ಆಕೆಯ ಮನೆಯಂಗಳದ ಕೈತೋಟದಲ್ಲಿದ್ದ ಗಿಡಮರಗಳು, ಸುಮಾರು ಹದಿನೈದು ಗೊಬ್ಬರ ಡಬ್ಬಗಳು, ಬಕೆಟ್ಟುಗಳು, ಮೂರು ಗೊಬ್ಬರ ಹುಳುಗಳ ಕೇಂದ್ರಗಳು, ಒಂದು ದೊಡ್ಡ ಇಡೀ ಬಾತ್ ಟಬ್ಬನ್ನು ಗೊಬ್ಬರ ಹುಳು ಸಾಕಾಣಿಕೆ ಕೇಂದ್ರವನ್ನಾಗಿರಿಸಿದ ಪ್ರಯತ್ನ, ಮೂಲೆಯಲ್ಲಿದ್ದ ಕೋಳಿಸಾಕಾಣಿಕೆ ಕೇಂದ್ರ ಎಲ್ಲವನ್ನೂ ನೋಡಿ ಅಬ್ಬಾಬ್ಬಾ ಎಂದೆ. ನನ್ನನ್ನು ಬೆರಗಾಗಿಸಿದ ವಿಷಯವೆಂದರೆ ಆಕೆಯ ಈ ಎಲ್ಲಾ ಪ್ರಯತ್ನಗಳಲ್ಲಿ ತೊಂಭತ್ತು ಭಾಗಕ್ಕೆ ಯಾವುದೇ ಹಣ ಹೂಡಿಕೆಯಿಲ್ಲದಿದ್ದದ್ದು. ತನ್ನಂತೆ ಆಸಕ್ತಿ ಹೊಂದಿದ್ದ ಇತರ ತೋಟಗಾರರಿಂದ ಪರಸ್ಪರ ಪಡೆದಿದ್ದು, ಕೊಟ್ಟದ್ದು, ಹಂಚಿಕೊಂಡದ್ದು, ಮತ್ತು ಅವನ್ನು ಉತ್ತೇಜಿಸಿದ್ದು…
ಡಾ.ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ

 

ಪೊದೆ ಬೆಂಕಿ (bush fire) ಹತ್ತಿಕೊಂಡು ಸುಟ್ಟುಹೋಗಿದ್ದ ಕೆಲವೆಡೆ ಈಗಾಗಲೇ ಮರಗಿಡಗಳು ಚಿಗುರುತ್ತಿವೆ. ಸ್ನೇಹಿತರು ಅದನ್ನು ಕಂಡು ನಲಿದಾಡಿ ಅದರ ಚಿತ್ರಗಳನ್ನು ತೆಗೆದು ಹಂಚಿಕೊಳ್ಳುತ್ತಿದ್ದಾರೆ. ಹರ್ಷದ ಸೆಲೆ ಸಣ್ಣದಾಗಿ ಚಿಮ್ಮುತ್ತಿದೆ. ಬೆಂಕಿಯಿಂದ ಕೈಕಾಲು, ಕಿವಿಗಳು, ಬಾಲ, ಮೈ ಭಾಗಗಳು ಸುಟ್ಟಿದ್ದ ಕೋಆಲಾ, ಕಾಂಗರೂ, ಬಿಲ್ಬಿ, ವೊಂಬಾಟ್ ಗಳನ್ನು ಕಾಪಾಡಿ, ಅವುಗಳನ್ನು ಸಂತೈಸಿ ಆರೈಕೆ ನೀಡಲಾಗುತ್ತಿದೆ. ಈ ಕೆಲಸ ಮಾಡುವುದಕ್ಕೆ ಜನರು ಸರಕಾರಗಳನ್ನು ನೆಚ್ಚಿಕೊಂಡಿಲ್ಲ. ತಾವುಗಳೇ ಇಬ್ಬರು, ಮೂವರು ಸ್ನೇಹಿತರೋ, ಗಂಡಹೆಂಡಂದಿರೊ ಸೇರಿ ತಮ್ಮ ಕೈಲಾದಮಟ್ಟಿಗೆ ಮನೆಯ ಗ್ಯಾರೇಜಿನಲ್ಲಿ, ಶೆಡ್ಡಿನಲ್ಲಿ, ಹಿಂಬದಿ ರೂಮಿನಲ್ಲಿ ಪ್ರಾಣಿ ಶುಶ್ರೂಷೆ ಕೇಂದ್ರವನ್ನು ಸ್ಥಾಪಿಸಿಬಿಟ್ಟಿದ್ದಾರೆ. ಹೀಗೆ ಮನಸ್ಸು ನೊಂದು ತಡೆಯಲಾರದೆ ಕೈಗೊಂಡ ಅವರ ಸಾಂತ್ವನಕ್ಕೆ ಅವರ ಇಡೀ ಬೀದಿಯವರು, ಊರಿನವರು, ಬಡಾವಣೆಯವರು ಮುಂದಾಗಿದ್ದಾರೆ. ಗಾಯಗೊಂಡ ಪ್ರಾಣಿಗಳಿಗೆ ಬೇಕಾದ ಆಹಾರ, ಉಪಚಾರಕ್ಕೆ ಕೈಜೋಡಿಸಿದ್ದಾರೆ.

ಸ್ನೇಹಿತರು ಹಂಚಿಕೊಳ್ಳುವ ಚಿತ್ರಗಳನ್ನು ನೋಡಿದಾಗ, ಟೀವಿಯಲ್ಲಿ ತೋರಿಸುವ ಅನುಭವ ಕಥನಗಳನ್ನು ಕೇಳಿದಾಗ ನಾವಿನ್ನೂ ಅಷ್ಟೊಇಷ್ಟೊ ಅಂತಃಕರಣವಿರುವ ಮನುಷ್ಯರಾಗೇ ಇದ್ದೀವಿ ಎನ್ನುವುದು ಖಾತ್ರಿಯಾಗಿ ಒಂದಷ್ಟು ಸಮಾಧಾನವಾಗುತ್ತದೆ. ಪ್ರಾಣಿ, ಪಕ್ಷಿ, ಚಿಟ್ಟೆ, ದುಂಬಿ, ಮಿಡತೆ, ಏರೋಪ್ಲೇನ್ ಹುಳ, ಎರೆಹುಳ ಎಲ್ಲವೂ ಇನ್ನಷ್ಟು ಚೆನ್ನಾಗಿ ಬದುಕಿ ಬಾಳಲಿ ಎಂದುಕೊಳ್ಳುತ್ತಾ ವಾರಾಂತ್ಯದಲ್ಲಿ ಇನ್ನಷ್ಟು ಗಿಡಮರಗಳನ್ನ, ಗೊಬ್ಬರವನ್ನು ಕೊಳ್ಳಲು ಹೋಗುತ್ತೀನಿ.

ವಾರಾಂತ್ಯದ ಮಾರುಕಟ್ಟೆಗೆ ಹೋದರೆ ನನ್ನ ಕಣ್ಣುಗಳು ಮೊದಲು ಅರಸುವುದು ಹೊಸ ಗಿಡಗಳನ್ನ ಮತ್ತು ಗುಜರಿ ಸಾಮಾನುಗಳನ್ನು ಹರಡಿಕೊಂಡಿರುವವರು ಈ ಬಾರಿ ಹೊಸತೇನನ್ನು ತಂದಿದ್ದಾರೆ ಅಂತ. ನನ್ನ ಹುಡುಕಾಟಕ್ಕೆ ಬೇಸರಿಸಿಕೊಂಡು ಜೀಬಿ ಗುರುಗುಟ್ಟುತ್ತಾರೆ. ‘ಮಾರಾಯ್ತಿ, ಗಿಡ ಗಿಡ ಅಂತೀಯಾ, ಹೊಸ ಗಿಡ ನೆಡುವುದಕ್ಕೆ ಜಾಗ ಎಲ್ಲಿದೆ?’, ಅಂತಾರೆ. ‘ನೀವು ಆರಾಮಾಗಿ ಕಾಫಿ ಕುಡಿಯುತ್ತಾ ಒಂದೆಡೆ ಕೂತಿರಿ, ಈ ಬಿಸಿಲಲ್ಲಿ ನಾನೊಂದು ಪ್ರದಕ್ಷಿಣೆ ಹಾಕಿಕೊಂಡು ಬರುತ್ತೀನಿ’, ಅಂತೀನಿ.

ಕಳೆದ ಡಿಸೆಂಬರಿನಲ್ಲಿ ನಾವು ಕ್ಯಾಂಪಿಂಗ್ ಹೋಗುವುದು ಖಚಿತವಾದಾಗ ನಮ್ಮ ಮನೆ, ಗಿಡಮರಗಳನ್ನು ಹೇಗೆ ಕಾಪಾಡುವುದು ಎನ್ನುವ ಚಿಂತೆ ಹುಟ್ಟಿತ್ತು. ಅದೇನೂ ಹೊಸತಲ್ಲ. ಅದ್ಯಾಕೊ ಈ ಬಾರಿ ತಳಮಳ ಜಾಸ್ತಿಯಾಗಿತ್ತು. ಸುಮ್ಮನೆ ಕಡ್ಡಿಗೀರಿದರೆ ಸಾಕು ಪಟ್ಟನೆ ಬೆಂಕಿ ಹತ್ತಿಕೊಳ್ಳುತ್ತದೇನೋ ಅನ್ನುವಂಥಾ ಸುಡುಸುಡು ಬಿಸಿಲು, ಮಳೆನೀರು ಕೊಯ್ಲಿನ ಟ್ಯಾಂಕ್ ಮುಕ್ಕಾಲು ಖಾಲಿಯಾಗಿತ್ತು, ಅಲ್ಲಲ್ಲಿ ಇಟ್ಟಿರುವ ನೀರಿನ ತಟ್ಟೆಗಳಲ್ಲಿ ಬೆಳಗ್ಗೆ ನೀರು ತುಂಬಿಸಿದರೂ ಸಂಜೆ ಖಾಲಿಯಾಗುತ್ತಿತ್ತು. ಅಷ್ಟೊಂದು ಬಿಸಿಲಿನ ತಾಪ. ಎರಡು ದಿನ ನೀರಿಲ್ಲದಿದ್ದರೆ ಪ್ರಾಣಿ, ಪಕ್ಷಿ, ಚಿಟ್ಟೆ, ದುಂಬಿ ಎಲ್ಲವೂ ಒಣಗಿ ಸಾಯುವುದು ಖಂಡಿತ ಅನ್ನೋ ಪರಿಸ್ಥಿತಿ. ಪುಣ್ಯಕ್ಕೆ ಮನೆ ಹತ್ತಿರದ ಗುರುತಿನವರು ಪ್ರತಿ ನಾಲ್ಕು ದಿನಗಳಿಗೊಮ್ಮೆ ಬಂದು ಅಂಗಳಕ್ಕೆ ನೀರುಣಿಸುವುದಾಗಿ ಭರವಸೆ ಕೊಟ್ಟರು. ಹಾಗಾಗಿ ಕ್ಯಾಂಪಿಂಗಿನಿಂದ ಹಿಂದಿರುಗಿದಾಗ ಹಸಿರಿನ್ನೂ ಬದುಕಿತ್ತು. ಅದನ್ನು ನೋಡಿ ನಮ್ಮಗಳ ಮುಖವರಳಿತ್ತು.

ನಾಲ್ಕಾರು ಹುರಳಿಕಾಯಿ, ಎರಡು ಸೌತೆಕಾಯಿ, ಚೆನ್ನಾಗಿ ಚಿಗುರಿದ್ದ ಕಲ್ಲಂಗಡಿ ಬಳ್ಳಿ, ಹಾಗಲಕಾಯಿ ಬಳ್ಳಿ, ಪಾಲಾಕು, ಮೆಣಸಿನಕಾಯಿ ಗಿಡಗಳನ್ನ ನೋಡಿ ಖುಷಿಯಾಯ್ತು. ನಿಂಬೆಕಾಯಿ ಮರದ ಒಡಲ ತುಂಬಾ ಚಿಗುರು, ಹೂವು ಮತ್ತು ಎಳೆಕಾಯಿಗಳು ತುಂಬಿ ದೃಷ್ಟಿ ತಾಕುವಂತಿತ್ತು.

ಜನವರಿಯಲ್ಲಿ ಆಗಾಗ ಮಳೆ ಬೀಳಲು ಶುರುವಾದಾಗ ಇದ್ದಕ್ಕಿದ್ದಂತೆ ನಳನಳಿಸುತ್ತಿದ್ದ ತರಕಾರಿ ಗಿಡಗಳಿಗೆ ಇರುವೆಗಳು ಹತ್ತಿ, ನಾನಾ ರೀತಿಯ ಹುಳುಗಳು ಕಾಣತೊಡಗಿದವು. ನವಿಲುಕೋಸಿನ ಎಲೆಗಳಿಗೆ ರಾತ್ರೋರಾತ್ರಿ ತೂತುಬೀಳುತ್ತಿತ್ತು. ಗರಬಡಿದಂತಾಗಿತ್ತು. ಅದ್ಯಾವುದನ್ನೂ ಸಾಯಿಸಿಬಿಡಲು ಮನಸ್ಸಿಲ್ಲ. ರಾಸಾಯನಿಕಗಳನ್ನು ಉಪಯೋಗಿಸುವುದಿಲ್ಲ. ಇರುವೆ ನಮ್ಮ ಸ್ನೇಹಿ. ಹುಳುಗಳಿಗೆ ನಮ್ಮಷ್ಟೇ ಬದುಕುವ ಹಕ್ಕಿದೆ. ಆದರೆ ತರಕಾರಿ ಗಿಡಗಳೂ ಕೂಡ ಅಷ್ಟೇ ಮುಖ್ಯವಲ್ಲವೇ. ಹೊಸ ಚಿಂತೆ ಕಾಲಿಟ್ಟಿತ್ತು. ಅಷ್ಟರಲ್ಲಿ ನಮ್ಮ ಸರ್ಟಿಫೈಡ್ ಆರ್ಗ್ಯಾನಿಕ್ ಮಾವಿನ ಗಿಡಕ್ಕೂ ಕೂಡ ಇರುವೆ ಹತ್ತಿದೆ ಅನ್ನೋ ಸುದ್ದಿಯನ್ನ ಜೀಬಿ ಸಾದರಪಡಿಸಿದರು. ಆಗ ನಿಜಕ್ಕೂ ಹಣೆಯ ಮೇಲೆ ಗೆರೆಗಳು ಮೂಡಿದವು.

ಕಳೆದ ನವೆಂಬರಿನಲ್ಲೆ ನಮ್ಮ ನಾಲ್ಕನೇ ಬಾಳೆಗಿಡ ಬೆಳೆಸುವ ಪ್ರಯತ್ನ ಅಕ್ಷರಶಃ ನೆಲಕಚ್ಚಿತ್ತು. ನೆಲದ ಮೇಲ್ಗಡೆ ಬಾಳೆಕಂದಿನ ಮುಖ ಸಂಪೂರ್ಣ ನಂದಿದಾಗ ನೆಲವನ್ನಗೆದು ಅದರ ಬುಡ ಪರೀಕ್ಷಿಸಿದಾಗ ಅದರೊಳಗೆ ಒಂದಷ್ಟು ಇರುವೆಗಳು ಕಂಡಿದ್ದವು. ನಮ್ಮ ಬಾಳೆಗಿಡವನ್ನು ಕೊಂದ ಕೊಲೆಗಾರ ಇರುವೆಗಳು ನೀವು, ಯಾವುದಾದರೂ ಪಾರ್ಕಿಗೆ ಹೋಗಿ ಗೂಡುಕಟ್ಟಿಕೊಂಡು ಬದುಕಬಾರದೇ, ನಮ್ಮ ಅಂಗಳವೇ ಯಾಕಾಗಬೇಕು, ಎಂದು ಅವಕ್ಕೆ ಬೈದು ಸುಮ್ಮನಾದೆವು. ಈಗ ಮಾವಿನ ಗಿಡಕ್ಕೂ ಇರುವೆ ಹತ್ತಿದೆ ಅಂದರೆ ಅವನ್ನು ಓಡಿಸುವುದು ಹೇಗೆ, ಏನಾದರೂ ಪರಿಸರ-ಸ್ನೇಹಿ ಉತ್ತರವನ್ನ ಹುಡುಕಬೇಕು ಅಂದೆನಿಸಿತು. ಆಗ ಹೊಳೆದಿದ್ದು ಸಾಮಾಜಿಕ ಜಾಲತಾಣಗಳು.

ಅದ್ಯಾಕೊ ಈ ಬಾರಿ ತಳಮಳ ಜಾಸ್ತಿಯಾಗಿತ್ತು. ಸುಮ್ಮನೆ ಕಡ್ಡಿಗೀರಿದರೆ ಸಾಕು ಪಟ್ಟನೆ ಬೆಂಕಿ ಹತ್ತಿಕೊಳ್ಳುತ್ತದೇನೋ ಅನ್ನುವಂಥಾ ಸುಡುಸುಡು ಬಿಸಿಲು, ಮಳೆನೀರು ಕೊಯ್ಲಿನ ಟ್ಯಾಂಕ್ ಮುಕ್ಕಾಲು ಖಾಲಿಯಾಗಿತ್ತು, ಅಲ್ಲಲ್ಲಿ ಇಟ್ಟಿರುವ ನೀರಿನ ತಟ್ಟೆಗಳಲ್ಲಿ ಬೆಳಗ್ಗೆ ನೀರು ತುಂಬಿಸಿದರೂ ಸಂಜೆ ಖಾಲಿಯಾಗುತ್ತಿತ್ತು. ಅಷ್ಟೊಂದು ಬಿಸಿಲಿನ ತಾಪ. ಎರಡು ದಿನ ನೀರಿಲ್ಲದಿದ್ದರೆ ಪ್ರಾಣಿ, ಪಕ್ಷಿ, ಚಿಟ್ಟೆ, ದುಂಬಿ ಎಲ್ಲವೂ ಒಣಗಿ ಸಾಯುವುದು ಖಂಡಿತ ಅನ್ನೋ ಪರಿಸ್ಥಿತಿ.

ಅಲ್ಲಿಯವರೆಗೂ ನಾನು ಯಾವುದೇ ಗಾರ್ಡನಿಂಗ್ ಗುಂಪಿಗೆ ಸೇರಿರಲಿಲ್ಲ. ತೀರಾ ಅಗತ್ಯವೆನಿಸಿ ಜಾಲತಾಣವನ್ನು ಹುಡುಕಿದರೆ ಒಂದಲ್ಲ, ನಾಲ್ಕಾರು ಗುಂಪುಗಳು ನನ್ನನ್ನು ಸ್ವಾಗತಿಸಿದವು. ತೋಟಗಾರಿಕೆ ಗುಂಪು, ಬರಿಯ ತರಕಾರಿ ಮತ್ತು ಹಣ್ಣು ಬೆಳೆಯುವವರ ಗುಂಪು, ಸಾವಯವ ಬೆಳೆಗಾರರ ಗುಂಪು, ಗಾರ್ಡನಿಂಗ್ ಆಸ್ಟ್ರೇಲಿಯಾ ಎಂಬ ರಾಷ್ಟ್ರೀಯಮಟ್ಟದ ಗುಂಪು, ಮತ್ತು ಗೊಬ್ಬರ ಹುಳುಗಳನ್ನು ಪ್ರೀತಿಸಿ ಅವನ್ನು ಬೆಳೆಸುವ ಗುಂಪು. ಸದ್ಯ, ಇನ್ನೂ ಜನವರಿ ತಿಂಗಳಾದ್ದರಿಂದ ಇನ್ನೂ ರಜಾ ಸಮಯವಿತ್ತು. ಸಾಕಷ್ಟು ಪುರುಸೊತ್ತಿತ್ತು. ನಮ್ಮ ಬಡಾವಣೆಗೆ ಹತ್ತಿರವಿರುವ ಒಂದು gardeners ಗುಂಪನ್ನು ಸೇರಿ, ಅವರಲ್ಲಿ ಇಬ್ಬರನ್ನು ಪರಿಚಯ ಮಾಡಿಕೊಂಡು ಅವರ ಮನೆಗೆ ಭೇಟಿಕೊಟ್ಟು ಏನು ಎಂತು ವಿಚಾರಿಸಿದೆ. ನೀವು ನಂಬುತ್ತೀರೋ ಬಿಡುತ್ತೀರೋ ಗೊತ್ತಿಲ್ಲ ಅವರು ಹೇಳಿದ ವಿಷಯಗಳನ್ನು ಕೇಳಿ ನಾನಂತೂ ಬೆಕ್ಕಸಬೆರಗಾಗಿ ಹೋದೆ.

ಆ ಇಬ್ಬರಲ್ಲಿ ಒಬ್ಬಾಕೆ ಇಂಗ್ಲೆಂಡಿನಿಂದ ವಲಸೆ ಬಂದು ಒಂದು ದಶಕದಿಂದ ಇಲ್ಲಿರುವಾಕೆ. ಇನ್ನೊಬ್ಬಾಕೆ ಪಕ್ಕಾ ಆಸ್ಟ್ರೇಲಿಯನ್. ಇಬ್ಬರ ದೃಷ್ಟಿಕೋನಗಳಲ್ಲಿ ಭಿನ್ನತೆಗಳೂ, ಒಪ್ಪಿಕೆಯೂ ಇತ್ತು. ಇಂಗ್ಲೆಂಡಿನಿಂದ ಬಂದಾಕೆ ತನ್ನೊಡನೆ ತನ್ನ ತಂದೆತಾಯಿಯರ ತೋಟಗಾರಿಕೆ ಉತ್ಸಾಹವನ್ನೂ, ಒಂದಷ್ಟು ತರಬೇತಿಯನ್ನೂ ಪಡೆದು ತಂದಿದ್ದಳು. ಇಲ್ಲಿಗೆ ಬಂದ ಹೊಸತರಲ್ಲಿ ಕಡುಬಿಸಿಲಿನ ತಾಪಕ್ಕೆ ಕುಗ್ಗಿಹೋಗಿ ಗಾರ್ಡನಿಂಗ್ ಪರಿವೆಯನ್ನೇ ಬಿಟ್ಟು ಮದುವೆಯಾಗಿ, ಮಗುವನ್ನ ಹೆತ್ತು ಮೊದಲ ನಾಲ್ಕು ವರ್ಷ ಆರಾಮಾಗಿದ್ದಳಂತೆ. ನಂತರ ಧೃಡಮನಸ್ಸಿನಿಂದ ಗಾರ್ಡನಿಂಗ್ ಕೋರ್ಸ್ ಮಾಡಿ ತೋಟಗಾರಿಕೆಯನ್ನ ಕೈಗೊಂಡಿದ್ದಳು. ಆಕೆಯ ಮನೆಯಂಗಳದ ಕೈತೋಟದಲ್ಲಿದ್ದ ಗಿಡಮರಗಳು, ಸುಮಾರು ಹದಿನೈದು ಗೊಬ್ಬರ ಡಬ್ಬಗಳು, ಬಕೆಟ್ಟುಗಳು, ಮೂರು ಗೊಬ್ಬರ ಹುಳುಗಳ ಕೇಂದ್ರಗಳು, ಒಂದು ದೊಡ್ಡ ಇಡೀ ಬಾತ್ ಟಬ್ಬನ್ನು ಗೊಬ್ಬರ ಹುಳು ಸಾಕಾಣಿಕೆ ಕೇಂದ್ರವನ್ನಾಗಿರಿಸಿದ ಪ್ರಯತ್ನ, ಮೂಲೆಯಲ್ಲಿದ್ದ ಕೋಳಿಸಾಕಾಣಿಕೆ ಕೇಂದ್ರ ಎಲ್ಲವನ್ನೂ ನೋಡಿ ಅಬ್ಬಾಬ್ಬಾ ಎಂದೆ. ನನ್ನನ್ನು ಬೆರಗಾಗಿಸಿದ ವಿಷಯವೆಂದರೆ ಆಕೆಯ ಈ ಎಲ್ಲಾ ಪ್ರಯತ್ನಗಳಲ್ಲಿ ತೊಂಭತ್ತು ಭಾಗಕ್ಕೆ ಯಾವುದೇ ಹಣ ಹೂಡಿಕೆಯಿಲ್ಲದಿದ್ದದ್ದು. ತನ್ನಂತೆ ಆಸಕ್ತಿ ಹೊಂದಿದ್ದ ಇತರ ತೋಟಗಾರರಿಂದ ಪರಸ್ಪರ ಪಡೆದಿದ್ದು, ಕೊಟ್ಟದ್ದು, ಹಂಚಿಕೊಂಡದ್ದು, ಮತ್ತು ಅವನ್ನು ಉತ್ತೇಜಿಸಿದ್ದು…

ಈ ಸಮಾನಾಸಕ್ತ ತೋಟಗಾರರು ಇತರರು ಬೇಡವೆಂದು ಮನೆಮುಂದೆ ಬಿಸಾಡಿದ್ದ ವಸ್ತುಗಳನ್ನು ಸಂಗ್ರಹಿಸುವುದು, ಗುಜರಿ ಮಾರ್ಕೆಟ್ಟುಗಳಿಗೆ ಹೋಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ತೋಟಗಾರಿಕೆ ಸಾಮಗ್ರಿಗಳನ್ನು ತಮಗೆ ಮತ್ತು ಇತರರಿಗೆ ಕೊಳ್ಳುವುದು ಮಾಡುತ್ತಾರಂತೆ. ಆಕೆಯ ಬಾತ್ ಟಬ್ ಗೊಬ್ಬರ ಹುಳು ಸಾಕಾಣಿಕೆ ಕೇಂದ್ರ ಸಂಪೂರ್ಣವಾದ cost free ಪ್ರಯತ್ನ.

ಮಗನನ್ನ ಫುಟ್ಬಾಲ್ ಕ್ಲಾಸಿಗೆ ಕರೆದೊಯ್ಯುವ ಒಂದು ಶನಿವಾರ ಆಕೆಗೆ ರಸ್ತೆಬದಿಯಿದ್ದ ಬಾತ್ ಟಬ್ ಕಾಣಿಸಿತಂತೆ. ಗಂಡ, ಮಗನನ್ನು ಕ್ಲಾಸಿಗೆ ಬಿಟ್ಟು ತಾನು ವಾಪಸ್ ಬಂದು ಬಾತ್ ಟಬ್ ಬಿಸಾಡಿದ್ದ ಮನೆಯವರನ್ನ ವಿಚಾರಿಸಿ, ಅವರಲ್ಲೇ ವಿನಂತಿಸಿಕೊಂಡು ಅವರ ಟ್ರಕ್ಕಿನಲ್ಲೇ ಆ ಟಬ್ಬನ್ನು ಮನೆಗೆ ಸಾಗಿಸಿ ಮುಂದೆ ಅದನ್ನು worm farming ಕೇಂದ್ರವನ್ನಾಗಿ ಪರಿವರ್ತಿಸಿದಳಂತೆ. ಇನ್ನೂ ಹಲವಾರು ಸಣ್ಣಪುಟ್ಟ worm farm ಗಳನ್ನ ಪೋಷಿಸುತ್ತಿರುವ ಈಕೆ ಈಗ ತನ್ನ ಬಿಡುವಿನ ಸಮಯದಲ್ಲಿ worm farming ವಿಷಯದಲ್ಲಿ ಆಸಕ್ತಿಯಿರುವವರಿಗೆ ವರ್ಕ್ ಶಾಪ್ ನಡೆಸುತ್ತಾಳೆ. ಈಕೆ ಒಂದು ಶನಿವಾರ ನಮ್ಮ ಮನೆಗೂ ಬಂದು ತನ್ನ ಸಲಹೆಸೂಚನೆಗಳನ್ನು ಕೊಟ್ಟು ಬಾಳೆಗಿಡ ಯಾತಕ್ಕೆ ಸತ್ತುಹೋಯಿತು ಎಂದು ವಿವರಿಸಿ, ಇರುವೆ ಕಾಟಕ್ಕೆ ಆಕೆ ತಾನೇ ಮನೆಯಲ್ಲಿ ತಯಾರಿಸಿ ಉಪಯೋಗಿಸುವ ಎಣ್ಣೆಯ ಗುಟ್ಟನ್ನು ಬಿಟ್ಟುಕೊಟ್ಟು ನಮ್ಮನ್ನು ಕಾಪಾಡಿದ್ದಾಳೆ. ಆಕೆಯಿಂದ ಪಡೆದ ಗೊಬ್ಬರ ಹುಳುಗಳು ನಮ್ಮ ಮನೆಯಂಗಳದ ಮಣ್ಣಿನಲ್ಲಿ ಈಗ ಮರಿಮಾಡುತ್ತಿವೆ. ಆಕೆಯ ಉದಾರತೆಯನ್ನು ಗೌರವಿಸಿ ನಾನು ನಮ್ಮ ಕ್ಯಾಂಪಿಂಗ್ ಪ್ರದೇಶದಿಂದ ಕೊಂಡುತಂದಿದ್ದ ಅತ್ಯುತ್ತಮ ತಳಿ ಸಾವಯವ ಅರಿಶಿನ, ನಾವು ಬೆಳೆಸುತ್ತಿರುವ ಕನಕಾಂಬರ, ದೊಡ್ಡಪತ್ರೆ, ನಾಟಿ ಗೊಂಗೊರ ಸೊಪ್ಪಿನ ಗಿಡ, ಮತ್ತು ನಾನು ಮನೆಯಲ್ಲೇ ಮಾಡಿದ್ದ ನಿಂಬೆ ಉಪ್ಪಿನಕಾಯಿಯನ್ನು ಕೊಟ್ಟಿದ್ದೀನಿ.

ಆಕೆ ಸೂಚಿಸಿದ ಕೆಲ ಸಾಮಾಜಿಕ ಜಾಲತಾಣಗಳನ್ನು ಹೊಕ್ಕು ನೋಡಿದರೆ ಆಸ್ಟ್ರೇಲಿಯಾ ಪೂರ್ತಿ ಸಾವಿರಾರು ಜನ ಹಲವಾರು ಸಮುದಾಯ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವಲ್ಲಿ ನನಗಿಷ್ಟವಾದದ್ದು ಕನಿಷ್ಟ ತ್ಯಾಜ್ಯ ಪರಿಪಾಲನೆ, ಕನಿಷ್ಟ ವಸ್ತು ಬಳಕೆ, ನಮಗೆ ಬೇಡವಾದದ್ದನ್ನ ಅಥವಾ ಹೆಚ್ಚಿರುವುದನ್ನ ‘ಇದು ನಿಮಗೆ ಬೇಕೇ’ ಎಂದು ‘buy nothing’ ಮತ್ತು ‘free cycle’ ಎಂಬ ಪ್ರತಿ ಕೆಲ ಬಡಾವಣೆಗಳಲ್ಲೂ ಇರುವ ಸಮುದಾಯ ಗುಂಪಿನಲ್ಲಿ ಪ್ರಕಟಿಸುವುದು, ತೋಟಗಾರಿಕೆಯ ಬಗ್ಗೆ ನಮ್ಮಲ್ಲಿ ಪ್ರಶ್ನೆಗಳು ಎದ್ದರೆ ಅವನ್ನು ಆಯಾ ಗುಂಪಿಗೆ ಹಾಕಿದರೆ ಅದೇ ದಿನ ನಮಗೆ ತಕ್ಕ ಉತ್ತರಗಳು ಸಿಗುವುದು, ಗೊಬ್ಬರ ಹುಳುಗಳ ಬಗ್ಗೆ ಪ್ರತಿ ಸಣ್ಣ ಮಾಹಿತಿ ಕೂಡ ಸುಲಭವಾಗಿ ಫೋಟೋಗಳ ಸಮೇತ ಲಭಿಸುವುದು, ಮಳೆನೀರು ಕೊಯ್ಲು ಮಾಡುವ ಹೊಸ ಹೊಸ ಪ್ರಯೋಗಗಳು, ಮಣ್ಣು ಸಂರಕ್ಷಣೆ, ಭೂಮಿಯ ಮೇಲೆ ಅಗೆತವಿಲ್ಲದೆಯೇ ತರಕಾರಿ ಹಣ್ಣು ಬೆಳೆಯುವುದು. ಇಷ್ಟಲ್ಲದೆ, ನಮಗೆ ಸರಿಯೆನಿಸಿದರೆ, ಈ ತೋಟಗಾರಿಕೆ ಸಂಬಂಧಿತ ಸಮುದಾಯಗಳಲ್ಲಿ ಯಾರಾದರೂ ಒಬ್ಬರು ನಮ್ಮಲ್ಲಿಗೇ ಬಂದು ನಮಗೆ ಕಬ್ಬಿಣದ ಕಡಲೆ ಎನಿಸಿದ ಸಮಸ್ಯೆಯನ್ನು ಪರೀಕ್ಷಿಸಿ ನಮ್ಮ ಪ್ರಶ್ನೆಗಳನ್ನು ಉತ್ತರಿಸುತ್ತಾರೆ. ಅದಕ್ಕೆ ಯಾವುದೇ ಫೀಸ್ ಇಲ್ಲ!

ಪ್ರತಿ ಸಮಾಜದಲ್ಲೂ ಪ್ರತಿ ಸಮುದಾಯದಲ್ಲೂ ಪ್ರತಿ ವ್ಯಕ್ತಿಯಲ್ಲೂ ಇರುವ ಭಿನ್ನತೆಗಳನ್ನು ನಾವು ಬಹುಮುಖ್ಯವೆಂದು ಗಣನೆಗೆ ತಂದುಕೊಳ್ಳಬೇಕು ಎಂದು ನನ್ನ ಸೈಕಾಲಜಿ ವಿದ್ಯಾರ್ಥಿಗಳಿಗೆ ಹೇಳುತ್ತಿರುತ್ತೀನಿ. ಇತ್ತೀಚೆಗೆ ತಾನೆ ನಾನು ಹೊಸದಾಗಿ ಸೇರಿಕೊಂಡ ಈ ತೋಟಗಾರಿಕೆ ಗುಂಪುಗಳು ತಳಮಟ್ಟದಲ್ಲಾಗುತ್ತಿರುವ ಅತ್ಯಂತ ಗಮನಾರ್ಹ ಹಸಿರು ವಲಯ ಸೃಷ್ಟಿ ಕೆಲಸದಲ್ಲಿರುವ ಭಿನ್ನತೆಗಳನ್ನು ಪರಿಚಯಿಸಿ ನನ್ನನ್ನು ಬೆಳೆಸುತ್ತಿವೆ. ಒಂದೆಡೆ ಆಸ್ಟ್ರೇಲಿಯಾ ಸರಕಾರ ಮತ್ತಷ್ಟು ಗಣಿಗಾರಿಕೆಯನ್ನು ಪ್ರೋತ್ಸಾಹಿಸುತ್ತಿದ್ದರೆ ಇನ್ನೊಂದೆಡೆ ಸಾಮಾನ್ಯ ಜನರು ತಮ್ಮಗಳ ಮನೆಯಂಗಳದಲ್ಲೇ ಹಸಿರು ಕ್ರಾಂತಿ ಮಾಡುತ್ತಿದ್ದಾರೆ.