ಕ್ಯಾನ್ಸರ್ ಸುʼನ ದೇಹವನ್ನು ತಿಂದುಹಾಕುವಾಗ ಬಹಳಷ್ಟು ಕೃಶನಾಗುವುದಲ್ಲದೇ ಅಂತಹ ತೀವ್ರ ಗಂಭೀರ ಸ್ಥಿತಿಯಲ್ಲೂ ಸಹಾ “ತಾನು ಯಾರು? ಇಲ್ಲಿ ಯಾಕಿದ್ದೇನೆ?” ಎಂಬ ಆತ್ಮವಿಮರ್ಶೆಗೆ ತೊಡಗಿಕೊಂಡು ಕೊನೆಗೆ ತಾನು ಇಡೀ ವಿಶ್ವಕ್ಕೆ ಸೇರಿದವ, ಬ್ರಹ್ಮಾಂಡದ ಅವಿಭಾಜ್ಯ ಅಂಗ. ಬ್ರಹ್ಮಾಂಡವನ್ನು ನಿಯಂತ್ರಿಸುವ ಶಕ್ತಿಯೇ ನನ್ನನ್ನೂ ನಿಯಂತ್ರಿಸುತ್ತಿದೆ ಎಂಬಂತಹ ಆಲೋಚನೆಗಳು ಉಪನಿಷತ್ತಿನಲ್ಲಿ ಬರುವ “ಯಾವ ಒಂದೇ ದಾರದ ಎಳೆಗಳಿಂದ ಬಟ್ಟೆಗಳು ತಯಾರಾಗುತ್ತದೋ ಅದೇ ತರಹ ಒಂದೇ ಶಕ್ತಿ ಇಡೀ ಸೃಷ್ಟಿಯ ಚರಾಚರದಲ್ಲೂ ಇದೆ” ಎಂಬಂತಹ ಬೌದ್ಧಿಕ ಸ್ತರದಲ್ಲಿ ತನ್ನಾತ್ಮವನ್ನು ವಿಶ್ವಾತ್ಮದೊಂದಿಗೆ ಬೆಸೆದುಕೊಳ್ಳುವ ಚಿಂತನೆಗಳು ಅವನನ್ನು ದಾರ್ಶನಿಕನೆನಿಸುತ್ತದೆ.
ಡಾ. ಪ್ರಸನ್ನ ಸಂತೇಕಡೂರು ಕಾದಂಬರಿ “ಸು” ಕುರಿತು ಕೆ.ಎನ್. ಲಾವಣ್ಯ ಪ್ರಭಾ ಬರಹ

ಮೂಲತಃ ಶಿವಮೊಗ್ಗದವರಾದ ಡಾ. ಪ್ರಸನ್ನ ಸಂತೆಕಡೂರು ಮೈಸೂರು ವಿ.ವಿ.ಯಿಂದ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆದು ಸುಮಾರು ಹತ್ತು ವರ್ಷಗಳ ಕಾಲ ಅಮೆರಿಕಾದಲ್ಲಿ ನೆಲೆಸಿದ್ದರು. ಅಲ್ಲಿನ ಪ್ರತಿಭಾವಂತ ಭಾರತೀಯ ವಿದ್ಯಾರ್ಥಿಗಳಿಗೆ ನೀಡಲಾಗುವ ಹೆಸರಾಂತ ರಾಮಲಿಂಗಸ್ವಾಮಿ ಫೆಲೋಶಿಪ್ಪನ್ನು ಪಡೆದು ಭಾರತಕ್ಕೆ ಹಿಂತಿರುಗಿ ಇದೀಗ ಮೈಸೂರಿನ ಜೆ.ಎಸ್.ಎಸ್.ಮೆಡಿಕಲ್ ಕಾಲೇಜಿನ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಲಿವರ್ ಕ್ಯಾನ್ಸರಿಗೆ ಸಂಬಂಧಿಸಿದಂತೆ ಇವರ ಹಲವಾರು ಸಂಶೋಧನೆಗಳಿಗಾಗಿ ಅಮೆರಿಕದ ಹಲವಾರು ಪ್ರಶಸ್ತಿಗಳು ದೊರಕಿವೆ. ಪ್ರತಿಷ್ಠಿತ ಪತ್ರಿಕೆಗಳಲ್ಲಿ ಕ್ಯಾನ್ಸರ್ ಸಂಬಂಧಿತ ಇವರ ಅನೇಕ ಸಂಶೋಧನಾ ಲೇಖನಗಳು ಪ್ರಕಟವಾಗಿವೆ. ಇತ್ತೀಚೆಗೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಸಿ.ವಿ.ರಾಮನ್ ಪ್ರಶಸ್ತಿ ದೊರಕಿದೆ. “ಮಾಯಾ ಪಂಜರ” ಮತ್ತು “ಎತ್ತಣ ಅಲ್ಲಮ ಎತ್ತಣ ರಮಣ” ದ ನಂತರದ ಕಿರು ಕಾದಂಬರಿ “ಸು” ಎಂಬತ್ತು ಪುಟಗಳ ಕಿರು ಕಾದಂಬರಿ. ಇದರ ನಂತರ “ಬಾಲಕ ಮತ್ತು ಕಾರಂತಜ್ಜ” ಮತ್ತೊಂದು ಕೃತಿಯೂ ಪ್ರಕಟವಾಗಿದೆ.

(ಡಾ. ಪ್ರಸನ್ನ ಸಂತೇಕಡೂರು)

“ಸು” ಕಾದಂಬರಿಯ ಕಥಾನಾಯಕ “ಸು” ಒಬ್ಬ ವಿಜ್ಞಾನಿ. ಪೂರ್ಣ ಹೆಸರು “ಝವ್ ಜೊಂಗ್ ಸು. ಚೀನಾದವನಾದ ಈತನ ಮೊದಲ ಪತ್ನಿ ಮಿಯಾನ್ ಗರ್ಭಕಂಠದ ಕ್ಯಾನ್ಸರಿನಿಂದ ತೀರಿಕೊಂಡಿದ್ದರೆ ಎರಡನೇ ಪತ್ನಿ ಟಿಬೆಟ್ಟಿನ ನೋರ್ಝೋಮ್‌ಳನ್ನು ದೊಡ್ಡ ಕ್ಯಾನ್ಸರ್ ಬಲಿ ತೆಗೆದುಕೊಂಡಿರುತ್ತದೆ. “ಸು” ನ್ಯೂಯಾರ್ಕ್‌ನ ಕೊಲಂಬಿಯಾ ವಿ.ವಿ.ಯಲ್ಲಿ ಕ್ಯಾನ್ಸರ್ ರೋಗಕ್ಕೆ ಔಷಧ ಕಂಡುಹಿಡಿಯುವ ಸಂಶೋಧನೆಯಲ್ಲಿ ನಿರತನಾಗಿ ಅನೇಕ ಸಂಶೋಧನಾ ಲೇಖನಗಳನ್ನು ಪ್ರಕಟಿಸುತ್ತಾ ಕೊನೆಗೆ ತಾನೇ ಕ್ಯಾನ್ಸರ್‌ಗೆ ಬಲಿಯಾಗುತ್ತಾನೆ. ಒಂದು ವಿಶೇಷ ಸಂಗತಿಯೆಂದರೆ ಈ “ಸು” ಜೊತೆ ಜೊತೆಗೆ ಕೆಲವು ವರ್ಷಗಳ ಕಾಲ ಸಂಶೋಧನೆ ಮಾಡುತ್ತಾ ಸು ಗೆ ಆತ್ಮೀಯ ಸ್ನೇಹಿತನೂ ಆಗಿಬಿಡುವ ಪ್ರಕಾಶ ಎಂಬ ಪಾತ್ರ ಬೇರಾರೂ ಅಲ್ಲ ನಮ್ಮ ಗೆಳೆಯ ಪ್ರಸನ್ನ ಅವರೇ. ಪ್ರಕಾಶನ ಪಾತ್ರದಲ್ಲಿ ಪ್ರಸನ್ನ ಹೇಳುತ್ತಾ ಹೋಗುವ ಕತೆ ಕ್ಯಾನ್ಸರ್ ಬಗ್ಗೆ, ಕ್ಯಾನ್ಸರ್ ಪೀಡಿತರ ಬಗ್ಗೆ ವಿದ್ಯಾರ್ಥಿಗಳಿಗೆ, ಸಂಶೋಧನಾಕಾರರಿಗೆ, ಜನಸಾಮಾನ್ಯರಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ ಕಾದಂಬರಿ ಹೆಣೆದಿದ್ದರೂ… ಎಷ್ಟೋ ಕಡೆ ಕಾವ್ಯಾತ್ಮಕ, ಅಧ್ಯಾತ್ಮಿಕ, ತಾತ್ವಿಕ ಚಿಂತನೆಗಳು ಕಂಡು ಬಂದು ವಿಶಿಷ್ಟ ಮೆರುಗನ್ನು ನೀಡಿವೆ. ಬರಹಗಾರರ ಸೃಜನಶೀಲ ಪ್ರತಿಭೆ ಇಲ್ಲಿ ಕ್ಯಾನ್ಸರಿನಂತಹ ಸಮಸ್ಯೆಯನ್ನು ಕೊಂಚ ಹಗುರಾಗಿಸುತ್ತಲೇ ಆಳದಲ್ಲಿ ಅದರ ಗಂಭೀರತೆಯನ್ನು ಅರ್ಥಮಾಡಿಸುತ್ತಾ ಹೋಗುತ್ತಾರೆ.

ಈ ಕಾದಂಬರಿ ಓದುವಲ್ಲಿ ಮುಖ್ಯವಾಗಿ ನನಗೆ ಕೆಲವು ಸಂಗತಿಗಳು ಮನ ಸೆಳೆದವು. “ಸು” ತನ್ನ ಪ್ರಯೋಗಾಲಯದಲ್ಲಿ ಸಂಶೋಧನಾ ನಿರತನಾಗಿದ್ದ ಹೊತ್ತಿನಲ್ಲಿ ಪೆಟ್ರಿ ತಟ್ಟೆಯೊಳಗಿರುವ ಕ್ಯಾನ್ಸರ್ ಜೀವಕೋಶಗಳನ್ನು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸುವಾಗ ಆ ಜೀವಕೋಶಗಳು ಒಂದು ಸುಂದರ ಕರಿಯ ಮಹಿಳೆಯಾಗಿ ರೂಪಾಂತರಗೊಂಡು ಹೊರಗೆ ಬಂದು ಅಡುಗೆಮನೆ ಕಡೆ ಹೋಗುತ್ತಾ “ಸು” ನನ್ನು ಕೈಬೀಸಿ ಕರೆದ ದೃಶ್ಯ ಕಂಡದ್ದಾಗಿ ಸು ತನ್ನ ಗೆಳೆಯ ಪ್ರಕಾಶ ಬಂದ ಮೇಲೆ ಹೇಳುತ್ತಾನೆ. ಹಾಗೆ ಹೇಳುತ್ತಾ ಕಂಪ್ಯೂಟರ್ ತೆರೆದು ಇಂಟರ್ನೆಟ್‌ನಲ್ಲಿ ಒಂದು ಚಿತ್ರ ತೋರಿಸಿ ಇವಳನ್ನೇ ನಾನು ಕಂಡದ್ದು ಎನ್ನುತ್ತಾನೆ. ಆ ಚಿತ್ರದ ಕೆಳಗೆ “ಹೆನ್ರಿಯೆಟ್ಟಾ ಲ್ಯಾಕ್ಸ್” ಎಂದು ಬರೆದಿರುತ್ತದೆ. ಈ ಹೆಸರನ್ನು “ಹೇಲಾ” ಎನ್ನುತ್ತಾರೆ. ಹೇಲಾ ಆಫ್ರೋ ಅಮೇರಿಕನ್ ಮಹಿಳೆ. ಆಕೆ ಕ್ಯಾನ್ಸರ್‌ನಿಂದ ಸತ್ತ ಮೇಲೆ ಅವಳ ಕ್ಯಾನ್ಸರ್ ಜೀವಕೋಶಗಳನ್ನು ತೆಗೆದು ಕ್ಯಾನ್ಸರ್ ರೋಗಕ್ಕೆ ಔಷಧಿ ಕಂಡು ಹಿಡಿಯಲು ಉಪಯೋಗಿಸುತ್ತಿರುವುದರಿಂದ ನೂರು ವರ್ಷಗಳಾದರೂ ಹೇಲಾ ಜೀವಂತವಾಗಿರುವ ಮೃತ್ಯುಂಜಯೆ. ಕಾದಂಬರಿಯ ಕೊನೆಯಲ್ಲಿ “ಸು” ಕ್ಯಾನ್ಸರ್ ಪೀಡಿತನಾಗಿ ಆಸ್ಪತ್ರೆಗೆ ಸೇರಿದಾಗ ಹೇಲಾ ತನ್ನ ಕೊನೆಯ ದಿನಗಳನ್ನು ಕಳೆದ ಆಸ್ಪತ್ರೆ ಅಷ್ಟೇ ಅಲ್ಲ ರೂಮು ಸಹಾ ಒಂದೇ ಆಗಿರುವುದು ಕಾಕತಾಳೀಯವೋ ಅಥವಾ ಹೇಲಾ ಕ್ಯಾನ್ಸರ್ ಜೀವಕೋಶಗಳೊಂದಿಗೆ ಪ್ರಯೋಗಗಳನ್ನು ನಡೆಸುತ್ತಾ ಅವಳೊಂದಿಗೆ ಒಂದು ಆತ್ಮಿಕ ಸಂಬಂಧವನ್ನು ಕಟ್ಟಿಕೊಂಡ ಕಾರಣವೋ ಅಥವಾ ಜನ್ಮಾಂತರಗಳ ನಂಟಿನ ಕಾರಣವೋ…. ಇದೊಂದು ವಿಷಾದನೀಯ ಸೋಜಿಗವೆನಿಸುತ್ತದೆ.

ಸುʼನ ಎರಡನೇ ಹೆಂಡತಿ ಸುಂದರಿ ನೋರ್ಝೋಮ್ ತೀರಿಕೊಂಡ ನಂತರ ಟಿಬೆಟಿಯನ್ ಶವ ಸಂಸ್ಕಾರ ಬೆಚ್ಚಿಬೀಳಿಸುತ್ತದೆ. ಎತ್ತರದ ಸ್ಥಳಕ್ಕೆ ಕೊಂಡೊಯ್ದು ಅವಳ ಸಹೋದರ ಶವದ ಬೆನ್ನಿನ ಮೇಲೆ ಚಾಕುವಿನಿಂದ ಏನನ್ನೋ ಬರೆದು ಹೆಣದ ಕಾಲಿನ ತೊಡೆಯಿಂದ ಮಾಂಸವನ್ನು ಕಿತ್ತು ಅಲ್ಲಿಯೇ ಇದ್ದ ರಣಹದ್ದುಗಳಿಗೆ ಎಸೆದು ತಲೆಯನ್ನು ಸುತ್ತಿಗೆಯಿಂದ ಹೊಡೆದು ಹಣೆಯ ಮೇಲೆ ಏನೋ ಬರೆದು ದೇಹವನ್ನು ಸೀಳಿ ಇತ್ತ ಮನೆಗೆ ಎಲ್ಲರೂ ಹೊರಟ ನಂತರ ನರಿಗಳು ಹಾಗೂ ರಣಹದ್ದುಗಳು ಆ ಹೆಣದ ಮೇಲೆರಗಿ ಬರೀ ಮೂಳೆಗಳು ಉಳಿದ ವಿವರಣೆ ಕೇಳಿ ತಲೆತಿರುಗಿದ್ದಂತೂ ಈ ಆಚರಣೆ ಸತ್ಯ. “ಮಾನವ ಮೂಳೆ ಮಾಂಸದ ತಡಿಕೆ” ಎನ್ನುವ ನಮ್ಮ ಅಣ್ಣಾವ್ರ ಬಾಯಲ್ಲಿ ದಾಸರ ತಾತ್ವಿಕ ಹೊಳಹುಗಳೇ ಇವೆಯೆನಿಸಿತು.

ಕ್ಯಾನ್ಸರ್ ಸುʼನ ದೇಹವನ್ನು ತಿಂದುಹಾಕುವಾಗ ಬಹಳಷ್ಟು ಕೃಶನಾಗುವುದಲ್ಲದೇ ಅಂತಹ ತೀವ್ರ ಗಂಭೀರ ಸ್ಥಿತಿಯಲ್ಲೂ ಸಹಾ “ತಾನು ಯಾರು? ಇಲ್ಲಿ ಯಾಕಿದ್ದೇನೆ?” ಎಂಬ ಆತ್ಮವಿಮರ್ಶೆಗೆ ತೊಡಗಿಕೊಂಡು ಕೊನೆಗೆ ತಾನು ಇಡೀ ವಿಶ್ವಕ್ಕೆ ಸೇರಿದವ, ಬ್ರಹ್ಮಾಂಡದ ಅವಿಭಾಜ್ಯ ಅಂಗ. ಬ್ರಹ್ಮಾಂಡವನ್ನು ನಿಯಂತ್ರಿಸುವ ಶಕ್ತಿಯೇ ನನ್ನನ್ನೂ ನಿಯಂತ್ರಿಸುತ್ತಿದೆ ಎಂಬಂತಹ ಆಲೋಚನೆಗಳು ಉಪನಿಷತ್ತಿನಲ್ಲಿ ಬರುವ “ಯಾವ ಒಂದೇ ದಾರದ ಎಳೆಗಳಿಂದ ಬಟ್ಟೆಗಳು ತಯಾರಾಗುತ್ತದೋ ಅದೇ ತರಹ ಒಂದೇ ಶಕ್ತಿ ಇಡೀ ಸೃಷ್ಟಿಯ ಚರಾಚರದಲ್ಲೂ ಇದೆ” ಎಂಬಂತಹ ಬೌದ್ಧಿಕ ಸ್ತರದಲ್ಲಿ ತನ್ನಾತ್ಮವನ್ನು ವಿಶ್ವಾತ್ಮದೊಂದಿಗೆ ಬೆಸೆದುಕೊಳ್ಳುವ ಚಿಂತನೆಗಳು ಅವನನ್ನು ದಾರ್ಶನಿಕನೆನಿಸುತ್ತದೆ.

ರೋಗದಿಂದ ಮನಸ್ಸು ಜರ್ಜರಿತವಾದಾಗ ಭಯ ಆತಂಕಗಳು ಸಹಜವೇ… ಇಂತಹ ಪರಿಸ್ಥಿತಿಯಲ್ಲಿ “ಸು” ಅವನಿದ್ದ ಸ್ಥಳಕ್ಕೆ ಬಹಳ ಸಮೀಪದಲ್ಲಿದ್ದ ಭಾರತೀಯ ಮೂಲದ ಅಧ್ಯಾತ್ಮಿಕ ಆಶ್ರಮಕ್ಕೆ ಹೋಗಿ ಅಲ್ಲಿನ ಅಧ್ಯಾತ್ಮ ಸಾಧಕರ ಜೊತೆ ಒಡನಾಟ ಬೆಳೆಸಿಕೊಂಡು ಧ್ಯಾನ ಯೋಗ ಭಜನೆ ಮೊದಲಾವುಗಳಲ್ಲಿ ಭಾಗವಹಿಸುತ್ತಾ ಹೋದಂತೆ ಅವನಲ್ಲಿದ್ದ ಭಯಾತಂಕಗಳು ಕ್ರಮೇಣ ಕಡಿಮೆಯಾಗಿ ಮಾನಸಿಕವಾಗಿ ದೃಢಗೊಳ್ಳುತ್ತಾ ಹೋಗುತ್ತಾ “ತಾನು ಹುಯೆನ್ ತ್ಸಾಂಗ್ ಕಾಲದಲ್ಲಿ ಹುಟ್ಟಿದ್ದರೆ ಭಾರತ ಶ್ರೀಲಂಕಾಗಳಿಗೆ ಭೇಟಿ ಕೊಡಬಹುದಿತ್ತು” ಎನ್ನುವ ಆತ್ಮವಿಶ್ವಾಸದ ಮೂಲ ಅಧ್ಯಾತ್ಮವೇ ಆಗಿರುತ್ತದೆ ಎನಿಸುವುದು.

ಹೀಗೆ ಧೈರ್ಯ ಮತ್ತು ನಿರ್ಭಯನಾದ ಸು ತನ್ನ ಲಿವರ್ ಕ್ಯಾನ್ಸರಿಗೆ ಕಾರಣವನ್ನೂ ಕಂಡುಹಿಡಿದು ಬಿಡುತ್ತಾನೆ. ಆತ ಸತ್ತ ನಂತರ ಸುʼನ ಆರೋಗ್ಯ ಸಹಾಯಕಿ ಅವನು ಬರೆದಿಟ್ಟ ಲಿವರ್ ಕ್ಯಾನ್ಸರ್‌ನ ಕಾರಣ ಕುರಿತ ವಿವರಗಳನ್ನು ಸುʼನ ಒಡನಾಡಿಯಾಗಿದ್ದ ಪ್ರಕಾಶನಿಗೆ ತಲುಪಿಸುತ್ತಾಳೆ.

ಪ್ರಕಾಶನ ಪಾತ್ರದಲ್ಲಿ ಪ್ರಸನ್ನ ಹೇಳುತ್ತಾ ಹೋಗುವ ಕತೆ ಕ್ಯಾನ್ಸರ್ ಬಗ್ಗೆ, ಕ್ಯಾನ್ಸರ್ ಪೀಡಿತರ ಬಗ್ಗೆ ವಿದ್ಯಾರ್ಥಿಗಳಿಗೆ, ಸಂಶೋಧನಾಕಾರರಿಗೆ, ಜನಸಾಮಾನ್ಯರಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ ಕಾದಂಬರಿ ಹೆಣೆದಿದ್ದರೂ… ಎಷ್ಟೋ ಕಡೆ ಕಾವ್ಯಾತ್ಮಕ, ಅಧ್ಯಾತ್ಮಿಕ, ತಾತ್ವಿಕ ಚಿಂತನೆಗಳು ಕಂಡು ಬಂದು ವಿಶಿಷ್ಟ ಮೆರುಗನ್ನು ನೀಡಿವೆ. ಬರಹಗಾರರ ಸೃಜನಶೀಲ ಪ್ರತಿಭೆ ಇಲ್ಲಿ ಕ್ಯಾನ್ಸರಿನಂತಹ ಸಮಸ್ಯೆಯನ್ನು ಕೊಂಚ ಹಗುರಾಗಿಸುತ್ತಲೇ ಆಳದಲ್ಲಿ ಅದರ ಗಂಭೀರತೆಯನ್ನು ಅರ್ಥಮಾಡಿಸುತ್ತಾ ಹೋಗುತ್ತಾರೆ.

ಕಾದಂಬರಿಯ ಆರಂಭದಲ್ಲಿ ಪ್ರಕಾಶ “ಸು” ನನ್ನು ನೋಡಿದರೆ ಹುಯೆನ್ ತ್ಸಾಂಗ್ ನೆನಪಾಗುತ್ತಿತ್ತು ಎನ್ನುವುದು, ಕಾದಂಬರಿಯ ಅಂತ್ಯದಲ್ಲಿ ಸು ತಾನೇ ಹುಯೆನ್ ತ್ಸಾಂಗ್‌ನನ್ನು ನೆನಪಿಸಿಕೊಳ್ಳುವುದು ಒಂದು ಅಚ್ಚರಿ. ಆದರೆ ಸು ಕ್ಯಾನ್ಸರ್ ಸಂಬಂಧಿತ ಸಂಶೋಧನೆಗಳಲ್ಲಿ ಮಹಾನ್ ತಪಸ್ವಿ… ಸ್ವತಃ ತಾನೇ ರೋಗಪೀಡಿತನಾದರೂ ಅದರೊಂದಿಗೆ ಹೋರಾಡುತ್ತಲೇ ತನ್ನ ರೋಗದ ಕಾರಣ ಅರಿಯುವ ಸಂಶೋಧನೆಯ ಮಹಾಯಾತ್ರೆ ಕೈಗೊಂಡ ಹುಯೆನ್ ತ್ಸಾಂಗ್ ಎಂದೇ ಅನುಭವವಾಗುತ್ತದೆ. ಲಿವರ್ ಕ್ಯಾನ್ಸರಿಗೆ ಕಡ್ಲೆಕಾಯಿ ಹೆಚ್ಚಾಗಿ ತಿನ್ನುವುದೂ ಒಂದು ಕಾರಣ ಎಂಬ ಹೊಸ ಕಾರಣ “ಸು” ಕಂಡುಕೊಳ್ಳುತ್ತಾನೆ. ಇನ್ನೂ ಹೆಚ್ಚಿನ ವಿವರಗಳಿಗೆ ನೀವು “ಸು” ಕಾದಂಬರಿ ಓದಬೇಕು.

ಕಾದಂಬರಿಯ ಆರಂಭದಲ್ಲಿ ಸುʼನ ಗೆಳೆಯ ಪ್ರಕಾಶ ಒಮ್ಮೆ ರಾತ್ರಿ ಕಿಟಕಿ ಹತ್ತಿರ ನಿಂತು ಹೊರಗೆ ನೋಡುವಾಗ ದೈತ್ಯಾಕಾರದ ಕೋಣದ ಮೇಲೆ ಕೂತ ದೈತ್ಯ ವ್ಯಕ್ತಿ ತನ್ನ ಕೈಲಿ ಪಾಶವನ್ನು ಹಿಡಿದು ಸುʼನನ್ನು ಓಡಿಸಿಕೊಂಡು ಬರುವುದು ಸು ಕೂಗುತ್ತಾ ತನ್ನನ್ನು ಕಾಪಾಡು ಅವನಿಂದ ಎಂದು ಬೇಡುವ ಆರ್ತನಾದ…,ಈ ಘಟನೆ ಕನಸು ಅಥವಾ ಭ್ರಮೆ ಎಂದೆಣಿಸಿದರೂ ನಂತರದ ದಿನಗಳಲ್ಲಿ ಕ್ಯಾನ್ಸರ್‌ಗೆ ಬಲಿಯಾಗುತ್ತಾ ಹೋಗಿ ಸು ತೀರಿಕೊಂಡಾಗ ಪ್ರಕಾಶ ಕಂಡದ್ದು ಕನಸಲ್ಲ ಬದಲಿಗೆ ಅದು ವಿಜ್ಞಾನದ ಭಾಷೆಯಲ್ಲಿ Intuition ಆಗಿರುತ್ತದೆ. ವಿಜ್ಞಾನಿಗಳು, ಋಷಿಗಳು ಇಬ್ಬರೂ ತಪಸ್ವಿಗಳೆ. ಕವಿಯೂ ಸಹಾ. ಇವರುಗಳು ಸದಾ ತಮ್ಮ ಅಂತರಂಗದೊಳ ಹೊಕ್ಕು ನಿರ್ದಿಷ್ಟ ವಿಷಯಗಳನ್ನು ಧ್ಯಾನಿಸುವಾಗ ಒಂದು ಹೊಸ ಮಾರ್ಗ ಕಾರಣ ಅಥವಾ ಹೊಳಹುಗಳನ್ನು ಕಂಡು ಹಿಡಿಯುವ ಮನಸ್ಸಿನ ಒಂದು ಅದ್ಭುತ ಶಕ್ತಿ. ಆರ್ಕಿಮಿಡೀಸ್ ಅಥವಾ ಗೌತಮ ಬುದ್ಧ ಇವರೆಲ್ಲಾ ಇದೇ ಮಾರ್ಗದಲ್ಲಿ ಜೀವನಕ್ಕೆ ಹೊಸ ಹೊಳಹುಗಳನ್ನು ಕೊಟ್ಟವರು. ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ ಕವಿವರ್ಯರು ಕಂಡುಕೊಂಡದ್ದು ಸಹಾ ಇದೇ ಇಂಟ್ಯೂಷನ್‌ನಿಂದಲೇ ಎನ್ನಬಹುದೇನೋ.

ಪ್ರಕಾಶ ಮೈಸೂರಿನ ವಿಶ್ವವಿದ್ಯಾನಿಲಯದಲ್ಲಿ ಓದುವಾಗ ಟಿಬೆಟ್ ವಿದ್ಯಾರ್ಥಿಗಳ ಸ್ನೇಹ ದೊರೆಯುತ್ತದೆ. ಮೈಸೂರಿಂದ ಕೆಲವೇ ಕಿ.ಮೀ. ಗಳ ದೂರದಲ್ಲಿರುವ ಬೈಲುಕುಪ್ಪೆ ಗ್ರಾಮ ಟಿಬೆಟಿಯನ್ ನಿರಾಶ್ರತರ ನೆಲ. ಇಲ್ಲಿ ಅಂಗಡಿ ಆಸ್ಪತ್ರೆ ಬ್ಯಾಂಕ್ ಶಾಲೆ ಕಾಲೇಜು ಹೊಲ ಗದ್ದೆ ಎಲ್ಲದರಲ್ಲೂ ಟಿಬೆಟಿಯನ್ ಜನರೇ ಕೆಲಸ ಮಾಡುತ್ತಾ ಅಲ್ಲಿಯೇ ವಾಸವಾಗಿದ್ದಾರೆ. ಚೀನಾ ಟಿಬೆಟನ್ನು ಆಕ್ರಮಿಸಿಕೊಂಡಾಗ ಅಲ್ಲಿಂದ ಭಾರತಕ್ಕೆ ಬಂದ ನಿರಾಶ್ರಿತರಿಗೆ ಸಿಕ್ಕ ಭೂಮಿಯಲ್ಲಿ ಒಂದು ಸುಂದರ ಗ್ರಾಮ ನಿರ್ಮಿಸಿಕೊಂಡಿದ್ದು, ಬೈಲುಕುಪ್ಪೆಯ ಸುವರ್ಣ ದೇಗುಲ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಂತಹ ಟಿಬೆಟಿಯನ್ ಸ್ನೇಹಿತರ ಸ್ನೇಹದ ಕಾರಣ ಪ್ರಕಾಶ ಒಮ್ಮೆ ಬೈಲುಕುಪ್ಪೆಗೆ ಹೋಗಿ ಅವರ ಮನೆಯ ಆತಿಥ್ಯ ಸ್ವೀಕರಿಸುವಾಗ ಅವರ ಮನೆಯ ಇಬ್ಬರು ಬೆನ್ನು ಬಾಗಿದ ವಯಸ್ಸಾದ ಮುದುಕಿಯರು ವಾಕಿಂಗ್ ಹೋಗ್ತೇವೆ ಎಂದು ಹೇಳಿ ದಡದಡ ಓಡುವುದನ್ನು ಕಂಡು ಸ್ನೇಹಿತರಲ್ಲಿ ಪ್ರಶ್ನಿಸುತ್ತಾರೆ. ಆಗ ಆ ಟಿಬೆಟಿಯನ್ ಸ್ನೇಹಿತರು ಮುಂದಿನ ದಿನಗಳಲ್ಲಿ ಚೀನಾದ ಅತಿಕ್ರಮಣದಿಂದ ಟಿಬೆಟ್ ಸ್ವತಂತ್ರವಾದರೆ ತಮ್ಮ ದೇಶಕ್ಕೆ ಕಾಲ್ನಡಿಗೆಯಲ್ಲಿ ಹೋಗುವ ಆಶಾವಾದವಿರಿಸಿಕೊಂಡಿರುವ ಈ ಮುದುಕಿಯರು ಈಗಿನಿಂದಲೇ ಓಡಿ ಓಡಿ ತಮ್ಮ ಕಾಲುಗಳನ್ನು ಬಲಗೊಳ್ಳಿಸಿಕೊಳ್ಳುತ್ತಿದ್ದಾರೆ ಎನ್ನುವ ವಿಷಯ ತಿಳಿದು ಪ್ರಕಾಶರೊಂದಿಗೆ ನಾನೂ ಅಚ್ಚರಿಗೊಂಡೆ. ಆ ಮುದುಕಿಯರ ಆತ್ಮವಿಶ್ವಾಸ ಸಂಕಲ್ಪಬಲ ಮತ್ತು ಸಕಾರಾತ್ಮಕ ಚಿಂತನೆಗೆ ಹ್ಯಾಟ್ಸಾಫ್ ಎಂದುಕೊಂಡೆ ಮನಸ್ಸಿನಲ್ಲೇ.

ಪ್ರಕಾಶ ಟಿಬೆಟಿಯನ್ ಮಿತ್ರರನ್ನು ಕೇಳುತ್ತಾನೆ “ನಿಮ್ಮ ದೇಶ ಸ್ವತಂತ್ರವಾದ ನಂತರ ನಿಮ್ಮ ನಡೆ ಏನು?” ಎಂಬ ಪ್ರಶ್ನೆಗೆ ಅವರಿತ್ತ ಉತ್ತರ ತಾಯ್ನಾಡಿನಲ್ಲಿ ಹುಟ್ಟಿ ಬೆಳೆದ ಪ್ರತಿಯೊಬ್ಬ ದೇಶವಾಸಿಯೂ ಆತ್ಮವಿಶ್ಲೇಷಣೆ ಮಾಡಿಕೊಳ್ಳಬೇಕೇನೋ ಎನಿಸಿತು. ತಾಯ್ನೆಲದ ಮಣ್ಣಿನ ಘಮ ಹೊತ್ತ ಉತ್ತರ ಹೀಗಿದೆ.”ಟಿಬೆಟ್ ನಮ್ಮ‌ ಮಾತೃಭೂಮಿ ನಿಜ, ಅದು ಸ್ವತಂತ್ರಗೊಳ್ಳಬೇಕೆನ್ನುವುದು ನಮ್ಮ ಆಶಯವೂ, ಗುರಿಯೂ ಹೌದು. ಭಾರತ ನಮಗೆ ಎರಡನೇ ಮಾತೃಭೂಮಿ ಈ ಭೂಮಿಗೆ ನಾವು ಯಾವತ್ತೂ ಚಿರ ಋಣಿಗಳಾಗಿರುತ್ತೇವೆ.” ಎಂದು ಸ್ವಲ್ಪ ಮಣ್ಣನ್ನು ತನ್ನ‌ ಕೈಯಲ್ಲಿ ಭೂಮಿಯಿಂದ ತೆಗೆದುಕೊಂಡು ಕೆಳಗೆ ಹಾಕಿದ.

ಕೊನೆಗೂ ತಮ್ಮ ಪ್ರೀತಿ ಮತ್ತು ಬದುಕು ಈ‌ ಮಣ್ಣಿನ ಮೇಲೆಯೇ ಎಂಬಂತೆ ಅವನು ಕೊಟ್ಟ ಉತ್ತರದಿಂದ ಪ್ರಕಾಶನಿಗೆ ಟಿಬೆಟಿಯನ್ ಸ್ನೇಹಿತರೊಂದಿಗೆ ಮತ್ತಷ್ಟು ಆತ್ಮೀಯತೆ ಬೆಳೆಯುತ್ತದೆ.

ಒಟ್ಟಿನಲ್ಲಿ ವಿಜ್ಞಾನ, ತತ್ವಜ್ಞಾನಗಳನ್ನು ರೂಪಕಗಳೊಂದಿಗೆ ಒಡಲಲ್ಲಿರಿಸಿಕೊಂಡೂ ಜನಸಾಮಾನ್ಯರೆಲ್ಲರಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ, ಶೈಲಿಯಲ್ಲಿ ಪ್ರಸನ್ನ “ಸು” ಕಾದಂಬರಿ ಬರೆದಿದ್ದಾರೆ.