ಸ್ವಪ್ನ ಶೃಂಗಾರ/ ಬೆಳಗಿನ ಕಲೆ

ನಾನಿಲ್ಲಿ
ಅಲೆಯ ನೇವರಿಸುವ ನೆಪದಲಿ
ತೊಡರುವ ನೆನಪುಗಳ
ಮುದ್ದಿಡುತ್ತಿರುವೆ.
ನಕ್ಷತ್ರಗಳ ಸಮುದ್ರಕೆ ಸುರಿದು
ಚಿಮ್ಮಿದ ರಾತ್ರಿಯ ನೆಚ್ಚಿಕೊಂಡಿರುವೆ.

ನೀನಿತ್ತ
ಮುತ್ತುಗಳ ಆಗಸಕ್ಕೆ ತೂರಿ
ಪೋಣಿಸಿಕೊಡಲು ಚಂದ್ರನಿಗೆ
ಬೇಡಿಕೆಯಿತ್ತು ಕಾಯುತ್ತಿದ್ದೆ.
ಜಾರ ಚಂದ್ರ ರೋಹಿಣಿಗೆ
ಅವುಗಳ ತೊಡಸಿಬಿಟ್ಟ.

ನೀ ಬರಲೇಬೇಕೆಂದು
ಕನಸುಗಳಿಗೇಕೆ ಒತ್ತಾಯಿಸಲಿ
ತಿಳಿಯದೆ ನಿನಗೆ ನಿದ್ರೆಯ ದಾರಿ

ಪ್ರತಿ ರಾತ್ರಿಯೂ
ಸೂಕ್ತವಲ್ಲದ ಪಾತ್ರಗಳ
ರಂಗಕ್ಕಿಳಿಸಿ ಎಲ್ಲವೂ ಅಸಂಬದ್ಧ.

ಗರಿಗೆಟ್ಟ ನೆನಪುಗಳು ಮೈಮುದುರಿವೆ.
ನಿನ್ನ ಸ್ಪರ್ಶಕೆ ಕಾತರಿಸಿ ದಣಿದಿವೆ
ರಾಮನೇನಲ್ಲ… ನೀ ನನ್ನವನು
ನಿನ್ನ ಸಿಟ್ಟು ನನ್ನೆದೆಯ ಕೆಂಪು ಮುಗುಳು
ಬೈಗುಳವೋ ನವಿರಾದ ಗಿಲಕಿ
ಕಣ್ಣು ಕೊಳವಾಗುತ್ತದೆ
ಕಂಬನಿಗೆ ಉರುಳಲು ಮನಸ್ಸಿಲ್ಲ
ಆಲಸ್ಯವೆಂತಲ್ಲ.
ನಗು ಪತಾಕೆ ನೀ
ಕಣ್ಣ ಹನಿ ತೋರಣವೇಕೆ.

ನಿನ್ನ ಕರೆದುತಂದ ದಿನ
ಕನಸಿಗದೆಷ್ಟು ಧಿಮಾಕು
ಕಣ್ಣು ಬೆರೆಸುವ ಮುನ್ನವೇ ಹೊರಡುವಾಜ್ಞೆ
ಮುತ್ತು ಹೊಳಪುಗಟ್ಟಿಲ್ಲ
ಆಲಿಂಗನದ ಬಿಸುಪೇರಿಲ್ಲ
ಪಿಸುದನಿಯು ನಾಚಿಕೊಂಡಿಲ್ಲ
ಅದೆಂತಹ ಅವಸರ

ಇರಬಹುದು ಕನಸಿಗೂ ಬೆಳಗಿನ ಅಂಕುಶ
ಆಕಾರಣವಾಗಿಯೇ
ಮೂಡಲದಿ ಬೆಳಗು ಬಿದ್ದಿತ್ತು
ಕೆಂಪು ಅಲ್ಲಿ ಚೆಲ್ಲಿತ್ತು
ನನ್ನ ಕೈಗೂ ಮೆತ್ತಿತ್ತು.

 

ಸಂಧ್ಯಾ ಹೊನಗುಂಟಿಕರ್ ಉತ್ತರ ಕರ್ನಾಟಕದ ಯಾದಗಿರಿಯವರು.
ಸಾಂಸ್ಕೃತಿಕ ಜಗತ್ತಿನ ಎಲ್ಲ ಕ್ಷೇತ್ರಗಳಲ್ಲಿ ಆಸಕ್ತಿ.
ಅಭಿನಯ ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಅಲ್ಲದೇ ಸಮಾಜಮುಖಿ ಕಾರ್ಯಗಳಲ್ಲೂ ಕ್ರಿಯಾಶೀಲರು