ಇಡೀ ಕಾದಂಬರಿಯಲ್ಲಿ ಗಮನ ಸೆಳೆಯುವುದು ಹವ್ಯಕ ಭಾಷೆಯ ಮಾತುಗಳು. ಇಡೀ ಉತ್ತರ ಕನ್ನಡದಲ್ಲಿ ಪ್ರತಿ ಜನಾಂಗಕ್ಕೂ ಅದರದ್ದೇ ಆದ ಒಂದೊಂದು ಭಾಷೆ ಇದೆ. ಅದರದ್ದೇ ಆದ ಏರಿಳಿತಗಳಿವೆ. ಹಾಗೆಯೆ ಒಂದು ಪ್ರದೇಶದಲ್ಲಿ ಯಾವ ಜನಾಂಗ ಪ್ರಬಲವಾಗಿದೆಯೋ ಜನಾಂಗದ ಮಾತನ್ನು ಸಾಮಾಜಿಕವಾಗಿ ಕೆಳವರ್ಗದ ಜನಾಂಗಗಳೂ ಅನುಸರಿಸುತ್ತವೆ. ಅಂತಹದ್ದೊಂದು ರೂಢಿ ಇಲ್ಲಿದೆ. ಉಗ್ರಾಣಿ ಶಂಕ್ರನಿಂದ ಹಿಡಿದು ಹೆರಿಗೆಯ ಕೆಲಸಕ್ಕೆ ಬರುವ ಲಕ್ಷ್ಮಿಯವರೆಗೆ ಎಲ್ಲರೂ ಹವ್ಯಕ ಭಾಷೆ ಬಳಸುವವರೇ. ಮಾತನಾಡುತ್ತ ಆಡುತ್ತ ಪುಸ್ತಕದ ಭಾಷೆಗೆ ಹೊರಳುವ ಕೆಲವು ಸಂಭಾಷಣೆಗಳನ್ನು ಹೊರತುಪಡಿಸಿದರೆ ಭಾಷಾಪ್ರಯೋಗದ ದೃಷ್ಟಿಯಿಂದಲೂ ಇದೊಂದು ಗಟ್ಟಿ ಪ್ರಯೋಗ.
ಶ್ರೀಧರ ಬಳಗಾರ ಅವರ ‘ಮೃಗಶಿರ’ ಕಾದಂಬರಿಯ ಕುರಿತು ಶ್ರೀದೇವಿ ಕೆರೆಮನೆ ಬರಹ

 

ಕಾದಂಬರಿಯನ್ನು ಬರೆಯಹೊರಟವನ ಕಾದಂಬರಿ ಇದು. ಸ್ವಾತಂತ್ರ್ಯ ಹೋರಾಟಗಾರರಿಂದಲೇ ತುಂಬಿರುವ ಉತ್ತರಕನ್ನಡ ಜಿಲ್ಲೆಯ ಹಳ್ಳಿಯೊಂದರ ಕಥೆಯನ್ನು ತುಂಬಾ ಆಕರ್ಷಣೀಯವಾದ ಭಾಷಾ ಶೈಲಿಯಲ್ಲಿ ಕಟ್ಟಿಕೊಡಲಾಗಿದೆ. ಗಡಿಮನೆಯ ಸುಬ್ರಾಯಪ್ಪನವರ ಕಥೆ ಬರೆಯಲು ಹೊರಟ ಲೇಖಕನೊಬ್ಬನ ಎದುರು ಬಿಚ್ಚಿಕೊಳ್ಳುವ ಸ್ವಾತಂತ್ರ್ಯಪೂರ್ವದ ಕಥೆ ಸ್ವಾತಂತ್ರ್ಯಾ ನಂತರದ ಮುಜುಗರದ ಕಥೆಯಾಗಿಬಿಡುವ ವಿಸ್ಮಯ ಇದು.

ಹಾಗೆ ನೋಡಿದರೆ ಎರಡು ಪ್ರಮುಖ ಮನೆತನಗಳ ಮೇಲಾಟ ಯಾವ ಊರಲ್ಲಿ ಇಲ್ಲ ಹೇಳಿ? ಎರಡು ಸಮಾನವಾದ ಮನೆತನಗಳ ನಡುವಿನ ಪೈಪೋಟಿ ಎಲ್ಲ ಊರಲ್ಲೂ ಎಲ್ಲ ಕಾಲದಲ್ಲೂ ಇರುವಂಥಹುದ್ದೇ. ಆದರೆ ಈ ಮೇಲಾಟದ ಜೊತೆ ಹೆಣ್ಣಿನ ವಿಷಯ ಸೇರಿಕೊಂಡುಬಿಟ್ಟರೆ ಅದಕ್ಕೊಂದು ಎಂದಿಗೂ ಸಿಗದ ರೋಚಕತೆ ಪ್ರಾಪ್ತವಾಗಿಬಿಡುತ್ತದೆ. ಅಂತಹದ್ದೊಂದು ರೋಚಕತೆಗೆ ಸ್ವಾತಂತ್ರ್ಯ ಹೋರಾಟದ ತಿರುವನ್ನಿಟ್ಟು ದೇಶಪ್ರೇಮದ ಆಯಾಮ ಹೊದಿಸಿದ ಈ ಕಥೆ ಕೊನೆಯವರೆಗೂ ಉಸಿರು ಬಿಡದಂತೆ ನಮ್ಮನ್ನು ಓದಿಸಿಕೊಂಡು ಹೋಗುತ್ತದೆ.

(ಶ್ರೀಧರ ಬಳಗಾರ)

ಗಾಂಧೀಜಿಯವರು ಸಿರಸಿಗೆ ಬಂದಾಗ ಎದುರಿಗೆ ಬಂದು ನಿಂತವರ ತಲೆಯ ಮೇಲೆ ಗಾಂಧಿ ಟೋಪಿ ಇಟ್ಟು ಹೋದಾಗಿನಿಂದ ಸ್ವಾತಂತ್ರ್ಯ ಹೋರಾಟದಲ್ಲಿ ವಿದ್ಯುಕ್ತವಾಗಿ ಭಾಗಿಯಾದ ಸುಬ್ರಾಯಪ್ಪನವರನ್ನು ತಡೆಯುವುದಕ್ಕಾಗಿ ಅಪ್ಪ ಮದುವೆ ಮಾಡಿದರೂ ಮದುವೆ ಮುಗಿಸಿ ತಿಂಗಳೊಳಗೆ ಚಳವಳಿಗೆ ಸೇರಿಕೊಂಡವರು. ಅತ್ತ ಮೈನೆರೆದವಳನ್ನು ಮನೆಯಲ್ಲಿ ಇಟ್ಟುಕೊಳ್ಳಲಾಗದೇ ಅಂತೆ ಎಂದು ಕರೆಯುವ ಅನುಸೂಯಾಳನ್ನು ಗಂಡನ ಮನೆಗೆ ಬಿಟ್ಟು ಹೋಗಿದ್ದರು ಆಕೆಯ ಹೆತ್ತವರು. ಅಂತೆಯನ್ನು ಮನೆಗೆ ಸೇರಿಸಲು ಬರುವಾಗಿನಿಂದ ಹಿಡಿದು, ತವರಿನವರು ಕೊಟ್ಟ ತೆಂಗಿನ ಮರವನ್ನು ನೆಡುವುದರವರೆಗೂ ಹೊಸ್ಮನೆಯ ಪುಟ್ಟಣ್ಣನದೇ ಕಾರುಬಾರು. ಚಳವಳಿಗೆ ಹೋದ ಸುಬ್ರಾಯಪ್ಪನವರು ಬರದೇ, ಇತ್ತ ಗಮಯನ ಕಾಟ ತಡೆಯಲು ಮಾಳಕ್ಕೆ ಹೋದ ಅನುಸೂಯಾಳನ್ನು ಬವಂತವಾಗಿ ಭೋಗಿಸಿದ ಪುಟ್ಟಣ್ಣ ಮತ್ತು ಮನೆಗೆ ಹಿಂದಿರುಗಿದ ನಂತರ ತನ್ನದಲ್ಲದ ಮಗ ಗಣಪತಿಯನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಎಲ್ಲವನ್ನೂ ಹಂತಹಂತವಾಗಿ ಹೇಳಲಾಗಿದೆ.

ಕಥೆ ಬರೆಯುವ ನಿರೂಪಕ ಕೇವಲ ಸುಬ್ರಾಯಪ್ಪನವರನ್ನಷ್ಟೇ ಸಂದರ್ಶಿಸುವುದಿಲ್ಲ. ಅವರ ಹೆಂಡತಿ ಅನುಸೂಯಾರವರನ್ನೂ ಮಾತನಾಡಿಸುತ್ತಾರೆ. ಎಂದೋ ಮಾಳದಲ್ಲಿ ತಮ್ಮ ಅನುಮತಿಯಿಲ್ಲದೇ ನಡೆದು ಹೋದ ಮಿಲನಕ್ಕೆ ಸದಾ ತಮ್ಮ ಗಂಡನ ನೆನಪಿನಲ್ಲೇ ಉಳಿದು ಅದನ್ನು ತನ್ನ ಗಂಡ ಕೊಟ್ಟ ಉಡುಗೊರೆ ಎಂದೇ ತಿಳಿಯುತ್ತಾರೆ. ಅಂತತ್ತೆಯ ಮಾತಿನಲ್ಲೇ ಹೇಳುವುದಾದರೆ ‘ಹುಟ್ಟಲಿರುವ ಕೂಸಿನ ಬಗ್ಗೆ ಹೊರಗಡೆ ಕೃತ್ರಿಮ ಸಂಭ್ರಮವಿದ್ದರೂ ಮನೆಯೊಳಗೆ ಅಪವಿತ್ರ ಭಾವನೆ ಎಲ್ಲರನ್ನೂ ಕಾಡುತ್ತಿತ್ತು.. ಆದರೆ ನನ್ನ ಮನದಲ್ಲಿ ಪಾಪಪ್ರಜ್ಞೆ ಬಾಧಿಸಲಿಲ್ಲ. ಪುಟ್ಟಣ್ಣ ಶರೀರವನ್ನು ಮಾತ್ರ ಮುಟ್ಟಿದ್ದ. ನನ್ನ ಮತ್ತು ನನ್ನೊಳಗಿನ ಜೀವಕ್ಕೆ ಪ್ರಾಣ ನೀಡಿದವರು ‘ನನ್ನವರೇ’ ಎಂಬ ಅಚಲ ಭಾವನನ್ನ ಕಾಪಾಡಿತ್ತು’… ಇಡೀ ಕಾದಂಬರಿಯಲ್ಲಿ ನನ್ನನ್ನು ಸೆಳೆದ ಮಾತು ಇದು.

ಎಂದೋ ತನ್ನ ಯಾವುದೇ ಪಾತ್ರ, ಒಳಗೊಳ್ಳುವಿಕೆ ಏನೂ ಇಲ್ಲದೇ ಕೈಮೀರಿ ಘಟಿಸಿಹೋದ ಕಾರ್ಯಕ್ಕೆ ಹೆಣ್ಣನ್ನು ಹೊಣೆಯಾಗಿಸಿ ಬಹಿಷ್ಕಾರ ಹಾಕುವ ಕಾಲಘಟ್ಟದಲ್ಲಿ ಅಂತತ್ತೆಯ ಬಾಯಲ್ಲಿ ಇಂತಹ ಮಾತೊಂದನ್ನು ಹೇಳಿಸಿದ್ದಕ್ಕಾಗಿ ಶ್ರೀಧರ ಬಳಗಾರರಿಗೆ ಧನ್ಯವಾದ ಹೇಳದೇ ಇರಲಾರೆ.

ಎರಡು ಸಮಾನವಾದ ಮನೆತನಗಳ ನಡುವಿನ ಪೈಪೋಟಿ ಎಲ್ಲ ಊರಲ್ಲೂ ಎಲ್ಲ ಕಾಲದಲ್ಲೂ ಇರುವಂಥಹುದ್ದೇ. ಆದರೆ ಈ ಮೇಲಾಟದ ಜೊತೆ ಹೆಣ್ಣಿನ ವಿಷಯ ಸೇರಿಕೊಂಡುಬಿಟ್ಟರೆ ಅದಕ್ಕೊಂದು ಎಂದಿಗೂ ಸಿಗದ ರೋಚಕತೆ ಪ್ರಾಪ್ತವಾಗಿಬಿಡುತ್ತದೆ. ಅಂತಹದ್ದೊಂದು ರೋಚಕತೆಗೆ ಸ್ವಾತಂತ್ರ್ಯ ಹೋರಾಟದ ತಿರುವನ್ನಿಟ್ಟು ದೇಶಪ್ರೇಮದ ಆಯಾಮ ಹೊದಿಸಿದ ಈ ಕಥೆ ಕೊನೆಯವರೆಗೂ ಉಸಿರು ಬಿಡದಂತೆ ನಮ್ಮನ್ನು ಓದಿಸಿಕೊಂಡು ಹೋಗುತ್ತದೆ.

ಇವೆಲ್ಲದರ ನಡುವೆ ಬಲವಂತವಾಗಿ ಅಂತತ್ತೆಯನ್ನು ಪಡೆದುಕೊಂಡ ಪುಟ್ಟಣ್ಣನ ಮನಸ್ಥಿತಿ ಕೂಡ ಚಿತ್ರಿತವಾಗಿದೆ. ಒಮ್ಮೆ ಕದ್ದು ಕುಡಿದ ಹಾಲಿಗಾಗಿ ಮತ್ತೆ ಮತ್ತೆ ಹೊಂಚುಹಾಕುವ ಬೆಕ್ಕಿನಂತೆ ಕಂಡರೂ ಆತ ಮತ್ತೆಂದೂ ಎಲ್ಲೆ ಮೀರಿ ಹೋಗುವುದಿಲ್ಲ. ಆದರೆ ಬೊಂಬ್ಡಿಗೆ ಹೋದ ಪುಟ್ಟಣ ಅದು ಹೇಗೆ ಹೆಣವಾದನೋ ಕೊನೆಯವರೆಗೂ ಸುಳಿವು ಹತ್ತದೇ ಅನುಮಾನದ ಸುಳಿ ಎಲ್ಲರತ್ತಲೂ ತಿರುಗುವುದನ್ನು ಕಾಣಬಹುದು.

ಸ್ವಾತಂತ್ರ್ಯ ಹೋರಾಟದ ಜೈಲುವಾಸ ಮುಗಿಸಿ ಹಿಂದಿರುಗಿ ಬಂದ ಸುಬ್ರಾಯಪ್ಪನವರು ಹೆಂಡತಿಯನ್ನು ದೂರವಿಟ್ಟರು ನಿಜ. ಆದರೆ ಅದೆಲ್ಲೋ ದೂರದಲ್ಲಿ ತನ್ನದೇ ಊರಿನ ಆಚಾರಿಯ ಮಗಳನ್ನು ದೂರದ ಕಾಶಿಯಲ್ಲಿ ಮದುವೆ ಆದದ್ದು ತಪ್ಪು ಎಂದು ಒಪ್ಪಿಕೊಳ್ಳುವುದಿಲ್ಲ. ತನ್ನ ತಪ್ಪಿಲ್ಲದಿದ್ದರೂ ಆಗಿ ಹೋದ ಘಟನೆಗೆ ಹೆಣ್ಣನ್ನು ಹೊಣೆ ಮಾಡಿ ಬಹಿಷ್ಕಾರ ಹಾಕುವ ಸಮಾಜ ಗಂಡಿನ ತಪ್ಪನ್ನು ಸಲೀಸಾಗಿ ಒಪ್ಪಿಬಿಡುವುದನ್ನು ಇಲ್ಲಿ ಸೂಕ್ಷ್ಮವಾಗಿ ಹೇಳಿದ್ದಾರೆ. ಇಲ್ಲಿ ಇನ್ನೊಂದು ಸೂಕ್ಷ್ಮದ ಅನಾವರಣವೂ ಆಗಿದೆ. ಮದುವೆಯಾಗಲು ಸ್ವಜಾತಿಯ ಹೆಣ್ಣಿನ ಕೊರತೆ ಎದುರಿಸುವ ಜಟಿಲ ಸ್ಥಿತಿ ಅದು. ಮದುವೆ ಆಗಬೇಕು, ಆದರೆ ಸ್ವಜಾತಿಯಲ್ಲಿ ಹೆಣ್ಣಿಲ್ಲ. ಹೀಗಾಗಿ ತಲೆಯ ಮೇಲಿನ ಕಿರೀಟ ಉದುರದಂತೆ ದೂರದಲ್ಲೆಲ್ಲಿಂದಲೋ ಹೆಣ್ಣನ್ನು ತಂದು ಇಲ್ಲಿಯವರನ್ನು ಒಪ್ಪಿಸುವ ಪರಿಪಾಠದ ಪಡಿಪಾಟಲು ಇಲ್ಲಿ ಬಿಂಬಿತವಾಗಿದೆ.

ಇತ್ತ ಸತ್ತು ಹೋದ ಪುಟ್ಟಣ್ಣನ ಹೆಂಡತಿ ತುಂಗೆಯ ಬೆಂಗಾವಲಿಗೆ ಪುನಃ ಅಂತತ್ತೆಯೇ ಹೊರಡುತ್ತಾಳೆ. ಆಕೆಯ ಪಾಲಿಗೆ ಬರಬೇಕಾದ ಆಸ್ತಿಯನ್ನು ಜತನ ಮಾಡಿ ತುಂಗೆಯನ್ನು ಕಾಯುತ್ತಾಳೆ. ‘ಪುಟ್ಟಣ್ಣನ ಅಂತ್ಯಸಂಸ್ಕಾರ ಸರಿಯಾಗಿ ಮಾಡಿದ್ದಾರೋ ಏನೋ, ಗೋಕರ್ಣದಲ್ಲಿ ನಮ್ಮ ಪುರೋಹಿತರಿದ್ದಾರೆ ಗಪ್ಪತಿಯನ್ನು ಜೊತೆಗೆ ಕರೆದುಕೊ. ಅಲ್ಲೊಂದು ಶಾಸ್ತ್ರ ಆಗಿ ಹೋಗಲಿ. ಖರ್ಚಿಗೆ ನಾನು ಕೊಡುತ್ತೇನೆ.’ ಎನ್ನುತ್ತ ಗೋಕರ್ಣಕ್ಕೆ ಗಪ್ಪತಿಯನ್ನು ಕಳುಹಿಸಿದ ಉದ್ದೇಶ ಇಬ್ಬರಿಗೂ ಅರಿವಿತ್ತು ಎನ್ನುವುದರ ಮೂಲಕ ಹೆಣ್ಣಿನೊಳಗಿನ ಲೋಕವನ್ನು ತೆರೆದಿಡುತ್ತಾರೆ.

ಜೀವಮಾನವಿಡೀ ಬೇರೆಬೇರೆಯಾಗಿಯೇ ಬದುಕು ಸಾಗಿಸಿದ ಅಂತತ್ತೆ ಹಾಗೂ ಸುಬ್ರಾಯಪ್ಪನವರ ವಿಕ್ಷಿಪ್ತ ಸಂಸಾರದ ಊರಿನವರಿಗೆಲ್ಲ ಗೊತ್ತಿದ್ದೂ ಗೊತ್ತಿರದ ಗುಟ್ಟು. ಇದರ ನಡುವೆ ಅಂತತ್ತೆಯ ಮಗ ಬೇರೆ ಮನೆಮಾಡಿ ಉಳಿದದ್ದು ಇಲ್ಲಿ ಅಂತಹ ಮಾನ್ಯತೆಯನ್ನೇನೂ ಪಡೆಯುವುದಿಲ್ಲ.

ಇಡೀ ಕಾದಂಬರಿಯಲ್ಲಿ ಗಮನ ಸೆಳೆಯುವುದು ಹವ್ಯಕ ಭಾಷೆಯ ಮಾತುಗಳು. ಇಡೀ ಉತ್ತರ ಕನ್ನಡದಲ್ಲಿ ಪ್ರತಿ ಜನಾಂಗಕ್ಕೂ ಅದರದ್ದೇ ಆದ ಒಂದೊಂದು ಭಾಷೆ ಇದೆ. ಅದರದ್ದೇ ಆದ ಏರಿಳಿತಗಳಿವೆ. ಹಾಗೆಯೆ ಒಂದು ಪ್ರದೇಶದಲ್ಲಿ ಯಾವ ಜನಾಂಗ ಪ್ರಬಲವಾಗಿದೆಯೋ ಆ ಜನಾಂಗದ ಮಾತನ್ನು ಸಾಮಾಜಿಕವಾಗಿ ಕೆಳವರ್ಗದ ಜನಾಂಗಗಳೂ ಅನುಸರಿಸುತ್ತವೆ. ಅಂತಹದ್ದೊಂದು ರೂಢಿ ಇಲ್ಲಿದೆ.

ಉಗ್ರಾಣಿ ಶಂಕ್ರನಿಂದ ಹಿಡಿದು ಹೆರಿಗೆಯ ಕೆಲಸಕ್ಕೆ ಬರುವ ಲಕ್ಷ್ಮಿಯವರೆಗೆ ಎಲ್ಲರೂ ಹವ್ಯಕ ಭಾಷೆ ಬಳಸುವವರೇ. ಮಾತನಾಡುತ್ತ ಆಡುತ್ತ ಪುಸ್ತಕದ ಭಾಷೆಗೆ ಹೊರಳುವ ಕೆಲವು ಸಂಭಾಷಣೆಗಳನ್ನು ಹೊರತುಪಡಿಸಿದರೆ ಭಾಷಾಪ್ರಯೋಗದ ದೃಷ್ಟಿಯಿಂದಲೂ ಇದೊಂದು ಗಟ್ಟಿ ಪ್ರಯೋಗ. ವಿ. ತಿ. ಶೀಗೆಹಳ್ಳಿಯವರ ‘ತಲೆಗಳಿ’ಯ ನಂತರ ಬಂದ ಮತ್ತೊಂದು ಯಶಸ್ವಿ ಪ್ರಯೋಗ ಎನ್ನಬಹುದು.

ಶ್ರೀಧರ ಬಳಗಾರ ನನ್ನ ಬಿಇಡಿ ಗುರುಗಳು. ನನಗೆ ಇಂಗ್ಲೀಷ್ ಮೆಥೆಡ್ ಕಲಿಸಿದ ಶಿಕ್ಷಕರು. ಮೆಲುಮಾತಿನ ಅವರ ಕಲಿಸುವಿಕೆಯ ಓಘದಲ್ಲಿ ಕಳೆದು ಹೋದವರು ನಾವು. ನಾಲ್ಕೇ ನಾಲ್ಕು ಜನರಿದ್ದ ನಮ್ಮ ಇಂಗ್ಲೀಷ್ ಮೆಥೆಡ್ ಕ್ಲಾಸ್ ನ್ನು ಅವರ ರೂಂ ನಲ್ಲಿಯೇ ಅವರ ಸುತ್ತ ಖುರ್ಚಿ ಹಾಕಿ ಕುಳಿತುಕೊಂಡು ಕೇಳುತ್ತಿದ್ದೆವು. ಅವರ ತಣ್ಣನೆಯ ಶ್ರಾವಣದ ಮಳೆಯಂತ ಜಿಟಿಜಿಟಿ ಮಾತು ನಮಗೆ ಅದೆಷ್ಟು ರೂಢಿಯಾಗಿತ್ತು ಎಂದರೆ ಉಳಿದ ಮೆಥೆಡ್ ಶಿಕ್ಷಕರು ಜೋರು ಧ್ವನಿಯಲ್ಲಿ ಹೇಳಿದರೆ ಯಾಕೆ ಇವರು ಕಿರುಚುತ್ತಾರೆ ಎನ್ನಿಸಿಬಿಡುತ್ತಿತ್ತು. ಅಂತಹ ಮೆಲುವಾದ ಸಂಗೀತದಂತೆ ಭೂತ ವರ್ತಮಾನಗಳನ್ನು ಜೊತೆಯಾಗಿ ಬೆಸೆಯುತ್ತ ಸಾಗುವ ‘ಮೃಗಶಿರ’ ಮತ್ತೆ ಮತ್ತೆ ಓದನ್ನು ಮೆಲುಕಾಡಿಸುವಂತೆ ಮಾಡಿರುವುದಕ್ಕಾಗಿ ಗುರುಗಳಿಗೆ ವಂದನೆಗಳು.