೧. ಹೊಂಡದ ಕತೆ

ಮೊನ್ನೆ, ಬಹಳ ದಿನಗಳ ನಂತರ
ಮತ್ತೆ
ಹೊಂಡಕ್ಕೆ ಹೋಗಿದ್ದೆ;
ನೀರು
ನೀರೊಳಗಿನ ಮೀನು
ಮಂಟಪದ ಮಿನಾರು
ಹಂಗೇ ಇವೆ, ಅಲ್ಲಿ ಅಂದು ಇದ್ದ ಕವಿತೆಗಳು ಮಾತ್ರ ಇಲ್ಲ!
ಕಲ್ಲ ಮೆಟ್ಟಿಲು
ಕಂಬ ಕಂಬ ಒಂಟಿ ಒಂಟಿಯಾಗಿ
ಹಳೆ ಹಾಡ
ಹಾಡುತಿವೆ, ಎಷ್ಟೋ ಹೆಜ್ಜೆಗಳು ಗುರುತು
ಸಿಗದೆ ಗಾಳಿಯಲ್ಲಿ ಲೀನ
ಬಿಟ್ಟ ನಿಟ್ಟುಸಿರು ಅಪರಿಚಿತವಾದಂತೆ!
ಅದೆಷ್ಟು ಕತೆ, ಕಾವ್ಯಗಳು ವಸಂತ ಮಂಟಪದ
ನೀರ ನಡುವೆ ಉಸಿರು
ಸಿಕ್ಕಿ ಸತ್ತವೋ…
ದಿಕ್ಪಾಲಕ ಮಂಟಪಗಳೂ ಲೆಕ್ಕವಿಟ್ಟಿಲ್ಲ!
ಬದಿಯ ಹುಣಸೇ ಮರ
ವೂ ಹಾಗೇ ಇದೆ
ಎದೆಯಲೊಂದು ಮುರಿದ ಪ್ರೇಮ
ವಿಟ್ಟುಕೊಂಡ ಮನುಜನಂತೆ!
ಆ ಹೊಂಡ
ನೂರು ಕೋಗಿಲೆಗಳು ಹಾಡೋ
ಮಾಮರ
ಮತ್ತೆ ಹೋದ ನನಗೆ ಹಾಗನ್ನಿಸಲಿಲ್ಲ;
ಬಹುಶಃ
ಕಲ್ಲಿಗೊರಗಿ ಕವಿತೆಗಳ ತಿದ್ದಿದ ಕೈ
ಕಲ್ಲಾದ ಕಥೆ
ಹೊಂಡವೂ ಬಲ್ಲದು
ನೀರು ಬಲ್ಲದು
ಬಂದು ಹೋಗುವ ನೂರು ಪ್ರೇಮಿಗಳು ಕೂಡ!

೨. ನಾನು ನಿಮ್ಮವನಲ್ಲ

ಹಣೆಯಲಿ ಬಣ್ಣದ ಗುರುತು, ಕೊರಳ ದಾರ
ಎದೆಯ ಪದಕ ಒಂದೂ ಇಲ್ಲ
ನಡೆಯುತ್ತಿದ್ದೇನೆ ನಾಳೆಯ ಕಡೆಗೆ
ಕೈಯಲ್ಲಿಷ್ಟು ಬೀಜಗಳ ಹಿಡಿದು
ಹದ ನೆಲ ಸಿಕ್ಕರೆ ಬಿತ್ತಿ ಮುಗಿಲಿಗೆ ಮುಖ ಮಾಡಲೆಂದು… ಕ್ಷಮಿಸಿ ನಾನು ನಿಮ್ಮವನಲ್ಲ!

ತಲೆಯ ಮೇಲೆ ಟೋಪಿ
ನೆತ್ತಿ ಸಮೀಪ ಕಪ್ಪು ಚುಕ್ಕೆ
ಮೈ ತುಂಬ ಅತ್ತರು ಇಲ್ಲ
ನಡೆಯುತ್ತಿದ್ದೇನೆ ಕನಸುಗಳ ಮೂಟೆ ಹೊತ್ತು
ಎದೆ ತುಂಬಾ ಹನಿವ ಹಯನಿದೆ
ಯಾರು ಸಿಕ್ಕರೂ ಹನಿಸಿ ಸಾಗುವೆ.. ಬಿಡಿ ನಾನು
ನಿಮ್ಮವನಲ್ಲ!

ಕೊರಳು ನೋಡಿ ಫಲಕವಿಲ್ಲ
ಎಡದಿಂದ ಬಲಕೆ, ಹಣೆಯಿಂದ ಎದೆಗೆ ಕೈ
ಮುಟ್ಟಿ ಬರುವ ಸನ್ನೆಯಿಲ್ಲ
ಬರಿದೆ ಪಯಣ ಹಜ್ಜೆಗಳ ಜೊತೆ ಮುಂದೆ
ಸಿಕ್ಕಾರು ನಾಲ್ಕು ಜನ
ಮನುಷ್ಯರೆನಿಕೊಂಡಾರೆಂದು; ಮನ
ಬುದ್ಧ, ಬಸವ, ಬಾಪು- ಗಳ ಹೊತ್ತಿಲ್ಲ.. ಇಸ
ವಿರದ ಹಣ್ಣ ಹುಡುಕುತ್ತಾ ನಡೆದೆ.. ನಾನು ನಿಮ್ಮವನಲ್ಲ

ನಿಮ್ಮ ಕಣ್ಣಿಗೆ ನಾನು ಎಲ್ಲ
ಆಗಬಲ್ಲೆ; ಮನಜನೆನಿಸುವ ಕುರುಹು ನನ್ನಲಿ
ಇಲ್ಲವೆಂದೇ
ಚಿಹ್ನೆಗಳ ಸ್ಕೇಲು,ಟೇಪು ಹಿಡಿದಿದ್ದೀರಿ.. ಆದರೆ
ನಾನು ನಿಮ್ಮವನಲ್ಲ!

 

ಸಂತೆಬೆನ್ನೂರು ಫೈಜ್ನಟ್ರಾಜ್ ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರಿನವರು
ಸಂತೇಬೆನ್ನೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಎದೆಯೊಳಗಿನ ತಲ್ಲಣ(ಕವನಸಂಕಲನ), ಮಂತ್ರದಂಡ (ಮಕ್ಕಳ ಕವಿತೆಗಳು), ಸ್ನೇಹದ ಕಡಲಲ್ಲಿ (ಮಕ್ಕಳ ಕಥಾ ಸಂಕಲನ), ಬುದ್ಧನಾಗ ಹೊರಟು (ಕವನ ಸಂಕಲನ), ಹಬ್ಬಿದಾ ಮಲೆ ಮಧ್ಯದೊಳಗೆ (ಕಥಾ ಸಂಕಲನ), ಹಳೆಯ ಹಾದಿಯಲೊಂದು ಹೊಸ ಹೆಜ್ಜೆ ( ಆಧುನಿಕ ವಚನಗಳು) ಪ್ರಕಟಿತ ಕೃತಿಗಳು
ಸಂಚಯ ಕಾವ್ಯ ಪುರಸ್ಕಾರ, ಹಾಮಾನಾ ಕಥಾ ಪ್ರಶಸ್ತಿ, ಸ್ನೇಹಶ್ರೀ ಪ್ರಶಸ್ತಿಗಳು ಇವರಿಗೆ ದೊರೆತಿವೆ