ಒಳ್ಳೆಯತನವನ್ನು ನಾವು ಎಷ್ಟೇ ಸದರದಿಂದ ನೋಡಿದರೂ, ಸ್ವಂತ ಮಕ್ಕಳ ವಿಷಯಕ್ಕೆ ಬಂದಾಗ ಅವರಿಗಾಗಿ ನಾವು ಒಳ್ಳೆಯತನದ ಮಾದರಿಗಳನ್ನು ಹುಡುಕಲು ಶುರು ಮಾಡುತ್ತೇವೆ. ದೊಡ್ಡವರಿಗೂ ಮಕ್ಕಳಿಗೂ ಸಮಾನವಾಗಿ ಇಷ್ಟವಾಗುವವರು ಬಹಳಿಲ್ಲ. ಕೆಲವರು ಗೊತ್ತಿಲ್ಲದಂತೆಯೇ ನಮಗೂ ಇಷ್ಟವಾಗುತ್ತಾರೆ, ಮಕ್ಕಳಿಗೂ ಮೆಚ್ಚುಗೆಯಾಗುತ್ತಾರೆ. ನಮಗರಿವಿಲ್ಲದಂತೆಯೇ ಅವರು ನಮ್ಮ ಜೀವನದಲ್ಲಿ ಮುಖ್ಯವಾಗಿರುತ್ತಾರೆ. ಅವರು ಅಗಲಿದಾಗ ಉಮ್ಮಳಿಸಿ ಬರುವ ದುಃಖವೂ, ಇದ್ದಕ್ಕಿದ್ದಂತೆಯೇ ಕಾಡಲು ಶುರುವಾಗುವ ತಬ್ಬಲಿತನವೂ, ಅವರನ್ನು ನಾವೆಷ್ಟು ಹಚ್ಚಿಕೊಂಡಿದ್ದೆವು ಎಂಬುದನ್ನು ಹೇಳುತ್ತದೆ.
ಪುನೀತ್ ರಾಜ್ ಕುಮಾರ್ ನೆನಪುಗಳ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರಹ.

ಟೀವಿಯು ನಮ್ಮ ಮನೆಯ ‘ಚಾವಡಿ’ಯಲ್ಲಿ ಪ್ರತಿಷ್ಠಾಪನೆ ಆಗಿರುವುದರಿಂದಲೊ ಏನೋ ಕೌಟುಂಬಿಕ ಮೌಲ್ಯವನ್ನು ಎತ್ತಿಹಿಡಿಯುವ ಎಷ್ಟೊಂದು ಕಾರ್ಯಕ್ರಮಗಳನ್ನು ಚಾನೆಲ್ ಗಳು ನಡೆಸಿಕೊಡುತ್ತವೆ! ಅಥವಾ ಟೀವಿಯಲ್ಲಿ ಬರುವ ಎಲ್ಲ ಕಾರ್ಯಕ್ರಮಗಳ ಹಿಂದೆಯೂ ಕುಟುಂಬವನ್ನು ಬೆಂಬಲಿಸುವ ಒಂದು ಆಶಯ ಇದ್ದೇ ಇರುತ್ತದೆ. ಧಾರಾವಾಹಿಗಳು ಕೂಡ ಕುಟುಂಬವೊಂದಕ್ಕೆ ಏನೆಲ್ಲ ಆಪತ್ತು ಬರಬಹುದು ಎಂಬುದನ್ನು ವಿವರವಾಗಿ ತೋರಿಸುತ್ತಾ, ಆ ಮೌಲ್ಯವನ್ನು ಕಾಪಾಡುವುದಕ್ಕಾಗಿ ಹೋರಾಡುವ ನಾಯಕನನ್ನೋ, ನಾಯಕಿಯನ್ನೋ ವೈಭವೀಕರಿಸುತ್ತ ಕತೆಗಳನ್ನು ಹೆಣೆಯುತ್ತಿರುತ್ತವೆ. ಸರಿತಪ್ಪುಗಳ ಲೆಕ್ಕಾಚಾರ ಪಕ್ಕಕ್ಕಿರಲಿ. ಹೀಗೆಯೇ ಅನೇಕ ರಿಯಾಲಿಟಿ ಶೋಗಳೂ ಒಂದಾದ ಮೇಲೊಂದು ಸೆಟ್ಟೇರುತ್ತಿರುತ್ತವೆ.

ಜಗತ್ತಿನಲ್ಲಿ ಒಳ್ಳೆಯದು ಮತ್ತು ಕೆಟ್ಟದು ಎಂಬ ಎರಡು ಧ್ರುವಗಳು ಕಪ್ಪು ಬಿಳುಪು ಬಣ್ಣದಂತೆ ಇರುತ್ತದೆ ಎಂದು ನಾವು ಭಾವಿಸುತ್ತಿರುತ್ತೇವೆ. ಆದರೆ ವಾಸ್ತವ ಹಾಗೇನೂ ಇರುವುದಿಲ್ಲ. ಒಳಿತೆಂಬ ಬಣ್ಣದ ಛಾಯೆಗಳು ಒಂದೋ ಹೊಳಪಾಗುತ್ತ ಅಥವಾ ಮಸುಕಾಗುತ್ತಾ ಸಾಗುತ್ತವೆ. ಇದೇ ಮಾತನ್ನೂ ಟೀವಿ ಕಾರ್ಯಕ್ರಮಗಳ ಬಗ್ಗೆಯೂ ಹೇಳಬಹುದು. ಅತ್ಯುತ್ತಮವಾದ ಕಾರ್ಯಕ್ರಮ, ತಕ್ಕಮಟ್ಟಿಗೆ ಮೂಡಿ ಬಂದವುಗಳು, ಗದ್ದಲವೇ ತುಂಬಿ ಉದ್ದೇಶವು ತುಸು ಮರೆಯಾದವು.. ಹೀಗೆ.. ನೂರಾರು ಛಾಯೆಗಳನ್ನು ಹೊತ್ತ ಕಾರ್ಯಕ್ರಮಗಳು.

ಅಂತಹ ಒಂದು ಅತ್ಯುತ್ತಮವಾದ, ಕೌಟುಂಬಿಕ ಒಗ್ಗಟ್ಟನ್ನು ಬಿಂಬಿಸುವ ಕಾರ್ಯಕ್ರಮವೊಂದನ್ನು ಪುನೀತ್ ರಾಜ್ ಕುಮಾರ್ ನಡೆಸಿಕೊಟ್ಟಿದ್ದರು. ‘ಫ್ಯಾಮಿಲಿ ಪವರ್’ ಎಂಬ ಆ ಕಾರ್ಯಕ್ರಮದಲ್ಲಿ ಪುನೀತ್, ನಾಡಿನ ನೂರಾರು ಕುಟುಂಬಗಳ ಸದಸ್ಯರನ್ನು ಮುಖಾಮುಖಿಯಾಗಿದ್ದರು. ಪುಟಾಣಿಗಳು, ದೊಡ್ಡವರು, ಅಜ್ಜಿ ಅಜ್ಜಂದಿರು, ಅಪ್ಪ ಅಮ್ಮನ ಸ್ಥಾನದಲ್ಲಿದ್ದವರು ಅವರನ್ನು ಭೇಟಿಯಾಗಲು ಕಾತರದಿಂದ ಇರುವವರೆಲ್ಲರನ್ನೂ ಅವರು ಆ ವೇದಿಕೆಯಲ್ಲಿ ಭೇಟಿಯಾಗುತ್ತಿದ್ದರು. ಮಕ್ಕಳಿಗೋ ಅವರೆಂದರೆ ಇನ್ನಿಲ್ಲದ ಖುಷಿ. ದೊಡ್ಡವರಿಗೆ ಕೊಟ್ಟಷ್ಟೇ ಗೌರವ ಕೊಟ್ಟು ಅವರು ಮಕ್ಕಳನ್ನೂ ಮಾತನಾಡಿಸುತ್ತಿದ್ದರು. ಹಿರಿಯ ತಲೆಮಾರಿನವರು, ರಾಜ್ ಕುಮಾರ್ ಜೊತೆಗಿನ ತಮ್ಮ ಸಂಬಂಧವನ್ನು ಹೇಳಿಕೊಂಡು ಪುನೀತ್ ಅವರನ್ನು ಮಾತಿಗೆಳೆಯುತ್ತಿದ್ದರು. ಯುವಜನರು, ಪುನೀತ್ ಜೊತೆಗೆ ಎರಡು ಸ್ಟೆಪ್ ಹಾಕಬೇಕು ಎಂದು ಬಯಸುತ್ತಿದ್ದರು. ಏನೇ ಆದರೂ, ಪುನೀತ್ ಎಲ್ಲರಿಗೂ ಇಷ್ಟ. ಮಕ್ಕಳಿಗೆ ಸ್ವಲ್ಪ ಹೆಚ್ಚು ಇಷ್ಟ.

ತಮ್ಮ ಮಕ್ಕಳಿಗೆ ಹೆಚ್ಚು ಇಷ್ಟವಾಗುವ ಪುನೀತ್ ಇಷ್ಟೊಂದು ಒಳ್ಳೆಯವನಾಗಿದ್ದಾನಲ್ಲ ಎಂಬ ನೆಮ್ಮದಿಯ ಗೆರೆಯೊಂದು ದೊಡ್ಡವರ ಎದೆಯಲ್ಲಿ ಕಂಡೂ ಕಾಣದಂತೆ ಇತ್ತೋ ಇಲ್ಲವೋ, ಪುನೀತ್ ತೆರಳಿದ ಬಳಿಕ, ಎದೆಯೊಳಗೆ ಅವಿತ ಈ ಭಾವನೆ ಬಹಳ ಸ್ಪಷ್ಟವಾಗಿ ಗೋಚರಿಸಲಾರಂಭಿಸಿದೆ. ತನ್ನ ಮಗ ಪುನೀತ್ ಅಭಿನಯಿಸಿದ ಸಿನಿಮಾ ಹಾಕಿಕೊಂಡು ಮೊಬೈಲ್ ನಲ್ಲಿ ಮುಳುಗಿ ಹೋಗಿದ್ದಾನೆ ಎಂಬುದನ್ನು ದೂರದಿಂದ ಗಮನಿಸುವ ಅಮ್ಮನೆದೆಯಲ್ಲಿ ಒಂದು ನೆಮ್ಮದಿಯ ಭಾವ ಮೂಡುವುದು.

ಸಾಮಾನ್ಯವಾಗಿ ನಮ್ಮ ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ,  ಉಡುಪಿಗಳಲ್ಲಿ ಹಾಗೂ ಪಕ್ಕದ ಕಾಸರಗೋಡು ಜಿಲ್ಲೆಯಲ್ಲಿ ಸಿನಿಮಾ ತಾರೆಯರ ಕುರಿತು ಮೋಹಗೊಳ್ಳುವವರು ಬಹಳ ಕಡಿಮೆ. ಸಿನಿಮಾ ಚೆನ್ನಾಗಿದೆ ಎಂದಾದರೆ ಥಿಯೇಟರ್ ನಲ್ಲಿ ಸಂಭ್ರಮಿಸುವುದಷ್ಟೇ ಹೊರತು, ಉಳಿದಂತೆ ಊರಿಗೆ ಬರುವ ತಾರೆಯರ ಬೆನ್ನು ಬೀಳುವ, ಸೆಲ್ಫಿಗೆ ಮುಗಿಬೀಳುವ ಪ್ರವೃತ್ತಿ ಇಲ್ಲ. ಆದರೆ ಪುನೀತ್ ತೀರಿಕೊಂಡಾಗ, ಕರಾವಳಿಯ ಎಷ್ಟೋ ಮನೆಗಳಲ್ಲಿ ಸೂತಕದ ವಾತಾವರಣ ಆವರಿಸಿತ್ತು. ‘ಅವನನ್ನು ಅಷ್ಟೊಂದು ಹಚ್ಚಿಕೊಂಡಿದ್ದೆವು ಎನ್ನುವುದು ನಮಗೇ ಗೊತ್ತಿರಲಿಲ್ಲ..’ ಎಂಬ ಸಾಲುಗಳನ್ನು ಅನೇಕರು ಹೇಳುತ್ತಿದ್ದರು. ಈ ಹಚ್ಚಿಕೊಳ್ಳುವಿಕೆಯು ಕೇವಲ ಸಿನಿಮಾದ ದೆಸೆಯಿಂದಷ್ಟೇ ಸಾಧ್ಯವಾಯಿತೇ. ಖಂಡಿತಾ ಇಲ್ಲ. ಸಿನಿಮಾ ಥಿಯೇಟರ್ ಗೇ ಕಾಲಿಡದ ಎಷ್ಟೋ ಜನರು ಪುನೀತ್ ಎಂದರೆ ‘ಓಹ್. ಒಳ್ಳೆಜನ’ ಎಂಬ ಷರಾ ಹೇಳುತ್ತಿದ್ದರು.

ಜಗತ್ತಿನಲ್ಲಿ ಒಳ್ಳೆಯದು ಮತ್ತು ಕೆಟ್ಟದು ಎಂಬ ಎರಡು ಧ್ರುವಗಳು ಕಪ್ಪು ಬಿಳುಪು ಬಣ್ಣದಂತೆ ಇರುತ್ತದೆ ಎಂದು ನಾವು ಭಾವಿಸುತ್ತಿರುತ್ತೇವೆ. ಆದರೆ ವಾಸ್ತವ ಹಾಗೇನೂ ಇರುವುದಿಲ್ಲ. ಒಳಿತೆಂಬ ಬಣ್ಣದ ಛಾಯೆಗಳು ಒಂದೋ ಹೊಳಪಾಗುತ್ತ ಅಥವಾ ಮಸುಕಾಗುತ್ತಾ ಸಾಗುತ್ತವೆ.

ಬಹುಶಃ ಯಾವುದರ ಬಗ್ಗೆಯೂ ಷರಾ ಹೇಳದೇ, ಎಲ್ಲ ವಿಚಾರಗಳನ್ನೂ ಮಗು ಮನಸ್ಸಿನ ಕುತೂಹಲದಿಂದ ನೋಡುತ್ತ -ಅರಿಯುತ್ತ ಇದ್ದ ಪುನೀತ್ ಸ್ವಭಾವವೇ ಅದಕ್ಕೆ ಕಾರಣವಿರಬೇಕು. ಶಾಲೆಯಲ್ಲಿ ‘ಒಳ್ಳೆಯ ಕೆಲಸ ಬರೆಯಿರಿ’ ಎಂದು ಮೇಷ್ಟರು ಹೇಳಿದರೆ, ವಿಧೇಯತೆಯಿಂದ ಬರೆಯುತ್ತಿದ್ದ ವಿದ್ಯಾರ್ಥಿಯ ಹಾಗೆ ಪುನೀತ್ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದರು. ಒಳ್ಳೆಯ ಕೆಲಸ ಬರೆಯುವ ಪುಸ್ತಕಕ್ಕೆ ಹೇಗೆ ಅಂಕಗಳನ್ನು ಕೇಳುವ ಹಾಗಿಲ್ಲವೋ, ಹಾಗೆಯೇ ಪುನೀತ್ ಕೂಡ ತಾವು ಮಾಡಿದ ಕೆಲಸಗಳ ಬಗ್ಗೆ ಪ್ರಚಾರದ ಅಂಕಗಳನ್ನು ಪಡೆಯುವ ಗೋಜಿಗೆ ಹೋಗಿರಲಿಲ್ಲ. ಇದೆಲ್ಲವೂ ಅವರು ತೆರಳಿದ ಬಳಿಕವಷ್ಟೇ ಗೊತ್ತಾಗಿದ್ದು, ಈಗ ನೋಡಿದರೆ, ಅಂಕಗಳೆಂಬ ಸೀಮಿತ ವಿಚಾರವನ್ನೂ, ಷರಾ ಎಂಬ ಗೇಟುಬಾಗಿಲುಗಳನ್ನೂ ದಾಟಿ ಅವರ ವ್ಯಕ್ತಿತ್ವ ಬೃಹತ್ತಾಗಿ ಗೋಚರಿಸುತ್ತಿದೆ.

ಸಿನಿಮಾಗಳನ್ನು ಮೀರಿ, ಕನ್ನಡ ನಾಡಿನ ಜನರ ಹೃದಯದಲ್ಲಿ ಪುನೀತ್ ಭಾವಜಲದಂತೆ ಆವರಿಸಿದ್ದು ಹೇಗೆ ಎಂದು ಪ್ರಶ್ನಿಸಿದರೆ, ಈಗ ಎಲ್ಲರೂ ಹೇಳುವ ಉತ್ತರ ‘ಅವರ ಒಳ್ಳೆಯತನ’ . ಅವರ ಒಳ್ಳೆಯತನವೆಂಬುದು ಕೇವಲ ಸಿನಿಮಾಗಳಲ್ಲಿ ಪಾತ್ರಗಳ ಆಯ್ಕೆಗಾಗಲೀ, ವ್ಯಾಪಾರ ವಹಿವಾಟಿಗಾಗಲೀ ಸೀಮಿತವಾದುದೇನೂ ಅಲ್ಲ ತಾನೆ. ಗಾಳಿಯಲ್ಲಿ ಹರಡುವ ಕಂಪು ಕೊಡುವ ಆಹ್ಲಾದದಂತೆ, ತಿಳಿಬೆಳಕು ನೀಡುವ ಹುಮ್ಮಸ್ಸಿನಂತೆ ಅದು ಬಂಧನವಿಲ್ಲದ ಭಾವ. ವ್ಯಕ್ತಿಯೊಬ್ಬನ ಇರುವಿಕೆಯೇ ವಾತಾವರಣದಲ್ಲಿ ಸಕಾರಾತ್ಮಕ ಭಾವವನ್ನು ತುಂಬಿದಂತೆ ಭಾಸವಾಗುವುದು. ಸಾವಿರಾರು ಅಡಚಣೆಗಳಿದ್ದರೂ ಅವುಗಳನ್ನು ದಾಟಿಕೊಂಡು ರಚನಾತ್ಮಕ ಕೆಲಸಗಳನ್ನು ಮಾಡಬಹುದೇ ಎಂಬ ಕ್ರಿಯಾಶೀಲತೆ, ಬದುಕಿನ ವಿಸ್ಮಯಗಳನ್ನು ಅರಿಯುವ ಸದಾಸಕ್ತಿ, ತನ್ನ ಅರಿವಿಗೆ ನಿಲುಕದಿದ್ದರೂ ಅಲ್ಲೇನಾದರೂ ಒಳಿತು ಇರಬಹುದು ಎಂಬ ಸ್ವೀಕಾರ ಭಾವವು ಅವರ ವ್ಯಕ್ತಿತ್ವದಲ್ಲಿ ಮಿಳಿತವಾಗಿತ್ತು.

ಸಿನಿಮಾ ರಂಗದಲ್ಲೊಂದು ಮಾತಿದೆ, ‘ಯಾವ ಸಿನಿಮಾವನ್ನು ಮಕ್ಕಳು ಇಷ್ಟಪಡುತ್ತಾರೋ, ಅದು ನಿಜವಾಗಿಯೂ ಯಶಸ್ವೀ ಜನಪರ ಚಿತ್ರವಾಗಿರುತ್ತದೆ’. ಜಬ್ ವಿ ಮೆಟ್ ಎಂಬ ಪ್ರೇಮಕತೆಯ ಹಿಂದಿ ಚಿತ್ರ ಬಿಡುಗಡೆಯಾದಾಗ, ಅದೇನೂ ಮಕ್ಕಳ ಕತೆಯ ಸಿನಿಮಾವಾಗಿರಲಿಲ್ಲ. ಆದರೆ ಅದನ್ನು ಮಕ್ಕಳು ಎಷ್ಟು ಇಷ್ಟಪಟ್ಟರೆಂದರೆ, ಬಳಿಕ ಮಕ್ಕಳ ಚಾನೆಲ್ ಗಳಲ್ಲಿ ಚಿತ್ರವು ಪದೇ ಪದೇ ಪ್ರದರ್ಶನಗೊಳ್ಳುತ್ತಿತ್ತು. ಚಿತ್ರ ಬಿಡುಗಡೆಯಾಗಿ ಎಷ್ಟೋ ವರ್ಷಗಳ ಬಳಿಕವೂ ಮಕ್ಕಳು ಪದೇ ಪದೇ ಆ ಚಿತ್ರವನ್ನು ನೋಡಲು ಇಷ್ಟಪಡುತ್ತಿದ್ದರು. ಪಾತ್ರಗಳಲ್ಲಿ ನೇರವಂತಿಕೆ, ಒಳ್ಳೆಯತನಗಳು ಸೇರಿರುವ ಇಂತಹ ಅನೇಕ ಉದಾಹರಣೆಗಳನ್ನು ನೀಡಬಹುದಾದರೂ, ಸಿನಿಮಾವನ್ನು ಮೀರಿ ವ್ಯಕ್ತಿಯು ಒಳ್ಳೆಯತನದ ಮಾದರಿಯಾಗಿ ನಿಲ್ಲುವುದೆಂದರೆ ಅದು ವ್ಯಕ್ತಿಯ ವೈಯಕ್ತಿಕ ಸಾಧನೆಯೂ ಹೌದು. ಜೊತೆಗೆ ಉಳಿದವರ ಅದೃಷ್ಟವೂ ಹೌದು. ಪುನೀತ್ ನಮ್ಮೊಂದಿಗಿದ್ದುದು ನಮ್ಮ ಅದೃಷ್ಟವಾಗಿತ್ತು ಎಂಬುದು ನಂತರದ ದಿನಗಳಲ್ಲಿ ಗೊತ್ತಾಗುತ್ತಿದೆ.

ಹೀಗೆ ಒಳ್ಳೆಯತನವನ್ನು ಬಾಳಿದ ಅನೇಕ ವ್ಯಕ್ತಿಗಳು ನಮ್ಮ ಸುತ್ತಮುತ್ತ ಇರಬಹುದು. ಅವರು ಜನಪ್ರಿಯರೂ ಗಣ್ಯರೂ ಆದಾಗ ಆ ಒಳಿತಿನ ಕಂಪು ಹೆಚ್ಚು ವ್ಯಾಪಿಸಿರುತ್ತದೆ. ಮಹಾತ್ಮ ಗಾಂಧೀಜಿ ಕೇವಲ ಸ್ವಾತಂತ್ರ್ಯ ಹೋರಾಟಗಾರರಷ್ಟೇ ಆಗಿದ್ದರೆ ಅವರ ದಟ್ಟ ಪ್ರಭಾವವು ತಲೆಮಾರುಗಳ ಕಾಲ ಹೀಗೆ ಸಾಗಿಬರುವುದು ಸಾಧ್ಯವಿರುತ್ತಿತ್ತೋ ಇಲ್ಲವೋ. ಮನುಷ್ಯನಿಗೆ ಲಭ್ಯವಾಗಿರುವ ಜೀವನಾವಧಿಯನ್ನು ಹೇಗೆ ಸುಂದರವಾಗಿ, ಪ್ರಾಮಾಣಿಕವಾಗಿ ಬಾಳಿ ಬದುಕುವುದು ಸಾಧ್ಯ ಎಂಬಲ್ಲಿಯೇ ಈ ಒಳ್ಳೆಯತನದ ಹೊಳಪು ಹೆಚ್ಚು ಗೋಚರಿಸುತ್ತದೆ. ಅವರ ಮಾತುಗಳಲ್ಲಿದ್ದ ಪ್ರಾಮಾಣಿಕತೆಯೇ ಅವರಿಗೆ ನಾಯಕತ್ವದ ಗುಣವನ್ನು ಕೊಟ್ಟಿತ್ತು. ಹೋರಾಟಕ್ಕಾಗಿ ಸಂಪತ್ತು ದಾನ ಮಾಡಿ ಎಂದ ಕೂಡಲೇ ಜನರು ಮರು ಮಾತಿಲ್ಲದೇ ತಮ್ಮಲ್ಲಿದ್ದ ಸಂಪತ್ತನ್ನು ದಾನ ಮಾಡಲು ಮುಂದಾಗಿದ್ದರು. ತಾವು ಮಾಡುತ್ತಿರುವುದು ‘ಸಪಾತ್ರ ದಾನ’ ಎಂಬ ವಿಶ್ವಾಸವು ಜನರೆದೆಯಲ್ಲಿ ಭದ್ರವಾಗಿತ್ತು.

ವಿನೋಬಾ ಭಾವೆಯವರು ಭೂಮಿಯನ್ನು ದಾನ ಮಾಡಿ ಎಂದ ಕೂಡಲೇ ದೇಶಾದ್ಯಂತ ಅನೇಕ ಜಮೀನ್ದಾರರು ಭೂಮಿಯನ್ನು ಅರ್ಹರಿಗೆ ಕೊಟ್ಟುಬಿಟ್ಟರು. ತಾವು ತ್ಯಾಗ ಮಾಡಿದ್ದೇವೆ ಎಂಬ ಭಾರವಾದ ಹೊರೆಯನ್ನು ಹೊರದೇ, ಅವರೆಲ್ಲರೂ ವಿನೋಬಾರ ಪ್ರಾಮಾಣಿಕತೆಯ ಮೇಲೆ ಭದ್ರವಾದ ನಂಬಿಕೆಯನ್ನಿರಿಸಿದ್ದರು.

ಅಷ್ಟೊಂದು ಭದ್ರವಾದ ನಂಬಿಕೆಯನ್ನು ಇರಿಸಿ, ‘ನೋಡು ಮಗು, ಇವರು ಬೆಸ್ಟ್ ಜನ..’ ಎಂದು ನಾವು ಹೇಳಬಹುದಾದ ಮಾದರಿಗಳು ನಮಗಿಂದು ಎಷ್ಟೊಂದು ಅಗತ್ಯವಿದೆ! ಮಕ್ಕಳಿಗೆ ಹೇಳುತ್ತಾ, ನಾವೂ ನಮ್ಮಸ್ವಯಂ ಬದುಕಿನ ನಡೆಯನ್ನು ಸರಿಪಡಿಸಿಕೊಳ್ಳಲು ಪ್ರೇರೇಪಿಸುವ ಮಾದರಿಗಳು ಬೇಕಾಗಿವೆ. ಆದರೆ ಅಂತಹ ಮಾದರಿಗಳು ಸಮಾಜದಲ್ಲಿ ಅಪರೂಪವಾಗುತ್ತ ಇವೆ ಎಂಬುದನ್ನು ಗಮನಿಸಿ ನಮ್ಮೆದೆಯೊಳಗೆ ಕಳವಳವು ತೀವ್ರಗೊಳ್ಳುತ್ತ ಹೋಗುತ್ತಿದೆ. ನಮ್ಮ ಕಂದಮ್ಮಗಳಿಗೆ ಇಷ್ಟವಾಗುವ ಒಳಿತಿನ ಮಾದರಿಯೊಂದನ್ನು ಹೇಗೆ ತೋರಿಸಲಿ ಎಂಬ ತಳಮಳವು ಸಳಕ್ಕನೆ ಕಣ್ಣಲ್ಲಿ ನೀರನ್ನು ತರಿಸುತ್ತಿದೆ. ಆಗ ಪುನೀತ್ ಎಷ್ಟು ಮುಖ್ಯವಾಗಿಬಿಟ್ಟಿದ್ದರು ಎಂಬುದು ಮತ್ತೆ ಮತ್ತೆ ನೆನಪಾಗಿ, ಅವರ ಅಗಲಿಕೆಯನ್ನು ಮರೆಯುವುದು ಕಷ್ಟವಾಗುತ್ತಿದೆ.

ಅದಕ್ಕೆ ಇರಬೇಕು, ಕೌಟುಂಬಿಕ ಮೌಲ್ಯಗಳನ್ನು ಆಧರಿಸಿದ ರಿಯಾಲಿಟಿ ಶೋ ಎಂದರೆ ಪುನೀತ್ ಆಡುತ್ತಿದ್ದ ಬೆಚ್ಚಗಿನ ಮಾತುಗಳು ನೆನಪಾಗುತ್ತವೆ. ಹುಡುಗನೊಬ್ಬನಲ್ಲಿ ಅವರು ಪ್ರಶ್ನಿಸುತ್ತಾರೆ, ‘ಮುಂದೇನಾಗಬೇಕು ಎಂದುಕೊಂಡಿದ್ದೀಯ?’ ‘ನಾನು ವೆಟರ್ನರಿ ಡಾಕ್ಟರ್, ಸೈನಿಕ ಮತ್ತು ರೈತನಾಗಬೇಕು’ ಎಂದು ಉತ್ತರಿಸುತ್ತಾನೆ ಕನಸುಕಣ್ಣಿನ ಹುಡುಗ. ‘ಅರೆ ಯಾಕೆ?’ ಎಂದು ಅಚ್ಚರಿಯಿಂದಲೂ ಅಷ್ಟೇ ಗೌರವದಿಂದಲೂ ಅವರು ಪ್ರಶ್ನಿಸುತ್ತಾರೆ, ‘ನನಗೆ ಪೆಟ್ಸ್ ಅಂದರೆ ಇಷ್ಟ, ಅವುಗಳಿಗೆ ನೋವಾದಾಗ ಚಿಕಿತ್ಸೆ ಮಾಡಬೇಕು, ಆದ್ರಿಂದ ನಾನು ಡಾಕ್ಟರ್ ಆಗುತ್ತೇನೆ. ಜನರಿಗೆ ಅನ್ನ ಕೊಡುವವನಾಗಬೇಕು ನಾನು, ಅದಕ್ಕಾಗಿ ರೈತನಾಗಿ ಬೆಳೆ ಬೆಳೆಯುತ್ತೇನೆ. ದೇಶದ ಜನರು ನೆಮ್ಮದಿಯಿಂದ ಇರಬೇಕಾದರೆ ಗಡಿ ಕಾಯಬೇಕಲ್ಲ, ಅದಕ್ಕಾಗಿ ಯೋಧನಾಗುತ್ತೇನೆ’ ಎಂದು ವಿವರಿಸಿದ. ಹೀಗೆ ಹೇಳಿದರೆ ಪುನೀತ್ ಏನು ತಿಳಿದುಕೊಳ್ಳಬಹುದು ಎಂಬ ಮುಜುಗರವಿಲ್ಲದಷ್ಟು ಆಪ್ತತೆಯಿಂದ, ಸ್ನೇಹಿತರೊಡನೆ ಮಾತನಾಡಿದಂತೆ ಆ ಹುಡುಗ ಮಾತನಾಡುತ್ತಿದ್ದ.

ಆ ಶೋದಲ್ಲಿ ಪುನೀತ್ ಅವರು ಸುರಕ್ಷತೆಯ ಬೆಚ್ಚನೆಯ ಭಾವದೊಳಗೆ ಮಕ್ಕಳನ್ನು ಕರೆದುಕೊಳ್ಳುತ್ತಿದ್ದರು. ಸೋತ ಮಕ್ಕಳನ್ನೂ ‘ಸೋಲು ಒಂದು ದೊಡ್ಡ ವಿಷಯವೇ ಅಲ್ಲ’ ಎಂಬಷ್ಟು ಅಕ್ಕರೆಯಿಂದ ಸೇರಿಸಿಕೊಳ್ಳುತ್ತಿದ್ದರು.

ಥರ್ಮಾಮೀಟರ್‌ನಲ್ಲಿ ಪಾದರಸದ ಗೋಲವನ್ನು ಹುಡುಕಿದಂತೆ ವ್ಯಕ್ತಿತ್ವದಲ್ಲಿ ನಮಗೆ ಗೊತ್ತಿಲ್ಲದಂತೆಯೇ ಒಳ್ಳೆಯತನವನ್ನೂ ನಾವು ಹುಡುಕುತ್ತಿರುತ್ತೇವೆ. ಅದು ಎಷ್ಟು ಮೇಲಕ್ಕೇರಿ ನಿಂತಿರುತ್ತದೆ ಎನ್ನುವುದು ಪಕ್ಕನೇ ನಮ್ಮ ಅರಿವಿಗೆ ಬರುವುದಿಲ್ಲ. ಇನ್ನೂ ಹೇಳಬೇಕೆಂದರೆ ಒಳಿತನ್ನು ವ್ಯಾಖ್ಯಾನಿಸಲು ಬೇಕಾದ ಭಾಷೆಯನ್ನು ಒಲಿಸಿಕೊಳ್ಳಲೂ ಒಂದಿಷ್ಟು ಅರ್ಹತೆಯು ನಮ್ಮಲ್ಲಿರಬೇಕೇನೋ.

ಹಿರಿಯರು ಹೇಳುವುದುಂಟು, ಒಬ್ಬ ಒಳ್ಳೆಯವನ ಹೆಗಲನ್ನು ಆಶ್ರಯಿಸಿ ಇತರ ಸಜ್ಜನರೂ ದುರ್ಜನರೂ ಬಾಳುವೆ ಮಾಡುತ್ತಾರಂತೆ. ಇವನು ಸಜ್ಜನನಾದುದರಿಂದ ನನಗೆ ಹಾನಿ ಮಾಡಲಾರ ಎಂಬ ನಂಬಿಕೆಯು ದುರ್ಜನರೆದೆಯಲ್ಲಿಯೂ ಇರುವುದಂತೆ. ಆದ್ದರಿಂದಲೇ ಸಜ್ಜನರಿಗೆ ಸಮಾಜವು ಸದಾ ಋಣಿಯಾಗಿರುತ್ತದೆ.