ಲಾರ್ಡ್ಸ್, ಕ್ರಿಕೆಟಿನ ತವರು ಎಂದು ಶತಮಾನದಿಂದ ಕರೆಸಿಕೊಳ್ಳುತ್ತ ಹೊಗಳಿಕೆ ಪ್ರೀತಿ ಮತ್ತು ಹೊಣೆಗಾರಿಕೆಯ ಭಾರ ಹೊತ್ತ ಮೈದಾನ. ಲಾರ್ಡ್ಸ್ ನಲ್ಲಿ ಆಡುವುದು ಅಲ್ಲೊಂದು ಬ್ಯಾಟಿಂಗ್ ಅಥವಾ ಬೌಲಿಂಗ್ ಸಾಧನೆ ಗೈಯುವುದು ಕ್ರಿಕೆಟಿಗರಿಗೂ ಮಹತ್ತರ ವಿಷಯ. ಪ್ರೇಮಿಗಳಿಗೆ ಕಾಶ್ಮೀರದ ಕಣಿವೆಯಲ್ಲೋ, ಸ್ವಿಟ್ಜರ್ಲ್ಯಾಂಡಿನ ಹಿಮ ಶಿಖರದಲ್ಲೋ ಸಿಗುವ ರೋಮಾಂಚನವನ್ನು ಲಾರ್ಡ್ಸ್ ಮೈದಾನ ಕ್ರಿಕೆಟ್ ಆಟಗಾರರಿಗೆ, ಪ್ರೇಕ್ಷಕರಿಗೆ ನೀಡುತ್ತದೆ. ಲಾರ್ಡ್ಸ್ ಮಣ್ಣಿಗೆ ಮುತ್ತಿಕ್ಕಿದ ಕ್ರಿಕೆಟಿಗರೆಷ್ಟೋ, ಅಲ್ಲಿ ಶತಕ ಸಿಡಿಸಿ ಆನಂದ ಭಾಷ್ಪ ಹರಿಸಿದ ಆಟಗಾರರೆಷ್ಟೋ, ವಿಜಯೋತ್ಸಾಹದಲ್ಲಿ ಅಲ್ಲಿನ ಹುಲ್ಲನ್ನು ಬಾಯಲ್ಲಿ ಜಗಿದವರೆಷ್ಟೋ.
ಯೋಗೀಂದ್ರ ಮರವಂತೆ ಬರೆವ ಇಂಗ್ಲೆಂಡ್ ಲೆಟರ್

1971ರಲ್ಲಿ ಇಂಗ್ಲೆಂಡ್ ಹಾಗು ಆಸ್ಟ್ರೇಲಿಯಾಗಳ ನಡುವೆ ಮೆಲ್ಬೋರ್ನ್ ನಲ್ಲಿ ಐದು ದಿನಗಳ ಸಾಂಪ್ರದಾಯಿಕ ಟೆಸ್ಟ್ ಮ್ಯಾಚ್ ನಡೆಯುತ್ತಿತ್ತು. ಮೊದಲ ಮೂರು ದಿನಗಳ ಆಟ ಮಳೆಯಿಂದ ನಿಂತು ಹೋಗಿತ್ತು. ಕ್ರಿಕೆಟಿನ ಎರಡು ಬದ್ಧವಿರೋಧಿ ತಂಡಗಳ ನಡುವಿನ ಸೆಣಸಾಟ ಹೀಗೆ ನೀರಸವಾಗಿ ಮುಗಿಯುತ್ತಿರುವುದು ಪ್ರೇಕ್ಷಕರಲ್ಲಿ ಹತಾಶೆ ಹುಟ್ಟಿಸಿತ್ತು. ಬೇಸತ್ತ ಪ್ರೇಕ್ಷಕರಿಗೆ ಉಲ್ಲಾಸ ನೀಡಲು ಟೆಸ್ಟ್ ಪಂದ್ಯದ ಕೊನೆಯ ದಿನ ತಲಾ ನಲವತ್ತು ಓವರುಗಳ ಹಾಗು ಪ್ರತಿ ಓವರಿನಲ್ಲಿ ಎಂಟು ಬಾಲು ಎಸೆಯುವ ನಿಯಮಗಳ “ಒನ್ ಡೇ” ಮ್ಯಾಚ್ ಆಡಲಾಯಿತು, ಅದರಲ್ಲಿ ಆಸ್ಟ್ರೇಲಿಯಾ ಜಯಗಳಿಸಿತು. ಈ ಪಂದ್ಯವನ್ನು ಅಂತಾರಾಷ್ಟ್ರೀಯ ಮಟ್ಟದ ಮೊದಲ ಒಂದು ದಿನದ ಕ್ರಿಕೆಟ್ ಪಂದ್ಯ ಎಂದು ಗುರುತಿಸುತ್ತಾರೆ. ಮತ್ತು ಅಂತಹ ದಾಖಲೆ ಪಡೆದ ಪಂದ್ಯದಲ್ಲಿ ಕ್ರಿಕೆಟಿನ ಹುಟ್ಟೂರು ಇಂಗ್ಲೆಂಡ್ ಸೋತಿದ್ದನ್ನೂ ನೆನಪಿಸಿಕೊಳ್ಳುತ್ತಾರೆ.

ಇಂಗ್ಲೆಂಡ್ ನ ಪ್ರಾದೇಶಿಕ ಕ್ರಿಕೆಟಿನಲ್ಲಿ ಅದಕ್ಕಿಂತ ಮೊದಲೂ ಆಡಲ್ಪಡುತ್ತಿದ್ದ ಸೀಮಿತ ಓವರುಗಳ ಪಂದ್ಯಕ್ಕೆ ಅಂದು ಒಂದು ಅಂತಾರಾಷ್ಟ್ರೀಯ ವೇದಿಕೆ ಸಿಕ್ಕಿತ್ತು ಮತ್ತು ಇಂತಹ ಮಾದರಿಯೊಂದು ಹುಟ್ಟಿಸುವ ಕ್ಷಿಪ್ರ ರೋಚಕತೆಗೆ ಜನಮೆಚ್ಚುಗೆಯೂ ದೊರೆತಿತ್ತು. ಇಂಗ್ಲೆಂಡ್-ಆಸ್ಟ್ರೇಲಿಯಾಗಳ ನಡುವಿನ ಅನಿರೀಕ್ಷಿತ ಯೋಜಿತವಲ್ಲದ ಒಂದು ದಿನದ ಪಂದ್ಯನಡೆದ ನಾಲ್ಕು ವರ್ಷಗಳ ನಂತರ, 1975ರಲ್ಲಿ ಸೀಮಿತ ಓವರುಗಳ ಕ್ರಿಕೆಟಿನ ಮೊದಲ ವಿಶ್ವಕಪ್ ನಡೆಯಿತು. ಅಂದಿನಿಂದ ಇಂದಿನವರೆಗೂ ಕ್ರಿಕೆಟಿನ ಜನ್ಮಭೂಮಿ ಇಂಗ್ಲೆಂಡ್ ಸೀಮಿತ ಓವರುಗಳ ವಿಶ್ವಕಪ್ ಕ್ರಿಕೆಟನ್ನು ಒಂದುಧೀರ್ಘ ನಿರೀಕ್ಷೆಯಲ್ಲಿಯೇ ಕಳೆದಿದೆ; ಕಪ್ ತನ್ನ ಕೈಯಲ್ಲಿ ಎಂದು ಹಿಡಿದೇನೋ ಎಂಬ ಕಾತರಿಕೆಯಲ್ಲಿ.

ಕ್ರಿಕೆಟ್ ಹಾಗು ಆಂಗ್ಲರ ನಂಟು ಇಂದು ನಿನ್ನೆಯದಲ್ಲವಲ್ಲ. ಹದಿನಾರನೆಯ ಶತಮಾನದಲ್ಲಿ ಇಂಗ್ಲೆಂಡ್ ನಲ್ಲಿ ಕ್ರಿಕೆಟಿನ ಆರಂಭಿಕ ದಿನಗಳ ದಾಖಲೆ ಸಿಗುತ್ತದೆ. ಅದಕ್ಕಿಂತ ಮೊದಲೂ ಕ್ರಿಕೆಟಿನಂತಹ ಆಟವೊಂದು ಇಂಗ್ಲೆಂಡ್ ನಲ್ಲಿ ಯುರೋಪಿನಲ್ಲಿ ಇದ್ದ ಬಗ್ಗೆ ಊಹೆಗಳಿದ್ದರೂ ಅಧಿಕೃತ ಮಾಹಿತಿ ಹದಿನಾರನೆಯ ಶತಮಾನದಲ್ಲಿ ಆಗ್ನೇಯ ಇಂಗ್ಲೆಂಡ್ಭ ಭಾಗದಲ್ಲಿ ಕ್ರಿಕೆಟ್ ಶುರು ಆದುದ್ದರ ಬಗ್ಗೆ ಹೇಳುತ್ತದೆ. ಇಂಗ್ಲೆಂಡ್ ನ ದೇಶದಾದ್ಯಂತ ಜನಪ್ರಿಯತೆ ಪಡೆದ ಕ್ರಿಕೆಟ್ ಹದಿನೆಂಟನೆಯ ಶತಮಾನಕ್ಕೆ ಇಂಗ್ಲೆಂಡ್ ನ ರಾಷ್ಟ್ರೀಯ ಕ್ರೀಡೆ ಎಂದೆನಿಸಿತು. ಮುಂದೆ ಹತ್ತೊಂಬತ್ತು ಹಾಗು ಇಪ್ಪತ್ತನೆಯ ಶತಮಾನದ ಸಮಯದಲ್ಲಿ ಬ್ರಿಟಿಷ್ ವಸಾಹತು ಇದ್ದಲ್ಲೆಲ್ಲ ಕ್ರಿಕೆಟ್ ತಲುಪಿತು. ಹಾಗಾಗಿ ಇಂತಿಂತಹ ದೇಶಗಳು ಕ್ರಿಕೆಟ್ ಆಡಿರಬಹುದು ಎಂದು ನಾವು ಇಂದು ಕಲ್ಪಿಸಲಾಗದ ದೇಶಗಳಲೂ ಕ್ರಿಕೆಟ್ ಆಡಿರುವುದನ್ನು ಗಮನಿಸಬಹುದು.

ಜಗತ್ತಿನ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಎನ್ನುವ ಹೆಸರಿರುವುದು ಅಮೆರಿಕ ಹಾಗು ಕೆನಡಾಗಳ ನಡುವೆ 1844ರಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ಪಂದ್ಯಕ್ಕೆ. ಇಂಗ್ಲೆಂಡ್ ನಲ್ಲಿ ಹುಟ್ಟು ಪಡೆದು ವಿವಿಧ ದೆಸೆ-ದಿಕ್ಕುಗಳನ್ನು ತಲುಪಿದ ಕ್ರಿಕೆಟ್ ಆಟದಲ್ಲಿ ಇಲ್ಲಿಯ ತನಕ ಬೇರೆ ಬೇರೆ ಕಾಲದಲ್ಲಿ ಬೇರೆಬೇರೆ ದೇಶಗಳು ಪ್ರಭಾವಿ ಮತ್ತು ಪ್ರಬಲ ಎನಿಸಿವೆ; ವಿಶ್ವಮಟ್ಟದ ಸ್ಪರ್ಧೆಯಲ್ಲಿ ಜಯಶಾಲಿಗಳಾಗಿವೆ. ವೆಸ್ಟ್ಇಂಡೀಸ್, ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಶ್ರೀಲಂಕಾಗಳು ವಿಶ್ವ ಕಪ್ ಗೆದ್ದಿವೆ. ಆದರೆ ಜಗತ್ತಿಗೆಲ್ಲ ಕ್ರಿಕೆಟಿನ ಪಾಠ ಹೇಳಿ, ಆಡಿ, ಆಡಿಸಿ, ಕಪ್ ಗೆಲ್ಲುವ ಅತಿ ಸನಿಹಕ್ಕೆ ಬಂದು ಸೋತುಹೋಗಿರುವ ಇಂಗ್ಲೆಂಡ್ ತಂಡ ಮಾತ್ರ ಕ್ರಿಕೆಟ್ ಲೋಕದ ದುರಂತ ನಾಯಕನಾಗಿಯೇ ಉಳಿದಿದೆ.

ಇಂಗ್ಲೆಂಡ್ ನಲ್ಲಿ ಶಾಲೆಗೆ ಹೋಗುವ ಸಣ್ಣ ಮಕ್ಕಳನ್ನು ನಿಮ್ಮದೇಶದ ರಾಷ್ಟ್ರೀಯ ಕ್ರೀಡೆ ಯಾವುದು ಎಂದರೆ ಕೆಲವರು ಫುಟ್ಬಾಲ್ ಎಂದಾರು ಅಥವಾ ಇನ್ನು ಕೆಲವರು ರಗ್ಬಿ ಎಂದಾರು ಅಥವಾ ಈ ದೇಶದ ಮೂಲೆ ಮೂಲೆಯಲ್ಲಿ ಸಿಗುವ ಫುಟ್ಬಾಲ್ ರಗ್ಬಿ ಅಭಿಮಾನಿಗಳೂ ತಮಗೆ ಇವೆರಡಕ್ಕಿಂತ ಪ್ರಿಯವಾದ ಕ್ರೀಡೆ ಇನ್ನೊಂದಿಲ್ಲ ಅಂತ ಎನ್ನಲೂಬಹುದು.

ಕ್ರಿಕೆಟಿಗಿಂತ ಫುಟ್ಬಾಲನ್ನು ಇತಿಹಾಸ ಹಳೆಯದು ಎಂದು ವಾದಿಸುವ ಕ್ರೀಡಾ ಚರಿತ್ರಕಾರರೂ ಇದ್ದಾರೆ. ಫುಟ್ಬಾಲ್ ಜನಸಾಮಾನ್ಯರ ಕ್ರೀಡೆ ಎಂದೂ ಕೊಂಡಾಡುತ್ತಾರೆ. ಇನ್ನು ಬೇಸಿಗೆಯಲ್ಲಿ ಕ್ರಿಕೆಟ್ ಆಡಿ ಮತ್ತೆ ಅದೇ ಮೈದಾನದಲ್ಲಿ ಚಳಿಗಾಲದಲ್ಲಿ ಫುಟ್ಬಾಲ್ ಒದ್ದು ಒಂದು ಹೊಂದಾಣಿಕೆ ಮಾಡಿಕೊಂಡ ಆಂಗ್ಲರೂ ಇಲ್ಲಿ ಸಿಗುತ್ತಾರೆ. ರಾಷ್ಟ್ರೀಯ ಕ್ರೀಡೆ ಯಾವುದು? ಜನಮೆಚ್ಚಿದ ಕ್ರೀಡೆ ಎನ್ನುವ ವಾದ ವಿವಾದ ಬಿಡುವ, ನಾಳೆ ಗುರುವಾರ ಇಂಗ್ಲೆಂಡ್ ನಲ್ಲಿ ಆರಂಭ ಆಗಲಿರುವ ವಿಶ್ವಕಪ್ ಕ್ರಿಕೆಟ್ ಜಗತ್ತಿನಾದ್ಯಂತ ಅಸಂಖ್ಯ ಕ್ರೀಡಾಭಿಮಾನಿಗಳಗಲ್ಲದೆ ಇಂಗ್ಲೆಂಡ್ ನ ಲಾರ್ಡ್ಸ್ ಮೈದಾನಕ್ಕೂ ಉತ್ಸಾಹ ಹಾಗು ಉದ್ವೇಗದ ವಿಷಯವೇ. ಈ ಬಾರಿಯ ಫೈನಲ್ಸ್ ನಡೆಯುವುದೂ ಲಾರ್ಡ್ಸ್ ನಲ್ಲಿಯೇ. ಅದು ಲಾರ್ಡ್ಸ್ ನ ಹೆಮ್ಮೆ ಮತ್ತು ಅಧಿಕಾರ ಎರಡೂ ಹೌದು. ಇಲ್ಲಿನ ಯಾವ ಕ್ರಿಕೆಟ್ ಸರಣಿಯ ಯಾವ ಮ್ಯಾಚ್ ಯಾವ ಊರಿನ ಹಸಿರುಮೈದಾನದಲ್ಲಿ ನಡೆದರೂ ಅಂತಿಮ ಹಣಾಹಣಿ “ಕ್ರಿಕೆಟಿನಕಾಶಿ” ಅಥವಾ “ಹೋಮ್ ಆಫ್ ಕ್ರಿಕೆಟ್” ಎಂದೆಲ್ಲ ಕರೆಸಿಕೊಳ್ಳುವ ಲಾರ್ಡ್ಸ್ ನಲ್ಲಿ ನಡೆದರೇ ಅದು “ಫೈನಲ್ಸ್” ಎನಿಸಿಕೊಳ್ಳುವುದು.

ಆಂಗ್ಲರ ಮಟ್ಟಿಗೆ ಲಾರ್ಡ್ಸ್ ಎನ್ನುವುದು “ಪುರಾಣಪ್ರಸಿದ್ಧ” ಮೈದಾನ. ಲಾರ್ಡ್ಸ್ ಹೆಸರಿನ ಕ್ರಿಕೆಟ್ ಅಂಗಣ 1786ರಲ್ಲಿ ಥಾಮಸ್ ಲಾರ್ಡ್ ಎಂಬಾತನಿಂದ ಸ್ಥಾಪಿಸಲ್ಪಟ್ಟಿತು. ಆಕಾಲದಲ್ಲಿ ಶೂಟಿಂಗ್, ಬೇಟೆಗಳಂತೆ ಕ್ರಿಕೆಟ್ ಕೂಡ ಸಿರಿವಂತರ ಕ್ರೀಡೆಯಾಗಿತ್ತು. ಥಾಮಸ್ ಲಾರ್ಡ್ ಆಡುತ್ತಿದ್ದ ಇಸ್ಲಿಂಗ್ಟನ್ ಕ್ರಿಕೆಟ್ ಕ್ಲಬ್ಬಿನಲ್ಲಿ ಆಟದ ಜನಪ್ರಿಯತೆ ಹೆಚ್ಚಿ ಕೆಳವರ್ಗದ ಜನರೂ ಆಡಲು ಬರುವುದು ಶುರು ಮಾಡಿದ್ದರು. ಅಂದಿನ ಶ್ರೇಣೀಕೃತ ಇಂಗ್ಲಿಷ್ ಸಮಾಜದಲ್ಲಿ ಇದು ಸಹ್ಯವಾದ ವಿಷಯವಾಗಿರಲಿಲ್ಲ. ತಮಗಿನ್ನು ಈ ಕ್ಲಬ್ ಬೇಡ ಮೇಲ್ವರ್ಗದ ಜನರಿಗಾಗಿಯೇ ಬೇರೊಂದು ಕ್ಲಬ್, ಮೈದಾನ ಬೇಕೆಂಬ ಬೇಡಿಕೆ ಹೆಚ್ಚಿತು. ಇದಕ್ಕೆ ಪರಿಹಾರವಾಗಿ ಲಾರ್ಡ್ಸ್ ಎನ್ನುವ ಕ್ರೀಡಾಂಗಣವನ್ನು ಥಾಮಸ್ ಲಾರ್ಡ್ ಸ್ಥಾಪನೆ ಮಾಡಿದ. ಅಲ್ಲಿ ತೀವ್ರ ಪೈಪೋಟಿಯ ದೊಡ್ಡ ಪ್ರಶಸ್ತಿಯ ಪಂದ್ಯಗಳು ನಡೆಯುತ್ತಿದ್ದವು. ಸದಸ್ಯರಲ್ಲದವರು ಮ್ಯಾಚ್ ನೋಡಲು ಬರುವುದಿದ್ದರೆ ಪ್ರವೇಶದರ ನೀಡಬೇಕಿತ್ತು. ಮ್ಯಾಚ್ ಗೆದ್ದವರಿಗೆ ಎರಡು ಚಿನ್ನದ ನಾಣ್ಯಗಳ ಬಹುಮಾನ ನೀಡುತ್ತಿದ್ದ ಕ್ರಮವೂ ಇತ್ತು. ಅಲ್ಲಿ ಮ್ಯಾಚ್ ನಡೆದಾಗಲೆಲ್ಲ ಕ್ರಿಕೆಟ್ ನೆಪದಲ್ಲಿ ನಡೆಯುತ್ತಿದ್ದ ಅಪರಾಧಗಳು, ಹೊಡೆದಾಟಗಳು ಲಾರ್ಡ್ಸ್ ಕ್ರೀಡಾಂಗಣ ಮೂಲ ಜಾಗದಿಂದ ಸ್ಥಳಾಂತರಗೊಳ್ಳುವಂತೆ ಮಾಡಿತು. ಲಾರ್ಡ್ಸ್ ಮೈದಾನವಿದ್ದ ಒಂದು ಸ್ಥಳದ ಮಾಲೀಕನಂತೂ ಕ್ರಿಕೆಟ್ ನೋಡುವವರ ಅತಿಯಾದ ಮದ್ಯಪಾನ ಸೇವನೆಗೆ ಬೇಸತ್ತು ಕ್ರೀಡಾಂಗಣವನ್ನು ಅಲ್ಲಿಂದ ವರ್ಗಾಯಿಸುವಂತೆ ಮಾಡಿದ್ದ.

ವೆಸ್ಟ್ಇಂಡೀಸ್, ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಶ್ರೀಲಂಕಾಗಳು ವಿಶ್ವ ಕಪ್ ಗೆದ್ದಿವೆ. ಆದರೆ ಜಗತ್ತಿಗೆಲ್ಲ ಕ್ರಿಕೆಟಿನ ಪಾಠ ಹೇಳಿ, ಆಡಿ, ಆಡಿಸಿ, ಕಪ್ ಗೆಲ್ಲುವ ಅತಿ ಸನಿಹಕ್ಕೆ ಬಂದು ಸೋತುಹೋಗಿರುವ ಇಂಗ್ಲೆಂಡ್ ತಂಡ ಮಾತ್ರ ಕ್ರಿಕೆಟ್ ಲೋಕದ ದುರಂತ ನಾಯಕನಾಗಿಯೇ ಉಳಿದಿದೆ.

ಮುಂದೆ 1814ರಲ್ಲಿ “ಸೈನ್ಟ್ ಜಾನ್ ವುಡ್” ರಸ್ತೆಯ ಬಳಿ ಇರುವ ಮೈದಾನಕ್ಕೆ ಲಾರ್ಡ್ಸ್ ಸ್ಥಳಾಂತರಗೊಂಡಿತು. ಈಗ ನಾವು ನೋಡುವ, ಕೇಳುವ “ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್” ಇರುವುದು ಅಲ್ಲಿಯೇ. ಮತ್ತೆ ಈ ಕಾಲದಲ್ಲಿ ತನ್ನ ಮೈದಾನದಲ್ಲಿ ಕ್ರಿಕೆಟ್ ಆಡುವವರನ್ನು ನೋಡುವವರನ್ನು ಅವರ ಸಾಮಾಜಿಕ ವರ್ಗ, ಆರ್ಥಿಕ ಶ್ರೇಣಿಯ ಆಧಾರದಲ್ಲಿ ಲಾರ್ಡ್ಸ್ ತಾರತಮ್ಯದಿಂದ ನೋಡುವುದಿಲ್ಲ. “ಎಂ ಸಿ ಸಿ” ಅಥವಾ “ಮಾರಿಲಿಬೋನ್ಸ್ ಕ್ರಿಕೆಟ್ ಕ್ಲಬ್” ನ ಆಡಳಿತಕ್ಕೆ ಒಳಪಟ್ಟಿರುವ ಲಾರ್ಡ್ಸ್ ಮೈದಾನದಲ್ಲಿ ಕ್ರಿಕೆಟಿನ ಹಲವು ನಿಯಮಗಳು ಹುಟ್ಟಿವೆ. ಉದಾಹರಣೆಗೆ, ಎರಡು ವಿಕೆಟುಗಳ ನಡುವಿನ ಅಂತರ 22 ಯಾರ್ಡುಗಳು ಎನ್ನುವ ಮೂಲಭೂತ ನಿಯಮ ನಿರ್ಧಾರವಾದದ್ದು ಇಲ್ಲಿಯೇ.

ಲಾರ್ಡ್ಸ್, ಕ್ರಿಕೆಟಿನ ತವರು ಎಂದು ಶತಮಾನದಿಂದ ಕರೆಸಿಕೊಳ್ಳುತ್ತ ಹೊಗಳಿಕೆ ಪ್ರೀತಿ ಮತ್ತು ಹೊಣೆಗಾರಿಕೆಯ ಭಾರ ಹೊತ್ತ ಮೈದಾನ. ಲಾರ್ಡ್ಸ್ ನಲ್ಲಿ ಆಡುವುದು ಅಲ್ಲೊಂದು ಬ್ಯಾಟಿಂಗ್ ಅಥವಾ ಬೌಲಿಂಗ್ ಸಾಧನೆ ಗೈಯುವುದು ಕ್ರಿಕೆಟಿಗರಿಗೂ ಮಹತ್ತರ ವಿಷಯ. ಕ್ರಿಕೆಟ್ ಲೋಕದಲ್ಲಿ ಚಾರಿತ್ರಿಕ ಮೌಲ್ಯ ಪಡೆದ ಲಾರ್ಡ್ಸ್ ಕ್ರೀಡಾಂಗಣ ಆಟಗಾರರ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಹಾಗು ಎತ್ತರದ ಸ್ಥಾನ ಪಡೆದಿದೆ. ಪ್ರೇಮಿಗಳಿಗೆ ಕಾಶ್ಮೀರದ ಕಣಿವೆಯಲ್ಲೋ, ಸ್ವಿಟ್ಜರ್ಲ್ಯಾಂಡಿನ ಹಿಮ ಶಿಖರದಲ್ಲೋ ಸಿಗುವ ರೋಮಾಂಚನವನ್ನು ಲಾರ್ಡ್ಸ್ ಮೈದಾನ ಕ್ರಿಕೆಟ್ ಆಟಗಾರರಿಗೆ, ಪ್ರೇಕ್ಷಕರಿಗೆ ನೀಡುತ್ತದೆ. ಲಾರ್ಡ್ಸ್ ಮಣ್ಣಿಗೆ ಮುತ್ತಿಕ್ಕಿದ ಕ್ರಿಕೆಟಿಗರೆಷ್ಟೋ, ಅಲ್ಲಿ ಶತಕ ಸಿಡಿಸಿ ಆನಂದ ಭಾಷ್ಪ ಹರಿಸಿದ ಆಟಗಾರರೆಷ್ಟೋ, ವಿಜಯೋತ್ಸಾಹದಲ್ಲಿ ಅಲ್ಲಿನ ಹುಲ್ಲನ್ನು ಬಾಯಲ್ಲಿ ಜಗಿದವರೆಷ್ಟೋ. ಕ್ರಿಕೆಟ್ ಆಟಗಾರರು ಪಂದ್ಯವೊಂದರಲ್ಲಿ ಶತಕವನ್ನೋ ಅಥವಾ ಐದು ವಿಕೆಟುಗಳನ್ನೋ ಪಡೆದು ಅಲ್ಲಿನ ಶಾಶ್ವತ ಫಲಕದಲ್ಲಿ ತಮ್ಮ ಹೆಸರು ಸೇರಿದರೆ ಮೋಕ್ಷ ಸಿಕ್ಕಿದವರಂತೆ ಖುಶಿ ಪಡುತ್ತಾರೆ. ಕ್ರಿಕೆಟ್ ನ ಗಂಭೀರ ಪ್ರೇಮಿಗಳು ಲಾರ್ಡ್ಸ್ ನಲ್ಲಿ ಕುಳಿತು ಒಂದು ಪಂದ್ಯವನ್ನಾದರು ನೋಡಬೇಕೆಂದು ಕನಸು ಕಂಡಿರುತ್ತಾರೆ.

ಲಾರ್ಡ್ಸ್ ನಲ್ಲಿ ವಿಜಯೀ ತಂಡಗಳ ಸಂಭ್ರಮಾಚರಣೆಯನ್ನು ಮೆಲುಕು ಹಾಕುವಾಗ ಭಾರತ-ಇಂಗ್ಲೆಂಡ್ ನ ಒಂದು ಮ್ಯಾಚ್ ಅನ್ನು ಇಲ್ಲಿನವರು ನೆನಪಿಸಿಕೊಳ್ಳುತ್ತಾರೆ. 2002 ರ ನಾರ್ಥ್ ವೆಸ್ಟ್ ಸರಣಿಯ ಕೊನೆಯ ಪಂದ್ಯ ಅದು. ಭಾರತ ಇಂಗ್ಲೆಂಡ್ ಅನ್ನು ವೀರೋಚಿತವಾಗಿ ಹೋರಾಡಿ ಸೋಲಿಸಿತ್ತು. ಯುವರಾಜ್ ಮತ್ತು ಕೈಫ್ ಜೋಡಿ ಅಂದಿನ ಪಂದ್ಯದ ಹೀರೋ ಆಗಿದ್ದರು. ಈ ಪಂದ್ಯವನ್ನು ಭಾರತ ತಂಡದ ಡ್ರೆಸಿಂಗ್ ರೂಂ ಬಾಲ್ಕನಿಯಲ್ಲಿ ನಿಂತು ಉಗುರು ಕಚ್ಚುತ್ತ ನೋಡಿ ಮುಗಿಸಿದ್ದ ಆಗಿನ ನಾಯಕ ಗಂಗೂಲಿ, ತಡೆಯಲಾಗದ ಉದ್ವೇಗ ತುಂಬಿದ ಸಂತೋಷದಲ್ಲಿ ಅತಿಥಿ ತಂಡದ ಬಾಲ್ಕನಿಯಲ್ಲೇ ನಿಂತು ಎಲ್ಲರೆದುರೇ ತನ್ನ ಅಂಗಿಯನ್ನು ಕಳಚಿ ಕೈಯಲ್ಲಿ ಹಿಡಿದು ಗರಗರ ತಿರುಗಿಸಿದ್ದು ಇಂಗ್ಲೆಂಡ್ ನ “ಜೆಂಟಲ್ ಮ್ಯಾನ್”ಗಳ ಕ್ರೀಡಾಲೋಕದಲ್ಲಿ ಚರ್ಚೆಯನ್ನು ಹುಟ್ಟುಹಾಕಿತ್ತು. ಈಗಲೂ ಆ ಕಾರಣಕ್ಕೆ ಅತಿಥಿ ತಂಡದ ಬಾಲ್ಕನಿಯನ್ನು ‘ಗಂಗೂಲಿಬಾಲ್ಕನಿ’ ಎಂದೇ ಕರೆಯುವವವರಿದ್ದಾರೆ.

ಎಷ್ಟೇ ಸಂತೋಷವಾಗಲಿ, ದುಃಖವೇ ಆಗಲಿ, ಇಂಗ್ಲೆಂಡಿನ ಕ್ರಿಕೆಟಿನ ಸಂಪ್ರದಾಯದ ಪ್ರೇಕ್ಷಕರು ಹೆಚ್ಚೆಂದರೆ ಕೂತಲ್ಲೇ, ಅಲ್ಲದಿದ್ದರೆ ಎದ್ದು ನಿಂತು ಕೈತಟ್ಟಿ ಅತಿಯಾದ ಹರ್ಷವನ್ನು ತೋರಿಸುವವರು ಈ ಘಟನೆಗೆ ಬೆರಗಾಗಿದ್ದರು. ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯ ತಂಡದ ರೋಚಕ ಗೆಲುವನ್ನು ಆಚರಿಸಲು ಶೇನ್ ವಾರ್ನ್ ಕೂಡ ಇದೇ ಬಾಲ್ಕನಿಯಲ್ಲಿ ಅಂಗಿ ಕಳಚಿ ಬಿಸಾಡಿದ್ದು ಇದೆ. ಆಮೇಲೆ ಕೆಲವರು ಈ ಬಾಲ್ಕನಿಯನ್ನು ‘ವಾರ್ನ್ ಬಾಲ್ಕನಿ’ಯಂತಲೂ ಕರೆದಿದ್ದರು. ಇದು ಗಂಗೂಲಿ ಬಾಲ್ಕನಿಯೋ ಅಥವಾ ವಾರ್ನ್ ಬಾಲ್ಕನಿಯೋ ಎನ್ನುವ ಜಿಜ್ಞಾಸೆ ಬಂದಾಗ, ಈ ವಿಷಯದಲ್ಲಿ ತಮ್ಮ ಪರಮ ವೈರಿ ಆಸ್ಟ್ರೇಲಿಯವನ್ನು ಬಿಟ್ಟು ಭಾರತದ ಪಕ್ಷಪಾತಿಗಳಾಗಿ ಅದು ‘ಗಂಗೂಲಿ ಬಾಲ್ಕನಿ’ ಎಂದು ಕರೆಯುವ ಆಂಗ್ಲರಿದ್ದಾರೆ.

ತನ್ನನೊಳಗೆ ಹೀಗೆ ಹಲವು ಪುಟಗಳ ಇತಿಹಾಸ, ಹಲವು ಕಂತುಗಳ ಕತೆಗಳನ್ನು ಬಚ್ಚಿಟ್ಟುಕೊಂಡಿರುವ ಲಾರ್ಡ್ಸ್, ಕ್ರಿಕೆಟ್ ಅಭಿಮಾನಿಗಳು, ಆಟಗಾರರು, ವಿಮರ್ಶಕರು, ವಿವರಕರು ಹೀಗೆ ಕೋಟ್ಯಾಂತರ ಜನರ ತಲೆಯಲ್ಲಿ ಕನಸನ್ನು ಹೊತ್ತಿಸುವ ಕಾತರಿಕೆಯನ್ನು ಮೂಡಿಸುವ ರೋಚಕತೆಯನ್ನು ಉದ್ದೀಪನಗೊಳಿಸುವ ಗರಿಮೆಯ ಹಿರಿಮೆಯ ಲಾರ್ಡ್ಸ್, ಇದೀಗ ವಿಶ್ವಕಪ್ ಪಂದ್ಯಗಳಿಗೆ ಆಮೇಲೆ ಅಲ್ಲಿ ನಡೆಯುವ ಅಂತಿಮ ಕಾದಾಟಕ್ಕೆ ತಯಾರಾಗುತ್ತಿದೆ. ನಾಳೆಯಿಂದ ವಿಶ್ವಕಪ್ ಶುರು. ದಿನ ನಿತ್ಯವೂ ಜಗತ್ತಿನ ಯಾವುದೊ ಮೂಲೆಯಲ್ಲಿ ಒಂದೋ ಎರಡೋ ಕ್ರಿಕೆಟ್ ಮ್ಯಾಚ್ ನಡೆಯುವುದು ಸಾಮಾನ್ಯವಾದ ಈ ಕಾಲದಲ್ಲಿ, ಐ ಪಿ ಎಲ್ ಮಾದರಿಯ ವಾಣಿಜ್ಯ ವ್ಯಾಪಾರ ಕ್ರಿಕೆಟಿಗಿಂತ ದೊಡ್ಡದಾಗಿ ಬೆಳೆಯುತ್ತಿರುವ ಕಾಲದಲ್ಲಿ ಬಹುಷ್ಯ ಲಾರ್ಡ್ಸ್ ಕ್ರಿಕೆಟಿನ ಹಳೆಯ ಅಪ್ಪಟ ಕ್ರೀಡಾ ಸ್ಪರ್ಧೆಯನ್ನು ಸ್ಮರಿಸುತ್ತಿರಬಹುದು.

ತನ್ನ ಹಚ್ಚಹಸಿರು ಹುಲ್ಲಿನ ಮೇಲೆ ಆಡಿ ಮೆರೆದು ಸರಿದುಹೋದ ಮಹಾನ್ ಆಟಗಾರರನ್ನು ನೆನಪಿಸಿಕೊಳ್ಳುತ್ತಲೂ ಇರಬಹುದು. ಜೊತೆಗೆ ನಾಳೆ ನಡೆಯುವ ಮದುವೆಗೆ ಇಂದು ಮದುವೆಮನೆಯಲ್ಲಿ ಕಾಣುವ ಗಲಿಬಿಲಿ, ನಿರೀಕ್ಷೆ, ಉದ್ವೇಗಳು ಕೂಡ ಲಾರ್ಡ್ಸ್ ಗೆ ಇರಬಹುದು. ಕನ್ನಡಿಯೆದುರು ಕುಳಿತು ಸಿಂಗರಿಸಿಕೊಳ್ಳುತ್ತಿರುವ ಮದುಮಗಳು ಕೊನೆ ಕ್ಷಣದ ತಯಾರಿಯ ನಡುವೆ ಹಣೆಯ ಮೇಲೆ ಮೂಡುವ ಬೆವರಹನಿಗಳನ್ನು ಆಗಾಗ ಕರವಸ್ತ್ರದಿಂದ ಒರೆಸುತ್ತಾ ಕೆಲಸ ಮುಂದುವರಿಸುತ್ತಿರುವಂತೆ ಲಾರ್ಡ್ಸ್ ಕೂಡ ಪೂರ್ವಸಿದ್ಧತೆಯಲ್ಲಿ ಮಗ್ನವಾಗಿರಬಹುದು.

ತವರಿನ ತಂಡ ಈ ಸಲವಾದರೂ ವಿಶ್ವ ಕಪ್ ವಿಜಯಿಯಾಗಲಿ ಎಂದು ಹಾರೈಸುತ್ತಿರಬಹುದು, ಇಂಗ್ಲೆಂಡಿನ ಕ್ರಿಕೆಟ್ ಗೆ ಇಲ್ಲಿಯ ತನಕ ಕನಸಾಗಿರುವ ಯಶಸ್ಸು ಈ ಬಾರಿ ದೊರೆಯಲಿ ಎನ್ನುವ ಬಯಕೆಯೂ ಮೂಡಿರಬಹುದು. ಶತಮಾನಗಳ ಸುಧೀರ್ಘ ಕ್ರಿಕೆಟ್ ಇತಿಹಾಸದ ಮೌನ ಪ್ರೇಕ್ಷಕ ವೀಕ್ಷಕ ನಿರ್ವಾಹಕ ಲಾರ್ಡ್ಸ್ ವಿಶ್ವಕಪ್ ಶುರು ಆಗುವ ಹಿಂದಿನ ದಿನ ಇಂತಹ ಯೋಚನೆಗಳಲ್ಲಿ ಮುಳುಗಿರಬಹುದು.