“ಸ್ಪ್ರಿಂಗ್ ಸೀಸನ್” ಎಂದು ಇಲ್ಲಿನವರಿಂದ ಕರೆಸಿಕೊಳ್ಳುವ, ಮಾರ್ಚ್ ತಿಂಗಳ ಅಖೇರಿಗೆ ನಮ್ಮನ್ನು ಆವರಿಸಿದ ಕೊರೊನದ ಅಸಾಧಾರಣ ದೀರ್ಘಕಾಲೀನ ಪರಿಣಾಮಗಳಿಂದ ಇದೀಗ ತುಸು ಮಟ್ಟಿನ ಬಿಡುಗಡೆ ಕಾಣುತ್ತಿರುವುದು ಎಲೆಗಳು ಬಣ್ಣ ಬದಲಿಸುವ, ಉದುರುವ ತಯಾರಿ ನಡೆಯುವ ಶರತ್ಕಾಲ ಅಥವಾ “ಆಟಂ” ಹೊತ್ತಿಗೆ. ಇಲ್ಲಿನ ಸಸ್ಯ ಸಂಕುಲದ ಮಟ್ಟಿಗೆ ಚಿಗುರುವ ಮೊಗ್ಗುಗಳ ಹಾಗು ಉದುರುವ ಪಕಳೆಗಳ ನಡುವಿನ ಜೀವನಯಾನ ಅರೆಯುಗದಂತೆ ಭಾಸವಾಗುತ್ತಿರುವಾಗ ಸುಮಾರು ಅದೇ ಆರು ತಿಂಗಳುಗಳ ನೈಸರ್ಗಿಕ ಕಾಲಚಕ್ರದಲ್ಲಿ ಹುಲುಮನುಜರಾದ ನಾವು ಕೋವಿಡ್ ವ್ಯೂಹವನ್ನು ಹೊಕ್ಕು ಹೊರ ಬರುವ ಪ್ರಯತ್ನ ಪ್ರಯಾಸದಲ್ಲಿದ್ದೇವೆ.
ಯೋಗೀಂದ್ರ ಮರವಂತೆ ಬರೆಯುವ ‘ಇಂಗ್ಲೆಂಡ್ ಲೆಟರ್’

 

ಗೋಡೆಯ ಮೇಲೆ ನೇತಾಡುವ ಕ್ಯಾಲೆಂಡರಿನ ಆಗಷ್ಟ್ ಹಾಳೆ ಮಗುಚಿ ಮುಖ ತಿರುಗಿಸಿದೆ, ಸಪ್ಟೆಂಬರ್ ತೆರೆದುಕೊಳ್ಳಲು ಸುಲಭವಾಗಿದೆ. ಇಷ್ಟು ದಿನ ಇಲ್ಲೇ ಎಲ್ಲೋ ಮುರುಟಿ ಮಲಗಿದ್ದ ಶರತ್ಕಾಲ ಇನ್ನೀಗ ತನ್ನ ಸರದಿ ಬರುತ್ತಿರುವುದರ ಸುಳಿವು ಹತ್ತಿ ಮೆತ್ತಗೆ ಮೈಮುರಿದು ಕಣ್ಣುಜ್ಜುತ್ತಾ ಜೀವಕಳೆ ಪಡೆಯುತ್ತಿದೆ. ಇಷ್ಟು ದಿನ ಬಿಸಿಯಾಗಿ ಬೆಚ್ಚಗಾಗಿ ಪ್ರಕಾಶಿಸಿದ ಸೂರ್ಯ ಹಾದಿ ಬದಲಿಸುವುದರ ಪರಿಣಾಮ ಹೆಚ್ಚು ಹೆಚ್ಚು ನಿಶ್ಚಿತವೂ ನಿಚ್ಚಳವೂ ಆಗುತ್ತಿದೆ. ಕಳಾಹೀನ, ಉಷ್ಣರಹಿತ, ತೀರ ಸೌಮ್ಯ ಎನ್ನುವ ಜರೆಯುವಿಕೆಗಳು ತನ್ನನ್ನು ಸುತ್ತುವರಿಯುವುದನ್ನು ಪ್ರತಿ ವರ್ಷದಂತೆ ಈ ಸಲವೂ ಸೂರ್ಯ ಆಕಳಿಸುತ್ತ ಆಲಿಸುತ್ತಿದ್ದಾನೆ.

ಎಂದಿಗೂ ಮಾಸದವು ಎನ್ನುವ ಹೆಮ್ಮೆಯಲ್ಲಿ ಇಲ್ಲಿಯ ತನಕವೂ ನಳನಳಿಸುತ್ತಿದ್ದ ಕೆಲವು ಗಿಡ ಮರಗಳ ಎಲೆಗಳ ಹಸಿರು ಬಣ್ಣ, ಬೆಳಕು ಶಾಖಗಳ ಬದಲಾವಣೆಗೆ ತರಾತುರಿಯಲ್ಲಿ ಸ್ಪಂದಿಸಿ ಕುಂದಲಾರಂಭಿಸಿವೆ. ಇಷ್ಟೆಲ್ಲಾ ಆಗುಹೋಗುಗಳ ಪ್ರತ್ಯಕ್ಷ ಸಾಕ್ಷಿದಾರರಾದ ಆಕಾಶ ನೆಲಗಳ ನಡುವೆ ಎಲ್ಲೆಂದರಲ್ಲಿ ಹರಿದಾಡಿಕೊಂಡಿರುವ ಹಿತಕರ ಚುಂಬಕ ಚಂಚಲ ಗಾಳಿಯೂ ಇದೀಗ ಮೊದಲಿಗಿಂತ ತಣ್ಣಗಾಗಿ ಮುಂದಿನ ಒಂದೆರಡು ತಿಂಗಳುಗಳಲ್ಲಿ ಆಗಮಿಸಲಿರುವ ಚಳಿಗಾಲದ ಮುನ್ಸೂಚನಾ ವಾರ್ತೆಯನ್ನು ಬಿತ್ತರಿಸುತ್ತಿದೆ.

ಇದು ಎಂದಿನಂತಹ ಕಾಲ ಅಲ್ಲ ಎಂದು ನಮ್ಮ ನಮ್ಮ ಆಸುಪಾಸಿನ ವಿದ್ಯಮಾನ ಅನುಭೂತಿಗಳು ಸಾರಿ ಹೇಳುತ್ತಿದ್ದರೂ ಸುತ್ತಲಿನ ಗಿಡ ಮರ ಬಳ್ಳಿ ತರು ಲತೆ ನೆಲ ಮುಗಿಲು ಗಾಳಿಗಳು ತಮ್ಮ ಮಟ್ಟಿಗಂತೂ ಈ ವರ್ಷದ ಈ ಮಾಸ ವರ್ಷವೂ ಬಂದುಹೋಗುವಂತಹದ್ದೇ ಇನ್ನೊಂದು ಕಾಲ ಎಂದು ಉಸುರಿ ಅಣಕಿಸುತ್ತಿವೆ. ಈ ಗಾಳಿ ಬೆಳಕು ನೀರು ಮಣ್ಣು ಇತ್ಯಾದಿಗಳಲ್ಲೊಂದು ಅಲ್ಲದ ನಾವು, ಆದರೆ ಅವುಗಳ ಬಲದಲ್ಲೇ ಕಟ್ಟಿಕೊಂಡ ನಿವಾಸದಲ್ಲಿ ಎಲ್ಲವೂ ಮೊದಲಿನಂತಿಲ್ಲದೆ ಬದಲಾದ ಹೊಸ ಕಾಲದ ಹದ ತಿಳಿಯದ ತಬ್ಬಿಬ್ಬಿನಲ್ಲಿ ಇದ್ದೇವೆ.

ಒಂದು ವೇಳೆ, ಇಂದಿನದು ಹಿಂದಿನ ಎಂದಿನ ಕಾಲವೇ ಆಗಿದಿದ್ದರೆ ಬ್ರಿಟನ್ನಿನ ಮಕ್ಕಳು ವಿದ್ಯಾರ್ಥಿಗಳು ಈಗಷ್ಟೇ ಮುಗಿಯುತ್ತಿರುವ ಬೇಸಿಗೆ ರಜೆಯಲ್ಲಿ ಸ್ವದೇಶದಲ್ಲೂ ಪರದೇಶದಲ್ಲೋ ಒಂದು ಹಾಲಿಡೇ ವಿಹಾರ ತಿರುಗಾಟ ಅಥವಾ ಆ ತರಹದ್ದೇನನ್ನೋ ಮುಗಿಸಿ ತೂಕಡಿಸುತ್ತ ಇನ್ನೇನು ಶುರು ಆಗಲಿರುವ ಶಾಲೆಗಳ ಗುಂಗಿನೊಳಗೆ ಪ್ರವೇಶಿಸುವ ಯತ್ನದಲ್ಲಿ ತೊಡಗಿರುತ್ತಿದ್ದರು. ಮತ್ತೆ ಈ ಸಮಯವನ್ನೇ ಕಾದು, ಸುಮಾರು ಎರಡು ತಿಂಗಳ ಕಾಲದ “ಸಮ್ಮರ್ ಬ್ರೇಕ್” ನ ಬಹುಭಾಗವನ್ನು ಭಾರತದಲ್ಲಿ ಕಳೆದು ಬರುವ ಭಾರತೀಯ ಮೂಲದ ಮಕ್ಕಳೂ ಹೆತ್ತವರೂ ಅಲ್ಲಿನ ಬಸ್ಸು ರೈಲು ಆಟೋರಿಕ್ಷಾ ಮಳೆ ನೆರೆ ಸೆಖೆ ಬೆವರುಗಳ ಸುಖವೇದನೆಗಳ ಕತೆಗಳನ್ನು ತಂದು ಹಂಚಿಕೊಳ್ಳುವುದೂ ಇರುತ್ತಿತ್ತು.

ಆದರೆ ಎಂದಿನಂತಲ್ಲದ ಹಿಂದಿನಂತಲ್ಲದ ಈ ಕಾಲದಲ್ಲಿ, ವರ್ಷಾನುಗಟ್ಟಲೆಯಿಂದಲೂ “ಬೇಸಿಗೆ ರಜೆ” ಎನ್ನುವ ಹೆಸರಿನಲ್ಲಿಯೇ ಗುರುತಿಸಲ್ಪಡುವ ಜುಲೈ ಆಗಸ್ಟ್ ಎಂಬ ಸೂಟಿಯ ಜೋಡಿ ತಿಂಗಳುಗಳೂ ಲಾಕ್ಡೌನ್ ಮುಸುಕಿನಲ್ಲಿಯೇ ತಮ್ಮ ಸಂಪ್ರದಾಯ ಹೆಸರು ಗುರುತುಗಳನ್ನು ಕಳೆದುಕೊಂಡಿವೆ. ಪರಿಚಯ ಸಿಗದ ಮಾಮೂಲಿ ದಿವಸ ತಿಂಗಳುಗಳ ಸಾಲಿನಲ್ಲಿ ಈ ಬೇಸಿಗೆ ರಜೆಯ ಮಾಸಗಳೂ ಈ ಸಲ ಸೇರಿಕೊಂಡಿವೆ. ಈ ಕಾಲದ ಅತ್ಯಂತ ಪ್ರಬಲ ಪ್ರಭಾವಿ ವಸ್ತು ದಾಳಿ ಪರಿಣಾಮ ಎನ್ನುವ ಕುಖ್ಯಾತಿಯ ಕೋವಿಡ್, ತನ್ನ ಕಾರಣಕ್ಕೆ ಅಸ್ತಿತ್ವ ಕಳೆದುಕೊಂಡ ವ್ಯಕ್ತಿ ವಿಷಯ ವಿಚಾರಗಳಲ್ಲಿ ಬೇಸಿಗೆ ರಜೆಯನ್ನೂ ನಿರಾಯಾಸವಾಗಿ ಸೇರಿಸಿದೆ. ಈ ರಜೆಯ ಕಾಲದಲ್ಲಿ ಮಾಡಬೇಕಾದುದನ್ನು ಮಾಡಲಾಗದವರು ನಿಟ್ಟುಸಿರು ಬಿಟ್ಟು ತಮ್ಮ ಯೋಚನೆ ಯೋಜನೆಗಳನ್ನು ಮುಂದಿನ ವರ್ಷದ ಬೇಸಿಗೆಗೆ ದೂಡಿ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.

ಲಾಕ್ಡೌನ್ ನ ಬಿಗಿಯೇನೋ ಸಡಿಲಾಗುತ್ತಿದೆ ಮತ್ತೆ ಅಂತಹ ಘಟ್ಟದ ಅತ್ಯಂತ ಮಹತ್ವಪೂರ್ಣ ಗುರುತಾಗಿ ಪರೀಕ್ಷೆಯಾಗಿ ಇದೀಗ ಶಾಲೆ ಕಾಲೇಜುಗಳ ಮರು ತೆರೆಯುವಿಕೆ ಇಲ್ಲಿ ನಡೆಯುತ್ತಿದೆ. ಈ ನಿರ್ಬಂಧ ಬಂಧನ ಬಿಗಿ ಶುರು ಆದದ್ದು, ಕಚೇರಿ ಶಾಲೆ ಕಾಲೇಜುಗಳು ಬಾಗಿಲು ಹಾಕಿದ್ದು ನಾವು ವಾಸಿಸುವ ಇದೇ ವಾತಾವರಣದಲ್ಲಿ ಹೊಸ ಚಿಗುರು ಹೊಮ್ಮಿ ಟೊಂಗೆಗಳು ಟಿಸಿಲೊಡೆದು ಹೂವು ಬಿರಿದು ಮಂದಮಾರುತ ಹರಡಿದ ವಸಂತ ಮಾಸದ ಆಗಮನ ಕಾಲದಲ್ಲಿ. “ಸ್ಪ್ರಿಂಗ್ ಸೀಸನ್” ಎಂದು ಇಲ್ಲಿನವರಿಂದ ಕರೆಸಿಕೊಳ್ಳುವ, ಮಾರ್ಚ್ ತಿಂಗಳ ಅಖೇರಿಗೆ ನಮ್ಮನ್ನು ಆವರಿಸಿದ ಕೊರೊನದ ಅಸಾಧಾರಣ ದೀರ್ಘಕಾಲೀನ ಪರಿಣಾಮಗಳಿಂದ ಇದೀಗ ತುಸು ಮಟ್ಟಿನ ಬಿಡುಗಡೆ ಕಾಣುತ್ತಿರುವುದು ಎಲೆಗಳು ಬಣ್ಣ ಬದಲಿಸುವ, ಉದುರುವ ತಯಾರಿ ನಡೆಯುವ ಶರತ್ಕಾಲ ಅಥವಾ “ಆಟಂ” ಹೊತ್ತಿಗೆ. ಇಲ್ಲಿನ ಸಸ್ಯ ಸಂಕುಲದ ಮಟ್ಟಿಗೆ ಚಿಗುರುವ ಮೊಗ್ಗುಗಳ ಹಾಗು ಉದುರುವ ಪಕಳೆಗಳ ನಡುವಿನ ಜೀವನಯಾನ ಅರೆಯುಗದಂತೆ ಭಾಸವಾಗುತ್ತಿರುವಾಗ ಸುಮಾರು ಅದೇ ಆರು ತಿಂಗಳುಗಳ ನೈಸರ್ಗಿಕ ಕಾಲಚಕ್ರದಲ್ಲಿ ಹುಲುಮನುಜರಾದ ನಾವು ಕೋವಿಡ್ ವ್ಯೂಹವನ್ನು ಹೊಕ್ಕು ಹೊರ ಬರುವ ಪ್ರಯತ್ನ ಪ್ರಯಾಸದಲ್ಲಿದ್ದೇವೆ.

ಮನೆಯ ಹೊರಗಣದಲ್ಲಿ ಈ ಕಾಲಕ್ಕೆ ಒಪ್ಪುವ ಪ್ರಾಕೃತಿಕ ಬದಲಾವಣೆಗಳು ಆವರಿಸುತ್ತಿರುವ ಹೊತ್ತಿಗೆ ಅವರವರ ಬಿಡಾರದ ಒಳಗೆ, ಇಂಗ್ಲೆಂಡಿನ ಶಾಲಾ ಮಕ್ಕಳು ಸಣ್ಣವರು ದೊಡ್ಡವರು ಹೆತ್ತವರು ರಕ್ಷಕರು ಶಾಲಾ ಪುನಃರಾರಂಭದ ಬಗೆಗಿನ ಗಡಿಬಿಡಿ ಅನುಮಾನ ಪ್ರಶ್ನೆಗಳನ್ನು ತುಂಬಿಕೊಂಡು ಕಳೆಯುತ್ತಿದ್ದಾರೆ. ಮಾರ್ಚ್ ಕೊನೆಯ ವಾರದಲ್ಲಿ ಶೈಕ್ಷಣಿಕ ದಿನಗಳು ಉತ್ಸಾಹದಲ್ಲಿ ಜಾರಿಯಲ್ಲಿದ್ದ ನಟ್ಟನಡುವಲ್ಲಿ ಹಠಾತ್ತನೆ ಬಾಗಿಲು ಮುಚ್ಚಲಾದ ಶಾಲೆಗಳು, ಇದೀಗ ಕೋವಿಡ್ ಸೋಂಕುಗಳ ಸಾವುಗಳ ಪರ್ವತವನ್ನು ಹತ್ತಿಳಿದು ಅಸ್ಥಿರ ಮಾರ್ಗದಲ್ಲಿ ಬಹುದೂರ ಕ್ರಮಿಸಿ ಇತ್ತೀಚಿಗೆ ಸ್ಥಿರತೆ ಸುಭದ್ರತೆಯ ಹಂತವನ್ನು ತಲುಪಿದ್ದರ ಕುರುಹಾಗಿ ತೆರೆಯಲ್ಪಡುತ್ತಿವೆ.

ಏಪ್ರಿಲ್ ಮೇ ಕಾಲದಲ್ಲಿ ಇಡೀ ಪ್ರಕೃತಿ ಮೊಗ್ಗು ಹೂವು ಹಣ್ಣು ಹಸಿರು ಮಿರಮಿರ ಬಿಸಿಲು ಬಣ್ಣಗಳ ಅಂದದ ಅಲಂಕಾರ ಚಂದದ ಶೃಂಗಾರದಲ್ಲಿ ಮೈಮರೆತಿದ್ದಾಗ, ದಿನಕ್ಕೆ ಹಲವು ಸಾವಿರ ಜನರು ಸೋಂಕಿತರಾಗಿ ನಿತ್ಯವೂ ಸುಮಾರು ಒಂದು ಸಾವಿರ ಜನರು ಅಸುನೀಗಿ ನಿರಾಸೆ ಸಂಕಟ ಶೋಕಗಳು ಹಲವು ಮನೆ ಮನಗಳನ್ನು ತುಂಬಿದ್ದವು.ಇದೀಗ ಕೋವಿಡ್ ಗೆ ಬಲಿಯಾಗುವವರ ಸಂಖ್ಯೆ ಬೆರಳೆಣಿಕೆಗೆ ಇಳಿಕೆ ಆಗಿದ್ದರೂ ವೈರಾಣು ಈಗಲೂ ಇಲ್ಲಿ ಹಾಯಾಗಿ ವಾಸ್ತವ್ಯ ಮಾಡಿಕೊಂಡಿರುವುದು, ಲಸಿಕೆ ಸದ್ಯಕ್ಕೆ ಲಭ್ಯ ಆಗದಿರುವುದು, ಯಾವುದೇ ಅಸುರಕ್ಷಿತ ಅಚಾತುರ್ಯದ ನಡೆಗಳಿಂದ ಪುನಃ ಮೊದಲಿನಂತೆಯೇ ಸೋಂಕು ಹಬ್ಬುವ ಸಾಧ್ಯತೆ ಇರುವುದು ಇವೆಲ್ಲವೂ ಶಾಲೆಗೇ ಮಕ್ಕಳನ್ನು ಕಳುಹಿಸುವುದರ ಹಿಂದಿನ ಸಂದಿಗ್ಧತೆ ಅಸ್ಪಷ್ಟತೆಗಳನ್ನು ವರ್ಧಿಸುತ್ತಿವೆ.

ಪರಿಚಯ ಸಿಗದ ಮಾಮೂಲಿ ದಿವಸ ತಿಂಗಳುಗಳ ಸಾಲಿನಲ್ಲಿ ಈ ಬೇಸಿಗೆ ರಜೆಯ ಮಾಸಗಳೂ ಈ ಸಲ ಸೇರಿಕೊಂಡಿವೆ. ಈ ಕಾಲದ ಅತ್ಯಂತ ಪ್ರಬಲ ಪ್ರಭಾವಿ ವಸ್ತು ದಾಳಿ ಪರಿಣಾಮ ಎನ್ನುವ ಕುಖ್ಯಾತಿಯ ಕೋವಿಡ್, ತನ್ನ ಕಾರಣಕ್ಕೆ ಅಸ್ತಿತ್ವ ಕಳೆದುಕೊಂಡ ವ್ಯಕ್ತಿ ವಿಷಯ ವಿಚಾರಗಳಲ್ಲಿ ಬೇಸಿಗೆ ರಜೆಯನ್ನೂ ನಿರಾಯಾಸವಾಗಿ ಸೇರಿಸಿದೆ.

ಕೊರೊನ ವೈರಸ್ ಹಾಗು ಕಾಯಿಲೆಯ ಹಬ್ಬುವಿಕೆಗಳ ಜೊತೆಜೊತೆಗೆ ಸಂಧಾನ ಮಾಡಿಕೊಂಡು ಬದುಕುವುದು ಕ್ರಮೇಣ ಅಭ್ಯಾಸ ಆಗುತ್ತಿರುವಾಗ ಸೂಕ್ತ ಎಚ್ಚರಿಕೆ ಕೆಲವು ಸಾಮಾನ್ಯ ತಿಳುವಳಿಕೆಗಳನ್ನು ಆಚರಿಸುವುದರ ಮೂಲಕ ಸೋಂಕನ್ನು ದೂರ ಇಡಬಹುದಾದ ಸಾಧ್ಯತೆ ಇರುವುದು ರುಜುವಾತಾಗಿರುವಾಗ ವೈರಾಣುವಿನ ಸೋಂಕು ತರಬಹುದಾದ ಹಾನಿಗಿಂತ ಇದೀಗ ಶಾಲೆಗೇ ಕಳುಹಿಸದೇ ಶೆಕ್ಷಣಿಕ ಪ್ರಗತಿಯನ್ನು ತಡೆ ಹಿಡಿದು ಅಥವಾ ಮುಂದೂಡಿ ಆಗುವ ನಷ್ಟ ಹೆಚ್ಚು ಎಂದು ಸರಕಾರ, ಶಿಕ್ಷಣ ತಜ್ಞರು ವಾದಿಸುತ್ತಿದ್ದಾರೆ.

ಇಂಗ್ಲೆಂಡ್ ನಲ್ಲಿ ಶಾಲೆಗಳು ಇಂದು ನಿನ್ನೆಯಷ್ಟೇ ತೆರೆದವಾದರೂ ನೆರೆಯ ಸ್ಕಾಟ್ಲೆಂಡ್ ಹಾಗು ಐರ್ಲೆಂಡ್ ಗಳಲ್ಲಿ ಕೆಲ ವಾರಗಳ ಹಿಂದೆಯೇ ಶಾಲೆಗಳು ಶುರು ಆದದ್ದು ಮತ್ತೆ ಆ ಕಾರಣಕ್ಕೆ ಅಲ್ಲಿ ಸೋಂಕು ಹೆಚ್ಚಿದ್ದು ಕೂಡ ಶಾಲಾ ತೆರವಿನ ಬಗೆಗಿನ ವಾದ ಪ್ರತಿವಾದಗಳಲ್ಲಿ ಉದಾಹರಣೆಯಾಗಿ ಸಾಕ್ಷಿಯಾಗಿ ಬಂದುಹೋಗುತ್ತಿದೆ. ಆಗಸ್ಟ್ ಹನ್ನೊಂದಕ್ಕೆ ಸ್ಕಾಟ್ಲ್ಯಾಂಡಿನ ಶಾಲೆಗಳು ಆರಂಭವಾದ ನಂತರದಿಂದ ಶಾಲೆಗೆ ಬರುವ, ಕೋವಿಡ್ ಕಾರಣಕ್ಕೆ ಗೈರು ಹಾಜರಾದ ಮತ್ತಿತರ ಕಾರಣಗಳಿಗೆ ಶಾಲೆ ತಪ್ಪಿಸಿದ ಮಕ್ಕಳ ಬಗೆಗೆ ಚರ್ಚೆ ತುಲನೆ ಹೋಲಿಕೆ ನಡೆಯುತ್ತಿದೆ. ಸ್ಕಾಟ್ಲೆಂಡ್ ನಲ್ಲಿ ಶಾಲೆ ಮರು ಆರಂಭ ಕಂಡ ಒಂದು ವಾರದ ನಂತರ, ಆಗಸ್ಟ್ 17ರಂದು ದಿನಕ್ಕೆ ಎರಡು ಸಾವಿರ ಮಕ್ಕಳು ಕೋವಿಡ್ ಕಾರಣಕ್ಕೆ ಶಾಲೆ ತಪ್ಪಿಸಿದ್ದರೆ, ಆಗಸ್ಟ್ 24ರ ಅಂಕಿಅಂಶ ಇಪ್ಪತ್ತನಾಲ್ಕು ಸಾವಿರ ಮಕ್ಕಳು ಅದೇ ಕಾರಣಕ್ಕೆ ಶಾಲೆಗೆ ಬಂದಿಲ್ಲ ಎಂದು ಹೇಳುತ್ತದೆ.

ತಮಗೋ ಅಥವಾ ಮನೆಯವರಿಗೋ ಸೋಂಕು ಬಂದ ಕಾರಣ ಗೈರುಹಾಜರಾಗುತ್ತಿರುವ ಮಕ್ಕಳ ಸಂಖ್ಯೆ ಹೀಗೆ ನಿತ್ಯವೂ ಏರುತ್ತಿದ್ದರೂ ಈ ಸಂಖ್ಯೆ, ಕೋವಿಡ್ ಅಲ್ಲದ ಬೇರೆ ಬೇರೆ ಕಾರಣಗಳಿಗೆ ಶಾಲೆ ತಪ್ಪಿಸುವವರ ಸಂಖ್ಯೆಗಿಂತ ಕಡಿಮೆ ಇರುವುದು, ಅಥವಾ ಬೇರೆ ಬಗೆಯ ಜ್ವರ ಅಸ್ವಾಸ್ಥ್ಯ ಅಥವಾ ಇನ್ನೇನೋ ಕಾರಣಗಳಿಗೆ ಶಾಲೆ ತಪ್ಪಿಸುವ ಮಕ್ಕಳ ಸಂಖ್ಯೆ ಕೋವಿಡ್ ಸಂಬಂಧಿ ಕಾರಣಗಳಿಗೆ ಶಾಲೆಗೇ ಬಾರದವರ ಸಂಖ್ಯೆಗಿಂತ ಹೆಚ್ಚಿರುವುದು ಹಾಗು ಕನಿಷ್ಠ ಎಂಭತ್ತೈದು ಪ್ರತಿಶತಃ ಮಕ್ಕಳಾದರೂ ನಿತ್ಯವೂ ಹಾಜರಾಗುತ್ತಿರುವುದು ಸ್ಕಾಟ್ಲೆಂಡಿನಲ್ಲಿ ಶಾಲೆಗಳ ತೆರೆಯುವಿಕೆಯ ತಾತ್ಕಾಲಿಕ ಯಶಸ್ಸು ಎಂದು ಸಮಾಧಾನ ಪಡಿಸಲಾಗುತ್ತಿದೆ.

ನೆರೆಹೊರೆಯ ಪ್ರದೇಶಗಳ ಉದಾಹರಣೆ ಕಲಿಕೆಗಳನ್ನು ಗಮನಿಸುತ್ತಾ ಈ ವಾರ ಆರಂಭವನ್ನ ಕಾಣುತ್ತಿರುವ ಇಂಗ್ಲೆಂಡ್ ನ ಶಾಲೆಗಳಿಗೆ ಸಂದರ್ಭಕ್ಕೆ ಹೊಂದಿಕೊಂಡು ಪರಿಸ್ಥಿತಿ ನಿಭಾಯಿಸಲು ಅಗತ್ಯವಾದ ವಿಶೇಷ ಅಧಿಕಾರ ನೀಡಲಾಗಿದೆ. ಮಕ್ಕಳು ಯಾವಾಗ ಮಾಸ್ಕ್ ಧರಿಸಬೇಕು ಅಥವಾ ಬೇಕಾಗಿಲ್ಲ ಎನ್ನುವ ತೀರ್ಮಾನ, ಕೋವಿಡ್ ಗೆ ಹೊಂದುವ ಸುರಕ್ಷತೆಯ ಪಾಲನೆಗೆ ಸೂಕ್ತವಾದ ಹೆಜ್ಜೆಗಳ ಅನುಸರಣೆ, ಯಾವುದಾದರೂ ಮಕ್ಕಳು ಕೋವಿಡ್ ಹೆಸರಿನಲ್ಲಿ ಇತರ ಮಕ್ಕಳಿಗೆ ತಮಾಷೆ ಮಾಡುವುದು, ಅನಾವಶ್ಯಕ ಇನ್ನೊಬ್ಬರ ಮೇಲೆ ಕೆಮ್ಮುವುದು ಮಾಡಿದರೆ ಶಾಲೆಯಿಂದ ನಿರ್ಬಂಧಿಸುವ ಶಿಸ್ತುಕ್ರಮಗಳ ಹೇರಿಕೆ ಇತ್ಯಾದಿ ನಿರ್ಣಯಗಳನ್ನು ತಾವೇ ತೆಗೆದುಕೊಳ್ಳಬಹುದಾಗಿದೆ. ಒಂದು ವೇಳೆ ಶಾಲೆಯಲ್ಲಿ ಒಬ್ಬರಿಗೆ ಸೋಂಕು ಬಂದರೆ ಅವರ ಗುಂಪಿನಲ್ಲಿರುವ ಅಥವಾ ಇಡೀ ತರಗತಿಯ ಮಕ್ಕಳು ಮನೆಯಲ್ಲಿರಬೇಕಾದ ನಿರ್ದೇಶನವನ್ನೂ ನೀಡಬಹುದಾಗಿದೆ. ಬೇರೆ ಬೇರೆ ತರಗತಿಯ ಮಕ್ಕಳು ಬೇರೆ ಬೇರೆ ಹೊತ್ತಿಗೆ ಶಾಲೆಯೊಳಗೆ ಬರುವ ಹೋಗುವ ವ್ಯವಸ್ಥೆ, ತರಗತಿಯ ಎಲ್ಲ ಪಾಠ ಅಭ್ಯಾಸಗಳೂ ಒಂದೇ ಕಡೆ ಜರುಗಿ ಮಕ್ಕಳು ಅನಾವಶ್ಯಕ ತಿರುಗಾಡುವ ಅಗತ್ಯ ಇಲ್ಲದಂತೆ ಮಾಡಲಾಗಿದೆ.

ಒಬ್ಬರಿಂದೊಬ್ಬರು ಅಂತರ ಕಾಯುವುದು ಆಗಾಗ ಕೈ ತೊಳೆದುಕೊಳ್ಳುವುದು ಜೊತೆಗೆ ಶಾಲೆಯ ಒಳಗಿನ ನಡೆದಾಟಕ್ಕೆ ಏಕಪಥ ವ್ಯವಸ್ಥೆ ಮಾಡಿ ಎಲ್ಲಿಯೂ ಮಕ್ಕಳು ಎದುರು ಬದುರಾಗಿ ಹತ್ತಿರದಿಂದ ಹಾದುಹೋಗುವ ಸಾಧ್ಯತೆ ಇರದಿರುವಂತೆ ನೋಡಿಕೊಳ್ಳಲಾಗುತ್ತಿದೆ. ನಿಯಂತ್ರಣ, ನಿಭಾಯಿಸುವಿಕೆ, ಸಾಮಾಜಿಕ ಅಂತರ, ಕಟ್ಟೆಚ್ಚರ, ಸುರಕ್ಷತೆ ಮತ್ತಿತರ ಈ ಕಾಲಕ್ಕೆಂದೇ ಹೆಕ್ಕಿ ಆಯ್ದ ಜನಪ್ರಿಯ ಸೊಲ್ಲುಗಳು ಈಗ ಶಾಲೆಗಳ ಆವರಣದೊಳಗೂ ಲಗ್ಗೆ ಇಟ್ಟಿವೆ.

ನಿನ್ನೆ ಒಂದು ಲಕ್ಷಕ್ಕಿಂತ ಹೆಚ್ಚು ಮಕ್ಕಳು ಇಂಗ್ಲೆಂಡ್ ನಲ್ಲಿ ಶಾಲೆಗೆ ಮರಳಿದ್ದಾರೆ. ಪಾಠಗಳು ನಡೆಯಬೇಕಾಗಿದ್ದ ದಿನಗಳಲ್ಲಿ ಆನ್ಲೈನ್ ತರಗತಿಗಳ ಮೂಲಕ “ಹೋಂ ಸ್ಕೂಲಿಂಗ್” ನಡೆದು ಮತ್ತೆ ಬೇಸಿಗೆ ರಜೆ ಮುಗಿದ ಈ ಹೊತ್ತಿಗೆ ಮಕ್ಕಳು ತಮ್ಮ ಶಾಲಾ ತರಗತಿಗಳಿಗೆ ಹಿಂತಿರುಗುತ್ತಿದ್ದಾರೆ. ಶಾಲೆಗೆ ಕಳುಹಿಸಬೇಕೋ ಬೇಡವೋ ಎನ್ನುವ ಸಂಶಯ ಭಯಗಳಲ್ಲಿ ಸುಮಾರು ಹತ್ತು ಪ್ರತಿಶತಃ ಮಕ್ಕಳು ಶಾಲೆಗೇ ಬಂದಿರಲಿಕ್ಕಿಲ್ಲ ಎಂದೂ ಅಂದಾಜಿಸಲಾಗಿದೆ. ಬೇಸಿಗೆ ರಜೆ ಮುಗಿದು ಹೊಸ ತರಗತಿಗೆ ಹೋಗುವ ಸಂಭ್ರಮದ, ತಮ್ಮ ನೆಚ್ಚಿನ ಗೆಳೆಯ ಗೆಳತಿಯರೊಡನೆ ವಿರಾಮದ ನಂತರ ಕಲೆಯುವ ಬೆರೆಯುವ ಉತ್ಸಾಹದ ಉಲ್ಲಾಸದ ಕ್ಷಣವಾಗಬೇಕಿದ್ದ ಈ ಪುನಃರಾರಂಭ ಈಗ ತಳಮಳ ಕಾತರಗಳ ಭಾರ ಹೊತ್ತ ನವಿರು ನಾಜೂಕಿನ ಘಳಿಗೆಯಾಗಿದೆ.

ಕಳೆದ ಐದಾರು ತಿಂಗಳುಗಳ ವಿದ್ಯಾಭ್ಯಾಸ ಇಲ್ಲದ ಅಪರೂಪದ ದಿನಗಳು, ಇದೀಗ ಶಾಲಾರಂಭದ ಜೊತೆಗೆ ಎದುರಾಗಿರುವ ಮಾಮೂಲಿಯಲ್ಲದ ವಾಡಿಕೆಯಲ್ಲಿಲ್ಲದ ಶಿಕ್ಷಣ ವ್ಯವಸ್ಥೆಯ ಅನುಭವಗಳು ಎಲ್ಲವೂ ಶಾಲೆಯ ಒಳಗೂ ಹೊರಗೂ ಬಹುಕಾಲ ಬಾಳುವ ತೀವ್ರ ಪ್ರಭಾವ ಪರಿಣಾಮಗಳನ್ನು ಉಂಟುಮಾಡಿರುವ ಚಾರಿತ್ರಿಕ ಘಟನೆಗಳಾಗಿ ದಾಖಲಾಗಲಿವೆ. ಮತ್ತೆ ಘಳಿಗೆ ಘಳಿಗೆಗೆ ಕೈ ಮೈ ಮುಟ್ಟಿ ಪ್ರತಿಸ್ಪಂದಿಸುವ, ಹೆಗಲಿಗೆ ಹೆಗಲು ಉಜ್ಜಿಕೊಂಡು ಶಾಲಾವಠಾರದಲ್ಲಿ ನಡೆದಾಡುವ, ಒಬ್ಬರ ಬುತ್ತಿಯೂಟ ಆಹಾರವನ್ನು ಹಂಚಿ ಕಾಡಿ ತಿನ್ನುವ, ಒಂದೇ ಬಾಟಲಿಯ ನೀರಿನಲ್ಲಿ ಆಪ್ತ ಸ್ನೇಹಿತರು ತೃಷೆ ನೀಗಿಸಿಕೊಳ್ಳುವ, ಒಬ್ಬರ ಪುಸ್ತಕವನ್ನು ಇನ್ನೊಬ್ಬರು ಕಸಿದು ಓದುವ, ಮತ್ತೊಬ್ಬರ ಚೀಲದಲ್ಲೇನಿದೆ ಎಂದು ಕದ್ದು ನೋಡುವ ಆತ್ಮೀಯ ಆಪ್ತ ತುಂಟ ಕ್ಷಣಗಳು ಈಗಷ್ಟೇ ತೆರೆದಿರುವ ಶಾಲೆಗಳಿಂದ ದೂರವಾಗಿವೆ.

ಆರು ತಿಂಗಳುಗಳ ಹಿಂದೆ ಅಚಾನಕ್ ಆಗಿ ಶಾಲೆ ಮುಚ್ಚುವಾಗ ಕಂಡಿದ್ದ ಅದೇ ಸಹಪಾಠಿಗಳೇ ಇದೀಗ ಎದುರಿದ್ದರೂ ಪರಿಚಯದೊಳಗೊಂದು ಅಪರಿಚಿತತೆ ಅಲ್ಲೇ ಸುಳಿಯುತ್ತಿದೆ. ಶಾಲೆಯನ್ನು ಸುರಕ್ಷಿತವಾಗಿ ನಿರ್ವಹಿಸುವಲ್ಲಿನ ಸವಾಲುಗಳು ಮಕ್ಕಳು ಮರಳುವಾಗ ಅವರ ಜೊತೆಗೆ ಮನೆಯನ್ನು ತಲುಪುವ ಸಂಭವವು ಇದೆ. ಅಂತರ್ಗತವಾದ ಯಾವುದೊ ಅನಾರೋಗ್ಯದ ಸಮಸ್ಯೆ ಇರುವ ವೃದ್ಧರು ಇರುವ ಮನೆಗಳ ಮಕ್ಕಳು ಪ್ರತಿದಿನ ಶಾಲೆಯಿಂದ ಮರಳಿದಾಗಲೂ ಇಂದು ಇವರ ಮೂಲಕ ಕೊರೊನ ಕ್ರಿಮಿ ಮನೆಯನ್ನು ಪ್ರವೇಶಿಸಿರಬಹುದೇ ಎನ್ನುವ ಅನುಮಾನವೂ ಕಾಡುತ್ತದೆ. ಅಜ್ಜ ಅಜ್ಜಿಯರು ಅಥವಾ ಎಳೆಯರಾದರೂ ಗಂಭೀರ ಕಾಯಿಲೆ ಇರುವವರು ಶಾಲೆಯಿಂದ ಹಿಂತಿರುಗಿದ ಅವರವರ ಮನೆಯಮಕ್ಕಳು ಮೊಮ್ಮಕ್ಕಳನ್ನು ಮುಟ್ಟುವ ತಬ್ಬುವ ಕಾರಣಕ್ಕೆ ಸೋಂಕು ತಗಲಿಸಿಕೊಂಡರೆ ವಿಪರೀತ ಪರಿಣಾಮಗಳಿಗೆ ಆಸ್ಪದ ನೀಡಿದಂತಾಗುತ್ತದೆ. ಈಗಾಗಲೇ ಶಾಲೆಗಳನ್ನು ತೆರೆದಿರುವ ಇಂಗ್ಲೆಂಡ್ ನ ನೆರೆಯ ಪ್ರಾಂತ್ಯಗಳಲ್ಲಾದಂತೆ ಸೋಂಕಿನ ಸಂಖ್ಯೆ ಹೆಚ್ಚುವ ಸಾಧ್ಯತೆಯೂ ಇರುತ್ತದೆ.

ಶಾಲೆಗಳು ಮತ್ತೆ ಆರಂಭಗೊಳ್ಳುವ ವಾತಾವರಣ ನಿರ್ಮಾಣ ಆಗಿರುವುದು ಕೊರೊನ ನಿಭಾಯಿಸುವಿಕೆಯ ಮಹತ್ತರ ಮೈಲಿಗಲ್ಲಾದರೂ, ಬಹುತೇಕ ಮಕ್ಕಳಿಗೂ ಹೆತ್ತವರಿಗೂ ಈ ನಡೆ ಸ್ವಾಗತಾರ್ಹ ಎನಿಸಿದರೂ, ಶಾಲೆಗಳನ್ನು ಕ್ಷೇಮವಾಗಿ ನಡೆಸಿಕೊಂಡು ಹೋಗುವುದು ಆಯಾ ಶಾಲೆಯ ಜವಾಬ್ದಾರಿ ಹೊತ್ತವರಿಗೆ ಸೂಕ್ಷ್ಮವಾದ ನಾಜೂಕಿನ ಕೆಲಸವಾಗಿದೆ.

ಇನ್ನು, ಶಾಲೆಗಳು ತೆರೆದ ಕಾರಣಕ್ಕೇ ಸೋಂಕಿನ ಸಂಖ್ಯೆ ಪುನಃ ಹೆಚ್ಚಲಿರುವುದು, ಹಾಗೆ ಉದ್ಭವಿಸಲಿರುವ ಪರಿಸ್ಥಿತಿಯನ್ನು ಸೂಕ್ತವಾಗಿ ನಿರ್ವಹಿಸಬೇಕಾಗಿರುವುದು ಸರಕಾರ ಹಾಗು ಆರೋಗ್ಯ ಸಂಬಂಧಿ ವ್ಯವಸ್ಥೆಗಳು ಎದುರಿಸಲಿರುವ ಹೊಸ ಸವಾಲುಗಳಾಗಿವೆ. ಮತ್ತೆ ಈಗಷ್ಟೇ ಪುನಃರಾರಂಭದಲ್ಲಿ ಪಾಲ್ಗೊಳ್ಳುತ್ತಿರುವ ಮಕ್ಕಳ ಮಟ್ಟಿಗೆ ಶಾಲೆಯ ತುಂಬೆಲ್ಲ ಅಪರಿಚಿತ ವಿಚಿತ್ರ ಅನುಭೂತಿಗಳು ಮತ್ತು ವಿನೂತನ ಘಳಿಗೆಗಳು ಎದುರಾಗುತ್ತಿವೆ.