ಸ್ಟೀವನ್ಸ್ ತನ್ನ ವೃತ್ತಿಯ ಹುಸಿ ಘನತೆ ಮತ್ತು ಹೊಣೆಗಾರಿಕೆಗಳಲ್ಲಿ ಅವನ ಒಳ ಬದುಕು ಎಷ್ಟು ಮುರುಟಿಹೋಗಿದೆ ಎಂದರೆ ಅವನು ಅಪರೂಪಕ್ಕೆ ಎಂಬಂತೆ ರೊಮ್ಯಾಂಟಿಕ್ ಕಾದಂಬರಿಯನ್ನು ಓದುವುದು ತನ್ನ ವೃತ್ತಿಗೆ ಅಗತ್ಯವಾಗಿ ಬೇಕಾದ ಇಂಗ್ಲೀಷನ್ನು ಸರಿಪಡಿಸಿಕೊಳ್ಳಲು ಮಾತ್ರ! ಸ್ಟೀವನ್ಸ್ ಏನು ಓದುತ್ತಾನೆ, ಅವನ ಕತ್ತಲಗೂಡಿನಂತಹ ಕೋಣೆಯಲ್ಲಿ ಯಾಕೆ ಒಂದು ಹೂಗುಚ್ಛವನ್ನೂ ಇಡಲು ಜಾಗವಿಲ್ಲ ಎಂದೆಲ್ಲ ಯೋಚಿಸುತ್ತ, ಅವನ ಅಂತರಂಗವನ್ನು ತಡವಿ, ಒಳಗನ್ನು ಅರಿತುಕೊಳ್ಳುವ ಆಸೆಯಿಂದ ಹೊರಡುವ ಮಿಸ್ ಕೆಂಟನ್‍ ಗೆ ಅಲ್ಲಿ ಕಾಣುವುದು ಇಂಥ ಒಣ ಶಿಷ್ಟಾಚಾರ, ವೃತ್ತಿಯ ಬಗೆಗಿನ ಕುರುಡು ನಿಷ್ಠೆ ಮಾತ್ರ.
ಎಸ್. ಸಿರಾಜ್ ಅಹಮದ್ ಬರೆಯುವ ಅಂಕಣ

ಸುಳ್ಳು ಸುದ್ದಿಗಳೇ ವಾಸ್ತವಕ್ಕಿಂತ ಪ್ರಭಾವಶಾಲಿಯಾಗಿರುವಾಗ, ಸತ್ಯ-ವಾಸ್ತವ-ಇತಿಹಾಸ-ರಾಜಕೀಯದ ಬಗೆಗಿನ ನಮ್ಮ ಗ್ರಹಿಕೆಗಳು ಇನ್ನಿಲ್ಲದಂತೆ ಬುಡಮೇಲಾಗಿರುವ ಹೊತ್ತಿನಲ್ಲಿ, ಸ್ಪಷ್ಟವಾಗಿ ಬರೆಯುವುದು ಮಾತಾಡುವುದು, ಸರಳವಾಗಿ ಬದುಕುವುದು ಬಹು ದೊಡ್ಡ ಮೌಲ್ಯದಂತೆ ಕಾಣುತ್ತಿದೆ. ಇಂಥ ಹೊತ್ತಿನಲ್ಲಿ ಹರಿವ ನೀರಿನಂತೆ ಸಹಜ ಸ್ಪಷ್ಟವಾದ ಶೈಲಿಯಲ್ಲಿ ಬರೆಯುವ ಇಷಿಗುರೊಗೆ 2017ರಲ್ಲಿ ವರ್ಷ ನೊಬೆಲ್ ಬಹುಮಾನ ಸಂದಿದ್ದು ಅರ್ಥಪೂರ್ಣವಾಗಿದೆ.

ಇಷಿಗುರೊ ಬರೆಯಲು ಆರಂಭಿಸಿದಾಗ ಆತನಿಗೆ ಬಹಳ ದೊಡ್ಡ ಸಾಹಿತ್ಯದ ಓದಾಗಲೀ-ಹಿನ್ನೆಲೆಯಾಗಲೀ ಇರಲಿಲ್ಲ. ಬರೆಯಲು ಶುರುಮಾಡಿದಾಗ, ತನಗೆ ಬಹಳ ಸ್ಪಷ್ಟವಾಗಿ ವಾಕ್ಯವೊಂದನ್ನು- ಒಂದರ ನಂತರ ಇನ್ನೊಂದು-ಬರೆಯುವುದು ಸಾಧ್ಯವಾದರೆ ಅದೇ ದೊಡ್ಡದು ಎಂದು ಭಾವಿಸಿದ್ದ. ಹೆಚ್ಚೇನನ್ನೂ ಓದಿರದ ಈತ ಸಿನಿಮಾಗಳನ್ನು ನೋಡಿಕೊಂಡು ಸಂಗೀತವನ್ನು ಕೇಳಿಕೊಂಡು ಕಾಲಕಳೆಯುತ್ತಿದ್ದ. 2016ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಹಾಡುಗಾರ ಬಾಬ್ ಡಿಲನ್‍ ನ ಹಾಡುಗಳಿಂದ ಬಹಳ ಪ್ರಭಾವಿತನಾಗಿದ್ದ. ಅವನ ಪ್ರಸಿದ್ಧವಾದ ‘ರಿಮೇನ್ಸ್ ಆಫ್ ದ ಡೇ’(1989) (‘ದಿನದ ಕೊನೆಗೆ ಉಳಿದದ್ದು’)ಎಂಬ ಕೃತಿಯೂ ಸೇರಿದಂತೆ ಬಹುಪಾಲು ಕೃತಿಗಳಲ್ಲಿ ಪಶ್ಚಿಮದ ಸಮಕಾಲೀನ ಇಂಗ್ಲೀಷ್ ಕೃತಿಗಳಲ್ಲಿ ಸಾಮಾನ್ಯವಾಗಿ ಕಾಣುವ ಇತಿಹಾಸ, ರಾಜಕೀಯ, ಸಾಮಾಜಿಕ ಏಳುಬೀಳುಗಳ ಬಹು ಆಯಾಮಗಳ ಕಥೆಯಿಲ್ಲ. ಅವನ ಕಥನಪ್ರಪಂಚದಲ್ಲಿ ಗುಂತರ್ ಗ್ರಾಸ್, ವಿ.ಎಸ್.ನೈಪಾಲ್, ಸಲ್ಮಾನ್ ರಶ್ದಿ ಮೊದಲಾದ ಲೇಖಕರಲ್ಲಿ ಇರುವಂತೆ ಅನೇಕ ಕಾಲದೇಶಗಳಲ್ಲಿ ಹರಡಿಕೊಂಡ ಸಂಕೀರ್ಣ ಕಥನತಂತ್ರಗಳ ಭರಾಟೆಯಿಲ್ಲ. ಓದುಗರು ತಮ್ಮ ಅಂತರಂಗವನ್ನು ಬಿಡಿಸಿಕೊಂಡು ತಮಗೆ ತಾವೇ ಹೇಳಿಕೊಂಡ ಶೈಲಿಯಲ್ಲಿ ಬರೆಯಬೇಕೆಂಬುದೊಂದೇ ಅವನ ಮುಖ್ಯ ಉದ್ದೇಶವಾಗಿತ್ತು.

ಬರೆಯುವಾಗ ಅವನು ತನ್ನ ಕಥಾಭಿತ್ತಿಯ ಬಗೆಗೂ ಬಹಳ ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ. ‘ರಿಮೇನ್ಸ್ ಆಫ್ ದ ಡೇ’ ಬರೆಯುವ ಮುಂಚೆ ಬರೆದ ಎರಡು ಕಾದಂಬರಿಗಳಲ್ಲಿ ತನ್ನ ತಾಯ್ನಾಡಾದ ಜಪಾನ್‍ ಅನ್ನು ಕುರಿತು, ಹುಟ್ಟೂರಾದ ನಾಗಸಾಕಿಯನ್ನು ಕುರಿತು ಬಹಳ ವಿಶೇಷವಾಗಿ ಬರೆದಿಲ್ಲ. ಎರಡನೇ ಮಹಾಯುದ್ಧದಲ್ಲಿ ದಾಳಿಗೊಳಗಾದ ನಾಗಸಾಕಿಯನ್ನು ಕುರಿತು ಬರೆಯುವಾಗಲೂ ಅದರ ರಾಜಕೀಯ ಸಾಮಾಜಿಕ ಅವರಣವನ್ನು ದೂರವಿಟ್ಟೇ ಬರೆದಿದ್ದಾನೆ. ಕಾದಂಬರಿಕಾರನಾಗಿ ಇಷಿಗುರೋಗೆ ಕಥೆಯ ಆವರಣ ಯಾವುದೇ ಆಗಿರಲಿ ಅಲ್ಲಿನ ಮನುಷ್ಯ ಅನುಭವದ ಆಳವಾದ ಸಂದಿಗ್ಧಗಳನ್ನು ನೋಡಿ ಓದುಗರು ಮಿಡಿಯುವಂತೆ ಮಾಡಬೇಕೆಂಬುದೇ ಅವನ ಗುರಿಯಾಗಿತ್ತು.

‘ರಿಮೇನ್ಸ್ ಆಫ್ ದ ಡೇ’ ಪ್ರಕಟವಾದ ನಂತರ ಇಷಿಗುರೋ ತನ್ನ ಜಪಾನೀ ಹಿನ್ನೆಲೆಯ ಕಥಾನಕಗಳನ್ನು ಬಿಟ್ಟು ತಾನು ಚಿಕ್ಕಂದಿನಲ್ಲೇ ವಲಸೆ ಬಂದು ನೆಲೆಸಿದ ಇಂಗ್ಲೆಂಡನ್ನು ಕುರಿತು ಬರೆಯಲು ಆರಂಭಿಸಿದ.

‘ರಿಮೇನ್ಸ್ ಆಫ್ ದ ಡೇ’ ಕಾದಂಬರಿಯ ಮೇಲ್ನೋಟಕ್ಕೆ ಡಾರ್ಲಿಂಗ್ಟನ್ ಹಾಲ್ ಎಂಬ ಶ್ರೀಮಂತವರ್ಗದ ಮನೆಯ ಮುಖ್ಯ ಅಡಿಗೆಯವ ಹಾಗೂ ಮುಖ್ಯ ಸೇವಕನಾಗಿರುವ ಮಿ.ಸ್ಟೀವನ್ಸ್‌ ಬಗ್ಗೆ ಇರುವಂತೆ ಕಂಡರೂ ಅದು ಆಳದಲ್ಲಿ ಬ್ರಿಟಿಶ್ ಸಮಾಜದಲ್ಲಿ ಬೇರೂರಿರುವ ಮೇಲ್ವರ್ಗ-ಕೆಳವರ್ಗಗಳ ನಡುವಿನ ಅಸಮಾನ ಸಂಬಂಧಗಳ ಬಗೆಗಿನ ಕುರಿತ ಸೂಕ್ಷ್ಮ ವ್ಯಾಖ್ಯಾನದಂತಿದೆ. ಡಾರ್ಲಿಂಗ್ಟನ್ ಹಾಲ್‍ ನ ದಣಿಗೆ ವಿಧೇಯವಾಗಿರುವುದು, ಅಲ್ಲಿ ನಡೆಯುವ ಎಲ್ಲ ಊಟೋಪಚಾರ ಮೇಜವಾನಿಗಳಿಗೆ ಒಂದಿಷ್ಟೂ ಅಪಚಾರವಾಗದಂತೆ ನೋಡಿಕೊಳ್ಳುವುದೇ ತನ್ನ ಜೀವನದ ಪರಮ ಧ್ಯೇಯವೆಂದುಕೊಂಡಿರುವ ಸ್ಟೀವನ್ಸ್ ತನಗೊಂದು ಬದುಕಿದೆ, ಸ್ವತಂತ್ರ ವ್ಯಕ್ತಿತ್ವವಿದೆ, ತನ್ನನ್ನು ಇಷ್ಟ ಪಡುವ ಜೀವಗಳಿವೆ ಎಂಬುದನ್ನೂ ಅರಿಯಲಾರದಷ್ಟು ಪರಾವಲಂಬಿಯೂ ಪೊಳ್ಳುವ್ಯಕ್ತಿತ್ವದವನೂ ಆಗಿದ್ದಾನೆ. ಅವನಷ್ಟೇ ಅಲ್ಲ, ಊಟಕ್ಕೆ ಕುಳಿತ ದೊಡ್ಡಮಂದಿಯ ಮೇಜಿನ ಬಳಿಗೆ ಟ್ರೇ ತೆಗೆದುಕೊಂಡು ಹೋಗುವುದು ವಜ್ರವೈಢೂರ್ಯಗಳನ್ನು ಕೊಂಡೊಯ್ದಷ್ಟೇ ನಾಜೂಕಿನ, ಮಹತ್ವದ ಕೆಲಸ ಎಂದು ನಂಬಿರುವ ಅವನ ತಂದೆಯೂ ಸಹ ಅಲ್ಲೇ ಕೆಲಸಕ್ಕಿದ್ದಾನೆ. ಇಂಥವರ ನಡುವೆ ಮಿಸ್.ಕೆಂಟನ್ ಬಡತನ, ಅಸಹಾಯಕತೆ ಮತ್ತು ಕೆಲಸದ ಬಗೆಗಿನ ಶ್ರದ್ಧೆಯ ನಡುವೆಯೇ ತನ್ನ ಸ್ವಂತಿಕೆ ಹಾಗೂ ವ್ಯಕ್ತಿತ್ವದ ಇಷ್ಟ-ಅನಿಷ್ಟಗಳ ಹೊರಚಾಚುಗಳನ್ನು ಯಾವತ್ತಿಗೂ ಮುಕ್ಕಾಗದ ಹಾಗೆ ಜೋಪಾನ ಮಾಡಿಕೊಂಡಿದ್ದಾಳೆ.

ಸ್ಟೀವನ್ಸ್ ತನ್ನ ವೃತ್ತಿಯ ಹುಸಿ ಘನತೆ ಮತ್ತು ಹೊಣೆಗಾರಿಕೆಗಳಲ್ಲಿ ಅವನ ಒಳ ಬದುಕು ಎಷ್ಟು ಮುರುಟಿಹೋಗಿದೆ ಎಂದರೆ ಅವನು ಅಪರೂಪಕ್ಕೆ ಎಂಬಂತೆ ರೊಮ್ಯಾಂಟಿಕ್ ಕಾದಂಬರಿಯನ್ನು ಓದುವುದು ತನ್ನ ವೃತ್ತಿಗೆ ಅಗತ್ಯವಾಗಿ ಬೇಕಾದ ಇಂಗ್ಲೀಷನ್ನು ಸರಿಪಡಿಸಿಕೊಳ್ಳಲು ಮಾತ್ರ! ಸ್ಟೀವನ್ಸ್ ಏನು ಓದುತ್ತಾನೆ, ಅವನ ಕತ್ತಲಗೂಡಿನಂತಹ ಕೋಣೆಯಲ್ಲಿ ಯಾಕೆ ಒಂದು ಹೂಗುಚ್ಛವನ್ನೂ ಇಡಲು ಜಾಗವಿಲ್ಲ ಎಂದೆಲ್ಲ ಯೋಚಿಸುತ್ತ, ಅವನ ಅಂತರಂಗವನ್ನು ತಡವಿ, ಒಳಗನ್ನು ಅರಿತುಕೊಳ್ಳುವ ಆಸೆಯಿಂದ ಹೊರಡುವ ಮಿಸ್ ಕೆಂಟನ್‍ ಗೆ ಅಲ್ಲಿ ಕಾಣುವುದು ಇಂಥ ಒಣ ಶಿಷ್ಟಾಚಾರ, ವೃತ್ತಿಯ ಬಗೆಗಿನ ಕುರುಡು ನಿಷ್ಠೆ ಮಾತ್ರ. ಅವನ ತಂದೆ ತೀರಿಹೋದಾಗಲೂ, ಅವನಿಗೆ ಅತಿಥಿಗಳ ಗೌರವಕ್ಕೆ ಕುಂದು ತರದಂತೆ ಪರಿಚಾರಿಕೆ ಮಾಡುವುದು ಮುಖ್ಯವಾಗುತ್ತದೆಯೇ ವಿನಾ ತಂದೆಯ ಸಾವಲ್ಲ.

ಅವನ ಕಥನಪ್ರಪಂಚದಲ್ಲಿ ಗುಂತರ್ ಗ್ರಾಸ್, ವಿ.ಎಸ್.ನೈಪಾಲ್, ಸಲ್ಮಾನ್ ರಶ್ದಿ ಮೊದಲಾದ ಲೇಖಕರಲ್ಲಿ ಇರುವಂತೆ ಅನೇಕ ಕಾಲದೇಶಗಳಲ್ಲಿ ಹರಡಿಕೊಂಡ ಸಂಕೀರ್ಣ ಕಥನತಂತ್ರಗಳ ಭರಾಟೆಯಿಲ್ಲ. ಓದುಗರು ತಮ್ಮ ಅಂತರಂಗವನ್ನು ಬಿಡಿಸಿಕೊಂಡು ತಮಗೆ ತಾವೇ ಹೇಳಿಕೊಂಡ ಶೈಲಿಯಲ್ಲಿ ಬರೆಯಬೇಕೆಂಬುದೊಂದೇ ಅವನ ಮುಖ್ಯ ಉದ್ದೇಶವಾಗಿತ್ತು.

ಕಾದಂಬರಿ ಆರಂಭವಾದಾಗ ಇಂಥ ಸ್ಟೀವನ್ಸ್ ತನ್ನ ಹೊಸ ಮಾಲೀಕ ನೀಡಿದ ವಾರದ ರಜೆ, ಅವನು ನೀಡಿದ ಹಳೆಯ ಫೋರ್ಡ್‍ ಕಾರು, ಅವನು ನೀಡಿದ ಸೂಟುಬೂಟುಗಳನ್ನು ಧರಿಸಿ ಇಂಗ್ಲೆಂಡಿನ ಹಳ್ಳಿಗಾಡನ್ನು ಸುತ್ತಿ ಬರಲು ಹೊರಟಿದ್ದಾನೆ. ಯಾವತ್ತಿಗೂ ಸ್ವತಂತ್ರವಾಗಿ ಇರುವುದನ್ನೇ ಅನುಭವಿಸದ ಸ್ಟೀವನ್ಸ್ ಮೊದಲ ಬಾರಿಗೆ ಜೀವನದಲ್ಲಿ ರಜೆ ಪಡೆದು ಪ್ರಯಾಣ ಮಾಡುವಾಗ ಅವನ ಜೀವನದ ಹಳೆಯ ನೆನಪುಗಳು ಮರುಕಳಿಸಲಾರಂಭಿಸುತ್ತವೆ. ಸುಮಾರು ಮೂರು ದಶಕಗಳ ಹಿಂದೆ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಮಿಸ್ ಕೆಂಟನ್‍ ಳ ಚಿಕ್ಕಮ್ಮ ಸತ್ತಾಗ ಅವಳಿಗೆ ಸಾಂತ್ವನದ ಮಾತನ್ನೂ ಸಹ ಹೇಳದೇ ಹೋದದ್ದು, ಅವಳನ್ನು ಮದುವೆಯಾಗಲು ಬಯಸುತ್ತಿದ್ದ ಹುಡುಗನ ಕೋರಿಕೆಯನ್ನು ಒಪ್ಪುವ ಮುಂಚೆ ಕೊನೆಯಬಾರಿಗೆ ಎಂಬಂತೆ ತನ್ನ ಬಳಿ ಬಂದು ಸಿಟ್ಟಿನಿಂದ ಹೇಳಿದ್ದು ಎಲ್ಲವೂ ನೆನಪಾಗುತ್ತದೆ.

ಪ್ರಯಾಣ ಹೊರಟಿರುವ ಸ್ಟೀವನ್ಸ್ ಈಗ ಮಿಸೆಸ್. ಬೆನ್ ಆಗಿರುವ ಕೆಂಟನ್‍ ಳನ್ನು ಭೇಟಿ ಮಾಡುವ ಉದ್ದೇಶವೂ ಇದೆ. ಸಾಧ್ಯವಾದರೆ ಗಂಡನಿಂದ ನೊಂದು ಒಂಟಿತನದಲ್ಲಿ ಬೇಯುತ್ತಿರುವ ಅವಳನ್ನು ಮತ್ತೆ ಡಾರ್ಲಿಂಗ್ಟನ್ ಹಾಲ್‍ ಗೆ ತರುವ ಯೋಚನೆಯೂ ಇದೆ. ಭಾವನೆಗಳೆಲ್ಲವನ್ನು ಇಂಗಿಸಿಕೊಂಡು, ಜೀವನ ಪೂರ್ತಿ ಶಿಷ್ಟಾಚಾರ, ಗಾಂಭೀರ್ಯಗಳ ಚಿಪ್ಪಿನಲ್ಲಿ ಬದುಕಿದ್ದ ಸ್ಟೀವನ್ಸ್ ಮಿಸೆಸ್ ಬೆನ್ ಆಗಿರುವ ಆಕೆಯನ್ನು ಮಿಸ್ ಕೆಂಟನ್ ಎಂದೇ ಉದ್ದಕ್ಕೂ ನೆನಪಿಸಿಕೊಳ್ಳುವುದು ಕಾದಂಬರಿಯ ಸ್ವಾರಸ್ಯಕರ ವ್ಯಂಗ್ಯಗಳಲ್ಲಿ ಒಂದು.

ಬಹಳ ಸರಳವಾಗಿ ಓದಿಸಿಕೊಳ್ಳುತ್ತ ಹೋಗುವ ಕಾದಂಬರಿಯ ಒಳಹೆಣಿಗೆಗಳಲ್ಲಿ ಅಡಗಿರುವ ಸೂಕ್ಷ್ಮವಾದ ವ್ಯಂಗ್ಯ ಸ್ಟೀವನ್ಸ್ ನ ಪಾತ್ರದ ಮೂಲಕ ಇಡೀ ಬ್ರಿಟಿಶ್ ಸಮಾಜ, ರಾಜಕೀಯ ಸಂಸ್ಕೃತಿಗಳನ್ನು ಆತ್ಮವಿಮರ್ಶೆಗೆ ಗುರಿಪಡಿಸಲು ನೋಡುವಂತಿದೆ. ಒಂದು ಬಗೆಯಲ್ಲಿ ಬ್ರಿಟಿಶ್ ಸಂಸ್ಕೃತಿಯ ಅಪರಾವತಾರವಾಗಿರುವ ಅಡಿಗೆಯವ(ಬಟ್ಲರ್)ನ ಮೂಲಕ ಅಲ್ಲಿರುವ ಅಧಿಕಾರ ಸಂಬಂಧಗಳು ಕೆಳಹಂತದಲ್ಲಿರುವವರ ವ್ಯಕ್ತಿತ್ವವನ್ನೇ ಟೊಳ್ಳಾಗಿಸಿ ಅವರ ಸ್ವಂತಿಕೆಯನ್ನೇ ನಾಶಗೊಳಿಸಿಬಿಡುತ್ತವೆ ಎಂಬುದನ್ನು ಕಾದಂಬರಿ ಸೂಚಿಸುತ್ತದೆ. ಇದನ್ನೇ ಹಿಗ್ಗಿಸಿ ನೋಡಿದರೆ, ಬ್ರಿಟಿಶ್‍ ವಸಾಹತುಶಾಹಿ ತನ್ನ ಅಧಿಕಾರದ ಬೆಂಬಲದಿಂದ ಅಧೀನದಲ್ಲಿರುವ ಸಂಸ್ಕೃತಿಗಳ ಚೈತನ್ಯ, ಕ್ರಿಯಾಶೀಲತೆಗಳನ್ನು ಹೇಗೆ ಸದ್ದಿಲ್ಲದೆ ನಾಶಮಾಡಿತು ಎಂಬುದರ ಒಳನೋಟವೂ ದೊರಕುತ್ತದೆ. ವಿಪರ್ಯಾಸವೆಂದರೆ ತನ್ನ ದಣಿಗಾಗಿ ಜೀವವನ್ನೇ ತೇಯುತ್ತಿರುವ ಸ್ಟೀವನ್ಸ್‌ ಗೆ, ಅವನು ಯಹೂದಿಗಳನ್ನು ಕಾರಣವಿಲ್ಲದೆ ವಿರೋಧಿಸುವುದು, ಬ್ರಿಟಿಶ್ ಸಮಾಜದ ಹೆಮ್ಮೆಯ ಗುರುತಾದ ಪಾರ್ಲಿಮೆಂಟರಿ ವ್ಯವಸ್ಥೆಯನ್ನು ಗೇಲಿ ಮಾಡುತ್ತ ಫ್ಯಾಸಿಸ್ಟರ ಗುಂಪುಗಳಿಗೆ ಬೆಂಬಲ ನೀಡುವ ಸಲುವಾಗಿ ಅವನ ಮನೆಯಲ್ಲಿ ಕೂಟಗಳನ್ನು ಏರ್ಪಡಿಸುವುದು ಅರಿವಿಗೇ ಬರುವುದಿಲ್ಲ.

ದಣಿಯ ಗೌರವ ಘನತೆಯನ್ನು ಹಗಲಿರುಳೂ ಧ್ಯಾನಿಸುವ ಸ್ಟೀವನ್ಸ್ ನನ್ನು ಒಮ್ಮೆ ತಡರಾತ್ರಿಯ ಕೂಟಕ್ಕೆ ಬಂದ ಗಣ್ಯರಲ್ಲೊಬ್ಬ ಬ್ರಿಟಿಶ್ ಸಮಾಜದ ಪ್ರಚಲಿತ ಸಮಸ್ಯೆಗಳ ಬಗ್ಗೆ ಅಭಿಪ್ರಾಯ ನೀಡುವಂತೆ ಕೇಳುತ್ತಾನೆ. ಅವನು ಕೇಳುವ ಯಾವ ಪ್ರಶ್ನೆಗೂ ಉತ್ತರ ನೀಡದಿದ್ದಾಗ ಇಂಥ ಶತಮೂರ್ಖರಿಂದಾಗಿ ಇಡೀ ಪಾರ್ಲಿಮೆಂಟರಿ ವ್ಯವಸ್ಥೆ ಹಳ್ಳಹಿಡಿದಿದೆಯೆಂದು ಅಪಹಾಸ್ಯ ಮಾಡುವುದು, ಬ್ರಿಟಿಶ್ ವ್ಯವಸ್ಥೆ ಸ್ಟೀವನ್ಸ್ ನಂತಹ ಸರಳ-ಸಾಮಾನ್ಯರ ನಿಷ್ಠೆಯನ್ನೇ ಹೇಗೆ ಅಪಹಾಸ್ಯಕ್ಕೆ ಈಡುಮಾಡುತ್ತದೆ ಎಂಬುದಕ್ಕೆ ಉದಾಹರಣೆಯಂತಿದೆ.

ವಾಸ್ತವವಾಗಿ ಅವನ ದಣಿ ಹಾಗೂ ಅಲ್ಲಿ ನೆರೆದಿರುವ ಗಣ್ಯರ ಪ್ರಕಾರ ತಾಯಂದಿರ ಸಂಘವನ್ನು ಬೆನ್ನಿಗಿಟ್ಟುಕೊಂಡು ಯುದ್ಧವಿರೋಧಿ ಚಳವಳಿಯನ್ನು ಕಟ್ಟುವುದು ಹೇಗೆ ಅನರ್ಥಕಾರಿಯೋ ಪಾರ್ಲಿಮೆಂಟರಿ ವ್ಯವಸ್ಥೆಯೂ ಸಹ ಅಷ್ಟೇ ಅಸಂಬಂದ್ಧವಾಗಿದೆ. ಅದಕ್ಕಾಗಿ ಅವರೆಲ್ಲ ಬ್ರಿಟಿಶ್ ಯೂನಿಯನ್ ಫ್ಯಾಸಿಸ್ಟರ ಬೆಂಬಲದಿಂದ ಬಲಿಷ್ಠ ರಾಷ್ಟ್ರವೊಂದನ್ನು ಕಟ್ಟುವ ಸಮಾಲೋಚನೆಯಲ್ಲಿ ತೊಡಗಿರುವಾಗ ಇದನ್ನರಿಯದ ಸ್ಟೀವನ್ಸ್ ಎಂದಿನಂತೆ ತನ್ನ ಸ್ವಾಮಿನಿಷ್ಠೆಗಾಗಿ ಬದುಕುವುದು ಅವನ ದುರಂತವನ್ನು ಗಾಢಗೊಳಿಸುತ್ತದೆ.

ಕಾದಂಬರಿಯ ಕೊನೆಗೆ ಮಿಸೆಸ್ ಬೆನ್‍ ಳಾಗಿರುವ ಕೆಂಟನ್‍ ಳನ್ನು ಮರಳಿ ತರುವ ಸ್ಟೀವನ್ಸ್ ನ ಯೋಚನೆ ವಿಫಲವಾಗುತ್ತದೆ. ತನ್ನ ಒಣ ಗಾಂಭೀರ್ಯ, ವೃತ್ತಿಪರತೆಯ ಹುಸಿ ಆವರಣದಲ್ಲಿ ಅಡಗಿರುವ ಅವನಿಗೆ ತನ್ನ ಪೊಳ್ಳುತನ ಅರಿವಿಗೆ ಬಂದು ದಾರಿಹೋಕನೊಬ್ಬನ ಜೊತೆ ಕೂತು ತನ್ನ ನಿರಾಶೆ, ಮೂರ್ಖತನಗಳೆಲ್ಲವನ್ನು ವಿವರಿಸಿ, ಪರಿತಪಿಸಿ ಅಳುತ್ತ ಸಹಜ ಮನುಷ್ಯನಾಗುವ ದಿಕ್ಕಿಗೆ ಹೊರಳುತ್ತಾನೆ. ಅವನನ್ನು ಸಂತೈಸುವ ದಾರಿಹೋಕ ಕಳೆದ ಬದುಕಿನ ಬಗ್ಗೆ ಹಳಹಳಿಸುವ ಬದಲು ಅದನ್ನೆಲ್ಲ ಮರೆತು ಬದುಕಿನ ಉಳಿದ ದಿನಗಳನ್ನು ಸಂತೋಷದಿಂದ ಕಳೆಯುವುದೊಂದೇ ಇನ್ನು ನಾವು ಕಲಿಯಬಹುದಾದ ಪಾಠ ಎಂಬ ಆಶಾವಾದದೊಂದಿಗೆ ಕಾದಂಬರಿ ಮುಗಿಯುತ್ತದೆ.

ಸರಳವಾದ ಕಥಾನಕ, ಅಬ್ಬರವಿಲ್ಲದ ಶೈಲಿ ಮತ್ತು ಸಹಜ ನಿರೂಪಣೆಗಳಿಂದ ಗಮನಸೆಳೆಯುವ ಇಷಿಗುರೊ, ಜೇನ್ ಆಸ್ಟಿನ್‍ ರಂಥವರು ಇಂಗ್ಲೀಷ್ ಕಾದಂಬರಿ ಪ್ರಪಂಚದಲ್ಲಿ ನಡೆದ ದಾರಿಯಲ್ಲಿ ಮುನ್ನಡೆದಿದ್ದಾನೆ. ಅವನ ಇತರ ಸಮಕಾಲೀನರು ವಸಾಹತುಶಾಹಿ ನಂತರದ, ಮಹಾಯುದ್ಧಗಳ ಆನಂತರದ ಬ್ರಿಟಿಶ್ ಸಮಾಜದ ಬಗ್ಗೆ ಕೇಳುವ ಪ್ರಶ್ನೆಗಳನ್ನು ರಾಜಕೀಯ, ಇತಿಹಾಸ, ಸಂಸ್ಕೃತಿಗಳ ಬಗೆಗಿನ ವಿಸ್ತಾರವಾದ ಚಿಂತನೆಗಳ ಚೌಕಟ್ಟುಗಳ ಮೂಲಕ ಕೇಳಿದರೆ, ಇಷಿಗುರೊ ಒಂದಿಬ್ಬರು ಸಾಮಾನ್ಯ ವ್ಯಕ್ತಿಗಳ ತಲ್ಲಣಗಳ ಕಥೆಯ ಮೂಲಕ ಅಷ್ಟೇ ಆಳವಾದ ಪ್ರಶ್ನೆಗಳನ್ನು ಕೇಳುವುದು ಆತನ ವಿಶಿಷ್ಟ ಕಥನಶೀಲತೆಗೆ ಸಾಕ್ಷಿಯಾಗಿದೆ.