ಕವಿತೆಯಾಗಿಸಲೇ ಬೇಕು

ಹೂವಿನ ಕಥೆಯನ್ನು ಹೇಳುವಾಗ
ಹಾದುಹೋಗುವ ದುಂಬಿಗಳು
ಅವು ಹೀರುವ ಮಧುವನ್ನು
ಕವಿತೆಯಾಗಿಸಲೇ ಬೇಕು

ಕಡಲಿನ ಕಥೆಯನ್ನು ಹೇಳುವಾಗ
ಅಲೆಗಳ ಮೌನವನ್ನು
ಅವು ಹೊತ್ತು ತರುವ ಹುಕಿಯನ್ನು
ಕವಿತೆಯಾಗಿಸಲೇ ಬೇಕು

ಹಸಿವು, ಸಾಲು ಕೊಲೆ, ಅತ್ಯಾಚಾರದ ಕಥೆಗಳನ್ನು ಹೇಳುವಾಗ
ಹಿಂದೆ ಕಮರಿದ ಕನಸನ್ನು ಕವಿತೆಯಾಗಿಸಲೇ ಬೇಕು

ಊರಿನ ಕಥೆಯನ್ನು ಹೇಳುವಾಗ
ನಾಯಕನ ತೆವಲನ್ನು
ಅವನು ನುಂಗುವ ಸತ್ಯವನ್ನು
ಕವಿತೆಯಾಗಿಸಲೇ ಬೇಕು

ಭೂಮಿ ಕಥೆಯನ್ನು ಹೇಳುವಾಗ
ಚಂದ್ರನ ಸುಂದರ ಗುಲಾಮಿಯನ್ನು
ಅವನ ಮುಖದ ಸುಕ್ಕುಗಳನ್ನು
ಕವಿತೆಯಾಗಿಸಲೇ ಬೇಕು…..

ಈ ಲೋಕದ ಯಾವುದೇ ಬಗೆಯ ಕಥೆಯನ್ನು ಹೇಳುವಾಗ
ಆಳದಲ್ಲಿ ಹಿಸುಕಲ್ಪಟ್ಟಿರುವ ಧ್ವನಿಯನ್ನು ಕವಿತೆಯಾಗಿಸಲೇ ಬೇಕು

ವಿಶಾಲ್ ಮ್ಯಾಸರ್ ಹೊಸಪೇಟೆಯವರು
ಪ್ರಸ್ತುತ ವಿಜಯನಗರ ಮಹಾವಿದ್ಯಾಲಯ ಹೊಸಪೇಟೆಯಲ್ಲಿ ಬಿ.ಎಸ್ಸಿ ಪದವಿಯನ್ನ ವ್ಯಾಸಂಗ ಮಾಡುತ್ತಿದ್ದಾರೆ
“ಬಟ್ಟೆಗಂಟಿದ ಬೆಂಕಿ” ಇವರ ಪ್ರಕಟಿತ ಕವಿತಾ ಸಂಕಲನ