ಪಂಪ ತನ್ನ ಕಾವ್ಯದ ವಸ್ತುವನ್ನು ಸಂಸಾರದಿಂದಲೇ ಪ್ರಾರಂಭ ಮಾಡಿ ಅದರಿಂದ ವಿಮುಕ್ತಿ ಹೊಂದುವುದಕ್ಕೆ ಸಹಜವಾಗಿಯೇ ಕಾಲಾನಂತರದಲ್ಲಿ ಆಗುವ ಅಪಾರ ಬದಲಾವಣೆಯನ್ನು ಹೇಳುತ್ತಾನೆ. ಈ ಬದಲಾವಣೆಯೇ ಆದಿಪುರಾಣದ ಸಾರವಾಗಿಯೂ ನಿಲ್ಲುತ್ತದೆ. ಇಲ್ಲಿನ ಎಲ್ಲಾ ಭವಾವಳಿಯಲ್ಲಿಯೂ ಸಂಸಾರದ, ಸಾಮ್ರಾಜ್ಯದ, ವೈಭವದ ಉತ್ತುಂಗ ಶಿಖರವನ್ನು ತೋರಿಸಿ ಇನ್ನೇನು ಅದು ದಕ್ಕಿತು ಅನ್ನುವಷ್ಟರಲ್ಲಿ ಅದರಿಂದ ವಿಮುಖತೆಯನ್ನು ಸಾರಿ ಬಿಡುತ್ತಾನೆ. ಇದು ಮಾನವ ಜೀವನ ಕ್ರಮದ ಸಹಜವಾದ ಸ್ಥಿತಿಯೂ ಹೌದು. ಈ ಸ್ಥಿತಿಯನ್ನು ಹೇಳುವುದಕ್ಕಾಗಿಯೇ ಕಥೆಗಳನ್ನು ಬರೆಯುವುದು ಎನ್ನುವ ಬಹುದೊಡ್ಡ ಉದ್ದೇಶವನ್ನು ತನ್ನ ಆದಿಪುರಾಣದ ಪ್ರಾರಂಭದ ಪದ್ಯದಲ್ಲಿ ಹೇಳಿದ್ದಾನೆ.
ಆರ್. ದಿಲೀಪ್ ಕುಮಾರ್ ಬರೆಯುವ ಅಂಕಣ

 

ಚರಣಯುಗಳಂ ನೂಪುರಾಳಾಪ ಶೂನ್ಯಂ
(ಸ್ವಯಂ ಪ್ರಭೆಯ ವಿಪ್ರಲಂಭ ಶೃಂಗಾರ)

ಆದಿಪುರಾಣ ಕನ್ನಡದ ಬಹಳ ಪ್ರಸಿದ್ಧವಾದ ಕಾವ್ಯಗಳಲ್ಲಿ ಒಂದು. ಆದಿಪುರಾಣಕ್ಕೆ ಮೂಲ ಪ್ರಾಕೃತದ ಜಿನಸೇನಾಚಾರ್ಯರ ಪೂರ್ವ ಪುರಾಣದ ಕಥಾವಳಿ. ಇದು ಆದಿದೇವನ ಭವಾವಳಿಯ ಜೊತೆಗೆ ಜೈನ ಧರ್ಮದ ತತ್ವಗಳನ್ನು ಒಳಗೊಂಡ ಮಹಾ ಸಮುದ್ರದ ಹಾಗೆ ಭಾಸವಾಗುತ್ತದೆ. ಹೆಜ್ಜೆ ಹೆಜ್ಜೆಗೂ ಜೈನಧರ್ಮದ ತತ್ವಗಳು, ಹೆಜ್ಜೆ ಹೆಜ್ಜೆಗೂ ಅದಕ್ಕೆ ಪೂರಕ ಕಥೆಗಳು, ಅದೆಲ್ಲವುಗಳೂ ಒಂದು ಮೂಲ ಉದ್ದೇಶವಾದ ಅಹಿಂಸೆಯನ್ನು ಹೊತ್ತ ಜೈನ ಧರ್ಮದ ತತ್ವದ ಕಡೆಗೆ ಚಲಿಸುವುದು ತಿಳಿದೇ ಇದೆ. (ನೋಡಿ ಮಹಾಪುರಾಣ ಸಾರ – ಕನ್ನಡಕ್ಕೆ ಮಿರ್ಜಿ ಅಣ್ಣಾರಾಯ ಮತ್ತು ಬೋಗಾರ) ಪಂಪ ಮಹಾಕವಿ ತನ್ನ ಭಾವದ ಅಭಿವ್ಯಕ್ತಿಗಾಗಿ ಮತ್ತು ತನಗಾಗಿ ಬರೆದುಕೊಂಡ ಕಾವ್ಯವಿದು. ಧರ್ಮ ಮತ್ತು ಕಾವ್ಯ ಧರ್ಮಗಳನ್ನು ಹೇಳುವುದಕ್ಕೆ ವಾಸನಾ ರೂಪದಲ್ಲಿರುವ ಮನುಷ್ಯನ ಆಳ ಮನಸ್ಸಿನ ಭಾವವೇ ಇಲ್ಲಿ ಮುಖ್ಯವಾಗುತ್ತದೆ. ಇದರಿಂದಲೇ ಇಲ್ಲಿನದರಲ್ಲೆ ಅಲ್ಲಿಗೆ ಕನೆಕ್ಟ್ ಮಾಡುವ ಕ್ರಮವಿದೆಯಲ್ಲ ಅದು ಆದಿಪುರಾಣದ ತಾತ್ವಿಕತೆ. ಆತನೇ ಹೇಳುವ ಹಾಗೆ “ಬೆಳಗುವೆನಿಲ್ಲಿ ಲೌಕಿಮನಲ್ಲಿ ಜಿನಾಗಮಮಂ” ಅನ್ನುವ ಮಾತಿನಲ್ಲಿನ “ಅಲ್ಲಿ” ಅನ್ನುವುದು ಬಸದಿಯಲ್ಲಿ ಅನ್ನುವುದನ್ನು ಧ್ವನಿಸುತ್ತಿದೆ. ಅದಲ್ಲದೆ “ಆದಿಪುರಾಣದೊಳ್ ಅರಿವುದು ಕಾವ್ಯಧರ್ಮಮಂ ಧರ್ಮಮಂ” ಅನ್ನುವ ಮಾತು ಸಹಾ ಏಕಕಾಲದಲ್ಲಿ ಧರ್ಮ – ಕಾವ್ಯ ಧರ್ಮಗಳ ಸಮ್ಮಿಲನವನ್ನು ತಿಳಿಸುತ್ತದೆ. ಆತನೇ ತನ್ನ ಕಾವ್ಯದ ಕಥಾ ವಸ್ತುವಿನ ಆಯ್ಕೆಯ ಬಗೆಗೆ ಆಡುವ ಮಾತುಗಳು ಬಹಳ ಮುಖ್ಯವಾದುದು.

ಪುರುದೇವಾದಿ ಜಿನೇಂದ್ರ ಮಾಲೆ
ಗುಣಭೃತ್ ಸಂತಾನಮ್ ಎಂದು ಈ ಪರಂಪರೆಯಂ
ವಿಶ್ರುತ ವೀರಸೇನ ಜಿನಸೇನಾಚಾರ್ಯ ಪರ್ಯಂತಮಾಗಿರೆ
ಬಂದ ಈ ಕಥೆ ಗುಣ್ಪುವೆತ್ತದು
ಅವರುಂ ಜ್ಞಾನಾರ್ಧಿ ಸಂಪನ್ನರ್ ಎಂದು ಇರದೆ
ಆಂ ಧೃಷ್ಟನೆನ್
ಈ ಕಥಾಬ್ದಿಯುಮನ್
ಏನ್ ಈಸಲ್ ಮನಂದಂದೆನೋ ( 1.35 )

(ಪಂಪ ಕವಿ)

ಹೀಗೆ ಪಂಪ ಅನ್ನುವಾಗ ಜಿನಸೇನಾಚಾರ್ಯರ ಆದಿಯಾಗಿ ಜೈನ ಕಥಾ ಹಂದರದ ಮೇಲಿನ ಅಪಾರವಾದ ಭಕ್ತಿ, ಅದರ ಆಳ ವಿಸ್ತಾರದ ಅರಿವಿದೆಯಲ್ಲ ಅದು ಬಹಳ ಮುಖ್ಯವಾದುದು. ( ವ್ಯಾಸರ ಭಾರತವನ್ನು ಕನ್ನಡಕ್ಕೆ ಮಾಡುವಾಗ ಇದೇ ಪಂಪ ತನ್ನ ವಿಕ್ರಮಾರ್ಜುನ ವಿಜಯದಲ್ಲಿ ಆಡುವ ಮಾತನ್ನು ನೋಡಿ ‘ವ್ಯಾಸ ಮುನೀಂದ್ರ ರುಂದ್ರ ವಚನಾಮೃತ ವಾರ್ಧಿಯನ್ ಈಸುವೆಂ ಕವಿ ವ್ಯಾಸನೆನ್ ಎಂಬ ಗರ್ವಮೆನಗಿಲ್ಲ’ ಅನ್ನುವಾಗ “ಈಸುವೆಂ” ಪದವನ್ನು ನೋಡಿ ಹಾಗೂ ಮೇಲಿನ ಪದ್ಯದಲ್ಲಿನ “ಈಸಲ್ ಮನಂದಂದೆನೋ” ಅನ್ನುವುದನ್ನೂ ನೋಡಿದರೆ ಪಂಪನ ಉದ್ದೇಶ ಬಹಳ ಸ್ಪಷ್ಟವಾಗಿ ತಿಳಿಯುತ್ತದೆ)

ಪಂಪ ತನ್ನ ಕಾವ್ಯದ ವಸ್ತುವನ್ನು ಸಂಸಾರದಿಂದಲೇ ಪ್ರಾರಂಭ ಮಾಡಿ ಅದರಿಂದ ವಿಮುಕ್ತಿ ಹೊಂದುವುದಕ್ಕೆ ಸಹಜವಾಗಿಯೇ ಕಾಲಾನಂತರದಲ್ಲಿ ಆಗುವ ಅಪಾರ ಬದಲಾವಣೆಯನ್ನು ಹೇಳುತ್ತಾನೆ. ಈ ಬದಲಾವಣೆಯೇ ಆದಿಪುರಾಣದ ಸಾರವಾಗಿಯೂ ನಿಲ್ಲುತ್ತದೆ. ಇಲ್ಲಿನ ಎಲ್ಲಾ ಭವಾವಳಿಯಲ್ಲಿಯೂ ಸಂಸಾರದ, ಸಾಮ್ರಾಜ್ಯದ, ವೈಭವದ ಉತ್ತುಂಗ ಶಿಖರವನ್ನು ತೋರಿಸಿ ಇನ್ನೇನು ಅದು ದಕ್ಕಿತು ಅನ್ನುವಷ್ಟರಲ್ಲಿ ಅದರಿಂದ ವಿಮುಖತೆಯನ್ನು ಸಾರಿ ಬಿಡುತ್ತಾನೆ. ಇದು ಮಾನವ ಜೀವನ ಕ್ರಮದ ಸಹಜವಾದ ಸ್ಥಿತಿಯೂ ಹೌದು. ಈ ಸ್ಥಿತಿಯನ್ನು ಹೇಳುವುದಕ್ಕಾಗಿಯೇ ಕಥೆಗಳನ್ನು ಬರೆಯುವುದು ಎನ್ನುವ ಬಹುದೊಡ್ಡ ಉದ್ದೇಶವನ್ನು ತನ್ನ ಆದಿಪುರಾಣದ ಪ್ರಾರಂಭದ ಪದ್ಯದಲ್ಲಿ ಹೇಳಿದ್ದಾನೆ. ಇದು ಕಾವ್ಯ ಧ್ವನಿ ಪೂರ್ಣ ರೂಪದಲ್ಲಿ ಬಂದಿರುವುದು ಬಹಳ ವಿಶೇಷವಾಗಿದೆ. ಹಾಗೆಯೇ ತನ್ನ ಬಿರುದುಗಳಿಗೆ ತಾನೆಷ್ಟು ಯೋಗ್ಯನೆಂಬ ಅರ್ಥವನ್ನು ಕೊಡುತ್ತದೆ.

ಇದು
ನಿಚ್ಛಂ ಪೊಸತು
ಆರ್ಣವಂಬೋಲತಿ ಗಂಭೀರಂ ಕವಿತ್ವಂ ಜಗಕ್ಕೆ
ಅದಱಿಂದಂ ಕವಿತಾಗುಣಾರ್ಣವನ್
ಇಳಾ ಲೋಕೈಕ ವಿಖ್ಯಾತನ್
ಅಭ್ಯುದಯ ಪ್ರಾಪ್ತಿ ನಿಮಿತ್ತಮ್
ಉತ್ತಮಯಶಂ ಸಂಸಾರದೊಳ್ ಸಾರಮಪ್ಪುದಱಿಂ ಧಮರ್ಂ
ಅದಂ ನಿಮಿರ್ಚುವುದಱಿಂ ಸಂಸಾರ ಸಾರೋದಯಂ ( 1.26 )

ಇಲ್ಲಿ ಬಹಳ ಮುಖ್ಯಾವಾದ ಎರಡು ಅಂಶಗಳನ್ನು ಪ್ರಸ್ತಾಪಿಸುವುದು ಮುಖ್ಯವೆನಿಸುತ್ತದೆ. ಒಂದು ಮೇಲಿನ ಪದ್ಯದಲ್ಲಿನ “ಕವಿತ್ವಂ ಜಗಕ್ಕೆ” ಅನ್ನುವುದು ಆರ್ಣವದಂತೆ ನಿತ್ಯ ನೂತನ ಕವಿತ್ವವು ಅನ್ನುವ ಅಂಶದಷ್ಟೇ ಮುಖ್ಯವಾಗಿ “ಉತ್ತಮಯಶಂ ಸಂಸಾರದೊಳ್ ಸಾರಮಪ್ಪುದಱಿಂ ಧಮರ್ಂ” ಎಂದು ಬಿಡಿಸಿದರೆ ಈ ವಸ್ತು ವಿನ್ಯಾಸವೇ ಆದಿಪುರಾಣದಿಂದ ಪಂಪ ಇಲ್ಲಿಂದ ಅಲ್ಲಿಗೆ ಕನೆಕ್ಟ್ ಮಾಡುವ ಕ್ರಮವನ್ನು ಬಳಸಿದ್ದಾನೆ ಅನ್ನುವುದನ್ನು ತಿಳಿಸುತ್ತದೆ.

ಇಹದಿಂದ ಪರಕ್ಕೆ ಹಾರುವ ಕ್ರಮದಲ್ಲಿನ ಈ ವಸ್ತು ವಿನ್ಯಾಸ ಹೊಂದಿರುವ ಆದಿಪುರಾಣದ ನಾಯಕನ ಮೂರನೆಯ ಭವಾವಳಿಯಾದ ಲಲಿತಾಂಗ ದೇವನ ಸಾವಿನಿಂದ ಸ್ವಯಂ ಪ್ರಭೆಯ ವಿಪ್ರಲಂಭವನ್ನು ನೋಡುವ.

ಲಲಿತಾಂಗ ದೇವನು ತನ್ನ ಹಿಂದಿನ ಭವಾವಳಿಯಲ್ಲಿ ಮಹಾಬಲನಾಗಿ ಹುಟ್ಟಿದ್ದು, ಒಂದು ದಿನ ಮಹಾಬಲನಿಗೆ ಎರಡು ಕನಸುಗಳು ಬೀಳುತ್ತವೆ, ಒಂದು ಮೂರು ಜನ ಮಂತ್ರಿಗಳು ಅವನ್ನನ್ನು ಕೆಸರಿನ ವಾರಾಶಿಯಲ್ಲಿ ಬಲಾತ್ಕಾರದಿಂದ ಮುಳುಗಿಸುವ ಸಮಯದಲ್ಲಿ ಸ್ವಯಂ ಬುದ್ಧನು ಬಂದು ಅವನನ್ನು ಮೇಲೆ ಎತ್ತಿದ ಹಾಗೆಯೂ, ಮತ್ತೊಂದು ಮಿಂಚಿನಂತೆ ಪ್ರಕಾಶಮಾನವಾದ ಒಂದು ಜ್ವಾಲೆಯು ಪ್ರತೀ ಸಮಯಕ್ಕೆ ಕಡಿಮೆಯಾಗುವುದನ್ನು ಬೆಳಗಿನ ಸ್ವಪ್ನದಲ್ಲಿ ಕಂಡನು.

ಮಹಾಬಲನ ಮಂತ್ರಿಗಳಲ್ಲಿ ಒಬ್ಬನಾದ ಸ್ವಯಂ ಬುದ್ಧನು ಅಂದಿನ ಬೆಳಗಿನ ಸಮಯ ಮೇರು ಪರ್ವತದಲ್ಲಿನ ಜಿನಾಲಯಗಳಿಗೆ, ಜಿನ ಬಿಂಬಗಳಿಗೆ ನಮಸ್ಕಾರ ಸಲ್ಲಿಸಿ ಬಸದಿಯ ಆವರಣದಲ್ಲಿ ಕುಳಿತಿರುವಾಗ ಪೂರ್ವ ವಿದೇಹದಲ್ಲಿನ ಕಚ್ಛ ದೇಶದ ಅರಿಷ್ಟದಿಂದ ಆಕಾಶಗಾಮಿಗಳಾಗಿ ಬಂದ, ಚಾರಣ ಮುನಿಗಳಾದ ಆದಿತ್ಯಗತಿ ಮತ್ತು ಅರಿಂಜಯರು ಸ್ವಯಂ ಬುದ್ಧನಿಗೆ ಮಹಾಬಲನ ಕನಸಿನ ಅರ್ಥವನ್ನು ಹೇಳಿ ಅದನ್ನು ಅವನಿಗೆ ತಿಳಿಸುವಂತೆ ಹೇಳಿದರು. ಮೊದಲ ಕನಸಿನ ಅರ್ಥವು ಅವನ ಮಹಾಬಲನಿಗೆ ಮುಂದೆ ಉಂಟಾಗುವ ಪುಣ್ಯ ವಿಶೇಷ ಎಂಬುದನ್ನು, ಎರಡನೆಯ ಕನಸು ಮಹಾಬಲನ ಆಯುಷ್ಯವು ಕಡಿಮೆಯಾಗುತ್ತಿರುವುದನ್ನೂ ತಿಳಿಸಿದನು. ಇದನ್ನು ಅವನಿಗೆ ತಿಳಿಸಲು ಹೇಳಿದರು. ಈ ಕನಸಿನ ಹಿಂದಿನ ಮರ್ಮವನ್ನು ಸ್ವಯಂ ಬುದ್ಧನಿಂದ ಅರಿತ ಮಹಾಬಲನು ಇಪ್ಪತ್ತೆರಡು ದಿಸಗಳ ಕಾಲ ಸಲ್ಲೇಖನ ವ್ರತವನ್ನು ಆಚರಿಸಿ ಮರಣ ಹೊಂದಿದನು.

ಇದಾದ ಮಹಾಬಲನು ಐಶಾನ ಕಲ್ಪದಲ್ಲಿ ಲಲಿತಾಂಗ ದೇವನಾಗಿ ಜನ್ಮ ತಾಳಿ ವೈಭವೋಪೀರಿತವಾಗಿ ಜೀವನ ನಡೆಸುತ್ತಿದ್ದನು. ಇವನಿಗೆ ನಾಲಕ್ಕು ಸಾವಿರ ಪರಿವಾರವಿದ್ದು, ಸ್ವಯಂ ಪ್ರಭ, ಕನಕ ಪ್ರಭ, ಕನಕ ಲತಾ, ವಿದ್ಯುಲ್ಲತಾ ಎಂಬ ನಾಲಕ್ಕು ಜನ ಪಟ್ಟ ಮಹಿಷಿಯರಿದ್ದರು, ಅವರೊಡನೆ ಅವನ ಜೀವನವು

ಮಣಿಮಯ ದಿಪ್ತಿಯೊಳ್ ಪುದಿದು
ಪಜ್ಜಳಿಪ ಉಜ್ವಳ ಕಾಂತಿ ಗಾಡಿಯೊಳ್ ಪಣೆದು
ವಿಳಾಸದೊಳ್ ತೊಡರ್ದು
ಕೆಯ್ತಂ ಅಲಂಪನೆ ಮಾಡೆ
ನೋಡಿ ಕಣ್ ತಣಿವಿನಂ
ಅಪ್ಪಿ ತೋಳ್ ತಣಿವಿನಂ
ಸುರತಾಮೃತ ಸೇವೆಯೊಳ್ ಮನಂ ತಣಿವಿನಂ
ಆದ
ಅಲಂಪು ಮಿಗೆ
ಭೋಗಿಸಿದಂ ಲಲಿತಾಂಗ ವಲ್ಲಭಂ ( 2.70 )

ಹೀಗೆ ಜೀವನ ಮಾಡುತ್ತಿದ್ದವನಿಗೆ ಇದ್ದಗಿದ್ದ ಹಾಗೆ ಒಂದು ಅವನಿಗಾಗಿಯೇ ಹುಟ್ಟಿ ಅವನ ಕಡೆ ಬಂದಳು. ಅವಳೇ ಸ್ವಯಂ ಪ್ರಭೆ. ಅವಳ ಸೌಂದರ್ಯದ ಬಗೆಗೆ ಲಲಿತಾಂಗನು ಹೇಳುವ ಮಾತುಗಳು ಬಹಳ ಮುಖ್ಯವಾದವು. ಮತ್ತವಳನ್ನು ಇವನು ಇವಳನ್ನು ಅವನು ಅಗಲದ ಹಾಗೆ ಇರುವ ಚಿತ್ರವು ಬಹಳ ಅದ್ಭುತವಾದ್ದು.

ನೆಗೞ್ದ
ಅಮರಾಂಗನಾ ಜನದ ರೂಪುಗಳೆಲ್ಲಮ್ ಅದು
ಈಕೆಯ ಒಂದು ದೇಸಿಗೆ
ನಿಮಿರ್ವ ಒಂದು ಪುರ್ವಿನ ಲಯಕ್ಕಮ್
ಒಂದು ದಗುಂತಿಗೆ
ಒಂದು ಭಂಗಿಗೆ
ನೆಗೞ್ದೊಂದು ಮೆಲ್ಪನ ತೊದೞ್ನುಡಿಗಪ್ಪೊಡಮ್
ಎಯ್ದ ವಾರವು
ಇನ್ನೊಗಸುಗಮೆಂದೆ
ತಳ್ತು ಅಗಲನ್ ಆಕೆಯನ್ ಆ ಲಲಿತಾಂಗ ವಲ್ಲಭಂ ( 2.75 )

“ಕವಿತ್ವಂ ಜಗಕ್ಕೆ” ಅನ್ನುವುದು ಆರ್ಣವದಂತೆ ನಿತ್ಯ ನೂತನ ಕವಿತ್ವವು ಅನ್ನುವ ಅಂಶದಷ್ಟೇ ಮುಖ್ಯವಾಗಿ “ಉತ್ತಮಯಶಂ ಸಂಸಾರದೊಳ್ ಸಾರಮಪ್ಪುದಱಿಂ ಧಮರ್ಂ” ಎಂದು ಬಿಡಿಸಿದರೆ ಈ ವಸ್ತು ವಿನ್ಯಾಸವೇ ಆದಿಪುರಾಣದಿಂದ ಪಂಪ ಇಲ್ಲಿಂದ ಅಲ್ಲಿಗೆ ಕನೆಕ್ಟ್ ಮಾಡುವ ಕ್ರಮವನ್ನು ಬಳಸಿದ್ದಾನೆ ಅನ್ನುವುದನ್ನು ತಿಳಿಸುತ್ತದೆ.

ಸ್ವಯಂ ಪ್ರಭೆಯನ್ನು ಲಲಿತಾಂಗ ನೋಡಿದ ತಕ್ಷಣ ಅವನಿಗೆ, ಪ್ರಸಿದ್ಧರಾದ ಎಲ್ಲಾ ದೇವ ಸ್ತ್ರೀಯರ ರೂಪು, ಆಕಾರ, ಸೌಂದರ್ಯಗಳೆಲ್ಲವೂ ಇವಳ (ಸ್ವಯಂ ಪ್ರಭೆಯ) ಒಂದು ಸೌಂದರ್ಯಕ್ಕೆ, ಅವಳ ಒಂದು ಹಾರುವ ಹುಬ್ಬಿಗೆ, ಅವಳ ಅತಿಶಯವಾದ ಸೌಂದರ್ಯಕ್ಕೆ, ಇವಳ ಒಂದು ನಿಲುವ ನಿಲುವಿನ ಭಂಗಿಗೆ, ಇವಳ ಪ್ರಸಿದ್ಧವಾದ ಒಂದು ತೊದಲು ಮಾತಿಗೆ ಸಹಾ ಸಮನಾಗುವುದಿಲ್ಲ. ನಾನಿನ್ನು ಈಕೆಯನ್ನು ಯಾವ ಕಾರಣಕ್ಕೂ ಅಗಲುವುದಿಲ್ಲ ಅನ್ನುವ ಭಾವ ಉಂಟಾಗುವುದು.

ಹೀಗೆ ಕಾಲ ಕಳೆದಂತೆ ಅರು ತಿಂಗಳಿದ್ದಂತೆ ತನ್ನ ಮರಣದ ಸೂಚನೆಯು ಸಿಕ್ಕುತ್ತದೆ. ಈ ಮರಣ ಸೂಚನೆಯನ್ನೂ ಅದ್ಭುತ ರೂಪಕಗಳ ಮೂಲಕ ಕಟ್ಟಿಕೊಡುವ ಪಂಪನ ಚಿತ್ರ ಸೆಳೆದುಬಿಡುತ್ತದೆ.

ಸೂಡಿದ ಪಾರಿಜಾತದ ನಮೇರುವ ಬಾಸಿಗಂ
ಒಯ್ಯನೊಯ್ಯನ ಇರ್ಪೋಡಿದುದು
ಅಂದಿನ ಅಂಗರುಚಿ ಕಣ್ಗೆ ಇಳಿದಾಯ್ತು
ವಿಭೂಷಣಂಗಳೊಳ್ ತೀಡುವ ರಶ್ಮಿಗಳ್ ಮಸುಳ್ದುವು
ಅಗುಳಿಯಾಯ್ತು
ಇನಿತುಂ ಬೆಗೞ್ಮೊಗಂ ಮಾಡೆ
ತಗುಳ್ದು ಸೂಚಿದವು ಆ ದಿವಿಜಂಗೆ ಅವಸಾನ ಕಾಲಮಂ ( 3.3 )

ಅವನು ಮುಡಿದಿದ್ದ ಪಾರಿಜಾತದ ಬಾಸಿಗವು ( ಪೂರ್ವ ಪುರಾಣದ ಆಧಾರದಲ್ಲಿ ಪಂಪ ಅದನ್ನು ಮುಡಿದ ಎಂದಿದ್ದಾನೆ ) ಕ್ರಮ ಕ್ರಮವಾಗಿ ಬಾಡಿದವು, ದೇಹದ ಹಸಿಯು ಇಲ್ಲದಾಯಿತು, ದೇಹದ ಕಾಂತಿ ಹಾಳಾಯಿತು, ಅವನ ನೋಟ ಕುಂದಿ ಹೋಯಿತು, ಆಭರಣದಿಂದ ಬರುತ್ತಿದ್ದ ಕಿರಣದ ಕಾಂತಿಯು ಮಸುಕಾಯಿತು, ಆಕಳಿಕೆ ಆಯಿತು (ನೋಡಿ ಜೀವನ ಕ್ರಮಕ್ಕೆ ಪೂರ್ವ ಪುರಾಣ ) ಉದ್ವೇಗದಿಂದ ಮುಖವು ಬಾಡಿತು, ದೇವನಾದ ಲಲಿತಾಂಗನಿಗೆ ಮರಣ ಕಾಲವು ಹತ್ತಿರ ಬಂದಿತು.  ಈ ಲಕ್ಷಣದಿಂದ ಭಯದ ಜೊತೆಗೆ ಬೇಸರನಾದ ಲಲಿತಾಂಗನಿಗೆ ಸಾಮಾನಿಕ ದೇವತೆಗಳು ಶರೀರದ ನಾಶ, ಅತ್ಮದ ಶಾಂತಿ, ಧರ್ಮದ ಬಗೆಗಿನ ಚಿಂತನೆ, ಅತ್ಮದ ಬಿಡುಗಡೆಗೆ ಹಾದಿ ತೋರಿಸಿ ಸಮಾಧಾನ ಪಡಿಸಿದ ನಂತ ಹದಿನೈದು ದಿನದ ವರೆಗೆ ಧರ್ಮದ ಎಲ್ಲವನ್ನು ಮಾಡಿ ಮರಣ ಹೊಂದಿದ.

ಈ ಕಥೆಯ ಹಿನ್ನೆಲೆಯ ಅಡಿಯಲ್ಲಿ ಸ್ವಯಂಪ್ರಭೆಯ ವಿಪ್ರಲಂಭ ಶೃಂಗಾರ ಬಹಳ ಮುಖ್ಯವಾಗುತ್ತದೆ. ಅವಳಲ್ಲಿ ನಲ್ಲನ ಅಗಲುವಿಕೆಯಿಂದ ಉದಿಸಿದ ಭಾವವು ಅವಳನ್ನು ಶೋಕ ಸಾಗರಕ್ಕೆ ಕರೆದುಕೊಂಡು ಹೋಗುತ್ತದೆ. ಈ ವಿಪ್ರಲಂಭ ಶೃಂಗಾರವು ಪಂಪ ಸೃಜಿಸಿದ ಅತ್ಯದ್ಭುತ ಕಲಾಕೃತಿಯಾಗಿದೆ.

ಅಲಕಂ ಮಂದಾರ ಶೂನ್ಯಂ
ಕದಪು ಮಕರಿಕಾ ಪತ್ರ ಶೂನ್ಯಂ
ಲಲಾಟಂ ತಿಲಕಾಲಂಕಾರ ಶೂನ್ಯಂ
ಘನ ಕುಚಯುಗಳಂ ಹಾರ ಶೂನ್ಯಂ
ನಿತಂಬಂ ಕಲಕಾಂಚೀದಾಮ ಶೂನ್ಯಂ
ಚರಣಯುಗಳಂ ನೂಪುರಾಳಾಪ ಶೂನ್ಯಂ
ಲಲಿತಾಂಗಂ ಪೋದೊಡೆ
ಆಯ್ತಾಕೆಗೆ ದಿವಮಿನಿತುಂ ನಿರ್ಜನಾರಣ್ಯ ಶೂನ್ಯಂ ( 3.13 )

ವಚನ – ಅಂತಾ ಸ್ವಯಂಪ್ರಭಾದೇವಿ ನಿಜಪ್ರಾಣವಲ್ಲಭ ವಿಯೋಗ ವಿದುರೆಯಾಗಿ

ಮದನನ ಕೈದುವೆಲ್ಲಿದನ್ ?
ಅನಂಗನ ಕೈಪಿಡಿಯೆಲ್ಲಿದಂ ?
ವಿಳಾಸದ ಕಣಿಯೆಲ್ಲಿದಂ ?
ಚದುರ ಪುಟ್ಟಿದನೆಲ್ಲಿದನೆಲ್ಲಿದಂ ?
ವಿನೋದದ ಮೊದಲಲೆಲ್ಲಿದಂ ?
ಸೊಬಗಿನಾಗರಮೆಲ್ಲಿದನ್ ?
ಇಚ್ಛೆಯಾಣ್ಮನೆಲ್ಲಿದನ್ ?
ಎದೆಗಾರ್ಮನ್ ಎನ್ನರಸನೆಲ್ಲಿದನೋ ಲಲಿತಾಂಗವಲ್ಲಭಂ ? ( 3.15 )

ಈ ಎರಡು ಪದ್ಯಭಾಗಗಳ ಮೂಲ ಭಾವ ಲಲಿತಾಂಗ ದೇವನ ವಿಯೋಗದಿಂದ ಸ್ವಯಂ ಪ್ರಭೆಗೆ ಬಂದೊದಗಿದ ಶೋಕ ಭಾವ. ಶೋಕವನ್ನು ಲಲಿತಾಂಗನೊಂದಿಗೆ ಕಳೆದ ಶೃಂಗಾರ ಸಂದರ್ಭಗಳನ್ನು ನೆನಪಿಸಿಕೊಂಡು ಉಂಟಾದ ಶೋಕವನ್ನು ವಿಪ್ರಲಂಭ ಶೃಂಗಾರದ ಮೇಲೆ ನಡೆಸಿರುವ ಪ್ರಜ್ಞೆ ಪಂಪನದು.

ಪದ್ಯ 13 ರಲ್ಲಿ ಲಲಿತಾಂಗನ ವಿಯೋಗದಿಂದ ಉಂಟಾದ ಸ್ಥಿತಿಯನ್ನು ಸ್ವಯಂ ಪ್ರಭೆ ತನ್ನ ವಿಲಾಸದ ವಿಯೋಗವಾಗಿ ಹೇಳಿಕೊಳ್ಳುವ ಕ್ರಮವಿದೆಯಲ್ಲ ಅದು ಬಹಳ ಮುಖ್ಯವಾದದ್ದು.

ಮಂದಾರ ಪುಷ್ಪದಿಂದ ಮುಂಗುರುಳು ಶೂನ್ಯವಾಯಿತು, ಅವಳ ಕೆನ್ನೆಯು ಮಕರಿಕಾ ಪತ್ರದಿಂದ ಶೂನ್ಯವಾಯಿತು, ಹಣೆಯಲ್ಲಿ ಅಲಂಕಾರವಾಗಿದ್ದ ತಿಲಕವು ಶೂನ್ಯವಾಯಿತು, ಎದೆಯ ಮೇಲೆ ಇದ್ದ ಹಾರವು ಇಲ್ಲದಾಯಿತು, ನಿತಂಬವು ಒಡ್ಯಾಣದಿಂದ ವಿಹಿತವಾದವು, ಕಾಲುಗಳಿಗೆ ಗೆಜ್ಜೆಯ ಧ್ವನಿಯಿಲ್ಲದ ಸ್ಥಿತಿಯು ಮೂಡಿತು, ಲಲಿತಾಂಗನ ಸಾವು ಅವಳಿದ್ದ ಸ್ವರ್ಗವು ನಿರ್ಜನ ಅರಣ್ಯವಾಯಿತು.

ಪದ್ಯ 15 ರಲ್ಲಿ ಲಲಿತಾಂಗ ಮತ್ತು ಸ್ವಯಂ ಪ್ರಭೆಯ ಬಂಧವನ್ನು ಕಾಮವನ್ನು ಮುಂದುಮಾಡಿ ಕೇಳಿಕೊಳ್ಳುವ ಸ್ಥಿತಿಯಿದೆಯಲ್ಲ ಅದು ಮುಖ್ಯವಾದದ್ದು.

ಮನ್ಮಥನ ಆಯುಧವೇ ಆಗಿದ್ದ ಲಲಿತಾಂಗನೆಲ್ಲಿ? ಮನ್ಮಥನ ಕೈ ಗನ್ನಡಿ ಆಗಿದ್ದವನೆಲ್ಲಿ? ಹಾವ ಭಾವದ ಗಣಿಯಾಗಿದ್ದವನೆಲ್ಲಿ? ಚಾತುರ್ಯವನ್ನು ಕಲ್ಪಿಸಿಸಿದವು , ಹುಟ್ಟಿಸಿದವನು ಎಲ್ಲಿ? ವಿನೋದದ ಮೊದಲಿಗನು ಎಲ್ಲಿ? ಸೌಂದರ್ಯದ ವಾಸಸ್ಥಾನವೇ ಆಗಿರುವವನೆಲ್ಲಿ ? ನನ್ನ ಪ್ರೇಮದ ಸ್ವಾಮಿಯದೆಲ್ಲಿ ? ಹೃದಯ ವಲ್ಲಭನಾದ ನನ್ನ ಸ್ವಾಮಿ ಲಲಿತಾಂಗನೆಲ್ಲಿ ? ಎಂಬ ಮಾತುಗಳು ಅವಳ ಬಾಯಲ್ಲಿ ಬರುತ್ತಲೇ ಇತ್ತು .

ಎನ್ನುವ ಕಾವ್ಯ ಭಾಗಗಳು ಸ್ವಯಂ ಪ್ರಭೆಯು ಕಳೆದುಕೊಂಡ ತನ್ನ ಗಂಡನಾದ ಲಲಿತಾಂಗನೊಂದಿಗಿನ ಚಿಂತೆಯಲ್ಲಿ ರೋದಿಸುವ ಶೋಕದ ಮೇಲೆ ಕಟ್ಟಿದ ವಿಪ್ರಲಂಭ ಶೃಂಗಾರವಾಗಿ ನಿಲ್ಲುವ ಉಜ್ವಲ ಕಾಣಿಕೆಯಾಗಿ ಪಂಪ ಕನ್ನಡಕ್ಕೆ ನೀಡಿದ್ದಾನೆ.

ಈ ಮೇಲಿನ ಭಾಗಗಳ ಅಡಿಯಲ್ಲಿ ಕನ್ನಡ ಕಾವ್ಯ ಪರಂಪರೆ ಇದನ್ನ ಗ್ರಹಿಸಿರುವ ರೀತಿಯ ಬಗೆಗೆ ಸ್ವಲ್ಪ ಬರೆಯುವುದು ಒಳಿತು. ಪಂಪನನ್ನು ಆದಿಪುರಾಣ ಕೃತಿಯನ್ನು ಸಂಗ್ರಹಕಾರನಾಗಿ, ಕನ್ನಡೀಕರಿಸುವಲ್ಲಿ ಒಂದು ಔಚಿತ್ಯಪ್ರಜ್ಞೆಯಲ್ಲಿ ಕಥೆಯನ್ನು ಕನ್ನಡಕ್ಕೆ ತಂದಿದ್ದಾನೆ. ಮೂಲ ಕಥೆಯಲ್ಲಿ ಇಲ್ಲದ ಕೆಲವು ವಿಶೇಷತೆಯನ್ನು ಇಲ್ಲಿ ಸೇರಿಸಿದ್ದಾನೆ. ಪಂಪನ ಮೇಲೆ ಸ್ತ್ರೀವಾದಿಗಳೆಲ್ಲರೂ ಮುಗಿಬೀಳುವುದು ಅವನಲ್ಲಿ ಸ್ತ್ರೀ ಪರವಾದ ಕಾಳಜಿಯಿಲ್ಲ, ಅವಳ ಒಳತುಡಿತಕ್ಕೆ ಜಾಗ ಕೊಟ್ಟಿಲ್ಲ ಅನ್ನುವುದಾಗಿ. ಆದರೆ ಮೊದಲಬಾರಿಗೆ ಕನ್ನಡದಲ್ಲಿ ಬಂದ ಜಿನ ಸೇನಾಚಾರ್ಯ ಮತ್ತು ಗುಣಭದ್ರಾಚಾರ್ಯರ “ಮಹಾಪುರಾಣ” ದ ಭಾಷಾಂತರ “ಮಹಾಪುರಾಣ ಸಾರ” ( ಮಹಾಪುರಾಣ ಸಾರ ಕನ್ನಡಕ್ಕೆ ಡಿ ಎ ಬೋಗಾರ ಮತ್ತು ಮಿರ್ಜಿ ಅಣ್ಣಾರಾಯರ. ಶಾಂತಿ ಸೇವಾ ಸದ , ಸೇಡಬಾಳ . 1962 ) ದಲ್ಲಿನ ಲಲಿತಾಂಗನ ಭವಾವಳಿಯನ್ನು ನೋಡಿದರೆ ಪಂಪನ ಬಗೆಗೆ ಇರುವ ಈ ಮಾತು ಸುಳ್ಳೆಂದು ತಿಳಿಯುತ್ತದೆ. ಮೂಲವನ್ನು ಗದ್ಯದಲ್ಲಿ ಕೊಡುವಾಗ ಈ ಭವಾವಳಿಯಲ್ಲಿ ಸ್ವಯಂ ಪ್ರಭೆಯ ಶೋಕ ಇಲ್ಲವೇ ಇಲ್ಲ ( ನೋಡಿ ಪುಟ 23 ರಿಂದ 29 ) ಆ ಅಲಕ್ಷಿತ ಭಾಗದಲ್ಲಿನ ಸ್ವಯಂ ಪ್ರಭೆಯ ಶೋಕವನ್ನ, ಅವಳ ಪ್ರಲಾಪವನ್ನ ಪಂಪ ಕನ್ನಡದಲ್ಲಿ ಸ್ವಯಂ ನಿರ್ಮಾಣ ಮಾಡಿದ್ದಾನೆ.

ಎರಡನೆಯದಾಗಿ ಈ ಭಾಗದಲ್ಲಿರುವ ರಸವನ್ನು ಗ್ರಹಿಸಿರುವ ಕ್ರಮವಿದೆಯಲ್ಲ ಅದು ಬಹಳ ಮುಖ್ಯ. ಇದನ್ನು ಆಚಾರ್ಯ ತಿ ನಂ ಶ್ರೀ ರವರು “ಪಂಪ” ಅನ್ನುವ ಪುಸ್ತಕದಲ್ಲಿ ‘ಇತ್ತ ಅವನನ್ನು ಕಳೆದುಕೊಂಡ ಸ್ವಯಂ ಪ್ರಭೆ ಕಂಗೆಟ್ಟು ಎದೆಯಾಣ್ಮನೆನ್ನರಸನೆಲ್ಲಿದನೋ ಲಲಿತಾಂಗವಲ್ಲಭ ಎಂದು ಹಲಬುತ್ತಾ ಕೊನೆಗೆ ತಾನೂ ಕಾಲ ಕಳೆದು ಶ್ರೀಮತಿಯೆಂಬ ರಾಜಕುಮಾರಿಯಾಗಿ ಹುಟ್ಟುತ್ತಾಳೆ’ ಎಂದು ಹೇಳಿ ( ನೋಡಿ ತಿ ನಂ ಶ್ರೀ ಸಮಗ್ರ ಗದ್ಯ , ಪುಸ್ತಕ ಪ್ರಧಿಕಾರ , 2019 , ಪುಟ 95 ) ಶೋಕದ ಸ್ಥಿತಿಯಲ್ಲಿ ಗ್ರಹಿಸಿ ‘ಹಲಬುವಿಕೆ’ ಎಂದಿದ್ದಾರೆ. ತ ಸು ಶಾಮರಾಯರು “ಆದಿಪುರಾಣ ದೀಪಿಕೆ” ಯಲ್ಲಿ ಈ ಭಾಗಕ್ಕೆ ವ್ಯಾಖ್ಯಾನ ಮತ್ತು ಪದಶಃ ಅರ್ಥವಿವರಣೆ ನೀಡುತ್ತಾ ಕೊನೆಯಲ್ಲಿ ‘ಆಕೆಯ ಮರುಕದ ಹೊನಲು ವಿಪ್ರಲಂಭ ಶೃಂಗಾರವಾಗಿದೆ’ ಎಂದು ಬರೆದಿದ್ದಾರೆ ( ನೋಡಿ ಆದಿಪುರಾಣ ದೀಪಿಕೆ – ತ ಸು ಶಾಮರಾಯ – ಜೈನ ಅಧ್ಯಯನ ಸಂಸ್ಥೆ – ಶ್ರವಣಬೆಳಗೊಳ – 2016 – ಪುಟ 154 ) ಇವೆರಡರಲ್ಲಿ ತ ಸು ಶಾಮರಾಯರ ಗ್ರಹಿಕೆಯ ಸ್ಪಷ್ಟವಾಗಿದ್ದು, ಅದು ವಿಪ್ರಲಂಭ ಶೃಂಗಾರವೆನ್ನುವ ಮಾತು ಕಾವ್ಯ ಭಾಗದ ಓದಿನಿಂದ ಸ್ಪಷ್ಟವಾಗುತ್ತದೆ. ಎಲ್ಲಿಯೂ ತಿ ನಂ ಶ್ರೀ ಅವರು ಹೇಳುವ ಹಾಗೆ ಕೇವಲ ಹಲುಬುವಿಕೆ ಅಷ್ಟೇ ಅಲ್ಲವೆನ್ನುವುದು ಮುಖ್ಯವಾಗುತ್ತದೆ.

ಈ ಹಲುಬುವಿಕೆ ತನ್ನ ತೀವ್ರತೆಯನ್ನು ಪಡೆದಾಗ, ನಿಲ್ಲದ ಹಾಗೆ ಮುಂದುವರೆದ ಒಂದು ಸ್ಥಿತಿ ವಿಪ್ರಲಂಭವಾಗಿ ಕಾಣುತ್ತದೆ. ಅದು ಈ ಭಾಗದ ಓದಿನಿಂದ ಬಹಳ ಸ್ಪಷ್ಟವಾಗುತ್ತದೆ. ರಾಜರತ್ನಂ ಆದಿಪುರಾಣದ ಮೇಲೆ ಮಾಡುವ “ಪಂಪನು ಈ ಕಾವ್ಯಕ್ಕೆ ಕೈ ಹಚ್ಚಿದ್ದು ಕೇವಲ ಕವಿಯ ಕೆಚ್ಚಿನಿಂದಲ್ಲ. ಪಂಪನ ಸಾಮರ್ಥ್ಯವನ್ನು ಬಲ್ಲ ಬುಧಸಮೂಹವು ಅವನಿಂದ ಇದನ್ನು ಹೇಳಿಸಿತು. ಪಂಪನಾದರೂ ‘ಧೃಷ್ಟನೆಂ, ಈ ಕಥಾಬ್ದಿಯುಮಂ ಎನ್ ಈಸಲ್ ಮನಂದಂದೆನೋ’ ಎಂದು ಅಂಜಿಯೇ ಹೊರಟು, ದಾಟಿ, ಆಚೆಯ ದಡವನ್ನು ಸೇರಿದ್ದಾನೆ” ವ್ಯಾಖ್ಯಾನವು ಮಹಾಪುರಾಣ ಮತ್ತು ಆದಿಪುರಾಣವನ್ನು ನೋಡಿ ಪಂಪನ ಮೇಲೆ, ಅವನ ಕಾವ್ಯದ ಮೇಲೆ ಕೊಟ್ಟ ಉತ್ತಮವಾದ ನುಡಿಕಾಣಿಕೆಯಾಗಿದೆ ( ನನ್ನ ಜೈನಮತಧರ್ಮ ಸಾಹಿತ್ಯಸೇವೆ -ಜಿ ಪಿ ರಾಜರತ್ನಂ – ಸಂಪುಟ 2 – ಶಾಕ್ಯ ಸಾಹಿತ್ಯ ಮಂಟಪ – 1995 – ಪುಟ 274 )