ಅವರೆಲ್ಲರೂ ಬಾವಿಯ ಸುತ್ತ ಜಮಾಯಿಸಿ ಆಗಿತ್ತು. ‘ಶೀ.. ಅದಕ್ಕೆಂತ ಮಳ್ಳೇ.. ಆ ಜಾತಿಗೆಟ್ಟವನ ಮನೆಯ ತೋಟದ ಬಾವಿಗೆ ಹೋಗಿ ಸತ್ತಲಾ ಅದು..’, ‘ಅಲ್ಲ… ಅದಕ್ಕೂ ಇವನ ತೋಟದ ಬಾವಿಗೂ ಎಂತ ಸಂಬಂಧ ಹೇಳಿ, ಅಂದರೆ ಒಬ್ರನ್ನೂ ಬಿಟ್ಟಿದ್ದಿಲ್ಲೆ ಹೇಳಾತಲಿ.. ಖರ್ಮ..’, ‘ಸದ್ಯ.. ಅಂತೂ ಸತ್ತುಹೋತಲಿ. ಇಲ್ದಿದ್ರೆ ಇನ್ನೂ ಎಷ್ಟು ಜನಕ್ಕೆ ತ್ರಾಸು ಕೊಡದಿತ್ತ ಎಂತದೇನ..’. ಹೀಗೆ ಒಬ್ಬೊಬ್ಬರು ಅವಳ ಸಾವಿನ ಕುರಿತೇ ಮಾತನಾಡತೊಡಗಿದರು.
ಪತ್ರಕರ್ತೆ ಭಾರತಿ ಹೆಗಡೆ ಬರೆಯುವ ಸಿದ್ದಾಪುರ ಸೀಮೆಯ ಕಥೆಗಳ ಹನ್ನೊಂದನೆಯ ಕಂತು.

 

ಸರಸೋತಕ್ಕ ತೀರಿಕೊಂಡು ವಾರವಾದರೂ ಅವಳ ಕುರಿತಾದ ಸುದ್ದಿ ಅಡಗಿರಲಿಲ್ಲ. ಇಷ್ಟಕ್ಕೂ ಅವಳು ಸುದ್ದಿಯಾಗಿದ್ದು ಸತ್ತದ್ದಕ್ಕಾಗಿ ಆಗಿರಲೇ ಇಲ್ಲ. ಸತ್ತ ರೀತಿಗಾಗಿ ಆಗಿತ್ತು. ಅವತ್ತು ಬೆಳಗ್ಗೆ ಬೆಳಗ್ಗೆಯೇ ಮಡಿವಾಳರ ಕೇರಿಯ ತಿಪ್ಪನ ತೋಟದ ಬಾವಿಯಲ್ಲಿ ಹೆಣವೊಂದು ತೇಲುತ್ತಿರುವ ಸುದ್ದಿ ಮೊದಲು ಸಿಕ್ಕಿದ್ದೇ ತಿಪ್ಪನಿಗೆ. ಅವನ ಶಾಲೆಗೆ ಹೋಗುವ ಮಗ ಬೆಳಗ್ಗೆಯೇ ಎದ್ದು ತೋಟದ ಕೆಲಸಕ್ಕೆ ಹೋದಾಗ ಹಾಳೆಬಾಗ ಮತ್ತು ಮರದ ಹಲಗೆಗಳಿಂದ ಅರ್ಧ ಮುಚ್ಚಿಕೊಂಡ ಬಾವಿಯನ್ನು ಹಣಕಿ ನೋಡಿದಾಗಲೇ ತಿಳಿದದ್ದು ಅಲ್ಲೊಂದು ಮನುಷ್ಯ ದೇಹಾಕೃತಿ ತೇಲುತ್ತಿದ್ದುದು. ಸೀದ ಓಡಿ ಹೋಗಿ ಅಪ್ಪನಿಗೆ ಸುದ್ದಿಮುಟ್ಟಿಸಿದ. ಇನ್ನೂ ಹಾಸಿಗೆ ಬಿಟ್ಟೇಳದ ತಿಪ್ಪ ಧಡಕ್ಕಂತ ಎದ್ದು ತೋಟಕ್ಕೆ ಓಡಿ ಬಾವಿಯನ್ನು ಬಗ್ಗಿ ನೋಡಿದವನಿಗೆ ತಿಳಿದುಹೋಯಿತು, ಅದು ಸರಸೋತಕ್ಕನದ್ದೇ ಎಂದು. ಏನು ಮಾಡಲೂ ತಿಳಿಯದೇ ಸ್ವಲ್ಪ ಹೊತ್ತು ಬಾವಿಗೆ ಬಗ್ಗಿ ನೋಡುತ್ತಲೇ ನಿಂತುಬಿಟ್ಟ. ಅಪ್ಪ ಅಪ್ಪ ಎಂದು ಮಗ ಅಲ್ಲಾಡಿಸಿ ಯಾರದು ಎಂದು ಕೇಳುವವರೆಗೂ ಹಾಗೆಯೇ ನಿಂತಿದ್ದ. ಅಷ್ಟೊತ್ತಿಗೆ ಅವನ ತಲೆಯಲ್ಲಿ ನಾನಾ ಯೋಚನೆಗಳು ಗಿರಗುಡತೊಡಗಿದವು.

ಇವಳು ಇಲ್ಲಿಬಂದು ಯಾಕೆ ಸತ್ತಳು ಎಂಬ ಪ್ರಶ್ನೆಗೆ ಊರವರಿಗೆ ಏನುತ್ತರ ಹೇಳುವುದು, ಇವಳ ಮಗ ಕೇಳಿದರೆ ಏನೆನ್ನುವುದು, ಹೀಗೆಲ್ಲ ಯೋಚನೆಯಲ್ಲಿರುವಾಗಲೇ, ಅವನ ಮಗ ಕಾಳ್ಯ ಅಕ್ಕಪಕ್ಕದ ಮನೆಗೆ ಹೇಳಿ ಅವರೆಲ್ಲರೂ ಬಾವಿಯ ಸುತ್ತ ಜಮಾಯಿಸಿ ಆಗಿತ್ತು. ಹೇಗೋ ಊರಿನ ಹೆಗಡೇರ ಕಿವಿಗೂ ಬಿದ್ದು, ಸರಸೋತಕ್ಕನ ಕುಟುಂಬಸ್ಥರ ಕಿವಿಯನ್ನೂ ತಲುಪಿತು. ‘ಶೀ.. ಅದಕ್ಕೆಂತ ಮಳ್ಳೇ.. ಆ ಜಾತಿಗೆಟ್ಟವನ ಮನೆಯ ತೋಟದ ಬಾವಿಗೆ ಹೋಗಿ ಸತ್ತಲಾ ಅದು..’, ‘ಅಲ್ಲ… ಅದಕ್ಕೂ ಇವನ ತೋಟದ ಬಾವಿಗೂ ಎಂತ ಸಂಬಂಧ ಹೇಳಿ, ಅಂದರೆ ಒಬ್ರನ್ನೂ ಬಿಟ್ಟಿದ್ದಿಲ್ಲೆ ಹೇಳಾತಲಿ.. ಖರ್ಮ..’, ‘ಸದ್ಯ.. ಅಂತೂ ಸತ್ತುಹೋತಲಿ. ಇಲ್ದಿದ್ರೆ ಇನ್ನೂ ಎಷ್ಟು ಜನಕ್ಕೆ ತ್ರಾಸು ಕೊಡದಿತ್ತ ಎಂತದೇನ..’. ಹೀಗೆ ಒಬ್ಬೊಬ್ಬರು ಅವಳ ಸಾವಿನ ಕುರಿತೇ ಮಾತನಾಡತೊಡಗಿದರು.

ಹಾಗೆ ನೋಡಿದರೆ ಸರಸೋತಕ್ಕನ ಕುಟುಂಬ ಎಂಬುದು ಇಲ್ಲಿ ಇರಲಿಲ್ಲ. ಅವಳ ಮಗಳ ಮನೆ ಕೂಡ ನಾಲ್ಕಾರು ಮೈಲಿ ದೂರದಲ್ಲಿತ್ತು. ಅವಳ ಊರು ಸಿದ್ದಾಪುರ ತಾಲೂಕಿನ ಇಟಗಿ ಸಮೀಪದ ಹಳ್ಳಿಯಾದರೂ ಅವಳನ್ನು ಕೊಟ್ಟಿದ್ದು ಸಾಗರದ ಬಳಿಯ ಒಂದು ಹಳ್ಳಿಗೆ. ಆದರೆ ಅವಳು ಸತ್ತದ್ದು ಮಾತ್ರ ತಾಳಗುಪ್ಪ ಬಳಿಯ ಹಳ್ಳಿಯೊಂದರಲ್ಲಿ. ಅಲ್ಲಿ ಅವಳ ಮಗಳು ಅಳಿಯನ ಸಂಸಾರವಿತ್ತು. ಇದ್ದ ಒಬ್ಬನೇ ಮಗ ಈ ಅಮ್ಮನನ್ನು ಯಾವಾಗಲೋ ತ್ಯಜಿಸಿ ದೂರದ ಮುಂಬಯಿಯಲ್ಲಿ ಕಾಲೇಜೊಂದರಲ್ಲಿ ಪ್ರಾಧ್ಯಾಪಕನಾಗಿದ್ದ.

ಅವಳ ಮಗ ರಾಜು ಮೊದಲು ಸಾಗರದಲ್ಲಿಯೇ ಇದ್ದ. ತನ್ನ ಮನೆಯಲ್ಲೇ ಒಂದಷ್ಟು ದಿವಸ ತಾಯಿಯನ್ನು ಇರಿಸಿಕೊಂಡಿದ್ದ. ಎಷ್ಟೆಂದರೂ ತಾಯಿ ತಾನೆ, ಜನ್ಮವಿತ್ತವಳು ಎಂಬ ಭಾವನಾತ್ಮಕ ಸಂಬಂಧದಿಂದ. ಆದರೆ ಮಗನಿಗೂ ಅವಳ ಕಾಟ ಸಹಿಲಾಗದೆ ಕಡೆಗೊಂದು ಚಿಕ್ಕ ಮನೆ ಮಾಡಿ, ಅಲ್ಲಿ ಒಬ್ಬಳು ಕೆಲಸಕ್ಕೆ ಜನವನ್ನೂ ನೇಮಿಸಿ ತಿಂಗಳ ತಿಂಗಳ ದುಡ್ಡು ಕಳುಹಿಸುತ್ತೇನೆಂದು ಹೇಳಿ ಊರು, ಜಿಲ್ಲೆ, ಕಡೆಗೆ ರಾಜ್ಯವನ್ನೇ ಬಿಟ್ಟು ಹೊರಟುಬಿಟ್ಟ.

ಅವ ಹಾಗೆ ತಾಯಿಯನ್ನು ತ್ಯಜಿಸಲು ಕಾರಣವಿತ್ತು. ಚಿಕ್ಕವಯಸ್ಸಿನಲ್ಲಿಯೇ ರಾಜು ತಂದೆಯನ್ನು ಕಳೆದುಕೊಂಡಿದ್ದ. ಅದಕ್ಕೆ ಕಾರಣವೂ ಸರಸ್ವತಿಯೇ ಎಂದೂ, ಅವಳ ನಡವಳಿಕೆಯೇ ಸರಿ ಇರಲಿಲ್ಲವೆಂದು ಊರವರೆಲ್ಲ ಮಾತನಾಡಿಕೊಳ್ಳುತ್ತಿದ್ದರು. ಹಾಗೆ ನೋಡಿದರೆ ಸರಸೋತಕ್ಕ ಯಾರೊಂದಿಗೂ ಜಗಳವಾಡಿದವಳಲ್ಲ. ಮನೆಗೆಲಸ ಮಾಡದೇ ಸೋಮಾರಿಯಾಗಿ ಬಿದ್ದುಕೊಂಡವಳೂ ಅಲ್ಲ. ಆದರೆ ಅವಳಿಗಿದ್ದ ಸಮಸ್ಯೆಯೇ ಬೇರೆಯಾಗಿತ್ತು. ದಂಡಿಯಾಗಿ ಮನೆಗೆಲಸ ಮಾಡುತ್ತಿದ್ದ ಸರಸೋತಕ್ಕ ಕಟ್ಟುಮಸ್ತಾದ ಆಳು. ಮನೆಗೆಲಸ, ಕೊಟ್ಟಿಗೆ ಚಾಕರಿ, ತೋಟ, ಗದ್ದೆ ಕೆಲಸಗಳನ್ನೆಲ್ಲ ಎಷ್ಟು ಬೇಕಾದರೂ ಮಾಡಬಲ್ಲವಳಾಗಿದ್ದಳು. ಎಷ್ಟೆಂದರೆ ಸರಸೋತಕ್ಕ ಇದ್ದಾಳೆಂದರೆ ಒಬ್ಬ ಗಂಡಾಳು ಇದ್ದಹಾಗೇ ಎಂದು ಮಾತನಾಡುವಷ್ಟು ಅವಳು ಕೆಲಸ ಮಾಡುತ್ತಿದ್ದಳು. ಹೀಗಿದ್ದೂ ಅವಳನ್ಯಾಕೆ ಎಲ್ಲರೂ ದೂರುತ್ತಿದ್ದರು? ಅವಳು ಸತ್ತರೆ ಎಲ್ಲರೂ ಯಾಕೆ ಸಮಾಧಾನಪಟ್ಟುಕೊಂಡರು. ಮುಖ್ಯವಾಗಿ ಮಗ, ಮಗಳೇ ಅವಳನ್ನು ಯಾಕೆ ಮನೆಯಿಂದ ಹೊರಹಾಕಿದರು? ಇಂಥ ಅನೇಕ ಪ್ರಶ್ನೆಗಳಿಗೆ ಉತ್ತರ ಸರಸೋತಕ್ಕನೇ ಆಗಿದ್ದಳು.

ಸಿದ್ದಾಪುರದ ಸೀಮೆಯ ಹಳ್ಳಿಯೊಂದರ ಸರಸ್ವತಿ ನೋಡಲು ಸುರಸುಂದರಿ. ತೀರ ಚಿಕ್ಕವಯಸ್ಸಿನಲ್ಲಿಯೇ ಅಂದರೆ ಇನ್ನೂ ಹದಿನಾರು ಕೂಡ ತುಂಬದ ಎಳೆ ಹುಡುಗಿಯನ್ನು ಸಾಗರ ಸಮೀಪದ ಹಳ್ಳಿಯೊಂದರ ಅಜಮಾಸು 35-40ರ ಪ್ರಾಯದ ಶೇಷಣ್ಣಂಗೆ ಮದುವೆ ಮಾಡಿಕೊಟ್ಟಿದ್ದರು. ಸುಂದರಿ ಸರಸ್ವತಿಯನ್ನು ಒಂದು ಕಣ್ಣು ಸರಿ ಇಲ್ಲದ ಅಪ್ಪನ ವಯಸ್ಸಿನ ಶೇಷಣ್ಣಂಗೆ ಕೊಟ್ಟು ಮದುವೆ ಮಾಡಿದ್ದು ಒಂದು ದೊಡ್ಡ ವಿಷಯವೇನಾಗಿರಲಿಲ್ಲ. ಅವನಿಗೆ ಅಷ್ಟರಲ್ಲೇ ಒಂದು ಮದುವೆಯಾಗಿ ಅವಳಿಗೊಂದು ಮಗುವಾಗಿ ಹೆಂಡತಿ ತೀರಿಹೋಗಿದ್ದಳು. ಆ ಮಗುವನ್ನು ನೋಡಿಕೊಳ್ಳಬೇಕು, ಮನೆಗೆಲಸ ಮಾಡಲು ಜನಬೇಕು, ಅಂದ ಮೇಲೆ ಅವನಿಗಿನ್ನೊಂದು ಮದುವೆ ಮಾಡುವುದು ಸರಿ ತಾನೆ?

ಮನೆಯಲ್ಲಿ ಶೇಷಣ್ಣನೇ ದೊಡ್ಡವನು. ಅವನಿಗಿಬ್ಬರು ತಮ್ಮಂದಿರು. ಇಬ್ಬರು ತಂಗಿಯರು, ವಯಸ್ಸಾದ ಅಪ್ಪ-ಅಮ್ಮ, ಅವನ ಹೆಂಡತಿ ಮತ್ತು ಅವನ ಮಗ ಸೇರಿ ದೊಡ್ಡ ಸಂಸಾರವೇ ಇತ್ತು. ಶೇಷಣ್ಣನ ಕುಟುಂಬಕ್ಕೆ ಅರ್ಧ ಎಕರೆ ಅಡಕೆತೋಟ, ಜೊತೆಗೊಂದಿಷ್ಟು ಗುಂಟೆ ಜಾಗ ಗದ್ದೆ ಇತ್ತು. ಅದರಲ್ಲೇ ಇವರ ಇಷ್ಟೂ ಜನರ ಸಂಸಾರ ಸಾಗಬೇಕಿತ್ತು.. ಈ ಶೇಷಣ್ಣ ಸಂಸಾರ ಸಾಗಿಸಲು ಕಂಡುಕೊಂಡ ಉಪಾಯವೆಂದರೆ ಭಟ್ಟತನಿಕೆ. ಒಂದಷ್ಟು ಮಂತ್ರ ಹೇಳಲು ಬರುವ ಕಾರಣಕ್ಕಾಗಿ ಅವನನ್ನು ನೆಂಟರಮನೆಗಳಲ್ಲಿ ಮತ್ತು ಊರಿನಲ್ಲಿ ಪಾರಾಯಣ, ಸತ್ಯನಾರಾಯಣ ಕತೆ, ಸತ್ಯಗಣಪತಿ ಕತೆ ಮಾಡಿಸಲು ಕರೆಯುತ್ತಿದ್ದರು. ಇದರಿಂದ ಬರುವ ಹಣ ಮತ್ತು ತೆಂಗಿನಕಾಯಿ, ಅಕ್ಕಿ, ಇವೆಲ್ಲ ಅವನ ಸಂಸಾರಕ್ಕೆ ಸ್ವಲ್ಪ ಉಪಯೋಗವಾಗುತ್ತಿತ್ತು. ಜೊತೆಗೆ ಊರಲ್ಲಿ ಮದುವೆ, ಮುಂಜಿ ಮುಂತಾದ ಸಮಾರಂಭಗಳಿಗೆ ಅಡುಗೆ ಮಾಡಲೂ ಹೋಗುತ್ತಿದ್ದ. ಹಾಗಾಗಿ ಶೇಷಣ್ಣ ಮನೆಯಲ್ಲಿರುವುದಕ್ಕಿಂತ ಹೆಚ್ಚಾಗಿ ಊರಮನೆಯಲ್ಲೇ ಇರುತ್ತಿದ್ದ. ಇಂತಿಪ್ಪ ಹೊತ್ತಲ್ಲಿ ಆ ಮನೆಗೆ ಕಾಲಿಟ್ಟವಳು ಸರಸ್ವತಿ. ಮೊದಲೇ ಚೆಂದವಿದ್ದವಳು, ಚಿಕ್ಕವಯಸ್ಸು ಬೇರೆ. ಶೇಷಣ್ಣಂಗೆ ಅಷ್ಟೊತ್ತಿಗಾಗಲೇ ಪ್ರಾಯ ಕರಗುತ್ತಿತ್ತು, ಸರಸ್ವತಿಗೆ ಪ್ರಾಯ ಏರುತ್ತಿತ್ತು.

ಇಷ್ಟೆಲ್ಲ ಇರುವ ಶೇಷಣ್ಣ ತುಂಬ ಭಾವುಕಜೀವಿ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದರೆ ಅಕ್ಕಪಕ್ಕ ಯಾರು ಹೋಗುತ್ತಿದ್ದಾರೆ, ಬರುತ್ತಿದ್ದಾರೆಂದೇ ತಿಳಿಯದಷ್ಟು ಅನ್ಯಮನಸ್ಕನಾಗಿರುತ್ತಿದ್ದ. ಒಮ್ಮೆ ಒಂದು ಮದುವೆ ಮನೆಯಲ್ಲಿ ಬೆಲ್ಲ ಇರುವ ಮರದ ಬಾಗಮರಿಗೆಯನ್ನು (ಮರದ ಪಾತ್ರೆ) ಬೆಂಕಿಯಮೇಲಿಟ್ಟುಬಿಟ್ಟಿದ್ದ. ಅದು ಕಾದುಕಾದು, ಮರಿಗೆಯೂ ಸುಟ್ಟುಹೋಯಿತು. ‘ಅಲ್ದಾ ಶೇಷಣ್ಣ, ಮರದ ಮರಿಗೆನ ಇಡಲಾಗ ಹೇಳಿ ತಿಳೀತಿಲ್ಯನಾ ನಿಂಗೆ’ ಎಂದು ಕೇಳಿದರೆ, ‘ಆ ಎಂತ ಮಾಡವಾ… ಒಲೆಮೇಲಿಟ್ಟಿ, ಸುಟ್ಟು ಹೋತು..’ ಎಂದಿದ್ದ ನಿರುಮ್ಮಳವಾಗಿ. ಅಂದರೆ ಮರದ್ದು, ಅದು ಸುಟ್ಟುಹೋದೀತು ಎಂಬ ಕಲ್ಪನೆಯೂ ಅವನಲ್ಲಿರಲಿಲ್ಲ. ಮತ್ತೊಮ್ಮೆ ನೆಂಟರ ಮನೆಯಲ್ಲಿ ಶ್ರಾದ್ಧಕ್ಕೆ ಹೋಗಬೇಕಾಗಿತ್ತು. ಸಾಗರದ ಬಸ್‍ ಸ್ಟ್ಯಾಂಡಿನಲ್ಲಿ ಬಸ್‍ ಗಾಗಿ ಕಾಯುತ್ತ ನಿಂತಿದ್ದ. ಆಗ ಜೋರು ಮಳೆಗಾಲ. ಬಸ್ ಸ್ಟ್ಯಾಂಡ್‍ ನ ಕಟ್ಟಡವೊಂದರ ತುದಿಯಲ್ಲಿ ಜೋರಾಗಿ ನೀರು ಬೀಳುತ್ತಿತ್ತು. ಅದನ್ನೇ ನೋಡುತ್ತ ನಿಂತವನಿಗೆ ಬಸ್ಸು ಬಂದದ್ದು ಮತ್ತು ಹೋಗಿದ್ದೆರೆಡೂ ತಿಳಿಯಲೇ ಇಲ್ಲ. ಆಗೆಲ್ಲ ಹಳ್ಳಿಗಳಿಗಿರುವುದು ಒಂದೋ ಎರಡೋ ಬಸ್ಸುಗಳು. ಬಸ್ಸು ಸಿಗದೇ ವಾಪಾಸು ಮನೆಗೆ ಹೋಗಿಬಿಟ್ಟ. ಅದ್ಹೇಗೆ ಬಸ್ಸು ತಪ್ಪಿತು ನಿನಗೆ ಎಂದು ಕೇಳಿದರೆ ‘ನೀರು ಬೀಳ್ತಾ ಇಪ್ಪದನ್ನು ನೋಡ್ತಾ ನಿಂತಕಂಡಿಯಿದ್ದಿ. ಬಸ್ಸು ಬಂದದ್ದೇ ಗೊತ್ತಾಯ್ದಿಲ್ಲೆ…’ ಎಂದು ಹಲ್ಲುಕಿರಿದ. ‘ಅಲ್ದಾ ಶೇಷಣ್ಣ, ಅದೆಂತ ಜೋಗದ ಜಲಪಾತವನಾ… ನೋಡಕ್ಯೋತ ನಿಂತಕಂಬ್ಲೆ..’ ಎಂದು ಛೇಡಿಸಿದ್ದರು ಕೇಳಿದವರು.

ಶೇಷಣ್ಣ ಮನೆಯಲ್ಲಿರುವುದಕ್ಕಿಂತ ಹೆಚ್ಚಾಗಿ ಊರಮನೆಯಲ್ಲೇ ಇರುತ್ತಿದ್ದ. ಇಂತಿಪ್ಪ ಹೊತ್ತಲ್ಲಿ ಆ ಮನೆಗೆ ಕಾಲಿಟ್ಟವಳು ಸರಸ್ವತಿ. ಮೊದಲೇ ಚೆಂದವಿದ್ದವಳು, ಚಿಕ್ಕವಯಸ್ಸು ಬೇರೆ. ಶೇಷಣ್ಣಂಗೆ ಅಷ್ಟೊತ್ತಿಗಾಗಲೇ ಪ್ರಾಯ ಕರಗುತ್ತಿತ್ತು, ಸರಸ್ವತಿಗೆ ಪ್ರಾಯ ಏರುತ್ತಿತ್ತು.

ಒಟ್ಟಿನಲ್ಲಿ ಶೇಷಣ್ಣನ ಇಂಥ ಕತೆಗಳು, ಅದರಲ್ಲೂ ಬಾಗಾಮರಿಗೆ ಸುಟ್ಟಿದ್ದು, ಬಸ್‍ ಸ್ಟ್ಯಾಂಡ್‍ ನಲ್ಲಿ ನಿಂತು ನೀರು ನೋಡುತ್ತ ಬಸ್ ತಪ್ಪಿಸಿಕೊಂಡದ್ದೆಲ್ಲ ದಂತ ಕತೆಯಂತೆ ಊರು, ಕೇರಿಗಳಲ್ಲೆಲ್ಲ ಹಬ್ಬಿ, ಬೇರೆಯಾರಿಗಾದರೂ ‘ಒಳ್ಳೆ ಶೇಷಣ್ಣನ ಥರ ಆಗ್ಹೋತಲ ನಿನ್ನ ಕತೆ’ ಎಂದೂ ಅವನಿಗೆ ಹೋಲಿಸಿ ಛೇಡಿಸುವಷ್ಟು ಅವನು ಪ್ರಸಿದ್ಧಿ ಪಡೆದಿದ್ದ.

ಇಂಥ ಶೇಷಣ್ಣ ಸತ್ತದ್ದು ಕೂಡ ತೀರ ವಿಚಿತ್ರವಾಗಿ. ಒಂದುದಿನ ನೆಂಟರಮನೆಯಲ್ಲಿ ಶ್ರಾದ್ಧ ಸಾಗಿಸಲು ಹೋದವನು, ಅಲ್ಲಿ ಇಸ್ಪೀಟ್ ಆಟ ಆಡಿಕೊಂಡು ಮನೆಗೆ ಬರುವುದು ಮಧ್ಯರಾತ್ರಿಯಾಗಿತ್ತು. ಆ ರಾತ್ರಿ ಬಂದು ಬಾಗಿಲು ತಟ್ಟಿ ಒಳಬಂದು, ಕೋಣೆಯೊಳಗೆ ಹೋಗಿದ್ದದ್ದನ್ನು ಅವನ ತಂಗಿ ವರಲಕ್ಷ್ಮೀ, ಕೊನೆಯ ತಮ್ಮ ಗುರುಮೂರ್ತಿ ಎಲ್ಲರೂ ನೋಡಿದ್ದರು. ಮಾರನೆಯ ದಿನ ಅವರೆಲ್ಲ ಎದ್ದೇಳುವಷ್ಟರಲ್ಲಿ ಶೇಷಣ್ಣ ಉರುಳುಹಾಕಿಕೊಂಡಿದ್ದ. ಸರಸ್ವತಿ, ಅವನ ಮತ್ತೊಬ್ಬ ತಮ್ಮ ಭಾಸ್ಕರ, ಅವನ ತಾಯಿ ಎಲ್ಲ ಜೋರಾಗಿ ಅಳುತ್ತಿದ್ದರು. ಹಗ್ಗ ಕಡಿದು ಕೆಳಗೆ ಅವನನ್ನು ಮಲಗಿಸಿದ್ದರು. ಅಷ್ಟೊತ್ತಿಗೆ ಊರವರೆಲ್ಲ ಸೇರಿಯಾಗಿತ್ತು. ಗಂಡನ ಹೆಣದ ಮುಂದೆ ಕುಳಿತು ಸರಸೋತಕ್ಕ ಒಂದೇ ಸಮನೆ ಅಳುತ್ತಿದ್ದಳು.

‘ಮಕ್ಕಳಿಬ್ಬರೂ ಚಿಕ್ಕವರು, ಇಷ್ಟು ಸಣ್ಣ ಮಕ್ಕಳನ್ನು ಇಟ್ಟುಕೊಂಡು ಪಾಪ ಸರಸೋತಕ್ಕ ಹ್ಯಾಂಗೆ ಬದುಕ್ತೇನ…’ ಎಂದು ಅಲ್ಲಲ್ಲಿ ಮಾತನಾಡಿಕೊಂಡದ್ದು ಸರಸ್ವತಿಯ ಕಿವಿಗೂ ಬಿದ್ದು, ಅವಳ ಅಳು ಇನ್ನೂ ಜಾಸ್ತಿಯಾಯಿತು. ಆಗೆಲ್ಲ ಪೊಲೀಸು ಗೀಲೀಸು ಎಂಬುದೆಲ್ಲ ದೊಡ್ಡ ವಿಷಯವಾಗಿರಲಿಲ್ಲ. ಹಾಗಾಗಿ ಶೇಷಣ್ಣನನ್ನು ಸುಡಲಾಯಿತು. ಹಾಗೆ ಸುಡುವಾಗಲೋ… ಅದರ ನಂತರವೋ ಗೊತ್ತಿಲ್ಲ, ಒಂದೆರೆಡು ಜನ ಮಾತನಾಡಿಕೊಂಡದ್ದು ಸರಸ್ವತಿಯಷ್ಟೇ ಅಲ್ಲ, ಅವಳ ಮಗ ರಾಜುವಿನ ಕಿವಿಗೂ ಬಿದ್ದಿತ್ತು. ಅದೆಂದರೆ, ‘ಅಲ್ಲ, ಅವ ಹ್ಯಾಂಗೆ ಸತ್ತ, ಉರುಲು ಹಾಕ್ಯಂಡಿಯಿದ್ರೆ ಅವನ ಕುತ್ತಿಗೆಲಿ ಕಲೆ ಇರಕಾಗಿತ್ತು, ಉರುಲು ಹಾಕ್ಯಂಡಿದ್ದ ಹಗ್ಗದ ಗುರುತು ಕೂಡ ಅವನ ಕುತ್ತಿಗೆ ಮೇಲಿತ್ತಿಲ್ಲೆ… ಹಂಗಾರೆ ಅವ ಸತ್ತದ್ದು ಹ್ಯಾಂಗೆ ಮತ್ತೆ… ಎಂತಕ್ಕೋ ಭಾಳ ಸಂಶಯ ಬತ್ತಾ ಇದ್ದು ಅವನ ಸಾವಿನ ಬಗ್ಗೆ..’ ಎಂದದ್ದು ರಾಜುವಿನ ಕಿವಿಗೆ ಬಿದ್ದರೂ, ಹುಡುಗಾಟಿಕೆಯ ಆ ವಯಸ್ಸಿನಲ್ಲಿ ಅದಷ್ಟು ಅವನ ತಲೆಯಲ್ಲಿ ಕೂರಲಿಲ್ಲ. ಆದರೆ ಅದೇ ಹೊತ್ತಿಗೆ ಸರಸೋತಕ್ಕ ನೋಡಿದ್ದು ಭಾಸ್ಕರನ ಮುಖವನ್ನು, ತಲೆತಗ್ಗಿಸಿ ಅಣ್ಣನ ಹೆಣದ ಕ್ರಿಯಾವಿಧಿಗಳನ್ನು ಪೂರೈಸುತ್ತಿದ್ದ ಅವನ ಮುಖದಲ್ಲಿ ಯಾವ ಭಾವವಿತ್ತೆಂದು ಯಾರಿಗೂ ತಿಳಿಯುವಂತಿರಲಿಲ್ಲ.

ಹೀಗೆ ಶೇಷಣ್ಣ ಸತ್ತ ಮೇಲೆ ಸರಸೋತಕ್ಕ ಮತ್ತವಳ ಮಕ್ಕಳ ಬದುಕು ಬರ್ಬಾದಾಗಿ ಹೋಯಿತು. ಮನೆಯಲ್ಲೇನೋ ಕೆಲಸಮಾಡಿಕೊಂಡಿದ್ದಳು. ಮೊದಮೊದಲು ಗಂಡ ಸತ್ತವಳು ಎಂದು ಅವಳನ್ನು ಕರುಣೆಯಿಂದಲೇ ನೋಡುತ್ತಿದ್ದರು ಮನೆ ಜನ. ಆದರೆ ಅದೇನಾಯಿತೋ ಹಾಗೂ ಹೀಗೂ ಒಂದುವರ್ಷ ತಳ್ಳಿ ಕಡೆಗೆ ಮಕ್ಕಳ ಸಮೇತ ಅವಳನ್ನು ಮನೆಯಿಂದ ಹೊರಹಾಕಿಬಿಟ್ಟರು. ಹಾಗೆ ಹೊರಹಾಕಲು ಕಾರಣವೇ ಭಾಸ್ಕರನ ಹೆಂಡತಿ ಪ್ರಭಾವತಿ. ಯಾವಾಗ ಭಾಸ್ಕರನ ಮದುವೆಯಾಯಿತೋ, ಅಲ್ಲಿಂದ ಶುರುವಾಗಿದ್ದು ಸರಸೋತಕ್ಕನ ಗೋಳಿನ ಕತೆ. ಅದು ಸರಸೋತಕ್ಕನ ಗೋಳಿನ ಕತೆ ಎನ್ನುವುದಕ್ಕಿಂತಲೂ ಮಕ್ಕಳು ರಾಜು ಮತ್ತವನ ತಂಗಿಯ ಗೋಳಿನ ಕತೆ ಎಂದರೆ ಹೆಚ್ಚು ಸರಿಯಾದೀತು. ಯಾಕೆಂದರೆ ಇರಲು ಸರಿಯಾದ ಸೂರಿಲ್ಲದೆ, ಊಟ ತಿಂಡಿಯೂ ಸರಿಯಾಗಿ ಸಿಕ್ಕದೆ, ಯಾರೂ ನದರಿಸುವವರಿಲ್ಲದೆ ಸಮಾಜದ ಅಗೌರವಕ್ಕೆ ತುತ್ತಾಗಿ ಬೆಳೆಯತೊಡಗಿದರು ಆ ಮಕ್ಕಳು.

ಹಾಗೆ ಹೊರಬಿದ್ದ ಸರಸ್ವತಿ ಸೀದ ಬಂದದ್ದು ತನ್ನ ಅಪ್ಪನ ಮನೆಗೆ. ಅಲ್ಲಿಯೂ ಅವಳು ಜಾಸ್ತಿ ದಿವಸ ಇರಲಿಲ್ಲ. ಅವಳ ಅಣ್ಣನ ಹೆಂಡತಿಯೇ ನಿಂತು ಅವಳನ್ನು ಮನೆಯಿಂದ ಹೊರಹಾಕಿಸಿದಳು, ಅಣ್ಣ, ತಮ್ಮ, ತಂಗಿ, ತಾಯಿ ಎಲ್ಲರೂ ಇರುವಂತೆಯೇ. ತಾಯಿಗೆ ಕೂಡ ಮಗಳನ್ನು ಹೆಚ್ಚುದಿನ ಸಂಬಾಳಿಸಲು ಸಾಧ್ಯವಾಗಲಿಲ್ಲ. ‘ಅದಕ್ಕೆಂತ ಆಗ್ಹೋಯ್ದು, ಎಂತಕ್ಕೆ ಹೀಂಗೆಲ್ಲ ಮಾಡ್ತು ಹೇಳಿ ತಿಳೀತಿಲ್ಲೆ. ಮರ್ಯಾದೆ ತೆಗೀತು…’ ಎಂದು ಕಣ್ಣೀರು ಹಾಕುತ್ತಿದ್ದಳು ತಾಯಿ.

ತೋಟ, ಗದ್ದೆ ಕೆಲಸಕ್ಕೆ ಬರುವ ಆಳುಗಳೆಲ್ಲ ಇವಳ ಕತೆ ಹೇಳಿಕೊಂಡು ನಗುತ್ತಿದ್ದರು. ಅದರಲ್ಲೂ ಕೊಲ್ಯಾನ ಹೆಂಡತಿಗಂತೂ ಸರಸ್ವತಿಯನ್ನು ಕಂಡರಾಗುತ್ತಿರಲಿಲ್ಲ. ‘ಹೊತ್ತುಗೊತ್ತು ಅಂತಿಲ್ಲ ಅಂತ್ನೀ… ಬರತ್ತದೆ ಮನಿಗೆ, ರಾತ್ರಿತಂಕ ನಮನ್ಯಾಗೇ ಇರ್ತದೆ..?’ ಎಂದು ನೇರ ಸರಸ್ವತಿ ಅಣ್ಣಂಗೇ ದೂರು ನೀಡಿದ್ದಳು.

ಇಷ್ಟೆಲ್ಲದರ ನಡುವೆ ಆ ಮಗ ಅಲ್ಲಿಇಲ್ಲಿ ಎದ್ದೂಬಿದ್ದು ಓದಿ ಹೈಸ್ಕೂಲು ಮಾಸ್ತರಾಗಿದ್ದೇ ದೊಡ್ಡ ಸಂಗತಿಯಾಗಿತ್ತು. ಹಾಗೆ ಹೈಸ್ಕೂಲು ಮಾಸ್ತರಾದವ ಮೊದಲು ಮುಂಡಗೋಡಿನಲ್ಲಿ ವಾಸವಾಗಿದ್ದ. ಅಲ್ಲಿ ತಾಯಿಯನ್ನು ತನ್ನಬಳಿಯೇ ಇರಿಸಿಕೊಂಡಿದ್ದ. ಅಲ್ಲಿಂದ ಅವನಿಗೆ ಇದುವರೆಗೆ ತಾನು ಕಷ್ಟಪಟ್ಟಿದ್ದಕ್ಕಿಂತ ಹೆಚ್ಚಿನ ಕಷ್ಟ ಅವನ ತಾಯಿಯನ್ನು ನೋಡಿಕೊಳ್ಳುವುದಾಗಿತ್ತು. ನಂತರ ಅವನು ನೌಕರಿ ಮಾಡುತ್ತಲೇ ಎಂ.ಎ.ನೂ ಮಾಡಿ ಕಾಲೇಜಿನಲ್ಲಿ ನೌಕರಿ ಸಿಕ್ಕಿದ ನಂತರವೇ ಅವನನ್ನು ಮದುವೆ ಮಾಡಲಾಯಿತು.

ಮಗನಿಗೆ ಮದುವೆಯಾದಾಗ ಸರಸ್ವತಿ ಸಂಭ್ರಮದಿಂದಲೇ ಸೊಸೆಯನ್ನು ಬರಮಾಡಿಕೊಂಡಿದ್ದಳು. ಆದರೆ ಆ ಸಂಭ್ರಮ ಮಗ-ಸೊಸೆಯಲ್ಲಿ ಹೆಚ್ಚುದಿನ ಉಳಿಯಲಿಲ್ಲ. ಚಿಕ್ಕಮನೆ. ಎರಡು ಕೋಣೆ, ಒಂದು ಹಾಲ್, ಒಂದು ಅಡುಗೆ ಮನೆ ಇರುವ ಮನೆ. ಕೋಣೆಯಲ್ಲಿ ಪಿಸುಗುಟ್ಟಿದರೂ ಮತ್ತೊಂದು ಕೋಣೆಯಲ್ಲಿ ಮಲಗಿದ್ದ ಸರಸ್ವತಕ್ಕನಿಗೆ ಕೇಳಿ ರಾತ್ರಿ ಎದ್ದು ಕೂರುತ್ತಿದ್ದಳು. ಹೀಗೇ, ಮಗ-ಸೊಸೆ ಕೋಣೆಯಲ್ಲಿ ರಾತ್ರಿಹೊತ್ತು ಇರುವಾಗ, ಮೆಲ್ಲಗೆ ಬಾಗಿಲು ತಟ್ಟುತ್ತಿದ್ದಳು. ಒಮ್ಮೆಯಂತೂ ‘ಆನು ಇಲ್ಲೇ ಇರ್ತಿ. ನಿಂಗ ಎಂತ ಮಾಡ್ತಿ ಹೇಳಿ ನೋಡವು ಎಂಗೆ’ ಎಂದಳು. ಅದನ್ನು ಕೇಳಿದ ಸೊಸೆಗೆ ಆಶ್ಚರ್ಯ. ತಾಯಿಯ ಇಂಥ ನಡವಳಿಕೆ ಬಗ್ಗೆ ಮೊದಲೇ ಸ್ವಲ್ಪ ಸೂಟು ತಿಳಿದಿದ್ದ ಮಗ ರಾಜುವಿಗೆ ಆಶ್ಚರ್ಯವೇನೂ ಆಗಿರಲಿಲ್ಲ. ಸೊಸೆ ಆಶ್ಚರ್ಯದಿಂದ ನಡುಗಿ ‘ಇದೆಂತ ಹೀಂಗೆಲ್ಲ ಹೇಳ್ತು ಅತ್ತೆ’ ಎಂದು ಗಂಡನನ್ನು ನೋಡಿದಳು. ನಂತರ ದಿನಗಳಲ್ಲೆಲ್ಲ ಸೊಸೆಗೆ ಇವಳನ್ನು ಸಹಿಸುವುದೇ ಕಷ್ಟವಾಗುತ್ತಿತ್ತು. ಪದೇಪದೆ ಅವಳ ಬಳಿ ಬಂದು ‘ರಾಜು ರಾತ್ರಿ ನಿಂಗೆಂತ ಮಾಡ್ದ ಹೇಳು, ಇವತ್ತು ಹ್ಯಾಂಗಿತ್ತೇ….’ ಹಿಂಗೆಲ್ಲ ಕೇಳಲು ಶುರುಮಾಡಿದಳು.

ಅವಳ ಮಾತೊಂದೇ ಅಲ್ಲ, ದಿನ ಹೋದಂತೆ ಅವಳನ್ನು ನೋಡಿದ್ರೇನೆ ವಾಕರಿಕೆ ಬರುವಂತಾಯಿತು ಸೊಸೆಗೆ. ಜೊತೆಗೆ ರಾತ್ರಿಹೊತ್ತು ಇಬ್ಬರಿಗೂ ಮಲಗಲು ಕೊಡುತ್ತಲೇ ಇರಲಿಲ್ಲ. ಸೀದಾ ಬಂದು ಕೋಣೆಯೊಳಗೆ ಕುಳಿತುಬಿಡುತ್ತಿದ್ದಳು. ಹೋಗು ಎಂದು ಎಷ್ಟು ಹೇಳಿದರೂ ಹೋಗುತ್ತಿರಲಿಲ್ಲ. ಇದರಿಂದ ರೋಸಿಹೋಗಿದ್ದ ಮಗ. ಹಾಗೆ ನೋಡಿದರೆ ಅಮ್ಮನ ಈ ನಡವಳಿಕೆ ಅವನಿಗೆ ಹೊಸದೇನಾಗಿರಲಿಲ್ಲ. ಚಿಕ್ಕಪ್ಪ ಭಾಸ್ಕರನ ಮದುವೆಯಾದ ಮೇಲೂ ಅಮ್ಮ ಹೀಗೆಯೇ ಮಾಡುತ್ತಿದ್ದದುನ್ನು ಚಿಕ್ಕವನಿರುವಾಗಲೇ ನೋಡಿದ್ದ. ಅವನ ಕೋಣೆಗೆ ಹೋಗಿ ಕೂತುಬಿಡುತ್ತಿದ್ದಳು. ಚಿಕ್ಕಮ್ಮನಿಗೆ ಸಹಿಸಲಸಾಧ್ಯವಾದ ಸಿಟ್ಟು ಬಂದು ಒಂದುಸಲವಂತೂ ಅಮ್ಮನ ಜಡೆ ಹಿಡಿದೆಳೆದು ಕೋಣೆಯಿಂದ ಹೊರಹಾಕಿದ್ದನ್ನು ಕಣ್ಣಾರೆ ಕಂಡಿದ್ದ.

ಅದಕ್ಕೂ ಮೊದಲು ಅಂದರೆ ಚಿಕ್ಕಪ್ಪನ ಮದುವೆಗಿಂತಲೂ ಮುಂಚೆ ಅದೇ ಕೋಣೆಯಲ್ಲಿಯೇ ಅಮ್ಮ ಆಗಾಗ ಇರುತ್ತಿದ್ದಳು. ಚಿಕ್ಕಪ್ಪನೂ ಅಲ್ಲಿರುತ್ತಿದ್ದ. ಆಗ ಚಿಕ್ಕಪ್ಪನೇನೂ ತಕರಾರು ಮಾಡುತ್ತಿರಲಿಲ್ಲ. ಆದರೆ ಈಗ ಮದುವೆಯಾದ ಮೇಲೆ ಯಾಕೆ ಹೀಗೆ ತಕರಾರು ಮಾಡುತ್ತಿದ್ದಾನೆ ಎಂದೆನಿಸಿತ್ತು ರಾಜುವಿಗೆ. ಆದರೆ ಅದಷ್ಟೇ ಆಗಿದ್ದಿದ್ದರೆ ಅಷ್ಟು ಸಮಸ್ಯೆ ಆಗುತ್ತಿರಲಿಲ್ಲವೇನೋ. ಅವರ ಮನೆಯಲ್ಲಿ ತೋಟಕ್ಕೆ ಕೆಲಸಕ್ಕೆ ಬರುತ್ತಿದ್ದ ಆಳು ಗಣಪನ ಜೊತೆಗೂ ಅಮ್ಮ ಹೋಗಿ ವಾರಗಟ್ಟಲೆ ಬರುತ್ತಲೇ ಇರದ್ದದ್ದೂ ಅವನಿಗೆ ನೆನಪಿದೆ. ಆಗೆಲ್ಲ ಮನೆಯಲ್ಲಿ ಚಿಕ್ಕಪ್ಪಂದಿರು, ಅತ್ತೆಯಂದಿರೆಲ್ಲ ಬಾಯಿಗೆ ಬಂದಹಾಗೆ ಬೈಯ್ಯುತ್ತಿದ್ದರು ಅವಳನ್ನು.

‘ಹಲ್ಕಟ್ಟ ರಂಡೆ, ಎಲ್ಲಿಂದ ಹಾಳಾಗಿ ನಮ್ಮನಿಗೆ ಬಂದು ಸೇರಕ್ಯಂಡ್ಚೇನ. ಖರ್ಮ. ಖರ್ಮ. ಅಣ್ಣ ಸಾಯಬದ್ಲು ಇವಳೇ ಸಾಯ್ಲಾಗಿತ್ತು. ಮಾನ ಮರ್ಯಾದೆ ಎಲ್ಲ ತೆಗದು ಹಾಕ್ತು..’ ಎಂದೆಲ್ಲ ಗುರುಮೂರ್ತಿ ಚಿಕ್ಕಪ್ಪ ಮತ್ತು ಇಬ್ಬರು ಅತ್ತೆಯಂದಿರು ಮಾತನಾಡಿಕೊಂಡರೆ, ಭಾಸ್ಕರ ಚಿಕ್ಕಪ್ಪ ಮಾತ್ರ ಒಂದೂ ಮಾತನಾಡದೆ ತಲೆತಗ್ಗಿಸಿಕೊಂಡು ಇರುತ್ತಿದ್ದ. ಒಂದುದಿನ ಇದು ವಿಕೋಪಕ್ಕೆ ಹೋಯಿತು. ಅವತ್ತು ರಾತ್ರಿ ಎಲ್ಲರೂ ಮಲಗಿದ್ದ ಹೊತ್ತು. ಇದ್ದಕ್ಕಿದ್ದಹಾಗೇ ಜೋರಾಗಿ ಕೂಗುವ ಧ್ವನಿ ಕೇಳಿಸಿತು. ಯಾರೆಂದು ಹೋಗಿ ಬಾಗಿಲು ತೆರೆದು ನೋಡಿದರೆ ಗಣಪನ ಹೆಂಡತಿ ಮಂಜಿ ಒಂದೇ ಸಮನೆ ಕೂಗುತ್ತಿದ್ದಳು. ಅಂಗಳದ ತುದಿಯಲ್ಲಿ ಗಣಪ ಮತ್ತು ಸರಸ್ವತಿ ನಿಂತಿದ್ದರು.

ಮಂಜಿ ‘ನಾ ಎಂತ ಬದಕೂದು ಬ್ಯಾಡ್ವಾ ಹೆಗಡೇರೆ. ನನ್ನ ಮಕ್ಕಳೆಲ್ಲ ಎಂತ ಬಾವಿಗೆ ಹಾರ್ಕಂಬುದಾ… ಇದು ಹೀಂಗೆಲ್ಲ ಬಂದು ಕುಂತ್ಗತ್ತ ಕಾಣಿ, ಇದ್ನ ಬಂದೋಬಸ್ತ್ ಮಾಡತ್ರಾ ಹ್ಯಾಂಗೆ…’ ಎಂದು ತನ್ನ ಕುಂದಾಪುರದ ಭಾಷೆಯಲ್ಲಿ ಜೋರಾಗಿ ನೆಲ ಕುಟ್ಟಿಕುಟ್ಟಿ ಹೇಳುತ್ತಿದ್ದಳು. ಅವಳ ಕೆದರಿದ ಕೂದಲು, ನಡುಗುವ ತುಟಿಗಳು, ಅಸ್ತವ್ಯಸ್ತವಾಗಿದ್ದ ಅವಳ ಸೀರೆ, ಕೆಂಪಗೆ ಉರಿಯುವ ಅವಳ ಕಣ್ಣುಗಳಿಂದಲೇ ತಿಳಿಯುವಂತಿತ್ತು ಅವಳಿಗೆಷ್ಟು ಸಿಟ್ಟುಬಂದಿತ್ತು ಎಂದು.
ಈಗೀಗ ಶೇಷಣ್ಣನ ಮನೆಯವರಿಗೆ ಇದೆಲ್ಲ ಮಾಮೂಲಾಗಿಬಿಟ್ಟಿತ್ತು. ಮನೆ, ಮರ್ಯಾದೆ ಅಂತೆಲ್ಲ ನೋಡುವ ಸ್ಥಿತಿಯಲ್ಲೂ ಅವರಿರಲಿಲ್ಲ. ಅಷ್ಟೊತ್ತಿಗೆ ಅಕ್ಕಪಕ್ಕ ಇರುವ ಕುಟ್ನಜ್ಜನ ಮನೆಯವರೂ, ನಾಣಜ್ಜನಮನೆಯವರೆಲ್ಲ ಬಂದು ಹೊರನಿಂತು ನೋಡುತ್ತಿದ್ದರು ಈ ಪ್ರಹಸನವನ್ನು. ಒಂದು ಹಳೆಹಳೇ ಸೀರೆ ಉಟ್ಟು ಅಂಗಳದ ತುದಿಯಲ್ಲಿ ಸರಸೋತಕ್ಕ ಇದ್ಯಾವುದರ ಪರಿವೆಯೂ ಇಲ್ಲದೆ ಸುಮ್ಮನೆ ನಿಂತಿದ್ದಳು. ಗಣಪನೂ ತಲೆತಗ್ಗಿಸಿ ನಿಂತಿದ್ದ. ‘ಅದಕ್ಕೆಂತ ಹೇಳಕ್, ಈ ಮುಂಡೆಗಂಡಂಗೆ ಮಂಡೆ ಇತ್ತಾ…?’ ಎಂದು ಗಂಡನನ್ನು ಹಿಡಿದು ಜಗ್ಗಿದಳು ಮಂಜಿ.

ಯಾವಾಗ ಭಾಸ್ಕರನ ಮದುವೆಯಾಯಿತೋ, ಅಲ್ಲಿಂದ ಶುರುವಾಗಿದ್ದು ಸರಸೋತಕ್ಕನ ಗೋಳಿನ ಕತೆ. ಅದು ಸರಸೋತಕ್ಕನ ಗೋಳಿನ ಕತೆ ಎನ್ನುವುದಕ್ಕಿಂತಲೂ ಮಕ್ಕಳು ರಾಜು ಮತ್ತವನ ತಂಗಿಯ ಗೋಳಿನ ಕತೆ ಎಂದರೆ ಹೆಚ್ಚು ಸರಿಯಾದೀತು. ಯಾಕೆಂದರೆ ಇರಲು ಸರಿಯಾದ ಸೂರಿಲ್ಲದೆ, ಊಟ ತಿಂಡಿಯೂ ಸರಿಯಾಗಿ ಸಿಕ್ಕದೆ, ಯಾರೂ ನದರಿಸುವವರಿಲ್ಲದೆ ಸಮಾಜದ ಅಗೌರವಕ್ಕೆ ತುತ್ತಾಗಿ ಬೆಳೆಯತೊಡಗಿದರು ಆ ಮಕ್ಕಳು.

ಇದಕ್ಕೂ ಮುಂಚೆಯೇ ಗಣಪ ತೋಟದಲ್ಲಿ ಕೆಲಸಮಾಡುವಾಗಲೆಲ್ಲ ಅವನ ಹಿಂದೆಮುಂದೆಯೆಲ್ಲ ಸುತ್ತಿ, ಸೀರೆಸೆರಗನ್ನು ಬೇಕೆಂದೇ ಸರಿಸಿಕೊಂಡು ಮಳ್ಳಿಹಂಗೆ ನಕ್ಕ ಸರಸ್ವತಿಯನ್ನು ಕಡೆಗಣಿಸಲು ಗಣಪನಂಥ ಕಟ್ಟುಮಸ್ತಾದ ಆಳಿಗೆ ಸಾಧ್ಯವೇ ಆಗಿರಲಿಲ್ಲ. ಅವರಿಬ್ಬರ ಸಂಬಂಧ ನಿರಾತಂಕವಾಗಿಯೇ ನಡೆಯುತ್ತಿತ್ತು. ಪ್ರತಿದಿನ ರಾತ್ರಿ ಕಂಠಮಟ್ಟ ಕುಡಿದು ತೋಟದ ಹತ್ರ ಹೋಗಿ ಬಿದ್ದುಕೊಂಡರೆ ಮನೆಗೆ ಬರುವುದು ಬೆಳಗಾದಮೇಲೆಯೇ. ಮೊದಮೊದಲು ಗಣಪನ ಹೆಂಡತಿ ಮಂಜಿಗೆ, ದಿನಾ ಕುಡಿದುಬಂದು ಹೊಡೆದು ಗಲಾಟೆ ಮಾಡುತ್ತಿದ್ದ ಗಂಡನ ಕಾಟ ತಪ್ಪಿತು ಎಂದು ಖುಷಿಯಿಂದಿದ್ದವಳು. ಆದರೆ ಯಾವಾಗ, ಇವರಿಬ್ಬರ ಸಂಬಂಧ ತಿಳಿಯಿತೋ ಕೆಂಡಾಮಂಡಲವಾಗಿಬಿಟ್ಟಳು.

ಒಂದು ದಿನವಂತೂ ತೋಟಕ್ಕೇ ಹೋಗಿ ಸರಸೋತಕ್ಕನ ಜುಟ್ಟು ಹಿಡಿದು, ಹಗರದಬ್ಬೆ ತಗಂಡು ಬಡಬಡನೆ ಬಡಿದಿದ್ದಳು. ಮೈಕೈ ನೋವು ಬರಿಸಿಕೊಂಡು ಅಲ್ಲಿಂದ ಬಂದಳೇ ಹೊರತು ಅವಳ ಬಡಿತವನ್ನೂ ಪ್ರತಿಭಟಿಸಲಿಲ್ಲ ಸರಸೋತಕ್ಕ. ಮಂಜಿ ಅಷ್ಟರ ನಂತರ ಗಣಪನನ್ನು ರಾತ್ರಿಹೊತ್ತು ಮನೆಯ ಹೊರಗೆ ಬಿಡಲೇ ಇಲ್ಲ. ಮಗ, ಅಪ್ಪ, ತಂಗಿ ಹೇಳಿ ಎಲ್ಲರನ್ನೂ ಕಾವಲಿಗೆ ನೇಮಿಸಿ ಮನೆಯಲ್ಲೇ ಇರಿಸಿಕೊಂಡಳು. ಆದರೆ ಬರಬರುತ್ತಾ ಅದೂ ಕಷ್ಟಕ್ಕೆ ಬರತೊಡಗಿತು, ರಾತ್ರಿಯಾಗುತ್ತಿದ್ದ ಹಾಗೇ ಸರಸೋತಕ್ಕ ಅವಳ ಮನೆಗೇ ಬಂದು, ಅವಳ ಕೋಣೆಯನ್ನೇ ಹೊಕ್ಕಿಬಿಡುತ್ತಿದ್ದಳು. ಇನ್ನಿವಳ ಕಾಟ ತಡಿಯಲಾಗುವುದಿಲ್ಲವೆಂದು ಅವತ್ತು ಏನಾದರಾಗಲಿ, ಯಾರ ಮರ್ಯಾದೆ ಹೋದರೂ ಪರವಾಗಿಲ್ಲವೆಂದು ಮಂಜಿ ತೋಟದ ಹಾದಿಯುದ್ದಕ್ಕೂ ಗಲಾಟೆ ಮಾಡುತ್ತ, ಅವರಿಬ್ಬರನ್ನೂ ಕರೆದುಕೊಂಡು ಶೇಷಣ್ಣನ ಮನೆಯಂಗಳದಲ್ಲಿ ತಂದು ನಿಲ್ಲಿಸಿದ್ದಳು.

ಮತ್ತೆ ಪಂಚಾತ್ಗೆ ಮಾಡಿ ಪ್ರಯೋಜನವಾದರೂ ಏನು ಎಂದು ಭಾಸ್ಕರ ಮತ್ತವನ ಮನೆಯವರು ಯೋಚಿಸುತ್ತಿರುವ ಹೊತ್ತಿನಲ್ಲಿಯೇ ಅವನ ಹೆಂಡತಿ ಪ್ರಭಾವತಕ್ಕ ಸರಸೋತಕ್ಕನ ಬಟ್ಟೆಗಂಟು ತಂದು ಹೊರಗೆ ಹಾಕಿ ‘ಇನ್ನು ನಿನ್ನ ಎಂಗ್ಳ ಋಣ ತೀರಿಹೋತು. ಈ ಮನೆಗೆ ಬರಡ..’ ಎಂದದ್ದಲ್ಲದೇ, ರಾತ್ರಿ ಮಲಗಿದ್ದ ಅವಳ ಇಬ್ಬರು ಮಕ್ಕಳನ್ನೂ ಎಬ್ಬಿಸಿ ಹೊರಹಾಕಿಬಿಟ್ಟಳು. ಆ ರಾತ್ರಿ ನಿದ್ದೆಗಣ್ಣಲ್ಲೇ ಇದ್ದ ಶಾಲೆಗೆ ಹೋಗುತ್ತಿದ್ದ ಆ ಇಬ್ಬರು ಮಕ್ಕಳೂ ಕಣ್ಣೊರೆಸಿಕೊಳ್ಳುತ್ತ ಅಂಗಳಕ್ಕೆ ಬಂದು ಅಮ್ಮನ ಬಟ್ಟೆ ಗಂಟಿನಮೇಲೆಯೇ ತಲೆಇಟ್ಟು ಮುದುರಿ ಮಲಗಿ ನಿದ್ದೆಹೋದರು. ಕೂಗಿಕೂಗಿ ಗಂಟಲು ಕೆರೆದುಕೊಂಡ ಮಂಜಿ, ಗಣಪನನ್ನು ಕರೆದುಕೊಂಡು ಮನೆಹಾದಿ ಹಿಡಿದಳು. ಎಲ್ಲರೂ ಬೈದು ಒಳಗೆ ಹೋದರೆ ಮೌನವಾಗಿದ್ದ ಭಾಸ್ಕರ ಮಾತ್ರ ‘ನಾಳೆ ನಿನ್ನಪ್ಪನ ಮನೆಗೆ ಹೋಗು’ ಎಂದು ಸರಸೋತಕ್ಕನ ಕೈಯ್ಯಲ್ಲಿ ದುಡ್ಡು ತುರುಕಿ, ಹೆಂಡತಿ ಎಲ್ಲಾದರೂ ನೋಡಿಯಾಳೆಂದು ಅವಸರಅವಸರದಿಂದ ಒಳನಡೆದು ಬಾಗಿಲು ಹಾಕಿಕೊಂಡ.

ರಾತ್ರಿಯಿಡೀ ಮುಚ್ಚಿದ ಬಾಗಿಲನ್ನೇ ನೋಡುತ್ತ ಕುಳಿತ ಸರಸ್ವತಿ ಮಾರನೇ ದಿನ ತಾಯಿಯ ಮನೆಯ ಹಾದಿ ಹಿಡಿದಳು. ಆದರೆ ಅಲ್ಲಿ ಕೆಲವು ವರ್ಷಗಳ ಕಾಲ ಇದ್ದಳು. ಇವಳು ಹೀಗೆಯೇ, ಹೇಗೆಬೇಕಾದರೆ ಹಾಗಿರಲಿ ಎಂದು ಅವಳನ್ನು ಅವಳಪಾಡಿಗೆ ಬಿಟ್ಟಿದ್ದರು.

ಇಂಥ ಸಂಕಷ್ಟದಲ್ಲೂ ರಾಜು ತಂಗಿಗೆ ಮದುವೆ ಮಾಡಿದ. ಅಳಿಯ ತಾಳಗುಪ್ಪದಲ್ಲಿ ಒಂದು ಅಂಗಡಿ ನೋಡಿಕೊಂಡಿದ್ದ. ಸರಸ್ವತಿ ಒಂದಷ್ಟು ದಿನಗಳ ಕಾಲ ಮಗಳ ಮನೆಯಲ್ಲೇ ಇದ್ದಳು. ಅಮ್ಮನ ಸಮಸ್ಯೆ ಮಗಳಿಗೆ ಗೊತ್ತಿತ್ತು, ಆದರೆ ಗಂಡನಿಗೆ ಇದನ್ನು ಹೇಗೆ ಹೇಳುವುದೆಂದು ಅರ್ಥವಾಗಲಿಲ್ಲ. ಅಲ್ಲಿ ಮಗನ ಮನೆಯಲ್ಲಿ ಹೇಗೆ ಸೊಸೆ ಅಸಹ್ಯಪಟ್ಟುಕೊಂಡಳೋ ಅದೇ ರೀತಿ ಇಲ್ಲಿ ಅಳಿಯ ಅತ್ತೆಯನ್ನು ಸಹಿಸಲಿಲ್ಲ. ಅವಳನ್ನು ಮನೆಯಿಂದ ಕಳಿಸದಿದ್ದರೆ ನೀನೂ ಮನೆಬಿಟ್ಟಿಕ್ಕೆ ಹೋಗು ಎಂದುಬಿಟ್ಟ. ಗಂಡನ ಮಾತು ಕೇಳಿ ಹೆದರಿದ ಮಗಳೂ ಅಣ್ಣನಿಗೆ ಫೋನುಮಾಡಿದಳು. ರಾಜುವಿಗೆ ಅಮ್ಮನ ನಡವಳಿಕೆ ಬಗ್ಗೆ ಹೇಗೆ ಹೇಸಿಗೆ ಇತ್ತೋ ಅಷ್ಟೇ ರೀತಿಯ ಸಿಟ್ಟೂ ಇತ್ತು. ತಾನು ಇಷ್ಟೆಲ್ಲ ಕಷ್ಟಪಡಲು ಕಾರಣವೇ ಅಮ್ಮ ಎಂಬುದು ಅವನಿಗೆ ಮನದಟ್ಟಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಅವನಿಗೆ ಪದೇಪದೆ ನೆನಪಾಗುತ್ತಿದ್ದುದು ಅವನ ತೀರಿಹೋದ ಅಪ್ಪ, ಒಂದೂ ಗಾಯವಾಗದ ಅವನ ಕುತ್ತಿಗೆ, ಅವನ ಸುತ್ತ ಬಿಗಿದುಕೊಂಡ ಉರುಳು, ಮೌನವಾಗಿ ತಲೆ ತಗ್ಗಿಸಿಕೊಂಡು ನಿಲ್ಲುತ್ತಿದ್ದ ಭಾಸ್ಕರ ಚಿಕ್ಕಪ್ಪ ಎಲ್ಲ ನೆನಪಿಗೆ ಬಂದು, ಇಬ್ಬರನ್ನೂ ಸಾಯಿಸುವಷ್ಟು ರೋಷ ಬರುತ್ತಿತ್ತು. ಆದರೆ ಯಾವ ಕಾರಣಕ್ಕೂ ಸರಸೋತಕ್ಕನನ್ನು ಅವನು ಕಡೆಗಣಿಸುವಂತೆಯೇ ಇರಲಿಲ್ಲ. ಯಾಕೆಂದರೆ ಹೋದಲ್ಲಿ ಬಂದಲ್ಲಿ ಅವಳು ನಿನ್ನಮ್ಮ ಎಂದು ಇಡೀ ಸಮಾಜ ಬೊಟ್ಟಿಟ್ಟು ಹೇಳುತ್ತಿತ್ತು. ಹಾಗಾಗಿ ಮಗ ಎಂಬ ಕರ್ತವ್ಯಕ್ಕಾಗಿಯಾದರೂ ಅವ ತಾಯಿಯನ್ನು ನೋಡಿಕೊಳ್ಳಲೇಬೇಕಾಗಿತ್ತು.

ತಂಗಿಯ ಫೋನಿನ ಕರೆಗೆ ಓಗೊಟ್ಟ ರಾಜು ಅಮ್ಮನನ್ನು ತಾಳಗುಪ್ಪದಲ್ಲಿ ಮಗಳ ಮನೆಯ ಸಮೀಪವೇ ಒಂದು ಮನೆ ಮಾಡಿ ಇರಿಸಿದ್ದ. ತಿಂಗಳ ಹಣ ಕಳಿಸಿ ದೂರದಿಂದಲೇ ಅವಳನ್ನು ನೋಡಿಕೊಳ್ಳುತ್ತಿದ್ದ.

ಆದರೆ ಸರಸೋತಕ್ಕನ ನಡವಳಿಕೆ ದಿನೇ ದಿನೇ ಬೇರೆಬೇರೆ ಸ್ವರೂಪ ಪಡೆದುಕೊಳ್ಳತೊಡಗಿತು. ವಯಸ್ಸು ಅಷ್ಟೊತ್ತಿಗೆ 50ರ ಆಸುಪಾಸಿದ್ದರೂ ಅವಳೊಳಗಿನ ಕಾವು ಕಡಿಮೆಯಾಗಲಿಲ್ಲ. ವಯಸ್ಸಾಯಿತು ಎಂಬ ಕಾರಣಕ್ಕಾಗಿಯೋ ಏನೋ ಮನೆಯಲ್ಲೇ ಇರತೊಡಗಿದಳು. ಆದರೆ ಮನೆಯಲ್ಲಿರುವ ಮೆಣಸಿನಕಾಯಿ, ಬದನೆಕಾಯಿ, ಕಡೆಗೆ ಅಲ್ಲಿ ಪೊರಕೆ ಕಡ್ಡಿಗಳನ್ನು ಹಾಕಿಕೊಳ್ಳುತ್ತಿದ್ದಳು. ಅಲ್ಲಿ ಗಾಯವಾಗಿ ರಕ್ತಸೋರತೊಡಗಿತು. ಇನ್ಫೆಕ್ಷನ್ ಆಗಿ ಮೂತ್ರಹೋಗುವುದೂ ಕಷ್ಟ ಎಂಬ ಪರಿಸ್ಥಿತಿಗೆ ಬಂತು. ಇದರ ಜೊತೆಗೆ ಒಮ್ಮೊಮ್ಮೆ ಸೀರೆ ಬಿಚ್ಚಿ ಅಂಗಳದಲ್ಲೆಲ್ಲ ಓಡಾಡತೊಡಗಿದಳು. ಇನ್ನು ಹೀಗೇ ಬಿಟ್ಟರಾಗುವುದಿಲ್ಲವೆಂದು ಸುದ್ದಿ ತಿಳಿದ ರಾಜು ಅವಳನ್ನು ಒಂದಷ್ಟು ದಿವಸ ಹುಚ್ಚಾಸ್ಪತ್ರೆಗೆ ಸೇರಿಸಿ ನಿಶ್ಚಿಂತೆಯಿಂದ ಇದ್ದ. ಆದರೆ ಹಾಗೆ ನಿಶ್ಚಿಂತೆಯಿಂದಿರುವಾಗಲೇ ಬಂದ ಸುದ್ದಿ, ಅಮ್ಮ, ಮಡಿವಾಳರ ತಿಪ್ಪನ ಮನೆಯ ಬಾವಿಗೆ ಬಿದ್ದ ಸುದ್ದಿ.

ಈ ಮೊದಲೂ ಅವಳಲ್ಲಿಗೆ ಬೇಕಾದಷ್ಟು ಸಲ ಹೋಗಿದ್ದಳು. ಈಗಲೂ ಹಾಗೆಯೇ, ಮುಂಚಿನ ದಿವಸದ ರಾತ್ರಿಯೇ ಮಂಜನ ಮನೆಯ ಬಾಗಿಲಲ್ಲಿ ನಿಂತಾಗ ತಿಪ್ಪ ಮತ್ತವನ ಹೆಂಡತಿ ರತ್ನಿ ಇಬ್ಬರಿಗೂ ಗಾಬರಿಯಾಗಿ, ‘ಏಯ್, ಯಾಕ.. ಇಲ್ಲಿಗ್ ಬರಾಕೆ ಹೋದ್ಯೇ… ಮಗಳ ಮನೆಗೆ ಓಗು ನೀನು.. ಇಲ್ಲಿಗ್ ಬರಬ್ಯಾಡ…’ ಎಂದು ಜೋರು ಮಾಡಿ ಅವಳನ್ನು ತಳ್ಳಿ ಬಾಗಿಲು ಹಾಕಿದ. “ಮುಂಡೆ… ಬಂತು ಇಲ್ಲಿಗೆ…” ಎಂದು ರತ್ನಿ ನೆಟಿಗೆ ಮುರಿದು ಶಪಿಸಿದಳು. ಹಾಗೆ ತಳ್ಳಿಸಿಕೊಂಡ ಸರಸ್ವತಿ ಮಗಳ ಮನೆಗೆ ಹೋದಳಾ.. ಬಿಟ್ಟಳಾ… ಗೊತ್ತಿಲ್ಲ. ಆದರೆ ಮಾರನೇ ದಿನ ಹೆಣವಾಗಿ ಬಿದ್ದದ್ದು ಇದೇ ತಿಪ್ಪನ ಮನೆಯ ಬಾವಿಯಲ್ಲಿ. ಆ ಹೆಣದ ಜೊತೆಗೆ ಅವಳ ಮಗನೂ ಸೇರಿದಂತೆ ಅದೆಷ್ಟು ನಿಟ್ಟುಸಿರುಗಳು ತೇಲಿಹೋದವೋ ಗೊತ್ತಿಲ್ಲ.

(ಸರಸೋತಕ್ಕ ಎಂಬ ಈ ಪಾತ್ರಧಾರಿ ಮಹಿಳೆ ಸತ್ತದ್ದು ಇತ್ತೀಚೆಗೆ. ತೀರ ಚಿಕ್ಕವಳಿರುವಾಗ ಅವಳನ್ನು ನೋಡಿದ್ದೆ. ಅತಿಯಾದ ಲೈಂಗಿಕ ದಾಹ ಕೂಡ ಒಂದು ಕಾಯಿಲೆ. ಅವಳಿಗೆ ಕಾಯಿಲೆ ಇತ್ತು ಎಂದು ಈ ಸಮಾಜ ಗುರುತಿಸಿ ಅದಕ್ಕೆ ಚಿಕಿತ್ಸೆ ನೀಡಿದ್ದರೆ ಬಹುಶಃ ಅವಳು ಬದುಕುತ್ತಿದ್ದಳಾ? ಅವಳು ಬದುಕುತ್ತಿದ್ದಳು ಎನ್ನುವುದಕ್ಕಿಂತ ಹೆಚ್ಚಾಗಿ ಅವಳ ಮಕ್ಕಳು ಹಾಗೂ ಅನೇಕ ಸಂಸಾರ ನೆಮ್ಮದಿಯಾಗಿರುತ್ತಿದ್ದವಾ? ಎಂಬ ಪ್ರಶ್ನೆ ಗಾಢವಾಗಿ ಕಾಡಿದ್ದಿದೆ.)