ಇಂತಿಪ್ಪ ಸಜ್ಜನ ಕುಟುಂಬವನ್ನು ಹೀಗೆ ಪರಿಪರಿಯಾಗಿ ಗೋಳಾಡಿಸಿದ ಈ ಶ್ರೀಧರನು ಇನ್ನೇನು ಅನಾಹುತ ಮಾಡಿದನೋ ಎಂದು ಎದೆಬಡಿತ ಸಹಿಸುತ್ತಾ ಕೇಳುತ್ತಿದ್ದವರಿಗೆ ಕಡೇ ಪಾಯಿಂಟನ್ನು ಕಿರಿಸೊಸೆಯಾದ ರುಕ್ಮಿಣಿಯವರೇ ವಿವರಿಸಿದರು. “ನೋಡಿ, ಒಂದೇ ಒಂದು ದಿನಕ್ಕೂ ಇವರು ಕೈಕಾಲು ತೊಳೆದು ತಟ್ಟೆಯ ಮುಂದೆ ಕೂತದ್ದು ನಾನು ನೋಡ್ಲಿಲ್ಲ‌. ದರಿದ್ರವಾಗಿ ಎಲ್ಲಿದ್ದರೆ ಅಲ್ಲಿಂದಲೇ ಎದ್ದು ತಟ್ಟೆಗೆ ಕೈಯಿಡೋದು.
ಮಧುರಾಣಿ ಎಚ್. ಎಸ್. ಬರೆಯುವ ಮಠದ ಕೇರಿ ಕಥಾನಕದಲ್ಲಿ ಶ್ರೀಧರನ ಮದುವೆ ಪ್ರಸಂಗ ನಿಮ್ಮ ಓದಿಗೆ

 

ಮದುವೆಗಳು ಸ್ವರ್ಗದಲ್ಲಿ ಆಗುತ್ತವೆಂಬುದನ್ನು ನಾವೆಲ್ಲಾ ಅದಾಗಲೇ ಮರೆತೇ ಹೋಗಿದ್ದೇವೆ! ನಮಗೀಗ ಅವು ನರಕದಲ್ಲೂ ಏರ್ಪಟ್ಟಿರಬಹುದೆಂಬುದು ಅನ್ನಿಸಿಬಿಟ್ಟಿದೆ. ಇರಲಿ, ಮದುವೆಗಳು ಎಲ್ಲಾದರೂ ಗೊತ್ತಾಗಲಿ, ಭೂಲೋಕವೆಂಬ ಮಾಯಾಬಜಾರಿನ ಮೇಲೆ ಅದು ಹೇಗಾದರೂ ಒಂದು ಪರಿಯ ಕಂಟಕವಾಗದೇ ಇರದು. ಕೋಲದ ಬೆಂಕಿಯ ಮೇಲೆ ನಡೆದಂತೆ ಈ ಮದುವೆಯೆಂಬ ಹರಕೆ ಬೆಂಕಿಯ ಕೆಂಡ ದಾಟದವರು ಎಲ್ಲಿದ್ದಾರು!! ಹಾಗೂ ದಾಟದೇ ಬ್ರಹ್ಮಚರ್ಯವೆಂಬ ಅಸ್ತ್ರ ಬಳಸಿ ಬದುಕಿಕೊಂಡವರು ಕೂಡಾ ಅದರ ಬಿಸಿಯನ್ನು ಪಕ್ಕದವರಿಂದಲಾದರೂ ಅನುಭವಿಸಿರುವುದು ಎನ್ನಿ.

ಹೀಗಿರಲಾಗಿ ನಲವತ್ತರ ಆಸುಪಾಸಿನ ಸುಂದರಾಂಗ, ಕಿತಾಪತಿ ಶ್ರೀಧರನು ಜನಾರ್ದನ ಡಾಕ್ಟರ ಪ್ರಸಂಗ ನಡೆದ ಮೇಲೆ ಹಠಾತ್ತನೆ ಮಂಕಾಗಿ ಹೋದನು. ತನ್ನ ಕ್ರಾಂತಿಯ ಕಿಡಿಯು ಹೀಗೆ ಆರಿ ಹೋದದ್ದು ಕಂಡು ಪರಿತಪಿಸಿದನು. ಕಲಿತ ಅವಿದ್ಯಾವಂತರೊಡನೆ ಹೆಣಗಾಡಬೇಕಾಗಿ ಬಂದ ತನ್ನ ದುರದೃಷ್ಟವನ್ನು ತಾನೇ ಹಳಿದುಕೊಂಡನು. ನಂತರದ ದಿನಗಳಲ್ಲಿ ಕೈ ಚೀಲದೊಳಗಿನ ಹಳೇ ಮೆಟ್ಟನ್ನು ತೆಗೆಯದೆ ಹಾಗೇ ಇಟ್ಟುಕೊಂಡು ದೇಶದ್ರೋಹಿಗಳನ್ನು, ಸಮಾಜದ್ರೋಹಿಗಳನ್ನು ಹುಡುಕುತ್ತಾ ಹಾಗೇ ಬೀದಿಬೀದಿ ತಿರುಗುತ್ತಿದ್ದನು. ಯಾರು ಎಲ್ಲಿ ಕಂಡರೆ ಅಲ್ಲಿಯೇ ತಲೆಗೆ ಮೆಟ್ಟು ಕಟ್ಟುವೆನೆಂದು ಆಗಾಗ ಹೇಳುತ್ತಿದ್ದನು. ಇಂತಹ ಹುಚ್ಚನ್ನು ತಗ್ಗಿಸುವ ಶಕ್ತಿಯು ಮದುವೆಗಲ್ಲದೇ ಬೇರಾವುದಕ್ಕೂ ಇಲ್ಲವೆಂದು ಮನೆಯ ಹಿರಿಯರು ತೀರ್ಮಾನಿಸಿ ಇವನ ಮದುವೆಗೆ ಗಂಭೀರ ಚಿಂತನೆ ನಡೆಸಿದರು. ಕೆಲವೇ ತಿಂಗಳುಗಳಲ್ಲಿ ನಲವತ್ತರ ಆಸುಪಾಸಿನ ಸುಂದರ ಮಾಧ್ವ ಮಹಿಳೆಯೊಬ್ಬರನ್ನು ಹುಡುಕಿಯೂಬಿಟ್ಟರು.

ತಂದೆಯಿಲ್ಲದ ಆ ಮನೆಯಲ್ಲಿ ನಾಲ್ಕು ಹೆಣ್ಣು ಮಕ್ಕಳು. ತಂದೆಯ ಪಿಂಚಣಿಯ ಮೇಲೆ ಆಧಾರಗೊಂಡು ಬದುಕುತ್ತಿದ್ದ ಈ ಹೆಣ್ಣುಮಕ್ಕಳು ಬಹಳ ಸುಸಂಸ್ಕೃತರೆಂದೂ, ಪೂಜೆ-ಪುನಸ್ಕಾರ ದೈವದಲ್ಲಿ ಅತೀವ ಭಕ್ತಿಯುಳ್ಳವರೆಂದೂ, ಶಿಸ್ತಿನ ಸಿಪಾಯಿಗಳೆಂದೂ ಹೆಸರುವಾಸಿಯಾಗಿದ್ದರು. ಈ ಸೈನ್ಯದ ಹಿರಿಯ ಸಿಪಾಯಿಯೇ ಈಗ ಶ್ರೀಧರನ ಹೆಂಡತಿಯಾಗುವ ಹುಡುಗಿ. ಹಿರಿಯರೆಲ್ಲರೂ ಕೂತು ಸಿಕ್ಕಾಪಟ್ಟೆ ಚರ್ಚೆ ನಡೆಸಿದ ನಂತರ ಈ ಹುಡುಗಿಯೇ ಶ್ರೀಧರನಿಗೆ ಸರಿ ಎಂದು ತೀರ್ಮಾನಿಸಲಾಯಿತು. ಕಡೆಗೆ ಮಾಧ್ವರ ಹುಡುಗಿಯೇ ಸೊಸೆಯಾಗಿ ಬರುವಂತಾದದ್ದು ಶ್ರೀಧರನ ತಾಯಿಗೆ ಒಳಗೊಳಗೇ ಮಹತ್ತರವಾದ ಸಂತಸವನ್ನು ಉಂಟುಮಾಡಿತ್ತು.

ಒಂದು ಶುಭದಿನದಂದು ಶ್ರೀಧರನ ಮದುವೆ ಧಾಮ್‌ಧೂಮೆಂದು ನಡೆದುಹೋಯಿತು. ಮುಹೂರ್ತದ ದಿನ ಶ್ರೀಧರನ ಮುಖದ ಮೇಲೆ ಒಂದು ಅಖಂಡ ಕಿರುನಗೆ ತೇಲುತ್ತಿತ್ತು. ಕಡೆಗೂ ತನ್ನ ಮದುವೆಯಾಯಿತು ಎಂಬ ಅತೀವ ಖುಷಿಯೋ ಅಥವಾ ಮುಂದೆ ಈ ನಗುವು ಮತ್ತೆಂದೂ ಕಾಣಸಿಗದೆಂಬ ನೋವೋ.. ಅಂತೂ ಶ್ರೀಧರನು ನಗುತ್ತಿದ್ದನು. ಮದುವೆಯ ಸಕಲ ಕಾರ್ಯಗಳು ಸಾಂಗವಾಗಿ ನೆರವೇರಿದವು. ಹುಡುಗಿಯನ್ನು ಮನೆ ತುಂಬಿಸಿಕೊಂಡ ನಂತರ ಶ್ರೀಧರನ ಸಂಸಾರವು ವಿಧ್ಯುಕ್ತವಾಗಿ ಪ್ರಾರಂಭವಾಯಿತು. ಎರಡು ದಿನ ಕಳೆದು ಅತ್ತೆಮನೆ ಆತಿಥ್ಯ ಸ್ವೀಕರಿಸಲೆಂದು ಶ್ರೀಧರನು ಅವರ ಮನೆಗೆ ಬಿಜಯಂಗೈದನು. ಅಪರೂಪದ ಮದುವೆಯಾದ್ದರಿಂದ ಹೊಸಬಟ್ಟೆ ಹಲವು ಉಡುಗೊರೆಗಳ ಸಂತಸ ನಮ್ಮದು.

ಒಂದು ದೊಡ್ಡ ಜವಾಬ್ದಾರಿ ಕಳೆದು ಮನೆಯ ಹಿರಿಯರೆಲ್ಲಾ ನೆಮ್ಮದಿಯ ನಿಟ್ಟುಸಿರು ಇಡುತ್ತಿರುವಾಗಲೇ ಅಂದು ಮಧ್ಯಾಹ್ನ ರಿಂಗಣಿಸಿದ ಲ್ಯಾಂಡ್ ಲೈನ್ ಫೋನು ದೊಡ್ಡ ಆಟಂಬಾಂಬ್ ತಂದು ಹಾಕಿತು. ಶ್ರೀಧರನ ಹೊಸ ಹೆಂಡತಿ, ಶಿಸ್ತಿನ ಸಿಪಾಯಿ ರುಕ್ಮಿಣಿಬಾಯಿಯು ಹಠಾತ್ತನೆ ಶ್ರೀಧರನಿಗೆ ವಿಚ್ಛೇದನ ಭಾಗ್ಯವನ್ನು ಕರುಣಿಸುವ ಮಾತಾಡಿದ್ದರು! ಮದುವೆಯಾಗಿ ವಾರ ತಿರುಗುವ ಮೊದಲೇ ವಿಚ್ಛೇದನದ ಮಾತು ಬಂದಿದೆಯೆಂದರೆ ಶ್ರೀಧರನು ಹೊರಗಡೆಯಷ್ಟೇ ಅಲ್ಲ ಮನೆಯ ಒಳಗೂ ಲಫಂಗನೆಂದೇ ಗುರುತಿಸಿಕೊಂಡಿರುವನೆಂದು ಬಗೆದ ದೊಡ್ಡವರೆಲ್ಲರೂ ಇಂತಹ ಪಾತಕಿಗೆ ಮದುವೆ ಮಾಡಿಸಿ ಕಟ್ಟಿಕೊಂಡ ಪಾಪಕ್ಕಾಗಿ ಕೈಕೈ ಹಿಸುಕಿಕೊಳ್ಳುತ್ತಿದ್ದರು. ಎಲ್ಲರ ಮುಖದ ಮೇಲೆ ಒಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಬಿಟ್ಟರೆ ಬೇರಾವ ಭಾವನೆ ಕಾಣುತ್ತಿರಲಿಲ್ಲ. ಸುಮ್ಮನಿದ್ದಿದ್ದರೆ ಮನೆಯ ಮರ್ಯಾದೆಯಾದರೂ ಉಳಿಯುತ್ತಿತ್ತು. ಈಗ ಅದೂ ಇಲ್ಲವಾಯಿತೆಂದು ಹಿರಿಯ ಮಾವನು ಗೋಳಿಟ್ಟನು. ಮುಂದೆ ಮದುವೆಯಾಗಬೇಕಾದ ಹರೆಯದ ಹುಡುಗಿಯರಿಗೆ ಅದಾಗಲೇ ಕಣ್ಣೀರೇ ಬಂದಾಗಿತ್ತು. ಹೇಗೋ ಸಂಜೆಗೆ ಹೆಣ್ಣಿನ ಮನೆ ತಲುಪಿದ ಮನೆಯ ಸದಸ್ಯರ ದಂಡು ಕುಶಲೋಪರಿ ಮುಗಿಸಿ ಕಾಫಿ ಹೀರುತ್ತಾ ಮಾತಿಗೆ ಕಾಯುತ್ತಿರುವಾಗಲೇ ನವವಧುವಿನ ತಾಯಿ ವಿಶಾಲಮ್ಮ ಮೆಲ್ಲನೆ ವಿಷಯ ತೆಗೆದರು…

“ಅಲ್ಲಾ.. ನಿಮ್ಮ ಮನೆಯೆಂದರೆ ನಮಗೆ ಸಾಯುವಷ್ಟು ಗೌರವ ಅಣ್ಣಾವ್ರೇ.. ನಮ್ಮ ಮಗು ನಿಮ್ಮನೆಗೆ ಸೇರಲು ಪುಣ್ಯ ಮಾಡಿತ್ತೆಂದು ಈ ಕ್ಷಣದವರೆಗೆ ನಮ್ಮ ಭಾವನೆ. ಆದರೆ ನಿಮ್ಮನೆಯ ಹುಡುಗನಿಂದ ನಾವು ಇಂತಾ ನಡವಳಿಕೆ ನಿರೀಕ್ಷಿಸಿರಲಿಲ್ಲ!” ದೊಡ್ಮಾವನಿಗೆ ಕಾಫಿ ಇಳಿಯುತ್ತಿದ್ದ ಕುತ್ತಿಗೆಯನ್ನು ಯಾರೋ ಹಿಸುಕಿದ ಅನುಭವ. ನುಂಗಿದ ಕಾಫಿ ಹೊಟ್ಟೆ ಸೇರುವ ಮೊದಲೇ ಏನೇನೋ ಆಲೋಚನೆ. ಅದರಲ್ಲಿ ಒಂದಂತೂ ಗ್ಯಾರಂಟಿಯಾಯಿತು. ಶ್ರೀಧರನು ಪಕ್ಕಾ ಹೆಂಡತಿ ತಂಗಿಯರ ಕೈಹಿಡಿದೇ ಎಳೆದಿರಬೇಕು. ಅದಲ್ಲದಿದ್ದರೆ ಇಷ್ಟು ದೊಡ್ಡ ಮಾತೇಕೆ ಬರುತ್ತಿತ್ತು? ಇಲ್ಲವೋ, ಮಹಾನ್ ದೈವಭಕ್ತೆಯೂ, ಅಪೂರ್ವ ಜಿಪುಣಾಗ್ರೇಸರಿಯೂ ಆದ ತನ್ನ ಅತ್ತೆಯ ಗುಣವು ಹಿಡಿಸದೇ ಅವರ ತಲೆಗೆ ಮೆಟ್ಟು ಕಟ್ಟುವ ಯೋಚನೆಯೇನಾದರೂ ಇತ್ತೇ..? ಇವೆರಡಲ್ಲದೇ ಮತ್ತೇನೂ ಇರಲಿಕ್ಕಿಲ್ಲವೆಂದು ತೀರ್ಮಾನಿಸಿದ ದೊಡ್ಮಾವನು ಈ ಗಾಯಗಳಿಗೆ ಯಾವ ಮುಲಾಮು ಎಂದು ಮನಸಲ್ಲೇ ಎಣಿಸತೊಡಗಿದರು.

ಇಂತಹ ಹುಚ್ಚನ್ನು ತಗ್ಗಿಸುವ ಶಕ್ತಿಯು ಮದುವೆಗಲ್ಲದೇ ಬೇರಾವುದಕ್ಕೂ ಇಲ್ಲವೆಂದು ಮನೆಯ ಹಿರಿಯರು ತೀರ್ಮಾನಿಸಿ ಇವನ ಮದುವೆಗೆ ಗಂಭೀರ ಚಿಂತನೆ ನಡೆಸಿದರು. ಕೆಲವೇ ತಿಂಗಳುಗಳಲ್ಲಿ ನಲವತ್ತರ ಆಸುಪಾಸಿನ ಸುಂದರ ಮಾಧ್ವ ಮಹಿಳೆಯೊಬ್ಬರನ್ನು ಹುಡುಕಿಯೂಬಿಟ್ಟರು.

ರೂಮಿನ ಬಾಗಿಲಿಗೆ ನಿಂತ ರುಕ್ಮಿಣಿಯು ಅಷ್ಟೊತ್ತಿನಿಂದ ತಗ್ಗಿಸಿದ ತಲೆಯನ್ನು ಈಗ ಸ್ವಲ್ಪವೇ ಮೇಲೆತ್ತಿ ನವವಧು ಸಹಜವಾದ ನಾಚಿಕೆ ಬೆರೆತ ಗೌರವದೊಂದಿಗೆ, “ಏನು ಭಾವ, ವಯಸ್ಸಾದರೆ ಆಯಿತಾ, ಮನುಷ್ಯನಿಗೆ ಆಚಾರ ವಿಚಾರಗಳು ಬೇಡವಾ.. ನಾಳೆ ನಮ್ಮ ಮಕ್ಕಳಿಗೆ ನಾವು ಇದೇ ಸಂಸ್ಕಾರ ಕೊಡುವುದಾ..?” ಎಂದ ಮೇಲಂತೂ ಎಲ್ಲರೂ ಥಂಡಾ ಹೊಡೆದು ಹೋದದ್ದೇ ಸರಿ! ಸೋಫಾದ ಒಂದು ಮೂಲೆಯಲ್ಲಿ ಅಳುಮುಂಜಿಯಾಗಿ ಕೂತ ಶ್ರೀಧರನು ಜನ್ಮಜನ್ಮಾಂತರದ ಪಾಪಚರ್ಯೆಯೊಂದು ಬೆನ್ನು ಬಿದ್ದು ಕುಗ್ಗಿದಂತೆ ತಲೆ ತಗ್ಗಿಸಿ ಇನ್ನೇನು ಗಲ್ಲಿಗೆ ತಯಾರಾದ ಕೈದಿಯಂತೆ ಕೂತಿದ್ದನು. ನಡುನಡುವೆ ತಲೆಯೆತ್ತಿ ದೈನೇಸಿಯಾಗಿ ಅಣ್ಣನನ್ನೂ ಉಳಿದವರನ್ನೂ ನೋಡುವುದು ಬಿಟ್ಟರೆ ಬೇರೇನೂ ತೋಚದೇ ಹೆಣ್ಣಿಗನಂತೆ ಕೂತಿದ್ದನು. ಒಂದೇ ಏಟಿಗೆ ಅಬ್ಬೇಪಾರಿಯಾಗಿ ಹೋದ ತನ್ನ ಬದುಕಿನ ಮುಂದೆ ತೆನಾಲಿ ರಾಮಕೃಷ್ಣನು ಸಾಕಿದ್ದನೆನ್ನಲಾದ ಹಾಲು ಕಂಡರೆ ಓಡುವ ಬೆಕ್ಕಿನಂತೆ ಕೂತಿದ್ದ ಅವನ ಮೊಗವನ್ನು ದಶಕಗಳ ನಂತರವೂ ಮನೆಯಲ್ಲಿ ನೆನೆದು ನಗುತ್ತಿದ್ದರು, ಮತ್ತದು ಈಗ ಇತಿಹಾಸ.

ಇಂತಿಪ್ಪ ಶ್ರೀಧರನನ್ನು ಪಕ್ಕಕ್ಕೆ ಕರೆದು ಕೇಳಿದರೆ ಮೌನದ ವಿನಃ ಬೇರೆ ಸದ್ದಿಲ್ಲ! ವಿಧಿಯಿಲ್ಲದೇ ರುಕ್ಮಿಣಿಯನ್ನೇ “ಅಮ್ಮಾ.. ನೋಡು, ನೀನು ನಮ್ಮನೆ ಮಹಾಲಕ್ಷ್ಮಿ. ನಿನಗೆ ಅದೇನೇ ಸಂಕಟವಿದ್ದರೂ ಹೆದರದೇ ಹಿಂದೇಟು ಹಾಕದೇ ಹೇಳು. ಈ ಅಯೋಗ್ಯ ಅದೇನೇ ಮಾಡಿದ್ದರೂ ಇವನನ್ನು ದಾರಿಗೆ ತರುವುದು ನಮ್ಮ ಜವಾಬುದಾರಿ.” ಎಂದು ಪರಿಪರಿಯಾಗಿ ಅಂಗಲಾಚಿದ ಮೇಲೆ ಅವರು ಕೊಟ್ಟ ಉತ್ತರದ ಆಘಾತದಿಂದ ಹೊರಬರಲು ಹಿರಿಯತ್ತೆಯಂದಿರಿಗೆ ಸ್ವಲ್ಪ ಹೆಚ್ಚೇ ಸಮಯದ ಅಗತ್ಯ ಬಿತ್ತಂತೆ.

ಹೆಣ್ಣಿನ ಮನೆಯಲ್ಲಿ ನಡೆದದ್ದಿಷ್ಟೇ, ಹುಟ್ಟಾರಭ್ಯ ಸ್ಮಾರ್ತ ಸಂಪ್ರದಾಯದಲ್ಲಿ ಬೆಳೆದು ಊರೂರು ತಿರುಗಿಕೊಂಡು ಉಂಡಾಡಿಗುಂಡನಂತಾಗಿ ಮನೆ ಮಠ ಸೇರದೇ ಜಾತಿ-ಕುಲವೆನ್ನದೇ ಎಲ್ಲರ ಮನೆಯಲ್ಲಿ ಉಂಡು ಬೆಳ್ಳುಳ್ಳಿಗೆ ಮಾರುಹೋಗಿದ್ದ ದೇವರ ಹೋರಿಯಂಥಾ ಶ್ರೀಧರ ಮಾವನು ಅತ್ತೆ ಮನೆಯಲ್ಲಿ ಮೊದಲ ದಿನ ಸಿಕ್ಕ ಸಲುಗೆ ಹಾಗೂ ಉಪಚಾರದಿಂದ ಉನ್ಮತ್ತನಾಗಿಬಿಟ್ಟ. ತಾನು ಹಸುವಿನ ಚರ್ಮ ಹೊದೆದಿದ್ದ ಕಾಡುಹಂದಿಯೆಂಬುದನ್ನೇ ಮರೆತು ಚರ್ಮ ಕೊಡವಿ ಕಾಡುಹಂದಿಯೇ ಆಗಿಬಿಟ್ಟ. ಮದುವೆ ಕಳೆದು ಇಷ್ಟು ದಿನಗಳವರೆಗೂ ಒಪ್ಪೊತ್ತೂ ಸಂಧ್ಯಾವಂದನೆ ಮಾಡಲಿಲ್ಲ‌. ಹೋಗಲಿ, ಬೆಳಗೆದ್ದು ಒಂದು ಗಂಟೆ ಹೊಡೆದು ದೇವರ ತಲೆಮೇಲೆ ತಣ್ಣೀರು-ತಾಂಬೂಲಗಳೂ ನಡೆಯಲಿಲ್ಲ! ಹಿರಿಯಳಿಯ ಬಂದರೆ ತಮ್ಮ ತಂದೆ ಸತ್ತಾಗಿನಿಂದ ನಿಂತು ಹೋಗಿದ್ದ ಘಂಟಾರವವನ್ನು ಮತ್ತೆ ಕೇಳಬಹುದೆಂಬ ಅವರ ಮಹದಾಸೆಗೆ ಮಣ್ಣು ಸುರಿದ! ದೇವರ ಪೂಜೆಯಿರಲಿ, ಬೆಳಗೆದ್ದು ಹಲ್ಲೂ ಉಜ್ಜದೇ ಕಾಫಿ ಕೇಳಿದ. ಅಷ್ಟಕ್ಕೇ ಸುಮ್ಮನಿರದೇ, ಅಡುಗೆಗೆ ಬೆಳ್ಳುಳ್ಳಿ ಬಳಸಿದರೆ ಸ್ವಾದ ಹೆಚ್ಚುವುದೆಂದು ಅತ್ತೆಗೆ ಪಾಠ ಮಾಡಲುತೊಡಗಿದ‌.

ಹೇಗೋ ಕಾಲೇಜು ಕಲಿತವನೆಂದೂ ನಾಲ್ಕಾರು ಕಡೆ ಉಂಡು ಬೆಳೆದವನೆಂದೂ ಅವರು ಸುಮ್ಮನಿದ್ದರೆ ಮಧ್ಯಾಹ್ನದ ಊಟದ ವೇಳೆ ಅವರಿಗೆ ಸುವರ್ಣ ಗೆಡ್ಡೆಗೂ ಮಾಂಸಕ್ಕೂ ಇರುವ ಸಣ್ಣ ವ್ಯತ್ಯಾಸವೇನೆಂದೂ, ಗೆಡ್ಡೆಯನ್ನು ಮಾಂಸದ ಮಸಾಲೆ ಹಾಕಿ ಮಾಡುವುದು ಹೇಗೆಂದೂ ಕಣ್ಣಿಗೆ ಕಟ್ಟಿದಂತೆ ವಿವರಿಸಿದ. ಚಿತ್ರಾವತಿ ಇಡದೇ ಊಟ ಮಾಡಿದರೆ ಯಾವ ದೇವನೂ ಮುನಿಯುವುದಿಲ್ಲವೆಂದೂ ಗೌಡರ ಹಾಗೂ ಇತರೇ ಮನೆಗಳಲ್ಲಿ ಅದ್ಯಾವ ಚಿತ್ರಾವತಿ ಇದೆ, ಆದರೂ ಅವರು ಬದುಕಿಲ್ಲವೇ? ಎಂದೂ ಮೊಂಡು ವಾದ ಮಾಡಿದನು. ಇದನ್ನೆಲ್ಲಾ ಸಹಿಸಿ ಸಹಿಸಿ ಸಹನೆಯ ಕಟ್ಟೆಯೊಡೆದ ಆ ದಿನ, ಶ್ರೀಧರನು ಗಾಯದ ಮೇಲೆ ಬರೆ ಎಳೆದಂತೆ ಇನ್ನೊಂದು ಕೆಲಸ ಮಾಡಿದ್ದ‌. ಇದನ್ನು ಹೇಳುವಾಗಲಂತೂ ರುಕ್ಮಿಣಿಬಾಯಿಯವರ ಕಣ್ಣು ತೇವಗೊಂಡೇಬಿಟ್ಟಿತು. ಆಗದೇ ಆಗದೇ ಮದುವೆಯಾದ ನವವಧುವಿನ ಕಣ್ಣಲ್ಲಿ ನೀರು ಕಂಡ ಅವರಮ್ಮ ವಿನೋದಮ್ಮನು “ಮಗಳ ಬಾಳು ಹೀಗಾಗತ್ತೇಂತ ಎಣಿಸಿರ್ಲಿಲ್ಲ ಸರೋಜಮ್ಮ. ನಿಮ್ಮ ಹುಡುಗ ಇಷ್ಟೊಂದು ಕಣ್ಣೀರಿಡಿಸಬಹುದಾ ನಮ್ ಮಗೂನಾ? ನೀವು ನಮ್ಮ ಹಾಗೇ ಸಂಪ್ರದಾಯಸ್ಥರು ಅಂತ ಒಪ್ಪಿಕೊಂಡೆವು. ಹೀಗೆ ಆಚಾರವಿಲ್ಲದ ಹುಡುಗನಿಗೆ ಗಂಟು ಹಾಕಿಬಿಟ್ನಲ್ಲಾ ನನ್ನ ಗಿಣಿಯಂಥಾ ಮಗಳನ್ನ..!” ಎಂದು ವಯಸು ಮೀರಿದ ಮಗಳಿಗೆ ಸದ್ಯ ಮದುವೆಯಾದ್ದೇ ಹೆಚ್ಚೆಂಬುದನ್ನೂ ಮರೆತು ಆವಾಜ್ ಹಾಕತೊಡಗಿದರು.

ಇಂತಿಪ್ಪ ಸಜ್ಜನ ಕುಟುಂಬವನ್ನು ಹೀಗೆ ಪರಿಪರಿಯಾಗಿ ಗೋಳಾಡಿಸಿದ ಈ ಶ್ರೀಧರನು ಇನ್ನೇನು ಅನಾಹುತ ಮಾಡಿದನೋ ಎಂದು ಎದೆಬಡಿತ ಸಹಿಸುತ್ತಾ ಕೇಳುತ್ತಿದ್ದವರಿಗೆ ಕಡೇ ಪಾಯಿಂಟನ್ನು ಕಿರಿಸೊಸೆಯಾದ ರುಕ್ಮಿಣಿಯವರೇ ವಿವರಿಸಿದರು. “ನೋಡಿ, ಒಂದೇ ಒಂದು ದಿನಕ್ಕೂ ಇವರು ಕೈಕಾಲು ತೊಳೆದು ತಟ್ಟೆಯ ಮುಂದೆ ಕೂತದ್ದು ನಾನು ನೋಡ್ಲಿಲ್ಲ‌. ದರಿದ್ರವಾಗಿ ಎಲ್ಲಿದ್ದರೆ ಅಲ್ಲಿಂದಲೇ ಎದ್ದು ತಟ್ಟೆಗೆ ಕೈಯಿಡೋದು. ಅದಲ್ಲದೇ ಪ್ರತೀದಿನ ಉಣ್ಣುವುದೂ ತೊಡೆಯ ಮೇಲೆ ತಟ್ಟೆ ಇಟ್ಕೊಂಡೇ.. ನಾನೂ ನೋಡ್ತಾನೇ ಇದೀನಿ, ಒಂದಿನಾನೂ ಉಂಡ ತಟ್ಟೆ ತೊಳೆಯುಲ್ಲ, ಸಾಲದ್ದಕ್ಕೆ ಎಂಜಲು ಹಿತ್ತಲ ಬಚ್ಚಲಿಗೆ ಇಡುವ ಬದಲು ಅಡುಗೆಮನೆ ಸಿಂಕ್‌ಗೆ ಹಾಕ್ತಾರೆ. ಮನೆಗೆ ಯಾರಾದ್ರೂ ಪರಿಚಯದವ್ರು ಬಂದ್ರೂವೆ ಅಲುಗಾಡದೇ ಸೋಫಾದ ಮೇಲೆನೇ ಕೂತು ಹಂದಿ ಥರಾ ತಿಂತಿರ್ತಾರೆ. ಎದ್ದು ಅಡುಗೆಮನೆಗೆ ಹೋಗ್ಬೇಕು ಅನ್ನೋ ಕಾಮನ್‌ಸೆನ್ಸ್ ಬೇಡವಾ..? ಅದೂ ಹೆಣ್ಮಕ್ಕಳಾದ್ರೆ ಇವರೇ ಹಲ್ಲು ಗಿಂಜಿಕೊಂಡು ಮಾತಾಡಿಸ್ತಾ ನಿಲ್ತಾರೆ. ಎಂಥಾ ಹೊಲಸು.

ಎಡಗೈ ಬಲಗೈ ನೋಡದೇ ಬಡಿಸಿಕೊಳ್ಳೋದು ಬೇರೆ! ನಾವು ಇಷ್ಟು ಜನ ಹೆಣ್ಮಕ್ಕಳಿಲ್ಲವಾ ಬಡಿಸೋಕೆ? ಎಂಜ್ಲು ಮುಸುರೆ ಬೇಡ್ವಾ ಜ್ಞಾನ? ಸಾರಿನ ಕೈಸೌಟು ತೆಗೆದು ಗೊಜ್ಜಲ್ಲಿ ಅದ್ದೋದು, ಮೊಸರಿನ ಕೈಯಲ್ಲೇ ಉಪ್ಪು ಬಡಿಸಿಕೊಳ್ಳೋದು. ನಾನೂ ಒಂದು ವಾರದಿಂದ ನೋಡ್ತಿದೀನಿ, ಮನುಷ್ಯನಿಗೆ ಕಕ್ಕಸಿಗೆ ಹೋದ್ರೆ ಕೈ ಕಾಲು ತೊಳೀಬೇಕನ್ನೋ ಪರಿವೆ ಬೇಡವಾ? ಇಂಥಾ ಅಶಿಸ್ತಿನ ಮನುಷ್ಯನ ಜೊತೆ ಹೇಗೆ ಬಾಳುವೆ ಮಾಡು ಅಂತೀರಿ? ನಾನೇನು ಬಂಗಾರ-ಬೆಳ್ಳಿ ಬಂಗಲೆ ಕಾರು ಕೇಳ್ತಿಲ್ಲ. ಏನೋ ಒಂದಷ್ಟು ಮಡಿ ಮೈಲಿಗೆ ಶಿಸ್ತು…” ಅವರು ಹೇಳುತ್ತಲೇ ಇದ್ದರು. ದೊಡ್ಡವರು ಬಾಯಿಗೆ ಬೀಗ ಜಡಿದು ನಿಂತೇ ಇದ್ದರು, ಶ್ರೀಧರ ಮಹಾಂತರು ಸೋಫಾದಲ್ಲಿ ಮೂಲೆ ಹಿಡಿದು ಮಳೆಗೆ ನೆನೆದ ನಾಯಿ ಮರಿಯಂತೆ ಕೂತೇ ಇದ್ದರು.

ಈಗ ಇವರಿಬ್ಬರೂ ವಯೋವೃದ್ಧ ದಂಪತಿಗಳು. ಶ್ರೀಧರನಿಗೆ ಒಂದೊಳ್ಳೇ ಕೆಲಸ, ಮದುವೆಗೆ ಬಂದ ದತ್ತು ಮಗಳು. ಈ ದುನಿಯಾ ಅಲ್ಲೋಲ ಕಲ್ಲೋಲವಾದರೂ ತಮ್ಮ ಮಡಿ-ಹುಡಿ ಬಿಡದ ರುಕ್ಮಿಣತ್ತೆ. ಸುಂದರ ಆರೋಗ್ಯಕರ ಸಂಸಾರ! ಮನೆಯೂ ಕಾಲೇಜೂ ಕಲಿಸಲಾಗದ ಶಿಸ್ತಿನ ಬದುಕನ್ನು ಕೆಲವೇ ದಿನಗಳಲ್ಲಿ ಪರಿಪೂರ್ಣವಾಗಿ ಅರೆದು ಕುಡಿಸಿ ಚೀಲದಲ್ಲಿ ಹುದುಗಿದ್ದ ಹಳೇ ಮೆಟ್ಟಿನ ಬದಲು ಬ್ಯಾಂಕ್ ಪಾಸ್‌ಬುಕ್ ರಾರಾಜಿಸುವಂತೆ ಮಾಡಿದ ಹಿರಿಮೆ ಆಕೆಯದು. ಈವರೆಗೂ ಶ್ರೀಧರನೇ ಏನು, ಮನೆಯಲ್ಲಿ ಕೂಡಾ ಯಾರಿಗೂ ಜಗ್ಗದೇ ಎಲ್ಲರಿಗೂ ಬದುಕಿನ‌ ಪಾಠಗಳನ್ನು ಹೇಳಿಕೊಡುತ್ತಾ, ನೊಂದವರಿಗೆ ಮಡಿಲಾಗಿ ನಕ್ಕವರಿಗೆ ಜತೆಯಾಗಿ ಎಲ್ಲರಿಗೂ ಅಚ್ಚುಮೆಚ್ಚಿನ ಅತ್ತೆಯಾಗಿ ತುಂಬು ಸಂಸಾರ ಸಾಗಿಸಿದ ಗಟ್ಟಿಗಿತ್ತಿ ಈಕೆ.

ಮಠದ ಕೇರಿಯಲ್ಲಿ ಇದೇ ಪೀಳಿಗೆಗೆ ಸೇರಿದ ಹಲವರ ಕತೆ ಹೀಗೇ ಇತ್ತು. ಅಂತಹ ಆರಕ್ಕೇರದ ಮೂರಕ್ಕಿಳಿಯದ ಅಬ್ಬೇಪಾರಿಗಳದ್ದೇ ಒಂದು ದಂಡಿತ್ತು. ಮತ್ತು ಅವರ ಜೀವನಶೈಲಿ ಬದುಕಿನ ಬಗೆಗಿನ ನಂಬಿಕೆಗಳು ಎಲ್ಲವೂ ಇತರರಿಗಿಂತ ಭಿನ್ನವಾಗಿದ್ದು, ಮನ್ನಣೆಗಿಂತಾ ನಗೆಪಾಟಲಾಗುತ್ತಿದ್ದುದೇ ಹೆಚ್ಚು. ಮುಂದೆ ಈ ಕತೆಗಳನ್ನು ಕೇಳುವಿರಂತೆ.