“ಅಸ್ತು ಸಿನಿಮಾದ ಕಥಾವಸ್ತು ಒಂದು ನೆಲೆಯಲ್ಲಿ ಸಮಕಾಲೀನ.ವೃದ್ಧಾಪ್ಯ ಮತ್ತು ವೃದ್ಧರ ಪಾಲನೆಯ ಕುರಿತು ಜಾಗತಿಕವಾಗಿ ಮತ್ತು ಭಾರತದ ಅನೇಕ ಭಾಷೆಗಳಲ್ಲಿ ವೈವಿಧ್ಯದ ಸಿನಿಮಾ ಬಂದಿವೆಯಾದರೂ ಕೂಡಾ ‘ಅಸ್ತು’ವಿನಲ್ಲಿ ಕಥೆಯನ್ನು, ಕಥನವಿನ್ಯಾಸವನ್ನು ಚಿತ್ರಗಳ ಮೂಲಕ ಹೇಳಿರುವ ಕ್ರಮ ಅತ್ಯಂತ ವಿಶಿಷ್ಟ. ವೃದ್ಧಾಪ್ಯ ಅನ್ನವ ಈ ಕಾಲಕ್ಕೆ ಸಂಕೀರ್ಣವೆನ್ನಬಹುದಾದ ಸಮಸ್ಯೆಯೊಂದರ, ಆ ರೀತಿಯ ಕಥೆಯೊಂದರ ಸತ್ಕರಿಸುವ ಕ್ರಮದಲ್ಲಿ ಈ ಸಿನಿಮಾ ಗೆದ್ದಿದೆ.”
ಪ್ರದೀಪ್ ಕುಮಾರ್ ಶೆಟ್ಟಿ ಕೆಂಚನೂರು ಬರೆದ ಸಿನೆಮಾ ಪುಟ

 

ಗೋವಾದ 44ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯಂತ ತಣ್ಣಗೆ ಕಾಡಿದ ಚಿತ್ರಗಳಲ್ಲಿ ಮರಾಠೀ ಚಲನಚಿತ್ರ ಅಸ್ತು ಕೂಡಾ ಒಂದು ಅಸ್ತು, ಸಂಸ್ಕೃತ ಭಾಷೆಯ ಒಂದು ಶಬ್ದ, ಅದರ ಅರ್ಥ ಆಗಲಿ, ಹಾಗೆಯೇ ಆಗಲಿ ಎಂದು ಮರಾಠೀ ಚಿತ್ರಜಗತ್ತು ಇಡೀ ಭಾರತದಲ್ಲಿ ಅತ್ಯಂತ ಚಲನಶೀಲತೆಯನ್ನು ಪ್ರದರ್ಶಿಸುತ್ತಿರುವ ಒಂದು ಪ್ರಪಂಚ. ಅನೇಕ ಮಾದರಿಗಳನ್ನು ನಾವು ಅಲ್ಲಿ ಕಾಣಬಹುದು. ಹೊಸ ಪ್ರತಿಭೆಗಳನ್ನು ಅದರಲ್ಲೂ ಅತ್ಯಂತ ಎಳೆಯ ಸಿನಿಮಾ ನಿರ್ದೇಶಕರ ಪರಿಶ್ರಮ, ಆಸಕ್ತಿಯ ರೂಪಕಗಳಾಗಿ ಮರಾಠಿ ಭಾಷೆಯ ಅನೇಕ ಸಿನಿಮಾಗಳು ನಮಗಿಂದು ಲಭ್ಯವಾಗುತ್ತಿವೆ. ಹೊಸ ಪೀಳಿಗೆ ಅಥವಾ ತಲೆಮಾರಿನ ಯುವಕರು ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತಿದ್ದಾರೆ. ಒಂದು ಹಂತದಲ್ಲಿ ವೈವಿಧ್ಯತೆಯನ್ನು ಯುವಕರು ಅತ್ಯಂತ ಪ್ರಭಾವಿಯಾಗಿ ಪ್ರಕಟಪಡಿಸಲು ಹೆಚ್ಚು ಶಕ್ತರು ಎನ್ನುವ ಮಾತನ್ನೂ ಕೂಡಾ ಇದು ಅನುಮೋದಿಸಿದೆ. ‘ಅಸ್ತು’ ಸಿನಿಮಾ ಅಂತಹ ಒಂದು ಪ್ರಯತ್ನ.

ಸುಮಾರು 1990ರ ನಂತರ ಮರಾಠೀ ಜಗತ್ತು ಕೆಲವು ಅನನ್ಯ ನಿರ್ದೇಶಕರನ್ನು ಪಡೆಯಿತು. ಅವರುಗಳಲ್ಲಿ ಸುಮಿತ್ರಾಭಾವೆ-ಸುನಿಲ್ ಸುಕ್ತಂಕರ್ ಜೋಡಿ ನಿಜಕ್ಕೂ ಅತ್ಯಂತ ಮಹತ್ವದ್ದು. ಸುಮಾರು 20ಕ್ಕೂ ಹೆಚ್ಚು ಇರುವ ಇವರ ಸಿನಿಮಾಗಳು ಬರೀ ಮನರಂಜನೆಗಾಗಿಯಲ್ಲ, ಅದು ಸಂದೇಶ ನೀಡುವ ಕೆಲಸಕ್ಕಾಗಿ ಕೂಡಾ ಅಲ್ಲ, ಬದಲು ದೃಶ್ಯ, ದೃಶ್ಯಮಾಧ್ಯಮ ಹಾಗೂ ಇಮೇಜ್ ಗಳಿಂದ ಕಥಿಸುವ, ಅಭಿವ್ಯಕ್ತಿಸುವ, ತನ್ಮೂಲಕ ಸಾಮಾಜಿಕ ಜವಾಬ್ದಾರಿಕೆಯನ್ನು ತೋರುವ ಸಲುವಾಗಿ ಇದಲ್ಲದೇ ಇವರ ಹೆಚ್ಚಿನ ಸಿನಿಮಾಗಳನ್ನು ನಮ್ಮನ್ನು ಆಲೋಚನೆಗೆ ಹಚ್ಚುವಂತೆ ಮಾಡುತ್ತವೆ. ಸಿನಿಮಾ ಕೆಲವು ಜವಾಬ್ದಾರಿಗಳನ್ನು ಹೊಂದಿದೆ, ಸಾಮಾಜಿಕ ಋಣದಿಂದ ವಿಮುಕ್ತವಾಗಬೇಕು. ಸಿನಿಮಾ ಎನ್ನುವ ನೆಲೆ ಕೂಡಾ ಇವರ ಸಿನಿಮಾಗಳ ಪ್ರಮುಖ ಕಾಳಜಿ. ಸಾಮಾಜಿಕ ವಿದ್ಯಮಾನ, ಸಮಸ್ಯೆ, ಸಂಗತಿಗಳನ್ನು ಇವರು ಚರ್ಚೆಗೆ ಒಡ್ಡುವ ಕ್ರಮ ಕೂಡಾ ತುಂಬಾ ಮನೋಜ್ಞವಾದದ್ದು. ಇವರ ದೋಘಿ, ನಿತಳ್, ದ್ರೇವೈ, ಏಕ್ ಕಪ್ ಚ್ಯಾ, ವಾಸ್ತುಪುರುಷ್ ಮುಂತಾದ ಅನೇಕ ಸಿನಿಮಾಗಳು ಈ ಬಗೆಯವು. ಇವರ ಸದ್ಯದ ಸಿನಿಮಾ ‘ಅಸ್ತು’ ಕೂಡಾ ಅನೇಕ ಅನನ್ಯವಾದ ಅಂಶಗಳನ್ನು ತನ್ನದಾಗಿಸಿಕೊಂಡಿದೆ.

ಅಸ್ತು ಸಿನಿಮಾದ ಕಥಾವಸ್ತು ಒಂದು ನೆಲೆಯಲ್ಲಿ ಸಮಕಾಲೀನ, ಅದು ವೃದ್ಧಾಪ್ಯ ಮತ್ತು ವೃದ್ಧರ ಪಾಲನೆ. ಈ ವಿಷಯದ ಬಗ್ಗೆ ಜಾಗತಿಕವಾಗಿ ಮತ್ತು ಭಾರತದ ಅನೇಕ ಪ್ರದೇಶಗಳಲ್ಲಿ ವೈವಿಧ್ಯದ ಸಿನಿಮಾ ಬಂದಿವೆಯಾದರೂ ಕೂಡಾ ‘ಅಸ್ತು’ವಿನಲ್ಲಿ ಕಥೆಯನ್ನು, ಕಥನವಿನ್ಯಾಸವನ್ನು ಚಿತ್ರಗಳ ಮೂಲಕ ಹೇಳಿರುವ ಕ್ರಮ ಅತ್ಯಂತ ವಿಶಿಷ್ಠ. ಪ್ರೇಕ್ಷಕರೂ ಕೂಡಾ ಅಸ್ತು ಅಥವಾ ಆಗಲಿ ಆಗಬಹುದು ಎನ್ನುವ ರೀತಿಯ ಹೆಣೆಗೆ ಮತ್ತು ಪ್ರಸ್ತುತಿಯನ್ನು ಈ ಸಿನಿಮಾ ಹೊಂದಿದೆ. ವೃದ್ಧಾಪ್ಯ ಅಥವಾ ಏಜಿಂಗ್ ಅನ್ನುವ ಒಂದು, ಈ ಕಾಲಕ್ಕೆ ಸಂಕೀರ್ಣವೆನ್ನಬಹುದಾದ ಸಮಸ್ಯೆಯೊಂದರ, ಆ ರೀತಿಯ ಕಥೆಯೊಂದರ ಸತ್ಕರಿಸುವ ಕ್ರಮದಲ್ಲಿ ಈ ಸಿನಿಮಾ ಗೆದ್ದಿದೆ. ಪ್ರಗತಿಶೀಲ ಸಾಹಿತ್ಯದ ಹಾಗೆ ಸಮಸ್ಯೆಯನ್ನು ಮಂಗ ತನ್ನ ವ್ರಣವನ್ನು ತೋಡಿ ತೋಡಿ ಇನ್ನಷ್ಟು ದೊಡ್ಡದು ಮಾಡಿಕೊಳ್ಳುವ ರೀತಿಯ ಬಿಡಿಸಿಡುವ, ಅದರ ಮೂಲಕ ದಾರುಣ ದುರಂತವನ್ನು ಸಾರುವ ಬಗೆಯಲ್ಲಿಲ್ಲ ಈ ಸಿನಿಮಾ. ಬದಲಿಗೆ, ವಿಶ್ವವ್ಯಾಪಿಯಾದ, ಅದರಲ್ಲೂ ನಗರ ಕೇಂದ್ರಗಳಲ್ಲಿ ಅತ್ಯಂತ ಘೋರವಾಗಿರುವ ಈ ಸಮಸ್ಯೆಗೆ ಉತ್ತರರೂಪಿಯಾಗಿರುವ ರಾಮಬಾಣಧ ಔಷಧಿಯನ್ನು ಪ್ರತೀ ಸಮಾಜ ಸಹಜ, ಸರಳವಾದ ಹಳ್ಳಿಯ ಸಂಬಂಧಗಳ, ಹಳ್ಳಿಯ ಜನರು ಹೊಂದಿರುವ ಸಂಬಂಧಗಳ ಮೂಲಬೇರಿನ ಮಾದರಿಗಳಿಂದಾನೇ ಹುಡುಕಿಕೊಳ್ಳಬೇಕೆಂಬ ದೃಷ್ಟಿಯನ್ನೂ ಕೂಡಾ ಒಳಗೊಂಡಿರುವ ಕಾರಣ ಸಿನಿಮಾ ತುಂಬಾ ಚೂಪಾಗಿ ಸಾಗಿ ಮನಸ್ಸನ್ನು ಇರಿಯುತ್ತದೆ.

ಪೂನಾ ನಗರದ ಕಾಲೇಜೊಂದರ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಪ್ರೊ.ಶಾಸ್ತ್ರಿ ಅಲ್ಜೀಮರ್ಸ್ ಕಾಯಿಲೆಯಿಂದ ನರಳುತ್ತಾ, ಕೊನೆಗೆ ಅದರ ತೀವ್ರ ರೂಪವಾದ ಡೆಮೆನ್ಶಿಯಾಕ್ಕೆ ತುತ್ತಾಗುತ್ತಾರೆ. ಡೆಮೆನ್ಶಿಯಾ ಯಾವ ರೀತಿಯ ಸ್ಥಿತಿಯೆಂದರೆ ಸ್ವಂತ ಸಂಬಂಧಗಳನ್ನೇ ಮರೆಯುವ ಅಥವಾ ಗುರುತಿಸಲಾಗದಂತಹ ಸ್ಥಿತಿ. ವ್ಯಕ್ತಿಗೆ ಆತನ ‘ಸ್ವ’ (self) ವನ್ನೂ ಕೂಡಾ ಗುರುತಿಸಲಾಗದಷ್ಟು ನೆನಪು ಹೋಗಿರುತ್ತದೆ. ಅಕ್ಷರಶ: ಪ್ರೊ.ಶಾಸ್ತ್ರೀ ಮಗುವಿನ ರೀತಿಯಾಗುತ್ತಾರೆ. ಅಂತಹ ವಯೋವೃದ್ಧ ಮಗುವನ್ನು ಸಂಭಾಳಿಸುವುದು ಹೇಗೆ? ಎನ್ನುವ ಸಂಗತಿಯೇ ಸಿನಿಮಾದ ವಸ್ತು. ಪ್ರೊ. ಶಾಸ್ತ್ರಿ ನಿವೃತ್ತಿಯ ನಂತರ ತಮ್ಮ ಹಿರಿ ಮಗಳ ಮನೆ ಹತ್ತಿರವಿರುವ ತಮ್ಮದೇ ಮನೆಯಲ್ಲಿರುತ್ತಾರೆ. ಹೆಂಡತಿ ತೀರಿಕೊಂಡ ನಂತರ ಇನ್ನೂ ಕೂಡಾ ಆರೋಗ್ಯ ಹದಗೆಟ್ಟಿಸಿಕೊಳ್ಳುವ ಪ್ರೊ. ಚಕ್ರಪಾಣಿ ಶಾಸ್ತ್ರಿಯವರನ್ನು ನೋಡಿಕೊಳ್ಳುವುದಕ್ಕಾಗಿ ಹಳ್ಳಿಯಿಂದ ಒಬ್ಬ ಹುಡುಗನನ್ನು ಕರೆ ತಂದಿರುತ್ತಾರೆ. ಆ ಹುಡುಗ ಕೂಡಾ ಪೂನಾದ ಕಾಲೇಜೊಂದರಲ್ಲಿ ಓದುತ್ತಾ ಪ್ರೊ. ಚಕ್ರಪಾಣಿ ಶಾಸ್ತ್ರಿಯವರನ್ನು ಗಮನಿಸುತ್ತಿರುತ್ತಾನೆ. ಒಮ್ಮೆ ಶಾಸ್ತ್ರಿಯವರ ಹಿರಿಮಗಳು ಶಾಸ್ತ್ರಿಯವರನ್ನು ಅವರ ಮನೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ, ನಿಲ್ಲಿಸಿರುವ ಕಾರಿನಿಂದ ಶಾಸ್ತ್ರಿಯವರು, ರಸ್ತೆಯಲ್ಲಿ ಹರಿದು ಬಂದ ಆನೆಯನ್ನು ನೋಡಿ ಖುಷಿಗೊಂಡು ಆನೆ ಮತ್ತು ಮಾವುತ, ಆತನ ಮಗಳ ಜತೆಯಲ್ಲೇ ಹೋಗುತ್ತಾರೆ. ಶಾಸ್ತ್ರಿಗಳು ಆನೆಯನ್ನು ನೋಡಿ ಅದರ ಮೇಲೆ ಕುಳಿತುಕೊಳ್ಳಲು ಮನ ಮಾಡಿ ಕೇಳಿದಾಗ ಮಾವುತ ಆತನನ್ನು ಆನೆಯ ಮೇಲೆ ಕೂರಿಸಿ ಮಗಳೊಂದಿಗೆ ಆತನ ಜಾಗಕ್ಕೆ ಕರೆದೊಯ್ಯುತ್ತಾನೆ. ಇತ್ತ ಕಾರಿನಲ್ಲಿ ತಂದೆ ಇರದದ್ದನ್ನು ನೋಡಿ ಪ್ರೊಫೆಸರ್ ಹಿರಿಮಗಳು ಹತಾಶಳಾಗಿ ಗಂಡನಿಗೆ, ಸಂಬಂಧಿಕರಿಗೆ ತಿಳಿಸಿ, ಪೋಲಿಸ್ ಠಾಣೆಯಲ್ಲಿ ದೂರನ್ನೂ ಕೂಡಾ ನೀಡುತ್ತಾಳೆ.

ಇಡೀ ಮನೆ ತುಂಬಾ ಉದ್ವಿಗ್ನಗೊಳ್ಳದಿದ್ದರೂ ಕೂಡಾ ಹುಡುಕುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ವಾಸ್ತವವಾಗಿ ಪ್ರೊ. ಶಾಸ್ತ್ರಿ ಮಗುವಿನ ರೀತಿ, ದಾರಿ ಗೊತ್ತಿರದೇ, ವಿಳಾಸವನ್ನು ನೆನಪಿಗೆ ತಂದುಕೊಳ್ಳಲಾಗದೇ ಇರುವ ಮಗುವಿನ ಅಸಂಗತ ಸ್ಮರಣೆಯನ್ನು ಅನುಭವಿಸುತ್ತಿದ್ದ ಕಾರಣ, ಆ ಮಾವುತನಲ್ಲಿಯೇ, ಆತನ ನದೀ ತೀರದ ತಾತ್ಕಾಲಿಕ ಬಿಡಾರದಲ್ಲಿಯೇ ಅವನ ಮಗುವಿನೊಂದಿಗೆ ಆಟವಾಡುತ್ತಾ ಕಳೆಯುತ್ತಾರೆ. ಮಾವುತನ ಗಡಿನಾಡಿನ ಊರಿನಿಂದ ಬಂದ ಮರಾಠೀ-ಕನ್ನಡ ಉಭಯಭಾಷೀ ಪತ್ನಿ ಪ್ರೊಫೆಸರನ್ನು ಹೃದಯದಿಂದ ಉಪಚರಿಸುತ್ತಾಳೆ. ಕೊನೆಗೆ ಪೋಲಿಸರು ಮಾವುತನೊಂದಿಗಿನ ಪ್ರೊಫೆಸರನ್ನು ಪತ್ತೆ ಹಚ್ಚುತ್ತಾರೆ. ಪ್ರೊಫೆಸರ್ ಅನ್ನು ಆತನ ಹಿರಿಮಗಳು ತನ್ನ ಮನೆಗೆ ಕರೆದುಕೊಂಡು ಹೋಗುತ್ತಾಳೆ. ಹೋಗುವ ಮುಂಚೆ ಪ್ರೊಫೆಸರ್ ಕಾಲಿಗೆ ಬಿದ್ದು, ಇವರನ್ನು ಮಗೂ ತರ ನೋಡ್ಕೊಳ್ರಿ ಅವ್ವ ಎನ್ನುತ್ತಾಳೆ, ತನ್ಮೂಲಕ ಸಿನಿಮಾ ಮುಗಿಯುತ್ತದೆ. ಪ್ರೊಫೆಸರ್ ಕೂಡಾ ಅತ್ತು ಮಾವುತನ ಪತ್ನಿಗೆ ತಮ್ಮ ಕೃತಜ್ಞತೆಯ ಉಪಕೃತಿಯನ್ನು ಸಲ್ಲಿಸುವುದರೊಂದಿಗೆ.

ಅಸ್ತು ರೀತಿಯ ಅನೇಕ ಪ್ರಯತ್ನಗಳು ಹಾಗೂ ಅಲ್ಜೀಮರ್ಸ್ ಮತ್ತು ಅದರ ತೀವ್ರತೆಯಾದ ‘ಡೆಮೆನ್ಶಿಯಾ’ದ ವಸ್ತುವನ್ನು ಉಪಚರಿಸಿದ ಅನೇಕ ಸಿನಿಮಾಗಳುಂಟು. ‘ಜಹ್ನು ಬರುವಾ’ರ, ‘ಮೈನೇ ಗಾಂಧೀ ಕೋ ನಹೀ ಮಾರಾ’ ಕೂಡಾ ಅಂತಹ ಪ್ರಯತ್ನಗಳಲ್ಲೊಂದು. ಆದರೆ ಅದರ ಆಶಯ ಮಾತ್ರ ‘ಅಸ್ತು’ ಸಿನಿಮಾದ ಆಶಯಕ್ಕಿಂತ ತುಸು ಭಿನ್ನವಾದುದು. ಡೆಮೆನ್ಶಿಯಾದ ಜತೆ ಜತೆಯಲ್ಲೇ ಸಿನಿಮಾದ ಕೇಂದ್ರ ಆಶಯವಾದ. ‘ವಯೋವೃದ್ಧತ್ವ-ಪಾಲನೆಯ ಚರ್ಚೆಯನ್ನು ಅಸ್ತು ನಮ್ಮ ಮುಂದೆ ತೆರೆದಿಡುತ್ತದೆ. ಅಸ್ತು, ನಮ್ಮನ್ನು ಆವರಿಸುವುದೂ ಕೂಡಾ, ಸಿನಿಮಾ ಅಜೆಂಡಾ(ಕಾರ್ಯಸೂಚಿ)ದ ರೀತಿಯಲ್ಲಿ ಸಾಗದೇ ಇರುವ ಕಾರಣದಿಂದ ಕೂಡಾ. ಎಲ್ಲಿಯೂ ಕೂಡಾ ಭಾವೆ-ಸುಕ್ತಂಕರ್ ನೋಡಿ ಜನಗಳೇ ನಾವು ಭಾರತದ, ಅದರಲ್ಲೂ ನಗರಗಳ ವಿಶ್ವವ್ಯಾಪೀ ಲಕ್ಷಣವಾದ ‘ಏಜಿಂಗ್’ ಅನ್ನು ಅದರ ಸಂಕೀರ್ಣತೆಗಳನ್ನು, ಪರಿಹಾರ ಔಷಧಿಗಳನ್ನು ಚರ್ಚಿಸಲಿದ್ದೇವೆ ಎನ್ನುವ ಟಾಂ ಟಾಂ ಕೂಡಾ ಸಿನಿಮಾದಲ್ಲಿಲ್ಲದಿರುವುದೂ ಕೂಡಾ ಸಿನಿಮಾದ ಹೆಗ್ಗಳಿಕೆಯನ್ನು ಹೆಚ್ಚಿಸಿದೆ. ಒಂದು ರೀತಿಯಲ್ಲಿ ಜಾಗತೀಕೃತ ಮತ್ತು ಈಗಿನ ನವ ಉದಾರೀಕೃತ ಸಮಾಜದ ಮೌಲ್ಯಾಶಯಗಳು ಹೆಚ್ಚು ಪಲ್ಲಟಗೊಳ್ಳುವುದು ನಗರದಲ್ಲಿಯೇ ಎಂಬ ಗೃಹೀತದೊಂದಿಗೆ ಸಿನಿಮಾ ಸಾಗುತ್ತದೆ. ಇದು ಬರೀ ಸಾಮಾನ್ಯ ದೃಷ್ಟಿಯಲ್ಲ, ಬದಲು ಒಂದು ಸಮಾಜಶಾಸ್ತ್ರೀಯ ನೆಲೆ ಮತ್ತು ನಿಲುವು ಕೂಡಾ ಆಗಿದೆ. ಸಿನಿಮಾವಲ್ಲದೆ, ಒಂದು ಎನ್.ಜಿ.ಓ ಮೂಲಕ ತಳಮಟ್ಟದ ಸಾಮಾಜಿಕ ನೈಜತೆಯನ್ನು ಅನುಭವಿಸಿ ಅದನ್ನು ಸಿನಿಮಾದ ಮೂಲಕ ಪ್ರಕಟಪಡಿಸಿದ್ದಾರೆ ಎನ್ನುವುದೇ ಸಮಂಜಸವೆಂದು ನನ್ನ ಅಭಿಪ್ರಾಯ.

ಹಾಗೆ ನೋಡಿದರೆ ಈ ನಿರ್ದೇಶಕರು ಒಂದು ಪ್ರಾಕ್ಸಿಸ್ ವ್ಯಕ್ತಿಗಳು (ತತ್ವ ಮತ್ತು ಅನ್ವಯದ ಸಮನಾದ ಹದ, ಬೆರೆತ ಹೊಂದಿದಂತಹ ಸ್ಥಿತಿ). ಇಡೀ ಸಿನಿಮಾದಲ್ಲಿ ಹೇಳಬೇಕಾಗಿರುವುದನ್ನು ಅತ್ಯಂತ ಮೊನಚಾಗಿ ಇವರು ಪ್ರಕಟಪಡಿಸುತ್ತಾರೆ. ಸಂಬಂಧಗಳು, ಅವುಗಳ ಸ್ವರೂಪ ಲಕ್ಷಣಗಳು, ಅವುಗಳ ಗಟ್ಟಿತನ ಇತ್ಯಾದಿಗಳಿಗೆ ನಗರ ಹಳ್ಳಿಗಳೂ ಕೂಡಾ ಕಾರಣವೆಂಬ ಅಭಿಪ್ರಾಯವನ್ನೂ ಕೂಡಾ ಅಸ್ತು ಕಥಿಸುತ್ತದೆ. ಪೇಟೆ, ನಗರ, ಮಹಾನಗರಗಳು ಭೌತಿಕವಾಗಿ ಬೆಳೆಯುತ್ತಾ ಹೋಗುತ್ತವಾದರೂ ಕೂಡಾ, ಸಂಬಂಧಶೂನ್ಯತೆಯನ್ನು ಅತ್ಯಂತ ವೇಗವಾಗಿ ಪಡೆಯುತ್ತವೆ ಎನ್ನುವ ಚಿತ್ರಪಾಠಗಳೂ ಕೂಡಾ ಇಲ್ಲಿದೆ. ಪ್ರೊಫೆಸರ್ ಕಾರಿನಿಂದ ತಪ್ಪಿಸಿಕೊಂಡಾಗ ಪ್ರೊಫೆಸರ್ ಮಗಳು, ಅಳಿಯ, ಮೊಮ್ಮಕ್ಕಳು ಯಾರೂ ಕೂಡಾ ಉದ್ವಿಗ್ನಗೊಳ್ಳುವುದೇ ಇಲ್ಲ. ನಿರುದ್ವಿಗ್ನತೆಯೇ ಅಲ್ಲಿ ಢಾಳಾಗಿ ಕಾಣಿಸಿಕೊಳ್ಳುತ್ತೆ. ಪ್ರೊಫೆಸರ್ ಕಿರಿ ಮಗಳು ಕೂಡಾ ತಂದೆ ಕಾಣೆಯಾದ ಪ್ರಸಂಗ ಮತ್ತು ಅನುಭವವನ್ನು ಒಂದು ವೈಚಾರಿಕ ಚೌಕಟ್ಟಿನಲ್ಲಿಯೇ ವಿಶ್ಲೇಷಿಸುತ್ತಾಳೆ. ಪ್ರೊಫೆಸರ್ ಮೊಮ್ಮಗಳು ತನ್ನ ಶಾಲೆಯ ವಾರ್ಷಿಕೋತ್ಸವ ಮತ್ತು ಅಲ್ಲಿ ಆಕೆ ನಾಟಕದಲ್ಲಿ ಆಡಬೇಕಿದ್ದ ಪಾತ್ರದ ಬಗ್ಗೆಯೇ ಹೆಚ್ಚು ಜಾಗೃತಳು. ಪ್ರೊಫೆಸರ್ ಹಿರಿ ಮಗಳ ಎರಡನೇ ಮಗು ಸುಮಾರು 5-6 ವರ್ಷದ್ದಾಗಿದ್ದರೂ ಅಜ್ಜ ತಪ್ಪಿಸಿಕೊಂಡ ಬಗ್ಗೆ ವಿಷಾದವನ್ನೇ ಪ್ರಕಟಿಸದೇ ಟಿ.ವಿ. ನೋಡುವುದರಲ್ಲಿ ಮಗ್ನವಾಗುತ್ತದೆ. ಸಂಬಂಧದ ಪಾಠವನ್ನು ಹೇಳಬೇಕಾದ ಅಮ್ಮ, ಅಪ್ಪ ಮತ್ತು ಮನೆಯ ಸದಸ್ಯರು, ಮಕ್ಕಳಿಗೆ ಅಥವಾ ಈಗಿನ ತಲೆಮಾರಿಗೆ ಬರೀ ಭವಿಷ್ಯ (ಕೆರಿಯರ್), ವಾಸ್ತವವಾದ, ವೈಚಾರಿಕ ಅಥವಾ ಇನ್ನೂ ಮುಂದೆ ಹೋಗಿ ನ್ಯೂಕ್ಲಿಯರ್ ಕುಟುಂಬದ ಒಂದು ವಿಕ್ಷಿಪ್ತ ಮೌಲ್ಯವಾದ ವ್ಯಕ್ತಿವಾದಿತನವನ್ನು ಮಾತ್ರ ಕಲಿಸಿಕೊಟ್ಟಿದ್ದರ ಪರಿಣಾಮವೋ ಎಂಬಂತೆ ಆ ಇಡೀ ಮನೆ ಮತ್ತು ಸದಸ್ಯರ ಪ್ರತಿಕ್ರಿಯೆ, ಪ್ರತಿಮಾತ್ಮಕವಾಗಿ ಸಾಗಿದೆ. ಸಿನಿಮಾ ಒಂದು ರೀತಿ ಶುಷ್ಕವಾದ ನಾಗರೀಕತೆ, ನಗರದ ವ್ಯವಸ್ಥೆ ಸಂಬಂಧವೆಂಬ ಕುಸುಮ ಮೃದುತ್ವವಿಲ್ಲದಿದ್ದರೆ ಹೇಗೆ ಸೊರಗುತ್ತದೆ ಎಂಬುದರ ನಿದರ್ಶನ ಕೂಡಾ ಹೌದು.

ಪೇಟೆ, ನಗರ, ಮಹಾನಗರಗಳು ಭೌತಿಕವಾಗಿ ಬೆಳೆಯುತ್ತಾ ಹೋಗುತ್ತವಾದರೂ ಕೂಡಾ, ಸಂಬಂಧಶೂನ್ಯತೆಯನ್ನು ಅತ್ಯಂತ ವೇಗವಾಗಿ ಪಡೆಯುತ್ತವೆ ಎನ್ನುವ ಚಿತ್ರಪಾಠಗಳೂ ಕೂಡಾ ಇಲ್ಲಿದೆ. ಪ್ರೊಫೆಸರ್ ಕಾರಿನಿಂದ ತಪ್ಪಿಸಿಕೊಂಡಾಗ ಪ್ರೊಫೆಸರ್ ಮಗಳು, ಅಳಿಯ, ಮೊಮ್ಮಕ್ಕಳು ಯಾರೂ ಕೂಡಾ ಉದ್ವಿಗ್ನಗೊಳ್ಳುವುದೇ ಇಲ್ಲ.

ಅಸ್ತು, ಸಮಕಾಲೀನ ಕೌಟುಂಬಿಕ ಮೌಲ್ಯಗಳನ್ನು ಸಾಕಷ್ಟು ಜಿಜ್ಞಾಸೆಗೊಳಪಡಿಸುತ್ತದೆ. ನಿರುದ್ವಿಗ್ನತೆಯೇ ಒಂದು ಶ್ರೇಷ್ಠ ಮೌಲ್ಯ ಎನ್ನುವ ಸಂಗತಿಯನ್ನು ಅಣಕಿಸುತ್ತದೆ. ಅಂತಹ ಶಾಂತತೆ, ನಿರ್ವಹಣಾ ಕ್ರಮ ತುಂಬಾ ಅಸಹಜವಾದುದೆಂದೂ ಕೂಡಾ ಸಾರುತ್ತದೆ. ಹಳ್ಳಿಯಲ್ಲಿ ನಮ್ಮ ಮನೆಯ ಒಂದು ದನ ಸಂಜೆ ಆರರ ಒಳಗೆ ಮನೆಯ ಹಟ್ಟಿಗೆ ಗುಡ್ಡದಿಂದ ವಾಪಾಸ್ ಬರದಿದ್ದರೆ ನಾನು, ನನ್ನಮ್ಮ ದುಗುಡಪಡುತ್ತೇವೆ, ಆದರೆ ಮಾನವ ಸಮುದಾಯದ ಜೀವಂತ ವ್ಯಕ್ತ ಸಂವೇದನೆಗಳುಳ್ಳ ಮಗುವೇ ಆಗಿರುವ ಪ್ರೊಫೆಸರ್ ಒಬ್ಬರು ತಪ್ಪಿಸಿಕೊಂಡರೂ ಯಾರೂ ಕೂಡಾ ದುಗುಡ ದುಮ್ಮಾನವನ್ನು ಅನುಭವಿಸುವುದೇ ಇಲ್ಲ, ಬದಲು ಒಣ, ತೋರಿಕೆಯ ಶುಷ್ಕವಾದ ಶಾಂತತೆ, ಕೀಪ್ ಕೂಲ್ ಕೀಪ್ ಕೂಲ್ ಎನ್ನುವ ಕೃತಕ ಮುಖಭಾವವನ್ನು ಪ್ರಕಟಿಸುತ್ತಾರೆ. ಪ್ರೊಫೆಸರ್ ತಪ್ಪಿಸಿಕೊಂಡು ಎರಡು ದಿನಗಳಾದರೂ ಕೂಡಾ ತುಂಬಾ ಮುಂದುವರಿದು ವೈಯಕ್ತಿಕವಾದ ತೀವ್ರತೆ ಮತ್ತು ಸಂಬಂಧದ ಶೋಧದ ತುಡಿತದಿಂದ ವೃದ್ಧ ತಂದೆಯನ್ನು ಹುಡುಕುವ ಕೆಲಸವನ್ನು ಮಾಡುವುದಿಲ್ಲ. ಇಡೀ ಸಿನಿಮಾದಲ್ಲಿ ಎಲ್ಲಿಯೂ ಕೂಡಾ ಪ್ರೊಫೆಸರ್ ಹಿರಿ ಮಗಳಾಗಲೀ, ಕಿರಿ ಮಗಳಾಗಲೀ, ಅಳಿಯ, ಮೊಮ್ಮಗ, ಮೊಮ್ಮಗಳಾಗಲೀ ಕಣ್ಣೀರನ್ನು ಸುರಿಸುವುದಿಲ್ಲ. ಅದು ಬುದ್ಧ ಹೇಳಿರುವ ಹಾಗೆ ಯೋಗ, ಸಂಯೋಗವೂ ಅಲ್ಲ, ಕೃಷ್ಣನ ಯೋಗ ಮಾರ್ಗವೂ ಅಲ್ಲ, ಬದಲಿಗೆ ನಗರವೆನ್ನುವ, ನಾಗರೀಕತೆಯೆನ್ನುವ ಸಂಬಂಧ ಶೂನ್ಯ ಜಗತ್ತು ಅಥವಾ ಯುರೋಪ್-ಅಮೇರಿಕಾದಂತಹ ನಾಗರೀಕತೆಯ ಪಿತೃಭೂಮಿಯಿಂದ ಪಡೆದ ಒಣ ಮೌಲ್ಯವೇ ಹೊರತು ನೈಜವಾದ, ಸಹಜತೆಯಲ್ಲದ ಮೌಲ್ಯವೆಂಬುದು ಈ ಸಿನಿಮಾ ವ್ಯಕ್ತಪಡಿಸುವ ಒಂದು ವಿಷಯ ಕೂಡಾ ಹೌದು.

ಮರುಕವೆಂಬುದೇ ಕಾಳಜಿಯನ್ನು, ಉದ್ವಿಗ್ನತೆಯನ್ನು ತಳಮಳವನ್ನು ಸೃಷ್ಟಿಸಿ ಪಾಲನೆ ಎಂಬ ಸಂಗತಿಯನ್ನು ಸೃಷ್ಟಿಸುತ್ತದೆ, ಮತ್ತಿದು ತಾಯಿಯೊಂದಿಗೆ ಸಂವಾದಿಯಾಗುತ್ತದೆ ಎನ್ನುವ ನಿಹಿತವನ್ನೂ ಕೂಡಾ ಅಸ್ತು ಪ್ರಕಟಪಡಿಸುತ್ತದೆ. ಕೈಗಾರಿಕೀಕರಣದ ಫಲಶ್ರುತಿಯಿಂದ ಹುಟ್ಟಿದ ನಾಗರೀಕತೆ ಅದು ಯುರೋಪ್ ಇರಲಿ ಭಾರತವಿರಲಿ ಹೇಗೆ ಮಾತೃತ್ವದಿಂದ, ಸ್ತ್ರೀಮೂಲೀಯ ನೆಲೆಯಿಂದ ವಿಮುಖವಾಗುತ್ತದೆ ಎನ್ನುವ ರೀತಿಯ ತಾತ್ವಿಕ ಆಶಯವನ್ನೂ ಕೂಡಾ ನಾವು ಅಸ್ತು ಮೂಲಕ ಗಮನಿಸಬಹುದು. ಈ ನಗರ, ನಾಗರೀಕತೆ, ನಗರ ಕೇಂದ್ರಿತ ವ್ಯವಸ್ಥೆಗಳ ಮೂಲ ಕೇಂದ್ರವೇ ಪುರುಷ ಕೇಂದ್ರಿತ (ಮಸ್ಕುಲಿನ್) ಅಥವಾ ಅತಿ ಪೌರುಷತೆಯ ಗರ್ಭದಿಂದ (ಹೈಪರ್ ಮ್ಯಾಸ್ಕುಲಿನಿಟಿ) ಹುಟ್ಟಿದ್ದೇ ಹೊರತು ಸ್ತ್ರೀತ್ವದಿಂದಲ್ಲ, ಅಂತಹ ಅತಿ ಪೌರುಷತೆ ಲಿಂಗ ವಿವಕ್ಷೆಯನ್ನು ಮೀರಿ ಮಹಿಳೆಯನ್ನು ಸೇರಿದಂತೆ ಇಡೀ ನಗರಕೇಂದ್ರದ ಕುಟುಂಬವನ್ನೇ ಆಕ್ರಮಿಸುತ್ತದೆ ಎನ್ನುವ ತರ್ಕಗಳನ್ನೂ ಕೂಡಾ ಸೂಕ್ಷ್ಮವಾಗಿ ಚರ್ಚಿಸುತ್ತದೆ. ಹಾಗಿದ್ದರೆ ಇದಕ್ಕೆ ಪರಿಹಾರವೇನು? ಎನ್ನುವ ಸಂದರ್ಭದಲ್ಲಿ ಅಸ್ತು ಸಿನಿಮಾ ಹಳ್ಳಿಯ, ಜನಸಾಮಾನ್ಯರ ಬದುಕು ಮತ್ತು ಬದುಕಿನ ಕ್ರಮದ ಸುತ್ತ ದೃಷ್ಟಿ ಹರಿಸುತ್ತದೆ. ಇಲ್ಲಿ ಕೂಡಾ ನಿರ್ದೇಶಕರುಗಳು ಸಾಮಾನ್ಯೀಕರಣ ಅಥವಾ ಮೌಲ್ಯಸಿಂಧುತ್ವ (ಜನರಲೈಶೇಷನ್)ವನ್ನು ಕೈಗೊಳ್ಳುವುದಿಲ್ಲ, ಬದಲು ಆಯ್ಕೆಯ, ಚರ್ಚೆಯ, ಅನುಭವದ ಆಧಾರದ ಮೇಲೆ ಸ್ವೀಕರಣಯೋಗ್ಯವೆನ್ನಬಹುದಾದ ದಾರಿಯ ಹತ್ತಿರ ನಮ್ಮನ್ನು ತಂದು ನಿಲ್ಲಿಸುತ್ತದೆ. ನಮಗೆ ಅತ್ಯಂತ ಸರಳವಾಗಿ ಕೂಡಾ ಇದು ಗೋಚರವಾಗಬಹುದು. ಅದೇ ರೀತಿಯಲ್ಲಿ ತಾತ್ವಿಕವಾಗಿ ಹಳ್ಳಿಗಳಿಗೆ ಹಿಂದಿರುಗಿ ಅಥವಾ ಯಾವುದೇ ಒಂದು ಸಮಾಜ ತನ್ನ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುವ ಅನ್ವಯದ ನೆಲೆಯಲ್ಲಿಯೂ ಕೂಡಾ ‘ಅಸ್ತು’ವನ್ನು ವೀಕ್ಷಿಸಬಹುದು.

ಅಸ್ತುವಿನಲ್ಲಿ, ‘ವೃದ್ಧರನ್ನು ಮಗುವಿನ ಹಾಗೆ ನೋಡಿಕೊಳ್ಳಬೇಕು’ ಎನ್ನುವ ಸಂಗತಿ ಟೈಟಲ್ ಕಾರ್ಡ್ನಂತೆ ಬರೆಯದಿದ್ದರೂ ಕೂಡಾ ವ್ಯಕ್ತವಾಗುತ್ತದೆ. ಮಾವುತನ ಪತ್ನಿ ಕೂಡಾ ಮಾವುತನಿಗೆ ಮತ್ತು ಪ್ರೊಫೆಸರ್ ಹಿರಿಯ ಮಗಳಿಗೆ ಹೇಳುವುದೂ ಕೂಡಾ ಇದನ್ನೇ ಆಗಿದೆ. ಒಂದು ರೀತಿಯಲ್ಲಿ ಸ್ತ್ರೀತ್ವ, ತಾಯಿತನವೇ ಇಡೀ ಜಗತ್ತಿನ ಸಮಸ್ಯೆಗೆ ರಾಮಬಾಣವೆನ್ನುವ ಇಂಗಿತ ಕೂಡಾ ವ್ಯಕ್ತವಾಗುತ್ತದೆ. ಭಾರತದ ಅತ್ಯಂತ ಶ್ರೇಷ್ಠ ನಿರ್ದೇಶಕರಲ್ಲೊಬ್ಬರಾದ ಜಾನ್ ಅಬ್ರಹಾಂ, ತಾಯಿಯ ಬಗ್ಗೆ, ‘ಅಮ್ಮ ಅ ರಿಯಲ್’ ಎನ್ನುವ ಸಿನಿಮಾ ಮಾಡಿದರು. ಜಾನ್ ಅಬ್ರಹಾಂ ಪಾರ್ಟಿ ಲೈನ್ ಪರಂಪರೆಯ ನಿಷ್ಠುರ, ವೈಚಾರಿಕ ಕಮ್ಯುನಿಸ್ಟ್ ನಿರ್ದೇಶಕ. ಆದರೆ ಅವರಿಗೆ ಕೂಡಾ ಅಮ್ಮ ಅಂದರೆ ಸ್ತ್ರೀತ್ವ ಮತ್ತು ಪಾಲನೆ, ಅವರೇ ಹೇಳುವ ಹಾಗೆ ಈ ಎರಡು ಗುಣಗಳು ಜಗತ್ತಿನ ಎಲ್ಲಾ ರೀತಿಯ ರೋಗಗಳನ್ನು ಪರಿಹರಿಸುವ ಶಕ್ತಿಯನ್ನು ಹೊಂದಿದೆ. ತನ್ನ ಆತ್ಮಕಥೆಯಲ್ಲಿ ಜಾನ್ ಅಬ್ರಹಾಂ ಹೀಗೆ ಹೇಳುತ್ತಾರೆ, “ತಾಯಿ ಎಂಬ ಪರಿಕಲ್ಪನೆ ಭಾರತದಲ್ಲಿರುವ ಬಗೆಯಲ್ಲಿ ಹೊರಗಿನ ಯಾವ ದೇಶಗಳಲ್ಲೂ ಇಲ್ಲ. ನಮ್ಮ ಅಮ್ಮನ ಪರಿಕಲ್ಪನೆ, ಅದು ಶಕ್ತಿಯ ಮೂಲ. ಸರಳವಾಗಿ ಹೇಳುವುದಾದರೆ ಪುರುಷನ ನಿಜವಾದ ಮೂಲ ಸ್ತ್ರೀ ಅಥವಾ ತಾಯಿ. ಯಾವುದೇ ಸಿದ್ಧಾಂತ ಅಥವಾ ಯಾವುದೇ ತಾತ್ವಿಕತೆಯನ್ನು ಬಳಸಿ ಯೋಚಿಸಿದರೂ ಮನುಕುಲದ ಮೂಲೋತ್ಪಾಟನೆ ಎಂದರೆ ಅದು ಸ್ತ್ರೀ ಅಥವಾ ಶಕ್ತಿಯ ಮೂಲೋತ್ಪಾಟನೆ.” ಕೇವಲ ಭೌತಿಕತೆಯನ್ನು ಮಾತೃ ಆಧಾರವಾಗಿಟ್ಟು ಆಲೋಚಿಸುವ ಆಧುನಿಕ, ನಗರವೆನ್ನಬಹುದಾದ ಜಗತ್ತಿಗೆ ಈ ವಾಸ್ತವ ಮರೆತು ಹೋಗಿಬಿಟ್ಟಿದೆ.” ಹೀಗೆ ಮರೆವನ್ನು ನಿವಾರಿಸುವ ಪ್ರಯತ್ನದ ರೂಪವಾಗಿಯೂ ಬಹಳ ಮುಖ್ಯವಾದ ಸಿನಿಮಾ ‘ಅಸ್ತು’. ಅಸ್ತು ವೃದ್ಧಾಪ್ಯವನ್ನು, ವೃದ್ಧಾಪ್ಯ ಸಂಬಂಧಿತ ಭೌತಿಕ-ಮಾನಸಿಕ ರುಜಿನದ ಮೂಲವನ್ನು ನಗರದಲ್ಲಿಯೇ ಗುರುತಿಸಿ, ನಗರ ಸ್ತ್ರೀತ್ವದಿಂದ ವಿಮುಖವಾಗಿದ್ದೇ ಇದಕ್ಕೆ ಕಾರಣವೆಂಬ ರೋಗ ನಿಧಾನತೆ (ಪೆಥಾಲಜಿ)ಯನ್ನನುಸರಿಸುತ್ತದೆ. ಈ ಸಹಜ, ಸಾವಯವ ನೆಲೆಯ ದೃಶ್ಯ ಶಿಲ್ಪದ ಕಾರಣದಿಂದಾನೇ ಅಸ್ತು, ನನ್ನಂತಹ ಸಿನಿಮಾ ಇಚ್ಛುಕನಿಗೆ ಅತ್ಯಂತ ಮುಖ್ಯವಾಗುತ್ತದೆ.


ಸಿನಿಮಾದಲ್ಲಿ, ಸುಕ್ತಂಕರ್-ಭಾವೆಯವರು ಹಳ್ಳಿಯ ಮಾತೃತ್ವದ ಸೆಲೆಯನ್ನು ತೋರಿಸಲು ಬಳಸಿರುವ ತಾಯಿ, ಉಭಯಭಾಷಿ. ಇದು ಮೂರು ಸಂಗತಿಗಳನ್ನು ಮನಗಾಣಿಸುತ್ತದೆ, ಒಂದು; ಅಂತಹ ತಾಯಿ ಭಾರತದ ಎಲ್ಲಾ ಕಡೆಗಳಲ್ಲಿಯೂ ವ್ಯಾಪ್ತವಾಗಿರುವ ವಿಶ್ವಾತ್ಮಕ ಮೌಲ್ಯ ವ್ಯವಸ್ಥೆಯ ದ್ಯೋತಕ ಮತ್ತು ಬರೀ ಮರಾಠೀ ಕಾಲದೇಶದ ಉತ್ಪನ್ನ ಮಾತ್ರವಲ್ಲವೆಂಬುದು, ಎರಡು; ಕನ್ನಡ ಮತ್ತು ಮರಾಠೀ ಉಭಯ ಭಾಷೆಗಳ ಜನರ ಶಕ್ತರಾಜಕಾರಣ ಅಥವಾ ಹೆಚ್. ಎಸ್. ಶಿವಪ್ರಕಾಶ್ ಹೇಳುವ ಹಾಗೆ ಭಾಷಾ ಪರಮೈಕ್ಯವಾದ (ಲಿಂಗ್ವಿಸ್ಟಿಕ್ ಚೌವಿನಿಸಮ್) ವೆನ್ನುವುದ ಬರೀ ಕೃತಕ, ಅದು ಕನ್ನಡ ಹೋರಾಟಗಾರರು ಮತ್ತು ನವನಿರ್ಮಾಣ ಸೇನೆಯಂತಹ ಜನರಿಗೆ ಒದಗಿ ಬಂದ ಮಾರುಕಟ್ಟೆ ಮತ್ತು ಅವಿವೇಕದ ದ್ಯೋತಕ ಮತ್ತು ಅಸಹಜವೆಂಬ ಸತ್ಯ, ಮೂರು; ಇಂತಹ ಆಧುನಿಕತೆ ಮೂಡಿದ, ಉಗ್ರರಾಷ್ಟ್ರೀಯತೆ, ಉಪರಾಷ್ಟ್ರೀಯತೆ ಮತ್ತು ಭಾಷಾರಾಷ್ಟ್ರೀಯತೆಗಳಂತಹ ವ್ಯಾಧಿಗಳ ಶಮನ ಕೂಡಾ ಮಾತೃ ಮೂಲೀಯತೆಯ ಮೂಲಕ ಆಗಬೇಕೇ ಹೊರತು ಉಗ್ರರಾಷ್ಟ್ರೀಯತೆಗಳ ಅತಿ ಪೌರುಷತೆ(ಹೈಪರ್ ಮಸ್ಕುಲಿನಿಟಿ)ಯಿಂದಲ್ಲ ಎನ್ನುವುದು.

ಅಸ್ತು, ಆಗಲಿ, ಹಾಗೇ ಆಗಲಿ ಸಮಕಾಲೀನ ಸಿನಿಮಾ ಸಂದರ್ಭದಲ್ಲಿ ಒಂದು ಒಳ್ಳೆಯ ಪ್ರಯತ್ನ ಅಸ್ತು, ಪ್ರೇಕ್ಷಕನನ್ನೂ ಚರ್ಚೆಯಲ್ಲಿ ಒಳಗೊಂಡು ಅಸ್ತು ಎನ್ನುವ ಹಾಗೆ ಮೂಡುತ್ತದೆ, ಪ್ರೇಕ್ಷಕ ಕೂಡಾ ವೃದ್ಧರನ್ನು ಮಗುವಿನ ಹಾಗೆ ನೋಡಿಕೊಳ್ಳೋಣ, ಅಸ್ತು, ಆಗಲಿ, ಹಾಗೆ ಆಗಲಿ ಎನ್ನುವ ಅಪ್ರಜ್ಞಾಪೂರ್ವಕ ಬೀಜವನ್ನು ಬಿತ್ತುತ್ತದೆ.