ದೂರದ ಹೈದರಾಬಾದಿನಲ್ಲಿ ತಮ್ಮ ಜೀವಿತದ ಬಹುಭಾಗವನ್ನು ಕಳೆದಿರುವ ಕನ್ನಡದ ಹಿರಿಯ ಕವಿ ಕೆ.ವಿ. ತಿರುಮಲೇಶರು ತಮ್ಮ ಕುರಿತು ಬಹಳ ಕಮ್ಮಿ ಮಾತನಾಡಿದವರು. ಬರಹಗಾರನಿಗಿಂತ ಬರಹದ ಕುರಿತು ಹೆಚ್ಚು ಚರ್ಚೆಯಾಗಬೇಕೆಂದು ಹೇಳುತ್ತಲೇ ಬಂದವರು. ಬರಹಗಾರ ಆತ್ಮ ಚರಿತ್ರೆಯನ್ನೂ ಕೂಡಾ ಬರೆಯಬಾರದು ಎಂದು ಪ್ರತಿಪಾದಿಸುವವರು. ಆದರೆ ಇತ್ತೀಚೆಗೆ ಕೊಂಚ ಮನಸ್ಸು ಬದಲಿಸಿ ತಮ್ಮದೊಂದು ಕಲ್ಪಿತ ಸಂದರ್ಶನವನ್ನು ತಾವೇ ನಡೆಸಿ ಕೆಂಡಸಂಪಿಗೆಗೆ ಕಳುಹಿಸಿದ್ದಾರೆ. ಕನ್ನಡದ ಜಾಯಮಾನಕ್ಕೆ ಹೊಸತಾದ ಒಂದು ವಿನೂತನ ಬರಹವಿದು. ಈ ವಿಶೇಷ ಸ್ವ- ಸಂದರ್ಶನ ನಿಮ್ಮ ಓದಿಗಾಗಿ ಇಲ್ಲಿದೆ.

 

ನನಗೆ ನಾನೇ

ಕೆಲವು ಸಂದರ್ಭಗಳಲ್ಲಿ ಕೆಲವರು ನನ್ನ ಸಂದರ್ಶನ ತೆಗೆದುಕೊಂಡಿದ್ದಾರೆ. ಅವು ಶೂದ್ರ, ಶಬ್ದಗುಣ, ಮಯೂರ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಆದರೆ ಯಾವ ಕಾರಣಕ್ಕೋ-ಬಹುಶಃ ದಾಕ್ಷಿಣ್ಯ ಅಥವಾ ಮರ್ಯಾದೆ-ಅವರಿಂದ ತಪ್ಪಿಸಿಕೊಂಡ ಕೆಲವು ಪ್ರಶ್ನೋತ್ತರಗಳು ಇವೆಯೆಂದು ನನಗೆ ಅನಿಸಿದುದರಿಂದ ನನಗೆ ಅನಿಸಿದಂತೆ ಈ ಕೆಳಗಿನವನ್ನು ನೀಡುತ್ತಿದ್ದೇನೆ.

ಪ್ರಶ್ನೆ1: ನೀವು ಕವಿತೆಗಳಲ್ಲದೆ ಇನ್ನಿತರ ಹಲವಾರು ಪ್ರಕಾರಗಳಲ್ಲಿ ಬರೆಯುತ್ತ ಬಂದಿದ್ದೀರಿ. ಯಾಕೆ, ನಿಮಗೆ ನಿಮ್ಮ ಕವಿತೆಯಲ್ಲಿ ಭರವಸೆಯಿಲ್ಲವೇ? ಅದಲ್ಲದಿದ್ದರೆ ಇದರಲ್ಲಾದರೂ ಹೆಸರು ಬರಲಿ ಎಂಬ ಆಸೆಯೇ?

ಉತ್ತರ: ಕವಿತೆ ನನಗೆ ಪ್ರಿಯವಾದ ಪ್ರಕಾರ. ಇನ್ನಿತರ ಪ್ರಕಾರಗಳನ್ನು ಕೆಲವೊಂದು ಬಿಡುಗಡೆಗೋಸ್ಕರ ಎಂಬಂತೆ ಬರೆಯುತ್ತಿದ್ದೇನೆ. ನನಗೆ ನನ್ನ ಕವಿತೆಗಳಲ್ಲಿ ಭರವಸೆಯಿದೆ. ನನ್ನಿಂದ ಕೊಡುಗೆಯೇನಾದರೂ ಸಾಧ್ಯವಿದ್ದರೆ ಅದು ಕವಿತೆಯಲ್ಲಿ ಮಾತ್ರ ಎನ್ನುವುದು ಗೊತ್ತಿದೆ. ನನ್ನ ಆಸಕ್ತಿಗಳು ವ್ಯಾಪಕವಾದ ಕಾರಣ ಕತೆ, ಲೇಖನ ಇತ್ಯಾದಿಗಳನ್ನೂ ಬರೆಯುತ್ತಿದ್ದೇನೆ.

ಪ್ರಶ್ನೆ2: ನಿಮ್ಮ ಕವಿತೆಗಳ ಒಂದು ಸಾಲೂ ಜನಕ್ಕೆ ನೆನಪಿಲ್ಲ. ಇನ್ನು ಇದರಲ್ಲಿ ನಿಮ್ಮ ಕೊಡುಗೆಯೇನು?

ಉತ್ತರ: ನೆನಪಿಲ್ಲದೆ ಇರುವುದಕ್ಕೆ ಹಲವಾರು ಕಾರಣಗಳಿರಬಹುದು. ನಾನು ಯಾರೆಂದೇ ಹೆಚ್ಚಿನ ಜನಕ್ಕೆ ಗೊತ್ತಿಲ್ಲ. ಅಷ್ಟಕ್ಕೆ ನಾನು ಇಲ್ಲವೇ ಇಲ್ಲ ಎನ್ನುವುದಕ್ಕೆ ಆಗುತ್ತದೆಯೇ? ಮೊದಲಿಂದಲೂ ನಾನು ನನ್ನ ವಿರುದ್ಧವೇ ನಿಂತವನು. ಎಂದರೆ, ಜನಪ್ರಿಯತೆಯ ಬಗ್ಗೆ ಗುಮಾನಿ ವಹಿಸಿದವನು. ನನ್ನ ಯಾವ ಸಾಲುಗಳೂ ಜನಪ್ರಿಯ ಆಗಬಾರದು ಎಂದು ಆಗ್ರಹಿಸಿದವನು. ನಾನು ಕತೆ ಬರೆದಾಗಲೂ ಬೇರೆಯವರು ಬರೆಯುವುದಕ್ಕಿಂತ ಭಿನ್ನವಾಗಿ ಬರೆಯುತ್ತೇನೆ. ಈ ಸ್ವಯಂಪ್ರಜ್ಞೆ ಕೆಲವು ಸಲ ನನಗೆ ಮಾರಕವಾಗುತ್ತದೆ. ಲೇಖಕ ಅಷ್ಟೊಂದು ಸ್ವಯಂಪ್ರಜ್ಞ ಆಗಬಾರದು ಎನ್ನುವುದು ನನಗೆ ಗೊತ್ತಿದೆ. ಆದರೆ ಕೆಲವು ಸಲ ಆಗಿಬಿಡುತ್ತೇನೆ. `ಮಹಾಪ್ರಸ್ಥಾನ’ದ ತನಕ ಅಡಿಗರ ಪ್ರಭಾವ ನನ್ನ ಮೇಲೆ ದಟ್ಟವಾಗಿ ಇತ್ತು, ಅಡಿಗ ಮತ್ತು ಎಲಿಯೆಟ್. `ಮುಖಾಮುಖಿ’ಯ ಲಾಗಾಯ್ತು ನಾನು ನಾನೇ ಆಗಲು ಪ್ರಯತ್ನಿಸಿದ್ದೇನೆ. ಪ್ರಯತ್ನಿಸುವುದು ಅಂದರೇನು ಎಂದು ನೀವು ಕೇಳಬಹುದು. ಸ್ವಂತಿಕೆಗೆ ಪ್ರಯತ್ನಿಸುವುದು ಬೇಡ; ಆದರೆ ಪ್ರಭಾವ ನೀಗಲು ಪ್ರಯತ್ನಿಸುವ ಅಗತ್ಯವಿದೆ.

ಪ್ರಶ್ನೆ3. ನಿಮ್ಮ ಕವಿತೆಗಳು ಹಲವು ಎಕ್ಸೋಟಿಕ್ ವಿಷಯಗಳ ಬಗ್ಗೆ ಇವೆ. ಇವು ಜನಕ್ಕೆ ಅರ್ಥವಾಗಲ್ಲ. ಏನು ಮಾಡ್ತೀರಿ?

ಉತ್ತರ: ಕವಿ ತನ್ನ ಜೀವನಾನುಭವಕ್ಕೆ ಅನುಸಾರ ಬರೀತಾನೆ. ನಾನೂ ಕಾಲದಿಂದ ಕಾಲಕ್ಕೆ ಬದುಕಿದ ನನ್ನ ಸುತ್ತಮುತ್ತಲ ಬಗ್ಗೆ ಬರೆದಿದ್ದೇನೆ. `ಮುಖಾಮುಖಿ’ ಸಂಕಲನದಲ್ಲಿ ಒಂದು ಊರು, ಒಂದು ಪೇಟೆ, ಒಂದು ಪಟ್ಟಣೆ ಎಂಬ ಮೂರು ವಿಭಾಗಗಳಿವೆ: ಇವು ನನ್ನ ಹುಟ್ಟೂರು, ಕಾಸರಗೋಡು, ಹೈದರಾಬಾದು ಪರಿಸರಗಳಿಗೆ ಸೇರಿದಂಥ ಕವಿತೆಗಳು. ನಾನು ಹಲವು ಪ್ರದೇಶಗಳಲ್ಲಿ ಬದುಕಿದ ವ್ಯಕ್ತಿ. ಅರೇಬಿಯದಲ್ಲಿ ಕೂಡಾ. ಇನ್ನು ನನ್ನ ಓದು ಮತ್ತು ಚಿಂತನೆಗಳು ಕೂಡಾ ನನ್ನನ್ನು ಒಬ್ಬ ಪ್ರತ್ಯೇಕ ವ್ಯಕ್ತಿಯಾಗಿ ರೂಪಿಸಿವೆ. ಹೀಗಲ್ಲದೆ ನಾನು ಬೇರೆ ಯಾವ ರೀತಿಯಲ್ಲಿ ಬರೆಯುವುದು ಸಾಧ್ಯ?

ಪ್ರಶ್ನೆ4: ನೀವು ಬರೆದುದನ್ನೆಲ್ಲ ಬದುಕಿದ್ದೀರ? ಎಂದರೆ ಅನುಭವದ ಕುರಿತಾದ ನಿಮ್ಮ ಕಲ್ಪನೆಯೇನು?

ಉತ್ತರ: ಐಂದ್ರಿಯ ಸಂವೇದನೆಗಳು ಮಾತ್ರವೇ ಅನುಭವವಲ್ಲ. ಯಾವ ಮನುಷ್ಯನೂ ಹೀಗೆ ರೂಪುತಳೆಯುವುದಿಲ್ಲ. ಮನುಷ್ಯರು ಓದುತ್ತಾರೆ, ಚಿಂತಿಸುತ್ತಾರೆ, ಇತರರ ಜತೆ ವ್ಯವಹರಿಸುತ್ತಾರೆ. ಅವರಿಗೆ ಆಸೆಗಳಿರುತ್ತವೆ, ನಿರಾಸೆಗಳಿರುತ್ತವೆ, ಸಂತೋಷ ದುಃಖ ಇರುತ್ತವೆ, ನೆನಪುಗಳಿರುವಂತೆಯೇ ಭವಿಷ್ಯದ ಕುರಿತು ಯೋಜನೆಗಳಿರುತ್ತವೆ. ಇವೆಲ್ಲವೂ ನಮ್ಮ ಅನುಭವ ವಲಯಕ್ಕೆ ಸೇರಿದ ಸಂಗತಿಗಳು. ಪಿರಮಿಡಿನ ಪ್ರತಿಮೆ ಬಳಸುವುದಕ್ಕೆ ಈಜಿಪ್ಟಿಗೆ ಹೋಗಿ ಸ್ವತಃ ಪಿರಮಿಡುಗಳನ್ನು ನೋಡಿಬರಬೇಕಾಗಿಲ್ಲ. ಕ್ಲಿಯೋಪಾತ್ರ ಕುರಿತು ಬರೆದ ಶೇಕ್ಸ್‌ಪಿಯರ್ ಕ್ಲಿಯೋಪಾತ್ರಳ ಕಾಲದಲ್ಲಿ ಬದುಕಿದ್ದವನಲ್ಲ. ಆದರೂ ಅವಳನ್ನು ಕಂಡಂತೆ ಬರೆಯುತ್ತಾನೆ. ಹೀಗೆ ಬರೆಯುವಾಗ ವಸ್ತು ಮಟ್ಟದ ವಿವರಗಳಲ್ಲಿ ಕೆಲವೊಂದು ತಪ್ಪುಗಳು ಆಗಬಹುದು. ಶೇಕ್ಸ್‌ಪಿಯರ್ ಕೂಡಾ ಇಂಥ ತಪ್ಪುಗಳನ್ನು ಮಾಡಿದ್ದಾನೆ. ಆದರೆ ಅವನ ಕೃತಿಗಳನ್ನು ನಾವು ಇಂಥ `ವಾಸ್ತವ’ ಸತ್ಯಗಳ ಮೇಲಿಂದ ಅಳೆಯುವುದಿಲ್ಲ. ಆದ್ದರಿಂದ ಅವನ ತಪ್ಪುಗಳು ತಪ್ಪುಗಳೆಂದೇ ಅನಿಸುವುದಿಲ್ಲ. ಅವನು ಮೂಡಿಸುವ ಭಾವನೆಗಳೇನು, ವಿಚಾರಗಳೇನು ಎನ್ನುವುದು ಮುಖ್ಯವಾಗುತ್ತದೆ. ಇದಕ್ಕೆ ಬೇಕಾದ್ದು ಕಲ್ಪನಾಶಕ್ತಿ `ಇಮ್ಯಾಜಿನೇಶನ್’.

ಪ್ರಶ್ನೆ5: ಶೇಕ್ಸ್‌ಪಿಯರ್‌ನಂಥ ದೊಡ್ಡ ಲೇಖಕರ ಜತೆ ಯಾಕೆ ನೀವು ನಿಮ್ಮನ್ನು ಹೋಲಿಸಿಕೊಳ್ಳುತ್ತೀರಿ?

ಉತ್ತರ: ಯಾಕೆಂದರೆ ಬರೆಯಲು ಹೊರಟ ಎಲ್ಲರಿಗೂ, ಶೇಕ್ಸ್‌ಪಿಯರ್ ಕೂಡಾ ಸೇರಿದಂತೆ, ಸಮಸ್ಯೆಗಳು ಏಕದೇಶ ಒಂದೇ ತರದವು ಆಗಿರುತ್ತವೆ. ಶೇಕ್ಸ್‌ಪಿಯರ್ ದೊಡ್ಡ ಲೇಖಕ; ಅಂಥವನೇ ಈ ಸಮಸ್ಯೆಗಳನ್ನು ಎದುರಿಸಬೇಕಾಯಿತು, ಇನ್ನು ನನ್ನ ಮಾತೇನು ಎನ್ನುವುದಕ್ಕೆ ಹೇಳಿದೆ. ಮೊತ್ತದಲ್ಲಿ, ಅನುಭವ ಎನ್ನುವುದು ನಮ್ಮ ಮೈಗೆ ಮಾತ್ರವೇ ಸಂಬಂಧಿಸಿದ್ದಲ್ಲ, ಮನಸ್ಸಿಗೂ.

ಪ್ರಶ್ನೆ6: ನಿಮ್ಮ ಕವಿತೆಗಳು ಓದುಗರಿಗೆ ಅರ್ಥವಾಗುತ್ತಿಲ್ಲವಲ್ಲ. ಮತ್ತೇಕೆ ಬರೆಯುತ್ತೀರಿ?

ಉತ್ತರ: ನಾನು ಹೀಗಿದ್ದೇನೆ, ನನ್ನ ಭಾವನೆಗಳು, ವಿಚಾರಗಳು ಹೀಗಿವೆ ಎನ್ನುವುದಕ್ಕೆ ಬರೆಯುತ್ತಿದ್ದೇನೆ. ಬೇಕಿದ್ದವರು ಓದುತ್ತಾರೆ, ಮೊದಲ ಓದಿಗೆ ಅರ್ಥವಾಗದಿದ್ದರೆ ಮತ್ತೆ ಮತ್ತೆ ಓದುತ್ತಾರೆ, ಅರ್ಥಮಾಡಲು ಯತ್ನಿಸುತ್ತಾರೆ. ಅದೂ ಸಾಧ್ಯವಿಲ್ಲದವರು ಓದುವುದೇ ಬೇಡ. ಅದು ಬಿಟ್ಟು, ಜನರಿಗೆ ಅರ್ಥವಾಗಲಿ ಎಂದು ಬರೆಯುವ ವ್ಯಕ್ತಿ ಮೂರ್ಖನಾಗುತ್ತಾನೆ; ಅವನು ಬರೆಯುವ ಮೊದಲೇ ಸತ್ತ. ನಾನು ಬರಹದ ಮೂಲಕ ಸತ್ತರೂ ಪರವಾಯಿಲ್ಲ, ಬರೆಯುವ ಮುನ್ನವೇ ಸಾಯಲು ತಯಾರಿಲ್ಲ.

ಪ್ರಶ್ನೆ7: ಬರೆಯುವ ಮುನ್ನವೇ ಸಾಯುವುದು ಎಂದರೇನು?

ಉತ್ತರ: ಸ್ವೀಕೃತ ರೀತಿಯಲ್ಲಿ ಬರೆಯುವುದು. ಹೇಗೆ ಬರೆದರೆ ಜನರಿಗೆ ಹಿತವಾಗುತ್ತದೆ, ಜನಪ್ರಿಯವಾಗುತ್ತದೆ, ಮಹತ್ವದ್ದಾಗುತ್ತದೆ ಎಂಬ ಕಲ್ಪನೆಗಳನ್ನು ಇಟ್ಟುಕೊಂಡು ಬರೆಯುವುದು. ಇದು ಅಳತೆಗೆ ಅನುಸಾರ ದರ್ಜಿ ಬಟ್ಟೆ ಹೊಲಿದಂತೆ. ಅಂಥ ಕವಿಗಳು `ಸೇಫ್’ ಆಗಿರುತ್ತಾರೆ, ಜನರಿಂದ ಮೆಚ್ಚುಗೆ, ಹೊಗಳಿಕೆ, ಪ್ರಶಸ್ತಿ ಗಳಿಸುತ್ತಾರೆ. ಅವರ ಸಾಲುಗಳು ಜನರ ನಾಲಿಗೆ ಮೇಲೆ ಇರುತ್ತವೆ ಕೂಡಾ. ಸಾಯುವುದೆಂದರೆ ಇದೇ. ಸೃಜನಶೀಲತೆ ಇವೆಲ್ಲವನ್ನೂ ಝಾಡಿಸಿ ಒಗೆಯಬೇಕು. ಇದಕ್ಕೆ ಧೈರ್ಯ ಅಗತ್ಯ: ಎಂದರೆ ಸೋತರೂ ಪರವಾಯಿಲ್ಲ ಎಂಬ ಧೋರಣೆ. ಹಾಕಿದ ಗೆರೆಯಲ್ಲಿ ಬರೆಯುವುದಕ್ಕಿಂತ ಸ್ವಂತದ್ದೇನಾದರೂ ಮಾಡಿ ಸೋಲುವುದು ಒಳ್ಳೆಯದು.

ಪ್ರಶ್ನೆ8: ನೀವು ಮಾಡಿದ್ದೆಲ್ಲವೂ ಸ್ವಂತದ್ದೇ ಎನ್ನುವಿರಾ?

ಉತ್ತರ: ಎಲ್ಲರಂತೆ ನಾನೂ ಹಲವು ಸಲ ಪ್ರಭಾವಗಳಿಗೆ ಒಳಗಾಗಿದ್ದೇನೆ. ಕಾಫ್ಕಾನ ಕತೆಗಳನ್ನು ಓದಿ ಅವುಗಳ ರೀತಿ ಕೆಲವು ಕತೆಗಳನ್ನು ಬರೆದಿದ್ದೇನೆ. ನಂತರ ಆಲ್ಫ್ರೆಡ್ ಕುಬಿನ್ ಎಂಬ ಕಾಫ್ಕಾನ ಸಮಕಾಲೀನನೊಬ್ಬನ `ಆಚೆ ಬದಿ’ ಎಂಬ ಕಾದಂಬರಿಯನ್ನು ಓದಿದಾಗ ಈ ಕಾಫ್ಕಾ ಕೂಡಾ ಪ್ರಭಾವಕ್ಕೆ ಒಳಗಾಗಿದ್ದ ಎನ್ನುವುದು ಗೊತ್ತಾಯಿತು. ಈ ಕಾದಂಬರಿಯನ್ನು ನಾನು ಕನ್ನಡಕ್ಕೆ ಭಾಷಾಂತರಿಸಿದ್ದೇನೆ. ಬೇಕೆನಿಸಿದವರು ಅದನ್ನು ಓದಬಹುದು. ಎಝ್ರಾ ಪೌಂಡ್, ಎಲಿಯಟ್, ವಾಲೆಸ್ ಸ್ಟೀವನ್ಸ್ ಮುಂತಾದ ಕವಿಗಳು ನನ್ನನ್ನು ಪ್ರಭಾವಿಸಿದ್ದಾರೆ. ಈ ಮಹಾನ್ ಕವಿಗಳು ಕೂಡಾ ಬೇರೆ ಬೇರೆ ಮೂಲಗಳ ಪ್ರಭಾವಕ್ಕೆ ಒಳಗಾದವರೇ. ಬಹುಶಃ ಪ್ರಭಾವಕ್ಕೆ ಒಳಗಾಗದೆ ಕೇವಲವಾಗಿರುವುದು ಸಾಧ್ಯವೇ ಇಲ್ಲ ಅನಿಸುತ್ತದೆ. ಇದು ನಮ್ಮ ವ್ಯಕ್ತಿತ್ವದ ಭಾಗ. ಈ ಪ್ರಭಾವದ ಕೆಳಗೆ ನಾವು ಏನು ಮಾಡಿದ್ದೇವೆ ಎಂದು ನೋಡಬೇಕಾಗುತ್ತದೆ. ಅದನ್ನು ನಾನು ವಿಮರ್ಶಕರಿಗೆ ಬಿಡುವೆ. ಇಷ್ಟೆ: ಯಾವ ವ್ಯಕ್ತಿಯೂ ನಿಂತ ನೀರಿನ ಕೊಳವಲ್ಲ; ಬದಲು ಹರಿವ ತೊರೆಯಂತೆ, ಅದರಲ್ಲಿ ಹಲವು ಮೂಲದ ಸೆಲೆಗಳು ಸೇರಿರಬಹುದು.

ಪ್ರಶ್ನೆ9: `ಕನ್ನಡಕ್ಕೆ ಕನ್ನಡದ್ದೇ ಆದ’ ಕವಿತೆಗಳು ಬೇಕೆಂದು ನಿಮಗೆ ಅನಿಸುವುದಿಲ್ಲವೇ? ಈ ದೃಷ್ಟಿಯಿಂದ ನಿಮ್ಮ ಕವಿತೆಗಳು ಎಷ್ಟರ ಮಟ್ಟಿಗೆ `ಕನ್ನಡದ್ದೇ’?

ಉತ್ತರ: ಒಬ್ಬ ಕನ್ನಡಿಗನಾಗಿ ನಾನು ಕನ್ನಡದಲ್ಲಿ ಬರೆಯುವುದೆಲ್ಲವೂ `ಕನ್ನಡದ್ದೇ’ ಎಂದು ನನಗೆ ಅನಿಸುತ್ತದೆ. ಇದಲ್ಲದೆ `ಕನ್ನಡದ್ದೇ’ ಎಂಬ ನಿರಪೇಕ್ಷವಾದ ಪ್ರಮಾಣವೇನೆಂದು ನನಗೆ ಗೊತ್ತಿಲ್ಲ. ವಾಸ್ತವದಲ್ಲಿ ಈ `ಕನ್ನಡಕ್ಕೆ ಕನ್ನಡದ್ದೇ ಆದ’ ಎಂಬ ವಿಚಾರ ಝೆನೋಫೋಬಿಯಾ ಅರ್ಥಾತ್ ಪರಭೀತಿ ಮತ್ತು ಪರದ್ವೇಷದಿಂದ ಬಂದಂಥದು. ಇದರ ಹಿಂದೆ `ಅಚ್ಚಗನ್ನಡ’, `ಸ್ವಚ್ಛಗನ್ನಡ’, `ತಿಳಿಗನ್ನಡ’, `ಶುದ್ಧಗನ್ನಡ’ ಮುಂತಾದ ಸುಳ್ಳು ಕಲ್ಪನೆಗಳಿವೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಜನಾಂಗ ಶುದ್ಧೀಕರಣಕ್ಕೆ ಒಳಗಾಗಿಸಿ `ವಿದೇಶೀ’, `ಪರದೇಶೀ’, `ಸಂಕರ’ ಎನಿಸುವುದನ್ನೆಲ್ಲ ತೊಡೆದು ಹಾಕುವ ಅಜೆಂಡಾ ಕೆಲವರಲ್ಲಿ ಕಾಣಿಸುತ್ತದೆ. ಅವರಿಗೆ ಇದೊಂದು ಪೊಲಿಟಿಕಲ್ ಪವರ್ ಕೂಡಾ ಕೊಟ್ಟಿದೆ; ಈ ರಾಜಕೀಯ ಶಕ್ತಿಗೋಸ್ಕರವೇ ಅವರಿದನ್ನು ಮಾಡುತ್ತಿದ್ದಾರೆ; ಕೆಲವು ಅಮಾಯಕರು ಇದಕ್ಕೆ ಬಲಿಯಾಗಿದ್ದಾರೆ. ಭಾಷೆ ಮತ್ತು ಸಂಸ್ಕೃತಿಯ ಕುರಿತಾದ ನನ್ನ ಕಲ್ಪನೆ ತುಸು ಭಿನ್ನವಾಗಿದೆ: ಇವು ಸ್ವಲ್ಪ ಮಟ್ಟಿಗೆ ಸ್ವಾಯತ್ತವಾಗಿದ್ದರೂ ಉಪ್ಪಿನಕಾಯಿ ಭರಣಿಯನ್ನು ಬಂದ್ ಮಾಡಿದಂತೆ ಅಲ್ಲ. ಇವು ಯಾವತ್ತೂ ತೆರೆದುಕೊಂಡೇ ಇರುವಂಥ ಸಂಗತಿಗಳು. ಜೀವಂತ ಭಾಷೆ ಮತ್ತು ಸಂಸ್ಕೃತಿಯ ಲಕ್ಷಣಗಳೇ ಇಂಥ ತೆರೆದಿರುವಿಕೆ; ತೆರೆದಿರುವುದೆಂದರೆ ತನಗೆ ಬೇಕಾದ್ದನ್ನು ಬೇಕಾದಾಗ, ಯಾವ ಮೂಲದಿಂದಲೇ ಆಗಲಿ, ಸ್ವೀಕರಿಸುವುದು-ತನ್ನದಾಗಿ ಮಾಡಿಕೊಳ್ಳುವುದು. ಆಧುನಿಕ ಯುಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಆಗಿರುವಂಥ ಬದಲಾವಣೆಗಳನ್ನು ನೋಡಿ: ಬಟ್ಟೆಬರೆ, ಶಿಕ್ಷಣ, ವಸತಿ, ಮದುವೆ ಮುಂಜಿ, ವಿದ್ಯುತ್ತು, ಕಂಪ್ಯೂಟರ್, ಸಂವಹನ ಮಾಧ್ಯಮ, ವೈದ್ಯಕೀಯ-ಇಲ್ಲೆಲ್ಲೂ ಅನ್ವಯವಾಗದ `ಕನ್ನಡಕ್ಕೆ ಕನ್ನಡದ್ದೇ ಆದ’ ಘೋಷಣೆ ಭಾಷೆ ಮತ್ತು ಸಾಹಿತ್ಯಕ್ಕೆ ಮಾತ್ರ ಅದು ಹೇಗೆ ಸಂಬಂಧಿಸುತ್ತದೆ? ಜನಜೀವನದ ಉಳಿದ ವಿದ್ಯಮಾನಗಳಿಂದ ಭಾಷೆ ಮತ್ತು ಸಾಹಿತ್ಯವನ್ನು ಹೇಗೆ ಪ್ರತ್ಯೇಕಿಸುತ್ತೀರಿ? ಕನ್ನಡಕ್ಕೆ ಕನ್ನಡದ್ದೇ ಆದ ಅಂಗಿ ಇದೆಯೇ? ಕನ್ನಡಕ ಇದೆಯೇ? ಹುಚ್ಚು ನಾಯಿ ಔಷಧಿ ಇದೆಯೇ? ಪೋಲಿಯೋ ಬಿಂದುಗಳಿವೆಯೇ? ಲೇಸರ್ ಚಿಕಿತ್ಸೆ ಇದೆಯೇ? ಮುದ್ರಣ ತಾಂತ್ರಿಕತೆ ಇದೆಯೇ? ವಿದೇಶೀ ಸಂಗತಿಗಳಲ್ಲಿ ನೀವು ಮುಳುಗಿಹೋಗಿದ್ದೀರಿ, ಬಹುಶಃ ನಿಮ್ಮ ಜನನ ಕೂಡಾ ನರ್ಸಿಂಗ್ ಹೋಮ್ ಒಂದರಲ್ಲಿ ಆಗಿರಬಹುದು. ನಾವು `ಕೊಂಡುಕೊಂಡುದು’ ಇಷ್ಟಕ್ಕೂ ಸೀಮಿತವಲ್ಲ; ನಮ್ಮ ವೈಚಾರಿಕ ಕ್ಷೇತ್ರ, ಆಡಳಿತ ಪದ್ಧತಿ, ಕಾನೂನು ವ್ಯವಸ್ಥೆ, ನೈತಿಕತೆ, ಮೌಲ್ಯ ಇತ್ಯಾದಿ ಹಲವು ಅಗೋಚರ ಸಂಗತಿಗಳೂ ಕೂಡಾ ಇದರಲ್ಲಿ ಸೇರಿವೆ. `ಇನ್ನು ಇದೆಲ್ಲಾ ಸಾಕು’ ಎಂದು ನಿರ್ದೇಶಿಸುವ ನೀವು ದಿನವೂ ಅನುಭೋಗಿಸುವ ಇದೆಲ್ಲಾ ಬಿಟ್ಟುಕೊಡುವುದಕ್ಕೆ ಯಾಕೆ ಮುಂದಾಗುವುದಿಲ್ಲ?

ಪ್ರಶ್ನೆ10: ನಾವು ವಿಷಯದಿಂದ ದೂರ ಸರಿದಿದ್ದೇವೆ ಅನಿಸಲ್ವೇ?

ಉತ್ತರ: ಇಲ್ಲ, ನಾವು ವಿಷಯದಲ್ಲೇ ಇದ್ದೇವೆ. ಯಾಕೆಂದರೆ ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಹುಸಿ ರಾಷ್ಟ್ರೀಯತೆಯೊಂದನ್ನು ನಾನು ನಿಮ್ಮ ಗಮನಕ್ಕೆ ತರುತ್ತಿರುವುದು. ಕನ್ನಡ ಹಿಂದಕ್ಕೆ ಹೋಗಿ ತನ್ನ `ಬುಡ’ದಿಂದಲೇ ಎಲ್ಲವನ್ನೂ ಮತ್ತೆ ಆವಿಷ್ಕರಿಸಿಕೊಳ್ಳಬೇಕು ಎನ್ನುತ್ತದೆ ಈ ಹುಸಿ ರಾಷ್ಟ್ರೀಯತೆ. ಮೂಲಕ್ಕೆ ಹೋಗುವ ಇವರು ನಿಜವಾದ ಅರ್ಥದಲ್ಲಿ ಮೂಲಭೂತವಾದಿಗಳು. ಭಾಷಾಶುದ್ಧೀಕರಣ ಇವರು ಹಾಕಿಕೊಂಡಿರುವ ಅಜೆಂಡಾ. ಈ ಭಾಷಾ ಶುದ್ಧೀಕರಣದ ಹಿಂದೆ ಕೆಲಸ ಮಾಡುವ ಕಂದಾಚಾರಿ ಮನಸ್ಸೇ ಆಧುನಿಕ ಕನ್ನಡ ಕವಿತೆಯ ಬಗ್ಗೆ ಕೆಂಡಕಾರುವುದು ಕೂಡ.

ಪ್ರಶ್ನೆ11. ನಮ್ಮ ಮೂಲ ಕನ್ನಡ ಮತ್ತು ಸಂಸ್ಕೃತಿಯ ಕುರಿತು ನಮಗೆ ಆಸಕ್ತಿ ಬೇಡವೇ? ಅದಲ್ಲದಿದ್ದರೆ ನಾವು ಸಾಂಸ್ಕೃತಿಕ ವಿಸ್ಮೃತಿಗೆ ಒಳಗಾಗಿ ನಮ್ಮ ಅಸ್ಮಿತೆಯನ್ನೇ ಕಳೆದುಕೊಳ್ಳಬಹುದಲ್ಲ? ಒಬ್ಬ ಕನ್ನಡ ಕವಿಯಾಗಿ ನೀವಿದನ್ನು ವಿರೋಧಿಸುವುದು ಆಶ್ಚರ್ಯ.

ಉತ್ತರ: ನಾನು ವಿರೋಧಿಸುತ್ತಿರುವುದು ಏನೆಂದು ನಿಮಗೆ ಸರಿಯಾಗಿ ಗೊತ್ತಿಲ್ಲದ ಕಾರಣ ಹೀಗನ್ನುತ್ತೀರಿ. ಮೂಲದ ಕಡೆ ನೋಡುವುದನ್ನು ನಾನು ವಿರೋಧಿಸುವುದಿಲ್ಲ. ಮೂಲದ ಕಡೆ ನೋಡುವುದು, ಅದರಿಂದಲೂ ನಮಗಿಂದು ಬೇಕಾದ್ದನ್ನು ಸ್ವೀಕರಿಸುವುದು ಒಳ್ಳೆಯದೇ; ಇದೊಂದು ಚಾರಿತ್ರಿಕ ದೃಷ್ಟಿ. ನಮ್ಮ ಚರಿತ್ರೆಯನ್ನು ನಾವು ತಿಳಿದುಕೊಳ್ಳಬೇಕು. ಆದರೆ `ಮೂಲವ್ಯಾಧಿ’ ಒಳ್ಳೆಯದಲ್ಲ. ಮೂಲವ್ಯಾಧಿಯೆಂದರೆ ನಾವು ಇಂದಿನದೆಲ್ಲವನ್ನೂ ಬಿಟ್ಟು ಮತ್ತೆ ಮೂಲಕ್ಕೆ ಮರಳಬೇಕು ಎನ್ನುವ ಹಟ. ಇದೆಂದೂ ಸಾಧ್ಯವಾಗುವ ಸಂಗತಿಯಲ್ಲ. ನನ್ನ ಚಿಕ್ಕಂದಿನಲ್ಲಿ ನಾವು ಮಳೆಗೆ ತೆಂಗಿನ ಸೋಗೆಯಿಂದ ಮಾಡಿದ ಗೊರಬೆ ಎಂಬ ಸಾಧನವನ್ನು ಉಪಯೋಗಿಸುತ್ತಿದ್ದೆವು; ನಾನು ಪ್ರಾಥಮಿಕ ಶಾಲೆಗೆ ಹೋಗುತ್ತಿರುವಾಗ ಈ ಗೊರಬೆಯೇ ಗತಿ. ಇದು ಬಹುಶಃ ಅಚ್ಚ ಪ್ರಾದೇಶಿಕ ಸಾಧನ. ಕೇರಳದ ಕಡೆ ಓಲೆಗರಿಯ (ಮಡಚಲಾರದ) ಕೊಡೆ ಉಪಯೋಗಿಸುತ್ತಿದ್ದರು. ನಂತರ ಈಗ ನಾವು ಕಾಣುವ ಕೊಡೆ ಎಂಬ ಸಾಧನ ಬಂತು. ಇದನ್ನು ಯಾರು ಎಲ್ಲಿ ಆವಿಷ್ಕರಿಸಿದರೋ ನಮಗೆ ಗೊತ್ತಿಲ್ಲ; ಆದರೆ ಕೊಡೆ ಗೊರಬೆ ಅಥವಾ ಓಲೆಕೊಡೆಗಿಂತ ಹೆಚ್ಚು ಉಪಯುಕ್ತವಾದ್ದರಿಂದ ಅದು ಬಳಕೆಯಲ್ಲಿದೆ. ಇಂಥ ಕೊಳ್ಳುವಿಕೆಗಳು ನಮ್ಮ ಗಮನಕ್ಕೇ ಬರುವುದಿಲ್ಲ. ಒಂದು ವೇಳೆ ಕಟ್ಟಾ ರಾಷ್ಟ್ರೀಯವಾದಿಯೊಬ್ಬ ಬಂದು ನಿಮ್ಮ ಕೈಯಿಂದ ಕೊಡೆ ಕಿತ್ತುಕೊಂಡು ಗೊರಬೆಯನ್ನೇ ಉಪಯೋಗಿಸು ಎಂದು ಒತ್ತಾಯಿಸಿದರೆ ನೀವೇನು ಮಾಡುತ್ತೀರಿ? ಅಷ್ಟಕ್ಕೂ ಗೊರಬೆಯ ಉಪಯೋಗ ಪೂರ್ತಾ ಹೊರಟುಹೋಗಿದೆ ಎನ್ನುವಂತೆಯೂ ಇಲ್ಲ; ಗದ್ದೆಯಲ್ಲಿ ನಾಟಿ ಸಂದರ್ಭದಲ್ಲಿ ಕೊಡೆ ಉಪಯೋಗಕ್ಕೆ ಬರುವುದಿಲ್ಲ, ಗೊರಬೆ ಬರುತ್ತದೆ. ಎಂದರೆ ಒಂದನ್ನು ಇಲ್ಲದೆ ಮಾಡಿ ಇನ್ನೊಂದನ್ನು ಮಾತ್ರವೇ ಇಟ್ಟುಕೊಳ್ಳಬೇಕು ಎನ್ನುವುದು ಜಾಣತನವಲ್ಲ ಎಂದಾಯಿತು. ಹುಸಿ ರಾಷ್ಟ್ರೀಯತೆ ಎಂದರೆ ಕೊಡೆ ಬೇಡ, ಗೊರಬೆ ಸಾಕು ಎನ್ನುವ ನಾವು ನಮ್ಮದೆಂಬ ಆತ್ಮಘಾತುಕ ಪ್ರವೃತ್ತಿ. ಅದೇ ರೀತಿ ಸೊನ್ನೆ ಎಂಬ ಗಣಿತದ ಕಲ್ಪನೆಯನು ತಗೊಳ್ಳಿ: ಇದು ಭಾರತದ ಮಹತ್ವದ ಕೊಡುಗೆ ಎನ್ನುತ್ತೇವೆ; ಅರಬರು ಇದು ತಮ್ಮ ಕೊಡುಗೆ ಎನ್ನುತ್ತಾರೆ. ಇದೊಂದು ಕ್ರಾಂತಿಕಾರೀ ಕಲ್ಪನೆ ಎನ್ನುವುದು ನಿಸ್ಸಂದೇಹ. ಒಂದು ವೇಳೆ ಇದು ಮೂಲ ಭಾರತೀಯ ಎಂದೇ ಇರಲಿ; ಇಷ್ಟಕ್ಕೆ ನಮಗೆ ಸೊನ್ನೆಯೊಂದೇ ಸಾಕೇ?! `ಸೊನ್ನೆ ನಮ್ಮದು, ಸೊನ್ನೆ ಮಾತ್ರ ಸಾಕು ನಮಗೆ’ ಎಂದು ಭಜನೆ ಮಾಡುತ್ತ ಕೂಡೋಣವೇ? ಆಧುನಿಕ ಗಣಿತದಲ್ಲಿ ಸಾವಿರಾರು ಹೊಸ ಕಲ್ಪನೆಗಳಿವೆ; ಅವು ಯಾವ ಮೂಲದವೇ ಆಗಿರಲಿ, ಅವನ್ನು ನಮ್ಮದಾಗಿಸದೆ ನಾವು ಗಣಿತದಲ್ಲಿ ಪ್ರಾವೀಣ್ಯ ಸಾಧಿಸಲಾರೆವು. ನಮಗೆ ಏನು ಬೇಕೋ ಅದನ್ನು ನಾವು ಯಾವ ಮೂಲದಿಂದಲೂ ಸ್ವೀಕರಿಸಬೇಕು; ಸ್ವೀಕರಿಸುತ್ತಲೂ ಇದ್ದೇವೆ. ಉದಾಹರಣೆಗೆ, ಕಂಪ್ಯೂಟರ್. ಯಾರು ಎಲ್ಲಿ ಮಾಡಿದರು ಇದನ್ನು? ಅನುಭೋಗಿಸುತ್ತಿರುವವರು ಯಾರು?

ನೀವು ಅಸ್ಮಿತೆಯ ಬಗ್ಗೆ ಪ್ರಸ್ತಾಪಿಸಿದ್ದೀರಿ: ಅಸ್ಮಿತೆ ಎಂದರೆ ಐಡೆಂಟಿಟಿ (Identity). ನಮ್ಮ ಯಾರ ಗುರುತೂ ತೋರ ಮಟ್ಟಿನದಲ್ಲದೆ ಅದಕ್ಕಿಂತ ಜಾಸ್ತಿಯಲ್ಲ. ಇಂದಿನ ನಾಗರಿಕ ಜನಾಂಗದ ಅಸ್ಮಿತೆ ಪಾದರಸದಂತೆ ಬಹಳ ವೋಲಟೈಲ್ `ಅಸ್ಥಿರ’. ಬುಡಕಟ್ಟು ಜನಾಂಗವಾದರೆ ಹಾಗಲ್ಲ; ಅಲ್ಲಿ ವ್ಯಕ್ತಿಯೊಬ್ಬ ಆ ಜನಾಂಗದ ಮೂಲಕ ಅಸ್ಮಿತೆ ಪಡೆಯುತ್ತಾನೆ. ಜಂಗಮನಾದ ಮನುಷ್ಯನ ಅಸ್ಮಿತೆ ಆಗಾಗ ಬದಲಾಗುವಂಥದು. ಇಂದಿನ ಸಂಸ್ಕೃತಿ ಕೂಡಾ ಹಾಗೆಯೇ; ಇದನ್ನು ಹಿಂದಣ, ಹೆಚ್ಚು ಸ್ಥಿರವಾದ, ಅವಿಚ್ಛಿನ್ನವೂ ಅಚಲವೂ ಆದ, ಸುಭದ್ರವೂ ಆದ ಕಾಲದಲ್ಲಿದ್ದಂತೆ ತಿಳಿಯಬಾರದು. ಆದ್ದರಿಂದಲೇ ಪಾಶ್ಚಾತ್ಯ-ಪೌರಾತ್ಯವೆಂಬ ವಿಭಜನೆ ಕೂಡಾ ಈಗ ತನ್ನ ಅರ್ಥ ಕಳೆದುಕೊಳ್ಳುತ್ತಿದೆ. ನನ್ನ ಮಟ್ಟಿಗೆ ಹೇಳುವುದಾದರೆ ನಾನು ಒಬ್ಬ ವ್ಯಕ್ತಿಯಲ್ಲ, ಸಾವಿರ ವ್ಯಕ್ತಿ. ಇದರಿಂದ ನಾನು ನನ್ನ ಭಾಷೆ ಅಥವಾ ನೆಲವನ್ನು ಮರೆತಿದ್ದೇನೆ ಎಂದಲ್ಲ; ಅವು ನನ್ನ ಭಾವನಾಜಗತ್ತಿನ ಅಂಗಗಳು. ಆದರೆ ನನ್ನ ವಾಸ್ತವ ಜಗತ್ತು ಬೇರೆಯೇ. ಹಾಗೂ ನನ್ನ ಮಾನಸಿಕ ಲೋಕ ಬಹಳ ಸಂಗತಿಗಳಿಂದ ತುಂಬಿದೆ-ಕನ್ನಡ, ಮಲೆಯಾಳ, ತುಳು, ತೆಲುಗು, ಅರೆಬಿಕ್, ಇಂಗ್ಲಿಷ್, ಅಲ್ಪ ಸ್ವಲ್ಪ ಲ್ಯಾಟಿನ್, ಗ್ರೀಕ್, ಪ್ರೆಂಚ್, ಜರ್ಮನ್, ಅನೇಕ ಪರಿಸರಗಳು, ಭೂದೃಶ್ಯಗಳು, ಘಟನೆಗಳು, ಮನುಷ್ಯರು. ನಾನು ಪ್ರೀತಿಸಿದ್ದೆಲ್ಲ ನನ್ನದಾಗುತ್ತದೆ, ನನ್ನನ್ನು ಪ್ರೀತಿಸಿದವರೂ ನನ್ನವರಾಗುತ್ತಾರೆ. ಅರೇಬಿಯಾದಲ್ಲಿ ಕೂತು ನಾನೀ ಮಾತುಗಳನ್ನು ಹೇಳುತ್ತಿರುವುದು; ನನ್ನ ಮನೆಯವರಾಗಲಿ ಭಾಷೆಯವರಾಗಲಿ ನನ್ನ ಜತೆ ಇಲ್ಲ. ಆದರೆ ನನ್ನ ಅರೆಬಿಯನ್ ವಿದ್ಯಾರ್ಥಿಗಳಿದ್ದಾರೆ. `ಡೋಕ್ಟರ್, ಯೂ ಆರ್ ಅವರ್ ಫಾದರ್’ ಎಂದು ಪ್ರೀತಿಯಿಂದ ಹೇಳುತ್ತಾರೆ. `ಎನಿ ಸರ್ವಿಸ್?’ ಎಂದು ಕೇಳುತ್ತಾರೆ. ಏನೇನೋ ಗಿಫ್ಟ್ಸ್ ತಂದು ಕೊಡುತ್ತಾರೆ. ನನಗೋಸ್ಕರ ಏನು ಮಾಡಲೂ ತಯಾರಿದ್ದಾರೆ. ಇನ್ನು ಈ ವಿದ್ಯಾರ್ಥಿನಿಯರ ಕತೆ ಹೇಳುವುದಕ್ಕೆ ಇನ್ನೊಂದೇ ಲೇಖನ ಬೇಕಾಗುತ್ತದೆ. ಇವರು ಕಪ್ಪು ಮೇಲ್ವಸ್ತ್ರ ಮತ್ತು ಅವಗುಂಠನ ಧರಿಸುತ್ತಾರೆ. ಚಂದದ ಮುಗ್ಧ ಹುಡುಗಿಯರು. ಲವಲವಿಕೆಯವರು. ಜಾಣೆಯರು. ಕಲಿಯುವುದರಲ್ಲಿ ಯಾರಿಗೂ ಕಡಿಮೆಯಲ್ಲ. ವಿದ್ಯಾರ್ಥಿಗಳು ಮಾತ್ರವೇ ಅಲ್ಲ; ಹೊರಗೆ ಪೇಟೆಯಲ್ಲಿ, ಬಸ್ಸಿನಲ್ಲಿ ಸಿಗುವ ಜನರೂ ನನ್ನನ್ನು ಆದರ ಗೌರವದಿಂದ ನೋಡುತ್ತಾರೆ. ದಿನಕ್ಕೆ ಅನೇಕ ಸಲ ಅಸ್ಸಲಾಮ್ ವಾಲೇಕುಮ್, ವಾಲೇಕುಮ್ ಸಲಾಮ್ ನಡೆಯುತ್ತಿರುತ್ತದೆ. ಸಲಾಮ್ ಹೇಳದೆ ದಾರಿಯಲ್ಲಿ ಮುಂದಕ್ಕೆ ಹೋಗುವವರು ಬಹಳ ಅಪರೂಪ. ವಾಸ್ತವದಲ್ಲಿ ಇಷ್ಟೊಂದು ಪ್ರೀತಿಯನ್ನು ನಾನು `ನನ್ನದೇ’ ದೇಶದಲ್ಲಿ ಕೂಡಾ ಅನುಭವಿಸಿದ್ದಿಲ್ಲ. ಅಲ್ಲಿ ನನಗೆ ಥೂ ಎಂದವರೇ ಹೆಚ್ಚು. ಹೀಗಿರುತ್ತ ಈ ಅರಬರೂ ಕೂಡಾ ನನ್ನವರೇ ಅಲ್ಲವೇ? ನನ್ನ ಬಾಲ್ಯದ ಪೂರ್ವಾಗ್ರಹಗಳನ್ನು ನಾನಿನ್ನೂ ಹೇಗೆ ಇಟ್ಟುಕೊಳ್ಳಲಿ? ನನ್ನ ಭಾವನಾಜಗತ್ತನ್ನು ಪ್ರವೇಶಿಸಿದವರೆಲ್ಲರೂ ನನ್ನವರು, ಅವರು ಯಾವ ದೇಶದವರಾಗಲಿ, ಧರ್ಮದವರಾಗಿರಲಿ. ಅಲ್ಲವೆಂದಾದರೆ ನಾನು ಮನುಷ್ಯನಾಗಿದ್ದು ಏನು ಉಪಯೋಗ? ನನ್ನ ಜಗತ್ತು ಈ ತರ ವಿಸ್ತರಿಸುತ್ತಲೇ ಇದೆ. ಅದು ಇನ್ನಷ್ಟು ವಿಸ್ತರಿಸಲಿ ಎಂದುಕೊಳ್ಳುತ್ತೇನೆ. ಇಂಥ ಸಂಕೀರ್ಣತೆ ನನಗೊಬ್ಬನಿಗೇ ಎಂದೇನೂ ನಾನು ಅನ್ನುವುದಿಲ್ಲ. ನನ್ನನ್ನು ಒಂದು ಉದಾಹರಣೆಯಾಗಿ ಕೊಡುತ್ತಿದ್ದೇನೆ ಅಷ್ಟೆ. ಶತಮಾನಗಳ ಹಿಂದಿನ ಮನುಷ್ಯ ಈ ರೀತಿ ಇದ್ದಿರಲಾರ.

ಇದೆಲ್ಲಾ ನನ್ನ ಭಾವುಕತೆ ಎಂದು ನೀವು ಅಂದುಕೊಳ್ಳಬಹುದು; ನನ್ನ ಭಾವುಕತೆಯೇ ಆಗಿರಲಾರದೇಕೆ? ಅದೂ ನನ್ನ ಭಾಗ ಎಂದು ತಿಳಿದುಕೊಂಡರೆ ಸಾಕು. ಇದರರ್ಥ ನಾನು ನನ್ನ ಹುಟ್ಟೂರಿನ ಪ್ರೀತಿಯನ್ನು ಬಿಟ್ಟಿದ್ದೇನೆ ಎಂದಲ್ಲ. ಅದನ್ನು ನಾನು ಪ್ರತ್ಯೇಕವಾಗಿ ಹೇಳಿಕೊಳ್ಳುವ ಅಗತ್ಯವಿಲ್ಲ.

ಮೊದಲಿಂದಲೂ ನಾನು ನನ್ನ ವಿರುದ್ಧವೇ ನಿಂತವನು. ಎಂದರೆ, ಜನಪ್ರಿಯತೆಯ ಬಗ್ಗೆ ಗುಮಾನಿ ವಹಿಸಿದವನು. ನನ್ನ ಯಾವ ಸಾಲುಗಳೂ ಜನಪ್ರಿಯ ಆಗಬಾರದು ಎಂದು ಆಗ್ರಹಿಸಿದವನು. ನಾನು ಕತೆ ಬರೆದಾಗಲೂ ಬೇರೆಯವರು ಬರೆಯುವುದಕ್ಕಿಂತ ಭಿನ್ನವಾಗಿ ಬರೆಯುತ್ತೇನೆ. ಈ ಸ್ವಯಂಪ್ರಜ್ಞೆ ಕೆಲವು ಸಲ ನನಗೆ ಮಾರಕವಾಗುತ್ತದೆ. ಲೇಖಕ ಅಷ್ಟೊಂದು ಸ್ವಯಂಪ್ರಜ್ಞ ಆಗಬಾರದು ಎನ್ನುವುದು ನನಗೆ ಗೊತ್ತಿದೆ. ಆದರೆ ಕೆಲವು ಸಲ ಆಗಿಬಿಡುತ್ತೇನೆ.

ಪ್ರಶ್ನೆ12: ಬಾಲ್ಯಕಾಲದ ಪೂರ್ವಗ್ರಹಗಳು ಎಂದಿರಿ. ಸ್ವಲ್ಪ ವಿಸ್ತರಿಸುವಿರಾ?

ಉತ್ತರ: ನಾನು ಹುಟ್ಟಿ ಬೆಳೆದ ಕುಗ್ರಾಮದಲ್ಲಿ ನನ್ನ ಮನೆ ಮಂದಿ ನನ್ನನ್ನು ಹೊಸ ಸಂಗತಿಗಳ ಕುರಿತಾದ ಭಯದಲ್ಲಿ ಬೆಳೆಸಿದರು: ಮನುಷ್ಯರಿರಬಹುದು, ವಸ್ತುಗಳಿರಬಹುದು, ವಿಚಾರಗಳಿರಬಹುದು, ಹೊಸತೆಂದರೆ ಅನುಮಾನ. ಹೊರಗಿನ ಮನುಷ್ಯರು ಬಂದು ಹಳ್ಳಿಗರನ್ನು ಬೆದರಿಸಿಯೋ ವಂಚಿಸಿಯೋ ಕಿತ್ತುಕೊಂಡು ಹೋಗುತ್ತಿದ್ದ ಕಾರಣ ಬಹುಶಃ ಈ ಪರಭೀತಿ ನನ್ನ ಹಿರಿಯವರಲ್ಲಿ ಇತ್ತೆಂದು ಕಾಣುತ್ತದೆ. ಚಿಕ್ಕಂದಿನಲ್ಲಿ ನಾನು ಸೈಕಲ್ ಕಲಿಯಲಿಲ್ಲ; ಸೈಕಲ್ ಕೆಟ್ಟದು, ಬೇವರ್ಸಿ ಹುಡುಗರು ಮಾಡುವ ಸಂಗತಿ ಎನ್ನುವುದು ನನ್ನ ಹಿರಿಯರ ಮತವಾಗಿತ್ತು. ಮುಸ್ಲಿಮರನ್ನು (ಮಾಪಿಳ್ಳೆಯರನ್ನು) ಗುಮಾನಿಯಿಂದ ನೋಡುತ್ತಿದ್ದರು. ಮುಸ್ಲಿಮರೆಲ್ಲರೂ ವಂಚಕರು, ಕ್ರೂರಿಗಳು, ಕೊಳಕರು, ನಮ್ಮ ಧರ್ಮವನ್ನು ಹಾಳು ಮಾಡುವವರು ಎನ್ನುವುದು ಅವರ ನಂಬಿಕೆಯಾಗಿತ್ತು. ಶೂದ್ರರನ್ನು ಮುಟ್ಟಬಾರದು; ಸಮಾಜದಲ್ಲಿ ಕೆಳವರ್ಗದವರು ಎನ್ನಿಸಿಕೊಂಡವರು ಇನ್ನೂ  ಬಹಳ ದೂರ. ಹೀಗೆಂದು ಅವರನ್ನು ನನ್ನ ಮನೆಮಂದಿ ಮಾನವತ್ವವಿಲ್ಲದೆ, ಕ್ರೂರವಾಗಿ ನೋಡಿಕೊಳ್ಳುತ್ತಿದ್ದರು ಎಂದೂ ಹೇಳುವಂತಿಲ್ಲ. ಯಾವುದೇ ಪ್ರಶ್ನೆಯಿಲ್ಲದೆ, ಪರಂಪರೆಯಿಂದ ಬಂದುದನ್ನು ಹಾಗೆಯೇ ನಡೆಸಿಕೊಂಡುಬರುತ್ತಿದ್ದರು. ಕಟ್ಟಾ ಸಸ್ಯಾಹಾರಿ ಹವ್ಯಕ ಬ್ರಾಹ್ಮಣ ಮನೆತನ ನನ್ನದು. ಹವ್ಯಕರಲ್ಲಿ ಮದ್ಯ ಮತ್ತು ಮಾಂಸಾಹಾರ ವರ್ಜ್ಯ. ನನ್ನ ಅಮ್ಮ ಬೆಳ್ಳುಳ್ಳಿ, ಈರುಳ್ಳಿ ಕೂಡಾ ತಿನ್ನುತ್ತಿರಲಿಲ್ಲ. ಪೇಟೆಗೆ ಹೋಗಿ ಬಂದರೆ ಮೈಲಿಗೆ; ಆದ್ದರಿಂದ ಅಂಗಿ ಬಟ್ಟೆಗಳನ್ನು ದೂರ ಇರಿಸಿ ಮನೆಯ ಮಡಿ ಬಟ್ಟೆಗಳನ್ನು ತೊಟ್ಟುಕೊಳ್ಳಬೇಕಿತ್ತು. ವಾಸ್ತವದಲ್ಲಿ ಮನೆಯ ಈ ಮಡಿ ಬಟ್ಟೆಗಳೇ ಹೆಚ್ಚು ಕೊಳಕಾಗಿರುತ್ತಿದ್ದುದು! ನಮ್ಮ ಜೀವನಕ್ರಮ, ನಮ್ಮ ದೈವದೇವರುಗಳು, ನಮ್ಮ ಆಚಾರ ವಿಚಾರಗಳು, ನಮ್ಮ ನಂಬಿಕೆಗಳು, ಮೌಲ್ಯಗಳು ಮಾತ್ರವೇ ಉತ್ತಮ, ಉಳಿದೆಲ್ಲವೂ ಕೆಟ್ಟವು ಎಂಬ ಭಾವನೆಯಿತ್ತು. ಆಹಾರದ ಮಟ್ಟಿಗೆ ನಾನು ಈವತ್ತಿಗೂ ಸಸ್ಯಾಹಾರಿ. ಆದರೆ ಉಳಿದ ಹಲವಾರು ಪೂರ್ವಗ್ರಹಗಳನ್ನು ಮೀರಿಕೊಂಡಿದ್ದೇನೆ ಎಂದು ನನ್ನ ವಿಶ್ವಾಸ.

ಪ್ರಶ್ನೆ13: ಇವೆಲ್ಲವೂ ನಿಮ್ಮ ಸಾಹಿತ್ಯದ ಮೇಲೆ ಯಾವ ಪರಿಣಾಮ ಬೀರಿದುವು?

ಉತ್ತರ: ನಾನು ಶಿಕ್ಷಣ ಪಡೆಯುವುದು ನನ್ನ ಮನೆಯವರಿಗೆ ಇಷ್ಟವಿರಲಿಲ್ಲ; ವಿದ್ಯಾಭ್ಯಾಸವಿದ್ದ ಮಂದಿಯಲ್ಲ ಅವರು. ಕನ್ನಡ ಸ್ವಲ್ಪ ಮಟ್ಟಿಗೆ ಓದಲು ಬರೆಯಲು ಬರುತ್ತಿತ್ತು ಅಷ್ಟೆ. ಬಡವರು. ಮನೆ ಮಂದಿಯೆಲ್ಲರೂ ದುಡಿದರೇನೇ ಅನ್ನಕ್ಕೆ ಗತಿ. ನಮಗೆ ಸ್ವಂತ ಹೊಲಮನೆ ಕೂಡಾ ಇರಲಿಲ್ಲ; ಒಕ್ಕಲುಗಳಾಗಿದ್ದೆವು. ಆದ್ದರಿಂದ ನಾನು ಹಳ್ಳಿಯಲ್ಲಿದ್ದು ದುಡಿಯಬೇಕು ಎನ್ನುವುದು ಅವರ ಇರಾದೆಯಾಗಿತ್ತು. ಆದರೆ ನಾನು ಕಲಿಯಲೇ ಬೇಕೆಂದು ಹಟ ಹಿಡಿದೆ. ಆದ್ದರಿಂದ ಊರಿನ ನನ್ನದೇನು ಚೂರು ಹಕ್ಕು ಇತ್ತೋ ಅದನ್ನು ನಾನು ಬಿಡಬೇಕಾಗಿ ಬಂತು. ಒಂದು ರೀತಿ ಸ್ವತಂತ್ರನಾದೆ. ಬಿ.ಎ.ನಲ್ಲಿ ನಾನು ಇಂಗ್ಲಿಷ್ ಐಚ್ಛಿಕ ತೆಗೊಂಡೆ. ಮುಂದೆ ಎಂ.ಎ., ಲೆಕ್ಚರರ್ ಇತ್ಯಾದಿ. ನಾನು ಗಂಭೀರವಾಗಿ ಸಾಹಿತ್ಯರಚನೆಯಲ್ಲಿ ತೊಡಗಿದ್ದು ನವ್ಯದ ಕಾಲದಲ್ಲಿ. ಆಗ ನಾನಿನ್ನೂ ಯುವಕ. ನವ್ಯ ಸಾಹಿತ್ಯವನ್ನು ಹಲವರು ಹಲವು ತರದಲ್ಲಿ ನೋಡಿದ್ದಾರೆ: ನನಗೆ ಅದು ಪರಂಪರೆಯಿಂದ ಮುಕ್ತವಾಗುವ ವಿಧಾನ ಎನಿಸಿತ್ತು. ನನ್ನ ಆರಂಭಿಕ ಕವಿತೆಗಳನ್ನು ಈ ಹಿನ್ನೆಲೆಯಲ್ಲಲ್ಲದೆ ಕಾಣುವುದು ಸಾಧ್ಯವಿಲ್ಲ. ಈ ಸ್ವಾತಂತ್ರ್ಯಾಪೇಕ್ಷೆಯನ್ನು ನಾನು ಈಗಲೂ ಇರಿಸಿಕೊಂಡಿದ್ದೇನೆ. ಆದರೆ ಸ್ವಾತಂತ್ರ್ಯವೆಂದರೆ ಬರೇ ವ್ಯಕ್ತಿಸ್ವಾತಂತ್ರ್ಯವೂ ಅಲ್ಲ; ಇಡೀ ಸಮಷ್ಟಿಯ ಸ್ವಾತಂತ್ರ್ಯ, ವ್ಯಕ್ತಿ ಮತ್ತು ಸಮಾಜದ ಪ್ರಗತಿಗೆ ಮಾರಕವಾದ ಕಪಿಮುಷ್ಟಿಯ ಚಿಂತನೆಗಳಿಂದ ಬಿಡುಗಡೆ.

ಪ್ರಶ್ನೆ14: ನೀವು ದೇವರನ್ನು ನಂಬುತ್ತೀರಾ?

ಉತ್ತರ: ಇಲ್ಲ. ಆದರೆ ಇದು ಹೌದು-ಇಲ್ಲ ಎಂಬ ಪ್ರಶ್ನೆಯೂ ಅಲ್ಲ. ದೇವರನ್ನು ಶ್ರದ್ಧಾಭಕ್ತಿಯಿಂದ ನಂಬುತ್ತಿದ್ದ ಕುಟುಂಬದಿಂದ ಬಂದವನು ನಾನು. ಭಾಗವತ ಸಂಪ್ರದಾಯದ ಹವ್ಯಕರು ಹಿಂದೂ ಪಾಂಥಿಯಮ್‌ನ ಸಕಲ ದೇವರನ್ನೂ ನಂಬುತ್ತಾರೆ; ಈ ಎಲ್ಲ ದೇವರುಗಳೂ ಒಂದೇ ದೇವರ ಬೇರೆ ಬೇರೆ ಅವತಾರಗಳು, ರೂಪಗಳು ಎಂದು ತಿಳಿಯುತ್ತಾರೆ. ನಾನು ಕೂಡಾ ಚಿಕ್ಕಂದಿನಲ್ಲಿ ಇದನ್ನೆಲ್ಲ ನಂಬುತ್ತಿದ್ದೆ. ದೇವಸ್ಥಾನಗಳಿಗೆ ಹೋಗುತ್ತಿದ್ದೆ; ಪೂಜೆ ಮಾಡುತ್ತಿದ್ದೆ, ಪ್ರಾರ್ಥಿಸುತ್ತಿದ್ದೆ. ಆದರೆ ಚಿಕ್ಕಂದಿನಲ್ಲಿ ನನ್ನ ಪ್ರಾರ್ಥನೆ ಹೆಚ್ಚಾಗಿ ನನ್ನ ಅಮ್ಮನ ಕುರಿತಾಗಿ ಇತ್ತು: ಅಮ್ಮನ ಇಳಿವಯಸ್ಸಿನ ಮಗ ನಾನು. ಅಮ್ಮ ಸಾಯುವಾಗ ನಾನೂ ಸಾಯಬೇಕು ಎನ್ನುವುದು ನನ್ನ ಪ್ರಾರ್ಥನೆಯಾಗಿತ್ತು. ಪ್ರತಿದಿನ ಮುಂಜಾನೆ ಏಳುವಾಗಲೂ, ಸಂಜೆ ಮಲಗುವಾಗಲೂ ನಾನು ಶ್ರದ್ಧೆಯಿಂದ ಮೌನವಾಗಿ ಈ ಪ್ರಾರ್ಥನೆ ಮಾಡುತ್ತಿದ್ದೆ. ನನ್ನ ಅಮ್ಮನಿಗೆ ಇದು ಎಂದೂ ಗೊತ್ತಿರಲಿಲ್ಲ. ನಾನವಳಲ್ಲಿ ಹೇಳಲೂ ಇಲ್ಲ. ಹೇಳಿದ್ದರೆ ಗಾಬರಿಯಾಗುತ್ತಿದ್ದಳು, ಯಾಕೆಂದರೆ ಅವಳು ನನ್ನನ್ನು ಬಹುವಾಗಿ ಪ್ರೀತಿಸುತ್ತಿದ್ದಳು. ನನ್ನ ಅಣ್ಣ ಹೆಚ್ಚು ವಾಸ್ತವವಾದಿ; ಆದರೂ ದೇವರಲ್ಲಿ, ಪೂಜೆಯಲ್ಲಿ ನಂಬಿಕೆಯಿದ್ದವರು. ನಮ್ಮ ತಂದೆ ಊರೂರು ಹೋಗಿ ಪೌರೋಹಿತ್ಯ ಮಾಡುವವರಿದ್ದರು. ಮನೆಯಲ್ಲಿ ಸಂಜೆ ನಿತ್ಯವೂ ಪೂಜೆ ಜರುಗುತ್ತಿತ್ತು. ಆಗಾಗ್ಗೆ ಗಣಹೋಮ, ಶಿವಪೂಜೆ, ತ್ರಿಕಾಲ ಪೂಜೆ, ವಿಷ್ಣು ಹೋಮ ಮುಂತಾದುವು ನಡೆಯುತ್ತಿದ್ದುವು. ಈ ಎಲ್ಲ ನಂಬಿಕೆಗಳೂ ಯಾವಾಗ ನನ್ನಲ್ಲಿ ಇಲ್ಲವಾದುವು ಎಂದು ಗೊತ್ತಿಲ್ಲ. ನೆಲ ಅದುರುವಂಥ ಯಾವ ವೈಯಕ್ತಿಕ ಅನುಭವವೂ ಇದಕ್ಕೆ ಕಾರಣವಲ್ಲ. ಬಹುಶಃ ನನ್ನಲ್ಲಿ ವೈಚಾರಿಕತೆ ಬೆಳೆಯುತ್ತಿದ್ದಂತೆ ಇದೆಲ್ಲ ಹಿಂದೆ ಸರಿದಿರಬೇಕು. ಅಲ್ಲದೆ ಪೂಜೆ ಪುನಸ್ಕಾರ ನಡೆಸುತ್ತಿದ್ದರೂ ಅತ್ಯಂತ ತುಚ್ಛವಾಗಿ ವರ್ತಿಸುತ್ತಿದ್ದ ಅನೇಕರನ್ನು ನಾನು ನಮ್ಮೂರಲ್ಲೇ ಕಂಡಿದ್ದೆ: ಕ್ರೂರಿಗಳು, ಸುಳ್ಳರು, ಹಿಂಸಕರು, ವಂಚಕರು.

ದೇವರ ಕುರಿತಾಗಿ ಹೇಳುವುದು ಬಹಳವಿದೆ. ಇಲ್ಲಿ ಅದನ್ನೆಲ್ಲ ಹೇಳಲಾರೆ. ಆದರೆ ಒಂದು ಪ್ರಶ್ನೆ ಯಾವಾಗಲೂ ಎದುರಾಗುತ್ತದೆ: ದೇವರಿಲ್ಲ ಎಂದಾದರೆ ಇದೆಲ್ಲ ಹೇಗೆ ಉಂಟಾಯಿತು ಎನ್ನುವುದು. ಭೌತಿಕ ಶಕ್ತಿ ಮತ್ತು ಜೈವಿಕ ಶಕ್ತಿ ಎರಡನ್ನೂ ಒಳಗೊಂಡ ಒಂದು ವಿದ್ಯಮಾನ ಇರಬಹುದು; ಅದೇನೆಂದು ನಮಗೆ ಗೊತ್ತಿಲ್ಲ. ಕೆಲವರು ಇದನ್ನೇ ದೈವಿಕ ಶಕ್ತಿ ಎಂದು ಕರೆಯುತ್ತಾರೆ. ಆದರೆ ದೇವರು ಎನ್ನುವುದೊಂದು ಕಲ್ಪನೆ, ದೇವರನ್ನು ಕಲ್ಪಿಸಿದೊಡನೆ ಹಲವು ಪ್ರಶ್ನೆಗಳನ್ನು ನಾಶಪಡಿಸಿದ ಹಾಗೆ. ಸರಿಯಾದ ಚಿಕಿತ್ಸೆಯಿಲ್ಲದೆ ರೋಗಿಯೊಬ್ಬ ಸತ್ತರೂ ದೇವರ ಇಚ್ಛೆ, ರಸ್ತೆ ಅಪಘಾತದಲ್ಲಿ ಕೈಕಾಲು ಕಳೆದುಕೊಳ್ಳುವುದೂ ಅದೇ. ದೈವೋತ್ತರ ಯುಗದಲ್ಲಿ ಮನುಷ್ಯನೇ ಹೆಚ್ಚೆಚ್ಚು ಹೊಣೆಗಾರನಾಗುತ್ತಾನೆ. ಹಾಗೂ ಆಧುನಿಕ ಯುಗದ ವ್ಯಕ್ತಿ, ಅದರಲ್ಲೂ ಕವಿ, ದೇವರನ್ನು ನಂಬಿದರೆ ಅದೊಂದು ವಿರೋಧಾಭಾಸವೇ ಸರಿ. ನನ್ನ ಮಟ್ಟಿಗೆ ದೇವರೊಂದು ರೂಪಕ. ಒಂದು ರೂಪಕವಾಗಿ ನನ್ನ ಕವಿತೆಗಳಲ್ಲಿ ದೈವ ದೇವರ ಪ್ರಸ್ತಾಪ ಬರುತ್ತದೆ.

ಹಲವರಿಗೆ ದೈವ ವಿಶ್ವಾಸ ಒಂದು ಮಾನಸಿಕ ಚಿಕಿತ್ಸೆ ಇದ್ದಹಾಗೆ; ದೇವರನ್ನು ಪ್ರಾರ್ಥಿಸಿದರೆ ಅವರಿಗೆ ಮನಶ್ಶಾಂತಿ ಸಿಗುತ್ತದೆ. ಹಲವು ವರ್ಷಗಳ ಹಿಂದೆ ನಾನು ಒಂದು ವರ್ಷ ಕೇರಳದ ಮಡಪ್ಪಳ್ಳಿ ಎಂಬಲ್ಲಿ ಕಾಲೇಜ್ ಲೆಕ್ಚರರ್ ಆಗಿದ್ದೆ. ಪೇಟೆ ಮಧ್ಯದ ಹೋಟೆಲ್ ಒಂದರಲ್ಲಿ ರೂಮ್ ಮಾಡಿ ಇರುತ್ತಿದ್ದೆ. ನನಗಿಂತ ಹಿರಿಯರಾದ ನನ್ನ ಸಹೋದ್ಯೋಗಿ ಒಬ್ಬರು ಇನ್ನೊಂದೆಡೆ ಇದೇ ರೀತಿ ವಾಸಿಸುತ್ತಿದ್ದರು. ಅವರು ಪ್ರತಿ ಶುಕ್ರವಾರ ಬಸ್ ಹಿಡಿದು ಕೆಲವು ಮೈಲಿ ದೂರದ ದೇವಾಲಯವೊಂದಕ್ಕೆ ಹೋಗುತ್ತಿದ್ದರು. ನಾನೂ ಅವರ ಜತೆ ಒಂದೆರಡು ಬಾರಿ ಹೋಗಿದ್ದೆ. ಅದೊಂದು ಪ್ರಶಾಂತವಾದ ವಾತಾವರಣವಾಗಿತ್ತು. ದೇವಾಲಯ ಯಾವುದೇ ವಾಸ್ತುಶಿಲ್ಪದ ದೃಷ್ಟಿಯಿಂದ ಮಹತ್ವದ್ದಾಗಿರಲಿಲ್ಲ. ಆದರೆ ಪೇಟೆಯ ಸದ್ದುಗದ್ದಲ ಇಲ್ಲದ ಹಳ್ಳಿಯ ಪರಿಸರವಾಗಿತ್ತು ಅದು. ಪಕ್ಕದಲ್ಲೊಂದು ದೊಡ್ಡ ಮರವಿತ್ತು; ಬಹುಶಃ ಹುಣಸೆ ಮರವೆಂದು ನನ್ನ ನೆನಪು. ಅಂತೂ ಬಹು ದೊಡ್ಡ ಮರ; ಅದರ ಕಟ್ಟೆಯಲ್ಲಿ ನಾವು ಬಹು ಹೊತ್ತು ಕೂತಿರುತ್ತಿದ್ದೆವು. ನಾನು ನನ್ನ ಸಹೋದ್ಯೋಗಿಯಂತೆ ಭಕ್ತಿಯಿಂದ ಬಂದವನಲ್ಲ; ಆದರೂ ಈ ದೇವಾಲಯ ಭೇಟಿ ನನಗೂ ಒಂದು ತರದ ಶಾಂತಿ ಒದಗಿಸುತ್ತಿತ್ತು.

ಪ್ರಶ್ನೆ15: ನೀವೂ ಸೇರಿದಂತೆ ಇಂದಿನ ಕವಿಗಳಿಗಿರುವ ಸವಾಲುಗಳು ಯಾವುವು?

ಉತ್ತರ: ಒಂದು, ಈ ದೈವೋತ್ತರ ಯುಗಕ್ಕೆ ಸಂಬಂಧಿಸಿದ್ದು. ನಾವು ದೈವದ ಮೇಲೆ ಯಾವುದನ್ನೂ ಹೇರುವ ಹಾಗಿಲ್ಲ. ಈ ಲೋಕ ಹೇಗೆ ಉಂಟಾಯಿತೋ ನಮಗೆ ಗೊತ್ತಿಲ್ಲ; ಅದು ಹೇಗೆ ಕೊನೆಗೊಳ್ಳುತ್ತದೆ ಎನ್ನುವುದೂ ತಿಳಿಯದು. ಈ ಮಧ್ಯೆ ಒಬ್ಬೊಬ್ಬ ಮನುಷ್ಯನ ಆಯುಸ್ಸೂ ಸೀಮಿತ. ನಾವೇನು ಮಾಡಬೇಕು? ಹೇಗೆ ಜೀವಿಸಬೇಕು? ಇದು ಕವಿಗಳ ಸಮಸ್ಯೆ ಮಾತ್ರವೇ ಅಲ್ಲ; ಪ್ರತಿಯೊಬ್ಬ ವಿಚಾರವಂತನ ಸಮಸ್ಯೆಯೂ ಹೌದು. ಕವಿಗಳ ಮಟ್ಟಿಗೆ ಹೇಳುವುದಾದರೆ, ಒಂದು ಕಾಲದಲ್ಲಿ (ಎಂದರೆ ಅಭಿಜಾತ ಕಾವ್ಯದ ಕಾಲದಲ್ಲಿ) ಕವಿಗಳು ಧಾರ್ಮಿಕ ಕಾವ್ಯಗಳನ್ನು ಬರೆಯುತ್ತಿದ್ದರು; ಅವರು ಲೌಕಿಕ ಕಾವ್ಯಗಳನ್ನು ಬರೆದಾಗಲೂ ಧರ್ಮ ಹಾಗೂ ಧರ್ಮಮೂಲವಾದ ಜೀವನ ಮೌಲ್ಯಗಳೇ ಕಾವ್ಯವಸ್ತುಗಳಾಗಿ ಇರುತ್ತಿದ್ದುವು. ಮುಂದೆ ರೊಮ್ಯಾಂಟಿಕ್ ಯುಗ ಆರಂಭವಾದಾಗ ಧರ್ಮ ಅಥವಾ ದೇವರ ಸ್ಥಾನದಲ್ಲಿ ಪ್ರಕೃತಿಯನ್ನು ಇರಿಸಲಾಯಿತು. ಇಂಗ್ಲಿಷ್‌ನಲ್ಲಿ ವರ್ಡ್ಸ್‌ವರ್ತ್, ಶೆಲ್ಲಿ, ಕೀಟ್ಸ್ ಮುಂತಾದವರು ಪ್ರಕೃತಿಯನ್ನು ಆರಾಧಿಸಿ ಕವಿತೆಗಳನ್ನು ಬರೆದರು. ಇಡೀ ರೊಮ್ಯಾಂಟಿಕ್ ಚಳುವಳಿಯ ಕೇಂದ್ರ ಇರುವುದು `ಸ್ಪಿರಿಟ್’ ಅಥವಾ `ಚೈತನ್ಯ’ ಎಂಬ ವಿಶ್ವಾತ್ಮಕ ಕಲ್ಪನೆಯಲ್ಲಿ. ಇದು ದೇವರು ಎಂಬ ಹಳೆಯ ಕಲ್ಪನೆಯ ಹೊಸ ರೂಪ. ದೇವರು ಸರ್ವಾಂತರ್ಯಾಮಿ; ಅದೇ ರೀತಿ ಸ್ಪಿರಿಟ್ ಕೂಡಾ. ಕನ್ನಡದ ನವೋದಯ ಕವಿಗಳಾದ ಕುವೆಂಪು, ಬೇಂದ್ರೆ ಮುಂತಾದವರ ಕವಿತೆಗಳಲ್ಲಿ ನಾವು ಕಾಣುವುದು ಇಂಥ ವಿಶ್ವಚೈತನ್ಯದ ಆರಾಧನೆಯನ್ನು. ಇವು ಯಾವುವೂ ಮನುಷ್ಯವಿಮುಖಿ ಎಂದು ನಾನು ಹೇಳಲಾರೆ. ಆದರೆ ಈ ಚೈತನ್ಯ ಮಾತ್ರ ಸರ್ವತ್ರ ಹಾಗೂ ಸರ್ವಶಕ್ತ; ಇದನ್ನು ಅರಿಯುವುದು, ಮತ್ತು ಪ್ರತಿ ಜೀವಿಯಲ್ಲಿ, ಪ್ರತಿ ವಸ್ತುವಿನಲ್ಲಿ, ಪ್ರತಿ ವಿದ್ಯಮಾನದಲ್ಲಿ ಇದನ್ನು ಕಾಣುವುದು ಇಂಥ ಕವಿತೆಗಳ ಉದ್ದೇಶ. ಆಧುನಿಕ ಯುಗಕ್ಕೆ ಇಂಥ ವಿಶ್ವಚೈತನ್ಯದಲ್ಲೂ ವಿಶ್ವಾಸವಿಲ್ಲ. ಅದರ ವಿಶ್ವಾಸವಾದರೂ ಏನು ಎನ್ನುವುದೇ ಸ್ಪಷ್ಟವಿಲ್ಲ. ಬಹುಶಃ ಇದೊಂದು ಅವಿಶ್ವಾಸಿ ಯುಗ.

ಇದು ಕೇವಲ ದೈವವಿಶ್ವಾಸಕ್ಕೆ ಸಂಬಂಧಿಸಿದ ಸಂಗತಿಯೂ ಅಲ್ಲ: ಸಕಲ ಮೌಲ್ಯಗಳೂ ಕುಸಿದಿರುವ ಸಂಗತಿ; ಅದರ ಜತೆಗೇ ಮಿದುವಾದ ಭಾವನೆಗಳೂ ಕೂಡಾ; ಸತ್ಯ, ನ್ಯಾಯ ಮುಂತಾದ ಕಲ್ಪನೆಗಳು ಸಹಾ. ಚೆಕ್ ಲೇಖಕ ಮಿಲಾನ್ ಕುಂದೇರಾ ಈ ಸ್ಥಿತಿಯನ್ನು the unbearable lightness of being `ತಡೆಯಲಾರದ ಜೀವ ಲಾಘವ’ ಎಂದು ಕರೆಯುತ್ತಾನೆ. ಎಂದರೆ ಯಾವ ಗುರುತ್ವಾಕರ್ಷಣವೂ ಇರದಂಥ ಸ್ಥಿತಿ: ಇದು ಭೂಮಿಯನ್ನು ಬಿಟ್ಟು ಬೇರೇ ವಾತಾವರಣವನ್ನು ಹೊಕ್ಕ ಹಾಗೆ. ಅಲ್ಲಿ ನಮಗೆ ಹಿಡಿದುಕೊಳ್ಳುವುದಕ್ಕೆ ಏನೂ ಆಧಾರವಿಲ್ಲ. ಯಾವುದೂ ಸ್ಥಿರವಲ್ಲ, ಯಾವುದೂ ಪವಿತ್ರವಲ್ಲ, ಯಾವುದೂ ಪ್ರಶ್ನಾತೀತವಲ್ಲ There are no axioms! ಪೂರ್ವಪಕ್ಷ ಎಂಬುದೇ ಇಲ್ಲ. ಇಂಥ ಹಿನ್ನೆಲೆಯಲ್ಲಿ ಕವಿತೆ ಇರುವುದು ಹೇಗೆ ಸಾಧ್ಯ? ಪರಂಪರಾಗತ ಕವಿತೆಯಂತೂ ಅಸಾಧ್ಯವೇ ಸರಿ. `ಈ ಕವಿತೆಯ ಅರ್ಥವೇನು?’ ಎಂಬ ಪ್ರಶ್ನೆ ಮೂಡುವುದು ಇಂಥ ಹಿನ್ನೆಲೆಯಿಂದ.

ಎರಡು, ಕವಿತೆಯ ಸ್ವರೂಪಕ್ಕೆ ಸಂಬಂಧಿಸಿದ ಸಂಗತಿ. ಇಂದು ನಾವು ಹಳೆಯ ಮಾದರಿಗಳಿಗೆ ಮರಳುವಂತಿಲ್ಲ. ಹಳೆಯ ಭಾಷಾರೀತಿಯನ್ನೂ ಉಪಯೋಗಿಸುವಂತಿಲ್ಲ. ಹಾಗೆ ಮಾಡಿದರೆ ಹಳಬರಂತೆ ಆಗುತ್ತೇವೆ. ಇಂದಿನ ರೀತಿ `ಮುಕ್ತ ಛಂದಸ್ಸು’. ಇದೊಂದು ವಿರೋಧಾಭಾಸವೇ ಆಗಿರಬಹುದು; ಆದರೂ ಅದಲ್ಲದೆ ನಮಗೆ ಬೇರೆ ದಾರಿಯಿಲ್ಲ. ಮುಕ್ತ ಛಂದಸ್ಸಿನ ಜತೆ ಬೆರೆಕೆಯಾಗಿ ಇತರ ಕೆಲವು ಛಂದೋರೀತಿಗಳನ್ನು ಮಿತಿಯಲ್ಲಿ ಬಳಸಬಹುದು. ಆದರೂ ಕವಿತೆಯ ಪ್ರಧಾನ ರೀತಿ ಮುಕ್ತಛಂದಸ್ಸೇ ಆಗಿರುತ್ತದೆ. ಪ್ರಾಸದ ಕುರಿತಾಗಿಯೂ ಈ ಮಾತು ಸಲ್ಲುತ್ತದೆ. ಆದಿಪ್ರಾಸ, ಅಂತ್ಯಪ್ರಾಸ ಮುಂತಾದವನ್ನು ನಾವಿಂದು ಕ್ರಮಪ್ರಕಾರವಾಗಿ ಬಳಸುವಂತಿಲ್ಲ. ಒಂದು ಕಾಲದಲ್ಲಿ ಇವೆಲ್ಲ ಕಡ್ಡಾಯವಾಗಿದ್ದುವು; ಇಂದು ಇವು ಇದ್ದರೆ ಆಭಾಸವೆನಿಸುತ್ತವೆ. ಶೇಕ್ಸ್‌ಪಿಯರನ `ರೋಮಿಯೋ ಏಂಡ್ ಜೂಲಿೈೆಟ್’ ಅವನ ಆರಂಭದ ಕಾಲದ ನಾಟಕ; ಇದರಲ್ಲಿ ಅವನು ಅಂತ್ಯಪ್ರಾಸವಿರುವ ದ್ವಿಪದಿ ಛಂದಸ್ಸನ್ನು ಬಳಸುತ್ತಾನೆ. ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸುವಾಗ ನನಗೆ ಛಂದಸ್ಸಿನ ಸಮಸ್ಯೆ ಎದುರಾಯಿತು: ಪ್ರಾಸಬದ್ಧ ದ್ವಿಪದಿಯಲ್ಲೇ ಆರಂಭಿಸಿ ನೋಡಿದೆ; ಆದರೆ ಅದು ಕೃತಕವೂ ತಮಾಷೆಯದೂ ಎನಿಸಿತು. ನಂತರ ಆ ರೀತಿಯನ್ನು ಬಿಟ್ಟುಬಿಟ್ಟು ಮುಕ್ತಛಂದಸ್ಸನ್ನು ಬಳಸತೊಡಗಿದೆ. ಶೇಕ್ಸ್‌ಪಿಯರ್ ತಾನೇ ನಂತರದ ನಾಟಕಗಳಲ್ಲಿ ಅಂತ್ಯ ಪ್ರಾಸವನ್ನು ತೊರೆಯುತ್ತಾನೆ. ಅಂತ್ಯಪ್ರಾಸವನ್ನು ಬಳಸಿ ಬರೆಯುವುದು ಅಸಾಧ್ಯ ಎಂದಲ್ಲ; ಆದರೆ ಹೀಗೆ ಮಾಡುವಾಗ ಸಾಲಿನ ಕೊನೆಗೆ ಯತಿ ಬರದಂತೆ ನೋಡಿಕೊಳ್ಳಬೇಕಾಗುತ್ತದೆ, ಅಲ್ಲದಿದ್ದರೆ ವಿಚಾರಕ್ಕೆ ಪ್ರತಿ ಸಾಲಿನ ಕೊನೆಗೆ ತಡೆ ಬರುತ್ತದೆ. ಇಂದಿನ ನಮ್ಮ ಚಿಂತನಾಕ್ರಮ ಇದನ್ನು ತಾಳಲಾರದು. ಇದಕ್ಕೆ ಮುಕ್ತಛಂದಸ್ಸೇ ಸರಿಯಾದುದು. ಮುಕ್ತಛಂದಸ್ಸು ಎಂದರೇನು ಎಂದು ಕೇಳಬಹುದು: ಎಲ್ಲಾ ರೀತಿಯ ಶಬ್ದ ಲಯಗಳನ್ನೂ ಮೀರಿ ಬರೆಯುವುದೇ ಮುಕ್ತಛಂದಸ್ಸು. ಇದಕ್ಕಿಂತ ಹೆಚ್ಚಿನ ವಿವರಣೆ ಅಗತ್ಯವಿಲ್ಲ.

ಯಾಕೆ ಹೀಗೆ ಎಂದು ಕೇಳಬೇಕು. ಯಾಕೆಂದರೆ ನಮ್ಮ ಗಣತಂತ್ರ ಯುಗ ಯಾವ ರೀತಿಯ ಆಲಂಕಾರಿಕ ಭಾಷೆಯನ್ನೂ (rhetoric) ಸಹಿಸುವುದಿಲ್ಲ.  ರ್ಹೆಟರಿಕ್  ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು, ಆದ್ದರಿಂದ ಜನ ರ್ಹೆಟರಿಕ್ ಬಗ್ಗೆ ಜಾಗ್ರತೆ ವಹಿಸಬೇಕು ಎನ್ನುತ್ತಾನೆ ವಿಚಾರವಾದಿ ಬರ್ಟ್ರೆಂಡ್ ರಸೆಲ್. ಯಾಕೆಂದರೆ ರ್ಹೆಟರಿಕ್‌ನಲ್ಲಿ ಒಂದು ತರದ ವಂಚನೆ ಇದೆ: ಸತ್ಯವಿಲ್ಲದಲ್ಲಿ ರ್ಹೆಟರಿಕ್ ಪ್ರವೇಶ ಮಾಡುತ್ತದೆ, ಹಾಗೂ ಇಲ್ಲದ್ದನ್ನು ಇದೆ ಎಂದು ಅನಿಸುವಂತೆ ಮಾಡುತ್ತದೆ. ಆದ್ದರಿಂದಲೇ ರ್ಹೆಟರಿಕ್ ಯಾವತ್ತೂ ಕೆಟ್ಟ ರಾಜಕಾರಣಿಗಳ ಸೊತ್ತಾಗಿರುವುದು: ಚಂದವಾಗಿ, ನಯವಾಗಿ ಮಾತಾಡಿ ಜನರನ್ನು ಮರುಳುಮಾಡುವುದಕ್ಕೆ ಅದು ಅವರಿಗೆ ಬೇಕು. ಇತಿಹಾಸವನ್ನು ನೋಡಿದರೆ ನಮಗೆ ಗೊತ್ತಾಗುತ್ತದೆ, ಪ್ಲೇಟೋನಿಂದ ಮೊದಲಾಗಿ ದೆಕಾರ್ತ್, ಫ್ರಾಯ್ಡ್‌, ನಂತರ ರಸೆಲ್ ವರೆಗೆ ಯಾಕೆ ವಿಚಾರವಾದಿಗಳು ಕವಿತೆಗೆ ಎದುರಾಗಿದ್ದರು ಎನ್ನುವುದು. ವಾಸ್ತವದಲ್ಲಿ ಅವರು ಎದುರಾಗಿದ್ದುದು ಕವಿತೆಗೆ ಅಲ್ಲ, ಕವಿತೆ ಬಳಸುತ್ತಿದ್ದ ವಿಧಾನಗಳಿಗೆ. ಆದರೆ ಫ್ರಾಯ್ಡ್‌ನಂಥವರಿಗೆ ಕವಿ ಎಂದರೆ ಮನೋವ್ಯಾಧಿಯಿರುವ ವ್ಯಕ್ತಿ. ಇದೇ ಅಭಿಪ್ರಾಯ ಜನಸಾಮಾನ್ಯರಲ್ಲೂ ಇರುವುದನ್ನು ಗಮನಿಸಬೇಕು. `ನಾರ್ಮಲ್’ ವ್ಯಕ್ತಿ ಕವಿತೆ ಬರೆಯುವುದಿಲ್ಲ, ಓದುವುದೂ ಇಲ್ಲ!

ಇಂದಿನ ನಮ್ಮ ಯುಗ ಇಂಥ ರ್ಹೆಟರಿಕಲ್ ವಿಧಾನಗಳಿಗೆ ವಿರುದ್ಧವಾಗಿದೆ: ಎಂದರೆ, ಲಯಬದ್ಧತೆ, ಛಂದಸ್ಸು, ಪ್ರಾಸ, ಹಾಗೂ ಉಪಮೆ, ರೂಪಕ ಮುಂತಾದ ಸಂಗತಿಗಳಿಗೆ. ಇಂಥವುಗಳನ್ನು ಹೆಚ್ಚೆಚ್ಚು ಬಳಸಿದಷ್ಟೂ ನಮ್ಮ ಭಾಷೆ ಸುಳ್ಳಾಗುತ್ತ ಹೋಗುತ್ತದೆ; ಆಮೇಲೆ ರಾಜಕಾರಣಿಗಳಿಗೂ ಕವಿಗಳಿಗೂ ವ್ಯತ್ಯಾಸವೇ ಇರುವುದಿಲ್ಲ. ಸುಳ್ಳಾಗದೆ ಬರೆಯುವುದು ಹೇಗೆ ಎನ್ನುವುದೇ ಇಂದಿನ ಸಮಸ್ಯೆ. ಕತೆಗಳ ವಿರುದ್ಧ ಕಾಫ್ಕಾ ಕತೆ ಬರೆದಂತೆ, ಕಾದಂಬರಿಗಳ ವಿರುದ್ಧ ಜಾಯ್‌ಸ ಕಾದಂಬರಿ ಬರೆದಂತೆ, ನಾಟಕಗಳ ವಿರುದ್ಧ ಬೆಕೆಟ್ ನಾಟಕ ಬರೆದಂತೆ ಇಂದಿನ ಕವಿ ಕವಿತೆಗಳ ವಿರುದ್ಧ ಕವಿತೆ ಬರೆಯಬೇಕಾಗಿದೆ. ಆದರೆ ಹಿಂದಣ ಮಾದರಿಗಳಿಗೆ ಒಗ್ಗಿಕೊಂಡ ಮನುಷ್ಯರಿಗೆ ಇದು ಅರ್ಥವಾಗುವುದಿಲ್ಲ.

ಪ್ರಶ್ನೆ16: ಓದುಗರಿಗೆ ಅರ್ಥವಾಗದೆ ಬರೆದು ಏನು ಉಪಯೋಗ?

ಉತ್ತರ: ಬರೆಯುವ ಕಾಲಕ್ಕೆ ಕವಿಯ ಮುಂದೆ ಓದುಗರ ಕಲ್ಪನೆಯೇ ಇರುವುದಿಲ್ಲ, ಇರಬಾರದು. ಬರೆಯುವಾಗ ಕವಿ ಮಾತ್ರ ಇರುತ್ತಾನೆ; ಆತನೇ ಒಬ್ಬ ವಿಕ್ಷಿಪ್ತ ವ್ಯಕ್ತಿಯಿದ್ದು ಹಲವು ಸಂದಿಗ್ಧತೆಗಳ, ಅನಿಶ್ಚಿತತೆಗಳ ಪ್ರತಿನಿಧಿಯಾಗಿದ್ದರೂ ಇರಬಹುದು. ಆದರೆ ಓದುಗರಿಗೆ ಅರ್ಥವಾಗಬೇಕು, ಇಷ್ಟವಾಗಬೇಕು ಎಂದು ಬರೆಯುವ ಕವಿ ಇತರರಿಗಾಗಿ ಸುಳ್ಳು ಸುಳ್ಳೇ ಬರೆಯುತ್ತಾನೆ. ಎಲ್ಲ ಕಲೆಯಲ್ಲೂ ಹೀಗೇನೇ. ಈ ಪ್ರಶ್ನೆ ಮತ್ತೆ ಮತ್ತೆ ಏಳುತ್ತಿರುವ ಕಾರಣ ಇದೊಂದು ಉತ್ತರವಿಲ್ಲದ ಪ್ರಶ್ನೆಯೆಂದು ಇಲ್ಲಿಗೇ ಬಿಟ್ಟುಬಿಡುವುದು ಒಳ್ಳೆಯದೆನಿಸುತ್ತದೆ. ಕವಿಯ ಸ್ವಾತಂತ್ರ್ಯ ಕವಿಗೆ, ಓದುಗನ ಸ್ವಾತಂತ್ರ್ಯ ಓದುಗನಿಗೆ ಇರಲಿ. ಅವರು ಪರಸ್ಪರ ನಿಯಂತ್ರಿಸುವುದು ಬೇಡ.

ಪ್ರಶ್ನೆ 17: ಆದರೂ ಒಂದು ಮಟ್ಟದ ನಿಯಂತ್ರಣ ಇದ್ದೇ ಇರುತ್ತದಲ್ಲವೇ?

ಉತ್ತರ: ಇರುತ್ತದೆ, ಸಂಪೂರ್ಣವಾಗಿ ಇಲ್ಲದಾಗಿಸಲು ಬರುವುದಿಲ್ಲ. ಮನುಷ್ಯಾವಸ್ಥೆಯೇ ಹೀಗೆ: ಒಂದೊಂದು ಯುಗವೂ ಅದರದೇ ಅರಿವು ಮರೆವಿನ ಮಿತಿಗಳಲ್ಲಿ ಬದುಕುತ್ತದೆ, ಚಿಂತಿಸುತ್ತದೆ, ಅವುಗಳನ್ನು ಮೀರಲೂ ಯತ್ನಿಸುತ್ತದೆ. ಈ ಕವಿ-ಓದುಗನ ನಡುವೆ ಸಿಲುಕಿದ ಕವಿತೆಯ ಸಮಸ್ಯೆಯೂ ಅದೇ ರೀತಿ, ಅದರ ಗುಣಾವಗುಣ ನಿರ್ಣಯ ಮಾಡುವುದು ಕಷ್ಟ. ಆದರೆ ಸಮಕಾಲೀನ ಓದುಗ ವಿಮರ್ಶಕರಿಂದ ಅವಜ್ಞೆಗೊಳಗಾದ ಕೃತಿಗಳು ನಂತರ ಗಣನೆಗೆ ಬಂದ ಉದಾಹರಣೆಗಳಿವೆ; ಅದೇ ತರ ಸಮಕಾಲೀನ ಪ್ರಸಿದ್ಧಿಗೆ ಒಳಗಾದ ಕೃತಿಗಳು ನಂತರ ತೆರೆಮರೆ ಸೇರಿದ್ದೂ ಇದೆ.

ಪ್ರಶ್ನೆ18: ಹಾಗಿದ್ದರೆ ಸಾರ್ವತ್ರಿಕವೂ ಸಾರ್ವಕಾಲಿಕವೂ ಆದ ಕವಿತೆಗಳೇ ಇಲ್ಲವೇ? ಕಾಲದೇಶಗಳಿಗೆ ಅತೀತವಾದಂಥ ಮೌಲ್ಯಮಾಪಕಗಳು ಕವಿತೆಗಳಿಗೆ ಸಂಬಂಧಿಸಿ ಇಲ್ಲವೆಂದು ಹೇಳಬಹುದೇ?

ಉತ್ತರ: ಎಲ್ಲಾ ಕಾಲಕ್ಕೂ ಎಲ್ಲಾ ದೇಶಗಳಿಗೂ ಸಲ್ಲುವ ಕವಿತೆಗಳಿವೆ ಎಂದು ಹೇಳಲು ನನಗೆ ಮನಸ್ಸಾಗುತ್ತದೆ. ಆದರೆ ಅವುಗಳ ಮೌಲ್ಯಮಾಪಕಗಳು ಯಾವುವು ಎಂದುಮಾತ್ರ ನನಗೆ ಸ್ಪಷ್ಟವಿಲ್ಲ. ಯಾಕೆಂದರೆ ಉತ್ತರವಾಗಿ ಏನು ಹೇಳಿದರೂ ಅವುಗಳ ಕುರಿತು ಮತ್ತೆ ಪ್ರಶ್ನೆಗಳು ಏಳುತ್ತವೆ: ಕಾವ್ಯಸೌಂದರ್ಯ ಎಂದರೆ ಅದೇನೆಂದು ಕೇಳಬೇಕಾಗುತ್ತದೆ; ಪಾರಮಾರ್ಥಿಕತೆ ಎಂದರೂ ಅದೇನೆಂದು ಪ್ರಶ್ನಿಸಬೇಕಾಗುತ್ತದೆ. ಮ್ಯಾಥ್ಯೂ ಆರ್ನಾಲ್ಡ್ ಅದಕ್ಕೇನೇ ವಿಮರ್ಶೆಯಲ್ಲಿ ನಿಕಷಕ್ರಮವನ್ನು ಪ್ರತಿಪಾದಿಸಿದ, ಮತ್ತು ಇದರಲ್ಲಿ ಎಲಿಯೆಟ್ ಕೂಡಾ ಅವನನ್ನು ಅನುಸರಿಸಿದ. ನಿಕಷಕ್ರಮ ಎಂದರೆ ಶೇಕ್ಸ್‌ಪಿಯರ್, ಮಿಲ್ಟನ್ ಮುಂತಾದವರ ವಿವಾದಾತೀತ ಕೃತಿಗಳನ್ನು ನಮ್ಮ ಮುಂದಿರಿಸಿಕೊಂಡು ಹೊಸ ಕವಿತೆಗಳನ್ನು ಅವುಗಳ ಜತೆ ಹೋಲಿಸಿ ನೋಡುವುದು. ಎಂದರೆ ಕವಿತೆಯನ್ನು ವಿಮರ್ಶಿಸುವುದಕ್ಕೆ ತೌಲನಿಕ (ಸಾಪೇಕ್ಷ) ಕ್ರಮದ ಹೊರತು ಇನ್ನೊಂದು ಕ್ರಮ, ನಿರಪೇಕ್ಷವಾದ್ದು, ಅತೀತವಾದ್ದು, ಇಲ್ಲವೆಂದಾಯಿತು. ಆಗ ಮತ್ತೆ ನಾವು ತತ್ಕಾಲೀನತೆಗೆ, ಆಕಸ್ಮಿಕತೆಗೆ, ಸಾಂದರ್ಭಿಕತೆಗೆ ಮರಳುತ್ತೇವೆ.

ಪ್ರಶ್ನೆ19: ನೀವು ಬರೆದ ಕವಿತೆಗಳಲ್ಲಿ ಒಳ್ಳೆಯವು, ಕೆಟ್ಟವು ಎಂಬ ಭೇದವನ್ನು ಮಾಡಬಹುದೇ? ಮಾಡುವುದಾದರೆ ಹೇಗೆ ಮಾಡುತ್ತೀರಿ?

ಉತ್ತರ: ಒಬ್ಬ ಕವಿ ಯಾವ ಗಳಿಗೆಯಲ್ಲಿ ಹೇಗೆ ಬರೆಯುತ್ತಾನೆ, ಯಾವ ಕಾರಣಕ್ಕೆ ಎಂದು ಹೇಳುವಂತಿಲ್ಲ. ಆತ ಯಾರನ್ನೂ ಅನುಕರಿಸುವ ಹಾಗಿಲ್ಲ, ಸ್ವತಃ ತನ್ನನ್ನೂ; ಎಂದರೆ `ತೊಟ್ಟ ಬಾಣವ’ ಮರಳಿ ತೊಡುವಂತಿಲ್ಲ. ಹೊಸತನ, ವೈವಿಧ್ಯ, ಆಳ, ಹರ, ಸಂವೇದನೆ, ಭಾಷೆ ಎಲ್ಲವೂ ಸೃಜನ ಶೀಲತೆಯ ಅಗತ್ಯಗಳು. ಹೀಗಿರುತ್ತ ಬರೆದುದೆಲ್ಲವೂ ಒಂದೇ ತರ ಇರಲಾರವು. ಆದರೆ ಇದು ನಿಮ್ಮ ಪ್ರಶ್ನೆಗೆ ಉತ್ತರವಲ್ಲ, ಕೇವಲ ಹಿನ್ನೆಲೆ ಮಾತ್ರ. ನನ್ನ ಕವಿತೆಗಳಿಗೆ ನಾನು ಮರಳುವುದಿಲ್ಲ. ಆದರೆ ಎಲ್ಲಾದರೂ ಮರಳಿದಾಗ ಕೆಲವು ಕವಿತೆಗಳಲ್ಲಿ ಕೆಲವು ಸಾಲುಗಳಾದರೂ ನನಗೇ ಬೆರಗು ತಂದರೆ ಆ ಮಟ್ಟಿಗೆ ಅವು ಒಳ್ಳೆಯವು; ನನಗೇ `ಡಲ್’ ಎನಿಸಿದರೆ ಅವು ಕೆಟ್ಟವು. ಹೀಗೆ ನನಗೇ ನಂತರ `ಡಲ್’ ಎನಿಸುವ ಅನೇಕ ಕವಿತೆಗಳನ್ನು ನಾನು ಬರೆದದ್ದಿದೆ. ಆದರೆ ಅವನ್ನು ಯಾಕೆ ಬರೆದೆ, ಬೆರಗೆನಿಸುವ ಸಾಲುಗಳು ಯಾಕೆ ಹಾಗಿವೆ, `ಡಲ್’ ಎನಿಸುವವು ಯಾಕೆ ಹೀಗಿವೆ ಎನ್ನುವುದಕ್ಕೆ ನನ್ನಲ್ಲಿ ಸರಿಯಾದ ಉತ್ತರವಿಲ್ಲ. ಬಹುಶಃ ಬೆರಗೆನಿಸುವ ಸಾಲುಗಳಲ್ಲಿ ಇನ್ನೂ ಹೊಸತನವಿದೆ; `ಡಲ್’ ಎನಿಸುವ ಸಾಲುಗಳಲ್ಲಿ ಇಲ್ಲ. ಇಷ್ಟೇ ಹೇಳಬಹುದಷ್ಟೆ. ಆದರೆ ನನಗೆ ಹೀಗನಿಸಿದ್ದು ಇತರರಿಗೂ ಅನಿಸಬೇಕೆಂದಿಲ್ಲ. ಹೊಸತನ ಎಂದರೇನು ಎಂಬ ಪ್ರಶ್ನೆ ಏಳುತ್ತದೆ. ಅದೊಂದು ಅನುಭವದ ಪ್ರಕಟಣೆಯಾಗಿರಬಹುದು, ಒಂದು ನುಡಿಗಟ್ಟಾಗಿರಬಹುದು, ಎರಡು ವಿಚಾರಗಳನ್ನು ಒಂದೆಡೆ ತಂದ ರೀತಿಯಾಗಿರಬಹುದು.

ಪ್ರಶ್ನೆ20: ಬರೆಯುತ್ತ ಇರೋದು, ಅದರಲ್ಲಿ ಏನಾದರೊಂದು `ಕ್ಲಿಕ್’ ಆಗುತ್ತದೆ ಎಂಬ ಧೋರಣೆಯೇ?

ಉತ್ತರ: ಇಲ್ಲ. ಹೆಚ್ಚಾಗಿ ಪ್ರತಿ ಕವಿತೆ ಬರೆದಾಗಲೂ ಹೊಸತೇನೋ ಬರೆಯುತ್ತಿದ್ದೇನೆ ಎನ್ನುವ ಭಾವ ಇರುತ್ತದೆ. ನಾನು ಪ್ರತಿ ದಿನ ಎಂಬಂತೆ ಬರೆಯುವುದಿಲ್ಲ. ಒಂದೇ ಒಂದು ಕವಿತೆ ಬರೆಯದ ವರ್ಷಗಳೂ ಹಲವಾರು ಇವೆ. ಒಂದೊಂದು ಕವಿತೆಯೂ ಇತರರ ಮತ್ತು ನನ್ನದೇ ಇತರ ಕವಿತೆಗಳಿಗಿಂತ ಭಿನ್ನವಾಗಿರಬೇಕು ಎಂಬ ಆಸೆಯಿರುತ್ತದೆ. ನನ್ನದು ಪ್ರಾಯೋಗಿಕ ಮನಸ್ಸು ಕೂಡಾ ಹೌದು; ಏನಾದರೂ ಪ್ರಯೋಗಗಳನ್ನು ಮಾಡುತ್ತ ಇರುತ್ತೇನೆ. ನನ್ನ ಈ ಪ್ರಯೋಗಗಳು ಅವುಗಳಷ್ಟಕ್ಕೇ ಮಹತ್ವವಲ್ಲದೆ ಇದ್ದರೂ ಇತರರಿಗೆ ಸ್ಫೂರ್ತಿ ನೀಡಬಹುದು. ಇನ್ನೂ ಒಂದು ವಿಷಯ. ನಾನು ಪ್ರಾಧ್ಯಾಪಕನಾಗಿ, ವಿಮರ್ಶಕನಾಗಿ, ಅನುವಾದಕನಾಗಿ, ಚಿಂತಕನಾಗಿ ಸಾಮಾಜಿಕ ಜೀವನದಲ್ಲಿ ನನ್ನಿಂದಾದಷ್ಟು ತೊಡಗಿಕೊಂಡ ವ್ಯಕ್ತಿ; ಎಂದರೆ ಪೂರ್ಣಪ್ರಮಾಣದ ಶುದ್ಧಾಂಗ ಕವಿಯಲ್ಲ! ಇದರರ್ಥ ಕವಿಯ ತನ್ಮಯತೆ ನನಗಿಲ್ಲ ಎಂದಲ್ಲ. ಆ ತನ್ಮಯತೆಯನ್ನು ನಾನೊಂದು ವ್ಯಸನವಾಗಿ ಮಾಡಿಕೊಂಡಿಲ್ಲ ಎಂದು ಮಾತ್ರ.

ಇನ್ನು `ಕ್ಲಿಕ್’ ಆಗುವ ವಿಷಯ; ಈ ನುಡಿಗಟ್ಟೇ ಕವಿತೆಯನ್ನು ಉಢಾಳ ಮಾಡುತ್ತದೆ. ಅದಲ್ಲ, ಕೆಲವು ಕವಿತೆಗಳು ಕೆಲವರಿಗೆ ಅಥವಾ ಹಲವರಿಗೆ ಇಷ್ಟವಾಗಬಹುದು. ಇನ್ನು ಕೆಲವು ಯಾರಿಗೂ ಇಷ್ಟವಾಗದೆ ಇರಬಹುದು. ಒಟ್ಟಾರೆ ಸಾಹಿತ್ಯದಲ್ಲಿ ಇದೆಲ್ಲ ಆಗುವ ಸಂಗತಿಯೇ. ಕವಿ ತನ್ನ ಕಾಲಕ್ಕೆ ಸ್ಪಂದಿಸುತ್ತಲೇ ಇರಬೇಕಾಗುತ್ತದೆ, ಮತ್ತು ತನ್ನ ಸಾಮರ್ಥ್ಯವನ್ನು ಸಂಪೂರ್ಣ ವಿನಿಯೋಗಿಸಬೇಕಾಗುತ್ತದೆ. ಇಂಗ್ಲಿಷ್ ಸಾಹಿತ್ಯದಲ್ಲಿ ಶೇಕ್ಸ್‌ಪಿಯರ್ ಅಸದೃಶನಾದ ಮಹಾಕವಿ. ಹಾಗೆಂದು ಇಂಗ್ಲಿಷ್ ಕವಿಗಳು ನಂತರ ಬರೆಯುವುದನ್ನೇ ನಿಲ್ಲಿಸಿದರೇ? ಅದೇ ರೀತಿ ಕನ್ನಡದಲ್ಲಿ ಪಂಪ ರನ್ನರಂಥ ಕವಿಶ್ರೇಷ್ಠರು ಬಂದರೆಂದು ನಂತರ ಕವಿತೆಯೇ ನಿಂತಿತೇ? ಆಯಾ ಕಾಲ ತನ್ನದೇ ಕೃತಿಗಳನ್ನು ಬಯಸುತ್ತದೆ, ಆಗುಮಾಡುತ್ತದೆ. ಅವುಗಳನ್ನು ಮುಂದಿನವರು ಹೇಗೆ ಕಾಣುತ್ತಾರೆ ಎನ್ನುವುದು ಮುಂದಿನವರಿಗೆ ಬಿಟ್ಟುದು. ಆದರೆ ಏನನ್ನೂ ಮಾಡದೆ ಇದ್ದರೆ ಅದು ಅಂಧಯುಗ ಎನಿಸುತ್ತದೆ.

ಪ್ರಶ್ನೆ21: ಕವಿತೆಯನ್ನು ತಿದ್ದಿ ತೀಡಿ ಮಾಡುತ್ತೀರಾ?

ಉತ್ತರ: ಇಲ್ಲ, ಹೆಚ್ಚಾಗಿ ಇಲ್ಲ. ಆದರೆ ಅಪರೂಪಕ್ಕೆ ಹಾಗೆ ಮಾಡುತ್ತೇನೆ. ಒಮ್ಮೆ ಮಿತ್ರ ಎಂ.ಎಸ್. ಶ್ರೀರಾಮ್ ನನ್ನ ಅವಧ ಸಂಕಲನವನ್ನು ಕವಿತೆಗಳ ಟಿಪ್ಪಣಿ ಪುಸ್ತಕ ಎಂದು ಕರೆದಿದ್ದರು. ಅವರು ನನ್ನ ಕವಿತೆಗಳನ್ನು ಸರಿಯಾಗಿಯೇ ಗ್ರಹಿಸಿಕೊಂಡಿದ್ದಾರೆ ಎಂದು ನನಗನಿಸುತ್ತದೆ. `ಫಿನಿಶ್’ ಕೊಡುವ ಕೆಲಸಕ್ಕೆ ನಾನು ಹೋಗುವುದಿಲ್ಲ. ದೊರಗು ಅಂಚುಗಳನ್ನು ಹಾಗೇ ಬಿಟ್ಟಿರುತ್ತೇನೆ. ಕವಿತೆ ಒಂದು ಮೂಡ್‌ನಲ್ಲಿ ಹುಟ್ಟಿಕೊಳ್ಳುತ್ತದೆ. ಅದನ್ನು ನಂತರ ತಿದ್ದುತ್ತ ಹೋಗುವುದರಲ್ಲಿ ಅರ್ಥವಿಲ್ಲ. ಹೀಗೆ ತಿದ್ದುತ್ತ ಹೋದರೆ ಅದರಲ್ಲಿ ಆರಂಭದ ಕಿಚ್ಚು ಇಲ್ಲದಾಗಬಹುದು. ಇದು ನನ್ನ ರೀತಿ. ಅದೇ ರೀತಿ ಕವಿತೆ ಬರೆಯುವ ಮೊದಲು ಹೆಚ್ಚೊಂದು ಯೋಚನೆ ಕೂಡಾ ನಾನು ಮಾಡುವುದಿಲ್ಲ. ಆದ್ದರಿಂದ ಕೆಲವು ಸಲ ಏನೋ ಬರೆಯಬೇಕೆಂದು ಇದ್ದುದು ಮರೆತೇ ಹೋಗುತ್ತದೆ. ಮತ್ತೆ ನೆನಪಾದಾಗ ಬರೆಯುವ ಆಸಕ್ತಿ ಕಳಕೊಂಡಿರಬಹುದು. ನನ್ನ ಹೆಚ್ಚಿನ ಕವಿತೆಗಳು ಅರೆಮಂಪರು ಸ್ಥಿತಿಯಲ್ಲಿ ಬರುವಂಥವು. ಇದೇ ನನ್ನ ಸ್ಥಾಯೀ ಸ್ಥಿತಿ!

ಪ್ರಶ್ನೆ22: ನಿಮಗೀಗ ಎಷ್ಟು ವಯಸ್ಸು?

ಉತ್ತರ: ಅದನ್ನು ಕಟ್ಟಿಕೊಂಡು ಯಾರಿಗೇನು? ನಾನೆಂದೂ ನನ್ನ ಹುಟ್ಟಿದ ದಿನ ಕೊಂಡಾಡುವುದಿಲ್ಲ. ನಿಜ ಹೇಳಬೇಕೆಂದರೆ ನನ್ನ ಹುಟ್ಟಿದ ತಾರೀಖು ನನಗೇ ಖಚಿತವಿಲ್ಲ. ಶಾಲೆಯ ರಿಜಿಸ್ತ್ರಿಯಲ್ಲಿ ಯಾರೋ ಅಂದಾಜಿಗೆ ದಾಖಲಿಸಿದ ತಾರಿಖು, ಅಪ್ಪ ಅಮ್ಮ, ಮಾವ ಯಾರೋ ಇಟ್ಟ ಹೆಸರು. ಸಾಲದೇ? ನನಗೀಗ ಇಳಿವಯಸ್ಸು ನಿಜ; ಆದರೆ ಮಾನಸಿಕವಾಗಿ ನಾನಿನ್ನೂ ಯುವಕನೇ, ಕೆಲವು ಸಲ ಕೇವಲ ಮಗು. ನೆನಪುಗಳಂತೆಯೇ ಕನಸುಗಳೂ ಮುಗಿದಿಲ್ಲ. ಸೃಜನಶೀಲತೆ ಯಾವತ್ತಿನ ತನಕ ಇರುತ್ತದೋ ಆವತ್ತಿನ ತನಕ ಮನುಷ್ಯ ಯುವಕನೇ ಆಗಿರುತ್ತಾನೆ ಎನ್ನುತ್ತಾರೆ. ಸೃಜನಶೀಲತೆ ಎಂದರೆ ಜೀವನಾಸಕ್ತಿ. (ಶಾಂತಿನಾಥ ದೇಸಾಯಿ ಇದನ್ನೇ ಲೈಂಗಿಕಾಸಕ್ತಿ ಎನ್ನುತ್ತಿದ್ದರು!) ಪಿಕಾಸೋ, ಎಮ್. ಎಫ್. ಹುಸೇನ್ ಮುಂತಾದವರನ್ನು ನೋಡಿ: ಅವರಿಗೆ ಎಂದಾದರೂ ವಯಾಸ್ಸಾಗುವುದೆ? ಪಿಕಾಸೋ ಈಗಿಲ್ಲ; ಆದರೆ ಜೀವಿತಕಾಲದಲ್ಲಿ ಅವನು ಪ್ರೀತಿಸಿದ ಯುವತಿಯರಿಗೆ ಲೆಕ್ಕವಿಲ್ಲ. ಹಲವಾರು ಮದುವೆಗಳನ್ನೂ ಮಾಡಿಕೊಂಡ. ಹೆಮಿಂಗ್ವೇ ಅಂಥ ಲೇಖಕ. ಆದರೆ ಯಾವತ್ತೋ ಒಂದು ದಿನ ಅವನಿಗೆ ತಾನು ಮುದುಕನಾಗಿಹೋದೆ ಎಂದೆನಿಸಿತು. ಕೋವಿ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡ. ಅದೊಂದು ಅಪಘಾತವಾಗಿತ್ತು ಎನ್ನುವವರಿದ್ದಾರೆ. ಇನ್ನು ಹುಸೇನರನ್ನು ಭಾರತದ ಕೆಲವರು ಬಹಳ ತಪ್ಪಾಗಿ ತೆಗೆದುಕೊಂಡರು. ಸ್ತ್ರೀಸೌಂದರ್ಯವನ್ನು ಪೂಜಿಸುವ ಕಲಾವಿದ ಆತ. ಅಂಥವನು ಹಿಂದೂ ದೇವತೆಗಳಿಗೆ ಎಂದಾದರೂ ಅಪಚಾರ ಮಾಡಲಿಕ್ಕೆ ಚಿತ್ರ ಬರೆಯುತ್ತಾನೆಯೇ? ನ್ಯೂಡ್ ಮತ್ತು ನೇಕೆಡ್ (ನಗ್ನ ಮತು ಬೆತ್ತಲೆ) ನಡುವಣ ವ್ಯತ್ಯಾಸವನ್ನೇ ಅರಿಯದ ಮಂದಿ ನಮ್ಮವರು. ಇಂಥವರ ಗಲಾಟೆಯ ಕಾರಣ ಹುಸೇನ್ ದೇಶ ಬಿಟ್ಟು ಹೋಗಬೇಕಾಯಿತು. ಭಾರತಕ್ಕೆ ಇದೊಂದು ಐತಿಹಾಸಿಕ ಕಳಂಕ. ಒಂದು ರೀತಿ ನಾನೂ ಮೊದಲೇ ಭ್ರಷ್ಟ; ಈಗ ದೇಶಭ್ರಷ್ಟ. ಕರ್ನಾಟಕ ನನ್ನನ್ನು ಎಂದೂ ತನ್ನವನನ್ನಾಗಿ ಕಾಣಲಿಲ್ಲ. ಇಂದು ನನ್ನದೊಂದು ಪುಸ್ತಕ ಪ್ರಕಟಿಸಲು ನಾನು ಹರಸಾಹಸ ಪಡಬೇಕಾಗಿದೆ. ಇಷ್ಟು ದೂರ ಇದ್ದೇನೆ. ನನಗೆ ಗೆಳೆಯರಾಗಲಿ ಹಿತಚಿಂತಕರಾಗಲಿ ಕರ್ನಾಟಕದಲ್ಲಿ ಬಹಳ ಕಡಿಮೆ. ಅವರೆಲ್ಲ ನನ್ನಂತೆ ಸಾಧುಗಳು. ಅವರ ಧಾರಾಳತನವನ್ನು ನಾನು ಉಪಯೋಗಿಸಲಾರೆ. ಓದುಗರಂತೂ ಇಲ್ಲವೇ ಇಲ್ಲ. ಇದ್ದರೂ ಅರ್ಥವಾಗುವುದಿಲ್ಲ ಎಂದು ಬಯ್ಯುವವರೇ. ಹಲವು ಸಂದರ್ಭಗಳಲ್ಲಿ ನಾನು ಒಳನಾಡ ಕನ್ನಡಿಗರಿಂದ ಅವಮಾನಕ್ಕೂ ಒಳಗಾಗಿದ್ದೇನೆ. ಅದನ್ನೆಲ್ಲ ಇಲ್ಲಿ ವಿವರಿಸಲಾರೆ. ಕವಿ ಶೆಲ್ಲಿಯ ಕುರಿತು ಲೇಖಕಿ ಕ್ಲೇರ್ ಟಾಮಲಿನ್ ಹೇಳುವ ಮಾತೊಂದನ್ನು—ಶೆಲ್ಲಿಯ ಕ್ಷಮೆ ಯಾಚಿಸಿ—ಇಲ್ಲಿ ಉದ್ಧರಿಸುವೆ: ‘He suffered, at not always finding a publisher, at not finding a public, at being simultaneously confined and exiled’ (Shelley and His World, Claire Tomalin, 1980, p. 87).

(ರೇಖಾ ಚಿತ್ರಗಳು: ಎಂ.ಎಸ್.ಪ್ರಕಾಶ್ ಬಾಬು, ಕೃಪೆ: ಆಂದೋಲನ ದಿನಪತ್ರಿಕೆ)