ಸಿಡ್ನಿಯಿಂದ ಉತ್ತರಕ್ಕೆ ಇರುವ ವೂಲ್‌ಗೂಲ್‌ಗಾ (Woolgoolga) ಎಂಬ ಊರಿನ ಕೆಲವು ಮಂದಿಯನ್ನು ಸಿಡ್ನಿಯಲ್ಲಿ ಮೊನ್ನೆ ನೋಡಿದೆ. ಬಣ್ಣ ಬಣ್ಣದ ರುಮಾಲು. ಉದ್ದ ಗಡ್ಡ. ಕೈಯಲ್ಲಿ ಹೊಳೆವ ಕಡಗ. ಮೊಣಕಾಲಿಗಿರುವ ಚಡ್ಡಿ ಇಲ್ಲಾ ಮಾಸಿದ ಜೀನ್ಸ್. ಸ್ಪೈಡರ್‌ಮಾನ್‌ ಟೀ ಶರ್ಟು ತೊಟ್ಟ ಮಕ್ಕಳ ಕಣ್ಣಲ್ಲಿ ಹೊಸ ಊರಿನ ಕುತೂಹಲ ಮತ್ತು ದಾರಿ ಎತ್ತ ಎಂಬಂತ ಪ್ರಶ್ನೆ. ಗುಂಪಿನ ಹಿರಿಯನಿಗೆ ಮಾತ್ರ ಮುಂಜಾವದ ನಿದ್ದೆಯ ಝಂಪು. ಕೂತಲ್ಲೇ ನಿದ್ದೆ. ಹುಡುಗರ ಕೈಯಲ್ಲಿ ಮೋಬೈಲ್; ಅದರಲ್ಲೇ ಕಳೆದುಹೋಗುವಂತ ಆಟ. ಬಾಯಿ ಬಿಟ್ಟರೆ ಅಪ್ಪಟ ಆಸೀ ಇಂಗ್ಲೀಷ್. ನಡುನಡುವೆ ತುಣುಕು ಪಂಜಾಬಿ. ಹಿರಿಯನೊಡನೆ ಆಗಾಗ ಅಪ್ಪಟ ಪಂಜಾಬಿಯೂ. ಯಾರಿವರು ಎಂದು ನಿಮ್ಮ ತಲೆಯಲ್ಲಿ ಹುಳ ಎದ್ದಿರಬೇಕು. ಮೂಲತಃ ಪಂಜಾಬಿನ ಈ ಜನರ ಊರು ವೂಲ್‌ಗೂಲ್‌ಗ. ಹಾಗೆ ನೋಡಿದರೆ, ಇವರ ಅಪ್ಪ-ಅಮ್ಮ ಅಜ್ಜ-ಅಜ್ಜಿಯರದೂ ಕೂಡ.

ನೂರಾರು ವರ್ಷದಿಂದ, ಅಂದರೆ ೧೮ನೇ ಶತಮಾನದ ಕಡೆಯಿಂದಲೇ ಈ ನಾಡಿಗೆ ಬಂದು, ನೂರಾರು ಎಕರೆ ಬಾಳೆ ತೋಪು ಬೆಳೆಸಿಕೊಂಡು, ನಾಡಿನ ಒಳಗೆಂದರೆ ಒಳಗಿನವರಾಗಿ ಹೊರಗೆಂದರೆ ಹೊರಗನಿವರಾಗಿ ಉಳಿದಿರುವ ಮಂದಿ ಇವರು. ಬಿಳಿಯರನ್ನು ಲಗ್ನವಾದ ಮನೆಯ ಮಕ್ಕಳನ್ನು ನಿರ್ದಯವಾಗಿ ಹೊರಗಿಟ್ಟವರು. ಮನೆಯ ಮಕ್ಕಳಿಗೆ ಇಂಡಿಯಾದಿಂದಲೇ ಹೆಣ್ಣು ನೋಡುವ, ಗಂಡು ಹುಡುಕುವ ಸಂಪ್ರದಾಯದವರು. ಈಗಿನ ತಲೆಮಾರಿನ ಕೆಲವರು ಬಾಳೆ ತೋಪಲ್ಲೇ ಬಾಳ್ವೆ ಅಂದುಕೊಂಡವರು. ಇನ್ನು ಕೆಲವರು ಹಲವು ದಾರಿ ಹಿಡಿದು ಹರಡಿಕೊಂಡವರು.

ತಾವು ಬೀಡು ಬಿಟ್ಟ ಊರಿಗೆ ಹೊಸ ಕಳೆ ತಂದುಕೊಟ್ಟವರು. ಬೀದಿ, ಬೀಚುಗಳ ಜತೆ ಬಾಳೆ ತೋಟದ ಮಾಯೆಯನ್ನು ಬೆರೆಸಿದವರು. ಟೋಪಿ ಬಿಚ್ಚಿಡಬೇಕೆಂಬ ನಿಯಮವಿರುವ ನಿವೃತ್ತ ಯೋಧರ ಕ್ಲಬ್ಬಿಗೆ ರುಮಾಲು ಸುತ್ತಿಕೊಂಡೇ ಹೋಗಿ, ನಿಷೇಧವೆಂದಾಗ ಕೋರ್ಟಿಗೆ ಹೋಗಿ ಗೆದ್ದು ಬಂದವರು. ತಾವು ತಾವೇ ಎಂಬುದನ್ನು ಒಂದು ಕ್ಷಣವೂ ಎಂತ ತಾಕಲಾಟದ ನಡುವೆಯೂ ಮರೆಯದವರು. ಗುರುದ್ವಾರದಂತ ಸಮುದಾಯ ಕಟ್ಟಡ, ಸಮುದಾಯ ಕಟ್ಟಡದಂತ ಗುರುದ್ವಾರ ಕಟ್ಟಿಕೊಂಡು ಹೆಜ್ಜೆ ಬಲಪಡಿಸಿಕೊಂಡವರು. ಆ ದಾರಿಯಾಗಿ ಬಂದವರಿಗೆಲ್ಲಾ ಇಂದಿಗೂ ಕೂರಿಸಿ ಊಟ ಬಡಿಸಿ ಕಳಿಸುವವರು. ಸಂಜೆ ಹಾರ್ಮೋನಿಯಂ ತಬಲದ ಜತೆ ಭಜನೆಗಿಟ್ಟುಕೊಳ್ಳುವವರು. ನಾವಿಂತವರು ಎಂಬ ನೆನಪು ಕೆದರಿಕೊಂಡು ಹಾಡುವವರು.

ಈವತ್ತಿನ ತಲೆಮಾರಿಗೂ ತಮ್ಮ ಮುತ್ತಾತಂದಿರ ನೆನಪು ಮಾಸದೆ ಉಳಿಸಿಕೊಂಡವರು. ಇಂದಿನ ಬಾಳಿನಲ್ಲಿ ಕೊಚ್ಚಿಹೋಗಬಹುದಾದ ಎಳೆಯರನ್ನು ಹಿಡಿದಿಡಲು ಸಹಸ್ರ ಬಗೆಗಳನ್ನು ಕಂಡುಕೊಂಡವರು. “ಬಾಳೆ ಬೆಳೆಯುವ ಮಣ್ಣು ಹುಡುಕಿಕೊಂಡು ಸಾವಿರಾರು ಮೈಲಿ ಅಲೆದವರು ನಮ್ಮ ಹಿರೀಕರು” ಎಂದು ತಮ್ಮ ಮಕ್ಕಳಿಗೆ, ಕೇಳಲು ಕೂತವರಿಗೆ ಎದೆಯುಬ್ಬಿಸಿ ಹೇಳುವವರು. ಸಾವಿರಾರು ಮೈಲು ನಡೆದು ದಕ್ಷಿಣದ ವಿಕ್ಟೋರಿಯಾ ಪ್ರಾಂತದಿಂದ ಉತ್ತರದ ನ್ಯೂಸೌತ್ ವೇಲ್ಸ್‌ವರೆಗೂ ನಡೆದು ಬಂದ ಕತೆಯನ್ನು ಅತೀವ ಹೆಮ್ಮೆಯಿಂದ ಹೇಳಿ ಹುಚ್ಚುಹಿಡಿಸುವವರು. ವೈಟ್ ಆಸ್ಟ್ರೇಲಿಯಾ ಪಾಲಿಸಿಯ ಮುಂಚೆಯೂ, ನಂತರವೂ ಅದರ ಶಾಖವನ್ನು ತಡಕೊಂಡು ಒಮ್ಮೊಮ್ಮೆ ತಲೆ ತಗ್ಗಿಸಿ, ಕೂಡಲೆ ನಿಮಿರಿ ನಿಂತುದನ್ನು ವಿವರಿಸುವವರು. ನೀವು ಹುಬ್ಬೇರಿಸಿದರೆ ಸಹಜವಾಗಿ ನಗುವವರು.

ನೋಡಿ – ಯಾರ ಊರು? ಯಾರ ಮಣ್ಣು? ಯಾರ ಗೆಯ್ಮೆ? ಯಾರಿಗೆ ಏನು ಸೇರಿದ್ದು? ಎಂಬುದೆಲ್ಲಾ ಹುರಳಿಲ್ಲದ ಪ್ರಶ್ನೆಯಾಗಿಸುವ ಛಲದವರು.