ಪಾವೆಂ ಅವರ ನೆಚ್ಚಿನ ಸಾಹಿತ್ಯ ಪ್ರಕಾರ ಕಾವ್ಯ. ಪಾ. ವೆಂ. ಅವರು ನವೋದಯ ಪಂಥದಿಂದ ನವ್ಯಕ್ಕೆ ಬಂದ ಒಬ್ಬ ಪ್ರಮುಖ ಕವಿ. ಅವರ ಮೊದಲನೆಯ ಸಂಕಲನ `ನವನೀರವ’ ದಲ್ಲಿ ನವೋದಯ ಸಂವೇದನೆಯ ಕವಿತೆಗಳು ಮತ್ತು ಸಮಾಜದ ವಾಸ್ತವಗಳನ್ನು ಹೊಸ ಬಗೆಯಲ್ಲಿ ಹಾಸ್ಯ ದೃಷ್ಟಿಕೋನದಿಂದ ನೋಡಲಾರಂಭಿಸಿದ ಕವಿತೆಗಳಿವೆ. ಸಂಖ್ಯೆಯ ದೃಷ್ಟಿಯಿಂದ ಅವರು ಬರೆದ ಕವನಗಳು ಹೆಚ್ಚಿಲ್ಲ. ನವೋದಯ ಮತ್ತು ನವ್ಯ ಎರಡೂ ಬಗೆಯ ಕಾವ್ಯ ಪ್ರಕಾರಗಳಲ್ಲೂ ಅವರು ಕವನಗಳನ್ನು ರಚಿಸಿದ್ದಾರೆ. ನವ್ಯದಲ್ಲಿ ವ್ಯಂಗ್ಯಾಭಿವ್ಯಕ್ತಿಯನ್ನು ಸಾಧಿಸಿದ್ದು ಅವರ ಹೆಚ್ಚುಗಾರಿಕೆ.
ಡಾ.ಬಿ. ಜನಾರ್ದನ ಭಟ್ ಬರೆಯುವ ಕರಾವಳಿ ಕವಿರಾಜಮಾರ್ಗ ಸರಣಿಯಲ್ಲಿ ಪಾ.ವೆಂ. ಆಚಾರ್ಯ ಅವರ ಕುರಿತ ಬರಹ

 

ಕನ್ನಡದ ನವ್ಯ ಕವಿಗಳಲ್ಲಿ ಉಡುಪಿಯ ಪಾ. ವೆಂ. (ಪಾಡಿಗಾರು ವೆಂಕಟರಮಣ ಆಚಾರ್ಯ : 1915-1992) ಅವರಿಗೆ ಒಂದು ವಿಶಿಷ್ಟ ಸ್ಥಾನವಿದೆ. ಪಿ. ಲಂಕೇಶರು ತಮ್ಮ ‘ಅಕ್ಷರ ಹೊಸ ಕಾವ್ಯ’ದಲ್ಲಿ ಅವರ ಕೆಲವು ಕವಿತೆಗಳನ್ನು ಸೇರಿಸಿಕೊಂಡಿದ್ದರು. ಅವರನ್ನು ನವ್ಯ ಕವಿ ಎಂದು ಪರಿಗಣಿಸಿದರೆ ಅವರು ಅಡಿಗರ ಸಮಕಾಲೀನರು. ಆದರೆ ಇವರ ಲೋಕದೃಷ್ಟಿ ಬೇರೆ. ಪಾ.ವೆಂ. ಅವರ ಕಾವ್ಯದಲ್ಲಿ ಚಿಕಿತ್ಸಕ ವ್ಯಂಗ್ಯ ಶೈಲಿ, ನವೀನ ಲೋ ಮಿಮೆಟಿಕ್ ದೃಷ್ಟಿಕೋನ ಮತ್ತು ಮಂದಹಾಸವನ್ನು ಹುಟ್ಟಿಸುವ ಒಳನೋಟಗಳಿವೆ.

ತಮ್ಮ ಕಾವ್ಯದ ಬಗ್ಗೆ ಅವರೇ ಹೇಳಿಕೊಂಡಿರುವ ಮಾತುಗಳು ಹೀಗಿವೆ: “ರೊಮ್ಯಾಂಟಿಕ್ ಕಾಲಕ್ಕೆ ಸಲ್ಲದ ಒಂದು ವ್ಯಂಗ್ಯ ದೃಷ್ಟಿ ಇಲ್ಲಿ ಕಾಣಿಸುತ್ತಿದ್ದರೆ, ಅದಕ್ಕೆ ನಾನು ನವ್ಯತ್ವಕ್ಕೆ ಮತಾಂತರವಾದದ್ದು ಕಾರಣವಾಗಿರದೆ ಎಂಥ ಭ್ರಾಂತ ಆದರ್ಶವಾದಿಯ ಕಣ್ಣುಗಳ ಪರೆಯನ್ನೂ ಕಳಚಬಲ್ಲ ಪತ್ರಿಕೋದ್ಯಮಕ್ಕೆ `ಇಳಿ’ದದ್ದು ಒಂದು ಕಾರಣವಾಗಿರಬಹುದು.”

ಪಾ.ವೆಂ. ಅವರು ಹುಬ್ಬಳ್ಳಿಯ ‘ಕಸ್ತೂರಿ’ ಮಾಸಿಕದ ಸಂಪಾದಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿ ಕನ್ನಡ ನಾಡಿನ ಚಿರಸ್ಮರಣೀಯ ಪತ್ರಿಕಾ ಸಂಪಾದಕರಲ್ಲಿ ಒಬ್ಬರಾಗಿದ್ದಾರೆ. ಕನ್ನಡ ಪತ್ರಿಕೋದ್ಯಮ ಮಾತ್ರವಲ್ಲ, ಸಾರಸ್ವತ ಲೋಕದಲ್ಲಿಯೂ ಅವರದು ಅಚ್ಚಳಿಯದ ಹೆಸರು. ಬಿಡಿಕವಿತೆಗಳು, ಸಣ್ಣ ಕತೆಗಳು, ಹಾಸ್ಯ ಬರಹಗಳು, ಹರಟೆಗಳು, ಲೋಕಜ್ಞಾನದ ಲೇಖನಗಳು, ಪದಾರ್ಥ ಚಿಂತನೆ (ಶಬ್ದಮೂಲ ಶೋಧನೆ) – ಈ ಕ್ಷೇತ್ರಗಳಲ್ಲಿ ಕನ್ನಡಕ್ಕೆ ಅವರು ನೀಡಿದ ಕೊಡುಗೆ ದೊಡ್ಡದು.

ಬದುಕು

ಪಾಡಿಗಾರು ಅನ್ನುವುದು ಉಡುಪಿಯ ಒಂದು ಭಾಗ. ವೆಂಕಟರಮಣ ಆಚಾರ್ಯರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ಬಾಲ್ಯವನ್ನು ತೀರ ಬಡತನದಲ್ಲಿ ಕಳೆದರು. ಇವರ ತಾಯಿ ಸೀತಮ್ಮ, ತಂದೆ ಲಕ್ಷ್ಮೀನಾರಾಯಣ ಆಚಾರ್ಯರು. ತಂದೆ ಹರಿಕಥೆ ಮಾಡುತ್ತಿದ್ದರು; ಆಶುಕವಿಯಾಗಿದ್ದರು. ಸಾಕಷ್ಟು ದೇಶ ಸಂಚಾರ ಮಾಡಿದ್ದರು. ವೆಂಕಟರಮಣ ಆಚಾರ್ಯರ ಬಾಲ್ಯದಲ್ಲಿ ಅವರಿಗೆ ಸೋದೆ ಮಠದ ಉದ್ಯೋಗ ಇದ್ದುದರಿಂದ ಇವರು ಸುಮಾರು ಎಂಟು ವರ್ಷವಾಗುವವರೆಗೆ ಸೋದೆಯಲ್ಲಿಯೇ ಇದ್ದರು. ಐದು ವರ್ಷವಾಗುವಾಗ ಅಪ್ಪ ತೀರಿಕೊಂಡಿದ್ದರೂ, ಅಲ್ಲಿ ಅಕ್ಕ ಭಾವನ ಆಶ್ರಯದಲ್ಲಿ ಇದ್ದರು. ಎಂಟು ವರ್ಷದ ನಂತರ ಇವರು ತಾಯಿಯೊಂದಿಗೆ ಉಡುಪಿಗೆ ಬಂದು ತಮಗೇ ಸೇರಿದ್ದ ಹಳೆಯ ಮನೆಯನ್ನು ದುರಸ್ತಿ ಮಾಡಿ ಅಲ್ಲಿ ನೆಲೆಸಿದರು. ವೆಂಕಟರಮಣ ಮನೆಯಲ್ಲಿಯೇ ಓದು ಬರಹವನ್ನು ಕಲಿತದ್ದರಿಂದ ಮೂರನೆಯ ತರಗತಿಗೆ ಸೇರಿಸಿಕೊಂಡರು. ಮುಂದೆ ಬಡತನದಿಂದಾಗಿ ವಿದ್ಯಾಭ್ಯಾಸ ನಿಂತುಹೋಗುವ ಸಂಭವವಿದ್ದಾಗ ವಿಧವೆ ಹೆಂಗಸೊಬ್ಬರು ಅವರನ್ನು ತಮ್ಮ ಮನೆಯಲ್ಲಿ ಪೂಜೆ ಮಾಡಿ, ಒಂದೂಟ ಮಾಡಿ ಶಾಲೆಗೆ ಹೋಗುವ ಅವಕಾಶ ಕಲ್ಪಿಸಿದರು. ಶಾಲಾ ಶುಲ್ಕವನ್ನೂ ಅವರೇ ತುಂಬಿದರು.

ಮುಂದೆ ಅವರ ದೊಡ್ಡಪ್ಪನ ಮಗನ ಸಹಾಯದಿಂದ ಉಡುಪಿ ಬೋರ್ಡ್ ಹೈಸ್ಕೂಲಿನಲ್ಲಿ ಮೆಟ್ರಿಕ್ಯುಲೇಶನ್ ಮಾಡಿದರು. ಶಾಲೆಗೆ ಮೊದಲ ಸ್ಥಾನಿಯಾದರೂ ಆರ್ಥಿಕ ಅಡಚಣೆಯಿಂದಾಗಿ ಕಲಿಕೆಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.

ಅವರು ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಪಾಠ ಪುಸ್ತಕಗಳಲ್ಲಿದ್ದ ಪದ್ಯಗಳ ಮಾದರಿಯಲ್ಲಿ ಪದ್ಯ ಬರೆಯಲು ಪ್ರಾರಂಭಿಸಿದ್ದರು. ಅವರಿಗೆ ನೆನಪಿರುವ ಮೊದಲ ಪದ್ಯ ಹೀಗಿದೆ (ನೆರೆಮನೆಯ ಕೋಳಿ ಇವರ ಅಂಗಳಕ್ಕೆ ಹಾರಿಬಂದು ಇವರ ಬ್ರಾಹ್ಮಣ್ಯಕ್ಕೆ ಸವಾಲು ಹಾಕಿದಾಗ ಬಾಲಕವಿಯ ಪ್ರತಿಭಟನಾಕಾವ್ಯ!):

ಬಂದಿತಾದರೆ ಕೋಳಿ ಇಲ್ಲಿಗೆ
ಕೊಂದು ಬಿಸುಡುವೆನದನು ಜಾಗ್ರತೆ
ಯಿಂದ ಇರಿರೈ ಕೋಳಿ ಸಾಕುವವರೆಲ್ಲರವನಿಯಲಿ!

ಹೈಸ್ಕೂಲು ದಿನಗಳಲ್ಲಿ ಸಾಕಷ್ಟು ಸಾಹಿತ್ಯ ಕೃತಿಗಳನ್ನು ಓದಿದರು. ಬಂಗಾಳಿ ಭಾಷೆಯನ್ನು ಸ್ವಪ್ರಯತ್ನದಿಂದ ಕಲಿತುಕೊಂಡು, ಅಲ್ಲಿ ಇಲ್ಲಿ ಸಿಕ್ಕಿದ ಹಣದಿಂದ ಠಾಕೂರರ ‘ಗೀತಾಂಜಲಿ’ಯನ್ನು ತರಿಸಿಕೊಂಡರು. ಕವಿತೆಗಳನ್ನು ಬರೆಯುವ ಪ್ರಯತ್ನ ಮುಂದುವರಿದಿತ್ತು.

ಉದ್ಯೋಗ ಹುಡುಕ ತೊಡಗಿದ ಹದಿಹರೆಯದ ವೆಂಕಟರಮಣರಿಗೆ ಮೊದಲು ಸಿಕ್ಕಿದ್ದು ಕಡಿಯಾಳಿ ಶಾಲೆಯಲ್ಲಿ ಎರಡನೆಯ ತರಗತಿಗೆ ಕಲಿಸುವ ಮಾಸ್ತರಿಕೆಯ ಕೆಲಸ. ಅದರಲ್ಲಿ ಅವರು ವಿಫಲರಾದರು. ನಂತರ ಎಸ್. ಯು. ಪಣಿಯಾಡಿಯವರ ಸ್ವದೇಶೀ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸಕ್ಕೆ ಸೇರಿದರು. ಪಣಿಯಾಡಿಯವರ ವ್ಯವಹಾರಗಳು ಹಲವಾರು ಇದ್ದವು – ಅಂಗಡಿ, ಉಡುಪಿಯಲ್ಲಿ ತುಳುನಾಡು ಪ್ರೆಸ್, ಮಣಿಪಾಲ ಪ್ರೆಸ್, ಅಂತರಂಗ ಪತ್ರಿಕೆ ಇತ್ಯಾದಿ. ಪಾ. ವೆಂ. ಎಕೌಂಟೆನ್ಸಿಯನ್ನು ಕಲಿತು ಈ ಎಲ್ಲ ವ್ಯವಹಾರಗಳ ಲೆಕ್ಕಪತ್ರ ನೋಡತೊಡಗಿದರು. ನಂತರ ‘ಅಂತರಂಗ’ ಪತ್ರಿಕೆಯ ಉಪಸಂಪಾದಕರಾಗಿ ಜನಪ್ರಿಯ ಪತ್ರಿಕೋದ್ಯಮದ ತರಬೇತಿಯನ್ನು ಪಡೆದರು. (ಕೆ. ಹೈದರ್ ಎಂಬ ಖ್ಯಾತ ಪತ್ರಕರ್ತ-ಸಾಹಿತಿ ‘ಅಂತರಂಗ’ದ ಸಂಪಾದಕರಾಗಿದ್ದರು. ಮುಂದೆ ಅವರು ಪಾಕಿಸ್ತಾನಕ್ಕೆ ಹೋಗಿ, ಅಲ್ಲಿನ ಇಂಗ್ಲಿಷ್ ಪತ್ರಿಕೆಯೊಂದರ ಸಂಪಾದಕರಾದರು. ಆಗಲೂ ಉಡುಪಿಯ ಪತ್ರಕರ್ತ ಗೆಳೆಯರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದರು).

1940 ರಲ್ಲಿ ಇದ್ದಕ್ಕಿದ್ದಂತೆ ಎಸ್. ಯು. ಪಣಿಯಾಡಿಯವರು ಆರ್ಥಿಕವಾಗಿ ದಿವಾಳಿಯಾಗಿ ಉಡುಪಿಯಿಂದ ಯಾರಿಗೂ ತಿಳಿಸದೆ ಹೊರಟುಹೋದರು. ಕಂಪೆನಿಯ ಉದ್ಯೋಗಿಯಾಗಿದ್ದ ಪಾ. ವೆಂ. ಕೂಡ ಆಗ ಉಂಟಾದ ಸಮಸ್ಯೆಯನ್ನು ಎದುರಿಸಲಾಗದೆ ಉಡುಪಿ ಬಿಟ್ಟು ಮದ್ರಾಸಿಗೆ ಹೋಗಿ ಹೋಟೆಲೊಂದರಲ್ಲಿ ಗುಮಾಸ್ತರಾಗಿ ಕೆಲಸ ಮಾಡಿದರು. 1942 ರಲ್ಲಿ ಹುಬ್ಬಳ್ಳಿಗೆ ಹೋಗಿ, ಸಂಯುಕ್ತ ಕರ್ನಾಟಕ ಪತ್ರಿಕಾಲಯಕ್ಕೆ ಸೇರಿದರು. ಆ ಬಳಗದ ಮುಖ್ಯಸ್ಥ ಮೊಹರೆ ಹನುಮಂತ ರಾಯರು ಆಚಾರ್ಯರನ್ನು ‘ಕರ್ಮವೀರ’ ವಾರಪತ್ರಿಕೆಗೆ ಹಾಕಿದರು. 1956ರಲ್ಲಿ ‘ಕಸ್ತೂರಿ’ ಮಾಸಪತ್ರಿಕೆ ಪ್ರಾರಂಭವಾದಾಗ ಪಾವೆಂ ಅವರಿಗೆ ಸಂಪಾದಕತ್ವದ ಹೊಣೆಯನ್ನು ಒಪ್ಪಿಸಿದರು. 18 ವರ್ಷಗಳ ಕಾಲ ಆಚಾರ್ಯರು ಕಸ್ತೂರಿಯ ಕಂಪನ್ನು ಕರ್ನಾಟಕದಾದ್ಯಂತ ಪಸರಿಸಿದರು. 1975 ರಲ್ಲಿ ಅನಾರೋಗ್ಯದ ಕಾರಣ ‘ಕಸ್ತೂರಿ’ ಪತ್ರಿಕೆಗೆ ರಾಜೀನಾಮೆ ನೀಡಿದರು. 1992 ಏಪ್ರಿಲ್ 4 ರಂದು ಪಾವೆಂ ನಿಧನರಾದರು.

ನವೋದಯದಿಂದ ನವ್ಯಕ್ಕೆ

ಕಾವ್ಯ ಪಾವೆಂ ಅವರ ನೆಚ್ಚಿನ ಸಾಹಿತ್ಯ ಪ್ರಕಾರ. ಪಾ. ವೆಂ. ಅವರ ಮೊದಲ ಕವಿತೆಗಳು ‘ಜಯಕರ್ನಾಟಕ’, ‘ಪ್ರಬುದ್ಧ ಕರ್ಣಾಟಕ’, ‘ಜೀವನ’, ‘ಕರ್ಮವೀರ’ ಮತ್ತು ‘ಧುರೀಣ’ ಪತ್ರಿಕೆಗಳಲ್ಲಿ ಪ್ರಕಟವಾದವು. ಪಾವೆಂ ಅವರು ನವೋದಯ ಪಂಥದಿಂದ ನವ್ಯಕ್ಕೆ ಬಂದ ಒಬ್ಬ ಪ್ರಮುಖ ಕವಿ. ಅವರ ಮೊದಲನೆಯ ಸಂಕಲನ `ನವನೀರವ’ (1952) ದಲ್ಲಿ ನವೋದಯ ಸಂವೇದನೆಯ ಕವಿತೆಗಳು ಮತ್ತು ಸಮಾಜದ ವಾಸ್ತವಗಳನ್ನು ಹೊಸ ಬಗೆಯಲ್ಲಿ ಹಾಸ್ಯ ದೃಷ್ಟಿಕೋನದಿಂದ ನೋಡಲಾರಂಭಿಸಿದ ಕವಿತೆಗಳಿವೆ. 1978ರ `ಕೆಲವು ಪದ್ಯಗಳು’ ಸಂಕಲನದಲ್ಲಿ ನವ್ಯ ಕಾವ್ಯ ಸಂಪ್ರದಾಯಕ್ಕೆ ಸೇರುವ, ಆದರೆ ಸ್ವಂತಿಕೆಯುಳ್ಳ ಕವಿತೆಗಳಿವೆ.

ಸಂಖ್ಯೆಯ ದೃಷ್ಟಿಯಿಂದ ಅವರು ಬರೆದ ಕವನಗಳು ಹೆಚ್ಚಿಲ್ಲ. ನವೋದಯ ಮತ್ತು ನವ್ಯ ಎರಡೂ ಬಗೆಯ ಕಾವ್ಯ ಪ್ರಕಾರಗಳಲ್ಲೂ ಅವರು ಕವನಗಳನ್ನು ರಚಿಸಿದ್ದಾರೆ. ನವ್ಯದಲ್ಲಿ ವ್ಯಂಗ್ಯಾಭಿವ್ಯಕ್ತಿಯನ್ನು ಸಾಧಿಸಿದ್ದು ಅವರ ಹೆಚ್ಚುಗಾರಿಕೆ.

ಕನ್ನಡದ ಸಂದರ್ಭದಲ್ಲಿ ನವೋದಯದ ಕವಿಗಳು ಸ್ವಾತಂತ್ರ್ಯ ಪ್ರೇಮವನ್ನು ಘೋಷಣೆಯ ಧ್ವನಿಯಲ್ಲಿ (ಉದಾಹರಣೆಗೆ ಕಯ್ಯಾರ ಕಿಞ್ಞಣ್ಣ ರೈಗಳು) ಹೇಳುವ ಕವಿತೆಗಳನ್ನೂ, ರಜಪೂತರನ್ನಾಗಲೀ ಮರಾಠರನ್ನಾಗಲೀ ಮಾದರಿಯಾಗಿ ಇಟ್ಟುಕೊಂಡು ಕ್ಷಾತ್ರವನ್ನು ವೈಭವೀಕರಿಸುವ ಕವಿತೆಗಳನ್ನೂ (ಉದಾಹರಣೆಗೆ ಸೇಡಿಯಾಪು ಕೃಷ್ಣ ಭಟ್ಟರ ‘ಕೃಷ್ಣಾಕುಮಾರಿ’), ಕತೆಗಳನ್ನೂ (ಪೇಜಾವರ ಸದಾಶಿವರಾವ್ ಲೇಖನದಲ್ಲಿ ಈ ಬಗ್ಗೆ ಹೇಳಲಾಗಿದೆ) ಬರೆದಿದ್ದಾರೆ. ಪಾವೆಂ ಅವರೂ ಅಂತಹ ಒಂದೊಂದು ಕವಿತೆಗಳನ್ನು ಬರೆದಿರುವುದು ಉಲ್ಲೇಖಾರ್ಹವಾಗಿದೆ. ‘ರಣಭೇರಿ’ ಮೊದಲನೆಯ ಮಾದರಿಯಲ್ಲಿದ್ದರೆ. ‘ಇನಿಯನ ಸ್ವಾಗತ’ ಎರಡನೆಯ ಮಾದರಿಯಲ್ಲಿದೆ (ಯುದ್ಧದಲ್ಲಿ ತನ್ನ ಪತಿ ಗೆದ್ದು ಬರುತ್ತಾನೆಂದು ರಜಪೂತ ರಾಜಕುಮಾರಿ ಕಾಯುತ್ತಿದ್ದರೆ ಆತ ಸೋತು ಬರುತ್ತಾನೆ; ಆಕೆ ಬಾಗಿಲು ತೆರೆಯುವುದಿಲ್ಲ). ‘ಸಂಯುಕ್ತೆ’ ಎನ್ನುವ ಇನ್ನೊಂದು ಕವಿತೆಯನ್ನೂ ರಜಪೂತರ ಪೃಥ್ವೀರಾಜ ಸಂಯುಕ್ತೆಯರ ಕಥೆಯನ್ನಾಧರಿಸಿ ಪಾವೆಂ ಅವರು ಬರೆದಿದ್ದಾರೆ. ‘ರಣಭೇರಿ’ ಕವಿತೆಯನ್ನು ಆ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟದ ಸಭೆಗಳಲ್ಲಿ ಹಾಡಲಾಗುತ್ತಿತ್ತೇ ಎನ್ನುವುದು ತಿಳಿಯದು. ಪಾವೆಂ ಅವರ ಯಜಮಾನರಾದ ಎಸ್. ಯು. ಪಣಿಯಾಡಿಯವರು ಉಡುಪಿಯಲ್ಲಿ ಸ್ವಾತಂತ್ರ್ಯ ಹೋರಾಟದ ಒಬ್ಬರು ಮುಂದಾಳುಗಳಾಗಿದ್ದರು. ದೇವಸ್ಥಾನಗಳಿಗೆ ದಲಿತರನ್ನು ಕರೆದೊಯ್ಯುವುದು, ಖಾದಿ ಮಾರಾಟ (ಅಂತಹ ಅಂಗಡಿಯಲ್ಲಿಯೇ ಪಾವೆಂ ಅವರು ಮೊದಲು ಕೆಲಸಕ್ಕೆ ಸೇರಿದ್ದರು), ಮದ್ಯಪಾನ ವಿರೋಧಿ ಹೋರಾಟಗಳಲ್ಲಿಯೇ ಪಣಿಯಾಡಿ ಮತ್ತು ಅವರ ಪತ್ನಿ ಭಾರತೀಬಾಯಿ ಪಣಿಯಾಡಿಯವರು ಸಕ್ರಿಯರಾಗಿದ್ದವರು. ಹಾಗಾಗಿ ಪಾವೆಂ ಅವರು ಈ ಕವಿತೆಯನ್ನು ಹೋರಾಟದ ಉದ್ದೇಶಕ್ಕಾಗಿ ಬರೆದಿದ್ದರೂ ಬರೆದಿರಬಹುದು. ‘ರಣಭೇರಿ’ ಕವಿತೆ ಪ್ರಾರಂಭವಾಗುವುದು ಹೀಗೆ:

ಮೊಳಗಲಿ ಮೊಳಗಲಿ ರಣಭೇರಿ
ಸ್ವಾತಂತ್ರ್ಯದ ರಣಭೇರಿ

ಈ ಕವಿತೆಯ ಜತೆಗೆ ಅವರ ಪರೋಕ್ಷ ವ್ಯಂಗ್ಯ ಕವಿತೆ ‘ನೊಣ’ದಲ್ಲಿರುವ ದೇಶಭಕ್ತಿಯನ್ನು ಹೋಲಿಸಿದರೆ ಪಾವೆಂ ಅವರ ಕಾವ್ಯದಲ್ಲಿ ಆದ ಬೆಳವಣಿಗೆ ಅಥವಾ ಪರಿವರ್ತನೆಯನ್ನು ಗುರುತಿಸಬಹುದು.

`ನವನೀರದ’ ಸಂಕಲನದಲ್ಲಿ ನವೋದಯದ ಕವಿಗಳಿಗೆ ಪ್ರಿಯವಾದ ಪ್ರಕೃತಿ ವರ್ಣನೆ, ಜಡಪದಾರ್ಥಗಳಿಗೆ ಮತ್ತು ಪಕ್ಷಿಗಳಿಗೆ ಚೇತನವನ್ನು ಆರೋಪಿಸಿ, ಸಂಬೋಧಿಸಿ ಮಾತಾಡುವ ಕವಿತೆಗಳಿವೆ. ಉದಾಹರಣೆಗೆ ‘ಚುಕ್ಕಿಗಳಿಗೆ’ ಎಂಬ ಕವಿತೆ. ಪಂಜೆಯವರ `ತೆಂಕಣ ಗಾಳಿಯಾಟ’ ಶೈಲಿಯ `ನವನೀರದ’ ಎಂಬ ಕವನದಲ್ಲಿ ಕರಾವಳಿಯ ಮಳೆಗಾಲದ ಚಿತ್ರಣವಿದೆ. ಪ್ರಕೃತಿ ಪ್ರೇಮವಿರುವ ಇನ್ನೊಂದು ಹಾಡು, ‘ಸುಗ್ಗಿಯ ಹಾಡು’. ಪ್ರಾರಂಭದ ನವೋದಯದ ರಮ್ಯ ಮನೋಭಾವವದ ಮ್ಯಾನಿಫೆಸ್ಟೋ ಕವಿತೆಯಂತಿರುವ ‘ಆರಂಬರೀ ಜಗವು ದುಗುಡದರಮನೆಯೆಂದು?’ (1939) ಕವಿತೆಯಲ್ಲಿ ಕವಿ ಹೇಳುತ್ತಾರೆ:

ದುಗುಡದರಮನೆಯಲ್ಲ, ಸುಖದ ಕಾವಣ ತಿರೆಯು
ಅರಿತವನೆ ಸುಲಿಯುವನು ಆನಂದ ಭಂಡಾರ!
ಅಹುದು ಸುಲಿಯುವೆನು ನಾನು ಸೊಗದ ಭಂಡಾರವನು!
ಬಾಂದಳದಿ ಸುಳಿಸುಳಿದು ಬಾದಲಗಳೆದೆರಸವ
ಬಾಯಾರಿದೀ ಧರೆಗೆ ಹಂಚಿಕ್ಕಿ ಸಾರುತಿಹ
ಮಾರುತನ ಮಾಳ್ಕೆಯಲಿ ಸುಲಿಸುಲಿದು ಹಂಚುವೆನು!

‘ಬಾರೆಂದು ಕರೆದಾಗ’ (1942) ಮತ್ತು ‘ಒಂದು ಕಾಗದ’ ಎಂಬ ಪ್ರೇಮ ಕವನಗಳನ್ನೂ ಪಾವೆಂ ಅವರು ಬರೆದಿದ್ದಾರೆ. (1953 ರಲ್ಲಿ ‘ಪುಸ್ತಕ ಪ್ರಪಂಚ’ ಪತ್ರಿಕೆಗಾಗಿ ‘ನವನೀರದ’ ಪುಸ್ತಕದ ವಿಮರ್ಶೆ ಮಾಡುವಾಗ ಡಾ. ಹಾ. ಮಾ. ನಾಯಕರು, ಇವುಗಳು “ತೀರಾ ಸಾಮಾನ್ಯವಾದ ಪ್ರೇಮಗೀತೆಗಳು” ಎಂದ ಅಭಿಪ್ರಾಯಪಟ್ಟಿದ್ದರು. ಪಾವೆಂ ಕಸ್ತೂರಿ -1977).

ಈ ಕಾಲದಲ್ಲಿ ಅವರು ಬಹುಶಃ ಪತ್ನಿಯನ್ನು ಊರಿನಲ್ಲಿ ಬಿಟ್ಟುಹೋಗಿದ್ದಿರಬಹುದು. ಎರಡೂ ಕವಿತೆಗಳಲ್ಲಿ ಹೆಂಡತಿಗೆ ಪತ್ರ ಬರೆದುದರ ಸೂಚನೆಯಿದೆ. ‘ಬಾರೆಂದು ಕರೆದಾಗ’ ನವೋದಯದ ಸುಂದರ ದಾಂಪತ್ಯ ಗೀತೆ. ಇದರ ಕೊನೆಯ ಚರಣದಲ್ಲಿ ಪತ್ರದ ಉಲ್ಲೇಖವಿದೆ:

ನಾ ಬರೆದ ಪತ್ರಗಳ ಶಿಶಿರದೊಣ ಪತ್ರಗಳ
ನೀ ತುಟಿಗೆ ಹಚ್ಚಲೇಕೆ?
ನನ್ನೆದುರು ಮುಚ್ಚಿಟ್ಟ, ಮೋನದೊಳು ಹೊಚ್ಚಿಟ್ಟ
ಮಾತುಗಳ ಬಿಚ್ಚಲೇಕೆ – ಓ ನಲ್ಲೆ
ಕಾಗದದಿ ನಚ್ಚದೇಕೆ?

ತಾನು ಜತೆಗಿದ್ದಾಗ ಪ್ರೇಮವನ್ನು ವ್ಯಕ್ತಪಡಿಸಲರಿಯದ ಪತ್ನಿ ಒಣಗಿದ ಎಲೆಯಂತಿರುವ (ಒಣ ಪತ್ರ) ತನ್ನ ಪತ್ರಕ್ಕೆ ಮುತ್ತಿಡುವ ಬದಲು ತನಗೇ ಸ್ಪಂದಿಸಬಾರದೇ ಎನ್ನುವುದು ಕವಿಯ ರಸಿಕ ನಿವೇದನೆ.

ಮುಂದಿನ ‘ಒಂದು ಕಾಗದ’ (1942) ಕವಿತೆಯಲ್ಲಿ ಪಾವೆಂ ಈ ಪತ್ರದ ವಿಷಯವನ್ನು ಎತ್ತಿಕೊಂಡು, ಹಾಸ್ಯ ಮಾಡಿದ್ದಾರೆ. ಈ ಕವಿತೆಯಲ್ಲಿ ಕಾಣುವ ತುಂಟತನ ಇಂಗ್ಲಿಷಿನ ಮೆಟಾಫಿಸಿಕಲ್ ಕವಿಗಳನ್ನು ನೆನಪಿಸುತ್ತದೆ.

ಒಂದು ಕಾಗದ

ಏನೆಂದು ನಾ ನಿನಗೆ ಕಾಗದವ ಬರೆಯಲೇ
ನನ್ನ ಕೈ ಹಿಡಿದ ಲಚ್ಚು?
ಎಷ್ಟೆಷ್ಟು ಯೋಚಿಸಿದರೂ ಹೊಳೆಯಲೊಲ್ಲದೇ-
ನಿನಗೆ ಕಾಗದದ ಹುಚ್ಚು !

ನಾ ಕ್ಷೇಮ, ನೀ ಕ್ಷೇಮವೇ?- ಎಂದು ಕೇಳಲಿಕೆ
ಬರೆಯಬೇಕೇ ಕಾಗದ?
ಕ್ಷೇಮವಾಗಿದ್ದದ್ದರಿಂದಲೇ ಬರೆದಿಲ್ಲ
ಎಂದು ತಿಳಿಯಲುಬಾರದಾ?

ಕಾಗದಕೆ ಬೆಲೆ ಹೆಚ್ಚು, ಲಕ್ಕೋಟೆಗೋ ಬಹಳ,
ಶಾಯಿಗೂ ಕಡಿಮೆಯಿಲ್ಲ.
(ಕಾಗದವ ಬರೆವ ಕೈಗೂ ಯೋಚಿಸುವ ತಲೆಗು
ಯಾರು ಬೆಲೆ ಕಟ್ಟಬಲ್ಲ?).

ನಾನೊಂದು ಪತ್ರ ಬರದರೆ, ಎಲ್ಲವೂ ಸೇರಿ
ನನಗೆ ಇಷ್ಟೆಲ್ಲ ವೆಚ್ಚ !
ನೀನು ಸುಮ್ಮನೆ ಇರುವೆಯೇನು? – ಉತ್ತರ ಬರೆವೆ.
ಅದಕೆ ಮತ್ತಷ್ಟು ವೆಚ್ಚ !

ಇಷ್ಟೆಲ್ಲ ವೆಚ್ಚ ಮಾಡಿದರೆ ನಿನಗದರಿಂದ
ಸಿಗುವ ಆದಾಯವೇನು?
ಟಪ್ಪಾಲು ಕಟ್ಟೆಯಲಿ ಚೀಟು ಮಾರುವ ಕೇಡಿ
ನಮ್ಮ ಚಿಕ್ಕಯ್ಯನೇನು?

ಹುಚ್ಚುಚ್ಚು ನಾ ಹೀಗೆ ಬರೆದು ಹಾಕಿದೆನೆಂದು
ಸಿಟ್ಟಾಗಬೇಡ ರಾಣಿ !
ತಪ್ಪದೇ ಇನ್ನು ಹದಿನೈದು ದಿವಸಕ್ಕೊಮ್ಮೆ
ಬರೆಯುವೆನು, ನಂಬು, ಜಾಣೆ !
1942

`ನವನೀರದ’ದ ಮುನ್ನುಡಿಯಲ್ಲಿ ಪಾ.ವೆಂ. ಹೀಗೆ ಹೇಳುತ್ತಾರೆ : “ಆಧುನಿಕ ಕನ್ನಡ ಕವಿತೆಯ ಉತ್ಸಾಹದ ಕಾಲದಲ್ಲಿ ಕವಿತೆಗಳನ್ನು ಬರೆಯತೊಡಗಿದವರಲ್ಲಿ ನಾನೂ ಒಬ್ಬ. ವಾಸ್ತವಿಕವಾಗಿ ನನ್ನ ಹನ್ನೊಂದನೇ ವಯಸ್ಸಿನಿಂದಲೇ ಷಟ್ಪದಿ, ಕಂದ, ವೃತ್ತಾದಿ ವಿಧಾನಗಳಲ್ಲಿ ಕೈ ಪಳಗಿಸುತ್ತ ಬಂದಿದ್ದವನು 1932 – 33ರಲ್ಲಿ ಹೊಸ ಕವಿತೆಯ ಕರೆಯನ್ನು ಮುಟ್ಟಿದೆನೆಂದರೂ ಸಲ್ಲುವುದು.” (ಅವರು ಇಲ್ಲಿ ‘ಹೊಸ ಕವಿತೆಯ’ ತೀರವನ್ನು ಮುಟ್ಟಿದೆನೆಂದು ಹೇಳುವುದು ನವೋದಯದ ಹೊಸ ಬಗೆಯ ಕಿರುಗವನಗಳ ಮಾದರಿಯಲ್ಲಿ ಬರೆಯಲಾರಂಭಿಸಿದೆ ಎಂಬರ್ಥದಲ್ಲಿ).

ಪಾವೆಂ ಅವರು ಅಭಿವ್ಯಕ್ತಿ ಶೈಲಿಯನ್ನು ಬದಲಾಯಿಸಿಕೊಳ್ಳತೊಡಗಿದ್ದುದಕ್ಕೆ ಈ ಸಂಕಲನದಲ್ಲಿಯೇ ಸೂಚನೆಗಳಿವೆ. 1937 ರಲ್ಲಿಯೇ ಅವರು ‘ಅಂತರಂಗ’ದ ಉಪಸಂಪಾದಕರಾಗಿ ಪತ್ರಕರ್ತರಾಗಿದ್ದರು. ಅಲ್ಲಿಂದಲೇ ಅವರು ಬದುಕನ್ನು ಅವಲೋಕಿಸುವ ದೃಷ್ಟಿಕೋನದಲ್ಲಿ ಒಂದು ಮಾರ್ಗಾಂತರವನ್ನು ಕಾಣಬಹುದು. ಅದು ಜೀವನದರ್ಶನದ ಬದಲಾವಣೆಯೇನೂ ಅಲ್ಲ, ಮನೋಭಾವದ ಬದಲಾವಣೆ ಅಷ್ಟೆ. ಒಂದು ಸಂಚಾರೀ ಭಾವವೆನ್ನಬಹುದು. ಇದಕ್ಕೆ ಉದಾಹರಣೆಯಾಗಿ, ‘ನುಸಿಗೆ’ (1938) ಅನ್ನುವ ವ್ಯಂಗ್ಯ ಕವಿತೆಯನ್ನು ನೋಡಬಹುದು.

ನುಸಿಗೆ

ಬಡ ಮುನಸಿಪಾಲಿಟಿಗೆ ಒಡಹುಟ್ಟಿದವ ನೀನು !
ನಿನ್ನ ಗಾನದ ಸಿರಿಗೆ ಕರುಬಿ, ನಾಚಿಕೆಗೊಂಡು
ಕಾಡಾಡಿಯಾಗಿ ತಲೆಮರೆಸಿಹುದು ಪಿಕವೊಂದು !
ನಾಗರಿಕ ನರನಾರಿವದನ ಕಮಲದ ಜೇನು
ಸವಿದು ಜೇಂಕರಿಸಿ ನಲಿವಾರಡಿಯೆ ನೀನೇನು?
ನಿದ್ದೆವೆಣ್ಣಿನ ಕೈಯ ಬೀಣೆ ! ನಿನ್ನಯ ದನಿಯ
ಮಾಧುರಿಗೆ ಮಾನವನು ಮೈಮರೆತು ಮನದಣಿಯ
ತಾಳವಿಕ್ಕುವ ಭರಕೆ, ಸೂಕ್ಷ್ಮ ಜೀವಿಯೆ, ನೀನು
ನುಜ್ಜುಗುಜ್ಜಾಗುವುದು ಇಹುದು – ಎಂತಹ ದುಗುಡ!
ಓ ನುಸಿಯೇ, ಪ್ರೇಮಗಾನದ ಸಸಿಯೆ, ಸಂತಸಿಯೆ!
ನಿನ್ನನರಿಯದೆ ಜರೆವ ಮಾನವನೆ ಕಡುಕಿವುಡ!
ಇದಕೊ ! ನಿನಗೆನ್ನ ನೆತ್ತರ ಕಾಣ್ಕೆ, ಹಸಿಬಿಸಿಯೆ !

ಬೇಡುವವರ ರೇಡಿಯೊ ನೀನು ! ಬಡವರ ಬಂಧು !
ಹರಕುಗೋಡೆಯೇ ವಾಸಿ ! ನಿನಗೆ ನಮಿಸುವೆನಿಂದು !
(1938)

ಸುಮಾರು 1940 ರ ನಂತರ ಅವರು ಉಡುಪಿಯನ್ನು ತೊರೆದು ಉದ್ಯೋಗವನ್ನರಸುತ್ತ ಮೊದಲು ಮದ್ರಾಸಿಗೂ, ನಂತರ ಹುಬ್ಬಳ್ಳಿಗೂ ಹೋದರು. ಆಗ ಅವರ ಕವಿತೆಗಳ ಹಿಂದಿನ ಜೀವನದೃಷ್ಟಿಯೂ ಬದಲಾಯಿತು. 1942 ರಲ್ಲಿ ಪ್ರಕಟವಾದ ‘ಆಕಾಂಕ್ಷೆಯೊಂದಿಹುದು’ ಎಂಬ ಕವಿತೆಯಲ್ಲಿ ತನಗೆ ಪ್ರಕೃತಿಯ ಮಡಿಲಲ್ಲಿ (ದಕ್ಷಿಣ ಕನ್ನಡದ ಪ್ರಕೃತಿ ಅನ್ನುವುದು ಇಲ್ಲಿನ, ‘ಪಡುಗಡಲ ತಡಿಯಲ್ಲಿ……’ ಎಂಬಿತ್ಯಾದಿ ಪ್ರಕೃತಿ ವರ್ಣನೆಯಲ್ಲಿ ಸೂಚ್ಯವಾಗಿದೆ) ಹಾಯಾಗಿ ಮಲಗಿ ಸೌಂದರ್ಯವನ್ನು ಆಸ್ವಾದಿಸಬೇಕು ಎಂಬ ಆಸೆಯನ್ನು ಕವಿ ಹೇಳಿಕೊಂಡಿದ್ದಾರೆ. ಕವಿತೆಯ ಕೊನೆ ಹೀಗಿದೆ: “ಆಕಾಂಕ್ಷೆಯೆನಗಿಹುದು / ಆಕಾಂಕ್ಷೆ ಫಲಿಸುವುದೆ?”

ರಮ್ಯ ಮನೋಭಾವ ಅವರ ಕವಿತೆಗಳಿಂದ ದೂರವಾಗಿರುವುದಕ್ಕೂ ಅವರ ಬದುಕಿನ ಮೇಲೆ ಯುದ್ಧಕಾಲದ ಕಷ್ಟಕಾರ್ಪಣ್ಯಗಳ ಮತ್ತು ಆರ್ಥಿಕ ಸಮಸ್ಯೆಗಳ ದಾಳಿಯಾದದ್ದು ಕೂಡ ಕಾರಣವಿರಬಹುದು. ಆಗ ಅವರ ಮೇಲೆ ಹಲವು ಪ್ರಭಾವಗಳಾಗಿರುವುದನ್ನು, ಅದರ ಪರಿಣಾಮವನ್ನು ಅವರೇ `ನನ್ನ ಗೋರಿಯ ಮೇಲೆ’ (1941) ಎಂಬ ಕವನದಲ್ಲಿ ಹಾಸ್ಯವಾಗಿ ಹೇಳಿಕೊಂಡಿದ್ದಾರೆ. ಆ ಕವನದ ಸಾಲುಗಳಿವು :

ಇಲ್ಲೊಬ್ಬ ಕವಿಯಿದ್ದನವನ ಜೀವದ ಬಯಕೆ
ತೀರಿದುದು: ಪ್ರಥಮ ಶರದುದಯದಲ್ಲಿ ಮುಗಿಲೊಂದು
ನೀರಾಗಿ ಸುರಿವುದಕೆ ತಂಪು ಸಾಲದೆ, ಮತ್ತೆ
ನೇರಾಗಿ ಸುರಿವುದಕೆ ಭಾರ ಸಾಲದೆ, ಗಾಳಿ
ಆವಾವ ಕಡೆಗೆ ತೂರುವುದತ್ತ ಹಾರುತಲಿ,
ಒಂದರಿಂದೆರಡಾಗಿ ಹತ್ತಾಗಿ ನೂರಾಗಿ
ಚೂರಾಗಿ ಸಾರಿ ಹರಿಹಂಚಾಗಿ ಹೋಗುವೊಲು
ಅವನ ಜೀವನವಾಯ್ತು.

ಪಾವೆಂ ಅವರ ಕಾವ್ಯದಲ್ಲಿ ಬದಲಾವಣೆ ಆದುದು 1940 ರಲ್ಲಿ ಅವರ ಬದುಕಿನಲ್ಲಿ ಎದ್ದ ಬಿರುಗಾಳಿಯ ನಂತರ ಎನ್ನುವುದನ್ನು ಅವರ ಕವಿತೆಗಳ ಕೊನೆಯಲ್ಲಿ ಕಾಣುವ ದಿನಾಂಕಗಳನ್ನು ನೋಡಿ ಅರಿತುಕೊಳ್ಳಬಹುದು. (ಅವರ ಕವಿತೆಗಳ ಕೊನೆಯಲ್ಲಿ ಪ್ರಕಟಣೆಯ ವರ್ಷ ಸೂಚನೆ ಇರುವುದರಿಂದ ಈ ಬಗೆಯ ಅಧ್ಯಯನ ಸಾಧ್ಯವಿದೆ).

1949 ರ ‘ಸತ್ಯ ದರ್ಶನ’ ಎಂಬ ಸುನೀತದಲ್ಲಿ ಅವರು ಈ ಜೀವನದರ್ಶನದ ಬದಲಾವಣೆಯನ್ನು ಒಂದು ರೂಪಕದಲ್ಲಿ ಹೇಳಿದ್ದಾರೆ. ಸೂರ್ಯ ಅನ್ನುವುದು ಸತ್ಯಕ್ಕೆ ರೂಪಕ. ದೂರದಲ್ಲಿರುವ ಮೂಲ ಸೂರ್ಯನನ್ನು ಬಿಡಿ, ಮಧ್ಯಾಹ್ನದ ಸೂರ್ಯನನ್ನೇ ಕಾಣಲಾಗದು. ಸೂರ್ಯನ ಬೆಳಕನ್ನು ಪ್ರತಿಫಲಿಸುವ ಚಂದ್ರನ ಬೆಳಕು ಸತ್ಯವನ್ನು ಶಿವರೂಪದಲ್ಲಿ ಕಾಣಿಸುತ್ತದೆ. ಅದನ್ನು ಕವಿ ವರ್ಣಿಸಿದಾಗ ಸುಂದರವಾಗಿ ಕಾಣಿಸುತ್ತದೆ ಎನ್ನುವುದು ಇದರ ಸೂಚಿತಾರ್ಥ ಇರಬಹುದು. ಈ ದೃಷ್ಟಿಕೋನ ನವೋದಯವನ್ನು ತಿರಸ್ಕರಿಸುವುದಿಲ್ಲ. ಆದರೆ ಸತ್ಯಕ್ಕೆ ಬೇರೆ ಆಯಾಮಗಳಿವೆ ಎನ್ನುವುದನ್ನು ಹೇಳುತ್ತದೆ. ಬಹಳ ಅರ್ಥಪೂರ್ಣವಾದ ಕವಿತೆಯಿದು.

ಸತ್ಯ ದರ್ಶನ

ಸತ್ಯವನೆ ಕಾಂಬೆನೆಂದೆಂಬ ಓ ಛಲದಂಕ !
ನೋಡು ಕಣ್ಣಿಟ್ಟು ಮಧ್ಯಾಹ್ನ ಮಾರ್ತಾಂಡನನು :
ಕುಕ್ಕುವನು ಕಣ್ಣ, ಹಟ ತೊಟ್ಟೆಯೋ, ದಿಟ್ಟಿಯನು
ಸುಟ್ಟು ಕಳೆವನು : ಮತ್ತೆ ಅಲ್ಲವಿದು ಪೂರ್ಣಾಂಕ
ಸತ್ಯ ! – ಬರಿ ಖಂಡ, ಮೇಣ್ ಕೋಟಿಯೋಜನ ದೂರ:
ಪ್ರತ್ಯಕ್ಷ ಸತ್ಯರೂಪವೆ ಪ್ರಖರ, ಅತಿ ಚಂಡ.
ಆ ಸತ್ಯವನೆ ಕನ್ನಡಿಸುವ ಶೀತಲ ಪಿಂಡ
ಚಂದ್ರ : ಆತನ ನೋಡು, ಕಣ್ಗೆ ತಂಪಿನ ಪೂರ:
ಪ್ರತಿಫಲಿತ ಸತ್ಯವೇ ಸತ್ಯದಾ ಶಿವರೂಪ:
ಇದಕೊ ಗಾಜಿನ ಮಣಿಯ ಹೊಕ್ಕುಹೊರಟಿರುವುದಲ
ಅದೆ ಸತ್ಯ : ನರ್ತಿಸಿದೆ ಸಪ್ತವರ್ಣಾಲಾಪ:
ಸಂಭಿನ್ನ ಸತ್ಯ ಸುಂದರ ಸತ್ಯ, ಬಹುವಿಪುಲ.

ಸತ್ಯದಾಲೋಕದಲೆ ಸಂಚಾರ ನಮ್ಮದಿರಲು
ಶಿವದಿ ಸುಂದರದಿ ಸತ್ಯವ. ಕಾಬುದದುವೆ ಮಿಗಿಲು!
(1949)

1950 ರಲ್ಲಿ ಪ್ರಕಟವಾದ ‘ಉದ್ದೇಶ’ ಕವಿತೆ 192 ಸಾಲುಗಳ ದೀರ್ಘ ನವ್ಯ ಕವಿತೆ. “ನವ್ಯಕಾವ್ಯದ ಮಾತು ಕೇಳಿಬಂದ ಸುಮಾರು 1950 ರ ಸಮಯಕ್ಕೆ ಬರೆದ ಕವಿತೆ” ಎಂದು ಡಾ. ಹಾ. ಮಾ. ನಾಯಕರು ಈ ಕವಿತೆ ನವ್ಯದ ಪ್ರಾರಂಭದ ಕವನಗಳಲ್ಲಿ ಒಂದು ಎಂದು ಸೂಚಿಸಿದ್ದಾರೆ. ಅಲ್ಲದೆ ಈ ಕವಿತೆಯ ಬಗ್ಗೆ ಉತ್ಸಾಹದಿಂದ ಬರೆದಿದ್ದಾರೆ. “ಈ ಸಂಗ್ರಹಕ್ಕೆಲ್ಲ ಕಿರೀಟಪ್ರಾಯವಾದ ಕವಿತೆ ‘ಉದ್ದೇಶ’ ಹೊಸಗನ್ನಡ ಕವಿತೆಗಳ ಯಾವ ಸಂಕಲನ(ಆಂಥಾಲೊಜಿ)ದಲ್ಲಾದರೂ ಸೇರುವ ತುಂಬ ಯೋಗ್ಯತೆಯ ಕೃತಿ. ಬೀಜದಿಂದ ಮೇಲೆದ್ದು ತನ್ನ ಎರಡೆಲೆಗಳನ್ನು ಗಾಳಿಗೆ ಆಡಬಿಡಬೇಕಾಗಿದ್ದ ಮೊಳಕೆಯೊಂದು ತನ್ನ ಸೃಷ್ಟಿಯ ರಹಸ್ಯವನ್ನು ಕುರಿತು ಪ್ರಶ್ನಿಸುತ್ತದೆ, ತನ್ನ ಹುಟ್ಟಿಗಾಗಿ ತಾಯಿಬಿತ್ತ ಪಡುತ್ತಿರುವ ವೇದನೆಯನ್ನು ನೋಡಲಾರದೆ. ತಾಯಿ ಏನು ಉತ್ತರ ಕೊಟ್ಟೀತು? “ನೀ ಬೆಳೆದು ಬೆಳಕ ಕಂಡರೆ ಅದುವೆ ನನಗೆ ಆನಂದ. ಮೊಳಕೆಯ ಕಾತರ ತಪ್ಪದು. ಚಣಚಣಕ್ಕೂ ಅದರ ಆತುರ ಹೆಚ್ಚುತ್ತಿದೆ. ‘ನಾನೊಬ್ಬನೀ ಜಗದಿ ಇಲ್ಲದಿದ್ದರೆ ನಿನ್ನೆದೆಗದೇಕೆ ಕ್ಷೋಬ?ʼ ಇದು ಸೃಷ್ಟಿಯ ರಹಸ್ಯ “ಬೀಜದ ಹೃದಯದೀ ಸಂಕುಚಿತ ಕಣಿವೆಯಲಿ ಸಕಲ ವಿಶ್ವದ ಕಾಮನೋನ್ಮಾದ ಸಂಭ್ರಮವೆಲ್ಲ ಸಂಗಮಿಸಿ ಹರಿಯತೊಡಗಿದುದು ಧೋ ಧೋ ಎಂದು.” ಅಷ್ಟು ಮಾತ್ರ ಅದಕ್ಕೆ ಗೊತ್ತು. ಆದರೆ ನೋವೋ ನಲಿವೋ ತಿಳಿಯದು. ಆದರೆ ಎಳೆಸಸಿ ಕೇಳಲಿಲ್ಲ. ಅದರ ಬೆಳವಣಿಗೆ ನಿಂತಿತು. ಮೊಳೆಯುತಿಹ ಸಸಿಯ ಈ ಪ್ರಶ್ನೆಯನ್ನು ಕೇಳಿದ ಭೂಮಿ, ನೀರು, ಗಾಳಿ, ಬೆಳಕುಗಳೆಲ್ಲ ನಾವೇಕೆ ವ್ಯವಹರಿಸಬೇಕೆಂದು ಸ್ತಬ್ಧವಾಗಿವೆ. ಅಂತರಿಕ್ಷದಲ್ಲಿ ಕುಳಿತು ತನ್ನ ಕರ್ಮದಲ್ಲಿ ಲೀನವಾಗಿ ಹೋದ ಕುಂಬಾರನಿಗೂ ಈ ಸಮಸ್ಯೆಯ ಅರಿವಾಗುತ್ತದೆ. ತನ್ನ ಸೃಷ್ಟಿಯನ್ನು ನೋಡಿ, “ಏಕೆ ಏಕೆ? ಏಕೀ ಸೃಷ್ಟಿಜಾಲವನು ರಚಿಸುತಿರ್ದೆನು ನಾನು? ಆವ ಉದ್ದೇಶಕೆ?” ಎಂದು ಪ್ರಶ್ನೆ ಹಾಕಿಕೊಳ್ಳುತ್ತಾನೆ. ದೊರಕಲಿಲ್ಲಾತಂಗುತ್ತರ. ಮತ್ತೆ ಆ ಅಪೂರ್ವ ಪುರುಷ ತಾನು ರಚಿಸದೆ ಬಿಟ್ಟಿದ್ದ ನಾಮರೂಪೌಘವನು ಒಂದೆ ಆಘಾತದಲಿ ಅಪ್ಪಳಿಸಿದನು. ಎಲ್ಲವೂ ಆಯ್ತು ‘ಅಂತರ್ಧಾನ.ಉಳಿಯಲಿಲ್ಲೇನೂ’.” ಇದು ಹಾ.ಮಾ. ನಾಯಕರು ಈ ಕವಿತೆಯನ್ನು ಕುರಿತು ಬರೆದ ಮಾತುಗಳು (ಪಾವೆಂ ಕಸ್ತೂರಿ -1977). ಈ ಕವಿತೆಯ ಶರೀರ, ಅಭಿವ್ಯಕ್ತಿ ವಿಧಾನ ನವ್ಯಕ್ಕೆ ಸಲ್ಲುವಂತಹದಾಗಿದ್ದರೂ, ಪರಿಶೀಲಿಸುತ್ತಿರುವ ವಿಚಾರವು ತತ್ತ್ವಶಾಸ್ತ್ರವು ಹಿಂದಿನಿಂದಲೂ ಪರಿಶೀಲಿಸುತ್ತ ಬಂದ ವಿಚಾರವೇ ಆಗಿದೆ. ನವ್ಯದ ಆಂಥಾಲಜಿಗಳಲ್ಲಿ ಈ ಕವಿತೆಯನ್ನು ಸೇರಿಸಿಕೊಳ್ಳದೆ ಇರಲು ಇದೇ ಮುಖ್ಯ ಕಾರಣವಾಗಿರಬಹುದು. ಪಿ. ಲಂಕೇಶರು ತಮ್ಮ ‘ಅಕ್ಷರ ಹೊಸ ಕಾವ್ಯ’ (1970) ದಲ್ಲಿ ಪಾವೆಂ ಅವರ ‘ಉಪೌದ್-ಘಾತ’, ‘ಬದಲಾವಣೆ’ ಮತ್ತು ‘ನಲುವತ್ತರ ನೆರೆಯಲ್ಲಿ’ ಎಂಬ ಮೂರು ಕವನಗಳನ್ನು ಆರಿಸಿಕೊಂಡಿದ್ದರು. 1993 ರಲ್ಲಿ ಅದನ್ನು ಪರಿಷ್ಕರಿಸಿ ಎರಡನೆಯ ಮುದ್ರಣವನ್ನು ಹೊರತಂದಾಗ ‘ನಲುವತ್ತರ ನೆರೆಯಲ್ಲಿ’ ಕವನವನ್ನು ಕೈಬಿಟ್ಟು, ‘ಕವಿ – ವಿಜ್ಞಾನಿಗೆ’ ಮತ್ತು ‘ನುಸಿಗೆ’ ಎಂಬ ಕವನಗಳನ್ನು ಸೇರಿಸಿಕೊಂಡಿದ್ದಾರೆ.

ನವ್ಯದಿಂದ ಅಸಂಗತ ವ್ಯಂಗ್ಯಕ್ಕೆ

ತಮ್ಮ 1978ರಲ್ಲಿ ಪ್ರಕಟವಾದ `ಕೆಲವು ಪದ್ಯಗಳು’ ಸಂಕಲನದ ಮುನ್ನುಡಿಯಲ್ಲಿ ಪಾವೆಂ ಹೀಗೆ ಹೇಳುತ್ತಾರೆ: “`ನವನೀರದ'(1952) ಪ್ರಕಟವಾದ ಮೇಲೆ ಕನ್ನಡ ಪದ್ಯರಚನೆಯ ಒಲವು ನಿಲುವುಗಳಲ್ಲಿ ತುಂಬಾ ಬದಲಾವಣೆಗಳಾಗಿವೆ. ನನ್ನ ಮೇಲೆ ಅವುಗಳ ಪ್ರಭಾವ ಆಗಿಲ್ಲವೆನ್ನಲಾರೆ… ಆದರೆ ನನ್ನನ್ನು ನವ್ಯ ಎಂದುಕೊಳ್ಳಲಾರೆ. ರೊಮ್ಯಾಂಟಿಕ್ ಕಾಲಕ್ಕೆ ಸಲ್ಲದ ಒಂದು ವ್ಯಂಗ್ಯ ದೃಷ್ಟಿ ಇಲ್ಲಿ ಕಾಣಿಸುತ್ತಿದ್ದರೆ, ಅದಕ್ಕೆ ನಾನು ನವ್ಯತ್ವಕ್ಕೆ ಮತಾಂತರವಾದದ್ದು ಕಾರಣವಾಗಿರದೆ ಎಂಥ ಭ್ರಾಂತ ಆದರ್ಶವಾದಿಯ ಕಣ್ಣುಗಳ ಪರೆಯನ್ನೂ ಕಳಚಬಲ್ಲ ಪತ್ರಿಕೋದ್ಯಮಕ್ಕೆ `ಇಳಿ’ದದ್ದು ಒಂದು ಕಾರಣವಾಗಿರಬಹುದು.”

`ಕೆಲವು ಪದ್ಯಗಳು’ ಸಂಕಲನದಲ್ಲಿ ನವ್ಯ ಸಂವೇದನೆಯ ಕೆಲವು ಉತ್ತಮ ಕವನಗಳಿವೆ. ಅವು `ಗೋಪಿ’, `ಹೌಸಿಂಗ್ ಕಾಲನಿ’, `ಸಂಜೆ ಹೊತ್ತು’, `ದ್ವಾಸುಪರ್ಣಾ’ ಮತ್ತು `ಗೀತಾಧ್ಯಾಯ 19′. ಅವರ ಕವನಗಳಲ್ಲಿ ಆಧುನಿಕ ಬದುಕಿನ ಏಕತಾನತೆ, ಪ್ರಾಯವಾಗುತ್ತಿರುವಂತೆ ಜೀವನಾಸಕ್ತಿ ಕಳೆದು ಹೋಗುವ ಆತಂಕ, ಸಂಪ್ರದಾಯ ಶಠತ್ವದ ವಿಡಂಬನೆ ಇವುಗಳನ್ನು ಕಾಣುತ್ತೇವೆ. ಈ ಸಂಕಲನದಲ್ಲಿ ‘ಸ್ವಗತಗಳು’ ಮುಂತಾದ ಕವಿತೆಗಳಲ್ಲಿ ಕವಿ ನಾಟಕೀಯ ಸ್ವಗತ (ಡ್ರಾಮಾಟಿಕ್ ಮೊನೊಲಾಗ್) ತಂತ್ರವನ್ನೂ ಬಳಸಿದ್ದಾರೆ.

‘ಗೋಪಿ’, ‘ಸತ್ತವರು’, ‘ಹೌಸಿಂಗ್ ಕಾಲನಿ’, ‘ಕವಿ – ವಿಜ್ಞಾನಿಗೆ’ ಮತ್ತು ‘ಗೀತಾಧ್ಯಾಯ 19’, ‘ರಾಮದೇವರ ಸತ್ಯ’ (ಬಹುಶಃ ಇದು ಅವರ ಕೊನೆಯ ಕವಿತೆ. ಇದನ್ನವರು ತುಳು ಭಾಷೆಯಲ್ಲಿಯೂ ಬರೆದಿದ್ದಾರೆ) ಇವು ಪಾವೆಂ ಅವರ ಮಹತ್ವದ ನವ್ಯ ಕವಿತೆಗಳಾಗಿವೆ. ಪಾವೆಂ ಅವರು ಎಲ್ಲ ಕವಿತೆಗಳನ್ನೂ ವ್ಯಂಗ್ಯ ದೃಷ್ಟಿಕೋನದಿಂದಲೇ ಬರೆದಿದ್ದಾರೆ ಎಂದಲ್ಲ. ‘ಗೋಪಿ’ ಮತ್ತು ‘ರಾಮದೇವರ ಸತ್ಯ’ ಕವಿತೆಗಳ ಹಿಂದೆ ಇರುವ ಮನೋಭಾವ ವ್ಯಂಗ್ಯ ಅಲ್ಲ; ಕೃಷ್ಣಪ್ರಜ್ಞೆ ಮತ್ತು ರಾಮಪ್ರಜ್ಞೆ ಇವೆರಡು ನಮ್ಮ ದೇಶದ ಜನಮಾನಸದಲ್ಲಿ ಬೇರೂರಿರುವ ಬಗೆಯನ್ನು ಮನೋವೈಜ್ಞಾನಿಕ ಮತ್ತು ಜಾನಪದ ಒಳನೋಟಗಳಿಂದ ನೋಡಿರುವ ಕವಿತೆಗಳಿವು. ನಮ್ಮ ದೇಶದ ಪರಂಪರೆಯ ಆಳವಾದ ಅರಿವು ಇವುಗಳಲ್ಲಿದೆ.

ಇಲ್ಲಿ ‘ಗೋಪಿ’ ಮತ್ತು ‘ಹೌಸಿಂಗ್ ಕಾಲನಿ’ ಕವಿತೆಗಳನ್ನು ಉದಾಹರಣೆಗಾಗಿ ಕೊಡಲಾಗಿದೆ.

ಗೋಪಿ

ಪ್ರತಿಯೊಬ್ಬ ಗೋಪಿಯೂ,
ಏಕಾಂತದಲ್ಲಿ,
ಸೀರೆಯನು ಬಿಚ್ಚಿಟ್ಟು
ಇಳಿಯುವಳು ಕಾಳಿಂದಿಯಲ್ಲಿ.

ಕ್ಷಣಕ್ಕೊಮ್ಮೆ ಹಾರುವುದು
ದಡದ ಕದಂಬದತ್ತ
ದೃಷ್ಟಿ ಪಕ್ಷಿ,-
ಯಾವ ಗೋಪಾಲ ಯಾವಾಗ ಬರುವನೊ ಎಂದು
ಬೆಚ್ಚಿ ಬೆಚ್ಚಿ.

ಆದರೂ,
ತೋರ ಮೊಲೆಗಳ ಮೇಲೆ
ನೀರ ಮಣಿಗಳ ಮಾಲೆ
ಮಿನುಗಿಸುತ ಮೇಲೆ ಬಂದು,
ಸೀರೆ ಕುಪ್ಪಸವ ಇದ್ದಲ್ಲೆ ಕಂಡು,
ಸೂಸುವಳು ತನಗು ಕೇಳಿಸದಂತೆ
ನಸು ನಿರಾಶೆಯ ನಿಟ್ಟುಸಿರನೊಂದು.
(1960)

‘ಗೋಪಿ’ ಕವಿತೆಯ ಚಿತ್ರಕಶಕ್ತಿ (ಉದಾಹರಣೆಗೆ – ತೋರಮೊಲೆಗಳ ಮೇಲೆ ನೀರ ಮಣಿಗಳ ಮಾಲೆ) ಮತ್ತು ವ್ಯಂಗ್ಯ ವಿಶಿಷ್ಟವಾಗಿದೆ. ಕೃಷ್ಣನು ತನ್ನ ಬಟ್ಟೆಗಳನ್ನು ಕದಿಯುವನೋ ಎಂಬ ಗೋಪಬಾಲೆಯ ಮೇಲುನೋಟದ ಆತಂಕ ನಿಜವಾಗಿಯೂ ಕದಿಯಲಿ ಎಂಬ ಅವಳ ಆಸೆಯೇ ಆಗಿರುವುದನ್ನು ವ್ಯಂಜಕ ಗುಣದಿಂದ ಈ ಕವಿತೆ ಸೂಚಿಸುತ್ತಿದೆ; ಎಲ್ಲಿಯೂ ಅದನ್ನು ಹೇಳಿಲ್ಲ. (ಈ ಬಗೆಯ ವ್ಯಂಗ್ಯ ಅಥವಾ ಐರನಿ ಪಾಶ್ಚಾತ್ಯ ನವ್ಯ ಕವಿಗಳಿಗೆ ಬಹಳ ಪ್ರಿಯವಾದ ‘ಧ್ವನಿ’ ಪ್ರಭೇದವಾಗಿದೆ). ಪಾ.ವೆಂ. ನವ್ಯದ ಅಭಿವ್ಯಕ್ತಿ ಮಾರ್ಗವನ್ನು ಸಮರ್ಥವಾಗಿ ಬಳಸಿಕೊಂಡುದರಿಂದ ಅವರ ಕಾವ್ಯದ ಮೇಲೆ ನವ್ಯದ ಧನಾತ್ಮಕ ಪ್ರಭಾವವುಂಟಾಗಿದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ.

‘ಗೋಪಿ’ ಕವಿತೆ ತುಳು ಭಾಷೆಯ ಅವರ ಕವಿತೆಗಳ ಸಂಕಲನ ‘ಬಯ್ಯ ಮಲ್ಲಿಗೆ’ಯಲ್ಲಿಯೂ ಇದೆ. ತುಳುವಿನಲ್ಲಿ ನವ್ಯ ಕಾವ್ಯ ಅವರ ಈ ಸಂಕಲನದಿಂದಲೇ ಆರಂಭವಾಯಿತು ಎನ್ನಬಹುದು. ಇದೇ ಕವಿತೆಯನ್ನು ಪಾವೆಂ ಹಿಂದಿಯಲ್ಲಿಯೂ ಬರೆದಿದ್ದಾರೆ.

ಹೌಸಿಂಗ್ ಕಾಲನಿ

ನಮ್ಮೀ ಹೌಸಿಂಗ್ ಕಾಲನಿಯಲ್ಲಿ
ಮನೆಗಳೆಲ್ಲಾನೂ ಒಂದೇ ಪ್ಳಾನು.
ಕೇಳೋದೆಲ್ಲ ರೇಡಿಯೋ ಸಿಲೋನು.
(ಹಲ್ಲುಜ್ಜೋದು ಬಿನಾಕಾನಲ್ಲಿ).
ಎಲ್ಲಾರು ತೊಡೋದು ಟೆರ್ಲಿನ್ ಸೂಟೇ,
ಹಾಕ್ಕೊಳ್ಳೋದೂ ಬಾಟಾ ಶೂಸೇ
(ಸ್ವಂತದ ಬೂಟೋ?- ಕುಂಟರಿಗಷ್ಟೇ).

ನಮ್ಮೀ ಹೌಸಿಂಗ್ ಕಾಲನಿಯಲ್ಲಿ
ಹೆಂಡರುಗಳ ಎಲ್ಲಾ ಫ್ಯಾಶನ್ನೂ
ಈವ್ಸ್ ವೀಕ್ಲೀಲಿ ಪ್ರಿಂಟಾದ್ದೇನೇ.
ಅವರು ನಗೋದೂ ಅಳೋದೂನೂ
ಮಾರ್ಲಿನ್ ಮನ್ರೋ ಡಿಟ್ಟೋನೇನೇ.

ನಮ್ಮೀ ಹೌಸಿಂಗ್ ಕಾಲನಿಯಲ್ಲಿ
ಗುರ್ತು ಸಿಗಲಂತ ದೊಡ್ಡಂಕೀಲಿ
ಮನೇ ನಂಬರ್ಸು ಹಾಕಿದ್ದೀವಿ.
ಆದರೊಮ್ಮೊಮ್ಮೆ ಲೈಟು ಹೋದಾಗ
ತಪ್ಪು ಮನೆಗಳನ್ನ ಹೊಕ್ಕುತ್ತೀವಿ.
ಲಾಟೀನ್ ಬೆಳಕಿನ ಮಬ್ಬಿನಲ್ಲಿ
ತಪ್ಪು ಹೆಂಗಸರ ಸರಿ ಮಲಗುತ್ತೀವಿ.
ಅಂದು ರಾತ್ರಿಗೂ ಹಿಂದಿನ ರಾತ್ರಿಗೂ
ಅಂತರ ಕಾಣಲೆ ಇಲ್ಲಲ್ಲಾಂತ
ಬೆಳಗ್ಗೆ ಅಚ್ಚರಿಗೊಳ್ಳುತ್ತೀವಿ.

ಅಥವಾ ಅಚ್ಚರಿ ಯಾಕೇಂತೀನಿ:
ನಮ್ಮೀ ಹೌಸಿಂಗ್ ಕಾಲನಿಯಲ್ಲಿ
ಸೈನೊಗಳೇನೆ ಇಡೀ ಲೈನಲ್ಲಿ.
ನಂ ಸಿಸ್ಟಮ್ಮೂ
ಅದು ಪಿಟ್ಮನ್ನು
ಅವನ ಪ್ಯಾಡನ್ನು
ನಾನು ಓದೋದು
ಈ ಕೀ – ಬೋರ್ಡಲ್ಲಿ
ಅವನು ಡಾರ್ಕಲ್ಲಿ
ಟೈಪು ಮಾಡೋದು,
ನಮ್ಮ ವಿದ್ಯೇಲಿ
ನಂ ಪರ್ಫೆಕ್ಷನ್ನು
ತೋರಿಸೋಲ್ಲೇನು?
1967

`ಹೌಸಿಂಗ್ ಕಾಲನಿ’ಯ ಬಗ್ಗೆ ಶಂಕರ ಮೊಕಾಶಿ ಪುಣೇಕರರು ಹೀಗೆ ಹೇಳಿದ್ದಾರೆ: “ಇಂಥ ಒಂದೇ ಕವನವಾದರೂ ಸರಿ, ಕಾವ್ಯದಲ್ಲಿ ನವ್ಯತೆ ಬಂದದ್ದು ಸಾರ್ಥಕ ಎನಿಸುತ್ತದೆ. ಕನ್ನಡ ಕಾವ್ಯದಲ್ಲಿ ನವ್ಯತೆ ಬಾರದೆ ಹೋಗಿದ್ದರೆ, ಇಂಥ ಸಂವೇದನೆಯನ್ನು ಪ್ರಕಟಿಸುವುದೂ ಅಸಾಧ್ಯವಾಗುತ್ತಿತ್ತು.”

ಪಾವೆಂ ಅವರು ತಮ್ಮ ಎರಡನೆಯ ಘಟ್ಟದ ಕಾವ್ಯದಲ್ಲಿ ನವ್ಯ ಪ್ರಜ್ಞೆಯಿಂದ ಬರೆದರು ಮತ್ತು ಅದರ ಒಂದು ಶಾಖೆ ಎನ್ನಬಹುದಾದ ಅಸಂಗತ-ವ್ಯಂಗ್ಯದ ಕಡೆಗೆ ಚಲಿಸಿದರು. ಅಸಂಗತ (ಎಬ್ಸರ್ಡ್) ಎನ್ನುವುದು ಜಗತ್ತಿನಾದ್ಯಂತ ಆಧುನಿಕರಲ್ಲಿ ಕಾಣಿಸಿಕೊಂಡ ಒಂದು ಅಭಿವ್ಯಕ್ತಿ ಮಾರ್ಗ. ಸ್ಯಾಮುಯೆಲ್ ಬೆಕೆಟ್‌ನ ‘ವೆಯ್ಟಿಂಗ್ ಫಾರ್ ಗೋಡೋ’ ನಾಟಕ ಈ ಬಗೆಯದು. ಕಾಫ್ಕಾನ ಕೃತಿಗಳು ಅದರಲ್ಲಿಯೆ ಸ್ವಲ್ಪ ಭಿನ್ನ ಬಗೆಯವು. ಪಾವೆಂ ಅವರು ಕಾವ್ಯದಲ್ಲಿ ಹಾಸ್ಯದ ನೆಲೆಯಲ್ಲಿರುವ ಅಸಂಗತ-ವ್ಯಂಗ್ಯವನ್ನು ಬಳಸಿದರು. ‘ಎರಡು ದಾರಿ’, ‘ನೊಣ’ ಮುಂತಾದ ಅಸಂಗತ ಕವಿತೆಗಳು ಬದುಕನ್ನು ನೋಡುವ ನಮ್ಮ ದೃಷ್ಟಿಕೋನವನ್ನೇ ಪ್ರಶ್ನಿಸಿಕೊಳ್ಳುವ ಹಾಗೆ ಮಾಡುತ್ತವೆ.
ಪಾ.ವೆಂ. ಅವರ ‘ಆತ್ಮಬಾಂಬು’ ಕವಿತೆ ವ್ಯಂಗ್ಯವಾಗಿದೆ. ಇದನ್ನು ಅಡಿಗರ ಮಾದರಿಯ ರೂಪಕ ವ್ಯಂಗ್ಯ ಎನ್ನಬಹುದು.

ಆತ್ಮಬಾಂಬು

1
ಎಲವೊ ಚೀನದ ಮಾವನೇ,
ನೀನು ಆಟಂ ಬಾಂಬನೆ
ಮಾಡಿದೆನು ಎಂತೆಂಬ ಜಂಬವ
ಬಿಡುಬಿಡಲೇ ಹುಂಬನೇ !

ನಿನ್ನ ಆಟಂ ಬಾಂಬಿಗೆ
ನಮ್ಮ ಆತ್ಮದ ಬಾಂಬಿದೆ !
ಆತ್ಮ-ಆಟಂ ತಾಕಲಾಡಲು
ನಿನ್ನ ಆಟವು ನಡೆವುದೆ?

2
ಬನ್ನಿಬನ್ನಿರಿ ಭರತಪುತ್ರರೆ
ಆತ್ಮಬಾಂಬನು ಮಾಡುವಾ !
ಮಾವ ತುಂಗನ ಬಾಂಬಿನೆದುರಿಗೆ
ನಮ್ಮ ಆತ್ಮವ ದೂಡುವಾ !

ಒಂದು ಪೈಸಾ ಖರ್ಚು ಇಲ್ಲವು
ಆತ್ಮಬಾಂಬನು ಮಾಡಲು
ಪುಕಟ್ ದೇಶದ ಭಕ್ತಿ ಬೀರಲು
ಒಳ್ಳೆ ಸಂಧಿಯು ನೋಡಲು !

ಕಪ್ಪು ಪೇಟೆಯ ದಪ್ಪಹೊಟ್ಟೆಯ
ಉಪ್ಪರಿಗೆಮನೆ ಬಂಟರೇ,
ಮದ್ದಿನಲಿ ಮಣ್ಣನ್ನು ಬೆರೆಸುವ
ಯಮನ ಪ್ರಿಯ ಏಜೆಂಟರೇ,

ನಿಮ್ಮ ಹೃದಯದ ಕಸದ ಬುಟ್ಟಿಲಿ
ನಿಮ್ಮ ಆತ್ಮವು ಬಿದ್ದಿದೆ.
ಹಳೆಯ ಪೇಪರಿನಷ್ಟು ಕಿಮ್ಮತು
ಕೂಡ ಅದಕೀಗೆಲ್ಲಿದೆ?

ಕೆದಕಿ ತನ್ನಿರಿ ಅದನು ಕೂಡಲೆ
ಜಂಗು ತಿಂದೀ ಜಂಕನು
ಆತ್ಮ ಬಾಂಬನು ಮಾಡೆ ನೀಡಿರಿ-
ಮಾವನಾಗಲಿ ಮಂಕನು

ಹಸಿರು ಕಾಗದ ಕಿಸಿಗೆ ಬೀಳದೆ
ಕೆಂಪು ಟೇಪನು ಬಿಚ್ಚದಾ
ಭರತಮಾತೆಯ ಹಿರಿಯ ಪುತ್ರರೆ,
ಸೇವಕರೆ ನಂ ನಚ್ಚಿನಾ,
ನಿಮ್ಮ ಡ್ರಾಯರಿನಲ್ಲಿ ಸುಮ್ಮನೆ
ಕೊಳೆಯುತಿದೆ ನಿಮ್ಮಾತ್ಮವು
ನಡುನಡುವೆ ಡ್ರಾಯರಿನ ಬಿರುಕಲಿ
ಹೊಮ್ಮುತಿದೆ ದುರ್ನಾತವು,
ಸುಮ್ಮನೇತಕೆ ಇಟ್ಟುಕೊಂಬಿರಿ?
ಚಿಮ್ಮಟಿಯಲದನೆತ್ತಿರಿ,
ಆತ್ಮಬಾಂಬನು ಮಾಡುವವರಿಗೆ
ಒಡನೆ ದಾನವ ಕೊಟ್ಟಿರಿ !

ಅಯ್ಯೊ ಮರೆತೆನೆ ರಾಜಕಾರಣಿ-
ಜನರೆ, ನಿಮ್ಮನು ಮೊದಲಲಿ?
ತಪ್ಪು ಮಾಡಿದೆ ಗಲ್ಲಗಲ್ಲವ
ಬಡಿದುಕೊಂಬೆನು ಕ್ಷಮಿಸಿರಿ.

ಮಳ್ಳುಮಂದಿಗೆ ಪೊಳ್ಳುನಂಬಿಗೆ
ಬಳ್ಳಬಳ್ಳದಿ ಹಂಚುತ
ಬೇಳೆ ಬೇಯಿಸಿಕೊಂಬ ಕದಿಮರೆ
ಸೀಳುನಾಲಗೆ ಚಾಚುತ,
ನಿಮ್ಮ ಆತ್ಮದ ಗುಂಡುಕಲ್ಲನು
ಸುಮ್ಮನೇತಕೆ ಹೊರುವಿರಿ?
ತುಡುಗಲೆಮ್ಮೆಯ ಗುದ್ದಿನಂದದಿ
ತೊಡರಲೇತಕೆ ಬಿಡುವಿರಿ?

ಆತ್ಮಬಾಂಬನು ಮಾಡುವವರಿಗೆ
ಆತ್ಮದಾನವ ಮಾಡಿರಿ;
ಒಂದು ಕಲ್ಲಿಗೆ ಎರಡು ಹಣ್ಣುಗ-
ಳನ್ನುಪಾಯದಿ ಕೆಡವಿರಿ.

3
ಆತ್ಮಬಾಂಬನು ಮಾಡೆ
ಕಾಸೊಂದು ಖರ್ಚಿಲ್ಲ
ಟ್ಯಾಕ್ಸು ಕೊಡಬೇಕಿಲ್ಲ
ವರ್ತಕ ಜನ.

ಯೂರೇನಿಯಂ ಬೇಡ
ಪ್ಲೂಟೋನಿಯಂ ಬೇಡ
ಆತ್ಮಕಸಗಳ ಮಾಡಿ
ಸಮರ್ಪಣ.
(1964)

‘ರಣಭೇರಿ’ ಕವಿತೆಯ ಜತೆಗೆ ‘ಆತ್ಮಬಾಂಬು’ ಕವಿತೆಯನ್ನಿಟ್ಟು ನೋಡಿದಾಗ ಪಾವೆಂ ಅವರ ಜೀವನ ದರ್ಶನದಲ್ಲಿ ಆಗಿರುವ ವ್ಯತ್ಯಾಸ ಸ್ಪಷ್ಟವಾಗಿ ಗೊತ್ತಾಗುತ್ತದೆ.

ಮೊಳಮೊಳಗಲಿ ರಣಭೇರಿ
ಸ್ವಾತಂತ್ರ್ಯದ ರಣಭೇರಿ!
ಮೊಳಮೊಳಗಲಿ ಭೀಷಣ ರಣವೇರಿ
ಭಾರತ ಪುತ್ರರ ಕಿವಿದೆರೆ ಸೇರಿ
ನಿದ್ರಿತರೌದಾಸೀನ್ಯವ ಕಳೆದು
ಸ್ವಾತಂತ್ರ್ಯದ ರಣಭೇರಿ!
ಭಾರತೀಯರಲಿ ಸ್ಫೂರ್ತಿಯ ತೂರಿ
ಊದಲಿ ಧರ್ಮಸಮರದ ತುತೂರಿ !
ಮೊಳಗಲಿ ಅವರನು ಹುರಿದುಂಬಿಸುತಲಿ
ಸ್ವಾತಂತ್ರ್ಯದ ರಣಭೇರಿ!

ವ್ಯಂಗ್ಯವು ಅಸಂಗತತೆಯ ಕಡೆಗೆ ಚಲಿಸಿದಾಗ ಅದು ನವ್ಯಕ್ಕೆ ಇನ್ನೊಂದು ಆಯಾಮವನ್ನು ಸೇರಿಸುತ್ತದೆ. ‘ನೊಣ’ ಕವಿತೆ ಈ ಬಗೆಯದು. ಇದು ನವ್ಯದ ಅಭಿವ್ಯಕ್ತಿ ವಿಧಾನಗಳನ್ನೇ ಅಣಕು ಗಂಭೀರಶೈಲಿಯಲ್ಲಿ ಬಳಸಿಕೊಂಡು ಕ್ಷುಲ್ಲಕವಾದುದನ್ನು ಮಹತ್ವದ್ದೆಂಬಂತೆ ಹೇಳುತ್ತದೆ. ಆದರೆ ಇದಕ್ಕೆ ಅಡಿಗರಂತಹ ನವ್ಯ ಕವಿಗಳನ್ನು ಅಣಕಿಸುವ ಉದ್ದೇಶವಿರುವುದಲ್ಲ; ಬದುಕಿನಲ್ಲಿ ಗಂಭೀರವಾದದ್ದೆಲ್ಲವೂ ನೆಲೆಗಳನ್ನು ಕಳೆದುಕೊಂಡು, ಸಾಮಾನ್ಯ ನಾಗರಿಕ ಯಾವುದರಲ್ಲಿಯೂ ಶ್ರದ್ಧೆಯನ್ನು ಇಡಲು ಅಸಾಧ್ಯವಾದ ಆಧುನಿಕ ನಾಗರಿಕ ಸ್ಥಿತಿಯನ್ನು ಈ ಬಗೆಯ ಅಸಂಗತ ಕವಿತೆಯಲ್ಲಿ ಸೂಚಿಸಲಾಗಿದೆ.

ಪಾವೆಂ ಅವರ ಯಜಮಾನರಾದ ಎಸ್. ಯು. ಪಣಿಯಾಡಿಯವರು ಉಡುಪಿಯಲ್ಲಿ ಸ್ವಾತಂತ್ರ್ಯ ಹೋರಾಟದ ಒಬ್ಬರು ಮುಂದಾಳುಗಳಾಗಿದ್ದರು. ದೇವಸ್ಥಾನಗಳಿಗೆ ದಲಿತರನ್ನು ಕರೆದೊಯ್ಯುವುದು, ಖಾದಿ ಮಾರಾಟ (ಅಂತಹ ಅಂಗಡಿಯಲ್ಲಿಯೇ ಪಾವೆಂ ಅವರು ಮೊದಲು ಕೆಲಸಕ್ಕೆ ಸೇರಿದ್ದರು), ಮದ್ಯಪಾನ ವಿರೋಧಿ ಹೋರಾಟಗಳಲ್ಲಿಯೇ ಪಣಿಯಾಡಿ ಮತ್ತು ಅವರ ಪತ್ನಿ ಭಾರತೀಬಾಯಿ ಪಣಿಯಾಡಿಯವರು ಸಕ್ರಿಯರಾಗಿದ್ದವರು.

ನೊಣ

ನನ್ನ ಮೂಗಿನ ತುದಿಗೆ
ಕುಳಿತಿರುವುದೊಂದು ನೊಣ:
ತೆರೆದ ಬಾಗಿಲ ಮುಂದೆ
ನಿಂತ ಯೋಗಿಯ ಹಾಗೆ.
ಒಳಗೆ ನುಸುಳಿ ಕದಿಯಲೋ,
ಇಲ್ಲೆ ಭಿಕ್ಷೆ ಕರೆಯಲೋ?
For it has been said
An open door tempts a saint

ನನ್ನ ಮೂಗಿನ ತುದಿಗೆ
ಕುಳಿತಿರುವ ಈ ನೊಣ-
ಅದಕೊಂದು ಅನುಮಾನ:
ಒಳಗೆ ಹೋಗಲೆ?-
ರುಚಿರ ಪಾೈಸ್ಟ್ರಿ ಭೋಜನ ಅಲ್ಲಿ:
ಆದರೆ
ನಿದ್ರಿಸಿದ ಕುಂಭಕರ್ಣನು
ಉಸಿರ ಹೊಯ್ಲಲ್ಲಿ

ಸೇದಿಕೊಂಡರೆ ಒಳಗೆ
ಬಡಪಾಯಿ ಹನುಮಣ್ಣ
ಯದ್ಗತ್ವಾ ನ ನಿವರ್ತತೇ.
ನಿನ್ನೆ ತಾನೇ ನೊಣ
ಕೇಳಿದೆ ರಾಮಾಯಣ.

ನನ್ನ ಮೂಗಿನ ತುದಿಗೆ ಕುಳಿತಿದೆ ನೊಣ
ನನಗೆ ನೆಗಡೀಲಿ ನಾಸಿಕಾ-ಭರಣ
ನಾನು ಅಂಗಾತ ಮಲಗಿದ್ದೇನೆ
Like some Gulliver
In some Lilliput
ನನಗೂನು ಅನುಮಾನ.
The silken threads of doubt
Bind me down to earth.
ಹೊಡೆಯಲೋ ಬಿಡಲೊ ಈ ನೊಣವನ್ನ?

ಮೂರು ಲೋಕದ ಗಂಡ
ಕುರುಭೂಮಿಯಲ್ಲಿ ನಿಂತಿದ್ದಾನೆ.
ಕ್ಷುದ್ರ ಮಕ್ಷಿಕವನ್ನು ಹೊಡೆದು ನಾನೇ ನನ್ನ
ಮುದ್ದು ನಾಸಿಕವನ್ನು ಜುಜ್ಜಿಕೊಳ್ಳಲೆ ಕೃಷ್ಣ?
ಗಾಂಡೀವಂ ಸ್ರಂಸತೇ ಹಸ್ತಾತ್.
ಹೊಡೆಯಲೇ ಬಿಡಲೆ?
ಹೊಡೆಯಲೇ ಬಿಡಲೆ?
ಹೊಡೆಯಲೇ ಬಿಡಲೆ?
ಗಡಗಡಕ್ ಗಡಗಡಕ್
ಗಡಗಡಕ್.

ರೈಲಿನ ಮೃದಂಗಕ್ಕೆ ಹತ್ತಿತು ಸಮಾಧಿ
ದೃಷ್ಟಿ ಕೀಲಿಸಿತು ಮೂಗಿನ ತುದಿ
ಮತ್ತಾ ನೊಣ
ಬರಿಯ ಕಣ
ಬೆಳೆಯುತ್ತ ಬೆಳೆಯುತ್ತ
ವ್ಯಾಪಿಸಿತು

ಗಗನದಂಗಣ
ವಿಶ್ವರೂಪದರ್ಶನ.

ಬರಿ ನೊಣ
ಬರೀ ನೊಣ
ಬರೀ ನೊಣ.
1966

ಈ ಕವಿತೆಯ ಕೆಲವು ಸಾಲುಗಳು ಅಡಿಗರ ‘ಹಿಮಗಿರಿಯ ಕಂದರ’ ಮತ್ತು ‘ಗೊಂದಲಪುರ’ ಕವನಗಳ ಸಾಲುಗಳನ್ನು ನೆನಪಿಸುತ್ತವೆ.
ಕಂಡು ಪುರುಷಾಕೃತಿಯ ಕುರ್ಚಿಮೇಲೆ
“ಅಯಿ ಜೀವಿತನಾಥ ಜೀವಸಿ?”
……..

ಕಾಳಿದಾಸನು ತೇಲಿ ಬಂದು ಹೇಳಿದ ಹೀಗೆ:
“ಹರಕೋಪಾನಲ ಭಸ್ಮ ಕೇವಲಂ.”
………

ಫೋಂ ಪೋಂ ಪೋಂ – ಕಾರು; ಭೋಂ ಭೋಂ -ಬಸ್ಸು, ಟ್ರಕ್ಕು;
ಬೀದಿ ಲಕ್ವಾ ಹೊಡೆದು ಮಿಡುಕುತಿತ್ತು;
ಖಟ್ಟ ಖಟ ಖಟಖಟ್ಟ – ಹತ್ತು ಎತ್ತಿನ ಗಾಡಿ!
ಮೂಗು ಮುಚ್ಚಿಕೋ ನಗರಸಭೆಯ ಲಾರಿ.
……..ಭಗ್ನ ಸೇತುವೆಯಾಚೆ ರೈಲು ನಿಂತು
ಸೀಟಿ ಹಾಕಿತು ಮೂರು ಬಾರಿ…. (ಹಿಮಗಿರಿಯ ಕಂದರ)
ಗೆದ್ದವಗು ಸಿದ್ಧವಿದೆ ಹೊಂಡ ಆಳುದ್ದ;
ಇದು ವಿಧಿಯ ವಹಿವಾಟಿಗಿಂತಲು ಅಬದ್ಧ.
Call no man happy till he dies.
“ಅಂಧೇನೈವ ನೀಯಮಾನಾ ಯಥಾಂಧಾಃ” (ಗೊಂದಲಪುರ)

ಇನ್ನೊಂದು ಗಮನಾರ್ಹ ಕವಿತೆ ‘ಎರಡು ದಾರಿ’. ಇದು ಅಸಂಗತದಂತೆ ಕಾಣುತ್ತದೆ; ಆದರೆ ಮುಖ್ಯವಾಗಿ ಇದರ ದೃಷ್ಟಿಕೋನ ವ್ಯಂಗ್ಯ. ಭಾರತದಲ್ಲಿ ನಡೆದ ಅಸ್ತಿತ್ವದ ಕುರಿತಾದ ತಾತ್ವಿಕ ಜಿಜ್ಞಾಸೆಗಳನ್ನು ಇದು ಅಸಂಗತ ವ್ಯಂಗ್ಯದ ಮಾದರಿಯಲ್ಲಿ ಹೇಳುತ್ತದೆ:

ಎರಡು ದಾರಿ

ಎರಡೆ ಇಲ್ಲಿವೆ ಹಾದಿ: ಬಿಳಿದೊಂದು ಕರಿದೊಂದು:
ಬಾಳಿನೊಳಗುಂಟೊಂದು ಅರ್ಥ, ಒಂದುದ್ದೇಶ;
ಇಲ್ಲಿಂದ ಹಿಂದೊಂದು ಇತ್ತು, ಇದೆ ಮುಂದೊಂದು.

ನಾನು ಅಲ್ಲಿಂದ ಬಂದಿದ್ದೇನೆ, -ಏ-ದೇಶ-
ದಿಂದೆಂದು ಗೊತ್ತಿಲ್ಲದಿದ್ದರೂ; ಇಲ್ಲಿಂದ
ಉಲ್ಲಿಗೆ ಹೊರಟಿದ್ದೇನೆ, – ಆ ಉಲ್ಲಿ ಎಲ್ಲಂತ
ಬಲ್ಲೆನಿಲ್ಲಾದರೂ; ಉಲ್ಲಿ ಇಲ್ಲಿಗಿಂತ
ಮೇಲು, ಅಲ್ಲೀಗಿಂತ ಇಲ್ಲಿ ಮೇಲಾದಂತೆ, –
ಆ ಉಲ್ಲಿ ಕಂಡ ಮೇಲಿಲ್ಲ ಕಾಣುವುದೇನೂ,
ಆ ಉಲ್ಲಿ ಕಂಡ ಮೇಲಿಲ್ಲ ಉಣ್ಣುವುದೇನೂ.
ಹೀಗೆ ನಂಬುವ ಹಾದಿ, ಅದುವೆ ಉಂಟಿನ ಹಾದಿ.

ಇನ್ನೊಂದು ಹಾದಿ ಇದೆ: ಅದುವೆ ಇಲ್ಲದ ಹಾದಿ:
ಇದು ಎರಡೂ ತುದಿಗಡ್ಡಗೋಡೆ ಕಟ್ಟಿದ ಬೀದಿ;
ಬರಿ ಹೋಗುತ್ತಿದ್ದೇನೆ, ನಾನೆಲ್ಲೂ ಹೊರಟಿಲ್ಲ;
ಅಲ್ಲಿಲ್ಲಿ ಉಲ್ಲೆಂಬುದೆಲ್ಲಾ ಮಂಕುಬೂದಿ.

ಇಲ್ಲಿಲ್ಲಿ, ಈಗೀಗ, ಇಷ್ಟಿಷ್ಟೆ- ಹೊರತಿಲ್ಲ;
ಐದು ಬಾಯಿಗಳಿಂದ ಉಂಡದ್ದೆ ನನ್ನೂಟ;
ಬೀದೀ ಕೊನೆಯೆ ನಾನು ಎಂಬುದರ ಕೊನೆ ಕೂಡ.
ಹೀಗೆ ನಂಬುವುದೊಂದು ಹಾದಿ; ಅದೂ ಹಾದಿ.

ಅದು ಸತ್ಯವೋ ಇದುವೆ ಸತ್ಯವೋ ನಾನರಿಯೆ.
ಆದರೂ ಉಂಟೆಂಬವನು ಉಂಟಾದಾನು.
ಇಲ್ಲವೆಂಬಾತನೂ ಇಲ್ಲವೇ ಆದಾನು.
1968

ಗೋಪಾಲಕೃಷ್ಣ ಅಡಿಗರು ಕೂಡ ಸಮಾಜ ವಿಮರ್ಶೆಗೆ – ಮುಖ್ಯವಾಗಿ ರಾಜಕೀಯ ವಿಮರ್ಶೆಗೆ ವ್ಯಂಗ್ಯವನ್ನು ಬಳಸಿದ್ದಾರೆ. ಅದನ್ನು ‘ರೂಪಕ ವ್ಯಂಗ್ಯ’ ಎನ್ನಬಹುದು. ಪಾವೆಂ ಅವರ ವ್ಯಂಗ್ಯ ಬೇರೆ ಬಗೆಯದು. ಇದನ್ನು ‘ಅಸಂಗತ ವ್ಯಂಗ್ಯ’ ಎನ್ನಬಹುದು. ಅಡಿಗರು ಒಂದು ಸಂಗತಿಯನ್ನು ಟೀಕಿಸಿ ಅದರಲ್ಲಿ ಅಂತರ್ಗತವಾಗಿರುವ ದೋಷವನ್ನು ತೋರಿಸಲು ಒಂದು ರೂಪಕವನ್ನು ಬಳಸುತ್ತಾರೆ.

ಉದಾಹರಣೆಗೆ, “ನಿನ್ನ ಗದ್ದೆಗೆ ನೀರು ತರುವ ನಾಲೆಗಳೆಲ್ಲ ಬಂದು. ಬೇಕಾದದ್ದು ಬೆಳೆದುಕೋ ಬಂಧು” (ನಿನ್ನ ಗದ್ದೆಗೆ ನೀರು) ಎನ್ನುವ ಸಾಲುಗಳಲ್ಲಿ ಯಜಮಾನನೊಬ್ಬ ಸಣ್ಣ ರೈತನ ಗದ್ದೆಗೆ ಹೋಗುವ ನೀರಿನ ನಾಲೆಯನ್ನು ಬಂದ್ ಮಾಡಿ, “ನಿನಗೆ ಬೇಕಾದ ಬೆಳೆ ಬೆಳೆಯುವ ಸ್ವಾತಂತ್ರ್ಯ ಇದೆ” ಎಂದು ಹೇಳುವ ಚಿತ್ರಣ ಇಲ್ಲಿದೆ. ಆದರೆ ನೀರೇ ಇಲ್ಲದೆ ರೈತ ಯಾವ ಬೆಳೆಯನ್ನು ಬೆಳೆಯಲು ಸಾಧ್ಯ? ಈ ರೂಪಕದ ಮೂಲಕ ಅಡಿಗರು ತುರ್ತುಪರಿಸ್ಥಿಯಲ್ಲಿ ವ್ಯಕ್ತಿ ಸ್ವಾತಂತ್ರ್ಯದ ಮತ್ತು ಪತ್ರಿಕಾ ಸ್ವಾತಂತ್ರ್ಯದ ಹರಣ ಮಾಡಿ, ಜನರಿಗೆ ಉಂಟಾಗುವ ಪ್ರಯೋಜನಗಳ ಬಗ್ಗೆ ಹೇಳಿಕೆಗಳನ್ನು ಕೊಡುವುದನ್ನು ವ್ಯಂಗ್ಯವಾಗಿ ಟೀಕಿಸಿದ್ದಾರೆ.

ಪಾವೆಂ ಅವರದು ಈ ಮಾದರಿಯಲ್ಲ. ‘ನೊಣ’ದಂತಹ ರೂಪಕಗಳನ್ನು ಹೀಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದು. ಅದರ ಹಿಂದಿನ ಸಂಗತಿ ಏನೆನ್ನುವುದು ಸ್ಪಷ್ಟವಾಗುವುದಿಲ್ಲ. ಆಗ ‘ನೊಣ’ವನ್ನು ನೊಣ ಎಂದೇ ಪರಿಗಣಿಸಿ ಇಡೀ ಸನ್ನಿವೇಶವನ್ನು ಸಮಾಜದ ಬೇರೆ ಯಾವುದಾದರೂ ವರ್ತನೆಯನ್ನು ಇದು ಲೇವಡಿ ಮಾಡುತ್ತದೆಯೆ ಎನ್ನುವುದನ್ನು ಯೋಚಿಸಬೇಕಾಗುತ್ತದೆ. ಅಸಂಗತ ಸನ್ನಿವೇಶಗಳನ್ನು ಗ್ರಹಿಸುವ ಕ್ರಮವೂ ಇದೇ. ಹಾಗಾಗಿ ಪಾವೆಂ ಅವರ ವ್ಯಂಗ್ಯ ಅಸಂಗತ ಸನ್ನಿವೇಶಗಳ ಕಡೆಗೆ ಸಹಜವಾಗಿ ಚಲಿಸಿದೆ. ದೊಡ್ಡ ದೊಡ್ಡ ಆಯ್ಕೆಗಳನ್ನು ಮಾಡಲಾಗದೆ ತೊಳಲಾಡುವ ಸನ್ನಿವೇಶಗಳಿಗೆ ಎದುರಾಗಿ ತುಂಬಾ ಕ್ಷುಲ್ಲಕವಾದ ಆಯ್ಕೆಯ ಸಮಸ್ಯೆಯನ್ನು (ತನ್ನ ಮೂಗಿನ ಮೇಲೆ ಕುಳಿತ ನೊಣವನ್ನು ಹೊಡೆಯುವುದೋ ಬೇಡವೋ ಎಂಬುದನ್ನು ಧರ್ಮ ಜಿಜ್ಞಾಸೆ ಎಂಬಂತೆ, ಶ್ರೀಕೃಷ್ಣ ಪರಮಾತ್ಮನಲ್ಲಿಯೇ ಕೇಳಿ ಬಗೆಹರಿಸಬೇಕಾದ ಜೀವನ್ಮರಣದ ಪ್ರಶ್ನೆ ಎಂಬಂತೆ) ಕವಿ ನಿಲ್ಲಿಸಿದ್ದಾರೆ.

ಫ್ರಾನ್ಸುವಾ ರಬ್ಲೆ ಎಂಬಾತನ Gargantua and Pantagruel ಕಾದಂಬರಿಯಲ್ಲಿ ಪೆನರ್ಜ್ ಎಂಬವ ತಾನು ಮದುವೆಯಾಗಬೇಕೇ ಬೇಡವೆ ಎಂದು ತಿಳಿದವರನ್ನು, ಜ್ಞಾನಿಗಳನ್ನೆಲ್ಲಾ ಪ್ರಶ್ನಿಸುತ್ತಾನೆ, ಧರ್ಮಶಾಸ್ತ್ರ, ತತ್ವಶಾಸ್ತ್ರ ಮುಂತಾದ ಜ್ಞಾನ ಮಾರ್ಗಗಳಲ್ಲೆಲ್ಲ ಈ ಪ್ರಶ್ನೆಗೆ ಉತ್ತರ ಹುಡುಕಲಾಗುತ್ತದೆ. ಕೊನೆಗೂ ಅವನ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಇಂತಹ ಜ್ಞಾನ ಮಾರ್ಗಗಳಲ್ಲಿ ಮದುವೆಯಂತಹ ಕ್ಷುಲ್ಲಕ ಪ್ರಶ್ನೆಗೆ ಉತ್ತರ ಹುಡುಕಬಾರದು ಎಂಬುದು ನಿಜವಾದರೂ, ಅವುಗಳಲ್ಲಿ ಇದಕ್ಕೆ ಉತ್ತರ ಇಲ್ಲ ಎನ್ನುವುದೂ ಅಷ್ಟೇ ನಿಜವಲ್ಲವೆ! ಇಂತಹ ಸನ್ನಿವೇಶವನ್ನೇ ಪಾವೆಂ ‘ನೊಣ’ ಮುಂತಾದ ಅಸಂಗತ ವ್ಯಂಗ್ಯ ಕವಿತೆಗಳಲ್ಲಿ ಸೃಷ್ಟಿಸಿದ್ದಾರೆ. ಅಸಂಗತ ಹಾಸ್ಯಕ್ಕೆ ಯಾವ ಸತ್ಯವನ್ನೂ ಕಾಣಿಸಲು ಸಾಧ್ಯವಾಗದೆ ಹೋಗುವ ಸಾಧ್ಯತೆ ಇರುವಂತೆಯೇ ಹಲವು ಸತ್ಯಗಳನ್ನು ಕಾಣಿಸುವ ಸಾಧ್ಯತೆಯೂ ಇದೆ.

ಸತ್ಯದರ್ಶನದ ಕುರಿತಾಗಿ ಅವರ ಮೊದಲನೆಯ ಕವನ ಸಂಕಲನದಲ್ಲಿರುವ ಕವಿತೆಯನ್ನು ಗಮನಿಸಿದ್ದೇವೆ. ಎರಡನೆಯ ಕವನ ಸಂಕಲನದಲ್ಲಿ ಇದನ್ನು ಚಿಂತಿಸುವ ಎರಡು ಕವನಗಳಿವೆ. ಅವುಗಳಲ್ಲಿ ಒಂದು ‘ಗೀತಾಧ್ಯಾಯ: 19’. ಸತ್ಯದ ಪ್ರಖರತೆಯನ್ನು ಸಹಿಸಲಾಗದು ಎಂಬುದನ್ನು ಈ ಕವಿತೆ ಕೃಷ್ಣನ ಗೀತೋಪದೇಶದ ರೂಪಕದ ಮೂಲಕ ಹೇಳುತ್ತದೆ. ಭಗವದ್ಗೀತೆಯಲ್ಲಿ 18 ಅಧ್ಯಾಯಗಳಿರುವುದು. ಇದು ಹತ್ತೊಂಬತ್ತನೆಯ ಅಧ್ಯಾಯ ಎಂದರೆ ಈ ಕವಿ ಸೇರಿಸಿರುವುದು. ಇದು ಭಗವಂತನಿಗೆ ತಿಳಿಯದ ಸತ್ಯವೇನೂ ಅಲ್ಲ; ಆದರೆ ಮಾನವರ ಪರವಾಗಿ ‘ಸತ್ಯದ ಪ್ರಖರತೆಯನ್ನು ಮಾನವರು ಸಹಿಸುವುದು ಕಷ್ಟ’ ಎನ್ನುವುದನ್ನು ನಿವೇದಿಸುವ ಬಗೆಯದು.

‘ಗೀತಾಧ್ಯಾಯ 19

ಯಾಕೆ ಕೃಷ್ಣ ಈ ಬಂಗಾರದ ಮುಚ್ಚಳ
ತೆರೆದು ತೋರಿಸಿದೆ ನನಗೆ ನಿನ್ನ ಸತ್ಯ?
ನನಗೆ ನಾನೆ ನಾ ಯಾರಿಗೇನಲ್ಲ
ನಾನೂ ನನಗೆ ಯಾರೂನೂ ಅಲ್ಲ.

ಯಾಕೆ ಕೃಷ್ಣ ಈ ಎಲ್ಲದರ ನಡುವೆ,
ನನಗೇನೂ ಅಲ್ಲದರ ನಡುವೆ,
ಬೇರು ಮೇಲಾದ ನಿನ್ನರಳೀ ಮರಕ್ಕೆ
ಈ ಬೇತಾಳನ್ನ ನೇತುಹಾಕಿ ಬಿಟ್ಟೆ?
ಯಾಕೆ ಕೃಷ್ಣ ಈ ಹಿಮದ ಕಾಡಲ್ಲಿ
ಮೂಗನ್ನ ಕೊಂಡು, ಕನ್ನಡಕವನ್ನ ಕೊಟ್ಟೆ?

ಕೊಂದೆಯೋ ನನ್ನ, ನೀ
ಕೊಂದೆಯೋ ನನ್ನ;
ಎಂದೂ ಸಾಯದಂತೆ ಕೊಂದೆಯೋ ನನ್ನ.
ಇಂತು ಕುಂತೀತನಯ ರಣರಂಗ ಮಧ್ಯದಲ್ಲಿ
ಭ್ರಾಂತನಂತಳುತ ಹಲಬುತ್ತಿರ್ದ ಸಮಯದಲ್ಲಿ
ಕಂತುಜನಕನ ಮನಸು ಕರಗಿತ್ತು ಮೇಣದಂತೆ,
ಒಂದು ನಿಟ್ಟುಸಿರಿಟ್ಟು ನುಡಿದವನು ಮುಂದಿನಂತೆ:

ಅಳಬೇಡ ವತ್ಸ,
ಕೂರ್ಮನಾಗದೆ ಮತ್ಸ್ಯ
ತಾಳಲಾರದು ಬಯಲು ಹವೆಯ ಸತ್ಯ.
ಕೋ! ಹಿಂದೆಗೆದೆ ನನ್ನ ಕುಳಿರು ಮಧ್ಯಾಹ್ನ,
ಕೊಟ್ಟೆ ನಿನಗೆ ನನ್ನ
ಕಣ್-ಮಿಣಕಿಸುವ ತಣ್ –ಕತ್ತಲನ್ನ
ನನ್ನ ಬೆಚ್ಚನ್ನ ಮಿಥ್ಯವನ್ನ
ಅಥವ ನೀ ಕಳಕೊಂಡ ನಿನ್ನ ಸತ್ಯವನ್ನ.
ಹೀಗೆಂದು ಕಾರುಣಿಕ
ಶಿಷ್ಯೋತ್ತಮನ ಕಣ್ಣ
ಕಿರಿಬೆರಳ ತುದಿಯಿಂದ ಚುಚ್ಚಿದ;

ಕೌಂತೇಯ ತನ್ನ
ಅಜ್ಞಾನ ದೃಷ್ಟಿಯನ್ನ ಬಿಚ್ಚಿದ.
1976

ಪಾವೆಂ ಅವರ ಕೊನೆಯ ಕವಿತೆ ಎನ್ನಲಾದ ‘ರಾಮದೇವರ ಸತ್ಯ’ ಎನ್ನುವ ಕವಿತೆಯ ಕೊನೆಯ ಸಾಲುಗಳು ಹೀಗಿವೆ. ಇವು ಪಾವೆಂ ಅವರ ಕಾವ್ಯದ ಅಂತಿಮ ಸಂದೇಶವೆಂದು ಭಾವಿಸಬಹುದು. ನವೋದಯದಿಂದ ಹೊರಳಿಕೊಂಡು ವಾಸ್ತವದ ಸತ್ಯಗಳಿಗೆ ಮುಖಾಮುಖಿಯಾದಾಗ ಅವರು ‘ಸತ್ಯದರ್ಶನ’ ಎನ್ನುವ ಕವಿತೆಯನ್ನು ಬರೆದುದನ್ನು ಹಿಂದೆ ಉಲ್ಲೇಖಿಸಲಾಗಿದೆ.

ಇವು ಸತ್ಯವೇ ಕೇಳಬೇಡಿ. ನಾನದನರಿಯೆ.
ಸತ್ಯ-ಮಿಥ್ಯದ ಲೆಕ್ಕವಿಡುವ ಬುದ್ಧಿಯೆ ಮೊಟಕು.
ತಾಯಿ-ಮಗುವಿನ ಸತ್ಯ, ಮಡದಿ-ಗಂಡನ ಸತ್ಯ,
ಭಕ್ತ-ದೇವನ ಸತ್ಯ, ನ್ಯಾಯ ಚಾವಡಿ ಸತ್ಯವಲ್ಲ.
ಮಾತಿನ ಸತ್ಯ, ನುಡಿ ಸತ್ಯ, ಕಣಿ – ನುಡಿ ಸತ್ಯ
ಎಲ್ಲ ಒಂದೇ ಅಲ್ಲ. ಮನಸು ಲಾಗಿಸಿ ಅಳೆವ
ಸತ್ಯ ನಿಲುಕದು ಮೊಳ – ಮಾರುಗಳಳವಿಂಗೆ!

ಇಲ್ಲಿ ಪಾವೆಂ ಅವರು ಅಸಂಗತ ವ್ಯಂಗ್ಯದ ಮಾರ್ಗವನ್ನು ಬಿಟ್ಟು ಜನಪದ ನೆಲೆಯಿಂದ ‘ರಾಮದೇವರ ಸತ್ಯ’ದ ಹಲವು ನೆಲೆಗಳನ್ನು ಗ್ರಹಿಸಲು ಪ್ರಯತ್ನಿಸಿದ್ದಾರೆ.

ಪಾವೆಂ ಅವರ ಸಮಗ್ರ ಕವಿತೆಗಳ ಸಂಕಲನದ ಕೊನೆಯ ಭಾಗದಲ್ಲಿ ‘ಪೆಂಗೋಪದೇಶ’ ಎನ್ನುವ, ಮಂಕುತಿಮ್ಮನ ಕಗ್ಗದ ಮಾದರಿಯ 77 ಚೌಪದಿಗಳಿವೆ. ವ್ಯಂಗ್ಯ ದೃಷ್ಟಿ ಪಾವೆಂ ಅವರಿಗೆ ಸಹಜವಾದುದರಿಂದ ಇಲ್ಲಿಯೂ ಅದೇ ಧಾಟಿಯಲ್ಲಿ ಬದುಕಿನ ವಾಸ್ತವಗಳನ್ನು ಕಾಣಿಸಲು ಪ್ರಯತ್ನಿಸಿದ್ದಾರೆ. ಇವು ಮೊದಲು ಬಿಡಿಬಿಡಿಯಾಗಿ ಪ್ರಕಟವಾಗಿದ್ದವು; ಇಲ್ಲಿ ಒಂದೇ ಕಡೆ ಸಿಗುತ್ತವೆ. ‘ಪೆಂಗೋಪದೇಶ’ದಿಂದ ಆರಿಸಿದ ಎರಡು ಚೌಪದಿಗಳಿವು:

ಪೆಂಗೋಪದೇಶ

63
ಬೀಗ ಬಾಗಿಲು ಕಳ್ಳರನು ಕಾಯಲಾರವವು
ಸಜ್ಜನರ ಕೈಮನಂಗಳಿಗಷ್ಟೆ ಕಾಪು
ಈತಗಳನಾತಗಳನಾಗಿಸುವ ಪಾಪಿ ನೀ-
ನಾಗದಿರು, ಬೀಗವಿಕ್ಕಿಯೆ ಹೋಗೊ ಪೆಂಗೇ.
64
ಕಳ್ಳತನವೂ ಕೋಳ, ಒಳ್ಳೆತನವೂ ಕೋಳ,
ಕ್ಷುಲ್ಲತನ ಮಲ್ಯತನ ಬಲ್ಲತನ ಕೋಳ
ಎಲ್ಲ ಕೋಳಗಳನ್ನು ಮುರಿದೊಗೆದೆನೆಂಬವಗೆ
ಇಲ್ಲತನ ಅಲ್ಲತನ ಕೋಳವೆಲೊ ಪೆಂಗೇ.

ಪಾಡಿಗಾರು ವೆಂಕಟರಮಣ ಆಚಾರ್ಯರು ಕನ್ನಡದ ಒಬ್ಬರು ವಿಶಿಷ್ಟ ಕವಿ. ವ್ಯಂಗ್ಯ ದರ್ಶನದ ಸಾಧ್ಯತೆಗಳನ್ನು ಅವರು ಸಾಕಷ್ಟು ದುಡಿಸಿಕೊಂಡಿದ್ದಾರೆ. ನಂತರದ ಕವಿಗಳಿಗೆ ಮಾರ್ಗದರ್ಶಕವಾಗುವ ಅಥವಾ ಪ್ರೇರಣೆಯಾಗುವ ರೀತಿಯಲ್ಲಿ ಅವರು ಕೆಲವು ಹೊಸ ಸಾಧ್ಯತೆಗಳನ್ನು ಅನ್ವೇಷಿಸಿ ನೋಡಿದ್ದಾರೆ. ಒಂದು ಉದಾಹರಣೆ ನೋಡುವುದಾದರೆ ಅವರ ‘ಸತ್ತವರು’ ಕವಿತೆಯ ಮಾದರಿಯಲ್ಲಿ ಕೆ. ವಿ. ತಿರುಮಲೇಶರು ತಮ್ಮ ‘ಅವಧ’ದ ಕಾಲಘಟ್ಟದಲ್ಲಿ ಕೆಲವು ಒಳ್ಳೆಯ ಕವಿತೆಗಳನ್ನು ಬರೆದದ್ದಿದೆ. (ಈ ಮಾಲೆಯಲ್ಲಿ ಈಗ ನಮ್ಮ ಜತೆಗೆ ಇಲ್ಲದ ಕವಿಗಳನ್ನು ಮಾತ್ರ ಪರಿಚಯಿಸುತ್ತಿರುವುದರಿಂದ ತಿರುಮಲೇಶರ ಬಗ್ಗೆ ಬರಹವಿಲ್ಲ). ತಿರುಮಲೇಶರು ಪಾ.ವೆಂ. ಅವರ ಈ ಕವಿತೆಯನ್ನು ನೋಡದಿರುವ ಸಾಧ್ಯತೆಯೂ ಇದೆ. ಹಾಗಾಗಿ, ತಿರುಮಲೇಶರು ಮುಂದೆ ಬೆಳೆಸಿದ ಬಗೆಯ ಕವಿತೆಗಳನ್ನೂ ಪಾ.ವೆಂ. ಅವರು (ಮೊದಲೇ) ಬರೆದಿದ್ದರು ಎಂದರೆ ತಪ್ಪಾಗಲಾರದು. ಆ ಕವಿತೆ ಹೀಗಿದೆ:

ಸತ್ತವರು

ಮೂವತ್ತಕ್ಕೆಲ್ಲಾ ನಾವು ಸಾಯುತ್ತೇವೆ
ಮೂವತ್ತಕ್ಕೇ – ಇಲ್ಲ- ನಲುವತ್ತಕ್ಕೆ.
ಮಹಾ ಶೈತ್ಯಯುಗ ಕಾಲಿಡುತ್ತದೆ.

ನಮ್ಮ ನಿಶತ್‍ಬಾಗುಗಳೂ ಹೂಗಳೂ
ನಮ್ಮ ಮಾನಸಗಳೂ ಹಂಸಗಳೂ
ಕಾಗೇಗೂಡುಗಳೂ ಕೋಗಿಲೆಗಳೂ
ಹುಲ್ಲಲ್ಲಿ ಹಾವುಗಳೂ ಮುಳ್ಳುಗಳೂ
ಅಬ್ಬಿಗಳೂ ಕಾಮನಬಿಲ್ಲುಗಳೂ
ಸುಯ್ಲುಗಳೂ ಹೋಳಿಯ ಸಿಳ್ಳುಗಳೂ
ಹಿಮದ ಹಾಳೆಯಡಿ ಹೆಪ್ಪುಗಟ್ಟಿ
ಸನಾತನತ್ವ ಸಂಪಾದಿಸುತ್ತವೆ.

ಸತ್ತಿದ್ದೇವೆಂದು ಗೊತ್ತಿಲ್ಲದೇ ನಾವು
ಸ್ವಪ್ನಸಂಚಾರಿಗಳು ಕಣ್ಣುಬಿಟ್ಟು
ಸುತ್ತುತ್ತಾ ನಮ್ಮ ಕಬ್ರಿಸ್ತಾನದಲ್ಲಿ
ಹೊಸಾ ಹುಲ್ಲಮೇಲೆ ಲಲ್ಲೆಯಾಡುವ
ಜೀವಂತ ಪ್ರೇಮವನ್ನು ಮೆಟ್ಟುತ್ತೇವೆ.

ಮೊಹೆಂಜೋದಡೋವನ್ನು ಅಗೆವಾಗ
ಚೆಂದ ಚೆಂದ ಮೃತ್ಕುಂಭ ಸಿಗುವವು.
ಅವುಗಳನ್ನು ತಟ್ಟಿದರೆ ಏನನ್ನೊ
ಹೇಳಲೆಳಸುವಂತೆ ಕಾಣುವುದು.
ರೋಜೆಟ್ಟಾ ಶಿಲೆ ಇಲ್ಲದ ಮೂಲಕ
ನಮಗದೇನೆಂದು ಅರ್ಥವಾಗದು
(1968)

ಇತರ ಕೃತಿಗಳು

ಪಾ.ವೆಂ. ಅವರು ಸ್ವತಃ ತಮ್ಮ ಮುಖ್ಯ ಕೊಡುಗೆ ಕಾವ್ಯ ಕ್ಷೇತ್ರಕ್ಕೆ ಸಂದಿದೆ ಎಂದು ತಿಳಿದಿದ್ದರು. ಮತ್ತು ಅದು ಸತ್ಯವಾದ ಅಭಿಪ್ರಾಯ. ಆದರೆ ಪಾ.ವೆಂ. ಅವರ ಕಾವ್ಯದ ಬಗೆಗೆ ಹೆಚ್ಚು ಅಧ್ಯಯನ ಆದಂತಿಲ್ಲ. ಡಾ. ಸರ್ವಮಂಗಳ ಶಾಸ್ತ್ರಿ ಅವರು ಪಾ.ವೆಂ. ಅವರ ಬಗ್ಗೆ ಪಿಎಚ್.ಡಿ. ಅಧ್ಯಯನ ಮಾಡಿದ್ದಾರೆ. (ಅದನ್ನು ನೋಡುವ ಅವಕಾಶ ಈ ಲೇಖಕನಿಗೆ ಆಗಿಲ್ಲ).

ಅವರ ಇತರ ಕೊಡುಗೆಗಳಲ್ಲಿ ಮುಖ್ಯವಾದುದು ‘ಸಮಾಜ ಶಿಕ್ಷಣ ಪತ್ರಿಕೋದ್ಯಮ’ಕ್ಕೆ ಸಂದಿದೆ. 18 ವರ್ಷ ‘ಕಸ್ತೂರಿ’ಗಾಗಿ ದುಡಿದ ಆಚಾರ್ಯರು ಈ ಮಾಸಿಕವನ್ನು ‘ರೀಡರ್ಸ್ ಡೈಜೆಸ್ಟ್’ ರೀತಿಯ ಕನ್ನಡಿಗರ ಮೆಚ್ಚಿನ ಡೈಜೆಸ್ಟ್ ಆಗಿ ರೂಪಿಸಿದರು. ಆ ಪತ್ರಿಕೆಗಾಗಿ ಸ್ವತಃ ತಾವೇ ಬೇರೆ ಬೇರೆ ಗುಪ್ತನಾಮಗಳಲ್ಲಿ 600ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಈ ಲೇಖನಗಳಲ್ಲಿ ವ್ಯಕ್ತಿ ಪರಿಚಯ, ವೈಜ್ಞಾನಿಕ ಬರಹಗಳು (ಮನೋವಿಜ್ಞಾನ, ಖಗೋಳಶಾಸ್ತ್ರ, ಭೌತಶಾಸ್ತ್ರ, ಸಸ್ಯ-ಪ್ರಾಣಿ ಪ್ರಪಂಚ), ಇತಿಹಾಸ, ಪ್ರಪಂಚದ ವೈಚಿತ್ರ್ಯಗಳು ಎಲ್ಲವೂ ಇದ್ದವು. ಈ ಎಲ್ಲ ವಿಷಯಗಳ ಅಪ್ ಟು ಡೇಟ್ ಮಾಹಿತಿಯನ್ನು ಕಲೆ ಹಾಕಿ, ಅವಶ್ಯವಿದ್ದಲ್ಲಿ ಹೊಸ ಪಾರಿಭಾಷಿಕ ಪದಗಳನ್ನು ಸೃಷ್ಟಿಸಿಕೊಂಡು ಪಾವೆಂ ಲೇಖನಗಳನ್ನು ಬರೆದಿದ್ದಾರೆ. ಇವೆಲ್ಲವನ್ನೂ ಈಗಲೂ ಒಂದು ಸಂಪುಟದಲ್ಲಿ ಪ್ರಕಟಿಸಿದರೆ ವಿಶ್ವಕೋಶದಂತಹ ಉಪಯುಕ್ತ ಗ್ರಂಥವಾಗುವುದು. ಒಟ್ಟಿನಲ್ಲಿ ‘ಕಸ್ತೂರಿ’ಯನ್ನು ಕನ್ನಡದಲ್ಲಿ ಪ್ರಥಮ ದರ್ಜೆಯ ಡೈಜೆಸ್ಟ್ ಆಗಿ ರೂಪಿಸಲು ಆಚಾರ್ಯರು ನಿರಂತರ ಅಧ್ಯಯನ ಮತ್ತು ಬರವಣಿಗೆಯನ್ನು ಮಾಡಿದ್ದಾರೆ.

‘ಪದಾರ್ಥ ಚಿಂತಾಮಣಿ’ ಎನ್ನುವ ಶಬ್ದಮೂಲ ಶೋಧನೆಯ ಒಂದು ಪುಟದ ಬರಹಗಳನ್ನು ಪಾವೆಂ ಅವರು ‘ಕಸ್ತೂರಿ’ಯಲ್ಲಿ ಬರೆಯುತ್ತಿದ್ದರು. ಅವುಗಳನ್ನು ಆಮೇಲೆ ಎರಡು ಪ್ರಕಾಶನ ಸಂಸ್ಥೆಗಳು ಅವುಗಳನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಿದವು. ಶಬ್ದಮೂಲ ನಿಘಂಟಿನಂತಹ ಈ ಮಹತ್ವದ ಕೃತಿ ಈಗ ‘ನವಕರ್ನಾಟಕ’ದ ಮೂಲಕ ಒಂದೇ ಸಂಪುಟವಾಗಿ ಪ್ರಕಟವಾಗಿ ಜನಪ್ರಿಯವಾಗಿದೆ.

ಡಾ. ಶ್ರೀನಿವಾಸ ಹಾವನೂರರು ಪಾ.ವೆಂ. ಅವರ ಕೃತಿಗಳನ್ನು ಸಂಗ್ರಹಿಸಿ, ಪ್ರಕಟಿಸಿ, ಉಳಿಸಲು ಮಾಡಿದ ಪ್ರಯತ್ನವು ಶ್ಲಾಘನೀಯವಾದುದು. ಅವರ ಪ್ರಯತ್ನದಿಂದಾಗಿ ಸುಮಾರು 15 ಪುಸ್ತಕಗಳಲ್ಲಿ ಪಾವೆಂ ಬರಹಗಳು ಸಂಕಲಿತವಾಗಿವೆ.

1930 ರ ದಶಕದಲ್ಲಿಯೇ ಪಾವೆಂ ಅವರು ಕತೆಗಳನ್ನು ಬರೆಯತೊಡಗಿದ್ದರು. ಅವರ ‘ಘಾತಕ ಜಿಜ್ಞಾಸೆ’ (1941) ಕತೆಯನ್ನು ಕನ್ನಡದ ಒಂದು ಉತ್ತಮ ಪ್ರಗತಿಶೀಲ ಕತೆಯೆಂದು ಗುರುತಿಸಬಹುದು. ಪಾವೆಂ ಅವರ ಸಮಗ್ರ ಕತೆಗಳು ಮರಣೋತ್ತರವಾಗಿ ಪ್ರಕಟವಾಗಿದ್ದು, ಅದರಲ್ಲಿ ಈ ಕತೆ ಸೇರಿಲ್ಲ. ‘ಕಂಡೂಕಾಣದ ನೋಟಗಳು’ (ಲಾೈಸಿಯಮ್ ಗ್ರಂಥಮಾಲೆ, ಉಡುಪಿ. 1941) ಎಂಬ ಪ್ರಗತಿಶೀಲ ಕತೆಗಳ ಸಂಕಲನದಲ್ಲಿ ಈ ಕತೆಯಿದೆ. ಈ ಆಂಥಾಲಜಿಗೆ ಅ.ನ.ಕೃ. ಅವರ ಮುನ್ನುಡಿಯಿದೆ. ‘ಘಾತಕ ಜಿಜ್ಞಾಸೆ’ ಮೊದಲೇ ‘ಧುರೀಣ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು ಎಂದು ಅದರಲ್ಲಿ ಹೇಳಲಾಗಿದೆ. ಪಾವೆಂ ಅವರ ಹಲವಾರು ಬರಹಗಳು ಮತ್ತು ಕತೆಗಳು ಇನ್ನೂ ಅಪ್ರಕಟಿತವಾಗಿ ಉಳಿದಿವೆ ಎನ್ನುವುದು ಸತ್ಯ. ಅವರ ಲಘು ಬರಹಗಳು, ವ್ಯಕ್ತಿಚಿತ್ರಗಳು ಇವೆಲ್ಲವೂ ಅಧ್ಯಯನಯೋಗ್ಯ ಸಾಹಿತ್ಯ ಕೃತಿಗಳು. ಅವುಗಳನ್ನು ಪರಿಚಯಿಸಲು ಈ ಬರಹದಲ್ಲಿ ಪ್ರಯತ್ನಿಸಲಾಗಿಲ್ಲ.

ಮನ್ನಣೆ

ಪಾವೆಂ ಅವರ ಮೊದಲ ಕವನ ಸಂಕಲನ ‘ನವನೀರದ’ಕ್ಕೆ ಮುಂಬಯಿ ಸರಕಾರದಿಂದ ಬಹುಮಾನ ದೊರಕಿತ್ತು. 1977 ಮೈಸೂರಿನಲ್ಲಿ ಅವರಿಗೆ ಸಾರ್ವಜನಿಕ ಸನ್ಮಾನ ಮಾಡಿ ‘ಪಾವೆಂ ಕಸ್ತೂರಿ’ ಎಂಬ ಸಂಭಾವನಾ ಗ್ರಂಥವನ್ನು ಸಮರ್ಪಿಸಲಾಯಿತು. 1981 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಮತ್ತು 1989 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಅವರಿಗೆ ಲಭಿಸಿದವು. 1981 ರಲ್ಲಿ ಅವರಿಗೆ ವರ್ಧಮಾನ ಪ್ರಶಸ್ತಿ ಸಂದಿತು. 1987 ರಲ್ಲಿ ಮೂಲ್ಕಿಯಲ್ಲಿ ನಡೆದ ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. 1992ರಲ್ಲಿ ಪತ್ರಿಕೋದ್ಯಮದಲ್ಲಿ ಅಖಿಲ ಭಾರತ ಮಟ್ಟದ ‘ಗೋಯೆಂಕಾ ಪ್ರಶಸ್ತಿ’ ಅವರಿಗೆ ಲಭಿಸಿತು. ಅದನ್ನು ಸ್ವೀಕರಿಸಿದ ಒಂದು ವಾರದಲ್ಲೇ ನಿಧನರಾದರು.

ಪಾವೆಂ ಕೃತಿಗಳು

1935 – ಕೆ. ಹೊನ್ನಯ್ಯ ಶೆಟ್ಟರೊಡನೆ ಕನ್ನಡ ಪ್ರಾತಿನಿಧಿಕ ಕಥಾಸಂಗ್ರಹ ‘ಮಧುವನ’ ಸಂಪಾದನೆ.
1943 – ‘ರಶಿಯದ ರಾಜ್ಯಕ್ರಾಂತಿ’
1950 – ‘ವಾಸನಾ’ ಬಂಗಾಲಿ ಕಾದಂಬರಿಯ ಅನುವಾದ
1952 – ‘ನವನೀರದ’ ಕವನ ಸಂಗ್ರಹ (ಮುಂಬಯಿ ಸರ್ಕಾರದ ಬಹುಮಾನ)
1965 – ‘ಪ್ರಹಾರ’ (ನಗೆಬರಹಗಳು)
1972 – ‘ಸ್ವತಂತ್ರ ಭಾರತ’ (ಇಪ್ಪತ್ತೈದು ವರ್ಷಗಳ ಸಿಂಹಾವಲೋಕನ)
1976 – ‘ಲೋಕದ ಡೊಂಕು’ (ನಗೆಬರಹಗಳು)
1977 – ‘ವಿಪರೀತ’ (ನಗೆಬರಹಗಳು)
1977 – ‘ಕಳ್ಳಸಾಗಣೆದಾರರ ನಿರ್ಮೂಲನ’
1978 – ‘ಕೆಲವು ಪದ್ಯಗಳು’ ಕವನ ಸಂಗ್ರಹ
1980 – ‘ಮಾನವ ಪ್ರವೃತ್ತಿ ಮತ್ತು ಮೌಲ್ಯಗಳು’
1986 – ‘ಬಯ್ಯಮಲ್ಲಿಗೆ’ – ತುಳು ಕವನಗಳ ಸಂಕಲನ
1986 – ‘ಸುಭಾಷಿತ ಚಮತ್ಕಾರ’
1990 – ‘ವಕ್ರದೃಷ್ಟಿ’ –ಧಾರವಾಡದ ಸಮಾಜ ಪುಸ್ತಕಾಲಯ
*ಪದಾರ್ಥ ಚಿಂತಾಮಣಿ (ಮೊದಲು ಎರಡು ಭಾಗಗಳಲ್ಲಿ ಮತ್ತು ಸಮಗ್ರವಾಗಿ ಪ್ರಕಟವಾಗಿದೆ)
*‘ಹೌಸಿಂಗ್ ಕಾಲನಿ’ ಸಮಗ್ರ ಕಾವ್ಯ. ಸಂಪಾದಕರು: ಎಸ್.ಎಲ್. ಶ್ರೀನಿವಾಸಮೂರ್ತಿ.

ಸಮಗ್ರ ಕತೆಗಳು (ಅವರ ಜೀವಿತ ಕಾಲದಲ್ಲಿ ಅವರ ಕತೆಗಳ ಸಂಕಲನ ಪ್ರಕಟವಾಗಿರಲಿಲ್ಲ) ಮತ್ತು ಇತರ ಸುಮಾರು 15 ಪುಸ್ತಕಗಳನ್ನು ಡಾ. ಶ್ರೀನಿವಾಸ ಹಾವನೂರರು ಪ್ರಧಾನ ಸಂಪಾದಕರಾಗಿ ಸಂಪಾದಿಸಿ ವಿವಿಧ ಪ್ರಕಾಶಕರ ಸಹಕಾರದಿಂದ ಪ್ರಕಟಿಸಿದರು.

ಪಾವೆಂ. ಅವರ ಕೃತಿಗಳು ಈಗ ಅಂತರ್ಜಾಲದಲ್ಲಿ ಉಚಿತ ಓದಿಗೆ ಲಭ್ಯವಿವೆ. ಅಂತರ್ಜಾಲಕ್ಕೆ ಅಳವಡಿಸಿದವರು ಪಾ.ವೆಂ. ಅವರ ಮೊಮ್ಮಗಳು (ಮಗಳ ಮಗಳು) ಶ್ರೀಮತಿ ಛಾಯಾ ಉಪಾಧ್ಯಾಯ. ವೆಬ್‍ಸೈಟ್: http://pavem.sirinudi.org

*****

ಗ್ರಂಥ ಋಣ
1.‘ಹೌಸಿಂಗ್ ಕಾಲನಿ’ ಪಾ.ವೆಂ. ಸಮಗ್ರ ಕಾವ್ಯ. ಸಂಪಾದಕರು: ಎಸ್.ಎಲ್. ಶ್ರೀನಿವಾಸಮೂರ್ತಿ. ಪಾವೆಂ ವಿಶ್ವಸ್ಥ ಸಮಿತಿ, ಹುಬ್ಬಳ್ಳಿ. 2004.
2.ಪಾವೆಂ ಕಸ್ತೂರಿ. ಸಂ. ಜಿ. ಎಸ್. ಭಟ್ಟ. ಪಾ.ವೆಂ. ಆಚಾರ್ಯ ಸನ್ಮಾನ ಸಮಿತಿ, ಮೈಸೂರು. 1977.
ಕೃತಜ್ಞತೆಗಳು:
1. ಪ್ರೊ. ರಾಧಾಕೃಷ್ಣ ಆಚಾರ್ಯ
2. ಶ್ರೀಮತಿ ಛಾಯಾ ಉಪಾಧ್ಯಾಯ
3. ಡಾ. ನಾ. ಮೊಗಸಾಲೆ