ದಾಖಲಾಗದ ದಿನ
****************

ಅಂದು
ನಾನು ದಾಖಲಾಗದ ದಿನವಾಗುತಿತ್ತು
ನಾ ಈ ಲೋಕಕರ್ಪಿತವಾದಂದು
ಬಂದವರನ್ನು ಆಮಂತ್ರಿಸಿರಲಿಲ್ಲ
ಯಾರನ್ನೂ….ನನ್ನ ಹಾರೈಸಲು.
ಆದರೂ
ನನ್ನನ್ನೆತ್ತಿ ಮುದ್ದಿಸಿ ಹಾರೈಸಿದರು .
ಬಂದವರು ಯಾರು ಎಂಬ ಕುತೂಹಲ
ನನಗೂ ನಿಮ್ಮಷ್ಟೇ ..
ಭೂಮಿಯ ಆಳಕ್ಕೆ ಬೇರಿಳಿದದ್ದು
ಅವರಿಂದಲೇ
ತಾಯ ಸೊದೆ, ಮರಗಿಡ ,ನದಿ ಬೆಟ್ಟ ,
ಮೋಡ ಮುಗಿಲು, ಚಂದ್ರ ನಗಲು,
ಮಣ್ಣು ಕಲ್ಲು, ಹಕ್ಕಿ ಸೊಲ್ಲು ,
ಮಳೆ ಬೆಂಕಿ ,ಹೊನಲು ಉಕ್ಕಿ,
ಇವರಾದಿಯಾಗಿ ಓದಿಸಿದರು
ಸಡಗರದಿ
ಉಡುಗೊರೆಯ ರಾಶಿ .
ಕಣ್ಣಿಗಂಟಿದ ಖುಷಿ
ಮಿಂಚಿನ ಪೇಪರ್ ಹೊದಿಕೆ
ಗೊಂಚಲು ಗೊಂಚಲಾಗಿದ್ದ
ಎಲ್ಲವೂ ಬಿಡಿಸಿದೆ ಒಂದೊಂದಾಗಿ
ಅಬ್ಬಾ… ಅದೆಂಥ ಕನಸುಗಳು
ವರ್ಣದಲ್ಲಿ ಅದ್ದಿದ
ಅದೇ ಆಗ ಚಿಗುರೊಡೆದವು
ಎಲ್ಲವನ್ನೂ ತೆಕ್ಕೆಗೆಳೆದುಕೊಳ್ಳಬೇಕೆಂದೆ
ಇರಲಿ ….ಕಣ್ಣ ಮುಂದೆಯೇ
ತಣಿಯಲಿ ಈ ಕಪ್ಪು ಕಣ್ಣುಗಳು
ಕನಸಿನ ಬಣ್ಣ ಮೆತ್ತಿಕೊಳ್ಳಲಿ
ಕುಳಿತೇ ಅವುಗಳ ಮುಂದೆ
ಬೊಗಸೆಯನ್ನು ಕಮಲವಾಗಿಸಿ
ಅದರಲ್ಲಿ ಗದ್ದವೂರಿ

ಕೆಲ ಚಣದಲ್ಲಿ ಅದೆಲ್ಲೋ
ಹೊಸ ಕಂದನ ಅಳು
ನೋಡ ನೋಡುತ್ತಲೇ
ಆ ರಾಶಿಗಳಲ್ಲಿ ಸಂಚಲನ
ಪ್ಯೂಪಕ್ಕೆ ರೆಕ್ಕೆ ಮೂಡಿದಂತೆ
ಕನಸುಗಳಿಗೆಲ್ಲ ರೆಕ್ಕೆ
ಇನ್ನೇನು ಹಾರಲಣಿ
ಅಯ್ಯೋ ಎಲ್ಲಾ ಹಾರಿ ಹೋದರೆ..
ಗಬಕ್ಕನೆ ಒಂದಷ್ಟು
ಕನಸುಗಳ ಬಳಸಿ
ಅಪ್ಪಿಕೊಂಡೇ ತೋಳುಗಳ ಬಾಚಿ ಮಿಕ್ಕವುಹಾರಿಯೇ ಹೋದವು
ಸಮಯವಿಲ್ಲವೆಂಬಂತೆ
ಅಂತೂ ನನ್ನ ಕೈಗೆ ಒಂದಷ್ಟಾದರೂ ಅಂಟಿಕೊಂಡವು ಪರಾಗದಂತೆ
ಎಲ್ಲವೂ ಹಾರಿಹೋಗಿದ್ದರೆ
ನಾನೆಲ್ಲಿರುತಿದ್ದೆ… ?
ದಾಖಲಾಗಿರುತ್ತಿತ್ತು ನನ್ನ ಮರಣ.

ಕುಂಚಕ್ಕೆ ಬಿಡುವಿರದ ಕೆಲಸ
********************

ಗಾಳಿ ಕಡಲಲ್ಲಿ
ಕೈಕಾಲ ಹುಟ್ಟು ಹಾಕಿ
ಬೊಚ್ಚು ಬಾಯಲ್ಲಿ ಕೆನೆಯ ಕೇಕೆ
ಹಾಲುಗಲ್ಲದ ಭರಣಿಯ
ಕಡೆ ಕಡೆದು ಬಂದ ನಗುವೇ ನವನೀತ

ಮನದೊಳಗಣ ಚಿತ್ತಾರ
ಎದೆ ಕವಾಟದಿಂದ ಹೊರ ಬಂದು
ಕುಲುಕುಲು ನಗುವಾಗ
ನುಡಿಯದ ಎದೆಯ ಮೌನವೇ
ಮಧುರ ಗೀತೆ
ನೋವುಗಳ ರಂಟೆ ಹೊಡೆದು
ಮನದ ತಾಪದ ಗಂಟು ಕರಗಿ
ಎದೆಯಾಳದ ತಂಪು ತೊರೆ
ಜಾರದಂತೆ ಕನಸುಗಳಿಗೆ ಬೇಲಿ ಸುತ್ತಿ
ಪಕ್ಕನೆ ಮಿಂಚಿದ ಆ ನಗುವಿಗೆ
ತಾರೆಗಳೂ ಉರಿದು ಹೋದಾವು.
ಅಸೂಯೆಯಿಂದ

ತೊಟ್ಟಿಲಲ್ಲಿ ಬೆಳದಿಂಗಳು
ಮಡಿಲಲ್ಲಿ ಬೆಳ್ಮುಗಿಲು
ಮನೆಯಂಗಳದಿ ಇಂದ್ರಚಾಪ
ಸೂರ್ಯ ಚಂದ್ರರಿಗೆ ಅನುಮಾನ
ನಾವಿಲ್ಲಿರಬೇಕೋ… ಇಲ್ಲಾ ಆಗಸದಲ್ಲೋ..

ಕಣ್ಣ ಕೊನೆಯಲಿ ಸೋಗೆ ನೃತ್ಯ
ತುಟಿ ಕೆಂಪಲಿ ಶಬ್ದವಿರದ ಹಾಡು
ಸುರಿದ ಜೊಲ್ಲಲಿ ಜೇನ ಸೊದೆ
ಮುಚ್ಚಿದ ರೆಪ್ಪೆಯಲ್ಲೂ…
ಕುಂಚಕ್ಕೆ ಬಿಡುವಿರದ ಕೆಲಸ

ನೂರಾರು ಮುತ್ತು ಸಾವಿರಾರು ಹವಳ ಭದ್ರವಾಗಿವೆ ಆ ನಗುವಿನ ತಿಜೋರಿಯಲ್ಲಿ
ಬೀಗವಿಲ್ಲ, ಬಿಗುವೂ ಇಲ್ಲ..
ಪಡೆದಷ್ಟು ಹೆಚ್ಚು ಆ ಹುಚ್ಚು ಹೊಳೆ
ತೊಯ್ದು ತೊಪ್ಪೆಯಾಗಬೇಕಷ್ಟೇ
ಬೇರಿಲ್ಲ ದಾರಿ

ಸಂಧ್ಯಾ ಹೊನಗುಂಟಿಕರ್ ಉತ್ತರ ಕರ್ನಾಟಕದ ಯಾದಗಿರಿಯವರು.
ಸಾಂಸ್ಕೃತಿಕ ಜಗತ್ತಿನ ಎಲ್ಲ ಕ್ಷೇತ್ರಗಳಲ್ಲಿ ಆಸಕ್ತಿ.
ಅಭಿನಯ ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಅಲ್ಲದೇ ಸಮಾಜಮುಖಿ ಕಾರ್ಯಗಳಲ್ಲೂ ಕ್ರಿಯಾಶೀಲರು.