ದಕ್ಕದಿರುವುದಾದರೂ ಹೇಗೆ?
(ಅಲ್ಲಮ ಕವಿತೆ)

ಅದೇಕೋ ಒಮ್ಮೆಯೂ ತನಗೆ
ಕರಗಲಾಗಲಿಲ್ಲ ಅವನ ತೋಳೊಳಗೆ
ನೆನೆಸಿಕೊಂಡೇ ಹನಿಗಣ್ಣಾದಳು
ಇರಲಿಲ್ಲ ನೋವಿಗೆ
ದನಿಯಾಗುವವರು ಯಾರೂ
ನೋವಿಗೊಂದು ಧ್ವನಿ ಬೇಕೆಂಬ ಕಲ್ಪನೆಯೂ

ಶಿವನಿಗಾಗಿಯೇ ಪಾರ್ವತಿ ಜನಿಸಿದಂತೆ
ತನ್ನ ಹುಟ್ಟೂ ಅವನನ್ನು ಸೇರುವುದಕ್ಕೆ
ಅಚಲ ನಂಬಿಕೆಗೆ
ಮೂಡಲಿಲ್ಲ ಇಲ್ಲ ಎಂಬ ಊಹೆಯೂ

ಇತ್ತ ಮದ್ದಳೆಯ ಹರಿದೊಗೆದು
ರುದ್ರಾಕ್ಷಿಯ ಕಿತ್ತೆಸೆದು
ಹೊರಟವನನ್ನು ತಣ್ಣಗಾಗಿಸುವ
ಪರಿ ತಿಳಿಯದೇ
ನಖಶಿಖಾಂತ ನಡುಗಿ ಬೆವರಿದಳು

ಅರ್ಧನಾರೀಶ್ವರನಾಗುವ ಮೊದಲು
ರುದ್ರ ತಾಂಡವವಾಡಿದ ಶಂಕರನೂ
ತಪಸ್ಸು ಭಂಗವಾದ ಕ್ರೋಧದಲಿ
ತೆರೆದು ಮೂರನೇ ಕಣ್ಣು
ಕಾಮನನ್ನು ಸುಟ್ಟು ಬೂದಿಯಾಗಿಸಿದ್ದನ್ನು
ನೆನೆಯುತ್ತಲೇ ರತಿಯೆಂಬ ರತಿಗಾಗಿ
ಬಿಕ್ಕಳಿಸಿ ಕಳವಳಿಸಿದಳು
ಇದ್ದೂ ಇಲ್ಲದಂತಾದ ಸುಖಕ್ಕೆ
ತನ್ನಂತೆ ಎರವಾದವಳಿಗಾಗಿ

ತಪದಲ್ಲೇ ಕೋಪಿಷ್ಟ ಪರಶಿವನನ್ನು
ಪರತಂತ್ರವಾಗಲು ಬಿಡದೇ
ಒಲಿಸಿಕೊಂಡ ಶಿವೆ ಈಗ
ಮನದ ಗೋಡೆಯ ಒಳಗೆ ಮಂದಸ್ಮಿತೆ
ತನ್ನನ್ನಾವರಿಸಿಕೊಂಡ ಮೋಹಕ್ಕೆ
ಪರತತ್ವದ ತಾರ್ಕಿಕ ಅರ್ಥ ನೀಡಿ
ಒಡೆದ ಮದ್ದಳೆಯನ್ನು
ಜೋಡಿಸಿ ಹುರಿಗೊಳಿಸುವುದರಲ್ಲಿಗ ಅವಳು ತಲ್ಲೀನ

 

(ಚಿತ್ರ: ರೂಪಶ್ರೀ ಕಲ್ಲಿಗನೂರ್)