“ಕೊಳಲೂದುತ್ತಿದ್ದ ಆತನ ಹೆಸರು ಗೊತ್ತಿಲ್ಲ. ಆತನ ಚಹರೆ ನೆನೆದುಕೊಂಡರೂ ಸ್ಮರಣೆಗೆ ಬರುತ್ತಿಲ್ಲ. ಆದರೆ ಆ ನಾದ, ಆ ನಾದ ಬರುತ್ತಿದ್ದ ದಿಕ್ಕು ಇನ್ನೂ ಕಣ್ಣಮುಂದಿದೆ” ಎಂದು ಜೋಯಪ್ಪ ಬರೆಯುತ್ತಾರೆ. ಕೊಳಲಿನ ಮೋಹಕ್ಕೆ ಬಿದ್ದ ಜೋಯಪ್ಪ ಕೊಳಲು ಕಲಿಯಬೇಕೆಂದು ಯಾರಲ್ಲೋ ಕಾಡಿ, ಕೊಳಲು ಸಿಕ್ಕಿದರೂ ಊದಲರಿಯದೇ ಜೋಯಪ್ಪ ಕೊಳಲು ಬದಿಗಿಡಬೇಕಾಗುತ್ತದೆ. ಹೀಗೆ ಬದಿಗಿಟ್ಟ ಕೊಳಲೂ ಈಗಲೂ ಇದೆ ಎನ್ನುತ್ತಾರೆ ಜೋಯಪ್ಪ. ಈ ಕತೆಯ ನಿರೂಪಣೆಗೊಂದು ತೀವ್ರ ವಿಷಾದದ ವ್ಯಂಗ್ಯವಿದೆ. “ನನಗೆ ಕೊಳಲು ಮಾಡಿಕೊಟ್ಟವರೊಡನೆ ಊದುವುದು ಹೇಗೆ ಎಂದು ಕೇಳಿದೆ. ಅವರು ಗೊತ್ತಿಲ್ಲ ಎಂದು ಬಿಟ್ಟರು.”
ಒಂದು ಕಾಲದಲ್ಲಿ ಕೆಂಡಸಂಪಿಗೆಯಲ್ಲಿ ಜನಪ್ರಿಯ ಸರಣಿಯಾಗಿ ಜನಮೆಚ್ಚುಗೆ ಪಡೆದು ಇದೀಗ ನಾಳೆ ಮಡಿಕೇರಿಯಲ್ಲಿ ಬಿಡುಗಡೆಯಾಗುತ್ತಿರುವ ಬಿ.ಆರ್. ಜೋಯಪ್ಪ ಅವರ “ಕಾಟಿ ಬೆಟ್ಟದ ಕತೆಗಳು” ಪುಸ್ತಕಕ್ಕೆ ಕೆ.ಪಿ.ಸುರೇಶ ಬರೆದ ಮುನ್ನುಡಿ.

 

ಗೆಳೆಯ ಜೋಯಪ್ಪ ಅವರ “ ಕಾಟಿ ಬೆಟ್ಟದ ಕಥೆಗಳು” ಒಂದು ಬಾಲ್ಯವನ್ನು ಮಜ್ಜೆ ಮಾಂಸ, ಕರುಳ ಮಿಡಿತದೊಂದಿಗೆ ಸೃಷ್ಟಿಸುವುದಷ್ಟೇ ಅಲ್ಲ, ನಮ್ಮೆಲ್ಲರ ಒಳಗೂ ಇರುವ ಬಾಲ್ಯದ ಸುಖ-ದುಃಖಗಳನ್ನೂ, ಅರಿವು ಚಿಗುರೊಡೆವ ನವಿರು ವಿವರಗಳನ್ನು ಒಂದು ಮೂಸೆಯಲ್ಲಿ ಹಿಡಿದಿದೆ.

ಕಡು ಬಡತನ, ಹೋರಾಟದ ಬದುಕಿನ ಅಪ್ಪ-ಅಮ್ಮ ಪ್ರಕೃತಿಯೊಂದಿಗೆ ನಡೆಸುವ ಹೋರಾಟ, ಶಿಕ್ಷಣದ ಬೆಳಕಿನ ಹಾದಿಗುಂಟ ಇಡುವ ಹೆಜ್ಜೆಗಳು ಇವೆಲ್ಲಾ ಈಗ ನಡುವಯಸ್ಸು ದಾಟಿದ ಎಲ್ಲರ ಬಾಲ್ಯದ ವಿವರಗಳೇ. ಈ ಬಾಲ್ಯದ ಪರಿಸರ, ಪ್ರಾಕೃತಿಕ ಲೋಕ ಇಂದು ಬಹುತೇಕ ಎಲ್ಲೆಡೆ ಕಣ್ಮರೆಯಾಗಿರಬಹುದು. ಕುವೆಂಪು, ಕಾರಂತರ ತಲೆಮಾರು ಕಂಡ ಗ್ರಾಮಲೋಕ ಆಲನಹಳ್ಳಿ, ಲಂಕೇಶರ ತಲೆಮಾರಿಗೆ ಆಧುನಿಕತೆಗೆ ಹೊರಳಿಕೊಂಡು ಒಂದು ಸಾಮಾಜಿಕ ಸ್ಥಿತ್ಯಂತರಕ್ಕೆ ರೂಪಕ ಸಾಕ್ಷಿಯಾಯಿತು. ಆದರೆ ಅದರ ಭೌತಿಕ ಲೋಕ ಮರಳಿ ಬಾರದಷ್ಟು ಬದಲಾಗಬಹುದು ಎಂಬುದನ್ನು ನಾವು ಊಹಿಸಿರಲಿಲ್ಲ.  ಈಗ 21ನೇ ಶತಮಾನದ ಎರಡನೇ ದಶಕದ ಕೊನೆಯಲ್ಲಿ ನಿಂತು ಹೊರಳಿ ನೋಡಿದರೆ ಆಧುನಿಕತೆ ನಮ್ಮನ್ನು ಸೆಳೆದ ರೀತಿಗೆ ರೋಚಕತೆಯೂ ಇಲ್ಲ; ಮಾದಕತೆಯೂ ಇಲ್ಲ. ಅದೊಂದು ದಾರುಣ ಬದಲಾವಣೆ.

ಜೋಯಪ್ಪ ಅವರ ಕಥೆ ಮುಗಿಯುವುದು ಅನಿವಾರ್ಯ ಕಾರಣಗಳಿಂದಾಗಿ ಮೈಸೂರಿಗೆ ವಲಸೆ ಹೋಗುವುದರಲ್ಲಿ. ಇಡೀ ಚಿತ್ರ ಸತ್ಯಜಿತ್ ರೇ ಸಿನೆಮಾದ ಒಂದು ದೃಶ್ಯದೋಪಾದಿ ಇದೆ.

ಬಾಲ್ಯದ ಅನುಭವಗಳನ್ನು ಬಿಡಿಬಿಡಿ ಅನುಭವ ಕಥನಗಳ ಮೂಲಕ ಸಾದರಪಡಿಸುವ ಜೋಯಪ್ಪ, ಈ ಅನುಭವಗಳನ್ನು ಒಂದು ಸಂಸ್ಕೃತಿ ಕಥನದ ಮಟ್ಟಕ್ಕೆ ಏರಿಸಿಬಿಡುತ್ತಾರೆ. ಸಂದ ಕಾಲದಲ್ಲಿ ನೆಲೆ ಊರಿದ್ದ ಒಂದು ಭೌಗೋಳಿಕ ಚೌಕಟ್ಟಿನ ಬದುಕನ್ನು; ಇದು ಎಲ್ಲಾ ಕುಟುಂಬಗಳ ಕಥೆ ಎಂಬಂತೆ ಹರಳು ಕಟ್ಟಿದ ಕಥನಗಳ ಮೂಲಕ ಜೋಯಪ್ಪ ಕಟ್ಟುತ್ತಾರೆ.

(ಚಿತ್ರಗಳು: ಚರಿತಾ, ಮೈಸೂರು)

ಮಿಂಚಿ ಮಾಯವಾಗುವ ಬಾಲ್ಯದ ವ್ಯಕ್ತಿಗಳನ್ನು ವಸ್ತು ವಿಶೇಷಗಳನ್ನು ಜೋಯಪ್ಪ ಚಿತ್ರಿಸುವ ಬಗೆ ವಿಶಿಷ್ಟ. ಬುಗುರಿ ಬಗ್ಗೆ ಜೋಯಪ್ಪ ಆಸೆ ಪಟ್ಟು ಅದು ಸಿಕ್ಕಿದಾಗ ಅದನ್ನು ಜೇಬಲ್ಲಿಟ್ಟು ತಿರುಗುತ್ತಾರೆ. ಅದನ್ನು ಅಂಗೈಯಲ್ಲಿಟ್ಟು ಆಡಿಸುವುದನ್ನೂ ಕಲಿಯುತ್ತಾರೆ. ಆದರೆ ಆನೆ ಗದ್ದೆಗೆ ಧಾಳಿ ಇಟ್ಟ ಒಂದು ದಿನ ತಪ್ಪಿಸಿಕೊಳ್ಳಲು ಓಡಿದಾಗ ಅದು ಕಾಣೆಯಾಗುತ್ತದೆ. ಅದೇ ದಾರಿಯಲ್ಲಿ ಮಾರನೇ ದಿನ ಹುಡುಕಿದರೂ ಅದು ಸಿಗುವುದಿಲ್ಲ. ಹಗ್ಗ ಮಾತ್ರಾ ಉಳಿಯುತ್ತದೆ. ಇಡೀ ಕೃತಿಗೆ ನೀಡಿದ ರೂಪಕ ವ್ಯಾಖ್ಯಾನದ ತರ ಈ ಕತೆ ಇದೆ.

ಊರಿನಲ್ಲೊಬ್ಬ ಅನಾಮಿಕ ಕಾವಲುಗಾರ ಕೊಳಲು ಊದುತ್ತಿರುತ್ತಾನೆ. “ಕೊಳಲೂದುತ್ತಿದ್ದ ಆತನ ಹೆಸರು ಗೊತ್ತಿಲ್ಲ. ಆತನ ಚಹರೆ ನೆನೆದುಕೊಂಡರೂ ಸ್ಮರಣೆಗೆ ಬರುತ್ತಿಲ್ಲ. ಆದರೆ ಆ ನಾದ, ಆ ನಾದ ಬರುತ್ತಿದ್ದ ದಿಕ್ಕು ಇನ್ನೂ ಕಣ್ಣಮುಂದಿದೆ” ಎಂದು ಜೋಯಪ್ಪ ಬರೆಯುತ್ತಾರೆ. ಕೊಳಲಿನ ಮೋಹಕ್ಕೆ ಬಿದ್ದ ಜೋಯಪ್ಪ ಕೊಳಲು ಕಲಿಯಬೇಕೆಂದು ಯಾರಲ್ಲೋ ಕಾಡಿ, ಕೊಳಲು ಸಿಕ್ಕಿದರೂ ಊದಲರಿಯದೇ ಜೋಯಪ್ಪ ಕೊಳಲು ಬದಿಗಿಡಬೇಕಾಗುತ್ತದೆ. ಹೀಗೆ ಬದಿಗಿಟ್ಟ ಕೊಳಲೂ ಈಗಲೂ ಇದೆ ಎನ್ನುತ್ತಾರೆ ಜೋಯಪ್ಪ. ಈ ಕತೆಯ ನಿರೂಪಣೆಗೊಂದು ತೀವ್ರ ವಿಷಾದದ ವ್ಯಂಗ್ಯವಿದೆ. “ನನಗೆ ಕೊಳಲು ಮಾಡಿಕೊಟ್ಟವರೊಡನೆ ಊದುವುದು ಹೇಗೆ ಎಂದು ಕೇಳಿದೆ. ಅವರು ಗೊತ್ತಿಲ್ಲ ಎಂದು ಬಿಟ್ಟರು.”

ಜೋಯಪ್ಪ ಅದಕ್ಕೆ ಅರ್ಥ ತುಂಬುವುದಿಲ್ಲ. ಆದರೆ ಅದರ ಸಾಂಕೇತಿಕತೆ ನಮ್ಮನ್ನು ಕಾಡುತ್ತದೆ.

ಜೋಯಪ್ಪ ಶಾಲೆಗೆ ಹೋಗುವಾಗ ಒಬ್ಬರು ಮೇಷ್ಟ್ರು ಜೋಯಪ್ಪನಿಗೆ ದಿನಾ ತಮ್ಮ ಬುತ್ತಿಯಲ್ಲಿ ಪಾಲು ನೀಡುತ್ತಿರುತ್ತಾರೆ. ಅವರು ಶಾಲೆಯಿಂದ ನಿರ್ಗಮಿಸಿದ ಎಷ್ಟೋ ವರ್ಷಗಳ ಬಳಿಕ ಜೋಯಪ್ಪ ಗೋಣಿಕೊಪ್ಪಲಿನಲ್ಲಿ ಓದುವಾಗ ಆ ಮೇಷ್ಟ್ರ ಊರು ಅದೇ ಎಂದು ಗೊತ್ತಾಗಿ ಆ ಮೇಷ್ಟ್ರ ಮನೆಗೆ ಹೋಗುತ್ತಾರೆ. ಮೇಷ್ಟ್ರು ತೀರಿ ಹೋಗಿ ವರ್ಷಗಳೇ ಸಂದಿರುತ್ತದೆ. ಬಾಲ್ಯದ ಅಮೂರ್ತ ಮಮತೆಯ ನೆನಪು ಹದಿಹರೆಯದ ಪ್ರಜ್ಞೆಗೆ ದಕ್ಕುವ ಬಗೆಯನ್ನು ಹಾಗೇ ಇಟ್ಟು, ತಟಕ್ಕನೆ ಜೋಯಪ್ಪ, ‘ಈ ಕೃತಿಯನ್ನು ಅವರಿಗೆ ಅರ್ಪಿಸಿದ್ದೇನೆ’ ಎಂದು ಒಂದು ಸಾಲಲ್ಲಿ ಬರೆದು ಬಿಡುತ್ತಾರೆ. ಯಾವ ಭಾವುಕತೆ ನಾಟಕೀಯತೆಯೂ ಇಲ್ಲದೇ ಎದೆಯೊಳಗೆ ಇಳಿಸಿಕೊಂಡ ಬಗೆ ಇದು.

ಕೃತಿ ತುಂಬಾ ಇಂಥಾ ಹತ್ತಾರು ಉದಾಹರಣೆಗಳಿವೆ.

ಬಾಲ್ಯದ ಅನುಭವಗಳನ್ನು ಬಿಡಿಬಿಡಿ ಅನುಭವ ಕಥನಗಳ ಮೂಲಕ ಸಾದರಪಡಿಸುವ ಜೋಯಪ್ಪ, ಈ ಅನುಭವಗಳನ್ನು ಒಂದು ಸಂಸ್ಕೃತಿ ಕಥನದ ಮಟ್ಟಕ್ಕೆ ಏರಿಸಿಬಿಡುತ್ತಾರೆ. ಸಂದ ಕಾಲದಲ್ಲಿ ನೆಲೆ ಊರಿದ್ದ ಒಂದು ಭೌಗೋಳಿಕ ಚೌಕಟ್ಟಿನ ಬದುಕನ್ನು; ಇದು ಎಲ್ಲಾ ಕುಟುಂಬಗಳ ಕಥೆ ಎಂಬಂತೆ ಹರಳು ಕಟ್ಟಿದ ಕಥನಗಳ ಮೂಲಕ ಜೋಯಪ್ಪ ಕಟ್ಟುತ್ತಾರೆ.

ಈ ಕೃತಿ ಮುಗಿಯುವ ಬಗೆ ದಾರುಣ ವಿಷಾದವೊಂದನ್ನು ಗೊಮ್ಮಟನೋಪಾದಿ ಕೆತ್ತಿದಂತಿದೆ. ಈ ಸಾಲುಗಳನ್ನು ನೋಡಿ.

“ಕಾಟಿಬೆಟ್ಟದ ನಮ್ಮ ಮನೆಯ ಒಂದಷ್ಟು ಭತ್ತ, ನಾಲ್ಕಾರು ಪಾತ್ರೆ, ಒಂಟಿ ಕೈ ಕುರ್ಚಿ, ಒಂದು ದೀಪ, ಎರಡು ಪೆಟ್ಟಿಗೆ, ಬೆಂಚು, ಮಣೆ- ಆಯಿತು- ಕಾಟಿಬೆಟ್ಟದ ಆಸ್ತಿ- ಇದ್ದ ಅಷ್ಟನ್ನು ಸಣ್ಣ ಲಾರಿಗೆ ತುಂಬಿದೆವು. ಅಕ್ಕ ತೋರಿದ ದಾರಿಯಲ್ಲಿ ಲಾರಿ ಹೊರಟಿತು. ಕಾಡು ದಾಟಿತು. ಕಾಟಿಬೆಟ್ಟದ ದುರ್ಗಮ ಕಾಡು ದೂರದೂರವಾಗಿ ಲಾರಿ ಕೊಡಗಿನ ಗಡಿ ದಾಟಿತು. ಮತ್ತಿಗೋಡು, ಆನೆ ಚೌಕೂರು, ಹುಣಸೂರಿನ ಮೂಲಕ ಹಾದುಹೊದ ನಮ್ಮ ಕುಟುಂಬ ಮೈಸೂರು ಮಹಾನಗರದಲ್ಲಿ ಲೀನವಾಯಿತು.”

ಇದನ್ನು ಓದಿ ಮುಗಿಸಿದಾಗ ಬೆನ್ನು ಹುರಿಯಲ್ಲಿ ಸಣ್ಣ ಛಳಕೊಂದು ನನಗೆ ಮೂಡಿತ್ತು, ಮೊನ್ನೆಯ ಕೊಡಗಿನ ದುರಂತದ ಹಿನ್ನೆಲೆಯಲ್ಲಿ- ಅನಾಮಿಕ ದಿಕ್ಕೆಟ್ಟ ಕುಟುಂಬಗಳು ಬಾಳುವೆಯ ಕೊಂಡಿ ಕಡಿದು ನಗರಗಳಲ್ಲಿ ಲೀನವಾಗುವ ದುರಂತ – ವರ್ತಮಾನದ್ದೂ ಆಗಬಹುದು. ಈ ನಿರಂತರ ದುರಂತ ಫಕ್ಕನೆ ಕಣ್ಣಗೆ ಗೋಚರವಾಗುವುದಿಲ್ಲ. ಒಂದು ಅಧ್ಯಯನದ ಪ್ರಕಾರ ಪ್ರತಿದಿನ ಸುಮಾರು 40 ಸಾವಿರ ಮಂದಿ ಗ್ರಾಮ ಭಾರತ ತ್ಯಜಿಸಿ ನಗರ ಸೇರುತ್ತಿದ್ದಾರೆ. ಗ್ರಾಮ ಭಾರತದ ಜೀವನ ದುರ್ಭರವಾಗುತ್ತಿರುವುದು, ಹೊಸ ಉದ್ಯೋಗದ ಅವಕಾಶಗಳು ನಗರದಲ್ಲಿರುವುದು ಈ ವಲಸೆಗೆ ಪ್ರಮುಖ ಕಾರಣ. ಜೋಯಪ್ಪ ಈ ದುರಂತ ಉದ್ಘಾಟನೆ ಆಗುವ ಹಂತದಲ್ಲಿ ತಮ್ಮ ಕಥಾನಕವನ್ನು ನಿಲ್ಲಿಸುತ್ತಾರೆ. ಈ ಸೂಕ್ಷ್ಮತೆಯೇ ಈ ಬರೆವಣಿಗೆಗೆ ಪಕ್ವತೆ ನೀಡಿದೆ. ಜೋಯಪ್ಪನವರ ಪಾಲಿಗೆ ಈ ವಲಸೆ ಹೆಚ್ಚು ದುರ್ಭರವಾಗಿರಲಾರದು. ನಾಲ್ಕು ದಶಕಗಳ ಹಿಂದೆ ನಮ್ಮ ನಗರಗಳೂ ಇಂದಿನಷ್ಟು ರೂಕ್ಷವಾಗಿರಲಿಲ್ಲ. ಗ್ರಾಮೀಣ ಭಾರತದ ಜೊತೆ ಕರುಳುಬಳ್ಳಿ ಕಡಿದುಕೊಂಡಿರಲಿಲ್ಲ. ಅದೊಂದು ಸುಭದ್ರ, ಸುಸಜ್ಜಿತ ಬದುಕಿನ ಆಯ್ಕೆ ಎಂದೇ ಭಾವಿಸಲಾಗಿತ್ತು. ಆದರೆ ನಾಲ್ಕು ದಶಕಗಲ ಬಳಿಕ, ಈ ವರ್ತಮಾನದಲ್ಲಿ ಈ ಆಯ್ಕೆಯ ಬಗ್ಗೆ ನಾವು ಚರ್ಚಿಸಬೇಕಿದೆ.

*******

ಈ ಕೃತಿ ಬಾಲ್ಯದ ಅನುಭವದ ನೆನಪಲ್ಲಿ ಮಿಂದೇಳುವ ಚೌಕಟ್ಟು ಹೊಂದಿದೆ. ಸ್ವತಃ ಜೋಯಪ್ಪ ಈ ಭೌಗೋಳಿಕ ಪರಿಸರಕ್ಕೆ ಮರಳಿ, ಅಲ್ಲಿ ಬದುಕು ಕಟ್ಟಿಕೊಂಡಿರುವ ಕಾರಣ ವಲಸೆಯೂ ಅವರ ಮೇಲೆ ಆತ್ಯಂತಿಕ ಪರಿಣಾಮ ಬೀರಿಲ್ಲ. ಆದರೆ ತನ್ನ ಬಾಲ್ಯದ ಪ್ರಪಂಚ ಅದರ ಎಲ್ಲಾ ಉಭ-ಶುಭಗಳೊಂದಿಗೆ ನಿರಸನಗೊಂಡಿರುವುದನ್ನು ಅವರು ಬಲ್ಲರು. ಸ್ವಭಾವತಃ ಸಂಕೋಚದ ಜೋಯಪ್ಪ, ಇದು ತನ್ನ ಬಾಲ್ಯದ ಅನುಭವ ಎಂದು ಸಂಕೋಚದಲ್ಲಿ, ಸರಳ ಶೈಲಿಯಲ್ಲಿಬರೆಯುತ್ತಾರೆ. ಆದರೆ ಇದು ನಮ್ಮದೂ ಎಂಬಂತೆ ಆವರಿಸಿಕೊಳ್ಳುತ್ತದೆ.

                                                                                          *******

ನಾಲ್ಕು ದಶಕಗಳ ಹಿಂದೆ ಜೋಯಪ್ಪ ನನಗೆ ಪರಿಚಯವಾಗಿದ್ದು, ಆಂದೋಲನ ಕಛೇರಿಯಲ್ಲಿ. ಇಬ್ಬರೂ ಜೊತೆಗೇ ದುಡಿದಿದ್ದೆವು. ಸಂಕೋಚದ ಅಷ್ಟೇ ಅಪ್ಯಾಯಮಾನ ಸ್ನೇಹದ ಮನುಷ್ಯ ಜೋಯಪ್ಪ. ನನ್ನ ಬಾಲ್ಯ ಇಂಥಾದ್ದೇ ಪರಿಸರದಲ್ಲಿದ್ದರೂ ನಾನು ಇಂಥಾ ಬಡತನದ ಒತ್ತಡ ಅನುಭವಿಸಿರಲಿಲ್ಲ. ಶೂದ್ರ ದಲಿತ ಲೋಕಕ್ಕೆ ನನ್ನನ್ನು ಎಳೆದೊಯ್ದು ನನಗೆ ಮರುಹುಟ್ಟು, ದೃಷ್ಟಿ ಕೊಟ್ಟಿದ್ದು ಮೈಸೂರಿನ ಗೆಳೆಯರು. ಜೋಯಪ್ಪನೂ ಇದರಲ್ಲಿ ಪಾಲುದಾರ. ಗೆಳೆಯರು ನಮ್ಮನ್ನು ಬೆಳೆಸುವ ಪರಿ ಇದು.

ಈ ಕೃತಿ ಮತ್ತೆ ನೆನಪನ್ನು ಅರಳಿಸಿ ವರ್ತಮಾನದ ಕ್ರಿಯಾಶೀಲತೆಗೆ ಇಂಬು ನೀಡಿದೆ. ನೆನಪು ಮತ್ತು ಕಲ್ಪನೆಗಳೇ ಮನುಷ್ಯ ವರ್ಗವನ್ನು ವಿಶಿಷ್ಟವಾಗಿಸಿರುವುದಷ್ಟೇ. ಜೋಯಪ್ಪ ಅವರ ಈ ಕೃತಿ ಮರುಸೃಷ್ಟಿಯ ಸೃಜನಶೀಲ ಕಥನವೂ ಹೌದು. ಕಾಲದ ಗತಿಯಲ್ಲಿ ಹೊಸ ತಲೆಮಾರಿಗೆ ಸಂದ ಜಗತ್ತನ್ನು ಸಾದರಪಡಿಸುವ ಪ್ರಯತ್ನ ಕೂಡಾ.