ನಿವೇದಿತಾ ಮನೆ ಮನೆಯ ಬಾಗಿಲು ತಟ್ಟಿ ಮಹಿಳೆಯರನ್ನು ಶಿಕ್ಷಣ ಪಡೆಯುವಂತೆ ಪುಸಲಾಯಿಸಿದವರು. ಸಮಾಜದ ಮಹತ್ವಪೂರ್ಣ ಭಾಗವಾಗಿರುವ ಮಹಿಳೆಯರು ಕೂಡ ವಿದ್ಯಾಭ್ಯಾಸ ಪಡೆದಾಗ ಮಾತ್ರ ಇಡೀ ಸಮಾಜ ಮುನ್ನಡೆಯಲು ಸಾಧ್ಯ ಎಂದು ನಂಬಿದ್ದವರು. ಅಂದಿನ ಸಾಂಪ್ರದಾಯಿಕ ಸಮಾಜದ ಪ್ರತಿರೋಧ ಸಹಜವಾಗಿಯೇ ಇತ್ತು. ಸ್ನೇಹಿತರಾಗಿದ್ದ ಸುಪ್ರಸಿದ್ಧ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಹಾಗು ಪತ್ನಿ ಅಬಲ ಬೋಸ್ ಜೊತೆ ತಮ್ಮ ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದರು, ಅವರ ಸಂಶೋಧನೆಗಳಿಗೆ ಸ್ಫೂರ್ತಿ ನೀಡುತ್ತಿದ್ದರು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಸಮಾಜ ಸುಧಾರಕಿಯಾಗಿ ಗುರುತಿಸಿಕೊಂಡಿದ್ದ ಸಹೋದರಿ ನಿವೇದಿತಾರ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

ಭಾರತಕ್ಕೆ ಸ್ವಾತಂತ್ಯ್ರ ಬಂದು 70 ವರ್ಷಗಳ ನಂತರ ಮತ್ತು ಆಕೆ ಹುಟ್ಟಿ 150 ವರ್ಷಗಳ ತರುವಾಯ ಲಂಡನ್‌ನ ವಿಂಬಲ್ಡನ್ ಪ್ರಾಂತ್ಯದ ಹೈ ಸ್ಟ್ರೀಟ್‌ನ “21 ಎ” ನಂಬ್ರದ ಮನೆಯ ಗೋಡೆಯ ಮೇಲೆ ಆಕೆಗೂ ಭಾರತಕ್ಕೂ ನಂಟು ಕಲ್ಪಿಸುವ ನೆನಪಿನ ನೀಲಿ ಫಲಕವನ್ನು ನೆಡಲಾಯಿತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಲಂಡನ್‌ನ ಮೇಯರ್ ಸಾದಿಕ್ ಖಾನ್ ಅನಾವರಣಗೊಳಿಸಿದ ಫಲಕ, ಭಾರತ ಮತ್ತು ಬಂಗಾಳದ ಜೊತೆ ನೇರ ಗಾಢ ಸಂಬಂಧ ಇರಿಸಿಕೊಂಡಿದ್ದ ಆಕೆಯನ್ನು “ಶಿಕ್ಷಣ ತಜ್ಞೆ ಮತ್ತು ಭಾರತದ ಸ್ವಾತಂತ್ಯ್ರ ಚಳವಳಿಗಾರ್ತಿ” ಎಂದು ಪರಿಚಯ ಮಾಡುತ್ತದೆ.

ಮಾರ್ಗರೆಟ್ ಎಲಿಜಿಬೆತ್ ನೋಬಲ್ ಎನ್ನುವ ಹೆಸರಿನಲ್ಲಿ ಉತ್ತರ ಐರ್ಲೆಂಡ್‌ನಲ್ಲಿ ಹುಟ್ಟಿದ ಆಕೆ ತನ್ನ ವಯಸ್ಕ ಬದುಕನ್ನು ಮಹಿಳೆಯರ ಶಿಕ್ಷಣ ಮತ್ತು ಭಾರತದ ಬಡವರಿಗೆ ಉಪಕಾರಿಯಾಗುವ ಕೆಲಸಗಳಿಗೆ ಮುಡಿಪಾಗಿಟ್ಟವರು. ಭಾರತದ ಸ್ವಾತಂತ್ಯ್ರದ ಚಳವಳಿಯಲ್ಲಿಯೂ ಭಾಗವಹಿಸಿದವರು. ಬ್ರಿಟನ್ನಿನ ಭಾರತೀಯ ಸಮುದಾಯದಲ್ಲಿ ವಿಶೇಷ ಸ್ಥಾನ ಪಡೆದಿರುವ ಮಾರ್ಗರೆಟ್‌ರ ಲಂಡನ್ ಮನೆ ವಿಕ್ಟೋರಿಯನ್ ಕಾಲದ ಮೂರು ಉಪ್ಪರಿಗೆಗಳ ಇಟ್ಟಿಗೆಯ ಮನೆ. ಆಕೆ ಶಿಕ್ಷಕಿಯಾಗಿ ಸುಧಾರಕಿಯಾಗಿ ಭಾರತ ಇಂಗ್ಲೆಂಡ್ ಫ್ರಾನ್ಸ್ ದೇಶಗಳನ್ನು ಸುತ್ತುತ್ತಿದ್ದಾಗ ಕುಟುಂಬಸ್ಥರು ಅದೇ ಮನೆಯಲ್ಲಿ ಉಳಿಯುತ್ತಿದ್ದರು.

1895ರ ನವೆಂಬರ್ ತಿಂಗಳಿನಲ್ಲಿ, ಮಾರ್ಗರೆಟ್ ನೋಬಲ್‌ಗೆ ಲಂಡನ್‌ನ ವಿಂಬಲ್ಡನ್ ಪ್ರದೇಶದ ರಸ್ಕಿನ್ ಶಾಲೆಯಲ್ಲಿ ಅಂಗನವಾಡಿ ತೆರೆದ ಕೆಲ ವರ್ಷಗಳ ನಂತರ ಸ್ವಾಮಿ ವಿವೇಕಾನಂದರ ಭೇಟಿಯ ಅವಕಾಶ ಒದಗಿ ಬಂತು. ವಿವೇಕಾನಂದರ ಏಕತ್ವ ವಾದ, ಆಧ್ಯಾತ್ಮಿಕ ಚಿಂತನೆಗಳು ಮತ್ತು ಸಮರ್ಪಣಾ ಭಾವಗಳಿಂದ ಆಕರ್ಷಿತರಾದ ಮಾರ್ಗರೆಟ್ ಲಂಡನ್‌ನಲ್ಲಿ ವೇದಾಂತ ಚಳವಳಿಯನ್ನು ಸಂಘಟಿಸಿದರು. ವಿವೇಕಾನಂದರ ಉಪನ್ಯಾಸಗಳನ್ನು ಆಯೋಜಿಸಿದರು. ವಿವೇಕಾನಂದರ ಹಿಂಬಾಲಕಿಯಾಗಿ ಅವರ ನೆರಳಿನಂತೆ ಭಾರತಕ್ಕೂ ಬಂದರು ಮತ್ತೆ ಅಲ್ಲೇ ನಿಂತರು. ಭಾರತದ ಭೇಟಿ ಮಾರ್ಗರೆಟ್‌ರ ಜೀವನದ ಮಹತ್ವದ ಮೈಲಿಗಲ್ಲಾಯಿತು. ತಮ್ಮ ಇಡೀ ಜೀವನವನ್ನು ಭಾರತ ಮತ್ತು ಭಾರತೀಯರಿಗೆ ಮುಡಿಪಾಗಿರಿಸಿದರು. ತಮ್ಮ ಶಿಷ್ಯೆಯ ಸಮರ್ಪಣಾ ಭಾವದ ಕುರಿತು ಸ್ವತಃ ವಿವೇಕಾನಂದರೇ “ಭಾರತದ ಸೇವೆಯಲ್ಲಿ ನಿನಗೆ ಉಜ್ವಲ ಭವಿಷ್ಯ ಇದೆ. ಈ ಕೆಲಸಕ್ಕೆ ಬೇಕಾಗಿದ್ದುದು ಒಬ್ಬ ಮಹಿಳೆ; ಒಬ್ಬ ಸಿಂಹಿಣಿ. ಭಾರತಕ್ಕೋಸಕರ ಇಲ್ಲಿನ ಮಹಿಳೆಯರಿಗೋಸ್ಕರ ಮುಡಿಪಾದವಳು” ಎಂದಿದ್ದರು. ಮತ್ತೆ ಅವರೇ ಮಾರ್ಗರೆಟ್ ನೊಬೆಲ್‌ಗೆ “ಸಹೋದರಿ ನಿವೇದಿತಾ” ಎಂದು ನಾಮಕರಣ ಮಾಡಿದರು.”ನಿವೇದಿತಾ” ಹೆಸರನ್ನು ಆಂಗ್ಲರು “ದಿ ಡೆಡಿಕೇಟೆಡ್” ಎಂದು ಇಂಗ್ಲಿಷ್‌ಗೆ ಅನುವಾದಿಸುತ್ತಾರೆ, “ಸಮರ್ಪಿಸಿಕೊಂಡವಳು” ಎಂದು. ಗುರುವಿನಿಂದ ಸಿಂಹಿಣಿ ಎಂದು ಕರೆಸಿಕೊಂಡ ನಿವೇದಿತಾ ಪೂರ್ವಾಶ್ರಮದಲ್ಲಿ ಮಾಸ್ತರಣಿ ಆಗಿದ್ದವರು.

1867ರ ಅಕ್ಟೋಬರ್ 28ರಂದು ಹುಟ್ಟಿದ ಮಾರ್ಗರೆಟ್ ನೋಬಲ್, ಮೂರು ಮಕ್ಕಳಿರುವ ಮನೆಯ ಹಿರಿಯ ಮಗು. ಬಟ್ಟೆ ವ್ಯಾಪಾರಿಯಾಗಿದ್ದ ತಂದೆ ಚರ್ಚಿನ ತರಬೇತಿಗೆಂದು ಇಂಗ್ಲೆಂಡ್‌ಗೆ ಆಗಾಗ ಹೋಗುತ್ತಿದ್ದಾಗ ಐರ್ಲೆಂಡ್‌ನಲ್ಲಿಯೇ ಇರುವ ಅಜ್ಜ ಅಜ್ಜಿಯರ ಜೊತೆಗೆ ಮಾರ್ಗರೆಟ್ ಇರಬೇಕಾಗುತ್ತಿತ್ತು. ಅಜ್ಜ ಅಜ್ಜಿಯರು ಐರ್ಲೆಂಡ್‌ನ “ಸ್ವರಾಜ್ಯ” ಅಥವಾ ಹೋಮ್ ರೂಲ್ ಚಳವಳಿಯ ಕಡು ಸಮರ್ಥಕರಾಗಿದ್ದವರು. ಆ ಯೋಚನೆಗಳ ಪ್ರಭಾವ ಮೊಮ್ಮಗಳ ಮೇಲೆ ಸಹಜವಾಗಿ ಆಗುತ್ತಿತ್ತು. 34 ವರ್ಷದ ತಂದೆ ಹಠಾತ್ ಆಗಿ ತೀರಿಕೊಂಡದ್ದು ನೋಬಲ್ ಮತ್ತು ತಂಗಿ ಇಂಗ್ಲೆಂಡ್‌ನಲ್ಲಿರುವ ಅನಾಥಾಲಯವೊಂದನ್ನು ಸೇರುವಂತಾಯಿತು. ಅಲ್ಲಿರುವಾಗಲೇ ಶಾಲಾ ಶಿಕ್ಷಕಿಯಾಗುವ ತರಬೇತಿ ಪಡೆದು 1884ರಲ್ಲಿ ಹದಿನೇಳರ ವಯಸ್ಸಿನಲ್ಲಿ ಪಾಠ ಹೇಳುವ ಮೂಲಕ ಉತ್ತರ ಇಂಗ್ಲೆಂಡ್‌ನಲ್ಲಿ ಮೊದಲ ವೃತ್ತಿಯನ್ನು ಆರಂಭಿಸಿದರು.

1886ರಲ್ಲಿ ಇಂಗ್ಲೆಂಡ್‌ನ ರಗ್ಬಿ ನಗರದಲ್ಲಿ ಮತ್ತೆ ರೆಕ್ಸಮ್ ಎನ್ನುವ ಗಣಿಗಾರಿಕೆಯ ಊರಿನ ಅನಾಥಾಲಯದಲ್ಲಿ ಪಾಠ ಹೇಳುತ್ತಿದುದು, ಸಾಮಾಜಿಕ ಸಮಸ್ಯೆ ಮತ್ತು ಸುಧಾರಣೆಗಳ ಬಗೆಗಿನ ಅರಿವನ್ನು ಕುತೂಹಲವನ್ನು ಹೆಚ್ಚಿಸಿತು. 1891ರಲ್ಲಿ ಮಾರ್ಗರೆಟ್‌ಗೆ ವಿಂಬಲ್ಡನ್‌ನ ಹೊಸ ಶಾಲೆಗೆ ಸಹ ಮುಖ್ಯಶಿಕ್ಷಕಿ ಆಗುವ ಕರೆ ಬಂತು. ಮುಂದೆ ಕೆಲ ವರ್ಷಗಳ ನಂತರ ತನ್ನದೇ ಅಂಗನವಾಡಿಯನ್ನೂ ತೆರೆದರು. ನಂತರ ರಸ್ಕಿನ್ ಶಾಲೆಯನ್ನು ಆರಂಭಿಸಿದರು. ಇಲ್ಲಿ ವಯಸ್ಕರಿಗೂ ಶಿಕ್ಷಣ ದೊರೆಯುತ್ತಿತ್ತು, ಮುಖ್ಯವಾಗಿ ಶಿಕ್ಷಣದ ಹೊಸ ವಿಧಾನಗಳನ್ನು ಕಲಿಯುವ ಆಸಕ್ತರಿಗೆ. 1895ರಲ್ಲಿ ಮಾರ್ಗರೆಟ್ ಶಿಕ್ಷಕ ಶಿಕ್ಷಕಿಯರ ಜೊತೆಗೆ ಹೆತ್ತವರೂ ಸೇರಿ ಮಾತನಾಡುವ “ಸೇಸಮೆ ಕ್ಲಬ್” ಅನ್ನು ಇನ್ನೂ ಕೆಲ ಸಮಾನ ಮನಸ್ಕರ ಜೊತೆಗೂಡಿ ಆರಂಭಿಸಿದರು. “ಹೊಸ ಶಿಕ್ಷಣ” ಇಲ್ಲಿಯೂ ಚರ್ಚೆ ಚಿಂತನೆಯ ಭಾಗವಾಯಿತು. ಬೋಧನೆಯ ಹೊಸ ವಿಧಾನ ತಂತ್ರಗಳು ಬದುಕಿನುದ್ದಕ್ಕೂ ಮಾರ್ಗರೆಟ್ ಜೊತೆಯಲ್ಲಿ ಇದ್ದವು. “ಸೇಸಮೆ ಕ್ಲಬ್” ಮುಖಾಂತರ ಆಯೋಜಿಸಲ್ಪಡುತ್ತಿದ್ದ ಉಪನ್ಯಾಸಗಳಲ್ಲಿ ಬರ್ನಾರ್ಡ್ ಷಾ ಮತ್ತು ಥಾಮಸ್ ಹಕ್ಸ್ಲಿಯವರಂತಹ ಚಿಂತಕರ ಸಂಪರ್ಕ ಆಗಿತ್ತು.

ವಿವೇಕಾನಂದರ ಏಕತ್ವ ವಾದ, ಆಧ್ಯಾತ್ಮಿಕ ಚಿಂತನೆಗಳು ಮತ್ತು ಸಮರ್ಪಣಾ ಭಾವಗಳಿಂದ ಆಕರ್ಷಿತರಾದ ಮಾರ್ಗರೆಟ್ ಲಂಡನ್‌ನಲ್ಲಿ ವೇದಾಂತ ಚಳವಳಿಯನ್ನು ಸಂಘಟಿಸಿದರು. ವಿವೇಕಾನಂದರ ಉಪನ್ಯಾಸಗಳನ್ನು ಆಯೋಜಿಸಿದರು. ವಿವೇಕಾನಂದರ ಹಿಂಬಾಲಕಿಯಾಗಿ ಅವರ ನೆರಳಿನಂತೆ ಭಾರತಕ್ಕೂ ಬಂದರು ಮತ್ತೆ ಅಲ್ಲೇ ನಿಂತರು. ಭಾರತದ ಭೇಟಿ ಮಾರ್ಗರೆಟ್‌ರ ಜೀವನದ ಮಹತ್ವದ ಮೈಲಿಗಲ್ಲಾಯಿತು.

ಅದೇ ವರ್ಷದ ನವೆಂಬರ್‌ನಲ್ಲಿ ವಿವೇಕಾನಂದರನ್ನು ಲಂಡನ್‌ನಲ್ಲಿ ಭೇಟಿಯಾಗಿದ್ದು, ಅವರ ಚಿಂತನೆಗಳ ಪ್ರಭಾವದಲ್ಲಿ ನಿವೇದಿತಾ ಆಗಿ ಮರು ಹುಟ್ಟು ಪಡೆದದ್ದು ಇದೀಗ ನೀಲಿ ಫಲಕ ನೆನಪಿಸಿಕೊಡುವ ಇತಿಹಾಸ. ನಿವೇದಿತಾರು ಭಾರತಕ್ಕೆ ತೆರಳಿದ ಮೇಲೆ, ಅಂದಿನ ಕಲ್ಕತ್ತದಲ್ಲಿ ಹೆಣ್ಣು ಮಕ್ಕಳ ಶಾಲೆಯನ್ನು ತೆರೆದರು. ಜೊತೆಗೆ ರಾಮಕೃಷ್ಣ ಮಿಷನ್ 1889ರಲ್ಲಿ ಸಂಘಟಿಸಿದ ಪ್ಲೇಗ್ ಬಾಧಿತರ ಶುಶ್ರೂಷೆಯಲ್ಲಿ ಭಾಗವಹಿಸುತ್ತಿದ್ದರು. ಹಿಂದೂ ಸಂಸ್ಕೃತಿಯ ಬಗ್ಗೆ ಉಪನ್ಯಾಸ ನೀಡುತ್ತಿದ್ದರು. 1900ರಲ್ಲಿ ವಿವೇಕಾನಂದರು ಪಾಶ್ಚಿಮಾತ್ಯ ದೇಶಗಳನ್ನು ಭೇಟಿಯಾಗುವಾಗ ಸಹೋದರಿ ನಿವೇದಿತಾ ಕೂಡ ಜೊತೆಗಿದ್ದರು. ತಮ್ಮ ಶಾಲೆಯನ್ನು ನಡೆಸಲು ಬೇಕಾಗುವ ಹಣ, ವೈಜ್ಞಾನಿಕ ಅನ್ವೇಷಣೆಗಳಿಗೆ ದೇಣಿಗೆ ಸಂಗ್ರಹಿಸುವುದು ಕೂಡ ಈ ಭೇಟಿಯ ಉದ್ದೇಶವಾಗಿತ್ತು. ನಿಧಾನ ಸಂಚಾರದ ದೀರ್ಘ ಯಾನಗಳು ಅವರ ಓದು ಬರವಣಿಗೆಗಳಿಗೆ ಸಹಕಾರಿಯಾಗಿದ್ದವು. 1902ರಲ್ಲಿ ಭಾರತಕ್ಕೆ ಮರಳಿದ ಕೆಲವೇ ತಿಂಗಳುಗಳಲ್ಲಿ ವಿವೇಕಾನಂದರು ನಿಧನರಾದರು. ರಾಮಕೃಷ್ಣ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದನ್ನು ನಿವೇದಿತಾ ಮುಂದುವರಿಸಿದರು. ರಾಮಕೃಷ್ಣ ಮಿಷನ್ ಯಾವುದೇ ರಾಜಕೀಯ ಭಾಗವಹಿಸುವಿಕೆಯನ್ನು ನಿರ್ಬಂಧಿಸಿದ್ದ ಕಾರಣ ಸ್ವಾತಂತ್ಯ್ರ ಚಳವಳಿಯಲ್ಲಿ ನೇರವಾಗಿ ಪಾಲ್ಗೊಳ್ಳುವುದು ನಿವೇದಿತಾರಿಗೆ ಸಾಧ್ಯ ಆಗಿರಲಿಲ್ಲ. ಸಾಮಾಜಿಕ ತಾರತಮ್ಯಗಳನ್ನು ವಿವಾಹಿತ ಮಹಿಳೆಯರಿಗೆ ತರಗತಿಗಳನ್ನು ಆರಂಭಿಸುವ ಮೂಲಕ ತಮ್ಮ ಶಾಲೆಗೆ ಹೊಸ ಜೀವ ನೀಡಿದರು. ಸಾಂಪ್ರದಾಯಿಕ ಭಾರತೀಯ ಕಲೆ ವಾಸ್ತುಶಿಲ್ಪಗಳಿಗೆ ಶಿಕ್ಷಣದಲ್ಲಿ ಪ್ರೋತ್ಸಾಹ ನೀಡಿದರು. ಭಾರತೀಯ ಪುರಾಣ ಕತೆಗಳನ್ನು ಸಂಗ್ರಹಿಸಿದರು. ಭಾರತದ ರಾಷ್ಟ್ರದ್ವಜಕ್ಕೆ ವಿನ್ಯಾಸವನ್ನು ಕಲ್ಪಿಸಿದ ಕೆಲ ಮೊದಲಿಗರಲ್ಲಿ ನಿವೇದಿತಾರೂ ಒಬ್ಬರು. 1906ರ ರಾಷ್ಟ್ರೀಯ ಕಾಂಗ್ರೆಸ್ ಸಮ್ಮೇಳನದಲ್ಲಿ ಅವರು ವಿನ್ಯಾಸದ ಭಾರತೀಯ ಬಾವುಟವನ್ನು ಪ್ರದರ್ಶಿಸಲಾಗಿತ್ತು.

ಸ್ವಾತಂತ್ಯ್ರಪೂರ್ವ ಭಾರತೀಯ ಸಮಾಜದಲ್ಲಿ ಮಹಿಳೆಯರ ಶಿಕ್ಷಣದ ಬಗ್ಗೆ ಅಸಡ್ಡೆಯಲ್ಲಿತ್ತು. ಈಶ್ವರ ಚಂದ್ರ ವಿದ್ಯಾಸಾಗರರಂತಹ ಮಹಾನ್ ಚಿಂತಕರ ಜೊತೆಗೆ ಸೇರಿ ಸಹೋದರಿ ನಿವೇದಿತಾರೂ ಮಹಿಳಾ ಶಿಕ್ಷಣಕ್ಕೆ ಚಾಲನೆ ನೀಡಿದರು. ನಿವೇದಿತಾ ಮನೆ ಮನೆಯ ಬಾಗಿಲು ತಟ್ಟಿ ಮಹಿಳೆಯರನ್ನು ಶಿಕ್ಷಣ ಪಡೆಯುವಂತೆ ಪುಸಲಾಯಿಸಿದವರು. ಸಮಾಜದ ಮಹತ್ವಪೂರ್ಣ ಭಾಗವಾಗಿರುವ ಮಹಿಳೆಯರು ಕೂಡ ವಿದ್ಯಾಭ್ಯಾಸ ಪಡೆದಾಗ ಮಾತ್ರ ಇಡೀ ಸಮಾಜ ಮುನ್ನಡೆಯಲು ಸಾಧ್ಯ ಎಂದು ನಂಬಿದ್ದವರು. ಅಂದಿನ ಸಾಂಪ್ರದಾಯಿಕ ಸಮಾಜದ ಪ್ರತಿರೋಧ ಸಹಜವಾಗಿಯೇ ಇತ್ತು. ಸ್ನೇಹಿತರಾಗಿದ್ದ ಸುಪ್ರಸಿದ್ಧ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಹಾಗು ಪತ್ನಿ ಅಬಲ ಬೋಸ್ ಜೊತೆ ತಮ್ಮ ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದರು, ಅವರ ಸಂಶೋಧನೆಗಳಿಗೆ ಸ್ಫೂರ್ತಿ ನೀಡುತ್ತಿದ್ದರು. ಬ್ರಿಟಿಷರು ನಿರಂತರವಾಗಿ ಜಗದೀಶ್ ಚಂದ್ರ ಬೋಸರನ್ನು ಗಮನಿಸದೇ ಮೂಲೆಗುಂಪಾಗಿಸುತ್ತಿದ್ದಾಗ ನಿವೇದಿತಾ ಮುಕ್ತವಾಗಿ ಪ್ರತಿಭಟಿಸಿದರು. 1901ರಲ್ಲಿ ವಿಜ್ಞಾನಿ ಬೋಸರು ಯುರೋಪ್ ತಿರುಗಾಟದಲ್ಲಿರುವಾಗ ಲಂಡನ್‌ನಲ್ಲಿರುವ ನಿವೇದಿತಾರ ಮನೆಗೆ ಭೇಟಿ ನೀಡಿದ್ದರು. ನಿವೇದಿತಾ ಬೋಸ್‌ರ ಸಂಶೋಧನೆಗಳಿಗೆ ಹಣ ಸಂಗ್ರಹಿಸುವಲ್ಲಿ ನೆರವಾಗುತ್ತಿದ್ದರು.

ಐರ್ಲೆಂಡ್‌ನ ಹೋಮ್ ರೂಲ್ ಚಳವಳಿಯ ಪ್ರಭಾವದಲ್ಲಿ ಹುಟ್ಟಿ ಬಾಲ್ಯವನ್ನು ಕಳೆದು, ಇಂಗ್ಲೆಂಡ್‌ನಲ್ಲಿ ಹೊಸ ಚಿಂತನೆಯ ಶಿಕ್ಷಕಿಯಾಗಿ ಬೆಳೆದು ವಿವೇಕಾನಂದರ ಮೂಲಕ ಭಾರತೀಯ ಆಧ್ಯಾತ್ಮ ಸೇವೆ ಸ್ವಾತಂತ್ಯ್ರಗಳ ಕಡೆ ಸೆಳೆಯಲ್ಪಟ್ಟ ಸುಧಾರಕಿ ಸಹೋದರಿ ಭಾರತವನ್ನು ತನ್ನದೇ ನೆಲದಂತೆ ಪ್ರೀತಿಸಿ ಅನುಭವಿಸಿದವರು. 1902 ಮತ್ತು 1906ರ ನಡುವೆ ಬ್ರಿಟಿಷ್ ಅಧಿಕಾರಶಾಹಿಯನ್ನು ಪ್ರತಿರೋಧಿಸುವ ರಾಷ್ಟ್ರೀಯವಾದಿಯಾದರು. ಬಂಗಾಳವನ್ನು ಆವರಿಸುತ್ತಿದ್ದ ಬರಗಾಲ ಪ್ರವಾಹ ರೋಗ ಸೋಂಕುಗಳ ವಿಷಮ ಘಳಿಗೆಗಳಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ದುಡಿದವರು. 1906ರಲ್ಲಿ ಬರಗಾಲ ಪೀಡಿತ ಮತ್ತು ಪ್ರವಾಹ ಪೀಡಿತ ಪೂರ್ವ ಬಂಗಾಳದಲ್ಲಿ ಸೇವೆ ಮಾಡುತ್ತಿದ್ದಾಗ ಸೋಂಕಿದ ಮಲೇರಿಯಾ ಮತ್ತು ಮೆನಿಂಜೈಟಿಸ್ ಪರಿಣಾಮದಿಂದ ದುರ್ಬಲರಾಗಿದ್ದ ನಿವೇದಿತಾ 1911 ರಲ್ಲಿ 43ರ ವಯಸ್ಸಿನಲ್ಲಿ ಡಾರ್ಜಿಲಿಂಗ್‌ನಲ್ಲಿ ನಿಧನ ಹೊಂದಿದರು. ಅವರ ಚಿತಾಭಸ್ಮವನ್ನು ಇಂಗ್ಲೆಂಡ್‌ನ ಡೆವನ್ ಪ್ರಾಂತ್ಯದಲ್ಲಿರುವ ಕೌಟುಂಬಿಕರ ಸಮಾಧಿಯ ಹತ್ತಿರದಲ್ಲಿ ಹೂಳಲಾಗಿದೆ. ಹುಟ್ಟಿನಿಂದ ಮಾರ್ಗರೆಟ್ ನೋಬಲ್ ಆದರೂ ಲಂಡನ್‌ನಲ್ಲಿ ಹೊಳೆಯುತ್ತಿರುವ ನೀಲಿ ಫಲಕ “ಸಹೋದರಿ ನಿವೇದಿತಾ” ಎಂದೇ ಸ್ಮರಿಸುತ್ತದೆ. ವಿವೇಕಾನಂದರು ಬಯಸಿದಂತೆ ಭಾರತದ ಮಹಿಳೆಯರಿಗೆ ದುರ್ಬಲರಿಗೆ ತನ್ನನ್ನು ಅರ್ಪಿಸಿಕೊಂಡ ಸಹೋದರಿಯ ಕತೆಯನ್ನು ನಿವೇದಿಸುತ್ತದೆ. ಅವರದು ಸಂಕೀರ್ಣ ವ್ಯಕ್ತಿತ್ವದ ಉತ್ಸಾಹಿ ಬಹುತೇಕ ಪ್ರೀತಿಪಾತ್ರಳಾದ ಮತ್ತೆ ಕೆಲವೊಮ್ಮೆ ವಿವಾದಾತ್ಮಕ ಎನಿಸಿದ ಕುತೂಹಲದ ವ್ಯಕ್ತಿತ್ವ ಎಂದು ಇತಿಹಾಸಕಾರರು ವರ್ಣಿಸಿದ್ದಿದೆ. ತಮ್ಮ ಸ್ನೇಹಿತರಿಗೆ ಬರೆದಿದ್ದ ಸಾವಿರಾರು ಕಾಗದಗಳು ದೀರ್ಘವಲ್ಲದ ಆದರೆ ಮಹತ್ವಪೂರ್ಣವಾದ ಬದುಕಿನ ಒಳಪುಟಗಳಾಗಿ ಇತಿಹಾಸಕಾರರಿಗೆ ದೊರೆತಿವೆ.

2017ರಲ್ಲಿ ನೀಲಿ ಫಲಕವನ್ನು ನೆಟ್ಟ ಮೇಲೆ, ಲಂಡನ್ ಮೇಯರ್ ಸಾದಿಕ್ ಖಾನ್ “ತಮ್ಮನ್ನು ಸೇವಾ ಬದುಕಿಗೆ ಸಮರ್ಪಿಸಿಕೊಂಡು, ಭಾರತದಲ್ಲಿ ಮಹಿಳೆಯರ ಶಿಕ್ಷಣ, ಸ್ವಾತಂತ್ಯ್ರ ಚಳವಳಿಗಳಲ್ಲಿ ಅವಿಶ್ರಾಂತವಾಗಿ ಭಾಗವಹಿಸಿದರು. ಇದು ಸಹೋದರಿ ನಿವೇದಿತಾರಿಗೆ ಲಂಡನ್‌ನ ಮೊದಲ ಸಾರ್ವಜನಿಕ ಸನ್ಮಾನ. ಈ ಮನೆ ಇನ್ನು ಲಂಡನ್‌ನ ಪ್ರೇಕ್ಷಣೀಯ ತಾಣ ಆಗುವುದರಲ್ಲಿ ಸಂಶಯ ಇಲ್ಲ” ಎಂದಿದ್ದರು.

ಲಂಡನ್‌ನ ನೀಲಿ ಫಲಕಗಳ ಉಸ್ತುವಾರಿ ಹೊಂದಿರುವ ಇಂಗ್ಲೆಂಡ್ ಪಾರಂಪರಿಕ ಸಂಸ್ಥೆಯ ನಿರ್ದೇಶಕಿ ಅನ್ನಾ ಇವಿಸ್ “ಸಹೋದರಿ ನಿವೇದಿತಾ ಭಾರತೀಯ ಮಹಿಳೆಯರ ಶಿಕ್ಷಣ ಮತ್ತು ಬಡವರ ಸ್ಥಿತಿಗತಿಗಳನ್ನು ಸುಧಾರಿಸಲು ಶ್ರಮಿಸಿದರು. ಬ್ರಿಟಿಷ್ ಕಾಲದ ಭಾರತೀಯ ಬದುಕಿನ ಪ್ರತ್ಯಕ್ಷ ಸಾಕ್ಷಿ ಆಗಿದ್ದರು. ಬ್ರಿಟಿಷ್ ಚಕ್ರಾಧಿಪತ್ಯದ ನಿರ್ಭೀತ ಕಟು ವಿಮರ್ಶಕಿಯಾಗಿದ್ದರು. ಅವರ ಅಭಿಪ್ರಾಯಗಳು ಆ ಕಾಲದಲ್ಲಿ ಕೆಲವರಿಗೆ ಪ್ರಿಯ ಆಗಿರದಿದ್ದರೂ ಭಾರತದ ಸ್ವರಾಜ್ಯದ ಪರ ತನ್ನ ಉದ್ದೇಶಗಳ ಕುರಿತಾಗಿ ನಿರ್ಭೀತವಾಗಿ ಕೆಲಸ ಮಾಡಿದ್ದರು. ಸಹೋದರಿ ಭಾರತದ ಸ್ಮರಣೆಯಲ್ಲಿ ಎಂದೆಂದಿಗೂ ಇರುವವರಾದರೂ ಬ್ರಿಟನ್ನಿನಲ್ಲಿ ಅಷ್ಟು ಜನಪ್ರಿಯರಾಗಿದ್ದವರಲ್ಲ. ಇಂದು ನಾವು ಕೂಡಿಸಿದ ನೀಲಿ ಫಲಕ ಅವರ ತಾಯ್ನಾಡಾದ ಯುನೈಟೆಡ್ ಕಿಂಗ್ಡಮ್‌ನಲ್ಲೂ ಅವರ ಗುರುತನ್ನು ಅಮರವಾಗಿಸಲಿದೆ” ಎಂದಿದ್ದರು.