ಮೀನಾಕ್ಷಮ್ಮನಿಗೆ ಕತೆ ಕಾದಂಬರಿ ಮಾತ್ರವಲ್ಲ, ಸಿನೆಮಾವೆಂದರೂ ಪಂಚಪ್ರಾಣವಿತ್ತು. ಹೊಸ ಸಿನೆಮಾ ಬಂತೆಂದರೆ ಹೇಗಾದರೂ ಬಿಡುವು ಮಾಡಿಕೊಂಡು ಸೆಕೆಂಡ್ ಶೋಗೆ ಎದ್ದೇ ಬಿಡುವರು ಅವರು. ನೋಡುವುದೆಂದರೆ ಬರಿದೆ ನೋಡುವುದೆ? ಮರುದಿನ ಹೊಲಿಗೆ ಚಾವಡಿಯಲ್ಲಿ ಅದರ ಕತೆ, ವಿಮರ್ಶೆ ಎಲ್ಲ ಬಂದವರ ಜೊತೆ ಆಗಬೇಕು. ಅದು ಖಂಡಿತವಾಗಿಯೂ ನಡೆದದ್ದೇ ಅಂತ ನಾವು ಮಕ್ಕಳು ಅಂದುಕೊಳ್ಳಬೇಕು, ಹಾಗೆ. ಕುಂದಾಪುರ ಆಗ ಮದರಾಸು ಪ್ರಾಂತ್ಯಕ್ಕೆ ಸೇರಿತ್ತಾಗಿ ಟಾಕೀಸಿನಲ್ಲಿ ಬರೀ ತಮಿಳು ಸಿನೆಮಾ ಬರುತಿದ್ದೇ ಹೆಚ್ಚು. ಹಾಗೆ ಬಂದ ತಮಿಳು ಸಿನೆಮಾಗಳಲ್ಲೊಂದು ಮಿಸ್ಸಮ್ಮ (ಮಿಸ್ ಮೇರಿ). ಆರ್ ಗಣೇಶನ್ ಮತ್ತು ಸಾವಿತ್ರಿ ತಾರಾಗಣ. ಅದರ ತಮಿಳು ಮಾತ್ರವಲ್ಲ ತೆಲುಗು ಅವತರಣಿಕೆಯನ್ನೂ ಅವರು ಮಾತ್ರವಲ್ಲ ನಾವೆಲ್ಲರೂ ಹುಚ್ಚುಕಟ್ಟಿ ನೋಡಿ ಬಂದಿದ್ದೆವು.

ಸುಮಾರು ದಿನ ಆ ಹೊಲಿಗೆಯ ಚಾವಡಿಯಲ್ಲಿ ಮಿಸ್ಸಮ್ಮನದೇ ಕತೆ. ಆರ್ ಗಣೇಶನ್ ಕಡೆಗೆ ಹಾಗೆ ಹೇಳಿದ, ಸಾವಿತ್ರಿ ಹೀಗೆ ಹೇಳಿದಳು ಅಂತ ಅವರೆಲ್ಲ ಮನೆ ಮಂದಿಯ ಹಾಗೆ. ಅವರ ಪಾತ್ರಗಳ ಹೆಸರಿನ ಹಂಗೇ ಇಲ್ಲದೆ. ‘ರಾವೋಯಿ ಚಂದಮಾಮಾ, ರಾವಂತ ಗಾನ ವಿನುಮಾ. . .’ ಅಂತೇನೋ ಒಂದು ಪದ್ಯ, ಬಾಯಿ ತೆರೆದರೆ ಅದೇ ನಮಗೆ ಆಗ. ಮುನಿಸಿಕೊಂಡ ಅವರಿಬ್ಬರೂ ರಾತ್ರಿಯ ಚಂದಮಾಮನ ಬಳಿ ಹಾಡುತ್ತ ತಂತಮ್ಮ ದೂರು ಹೇಳಿಕೊಂಡದ್ದೂ ಆ ಉರುಟಾನುರುಟು ಚಂದ್ರಮ ಅದನ್ನು ಆಲಿಸುತ್ತ ನಿಧಾನವಾಗಿ ಚಲಿಸುತಿದ್ದದ್ದೂ ಎಲ್ಲ ನಿಜವಾಗಿಯೂ ಈ ಪ್ರಪಂಚದಲ್ಲಿ ಜೀವಂತ ನಡೆದವು ಎಂದೇ! ‘ಮಾವನ ಮಗಳು’ ಚಿತ್ರ ಬಂದಾಗಂತೂ! ನಮ್ಮನೆಯ ಎದುರಿನ ಟಾಕೀಸಿಗೇ ಬಂದಿದೆ. ನನ್ನ ಬಾಣಂತಿ ಅಕ್ಕ, ಹಸುಮಗುವನ್ನು ನೋಡಿ ಜುಬಲಾ ಕೊಟ್ಟು ‘ಎರಡು ಮಾತಾಡಿ ಹೋಗುವ ಅಂತ’ ಬಂದ ಮೀನಾಕ್ಷಮ್ಮ ಹೇಳಿದ ಕತೆ ಕೇಳಿ ತಾನು ಆ ಸಿನೆಮಾ ನೋಡಲೇಬೇಕೆಂದು ಹೊರಟೇ ಬಿಟ್ಟಳು.

ಇನ್ನೂ ಒಂದು ತಿಂಗಳಷ್ಟೇ, ದೇವಸ್ಥಾನಕ್ಕೆ ಕೂಡ ಇನ್ನೂ ಹೋಗಿಲ್ಲ. ದೇವಸ್ಥಾನಕ್ಕೆ ಮೊದಲೊಮ್ಮೆ ಹೋದ ಮೇಲೆ ಎಲ್ಲಿಗೆ ಹೋಗಲೂ ಬಾಣಂತಿಗೆ ಪರವಾನಗಿ ಉಂಟು. ಆದರೆ ಆಕೆ ಕೇಳಬೇಕಲ್ಲ. ಪಾರ್ತಕ್ಕ, ಅಮ್ಮ ಯಾರು ಹೇಳಿದರೂ ಊಹೂಂ. ಕೇಳದೆ ಮ್ಯಾಟಿನಿ ಶೋಗೆ ನಡೆದದ್ದೇ. ಹೇಗೂ ಮನೆಯೆದುರೇ ಟಾಕೀಸು, ಇಂಟರ್‍ವಲ್‌ನಲ್ಲಿ ಬಂದು ಮಗುವಿಗೆ ಹಾಲೂಡಿ ಹೋಗುತ್ತೇನೆ ಅಂತ. ಸಾಲು ಸಾಲು ಚಿಕ್ಕಮ್ಮಂದಿರು ನಾವು, ಮಗು ಅಳದಂತೆ ನಾನು ತಾನು ಅಂತ ಜಗಳಾಡಿ ತೊಟ್ಟಿಲು ತೂಗುವ ಭರದಲ್ಲಿ ಎಷ್ಟು ಹಾಡುಗಳನ್ನು ಖಾಲಿಮಾಡಿದೆವೋ.
ಆ ಸಿನೆಮಾದಲ್ಲಿ ಪಾಪ, ಆರ್ ಗಣೇಶನ್‌ಗೆ ತಲೆಗೆ ದೊಣ್ಣೆಯೇಟು ಹೇಗೆ ಬಿದ್ದಿತ್ತು. ಬಿದ್ದದ್ದೇ ಆತ ಪೆದ್ದನಾದ. ಆಗ ಒಬ್ಬ ಸಾಧು ಒಂದು ತಾಯತವನ್ನು ಅವನಿಗೆ ಕೊಟ್ಟು ಅದು ಇರುವವರೆಗೂ ಅವನನ್ನು ಸೋಲಿಸಲು ಯಾರಿಗೂ ಸಾದ್ಯವಿಲ್ಲವೆನ್ನುವ. ನಮಗೂ ಹಾಗೆ ಒಂದು ತಾಯತ ಸಿಕ್ಕಿದ್ದರೆ… ತಾಯತದ ಬಲದಿಂದ ಆರ್. ಗಣೇಶನ್ ಗೆಲ್ಲುವುದು, ಉದುರಿಹೋದಾಗ ಸೋಲುವುದು, ಆಗ ಅತನನ್ನು ಪ್ರೀತಿಸುವ ಸಾವಿತ್ರಿ (ನಮಗವಳು ಪಾತ್ರವಲ್ಲ. ಸಾವಿತ್ರಿಯೇ.) ಅದನ್ನು ಹುಡುಕಿ ಕೊಟ್ಟು, ಶತ್ರುವಿಗೆ ಆತ ಒದೆ ಕೊಟ್ಟು ಹಾಗೂ ತಾನೂ ಇನ್ನಷ್ಟು ಮತ್ತಷ್ಟು ಒದೆ ಕೊಡು ಎಂಬಂತೆ ಖಾಲಿ ಕೈ ಬೀಸಿ ಗಾಳಿಗೆ ಗುದ್ದುವುದು… ಅಬ್ಬಾ, ಕೊನೆಗೆ ಮೊದಲು ಪೆಟ್ಟು ಬಿದ್ದಲ್ಲೇ ಮತ್ತೊಂದು ಪೆಟ್ಟು ಬಿದ್ದು ಅವನು ಮುಂಚಿನಂತಾಗಿ ಅವಳನ್ನು ಮದುವೆಯಾಗುವವರೆಗೂ ಉಸಿರು ಆಡಲು ನಮಗೆ ಪುರುಸೋತಿದ್ದರೆ!

ಇಂಥ ಕಣ್ಣುಕಟ್ಟು ಕಥೆಗಳೆಲ್ಲ ಉದಯವಾಗುತ್ತಿದ್ದ ಕಾಲವಾಗಿತ್ತು ಅದು. ಜಾನಪದದಿಂದ ಪ್ರಭಾವಿತವಾದ ಸಿನಿ ನಾಟಕಗಳು. ಅಂದು ಸುರುವಾಗಿದ್ದು ಇನ್ನೂ ನಿಲ್ಲದೆ ನಾನಾ ರೂಪಗಳಲ್ಲಿ ಬರುತ್ತಲೇ ಇವೆಯಲ್ಲ, ಏನೆನ್ನಲಿ!