ಟಾರುರಸ್ತೆಯ ಆಳ

ಪಕ್ಷಿಯೊಂದು ಬೆದರಿ ಕಾರಿಕೊಂಡ ರಕ್ತದಲ್ಲಿ
ಈಗಷ್ಟೇ ತೊಳೆದಿಟ್ಟಂತೆ ಹಸಿಯಾಗಿದೆ
ಈ ಟಾರು ರಸ್ತೆ
ಕಾರಿನ ನ್ಯಾವಿಗೆಟರ್ ಅದನ್ನೆಲ್ಲ ತೋರಿಸುವುದಿಲ್ಲ
ತಲುಪುವ ದೂರವಷ್ಟೇ ಕಾಣುವುದು

ನಡು ಹಗಲಲ್ಲಿ
ಸುಡು ಬಿಸಿಲಲ್ಲಿ
ನಡೆದಾಡಬಹುದು ಬರಿಗಾಲಲ್ಲಿ
ಸದಾ ಉರುಳುವ ಚಕ್ರಗಳು ರಸ್ತೆಯನ್ನು
ತಣ್ಣಗಿರಿಸುತ್ತವೆ

ಕಡಿದ ಮರದ ಬೇರಿನ ಚೂರುಗಳು
ಇನ್ನೂ ಇವೆ ಆಳದಲ್ಲಿ
ಅವುಗಳ ಆತ್ಮಗಳಿಗೆ ಶಕ್ತಿಯಿಲ್ಲ
ಆಕಾಶ ಕಾಣುವ ಯೋಗವಿಲ್ಲ

ಹಟಹಿಡಿದಂತೆ ಹುಲ್ಲು ಅಲ್ಲಲ್ಲಿ
ಬೆಳೆದು ನಿಲ್ಲುತ್ತದೆ
ಇಲ್ಲಿ ಯಾರಿಗೂ ಹಸಿರಿನ ಮೋಹವಿಲ್ಲ
ಹಸಿವಿನ ಮೇಲೆ ಪ್ರೀತಿಯಿಲ್ಲ

ಈ ಚೌಕಿಗಳಲ್ಲಿ ನಡೆಯುವ ಅಪಘಾತಗಳಲ್ಲಿ
ಘಟಿಸುವ ಇತಿಹಾಸ
ಕಣ್ಣೀರನ್ನು ಪುರಣವಾಗಿಸುತ್ತದೆ
ಇಲ್ಲಿ ಯಾರಿಗೂ ಕಥೆ ಕೇಳುವ ಹಂಬಲವಿಲ್ಲ
ಆಲಿಸಲು ಕಿವಿಯಲ್ಲಿ ಬಲವೂ ಇಲ್ಲ

ಯಾರೂ ನಿಲ್ಲದ ಹಾದಿಯಡಿಯ
ಮಣ್ಣು ಸಂಕಟವನ್ನು ಬಿಗಿದುಕೊಂಡಿದೆ
ಚಲನೆಯ ಸದ್ದನ್ನು ಆಲಿಸುತ್ತ.

ಸುಳುಹುಗಳಿಲ್ಲದ ಕೂಪದಲ್ಲಿ

ಭಾರ ಹಗುರಗಳ ಅನುಪಾತವನ್ನು
ತೂಗಲಾಗದೇ ಅಂತರಾಟಿಕೆಯಲ್ಲಿ
ತೂರಾಡುತ್ತಿದ್ದೇನೆ.

ನೀನು ಒಳ್ಳೆಯವನೋ ಕೆಟ್ಟವನೋ
ಎಂಬುದನ್ನು ಯಾರೂ ಹೇಳುವುದಿಲ್ಲ
ನೀನು ಯಾರೆಂಬುದನ್ನು
ತಿಳಿಯುವ ಕುತೂಹಲ
ನನಗೆ ಮಾತ್ರ ಇದೆ,
ಜನರಿಗೆಲ್ಲ ನೀನು ಯಾರೂ ಅಲ್ಲ.

ಗಾಳಿ ಹೊತ್ತುತರುವ ಸುದ್ದಿಗಳು
ಸುಳ್ಳೆನಿಸದೆ, ಸತ್ಯವೆನ್ನಿಸದೇ ದಿಗಿಲಾಗಿ
ಬೆಳಕಿಲ್ಲದ ರಾತ್ರಿಗಳ
ನಿದ್ದೆಗೆಡಿಸುತ್ತವೆ.

ಕನಸುಗಳ ಬಾಗಿಲನ್ನು ಮುಟ್ಟಿ
ಕೈಯನ್ನು ಹಿಂದೆಳೆದುಕೊಳ್ಳುವಾಗೆಲ್ಲ
ನೀ ಬಂದು ನನ್ನ ತಡೆಯುವುದೇಕೆ
ಎಂಬ ಪ್ರಶ್ನೆಗೇ
ನನ್ನ ಮುಖ ಗಂಟಿಕ್ಕುತ್ತದೆ;
ನೀನು ಮಾತ್ರ ಆರಾಮಾಗಿ ನನ್ನ ತಬ್ಬಿಕೊಳ್ಳುತ್ತೀಯೆ
ನಾನು ನಿನ್ನನ್ನು ಸಂಶಯಿಸುವುದರ
ಸುಳುಹು ಸಿಗದವನಂತೆ.

 

ಶ್ರೀಕಲಾ ಹೆಗಡೆ ಕಂಬ್ಳಿಸರ ಹುಟ್ಟಿದ್ದು, ಬೆಳೆದದ್ದು ಸಿರಸಿಯ ಪುಟ್ಟ ಹಳ್ಳಿಯೊಂದರಲ್ಲಿ.
ಓದಿದ್ದು ವಾಣಿಜ್ಯಶಾಸ್ತ್ರ.
ಐದು ವರ್ಷಗಳು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿ
ಈಗ ಊರಲ್ಲಿ ಗೃಹಿಣಿ ಮತ್ತು ಬ್ಲಾಗರ್.

 

(ಕಲಾಕೃತಿ ಸೌಜನ್ಯ: ಪ್ಯಾಬ್ಲೋ ಪಿಕಾಸೋ)