ತರಗತಿಯಲ್ಲಿ ಹೆಚ್ಚು ಅಂಕ ತೆಗೆಯುವ ಹಾಗೂ ಅತಿ ಕಡಿಮೆ ಅಂಕ ತೆಗೆಯುವ ವಿದ್ಯಾರ್ಥಿ ಇವರಿಗೆ ಸಮಾನ ಪ್ರೀತಿಪಾತ್ರರು. ನಾನು ಎರಡನೇ ಗುಂಪಿನ ಖಾಯಂ ಸದಸ್ಯ. ಶಾಲೆಯಿಂದ ಹೊರಗೆ ಸಿಕ್ಕಾಗ ಬಾರೋ ಅಂತ ಕೂಗುವರು. ಎಷ್ಟು ಸೋಶಿಯಲ್ ಸ್ಟಡಿಸ್‌ನಲ್ಲಿ ಈ ಸಲ…. ಅಂತ ಕೇಳುವರು. ನೂರಕ್ಕೆ ಹನ್ನೆರೆಡು ಸಾರ್ ಅನ್ನುತ್ತಿದ್ದೆ. ಹೇಗೆ ಓದುವೆ, ಯಾವ ಹೊತ್ತಿನಲ್ಲಿ ಓದುವುದು…. ಹೀಗೆ ವಿಷಯ ತಿಳಿದು ಅದರ ಪರಿಷ್ಕರಣೆ ಮಾಡುತ್ತಿದ್ದರು. ತರಗತಿಯಲ್ಲಿ ಹುಡುಗರು ಹೇಗೆ ಓದುತ್ತಾರೆ ಅಂತ ನನ್ನ ಉದಾಹರಣೆ ಇಟ್ಟುಕೊಂಡು ಹೇಗೆ ಓದಬೇಕು ಅಂತ ವಿವರಿಸುತ್ತಿದ್ದರು.
ಶಾಲಾ ಕಾಲೇಜು ಮೇಷ್ಟರೊಟ್ಟಿಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ ಎಚ್. ಗೋಪಾಲಕೃಷ್ಣ

ಪ್ರೈಮರಿ ಶಾಲೆ ನಾನು ಓದಿದ್ದು ತುಮಕೂರಿನಲ್ಲಿ. ಉಪ್ಪಾರಹಳ್ಳಿ ರೈಲ್ವೆ ಗೇಟ್ ಬಳಿ ಇದ್ದ ಸರ್ಕಾರಿ ಶಾಲೆ. ನಮ್ಮ ಮನೆ ಅಲ್ಲೇ ಇದ್ದ ರಾಮಕೃಷ್ಣಯ್ಯ ಅವರ ವಠಾರ ದಲ್ಲಿತ್ತು. ಅದೇ ವಠಾರದಲ್ಲಿ ಸಂಗೀತ ವಿದ್ವಾಂಸ ಶ್ರೀ ಲಕ್ಷ್ಮಣ ಶಾಸ್ತ್ರಿಗಳು ಸಹ ಒಬ್ಬರು. ಅವರ ಮಕ್ಕಳು ನನಗೆ ಆಗ ಸ್ನೇಹಿತರು. ಪ್ರೈಮರಿ ಶಾಲೆಯ ಯಾವ ಮೇಷ್ಟರೂ ಸಹ ಈಗ ನೆನಪಿಲ್ಲ, ನೆನಪಿನಿಂದ ಮಾಸಿದ್ದಾರೆ.

ಆದರೆ ಅಲ್ಲಿನ ಒಂದು ಘಟನೆ ಮಾತ್ರ ಇನ್ನೂ ನನ್ನ ಮನಸಿನಲ್ಲಿ ಹಸಿರು ಹಸಿರು. ಶಾಲೆಯ ಮೇಷ್ಟರೊಬ್ಬರ ಹೆಸರು ದಾಸಪ್ಪ ಅಂತ. ಪ್ರತಿ ಸಂಜೆ ಅವರು ರೈಲು ಲೈನಿನ ಪಕ್ಕ ಉಪ್ಪಾರಹಳ್ಳಿ ಗೇಟಿನ ಮುಂದೆ ವಾಕಿಂಗ್ ಹೋಗುವ ರೂಡಿ. ಅವರನ್ನು ದಿನವೂ ನೋಡುತ್ತಿದ್ದ ನಮಗೆ ಅದೇನೋ ಒಂದು ರೀತಿ ಭಯ. ಅವರು ದೂರದಲ್ಲಿ ಕಾಣಿಸುತ್ತಿದ್ದ ಹಾಗೇ ನಾವು ಬಚ್ಚಿಟ್ಟುಕೊಂಡು ಅವರು ಹೋದ ನಂತರ ಹೊರಗೆ ಬರುತ್ತಿದ್ದೆವು. ವಠಾರದ ಎದುರು ವಾಸ ಇದ್ದ ನಮಗಿಂತ ಕೊಂಚ ದೊಡ್ಡವ ಸೇತುರಾಮನಿಗೆ ಇದು ಒಂದು ತಮಾಷೆಯ ಕೌತುಕದ ಸಂಗತಿ. ಒಮ್ಮೆ ಹೀಗೆ ಮಾಡಿದ ದಾಸಪ್ಪ ಮೇಷ್ಟರು ಉಪ್ಪಾರ ಹಳ್ಳಿ ಗೇಟ್ ದಾಟಿ ಮುಂದೆ ಹೋದನಂತರ ನಾವು ಆಚೆ ಬಂದೆವು. ಅವನೂ ನಮ್ಮ ಜತೆ ಬಂದ. ಸುಮಾರು ಮುಂದೆ ದಾಸಪ್ಪ ಮೇಷ್ಟರು ಹೋಗ್ತಾ ಇದ್ದಾರೆ.
ಸೇತು ರಾಮ ನಮ್ಮ ಪಕ್ಕದಲ್ಲಿ ನಿಂತ..

“ಓ ದಾಸಪ್ಪಾ, ಓ ದಾಸಪ್ಪಾ, ಓ ದಾಸಪ್ಪಾ…” ಅಂತ ಜೋರಾಗಿ ಕೂಗಿದ. ಅವರು ನಿಂತು ಹಿಂದೆ ತಿರುಗಿದರು. ನಾವು ಅವರೇನು ಮಾಡುತ್ತಾರೋ ಎನ್ನುವ ಭಯದಿಂದ ಓಟ ಕಿತ್ತೆವು. ನಮಗಿಂತ ಮೊದಲೇ ಸೇತು ರಾಮ ಅಲ್ಲಿಂದ ಓಡಿದ್ದ. ಅದೇ ದಿನ ಮೇಷ್ಟರು ವಠಾರಕ್ಕೆ ಬಂದು, ಹುಡುಗರು ಹೇಗೆ ಕೆಟ್ಟು ಹೋಗ್ತಾ ಇದ್ದಾರೆ ಅಂತ ಅಲ್ಲಿದ್ದ ಹೆಂಗಸರಿಗೆ ಬೈದು ಹೋಗಿದ್ದು ರಾತ್ರಿ ನಮ್ಮ ಅಮ್ಮನ ಮೂಲಕ ಗೊತ್ತಾಯಿತು. ಅಪ್ಪ ಬೆನ್ನ ಮೇಲೆ ಎರಡು ಬಿಟ್ಟು ಶಿಸ್ತು ಕಲೀಬೇಕು ಮೇಷ್ಟರನ್ನ ಹಾಗೆ ಕರಿಬಾರದು ಅಂತ ಬುದ್ಧಿ ಹೇಳಿದ್ದ…!

ಇಂಥ ದಾಸಪ್ಪ ಮೇಷ್ಟರು ತಲೆಯಲ್ಲಿ ಉಳಿದುಕೊಳ್ಳಲು ಇನ್ನೂ ಒಂದು ಕಾರಣ ಇರಬಹುದು ಅನಿಸುತ್ತೆ. ನಮ್ಮ ದೊಡ್ಡಣ್ಣ, ನನಗೂ ಅವನಿಗೂ ಹದಿನೈದು ಹದಿನಾರು ವರ್ಷ ವ್ಯತ್ಯಾಸ. ಆಗಾಗ ನಮಗೆ ಪಾಠ ಹೇಳಿಕೊಡುವ, ತಮಾಷೆ ಮಾಡುವ ಅಭ್ಯಾಸ ಅವನಿಗೆ. ಒಂದು ಸಲ ಆಟ ಆಡ್ತಾ ಯಾರದ್ದಾದರೂ ವಿಷಯ ಹೇಳು ಅವರ ಹೆಸರು ಹೇಳ್ತೀನಿ ಅಂದ. ನಾಲ್ಕೋ ಐದೋ ಜನರದ್ದು ಆಯ್ತು.. ಅವರ ಹೆಸರು ಹೇಳಿ ಜಯದ ನಗೆ ಬೀರುತ್ತಾ ಕೂತ. ನನಗೆ ಒಳಗೊಳಗೇ ಕೋಪ. ಕೋಪದಲ್ಲಿ ನಮ್ಮ ದಾಸಪ್ಪ ಮೇಷ್ಟರು ಹೆಸರು ಗೊತ್ತಾ ನಿಂಗೆ….. ಅಂತ ಕೇಳಿದೆ. ಅಮ್ಮ ಅಕ್ಕ ಅಪ್ಪ…. ಮನೇಲಿದ್ದ ಎಲ್ಲರೂ ಹೆಂಚು ಹಾರುವ ಹಾಗೆ ನಕ್ಕರು. ಅವರು ಅದ್ಯಾಕೆ ನಕ್ಕರು ಅಂತ ಈಗಲೂ ಗೊತ್ತಿಲ್ಲ, ಆದರೆ ಅಂದು ನನಗೆ ಅವಮಾನ ಆಗಿದೆ ಅಂತ ಅಂದುಕೊಂಡಿದ್ದು ಹಾಗೇ ಮನಸ್ಸಿನ ಒಂದು ಮೂಲೆಲೀ ಕೂತು ಬಿಟ್ಟಿದೆ. ಅದರಿಂದ ದಾಸಪ್ಪ ಮೇಷ್ಟರ ಹೆಸರು ಇನ್ನೂ ಹಾಗೇ ಅಲ್ಲಿದೆ!

ನಾಲ್ಕನೇ ಕ್ಲಾಸಿಗೆ ಅಪ್ಪ ಕುಟುಂಬ ಸಮೇತ ಬೆಂಗಳೂರು ಬಂದುಬಿಟ್ಟರು. ಮಿಡಲ್ ಸ್ಕೂಲು ಶ್ರಿರಾಮಪುರದಲ್ಲಿ ಓದಿದ್ದು. ಗೋಪಾಲ ಸ್ವಾಮಿ ಅಯ್ಯರ್ ಹಾಸ್ಟೆಲ್ ಹಿಂಭಾಗ ನಮ್ಮ ಸ್ಕೂಲು. ಸ್ಕೂಲ್ ಹೆಡ್ ಮಾಸ್ತರು ಪೇಟ ಹಾಕಿಕೊಂಡು ಫುಲ್ ಸೂಟಿನಲ್ಲಿ ಬರ್ತಾ ಇದ್ದರು. ನಂಜುoಡಯ್ಯ ಅಂತ ಒಬ್ಬರು ಕನ್ನಡ ಮೇಷ್ಟರು ಮನೇಲಿ ಹಿಂದಿ ಪಾಠ ಮಾಡೋರು ಅವರ ನೆನಪೂ ಉಂಟು. ಇನ್ನೊಬ್ಬರು ಗುರುಸ್ವಾಮಿ ಅಂತ ಅವರಿಗೆ ಮೊದಲು ಒಂದು ಕಾಲು ಇರಲಿಲ್ಲ, ದಟ್ಟಿ ಪಂಚೆ ಶರ್ಟು ತೊಡುತ್ತ ಇದ್ದರು. ಒಳ್ಳೇ ಇಂಗ್ಲಿಷ್ ಪಾಠ ಮಾಡುತ್ತಿದ್ದರು. ಆಮೇಲೆ ಇವರು ಒಂದು ಕಾಲು ಹಾಕಿಸಿಕೊಂಡು ವಾಕಿಂಗ್ ಸ್ಟಿಕ್ ಊರುತ್ತ ಫುಲ್ ಸೂಟಿನಲ್ಲಿ ಬರೋರು…. ಇವರ ನೆನಪೂ ಸಹ ಇದೆ.

ಹೈಸ್ಕೂಲು ಬಂದೆನಾ… ಅಲ್ಲಿನ ಮೇಷ್ಟರು ಬಿಡಿ, ಜತೆಯಲ್ಲಿ ಓದಿದ, ಮುಂದಿನ ಹಿಂದಿನ ಕ್ಲಾಸಿನ ಒಂದೊಂದು ಹುಡುಗಿ ಹೆಸರೂ ಸಹ ಈಗಲೂ ನೆನಪಿನಲ್ಲಿ..! ಆ ಕಾಲದ ಅಂದರೆ ಐದೂವರೆ ದಶಕದ ನಂತರವೂ ಹುಡುಗೀರ ಹೆಸರು ಅದು ಹೇಗೆ ನೆನಪಿನಲ್ಲಿದೆ ಅಂತ ನನ್ನಾಕೆ ಆಗಾಗ ಕಾಲು ಕೆರೆದು ಜಗಳಕ್ಕೆ ಬರುವುದುಂಟು! ಹೈಸ್ಕೂಲಿನಲ್ಲಿ ನನ್ನ ಮೇಲೆ ತುಂಬಾ ಪ್ರಭಾವ ಬೀರಿದವರಲ್ಲಿ ಕೆ ಆರ್ ಎನ್, ಯು ವಿ ಆರ್, ಬೀ ವಿ ಆರ್, BSG ಯಾನೆ ಬಿ ಎಸ್ ಗುಂಡೂರಾವ್…. ಹೀಗೆ ಹತ್ತು ಹಲವು ಗುರುಗಳು.

ಶ್ರೀ ಕೆ. ಆರ್. ನರಸಿಂಹಮೂರ್ತಿ ಯಾನೆ KRN. ನರಸಿಂಹಮೂರ್ತಿ ಅಂದರೆ ನಮಗ್ಯಾರಿಗೂ ಯಾರು ಅಂತಲೇ ತಿಳಿಯೋದಿಲ್ಲ. ಆದರೆ KRN ಅಂದ ಕೂಡಲೇ, ನಾಲ್ಕೈದು ದಶಕಗಳ ಹಿಂದಿನ ನಮ್ಮ ಪ್ರೌಢಶಾಲಾ ದಿವಸಗಳಿಗೆ ನಮ್ಮ ಮನಸ್ಸು ಹಾರುತ್ತದೆ ಹಾಗೂ ಏಕ್ದಂ ಪುಟ್ಟ ಮಕ್ಕಳಾಗಿಬಿಡುತ್ತೇವೆ. KRN ನಾನು ಹೈಸ್ಕೂಲಿಗೆ ಸೇರುವ ಮೊದಲೇ VVHS ನ ಶಿಕ್ಷಕ ಗುಂಪಿನಲ್ಲಿದ್ದವರು. ಎಲ್ಲರಿಗಿಂತಲೂ ಹಿರಿಯರು ಮತ್ತು ನೋಡಿದ ಕೂಡಲೇ ಒಂದು ರೀತಿಯ ಆತ್ಮವಿಶ್ವಾಸ ಹಾಗೂ ಪ್ರೀತಿ ಹುಟ್ಟಿಸುವ ಮುಖಭಾವ ಅವರದ್ದು. ಪಾಠವನ್ನು ಸುಲಲಿತವಾಗಿ ಬಿಡಿಸಿ ಬಿಡಿಸಿ ಅವರು ಹೇಳುತ್ತಿದ್ದ ರೀತಿ ಮನೆಯಲ್ಲಿನ ಮುತ್ತಾತ ಮರಿಮಗನನ್ನು ಎದುರು ಕೂಡಿಸಿಕೊಂಡು ಗಾಯತ್ರಿ ಮಂತ್ರ ಹೇಳಿಕೊಡುವ ಹಾಗೆ ತೋರುತ್ತಿತ್ತು.

ಯಾರ ಮೇಲೂ ಕೋಪ ಮಾಡಿಕೊಳ್ಳದ, ಹಸನ್ಮುಖಿ ಅವರು. ಮೈಸೂರು ಶೈಲಿಯ ಕರಿ ಬಣ್ಣದ ಟೋಪಿ, ಕಚ್ಚೆ ಪಂಚೆ. ಸುಮಾರು ಕರಿಯ ಬಣ್ಣದ ಕೋಟು, ಹಣೆಗೆ ಗಂಧಅಕ್ಷತೆ…. ಆಗಿನ ಕಾಲದ ಸಭ್ಯ ಹಾಗೂ ಸುಸಂಸ್ಕೃತರ ಯುನಿಫಾರ್ಮು..

ನಮಗಿಂತ ಮೊದಲೇ ಸೇತು ರಾಮ ಅಲ್ಲಿಂದ ಓಡಿದ್ದ. ಅದೇ ದಿನ ಮೇಷ್ಟರು ವಠಾರಕ್ಕೆ ಬಂದು, ಹುಡುಗರು ಹೇಗೆ ಕೆಟ್ಟು ಹೋಗ್ತಾ ಇದ್ದಾರೆ ಅಂತ ಅಲ್ಲಿದ್ದ ಹೆಂಗಸರಿಗೆ ಬೈದು ಹೋಗಿದ್ದು ರಾತ್ರಿ ನಮ್ಮ ಅಮ್ಮನ ಮೂಲಕ ಗೊತ್ತಾಯಿತು. ಅಪ್ಪ ಬೆನ್ನ ಮೇಲೆ ಎರಡು ಬಿಟ್ಟು ಶಿಸ್ತು ಕಲೀಬೇಕು ಮೇಷ್ಟರನ್ನ ಹಾಗೆ ಕರಿಬಾರದು ಅಂತ ಬುದ್ಧಿ ಹೇಳಿದ್ದ…!

ತರಗತಿಯಲ್ಲಿ ಹೆಚ್ಚು ಅಂಕ ತೆಗೆಯುವ ಹಾಗೂ ಅತಿ ಕಡಿಮೆ ಅಂಕ ತೆಗೆಯುವ ವಿದ್ಯಾರ್ಥಿ ಇವರಿಗೆ ಸಮಾನ ಪ್ರೀತಿಪಾತ್ರರು. ನಾನು ಎರಡನೇ ಗುಂಪಿನ ಖಾಯಂ ಸದಸ್ಯ. ಶಾಲೆಯಿಂದ ಹೊರಗೆ ಸಿಕ್ಕಾಗ ಬಾರೋ ಅಂತ ಕೂಗುವರು. ಎಷ್ಟು ಸೋಶಿಯಲ್ ಸ್ಟಡಿಸ್‌ನಲ್ಲಿ ಈ ಸಲ…. ಅಂತ ಕೇಳುವರು. ನೂರಕ್ಕೆ ಹನ್ನೆರೆಡು ಸಾರ್ ಅನ್ನುತ್ತಿದ್ದೆ. ಹೇಗೆ ಓದುವೆ, ಯಾವ ಹೊತ್ತಿನಲ್ಲಿ ಓದುವುದು…. ಹೀಗೆ ವಿಷಯ ತಿಳಿದು ಅದರ ಪರಿಷ್ಕರಣೆ ಮಾಡುತ್ತಿದ್ದರು. ತರಗತಿಯಲ್ಲಿ ಹುಡುಗರು ಹೇಗೆ ಓದುತ್ತಾರೆ ಅಂತ ನನ್ನ ಉದಾಹರಣೆ ಇಟ್ಟುಕೊಂಡು ಹೇಗೆ ಓದಬೇಕು ಅಂತ ವಿವರಿಸುತ್ತಿದ್ದರು. ಬಹುಶಃ ಮೇಷ್ಟ್ರು ಮೇಷ್ಟ್ರೇ ಕುಳಿತಾಗ ಈ ಸಂಗತಿ ಚರ್ಚೆ ಆಗುತ್ತಿತ್ತು ಅಂತ ಕಾಣುತ್ತೆ. ಮಿಕ್ಕ ಮೇಷ್ಟ್ರುಗಳು ನನ್ನ ಓದನ್ನು ನನಗೆ ತಿಳಿಸುತ್ತಾ ಇದ್ದದ್ದು ಹೀಗೆ….. ಏನೋ ಶಾಮನ ತಮ್ಮ ನೀನು, ಅವನು ಕ್ಲಾಸಿಗೇ ಫಸ್ಟ್. ನೀನೇಕೆ ಹೀಗೇ..? ನಮ್ಮಣ್ಣ ನನಗಿಂತ ಎರಡು ವರ್ಷ ಸೀನಿಯರ್ ಇದೇ ಶಾಲೇಲಿ ಮತ್ತು ಸಖತ್ ಬುದ್ಧಿವಂತ. ಇಡೀ ಹೈಸ್ಕೂಲಿನ ಜೀವನದಲ್ಲಿ ನನ್ನ ಪ್ರತಿಯೊಂದು ನಡಾವಳಿಯನ್ನು ಹೋಲಿಕೆಯಲ್ಲೇ ಜೀರ್ಣಿಸಿಕೊಂಡವನು ಅಂದರೆ ಅದು ನಾನೇ! ನಾನು ಶಿಕ್ಷಕ ವೃಂದದಲ್ಲಿ ಶಾಮನ ತಮ್ಮ ಅಂತಲೇ ಗೊತ್ತಿದ್ದೋನು ಮತ್ತು ಈಗಲೂ, 50 ವರ್ಷದ ನಂತರವೂ ಸುಮಾರು ಅಂದಿನ ಗೆಳೆಯರು ಹಾಗೇ ಕೂಗುತ್ತಾರೆ. ಇದು ನನಗೆ ಖುಷಿನೂ ಕೊಡುತ್ತೆ.

KRN ಹೈಸ್ಕೂಲಿನಿಂದ ನಿವೃತ್ತರಾದರು… ಸರ್ಕಾರಿ ಹುದ್ದೆಯಿಂದ ನಿವೃತ್ತರಾದ ಮೇಲೆ ಇಲ್ಲಿಗೆ ಸೇರಿದ್ದರು. 1971ಅಂತ ಕಾಣುತ್ತೆ. ಅಷ್ಟರಲ್ಲಿ ನಾವು ಉದ್ಯೋಗಸ್ಥರಾಗಿದ್ದೆವು. ಒಂದು ದಿವಸ ತುರ್ತುತುರ್ತಾಗಿ ದುಗುಡದಿಂದ ಶಾಮು ಮನೆಯಿಂದ ಹೊರಟ, ಒಂದೆರೆಡು ಗಂಟೆ ನಂತರ ವಾಪಸ್ಸು ಬಂದ.
“ಏನು ಏನಾಯಿತು…” ಅಂತ ವಿಚಾರಿಸಿದೆ. KRN ಹೋಗಿಬಿಟ್ರು ಅಂತ ಶ್ರೀನಾಥಂಗೆ ಯಾರೋ ಹೇಳಿದ್ರಂತೆ, ಅವರ ಮನೆಗೆ ಹೋಗಿದ್ದೆವು.. ಅಂದ.

ಮತ್ತೆ ಇಷ್ಟು ಬೇಗ ಬಂದೆ… ನಾನು.

ಅವರ ಮನೆಗೆ ಹೋದರೆ ಮನೆ ಮುಂದೆ ಅವರೇ ಕೂತಿದ್ದರು, ಮಾತಾಡಿಸಿ ಬಂದೆವು…

ಶ್ರೀನಾಥ, ಶಾಮರಾವ್ ಇಬ್ಬರೂ KRN ಗೆ ಪಟ್ಟ ಶಿಷ್ಯರು. ಶ್ರೀನಾಥ್ MS ಓದಿದರೆ, ಶಾಮು MDS ಓದಿದ್ದು. ಹೀಗಿತ್ತು ಗುರು ಶಿಷ್ಯರ ಸಂಬಂಧ. ನಮ್ಮ ಬೌದ್ಧಿಕತೆಯನ್ನು ಉತ್ತಮಪಡಿಸಿಕೊಳ್ಳಲು ಭದ್ರವಾದ ಅಡಿಪಾಯ ನಮಗೆಲ್ಲರಿಗೂ ಪ್ರೌಢಶಾಲೆಯಲ್ಲಿಯೇ ಆರಂಭವಾಗಿತ್ತು. ಈ ಬುನಾದಿ ಹಾಕಿದ ಶಿಕ್ಷಕರಲ್ಲಿ BSG ಸಹ ಪ್ರಮುಖರು. ಬಿಳಿಯ ಜುಬ್ಬಾ ಮತ್ತು ಪೈಜಾಮ ಇವರ ಸಮವಸ್ತ್ರ. ಇದನ್ನು ಬಿಟ್ಟು ಅವರನ್ನು ರೂಪಿಸಿಕೊಳ್ಳುವುದೇ ಸಾಧ್ಯವಿರಲಿಲ್ಲ. ಅಗಲವಾದ ಹಸ್ತದಲ್ಲಿ ಬೆರಳುಗಳನ್ನು ಬೊಂಬೆ ಆಡಿಸುವವರ ಗತ್ತಿನಲ್ಲಿ ಆಡಿಸುತ್ತಾ ಅವರು ಪಾಠ ಮಾಡುವುದನ್ನು ನೋಡುವುದೇ ಸಂತಸದ ಸಂಗತಿ. ಯಾರ ಮೇಲೂ ಸಿಡುಕಿದ್ದು ಕೋಪಿಸಿಕೊಂಡಿದ್ದು ನೆನಪೇ ಇಲ್ಲ. ಮಾಡುವ ಪಾಠದಲ್ಲಿ ತಾದ್ಯಾತ್ಮತೆ ಮತ್ತು ಅವು ಕೇಳುಗರಿಗೆ ಅರ್ಥವಾಗುವ ಹಾಗೆ ಹೇಳುವಲ್ಲಿ ಪರಿಣತಿ ಇವರಿಗಿತ್ತು. ಕನ್ನಡ ಮತ್ತು ಸೈನ್ಸ್ ಇವರು ನಮಗೆ ಬೋಧಿಸಿದ್ದು. ಪಾಠದ ಜತೆಗೆ ಇತರೆ ವಿಷಯಗಳಲ್ಲೂ ಜ್ಞಾನ ತುoಬಿದವರು BSG. ಕಾಲೇಜು ದಿನಗಳಲ್ಲಿ ಯಾವ್ಯಾವ ಪುಸ್ತಕ ಓದಬೇಕು ಅಂತ ಒಂದು ಪಟ್ಟಿ ಹೇಳಿದ್ದರು. ಅದರಲ್ಲಿ ಅಂದಿನ ಎಲ್ಲಾ ಕ್ಲಾಸಿಕ್ ಪುಸ್ತಕಗಳ ಹೆಸರು ಇದ್ದವು. Wuthering heights, Anna Karenina, David Copperfield, Discovery of India…… ಹೀಗೆ. ಆಯಾಚಿತವಾಗಿ ಈ ಪುಸ್ತಕಗಳನ್ನು ಓದುವಾಗ BSG ನೆನಪಿಗೆ ಬರಲೇಬೇಕು. ಇನ್ನೊಂದು ನಮಗೆ ಅರಿವಿಲ್ಲದ ಹಾಗೆ ನಮ್ಮಲ್ಲಿ ಉತ್ತಮ ಸಾಹಿತ್ಯ ಓದುವ ಅಭಿರುಚಿ ಬೆಳೆಸಿದ ಅವರ ರೀತಿ. GP ರಾಜರತ್ನಂ, ಪುತಿನ, ಮಲ್ಯ ಮುಂತಾದ ಹಿರಿಯ ಸಾಹಿತಿಗಳನ್ನು ತುಂಬಾ ಹತ್ತಿರದಿಂದ ನೋಡುವ, ಅವರ ಮಾತು ಕೇಳುವ ಅವಕಾಶ ಬೇರೆ ಯಾವ ಶಾಲೆಯಲ್ಲಿ ಸಿಕ್ಕಿತೋ ಇಲ್ಲವೋ ನಮಗಂತೂ ಇದು ಸಹಜವಾಗಿ ಅನ್ನುವಹಾಗೆ ಸಿಕ್ಕಿತು. ಅಲ್ಲದೆ GPR ಅವರ ಸುಮಾರು ಕಿರುಹೊತ್ತಿಗೆಗಳು ನಮಗೆ ಸಿಕ್ಕಿದ್ದೂ ಇವರ ಮೂಲಕವೇ. GPR ಯಾವುದಾದರೂ ಕಾರ್ಯಕ್ರಮಕ್ಕೆ ಆಹ್ವಾನ ಪಡೆದಾಗ ಇಂತಿಷ್ಟು ಮೌಲ್ಯದ ಪುಸ್ತಕ ಕೊಂಡರೆ ಬರುವುದಾಗಿ ಷರತ್ತು ಹಾಕುತ್ತಿದ್ದ ಸಂಗತಿ ಎಷ್ಟೋ ವರ್ಷಗಳ ನಂತರ ತಿಳಿದಿದ್ದು. BSG ಈ ಶರತ್ತುಗಳಿಗೆ ಒಪ್ಪಿ ಹಿರಿಯರನ್ನು ನಮಗೋಸ್ಕರ ಕರೆ ತರುತ್ತಿದುದು ಅವರ ಮೇಲಿನ ಅಭಿಮಾನ ಹೆಚ್ಚಿಸಿತು. ಇದು ರಾಜಾಜಿನಗರದ ವಿವೇಕ ವರ್ಧಿನಿ ಶಾಲೆ ನಮ್ಮನ್ನು ಅದರ ತೆಕ್ಕೆಗೆ ತೆಗೆದುಕೊಂಡ ರೀತಿ.

ಶಾಲಾ ದಿನಗಳ ನಂತರ BSG ಅವರ ಸಂಪರ್ಕ ಕಡಿಮೆ ಆಗಿತ್ತು.1995 ರಲ್ಲಿ ಭಾರತೀಯ ವಿದ್ಯಾ ಭವನದಲ್ಲಿ ಒಂದು ಕಾರ್ಯಕ್ರಮ ಯೋಜಿಸಿದ್ದೆವು. ನಾನೇ ಕಾರ್ಯಕ್ರಮದ ನಿರೂಪಕ. ಸಭಿಕರ ಮಧ್ಯೆ BSG ಅವರನ್ನು ನೋಡಿದೆ. ಕೆಂಪು ನೀಲಿ ಚೌಕಳಿಯ ಬುಶ್ ಶರ್ಟ್ ಮತ್ತು ಎಂದಿನ ದೊಗಲೆ ಪಾಯಿಜಾಮ ಅವರ ಅಂದಿನ ಡ್ರೆಸ್ಸು. ಕಾರ್ಯಕ್ರಮ ಮುಗಿದ ನಂತರ ಅವರನ್ನು ಮಾತನಾಡಿಸಲು ಹೋದರೆ ಅವರೇ ನನ್ನ ಬಳಿ ಬರುತ್ತಿದ್ದರು. ಕೈಮುಗಿದು ನನ್ನ ಸಾಹಿತ್ಯ ಮಿತ್ರರ ಪರಿಚಯ ಮಾಡಿದೆ. ಸುಮಾರು ಎಲ್ಲರೂ ಅವರಿಗೆ ತಿಳಿದವರೇ. ನಿವೃತ್ತಿ ನಂತರ ಭಾರತೀಯ ವಿದ್ಯಾಭವನದ ಒಂದು ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನಂತರ ಸುಮಾರು ಕಾರ್ಯಕ್ರಮಗಳಲ್ಲಿ ಅವರ ಭೇಟಿ ಮಾಡುತ್ತಿದ್ದೆ. ನನ್ನ ಗೆಳೆಯರೆದುರು I am proud of him ಅಂತ ನನ್ನ ಬಗ್ಗೆ ಅವರು ಹೇಳುತ್ತಿದ್ದರೆ ನಾಚಿಕೆಯಿಂದ ಕುಗ್ಗಿ ಹೋಗುವ ಸ್ಥಿತಿ ನನ್ನದಾಗುತ್ತಿತ್ತು. ನಮ್ಮಣ್ಣ ನಾನು ಆಗಾಗ BSG ಅವರನ್ನು ನೆನೆಯುತ್ತಿದ್ದೆವು. ನಮ್ಮನ್ನು ರೂಪಿಸಿದ ಹಲವು ವ್ಯಕ್ತಿಗಳು ಹಾಗೂ ಶಕ್ತಿಗಳಲ್ಲಿ BSG ಅವರಿಗೆ ಒಂದು ಪ್ರಮುಖ ಸ್ಥಾನವಿದೆ. ಯಾವಾಗಲಾದರೂ ಧುತ್ತೆಂದು ಅವರ ಮುಂದೆ ನಿಲ್ಲಬೇಕು, ಅವರನ್ನು ಪ್ರೀತಿಯಿoದ ಅಪ್ಪಿಕೋ ಬೇಕು ಅನ್ನುವ ಆಸೆ ಈಚೆಗೆ ಮನಸ್ಸಿನಲ್ಲಿ ಬರುತ್ತಿದೆ. (ಶ್ರೀ bsg ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಕಾಲವಾದರು)

ನಂತರ ಕಾಲೇಜು ದಿವಸಗಳಲ್ಲಿ ಎಂ ಇ ಎಸ್ ಕಾಲೇಜಿನಲ್ಲಿ ಶ್ರೀನಿವಾಸ ಶರ್ಮಾ, ಕ ವೆಂ ರಾಜಗೋಪಾಲ್, ಎಸ್ ಶ್ರೀನಿವಾಸ ರಾವ್, ಕಮಲಮ್ಮ, ಶಾರದಮ್ಮ ನೆನಪಿನಲ್ಲಿ ಉಳಿದರೆ ಗ್ಯಾಸ್ ಕಾಲೇಜಿಗೆ ಬಂದ ನಂತರ ಜ್ಞಾನದ ರಾಶಿಯೇ ಅಲ್ಲಿತ್ತು. ಎಂ ವಿ ಸೀತಾರಾಮಯ್ಯ, ಹಂಪನಾ, ಬ್ರಹ್ಮಪ್ಪ, ನಂಜುಂಡ ಶಾಸ್ತ್ರಿ ಇವರು ಭಾಷಾ ಬೋಧನೆ ಮಾಡಿದರೆ ರಾಮಾಚಾರ್ ಫಿಸಿಕ್ಸು, ನಾವಡ ಫೋಟೋ ಎಲೆಕ್ಟ್ರಿಸಿಟಿ, ಉಮರ್ಜಿ ಮ್ಯಾತ್ಸು, ಸೇತು ರಾವ್ ಅನಲಿಟಿಕಲ್ ಕೆಮಿಸ್ಟ್ರಿ…. ಹೀಗೆ ದಿಗ್ಗಜರ ಗುಂಪು ಅಲ್ಲಿತ್ತು. ಯಾವ ಕ್ಲಾಸಿಗೂ ಬಂಕ್ ಮಾಡೋ ಹಾಗಿರಲಿಲ್ಲ. ಆದರೂ ಕಾಲೇಜಿನ ಅರ್ಧ ಫರ್ಲಾಂಗ್ ದೂರದಲ್ಲಿ ಇರುವ ಟಾಕೀಸುಗಳು ಮಾರ್ನಿಂಗ್ ಶೋ ಗೆ ಬಾರಯ್ಯಾ ಅಂತ ಕೈ ಬೀಸಿ ಕರೆದರೆ ಯಾವ ಸನ್ಯಾಸಿ ತಾನೇ ಇಲ್ಲ ಅಂದಾನು…. ಹೀಗಾಗಿ ಅದೆಷ್ಟು ಸಿನಿಮಾ ನೋಡಿದೆವೋ ನೆನಪಿಲ್ಲ. ಆ ಕಾಲದ ಕ್ಲಾಸಿಕ್ ಸಿನೆಮಾಗಳು ಅದೂ ಕ್ಲಾಸಿಗೆ ಚಕ್ಕರ್ ಹೊಡೆದು ನೋಡಿದವು, ಈಗಲೂ ಮೆದುಳಿನ ಒಂದು ಮೂಲೆಯಲ್ಲಿ ಗಟ್ಟಿಯಾಗಿ ಕೂತಿವೆ..

ಆಗೆಲ್ಲ ಮತ್ತೊಂದು ಆಕರ್ಷಣೆ ಅಂದರೆ, ಸೆಂಟ್ರಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿದ್ದ ರಣಜಿ ಮತ್ತು ವಿದೇಶದ ಟೀಮುಗಳ ಜತೆ ನಮ್ಮವರು ಆಡುತ್ತಿದ್ದ ಕ್ರಿಕೆಟ್ ಮ್ಯಾಚುಗಳು. ನಾಲ್ಕಾಣೆ ಟಿಕೆಟ್ ಇದ್ದರೂ ಯಾವ ಮ್ಯಾಚನ್ನೂ ಟಿಕೆಟ್ ತಗೊಂಡು ನೋಡಿಲ್ಲ. ಬದಲಿಗೆ ಕಾಂಪೌಂಡ್ ಹಾರಿ ಅಥವಾ ಪ್ರಸನ್ನ ಕುಮಾರ್ ಮೆಮೋರಿಯಲ್ ಹಾಲ್ ಹತ್ತಿ ಅಲ್ಲಿ ಮರದ ಕೊಂಬೆ ಹಿಡಿದು ಇಳಿದು ಮೈದಾನ ಸೇರುತ್ತಿದ್ದೆವು ಮತ್ತು ಅದು ಹೇಗೋ, ಹೇಗೋ ಏನು ಬೇಲಿ ಎಗರಿ ಪೆವಿಲಿಯನ್ ನಮ್ಮದಾಗುತ್ತಿತ್ತು….. ಪ್ರಸನ್ನ, ಚಂದ್ರಶೇಕರ್, ಸುಬ್ರಹ್ಮಣ್ಯಂ, ಕುಂದರನ್, ಜಯಪ್ರಕಾಶ್ ಮೊದಲಾದ ಅಂದಿನ ಕ್ರಿಕೆಟ್ ಆಟಗಾರರ ಕೈಗಳನ್ನು ಅದೆಷ್ಟು ಬಾರಿ ಕುಲುಕಿದ್ದೇವೋ ಲೆಕ್ಕ ಇಲ್ಲ! ಆಗ ಇನ್ನೂ ಚಿನ್ನಸ್ವಾಮಿ ಸ್ಟೇಡಿಯಂ ಹುಟ್ಟಿರಲಿಲ್ಲ!

ಮತ್ತೆ ಆ ಕಾಲ ಬರಬಾರದೇ ಅಂತ ಈಗ ಅನ್ನಿಸುತ್ತೆ. ಹೀಗೆ ನಾವು ಐವತ್ತು ವರ್ಷದ ಹಿಂದೆ ನಮ್ಮ ಜೀವನ ರೂಪಿಸಿಕೊಂಡು ಬದುಕಿ ಬಾಳಿದ್ದು….