ಪ್ರತಿ ಸಣ್ಣ ವಿಷಯವನ್ನು ದೊಡ್ಡದಾಗಿ ಚಿಂತಿಸುತ್ತಾ, ಹಳಹಳಿಕೆಯನ್ನೇ  ವ್ಯಸನವಾಗಿಸಿಕೊಂಡವರು, ಇರುವಷ್ಟು ಕಾಲ ತೃಪ್ತಿಯಿಂದ ಬದುಕುವವರು,ಸಾಧಕರು, ಸಾಮಾನ್ಯರು, ಪೀಡಕರು, ಪುಣ್ಯಕೋಟಿಯಂತಹವರು ಹೀಗೆ ತರಹೇವಾರಿ ಜನರು. ಒಬ್ಬೊಬ್ಬ ವ್ಯಕ್ತಿಗೆ ಒಂದೊಂದು ರೀತಿಯ ಸಮಸ್ಯೆಗಳಿದ್ದೇ ಇರುತ್ತವೆ. ಆದರೆ  ಹಳ್ಳಿಯವರೆಲ್ಲ ಮುಗ್ಧರು, ಸಿಟಿಯವರೆಲ್ಲ ಸ್ಥಿತಿವಂತರು, ಓದಿದವರು ಪೆದ್ದರು, ಕಡಿಮೆ ಓದಿದವರು ವ್ಯವಹಾರ ಚತುರರು, ಮಕ್ಕಳೆಲ್ಲಾ ದೇವರಂತಹವರು…. ಈ ರೀತಿಯ ಜನಪ್ರಿಯ ಕುರುಡು ನಂಬಿಕೆಗಳ ಪಟ್ಟಿಯಲ್ಲಿ ಹಿರಿಯರೆಲ್ಲ ಒಂದೇ ಎಂಬುದು ಕೂಡ ಸೇರಿದೆ ಅಲ್ಲವೆ. ನಾಗಶ್ರೀ ಅಜಯ್‌ ಬರೆಯುವ ಲೋಕ ಏಕಾಂತ ಅಂಕಣದಲ್ಲಿ ಹೊಸ ಬರಹ ಇಂದಿನ ಓದಿಗೆ.

‘ವಯಸ್ಸಾದ ಕಾಲಕ್ಕೆ  ಜೊತೆಯೊಂದು ಇರದಿದ್ದರೆ ಈ ಜೀವನ ಸಾಕಪ್ಪಾ ಅನ್ಸತ್ತೆ. ಇದ್ದು ಏನು ಮಾಡಬೇಕು ಅನ್ನಿಸಿದ ಹಾಗೆಯೇ ಸಾವಿನ ಭಯ ಕೂಡ ಕಾಡಿಸಿ ಹಿಂಸೆ ಮಾಡತ್ತೆ’ ಎಂದ ಎಪ್ಪತ್ತರ ಗಂಡಸಿನ ಮಾತಿಗೆ, ಸುಮಾರು ಅದೇ ವಯಸ್ಸಿನ ಹೆಂಗಸು ಸಮಾಧಾನ ಹೇಳುತ್ತಿದ್ದರು.
‘ಹೆಂಡತಿಯ ಜೊತೆ ನಲವತ್ತೈದು ವರ್ಷ ಸಂಸಾರ ಮಾಡಿದ ನೀವು ಹೀಗೆ ಆಡಿದರೆ, ಮದುವೆಯಾಗಿ ನಾಲ್ಕು ವರ್ಷಕ್ಕೆ ಗಂಡನನ್ನು ಕಳೆದುಕೊಂಡು, ಮಕ್ಕಳಿಲ್ಲ ಮರಿಯಿಲ್ಲ ಗಂಡು ದಿಕ್ಕಿಲ್ಲ ಅಂತ ಆಡಿಕೊಳ್ಳುವ ಜನರ ಮಧ್ಯೆ ಐವತ್ತು ವರ್ಷದಿಂದ ಬಾಳುವೆ ನಡೆಸುತ್ತಿರುವ ನಾನು ಅಥವಾ ನಮ್ಮಂತಹವರು ಹೇಗಿರಬೇಕು? ಆದರೆ, ಬಂದಿದ್ದೆಲ್ಲ ಬರಲಿ. ಗೋವಿಂದನ ದಯೆ ಇರಲಿ ಅಂತ ದೇವರು, ಅಧ್ಯಾತ್ಮ, ಯಾತ್ರೆ, ಪುರಾಣ, ಪ್ರವಚನದಲ್ಲೇ ಮನಸ್ಸಿನ ನೆಮ್ಮದಿ ಹುಡುಕಿಕೊಂಡಿದ್ದೇನೆ. ಗೋಳಾಡಿದರೆ ಹೋದವರು ಹಿಂತಿರುಗಿ ಬರುತ್ತಾರೆಯೇ? ನಾವು ಇರುವಷ್ಟು ದಿನ, ಈ ಪ್ರಪಂಚಕ್ಕೆ ಹೊರೆಯಾಗದಂತೆ, ನಮಗೂ ಕಷ್ಟವಾಗದಂತೆ ಬದುಕೋದೇ ಜಾಣತನ’
ಈ ಮಾತಿಗೂ ಅರ್ಧಗಂಟೆ ಮುಂಚೆಯಿಂದ, ಅಗಲಿದ ಹೆಂಡತಿಯ ಗುಣಗಾನ, ಈಗಿನ ಮಕ್ಕಳೊಂದಿಗೆ ಹೊಂದಿಕೊಳ್ಳಲಾಗದ ಮನಃಸ್ಥಿತಿ, ಲೌಕಿಕ ಸಾಕೆನಿಸದ, ಹಾಗೆಂದು ಸಮಾಧಾನವೂ ನೀಡದ, ಅಧ್ಯಾತ್ಮ ರುಚಿಸದ ಅತಂತ್ರ ಸ್ಥಿತಿಯ ಬಗ್ಗೆ ಕೇಳಿದ ಮೇಲೆ ಆ ಹೆಂಗಸು ಹೀಗೆ ಮಾತನಾಡಿ ಹೊರಟರು. ಆ ಹಿರಿಯರಿಗೆ ಸಮಾಧಾನವೆನಿಸಿದ ಹಾಗೆ ತೋರಲಿಲ್ಲ.
‘ಇಷ್ಟು ವರ್ಷ ಇಲ್ಲದ ಅಧ್ಯಾತ್ಮದ ಮೇಲಿನ ಆಸಕ್ತಿ ಈಗ ಬಾ ಅಂದ್ರೆ ಎಲ್ಲಿ ಬರಬೇಕು? ದೇವರು, ಪೂಜೆ, ವ್ರತ, ನೇಮ ಇವೆಲ್ಲ ಎಷ್ಟೋ ಅಷ್ಟಿದ್ದರೆ ಸಾಕು. ದಿನಪೂರ್ತಿ ಅದೇ ಮಾಡಿಕೊಂಡು ಕೂರುವುದು ನನಗಾಗದ ಮಾತು. ಇಲ್ಲಿ ಸಾಕೆನಿಸಿದರೆ ಅಲ್ಲಿ ಹೋಗೋದು ಸುಲಭವೆ? ಲೌಕಿಕ ಕಟ್ಟಿಹಾಕಿದ ಮೇಲೆ , ಬಿಡಿಸಿಕೊಳ್ಳುವ ಮನಸ್ಸು ಎಲ್ಲರಿಗೂ ಬರಬೇಕೆಂದಿಲ್ಲವಲ್ಲ….’ ಅವರು ಮತ್ತೊಬ್ಬರೊಂದಿಗೆ ಮಾತು ತೆಗೆದರು.
‘ನಾವು ಇರುವಷ್ಟು ದಿನ, ಈ ಪ್ರಪಂಚಕ್ಕೆ ಹೊರೆಯಾಗದಂತೆ, ನಮಗೂ ಕಷ್ಟವಾಗದಂತೆ ಬದುಕೋದೇ ಜಾಣತನ’
ಮಾತನಾಡಿದರೆ ಪರಿಹಾರವಾಗದ ಸಮಸ್ಯೆಯೇ ಇಲ್ಲ ಎನ್ನುತ್ತಾರಲ್ಲ. ಆದರೆ ಇದು ಮಾತನಾಡಿ ಪರಿಹರಿಸುವ ಸಮಸ್ಯೆಯಂತೆ ತೋರಲಿಲ್ಲ. ಎಲ್ಲರೂ ಅವರವರ ಮೂಗಿನ ನೇರಕ್ಕೆ ಪರಿಹಾರ ಸೂಚಿಸುತ್ತಾರೆ. ಇಂತಹ ಸನ್ನಿವೇಶದಲ್ಲಿ ಅವರ ಇಷ್ಟಕಷ್ಟಗಳಿಗೆ ಅನುಗುಣವಾಗಿ ಅವರೇ ಒಂದು ಪರಿಹಾರಮಾರ್ಗ ಹುಡುಕುವುದೇ ಸರಿ.
ಅರವತ್ತಕ್ಕೆ ಮರಳಿ ಅರಳು ಎಂದರೂ, ನಿವೃತ್ತಿ ಜೀವನವನ್ನು ತುಂಬ ಶಿಸ್ತುಬದ್ಧವಾಗಿ, ಸೃಜನಾತ್ಮಕವಾಗಿ, ಸಾರ್ಥಕವಾಗಿ ರೂಪಿಸಿಕೊಳ್ಳುವ ಜನರಿದ್ದಾರೆ. ಅದುವರೆಗೂ ಕೆಲಸ, ಜವಾಬ್ದಾರಿ, ಮತ್ತಿತರ ಒತ್ತಡದ ಕಾರಣದಿಂದ ಕೈಗೆತ್ತಿಕೊಳ್ಳಲಾಗದ ಆಸಕ್ತಿ, ಹವ್ಯಾಸ, ಕೆಲಸಗಳಲ್ಲಿ ಅತ್ಯುತ್ಸಾಹದಿಂದ ತೊಡಗಿಕೊಳ್ಳುವವರು ಇದ್ದಂತೆಯೇ, ಒಂದೊಂದೇ ಬಂಧನವನ್ಬು ಕಳಚುತ್ತಾ ನಿರ್ಮೋಹಿಯಾಗಲು ಪ್ರಯತ್ನಿಸುವವರೂ ಇದ್ದಾರೆ. ಪ್ರತಿ ಸಣ್ಣ ವಿಷಯವನ್ನು ದೊಡ್ಡದಾಗಿ ಚಿಂತಿಸುತ್ತಾ, ಹಳಹಳಿಕೆಯನ್ನೇ  ವ್ಯಸನವಾಗಿಸಿಕೊಂಡವರು, ಇರುವಷ್ಟು ಕಾಲ ತೃಪ್ತಿಯಿಂದ ಬದುಕುವವರು,ಸಾಧಕರು, ಸಾಮಾನ್ಯರು, ಪೀಡಕರು, ಪುಣ್ಯಕೋಟಿಯಂತಹವರು ಹೀಗೆ ತರಹೇವಾರಿ ಜನರು.
ಹಳ್ಳಿಯವರೆಲ್ಲ ಮುಗ್ಧರು, ಸಿಟಿಯವರೆಲ್ಲ ಸ್ಥಿತಿವಂತರು, ಓದಿದವರು ಪೆದ್ದರು, ಕಡಿಮೆ ಓದಿದವರು ವ್ಯವಹಾರ ಚತುರರು, ಮಕ್ಕಳೆಲ್ಲಾ ದೇವರಂತಹವರು…. ಈ ರೀತಿಯ ಜನಪ್ರಿಯ ಕುರುಡು ನಂಬಿಕೆಗಳ ಪಟ್ಟಿಯಲ್ಲಿ ಹಿರಿಯರೆಲ್ಲ ಒಂದೇ ಎಂಬುದು ಕೂಡ ಸೇರಿದೆ.
ಎಲ್ಲರಿಗೂ ಸಿದ್ಧಮಾದರಿಯ ಬದುಕನ್ನು, ಪರಿಹಾರವನ್ನು ನೀಡಿ ಸಂತೈಸಲು ಹೇಗೆ ಸಾಧ್ಯ? ಮಕ್ಕಳನ್ನು ಹೋಲಿಸಿ ಹಿಂಸಿಸಬಾರೆದೆನ್ನುವ ನಾವೇ ವಯಸ್ಸಾದವರನ್ನು ಹೋಲಿಸಿ ಹಂಗಿಸುತ್ತೇವೆ. ಅವರಂತೇಕಿಲ್ಲ? ಇವರ ಹಾಗಿರಲು ಏನು ಕಷ್ಟ? ಎನ್ನುವ ಮಕ್ಕಳ ನಿರೀಕ್ಷೆಗಳ ಭಾರಕ್ಕೆ ಕುಸಿಯುವ ಹಿರಿಯರು ನಮ್ಮ ನಡುವಿದ್ದಾರೆ. ತಮ್ಮ ಮಿತಿಯಲ್ಲಿ ಎಲ್ಲ ರೀತಿಯ ಸೌಕರ್ಯ, ಸಂತೋಷ, ನೆಮ್ಮದಿಯನ್ನು ಕಲ್ಪಿಸಲು ಪ್ರಯತ್ನಿಸುವ ಮಕ್ಕಳೂ ಇದ್ದಾರೆ. ಆದರೆ ಪರಿಸ್ಥಿತಿಯನ್ನು ಒಪ್ಪಿಕೊಳ್ಳದೆ, ಪರಿಹಾರವನ್ನೂ ಹುಡುಕದೆ, ಸಮಸ್ಯೆಯನ್ನೇ ವಿಜೃಂಭಿಸಿ ಬಣ್ಣಿಸುತ್ತ ಕೂರುವವರಿಗೆ ಲೌಕಿಕವಾಗಲಿ, ಅಧ್ಯಾತ್ಮವಾಗಲಿ ಅಂತಹ ವ್ಯತ್ಯಾಸ ತೋರುವುದಿಲ್ಲ. ಅಷ್ಟಕ್ಕೂ ಸಮಾಧಾನ, ಸಂತೃಪ್ತಿಯೆನ್ನುವುದು ಅಂತರಂಗದ ಸಮಾಚಾರ. ಏನಂತೀರಿ?