.

(ಭಜಂತ್ರಿ ಗಲ್ಲಿ)

ಭಜಂತ್ರಿ ಸಮಾಜದವರು ಬಹಳ ಕಷ್ಟಜೀವಿಗಳು. ಅವರ ಕೆಲಸಗಳು ಕೂಡ ವೈವಿಧ್ಯಮಯವಾಗಿದ್ದವು. ಸಿಂದೀ ಗಿಡದ (ಈಚಲು ಮರದ) ಗರಿಗಳನ್ನು ಎಲ್ಲೆಲ್ಲಿಂದಲೋ ಕತ್ತರಿಸಿ ಸೂಡುಕಟ್ಟಿ ಕತ್ತೆಗಳ ಮೇಲೆ ಹೇರಿಕೊಂಡು ಬರುತ್ತಿದ್ದರು. ಅವುಗಳನ್ನು ರಸ್ತೆಬದಿ ಹರಡಿ ಒಣಗಿಸಿದ ನಂತರ ಚಾಪೆ ಹೆಣೆದು ಸುರಳಿ ಸುತ್ತಿ ಮಾರುತ್ತಿದ್ದರು. (ಇಂಥ ಚಾಪೆಗಳೇ ನಮಗೆ ‘ಬೆಡ್’ ಆಗಿದ್ದವು. ಹೊಸ ಚಾಪೆಗಳ ಮೇಲೆ ಮಲಗುವುದು ಕಿರಿಕಿರಿ ಎನಿಸುತ್ತಿತ್ತು. ಏಕೆಂದರೆ ಅಲ್ಲಲ್ಲಿ ಚಾಪೆಯ ಗರಿಗೆ ಉಳಿದುಕೊಂಡ ಮುಳ್ಳುಗಳು ತಾಗುತ್ತಿದ್ದವು. ಅಲ್ಲದೆ ಆ ಈಚಲು ಗರಿಗಳು ಸ್ವಲ್ಪ ಬಿರುಸಾಗಿರುವುದರಿಂದ ಕಿರಿಕಿರಿ ಎನಿಸುತ್ತಿತ್ತು. ಆದರೆ ಈ ಚಾಪೆಗಳು ಹಳೆಯದಾದ ಮೇಲೆ ಮೆತ್ತಗಾಗಿ ಖುಷಿ ಕೊಡುತ್ತಿದ್ದವು. ಬೇಸಿಗೆಯಲ್ಲಿ ಬರಿಮೈಲೆ ಮಲಗುತ್ತಿದ್ದೆ. ಆಗ ಕ್ರಾಸಾಗಿ ಹೆಣೆದ ಚಾಪೆಯ ಗುರುತು ಬೆನ್ನ ಮೇಲೆ ಮೂಡುತ್ತಿತ್ತು.)

(ಕೊರವರು)

ಭಜಂತ್ರಿ ಹೆಣ್ಣುಮಕ್ಕಳು ತೆಂಗಿನ ಗರಿಯಿಂದ ಕಡ್ಡಿಗಳನ್ನು ಸಂಗ್ರಹಿಸಿ ಪೊರಕೆ ಮಾಡುತ್ತಿದ್ದರು. ಹುಲ್ಲಿನ ಪೊರಕೆಗಳನ್ನು ಕೂಡ ತಯಾರಿಸುತ್ತಿದ್ದರು. ಒಂದಿಷ್ಟು ಕತ್ತೆಯ ಹಾಲನ್ನು ಔಷಧಿಯಂತೆ ಮಾರುತ್ತಿದ್ದರು. ರೋಗ ನಿರೋಧಕ ಶಕ್ತಿ ಬರುವುದೆಂದು ಜನ ಆ ಹಾಲನ್ನು ಸಿಂಪಿಯಿಂದ ಕೂಸುಗಳಿಗೆ ಕುಡಿಸುತ್ತಿದ್ದರು. ಆ ಹಾಲು ತಿಳಿಹಸಿರು ಬಣ್ಣದ್ದೆಂಬ ನೆನಪು.

ಭಜಂತ್ರಿ ಪುರುಷರಲ್ಲಿ ಅನೇಕರು ವಿವಿಧ ವಾದ್ಯಗಳನ್ನು ನುಡಿಸುವುದರಲ್ಲಿ ಮತ್ತು ಬಾರಿಸುವುದರಲ್ಲಿ ಪರಿಣತರಾಗಿದ್ದರು. ಅವರ ಬ್ಯಾಂಡ್ ಬಾಜೆಯಲ್ಲಿ ಶಹನಾಯಿ, ಟ್ರಂಪೆಟ್, ಕ್ಲಾರಿಯೊನೆಟ್, ಸ್ಯಾಕ್ಸೊಫೋನ್, ಗೆಜ್ಜೆ, ಹಲಗೆ, ತೋಷಾ, ಸುತಿ ಮುಂತಾದವು ಸಂಗೀತ ಸಾಧನಗಳಾಗಿದ್ದವು.

ಅವರು ತಮ್ಮದೇ ಆದ ಬ್ರಾಸ್ ಬ್ಯಾಂಡ್ ಕಂಪನಿ ಮಾಡಿಕೊಂಡು ಮದುವೆ ಮುಂಜಿಗಳಲ್ಲಿ ಸಂಗೀತ ಸೇವೆಯನ್ನು ಮಾಡುತ್ತಿದ್ದರು. ಅವರ ಯೂನಿಫಾರ್ಮ್ ಮಿಲಿಟರಿ ಬ್ಯಾಂಡಿನ ಹಾಗೆ ವರ್ಣರಂಜಿತವಾಗಿರುತ್ತಿತ್ತು.

(ಬ್ರಾಸ್ ಬ್ಯಾಂಡ್)

ಯಾವುದೇ ಕಷ್ಟ ಅಥವಾ ತೊಂದರೆಗಳು ನಮಗೆ ಬಾಧಿಸಲು ಸಾಧ್ಯವಿರಲಿಲ್ಲ. ಸಮಸ್ಯೆಗಳನ್ನು ಎದುರಿಸುತ್ತ ಮುಂದೆ ಸಾಗುವುದು ಮಾತ್ರ ಮನೆಯವರಿಗೆ ಗೊತ್ತಿತ್ತು.

ಈ ಬ್ರಾಸ್ ಬ್ಯಾಂಡಿನವರು ಸಾಯಂಕಾಲದ ವೇಳೆ ಒಂದೆಡೆ ಸೇರಿ ವಿವಿಧ ವಾದ್ಯಗಳೊಂದಿಗೆ ಪ್ರ್ಯಾಕ್ಟಿಸ್ ಮಾಡುವುದನ್ನು ಕೇಳುವುದನ್ನು ನಾನು ಇಷ್ಟಪಡುತ್ತಿದ್ದೆ. ಆ ಕಾಲದಲ್ಲಿ ಪ್ರಸಿದ್ಧವಾಗಿರುವ ಸಿನಿಮಾ ಹಾಡುಗಳನ್ನು ಅವರು ಶಹನಾಯಿ, ಕ್ಲ್ಯಾರಿಯೊನೆಟ್ ಮುಂತಾದ ಸಂಗೀತದ ಉಪಕರಣಗಳ ಮೂಲಕ ನುಡಿಸುತ್ತಿದ್ದರು.

ಭಜಂತ್ರಿ ಗಲ್ಲಿಯ ರಸ್ತೆಯಲ್ಲಿ ಹತ್ತು ಹೆಜ್ಜೆ ಮುನ್ನಡೆದ ಕೂಡಲೆ, ಎಡಗಡೆ ದೊಡ್ಡ ಮನೆ ಇತ್ತು. ಆ ಮನೆಯಲ್ಲಿ ಇಬ್ಬರು ಅಕ್ಕ-ತಂಗಿಯರಿದ್ದರು. ಇಬ್ಬರೂ ದಪ್ಪನೆಯ ಹೆಣ್ಣುಮಕ್ಕಳು ಆದರೆ ಚಿಕ್ಕವಳು ಬೆಳ್ಳಗಿದ್ದು ಸುಂದರಿಯಾಗಿದ್ದಳು. ಆಕೆ ಈ ಮೊದಲು ಮುಂಬೈನ ಕಾಮಾಟಿಪುರವಾಸಿನಿ. ಕಸಬಿನಿಯಾಗಿದ್ದ ಅವಳ ಗಳಿಕೆಯೆ ಈ ಮನೆಯ ವೈಭವಕ್ಕೆ ಕಾರಣವಾಗಿರಬಹುದು. ಅವಳ ಅಕ್ಕನಿಗೆ ನನಗಿಂತಲೂ ಬಹಳ ದೊಡ್ಡ ಮಗ ಇದ್ದ. ನನಗೆ ಏಳು ವರ್ಷ ಸಮೀಪಿಸುತ್ತಿದ್ದರಬಹುದು. ಆತ ಏನಿಲ್ಲೆಂದರೂ 12 ವರ್ಷದವನಾಗಿದ್ದ.

ಅವನ ಚಿಕ್ಕಮ್ಮ ಮುಂಬೈ ರೆಡ್‍ಲೈಟ್ ಏರಿಯಾದಿಂದ ವಾಪಸ್ ಬಂದು ಸನ್ಯಾಸಿನಿಯ ಹಾಗೆ ಬಿಳಿಸೀರೆಯುಟ್ಟು ಬದುಕತೊಡಗಿದ್ದಳು. ಹಳ್ಳಿಯ ಗೌಡನೊಬ್ಬ ಅವಳ ಮನೆ ಹುಡುಕಿಕೊಂಡು ಬಂದ. ಆತ ಮುಂಬೈಗೆ ಹೋದಾಗ ಅವಳ ಸಂಪರ್ಕ ಬಂದಿರಬಹುದು. ಆತ ಅವಳಲ್ಲಿ ಅನುರಕ್ತನಾಗಿದ್ದ. ದಪ್ಪನೆಯ ಬೆಳ್ಳನೆಯ ಆ ವ್ಯಕ್ತಿ ಮಧ್ಯವಯಸ್ಸಿನವನಾಗಿದ್ದ. ಶ್ರೀಮಂತಿಕೆಯ ಪ್ರತೀಕವಾದ ಮಸರಾಯಿ ಧೋತರ, ಬಿಳಿ ಅಂಗಿ ಮತ್ತು ಬಿಳಿ ರುಮಾಲು ಸುತ್ತಿಕೊಂಡಿರುತ್ತಿದ್ದ.

ನಾವೆಲ್ಲ ಮಕ್ಕಳು ಆ ಕಾಲದಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ಸಹಜವಾಗಿ ಹೋಗಿ ಬರುತ್ತಿದ್ದೆವು. ಆ ಮನೆಯಲ್ಲಿನ ತರಹೇವಾರಿ ವಸ್ತುಗಳನ್ನು ನೋಡುವುದೇ ಖುಷಿ. ಬಾತುಕೋಳಿ ಆಕಾರದ ಸ್ಟೀಲ್ ಡಬ್ಬದ ಎರಡು ರೆಕ್ಕೆಗಳಂಥ ಮುಚ್ಚಳ ತೆಗೆದರೆ ಅದರೊಳಗೆ ಎಲೆ, ಅಡಕಿ, ಸುಣ್ಣ, ಕಾಚು, ಬಡೆಸೋಪು, ಅರಕ್‌ಚಮನ್ ಮುಂತಾದವುಗಳು ಇರುತ್ತಿದ್ದವು. ನಾನೇನು ಎಲೆ ತಿನ್ನುತ್ತಿದ್ದಿಲ್ಲ. ಆದರೆ ಹಾಗೆಲ್ಲ ನೋಡುವುದು ಖುಷಿ ಕೊಡುತ್ತಿತ್ತು. ಶೋಕೇಸ್‌ನಲ್ಲಿ ಮುಂಬೈನಿಂದ ತಂದ ಆಕರ್ಷಕ ವಸ್ತುಗಳನ್ನು ಶಿಸ್ತಿನಿಂದ ಇಟ್ಟಿದ್ದರು.

ಮೊದಲ ಮಹಡಿಯ ಹಾಲ್‌ನಲ್ಲಿ ಅವರು ಇರುತ್ತಿದ್ದರು. ಹಾಲೊಳಗೆ ತೂಗುಮಂಚವನ್ನು ನೇತುಹಾಕಿದ್ದರು. ಗೌಡ ಬಹಳ ಸಲ ಆ ಮಂಚದ ಮೇಲೆ ಕೂತಿದ್ದನ್ನು ನೋಡಿದ್ದೇನೆ. ಹಾಗೆ ಕೂತಾಗ ಆತ ತನ್ನ ರುಮಾಲನ್ನು ತೆಗೆದು ಪಕ್ಕದಲ್ಲಿ ಇಟ್ಟುಕೊಂಡಿರುತ್ತಿದ್ದ.

(ಶಂಕರಲಿಂಗ ದೇವಸ್ಥಾನ)

ಆ ಹೆಣ್ಣುಮಗಳು ಮತ್ತೆ ವೇಶ್ಯೆಯಾಗುವುದನ್ನು ನಿರಾಕರಿಸಿದ್ದಳು. ಅವಳ ಮನಸ್ಸು ಎಲ್ಲ ಗೋಜಲುಗಳಿಂದ ಹೊರಬಂದು ನಿರಾಳವಾಗಿತ್ತು. ಆಕೆ ಸನ್ಯಾಸತ್ವದ ತನ್ನ ನಿರ್ಧಾರವನ್ನು ಬದಲಿಸಲೇ ಇಲ್ಲ. ಆ ಗೌಡನಿಗೆ ಏನೇನೋ ತಿಳಿಸಿ ಹೇಳುತ್ತಿದ್ದಳು. ಮೋಹಿತನಾಗಿದ್ದ ಆತ ಕೊನೆಗೆ ನಿರಾಶೆಯಿಂದ ಮರಳಿದ.

ಈ ಮನೆ ದಾಟಿದ ಮೇಲೆ ಸ್ವಲ್ಪ ಮುಂದೆ ಬಂದರೆ ಬರುವ ಮನೆಯೆ ಸಿದ್ರಾಮಪ್ಪ ಚಲವಾದಿಯವರ ಮನೆ. ಅವರು ಬಹಳ ಸಂಭಾವಿತ ವ್ಯಕ್ತಿಯಾಗಿದ್ದು ಮಿತಭಾಷಿಯಾಗಿದ್ದರು. ಅವರ ಮನೆಯಲ್ಲಿ ದೊಡ್ಡದಾದ ಸೌಟಿನಂಥ ಒಂದು ಹಿತ್ತಾಳೆಯ ವಸ್ತು ಇತ್ತು. ರಂಜಾನ್ ಹಬ್ಬದ ದಿನ ಈದಗಾ ಮೈದಾನದಲ್ಲಿ ಅದನ್ನು ಹೆಗಲ ಮೇಲೆ ಇಟ್ಟುಕೊಂಡು ಸುಮ್ಮನೆ ನಿಲ್ಲುತ್ತಿದ್ದರು. ನಮಾಜ ಮುಗಿದ ನಂತರ ಈದಗಾ ಮೈದಾನದಿಂದ ಹೊರಗೆ ಬರುವ ಜನ ಅವರ ಆ ಸೌಟಿನಲ್ಲೂ ಕಾಸು ಹಾಕುತ್ತಿದ್ದರು. ಒಂದು ಚಿಕ್ಕ ಕುಂಬಳಕಾಯಿ ಕೂಡುವಷ್ಟು ಆ ಸೌಟು ಅಗಲವಾಗಿತ್ತು. (ಅದು ಬಹಳ ದೊಡ್ಡ ಸೈಜಿನ ಸೌಟೇ ಆಗಿತ್ತು. ಅದರ ಹಿಡಕಿಯ ಮೇಲೆ ಆರಂಭದಲ್ಲೇ ನಂದಿಯ ಚಿಕ್ಕ ಮೂರ್ತಿ ಇತ್ತು.)

ಅವರ ಧಾಡಸಿ ಪತ್ನಿ ಕೋಂಡುಬಾಯಿಗೆ ನನ್ನ ಎರಡನೇ ತಮ್ಮ ಎಂದರೆ ಬಹಳ ಪ್ರೀತಿ. ಆತ ಒಂದೂವರೆ ಎರಡು ವರ್ಷದವನಿರಬಹುದು. ಆತ ಎಷ್ಟೋ ಸಲ ರಾತ್ರಿ ಕೂಡ ಅವಳ ಬಳಿಯೆ ಮಲಗುತ್ತಿದ್ದ. ನನ್ನ ತಾಯಿ ಅನೇಕಸಲ ಒತ್ತಾಯದಿಂದ ಅವನನ್ನು ಕರೆದುಕೊಂಡು ಬರುವ ಪರಿಸ್ಥಿತಿ ಉಂಟಾಗಿತ್ತು.

ಈ ಮನೆಯ ಎದುರುಗಡೆಯೆ ಯಮನವ್ವಳ ಚಿಕ್ಕ ಬಾಡಿಗೆ ಮನೆ ಇತ್ತು. ಅವಳಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳಿದ್ದರು. ಅವಳು ವಿಧವೆಯಾಗಿದ್ದಳು ಎಂಬ ನೆನಪು. ಬಹಳ ಒಳ್ಳೆಯ ಹೆಣ್ಣುಮಗಳು. ಆಟ ಆಡುವಾದಾಗ ಹಸಿವಾದರೆ ಅವಳ ಮನೆಗೆ ಹೋಗಿ ಕೇಳಿದಾಗ ಏನಾದರೂ ಪ್ರೀತಿಯಿಂದ ಕೊಡುತ್ತಿದ್ದಳು. ನನ್ನ ವಯಸ್ಸಿನ ಮಕ್ಕಳಿಗೆ ಎಲ್ಲರ ಮನೆಗಳು ಅವರ ಮನೆಗಳೇ ಆಗಿರುತ್ತಿದ್ದವು. ಆ ದಿನಗಳು ಮತ್ತೆ ಬರುವುದಿಲ್ಲ.

ಹಮ್ಮುಬಿಮ್ಮಿಲ್ಲದೆ ಬದುಕಿ ಹೋದ ಯಮನವ್ವನಂಥ ಅನೇಕರು ನನ್ನ ಜೀವನದ ಮೇಲೆ ಎಂದೂ ಮರೆಯದ ಪರಿಣಾಮ ಬೀರಿದ್ದಾರೆ. ಇಂಥ ಮಾನವೀಯ ಸ್ಪಂದನದ ನೆನಪುಗಳೇ ನನ್ನಂಥವರ ಜೀವನವನ್ನು ಅರ್ಥಪೂರ್ಣವಾಗಿಸಿವೆ.

ನಾನು ಅಜ್ಜಿಯ ಜೊತೆ ವಿಜಾಪುರಕ್ಕೆ ಬಂದ ಹೊಸದರಲ್ಲೇ ಯಮನವ್ವನ ಬದುಕಿನಲ್ಲಿ ಅನಾಹುತವೊಂದು ಸಂಭವಿಸಿತು. ಆಕೆಯ ಹಿರಿಯ ಮಗ ಹಮಾಲಿ ಮಾಡುತ್ತಿದ್ದ. ಆತ ಒಂದು ದಿನ ಟ್ರಕ್ ಮೇಲಿಂದ ಕಾಲುಜಾರಿ ಬಿದ್ದು ಸತ್ತ. ಅಂದಿನ ದಿನಗಳಲ್ಲಿ ಸರ್ಕಾರವಾಗಲಿ ಮಾಲೀಕರಾಗಲಿ ಯಾವುದೇ ಪರಿಹಾರ ಕೊಡುತ್ತಿದ್ದಿಲ್ಲವೆಂದೇ ಕಾಣುತ್ತದೆ. ಏಕೆಂದರೆ ಯಮನವ್ವನ ಬದುಕಿನಲ್ಲಿ ಯಾವುದೇ ವ್ಯತ್ಯಾಸವಾಗಲಿಲ್ಲ. (ಎಲ್.ಐ.ಸಿ. ಅದೇ ಆಗ, ಅಂದರೆ 1956ನೇ ಸೆಪ್ಟೆಂಬರ್ 1 ರಂದು ಪ್ರಾರಂಭವಾಗಿತ್ತು. ವಿಜಾಪುರದಂಥ ಪಟ್ಟಣದಲ್ಲಿ ಅದು ಇನ್ನೂ ಕಲಿತವರ ಹತ್ತಿರವೂ ಬಂದಿದ್ದಿಲ್ಲ.)

ಯಮನವ್ವಳ ಬದುಕು ಅದೇ ಕಠಿಣ ಶ್ರಮದ ಜೀವನವಿಧಾನದಿಂದ ಕೂಡಿತ್ತು. ಆಶ್ಚರ್ಯವೆಂದರೆ ಇಂಥವರಾರೂ ಹತಾಶರಾಗಿ ತಲೆಗೆ ಕೈ ಹಚ್ಚಿಕೊಂಡು ಕೂಡುತ್ತಿರಲಿಲ್ಲ. ಅವರ ದೃಷ್ಟಿಯಲ್ಲಿ ಜೀವನವೆಂದರೆ ಗೆಲುವಿನ ಹೋರಾಟ. ಅವರು ಗೆಲ್ಲಬೇಕಾಗಿದ್ದು ಸಂಪತ್ತನ್ನಲ್ಲ; ಕೈಚಾಚದೆ ಬದುಕುವ ದಿನಗಳನ್ನು.

(ಮದ್ದಿನ ಖಣಿ)

ನಾವೆಲ್ಲ ಹುಡುಗ ಹುಡುಗಿಯರು ಸೇರಿ ಅಲ್ಲೇ ಸಮೀಪದಲ್ಲಿ ಎಡಗಡೆ ಇರುವ ವಿಶಾಲವಾದ ಮದ್ದಿನ ಖಣಿಯಲ್ಲಿ ಆಡುತ್ತಿದ್ದೆವು. (ಸಂಕ್ರಾಂತಿಯ ಕೊನೆಯ ರಾತ್ರಿ ಆ ಖಣಿಯಲ್ಲಿ ಮದ್ದು ಸುಡುತ್ತಿದ್ದ ಕಾರಣ ಅದಕ್ಕೆ ‘ಮದ್ದಿನ ಖಣಿ’ ಎಂದು ಕರೆಯುತ್ತಿದ್ದರು. ಮದ್ದು ಸುಡುವುದನ್ನು ನೋಡುವುದೇ ಒಂದು ರೋಚಕ ಅನುಭವ. ಸಂಕ್ರಾಂತಿಯ ಅಂಗವಾಗಿ ನಡೆಯುವ ಜಂಗೀ ನಿಕಾಲಿ ಕುಸ್ತಿಗಳು ಕೂಡ ಅಲ್ಲೇ ನಡೆಯುತ್ತಿದ್ದವು.)

ಇಡೀ ವರ್ಷ ಅದು ಖಾಲಿ ಬಿದ್ದಿರುತ್ತಿತ್ತು. ಒಂದು ಕಡೆ ಗೌಳಿಗರು ಎಮ್ಮೆ ಮೇಯಿಸುತ್ತಿದ್ದರು. ಇನ್ನೊಂದು ಕಡೆ ದೊಡ್ಡ ಹುಡುಗರು ಫುಟ್‌ಬಾಲ್ ಆಡುತ್ತಿದ್ದರು. ನಾವೆಲ್ಲ ಸಣ್ಣ ಹುಡುಗರು ಅದು ಇದು ಆಡುತ್ತ ಕಾಲ ಕಳೆಯುತ್ತಿದ್ದೆವು. ಆ ಖಣಿಯಲ್ಲಿ ಒಂದು ತೆರನಾದ ಹೂವು ತುಂಬಿದ ಕಳೆ ಬೆಳೆಯುತ್ತಿತ್ತು. ಅದು ನೆಲಕ್ಕೆ ಅಂಟಿಕೊಂಡಂತಿದ್ದ ಕಾರಣ ಹೂವು ತುಂಬಿದ ಹುಲ್ಲುಹಾಸಿನ ಹಾಗೆ ಮನಮೋಹಕವಾಗಿ ಕಾಣುತ್ತಿತ್ತು. ಅದರ ಮೇಲೆ ನಡೆದರೆ ದಪ್ಪನೆಯ ಮಲ್‌ಮಲ್ ಬಟ್ಟೆಯ ಮೇಲೆ ನಡೆದಂತಾಗುತ್ತಿತ್ತು. ಅದರ ಕುಂಕುಮ ಬಣ್ಣದ ಹೂಗಳು ಕೂಡ ಬಹಳ ಚಿಕ್ಕದಾಗಿದ್ದು ಆಕರ್ಷಕವಾಗಿದ್ದವು. ನಿಸರ್ಗ ನಿರ್ಮಿಸಿದ ಮೆತ್ತನೆಯ ಆ ಸುಂದರ ಹುಲ್ಲು ಹಾಸಿನ ಮೇಲೆ ನಡೆಯುವುದು ಬಹಳ ಖುಷಿ ಕೊಡುತ್ತಿತ್ತು.)

ಮದ್ದಿನ ಖಣಿಗೆ ಹತ್ತಿಕೊಂಡ ಹಾಗೆ ಇನಾಮದಾರ ಎಂಬ ಪೈಲ್ವಾನರ ತೋಟವಿತ್ತು. ಅವರು ಫುಲಾವರ್ ಅಂದರೆ ಕಾಲಿಫ್ಲಾವರ್ ಮತ್ತು ಕ್ಯಾಬೇಜ್ ಬೆಳೆಯುತ್ತಿದ್ದರು. ಈ ತರಕಾರಿಗಳನ್ನು ಹಿಂದೆಂದು ನೋಡಿರಲಿಲ್ಲ. ಅವುಗಳನ್ನು ಕಟ್ ಮಾಡಿ ಚಕ್ಕಡಿಯಲ್ಲಿ ಹಾಕಿಕೊಂಡು ಹೋಗುವಾಗ ಆಶ್ಚರ್ಯದಿಂದ ನೋಡುತ್ತಿದ್ದೆ.

ಖಣಿಗೆ ಹೊಂದಿಕೊಂಡಂತೆ ಎತ್ತರದಲ್ಲಿ ಶಂಕರಲಿಂಗನ ಗುಡಿ ಮತ್ತು ಅದರ ಹಿಂದುಗಡೆ ಹಾಸ್ಟೆಲಿನ ಉದ್ದನೆಯ ಕಟ್ಟಡಗಳಿವೆ. ಆ ಹಾಸ್ಟೇಲಿನ ಮೊಗಸಾಲೆ ಕೂಡ ಅಷ್ಟೇ ಉದ್ದವಾಗಿದೆ. ಅದು ಕಮಾನುಗಳಿಂದ ಸುಂದರವಾಗಿ ಕಾಣುತ್ತಿತ್ತು. (ಈಗ ಆ ಎರಡೂ ಕಟ್ಟಡಗಳು ಕಳೆಗುಂದಿದ್ದು ಮದ್ದಿನ ಖಣಿ ಕೂಡ ತನ್ನ ಸಹಜಸೌಂದರ್ಯವನ್ನು ಕಳೆದುಕೊಂಡಿದೆ.) ನಾವು ಹೆಚ್ಚಾಗಿ ಶಂಕರಲಿಂಗನ ಗುಡಿ ಮತ್ತು ಹಾಸ್ಟೆಲ್ ಇರುವ ಸ್ಥಳದಲ್ಲೇ ಆಟ ಆಡುವುದು ರೂಢಿಯಾಗಿತ್ತು. ಭಜಂತ್ರಿ ಗಲ್ಲಿಯ ಎದುರಿನ ದಾರಿಯಿಂದ ಬರುವಾಗ ರಸ್ತೆಯ ಎಡಭಾಗಕ್ಕೆ ಇವೆಲ್ಲ ಇದ್ದರೆ ಬಲಭಾಗದಲ್ಲಿ ನಮ್ಮ ಮನೆ ಇತ್ತು.

(65 ವರ್ಷದ ಹಿಂದೆ ನಮ್ಮ ಬಾಡಿಗೆ ಮನೆಯಿದ್ದ ಜಾಗ ಈಗ ಹೀಗೆ ಕಾಣುತ್ತಿದೆ)

ಯಮನವ್ವಳ ಹಿರಿಯ ಮಗಳು ದೊಡ್ಡವಳಾಗಿದ್ದಳು. ಅವಳ ಹೆಸರು ಮರೆತಿದ್ದೇನೆ. ಅವಳು ಸ್ವಲ್ಪ ಅಡ್ವಾನ್ಸ್ ಆಗಿದ್ದಳು. ಅವಳ ತಂಗಿಯ ಹೆಸರು ಸೀತಾ. ಅವರ ಅಣ್ಣನ ಹೆಸರು ಕೂಡ ನೆನಪಿಲ್ಲ. ಆತ ಸ್ವಲ್ಪ ಉಡಾಳ ಹುಡುಗನಾಗಿದ್ದ ಎಂದು ಯಾರೋ ಹೇಳಿದ್ದ ನೆನಪು. ಆದರೆ ಅಪಘಾತದಲ್ಲಿ ತೀರಿಕೊಂಡ ಅವರ ದೊಡ್ಡಣ್ಣ ಮಾತ್ರ ಸ್ವಾಭಿಮಾನದಿಂದ ಹಮಾಲಿ ಮಾಡಿ ಬದುಕುತ್ತಿದ್ದ.

ಈ ಯಮನವ್ವನ ಇಬ್ಬರೂ ಹುಡುಗಿಯರಿಂದ ಎರಡು ವಿಚಿತ್ರ ಅನುಭವಗಳಾದವು. ಒಂದು ದಿನ ನಾವೆಲ್ಲ ಹುಡುಗರು ಶಂಕರಲಿಂಗನ ಗುಡಿಯ ಹತ್ತಿರ ಆಟವಾಡುತ್ತಿದ್ದೆವು. ಒಬ್ಬಾತ ಕಣ್ಣು ಮುಚ್ಚಿಕೊಂಡು ಕೂಡುತ್ತಿದ್ದ. ಆತ ಒಂದರಿಂದ ಹತ್ತು ಅಂಕಿ ಹೇಳುವುದರೊಳಗೆ ಉಳಿದವರೆಲ್ಲ ಓಡಿ ಹೋಗಿ ಅಡಗಿಕೊಳ್ಳುತ್ತಿದ್ದೆವು. ನಂತರ ನಾವು ಅಡಗಿಕೊಂಡಿದ್ದನ್ನು ಆತ ಪತ್ತೆ ಮಾಡಿದ ಕೂಡಲೆ ‘ಸ್ಟಾಪ್’ ಎಂದು ಕೂಗುತ್ತಿದ್ದ. ಇದು ಅದೆಂಥದ್ದೋ ಕಣ್ಣು ಮುಚ್ಚಾಲೆ ಆಟವಾಗಿತ್ತು. ಒಂದು ಸಲ ಈ ಆಟವಾಡುವಾಗ; ಅಲ್ಲೇ ನಿಂತಿದ್ದ ಯಮನವ್ವನ ದೊಡ್ಡ ಮಗಳು ತನ್ನ ಲಂಗದಲ್ಲಿ ನನ್ನನ್ನು ಅಡಗಿಸಿಕೊಂಡಳು. ಅದೇ ಆಗ ಬಜಾರಿನಿಂದ ಬಂದ ನನ್ನ ತಂದೆ ಈ ದೃಶ್ಯವನ್ನು ನೋಡಿರಬಹದು. ಅವರು ನನ್ನನ್ನು ಕೂಗಿದರು. ನನ್ನ ತಂದೆಯ ಧ್ವನಿ ನನಗೆ ಆಶ್ಚರ್ಯವೆನಿಸಿತು. ಅವರು ಬೆಳಿಗ್ಗೆ ಹಮಾಲಿ ಕೆಲಸಕ್ಕಾಗಿ ಬಜಾರಕ್ಕೆ ಹೋದವರು ರಾತ್ರಿಯೆ ಮನೆಗೆ ಬರುತ್ತಿದ್ದರು. ಇವತ್ತು ಮಧ್ಯಾಹ್ನ ಬಾಡಿಗೆ ಸೈಕಲ್ ತೆಗೆದುಕೊಂಡು ಏಕೆ ಬಂದರೋ ಗೊತ್ತಾಗಲಿಲ್ಲ. ಅವರ ಧ್ವನಿ ಕೇಳಿದ ನಾನು ಕೂಡಲೆ ಲಂಗದಿಂದ ಹೊರಗೆ ಓಡಿ ತಂದೆಯ ಹತ್ತಿರ ಬಂದೆ. ಅವರು ಮನೆಗೆ ಹೋದ ಕೂಡಲೆ ಒಂದೆರಡು ಹೊಡೆದರು. ಯಾಕೆ ಹೊಡೆದರು ಎಂಬುದು ನನಗೆ ತಿಳಿಯಲಿಲ್ಲ. ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ಜೋಳ ಹಸನು ಮಾಡುತ್ತಿದ್ದ ನನ್ನ ಅಜ್ಜಿಯ ಕಣ್ಣಲ್ಲಿ ಹನಿಗಳು ಉದುರುತ್ತಿದ್ದವು. ನನ್ನ ತಂದೆ ಏಕೆ ಹೊಡೆದ ಎಂಬುದು ಅವಳಿಗೂ ಗೊತ್ತಾಗಲಿಲ್ಲ. ನಂತರ ನಾನು ನನ್ನ ಅಜ್ಜಿಗೆ ಅಪ್ಪಿಕೊಂಡು ಅಲ್ಲೇ ನಿದ್ದೆಹೋದೆ.

ಯಮನವ್ವನ ಸಣ್ಣ ಮಗಳು ಒಂದು ಸಲ ‘ಪೋಸ್ಟ್ ತೋರಿಸುತ್ತೇನೆ ಬಾ’ ಎಂದು ಕರೆದಳು. ನನಗೆ ಗೊತ್ತಾಗಲಿಲ್ಲ. ‘ಹಾಗೆಂದರೆ ಏನು’ ಎಂದು ಕೇಳಿದೆ. ನೋಡಿದ ಮೇಲೆ ಗೊತ್ತಾಗುತ್ತದೆ ಬಾ ಎಂದಳು. ಅವಳು ನನಗಿಂತ ಸ್ವಲ್ಪ ದೊಡ್ಡವಳಿದ್ದಳು. (ಆಕೆಗೆ ಸುಮಾರು 8 ವರ್ಷ ಇರಬಹುದು.) ಸಾಯಂಕಾಲದ ಸಮಯವದು. ಅವಳು ಸಮೀಪದ ಎಸ್.ಎಸ್. ಹೈಸ್ಕೂಲ್ ಗಾರ್ಡನ್‌ಗೆ ಕರೆದುಕೊಂಡು ಹೋದಳು. ಪೋಸ್ಟ್ ತೋರಿಸಿದಳು. ನಾನು ಹೇಸಿಕೊಂಡು ಮನೆಗೆ ಓಡಿ ಬಂದೆ. ನಾನು ಬಂದ ರೀತಿ ನೋಡಿ ನನ್ನ ತಾಯಿ ‘ಏನಾಯಿತು ಯಾಕೆ ತೇಕುತ್ತ ಓಡಿ ಬಂದೆ’ ಎಂದು ಕೇಳಿದಳು. ನಾನು ಏನೂ ಹೇಳಲಿಲ್ಲ.

(ಸುಸ್ತಾದ ನಾಯಿ)

ವಿಜಾಪುರಕ್ಕೆ ಬಂದಮೇಲೆ ಬಹಳ ದಿನಗಳ ನಂತರ ನಾವು ಟಾಂಗಾದಲ್ಲಿ ಜೋಡಗುಂಬಜ ದರ್ಗಾಕ್ಕೆ ಹೋಗಿ ವಾಪಸ್ ಮನೆಯ ಸಮೀಪ ಬರುತ್ತಿರುವಾಗ ಅಲ್ಲೀಬಾದಿಯಲ್ಲಿ ನಾವು ಸಾಕಿದ ನಾಯಿ ಕಂಡಿತು. ಕಂಡೊಡನೆ ಅದು ಟಾಂಗಾದ ಬೆನ್ನು ಹತ್ತಿತು. ಅದರ ಅವಸ್ಥೆ ನೋಡಿ ನನ್ನ ಕರುಳು ಕಿತ್ತುಬಂದಂತಾಯಿತು. ನಾನು ಮುಟ್ಟುವ ಸ್ಥಿತಿಯಲ್ಲಿ ಅದು ಇರಲಿಲ್ಲ. ಆ ತೆಳ್ಳನೆಯ ಬಿಳಿ ನಾಯಿಯ ಮೈತುಂಬ ಚಿಕ್ಕ ಚಿಕ್ಕ ಹುಣ್ಣುಗಳಾಗಿ ರಕ್ತದ ಬಿಂದುಗಳಂತೆ ಕಾಣುತ್ತಿದ್ದವು. ಅದು ಬಹಳ ಆಯಾಸಗೊಂಡಿತ್ತು. ಆದರೆ ಟಾಂಗಾದ ಬೆನ್ನು ಬಿಡಲಿಲ್ಲ. ಮನೆ ಬಂದಿತು. ಆದರೆ ಅದನ್ನು ಮನೆಯಲ್ಲಿ ಕರೆದುಕೊಳ್ಳಲಿಲ್ಲ!

ಯಾವ ನಾಯಿ ನಮ್ಮನ್ನು ಹುಡುಕುತ್ತ ಅಷ್ಟು ಕಷ್ಟಪಟ್ಟು ಅಲ್ಲೀಬಾದಿಯಿಂದ ಬಂದಿತ್ತೋ ಅದನ್ನು ಸ್ವೀಕರಿಸದೆ ಇರುವ ಸ್ಥಿತಿ ನಮ್ಮದಾಗಿತ್ತು. ಅದಕ್ಕೆ ರೊಟ್ಟಿ ಹಾಕಿದೆವು. ಆದರೆ ಅದು ತಿನ್ನುವ ಶಕ್ತಿಯನ್ನೂ ಕಳೆದುಕೊಂಡ ಹಾಗಿತ್ತು. ಒಂದೆರಡು ದಿನಗಳಲ್ಲಿ ಅದು ಸತ್ತಿತ್ತು. ಮುನಸಿಪಾಲಿಟಿಯ ಪೌರಕಾರ್ಮಿಕನೊಬ್ಬ ಅದನ್ನು ಎಳದುಕೊಂಡು ಹೋಗಿ ಕಸದ ಗಾಡಿಯಲ್ಲಿ ಹಾಕಿದ. ಆ ಹೃದಯಸ್ಪರ್ಶಿ ದೃಶ್ಯ ನನಗೆ ಇಂದಿಗೂ ಕಾಡುತ್ತಲೇ ಇದೆ.

(ಚಿತ್ರಗಳು: ಸುನೀಲಕುಮಾರ ಸುಧಾಕರ)