ಆಧುನಿಕತೆಯು ನಮ್ಮ ಮನಸ್ಸಿಗೆ ಇತ್ತ ಸ್ವಾತಂತ್ರ್ಯವನ್ನು ಮೊಟ್ಟಮೊದಲ ಬಾರಿಗೆ ಕನ್ನಡ ಗದ್ಯ ಸಾಹಿತ್ಯದಲ್ಲಿ ಸ್ಪಷ್ಟವಾಗಿ ಗ್ರಹಿಸಿದವರು ದೇಸಾಯರು. ಅವರ ಪಾತ್ರಗಳು ಈ ಸ್ವಾತಂತ್ರ್ಯವನ್ನು ನಿಭಾಯಿಸಲಾಗದ ತಮ್ಮ ವೈಫಲ್ಯದಿಂದ ಕಂಗೆಡುವಂಥವರು. ಸಂಪೂರ್ಣ ಸ್ವಾತಂತ್ರ್ಯವನ್ನು ಭರಿಸುವುದು ಎಷ್ಟು ಕ್ಲಿಷ್ಟಕರವಾದದ್ದು ಮತ್ತು ಈ ಹಾದಿ ಹೆಜ್ಜೆಹೆಜ್ಜೆಗೂ ಎಂಥ ವೈಫಲ್ಯಗಳಿಂದ ಕೂಡಿದ್ದು ಎಂಬುದು ಅವರ ಕಥೆಗಳ ಅಂತರಂಗವನ್ನು ಪ್ರವೇಶಿಸಿದಾಗಲೇ ಗೊತ್ತಾಗುವ ಸಂಗತಿ. ಭೂತಕಾಲದ ಭಾರದಿಂದ ನರಳುವ ನಾಯಕರು ಹೇರಳವಾಗಿರುವ ನವ್ಯಸಾಹಿತ್ಯದಲ್ಲಿ ಅಂಥ ಹಂಗಿಲ್ಲದೇ ವರ್ತಮಾನದಲ್ಲಿಯೇ ಬದುಕುವ ದೇಸಾಯರ ಕಥಾಪಾತ್ರಗಳು ತಕ್ಷಣ ಹತ್ತಿರವಾಗುತ್ತಾರೆ.
ಕುವೆಂಪು ವಿಶ್ವವಿದ್ಯಾಲಯ ಪ್ರಕಟಿಸಿರುವ “ಶಾಂತಿನಾಥ ದೇಸಾಯಿ ಸಾಹಿತ್ಯ-ವ್ಯಕ್ತಿತ್ವ” ಕೃತಿಯಲ್ಲಿನ ಕಥೆಗಾರ ವಿವೇಕ ಶಾನಭಾಗ ಬರೆದ ಲೇಖನ ನಿಮ್ಮ ಓದಿಗೆ

ಶಾಂತಿನಾಥ ದೇಸಾಯಿಯವರ ಕಥಾಸಾಹಿತ್ಯ

ಸ್ವಾತಂತ್ರ್ಯಾನಂತರದ ಭಾರತದಲ್ಲಿ ಆಧುನಿಕತೆಯ ಪ್ರಭಾವದಿಂದ ಮುನ್ನೆಲೆಗೆ ಬಂದ ಮುಖ್ಯವಾದ ಪ್ರಶ್ನೆಯು ವ್ಯಕ್ತಿ ಮತ್ತು ಸಮಾಜದ ಸಂಬಂಧದ ಕುರಿತಾದದ್ದು. ಅದರಲ್ಲೂ ಕುಟುಂಬ ಮತ್ತು ಸಮಾಜದ ರೀತಿನೀತಿಗಳಿಗೆ ದೈನಿಕ ಜೀವನದಲ್ಲಿ ಮೊದಲ ಪ್ರಾಶಸ್ತ್ಯವಿದ್ದ ಆ ಕಾಲಘಟ್ಟದಲ್ಲಿ ವ್ಯಕ್ತಿ-ಸಮಾಜದ ಸಂಬಂಧದ ಶಿಥಿಲತೆಯ ಕುರಿತಾದ ಚರ್ಚೆಗಳು ಸಾಹಿತ್ಯವೂ ಸೇರಿದಂತೆ ಸಮಾಜದ ಎಲ್ಲ ರಂಗಗಳಲ್ಲಿ ಹೆಚ್ಚುಹೆಚ್ಚು ಮುಖ್ಯವಾಗತೊಡಗಿದ್ದವು. ಕನ್ನಡ ಸಾಹಿತ್ಯದಲ್ಲಿ ವ್ಯಕ್ತಿಯ ‘ಸ್ವಾತಂತ್ರ್ಯ’ದ ಕಲ್ಪನೆಯನ್ನು ಶಾಂತಿನಾಥ ದೇಸಾಯಿಯವರಷ್ಟು ಆಳವಾಗಿ ಅನ್ವೇಷಿಸಿ, ಚಿಂತಿಸಿದ ಲೇಖಕ ಇನ್ನೊಬ್ಬರಿಲ್ಲ. ಪ್ರಸ್ತುತ ಲೇಖನವನ್ನು ಅವರ ಕತೆಗಳಿಗೆ ಮಾತ್ರ ಸೀಮಿತಗೊಳಿಸಿಕೊಂಡಿದ್ದರೂ ಈ ಕಾಳಜಿಯನ್ನು ಅವರ ಕಾದಂಬರಿಗಳಲ್ಲಿಯೂ ಕಾಣಬಹುದು.

ಯಂತ್ರಕ್ರಾಂತಿಯ ಹಿನ್ನೆಲೆಯಲ್ಲಿ ಯುರೋಪಿನಲ್ಲಿ ಆಧುನಿಕತೆಯು ಸಾಹಿತ್ಯದಲ್ಲಿ ವ್ಯಕ್ತವಾದ ರೀತಿಗೂ ಭಾರತೀಯ ಸಾಹಿತ್ಯದಲ್ಲಿ ವ್ಯಕ್ತವಾದ ರೀತಿಗೂ ಬಹಳ ವ್ಯತ್ಯಾಸಗಳಿವೆ. ಇಪ್ಪತ್ತನೆಯ ಶತಮಾನದ ಆರಂಭದ ದಶಕಗಳಲ್ಲಿಯೇ ಕನ್ನಡ ಸಾಹಿತ್ಯದಲ್ಲಿ ಆಧುನಿಕತೆಯ ಕುರಿತು ಚಿಂತನೆ ಆರಂಭವಾಗಿದ್ದರೂ ಅದೊಂದು ಮುಖ್ಯ ಕಾಳಜಿಯಾಗಿ ಆಕಾರ ಪಡೆದು, ಪ್ರಜ್ಞಾಪೂರ್ವಕ ಸ್ಪಂದನ ಆರಂಭವಾಗಿದ್ದು ಶತಮಾನದ ನಡುಭಾಗದಲ್ಲಿ ಎನ್ನಬಹುದು. ಕನ್ನಡದ ಕಥಾನಾಯಕ ನಾಯಕಿಯರು ಮಹಾನಗರಪ್ರವೇಶ ಮಾಡಿದಾಗಲೇ ಹೊಸ ಬಗೆಯ ಸಂವೇದನೆಗಳು, ಮೌಲ್ಯಗಳು ಸಾಹಿತ್ಯದಲ್ಲಿ ಪ್ರವೇಶಪಡೆಯಲಾರಂಭಿಸಿದವು. ಇತ್ತೀಚಿನವರೆಗೂ ಕನ್ನಡ ಸಾಹಿತ್ಯದ ಮಟ್ಟಿಗೆ ಮಹಾನಗರವೆಂದರೆ ಮುಂಬಯಿಯೇ ಆಗಿತ್ತು. ಜನಸಂಖ್ಯೆಯನ್ನು ಹೊರತುಪಡಿಸಿದರೆ ಬೆಂಗಳೂರು ಇಂದಿಗೂ ಮಹಾನಗರದ ಕಳೆಯನ್ನು ಪಡೆದಿಲ್ಲ. ಆಧುನಿಕತೆಯ ವೇಗೋತ್ತೇಜಕಗಳಾದ ಶಹರಗಳು ಒದಗಿಸುವ ಅನಾಮಿಕತೆಯು ಭೂತದ ಭಾರಗಳಿಂದ ಬಿಡುಗಡೆ ಪಡೆಯುವ ಅವಕಾಶಗಳನ್ನು ಒದಗಿಸುತ್ತದೆ. ಮನುಷ್ಯನ ಬಿಡುಗಡೆ ಮತ್ತು ಸ್ವಾತಂತ್ರ್ಯದ ಬಗ್ಗೆ ಯೋಚಿಸುತ್ತಿದ್ದ ದೇಸಾಯರು ತಮ್ಮ ಮೊದಲ ಸಂಕಲನದಲ್ಲೇ ಮುಂಬೈಯನ್ನು ಹಿನ್ನೆಲೆಯನ್ನಾಗಿ ಕೆಲವು ಕತೆಗಳಲ್ಲಿ ಬಳಸಿಕೊಂಡಿದ್ದರ ಔಚಿತ್ಯವಿಲ್ಲಿ ಹೊಳೆಯುತ್ತದೆ.

ಅಂಕೋಲಾದ ದಿನಕರ ದೇಸಾಯಿಯವರ ಜನಸೇವಕ ಟ್ರಸ್ಟ್‌ನಿಂದ ೧೯೫೮ ರಲ್ಲಿ ಪ್ರಕಟವಾದ ತಮ್ಮ ಮೊಟ್ಟಮೊದಲ ಕಥಾಸಂಕಲನದ ಮುನ್ನುಡಿಯಲ್ಲಿ ಶಾಂತಿನಾಥರು ಆಧುನಿಕತೆಯ ಕುರಿತು ಹೀಗೆ ಹೇಳಿದ್ದಾರೆ:

‘ಆಧುನಿಕತೆಯ ಮೂಲ ಜೀವನದೃಷ್ಟಿಯಲ್ಲಿದೆ. ಲೇಖಕನ ದೃಷ್ಟಿಕೋನದಲ್ಲಿ ಆಧುನಿಕತೆ ಇರದ ಹೊರತು, ವಸ್ತು ಶೈಲಿಗಳಲ್ಲಿ ನಾವೀನ್ಯತೆ ಮೂಡುವುದು ಶಕ್ಯವಿಲ್ಲ. ದೃಷ್ಟಿಕೋನದಲ್ಲಿ ಆಧುನಿಕತೆಯೆಂದರೇನು? ೧. ಮನಸ್ಸೇ ಜೀವನಾನುಭವದ ಮುಖ್ಯ ಕೇಂದ್ರವು. ಮಾನಸಿಕ ಘಟನೆಗಳೂ ಘಟನೆಗಳೇ, ಬಾಹ್ಯ ಕೃತಿಗಳಿಗಿಂತ ಅಂತರ್ಮನಸ್ಸಿನ ಪ್ರವರ್ತಕ ಶಕ್ತಿಗಳೇ ಹೆಚ್ಚು ಮೌಲಿಕವಾದವುಗಳು ಎಂಬ ದೃಢವಿಶ್ವಾಸ. ೨. ಸತ್ಯದ ವೈಯಕ್ತಿಕ ಅನ್ವೇಷಣೆ ಮತ್ತು ದರ್ಶನ.’

ದೇಸಾಯರ ಅಂದಿನ ಮಾತುಗಳು ಮುಂದಿನ ದಶಕಗಳಲ್ಲಿ ಬೆಳೆದು ಹರಡಿದ ಅವರ ಸೃಜನಶೀಲ ಸಾಹಿತ್ಯದುದ್ದಕ್ಕೂ ನಾನಾ ವಿಧದಲ್ಲಿ ಪ್ರತಿಫಲಿಸಿವೆ. ಅಂತರ್ಮನಸ್ಸಿನ ಪ್ರವರ್ತಕ ಶಕ್ತಿಗಳನ್ನು ಗ್ರಾಹ್ಯವಾಗಿಸಲು ಅವರೆಷ್ಟು ಬಗೆಯ ಕಥನಕ್ರಮಗಳನ್ನು ಅನ್ವೇಷಿಸಿದ್ದಾರೆಂಬುದು ಅವರ ಕಥೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅರಿವಾಗುತ್ತದೆ.

ಆಧುನಿಕ ಮನುಷ್ಯನ ಸ್ವಾತಂತ್ರ್ಯದ ಕಲ್ಪನೆಯನ್ನು ನಿಕಷಕ್ಕೊಡ್ಡಲು ದೇಸಾಯಿಯವರು ತಮ್ಮ ಕತೆಗಳಲ್ಲಿ ಗಂಡು ಹೆಣ್ಣಿನ ಸಂಬಂಧವನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡಿದ್ದಾರೆ. ಇದರಿಂದಾಗಿ, ಪರಂಪರೆ ಮತ್ತು ಆಧುನಿಕತೆಯ ಮುಖಾಮುಖಿಯನ್ನು ವ್ಯಕ್ತಿ-ಕುಟುಂಬ-ಸಮಾಜದ ಭಾವತೀವ್ರ ಗಳಿಗೆಗಳಲ್ಲಿಟ್ಟು ಪರೀಕ್ಷಿಸುವುದು ಅವರಿಗೆ ಸಾಧ್ಯವಾಗಿದೆ. ಅವರ ಪ್ರಖ್ಯಾತ, ಬಹುಚರ್ಚಿತ ಕತೆಯಾದ ‘ಕ್ಷಿತಿಜ’ದ ನಾಯಕಿ ಹಡಗಿನಲ್ಲಿ ಲಂಡನ್ನಿಗೆ ಒಂಟಿ ಪ್ರಯಾಣ ಮಾಡುತ್ತಿರುವ ಮಿಸ್ ಭಾಟೆ ಅಥವಾ ಮಂದಾಕಿನಿ ಒಂದೆಡೆ ಹೇಳುತ್ತಾಳೆ: ‘ನೋಡಿ, ನಾನು ಇಂಡಿಯನ್ ಹೆಣ್ಣು. ಹಿಂದೂ ಹೆಂಗಸು. ನಾವು ಈಗ ತಾನೇ ಅಡಿಗೆ ಮನೆಯಿಂದ ಸ್ವಲ್ಪ ಹೊರಗೆ ಬಂದಿದ್ದೇವೆ. ಇದೆಲ್ಲ ನಮಗೆ ಒಂದು ಹೊಸ ವಿಶ್ವ. ಬರಿ ಪುಸ್ತಕ ಪಿಕ್ಚರ್ಸ್‌ಗಳಲ್ಲಿಯ ಕಲ್ಪನೆಯ ಲೋಕ.’ ಈ ಶಿಕ್ಷಿತ ನಾಯಕಿಯ ಮನೋರಂಗವನ್ನು ದೇಸಾಯರು ಪರಿಚಯಿಸುವುದು ಹೀಗೆ: ‘ವಯಸ್ಸು ೨೮-೨೯ ಆಗಿದ್ದರೂ ೨೫ ಎಂದು ಹೇಳುವ ಅಭ್ಯಾಸವಾಗಿಬಿಟ್ಟಿದೆ ಮಂದಾಕಿನಿಗೆ. ತಾನು ನಿಜಕ್ಕೂ ಮುದುಕಿಯಾಗಿಬಿಟ್ಟಿದ್ದಾಳೆಂದೇ ಅವಳ ಭಾವನೆ. ಇಡಿಯ ಜೀವನ ಕಲಿಯುವುದರಲ್ಲಿ, ನಂತರ ನೌಕರಿಯಲ್ಲಿ, ತಾಯಿಯನ್ನೂ ತಮ್ಮಂದಿರನ್ನೂ ನೋಡಿಕೊಳ್ಳುವುದರಲ್ಲಿ, ಎಲ್ಲ ವೆಚ್ಚವಾಗಿ ಹೋಯಿತಷ್ಟೇ! ಬಿ.ಎ. ಆದ ಕೂಡಲೇ ಪ್ರಾ. ಕರಂದಿಕರರ ‘ಮಾಗಣಿ’ ಬಂದಿತ್ತು. ಅನಂತರ ಅವಳ ಸಹೋದ್ಯೋಗಿ ದೇಶಪಾಂಡೆ ಮೇಲಿಂದ ಮೇಲೆ ಮನೆಗೆ ಬಂದು ನಂತರ ಪ್ರೀತಿ ವ್ಯಕ್ತಮಾಡಿ ಅವಳಿಂದ ಇಲ್ಲವೆನಿಸಿಕೊಂಡಿದ್ದ.’ ಮಂದಾಕಿನಿಯ ಹಡಗಿನ ಪ್ರಯಾಣದ ಕತೆಯು ಎರಡು ಬಗೆಯ ಜೀವನಕ್ರಮಗಳ ಸೆಳೆತದಲ್ಲಿ ಸಿಲುಕಿ, ವಿವಿಧ ಕಟ್ಟಳೆಗಳನ್ನು ಮೀರಲು ಅವಳು ನಡೆಸುವ ಪ್ರಯತ್ನಗಳನ್ನು ವಿಚಿತ್ರ ವಿಹ್ವಲತೆಯಲ್ಲಿ ಹಿಡಿದಿಡುತ್ತದೆ.

ಮೇಲ್ನೋಟಕ್ಕೆ ಗಂಡು-ಹೆಣ್ಣಿನ ನಡುವಿನ ಆಕರ್ಷಣೆಯ ಸರಳ ನಿರೂಪಣೆಯಂತೆ ಕಾಣುವ ಕಥೆಗಳ ಪದರಗಳು ಒಂದೊಂದಾಗಿ ತೆರೆದುಕೊಳ್ಳುತ್ತ ಹೋದಂತೆ ದೇಸಾಯಿಯವರ ಕಥಾಸಾಹಿತ್ಯದ ನಾಯಕನಾಯಕಿಯರಿಗೆ ಇರುವ ಸ್ವಾತಂತ್ರ್ಯವನ್ನು ಕಂಡು ಓದುಗರಿಗೆ ಅಸೂಯೆಯಾಗದೇ ಇರದು. ಅವರೆಲ್ಲ ಬದುಕು ಒಯ್ದತ್ತ ಹೋಗುವವರು; ಆದರೆ ಮೊದಲ ಹೆಜ್ಜೆಯನ್ನು ತಾವೇ ಇಡುವವರು. ಅತಿಗೆ ಒಯ್ಯುವುದರಿಂದಲೇ ಇಲ್ಲಿ ನಿಜವಾದ ಮೌಲ್ಯಪರೀಕ್ಷೆಯಾಗುತ್ತದೆ ಮತ್ತು ಹಲವು ಕಠಿಣ ಪ್ರಶ್ನೆಗಳು ಎದುರಾಗುತ್ತವೆ: ಸ್ವಾತಂತ್ರ್ಯ ಅಂದರೆ ಏನು? ಸ್ವಾತಂತ್ರ್ಯವನ್ನು ಪಡೆದ ಮಾತ್ರಕ್ಕೆ ಮನುಷ್ಯ ಏಕಾಂಗಿಯಾಗಿ ಅದನ್ನು ಅನುಭವಿಸಲು, ಯಾರನ್ನೂ ಅವಲಂಬಿಸದೇ ಏಕಾಂಗಿಯಾಗಿ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವೇ? ಅವರ ಸೃಜನಶೀಲ ಕೃತಿಗಳಲ್ಲಿ ಅಸ್ತಿತ್ವವಾದಿ ಚಿಂತನೆಯಿಂದ ಪ್ರಭಾವಿತವಾದ ಅವರ ಜೀವನದೃಷ್ಟಿಯು ಭಾರತೀಯ ಸಮಾಜ ಮತ್ತು ಕುಟುಂಬ ವ್ಯವಸ್ಥೆಯ ಚೌಕಟ್ಟಿನಲ್ಲಿ ವಿಮರ್ಶೆಗೆ ಒಳಗಾಗಿದೆ. ಸ್ವಾತಂತ್ರ್ಯವನ್ನು ನಿಭಾಯಿಸುವ ಸವಾಲುಗಳು, ಅದರಿಂದ ಹುಟ್ಟುವ ತಲ್ಲಣಗಳು, ಅದರ ಪರಿಣಾಮವಾಗಿ ಉಂಟಾಗುವ ಅಪಾರವಾದ ನೋವುಗಳು ಅವರ ಕತೆಗಳಲ್ಲಿ ಬಹುಕೋನಗಳಿಂದ ವಿಶ್ಲೇಷಣೆಗೆ ಒಳಪಟ್ಟಿವೆ. ವಿವಾಹ ಬಂಧನದ ಸರಪಳಿಯ ಕೊಂಡಿಗಳ ನಡುವೆ, ಸುಲಭವಾಗಿ ಕಣ್ಣಿಗೆ ಬೀಳದ ಜಾಗದಲ್ಲಿ ಹಿಡಿಯುವ ತುಕ್ಕು ಅವರ ಕತೆಗಳಲ್ಲಿ ಅನುಭವಕ್ಕೆ ಬರುವ ವಸ್ತುಗಳಲ್ಲೊಂದು. ಅವರ ಕಥನ ಕೌಶಲ್ಯ ಎಷ್ಟು ಪರಿಣತವಾದದ್ದೆಂದರೆ ಸಂಸಾರದಲ್ಲಿ ಹೇಗೆ ಈ ತುಕ್ಕು ಗುಪ್ತಗಾಮಿನಿಯಾಗಿದೆಯೋ ಅದೇ ಬಗೆಯಲ್ಲಿ ಕತೆಗಳೊಳಗೂ ಬರಿಗಣ್ಣಿಗೆ ಬೀಳದ ಹಾಗೆ ಆದರೆ ತೀವ್ರವಾಗಿ ಅನುಭವಕ್ಕೆ ಬರುತ್ತದೆ.

ಆಧುನಿಕತೆಯು ನಮ್ಮ ಮನಸ್ಸಿಗೆ ಇತ್ತ ಸ್ವಾತಂತ್ರ್ಯವನ್ನು ಮೊಟ್ಟಮೊದಲ ಬಾರಿಗೆ ಕನ್ನಡ ಗದ್ಯ ಸಾಹಿತ್ಯದಲ್ಲಿ ಸ್ಪಷ್ಟವಾಗಿ ಗ್ರಹಿಸಿದವರು ದೇಸಾಯರು. ಅವರ ಪಾತ್ರಗಳು ಈ ಸ್ವಾತಂತ್ರ್ಯವನ್ನು ನಿಭಾಯಿಸಲಾಗದ ತಮ್ಮ ವೈಫಲ್ಯದಿಂದ ಕಂಗೆಡುವಂಥವರು. ಸಂಪೂರ್ಣ ಸ್ವಾತಂತ್ರ್ಯವನ್ನು ಭರಿಸುವುದು ಎಷ್ಟು ಕ್ಲಿಷ್ಟಕರವಾದದ್ದು ಮತ್ತು ಈ ಹಾದಿ ಹೆಜ್ಜೆಹೆಜ್ಜೆಗೂ ಎಂಥ ವೈಫಲ್ಯಗಳಿಂದ ಕೂಡಿದ್ದು ಎಂಬುದು ಅವರ ಕಥೆಗಳ ಅಂತರಂಗವನ್ನು ಪ್ರವೇಶಿಸಿದಾಗಲೇ ಗೊತ್ತಾಗುವ ಸಂಗತಿ. ಭೂತಕಾಲದ ಭಾರದಿಂದ ನರಳುವ ನಾಯಕರು ಹೇರಳವಾಗಿರುವ ನವ್ಯಸಾಹಿತ್ಯದಲ್ಲಿ ಅಂಥ ಹಂಗಿಲ್ಲದೇ ವರ್ತಮಾನದಲ್ಲಿಯೇ ಬದುಕುವ ದೇಸಾಯರ ಕಥಾಪಾತ್ರಗಳು ತಕ್ಷಣ ಹತ್ತಿರವಾಗುತ್ತಾರೆ. ಕಥೆಗಳೊಳಗೆ ಕಾಣುವ ಸಂಬಂಧಗಳ ಅನ್ವೇಷಣೆಯೂ ಸಹ ಇಲ್ಲೇ ಈಗಲೇ ಈವತ್ತೇ ನಿಜವಾಗುವ ತಹತಹ ಇರುವಂಥದ್ದು.

ಅವರ ಆರಂಭದ ಕತೆಗಳಲ್ಲೊಂದಾದ ‘ಅಂಟಿದ ನಂಟು’ವಿನಲ್ಲಿ ಮದುವೆಯ ಉದ್ವೇಗ ಅಳಿದ ನಂತರ ಹುಟ್ಟಿದ ನಿರಾಸೆ ಮತ್ತು ಸಂಸಾರದ ಕ್ಷುದ್ರತೆಯನ್ನು ದಾಟುವ ತೀವ್ರವಾದ ಬಯಕೆಯ ಚಿತ್ರಣವಿದೆ. ಆದರೆ ಎಲ್ಲ ಪ್ರಯತ್ನಗಳ ನಂತರವೂ ಆ ಕಕ್ಷೆಯನ್ನು ದಾಟಲಾಗದ ವೈಫಲ್ಯವನ್ನೂ ಸಹ, ಸಮಾಜ ಮತ್ತು ಒಪ್ಪಿತ ಮೌಲ್ಯಗಳ ಅಚ್ಚಿನಲ್ಲಿ ಎರಕಗೊಂಡ ಮನಸ್ಸು, ಯಶಸ್ಸೆಂಬಂತೆ ಬಿಂಬಿಸುತ್ತವೆ. ದುರಂತವೆಂದರೆ ಸ್ವತಃ ಕಥಾನಾಯಕನೂ ಹಾಗೆಂದೇ ನಂಬುತ್ತಾನೆ. ಅವರ ಸಮಕಾಲೀನರು ಈ ಸ್ವಾತಂತ್ರ್ಯವನ್ನು ಗಳಿಸುವ ಹಾದಿಯ ತಳಮಳಗಳ ಬಗ್ಗೆ ಬರೆದರೆ ದೇಸಾಯರು ಅದನ್ನು ಪಡೆದ ನಂತರದ ಸ್ಥಿತಿಯ ಬಗ್ಗೆ ಬರೆದರು; ಆ ಸ್ವಾತಂತ್ರ್ಯವನ್ನು ಭರಿಸುವ ಸಂಕಟಗಳ ಬಗ್ಗೆ ಬರೆದರು. ಅವರ ಶಹರ ಪ್ರಜ್ಞೆ ಮುಂಬಯಿಯಂಥ ನಗರದಿಂದ ಬಂದದ್ದು. ಅವರು ಬರೆಯಲು ಆರಂಭಿಸಿದ ಕಾಲಕ್ಕಂತೂ ಅದು ಕನ್ನಡ ಸಾಹಿತ್ಯಕ್ಕೆ ಅಪರಿಚಿತವಾಗಿದ್ದ ಪ್ರದೇಶ. ಇದು ಬರೇ ವಸ್ತುವಿನ ಹೊಸತನದಲ್ಲಿರಲಿಲ್ಲ; ಬದಲಿಗೆ ಸಮಾಜವನ್ನು, ಸಂಬಂಧಗಳನ್ನು ನೋಡುವ ಮನಸ್ಥಿತಿ ಮತ್ತು ಮೌಲ್ಯಗಳಲ್ಲಿ ಆದ ಬದಲಾವಣೆಯನ್ನು ಗುರುತಿಸಿದ ರೀತಿಯಲ್ಲಿತ್ತು. ಅವರ ‘ಮುಕ್ತಿ’ ಕಾದಂಬರಿಯು ಕನ್ನಡ ಮನಸ್ಸುಗಳಿಗೆ ನೀಡಿದ ಬಿಡುಗಡೆಯ ಭಾವನೆಯನ್ನು ಈಗಾಗಲೇ ಹಲವರು ಗುರುತಿಸಿ ದಾಖಲಿಸಿದ್ದಾರೆ. ‘ಮುಕ್ತಿ’ಯ ಪ್ರಕಟನೆ ಕನ್ನಡ ಗದ್ಯಸಾಹಿತ್ಯ ತನ್ನ ಸಂವೇದನೆಯ ದಿಕ್ಕು ಬದಲಿಸಿದ ಕ್ಷಣಕ್ಕೆ ದ್ಯೋತಕವಾಗಿದೆ.

ಅವರ ಪ್ರಖ್ಯಾತ, ಬಹುಚರ್ಚಿತ ಕತೆಯಾದ ‘ಕ್ಷಿತಿಜ’ದ ನಾಯಕಿ ಹಡಗಿನಲ್ಲಿ ಲಂಡನ್ನಿಗೆ ಒಂಟಿ ಪ್ರಯಾಣ ಮಾಡುತ್ತಿರುವ ಮಿಸ್ ಭಾಟೆ ಅಥವಾ ಮಂದಾಕಿನಿ ಒಂದೆಡೆ ಹೇಳುತ್ತಾಳೆ: ‘ನೋಡಿ, ನಾನು ಇಂಡಿಯನ್ ಹೆಣ್ಣು. ಹಿಂದೂ ಹೆಂಗಸು. ನಾವು ಈಗ ತಾನೇ ಅಡಿಗೆ ಮನೆಯಿಂದ ಸ್ವಲ್ಪ ಹೊರಗೆ ಬಂದಿದ್ದೇವೆ. ಇದೆಲ್ಲ ನಮಗೆ ಒಂದು ಹೊಸ ವಿಶ್ವ. ಬರಿ ಪುಸ್ತಕ ಪಿಕ್ಚರ್ಸ್‌ಗಳಲ್ಲಿಯ ಕಲ್ಪನೆಯ ಲೋಕ.’

೧೯೭೭ ರಲ್ಲಿ ಪ್ರಕಟವಾದ ಅವರ ಇನ್ನೊಂದು ಮುಖ್ಯ ಕತೆ ‘ರಾಕ್ಷಸ’. ಕತೆಯ ಆರಂಭದಲ್ಲಿ ನಿರೂಪಕಿ ನಳಿನಿಯಿಂದ ಪ್ರತ್ಯೇಕವಾಗಿ ಇದ್ದ ‘ರಾಕ್ಷಸ’ ಬರಬರುತ್ತ ಅವಳ ಒಳಗನ್ನು ಪ್ರವೇಶಿಸಿ ಅವಳ ಸಖನಾಗಿಬಿಡುವುದು ಅತ್ಯಂತ ನಾಟಕೀಯವಾಗಿದೆ ಮತ್ತು ಯಾರು ಯಾರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಸಮಸ್ಯಾತ್ಮಕವಾಗಿಸುತ್ತ ಕಥೆ ಕೊಡುವ ಅನುಭವಕ್ಕೆ ಹಲವಾರು ಮಜಲುಗಳನ್ನು ಒದಗಿಸುತ್ತದೆ. ನಲವತ್ತೈದು ವರ್ಷಗಳ ಹಿಂದೆ ಬರೆದ ಈ ಕತೆ ಇಂದಿಗೂ ಆಧುನಿಕವಾಗಿ ಕಾಣಲು ಮುಖ್ಯ ಕಾರಣ ಕತೆಯ ಸಂವೇದನೆಯನ್ನು ನಿರ್ವಹಿಸಿದ ರೀತಿ. ಅವರ ಕತೆಗಳ ಹೆಣ್ಣು ಅಂಜುಬುರುಕಿಯಲ್ಲ. ಹೊಸ ಅನುಭವವೆಂದರೆ ಹೆದರಿ ಓಡಿಹೋಗುವ ಪುಕ್ಕಿಯಲ್ಲ. ಗಂಡಸರ ಪ್ರಪಂಚದೊಡನೆ, ಹಾಗೆಂದು ಹೇಳದೆಯೇ, ಸಮಸಮನಾಗಿ ನಿಲ್ಲಬಲ್ಲ ಸಹಜ ಆತ್ಮವಿಶ್ವಾಸ ಉಳ್ಳವಳು. ಸಮಾನತೆಯ ಯಾವ ಔಪಚಾರಿಕ ಶಬ್ದಗಳನ್ನೂ ಉಪಯೋಗಿಸದೇ ದೇಸಾಯರು ಕತೆಗಳಲ್ಲಿ ಅವುಗಳನ್ನು ಸಾಧಿಸುತ್ತಾರೆ. ಬರಹಗಾರರ ಮನಸ್ಸಿನಲ್ಲಿ ಸಮಾನತೆಯ ಭಾವನೆ ಅಪ್ರಜ್ಞಾಪೂರ್ವಕವಾಗಿದ್ದಾಗ ಮಾತ್ರ ಇದು ಸಾಧ್ಯ.

ದಾಂಪತ್ಯದಲ್ಲಿ ಸ್ವಾತಂತ್ರ್ಯದ ಸ್ಥಾನವನ್ನು ಅನ್ವೇಷಿಸುವ ಇನ್ನೊಂದು ಕತೆ ‘ಬಿಡುಗಡೆ’ಯ ನಿರೂಪಕಿ ಹೇಳುತ್ತಾಳೆ:
‘ವಿಚಿತ್ರವೆಂದರೆ ಇವರ ಪ್ರಕರಣದ ಮೂಲಕ ನನಗೆ ಒಂದು ರೀತಿಯ ಬಿಡುಗಡೆ ದೊರೆಯತೊಡಗಿತ್ತು. ಈ ಸ್ವಾತಂತ್ರ್ಯ ನನಗೆ ಬೇಕೆನಿಸಿತು. ಇಷ್ಟು ವರ್ಷ ಇವರಲ್ಲಿ, ಇವರ ಸಂಸಾರದಲ್ಲಿ ಸಂಪೂರ್ಣವಾಗಿ, ರಾಡಿಯಲ್ಲಿ ಸಿಕ್ಕ ಹುಳದಂತೆ, ತೊಡಗಿಸಿಕೊಂಡುಬಿಟ್ಟಿದ್ದೆ. ಹೊರಗಿನ ಜಗತ್ತೇ ನೋಡಿರಲಿಲ್ಲ. ನನ್ನನ್ನು ನಾನೇ ಕಂಡುಕೊಂಡಿರಲಿಲ್ಲ. ನಾನು ಬೆಳೆದಿರಲಿಲ್ಲ. ಸುತ್ತಲೂ ರೆಂಬೆ ಚಾಚಿ ಆಕಾಶವನ್ನು ಸವರಿರಲಿಲ್ಲ. ಬೇರು ಬಿಟ್ಟು ಮಣ್ಣಿನ ಸತ್ವ ಉಂಡಿರಲಿಲ್ಲ. ನೆಲದ ಆಳ ಕಂಡಿರಲಿಲ್ಲ..’

ಇದೇ ಕತೆಯ ಕೊನೆಯಲ್ಲಿ ತನ್ನನ್ನು ತೊರೆದು ಹೋದ ಗಂಡನನ್ನು ಕುರಿತು ಯೋಚಿಸುತ್ತ ‘ಆದರೂ ಇಂದಲ್ಲ ನಾಳೆ ಅವರು ಬಂದೇ ತೀರುವರು. ಇಷ್ಟು ವರ್ಷ ಸಿಮೆಂಟು ಹಾಕಿ ಕೂಡ್ರಿಸಿದ ಜೀವನದ ಚೌಕಟ್ಟನ್ನು ಅವರಂತೂ ಮುರಿದು ಹೋಗಲಾರರು… ಬರಲಿ ಬಿಡಲಿ, ನನಗೆ ಮಾತ್ರ ನನ್ನ ಬಿಡುಗಡೆ ಸಿಕ್ಕಿದೆ…’ ಎಂದನ್ನುತ್ತಾಳೆ. ಈ ಕತೆಯಲ್ಲಿ ದೇಸಾಯರು ‘ಬಿಡುಗಡೆ’ ಎಂಬುದರ ಅರ್ಥವನ್ನು, ರಾಗವೊಂದನ್ನು ಸಂಗೀತಗಾರನು ನಾನಾ ಸ್ತರಗಳಲ್ಲಿ ನುಡಿಸಿ ತೋರಿಸುವ ಪರಿಯಲ್ಲಿ ನಮ್ಮೆದುರು ವಿಸ್ತರಿಸಿ ಇಡುತ್ತಾರೆ.

ಮದುವೆಯೆಂಬ ವ್ಯವಸ್ಥೆಯ ಢಾಂಭಿಕತೆ, ಪೊಳ್ಳುತನ, ಎಲ್ಲ ಬಗೆಯ ಘರ್ಷಣೆಗಳಿಂದ ಪಾರಾಗುವ ಅನುಕೂಲಸಿಂಧುತ್ವ ಧೋರಣೆ ಇತ್ಯಾದಿಗಳನ್ನು ತೀಕ್ಷ್ಣ ವಿಮರ್ಶೆಗೆ ಒಳಪಡಿಸದೇ ಗಂಡುಹೆಣ್ಣಿನ ಸ್ವಾತಂತ್ರ್ಯದ ಕುರಿತು ಬರೆಯುವುದು ಸಾಧ್ಯವಿಲ್ಲ. ದೇಸಾಯರ ಕತೆಗಳಲ್ಲೆಲ್ಲ ಈ ಪರಿಶೀಲನೆ ನಡೆದಿದೆಯಾದರೂ ವಿಶೇಷವಾಗಿ ‘ಕೂರ್ಮಾವತಾರ’ ಮತ್ತು ‘ಮಧ್ಯಸ್ಥರು’ ವ್ಯಂಗ್ಯ ಮತ್ತು ಲಘುಧಾಟಿಯಲ್ಲಿ ಮದುವೆಯ ವ್ಯವಸ್ಥೆಯನ್ನು ಅತಿ ಕಟುವಾಗಿ ಟೀಕಿಸುವ ಕೃತಿಗಳು.

ಸಮೃದ್ಧ ಮತ್ತು ಸತ್ವಪೂರ್ಣ ಸಂಭಾಷಣೆಗಳು ಅವರ ಕತೆಗಳ ಸಂರಚನೆಯ ಮುಖ್ಯ ಆಧಾರ ಸ್ತಂಭಗಳು. ಅತ್ಯುತ್ತಮ ನಾಟಕಗಳಲ್ಲಿರುವಂತೆ ಕೆಲವೇ ಮಾತುಕತೆಗಳ ಮೂಲಕ ವ್ಯಕ್ತಿಯ ಅಂತರಂಗವನ್ನು ತೆರೆದಿಡುವ ಪರಿಣತಿ ಅವರಲ್ಲಿತ್ತು. ಸಂಭಾಷಣೆಗಳಲ್ಲಿರುವ ಸೂಚನೆಗಳು, ಪರೋಕ್ಷ ನಿರೂಪಣೆಗಳು, ಮೊನಚು, ಅನೂಹ್ಯ ತಿರುವುಗಳಿಗೆ ಕಾರಣವಾಗುವ ನಿವೇದನೆಗಳು – ಹೀಗೆ ನುರಿತ ನಾಟಕಕಾರನಂತೆ ದೇಸಾಯರು ಮಾತುಗಳನ್ನು ಹೆಣೆಯುತ್ತಾರೆ. ಕತೆಗಳನ್ನು ಸಮಕಾಲೀನ ಸಂದರ್ಭದಲ್ಲಿಟ್ಟು ರಚಿಸುವಲ್ಲಿ ಇರುವ ಬಹು ದೊಡ್ಡ ಸವಾಲೆಂದರೆ ಆ ಘಟನೆಗಳು ಮತ್ತು ಸನ್ನಿವೇಶಗಳನ್ನು ಓದುಗರ ಜೊತೆಯೂ ಹಂಚಿಕೊಂಡಿರುವುದು. ಹಾಗಾಗಿ ಕಾಣದ ಕಾಲದ ಕುರಿತು ಓದುವಾಗ ಕೆರಳುವ ಕಲ್ಪನೆಗಳು ಇಲ್ಲಿ ಹುಟ್ಟುವುದಿಲ್ಲ. ಬದಲಿಗೆ ಪ್ರಸ್ತುತ ಸಂದರ್ಭದ ಬಗ್ಗೆ ಪ್ರತಿ ಓದುಗನಿಗೂ ಒಂದು ಖಚಿತ ಅಭಿಪ್ರಾಯವಿರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಿದ್ದಾಗ, ಓದುಗರ ಕಲ್ಪನೆಗೆ ಅವಕಾಶವನ್ನು ಸೃಷ್ಟಿಸುವ ಕೆಲಸವನ್ನು ಅತೀ ಜಾಗರೂಕತೆಯಿಂದ ಸೂಕ್ಷ್ಮಜ್ಞತೆಯಿಂದ ಮಾಡಬೇಕಾಗುತ್ತದೆ. ಅಂಥ ಒಂದು ಎಡೆಯನ್ನು ದೇಸಾಯರು ತಮ್ಮ ಕತೆಗಳ ಸಂಭಾಷಣೆಗಳಲ್ಲಿ ಕಂಡುಕೊಂಡಿದ್ದರು.

ಶಾಂತಿನಾಥರ ಕತೆಗಳ ಇನ್ನೊಂದು ಮುಖ್ಯ ಲಕ್ಷಣವೆಂದರೆ, ಗಂಡು ಹೆಣ್ಣಿನ ಸಂಬಂಧಗಳ ಸುತ್ತ ಅವೆಲ್ಲ ರೂಪಗೊಂಡಿದ್ದರೂ ದೈಹಿಕ ಸಮಾಗಮದ ವಿವರಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಇಡಿಯ ಕಥಾ ಸಾಹಿತ್ಯದಲ್ಲಿ ಒಂದೆರಡು ಕಡೆ ತುಸು ವಿವರಗಳು ಕಂಡಾವು ಅಷ್ಟೇ. ಗಂಡು ಹೆಣ್ಣಿನ ನಡುವಿನ ಆಕರ್ಷಣೆ, ಅದರ ತೀವ್ರತೆಯ ಫಲವಾಗಿ ತೆಗೆದುಕೊಳ್ಳುವ ನಿರ್ಧಾರಗಳು, ಪರಸ್ಪರ ವಿಕರ್ಷಣೆ, ನಂತರದ ನಿರಾಸಕ್ತಿ ಇವೇ ಅವರಿಗೆ ಅತ್ಯಂತ ಮುಖ್ಯವಾಗಿ ಕಂಡಿದೆಯೇ ಹೊರತು ಸ್ವೇಚ್ಛೆಯ ಲೈಂಗಿಕ ಸಮಾಗಮವಲ್ಲ. ಮೌಲ್ಯಗಳ ಪಲ್ಲಟವನ್ನು ಅಂಜದೇ ಹೇಳುವುದು ದಿಟ್ಟತನವೇ ಹೊರತು ದೈಹಿಕ ವಿವರಗಳನ್ನು ಸಂಕೋಚವಿಲ್ಲದೇ ಬರೆಯುವುದಲ್ಲ ಎಂಬುದು ಅವರ ಕಥಾಸಾಹಿತ್ಯವನ್ನು ಓದಿದಾಗ ಮತ್ತೆಮತ್ತೆ ಮನದಟ್ಟಾಗುತ್ತದೆ.

****

ಶಾಂತಿನಾಥರು ಮೃದುಸ್ವಭಾವದ ಸ್ನೇಹಮಯಿ ವ್ಯಕ್ತಿಯಾಗಿದ್ದರು. ಅದರಲ್ಲೂ ಹೊಸ ತಲೆಮಾರಿನವರ ಜೊತೆ ಅವರ ಸ್ನೇಹ ವಿಶೇಷವಾದುದಾಗಿತ್ತು. ಸದಾ ಹಸನ್ಮುಖಿಯಾಗಿದ್ದ ಅವರು ಹೊಸಬರ ಬರಹಗಳ ಬಗ್ಗೆ ಬಹಳ ಆಸ್ಥೆಯಿಂದ ಮಾತನಾಡುತ್ತಿದ್ದರು. ತಮ್ಮ ಕತೆಕಾದಂಬರಿಗಳ ಬಗ್ಗೆ ಸ್ವತಃ ಮಾತನಾಡಿದ್ದೇ ಕಡಿಮೆ. ನಾವಾಗಿಯೇ ಕೇಳಿದರೆ ಒಂದೆರಡು ಮಾತು ಅಷ್ಟೇ. ಆದರೆ ಅವರ ಚಿಂತನೆ ಹರಟೆಗಳೆಲ್ಲವೂ ಯಾವಾಗಲೂ ಸಾಹಿತ್ಯದ ಬಗ್ಗೆಯೇ – ಕನ್ನಡ ಸಾಹಿತ್ಯ, ಭಾರತೀಯ ಸಾಹಿತ್ಯ, ಜಾಗತಿಕ ಸಾಹಿತ್ಯ ಹೀಗೆಯೇ ಮಾತು.

(ವಿವೇಕ ಶಾನಭಾಗ)

ಶಾಂತಿನಾಥ ದೇಸಾಯಿಯವರ ಕೃತಿಗಳನ್ನು ನಾನು ಸಂಧಿಸಿದ್ದು ಅಚಾನಕ್ಕಾಗಿ. ಹೆಚ್ಚು ಕಡಿಮೆ ಅದೇ ವೇಳೆಗೆ ಅಂದರೆ ನನ್ನ ಹದಿನಾರು ಹದಿನೇಳನೇ ವಯಸ್ಸಿನಲ್ಲಿ ಯಶವಂತ ಚಿತ್ತಾಲರ ಕತೆಕಾದಂಬರಿಗಳನ್ನೂ ಸಹ ಆಕಸ್ಮಿಕವಾಗಿ ಎದುರುಗೊಂಡಿದ್ದೆ. ಚಿತ್ತಾಲರು ಉತ್ತರ ಕನ್ನಡದ ನೆಲದ ಲೇಖಕರೆಂಬುದನ್ನು ಅವರ ಕತೆಗಳೇ ಸಾರಿ ಹೇಳುತ್ತಿದ್ದವು. ಆವರೆಗೂ ನನ್ನ ಬಾಲ್ಯದ ಬಹುಭಾಗವನ್ನು ಕಳೆದಿದ್ದ ಉತ್ತರ ಕನ್ನಡವು ಚಿತ್ತಾಲರ ಕತೆಗಳಲ್ಲಿ ಜೀವ ತಳೆದಿದ್ದನ್ನು ಓದಿ ರೋಮಾಂಚನವಾಗಿದ್ದು ಮಾತ್ರವಲ್ಲ ಲೇಖಕನಾಗಿ ನಾನು ಕಂಡುಕೊಂಡ ಹಾದಿಯನ್ನು ಬಹುವಾಗಿ ಪ್ರಭಾವಿಸಿತು. ಇದೇ ವೇಳೆಗೆ ದೇಸಾಯರ ಕತೆಗಳನ್ನೋದಿ ಮತ್ತು ಅದಕ್ಕಿಂತ ಮುಖ್ಯವಾಗಿ ಅವರೂ ಉತ್ತರ ಕನ್ನಡದವರೆನ್ನುವುದನ್ನು ತಿಳಿದು ನಾನು ಆಶ್ಚರ್ಯಚಕಿತನಾದೆ. ನಮ್ಮ ಜಿಲ್ಲೆಯ ಈ ಇಬ್ಬರೂ ಲೇಖಕರ ನಡುವೆ ಅಜಗಜಾಂತರವಿತ್ತು. ಅದೃಷ್ಟವೆಂದರೆ, ಅದೇ ವರ್ಷ, ಮುಂದೆ ನನ್ನನ್ನು ತುಂಬಾ ಪ್ರಭಾವಿಸಿದ ಈ ಇಬ್ಬರೂ ಲೇಖಕರನ್ನು ನಾನು ಮೊದಲ ಬಾರಿಗೆ ಒಟ್ಟಿಗೇ ಒಂದೇ ಗಳಿಗೆಯಲ್ಲಿ ಭೇಟಿಯಾದೆ. ಅಂದು, ನಾನು ಬರೆದ ಕತೆಯೊಂದರ ಮೊದಲ ಭಾಗವನ್ನು ಇಬ್ಬರ ಎದುರು ಕೂತು ಓದಿ ತೋರಿಸಿದ್ದೆ. ಆ ವಯಸ್ಸಿನಲ್ಲಿ ಅನುಭವಕ್ಕಿಂತ ಹೆಚ್ಚಾಗಿ ಊಹೆಯಲ್ಲಿ ರೂಪ ಪಡೆದ ಪ್ರೀತಿ, ನಿರಾಸೆ, ಪ್ರೇಮಭಂಗಗಳೇ ನನ್ನ ಆ ಕತೆಯನ್ನು ಆವರಿಸಿಕೊಂಡಿದ್ದವು. ದುಃಖವು ಅತ್ಯಂತ ರಮ್ಯವಾಗಿ ಕಾಣಿಸುತ್ತಿದ್ದ ಕಾಲವದು. ಆವತ್ತು ಚಿತ್ತಾಲರು ಏನು ಹೇಳಿದರೆಂಬುದು ನನಗೆ ಸ್ಪಷ್ಟವಾಗಿ ನೆನಪಿಲ್ಲ. ಆದರೆ ದೇಸಾಯರು ಮೋಹಕವಾದ ನಗೆಮೊಗದಿಂದ ಹೇಳಿದ ಪ್ರತಿ ಶಬ್ದವೂ ನೆನಪಿದೆ. ‘ಬರೀತಿ ಛಲೋ… ಆದರೆ ಅನುಭವಕ್ಕ ಬಂದದ್ದನ್ನ ಬರೀ… ಗರ್ಲ್‌ ಫ್ರೆಂಡ್ ಅದಾಳೋ ಇಲ್ಲೊ? ಇಂಥಾ ಕತೀ ಬರಿಯೂ ಮೊದಲು ನಾಕ ಜನಾ ಹುಡಿಗೇರ ಫ್ರೆಂಡ್‌ಶಿಪ್ ಆದರ ಸರಿಹೋಗತದ…’ ಅಂದಿದ್ದರು. ಈಗ ಯೋಚಿಸಿದರೆ ನನ್ನ ಕತೆಗೆ ಅಂದಿನ ಅವರ ಪ್ರತಿಕ್ರಿಯೆ ಅತ್ಯಂತ ಸೂಕ್ತವಾಗಿತ್ತೆನಿಸುತ್ತದೆ. ಅನುಭವ ಮತ್ತು ಬರವಣಿಗೆಗೆ ಇರುವ ಸೂಕ್ಷ್ಮವಾದ ಸಂಬಂಧವನ್ನು ಅವರು ನಿರಾಯಾಸವಾಗಿ, ತಮಾಷೆಯಿಂದ ಸೂಚಿಸಿದ್ದರು.

ಕೊನೆಯವರೆಗೂ, ಪ್ರತಿ ಭೇಟಿಯಲ್ಲೂ ನನ್ನನ್ನು ಅತ್ಯಂತ ಪ್ರೀತಿವಿಶ್ವಾಸಗಳಿಂದ ಕಂಡ ಶಾಂತಿನಾಥರು ನಾನು ತುಂಬಾ ಗೌರವಿಸುವ ಹಿರಿಯರಲ್ಲೊಬ್ಬರು. ಅವರ ಕಥೆಕಾದಂಬರಿಗಳು ಆಧುನಿಕ ಕನ್ನಡ ಸಾಹಿತ್ಯದ ಕೆಲವು ಮಹತ್ವದ ನಿಲುವುಗಳನ್ನೂ ಸಂವೇದನೆಗಳನ್ನೂ ರೂಪಿಸಿವೆ. ಈಗ ಬರೆಯುತ್ತಿರುವ ಹೊಸ ಬರಹಗಾರರಿಗೆ, ಬೆಂಗಳೂರು ಬೆಳೆದು ನಮ್ಮದೇ ಮಹಾನಗರವೊಂದು ರೂಪುಗೊಳ್ಳುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ, ಶಹರದಲ್ಲಿ ಮಾತ್ರ ದೊರಕುವ ಕೆಲವು ಅನುಭವಗಳ ಅನನ್ಯತೆಯನ್ನು ಗ್ರಹಿಸಲು ದೇಸಾಯರ ಸಾಹಿತ್ಯದ ಓದು ಮತ್ತು ಚರ್ಚೆ ಸಹಕಾರಿಯಾಗಬಲ್ಲದು.