ಮ್ಯಾನೇಜ್ಮೆಂಟ್ ಕೋಟಾದಿಂದ ಬಂದವರು ಕೆಲಸ ಮಾಡುವಾಗ ಒದ್ದಾಡುವುದನ್ನು ಕಣ್ಣಾರೆ ಕಂಡಿದ್ದೇನೆ. ಸಂಬಂಧಿಕರ ಸ್ನೇಹಿತರ ಸಂಪರ್ಕ ಬಳಸಿ ಕಂಪನಿ ಸೇರಿಕೊಂಡುಬಿಡುತ್ತಾರೆ. ಹಂಗೂ ಹಿಂಗೂ ಕಾಲ ತಳ್ಳಿ ಒಂದು ಮ್ಯಾನೇಜ್ಮೆಂಟು ಕೋರ್ಸು ಮುಗಿಸಿ ಮ್ಯಾನೇಜ್ಮೆಂಟ್ ವಲಯಕ್ಕೆ ಹಾರುತ್ತಾರೆ. ಇಂಗ್ಲೀಷು ಮತ್ತು ಎಲೈಟಿಸ್ಟ್ ಅಪ್ಪಿಯರೆನ್ಸು – ಅಲ್ಲಿ ಬೇಕಾದ ಬಹುಮುಖ್ಯವಾದ ಅಸ್ತ್ರಗಳು. ಕೋಟಿಯಷ್ಟು ಹಣ ಸುರಿದು ಡಿಗ್ರಿ ಪಡೆದ ಇವರ ಪ್ರಾಥಮಿಕ ಶಿಕ್ಷಣವು ಇಂಟರ್ ನ್ಯಾಶನಲ್ ಕಾನ್ವೆಂಟುಗಳಲ್ಲಾಗಿದ್ದು ಸಹಜವಾಗಿಯೆ ಅವುಗಳನ್ನು ಒಲಿಸಿಕೊಂಡು ಬಂದಿರುತ್ತಾರೆ. ಮತ್ತು ಈ ಬಗೆಯ ಕುತಂತ್ರಕ್ಕೆ ಯಶಸ್ಸಿನ ಕೊರಳ ಹಾರ ಬೇರೆ: ಬುದ್ದಿವಂತರು ದುಡಿಯುತ್ತಾರೆ, ಅತಿ ಬುದ್ದಿವಂತರು ಬುದ್ದಿವಂತರಿಂದ ದುಡಿಸುತ್ತಾರೆ ಎಂದು.
ಮಧುಸೂದನ್ ವೈ.ಎನ್ ಬರೆಯುವ ಅಂಕಣ

 

ಯಾವುದೋ ಖಾಯಿಲೆ. ಆಸ್ಪತ್ರೆಗೆ ಹೋಗಬೇಕು. ಯಾವ ಆಸ್ಪತ್ರೆ? ಆರ್ಥಿಕವಾಗಿ ನೀವು ಮಧ್ಯಮ ಅಥವಾ ಮೇಲ್ವರ್ಗದವರಾಗಿದ್ದರೆ ಖಂಡಿತ ನಿಮ್ಮ ತಲೆಯಲ್ಲಿ ಸರ್ಕಾರಿ ಆಸ್ಪತ್ರೆ ಸುಳಿಯುವುದಿಲ್ಲ. ಕಾರಣ ಅಲ್ಲಿನ ಅವ್ಯವಸ್ಥೆ. ಸರ್ಕಾರಿ ಗುಣಮಟ್ಟದ ಶುಶ್ರೂಷೆಯ ಮೇಲೆ ಸಾಮಾನ್ಯವಾಗಿ ಎಲ್ಲರಿಗಿದ್ದಂತೆ ನಿಮಗೂ ತಾತ್ಸಾರ. ಹಾಗಾಗಿ ತೀರ ಹಣವಂತರಾಗಿದ್ದರೆ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೋ, ಮಧ್ಯಮದವರಾಗಿದ್ದರೆ ನರ್ಸಿಂಗ್ ಹೋಂಗಳಿಗೋ ಹೋಗುತ್ತೀರಿ.

ಅಲ್ಲಿ ಇರುವುದರಲ್ಲಿ ಉತ್ತಮ ವ್ಯವಸ್ಥೆ. ಡಾಕ್ಟರು ಎದುರಾಗುತ್ತಾರೆ, ಖಾಯಿಲೆ ಬಗ್ಗೆ ವಿಚಾರಿಸುತ್ತಾರೆ, ಒಂದಷ್ಟು ಪರೀಕ್ಷೆಗಳನ್ನು ಬರೆಯುತ್ತಾರೆ, ಅಕಸ್ಮಾತ್ ಇದ್ದಕಿದ್ದಂಗೆ ಆಪರೇಷನ್ ಗೀಪರೇಷನ್ ಎಂದುಬಿಟ್ಟರೊ, ನಿಮಗೆ ದಿಗಿಲಾಗಿಬಿಡುತ್ತದೆ. ನನಗಂತೂ ಹಾಗೆ ಆಗಿದ್ದಿದೆ, ಈತ ನಿಜಕ್ಕೂ ಶ್ರದ್ಧೆಯಿಂದ ಓದಿ ವೈದ್ಯನಾಗಿರುವನೋ? ಅಥವಾ ಮ್ಯಾನೇಜ್ಮೆಂಟು ಕೋಟಾದಡಿ ಎಂಬಿಬಿಎಸ್ ಮಾಡಿರುವನೋ ಎಂದು. ನಾನು ಭೇಟಿಯಾಗಿರುವ ಬಹುತೇಕ ಯುವ ವೈದ್ಯರುಗಳು ನಾವೇನೋ ಹೇಳಿದರೆ ಅವರೇನೋ ಅರ್ಥಮಾಡಿಕೊಂಡು ಚಿಕಿತ್ಸೆಯನ್ನು ಇನ್ನೆಲ್ಲಿಂದಲೋ ಶುರು ಮಾಡುತ್ತಾರೆ. ಏನಾದರೂ ಕೇಳಿದರೆ ಬೆಬ್ಬೆಬ್ಬೆ ಅಂತಿರುತ್ತಾರೆ. ನನಗೇನೋ ಇವರೆಲ್ಲ ತಿಣುಕಿ ಪಣುಕಿ ಲ್ಯಾಬ್ ಅಟೆಂಡರಿಗೆ ಜ್ಯೂಸ್ ಕುಡಿಸಿ ಪರೀಕ್ಷೆ ಪಾಸು ಮಾಡಿಸಿಕೊಂಡು ಡಿಗ್ರಿ ಪಡೆದಿರುವ ಮ್ಯಾನೇಜ್ಮೆಂಟ್ ಕೋಟಾದವರು ಎಂಬ ಬಲವಾದ ಗುಮಾನಿ.

ಕಾರಣ ಇಷ್ಟೇ. ಕರ್ನಾಟಕದಲ್ಲಿ ಲೆಕ್ಕಕ್ಕೆ ಒಟ್ಟು ಐದು ಸಾವಿರ ಮೆಡಿಕಲ್ ಸೀಟು ಇದ್ದಾವೆ ಎಂದಿಟ್ಟುಕೊಳ್ಳೋಣ,(ಅಂಕಿಅಂಶದ ಪ್ರಕಾರ ಈಗ ಎಂಟು ಸಾವಿರ ಚಿಲ್ಲರೆ ಇರಬೇಕು). ಅದರಲ್ಲಿ ಒಂದು ಸಾವಿರ ಸರ್ಕಾರಿ ಸೀಟುಗಳು. ನಾಲಕ್ಕು ಸಾವಿರ ಪ್ರೈವೇಟು ಕಾಲೇಜುಗಳಿಗೆ ಸೇರಿದ್ದು. ನಾಲ್ಕರಲ್ಲಿ ಅರ್ಧಕ್ಕಿಂತ ಹೆಚ್ಚು ಮ್ಯಾನೇಜ್ಮೆಂಟ್ ಕೋಟಾದವು. ಅಂದರೆ ನ್ಯಾಯಯುತವಾಗಿ ಪ್ರವೇಶ ಪರೀಕ್ಷೆ ಬರೆದು ಅತ್ಯುತ್ತಮ ಅಂಕ ಪಡೆದು ಡಾಕ್ಟರಾಗುವವರು ವರ್ಷದಲ್ಲಿ ಈ ಮೊದಲ ಒಂದು ಸಾವಿರ ಮಾತ್ರ. ಸಾಲ ಗೀಲ ಮಾಡಿ ಪ್ರೈವೇಟ್ ಕಾಲೇಜಿನಲ್ಲಿ ಅನುದಾನಿತ ಸೀಟಾದರೂ ದುಬಾರಿ ಹಣ ಖರ್ಚು ಮಾಡಿ ಓದಿ ಬರುವವರು ಇನ್ನೊಂದು ಸಾವಿರ. ಮಿಕ್ಕವರೆಲ್ಲ ಕೋಟಿಗಳ ಲೆಕ್ಕದಲ್ಲಿ ಫೀಜು ಕಟ್ಟಿರುವ ಅತಿ ಶ್ರೀಮಂತರ, ನೆಟ್ಟಗಿನ ಅಂಕ ಗಳಿಸಿರದ ವಿದ್ಯಾರ್ಥಿಗಳು.

ಕ್ಲಾಸ್ ರೂಮು ಹೊತ್ತಲ್ಲಿ ತರಲೆ ಮಾಡಿಕೊಂಡೋ ವ್ಯಸನಗಳ ಮಾಡಿಕೊಂಡೊ, ವಿಷಯ ತಲೆಗತ್ತದೆ ಒದ್ದಾಡಿಕೊಂಡೊ ಕಷ್ಟ ಪಟ್ಟು ಡಿಗ್ರಿ ಸಂಪಾದಿಸುತ್ತಾರೆ ಇವರು. ಈ ಕೋಟಿ ಕೋಟಿ ಹಣವು ಹೆಚ್ಚೂ ಕಮ್ಮಿ ಯಾರದೊ ತಲೆ ಒಡೆದೆ ಗಳಿಸಿದ್ದಾಗಿರುತ್ತದೆ. ಈ ಆರೋಪಕ್ಕೆ ನಿಮ್ಮಲ್ಲಿ ಯಾರಾದರೂ ಅಪವಾದವಾಗಿದ್ದಲ್ಲಿ ಹೆಗಲು ಮುಟ್ಟಿ ನೊಂದುಕೊಳ್ಳಬೇಡಿ. ಬಹಳ ವಿರಳ ಇರುತ್ತೀರಿ ನೀವೆಲ್ಲ. ಮೆರಿಟ್ಟಿನ ಸಾವಿರ ಚಿಲ್ಲರೆ ವಿದ್ಯಾರ್ಥಿಗಳು ತಮ್ಮ ತಮ್ಮ ಮೆರಿಟಿನಾನುಸಾರ ಉತ್ತಮ ಡಾಕ್ಟರಾದರೆಂದುಕೊಳ್ಳಿ, ಇವರನ್ನು ವಿದೇಶಿ ಆಸ್ಪತ್ರೆಗಳು ದಂಡಿಯಾಗಿ ದುಡ್ಡು ಕೊಟ್ಟು ಬಾಚಿಕೊಳ್ಳುತ್ತವೆ, ಅಥವಾ ಇಲ್ಲಿಯೆ ಇರುವ ವಿವಿಐಪಿ ಮಂದಿಯ ಆರೋಗ್ಯ ನೋಡಿಕೊಳ್ಳುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಗುತ್ತಿಗೆಗೆ ಕೊಂಡುಕೊಳ್ಳುತ್ತವೆ. ಹೀಗಿರುವಾಗ ಯಾವತ್ತೋ ಒಂದಿನ ದಿನ ನೀವು ಖಾಸಗಿ ಆಸ್ಪತ್ರೆಗೆ ಭೇಟಿ ಕೊಟ್ಟಾಗ ನಿಮ್ಮನ್ನು ಪರಿಶೀಲಿಸುವ ಡಾಕ್ಟರು ಮೇಲಿನ ಒಂದು ಸಾವಿರದೊಳಗಿನ ಡಾಕ್ಟರು ಆಗಿರುವ ಸಂಭವವು ತೀರಾಂದರೆ ತೀರ ಕಡಿಮೆ. ಮ್ಯಾನೇಜ್ಮೆಂಟ್ ಕೋಟಾ ಆಗಿರುವ ಸಾಧ್ಯತೆಯೆ ಹೆಚ್ಚು.

ಹಾಗೆ ನೋಡಿದರೆ ನೀವು ಬಡ ರೋಗಿಯಾಗಿದ್ದರೆ ಸರಿ, ಖಾಸಗಿ ಆಸ್ಪತ್ರೆಗಳು ಅಲ್ಲಿಗಲ್ಲಿಗೆ ಸರಿದೂಗಿಸಿ ಯಶಸ್ವಿನಿಯ ಮೊತ್ತವನ್ನು ಪಡೆದು ಸಾಗಹಾಕಿಬಿಡುತ್ತವೆ. ಯಾಕಂದರೆ ಕಲಿಗಾಲದಲ್ಲಿ ಬಡರೋಗಿಗಳ ರಕ್ತವೂ ನಿಷ್ಪ್ರಯೋಜಕ. ಅಕಸ್ಮಾತ್ ದಪ್ಪನಾಗಿ ಮಡಗಿದ್ದೀರೆಂದೊ ಅಥವಾ ಇನ್ಶುರೆನ್ಸ್ ಗಿರಾಕಿಯೆಂದೋ ಗೊತ್ತಾದರೆ ಸಾಕು; ಬೇಕಿದ್ದೂ ಬೇಡದ್ದೂ ಮಾತ್ರೆಗಳನ್ನೆಲ್ಲ ನುಂಗಿಸಿ ಇಂಜಕ್ಷನ್ನು ಚುಚ್ಚಿ ವಿನಾಕಾರಣದ ವಿಕಿರಣ ಪರೀಕ್ಷೆಗಳನ್ನೆಲ್ಲ ಮಾಡಿ ಕಳಿಸುತ್ತಾರೆ, ದುಡ್ಡಿನ ಚಿಂತೆ ಬಿಡಿ, ಹಣವಂತರಾದರೂ ನಿಮಗೆ ಸಿಗುತ್ತಿರುವ ವೈದ್ಯಕೀಯ ಸೇವೆ ಎಂಥದು? ನನಗೊಂದು ಪ್ರಾಮಾಣಿಕ ಡೌಟಿದೆ. ಈ ಮ್ಯಾನೇಜ್ಮೆಂಟು ಸೀಟಿನಡಿ ಓದಿದ ಡಾಕ್ಟರ ಬಳಿ ಅವರ ಮನೆಯವರು ಅಪರೇಶನ್ ಮಾಡಿಸಿಕೊಳ್ಳುವ ಧೈರ್ಯ ತೋರುತ್ತಾರೋ ಇಲ್ಲವೋ ಎಂದು!
ಇನ್ನು ಎಂಜಿನಿಯರಿಂಗ್ ಸಮಸ್ಯೆಗೆ ಬರೋಣ. ಇದು ಈಗಾಗಲೇ ಜಗಜ್ಜಾಹೀರಾಗಿರುವ ಸತ್ಯ; ನಮ್ಮಲ್ಲಿ ಲಕ್ಷ ಲಕ್ಷ ವಿದ್ಯಾರ್ಥಿಗಳು ಎಂಜಿನಿಯರಿಂಗು ಪದವಿ ಪಡೆಯುತ್ತಿದ್ದಾರೆ ಹೊರತು ಎಂಜಿನಿಯರ್ ಉದ್ಯೋಗ ಪಡೆಯಲು ಯೋಗ್ಯರಾಗಿರುವವರು ಶೇಖಡಾ 20% ರಷ್ಟು ಮಾತ್ರ!
(https://www.businesstoday.in/current/corporate/indian-engineers-tech-jobs-survey-80-per-cent-of-indian-engineers-not-fit-for-jobs-says-survey/story/330869.html).ಮಿಕ್ಕ 80% ಪದವೀಧರರುಎಂಜಿನಿಯರಿಂಗ್ ಓದಿ ಏನು ಪ್ರಯೋಜನ ಯಾರಿಗೆ ಪ್ರಯೋಜನ? ಯಾರ ಹಣ ಸಮಯ ವ್ಯರ್ಥ?

ಈ ಇಪ್ಪತ್ತು ಪರ್ಸೆಂಟು ಮಂದಿಯನ್ನು ದೇಶ ಕಟ್ಟಿ, ಗುಣಮಟ್ಟದ ರಸ್ತೆ ಬ್ರಿಡ್ಜು, ಡ್ಯಾಂ ಕಟ್ಟಿ, ಮಿಸೈಲ್ ತಯಾರಿಸಿ, ಅಂತರಿಕ್ಷ ನಿಲ್ದಾಣ ಕಟ್ಟಿ ಎಂದೆಲ್ಲ ಕೇಳಿದರೆ ಪಾಪ ಇವರು ತಾನೆ ಎಷ್ಟು ಕಟ್ಟಬಲ್ಲರು. ಇವರಲ್ಲಿ ಬಹುತೇಕರನ್ನು ಗೂಗಲ್ ಮೈಕ್ರೋಸಾಫ್ಟು, ನಾಸಾ, ಜಪಾನ್ ಜೆರ್ಮನಿಗಳ ಆಟೋಮೊಬೈಲ್ ಇತ್ಯಾದಿ ಕಂಪನಿಗಳು ದುಬಾರಿ ಸಂಬಳ ಕೊಟ್ಟು ಕೊಂಡುಕೊಳ್ಳುತ್ತವೆ. ತಮ್ಮದೇನೋ ಬೇಳೆ ಬೇಯಿಸಿಕೊಳ್ಳಲು. ಹಾಗಾಗಿ ಮೇಲಿನ 80% ನವರೇ ಈ ದೇಶ ಕಟ್ಟುವ ಕಾರ್ಯದಲ್ಲಿ ಅನಿವಾರ್ಯವಾಗಿ ಭಾಗಿಯಾಗಬೇಕಾಗುತ್ತದೆ. ಇವರಿಂದ ಕಟ್ಟಿಸಿಕೊಂಡ ದೇಶ ನಮ್ಮೆದುರಿಗಿದೆ, ಈ ರಸ್ತೆಗಳು, ಗುಂಡಿಗಳು, ಒಳಚರಂಡಿಗಳು, ಮಾಮೂಲಿ ಮಳೆಗೆ ಮುಳುಗುವ ನಗರಗಳು, ತತ್ತರಿಸುವ ಕರೆಂಟು ಕಂಬಗಳು, ಈ ಸರಕಾರೀ ವೆಬ್ಸೈಟುಗಳು…

ಮೆರಿಟ್ಟಿನ ಸಾವಿರ ಚಿಲ್ಲರೆ ವಿದ್ಯಾರ್ಥಿಗಳು ತಮ್ಮ ತಮ್ಮ ಮೆರಿಟಿನಾನುಸಾರ ಉತ್ತಮ ಡಾಕ್ಟರಾದರೆಂದುಕೊಳ್ಳಿ, ಇವರನ್ನು ವಿದೇಶಿ ಆಸ್ಪತ್ರೆಗಳು ದಂಡಿಯಾಗಿ ದುಡ್ಡು ಕೊಟ್ಟು ಬಾಚಿಕೊಳ್ಳುತ್ತವೆ, ಅಥವಾ ಇಲ್ಲಿಯೆ ಇರುವ ವಿವಿಐಪಿ ಮಂದಿಯ ಆರೋಗ್ಯ ನೋಡಿಕೊಳ್ಳುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಗುತ್ತಿಗೆಗೆ ಕೊಂಡುಕೊಳ್ಳುತ್ತವೆ.

ವಿಶ್ವೇಶ್ವರಯ್ಯನಂತಹ ಮೇಧಾವಿಯ ಕೊಡುಗೆ ಕೊಟ್ಟ ಕನ್ನಡ ನಾಡಿದು, ನೆಟ್ಟಗಿನ ಸಿಟಿ ಪ್ಲಾನಿಂಗ್ ಮಾಡಿಕೊಳ್ಳುವ ಯೋಗ್ಯತೆ ಇಲ್ಲದೆ ನರಳುತ್ತಿದೆ. ಇಲ್ಲಿನ ಜನ ನಿತ್ಯನರಕ ಅನುಭವಿಸುವಂತಾಗಿದೆ. ಬೇಕಿದ್ದರೆ ಒಂದು ತಿಂಗಳು ಆಸ್ಪತ್ರೆಯಲ್ಲಿದ್ದು ನರಳಿ ಖಾಯಿಲೆ ವಾಸಿಮಾಡಿಕೊಂಡು ಬಿಡುಗಡೆ ಹೊಂದಿಬಿಡಬಹುದು, ಹೆಜ್ಜೆಹೆಜ್ಜೆಗೂ ಗಾಳಿ ನೀರು ಟ್ರಾಫಿಕ್ಕು ದುರಾಡಳಿತ ಸಮಸ್ಯೆಗಳನ್ನೆ ಮೈವೆತ್ತ ನಗರದಲ್ಲಿ ಇಡೀ ಬದುಕನ್ನು ಸವೆಸುವುದು ಎಂತಹ ನರಕವದು?

“ಮೇಕ್ ಇನ್ ಇಂಡಿಯಾ” ಕೇಳಲಿಕ್ಕೆ ಚಂದ ಇದೆ, ಆದರೆ ಇಲ್ಲಿ ಸಾಮಾನ್ಯ ಅಗತ್ಯಗಳಿಗೆ ಬೇಕಾದ ಎಂಜಿನಿಯರುಗಳೆ ಇಲ್ಲ. ಇನ್ನು ಸ್ವಂತ ಬುದ್ಧಿ ಓಡಿಸಿ ಸೃಜನಶೀಲತೆ ಪ್ರಯೋಗಿಸಿ ಇಲ್ಲಿಯೆ ಉತ್ಪಾದನೆ ಮಾಡುವಂತಹ ಕೌಶಲ್ಯ ಪ್ರದರ್ಶಿಸುವುದೆಲ್ಲಿ? ಸಾಫ್ಟವೇರಿನಲ್ಲಂತೂ ನೂರಕ್ಕೆ ಎಂಭತ್ತು ಭಾಗ ಎಂಜಿನಿಯರುಗಳು ಮಾಡುವುದು “ಸರ್ವೀಸನ್ನೆ” ಹೊರತು “ಪ್ರಾಡಕ್ಟನ್ನಲ್ಲ”. (https://www.statista.com/topics/2256/it-industry-in-india/) ನನ್ನ ಅಭಿಪ್ರಾಯದಲ್ಲಿ ಮೇಕ್ ಇನ್ ಇಂಡಿಯ ಹೇಳಿದಷ್ಟು ಸುಲಭವಾಗಿ ಕ್ಲಿಕ್ ಆಗಿರುವುದಕ್ಕೆ ಮೂಲ ಕಾರಣ ನಮ್ಮಲ್ಲಿ ಸಾಕಷ್ಟು ನುರಿತ ಎಂಜಿನಿಯರುಗಳು ಪೂರಕವಾದ ಸೃಜನಶೀಲ ವಾತಾವರಣ ಇಲ್ಲದಿರುವುದೇನೆ.

ನಾನು ಮ್ಯಾನೇಜ್ಮೆಂಟ್ ಕೋಟಾದಿಂದ ಬಂದವರು ಕೆಲಸ ಮಾಡುವಾಗ ಒದ್ದಾಡುವುದನ್ನು ಕಣ್ಣಾರೆ ಕಂಡಿದ್ದೇನೆ. ಸಂಬಂಧಿಕರ ಸ್ನೇಹಿತರ ಸಂಪರ್ಕ ಬಳಸಿ ಕಂಪನಿ ಸೇರಿಕೊಂಡುಬಿಡುತ್ತಾರೆ. ಹಂಗೂ ಹಿಂಗೂ ಕಾಲ ತಳ್ಳಿ ಒಂದು ಮ್ಯಾನೇಜ್ಮೆಂಟು ಕೋರ್ಸು ಮುಗಿಸಿ ಮ್ಯಾನೇಜ್ಮೆಂಟ್ ವಲಯಕ್ಕೆ ಹಾರುತ್ತಾರೆ. ಇಂಗ್ಲೀಷು ಮತ್ತು ಎಲೈಟಿಸ್ಟ್ ಅಪ್ಪಿಯರೆನ್ಸು – ಅಲ್ಲಿ ಬೇಕಾದ ಬಹುಮುಖ್ಯವಾದ ಅಸ್ತ್ರಗಳು. ಕೋಟಿಯಷ್ಟು ಹಣ ಸುರಿದು ಡಿಗ್ರಿ ಪಡೆದ ಇವರ ಪ್ರಾಥಮಿಕ ಶಿಕ್ಷಣವು ಇಂಟರ್ ನ್ಯಾಶನಲ್ ಕಾನ್ವೆಂಟುಗಳಲ್ಲಾಗಿದ್ದು ಸಹಜವಾಗಿಯೆ ಅವುಗಳನ್ನು ಒಲಿಸಿಕೊಂಡು ಬಂದಿರುತ್ತಾರೆ. ಮತ್ತು ಈ ಬಗೆಯ ಕುತಂತ್ರಕ್ಕೆ ಯಶಸ್ಸಿನ ಕೊರಳ ಹಾರ ಬೇರೆ: ಬುದ್ದಿವಂತರು ದುಡಿಯುತ್ತಾರೆ, ಅತಿ ಬುದ್ದಿವಂತರು ಬುದ್ದಿವಂತರಿಂದ ದುಡಿಸುತ್ತಾರೆ ಎಂದು.

ಪರಿಸ್ಥಿತಿ ಹೀಗಿರುವಾಗ,
ಉತ್ತಮ ದೇಶ, ರಸ್ತೆ, ವೈದ್ಯ ವ್ಯವಸ್ಥೆ, ಮೇಕ್ ಇನ್ ಇಂಡಿಯಾ ಇವೆಲ್ಲ ಬೇಕೆಂದರೆ ಉತ್ತಮತೋತ್ತಮ ವಿದ್ಯಾರ್ಥಿಗಳು ಈ ಪ್ರಕ್ರಿಯೆಲ್ಲಿ ಪಾಲ್ಗೊಳ್ಳಬೇಕಲ್ಲವೇ? ಇಲ್ಲೊಂದು ಸರ್ವೇ ಪ್ರಕಾರ, ನಮ್ಮ ದೇಶದಲ್ಲಿ ಬೀದಿಯಲ್ಲಿ ಮಲಗುವ ನಿರ್ಗತಿಕ ಮಕ್ಕಳ ಸಂಖ್ಯೆ ಮೂವತ್ತು ಲಕ್ಷ, ಬಾಲಕಾರ್ಮಿಕರಾಗಿರುವವರು ಕೋಟಿಗಿಂತಲೂ ಹೆಚ್ಚು. ಇನ್ನು ಶಾಲೆ ಸೇರಿದ ನಂತರ ನೂರಕ್ಕೆ ಮೂವತ್ತು ಮಕ್ಕಳು ಪಿಯುಸಿ ಮುಟ್ಟುವುದಿಲ್ಲ. ನೂರಕ್ಕೆ ಐವತ್ತು ಡಿಗ್ರಿ ಮಾಡುವುದಿಲ್ಲ. ಅಂದರೆ ಇವರ್ಯಾರೂ ಈ ದೇಶ ಕಟ್ಟುವ ಸ್ಪರ್ಧೆಯಲ್ಲೆ ಇಲ್ಲ! ನಿರ್ಗತಿಕತೆ, ಬಡತನ, ಅಲೆಮಾರಿ ಬದುಕು, ಸರಿಯಾದ ಶಾಲಾ ವ್ಯವಸ್ಥೆಯಿಲ್ಲದಿರುವುದು ಹೀಗೆ ಏನೇನೋ ತಮ್ಮದಲ್ಲದ ಕಾರಣಗಳಿಗೆ ಅವಕಾಶ ವಂಚಿತರು. ಇವರಲ್ಲಿ ಎಷ್ಟೊಂದು ಮಂದಿ ಮೇಕ್ ಇನ್ ಇಂಡಿಯ ತಂತ್ರಜ್ಞ, ಮಾನವೀಯ ವೈದ್ಯ, ಜನಕಲ್ಯಾಣಕ್ಕಾಗಿ ದುಡಿವ ಮನಸ್ಸಿನ ಅಧಿಕಾರಿ ಇದ್ದಿರಬಹುದಲ್ಲವೆ.

ಡಿಗ್ರಿ ಮಾಡುವವರೂ ಸಹ ಮುಕ್ಕಾಲು ಜನ ವೆಚ್ಚ ಭರಿಸಲಾಗದೆ ಎಂಜಿನಿಯರಿಂಗು ಮೆಡಿಕಲ್ಲಿನ ಪ್ರವೇಶ ಪರೀಕ್ಷೆಗೆ ಕೂರುವುದಿಲ್ಲ. ಯೋಚಿಸಿ ನೋಡಿ ವರ್ಷಕ್ಕೆ ಹತ್ತಿರಬೀಳ ಮೂರು ಕೋಟಿ ಮಕ್ಕಳನ್ನು ಹುಟ್ಟಿಸುವ ದೇಶದಲ್ಲಿ ಕೇವಲ ಹತ್ತಿಪ್ಪತ್ತು ಲಕ್ಷ ಮಕ್ಕಳು ಎಂಜಿನಿಯರಿಂಗ್ ಮೆಡಿಕಲ್ಲು ಪರೀಕ್ಷೆ ತಗೊಳ್ಳುವುದು, ಇವರಲ್ಲಿ ಪಾಸು ಮಾಡಿ ಡಿಗ್ರಿ ಮುಗಿಸಿದ ಐದಾರು ಲಕ್ಷದಲ್ಲಿ 80% ಜೊಳ್ಳು! ಇನ್ನು ನಮ್ಮ ಮೇಲೆ ದರ್ಪದ ಸವಾರಿ ಮಾಡುವ ಪೋಲೀಸರು, ಅಧಿಕಾರಿಗಳು, ಲಾಯರುಗಳು, ರಾಜಕಾರಣಿಗಳು ಇವರಲ್ಲಿ ದಕ್ಷರು ಸಮರ್ಥರು ವೃತ್ತಿಧರ್ಮ ಪಾಲಿಸುವವರು ಎಷ್ಟು ಮಂದಿ? ದೇಶ ಉದ್ಧಾರ ಆಗಬೇಕಪ್ಪ ಅಂದರೆ ಹೇಗೆ ಆಗುತ್ತದೆ?

ಈ ಶಿಕ್ಷಣ ವಂಚಿತರೆಲ್ಲರನ್ನು ಪರಿಗಣಿಸಿದರೆ ಮೆರಿಟ್ ಕೋಟಾದವರ ಮೆರಿಟ್ಟೂ ಅಲುಗಾಡುತ್ತದೆ. ಬಹುತೇಕ ಈಗಿನ ಮೆರಿಟ್ ವಿದ್ಯಾರ್ಥಿಗಳು ಹೆಚ್ಚೂ ಕಮ್ಮಿ ನಗರ ಅಥವಾ ಉಪನಗರ ಕೇಂದ್ರಿತ ಟ್ಯಾಕ್ಸ್ ಕಟ್ಟುವ ಮಧ್ಯಮವರ್ಗದ ತಂದೆ ತಾಯಿಯರ ಮಕ್ಕಳು. ಬೆಳಬೆಳಗ್ಗೆ ಐದು ಗಂಟೆಗೆ ಎಬ್ಬಿಸಿ ಜೊಲ್ಲು ಸುರಿಸುತ್ತ ಟ್ಯೂಷನ್ ಮಾಡುವ ಸಿದ್ಧ ತಂತ್ರಗಳನ್ನು ಉರು ಹೊಡೆಸಿ ಸ್ಕೋರ್ ತೆಗೆಸುವ ಲೆಕ್ಚರುಗಳ ಬಳಿಗೆ ದಬ್ಬುತ್ತಾರೆ. ಪಾಪ ಈ ಮಕ್ಕಳು ರೋಬೋಟಿನಂತೆ ಪರೀಕ್ಷೆಗೇನೋ ತಯಾರಾಗುತ್ತಾರೆ, ಈ ಪ್ರಕ್ರಿಯೆಯಲ್ಲಿ ಅವರ ಸೃಜನಶೀಲತೆಗೆ ಹೊಡೆತ ಬಿದ್ದು ಕಂಪನಿಗಳಿಗೋಸ್ಕರ ತಲೆಬಾಗಿ ದುಡಿಯುವುದರಲ್ಲೆ ಜೀವನ ತೇಯಲು ಸೀಮಿತಗೊಳ್ಳುತ್ತಾರೆ.

ಒಂದೊಮ್ಮೆ ನಾವೆಲ್ಲ ಮನಸ್ಸು ಮಾಡಿ ಪ್ರಾಥಮಿಕದಿಂದಿಡಿದು ಉನ್ನತದವರೆಗೆ ಶಿಕ್ಷಣವನ್ನು ಸಂಪೂರ್ಣ ಉಚಿತಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದರೆ ಹೇಗೆ? ಶ್ರೀಮಂತನಿಂದ ಹಿಡಿದು ಕೊಳಚೆಗೇರಿ ಮಗುವಿನವರೆಗೆ, ಎಲ್ಲರಿಗೂ ಉಚಿತವರಿಲಿ, ಒಂದೇ ಗುಣಮಟ್ಟದ್ದಿರಲಿ. ಇದು ಸಾರ್ಥವಾಗಿಬಿಟ್ಟರೆ ಈ ದೇಶದಲ್ಲಿಪ್ರತಿ ವರ್ಷ ಮೂರು ಕೋಟಿ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಸಾಮರ್ಥ್ಯದಾನುಸಾರ ವಿವಿಧ ಪದವಿ ಪಡೆದು ಪ್ರತಿ ಪರಿಣಿತ ವಲಯದಲ್ಲೂ ಅತ್ಯುತ್ತಮರೇ ತುಂಬಿ ತುಳುಕುತ್ತಿದ್ದು ರಾಜಕಾರಣಿಗಳ ಭ್ರಷ್ಟತೆ ಬದಿಗಿಟ್ಟರೂ ನಮ್ಮ ಸುತ್ತಮುತ್ತೆಲ್ಲ ದಕ್ಷ ಕಾರ್ಯಗಳೇ ನಡೆಯುತ್ತಿರುತ್ತವೆ. ಮಾನವೀಯತೆಯು ಮುಂದಿರುತ್ತದೆ. ಯಾವುದೇ ಘನತೆಯುಕ್ತ ಮನುಷ್ಯ ಸಮಾಜದ ಸಹಾಯದಿಂದ ಉಚಿತ ಶಿಕ್ಷಣವನ್ನು ಪಡೆದು ಸಮಾಜಕ್ಕೆ ದ್ರೋಹ ಬಗೆಯಲಾರ ಎಂಬ ಬಲವಾದ ನಂಬಿಕೆ ನನ್ನದು.

ಇದು ಅಸಾಧ್ಯದ ಕಲ್ಪನೆಯಲ್ಲ. ಬಹುತೇಕ ಎಲ್ಲ ನಾರ್ಡಿಕ್ ದೇಶಗಳಲ್ಲಿ(ಡೆನ್ಮಾರ್ಕ್, ಫಿನ್ಲೆಂಡ್, ಐಲೆಂಡ್, ನಾರ್ವೆ, ಸ್ವೀಡನ್, ಗ್ರೀನ್ಲ್ಯಾಂಡ್ ಮತ್ತು ಇತರೆ ದ್ವೀಪಗಳು) ಪದವಿ ಸ್ನಾತಕೋತ್ತರವರೆಗೆ ಉಚಿತ ಶಿಕ್ಷಣವಿದೆ. ಜರ್ಮನಿಯಂತಹ ದೇಶಗಳು ವಿದೇಶಿ ವಿದ್ಯಾರ್ಥಿಗಳಿಗೂ ಉಚಿತ ಶಿಕ್ಷಣ ಕೊಡುತ್ತಾರೆ. ಕೆಲವು ದೇಶಗಳಲ್ಲಿ ಖಾಸಗಿ ಶಾಲೆಗಳಿದ್ದರೂ ಸರ್ಕಾರವು ಉಚಿತ ಶಿಕ್ಷಣದ ಹೊಣೆ ಹೊತ್ತಿದೆ. ನಾನಿಲ್ಲಿ ಉಚಿತ, ಸಮಾನ ಎಂಬುದರ ಜೊತೆಗೆ ವಸತಿಯೊಂದನ್ನು ಸೇರಿಸಬಯಸುತ್ತೇನೆ. ಅಲೆಮಾರಿ ಬದುಕಿನ ಮಕ್ಕಳಿಗೆ ನಿರ್ಗತಿಕ ಮಕ್ಕಳಿಗೆ ಪೂರಕವಾಗಿರುವಂತೆ ಒಟ್ಟಾರೆ ವ್ಯವಸ್ಥೆಯಲ್ಲಿ ವಸತಿ ಅನುಕೂಲವನ್ನೂ ಸೇರಿಸಿದರೆ ಸರಿಯಾಗುತ್ತದೆ.

ಭಾರತದಲ್ಲಿ ಇದೆಲ್ಲ ಇಲ್ಲವಂತಲ್ಲ, ಒಂದು ಮಟ್ಟಿಗೆ ಈ ಬಗೆಯ ವ್ಯವಸ್ಥೆಯಿದ್ದು ಸಮರ್ಪಕವಾಗಿರದೆ ಇರುವುದೂ ಸಂಪೂರ್ಣ ಖಾಸಗಿಮಯವಾಗುತ್ತಿದೆ, ನಮ್ಮಲ್ಲಿ ಪ್ರಾಥಮಿಕ ಶಿಕ್ಷಣ ಉಚಿತ ಆದರೆ ಖಾಸಗಿಗಿಂತ ಕಳಪೆ, ಇಲ್ಲೇ ಬಡವರು ಶ್ರೀಮಂತರ ಮಕ್ಕಳು ಬೇರ್ಪಡುತ್ತಾರೆ. ಮಾಧ್ಯಮಿಕ ಪಿಯೂಸಿ ತಲುಪುವಷ್ಟರಲ್ಲಿ ಶ್ರೀಮಂತರಲ್ಲೆ ಮಧ್ಯಮರ್ಗ, ಶ್ರೀಮಂತ ವರ್ಗ, ಅತಿಶ್ರೀಮಂತ ವರ್ಗವೆಂದು ಮಕ್ಕಳು ಬೇರ್ಪಡುತ್ತಾರೆ. ಪದವಿ ಹೊತ್ತಿಗೆ ಬಡವರ ಮಕ್ಕಳು ಬೆರಳೆಣಿಕೆಯ ಸರಕಾರೀ ಸೀಟಿನ ಪಾಲುದಾರರಾಗಿ ಉನ್ನತ ಶಿಕ್ಷಣದಲ್ಲಿ ಆರ್ಥಿಕವಾಗಿ ತಿಣುಕುವ ಮಧ್ಯಮವರ್ಗ, ಓದುವ ಶ್ರದ್ಧೆಯಿಲ್ಲದ ಶ್ರೀಮಂತವರ್ಗದ ಮಕ್ಕಳು ತುಂಬಿರುತ್ತಾರೆ. ಇದಕ್ಕೆ ಹೊರತಾಗಿ ಮೊರಾರ್ಜಿ, ನವೋದಯ ವಿದ್ಯಾಲಯಗಳು ದೇಶಾದ್ಯಂತ ಇದ್ದರೂ ಅವುಗಳು ದೇವರಿಗೆ ಇಡುವ ಎಡೆಯಂತೆ ಸಾವಿರಾರು ಮಕ್ಕಳಲ್ಲಿ ನೂರಿನ್ನೂರು ಮಕ್ಕಳನ್ನು ಆಯ್ಕೆ ಮಾಡಿ ಉಚಿತ ಶಿಕ್ಷಣ ಒದಗಿಸುತ್ತವೆ. ಆತಂಕವಾಗುವುದು ಶಾಲೆಗೇ ಸೇರದೆ ಸರಿಯಾದ ಮಾರ್ಗದರ್ಶನವೇ ಸಿಗದೆ ಅವಕಾಶವಂಚಿತರಾಗುವ ಕೋಟ್ಯಾಂತರ ಮಕ್ಕಳ ಬಗ್ಗೆ.

ಶಿಕ್ಷಣವು ಯಾವುದೇ ದೇಶಕ್ಕೆ ಇನ್ವೆಸ್ಟ್ಮೆಂಟ್, ಅಂದರೆ ಹೂಡಿಕೆ. ಇದು ಸರ್ಕಾರಗಳಿಗೆ ಅರ್ಥವಾಗಬೇಕು. ತನ್ನ ಪ್ರಜೆಗಳ ಬುದ್ಧಿಭಾವ ಬೆಳವಣಿಗೆಗಳಲ್ಲಿ ಹೂಡಿಕೆ ಮಾಡಿ ಉತ್ತಮ, ಸಮರ್ಥ ಸಧೃಡ ಪ್ರಜ್ಞಾವಂತ ಪ್ರಜೆಗಳನ್ನು ಸೃಷ್ಟಿಸಬೇಕು. ಆ ಪ್ರಜೆಗಳು ತನ್ಮೂಲಕ ಪ್ರಾಮಾಣಿಕವಾಗಿ ದಕ್ಷವಾಗಿ ದುಡಿದು ದೇಶದ ಸಂಪತ್ತು ಹೆಚ್ಚಿಸುತ್ತ ಹೂಡಿದ ಬಂಡವಾಳದ ಜೊತೆಗೆ ಲಾಭಾಂಶ ಸೇರಿಸಿ ಸರ್ಕಾರಕ್ಕೆ ಮರಳಿಸುತ್ತಾರೆ. ಶ್ರೀಮಂತ ದೇಶಗಳು ಶ್ರೀಮಂತವಾಗಿರುವುದು ಈ ಕಾರಣಕ್ಕೆ. ಬರೀ ಸಂಪತ್ತನ್ನು ಅತ್ತಿತ್ತ ಲೋಲುಪತೆಗೆ ವ್ಯಯಿಸುತ್ತ ಅಸಮರ್ಥ ಅಶಿಕ್ಷಿತ ಪ್ರಜೆಗಳ ಸಂತತಿ ಬೆಳೆಸಿದರೆ ದೊಡ್ಡ ಮನೆ ತುಂಬ ದಡ್ಡ ಮಕ್ಕಳೆ ತುಂಬಿದ್ದು ಮನೆಯು ಕ್ರಮೇಣ ಅವಸಾನ ಹೊಂದಿದಂತೆ ದೇಶವೂ ಅವಸಾನದಹಾದಿ ಹಿಡಿಯುತ್ತದೆ. ಅಸಮರ್ಪಕ ಶಿಕ್ಷಣ ಶಿಕ್ಷಣ-ವಂಚಿತತೆಗಿಂದ ಅಪಾಯಕಾರಿ ಎಂಬುದನ್ನು ನಾವೀಗಾಗಲೇ ಮನಗಂಡಿದ್ದೇವೆ.