ದೀರ್ಘಾಯುಷ್ಯ ಬೇಕೆಂದು ಬಯಸುವುದು, ದೇವರನ್ನು ಬೇಡಿಕೊಳ್ಳುವುದು ಸುಲಭ. ಆದರೆ ನಿಜಕ್ಕೂ ದೀರ್ಘಾಯುಷ್ಯವನ್ನು ಸಮೃದ್ಧವಾಗಿ ಹೇಗೆ ಬಾಳುವುದು ಎಂಬ ಪ್ರಶ್ನೆಗೆ ಉತ್ತರವಾಗಿ ಇದ್ದವರು ಪ್ರೊ. ಜಿ. ವೆಂಕಟಸುಬ್ಬಯ್ಯ. 108 ವರ್ಷಗಳ ಸಮೃದ್ಧ ಬದುಕು ನಡೆಸಿ ಇಂದು(ಏಪ್ರಿಲ್ 19) ಬೆಳಿಗ್ಗೆ ಅವರು ಇಹಲೋಕ ಪಯಣ ಮುಗಿಸಿದರು. ನಿಘಂಟು ತಜ್ಞ, ಭಾಷಾ ತಜ್ಞ, ಸಂಶೋಧಕ ಎಂದೇ ಗುರುತಿಸಿಕೊಂಡ ಅವರು ಎರಡು ಶತಮಾನಗಳಲ್ಲಿ ತುಂಬು ಜೀವನ ಸಾಗಿಸಿದರು. ಅವರ ಪತ್ನಿಯೂ ಅಷ್ಟೇ ಜೀವನ ಪ್ರೀತಿಯ ಮಹಿಳೆ. ಅವರಿಬ್ಬರ ಸಂವಾದವೊಂದನ್ನು ಸುಂದರವಾಗಿ ಪ್ರಸ್ತುತಪಡಿಸಿದ್ದಾರೆ ಲೇಖಕಿ ವಿಭಾ.

ಎರಡು ಶತಮಾನಗಳಲ್ಲಿ ಬಾಳಿ ತುಂಬು ಜೀವನವನ್ನು ಕಂಡ ಪ್ರೊ. ಗಂಜಾಂ ವೆಂಕಟಸುಬ್ಬಯ್ಯ ಅವರ ದೀರ್ಘಾಯುಷ್ಯದ ಗುಟ್ಟೇನು ಎಂದು ಪ್ರಶ್ನಿಸಿದರೆ, ಅದು ಜೀವನ ಪ್ರೀತಿಯಲ್ಲದೆ ಮತ್ತೇನೂ ಅಲ್ಲ. ಭಾಷಾ ತಜ್ಞ, ಕನ್ನಡ ನಿಘಂಟು ತಜ್ಞರಾಗಿದ್ದರು. 14 ನಿಘಂಟುಗಳನ್ನು ಬರೆದರೂ, ಅವುಗಳಲ್ಲದೆ 70 ಪುಸ್ತಕಗಳನ್ನೂ ಬರೆದಿದ್ದಾರೆ. ಆದರೆ ಅವರು ನಿಘಂಟುಗಳ ಮೂಲಕ, ‘ಇಗೋ ಕನ್ನಡ’ ಎಂಬ ಅಂಕಣ ಮತ್ತು ಅದೇ ಶೀರ್ಷಿಕೆಯ ನಿಘಂಟಿನ ಮೂಲಕವೇ ಕನ್ನಡ ನಾಡಿನ ಜನಸಾಮಾನ್ಯರಿಗೂ, ವಿದ್ವಜ್ಜನರಿಗೂ ಪರಿಚಯವಾದವರು.ಬೆಂಗಳೂರಿನಲ್ಲಿ ನಡೆದ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ನ ಕನ್ನಡ-ಕನ್ನಡ ನಿಘಂಟುವಿನ ಪ್ರಧಾನ ಸಂಪಾದಕರಾಗಿ 20 ವರ್ಷಗಳ ಕಾಲ ದುಡಿದವರು.

ಅಂತಹ ಮಹಾನ್ ಸಾಧಕರ ಮನೆಗೆ ತೆರಳಿ ಮಾತನಾಡುವ ಅಪೂರ್ವ ಅವಕಾಶವೊಂದು ಸಿಕ್ಕಿತ್ತು. ಮಾತಿನ ನಡುವೆ ಬಹಳ ಸಾಮಾನ್ಯ ಪ್ರಶ್ನೆ ಎಂಬಂತೆ , “ನಿಮ್ಮ ಸಾಧನೆಯ ಗುಟ್ಟೇನು’ ಎಂದು ಕೇಳಿದೆ. ಆಗ ಅವರು ಮನಬಿಚ್ಚಿ ಮಾತನಾಡಿದ್ದು ತಮ್ಮ ಪತ್ನಿಯ ಬಗ್ಗೆ. ಪತ್ನಿಯೂ ಅಷ್ಟೇ ಮುಕ್ತವಾಗಿ ಪತಿಯ ಬಗ್ಗೆ ಮಾತನಾಡಿದರು. ಅವರ ಬಂಧು ಬಳಗದ ಪೈಕಿ, “ಗಂಡ ಹೆಂಡತಿ ಎಂದರೆ ಅವರ ಹಾಗೆ ಇರಬೇಕು ನೋಡು’’ ಎಂಬ ಮಾತುಗಳು ಆಗಾಗ ಕೇಳಿ ಬರುತ್ತಿದ್ದವು. ಅವರಿಬ್ಬರ ಮಾತುಗಳನ್ನು ಸ್ಮರಿಸಿಕೊಳ್ಳುವುದೆಂದರೆ ಪ್ರೇಮದೀಪದ ಬೆಳಕಿನಲ್ಲಿ ನುಡಿಮುತ್ತುಗಳ ಕೇಳಿಸಿಕೊಂಡಂತೆ.


‘ಕುಟುಂಬದವರು ನಮ್ಮಿಬ್ಬರನ್ನು ನೋಡಿ ಕಲಿಯಿರಿ’ ಎಂದು ಹೊಸ ದಂಪತಿಗಳಿಗೆ ಹೇಳುವುದಕ್ಕೆ ಕಾರಣವಿಲ್ಲದಿಲ್ಲ’ ಎಂದು ಮಾತು ಶುರು ಮಾಡಿದರು ಪ್ರೊ. ಜೀವಿ ಅವರ ಪತ್ನಿ ಲಕ್ಷ್ಮೀ ವೆಂಕಟಸುಬ್ಬಯ್ಯ. ‘ ಯಾಕೆಂದರೆ ನಾವಿಬ್ಬರೂ ಒಂದೋ ಎರಡೋ ಬಾರಿ ಜಗಳ ಮಾಡಿರಬಹುದಷ್ಟೇ. ಜಗಳವಾಡುವ ಪ್ರಶ್ನೆಯೇ ಬರಲಿಲ್ಲ. ನಾನು ಸಂಸಾರ ಹೂಡಿದ ಮೊದಲನಯೆ ದಿನದಿಂದಲೂ ಇವರ ಓದು ಬರಹಕ್ಕೆ ತೊಂದರೆಯಾಗದಿರಲೆಂದು ಪ್ರಯತ್ನಿಸುತ್ತಲೇ ಇದ್ದೇನೆ. ಮನೆ ತಾಪತ್ರಯಗಳನ್ನು ಹೇಳಿ ಇವರನ್ನು ಬೇಸರ ಪಡಿಸಕೂಡದೆಂದು ಸಾಕಷ್ಟು ಪ್ರಯತ್ನಪಟ್ಟಿದ್ದೇನೆ. ಇವರ ಸಹನೆ, ಸಂಯಮ, ಉದಾರ ಬುದ್ಧಿ ನನ್ನ ಮೇಲೂ ಸಾಕಷ್ಟು ಪ್ರಭಾವ ಬೀರಿವೆ. ಇಷ್ಟು ವರ್ಷಗಳಲ್ಲಿ ಜಗಳ ಆಡಿರುವುದು, ಒಬ್ಬರ ಮೇಲೊಬ್ಬರು ಕೋಪ ಮಾಡಿಕೊಂಡಿರುವುದು ಇಲ್ಲವೇ ಇಲ್ಲ ಎನ್ನಬಹುದೇನೋ. ಒಮ್ಮೆ ಮಾತ್ರ `ನನ್ನ ಜೊತೆಯಲ್ಲಿ ಅಂಗಡಿಗೆ ಬಂದು ಬಟ್ಟೆ ತೆಗೆಸಿಕೊಟ್ಟಿದ್ದೀರಾ’ ಎಂದು ಕೀಟಲೆ ಮಾಡಿದ್ದೆ. ಅದೂ ಮದುವೆಯಾದ 22 ವರ್ಷಗಳಾದ ಮೇಲೆ. ನನ್ನ ಎರಡನೇ ಮಗನ ಮದುವೆಯ ಸಂದರ್ಭದಲ್ಲಿ ಬಸವನಗುಡಿಯ ಬಟ್ಟೆ ಅಂಗಡಿಯೊಂದಕ್ಕೆ ನನ್ನ ಜೊತೆಯಲ್ಲಿ ಬಂದಿದ್ದರು. ಅದೇ ಮೊದಲ ಸಲ. ‘ಏನು ಬೇಕಾದ್ರೂ ತಗೊಳ್ಳಿ’ ಎಂದು ವ್ಯಾಪಾರ ಮುಗಿಯುವರೆಗೂ ಸಹನೆಯಿಂದ ಕಾದಿದ್ರು’ ಎಂದು ಹೇಳುವಾಗ ಅವರ ಮುಖದಲ್ಲಿ ಸಂತೃಪ್ತಿಯ ನಗು.

ಅಷ್ಟರಲ್ಲಿ ಮಧ್ಯೆ ಬಾಯಿ ಹಾಕಿದ ಪ್ರೊ. ಜೀವಿ, “ ಹಾಗೇನಿಲ್ಲಪ್ಪಾ, ಇವಳ ಸಹನೆಯೇ ನನ್ನ ಸಾಧನೆಗೆ ಪ್ರೇರಣೆ ನೀಡಿದೆ. ನನ್ನ ನಾಲ್ವರು ಮಕ್ಕಳ ಶಿಕ್ಷಣ, ಅವರಿಗೇನು ಬೇಕೆಂಬ ಎಲ್ಲ ಕಾಳಜಿಗಳನ್ನು ಅವಳೇ ನೋಡಿಕೊಂಡದ್ದರಿಂದಲ್ಲವೇ ನಾನು, ಹೊರಗೆ ಆರಾಮವಾಗಿ ಬರವಣಿಗೆ ಅಂತ ಓಡಾಡಿಕೊಂಡಿರುವುದು ಸಾಧ್ಯವಾಗಿದ್ದು’ ಎನ್ನುತ್ತ ಪತ್ನಿ ಕೊಟ್ಟ ಹೊಗಳಿಕೆಗೆ ಮತ್ತೆ ನಾಲ್ಕು ಹೊಗಳಿಕೆ ಸೇರಿಸಿ ಮರಳಿಸಿದರು.

ಆದರೆ ಅವರ ಈ ಮುದ್ದಣ – ಮನೋರಮಾ ಸಲ್ಲಾಪದಲ್ಲಿ ಒಂದು ವಿಷಯವಂತೂ ಸ್ಪಷ್ಟವಾಗಿ ಅರಿವಾಗುತ್ತಿತ್ತು. ಇಬ್ಬರೂ ಯಾವುದಕ್ಕೂ ದುರಾಸೆ ಪಟ್ಟವರಲ್ಲ. ಇದ್ದುದರಲ್ಲಿ ಹೇಗೆ ಚೆಂದಾಗಿ ಬಾಳಬೇಕು ಎಂಬ ಬಗ್ಗೆ ಯೋಚಿಸುತ್ತಿದ್ದರು. ಮುಖ್ಯವಾಗಿ ಪ್ರೊ. ಜೀವಿ ಅವರಲ್ಲೊಂದು ಗುಣವಿತ್ತು. ಏನೇ ತುರ್ತು ಕೆಲಸಗಳಿರಲಿ, ದಿನದಲ್ಲಿ ಒಂದೆರಡು ಗಂಟೆ ಪತ್ನಿಯ ಜೊತೆಗೆ ಮಾತನಾಡಲೇಬೇಕು ಎಂಬುದು ಅವರ ಕಡಕ್ ನಿಯಮ. “ಇವರದ್ದು ಅತ್ಯಂತ ಶಿಸ್ತಿನ ಬದುಕು. ಬೆಳಗ್ಗೆ 5 ಗಂಟೆಗೇ ಏಳುತ್ತಾರೆ. ಇವತ್ತಿಗೂ ಕಾಫಿ ಡಿಕಾಕ್ಷನ್ ಅವರೇ ಹಾಕಿಕೊಂಡು, ಅರ್ಧ ಲೋಟ ಕಾಫಿ ಕುಡಿದು ವಾಕಿಂಗ್ ಹೊರಡುತ್ತಾರೆ. 7.30ಕ್ಕೆ ಬರುತ್ತಾರೆ. ಮಧ್ಯಾಹ್ನ ನನ್ನ ಬಳಿ ಕುಳಿತು ಸಾಹಿತ್ಯ, ಸಂಸಾರದ ವಿಷಯಗಳು, ಹೀಗೆ ಎಲ್ಲವನ್ನೂ ಮಾತನಾಡುತ್ತಾರೆ. ಇದರಿಂದಲೇ ನಮ್ಮೆಲ್ಲ ದುಗುಡಗಳೂ ಬಗೆಹರಿದುಬಿಡುತ್ತದೆ’’ ಎಂಬ ಮಾತುಗಳಲ್ಲಿ ಹೊಸತಲೆಮಾರಿನ ದಂಪತಿಗಳಿಗೆ ಪರೋಕ್ಷ ಸಲಹೆಯೂ ಇದ್ದಂತಿತ್ತು.

ಆದರೆ ಬಾಳುವೆ ಸುಗಮವಾಗಿಯೇ ಎಲ್ಲಿ ಸಾಗುತ್ತದೆ. ಪ್ರೊ. ಜೀವಿ ಅವರೂ ಕೆಲಸ ಕಳೆದುಕೊಳ್ಳಬೇಕಾದ ಸಂದರ್ಭ ಎದುರಾಗಿತ್ತು. ಅವರ ದೀರ್ಘ ಬದುಕಿನಲ್ಲಿ ಅನೇಕ ಆರ್ಥಿಕ ಹಿಂಜರಿತಗಳನ್ನು, ಮಹಾಯುದ್ಧಗಳನ್ನು ಅವರು ಕಂಡಿದ್ದಾರೆ. ಅವುಗಳ ಬೇಗೆಯ ಬಿಸಿ ಅವರ ಬಾಳನ್ನೂ ತಟ್ಟಿದೆ. ಅದನ್ನು ಜೀವಿ ಹೃಸ್ವರೂಪದಲ್ಲಿ ಹೀಗೆ ಹೇಳುತ್ತಾರೆ:

‘ನಾನು ಮನೆಗೆ ಹಿರಿಯ ಮಗ. ನಮ್ಮದು ದೊಡ್ಡ ಸಂಸಾರ. ನನ್ನ ತಂದೆಗೆ ಏಳು ಮಂದಿ ಗಂಡುಮಕ್ಕಳು, ಇಬ್ಬರು ಹೆಣ್ಣುಮಕ್ಕಳು. ಜೊತೆಗೆ ಚಿಕ್ಕಪ್ಪ, ದೊಡ್ಡಪ್ಪಂದಿರೆಲ್ಲ ಇರುವ ತುಂಬು ಕುಟುಂಬ ನಮ್ಮದು. ಇಂಥ ದೊಡ್ಡ ಕುಟುಂಬಕ್ಕೆ ಸೊಸೆಯಾಗಿ ಬಂದಳು ನನ್ನ ಹೆಂಡತಿ. ಅವಳ ಊರು ಮಂಡ್ಯ, ನಮ್ಮದು ಮೂಲತಃ ಗಂಜಾಂ. ನಂತರ ಮೈಸೂರಿನಲ್ಲಿದ್ದೆವು. ಅವಳು ನನ್ನ ಸೋದರ ಮಾವನ ಮಗಳು. 1937 ಏಪ್ರಿಲ್ 30ರಂದು ನಮ್ಮ ಮದುವೆಯಾಯಿತು. ಆಗ ನನಗೆ 24 ವರ್ಷ. ಅವಳಿಗೆ 13ವರ್ಷ. ಆಗ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪಾಠಮಾಡ್ತಾ ಇದ್ದೆ. ಆದರೆ ಕಾರಣಾಂತರಗಳಿಂದ ನಾನು ಅಲ್ಲಿ ಕೆಲಸ ಬಿಟ್ಟು 1943ರಲ್ಲಿ ಬೆಂಗಳೂರಿಗೆ ಬರಬೇಕಾಯಿತು.

ಅದು ಎರಡನೇ ಮಹಾಯುದ್ಧದ ಸಮಯ. ಆಗ ಭಾರತದಲ್ಲಿ ಆರ್ಥಿಕ ಮುಗ್ಗಟ್ಟು. ಇರುವವರನ್ನೇ ಕೆಲಸದಿಂದ ತೆಗೆಯುತ್ತಿದ್ದರು. ಅಂಥ ಸಮಯದಲ್ಲಿ ನಾನು ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದೆ. ಮೈಸೂರಿನಲ್ಲಿ ಕಾಲೇಜು ಪ್ರಾಧ್ಯಾಪಕನಾಗಿದ್ದವನು ಬೆಂಗಳೂರು ಹೈಸ್ಕೂಲಿನಲ್ಲಿ ಮೇಷ್ಟ್ರಾದೆ. ನನಗೆ ನಲ್ವತ್ತು ರೂಪಾಯಿ ಸಂಬಳ. ಆಗಿನ ಕಾಲದಲ್ಲಿ ನಲ್ವತ್ತು ರೂಪಾಯಿನಲ್ಲಿ ಸಂಸಾರ ಮಾಡಬಹುದಿತ್ತು. ಮೈಸೂರಿನ ದೊಡ್ಡ ಸಂಸಾರದಿಂದ ಇಲ್ಲಿ ಸಣ್ಣ ಸಂಸಾರಕ್ಕೆ ಬಂದದ್ದೇ ನನ್ನ ಹೆಂಡತಿಗೆ ಸಿಕ್ಕ ರಿಲೀಫ್ ಎನ್ನಬಹುದು’ ಎನ್ನುತ್ತ ಒಂಚೂರು ನಕ್ಕರು. ಆ ಸಂದರ್ಭದಲ್ಲೇ ಅವರಿಗೆ ಇಬ್ಬರು ಮಕ್ಕಳು ಹುಟ್ಟಿದರು.

‘ಕುಟುಂಬದವರು ನಮ್ಮಿಬ್ಬರನ್ನು ನೋಡಿ ಕಲಿಯಿರಿ’ ಎಂದು ಹೊಸ ದಂಪತಿಗಳಿಗೆ ಹೇಳುವುದಕ್ಕೆ ಕಾರಣವಿಲ್ಲದಿಲ್ಲ’ ಎಂದು ಮಾತು ಶುರು ಮಾಡಿದರು ಪ್ರೊ. ಜೀವಿ ಅವರ ಪತ್ನಿ ಲಕ್ಷ್ಮೀ ವೆಂಕಟಸುಬ್ಬಯ್ಯ. ‘ ಯಾಕೆಂದರೆ ನಾವಿಬ್ಬರೂ ಒಂದೋ ಎರಡೋ ಬಾರಿ ಜಗಳ ಮಾಡಿರಬಹುದಷ್ಟೇ. ಜಗಳವಾಡುವ ಪ್ರಶ್ನೆಯೇ ಬರಲಿಲ್ಲ.

ಆದರೆ ಹಾಗೆ ಖುಷಿಯ ದಿನಗಳು ಬಹಳ ಬೇಗನೇ ಮುಗಿದು ಹೋಗುತ್ತವೆ. ತಮ್ಮಂದಿರು, ಭಾವಮೈದ ಎಲ್ಲರೂ ಬದುಕನ್ನು ಅರಸಿಕೊಂಡು, ಬೆಂಗಳೂರಿಗೆ ಪ್ರೊ. ಜೀವಿ ಮನೆಗೇ ಬಂದಾಗ, ಮತ್ತೆ ಹಣಕಾಸಿನ ಮುಗ್ಗಟ್ಟು ಎದುರಾಯಿತು. ಅದನ್ನು ನಿಭಾಯಿಸಲು, ಅದರ ಬಿಸಿ ಪತಿಗೆ ತಾಗದಂತೆ ಕಾಳಜಿ ವಹಿಸಲು ಲಕ್ಷ್ಮಿಯವರು ಸಿದ್ಧರಾಗಿದ್ದರು.

ಆದರೆ ಲಕ್ಷ್ಮೀಯವರು ಯಾವಾಗಲೂ ಮಾತಿಗೆ ಎತ್ತಿಕೊಳ್ಳುವುದು ಖುಷಿಯ ವಿಷಯವನ್ನೇ. ‘ಇವರು ಕಾಲೇಜಿನಲ್ಲಿ ಕೆಲಸದಲ್ಲಿದ್ದಾಗ ಬಾಡಿಗೆ ಮನೆಯಲ್ಲಿದ್ವಿ. ನಂತರ ಸಾಲ ಮಾಡಿ ಮನೆ ಕಟ್ಟಿದ್ವಿ. ಮೊದಲು ಇವರು ಸೈಕಲ್‍ನಲ್ಲಿಯೇ ಓಡಾಡುತ್ತಿದ್ದರು. ಕಾಲೇಜಿನಲ್ಲಿದ್ದಾಗಲೇ 1964ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದರು. ಉನ್ನತ ಅಧಿಕಾರ ಸಿಕ್ಕಿತು. ಪ್ರೊಫೆಸರ್ ಆದರು. 15 ಸಾವಿರ ರೂ.ಗೆ ಹೆರಾಲ್ಡ್ ಕಾರು ಕೊಂಡುಕೊಂಡರು. ಅದನ್ನು ನಿರಂತರವಾಗಿ ಮೂವತ್ತು ವರ್ಷಗಳ ಕಾಲ ಓಡಿಸಿದರು. ಇವರ ವಿದ್ಯಾರ್ಥಿಗಳಂತೂ ಇದನ್ನು `ಜಿ.ವಿ. ಐರಾವತ’ ಎಂದೇ ತಮಾಷೆ ಮಾಡುತ್ತಿದ್ದರು. ಇವರು ಸಾಹಿತ್ಯ ಪರಿಷತ್ತಿಗೆ ಕಾರ್ಯದರ್ಶಿಯಾದಾಗ `ನನ್ನ ಮಗ ಸರಸ್ವತಿ ಮಂದಿರಕ್ಕೆ ಕಾರ್ಯದರ್ಶಿ’ ಎಂದು ಹೆಮ್ಮೆಯಿಂದ ನನ್ನ ಮಾವ ಹೇಳಿಕೊಂಡು ಬರುತ್ತಿದ್ದರು. ಕನ್ನಡದ ಮೇಷ್ಟ್ರಾಗಿ ಸೂಟು ಧರಿಸಿದವರ ಪೈಕಿ ಇವರೇ ಮೊದಲಿಗರಂತೆ. ಅದಕ್ಕೆ ಪ್ರಜಾವಾಣಿಯ ಆಗಿನ ಸಂಪಾದಕ ದಿವಂಗತ ಟಿ.ಎಸ್.ಆರ್ ಅವರು `ಕನ್ನಡಕ್ಕೆ ಸೂಟು ಧಾರಣೆ’ ಅನ್ನೋ ಲೇಖನವನ್ನೂ ಬರೆದಿದ್ದರು.

ಆದರೆ ದಾಂಪತ್ಯ ಎಂಬುದು ಸುಖಾಸುಮ್ಮನೇ ಓಲೈಸಿಕೊಳ್ಳುವ, ಮುಂದೆ ಸಾಗಿದರೆ ಸಾಕಪ್ಪಾ ಎನ್ನುವಂತೆ ಅವರಿಬ್ಬರ ಬದುಕೂ ಆಗಿರಲಿಲ್ಲ. 1973ರಲ್ಲಿ ಪ್ರೊ. ಜೀವಿ ಅವರು ನಿವೃತ್ತರಾದಾಗ ಒಂದು ಅಭಿನಂದನಾ ಸಮಾರಂಭ ನಡೆಯಿತು. . ಕೆ. ಜಿ. ಸುಬ್ಬರಾಮಶೆಟ್ಟಿ, ಟಿ. ಎಸ್. ರಾಮಚಂದ್ರರಾವ್, ಸಿ. ವಿ. ರಾಜಗೋಪಾಲ್, ಎಂ. ಬಿ. ಸಿಂಗ್ ಹೀಗೆ- ಅವರ ಬಳಿ ಪಾಠ ಹೇಳಿಸಿಕೊಂಡು, ದೊಡ್ಡ ಸ್ಥಾನಕ್ಕೇರಿದ ವಿದ್ಯಾರ್ಥಿಗಳೆಲ್ಲ ಸೇರಿ, ಈ ಸಮಾರಂಭವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಮಾಡಿದ್ದರು. ಸಮಾರಂಭಕ್ಕೆ ಸಾಹಿತಿಗಳಾದ ಮಾಸ್ತಿ ವೆಂಕಟೇಶ್ ಐಯ್ಯಂಗಾರ್, ವಿ.ಕೃ. ಗೋಕಾಕ್, ವಿ.ಸೀತಾರಾಮಯ್ಯ, ರಾಲಪಳ್ಳಿ ಅನಂತಕೃಷ್ಣ ಶರ್ಮ, ಜಿ.ನಾರಾಯಣ ಮುಂತಾದವರನ್ನು ಆಹ್ವಾನಿಸಲಾಗಿತ್ತು.

‘ಬಿ.ಎಂ.ಶ್ರೀ ಅವರು ನೆಟ್ಟ ಒಂದು ಸಸಿಯೂ ಫೇಲಾಗಲಿಲ್ಲ’ ಎಂದು ಈ ಸಂದರ್ಭದಲ್ಲಿ ರಾಲಪಳ್ಳಿ ಅನಂತಕೃಷ್ಣ ಶರ್ಮ ಅವರು ಹೇಳಿದರು. ಅವರೆಲ್ಲರ ಮಾತಿನ ನಂತರ ಪ್ರೊ. ಜೀವಿ ಅವರ ಭಾಷಣವಿತ್ತು.

ಭಾಷಣದ ಕೊನೆಗೆ ಅವರಾಡಿದ ಮಾತುಗಳಿವು : ‘ನನ್ನ ಜೀವನದಲ್ಲಿ ನಾನು ಏನಾದರೂ ಸಾಧನೆ ಮಾಡಿದ್ದರೆ ಇದಕ್ಕೆ ಮುಖ್ಯ ಕಾರಣ ನನ್ನ ಪತ್ನಿ ಲಕ್ಷ್ಮೀ. ನನ್ನಲ್ಲಿರುವ ರೂಕ್ಷತನವನ್ನೆಲ್ಲ ನಾಶ ಮಾಡಿ, ಸಂಸಾರವನ್ನು ವಿಶ್ವಾಸದಡಿಯಲ್ಲಿ ಬೆಳೆಯುವಂತೆ ಮಾಡಿ, ನನಗೆ ಹಿರಿಮೆಯನ್ನು ತಂದುಕೊಟ್ಟವಳು. ಈ ಸಭೆ ಎದುರಿಗೆ ನಾನು ಅವಳಿಗೆ ಇಂದು ಸಾರ್ವಜನಿಕವಾಗಿ ಕೃತಜ್ಞತೆಯನ್ನು ಅರ್ಪಿಸುತ್ತೇನೆ’. ಅವರ ಮಾತುಗಳನ್ನು ಕೇಳಿ ಇಡೀ ಸಭೆ ಚಪ್ಪಾಳೆ ತಟ್ಟಿತು. ಅವರ ನೆಂಟರೆಲ್ಲ ಆ ಸಭೆಯಲ್ಲಿದ್ದರು.

ಆ ಸಮಾರಂಭವನ್ನು ಮತ್ತೆ ನೆನಪಿಸಿಕೊಂಡ ಪ್ರೊ. ಜೀವಿ ಅವರು, ಮಾಸ್ತಿ, ಗೋಕಾಕ್ ಮುಂತಾದ ಮಹನೀಯರ ಮಾತುಗಳನ್ನು ಜ್ಞಾಪಿಸಿಕೊಂಡರು. ‘ ನಿನ್ನಲ್ಲಿ ಜೀವನದ ಸೊಗಸು, ಪ್ರೀತಿಯನ್ನು ಕಾಣಬಹುದು’ ಎಂದು ಅವರೆಲ್ಲ ಭಾಳ ಪ್ರಶಂಸೆ ಮಾಡಿದರು- ಎನ್ನುತ್ತ ಪತ್ನಿಯ ಮುಖ ನೋಡಿದರು.

ಪತ್ನಿಯ ಬಗ್ಗೆ ಮತ್ತೇನೋ ಜ್ಞಾಪಿಸಿಕೊಂಡವರಂತೆ, ‘ಇವಳಿಗೆ ಇನ್ನೂ ಓದಬೇಕೆಂಬ ಆಸೆ ಯಿತ್ತು ನೋಡಿ. 10ನೇ ಕ್ಲಾಸ್ ನಂತರ ನನಗೆ ಅವಳ ಓದನ್ನು ಮುಂದುವರೆಸುವಂತೆ ಮಾಡಲು ಸಾಧ್ಯವಾಗಲಿಲ್ಲ’ ಎಂದರು.

“ನನ್ನ ವಿದ್ವತ್ತು, ಒಳ್ಳೆಯ ಮೇಷ್ಟ್ರು ಎಂಬ ಹೆಸರು ಅವಳಿಗೆ ತುಂಬ ಹೆಮ್ಮೆಯ ತರುವ ವಿಷಯವಾಗಿತ್ತು. ಆದರೆ ಎಸ್ಸೆಸ್ಸೆಲ್ಸಿ ಪಾಸುಮಾಡಿದ ಅವಳಿಗೆ ಮುಂದೆ ಎಂ.ಎ. ಮಾಡಲು ಸಾಧ್ಯವಾಗಲಿಲ್ಲ ಎಂಬ ವ್ಯಸನವಿತ್ತು. ನಮ್ಮ ಸಂಸಾರದ ಕಷ್ಟದಲ್ಲಿ ನನಗೆ ಅವಳನ್ನು ಓದಿಸೋಕೆ ಆಗಲಿಲ್ಲ. ಆದರೆ ಅವಳಿಗೆ ಸಾಹಿತ್ಯದ ಒಲವಿತ್ತು. ಆಕಾಶವಾಣಿಯಲ್ಲಿ ಮಕ್ಕಳ ಕಾರ್ಯಕ್ರಮಗಳಿಗೆ ಇವಳು ಉಪನ್ಯಾಸಗಳನ್ನು ಕೊಡುತ್ತಿದ್ದಳು. ಅದೆಲ್ಲ ನನಗೆ ಹೆಮ್ಮೆ ತರುವ ವಿಷಯವಾಗಿತ್ತು. ನಿಜಕ್ಕೂ ಅವಳು ತುಂಬ ಆ್ಯಕ್ಟಿವ್ ಲೇಡಿ ಆಗಿದ್ದಳು. ಮೈಸೂರು ರಾಜ್ಯದ ಮುಖ್ಯ ಇಂಜಿನಿಯರ್ ಆಗಿದ್ದ ಮಂಚಿಗಯ್ಯ ಅವರ ಪತ್ನಿ ಜಯಲಕ್ಷಮ್ಮ ಮತ್ತು ನನ್ನ ಹೆಂಡತಿ ಹಾಗೂ ಕೆಲವು ಸ್ನೇಹಿತೆಯರು ಸೇರಿಕೊಂಡು `ಮಹಿಳಾ ಸೇವಾ ಸಮಾಜ’ವನ್ನು ಪ್ರಾರಂಭಿಸಿದರು. ಅದಕ್ಕೆ ನನ್ನ ಪತ್ನಿ ಕಾರ್ಯದರ್ಶಿಯಾದಳು. ಆ ವಯಸ್ಸಿನಲ್ಲಿಯೇ ಸಂಸಾರವನ್ನು ನಡೆಸಿಕೊಂಡು ಸಾಮಾಜಿಕ ಕೆಲಸಗಳನ್ನೂ ಮಾಡುವಷ್ಟು ತಿಳಿವಳಿಕೆ ಅವಳಲ್ಲಿತ್ತು’ ಎಂದು ಪತ್ನಿಯ ಚುರುಕುತನವನ್ನು ಶ್ಲಾಘಿಸಿದರು.

ಮಾಸ್ತಿ ವೆಂಕಟೇಶ ಅಯ್ಯಂಗಾರರ ಸೊಸೆ ಒಮ್ಮ ನಮ್ಮನ್ನು ‘ಲಕ್ಷ್ಮೀನಾರಾಯಣರು’ ಎಂದು ಹೇಳಿದ್ದು ನೆಂಪಿಲ್ವಾ.. ಎನ್ನುತ್ತ ಲಕ್ಷ್ಮೀಯವರು ಮಾತು ಮತ್ತೊಂದು ಸಿಹಿ ನೆನಪು ತೆಗೆದರು. ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಗುರುವಂದನೆ ಕಾರ್ಯಕ್ರಮವು ಬಹಳ ಪ್ರಸಿದ್ಧವಾಗಿತ್ತು. ಇದರ ತುಣುಕೊಂದನ್ನು ಸಿನಿಮಾ ಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಮುನ್ನ ಟ್ರಯಲ್ ರೀತಿ ಹಾಕುತ್ತಿದ್ದರು. ರಾಜ್ಯಾದ್ಯಂತ ಎಲ್ಲ ಸಿನಿಮಾ ಮಂದಿರಗಳಲ್ಲೂ ಅಂದಿನ ಮೈಸೂರು ಸರ್ಕಾರ ಈ ಗುರುವಂದನ ಭಾಗವನ್ನು ತೋರಿಸುತ್ತಾ ಇತ್ತು. ಇದಕ್ಕೆ ಅಷ್ಟೊಂದು ಪ್ರಾಧಾನ್ಯ ಬಂದಿತ್ತು. ಅದಾದ ಮೇಲೆ ಮಾಸ್ತಿ ಅವರ ಮನೆಗೆ ನಾವು ಹೋದೆವು.

ಮಾಸ್ತಿ ಅವರ ಸೊಸೆ ಇಂದಿರಾ ಅವರು, ನಮ್ಮ ಮನೆಗೆ ಲಕ್ಷ್ಮೀನಾರಾಯಣರು ಬಂದಂತೆ ಬಂದಿದ್ದಾರೆ ಎಂದು ಹೇಳಿ, ದೇವರ ಮನೆಯಲ್ಲಿ ಇಡುವ `ಅಮ್ಮನ ಕಂಬಲು’ದಲ್ಲಿ ಇಟ್ಟ ಕೆಲವು ರೂಪಾಯಿಗಳನ್ನು ನನಗೆ ಕೊಟ್ಟು ಹರಸಿದರು. ಅದನ್ನು ನಾನು ದೇವರ ಮನೆ ಡಬ್ಬಿಯಲ್ಲಿಟ್ಟು ಪೂಜಿಸುತ್ತಿರುವೆ- ಎಂದರು.

ಪ್ರೊ. ಜೀವಿ ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಗೌರವ, ಭಾಷಾ ಸಮ್ಮಾನ್ ಪುರಸ್ಕಾರ, ಪದ್ಮಶ್ರೀ ಪ್ರಶಸ್ತಿಯೂ ಸಂದಿದೆ. ಆದರೆ ಆ ಎಲ್ಲ ಪ್ರಶಸ್ತಿಗಳಿಗೂ ಕಳಶಪ್ರಾಯವಾದುದು ಅವರ ಈ ಸಂತೃಪ್ತಿಯ ನಗು ಎಂದೆನಿಸಿತು.