ಆಗ ಚೆನ್ನೈನ ರಸ್ತೆಗಳಿಗೆ ಒಂದು ಸೊಬಗಿತ್ತು.ಅಲ್ಲಲ್ಲಿ ಆಂಗ್ಲೋಇಂಡಿಯನ್ಸ್ ಇನ್ನು ಓಡಾಡುತ್ತಿದ್ದ ಕಾಲವದು.ನನ್ನ ಸಹಪಾಠಿಗಳೂ ಇಬ್ಬರು ಮೂವರು ಇಂಗ್ಲೀಷ್ ನ ಕುಟುಂಬಕ್ಕೆ ಸೇರಿದವರೂ ಇದ್ದರು.ಮನೆಗೆ ವಾಪಸ್ಸು ಬಂದಾಗ ಗೇಟಿನಲ್ಲಿ ಆರತಿಯೆತ್ತಿ ನಾಗಸ್ವರ ವಾದ್ಯದ ಸಮೇತ ಒಳಗೆ ಬರಮಾಡಿಕೊಂಡಿದ್ದರು.ಆಗ ಆರತಿಯೆತ್ತಿದ ಹುಡುಗಿಯರಲ್ಲಿ ಭಾವನಾನೂ ಇದ್ದಳು.ತುಂಬ ಜೋರು ಮಾಡುತ್ತಿದ್ದ ಹುಡುಗಿ.ಆದರೆ ಸ್ವಲ್ಪ ಜೋರಾಗಿ ಅವಳ ಬಗ್ಗೆ ಮಾತಾಡಿಬಿಟ್ಟರೆ ಅಳ್ತಾ ಓಡಿಹೋಗಿ ಅಜ್ಜ, ಅಜ್ಜಿಗೆ ಹೇಳ್ತಿದ್ದಳು.
ಶೂದ್ರ ಶ್ರೀನಿವಾಸ್ ಬರೆದ ‘ಯಾತ್ರೆ’ ಕಾದಂಬರಿಯ ಕೆಲವು ಹಾಳೆಗಳು.

ಭಾವನಾ ಮತ್ತು ಸ್ವಾಮಿ ಯಜಮಾನರ ಕೊಠಡಿಗೆ ಹೋದರು. ಅವರು ಪ್ರೀತಿಯಿಂದ ಬರಮಾಡಿಕೊಂಡರು. ಸ್ವಾಮಿ ಸಂಕೋಚದಿಂದಲೇ ನಿಂತಿದ್ದರು. ಹತ್ತಿರದಲ್ಲಿಯೇ ಇದ್ದ ಕುರ್ಚಿಯಲ್ಲಿ ಕೂರಲು ಹೇಳಿದರು. ಅಷ್ಟರಲ್ಲಿ ಯಜಮಾನರನ್ನುನೋಡಿಕೊಳ್ಳುತ್ತಿದ್ದ ಮೇಲ್ ನರ್ಸ್ ಕೊಠಡಿಯಿಂದ ಹೊರಗೆ ಹೋದರು. ಯಜಮಾನರು ಭಾವನಾಳಿಗೂ ಕೂಡಲು ತಿಳಿಸಿದರು. ಸ್ವಾಮಿಯನ್ನು ಉದ್ದೇಶಿಸಿ “ನಿಮಗೇನು ತೊಂದರೆಯಾಗುತ್ತಿಲ್ಲ ಎಂದು ಭಾವಿಸುವೆ. ನೀವು ಬಂದ ಮೇಲೆ ಇಲ್ಲಿಯ ಒಟ್ಟುವಾತಾವರಣಕ್ಕೆ ಕಳೆ ಬಂದಿದೆ. ಭಾವನಾ ಕೂಡ ಎಲ್ಲಿಲ್ಲದ ಉತ್ಸಾಹದಿಂದ ತನ್ನ ಕಾರ್ಯ ನಿರ್ವಹಿಸುತ್ತಿದ್ದಾಳೆ. ಅದೇ ನನಗೆ ನೆಮ್ಮದಿಯನ್ನು ತಂದುಕೊಟ್ಟಿದೆ. ಕೊನೆಗೂ ನನ್ನ ಒಂದು ರೀತಿಯ ಒಂಟಿತನವನ್ನು ಕಾಪಾಡಿರೋದೆ ಈ ಪುಸ್ತಕಗಳು. ಎಷ್ಟೋಮಂದಿ ನನ್ನ ಸ್ನೇಹಿತರು ಹಾಗೂ ಬಂಧು ಬಳಗದವರು ಬಂದಾಗ; ಇಷ್ಟು ಓದ್ತಿಯಲ್ಲ ಏನು ಸುಖ ಕೊಡ್ತದೆ ಅಂತಾರೆ; ಕೆಲವರು ದಿನಾ ಪಾರಾಯಣದಲ್ಲಿ ತೊಡಗು ಅಂತಾರೆ. ಅವರಿಗೆ ಉತ್ತರಿಸಲು ಹೋಗುವುದಿಲ್ಲ. ಯಾಕೆಂದರೆ ಅವರಿಗೆ ಓದಿನ ಖುಷಿ ಗೊತ್ತಿಲ್ಲ. ಇರಲಿ, ಜೀವನ ಎಂದರೆ ಅದೆಲ್ಲ ಇದ್ದದ್ದೇ. ಇಂದು ನನ್ನ ಜೊತೆ ಡ್ರಿಂಕ್ಸ್ ತೆಗೆದುಕೊಳ್ಳಲು ಕಂಪನಿ ಕೊಡಿ. ಯಾವುದೇ ವಿಧವಾದ ಮುಜುಗರವನ್ನು ಅನುಭವಿಸಬೇಡಿ. ಒಂದು ದೃಷ್ಟಿಯಿಂದ ಭಾವನಾ ಈ ಮನೆತನಕ್ಕೆ ಹೇಗೆ ದೊಡ್ಡಮ್ಯಾನೇಜರ್ ಆಗಿದ್ದಾಳೋ ಅದೇ ರೀತಿಯಲ್ಲಿ ನನ್ನ ಕೊಠಡಿಯ ಬಾರ್ ಗೂ ಮ್ಯಾನೇಜರ್. ಅವಳು ಕೊಟ್ಟರೆ ಕುಡಿಯಬೇಕು, ಇಲ್ಲದಿದ್ದರೆ ಇಲ್ಲ. ಅವಳು ಒಂದು ಸಾರಿ ‘ಇಲ್ಲ’ ಎಂದ ಮೇಲೆ ಮುಗಿಯಿತು. ನಾವು ಬಾಟಲ್ ಕಡೆಗೆ ಮಿಕ ಮಿಕ ನೋಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನೋಡು ಭಾವನಾ ನಮ್ಮಿಬ್ಬರಿಗೂ ಸರ್ವ್ ಮಾಡುವೆಯಾ? ನೀನೂ ಒಂದು ಸ್ಮಾಲ್ ತಗೋ. ಯಾವುದೆ ವಿಧವಾದ ಮುಜುಗರಕ್ಕೆ ಒಳಗಾಗಬೇಡ.”

ಭಾವನಾ ನಗುತ್ತ ಇಬ್ಬರಿಗೂ ರಾಯಲ್ ಸೆಲ್ಯೂಟ್ ಸರ್ವ್ ಮಾಡಿದಳು. ಜೊತೆಗೆ ತಿನ್ನುವ ವಸ್ತುಗಳನ್ನು ವ್ಯವಸ್ಥೆ ಮಾಡಿದಳು. ಚಿಯರ್ಸ್ ಎಂಬ ಧ್ವನಿಯ ಜೊತೆಗೆ ವಿಸ್ಕಿಯನ್ನು ಚಪ್ಪರಿಸಿದರು. ಅಷ್ಟರಲ್ಲಿ ಕಮಲಾ ಬಾಗಿಲಲ್ಲಿ ನಿಂತು

ಊಟವನ್ನುಎಷ್ಟು ಸಮಯಕ್ಕೆ ತರಲಿ ಎಂದು ಕೇಳಿ ಹೋದಳು ಅನ್ನಿಸುತ್ತದೆ. ಭಾವನಾ ಏನೋ ಸೂಚನೆ ಕೊಟ್ಟು ಬಂದಿದ್ದಳು.

“ಸ್ವಾಮಿ ನಾನು ಮೊದಲು ಕುಡಿದದ್ದು ನನ್ನ ತಂದೆಯ ಜೊತೆಯಲ್ಲಿ. ಭಾವನಾಳ ಅಜ್ಜನ ಜೊತೆಯಲ್ಲಿ. ನಾನು ಆಗ ತಾನೇ ಡಿಗ್ರಿಯನ್ನು ಇದೇ ಚೆನ್ನೈನ ಅರ್ಥಾತ್ ಮದ್ರಾಸ್ ನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪಡೆದು ಬಂದಿದ್ದೆ. ತಂದೆಯವರು ಕುದುರೆಯ ಸಾರೋಟಿನಲ್ಲಿ ಕಾನ್ವೇಕೇಷನ್ ಕಾರ್ಯಕ್ರಮಕ್ಕೆ ಬಂದಿದ್ದರು. ಅವರು ಪ್ರತಿಷ್ಠಿತ ವ್ಯಕ್ತಿಯಾಗಿದ್ದರಿಂದ ಮುಂದಿನ ಮುಖ್ಯ ಅತಿಥಿಗಳ ಜೊತೆಯೇ ಕೂತಿದ್ದರು. ಜೊತೆಗೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ಕಾಮರಾಜ ನಾಡಾರ್ ಅವರು ಅಪ್ಪನಿಗೆಆತ್ಮೀಯರಾಗಿದ್ದರು. ಅಲ್ಲಿಂದ ವಾಪಸ್ಸು ಬರುವಾಗ ಆ ಸಾರೋಟಿನಲ್ಲಿಯೇ ಮನೆಗೆ ವಾಪಸ್ಸು ಬಂದಿದ್ದೆ. ಸುಮಾರು ಹದಿನೈದು ಹದಿನಾರು ಕಿ.ಮೀಟರ್ ದೂರವಿರಬಹುದು. ಆಗ ಚೆನ್ನೈನ ರಸ್ತೆಗಳಿಗೆ ಒಂದು ಸೊಬಗಿತ್ತು. ಅಲ್ಲಲ್ಲಿ ಆಂಗ್ಲೋಇಂಡಿಯನ್ಸ್ ಇನ್ನು ಓಡಾಡುತ್ತಿದ್ದ ಕಾಲವದು. ನನ್ನ ಸಹಪಾಠಿಗಳೂ ಇಬ್ಬರು ಮೂವರು ಇಂಗ್ಲೀಷ್ ನ ಕುಟುಂಬಕ್ಕೆ ಸೇರಿದವರೂ ಇದ್ದರು. ಮನೆಗೆ ವಾಪಸ್ಸು ಬಂದಾಗ ಗೇಟಿನಲ್ಲಿ ಆರತಿಯೆತ್ತಿ ನಾಗಸ್ವರ ವಾದ್ಯದ ಸಮೇತ ಒಳಗೆ ಬರಮಾಡಿಕೊಂಡಿದ್ದರು. ಆಗ ಆರತಿಯೆತ್ತಿದ ಹುಡುಗಿಯರಲ್ಲಿ ಭಾವನಾನೂ ಇದ್ದಳು. ತುಂಬ ಜೋರು ಮಾಡುತ್ತಿದ್ದ ಹುಡುಗಿ. ಆದರೆ ಸ್ವಲ್ಪ ಜೋರಾಗಿ ಅವಳ ಬಗ್ಗೆ ಮಾತಾಡಿಬಿಟ್ಟರೆ ಅಳ್ತಾ ಓಡಿಹೋಗಿ ಅಜ್ಜ, ಅಜ್ಜಿಗೆ ಹೇಳ್ತಿದ್ದಳು. ಪಾಪ, ಅವಳು ಈಗಲೂ ಏನೂ ಬದಲಾವಣೆಯಾಗಿಲ್ಲ. ಹೆಣ್ಣು ಮಕ್ಕಳು ಹಾಗೆಯೇ ಇರಬೇಕು. ಮನೆಗೆ ನಿಜವಾಗಿಯೂ ಕಳೆ ಇರುತ್ತದೆ. ಈಗ ಭಾವನಾಳ ರೀತಿಯಲ್ಲಿ ಒಂದಷ್ಟು ಹುಡುಗಿಯರು ನನ್ನ ಮಕ್ಕಳಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅನ್ನಿಸುತ್ತದೆ. ನನ್ನ ಮಗನ ಬದಲು ಅವನ ಪಕ್ಕದಲ್ಲಿ ಒಬ್ಬ ಹುಡುಗಿ ಇದ್ದಿದ್ದರೂ ಚೆನ್ನಾಗಿತ್ತು. ಭಾವುಕತೆಯಿಂದ ಕಣ್ಣೊರೆಸಿಕೊಂಡರು. ಕ್ಷಮಿಸಿ, ಈಗ ನಾನು ಕಲ್ಲು ಮನಸ್ಸಿನವನಾಗಿದ್ದೇನೆ. ಇಲ್ಲದಿದ್ದರೆ ನಾನು ಈ ದೇಹದ ನೋವನ್ನು ಹಾಗೂ ಕುಟುಂಬದ ನೋವನ್ನುಸಹಿಸಿಕೊಳ್ಳಲು ಆಗುತ್ತಿರಲಿಲ್ಲ” ಎಂದು ಗ್ಲಾಸ್ ಕೈಗೆ ತೆಗೆದುಕೊಂಡು ಒಂದು ಗುಟುಕು ವಿಸ್ಕಿ ಕುಡಿದು ಬಾಯಿಗೆ ಕಾಳು ಹಾಕಿಕೊಂಡು ಚಪ್ಪರಿಸುತ್ತ “ಭಾವನಾ ನೀನು ಒಂದು ಸ್ಮಾಲ್ ತಗೋ” ಎಂದು ಒತ್ತಾಯ ಮಾಡಿ ತಗೊಳ್ಳುವಂತೆ ಮಾಡಿದರು.

ಸ್ವಲ್ಪ ಸಮಯ ಮಾತಿರಲಿಲ್ಲ. ಇದ್ದಕ್ಕಿದ್ದಂತೆ “ಸ್ವಾಮಿ, ಒಂದು ಪುಟ್ಟ ಸಹಾಯ ಮಾಡಿ. ಅಲ್ಲಿ ಗೋಡೆಯ ಮೇಲೆ ಕಾಣುವ ನನ್ನ ಮಗನ ಭಾವಚಿತ್ರವನ್ನು ತೆಗೆದು ಅಲ್ಲೆಲ್ಲಾದರು ಮರೆಯಲ್ಲಿ ಇಡಿ. ನೋಡ್ತಾ ಇದ್ದರೆ ಹಿಂಸೆಯಾಗ್ತದೆ. ನಾನು ಕ್ರೂರಿಎಂದು ತಿಳಿದುಕೊಳ್ಳಬೇಡಿ. ನೋಡುತ್ತಿದ್ದರೆ ಭಾವನೆಗಳು ಉಕ್ಕಿಬಂದು ಮಾನಸಿಕ ಹಿಂಸೆಯಾಗ್ತದೆ.” ಸ್ವಾಮಿ ಭಾವನಾಳ ಮುಖ ನೋಡಿದ. ಆಕೆಯೂ ಹೋಗಿ ತೆಗೆದು ಮರೆಯಲ್ಲಿಡಿ ಎಂಬ ಭಾವನೆಯನ್ನು ಮುಖದಲ್ಲಿ ವ್ಯಕ್ತಪಡಿಸಿದಳು. ಅವನು ನಿಧಾನವಾಗಿ ಹೋಗಿ ಆ ಕೆಲಸವನ್ನು ಮಾಡಿ ಬಂದ. ಮತ್ತೆ ಯಜಮಾನರು ವೇದನೆಯಿಂದ “ನಿಮ್ಮಿಂದ ಆ ಕೆಲಸ ಮಾಡಿಸಿದೆ. ಅದನ್ನು ಆ ಮೇಲ್ ನರ್ಸ್ ಮೂಲಕ ಮಾಡಿಸಬಹುದಾಗಿತ್ತು. ಅನ್ಯಥಾ ಭಾವಿಸಬೇಡಿ. ತಗೊಳ್ಳಿ ಡ್ರಿಂಕ್ಸ್. ಸಂಕೋಚ ಬೇಡ. ನಿಮ್ಮ ಗ್ಲಾಸಿನಲ್ಲಿ ಹಾಗೆಯೇ ಇದೆ” ಎಂದರು. ಸ್ವಾಮಿ, ಒಂದು ಗುಟುಕು ಚಪ್ಪರಿಸಿ, ಒಂದಷ್ಟು ಕಾಳು ಬಾಯಿಗೆ ಹಾಕಿಕೊಂಡನು. ಒಂದೈದು ನಿಮಿಷ ಅವರ ನಡುವೆ ಯಾವುದೇ ಮಾತುಕತೆ ಇರಲಿಲ್ಲ. ಯಜಮಾನರಾದ ಭರತ್ ನಾಡಾರ್ ಮತ್ತೆ ಒಂದುಗುಟುಕು ಚಪ್ಪರಿಸಿ ಸ್ವಾಮಿ ಮುಂದಿನ ವಾರ ಮೆರಿನಾ ಬೀಚ್ ಕಡೆ ಹೋಗಿ ಬರೋಣ. ತುಂಬ ದಿವಸದಿಂದ ಕಾಡ್ತಾ ಇದೆ. ಅಪ್ಪ ನನ್ನ ಬಾಲ್ಯದಲ್ಲಿ ಕುದುರೆ ಮೇಲೆ ಕೂರಿಸಿಕೊಂಡು ಸಮುದ್ರದ ಅಲೆಗಳ ವೈವಿಧ್ಯಮಯತೆಯನ್ನು ತೋರಿಸುತ್ತ ಎಂತೆಂಥ ಕಥೆಗಳನ್ನು ವಿಸ್ತರಿಸಿದ್ದರು. ಮುಂದೆ ಅದನ್ನು ನಾನು ಮುಂದುವರಿಸಲು ಆಗಲಿಲ್ಲ. ಮುಂದುವರಿಸುವ ವಾಹಕವಾಗಿದ್ದ ಕುದುರೆಯೂ ಹೋಯಿತು. ನಾನು ದೊಡ್ಡ ಪ್ರಮಾಣದಲ್ಲಿ ಅಂಗವಿಕಲನಾಗಿ ಎಲ್ಲವೂ ನುಚ್ಚುನೂರಾಯಿತು. ಭಾವನಾಳ ಬದುಕು ಭಗ್ನಗೊಂಡಿತು. ಈಗ ಅದನ್ನೆಲ್ಲ ಹಿಂದಿರುಗಿ ಅರ್ಥೈಸಿಕೊಳ್ಳೋದಿಕ್ಕೆ ಆಗಲಾರದಷ್ಟು ಸಮಸ್ಯೆ ತೀವ್ರಗೊಂಡಿದೆ. ನಾವ್ಯಾರೂ ಊಹಿಸಿಕೊಂಡೇ ಇರಲಿಲ್ಲ. ಮಗ ರಾಮ್ ಕುಮಾರ್ ಹೀಗೆ ಮಾಡ್ತಾನೆಂದು. ಹಾಳಾಗಿ ಹೋಗ್ಲಿ; ಸ್ವಾಮಿ, ಹೀಗೇನು ಮಾಡೋಣ. ಆ ಸಭಾಂಗಣದಲ್ಲಿ ವರ್ಷಕ್ಕೆ ಒಂದೆರಡು ಒಳ್ಳೆಯ ಕಾರ್ಯಕ್ರಮ ಮಾಡೋಣ. ತೆಲುಗು, ಕನ್ನಡ ಮತ್ತು ತಮಿಳು ಲೇಖಕರ ಹಾಗೂ ಕಲಾವಿದರ ಸಮಾವೇಶಕ್ಕೆ ಯೋಜನೆ ರೂಪಿಸಿ. ಅದು ಎಷ್ಟು ಖರ್ಚಾದರೂ ಚಿಂತೆ ಇಲ್ಲ. ನಾನು ಎಷ್ಟುದಿವಸ ಬದುಕಿರ್ತಿನೋ ಗೊತ್ತಿಲ್ಲ. ಅಷ್ಟರಲ್ಲಿ ಅದನ್ನು ನೋಡಿ ಸಂತೋಷ ಪಟ್ಟು ಹೋಗುವೆ. ಸ್ವಾಮಿ, ಇಲ್ಲಿ ಮತ್ತೊಂದು ಹಿಂಸೆಯಾಗುವ ವಿಷಯವೆಂದರೆ; ಇಂಥ ಕಾರ್ಯಕ್ರಮ ಮಾಡುವಾಗ; ಬಂದವರೆಲ್ಲ ನಿಮ್ಮ ಮಗ ಎಲ್ಲಿ ಕಾಣ್ತಿಲ್ಲ. ಮುಂಬೈನಿಂದ ಬಂದನಾ? ಎಂಬ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳ್ತಾನೆ ಹೋಗುವರು.”

ನಾನು ಆಗ ತಾನೇ ಡಿಗ್ರಿಯನ್ನು ಇದೇ ಚೆನ್ನೈನ ಅರ್ಥಾತ್ ಮದ್ರಾಸ್ ನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪಡೆದು ಬಂದಿದ್ದೆ. ತಂದೆಯವರು ಕುದುರೆಯ ಸಾರೋಟಿನಲ್ಲಿ ಕಾನ್ವೇಕೇಷನ್ ಕಾರ್ಯಕ್ರಮಕ್ಕೆ ಬಂದಿದ್ದರು. ಅವರು ಪ್ರತಿಷ್ಠಿತ ವ್ಯಕ್ತಿಯಾಗಿದ್ದರಿಂದ ಮುಂದಿನ ಮುಖ್ಯ ಅತಿಥಿಗಳ ಜೊತೆಯೇ ಕೂತಿದ್ದರು. ಜೊತೆಗೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ಕಾಮರಾಜ ನಾಡಾರ್ ಅವರು ಅಪ್ಪನಿಗೆಆತ್ಮೀಯರಾಗಿದ್ದರು. ಅಲ್ಲಿಂದ ವಾಪಸ್ಸು ಬರುವಾಗ ಆ ಸಾರೋಟಿನಲ್ಲಿಯೇ ಮನೆಗೆ ವಾಪಸ್ಸು ಬಂದಿದ್ದೆ.

“ಸರ್, ಏನು ತಪ್ಪು ತಿಳಿಯಬೇಡಿ. ಈಗ ತಾತ್ಕಾಲಿಕವಾಗಿ ನಮಗೆ ಉಳಿದಿರುವುದು ಒಂದೇ ಮಾರ್ಗ. ನಾವು ಸ್ವಲ್ಪಮಟ್ಟಿನ ಸುಳ್ಳಿನ ಮೊರೆ ಹೋಗಬೇಕಾಗುತ್ತದೆ. ಮಾನಸಿಕವಾಗಿ ಇದು ತಮಗೆ ಹಿಂಸೆಯಾಗಬಹುದು. ಆದರೂ ಸದ್ಯಕ್ಕೆ ಅದು ಅನಿವಾರ್ಯ ಅನ್ನಿಸುತ್ತದೆ. ಅದೇನೆಂದರೆ ಹಾಗೆ ಯಾರಾದರೂ ಕೇಳುವ ಸಮಯದಲ್ಲಿ; ನಾವು ಹೇಳಬೇಕಾದದ್ದು; ನಿನ್ನೆ ಬಂದಿದ್ದ, ಕಳೆದ ವಾರ ಬಂದಿದ್ದ, ಇನ್ನು ಮೂರು ನಾಲ್ಕು ವರ್ಷ ಅವನು ಮುಂಬಯಿಯಲ್ಲಿ ಇದ್ದೇ ಇರಬೇಕಾಗುತ್ತದೆ. ಯಾವುದೋ ಒಂದುದೊಡ್ಡ ಪ್ರಾಜೆಕ್ಟ್ ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ ಎಂದು ಹೇಳುತ್ತ ಹೋಗೋಣ” ಎಂದು ಸೂಚಿಸಿದ.

ಅದಕ್ಕೆ ಯಜಮಾನರು ಸ್ವಲ್ಪ ಸಮಯ ಸ್ವಾಮಿಯ ಮುಖವನ್ನೇ ನೋಡುತ್ತಿದ್ದು ತಮ್ಮ ಕೈಯನ್ನು ಅವನ ಕಡೆಗೆ ಚಾಚಿ ಕೈಕುಲುಕಿ “ಎಂಥ ಅದ್ಭುತ ಸಲಹೆಯನ್ನು ಕೊಟ್ಟಿದ್ದೀರಿ. ನಿಜವಾಗಿಯೂ ಸದ್ಯಕ್ಕೆ ಇದೇ ಅತ್ಯಂತ ಉಪಯುಕ್ತ ಕಾರ್ಯತಂತ್ರ ಅನ್ನಿಸುತ್ತದೆ. ಮತ್ತೊಮ್ಮೆ ಇದಕ್ಕಾಗಿ ಚಿಯರ್ಸ್” ಎಂದರು. ಭಾವನಾನು ತಾತ್ಕಾಲಿಕವಾಗಿಯಾದರೂ ಜನರ ಬಾಯಿ ಮುಚ್ಚಿಸಬಹುದೆಂಬ ಅಭಿಪ್ರಾಯಕ್ಕೆ ಬಂದಳು.

“ಸ್ವಾಮಿ, ನೀವಿಬ್ಬರೂ ಮಾತಾಡ್ತ ಡ್ರಿಂಕ್ಸ್ ತಗೊಳ್ತಿರಿ. ನಾನು ಹತ್ತು ನಿಮಿಷ ಮೈ ಚಾಚುತ್ತೀನಿ. ಆಮೇಲೆ ಕಂಪನಿ ಕೊಡ್ತೀನಿ. ಅರ್ಧಮುಕ್ಕಾಲು ಗಂಟೆಗಿಂತ ಹೆಚ್ಚಾಗಿ ಕೂರಲು ಆಗುವುದಿಲ್ಲ” ಎಂದರು.
ಅವರಿಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ಇಬ್ಬರೂ ಆ ಕ್ಷಣದಲ್ಲಿ ಮಾತು ಕಳೆದುಕೊಂಡಿದ್ದರು. ಇಡೀ ಕೊಠಡಿಯಲ್ಲಿ ನೀರವತೆ ಆವರಿಸಿಕೊಂಡಿತ್ತು. ಕಾಲು ಗಂಟೆಯಾದರೂ ಎಂಥ ಮಾತು ಇರಲಿಲ್ಲ.

ಯಜಮಾನರು ನಗುತ್ತ “ಭಾವನಾ ಬಾ ಇಲ್ಲಿ” ಎಂದು ಕರೆದರು. ಭಾವನಾ ನಿಧಾನವಾಗಿ ಯಜಮಾನರನ್ನು ಹಿಂದಕ್ಕೆ ಸರಿಸಿದಳು. ಅವರು ಸ್ವಲ್ಪ ಆರಾಮವಾಗಿ ಕೂತು; “ಕ್ಷಮಿಸಿ, ನಿಮ್ಮನ್ನು ಸುಮ್ಮನೆ ಕೂರಿಸಿದೆ. ನೀವು ಏನಾದರೂ ಮಾತಾಡಬಹುದಾಗಿತ್ತು. ಹೊರಗಡೆ ಕಿಟಕಿಯ ಬಳಿಯ ಹಲಸಿನ ಮರದಲ್ಲಿ ಕೂತ ಎರಡು ಹಾಲಕ್ಕಿಗಳು ಒಟ್ಟಿಗೆ ಕೂಗತೊಡಗಿದ್ದವು.

“ಹಾಗೆ ಒಟ್ಟಿಗೆ ಕೂಗಿದರೆ ಶುಭಸೂಚನೆಯಂತೆ” ಎಂದು ಭಾವನಾ ಹೇಳಿದಾಗ; ಯಜಮಾನರು ಅದಕ್ಕೆ ಪ್ರತಿಕ್ರಿಯಿಸಲಿಲ್ಲ. ಭಾವನಾಳನ್ನು ಒಂದೇ ಸಮನೇ ನೋಡತೊಡಗಿದ್ದರು; ಮನುಷ್ಯನ ಸುತ್ತ ಎಂತೆಂಥ ಸಂಗತಿಗಳು ಆವರಿಸಿಕೊಂಡಿರುತ್ತವೆ ಎಂದು. ಅದರಿಂದಲೂ ಅವಳಿಗೆ ತಾತ್ಕಾಲಿಕ ನೆಮ್ಮದಿ ಸಿಗುವಂತಿದ್ದರೆ ಸಿಗಲಿ. ಅದನ್ನು ಇಷ್ಟು ದೀರ್ಘಕಾಲದ ನಂತರ ಈಗ ಅಲ್ಲಗಳೆಯುವುದು ಸೂಕ್ತವಲ್ಲ ಎಂಬ ಮನಸ್ಥಿತಿಯಲ್ಲಿಯೇ ಮತ್ತೊಂದು ವಿಸ್ಕಿಯನ್ನು ಒಳಗೆ ಬಿಟ್ಟುಕೊಂಡರು. ಹಾಗೆಯೇ ಸ್ವಲ್ಪ ಕಣ್ಣು ಮುಚ್ಚಿದರು.
“ಸ್ವಾಮಿ, ಕೊನೆಗೂ ಈ ಕುಟುಂಬಕ್ಕೆ ನಾನೇ ಕೊನೆಯ ತಲೆಮಾರಿನವನಾಗಬಹುದು ಎಂಬ ಭೀತಿ ನನ್ನನ್ನು ಕಾಡುತ್ತಿದೆ. ನನ್ನ ಮಗನಂತೂ ಬರುವ ಯಾವ ಸೂಚನೆಯೂ ಇಲ್ಲ. ಅವನು ಬದುಕಿದ್ದಾನೋ ಇಲ್ಲವೋ ಅದೂ ಗೊತ್ತಿಲ್ಲ. ಇರಲಿ, ಬಿಡಿ. ಅದರ ಬಗ್ಗೆ ನಿಮ್ಮ ತಲೆ ಈಗಾಗಲೇ ಸಾಕಷ್ಟು ಕೆಟ್ಟಿದೆ. ಯಾವುದೂ ಶಾಶ್ವತವಲ್ಲ ಎಂಬ ತಾತ್ವಿಕ ಪರಿಕಲ್ಪನೆಯು ಮನುಷ್ಯನಿಗೆ ಅರಿವು ಮೂಡಿದಾಗಿನಿಂದಲೂ ಚಲಾವಣೆಯಲ್ಲಿದೆ. ಅಂಥದ್ದರಲ್ಲಿ ‘ಇದು ಶಾಶ್ವತ’ ಎಂಬ ಹುಚ್ಚುತನವನ್ನು ಯಾಕೆ ಆರೋಪಿಸಿಕೊಳ್ಳಬೇಕು. ಆದರೂ ನಾನು ಆಡಿ ಬೆಳೆದ ಜಾಗವಿದು. ಕೆಲವು ಅಪೂರ್ವ ನೆನಪುಗಳನ್ನು ಕೊಟ್ಟಿದೆ. ಅದನ್ನು ಹೇಗೆ ಪಾಳು ಬಿಡಲು ಸಾಧ್ಯ. ಯಾರನ್ನಾದರೂ ದತ್ತು ತಗೊಳ್ಳೋಣವೆಂದರೆ; ಆ ಹುಡುಗ ಬೆಳೆದು ಈ ಕುಟುಂಬಕ್ಕೆ ಹೇಗೆ ವಿಧೇಯನಾಗಿರುತ್ತಾನೆಂಬುದನ್ನು ಹೇಗೆ ನಂಬುವುದು, ಈಗ ಬೆಳೆಸಿ ಉತ್ತರಾಧಿಕಾರಿಯನ್ನಾಗಿ ಮಾಡುವ ಕಾಲಘಟ್ಟವನ್ನು ಮೀರಿ ಬಿಟ್ಟಿದ್ದೇವೆ; ಆದರೆ ಆದರೂ ಎಂಬ ಪ್ರಶ್ನೆ ಮುಖಾಮುಖಿಯಾಗ್ತದೆ.”

ಸ್ವಾಮಿ: “ನೀವು ಮತ್ತು ಭಾವನಾ ಕೂತು ಚರ್ಚೆ ಮಾಡಿ ಒಂದು ತೀರ್ಮಾನಕ್ಕೆ ಬನ್ನಿ. ಆಮೇಲೆ ಅದರ ಬಗ್ಗೆ ಕಾರ್ಯತಂತ್ರವನ್ನು ರೂಪಿಸೋಣ. ಮತ್ತೊಂದು ಮುಖ್ಯ ವಿಷಯ; ನೀವು ಸೂಕ್ಷ್ಮ ಸಂವೇದನೆಯುಳ್ಳವರಾದ್ದರಿಂದ; ಈ ಕುಟುಂಬವನ್ನುಕುರಿತು ಒಂದು ಕೃತಿಯನ್ನು ರಚಿಸಲು ಸಾಧ್ಯವಾ ಯೋಚಿಸಿ; ಯಾಕೆಂದರೆ; ನಾಳೆ ಇಂಥ ಕುಟುಂಬವೊಂದಿತ್ತು. ಅದು ಹೀಗೆ ಕಳೆದು ಹೋಯಿತು ಎಂಬ ಚಾರಿತ್ರಿಕ ಮಾಹಿತಿಗಾಗಿಯಾದರೂ ಇರಲಿ ಎಂಬುದು ನನ್ನ ಆಶಯ. ಭಾವನಾ ಇದಕ್ಕೆ ನಿನ್ನಅಭಿಪ್ರಾಯವೇನು?”
“ಮೊನ್ನೆ ಆಕಸ್ಮಿಕವಾಗಿ ಇದರ ಬಗ್ಗೆ ಪ್ರಸ್ತಾಪಿಸಿದ್ದೆ ಸ್ವಾಮಿಯ ಬಳಿ.”

“ಸರ್, ಈ ಕುಟುಂಬದ ವೈವಿಧ್ಯಮಯ ಆಗು ಹೋಗುಗಳನ್ನು ಇಲ್ಲಿಗೆ ಬಂದಾಗಲಿನಿಂದ ಗಮನಿಸುತ್ತಿದ್ದೇನೆ. ನಿಜವಾಗಿಯೂ ದಾಖಲು ಮಾಡಬೇಕಾದ್ದೇ ಆಗಿದೆ. ನನಗೆ ಒಂದಷ್ಟು ಸಮಯ ಕೊಡಿ” ಎಂದ.
“ಸಾಧ್ಯವಾದರೆ ನನ್ನ ಬದುಕಿನ ಕಾಲಾವಧಿಯಲ್ಲಿ ಬರಲಿ ಎಂಬುದು ನನ್ನ ಆಶಯ.”
“ಸರ್. ನಿಜವಾಗಿಯೂ ಪ್ರಯತ್ನಿಸುವೆ” ಎಂದ ಅವನು.

ಯಜಮಾನರು ಒಂದು ಕ್ಷಣ ಹಾಗೆಯೇ ಕಣ್ಣು ಮುಚ್ಚಿದರು. ಬಟ್ಟಲನ್ನು ಎರಡೂ ಕೈಯಲ್ಲಿಡಿದಿದ್ದರು. ಆ ಬಟ್ಟಲು ಅವರ ಎದೆಯ ಮೇಲೆ ಆಶ್ರಯ ಪಡೆದಿತ್ತು. ಮತ್ತೆ ಒಂದು ಗುಟುಕು ಕುಡಿದು “ಭಾವನಾ ಕಮಲಾ ಹೇಗಿದ್ದಾಳೆ? ಅವಳಿಗೆ ಸ್ವಲ್ಪ ರೆಸ್ಟ್ ತಗೊಳ್ಳೋದಿಕ್ಕೆ ಹೇಳು. ಹೆರಿಗೆಯ ದಿನಗಳು ಹತ್ತಿರ ಬರುತ್ತಿರಬಹುದು.”

“ಹೇಳಿದ್ದೇನೆ. ಇಷ್ಟರಲ್ಲಿಯೇ ಬೇರೆ ವ್ಯವಸ್ಥೆ ಮಾಡುವೆ. ಹಾಗೆಯೇ ಒಂದು ದಿನ ಬೀಚ್ ಗೆ ಹೋಗಲು ವ್ಯವಸ್ಥೆ ಮಾಡುವೆ. ಯಾವಾಗ ಮಾಡಲಿ?”
“ನೋಡು ನಿಮ್ಮ ಅನುಕೂಲ ನೋಡಿ, ನನಗೆ ತಿಳಿಸಿದರೆ ಸಾಕು. ಕೊನೆಗೂ ನೀವು ತಾನೇ ನನ್ನನ್ನು ಕರೆದುಕೊಂಡು ಹೋಗುವುದು” ಆ ಧ್ವನಿಯಲ್ಲಿ ವಿಷಾದವಿತ್ತು.
ಭಾವನಾ ಅವರ ಹತ್ತಿರ ಹೋಗಿ ತಲೆ ನೇವರಿಸುತ್ತ “ಎಲ್ಲದಕ್ಕೂ ಅಪ್ಸೆಟ್ ಆಗಬೇಡಿ. ಊಟ ತರಲಾ?”

“ಭಾವನಾ ಒಂದು ಕೆಲಸ ಮಾಡು. ಸ್ವಲ್ಪವೇ ಊಟ ಕಳಿಸಿ, ನೀವು ಅಲ್ಲೇ ಊಟ ಮಾಡಿ. ಯಾಕೆಂದರೆ ನೀವು ನನ್ನ ಊಟ ನೋಡಿ, ನೀವು ಸರಿಯಾಗಿ ಮಾಡುವುದಿಲ್ಲ. ಸಾಧ್ಯವಾದರೆ, ಸ್ವಾಮಿಗೆ ಇನ್ನು ಸ್ವಲ್ಪ ವಿಸ್ಕಿ ಕೊಡು”
ಭಾವನಾ ಆಗಲಿ ಎಂದು ಅಲ್ಲಿಂದ ಎದ್ದು ಬಂದಳು. ಸ್ವಾಮಿಯೂ ಯಜಮಾನರಿಗೆ ನಮಸ್ಕರಿಸಿ ಡೈನಿಂಗ್ ಟೇಬಲ್ ಬಳಿಗೆ ನಡೆದ. ಯಜಮಾನರನ್ನು ಏನೇನೋ ಕೇಳಬೇಕೆಂದುಕೊಂಡಿದ್ದ. ಆದರೆ ಅವರ ಮನಸ್ಥಿತಿಯನ್ನು ಕಂಡು ಕೇಳುವುದಕ್ಕೆ ಧೈರ್ಯವೇ ಬರಲಿಲ್ಲ. ಇರಲಿ, ಮೆರಿನಾಬೀಚ್ ಕಡೆ ಹೋದಾಗ; ಆ ಅಲೆಗಳ ಪ್ರಫುಲ್ಲತೆಯಲ್ಲಿ ಒಂದಷ್ಟು ಮಾತಾಡಿಸೋಣ. ಆದರೆ ಅಲ್ಲಿಯೂ ಎಚ್ಚರ ವಹಿಸಬೇಕು. ಯಾಕೆಂದರೆ ಅಲ್ಲೆಲ್ಲ ಬಾಲ್ಯವನ್ನು ಸಮೃದ್ಧವಾಗಿ ಅನುಭವಿಸಿದವರು ಎಂದುಯೋಚಿಸುವ ಸಮಯಕ್ಕೆ ಭಾವನಾ ಅವನ ಗ್ಲಾಸಿಗೆ ಮತ್ತೊಂದು ಸ್ಮಾಲ್ ವಿಸ್ಕಿ ಬಗ್ಗಿಸಿದ್ದಳು. ಅದಕ್ಕೆ ಬೇಕಾಗಿರಲಿಲ್ಲ ಎಂದು ತಲೆಯೆತ್ತಿ ಅವಳ ಮುಖ ನೋಡಿದ. ಅವಳು ನಗುತ್ತ
“ಕುಡೀರಿ ಸ್ವಾಮಿ, ನೀವು ಔಟ್ ಆಗೋದು ನೋಡಬೇಕು. ಆಗ ನಿಮ್ಮ ಬಾಯಿಂದ ಎಂತೆಂಥ ಸುಂದರ ಮಾತುಗಳು ಬರುತ್ತವೆಯೋ ನೋಡಬೇಕು.”

“ಭಾವನಾ ನಿನಗ್ಯಾಕೆ ಆ ಹುಚ್ಚು?”
“ಹುಚ್ಚಲ್ಲ. ನೀವು ಯಾವ ರೀತಿಯ ಕುಡುಕರು ಎಂಬುದು ಸಾಬೀತು ಪಡಿಸಿಕೊಳ್ಳಬೇಕು.”
“ಸರಿಯಮ್ಮ, ಕಾಯ್ತಾ ಕೂತಿರು”
“ಕೊನೆಯ ಪಕ್ಷ ನಿಮ್ಮ ಮುಖದಲ್ಲಿ ಆಗುವ ಏರುಪೇರನ್ನು ನಾನು ನೋಡಬೇಕು.”
“ನಿಜವಾಗಿಯೂ ನಿನ್ನ ಮೂತಿಗೆ ಎರಡು ಬಿಡೋಣ ಅನ್ನಿಸುತ್ತಿದೆ.”
“ನೋಡಿ, ಈಗ ಗೊತ್ತಾಯಿತು. ಅದು ಕುಡಿತದ ಮಾತಿನ ಲಕ್ಷಣ.”
“ಸರಿಯಮ್ಮ. ಈಗ ಒಂದು ಕೆಲಸ ಮಾಡು. ಊಟ ಬಡಿಸು. ಕೊಠಡಿಗೆ ಹೋಗಿ ಆರಾಮವಾಗಿ ಮಲಗಬೇಕು”

“ಬೇಡ, ಸ್ವಾಮಿ ಇನ್ನು ಸ್ವಲ್ಪ ಸಮಯ ಊಟವಾದ ಮೇಲೆ ಕೂಡೋಣ. ನೋಡಿ ಆಕಾಶದಲ್ಲಿ ಚಂದ್ರ ಎಷ್ಟು ವಿಶಾಲ ಹೃದಯದಿಂದ ಕಾಣಿಸಿಕೊಂಡಿದ್ದಾನೆ. ನಾವು ಹೋದರೆ ಅವನಿಗೆ ಬೇಸರವಾಗುವುದಿಲ್ಲವೇ?”
“ಅಯ್ಯೋ ತಿಕ್ಕಲಮ್ಮ, ನಿನಗೆ ಬುದ್ಧಿ ಇಲ್ಲ. ಆ ಚಂದ್ರನನ್ನು ನಿನ್ನಂತೆ ಮೋಹಿಸುವವರು ಪ್ರತಿದಿವಸ ಲಕ್ಷಾಂತರ ಮಂದಿ ಇರ್ತಾರೆ. ಅವನಿಗೂ ನಿಮ್ಮಂಥವರ ಪ್ರೀತಿ-ಪ್ರೇಮ ಕಂಡು ಬೋರ್ ಆಗಿಬಿಟ್ಟಿರುತ್ತೆ. ಆದ್ದರಿಂದಲೇ ಅವನು ಯಾವಾಗಲೂ, ನಿರ್ಲಿಪ್ತನಂತೆ ಗೋಚರಿಸುವುದು.”
“ನಿಮ್ಮ ತರಲೆ ಮಾತು ಸಾಕು, ನಾನು ಆಜ್ಞೆ ಮಾಡ್ತಾ ಇದ್ದೇನೆ. ರಾತ್ರಿ ಹನ್ನೆರಡರವರೆಗೂ ನೀವು ಚಂದ್ರನ ಬೆಳಕಲ್ಲಿ ಕೂರಬೇಕು.”
ಇಬ್ಬರೂ ಊಟ ಮುಗಿಸಿದರು. ಹೊರಗೆ ಚಂದ್ರನ ಬೆಳಕಿಗೆ ಪೂರಕವೆಂಬಂತೆ ತೆಳುವಾದ ಗಾಳಿ ಇತ್ತು. ಹೋಗಿ ಕೂತರು. ಒತ್ತಾಯ ಮಾಡಿ, ಕಮಲಾಳನ್ನು ಕೂರಿಸಿಕೊಂಡರು. ದೂರದಲ್ಲಿ ಕದ್ದು ನೋಡುತ್ತಿದ್ದ ದೊರೈನನ್ನು ಕರೆದರು. ಅವನು ಸಂಕೋಚದಿಂದಲೇ ಬಂದು, ದೂರದಲ್ಲಿ ಕೈಕಟ್ಟಿ ನಿಂತಿದ್ದ. ಒತ್ತಾಯ ಮಾಡಿ ಹತ್ತಿರ ಕರೆದರು. ಕಮಲಾ ತಲೆತಗ್ಗಿಸಿ ಕೂತಿದ್ದಳು. ದೊರೈನನ್ನು ಕೂರಿಸಿದರು.

ಸ್ವಾಮಿಯೂ ಯಜಮಾನರಿಗೆ ನಮಸ್ಕರಿಸಿ ಡೈನಿಂಗ್ ಟೇಬಲ್ ಬಳಿಗೆ ನಡೆದ. ಯಜಮಾನರನ್ನು ಏನೇನೋ ಕೇಳಬೇಕೆಂದುಕೊಂಡಿದ್ದ. ಆದರೆ ಅವರ ಮನಸ್ಥಿತಿಯನ್ನು ಕಂಡು ಕೇಳುವುದಕ್ಕೆ ಧೈರ್ಯವೇ ಬರಲಿಲ್ಲ. ಇರಲಿ, ಮೆರಿನಾಬೀಚ್ ಕಡೆ ಹೋದಾಗ; ಆ ಅಲೆಗಳ ಪ್ರಫುಲ್ಲತೆಯಲ್ಲಿ ಒಂದಷ್ಟು ಮಾತಾಡಿಸೋಣ. ಆದರೆ ಅಲ್ಲಿಯೂ ಎಚ್ಚರ ವಹಿಸಬೇಕು. ಯಾಕೆಂದರೆ ಅಲ್ಲೆಲ್ಲ ಬಾಲ್ಯವನ್ನು ಸಮೃದ್ಧವಾಗಿ ಅನುಭವಿಸಿದವರು ಎಂದುಯೋಚಿಸುವ ಸಮಯಕ್ಕೆ ಭಾವನಾ ಅವನ ಗ್ಲಾಸಿಗೆ ಮತ್ತೊಂದು ಸ್ಮಾಲ್ ವಿಸ್ಕಿ ಬಗ್ಗಿಸಿದ್ದಳು.

“ದೊರೈ ಕೊನೆಗೂ ಇಲ್ಲೆಲ್ಲ ಆಡೋದಿಕ್ಕೆ ಒಂದು ಮಗುವನ್ನು ಕೊಡ್ತಿದ್ದೀಯ. ಗುಡ್. ಹುಡುಗಿಯನ್ನು ಕೊಡ್ತೀಯೋ, ಹುಡುಗನನ್ನು ಕೊಡ್ತೀಯೋ” ಎಂದ ಸ್ವಾಮಿ.
“ನನಗೆ ಹುಡುಗ ಆದರೆ ಇಷ್ಟ” ಎಂದ ದೊರೈ.
ಅದಕ್ಕೆ ಕಮಲಾ ಚಕ್ಕನೆ, ಅವನ ಮೋರೆ ನೋಡಿ, “ಹುಡುಗನಂತೆ ಹುಡುಗ. ಯಾವುದೋ ಬರ್ತದೆ ಬಿಡಿ” ಎಂದಳು. ಅದಕ್ಕೆ ಸ್ವಾಮಿ ಮತ್ತು ಭಾವನಾ ದಂಗಾದರು.
“ಕಮಲಾ ಯಾಕೆ ಅವನ ಮೇಲೆ ಅಷ್ಟು ರೋಪ್ ಹಾಕ್ತೀಯ?”
“ಅಮ್ಮಾವ್ರೆ ನಿಮಗೆ ಗೊತ್ತಿಲ್ಲ. ತುಂಬ ಘಾಟಿ ಇದ್ದಾನೆ. ನನ್ನ ಮೇಲೆ ಎಷ್ಟು ಜಬರದಸ್ತು ಮಾಡ್ತಾನೆ ಗೊತ್ತ. ಇನ್ನು ಸ್ವಲ್ಪ ಉದ್ದ ಇದ್ದಿದ್ದರೆ, ಸಾಯಿಸೇ ಬಿಡ್ತಿದ್ದ.”
“ಅಮ್ಮಾವ್ರೆ ನಿಜವಾಗಿಯೂ ಇಲ್ಲ. ಕಾಟ ಕೊಡೋದೆ ಅವಳು.”
“ಇರಲಿ ದೊರೈ, ಹೀಗೆ ಕಿತ್ತಾಡಿಕೊಂಡಿರಿ. ಇಲ್ಲದಿದ್ದರೆ ಸ್ವಾರಸ್ಯವೇ ಇರೋದಿಲ್ಲ.” ಎಂದಳು ಭಾವನಾ.
“ಅಮ್ಮಾವ್ರೆ; ಅವನ ಬುದ್ಧಿ ನಿಮಗೆ ಗೊತ್ತಿಲ್ಲ; ಈಗ ನೀವು ಹೇಳಿದ್ದೀರಿ ಅಂತ ಅದನ್ನು ಅವನು ಸರ್ಟಿಫಿಕೇಟ್ ಮಾಡಿಕೊಳ್ತಾನೆ. ಕಂಟ್ರೋಲ್ ಮಾಡೋದಿಕ್ಕೆ ಆಗೋದಿಲ್ಲ” ಕಮಲಾಳ ಆ ಮಾತು ಕೇಳಿ ಭಾವನಾ ಮತ್ತು ಸ್ವಾಮಿ ಹಸನ್ಮುಖಿಗಳಾಗಿ “ನೀವುಹೀಗೇ ಇರಬೇಕು. ಟೈಮಾಯಿತು ಹೋಗಿ ಮಲಗಿ” ಎಂದಳು.

ಅವರಿಬ್ಬರೂ ತಮ್ಮ ಕುಟೀರದತ್ತ ನಡೆದರು. ಅದೇ ಸಮಯಕ್ಕೆ ಗಡಿಯಾರ ಹನ್ನೊಂದು ಗಂಟೆ ಸೂಚಿಸಿತು.
ಅವರಿಬ್ಬರ ನಡುವೆ ಸ್ವಲ್ಪ ಸಮಯ ಮಾತಿರಲಿಲ್ಲ. ತೋಟದ ಆ ದಟ್ಟ ಮರಗಿಡಗಳ ಮಧ್ಯೆ ಯಾವ ಯಾವ ಜಾತಿಯ ಕೀಟಗಳು ವಿಚಿತ್ರ ರೀತಿಯ ಶಬ್ದ ಮಾಡುತ್ತಿದ್ದವು. ಒಮ್ಮೊಮ್ಮೆ ಅದು ಧ್ವನಿ ಪೂರ್ಣವೂ ಹೌದು, ಕರ್ಕಶವೂ ಕೂಡ.
“ಸ್ವಾಮಿ ನಿಮಗೆ ಬೇಸರವಾಗುತ್ತಿದ್ದರೆ ಕೊಠಡಿಗೆ ಹೋಗೋಣ.”
“ನೀನೇ ಹೇಳಿದೆ. ಹನ್ನೆರಡು ಗಂಟೆಯವರೆವಿಗೂ ಇರಬೇಕು. ಇದು ನನ್ನ ಆಜ್ಞೆ ಎಂದು.”
“ಮಹಾ ಆಜ್ಞೆ ಪಾಲಿಸೋದು” ಎಂದಳು.

“ಭಾವನಾ ಈಗ ಅಂಥ ಅನಗತ್ಯ ಮಾತುಗಳಿಂದ ಪ್ರಯೋಜನವಿಲ್ಲ. ಯಜಮಾನರನ್ನು ಸಮುದ್ರದಂಡೆಗೆ ಯಾವಾಗ ಕರೆದುಕೊಂಡು ಹೋಗೋಣ? ಸಾಧ್ಯವಾದರೆ ಅವರ ಒಟ್ಟು ಮಾತನ್ನು ವಿಡಿಯೋದಲ್ಲಿ ಹಿಡಿದಿಡಲು ಪ್ರಯತ್ನಿಸೋಣ. ಅಂದಿನ ಅವರ ಒಟ್ಟು ಮಾತಿನ ಹಿನ್ನೆಲೆಯಲ್ಲಿ ಈ ಕುಟುಂಬದ ಬಗ್ಗೆ ಬರೆಯಲು ಪ್ರಯತ್ನಿಸುವೆ. ಯಾಕೆಂದರೆ ಯಜಮಾನರು ತಮ್ಮ ಬಾಲ್ಯದಲ್ಲಿ ತಂದೆಯವರ ಕುದುರೆಯ ಮೇಲೆ ಕೂತು ಸಮುದ್ರ ದಂಡೆಯಲ್ಲಿ ಸವಾರಿ ಮಾಡುವುದೆಂದರೆ ಎಂಥ ಅಪೂರ್ವವಾದದ್ದು. ಅದು ಬಾಲ್ಯದ ಶ್ರೀಮಂತಿಕೆಯ ಸಂಕೇತವಲ್ಲವೆ? ಅದನ್ನು ಅವರು ಹೇಳುವಾಗ ಒಂದು ವಿಧದ ವೇದನೆ ಇತ್ತು. ಕೊನೆಗೆ ಅಂಥ ಶ್ರೀಮಂತ ಬಾಲ್ಯದಿಂದ ಬೆಳೆದ ಅವರ ಯೌವನವೂ ಕೂಡ ನುಚ್ಚುನೂರಾದದ್ದು ಕೂಡ ಕುದುರೆಯ ಓಟದಿಂದಲೇ. ಅಷ್ಟೇ ಅಲ್ಲ ಅವರು ಪದವಿ ಪಡೆದು ಬಂದದ್ದೇ ಕುದುರೆಯ ಸಾರೋಟಿನಲ್ಲಿ. ಯಜಮಾನರನ್ನು ನೋಡುತ್ತಿದ್ದರೆ ಅತ್ಯಂತ ಸುಸಂಸ್ಕೃತ ವ್ಯಕ್ತಿ ಅನ್ನಿಸುತ್ತದೆ. ಅವರು ಕೇವಲ ಮನೆಯ ವಾತಾವರಣದಿಂದ ಮಾತ್ರವಲ್ಲ. ಕಾಲೇಜಿನವಾತಾವರಣದಿಂದಲೂ ಅತ್ಯುತ್ತಮವಾದದ್ದನ್ನು ಪಡೆದು ಬಂದಿದ್ದಾರೆ. ಮತ್ತೆ ಪುಸ್ತಕ ಸಂಸ್ಕೃತಿ ಕುರಿತಂತೆ ಗಾಢವಾದ ಅಭಿರುಚಿ ಇದೆ. ಸಂಜೆಯ ಮಾತಿನಲ್ಲಿ ಅವರ ಸ್ನೇಹಿತರೊಬ್ಬರನ್ನು ದೃಷ್ಟಿಯಲ್ಲಿಟ್ಟುಕೊಂಡು “ನನ್ನನ್ನು ಇಲ್ಲಿಯವರೆವಿಗೆ ಬದುಕಿಸಿದ್ದರೆ ಪುಸ್ತಕಗಳು ಮಾತ್ರ” ಎಂಬ ಮಾತು ಮಹತ್ವಪೂರ್ಣವಾದದ್ದು. ಆ ರೀತಿಯ ಮನೋಭಾವನೆಯ ವ್ಯಕ್ತಿಯ ಕಾರಣಕ್ಕಾಗಿಯಾದರೂ ಈ ಕುಟುಂಬ ಕುರಿತು ನಾನು ಬರೆಯಲೇಬೇಕಾಗಿದೆ. ಭಯ ಪಡಬೇಡ, ನಿನ್ನೆ ತಾನೇ ನೀನು ನಿನ್ನ ಬಗ್ಗೆ ಬರೆಯಲು ಕೇಳಿಕೊಂಡಿದ್ದೆ. ಅದರಲ್ಲೂ ಮುಖಪುಟದಲ್ಲಿ ನೀನು ಅದ್ಭುತವಾಗಿ ಕಾಣುವಂತೆ. ಭಾವನಾ ನಿಜವಾಗಿಯೂ ಬರೆಯುವೆ. ನೀನು ಎಷ್ಟು ತರಲೆ ಎಂದು” ಭಾವನಾಳ ಬೆನ್ನು ತಟ್ಟಿ “ಎದ್ದೇಳಮ್ಮ ಕೊಠಡಿ ಕರೆಯುತ್ತಿದೆ”

“ನೀವೇ ಹೋಗಿ. ನಾನು ತರಲೆ ಎಂಬುದನ್ನು ನೀವು ವಾಪಸ್ಸು ತೆಗೆದುಕೊಳ್ಳುವವರೆಗೆ; ನಾನು ಬರುವುದಿಲ್ಲ”

“ಅಮ್ಮ ಜಗನ್ಮಾತೆ ಬಾಮ್ಮ. ಹಿಂದೆ ಎಷ್ಟು ಬಾರಿ ತರಲೆ ಎಂದು ಸಂಬೋಧಿಸಿದ್ದೇನೆ. ಆಗ ವಿರೋಧಿಸಲಿಲ್ಲ. ಈಗ ಏನು? ಒಂದು ವೇಳೆ ನಾನು ನಿನ್ನ ಬಗ್ಗೆ ಬರೆದರೆ ತರಲೆ ಎಂದಲ್ಲ ಬರೆಯುವುದು. ಎಷ್ಟು ಲವಲವಿಕೆಯ ತರಲೆ ಎಂದು”
“ಸರಿಯಪ್ಪ ಏನಾದರೂ ಬರೆದುಕೋ. ನಾನು ನಿರ್ಲಿಪ್ತಳಾಗಿರುತ್ತೇನೆ. ಮತ್ತೆ ಹಾಗೆ ಹೇಳಿ ಬರೆಸಿಕೊಳ್ಳುವುದೂ ಕೂಡ ಅಷ್ಟು ಸಮಂಜಸವಲ್ಲ.”

(ಲೇಖಕರ ಚಿತ್ರಗಳು: ಜಯಶಂಕರ ಹಲಗೂರು)

ಗಡಿಯಾರ ಹನ್ನೆರಡು ಎಂದು ಧ್ವನಿ ಮಾಡತೊಡಗಿತು. ಇಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡಿಕೊಳ್ಳುತ್ತ ಕೊಠಡಿಗೆ ಹೋದರು. ಹೋದ ತಕ್ಷಣ ಆ ಕುಟುಂಬದ ವಂಶೋದ್ಧಾರಕ ರಾಮ್ ಕುಮಾರ್ ನಾಡಾರ್ ವ್ಯಂಗ್ಯವಾಗಿ ಸ್ವಾಮಿಯ ಕಡೆಗೆ ನೋಡಿದಂತೆನ್ನಿಸಿತು. ಅಲ್ಲಿ ನನ್ನ ಭಾವಚಿತ್ರ ತೆಗೆದು ಮರೆಯಲ್ಲಿಟ್ಟಿದ್ದೀಯ, ಇಲ್ಲಿಯೂ ತೆಗೆದು ಬಿಡು ಎನ್ನುವ ರೀತಿಯಲ್ಲಿತ್ತು ಆ ನೋಟ. ಸ್ವಾಮಿ ತೀವ್ರವಾಗಿ ಮಗನ ಭಾವಚಿತ್ರವನ್ನು ನೋಡುತ್ತಿದ್ದುದನ್ನು ಕಂಡು ಭಾವನಾ ಹತ್ತಿರ ಬಂದು “ನಿಮಗೆ ಮುಜಗರವಾದರೆ ತೆಗೆದು ಮರೆಯಲ್ಲಿಡಿ. ನಾನೇನು ತಪ್ಪಾಗಿ ಭಾವಿಸುವುದಿಲ್ಲ.”

“ಭಾವನಾ ನಿನ್ನ ಸಮಸ್ಯೆ ಮತ್ತು ವೇದನೆ ಎರಡೂ ಗೊತ್ತು. ಯಾಕೆಂದರೆ ಪ್ರತಿಯೊಂದು ಭಾವಚಿತ್ರವಾಗಲಿ, ವಿಗ್ರಹವಾಗಲಿ ಜೀವಂತ ವ್ಯಕ್ತಿಯ ಸ್ಥಾನದಲ್ಲಿಯೇ ನಿಂತು ಸಂಬಂಧಗಳನ್ನು ನಿಯಂತ್ರಿಸುತ್ತಿರುತ್ತದೆ. ಆ ನೆಲೆಯಲ್ಲಿ ನಿನ್ನ ಒಪ್ಪಿಗೆಯನ್ನು ಪಡೆದೇ ತೆಗೆದು ಮರೆಯಲ್ಲಿಡುತ್ತಿದ್ದೇನೆ. ಅನ್ಯಥಾ ಭಾವಿಸಬೇಡ” ಎಂದ.

ಜೊತೆಗೆ ಅವನು ಅವಳ ಪಕ್ಕದಲ್ಲಿ ಮಲಗಿರುವಾಗ ಆ ಭಾವಚಿತ್ರ ತನ್ನನ್ನು ಉಗ್ರವಾಗಿ ನೋಡುತ್ತ ನಿನಗೆ ಯಾವ ವಿಧವಾದ ನೈತಿಕತೆ ಇದೆ. ನನ್ನ ತಾಯಿಯ ಪಕ್ಕದಲ್ಲಿ ಮಲಗಲು. ಅದರಲ್ಲೂ ಈ ಕೊಠಡಿಯ ಸನಿಹದಲ್ಲಿಯೇ ತಂದೆ ಅನಾಥವಾಗಿನರಳುತ್ತ ಮಲಗಿರುವಾಗ; ನಿಮಗೆ ಪಾಪಪ್ರಜ್ಞೆಯೇ ಇಲ್ಲ ಎಂದು ಚುಚ್ಚಿ ಚುಚ್ಚಿ ಹೇಳಿದಂತಾಗುತ್ತಿತ್ತು. ಆಗ ಎಷ್ಟು ಬಾರಿ ತಲ್ಲಣದಿಂದ ಒದ್ದಾಡಿದ್ದಾನೆ. ಆದರೆ ಆ ಸಮಸ್ಯೆಯನ್ನು ಭಾವನಾಳ ಮುಂದೆ ಎಂದೂ ಹೇಳಲು ಹೋಗಿಲ್ಲ. ಯಾಕೆಂದರೆ ಆತಂಕಕ್ಕೆ ಒಳಗಾಗುವಳು ಎಂದು. ಅದರ ಪ್ರಾಯಶ್ಚಿತ್ತ ಹೇಗೆ ಒದಗಿ ಬರುವುದೋ ಗೊತ್ತಿಲ್ಲ. ಹಿಂದೆ ಒಮ್ಮೆ ಬಿದ್ದ ಭೀಕರ ಕನಸನ್ನು ನೆನಪು ಮಾಡಿಕೊಂಡು ಗಾಬರಿಯಿಂದ; ಅವನಿಗೆ ಗೊತ್ತಿಲ್ಲದೆಯೇ “ಓ ದೇವರೇ” ಎಂದು ಉದ್ಗಾರ ತೆಗೆದ.

ಭಾವನಾ ಅವನ ಹೆಗಲ ಮೇಲೆ ಕೈಯಾಕಿ “ಯಾಕೆ ಏನಾಯಿತು? ನೀವು ಯಾಕೆ ನೋವು ತಿನ್ತೀರಿ. ಅವನ ಭಾವಚಿತ್ರ ತೆಗೆದಿದ್ದಕ್ಕೆ” ಎಂದು ಮುಗ್ಧತೆಯಿಂದ ಕೇಳಿದಳು.

ಅದಕ್ಕೂ ಅವನು ಅವಳ ಮುಗ್ಧತೆಯನ್ನು ವಂಚಿಸುತ್ತಿದ್ದೇನೆ ಎಂದು ಭಾವಿಸಿದ. ಜೊತೆಗೆ ಈ ಮಹಾನ್ ಕುಟುಂಬದ ಜೀವಾಳವಾದ ಹುಡುಗನೊಬ್ಬನ ಭಾವಚಿತ್ರವನ್ನು ಎರಡೂ ಕಡೆಯೂ ನಾನೇ ತೆಗೆಯುವಂಥ ಪರಿಸ್ಥಿತಿ ಉದ್ಭವಿಸಿತೇ ಎಂದು ಒದ್ದಾಡಿದ. ಅಯ್ಯೋ ಇದೆಲ್ಲ ಹೇಗೆ ಘಟಿಸುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಎಂದು ಯೋಚಿಸುತ್ತಲೇ ಭಾವನಾಳ ಮಗ್ಗುಲಲ್ಲಿದ್ದ. ಆಗ ಸಿದ್ದಪ್ಪ ಸ್ವಾಮೀಜಿಯನ್ನು ಸ್ಮರಿಸುತ್ತಲೇ ಭಾವನಾಳ ಕೂದಲಲ್ಲಿ ಬೆರಳಾಡಿಸುತ್ತ “ಗೊತ್ತಿಲ್ಲ ನನ್ನ ಬದುಕುಎಲ್ಲಿಗೆ ತಲುಪುವುದೆಂದು ಯೋಚಿಸಿದ.”
ಆಗ ಜೋಡಿ ಹಾಲಕ್ಕಿಗಳು ಎರಡು ಬಾರಿ ಕೂಗಿಕೊಂಡವು.

ಆಗ ಭಾವನಾ “ಸ್ವಾಮಿ ಏನೂ ಬೇರೆ ಯೋಚನೆ ಮಾಡದೆ ಸುಮ್ಮನೆ ಮಲಗಿ. ಎಲ್ಲವೂ ಒಳ್ಳೆಯದಾಗುವುದು” ಎಂದಳು.
ಯಜಮಾನರ ರೀತಿಯಲ್ಲಿ ಅದನ್ನು ವಿರೋಧಿಸಲು ಹೋಗಲಿಲ್ಲ. ಇಂಥ ದೀರ್ಘಕಾಲದ ನಂಬಿಕೆಗಳು ಏನೋ ಒಳ್ಳೆಯದನ್ನು ಅಂಟಿಸಿಕೊಂಡೇ ಕಾಲಕಾಲಕ್ಕೂ ವಿಸ್ತಾರವಾಗುತ್ತ ಬಂದಿರಬಹುದು ಎಂಬ ಭಾವನೆ ಅವನ ಮನಸ್ಸಿನಲ್ಲಿ ಕೆಲಸಮಾಡತೊಡಗಿತ್ತು.

 

(ಯಾತ್ರೆ: ಶೂದ್ರ ಶ್ರೀನಿವಾಸ್ ಅವರ ಕಾದಂಬರಿ, ಪ್ರಕಾಶಕರು: ಅಂಕಿತ ಪ್ರಕಾಶನ, ಬೆಲೆ:295/-)