ನಮ್ಮ ಮನೆಯ ಆಚೆ ಇರುವ ಮನೆಯ ಹಿತ್ತಲಿಗೆ ತಾಗಿ ಒಂದು ಹಾಯ್ಗುಳಿ ದೈವದ ಸ್ಥಾನವಿತ್ತು. ಮುರಕಲ್ಲಿನ ಒಂದು ಎತ್ತರ ದಿಡ್ಡು, ಅದರ ಮೇಲೆ ಒಂದು ಒಂಟಿ ಮುರಕಲ್ಲು. ಈ ಒಂಟಿ ಕಲ್ಲು ಹಾಯ್ಗುಳಿಯ ಸ್ಥಾನ, ಪೂಜೆ ನೈವೇದ್ಯ ಬಲಿ ಆರತಿ ಎಲ್ಲ ಸಲ್ಲುವುದು ಅದಕ್ಕೇ.

ದೈವಗಳಲ್ಲಿಯೂ ಮೇಲು ಕೀಳು ಅಂತಿದೆ ಗೊತ್ತೆ? ಹಾಯ್ಗುಳಿ ಒಂದು ಕೀಳುದೈವ. ಕೀಳುದೈವವಾದ್ದರಿಂದ ಹೆಚ್ಚಾಗಿ ಅದರ ಕಣ್ಣು ಜಾನುವಾರುಗಳ ಮೇಲೆಯೇ. ಅದನ್ನು ಪ್ರಸನ್ನವಾಗಿಡದಿದ್ದರೆ ಹಟ್ಟಿಯಲ್ಲಿ ಎಬ್ಬಿಸುವ ತಾಪತ್ರಯ ಅಷ್ಟಿಷ್ಟಲ್ಲ. ‘ಹಟ್ಟಿಯಲ್ಲಿನ ತಾಪತ್ರಯ’ ಎಂದರೆ ಏನೆಂದುಕೊಂಡಿರಿ? ಆ ಶಬ್ದದಲ್ಲಿರುವಂತೆ ಕೇವಲ ತ್ರಯವಲ್ಲ, ಶತ, ಸಹಸ್ರ. ಅದನ್ನೆಲ್ಲ ಅನುಭವಿಸಿದವರಿಗೇ ಗೊತ್ತು. ನಮ್ಮ ಕಾಲದಲ್ಲಿ ಹೆಚ್ಚಿನ ಮನೆಗಳಲ್ಲಿ ಕಡೇ ಪಕ್ಷ ಒಂದೊಂದು ಗುರುಟಲು ದನವೂ ಅದಕ್ಕೊಂದು ಬಡಕಟೆ ಕರುವೂ ಇರುವುದು ಸಾಮಾನ್ಯವಾಗಿ ವರ್ಷದುದ್ದಕ್ಕೂ ಹಾಯ್ಗುಳಿದೈವಕ್ಕೆ ಕೈ ತುಂಬ ಕೆಲಸವಿರುತಿತ್ತು. ಅದರ ಕೆಲಸವೆಂದರೆ ಕಣ್ಣಿಗೆ ಕಾಣದ್ದು, ಸ್ವತಃ ಅನುಭವಕ್ಕೆ ಮಾತ್ರ ಬರುವಂಥದು.

ಉದಾಹರಣೆಗೆ ಜಾನುವಾರಿಗೆ ಹೊಟ್ಟೆ ನೋವು ಸುರುವಾಯಿತೆನ್ನುವ, ಆ ದೈವಕ್ಕೆ ಕಾಯಿ ಸುಳಿದಿಡಲೇ ಬೇಕು. ಇಡದಿದ್ದರೆ ಹಾಯ್ಗುಳಿ ಮುನಿಯುತ್ತದೆ. ಮುನಿದು ಜಾನುವಾರಿನ ತಾಯಮಾಸು, ಎಂದರೆ ಕಸ, ಹೊರಬೀಳಲು ಬಿಡುವುದಿಲ್ಲ. ಒಂದೊಮ್ಮೆ ಬಿದ್ದರೂ ನಮಗದು ಗೋಚರವಾಗದಂತೆ ಮಾಡುತ್ತದೆ. ನಾವು ಕಂಡು ಅದನ್ನು ದೂರ ಎತ್ತಿ ಹಾಕದಿದ್ದರೆ ಬಾಣಂತಿ ಗಂಟಿ ಅದನ್ನು ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ತಿಂದು ಬಿಡುತ್ತದೆ. ಕಸ ತಿಂದು ಬಿಟ್ಟರೆ ಮುಗಿಯಿತು, ಹಾಲು ಪೂರ್ತಿ ಒಣಗಿದಂತೆಯೇ. ಹಾಲು ಕೊಡದಿದ್ದ ಮೇಲೆ ಕರು ಹಾಕಿ ಏನು ಪ್ರಯೋಜನ? ಬಾಣಂತಿ ಸಾಕಣೆಯೆಲ್ಲ ದಂಡವಾಯಿತೆ? ಜಾನುವಾರು ಸಾಕುವುದು ಎಂದರೇನು, ಆಟವೆ? ಹಾಯ್ಗುಳಿ ಉಪದ್ರ ಹೀಗೆ – ಸರಲ ಅಲ, ಸರಣಿ ಸರಣಿ ಪರಿಣಾಮದ್ದು.

ಇದೊಂದು ಉದಾಹರಣೆ ಅಷ್ಟೆ. ನೆನಪಿನಲ್ಲಿ ಗಟ್ಟಿ ಉಳಿದಿರುವ ಇನ್ನೊಂದು ವಿಷಯ ಬಣ್ಣದ ಬಗ್ಗೆ ಅದಕ್ಕಿದ್ದ ವಿಶೇಷ ದ್ವೇಷ. ಸಾಮಾನ್ಯವಾಗಿ ಎಲ್ಲರಿಗೂ ಬಿಳಿಚರ್ಮ ಎಂದರೆ ಆಕರ್ಷಣೆಯಲ್ಲವೆ? ಆದರೆ ಈ ದೈವಕ್ಕೆ ಆ ಬಣ್ಣವನ್ನು ಕಂಡರಾಗದು. ಸುಮ್ಮನೆ ಹೇಳುತ್ತಿಲ್ಲ, ಅದಕ್ಕೆ ಪುರಾವೆಯುಂಟು. ನಮ್ಮ ಮನೆಗೆ ಒಮ್ಮೆ ಒಂದು ಬಿಳೀ ಬಣ್ಣದ ( ಎಂದರೆ ಕಪ್ಪು ಅಲ್ಲದ) ಎಮ್ಮೆ ತಂದರು. ಮಾರುವವ ಅದು ಹೊತ್ತಿಗೆ ಇಂತಿಷ್ಟು ಹಾಲು ಕೊಡುತ್ತದೆ ಅಂತ ಹೇಳಿದ್ದ. ಆತ ಮೋಸ ಗೀಸ ಮಾಡುವವನಲ್ಲವಂತೆ. ಬಂದ ನಾಕು ದಿನ ಅದು ಅವನು ಹೇಳಿದಷ್ಟೇ ಹಾಲು ಕೊಟ್ಟಿತು. ಸರಿಯೆ. ಆದರೆ ದಿನ ಹೋದಂತೆ ಕಮ್ಮಿಯಾಗತೊಡಗಿತು. ಗದರಿದರಿಲ್ಲ, ಕೊಂಡಾಟ ಮಾಡಿದರಿಲ್ಲ, ಕೊದಂಟಿಯ ರುಚಿ ತೋರಿಸಿದರೂ ಇಲ್ಲ. ಕರುವಿಗೆ ಕುಡಿಯಲು ಬಿಟ್ಟು  ಈಚೆ ಎಳೆದು ಕೊಳ್ಳುವುದರೊಳಗೆ ಹಾಲನ್ನೆಲ್ಲ ಕೆಚ್ಚಲೊಳಗೆ ಎಕ್ಕಳಿಸಿಕೊಂಡಾಯಿತು. ತಂಬಿಗೆ ಹಿಡಿದು ಹಾಲು ಕರೆಯಲು ಕುಳಿತರೆ ಎಳೆದು ಎಳೆದು ಕೈ ನೋವಾದೀತೆ ಹೊರತು ತಂಬಿಗೆ ತುಂಬುವುದಿಲ್ಲ. ಲಾಟರಿ ಹಿಂಡಿ ಹಾಕಿದರಿಲ್ಲ, ತೌಡು ಹಾಕಿದರಿಲ್ಲ, ಹತ್ತಿಕಾಳು ಸುರಿದರೂ, ಅಕ್ಕಚ್ಚು ಬೇಯಿಸಿ ಹಾಕಿದರೂ ಊಹೂಂ, ಹಾಲಿಲ್ಲ. ಹಸಿ ಹುಲ್ಲು ಒಣ ಹುಲ್ಲು ಅಂತ ಮೇನತ್ತು ಮಾಡಿದ್ದೇ ಮಾಡಿದ್ದು. ಹಾಕಿದ್ದೆಲ್ಲ ಎಲ್ಲಿ ಹೋಯಿತು? ತಿಳಿಯದೆ ಹಿರಿಯರು ಚಿಂತಿತರಾದರು. ನಿಮಿತ್ಯ ಕೇಳುವಾಗ ‘ಅಯ್ಯೊ, ಇದೆಲ್ಲ ಆ ಹಾಯ್ಗುಳಿ ಉಪದ್ರ. ಅದಕ್ಕೆ ಬಿಳಿ ಎಮ್ಮೆಗಳನ್ನು ಕಂಡರಾಗದು. ನಿಮಗೆ ತಿಳಿಯದೆ? ನೀವು ಹಾಕಿದ್ದೆಲ್ಲ ಹೋಗುತಿದ್ದುದು ಅದರ ಹೊಟ್ಟೆಗೆ’
‘ಓ ಹೀಗೋ’
‘ಮತ್ತೆ! ಈ ಎಮ್ಮೆಯನ್ನು ಇಟ್ಟುಕೊಳ್ಳಬೇಡಿ, ಮಾರಿಬಿಡಿ’
‘ಮಾರುವುದೆ? ಛೆಛೆ ಅದಾಗದು. ಮೊನ್ನೆ ಮೊನ್ನೆ ತಂದದ್ದು. ಹೇಗೆ ಮನಸ್ಸು ಬರುತ್ತದೆ?’

‘ಸರಿ, ನೋಡುವ ಹಾಗಾದರೆ’ ಎಂದು, ಬೂದಿ ಮಂತ್ರ ಬಳ್ಳಿ ನಿಮಿತ್ಯ ಬಲ್ಲ ಸ. ಹೊಳ್ಳರು ಅವರು, ಮಣಮಣ ಮಂತ್ರ ಹೇಳುತ್ತಾ ಪದೆ ಪದೇ ಆಕಳಿಸುತ್ತಾ ಎರಡು ಮಂತ್ರ ಬಳ್ಳಿಯನ್ನು ತಯಾರು ಮಾಡಿದರು. (ಅಂದ ಹಾಗೆ ನಿಮಿತ್ಯ ಹೇಳುವವರಿಗೆ ಮೇಲಿಂದ ಮೇಲೆ ಆಕಳಿಕೆ ಬರುತ್ತಿರುತ್ತದೆ, ನೋಡಿರುವಿರ?)

‘ಏನು ಎಷ್ಟಪ್ಪ ಆಕಳಿಕೆ. ದೈವ ಜೋರಾಗಿಯೇ ಮೆಟ್ಟಿಕೊಂಡಿದೆ, ಇಷ್ಟು ಆಕಳಿಕೆ ಬರುವುದೇ ಅದಕ್ಕೆ ಸಾಕ್ಷಿ’ ಎಂದರು. ‘ಈ ಮಂತ್ರ ಬಳ್ಳಿಯನ್ನು ಎಮ್ಮೆ ಕುತ್ತಿಗೆಗೆ ಕಟ್ಟಿ. ಮತ್ತೆ ಇಕ ಇದನ್ನು ಹಟ್ಟಿ ಹಣೆಗೆ ಕಟ್ಟಿ. ನೋಡುವ, ಮತ್ತೂ ಅದು ಉಪದ್ರ ಬಿಡದಿದ್ದರೆ ಎಮ್ಮೆಯನ್ನು ಇಟ್ಟುಕೊಳ್ಳಬೇಡಿ, ದಾಂಟಿಸಿ ಬಿಡಿ’. ಮಂತ್ರ ಬಳ್ಳಿ ಕಟ್ಟಿಕೊಂಡ ಮೇಲೆ ಅದೇನಾಯಿತೋ, ಎಮ್ಮೆ ಹಾಲು ಕೊಡತೊಡಗಿತು. ಹಾಯ್ಗುಳಿ ಸೋತಿತು ಎಂದುಕೊಂಡರು ಎಲ್ಲ. ತುಸು ನೆಮ್ಮದಿಗೊಂಡರು.

ಹೀಗೆ ದಿನ ಹೋಗುತ್ತಿರಲು ಆ ಬಿಳಿಎಮ್ಮೆ ಗಬ್ಬ ಕಟ್ಟಿತು. ಹಾಯ್ಗುಳಿ ಇದಕ್ಕಾಗಿಯೇ ಕಾಯುತಿತ್ತೋ ಏನೋ. ಸುಮ್ಮನಿರುವ ಗುಣವೇ ಅದರದಲ್ಲವಲ್ಲ. ಎಮ್ಮೆ ಕರು ಹಾಕುವುದನ್ನೇ ಕಾಯುತ್ತ ಇತ್ತು ಬಹುಶಃ. ದಿನ ತುಂಬಿದ ಎಮ್ಮೆ  ಕರು ಹಾಕಿತು. ಎಂತ ಕರು? ಗುಡ್ಡವ, ಹೆಂಗರುವ ನೋಡಬೇಕು, ಅಷ್ಟರಲ್ಲಿ, ಆಚೆ ಕಂಡರೆ ಎಮ್ಮೆಯ ಹೊಟ್ಟೆಗಡ್ಡೆ -ಗರ್ಭಕೋಶ- ಹೊರಬಂದಿದೆ. ಕೈ ಹಾಕಿ ಹೇಗೆ ಹೇಗೆ ಒಳದೂಡಿದರೂ ಹೋಗದು. ಗೋಡಾಕ್ಟರನ್ನು ಕರೆಯಲು ಜನ ಓಡಿತು. ಅವರು ಬರುವುದರೊಳಗೆ ಎಮ್ಮೆ ಕಣ್ಣುಮೇಲೆ ಮಾಡಿ ತಲೆ ಅಡ್ಡ ಹಾಕಿಯಾಯಿತು. ಎಲ್ಲ ಮುಗಿಯಿತು ಎಂದು ಹೇಳಲಷ್ಟೇ ಡಾಕ್ಟರು ಬಂದಂತಾಯಿತು. ‘ಹೊಟ್ಟೆ ನೋವು ಸುರುವಾದೊಡನೆ ಹಾಯ್ಗುಳಿಗೊಂದು ಕಾಯಿ ಸುಳಿದಿಡಲು ಅಯ್ಯ, ಮರೆತೇ ಬಿಟ್ಟೆ. ನಾನೇನೋ ಮರೆತೆ. ನಿನಗೆ ನೆನಪಿಸಲೇನಾಯಿತು?’ ‘ನೀನು ಮರೆತೆ ಅಂತ ನಂಗೇನು ಕನಸೆ?’ ‘ಒಟ್ಟು ಕರ್ಮ’ -ವಿಧವಿಧ ಚಕಮಕಿ. ಕಂಪಿಸುವ ದುಃಖ ಒಮ್ಮೊಮ್ಮೆ ಚಕಮಕಿ ಚರ್ಚೆಯ ರೂಪದಲ್ಲಿಯೂ ಇರುತ್ತದಷ್ಟೆ?.
ಆಗಲೇ ಅದನ್ನು ಬೇರೆಯವರಿಗೆ ದಾಟಿಸಿ ಕರಿಎಮ್ಮೆ ತಂದಿದ್ದರೆ ಎಂಬ ಪಶ್ಚಾತ್ತಾಪ ಮಾತ್ರ ಮನೆಯನ್ನು ಬಹುಕಾಲ ದಣಿಸಿತು. ಅಂದಿನಿಂದ ನಮ್ಮ ಮನೆಯ ಜಾನುವಾರು ಕುರಿತ ಮಾತುಕತೆಯಲ್ಲಿ ‘ನಮ್ಮ ಹಟ್ಟಿಗೆ ಬಿಳಿ ಎಮ್ಮೆ ಆಗದು. ಹಾಯ್ಗುಳಿ ಅದಕ್ಕೆ ಏಳುಗತಿಯಾಗಲು ಬಿಡುವುದಿಲ್ಲ’ ಎಂಬೊಂದು ತಿಳುವಳಿಕೆ ದಾಟಿಕೊಂಡೇ ಇರುತ್ತದೆ.

ನಾನು ಇದ್ದದ್ದು ಇಂತಹ ಮನೆಮನೆಯ ಮ್ಯಾಜಿಕ್ಕುಗಳ ಕಾಲದಲ್ಲಿ,
ಹೊಟ್ಟೆಗಿಚ್ಚೆ?