ಇಲ್ಲಿ. ನಾವು ಕೆಲವು ದುಡಿಮೆಯ ವರ್ಗವನ್ನು ಹಂಗುಹರಕೊಂಡವರಂತೆ ದುಡಿಸಿಕೊಳ್ಳುತ್ತೇವೆ. ಆ ಕಾರಣಕ್ಕಾಗಿ ಅವರಿಗೆ ಕೂಲಿ ಕೊಡುತ್ತೇವಲ್ಲ ಅಂದುಕೊಳ್ಳಬಹುದು. ನಿಜ, ಕೊಡುತ್ತೇವೆ. ಆದರೆ ಆ ಕಾರಣಕ್ಕಾಗಿ ಅವರ ದೇಹ ನುಗ್ಗಾಗುವುದೆಂಬ ಅಳತೆಯ ಅರಿವಿಲ್ಲ ನಮಗೆ. ಅವರ ಬೆವರಿಗೆ ನಾವು ಕಟ್ಟಿದ ಬೆಲೆ ಸಾಲದು. ಅವರು ಕಳಕೊಂಡ ದೇಹದ ತೂಕದ ಅರಿವಿಲ್ಲ ನಮಗೆ. ಅವರು ನಮಗಾಗಿ ನಿದ್ದೆಯನ್ನೂ ಮಾರುತ್ತಾರೆಂಬ ಅಂದಾಜಿಲ್ಲ ನಮಗೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಶ್ರಮ ಸಂಸ್ಕೃತಿಯನ್ನು ಗೌರವಿಸುವ ಕಲೆ ನಮಗೆ ತಿಳಿಯದು.
ಶೋಭಾ ಹಿರೇಕೈ ಕಂಡ್ರಾಜಿ ಅವರ ಕವನ ಸಂಕಲನ “ಅವ್ವ ಮತ್ತು ಅಬ್ಬಲಿಗೆ” ಪುಸ್ತಕಕ್ಕೆ ವಿಷ್ಣು ನಾಯ್ಕರು ಬರೆದ ಮುನ್ನುಡಿ

 

‘ಅವ್ವ ಮತ್ತು ಅಬ್ಬಲಿಗೆ’ ಎಂಬ ಈ ಕವನ ಸಂಕಲನದಲ್ಲಿ ಒಟ್ಟಿಗೆ ನಲವತ್ತು ಬಿಡಿಗವನಗಳಿವೆ.

ಒಂದೇ ಮಾತಿನಲ್ಲಿ ಈ ಸಂಕಲನದ ಬಗ್ಗೆ ಹೇಳಿ ನೋಡೋಣ ಎಂದು ಯಾರಾದರೂ ನನ್ನೆದೆಗೆ ಗುಂಡಿಟ್ಟಂತೆ ಆದೇಶಿಸಿದಲ್ಲಿ, ನಾನು ಹೇಳಬಹುದಾದ ಮಾತು, ಇದೊಂದು ದೇಸಿ ಚಿಂತನೆಯ ನೆಲಮುಖೀ ಕವನ ಗುಚ್ಚ ಎಂಬುದಾಗಿದೆ.

ಇಲ್ಲಿ ಒಟ್ಟಾರೆಯಾಗಿ ಬಳಕೆಯಾದ ಸರಳವೂ ಸುಂದರವೂ ಆದ ಪದಪ್ರಯೋಗದಿಂದಾಗಿ ಸಂಕೀರ್ಣತೆಯ ಭಾರದಿಂದ ಈ ಸಂಕಲನ ನಲುಗುವುದಿಲ್ಲ. ಆದ್ದರಿಂದ ಪ್ರತಿ ಪದ್ಯವೂ ಅಪ್ಯಾಯಮಾನವಾಗಿಯೇ ಮನಸ್ಸಿಗೆ ತಟ್ಟುತ್ತದೆ. ಸಂಕೀರ್ಣ ಕವನಗಳಲ್ಲಿಯ ಒಳಪ್ರವೇಶ ಕೆಲವರಿಗೆ ತುಸು ಪ್ರಯಾಸದ್ದೆನಿಸುತ್ತದೆ. ಇಲ್ಲಿ ಆ ಸಮಸ್ಯೆ ಇಲ್ಲ ಎಂದೇ ನನ್ನೆಣಿಕೆ.

ಹಾಗಂತ, ಸಂಕೀರ್ಣ ಕವನಗಳಿಗೆ ಬೆಲೆ ಕಡಿಮೆ ಎನ್ನುವಂತೆಯೂ ಇಲ್ಲ; ಅಂಥ ಕವನಗಳನ್ನು ಸಹೃದಯನಾದವನು ಯಶಸ್ವಿಯಾಗಿ ಒಳ ಪ್ರವೇಶ ಮಾಡಿದಾಗ ಉಂಟಾಗುವ ಆನಂದವೇ ಬೇರೆ! ಇರಲಿ.

2. ಮೊದಲಿಗೆ ‘ಅವ್ವ ಮತ್ತು ಅಬ್ಬಲಿಗೆ’ ಕವನವನ್ನೇ ಎತ್ತಿಕೊಳ್ಳೋಣ: ಇಲ್ಲಿ ಅಭಿವ್ಯಕ್ತಿ ಪಡೆಯುವ ಒಂದು ನುಡಿ ಹೀಗೆ ಹೇಳುತ್ತದೆ:

ಇಲ್ಲಿ
ಗೇಣೆರಡು ಅಂತರವಿಟ್ಟು
ಅವ್ವ ನೆಟ್ಟ ಅಬ್ಬಲಿಗೆ ಓಳಿ
ತಿಂಗಳ ಮೊದಲೇ ಮೈನೆರೆಯುತ್ತದೆ.
ಮತ್ತು ಮಿಂದ ಹುಡುಗಿಯರ
ಮುಡಿಯೇರಿ ರಂಗಾಗುತ್ತವೆ.

ಇಲ್ಲಿ ಬಳಕೆಯಾದ ‘ಮೈನೆರೆ’, ‘ಮಿಂದ ಹುಡುಗಿಯರು’ ಎಂಬ ಪದವನ್ನು ಕೂಲಂಕುಷವಾಗಿ ಗಮನಿಸಬೇಕು. ಆಗ ಅವು ಕೇವಲ ಅಬ್ಬಲಿಗೆಯಾಗಿ ಮಾತ್ರ ಉಳಿಯುವುದಿಲ್ಲ. ‘ಕಂಪಿಲ್ಲದ ಆ ಕೆಂಪು ಹೂವಿನ/ ಕತೆ ಕೇಳಿ ನಗರದ ಈ/ ನಾಜೂಕು ಗಿಡಗಳು ಸಹ / ಆ ಮಣ್ಣಿಗಾಗಿಯೇ ಹಂಬಲಿಸುತ್ತವೆ’- ಇದು ಕವಯಿತ್ರಿಯ ಪರಿಕಲ್ಪನೆ.

ಈ ಅಬ್ಬಲಿಗೆಯ ಬೆಳವಣಿಗೆಯ ಮೇಲೆ ಅವ್ವನ ಕಣ್ಣು ನಿಚ್ಚಳವಾಗಿದೆ. ಆದ್ದರಿಂದ ಆಗಾಗ ಚೀಲ ತುಂಬಿ ಕಳಿಸುತ್ತಾಳವ್ವ/ ಅದೇ ಮಣ್ಣ ಘಮಹೊತ್ತ/ ಅಮಟೆ ಪಲ್ಯ, ಏಡಿ ಪಳದಿ ಇತ್ಯಾದಿ.

ಇತ್ತ,
ಹಳ್ಳಿ ಗುಗ್ಗಂತೆ ಅಬ್ಬಲಿಗೆ ಮುಡಿಯುತ್ತೀಯಪ್ಪ!
ಎಂದು ಮೂಗು ಸೊಟ್ಟಾಗಿಸಿ ಹೇಳಿದ/ ಹಳೆ ಗೆಳತಿಯ ನೆನಪಾಗಿ
ಹುಸಿ ಕೋಪದ ಮುದ್ದುಕ್ಕಿ ದಪ್ಪದ ದಂಡೆಯನ್ನು ಇನ್ನೂ
ಹಿಗ್ಗಿಸಿ, ಉದ್ದಾಗಿಸಿ/ ಅರ್ಧ ಎತ್ತಿಡುತ್ತೇನೆ ನಾಳೆಗೆಂದು

ಎನ್ನುತ್ತಾಳೆ ಯಾಕೆಂದರೆ, ಅದು ಅವ್ವ ನೆಟ್ಟು ಬೆಳೆಸಿದ ಅಬ್ಬಲಿಗೆ ದಂಡೆ. ಇಲ್ಲಿಯ ಬಾಲ್ಯ ಯವ್ವನ, ಬದುಕಿನ ಬೆಳವಣಿಗೆ ಕೂಡ ಅರ್ಥಪೂರ್ಣವಾಗಿದೆ. ಹೆಚ್ಚೆಂದರೇನು ಮಾಡಿಯೇನು? ಎಂಬುದು ಅಯ್ಯಪ್ಪನ ಸುತ್ತ ಹೆಣೆದ ಕವನ. ನಿರೂಪಕಿ ಹೇಳುತ್ತಾಳೆ:

ಬಾಲಕನಾಗಿಹೆ ಅಯ್ಯಪ್ಪ ಈ
ಹಾಡು ಕೇಳಿ- ಕೇಳಿ
ಇತ್ತೀಚೆಗೆ ನಿನ್ನ ಹಳೆಯದೊಂದು
ಪಟ ನೋಡಿದ ಮೇಲೆ
ನನ್ನ ಮಗನಿಗೂ ನಿನಗೂ
ಯಾಪ ಪರಕ್ಕೂ ಉಳಿದಿಲ್ಲ ನೋಡು

ನಿರೂಪಕಿ ಅಯ್ಯಪ್ಪನಿಗೆ, “ಎಷ್ಟು ವರುಷ ನಿಂತೇ ಇರುವೆ
ಬಾ ಮಲಗಿಕೋ ಎಂದು/ ಮಡಿಲ ಚೆಲ್ಲಿ /
ನನ್ನ ಮುಟ್ಟಿನ ಕಥೆಯ/ ನಡೆಯುತ್ತಿರುವ
ಒಳ ಯುದ್ಧಗಳ ವ್ಯಥೆಯ ನಿನಗೆ ಹೇಳಿಯೇನು.
ಹುಲಿಹಾಲನುಂಡ ನಿನಗೆ ತಾಯ ಹಾಲ ರುಚಿ ನೋಡಿ/
ಹುಳಿಯಾಗಿದೆಯೇನೋ… ಎನ್ನುತ್ತಲೇ….
ತೇಗಿಸಲು ಬೆನ್ನ ನೀವಿಯೇನು” – ಇವೆಲ್ಲ ಪಂಕ್ತಿಗಳು ಜೀವನಾನುಭವದ ಸಾಲುಗಳಾಗಿ ಕಾಣುತ್ತವೆ- ಓದುಗನಿಗೆ.

ನಿರೂಪಕಿ (ಕವಯತ್ರಿ) ಅಯ್ಯಪ್ಪನೆಂಬ ತನ್ನ ಮಗನೋಪಾದಿ ಹುಡುಗನಿಗೆ ಕೊನೆಯಲ್ಲೊಂದು ಪ್ರಶ್ನೆ ಕೇಳುತ್ತಾಳೆ: ‘ಈಗ ಹೇಳು ನನ್ನ ಮುಟ್ಟು ನಿನಗೆ ಮೈಲಿಗೆಯೇನು?’ ಎಂಬುದು ಆ ಪ್ರಶ್ನೆ. ಆ ಪ್ರಶ್ನೆಗೆ ಮೊದಲು,

ದೃಷ್ಟಿ ತೆಗೆದು ನಟಿಗೆ ಮುರಿದು
ಎದೆಗೊತ್ತಿಕೊಂಡು, ಹಣೆಗೆ ಮುತ್ತಿಕ್ಕಿ,
ಥೇಟ್ ನನ್ನ ಮಗನಂತೆ ಎನ್ನುತ್ತ
ಹದಿನೆಂಟನೆಯ ಕೊನೆಯ ಮೆಟ್ಟಿಲ
ಕೆಳಗಿಳಿದ ಮೇಲೂ
ಮತ್ತೊಮ್ಮೆ ಮಗದೊಮ್ಮೆ ನಿನ್ನ
ತಿರುತಿರುಗಿ ನೋಡಿಯೇನು.

ಎಂಬ ವಿವರಣೆಯಿದೆ. ಈ ಹಂತದಲ್ಲಿ ಕೇಳುವ ಪ್ರಶ್ನೆ “ಈಗ ಹೇಳು ನನ್ನ ಮುಟ್ಟು ನಿನಗೆ ಮೈಲಿಗೆಯೇನು?”

ಕೇರಳ ಮಾತ್ರವೇ ಅಲ್ಲ. ಈ ದೇಶದ ಆಸ್ತಿಕ ವರ್ಗವನ್ನೂ ವೈಚಾರಿಕ ವರ್ಗವನ್ನೂ ಕೆರಳಿಸಿದ ‘ಮುಟ್ಟಿನ ಹೆಣ್ಣಿಗೆ ಅಯ್ಯಪ್ಪನ ದರ್ಶನ ನಿಷಿದ್ಧ’ ಎಂಬ ಮೂಢನಂಬಿಕೆ. ಅದಕ್ಕೆ ಸುಪ್ರೀಂ ಕೋರ್ಟ್ ನೀಡಿದ ಆದೇಶ, ಅದರ ಹಿನ್ನೆಲೆಯಲ್ಲಿ ನಡೆದ (ಕೇರಳದ) ನರ ಹೋಮದ ಈ ಸನ್ನಿವೇಶದಲ್ಲಿ ಹುಟ್ಟಿದ ಈ ಕವನ ಮನೋಜ್ಞವಾಗಿದೆ. ಈ ಸಂಕಲನಕ್ಕೆ ನನಗೇ ಹೆಸರಿಡುವ ಸ್ವಾತಂತ್ರ್ಯ ಸಿಕ್ಕಿದ್ದರೆ, ‘ಮುಟ್ಟು ಮತ್ತು ಅಯ್ಯಪ್ಪ’ ಎಂದೇ ಇಡುತ್ತಿದ್ದೆನೇನೋ!.

‘ತವರು ತಾರಸಿಯಾಗುತ್ತಿದೆ’ ಈ ಸಂಕಲನದ ಇನ್ನೊಂದು ಉತ್ತಮ ಕವನವಾಗಿದೆ.

ತವರೆಂದರೆ ಬರಿ ಹೆಂಚಿನದೊಂದು ಮಾಡೆ?
ಯಾವುದಕ್ಕೂ
ಹಳೆ ಮನೆಯ ಕೋಳಿಳಿಸುವ ಮೊದಲೊಮ್ಮೆ
ಹೋಗಿ ಬರಬೇಕು
ಅಟ್ಟವನ್ನೊಮ್ಮೆ ಏರಿ
ಕೋಳುಗಂಬಕ್ಕೆ ಕಟ್ಟಿದ ನನ್ನ ಸಿರಿತೊಂಡಲಿನ ಮುತ್ತುಮಣಿಗಳನ್ನೆಲ್ಲ
ಒಂದೊಂದೂ ಬಿಡದೆ
ಆರಿಸಿ ತರಬೇಕು

ಸಾರಾಂಶವಿಷ್ಟೆ: ಕಾಲ ಬದಲಾಗಿ, ಹಂಚಿನಮನೆ ತಾರಸಿ ಮನೆಯಾಗುತ್ತಿದೆ. ಅಲ್ಲೊಂದು ಬೈನೆ ಅಟ್ಟ; ಆ ಅಟ್ಟದಲ್ಲಿ ಕಾವ್ಯ ನಿರೂಪಕಿಯ ನೂರು ನೆನಪುಗಳು ತುಂಬಿವೆ. ಅಣ್ಣನಿಗೋ ತಾರಸಿಮನೆ ಅನಿವಾರ್ಯ. ಹಾಗಂತ ಈವರೆಗೆ ಇದ್ದ,
ಅಜ್ಜನ ಕೋಲು ಅಜ್ಜಿಯ ಕುಟ್ಟೊರಳು
ಮಜ್ಜಿಗೆ ಕಡೆಗೋಲು ಬತ್ತದ ಕಣಜಕೆ
ಅಲ್ಯಾವ ಮೂಲೆ
ಬೀಸೋ – ತೀರಿಸೋ ಕಲ್ಲು ಸೇರಿ
ಅವ್ವನ ಈಚಲು ಚಾಪೆಯ
ಒಪ್ಪಿಕೊಂಡಿತೇ ಅಣ್ಣನ ಗ್ರಾನೈಟು ನೆಲ.
ಒಂದು ಕಾಲಕ್ಕೆ ‘ಅವ್ವ ಹಂಚಿನ ಮನೆ’ ಕೋಳು / ಕಂಡಕ್ಷಣ / ಈ ಜನ್ಮಕ್ಕಿಷ್ಟು ಸಾಕು” ಎಂದಿದ್ದ ಹಂಚಿನ ಮನೆಯೀಗ ತಾರಸಿ ಮನೆಯಾಗುವ ಅನಿವಾರ್ಯತೆಯನ್ನು ನುಂಗಿಕೊಳ್ಳುವ ಹಂತದಲ್ಲಿ ಕುಟುಂಬ ಎಂಬ ಕುಟುಂಬ ಸಜ್ಜಾಗಬೇಕಾದ ಸ್ಥಿತಿ, ಆ ಸಂದರ್ಭದ ನಿರೂಪಕಿಯ ಎದೆಯ ತಲ್ಲಣ – ಅದರ ಅನಿವಾರ್ಯತೆಗಳೆಲ್ಲ ಇಲ್ಲಿ ಕಾಣಿಸಿಕೊಂಡಿವೆ.
ಕಡಲು ಪದವೇ ರೋಮಾಂಚನ!
ನೆನೆದಾಗಲೇಳುವ ಒಲವಿನಲೆಗಳಿಗೆ
ತಡೆಗೋಡೆಯುಂಟೆ?

ತುಂಬಾ ಸಾಂಕೇತಿಕವಾದ ಪದ ಸಂಯೋಜನೆಗೆ ಕಾರಣವಾದ ‘ಕಡಲು ಮತ್ತು ನದಿ’ ಕವನದ ಸಾಲುಗಳಿವು.

ಕವಯತ್ರಿ (ನಿರೂಪಕಿ) ಹೇಳುತ್ತಾಳೆ –

ನಾನೋ ಕಾಡೂರವಳು,
ಬ್ಯಾಗು ಹೆಗಲಿಗೇರಿಸಿಕೊಂಡ ದಿನಗಳಿಂದಲೂ
ತುಂಬಿದ ಹಳ್ಳಕೊಳ್ಳ ದಾಟಿ
ಗುಡ್ಡ-ಬೆಟ್ಟ ಹತ್ತಿಳಿದು
ದಡದೀಚೆ ಬಂದವಳು

ಇದೇ ಹೊಳೆಯಲ್ಲಿ ಎರಡು ಹೆಣಗಳ ಹೊತ್ತಿಯ್ದಿದ್ದ
ನದಿಯ ಕಣ್ಣಾರೆ ಕಂಡು
ನಾಲ್ಕು ದಿನದ ಮುನಿಸು ಬಿಟ್ಟರೆ,
ನನಗೂ ನದಿಗೂ ಜನ್ಮ ಜನ್ಮಗಳ ನಂಟು ಈ ಹಿನ್ನೆಲೆಯಲ್ಲಿ ನಿರೂಪಕಿ ಕವಯಿತ್ರಿಗೆ, ತನ್ನೂರ ಹೊಳೆಯೇ ಕಡಲಾಗಿ ಬಿಡಬೇಕೆಂಬ ಆಶೆ. ಅದೇ ವೇಳೆಗೆ ತನ್ನವನ ಮೈಬೆವರು ಇರುವ ಹಾಗೆ, ಈ ಹೊಳೆ ಉಪ್ಪಾಗಲಾರದು ಎಂಬ ವಾಸ್ತವದ ಅರಿವು ಉಂಟು.

ಕವಯಿತ್ರಿ ವಾಂಛೆ ಎಷ್ಟು ಆಳದ್ದೆಂದರೆ, ಕಡಲೂರಿಗೆ (ಕರಾವಳಿಗೆ?) ಹೋಗಿ ಬಂದ ನೆನಪಿಗಾಗಿ,
“ದಂಡೆಯ ಮರಳಿನ ಮೇಲೆ
ಹೊಸತಾವೊಂದು ಹುಡುಕಿ
ನನ್ನ ಹೆಜ್ಜೆಯನ್ನೊಮ್ಮೆ ಊರಿ ಬರಬೇಕು” ಅಂದುಕೊಳ್ಳುತ್ತಾಳೆ.

‘ಮಸುಕಾಗುವ ಸಂಕಟ’ ಇಲ್ಲಿ ಸಾಂಕೇತಿಕ. ಅದನ್ನೆ ಕಾವ್ಯದ ನಿರೂಪಕಿ ಮುಕ್ತವಾಗಿ ಹೇಳುತ್ತಾಳೆ. “ಈಗೀಗ ನನಗೂ ಗೊತ್ತಾಗುತ್ತಿದೆ / ಮಸುಕಾಗುವ ಸಂಕಟವೆಂದು. ಅಭಿಪ್ರಾಯದಲ್ಲಿ ಹೊಂದಾಣಿಕೆಯಾದಾಗ ಯಾವುದನ್ನು ಎತ್ತಿ ಇಡುವುದು. ಯಾವುದನ್ನು ಬಿಡುವುದು? ಇದೆಲ್ಲದಕ್ಕೆ ಮೂಲ ಕಾರಣ:

‘ಪಕ್ಕ ಇಷ್ಟೇ ಇಷ್ಟಿವೆ ನೋಡು’ ಎಂದು
ನಾನುಟ್ಟ ಸೀರೆ ನಿರಿಗೆಯ ಲೆಕ್ಕ
ನೀ ಕೊಟ್ಟ ದಿನವೇ …
ಆ ಸೀರೆ ಪಂಚ ಪ್ರಾಣವಾಯಿತು ನೋಡು
ಉಳಿದವಕ್ಕೂ…’

ಈ ಕವನದಲ್ಲಿ ಒಡೆದ ಮನಸುಗಳ ಅನಾವರಣವನ್ನಷ್ಟೇ ನಾನು ಕಾಣಬಲ್ಲೆ. ‘ಮೀಯುವುದೆಂದರೆ’ – ಗಮನಿಸಬೇಕಾದ ಕವನಗಳಲ್ಲಿ ಒಂದು. ಈ ನಿರೂಪಕಿಯ ದೃಷ್ಟಿಯಲ್ಲಿ,

ಮೀಯುವುದೆಂದರೆ ಬುರುಗು ನೊರೆಯಲ್ಲಿ ನೆಂದು
ಮೈಯುಜ್ಜಿ ಬರುವುದಲ್ಲ ನನಗೆ
ಬದಲು ಹರೆಯವನ್ನೇ…
ಚಂಬುಚಂಬಾಗಿ ಮೊಗೆದು
ಮೈಮನಕ್ಕೆರೆದುಕೊಳ್ಳುವುದು
ಥೇಟ್ ಇವನ ಪ್ರೀತಿಯಂತೆ – ಇದೊಂದು ಸುಂದರ ಪ್ರತಿಮೆ ಮತ್ತು ಉಪಮೆ ಕೂಡ.

ಕೊನೆಯಲ್ಲಿ ಕವಯಿತ್ರಿ ಹೇಳುತ್ತಾಳೆ – ಬಚ್ಚಲೇ ಆಪ್ತ ಮತ್ತೆಲ್ಲವೂ ಗುಪ್ತ ಗುಪ್ತ. ಇಲ್ಲಿಯ ರೂಪಕ ಕೂಡ ಖುಷಿ ಕೊಡುತ್ತದೆ.

‘ನನ್ನ ಕವಿತೆ’ -ಚೆನ್ನಾಗಿದೆ
ನನ್ನೀ ಕವಿತೆ,
ದಿನವಿಡಿ ಬೆವರ ಮಿಂದು
ಸಂಜೆ ಬೆನ್ನ ನೋವಿಗೆಂದು
ಕೊಂಚ ಗುಟುಕೇರಿಸಿ, ಮಾತಿಲ್ಲದೆ
ಜಗುಲಿ ಕಟ್ಟೆಗೊರಗಿ ಬಿಡುವ
ನನ್ನಪ್ಪನಂತೆ ಅಪ್ಪಂದಿರಿಗಾಗಿ.

ಹಾಡು-ಹಸೆ, ಕಸ-ಮುಸುರೆ ಮುಗಿಸಿ
ಹಂಡೆನೀರು ಮಿಂದು ಹಗುರಾಗಿ
ಬಣ್ಣದ ಲೋಕದ
ಗ್ಲಿಸರಿನ್ ಹನಿಗೂ
ಗೋಳೋ ಎಂದು ಅತ್ತೇ ಬಿಡುವ
ನನ್ನವ್ವನಂಥ ಅವ್ವಂದಿರಿಗಾಗಿ

ಎದೆಸಿಗಿದರೂ
ನಾಲ್ಕಕ್ಷರ ಕಾಣದೆ
ಕರಿಕಂಬಳಿ ಎಳೆಯಲ್ಲಿ
ಬದುಕು ಕಟ್ಟುತ್ತಿರುವ
ಅಣ್ಣ ಕರಿಯಣ್ಣನಂಥವರಿಗಾಗಿ….

ಇವರಲ್ಲಿ ದೃಷ್ಟಿಯಲ್ಲಿ ಇವರೆಲ್ಲ ಈ ನೆಲದ ‘ಜೀವಂತ ಕವಿಗಳು’. ಒಟ್ಟಾರೆಯಾಗಿ ಈ ಕವನ ಯಾರನ್ನು ಉದ್ದೇಶಿಸಿ ಬರೆಯಲಾಗಿದೆಯೋ- ಅವರೇ ಕವನದ ವಸ್ತುವೂ ಆಗಿರುವುದು ಕೂಡ ವಿಶೇಷ!. ‘ಋಣದ ಪತ್ರ’ದಲ್ಲಿ ಕವಯಿತ್ರಿಗೆ

‘ಗಾಳಿ-ನೀರು, ಬೆಳಕು ಬದುಕು
ಕೊಟ್ಟ ಭೂಮಿಗೆ
ಋಣದ ಪತ್ರ ಬರೆದು ಇಟ್ಟು
ಮರಳಬೇಕಿದೆ’. ಎಂಬ ಪ್ರಜ್ಞೆ ಋಣಪ್ರಜ್ಞೆಯಾಗಿಯೇ ನಿಲ್ಲುತ್ತದೆ.

ಇದೇ ಪದ್ಯದಲ್ಲಿ , ‘ಹರಿದ ಚಂದ ಕವದಿಯನ್ನು ಹೊಲಿಯಬೇಕಿದೆ’ ಎಂಬ ಮಾತೂ ಕೂಡ ಕರ್ತವ್ಯ ಪ್ರಜ್ಞೆಯನ್ನೇ ಧ್ಯಾನಿಸುತ್ತದೆ. ‘ಒಡಲ ಬಂಧ’ : ಕವನದಲ್ಲಿ ಒಂದಷ್ಟು ಮನಮುಟ್ಟುವ ಸಾಲುಗಳಿವೆ:

ಕುಡಿ ಕನಸು ಚಿಗುರೊಡೆವ
ಹೊತ್ತದೇ ಇರಬೇಕು.
ಮುಟ್ಟಿಗೂ ಕಾಗೆ ಮುಟ್ಟಿಗೂ
ಸಂಬಂಧವಿಲ್ಲವೆಂದರಿತಾಗ
ಮುಖದ ಮೊಡವೆಗಳಲ್ಲೇ
ಮೂಡಿತ್ತು ಕಾಮನಬಿಲ್ಲು.

ಪ್ರತಿ ಮಾಸವೂ ಥೇಟ್
ಹೆರಿಗೆಯದ್ದೇ ನೋವುಂಡರೂ
ಜೀವ ಜಕ್ಕಾಗಲಿಲ್ಲ ಬದಲು
ಕೆಂಪು ಮೈಮನದಿ ಅರಳಿತ್ತು
ಹೆಣ್ತನದ ಹೂವಾಗಿ.

ಹಳೆಯ ಹೆಂಗಸರು ಮಕ್ಕಳು ಕೇಳಿದಾಗ (ಮುಟ್ಟಾಗಿ ದೂರ ಕುಳಿತಾಗ) ಕಾಗೆ ಮುಟ್ಟಿತು ಎಂದು ಕೊಡುವ ಕಾರಣ ಇಲ್ಲಿ ‘ವಾಸ್ತವ’ ವಾಗಿ ‘ರೂಪಕ’ ವಾಗಿ ಧ್ವನಿ ಪಡೆದಿದೆ.

‘ಸುಮ್ಮನಿರುವೆ ಏಕೆ ಹೇಳು?’: – ಈ ಕವಿತೆ ಈ ಪ್ರಶ್ನೆ ಅನೇಕ ಸಂಭಾವ್ಯ ಉತ್ತರಗಳನ್ನು ಹೆರಬಲ್ಲದು. ಅದು, ಅತಿಯಾದ ನಿರ್ಬಂಧದ ಬಿಗುಮಾನವಾಗಿರಲು ಸಾಧ್ಯ. ಅದು, ವಧುವಿಗೆ ಮದುವೆ ಗೊತ್ತಾದ ಸಂದರ್ಭ ಇರಬಹುದು. ಅದು, ಮುಟ್ಟಿನ ಒಳನೋವಿನ ಸಂದರ್ಭವೂ ಆಗಿರಬಹುದು. ಅದು ಅಂತರಂಗದ ಬೇರಾವುದೊ ತುಮುಲವೂ ಇರಬಹುದು. ಅದು, ಹೇಳಲಾಗದ – ಹೇಳಬಾರದ ನಿಗೂಢ ಸನ್ನಿವೇಶವೇ ಇರಬಹುದು.

ಈ ದೇಶದ ಆಸ್ತಿಕ ವರ್ಗವನ್ನೂ ವೈಚಾರಿಕ ವರ್ಗವನ್ನೂ ಕೆರಳಿಸಿದ ‘ಮುಟ್ಟಿನ ಹೆಣ್ಣಿಗೆ ಅಯ್ಯಪ್ಪನ ದರ್ಶನ ನಿಷಿದ್ಧ’ ಎಂಬ ಮೂಢನಂಬಿಕೆ. ಅದಕ್ಕೆ ಸುಪ್ರೀಂ ಕೋರ್ಟ್ ನೀಡಿದ ಆದೇಶ, ಅದರ ಹಿನ್ನೆಲೆಯಲ್ಲಿ ನಡೆದ (ಕೇರಳದ) ನರ ಹೋಮದ ಈ ಸನ್ನಿವೇಶದಲ್ಲಿ ಹುಟ್ಟಿದ ಈ ಕವನ ಮನೋಜ್ಞವಾಗಿದೆ.

ಕೊನೆಗೂ ಕರುಣಾಳು ಕವಯಿತ್ರಿ ಮೌನಮುರಿದೊಮ್ಮೆ ‘ಮಾತಾಡೆ ಮುಗುದೆ’ ಎನ್ನುತ್ತಾಳೆ. ಅಧ್ಯಯನ ಯೋಗ್ಯವಿದು.
‘ಕಲ್ಲಾದವಳಿಗೆ’ ಕವನ ತಟ್ಟನೆ ನೆನಪಿಗೆ ತರುವುದು ಅಹಲ್ಯೆಯನ್ನು. ಇದರ ಮೊದಲ ನುಡಿಯೇ ಅದನ್ನು ಸಾರುತ್ತದೆ. ಮೋಸ ಮಾಡಿದವನೊಬ್ಬ, ಶಾಪ ಕೊಟ್ಟವನೊಬ್ಬ. ಪರಿಹಾರಕ್ಕೆಂದು ಕಾಯಬೇಕಾದದ್ದು ಇನ್ನೊಬ್ಬನಿಗಾಗಿ. ಇದು ಸಹನೆಯ ಕಟ್ಟೆ ಒಡೆದಾಗ ಇದಿರು ನಿಲ್ಲುವ ಅಸಹನೆ. ಕೊನೆಯ ಮಾರ್ಮಿಕ ಪ್ರಶ್ನೆ ನೋಡಿ: ಮತ್ತೆ ಅದೇ ಪಾದದ ಅದೇ ಧೂಳಿಗೆ ಕಾದೆಯಲ್ಲವೇ?

ನನ್ನದೊಂದು ಕವನವಿದೆ: ಅದು ನನ್ನ ನಾಲ್ಕನೆಯ ಸಂಕಲನ ‘ಹೊಸಬತ್ತ’ದಲ್ಲಿ ಬಂದಿದೆ:

ನೆಲತಾಯಿ ನಿಲುಮೆಯೇ ನನ್ನದಾಗಲೀ ಎನುವೆ
ನೆಲಮುಗಿಲೆ ಮಾದರಿಯು ಈ ಲೋಕಕೆ
ನನ್ನ ನೆರೆಮನೆಯಲ್ಲಿ ಹಸಿದವರು ಇರುವಾಗ
ಉಣಲಾರೆ ಎಂಬುದೇ ಎದೆಯ ಬಯಕೆ!

ಈ ನಿರೂಪಕಿ ಬರೆದ ಕವನದ ಒಳಗಡೆಯೂ ಅದೇ ಭಾವ- ಅದೇ ಜೀವ ಮಿಡಿದಿದೆ. ಹಸಿದವರಿಗೆ ಹಂಚೋಣ ಒಂದು ತುತ್ತು: ಅನ್ನಕ್ಕಿಂತಲೂ ಹೆಚ್ಚೆ ಎಣ್ಣೆ ದೀಪ? ರೈತನನ್ನು ‘ಇಲ್ಲಿ ಕೃಷಿಋಷಿ’ ಎಂದು ಕರೆದಿರುವುದು ಅಪೂರ್ವ ಕಲ್ಪನೆಯಾಗಿದೆ. ಅವನ ಬವಣೆಗೆ ಒದಗದೆ ಲಕ್ಷದೀಪ ಉರಿಸಿದರೇನು ಬಂತು. -ಹೀಗೆ ….

‘ಬರಗಾಲದ ದೀಪಾವಳಿ?’
ಅದನ್ನೂ ಆಚರಿಸಬಾರದೇಕೆ?

‘ಪಂಜರದ ಪಕ್ಷಿ’ ನನ್ನ ಕರುಳು ಮಿಡಿದ ಕವನವಾಗಿದೆ. ಕವಿತೆ ಬೇಡುತ್ತದೆ:

ಬಿಟ್ಟು ಬಿಡು ನನ್ನೊಲವೆ
ಬಂಧಿಸದೆ ನನ್ನನ್ನು
ಹಾರಾಡಿ ಬರುವೆ ನಾ ಗಗನ ತುಂಬಾ

ರೆಕ್ಕೆಪುಕ್ಕದ ಒಳಗೆ
ಹೊಸಕನಸ ನಾ ಹೊತ್ತು
ಮುಟ್ಟಿ ಬರುವೆನು ಆ ಚಂದ್ರಬಿಂಬ.

ನಿಬಿಡ ಸರಳುಗಳ ಬಂಧಿಯಾದ ಜೀವ ಚಂದ್ರನ ಮುಟ್ಟುವ ತವಕದಿಂದ ಸಣ್ಣದೊಂದೇ ಸರಳ ಸರಿಸಲು ಕೇಳುತ್ತಾಳೆ. ಯಾಕೆ ಈ ನಿರ್ಬಂಧ. ಯಾಕೆ ಪಂಜರ ಪಕ್ಷಿಯಾಗಿಬೇಕು. ಎಲ್ಲರೂ ಈ ಗೋಳನ್ನು ಅನುಭವಿಸುತ್ತಾರೆಂದಲ್ಲ: ಕೆಲವೆಡೆ ಮಾತ್ರ ಕಟ್ಟುಪಾಡುಗಳಿವೆ. ಪಂಜರ ಪಕ್ಷಿ ಕವಿತೆ ಅದನ್ನು ಪ್ರಶ್ನಿಸುತ್ತದೆ-ಮಾರ್ಮಿಕವಾಗಿ. ತೌರಿನ ನೆನಪೂ ಇಲ್ಲಿ ಸಾಕಷ್ಟು ಕಾಡುತ್ತದೆ.

ಯುದ್ಧ-ಬದ್ಧ: ಹೆರವರ ಮಕ್ಕಳನ್ನು ಬಲಿಕೊಡುವ ಪೀಠಕ್ಕೆ ಸಿದ್ಧಗೊಳಿಸುವುದೇ ಯುದ್ಧ ಎನ್ನುತ್ತದೆ ಈ ಕವನ. ತಮ್ಮ ಖುರ್ಚಿಯ ಕಾಲುಗಳನ್ನು ಗಟ್ಟಿಮಾಡಿಕೊಳ್ಳಲೆಂದೂ ಕೆಲವರು ಯುದ್ಧ ಸಾರುತ್ತಾರೆ. ‘ಯುದ್ಧ ಮಾನವ ಲೋಕದ ಆರದ ಗಾಯ’ ಎಂದು ಭಕ್ತ ಕನಕನ ಬಾಯಿಂದ ಹೇಳಿಸಿದ್ದಿದೆ- ನಮ್ಮ ಹಿರಿಯ ವಿಮರ್ಶಕ ಕೀ.ರಂ. ನಾಗರಾಜ. ಯುದ್ಧದಲ್ಲಿ ಎರಡೂ ಕಡೆ ಸಾವು ನೋವುಗಳಾಗುತ್ತವೆ. ಎರಡೂ ಕಡೆ ಅನಾಥ ಮಕ್ಕಳು-ತಾಯ್ತಂದೆಯರು. ಆದ್ದರಿಂದ ಬುದ್ಧನ ಆಗಮನಕ್ಕಾಗಿ ಕವಯಿತ್ರಿ ಕಾತರಿಸುತ್ತಾರೆ.

ಬಂಜೆಯಾಯಿತೆ ಭೂಮಿ: ಹೆಣ್ಣೆಗೂ ಬಂಜೆತನದ ಭಯಪ್ರಜ್ಞೆಗೂ ರಾಶಿರಾಶಿ ಸಾಲಾವಳಿ, ಒಂದೆರಡು ಸೊಗಸಾದ ಅರ್ಥಪೂರ್ಣ ನುಡಿಗಳು ಈ ಕವನದ ಮಧ್ಯ ಹರಿದಾಡಿವೆ.

ಉಕ್ಕಿಹರಿಸದೇ ನಿನ್ನೊಡಲ
ಕಡಲನ್ನು
ಬರೆದ ಹಳೆಯ ದೋಣಿ
ಯದೆಲ್ಲಿ ಬಿಡಲೇ?
ಬಸಿರ ಕಟ್ಟದೆ ನೀನು
ಹಸಿರು ಹುಟ್ಟಿತು ಹೇಗೆ?
ಉಸಿರ ನೀಡದ ನಿನ್ನೀ
ಪರಿಯು ಸರಿಯೇ? ಮಿದು ಮಣ್ಣಿಗೂ ಇಂಥ
ಕಾಠಿಣ್ಯವೇ?…

‘ಬದಿಗಿಟ್ಟ ಬಟ್ಟೆ’ : ಕೆಲವರ ಬಾಳಿನಲ್ಲಿ ಅವರಿಗೆ ಸಲ್ಲುವುದು ಬದಿಗಿಟ್ಟ ಮುಟ್ಟಿನ ಬಟ್ಟೆಯ ಸ್ಥಿತಿ. ಒಮ್ಮೆ ಒಣ ಹಾಕಿ ಪಟ ಪಟ ಹಾರಿಬಿಟ್ಟರೆ ಮತ್ತು ಒಂದು ತಿಂಗಳ ಮಟ್ಟಿಗೆ ಅದು ‘ಸಂದಿಯೊಳಗಿನ ಬಂಧಿ’!

ಅವನ ಭಾವನೆಗೂ ಇವಳ ಒಳತುಮುಲಕ್ಕೂ ಅಜಗಜಾಂತರ. ಬಯಲ ಗಾಳಿಯಲೊಮ್ಮೆ ಉಸಿರಾಡಬೇಕೆನ್ನುವ ಅವಳ ಕನಸುಗಳಿಗೆ ಕರ್ಪೂ-ಅಘೋರ ಕರ್ಪೂ! ಉಂಡುತಿಂದು ಸದ್ದಿಲ್ಲದೆ ಎದ್ದು ಹೋಗುವ ಅವನೊಬ್ಬ ‘ತಿಂಗಳ ಪ್ರವಾದಿ ಯಾದರೆ ಇವಳ ಖೈದಿ.

‘ಉಯಿಲೊಂದ ಬರೆಯುವೆ’: ಕವಯಿತ್ರಿ ಇಲ್ಲಿ ಉಯಿಲೊಂದು ಬರೆದಿಡಲು ನಿರ್ಧರಿಸಿದ್ದಾರೆ. ಯಾಕೆಂದರೆ ಧರ್ಮ-ಧರ್ಮ ಎಂದೊದರುವವರ ಮಧ್ಯೆ ಅವಳಿಗೆ ಮರೆತೇ ಹೋಗಿದೆ ಅವಳ ಜಾತಿ, ಧರ್ಮ, ಅವಳೂರ ಕೃಷಿ ಕೂಲಿಗಳೂ ಕೂಡ ಇದಾವುದರ ಅರಿವೂ ಇಲ್ಲದೆ ಎರಡು ಹನಿಗಳಿಗಾಗಿ ಮೋಡಗಳಾಚೆ ದಿಟ್ಟಿ ನೆಟ್ಟಿದ್ದಾರೆ. ಆ ಧರ್ಮ-ಈ ಧರ್ಮ ಇವೆಲ್ಲ ಹೊಟ್ಟೆತುಂಬಿದವರ ಚಿಂತೆ.
ಕವಯಿತ್ರಿ ಹೇಳುತ್ತಾರೆ :

ಹೀಗೇ ನಡೆದರೆ ಈ ಧರ್ಮಗಳ ಮೆರವಣಿಗೆ
ಮುಂದೊಂದು ದಿನ
ರಕ್ತದ ಸೀಸೆಗಳ ಮೇಲೆಲ್ಲ
ಧರ್ಮದ ಛಾಪು ಅಚ್ಚಾಗಬಹುದು
ಇದು ಈ ಧರ್ಮದವರಿಗೇ ಸೇಲಾಗಬೇಕೆಂದು.

ಆದ್ದರಿಂದ ಈ ಹೆಣ್ಣಿಗೆ ಆಶೆ- ‘ಎಲ್ಲಾ ಧರ್ಮಗಳ ಬಾಟಲಿಗಳ ಮೇಲೆ/ ಕಾಲಕಾಲಗಳಾಚೆಯಾದರೂ ಪ್ರೇಮಧರ್ಮವೊಂದು ಹುಟ್ಟಿಬಿಡಲಿ ಎಂದು ತನ್ನ ರಕ್ತದಿಂದ ಉಯಿಲೊಂದ ಬರೆಯುವ ಆಶೆಯವಳಿಗೆ.

‘ಯಶೋಧರೆಯ ಸ್ವಗತ’ : ಅವಳದೊಂದು ಮಾರ್ಮಿಕ ಪ್ರಶ್ನೆಯಿದೆ:

ಮಗನೀಗ ಮಾತು ಕಲಿತು
ಕತೆ ಕೇಳುತ್ತಿದ್ದಾನೆ
ಯಾರ ಕತೆ ಹೇಳಲಿ
ರಾತ್ರೋ ರಾತ್ರಿ ಎದ್ದುಹೋದ ನಿನ್ನದೋ?
ನಿದ್ದೆಯಿರದ ನನ್ನದೋ?

ಬದುಕ ಸಿಹಿಯ ಕಡಲಿನಲ್ಲಿ
ಈಜಾಡಿಸಿ ದಡ ಸೇರುವುದರೊಳಗೆ
ಹೊರಟು ಹೋದೆಯಲ್ಲಾ?
ಹೊದೆದ ಹೊದಿಕೆಯನ್ನೂ ಅಲುಗಾಡಿಸದಂತೆ.

ನಿರೂಪಕಿ ಕವಿ ಈ ಪಠ್ಯದ ಜೊತೆಗೆ ವರ್ಷದಾಚೆ ಹೊರಬಂದ ಡಾ. ಎಚ್.ಎಸ್. ಅನುಪಮಾರವರ ಹೊಸತೇ ಆದ-ಬುದ್ಧನ ಕುರಿತ ನಾಟಕವೊಂದನ್ನು ಓದಲು ನಾನು ಸಲಹೆ ಕೊಡುತ್ತಿದ್ದೇನೆ. ಅಲ್ಲಿ ಸಿಗುವ ಬುದ್ಧ, ಯಶೋಧರಾ ಮುಂತಾದವರು ಹೊಸ ಹೊಳಪಿನಿಂದ ಕಂಗೊಳಿಸುತ್ತಾರೆ.

‘ನಿನ್ನ ಬರುವಿಗೆ ಕಾದು’ : ಕನಸುಗಳು ಬಣ್ಣ ಹಚ್ಚಿಕೊಳ್ಳುವುದೊಂದು ಅಪೂರ್ವ ಕಲ್ಪನೆ. ಆದರೆ ನಿರೂಪಕಿ ಹೇಳುತ್ತಾಳೆ ನೀ ಬರುವುದು ಖಾತ್ರಿಯಾದೊಡನೆ ಕನಸುಗಳೂ ಬಣ್ಣ ಹಚ್ಚಿಕೊಳ್ಳುವಂತೆ.

ಗುಲಾಬಿ ಗಿಡದ ಚಿಗುರುಗಳು
ಮಾತಾಡಿಕೊಳ್ಳುತ್ತವೆ.
ನೀ ಬಂದ ದಿನವೇ…
ಮೊಗ್ಗೊಡೆದು ಅರಳುವುದೆಂದು,
ಇದೊಂದು ಸುಂದರ ಕವನ-ಮಳೆಬಿಲ್ಲನ್ನೂ ಕರೆಯುವ ಇನ್ನೂ ಖುಷಿಕೊಡುವ ಕವನ.

‘ನಾವು ಮತ್ತು ಅವರು’: ಇಲ್ಲಿ ಅಭಿವ್ಯಕ್ತಿಗೊಂಡ ವಸ್ತುವಿಗೆ ವಿಶೇಷ ಬೆಲೆಯಿದೆ. ಇಂಡಿಯಾದಲ್ಲಿ. ನಾವು ಕೆಲವು ದುಡಿಮೆಯ ವರ್ಗವನ್ನು ಹಂಗುಹರಕೊಂಡವರಂತೆ ದುಡಿಸಿಕೊಳ್ಳುತ್ತೇವೆ. ಆ ಕಾರಣಕ್ಕಾಗಿ ಅವರಿಗೆ ಕೂಲಿ ಕೊಡುತ್ತೇವಲ್ಲ ಅಂದುಕೊಳ್ಳಬಹುದು. ನಿಜ, ಕೊಡುತ್ತೇವೆ. ಆದರೆ ಆ ಕಾರಣಕ್ಕಾಗಿ ಅವರ ದೇಹ ನುಗ್ಗಾಗುವುದೆಂಬ ಅಳತೆಯ ಅರಿವಿಲ್ಲ ನಮಗೆ. ಅವರ ಬೆವರಿಗೆ ನಾವು ಕಟ್ಟಿದ ಬೆಲೆ ಸಾಲದು. ಅವರು ಕಳಕೊಂಡ ದೇಹದ ತೂಕದ ಅರಿವಿಲ್ಲ ನಮಗೆ. ಅವರು ನಮಗಾಗಿ ನಿದ್ದೆಯನ್ನೂ ಮಾರುತ್ತಾರೆಂಬ ಅಂದಾಜಿಲ್ಲ ನಮಗೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಶ್ರಮ ಸಂಸ್ಕೃತಿಯನ್ನು ಗೌರವಿಸುವ ಕಲೆ ನಮಗೆ ತಿಳಿಯದು.

‘ಋಣಮುಕ್ತೆ’: ಇಡೀ ವ್ಯವಸ್ಥೆ ಅಂದರೆ ನೆಲದ ಮಕ್ಕಳು ಹಸಿದೊಡಲ ಶಿಶುವಾಗುವ ಬೆರಗನ್ನು ಕಟ್ಟಿಕೊಡುವ ಕವನವಿದು.

ಕಡಲಿನೊಲವಲಿ ನೀನು
ತಾಯಾದೆ ಕಾಣವ್ವ
ಬಯಲು ಗಾಳಿಯನ್ನೊಮ್ಮೆ
ಕರೆದು ಕೇಳು.
ಎಲ್ಲ ಮರೆತಿಂದೇಕೆ
ಮುನಿಸು ನಮ್ಮಲಿ ತಾಯಿ
ಕಾಣದೇನು ನನ್ನೀ ಮಗುವ ಪಾಡು- ಇಲ್ಲಿ ಮೂಡಿಬಂದ ಕೊನೆಯ ನುಡಿಯ ಅರ್ಥ ಗ್ರಹಿಸಬೇಕು.

ಪಡೆದುದೆಲ್ಲವ ಮತ್ತೆ
ಮರಳಿ ಮಣ್ಣಿಗೆ ನೀಡೋ
ಋಣಮುಕ್ತೆ ನೀನವ್ವ
ಮಳೆಯಾಗಿಸು.

ನೆಲಮಹಿಮೆಯನ್ನು ಕೊಂಡಾಡುತ್ತಲೇ ಬೇಡುವ ಶಿಶುಗಳಾಗಿರುವ (ಅಂಗಲಾಚುವ) ಇಲ್ಲಿಯ ಪರಿ ಅನನ್ಯವಾಗಿದೆ.

‘ನಲವತ್ತರಂಚಿನ ಸ್ವಗತ’: ನಲವತ್ತಕ್ಕೆ ಕಣ್ಣಿಗೆ ಕನ್ನಡಕ ಬರುತ್ತದೆ. ಫ್ಯಾಶನ್ನಿಗಾಗಿ ಅಲ್ಲ. ಅನಿವಾರ್ಯವಾಗಿ. ನಲವತ್ತಾದೊಡನೆ ಮೈಗೆ ಬೊಜ್ಜು ಬರುತ್ತದೆ. ಮುಖದಲ್ಲಿ ನೆರಿಗೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ನಿರೂಪಕಿ ಕವಿ ಒಂದು ಪರಿಹಾರ ಸೂತ್ರ ಸೂಚಿಸುತ್ತಾಳೆ. ‘ಒಂದು ಹೊಸ ಕೀಲಿ ತಂದು ಯಾರಾದರೂ ಜಡಿದು ಬಿಡಲಿ- ಈ ಕಾಲವೆಂಬ ಕೊಲೆಗಾರ ಮಿಣುಕಾಡದಂತೆ!’ ಎಂದು.

ಕಾರು-ಗೀರು: ನನ್ನದೊಂದು ಅಂಕಣ ಬರಹ ಇತ್ತು. ಅದು ‘ಸಕಾಲಿಕ’ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ‘ಬಿದ್ದು ಬಂದ ಪರಿಮಳ’ ಎಂಬ ಹೆಸರಿನಲ್ಲಿ 2004 ರಲ್ಲಿ ಬರೆದಿದ್ದೆ. ಹಿರಿಯ ಸಾಹಿತಿ ಯಶವಂತ ಚಿತ್ತಾಲರು ಆ ಪುಟ್ಟ ಲೇಖನ ಓದಿ, ‘ನಿರ್ಜೀವ ವಸ್ತುವಿಗೆ ಜೀವ ತುಂಬಿದ ಲೇಖನ’ ಎಂದು ಪ್ರತಿಕ್ರಿಯಿಸಿದ್ದರು.

ಈ ಕವನ ಸಂಕಲನದಲ್ಲಿ ಮೂಡಿಬಂದ ‘ಕಾರು-ಗೀರು’ ಎಂಬ ಪದ್ಯ ನನ್ನ ‘ಪರಿಮಳ’ವನ್ನು ನೆನಪಿಸಿತು. ಇಲ್ಲಿ ಬರುವ ಪ್ರತಿಯೊಂದು ಸಾಲುಗಳೂ ಜೀವಂತವಾಗಿವೆ.

‘ಗೋವಿನ ಹಾಡು’: ಒಂದು ಕಥನ ಕವನ. ಗೋವಿನ ಕೆಚ್ಚಲು ತುಂಬಿದಾಗ ನಮಗಿರುವ ಪ್ರೀತಿ-ಮಮತೆ ಆನಂತರ ಇರುವುದಿಲ್ಲ. ಮನುಷ್ಯ ಗೋವನ್ನು ತನ್ನ ಇಷ್ಟಕ್ಕೆ ತಕ್ಕಂತೆ ಬಳಸಿಕೊಂಡಿದ್ದಾನೆಂಬುದನ್ನು ಸರಿಯಾಗಿಯೇ ಇಲ್ಲಿ ಗುರುತಿಸಲಾಗಿದೆ.

“ಜೀವದೊಳು ಕಸುವಿಲ್ಲ
ಎದೆಯೊಳಗೆ ಹಾಲಿಲ್ಲ
ದೇಹದೊಳಗೀಗ ಬರೀ ಮಾಂಸಮೂಳೆ”

ಇದು ಆಕಳ ಕೊರಗು. ಆ ಕೊರಗು ಮನುಷ್ಯನ ಸಾಂತ್ವನ ಬಯಸುತ್ತದೆ. ಆದರೆ ಸಿಕ್ಕಿಲ್ಲ.

‘ಹೆತ್ತವ್ವ ಗೊಂದೋಲೆ’ : ಇಡೀ ಕವನ ಕೆ.ಎಸ್.ನರಸಿಂಹಸ್ವಾಮಿಯವರ ಹಾಡಿನ ಧಾಟಿಯಲ್ಲಿ ಸಾಗುತ್ತದೆ. ಹಾಗಂತ ಅವರ ವಸ್ತುವಿನ ಅನುಕರಣೆ ಇಲ್ಲಿಲ್ಲ.
‘ದೇವನಳಲು’: “ಕಟ್ಟಿದಿರಿ ನನಗೆ ಗುಡಿಯ
ನಿಮ್ಮ ಮನೆಯ ದೈವ ಬಿಟ್ಟು”

(ವಿಷ್ಣು ನಾಯ್ಕ)

“ತುಂಬಿದಿರಿ ಹುಂಡಿಯನ್ನು
ಕಂತೆ ಕಂತೆ ಕಟ್ಟನಿಟ್ಟು-
ನಾನೇನು ಬಡವನೇ?
ನಿಮ್ಮಲ್ಲಿ ಬೇಡುವಷ್ಟು”

ಇವೆಲ್ಲ ಮತ್ತು ಮುಂದೆ ಬರುವ ನುಡಿಗಳೆಲ್ಲ, ದಿನಕರ ದೇಸಾಯರ ‘ದೇವಗಿಂತ ದೀನ ಬಡವ’ ಎಂಬ ಕವನದ ಆಶಯವನ್ನು ನೆನಪಿಸುತ್ತವೆ.

3. ಇಲ್ಲಿಯ 40 ಕವನಗಳಲ್ಲಿ ಸುಮಾರು ಅರ್ಧದಷ್ಟಕ್ಕೆ ನಾನು ಕಂಡುಕೊಂಡ ಅರ್ಥ ಇಟ್ಟುಕೊಂಡು ವಿವರಿಸಿದ್ದೇನೆ. ‘ಮುನ್ನುಡಿ’ ಬೆಳೆಯುತ್ತಿರುವ ಪ್ರಮಾಣ ನೋಡಿ ನಾನೇ ಹೌಹಾರಿ ಉಳಿದ ಕೆಲವು ಪದ್ಯಗಳನ್ನು ಬಿಟ್ಟಿದ್ದೇನೆ. ಇಲ್ಲಿಯ ಕವನಗಳಲ್ಲಿ ಭಾವ ನಿರ್ಭರತೆ ಇದೆ. ಇಲ್ಲಿ ಬಹಳಷ್ಟು ಕವನಗಳು ಮನಸ್ಸನ್ನುಥ ಬರಸೆಳೆದುಕೊಳ್ಳುತ್ತವೆ. ಕೆಲವು ಪದ್ಯಗಳಂತೂ ಅಪರೂಪದ್ದೆನಿಸುತ್ತವೆ. ಇನ್ನು ಕೆಲವು ತೀರಾ ಸರಳ ಜಾತಿಗೆ ಸೇರಿದವುಗಳಾಗಿವೆ.

ಒಟ್ಟಿನಲ್ಲಿ ಇದೊಂದು ಯಶಸ್ವಿ ಕವನ ಸಂಕಲನ. ನಾನು ಮಾತನಾಡದೆ ಬಿಟ್ಟ ಕವನಗಳಲ್ಲೂ ಕೆಲವು ಉತ್ತಮ ತಳಿಯವಾಗಿವೆ. ಮೂರ್ನಾಲ್ಕು (ಹೆಸರು ಹೇಳುವುದಿಲ್ಲ) ಸಾಮಾನ್ಯ ಕವನಗಳಾಗಿ ನನಗೆ ಕಂಡಿವೆ.

ಈ ಸಂಕಲನವನ್ನು ದಿಟ್ಟತನದಲ್ಲಿ ನನ್ನ ಪೂರ್ವಾನುಮತಿಯಿಲ್ಲದೆ ಕಳಿಸಿ ನನ್ನಿಂದ ಇದಕ್ಕೆ ‘ಮುನ್ನುಡಿ’ ಲೇಖನ ಪಡೆದ ಶ್ರೀಮತಿ ಶೋಭ ನಾಯ್ಕರಿಗೆ ಅಭಿನಂದನೆಗಳು. ‘ಮುನ್ನುಡಿ’ ಯೆಂದರೆ ಕೇವಲ ಹೊಗಳಿಕೆಯ ಮಾತಲ್ಲ; ಅದೂ ಒಂದು ವಿಮರ್ಶೆಯಾಗಿರಬೇಕೆಂಬುದು ನನ್ನ ಹಂಬಲ. ಆ ದೃಷ್ಟಿಯಲ್ಲಿ ಮುಟ್ಟದೆ ಬಿಟ್ಟ ಕೆಲವು ಕವನಗಳ ಕ್ಷಮೆ ಕೋರಿ ವಿರಮಿಸುವೆ..