ಪ್ರಯಾಣವೊಂದು ಪೂರ್ತಿಯಾಗುವಾಗ ಚಿತ್ರವೊಂದು ಮನಸ್ಸಿನಲ್ಲಿ ಮೂಡಿಬಿಡುತ್ತದೆ. ವೈಷ್ಣೋದೇವಿ ದರ್ಶನ ಮುಗಿಸಿ  ಮರಳಿ ಕತ್ರಾ ನಗರಕ್ಕೆ ಬರುವಾಗ ಅಂತಹ ಚಿತ್ರವೊಂದು ಮನಸ್ಸಿನಲ್ಲಿ ತಣ್ಣಗೆ ಕುಳಿತಿತ್ತು. ಜನರನ್ನು, ಲಗೇಜುಗಳನ್ನು ಹೊತ್ತೊಯ್ಯುತ್ತಿದ್ದ ಸಾಲು ಸಾಲು ಕುದುರೆಗಳ ಚಿತ್ರವದು. ಬೆನ್ನಮೇಲೆ ಹೇರಿದ ಭಾರ ಜಾಸ್ತಿಯಾಗಿ ಕೆಲವು ಕುದುರೆಗಳು ಕುಸಿದು ಬೀಳುತ್ತಿದ್ದವು. ಎಲ್ಲರೂ ಸೇರಿ ಅದನ್ನು ಎಬ್ಬಿಸಿ ನಿಲ್ಲಿಸಲು ಯತ್ನಿಸುತ್ತಿದ್ದರು. ಬೆಟ್ಟಗಳ ನಡುವಿನ ದಾರಿಯಲ್ಲಿ ಸಾಗುವ, ಪ್ರಯಾಣದ ಅನುಭವ ತೀವ್ರತೆಯನ್ನು ಹೆಚ್ಚಿಸುವ ಈ ಕುದುರೆಗಳ ಪಾಡಿನ ಕುರಿತು ಇಲ್ಲಿ ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ.

 

‘ಕಭೀ ಅಕೇಲೇ ಮತ್ ಆನಾ…’

ನಾನು ‘ನಮಸ್ತೆ ಸರ್’.. ಎಂದಾಗ ಸಂಜೀವ್ ಉತ್ತರಿಸಿದ್ದು ಹೀಗೆ. ಕಡಕ್ ಧ್ವನಿಯಲ್ಲಿ ಜೋರು ಮಾಡುವವರಂತೆ, ತೋರು ಬೆರಳು ತೋರಿಸುತ್ತ, ಚೂಪುಗಣ್ಣು ಬಿಡುತ್ತ  ಅವರು ಹೀಗಂದಾಗ ನಾನು ತಬ್ಬಿಬ್ಬಾಗಿದ್ದೆ. ಮೊದಲ ಭೇಟಿಯಲ್ಲಿಯೇ ಯಾರಾದರೂ ಹೀಗೆ ಜೋರು ಮಾಡುತ್ತಾರೆಯೇ.

ಸಂಜೀವ್  ಭೇಟಿಯಾಗಿದ್ದು ವೈಷ್ಣೋದೇವಿ ದೇಗುಲ ಬೆಟ್ಟದ ತಪ್ಪಲು ಕತ್ರಾದಲ್ಲಿ. ನಾನು ವೈಷ್ಣೋದೇವಿ ದರ್ಶನ ಮಾಡಿ ಬೆಟ್ಟ ಇಳಿದು ಬರುವಾಗ ರಾತ್ರಿ 8 ಗಂಟೆ ಆಗೋಗಿತ್ತು. ಬೆಳಿಗ್ಗೆ ಬೆಟ್ಟ ಹತ್ತುವಾಗ ಗಿಜಿಗುಡುವ ನಗರದಂತೆ ಗೋಚರಿಸಿದ್ದ  ಕತ್ರಾ, ರಾತ್ರಿ 8 ಗಂಟೆಗೇ ನಿರ್ಜನ ಬೀದಿಯಾಗಿದ್ದು ಕಂಡು ತುಸು ಅಧೀರಳಾಗಿದ್ದೆ. ಜಮ್ಮುವಿನಲ್ಲಿ ಇದ್ದ ಪರಿಚಯದವರೊಬ್ಬರಿಗೆ  ಫೋನ್ ಮಾಡಿದಾಗ ಅವರು ಸಂಜೀವ್ ಅವರ ಮಾಹಿತಿ ಕೊಟ್ಟಿದ್ದರು.   ಆ ರಾತ್ರಿಯ ಮಟ್ಟಿಗೆ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿಯನ್ನು ಸಂಜೀವ್ ಗೆ ವಹಿಸಿದ್ದರು.  ನಾನು ಕತ್ರಾದ ನೀಹಾರಿಕಾ ಹೋಟೆಲ್ ಎದುರು, ಮುಂದೇನು ಎಂದು ತೋಚದೇ ನಿಂತಿದ್ದೆ.

‘ನೀವೆಲ್ಲ ದಕ್ಷಿಣ ಭಾರತದ ನೆಮ್ಮದಿಯ ಊರುಗಳಿಂದ ಏನೋ ಭಂಡ ಧೈರ್ಯ  ಮಾಡಿಕೊಂಡು ಒಬ್ಬೊಬ್ಬರೇ ಬಂದುಬಿಡ್ತೀರಿ. ಇಲ್ಲಿನ ವಿಷಯಗಳೆಲ್ಲ ನಿಮಗೆ ಗೊತ್ತಿಲ್ಲ.. ಎಲ್ಲ ಊರೂ ಒಂದೇ ತರ ಇರುವುದಿಲ್ಲ. ನಾವು ನಿಮ್ಮಷ್ಟು ನೆಮ್ಮದಿಯಾಗಿ ಜೀವನ ಮಾಡುತ್ತಿಲ್ಲ ಎಂಬುದನ್ನು ನೀವು ಚೆನ್ನಾಗಿ ತಿಳ್ಕೊಳಿ..’ ಎಂದು ನನ್ನನ್ನು ದಬಾಯಿಸುತ್ತ ನಡೆಯುತ್ತಿದ್ದರು.  ನಾನು ಸುಮ್ಮನೇ ಅವರ  ಹಿಂದೆ ಹೆಜ್ಜೆ ಹಾಕುತ್ತ ಹೋದೆ.  ಅಲ್ಲ, ಯಾರಾದರೂ ನಮಗೇ ಜೋರು ಜೋರು ಬೈಯ್ಯುತ್ತಿರುವಾಗ, ನಮ್ಮೊಳಗಿನ ಭಯವು ಕಡಿಮೆಯಾಗುವ  ಆ ಸ್ಥಿತಿಯನ್ನು  ಗಮನಿಸಿಕೊಂಡು ನನಗೆ ಸಣ್ಣಗೆ ನಗು ಬಂತು.

ಸಂಜೀವ್ ತಮ್ಮ ಮನೆಯ ಪುಟ್ಟದೊಂದು ಕೊಠಡಿಯಲ್ಲಿ ನನಗೆ ವ್ಯವಸ್ಥೆ ಕಲ್ಪಿಸಿದ್ದರು. ಅವರ ತಂಗಿ,  ರಿತೂ ಊಟ ಕೊಟ್ಟು ಸ್ವಲ್ಪ ಹೊತ್ತು ನನ್ನೊಡನೆ ಮಾತನಾಡಿದರು. ನಿಮ್ಮ ಯಾತ್ರೆಯ ಯೋಜನೆ ಇನ್ನೂ ಚೆನ್ನಾಗಿ ಮಾಡಿಕೊಳ್ಳಬೇಕಿತ್ತು ಎಂದು ಹೇಳಿದರು.  ತೀವ್ರ ದಣಿವಿನ ನಡುವೆ ನನಗೆ ಬೆಳಗ್ಗಿನಿಂದ ಮಾಡಿದ ಪ್ರಯಾಣದ ನೆನಪಾಯಿತು.

ಹಿಂದಿನ ದಿನವಷ್ಟೇ  ಉಧಂಪುರದಲ್ಲಿ ಡೋಗ್ರಿ ಭಾಷೆಯ ಹಿರಿಯ ಲೇಖಕ ದೇಶಬಂಧು ಡೋಗ್ರಾ ನೂತನ್ ಅವರನ್ನು ಭೇಟಿಯಾಗಿದ್ದೆ. ಬೆಳಿಗ್ಗೆ ಅವರೇ ವೈಷ್ಣೋದೇವಿಯ ಹಿರಿಮೆಯನ್ನು ವಿವರಿಸಿ ಉಧಂಪುರದ ಬಸ್ ನಿಲ್ದಾಣದಲ್ಲಿ, ಕತ್ರಾ ಕಡೆಗೆ ಹೋಗುವ ಬಸ್ ಹುಡುಕಿ ಹತ್ತಿಸಿದ್ದರು. ಆದರೆ ನಾನು ವೈಷ್ಣೋದೇವಿಯ ಬೆಟ್ಟದ ತಪ್ಪಲು ತಲುಪುವಷ್ಟರಲ್ಲಿ ಬೆಳಿಗ್ಗೆ ಗಂಟೆ ಹತ್ತಾಗಿತ್ತು.  ಬಿಸಿಲು ನೆತ್ತಿಗೇರುವ ಸಂದರ್ಭದಲ್ಲಿ ಕಾಲ್ನಡಿಗೆಯಲ್ಲಿಯೇ ಬೆಟ್ಟ ಹತ್ತುವುದು ಸಾಧ್ಯವಿಲ್ಲವೆಂದು, ಬಾಡಿಗೆ ಕುದುರೆ ಏರುವುದೇ ಒಳ್ಳೆಯದೆಂದು  ಆ  ತಪ್ಪಲು ಪ್ರದೇಶದಲ್ಲಿ, ಯಾತ್ರಿಕರು, ಹಣ್ಣುಕಾಯಿ ಮಾರುವ ಅಂಗಡಿಯ  ಕೆಲವರು ಹೇಳಿದರು.  ಈ ಸಲಹೆಗಳನ್ನೆಲ್ಲ ನಾನು ಭಾರೀ ಸಂಶಯದಿಂದ ಸ್ವೀಕರಿಸಿ,  ನಡಿಗೆ ಮುಂದುವರೆಸಿದೆ. ಸುಮಾರು ಮೂರು ಕಿಲೋಮೀಟರ್ ನಷ್ಟು ನಡೆದಾಗ ಇದು ಸಾಧ್ಯವಿಲ್ಲದ ಮಾತು ಎಂಬುದು ಅರಿವಿಗೆ ಬಂತು. ಮೇ ತಿಂಗಳ ಬಿಸಿಲು ಚೂರಿಯಲಗಿನಂತೆ ಚರ್ಮವನ್ನು ಕೊರೆಯುತ್ತಿತ್ತು.  ಕೊನೆಗೆ ಕುದುರೆಯ ಮೊರೆ ಹೋಗುವುದು ಅನಿವಾರ್ಯ ಎನ್ನುತ್ತ. ಒಂದೆಡೆ ಸುಮ್ಮನೇ ನಿಂತಿರುವಾಗ, ಅಲ್ಲೇ ಕುಟುಂಬವೊಂದು ಕುದುರೆಯ ಬಾಡಿಗೆ ಕುರಿತು ಚೌಕಾಸಿ ಮಾಡುತ್ತಿರುವುದು ಕಂಡಿತು.

ಪುಟ್ಟ ಮಗಳು ಮತ್ತು ಪತ್ನಿಯನ್ನು ಕುದುರೆಯಲ್ಲಿ ಕಳುಹಿಸಿ, ತಾನು ನಡೆದುಕೊಂಡೇ ಬರುವುದು ಅವನ ಲೆಕ್ಕಾಚಾರ. ನಾನೂ ಅಲ್ಲಿಯೇ ಹೋಗಿ ನಿಲ್ಲುವಷ್ಟರಲ್ಲಿ, ಅವಳು ನನ್ನ ಬಗ್ಗೆ ವಿಚಾರಿಸಿ, ಪತಿಯೊಡನೆ ಮಾತನಾಡಿದಳು. ಆಕೆಯ ಹೆಸರು ಗರಿಮಾ, ಪುಟ್ಟಿಯ  ಹೆಸರು ಅಕ್ಷಿತ್. ಇದು ಹತ್ತು ವರ್ಷಗಳ ಹಿಂದಿನ ಪ್ರವಾಸದ ಕಥೆ. ಆಗೆಲ್ಲ ಒಬ್ಬೊಬ್ಬರಿಗೆ ಎರಡು ಮೊಬೈಲ್ ಇರುತ್ತಿರಲಿಲ್ಲ. ಮನೆಗೊಂದು ಮೊಬೈಲ್ , ಅದೂ ಉದ್ಯೋಗಸ್ಥರಿಗೆ ಮಾತ್ರ ಮೊಬೈಲ್  ಎಂಬ ಪರಿಸ್ಥಿತಿಯಷ್ಟೇ ಇತ್ತು.  ಹಾಗಾಗಿ,  ಮೊಬೈಲ್ ಫೋನ್ ಇರುವ ನಾನೂ, ಅವರೊಡನೆ ಇದ್ದರೆ ಉತ್ತಮ ಎಂದು ಗರಿಮಾಳ ಪತಿಗೆ ಅನಿಸಿತು. ಕುದುರೆಯವನೊಡನೆ ಮಾತುಕತೆಯಾಗಿ, ಎರಡು ಕುದುರೆಗಳ ಬಾಡಿಗೆ ನಿರ್ಧಾರ ಮಾಡಿದ್ದಾಯಿತು. ಅಮ್ಮಮಗಳು ಒಂದು ಕುದುರೆಯಲ್ಲಿ, ನಾನು ಮತ್ತೊಂದು ಕುದುರೆಯಲ್ಲಿ, ನನ್ನ ಕುದುರೆಯ ಹೆಸರು ನಿರ್ಮಾ. ಅವರ ಕುದುರೆಯ ಹೆಸರು ಸೋನಿಯಾ.

ತಪ್ಪಲು ಪ್ರದೇಶದಿಂದ ದೇವಸ್ಥಾನಕ್ಕೆ 12 ಕಿಲೋಮೀಟರ್ ನ ಪ್ರಯಾಣ ಮಾಡಲು ಐದು ತಾಸು ಬೇಕು. ಈಗ  ಎರಡೂವರೆ ಗಂಟೆಯಲ್ಲಿಯೇ ಬೇಗನೇ ತಲುಪುವ ಹೊಸ ರಸ್ತೆನಿರ್ಮಾಣವಾಗಿದೆ.  ನಾನು ಸಾಗಿದ ರಸ್ತೆಯೂ ಚೆನ್ನಾಗಿಯೇ ಇದ್ದು, ಕುದುರೆಗಳಿಗೆ ಸಾಗಲು, ಅಲ್ಲಲ್ಲಿ ತಂಗಲು ಬೇಕಾದ ಎಲ್ಲ ವ್ಯವಸ್ಥೆಗಳೂ ಇದ್ದವು. ಕುದುರೆ ನಡೆಸುವವನೂ ತನ್ನ ಕಥೆ ಹೇಳುತ್ತ, ನಮ್ಮ ಕಥೆ ಕೇಳುತ್ತ, ನಮ್ಮ ಅಗತ್ಯಗಳನ್ನು ಅರಿತು ಸಲಹೆಗಳನ್ನು ಕೊಡುತ್ತಾ, ನಮ್ಮನೆಯದ್ದೇ ಒಬ್ಬ ಹಿರಿಯ ವ್ಯಕ್ತಿಯಂತೆ ನಡೆಯುತ್ತಿದ್ದ. ಅವನ ಕುತೂಹಲವೊಂದೇ, ನಿಮ್ಮೂರಲ್ಲಿ ಸಮುದ್ರವಿದೆಯಲ್ಲ, ಅದು ಹೇಗಿರುತ್ತದೆ… ಸಿನಿಮಾದಲ್ಲಿ ನೋಡಿದ ಹಾಗೇನಾ ಅಥವಾ ಅದನ್ನು ನೋಡುವಾಗ  ಭಯವಾಗುತ್ತದಾ..

ದಕ್ಷಿಣ ಭಾರತದಲ್ಲಿ  ಶಿಲ್ಪವೈಭವದ ಭಾರೀ ದೇವಸ್ಥಾನಗಳನ್ನುನೋಡಿದ ನಮಗೆ ವೈಷ್ಣೋದೇವಿ ದೇವಸ್ಥಾನ ಸರಳ ಎನಿಸಬಹುದು. ಆದರೆ ದೇವಸ್ಥಾನಕ್ಕೆ ಸಾಗುವ ದಾರಿಯೇ ಶ್ರೀಮಂತವಾದುದು.  ಸೇರುವ ಗುರಿಗಿಂತ ಸಾಗುವ ದಾರಿಯೇ ಮುಖ್ಯವೆನ್ನುವ ಹಾಗೆ.

ತರಾವಳಿಯ ಹಸಿರು ಪರದೆಯಂತೆ ಗೋಚರಿಸುವ ಸಾಲು ಸಾಲು ಬೆಟ್ಟಗಳು, ಒಂದು ಬೆಟ್ಟವು ಮತ್ತೊಂದಕ್ಕೆ ಅಂಟಿಕೊಂಡು,ಇಳುಕಲಿನಲ್ಲಿ ನಮಗಿಷ್ಟು ದಾರಿ ಮಾಡಿಕೊಟ್ಟು, ಯಾತ್ರಿಕರನ್ನು  ಕೈಹಿಡಿದು ನಡೆಸುವಂತೆ ಗೋಚರಿಸುತ್ತಿದ್ದವು. ದೂರದೊಂದು ಬೆಟ್ಟದಲ್ಲಿ ಬೆಳ್ಳಗಿನ ಕಟ್ಟಡಗಳು ಕಾಣುತ್ತಿದ್ದವು.. ಅದುವೇ ನಾನು ತಲುಪಬೇಕಾಗಿದ್ದ ದೇವಸ್ಥಾನ ಎಂದು ಕುದುರೆಯವನು ಹೇಳಿದ.

ಹರಕೆ ಹೊತ್ತವರು ಈ ದಾರಿಯನ್ನು ನಡಿಗೆಯಲ್ಲಿಯೇ ಕ್ರಮಿಸುತ್ತಾರೆ,ಮುಕ್ಕಾಲುವಾಸಿ ದಾರಿ  ನಡೆದ ಬಳಿಕ, ಅಗತ್ಯವೆನಿಸಿದರೆ ರಿಕ್ಷಾಗಳ ವ್ಯವಸ್ಥೆ ಇದೆ. ಹಿರಿಯರಿಗೆ, ಅನಾರೋಗ್ಯ ಪೀಡಿತರಾದವರಿಗೆ ಆಳುಗಳು ಹೊತ್ತೊಯ್ಯುವ ಪಲ್ಲಕ್ಕಿಯ ವ್ಯವಸ್ಥೆಯೂ ಇದೆ. ಕೇವಲ ಅರ್ಧಗಂಟೆಯಲ್ಲಿ ಪ್ರಯಾಣ ಮುಗಿಸಬೇಕು ಎಂಬ ತುರ್ತು ಇರುವವರಿಗೆ ಹೆಲಿಕಾಪ್ಟರ್ ಗಳಿವೆ. ಹೆಲಿಕಾಪ್ಟರ್ ನಲ್ಲಿ ಬೆಟ್ಟದ ಮೇಲೆ ಇಳಿದ ನಂತರ ಎರಡೂವರೆ ಕಿಲೋಮೀಟರ್ ನಡೆಯಬೇಕು.  ಆಯ್ಕೆಯು ಭಾವ ಭಕ್ತಿ, ದೇಹದ ಶಕ್ತಿ, ಜೇಬಿನ ಸಾಮರ್ಥ್ಯ ಎಲ್ಲವನ್ನೂ ಅವಲಂಬಿಸಿರುತ್ತದೆ. ಹೆಲಿಕಾಪ್ಟರ್ ನಲ್ಲಿ ಸಾಗಿದರೆ, ವೈಷ್ಣೋದೇವಿ ಯಾತ್ರೆಯ ನೈಜ ಖುಷಿಯೇ ಲಭಿಸಲಿಕ್ಕಿಲ್ಲ ಎಂದು ಸುತ್ತಲಿನ ಬೆಟ್ಟಗಳನ್ನೂ, ಕುದುರೆಗಳನ್ನೂ, ಅವುಗಳ ಮಾಲೀಕರು ತೋರಿಸುವ ಪ್ರೀತಿಯನ್ನು ನೋಡಿದಾಗ ನನಗೆ ಅನಿಸಿತು.

ಕುದುರೆಗಳೆರಡು, ಅವುಗಳನ್ನು ನಡೆಸುವ ಮಾಲೀಕರಿಬ್ಬರು, ಅಕ್ಷಿತ್ ಮತ್ತು ಗರಿಮಾ, ಆಗಾಗ  ನನ್ನ ಮೊಬೈಲ್ ಗೆ ಕರೆ ಮಾಡಿ, ಗರಿಮಾಳ ಜೊತೆ ಮಾತನಾಡುವ ಆಕೆಯ ಪತಿ- ಎಲ್ಲರೂ  ಒಂದು ಪರಿವಾರದಂತಾಗಿದ್ದೆವು.  ಪರಸ್ಪರರ ಕಾಳಜಿ ಮಾಡಿಕೊಳ್ಳುತ್ತಿದ್ದೆವು. ಗರಿಮಾ ಹರಿಯಾಣದವಳು, ನಾನು ಕರ್ನಾಟಕದವಳು, ಕುದುರೆ ನಡೆಸುವ ಒಬ್ಬಾತ ಬಿಹಾರದವನು, ಮತ್ತೊಬ್ಬ ಜಮ್ಮುವಿನ  ಹಳ್ಳಿಯೊಂದರ ನಿವಾಸಿ.  ಎಲ್ಲರೂ ತಮ್ಮ  ಬದುಕಿನ ಕಥೆಗಳನ್ನು ಹೇಳುತ್ತ, ಮೇ ತಿಂಗಳ ಮೊದಲ ವಾರದ ಅಷ್ಟೂ ಬಿರುಬಿಸಲನ್ನು ಕುಡಿಯುತ್ತ, ಬೆವರು ಮೂಡಿಸದ ಆ ಬಿಸಿಲ ಪ್ರತಾಪಕ್ಕೆ ವಿಸ್ಮಯಪಡುತ್ತ ವೈಷ್ಣೋದೇವಿಯ ಕುದುರೆ ನಿಲ್ದಾಣ ತಲುಪುಷ್ಟರಲ್ಲಿ ಮಧ್ಯಾಹ್ನ ಮೂರು ಗಂಟೆಯಾಗಿತ್ತು.

ಪರಿವಾರದ ಗುಂಗು ಚದುರಿಸಿಕೊಂಡು, ಅಲ್ಲಿಂದ ದರ್ಶನದ ಸರತಿಯ ಸಾಲು ಸೇರಬೇಕಿತ್ತು. ಬಿಡುಗಣ್ಣಿನಿಂದ ದೇವಸ್ಥಾನದ ದರ್ಶನ ಮುಗಿಸಿ ಮರಳುವಾಗ ಅರ್ಧದಾರಿಯವರೆಗೆ ಬ್ಯಾಟರಿ ಚಾಲಿತ ರಿಕ್ಷಾ ಸಿಕ್ಕಿತ್ತು.

ಬೆಳಿಗ್ಗೆ ಬೆಟ್ಟ ಹತ್ತುವಾಗ ಗಿಜಿಗುಡುವ ನಗರದಂತೆ ಗೋಚರಿಸಿದ್ದ  ಕತ್ರಾ, ರಾತ್ರಿ 8 ಗಂಟೆಗೇ ನಿರ್ಜನ ಬೀದಿಯಾಗಿದ್ದು ಕಂಡು ತುಸು ಅಧೀರಳಾಗಿದ್ದೆ. ಜಮ್ಮುವಿನಲ್ಲಿ ಇದ್ದ ಪರಿಚಯದವರೊಬ್ಬರಿಗೆ  ಫೋನ್ ಮಾಡಿದಾಗ ಅವರು ಸಂಜೀವ್ ಅವರ ಮಾಹಿತಿ ಕೊಟ್ಟಿದ್ದರು. 

ಆದರೆ ಆ ಪ್ರಯಾಣದ ಬಳಿಕ  ವೈಷ್ಣೋದೇವಿಯ ಕುದುರೆಗಳೆಂದರೆ ಸದಾ ಕುತೂಹಲದ ಎಳೆಯೊಂದು ಜೀವಂತವಿದೆ. ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ವೈಷ್ಣೋದೇವಿಯ ಈ ದಾರಿಯಲ್ಲಿ ಯಾತ್ರಿಕರ ಸುಳಿವಿರಲಿಲ್ಲ. ಆ ಕುದುರೆಗಳೆಲ್ಲ ಯಜಮಾನನ ಆರೈಕೆಯಲ್ಲಿ ಸುಮ್ಮನಿದ್ದವು. ಪ್ರತೀದಿನ ಬೆಟ್ಟ ಹತ್ತುತ್ತಿದ್ದ ಅವುಗಳಿಗೆ, ಬರೀ ಹೊಲದಲ್ಲಿ ಸುತ್ತಾಡುವುದು ಖುಷಿಯೆನಿಸಿರಬಹುದೇ.. ಅಥವಾ ಹೊಲಗದ್ದೆ, ಬೆಟ್ಟತಪ್ಪಲುಗಳ ಮೌನಕ್ಕೆ ಅವು ಸಣ್ಣಗೆ ಹೆದರಿರಬಹುದೇ. ಜನರ ಗಿಜಿಗುಡುವಿಕೆ, ಬೆನ್ನಮೇಲೆ ಭಾರವಿಲ್ಲದೆ ಅವುಗಳ ಮನಸ್ಸು ‘ಬಿಕೋ’ ಎಂದಿರಬಹುದೇ.

ಆದರೆ ಅಲ್ಲಿನ ಪರಿಸ್ಥಿತಿ ಅಷ್ಟು  ಸುಂದರವಾಗಿ ಯೋಚಿಸುವಂತೇನೂ ಇರಲಿಲ್ಲ ಎಂದು ಗೊತ್ತಾದುದು, ಕತ್ರಾದಲ್ಲಿ ಹಸಿವಿನಿಂದ 9 ಕುದುರೆಗಳು ಸತ್ತವು ಎಂಬ ಸುದ್ದಿ ಓದಿದಾಗ. ಯಾವ ಕುದುರೆಯೂ ಹಸಿವಿನಿಂದ ಸಾಯುವಂತಹ ಪರಿಸ್ಥಿತಿಗೆ ಅವಕಾಶ ಕೊಡಬಾರದು, ಕುದುರೆ ಸಾಕಿದವರ ಮತ್ತು ಕುದುರೆಗಳ ಕ್ಷೇಮಕ್ಕೆ ಸರ್ಕಾರ ನೆರವಾಗಬೇಕು ಎಂದು  ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಆದೇಶ ಮಾಡಿತ್ತು. ಇಡೀ ಊರಿಗೇ ಊರೇ ಪ್ರವಾಸೋದ್ಯಮದಿಂದ ಬರುವ ಆದಾಯವನ್ನು ಅವಲಂಬಿಸಿ ಜೀವನ ಮಾಡುತ್ತಿತ್ತು. ಕೊರೊನಾ ಸೋಂಕು ತಡೆಯುವ ದೃಷ್ಟಿಯಿಂದ  ಕಳೆದ ವರ್ಷ ಐದು ತಿಂಗಳು ಅಂದರೆ  ಮಾರ್ಚ್ ಅಂತ್ಯದಿಂದ ಆಗಸ್ಟ್  ತಿಂಗಳವರೆಗೆ ಹೇರಿದ್ದ ಲಾಕ್ ಡೌನ್ ಅಲ್ಲಿನ ಸಣ್ಣ ಸಣ್ಣ ವ್ಯಾಪಾರಿಗಳ ಬದುಕನ್ನೇ ಬದಲಿಸಿದೆ.

ಕೊರೊನಾ ಪರಿಚಯವಾಗುವುದಕ್ಕೆ ಮೊದಲೇ ಅಂದರೆ 2015ರಲ್ಲಿ ಪರಿಸರ ಕಾರ್ಯಕರ್ತರೊಬ್ಬರು, ವೈಷ್ಣೋದೇವಿ ಕುದುರೆಗಳ ಕ್ಷೇಮವನ್ನು ಬಯಸಿ ರಾಷ್ಟ್ರೀಯ ಹಸಿರು ಪೀಠದ ಮೊರೆ ಹೋಗಿದ್ದರು.  ಕತ್ರಾದಿಂದ ವೈಷ್ಣೋದೇವಿಗೆ ಪ್ರಯಾಣಿಸಲು ಯಾತ್ರಿಕರಿಗೆ ಕುದುರೆ ಬಳಸಲು ಅವಕಾಶ ಕೊಡಬಾರದು. ಈ ನಿಟ್ಟಿನಲ್ಲಿ ಅಲ್ಲಿನ ರಾಜ್ಯ ಸರ್ಕಾರಕ್ಕೆ, ದೇವಸ್ಥಾನದ ಆಡಳಿತ ಮಂಡಳಿಗೆ ಆದೇಶ ನೀಡಬೇಕು ಎಂದು  ವಕೀಲರಾದ ಆದಿತ್ಯ ಸಿಂಘ್ಲಾ ಅವರು ಅರ್ಜಿದಾರರ ಪರವಾಗಿ ಹಸಿರುಪೀಠದ ಮುಂದೆ ವಾದಿಸಿದ್ದರು.  ‘ಹೀಗೆ ಬೆಟ್ಟ ಹತ್ತುವುದಕ್ಕಾಗಿ, ಸಾಮಾನು ಸಾಗಾಣಿಕೆಗೆ ಇಲ್ಲಿ ಜಾತ್ರೋತ್ಸವಗಳು ಇರುವಾಗ ಸುಮಾರು 15 ಸಾವಿರದಷ್ಟು ಕುದುರೆ, ಕತ್ತೆ, ಹೇಸರಗತ್ತೆಗಳನ್ನು ಬಳಸಲಾಗುತ್ತಿದೆ.  ಯಾತ್ರಿಕರ ತ್ಯಾಜ್ಯ, ಕುದುರೆಗಳ ತ್ಯಾಜ್ಯವನ್ನು ದೇವಳದ ಬಳಿಯ ಬಾನ್ಗಂಗಾ ನದಿಗೆ ನೇರವಾಗಿ ಬಿಡುವುದು ಸರಿಯಲ್ಲ. ಈ ನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಚಿಸಬೇಕು’  ಎಂದೂ ಅವರ ಅರ್ಜಿ ಆಗ್ರಹಿಸುತ್ತದೆ. ನವರಾತ್ರಿ ಸಂದರ್ಭದಲ್ಲಿ ಪ್ರತಿದಿನ ಬೆಟ್ಟ ಹತ್ತುವ ಯಾತ್ರಿಕರ ಸಂಖ್ಯೆ 30 ಸಾವಿರಕ್ಕೂ ಹೆಚ್ಚು.

2018ರಲ್ಲಿ  ಆಗಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ  ಮನೇಕ ಗಾಂಧಿ ಕೂಡ, ಆಗಿನ ಜಮ್ಮು ಕಾಶ್ಮೀರ  ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರಿಗೆ ಪತ್ರ ಬರೆದು, ಇಲ್ಲಿನ ಯಾತ್ರಿಕರ ಪ್ರಯಾಣಕ್ಕೆ  ಬದಲಿ ವ್ಯವಸ್ಥೆಯನ್ನು ಹಂತ ಹಂತವಾಗಿ ಕಲ್ಪಿಸಿ, ಕುದುರೆಗಳ ಬಳಕೆಯನ್ನು ನಿಧಾನವಾಗಿ ಕಡಿಮೆ ಮಾಡಬೇಕು ಎಂದು ಸೂಚನೆ ನೀಡಿದ್ದರು.

ಕುದುರೆಗಳ ಬಳಕೆ ಕಡಿಮೆಯಾದರೆ ತ್ಯಾಜ್ಯದ ಪ್ರಮಾಣ ತಕ್ಕಮಟ್ಟಿಗೆ ಕಡಿಮೆಯಾಗಬಹುದು. ಆದರೆ ವಾಹನಗಳನ್ನು ಬಳಸಿಕೊಂಡಾಗ, ಬೆಟ್ಟದ ತುದಿ ತಲುಪುವ ಯಾತ್ರಿಕರ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಹಾಗಾಗಿ ಏನೇ ಮಾಡಿದರೂ ತ್ಯಾಜ್ಯವಿಲೇವಾರಿ ಅನಿವಾರ್ಯವೂ ಹೌದು, ಸವಾಲೂ ಹೌದು.

ಸಂಜೀವ್ ಫೋನ್ ನಲ್ಲಿ ಹೇಳುತ್ತಿದ್ದರು, ‘ಕುದುರೆಗಳ ಬಳಕೆಯನ್ನು ಇದ್ದಕ್ಕಿದ್ದಂತೆಯೇ ಸಂಪೂರ್ಣವಾಗಿ ನಿಷೇಧಿಸಬೇಕು ಎಂದೇನೂ ಅಲ್ಲ. ಆದರೆ ಸಾಮಾಜಿಕ ಜೀವನ ಶೈಲಿ ಎಷ್ಟೊಂದು ಬದಲಾಗಿದೆ. ವೈಷ್ಣೋದೇವಿ ದೇವಸ್ಥಾನದ ಸುತ್ತ ಮುತ್ತ ಸಾಕಷ್ಟು ಅಭಿವೃದ್ಧಿಯಾಗಿದೆ. ನೂಕು ನುಗ್ಗಲು ಆಗದಂತೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ವೈಷ್ಣೋದೇವಿ ದರ್ಶನದ ಬಳಿಕ ಆ ಬೆಟ್ಟದಿಂದ ಮತ್ತೊಂದು ಬೆಟ್ಟದಲ್ಲಿರುವ  ಭೈರೋನಾಥ್ ದೇವಸ್ಥಾನಕ್ಕೆ ತೆರಳಲು ಈಗ ರೋಪ್ ವೇ ಇದೆ. ಸುಸಜ್ಜಿತ ವಿಶ್ರಾಂತಿಕೊಠಡಿಗಳಿವೆ. ದೆಹಲಿಯಿಂದ ಕತ್ರಾಗೆ ನೇರ ರೈಲು ಬರುತ್ತಿದೆ. ಹೀಗೆ  ಹಂತ ಹಂತವಾಗಿ ವ್ಯವಸ್ಥೆಯು ಅಭಿವೃದ್ಧಿ ಹೊಂದುತ್ತಿರುವಾಗ ಕುದುರೆಗಳ ಬಳಕೆಯನ್ನು ಕೂಡ  ಹಂತ ಹಂತವಾಗಿ ಕಡಿಮೆ ಮಾಡಬಹುದು. ಕುದುರೆಯನ್ನು ಸಾಕಿದವರಿಗೆ ಬದಲಿ ಜೀವನೋಪಾಯ ಒದಗಿಸುವುದು, ಅವರ ಮಕ್ಕಳಿಗೆ ಕೌಶಲ ಅಭಿವೃದ್ಧಿಯ ಮಾರ್ಗಗಳನ್ನು ತಿಳಿಸುವುದು ಕೂಡ ಬದಲಾವಣೆಯ ಒಂದು ಮಾರ್ಗ. ಅದೇ ವೇಳೆ ಅತ್ತ ಯಾತ್ರಿಕರ ಪ್ರಯಾಣಕ್ಕೆ ಮಾಲಿನ್ಯ ರಹಿತ ಸೌಕರ್ಯವೊಂದನ್ನು ಒದಗಿಸುವುದು ಮುಖ್ಯ.’

ಹಲವು ವರ್ಷಗಳಿಂದ ಬೆಟ್ಟ ಹತ್ತಿ ಹತ್ತಿ ಸುಸ್ತಾಗಿದ್ದ ಕುದುರೆಗಳಿಗೆ ಲಾಕ್ ಡೌನ್ ಸಂದರ್ಭದಲ್ಲಿ ವಿಶ್ರಾಂತಿಯೂ ದೊರೆತಿರಬಹುದು. ಹುರುಳಿ ತಿನ್ನುತ್ತ ಕುದುರೆಗಳು ಹೀಗೆ ಲಾಯದಲ್ಲೇ ಇದ್ದರೆ, ಅವುಗಳಿಗೆ ಮೈಬಂದು ಬೆಟ್ಟವೇರುವುದು ಸಾಧ್ಯವಾದೀತೇ ಎಂಬ ಆತಂಕ ಅವುಗಳ ಮಾಲೀಕರದ್ದು.