ಆಗಷ್ಟೇ ಶಾಲೆ ಬಿಟ್ಟು ಮಕ್ಕಳು ಅತ್ತಿಂದಿತ್ತ ಓಡಾಡುತ್ತಾ ರಸ್ತೆಯ ಮೇಲೂ, ಪಕ್ಕದಲ್ಲೂ ಚಲಿಸುತ್ತಿದ್ದರು. ಆಗ  ನಡೆದುಕೊಂಡು ಹೋಗುತ್ತಿದ್ದ ಒಬ್ಬ ಚಿಕ್ಕ ಹುಡುಗಿಗೆ ಮುಂದಿನಿಂದ ಬಂದ ಒಂದು ಮೋಟಾರ್ ಬೈಕ್ ಸವಾರನ ಯಡವಟ್ಟಿನಿಂದಾಗಿ,  ಅಪಘಾತ ಸಂಭವಿಸಿತ್ತು. ಕೂಡಲೇ ಕೆಲವು ಆಸ್ಪತ್ರೆಯ ಸಿಬ್ಬಂದಿ, ಓಡಿಹೋಗಿ ಮಗುವನ್ನು ಎತ್ತಿಕೊಂಡು ತುರ್ತು ವಿಭಾಗಕ್ಕೆ ತಂದಿದ್ದರು. ನಮ್ಮ ಜೊತೆ ಹರಟುತ್ತಾ ನಿಂತಿದ್ದ ಅಂದಿನ ತುರ್ತು ವಿಭಾಗದ ವೈದ್ಯರು ಅಲ್ಲಿದ್ದ ಅಪಘಾತ ಪುಸ್ತಕದಲ್ಲಿ ಅಂದಿನ ದಿನಾಂಕ, ಸಮಯ, ಮಗುವಿನ ಹೆಸರು, ವಯಸ್ಸು  ಇತ್ಯಾದಿ ವಿವರಗಳನ್ನು ಬರೆದಿಟ್ಟು ಚಿಕಿತ್ಸೆ ಮಾಡಿದ್ದಾರೆ. ಆದರೆ ಈ ಗಡಿಬಿಡಿಯ ಬರಹವು ಫಜೀತಿಯನ್ನೇ ತಂದಿಟ್ಟಿತು. 
ಡಾ. ಕೆ.ಬಿ. ಸೂರ್ಯಕುಮಾರ್‌ ಬರೆಯುವ ‘ನೆನಪುಗಳ ಮೆರವಣಿಗೆ’ ಸರಣಿ

 

ಶಾಲೆಯಿಂದ ಹಿಡಿದು ನಾವು ಕೆಲಸ ಮಾಡುವಲ್ಲಿಯವರೆಗೂ ಹಾಜರಿ ಎಂಬುದು ನಮಗೆ ಕಡ್ಡಾಯ. ಹಿಂದೆಲ್ಲಾ, ಹಾಜರ್ ಸಾರ್, ಬಂದಿದ್ದೇನೆ ಟೀಚರ್, ಪ್ರೆಸೆಂಟ್ ಮಿಸ್, ಯೆಸ್ ಮೇಮ್ ಮುಂತಾದವುಗಳನ್ನು ಕ್ಲಾಸಿನಲ್ಲಿ ಹೇಳುತ್ತಿದ್ದ ನಾವುಗಳು, ಕೆಲಸಕ್ಕೆ ಸೇರಿದ ಮೇಲೆ ಅಲ್ಲಿನ ಹಾಜರಿ ಪುಸ್ತಕದಲ್ಲಿ ಸಹಿ ಹಾಕಲು ತೊಡಗಿದೆವು. ಕೆಲವು ಬುದ್ದಿವಂತರು ಸಹಿ ಹಾಕಿ ಕೆಲವು ನಿಮಿಷಗಳ ನಂತರ, ಟೀ ಕಾಫಿಗೆಂದು ಹೊರಗೆ ಹೋಗತೊಡಗಿದಾಗ, ಕೆಲವೆಡೆ, ಆಫೀಸ್ ಪಕ್ಕ ಕ್ಯಾಂಟೀನ್ ಬಂತು, ಟೇಬಲ್ಲಿಗೇ ಟೀ ಸರಬರಾಜಾಗತೊಡಗಿತು. ದೊಡ್ಡ ದೊಡ್ಡ ಕಂಪನಿಗಳಲ್ಲಿ ಕಾಫೀ ವೆಂಡಿಂಗ್ ಮೇಶಿನ್ ಪ್ರತಿಷ್ಠಾಪನೆ ಮಾಡಲಾಯ್ತು. ಈಗ ಮತ್ತೂ ಮುಂದುವರೆದ ವಿಧಾನವಾದ, ಗುರುತಿನ ಚೀಟಿ ಅಥವಾ ಹೆಬ್ಬೆಟ್ಟಿನ/ಕಣ್ಣಿನ ‘ಬಯೋಮೆಟ್ರಿಕ್’ ಸ್ಕ್ಯಾನ್ ಯಂತ್ರಗಳ ಬಳಕೆಗೆ ಪ್ರಾಧಾನ್ಯತೆ ಇದ್ದು, ಓರ್ವ ವ್ಯಕ್ತಿಯ ಹಾಜರಾತಿ ಆ ಸ್ಥಳದಲ್ಲಿ ಯಾವ ವೇಳೆಯಲ್ಲಿ ಇತ್ತು ಎಂಬುದನ್ನು ಧೃಡೀಕರಿಸಬಹುದಾಗಿದೆ.

ಹಾಗೇ, ಶಾಲೆಯಲ್ಲಿನ ಹಾಜರ್ ಪುಸ್ತಕವೂ ಒಮ್ಮೆ ಕೋರ್ಟಿನ ಕಟ ಕಟೆಯಲ್ಲಿ ನಿಂತು ಸಾಕ್ಷಿ ಹೇಳಬೇಕಾಗಿ ಬಂದ ಒಂದು ಘಟನೆ, ನನ್ನ ನೆನಪಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ.

ಕೆಲವು ವರ್ಷಗಳ ಹಿಂದಿನ ಕಥೆ. ನೂರು ವರ್ಷಕ್ಕೂ ಹೆಚ್ಚಿನ ಇತಿಹಾಸವಿರುವ ಜಿಲ್ಲಾಸ್ಪತ್ರೆ, ಇನ್ನೂ ಹಳೆಯ ಬ್ರಿಟಿಷ್ ಕಾಲದ ಕಟ್ಟಡಗಳಲ್ಲಿ ಇತ್ತು. ಈಗ ಅದನ್ನು ಕೆಡವಿ, ನೆಲಸಮ ಮಾಡಿ ಅಲ್ಲಿ ಉತ್ತಮವಾದ ನವ್ಯ ಕಟ್ಟಡಗಳು ಎದ್ದಿವೆ. ಆಸ್ಪತ್ರೆಯ ಕೆಲಸದ ಸಮಯ ಆಗ ಸಂಜೆ ನಾಲ್ಕು ಗಂಟೆಯವರೆಗೆ. ಕೆಲಸ ಮುಗಿಸಿದ ನಾವು ಕೆಲವರು ಅಲ್ಲಿಯೇ ತುರ್ತು ವಿಭಾಗದ ಪಕ್ಕದಲ್ಲಿ ನಿಂತು ಮಾತನಾಡುತ್ತಿದ್ದೆವು. ಆಸ್ಪತ್ರೆಯ ಕಟ್ಟಡ ಎತ್ತರದಲ್ಲಿ ಇದ್ದ ಕಾರಣ ನಮಗೆ ಪಕ್ಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗಿ ಬರುವವರು ಚೆನ್ನಾಗಿ ಕಾಣುತ್ತಿದ್ದರು. ಆಗಷ್ಟೇ ಶಾಲೆ ಬಿಟ್ಟು ಮಕ್ಕಳು ಅತ್ತಿಂದಿತ್ತ ಓಡಾಡುತ್ತಾ ರಸ್ತೆಯ ಮೇಲೂ, ಪಕ್ಕದಲ್ಲೂ ಚಲಿಸುತ್ತಿದ್ದರು. ಆಗ ಮುಂದಿನಿಂದ ಬಂದ ಒಂದು ಮೋಟಾರ್ ಬೈಕ್ ಸವಾರನಿಂದ, ನಡೆದುಕೊಂಡು ಹೋಗುತ್ತಿದ್ದ ಒಬ್ಬ ಚಿಕ್ಕ ಹುಡುಗಿಗೆ ಅಪಘಾತ ಸಂಭವಿಸಿತ್ತು. ಕೂಡಲೇ ಕೆಲವು ಆಸ್ಪತ್ರೆಯ ಸಿಬ್ಬಂದಿಗಳು, ಓಡಿಹೋಗಿ ಮಗುವನ್ನು ಎತ್ತಿಕೊಂಡು ತುರ್ತು ವಿಭಾಗಕ್ಕೆ ತಂದಿದ್ದಾರೆ. ನಮ್ಮ ಜೊತೆ ಹರಟುತ್ತಾ ನಿಂತಿದ್ದ ಅಂದಿನ ತುರ್ತು ವಿಭಾಗದ ವೈದ್ಯರು ಅಲ್ಲಿದ್ದ ಅಪಘಾತ ಪುಸ್ತಕದಲ್ಲಿ ಅಂದಿನ ದಿನಾಂಕ, ಸಮಯ, ಮಗುವಿನ ಹೆಸರು, ವಯಸ್ಸು, ಪೋಷಕರ ಹೆಸರು, ವಿಳಾಸ, ಗುರುತಿನ ಚಿನ್ಹೆ, ಗಾಯ ಆದ ಕಾರಣ, ಗಾಯದ ವಿವರಣೆ ಇತ್ಯಾದಿಗಳನ್ನು ಬರೆದಿಟ್ಟು ಚಿಕಿತ್ಸೆ ಮಾಡಿದ್ದಾರೆ. ಪೊಲೀಸರಿಗೆ ವಿಷಯವನ್ನು ಅದಕ್ಕೆಂದೇ ಇರುವ ಪುಸ್ತಕದಲ್ಲಿ ಬರೆದು ಕಳುಹಿಸಿದ್ದಾರೆ. ಪೋಲೀಸರು ಆಸ್ಪತ್ರೆಗೆ ಬಂದು ವಿವರಗಳನ್ನು ದಾಖಲಿಸಿಕೊಂಡಿದ್ದಾರೆ.

ಕೆಲವು ದಿನಗಳ ನಂತರ ಪೊಲೀಸರು ಗಾಯದ ದೃಢೀಕರಣ ಪತ್ರವನ್ನು ವೈದ್ಯರಿಂದ ಬರೆಸಿಕೊಂಡು ಹೋಗಿ, ಬೈಕ್ ಚಾಲಕನ ವಿರುದ್ಧ ಸೆಕ್ಷನ್ 304 (A) ದುಡುಕು ಮತ್ತು ಚಾಲಕನ ಅಜಾಗರೂತೆಯಿಂದ (Rash and Negligent act) ಆದ ಗಾಯ, ಮತ್ತು ಮಗುವಿನ ಹಲ್ಲೊಂದು ಮುರಿದಿದ್ದದ್ದರಿಂದ ಸೆಕ್ಷನ್ 320 (ತೀವ್ರವಾದ ಗಾಯ)ಗಳ ಅಡಿಯಲ್ಲಿ ಕೋರ್ಟಿನಲ್ಲಿ ಕೇಸು ದಾಖಲು ಮಾಡಿದ್ದಾರೆ.

ಇದಾಗಿ ಅನೇಕ ತಿಂಗಳುಗಳ ನಂತರ ಈ ಕೇಸ್ ಕೋರ್ಟಿನಲ್ಲಿ ವಿಚಾರಣೆಗೆ ಬಂತು. ಇದಕ್ಕೆ ಪೂರಕವಾಗಿರುವ ಅಪಘಾತ ರಿಜಿಸ್ಟ್ರಿಯಂತಹ ದಾಖಲೆಗಳನ್ನು ತೆಗೆದುಕೊಂಡು ಹೋಗಿ, ಇದರ ಬಗ್ಗೆ ಸಾಕ್ಷಿ ಹೇಳುವಂತೆ ಸಮ್ಮನ್ಸ್ ನಲ್ಲಿ ವೈದ್ಯರಿಗೆ ಸೂಚಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ದಿನವೂ ಇಂತಹ ಅನೇಕ ಅಪಘಾತದ ಕೇಸುಗಳನ್ನು ನೋಡುತ್ತಿರುವ ನಮಗೆ ಹೆಚ್ಚಾಗಿ ಯಾವ ಕೇಸ್ ಬಗ್ಗೆಯೂ ಮಾಹಿತಿ ಪೂರ್ಣವಾಗಿ ನೆನಪಿರುವುದು ಕಡಿಮೆ. ಹಾಗಾಗಿ ಕೋರ್ಟ್ ನಲ್ಲಿ ಕೇಳುವ ಪ್ರಶ್ನೆಗಳಿಗೆ, ನಾವು ಅಪಘಾತದ ಕುರಿತು ಪುಸ್ತಕದಲ್ಲಿ ದಾಖಲಿಸಿದ ವಿವರಗಳನ್ನು ಅಲ್ಲಿಯೇ ಓದಿ, ಉತ್ತರಗಳನ್ನು ಕೊಡುತ್ತೇವೆ.

 

ಈ ಕೇಸಿನಲ್ಲಿ ವೈದ್ಯರು ವಿವರಗಳನ್ನು ಓದುತ್ತಾ ಹೋದಂತೆ, ಕೋರ್ಟಿನಲ್ಲಿ ಇದ್ದ ಬೆರಳಚ್ಚು ತಜ್ಞರು ಅದನ್ನು ಅಚ್ಚಿಸತೊಡಗಿದರು. ಸರಕಾರಿ ವಕೀಲರು ಕೆಲವು ಪ್ರಶ್ನೆಗಳನ್ನು ಕೇಳಿದ ನಂತರ ಆರೋಪಿಯ ಕಡೆಯ ವಕೀಲರಿಂದ ಪಾಟೀ ಸವಾಲು ಶುರುವಾಯ್ತು.

“ಡಾಕ್ಟ್ರೇ, ನೀವು ಮೊದಲನೆಯದಾಗಿ ಭಗವದ್ಗೀತೆಯ ಮೇಲೆ ಕೈ ಇಟ್ಟು ಪ್ರಮಾಣ ಮಾಡಿ ಸತ್ಯವನ್ನೇ ಹೇಳುವುದಾಗಿ ಒಪ್ಪಿಕೊಂಡಿದ್ದೀರ, ಹೌದಾ, ಅಲ್ಲವೋ?”

“ಹೌದು, ಒಪ್ಪಿಕೊಂಡಿದ್ದೇನೆ.”….

“ಸರಿ ಹಾಗಾದರೆ. ಈಗ ನೀವು ಓದಿರುವುದು ನಿಮ್ಮ ಆಸ್ಪತ್ರೆಯ ಅಪಘಾತದ ಪುಸ್ತಕದಲ್ಲಿ ನೀವೇ, ನಿಮ್ಮ ಕೈಬರಹದಲ್ಲಿ ಬರೆದದ್ದು. ಹೌದೋ ಅಲ್ಲವೋ ”

“ಹೌದು ”

“ಹಾಗಿರುವಾಗ ಅಲ್ಲಿ ಬರೆದದ್ದು ಎಲ್ಲವೂ ಕೂಡಾ ನಿಮ್ಮ ಪ್ರಕಾರ ಸತ್ಯವೇ ಅಲ್ಲವೇ? ”

“ಹೌದು “…

ಈ ರೀತಿಯ ಪ್ರಶ್ನೆಗಳು ಬರತೊಡಗಿದಾಗ ನನ್ನ ಮಿತ್ರರಿಗೆ ಸ್ವಲ್ಪ ಇರಿಸು ಮುರಿಸು ಆಗತೊಡಗಿದೆ. ಯಾಕೆಂದರೆ ಈ ಕೇಸಿನಲ್ಲಿ ಅವರು ಚಿಕಿತ್ಸೆ ಮಾಡಿದ ಒಬ್ಬ ವೈದ್ಯ ಅಷ್ಟೇ. ಇದರಲ್ಲಿ ಅವರಿಗೆ ಬೇರೆ ಯಾವ ಆಸಕ್ತಿಯೂ ಇರುವ ಸಾಧ್ಯತೆ ಇಲ್ಲ. ಈ ಪಾಟಿ ಸವಾಲು ಎತ್ತ ಸಾಗುತ್ತ ಇದೆ ಎಂದೇ ಅವರಿಗೆ ಗೊತ್ತಾಗುತ್ತಿಲ್ಲ…
ಆಗಲೇ ವಕೀಲರಿಂದ ಬಂತು ಮತ್ತೊಂದು ಪ್ರಶ್ನೆ..

“ನೀವು ಈ ರೋಗಿಯನ್ನು ಯಾವ ತಾರೀಖು, ಎಷ್ಟು ಗಂಟೆಯ ಸಮಯದಲ್ಲಿ ನೋಡಿದ್ದು?”…

ನಮ್ಮ ವೈದ್ಯರಿಗೆ ಸ್ವಲ್ಪ ಸಿಟ್ಟು ಬಂದು, “ಈ ಪ್ರಶ್ನೆಗೆ ಆಗಲೇ ಸರಕಾರಿ ವಕೀಲರ ಸವಾಲಿನಲ್ಲಿ ಉತ್ತರ ಹೇಳಿದ್ದೇನೆ”, ಎಂದರು.

ಜಿಲ್ಲಾಸ್ಪತ್ರೆಯಲ್ಲಿ ದಿನವೂ ಇಂತಹ ಅನೇಕ ಅಪಘಾತದ ಕೇಸುಗಳನ್ನು ನೋಡುತ್ತಿರುವ ನಮಗೆ ಹೆಚ್ಚಾಗಿ ಯಾವ ಕೇಸ್ ಬಗ್ಗೆಯೂ ಪೂರ್ಣವಾಗಿ ನೆನಪಿರುವುದು ಕಡಿಮೆ. ಹಾಗಾಗಿ ಕೋರ್ಟ್ ನಲ್ಲಿ ಕೇಳುವ ಪ್ರಶ್ನೆಗಳಿಗೆ, ನಾವು ಅಪಘಾತದ ಪುಸ್ತಕದಲ್ಲಿ ದಾಖಲಿಸಿದ ವಿವರಗಳನ್ನು ಅಲ್ಲಿಯೇ ಓದಿ, ಉತ್ತರಗಳನ್ನು ಕೊಡುತ್ತೇವೆ.

ರಕ್ಷಣಾ ವಕೀಲರು ನಗುತ್ತಾ, ಛೇಡಿಸುವ ದ್ವನಿಯಲ್ಲಿ,
“ದಯವಿಟ್ಟು ನನ್ನ ಮಾಹಿತಿಗಾಗಿ ಪುಸ್ತಕ ನೋಡಿ, ಪುನಃ ಹೇಳಿ ಡಾಕ್ಟ್ರೆ” ಎಂದರು.
ಡಾಕ್ಟರ್ ರವರು ಅಪಘಾತದ ಪುಸ್ತಕವನ್ನು ನೋಡಿ, ದಿನಾಂಕ ಜನವರಿ ಏಳು, ಸಾವಿರದ ಒಂಬೈನೂರಾ ತೊಂಬತ್ತು ಎಂದರು.

“ನೀವು ಗಾಯಾಳುವನ್ನು ಯಾವ ಸಮಯದಲ್ಲಿ ಪರೀಕ್ಷಿಸಿದ್ದು”

ಪುಸ್ತಕ ನೋಡುತ್ತಾ ಹೇಳಿದರು ಡಾಕ್ಟರ್..
“ಸಂಜೆ ಮೂರೂವರೆ ಗಂಟೆಗೆ.”

“ದಟ್ಸ್ ಅಲ್ ಯುವರ್ ಆನರ್” ಅಂದು ಪಾಟೀ ಸವಾಲನ್ನು ಕೊನೆಗೊಳಿಸಿದರು ಆರೋಪಿಯ ವಕೀಲರು.
ಇತ್ತೀಚಿಗೆ ಕೆಲಸಕ್ಕೆ ಸೇರಿದ್ದ ಸರಕಾರೀ ವಕೀಲರು ಇದನ್ನೆಲ್ಲಾ ನೋಡುತ್ತಾ ಅವರಷ್ಟಕ್ಕೆ ಕುಳಿತಿದ್ದರು.

ನಂತರದ ಸಾಕ್ಷಿ, ಆ ಹುಡುಗಿಯ ಶಾಲೆಯ ಮುಖ್ಯೋಪಾಧ್ಯಾಯರು. ಅವರಿಗೆ ಹಾಜರಿ ಪುಸ್ತಕವನ್ನು ತರಲು ಹೇಳಲಾಗಿತ್ತು. ಅದರಲ್ಲಿ ಮಗು ಆ ತಿಂಗಳಿನಲ್ಲಿ ಯಾವ ಯಾವ ದಿನ ಶಾಲೆಗೆ ಬಂದಿದ್ದಾಳೆ, ಯಾವತ್ತು ಶಾಲೆಗೆ ರಜೆ ಇತ್ತು, ಎಷ್ಟು ಗಂಟೆಯಿಂದ ಎಲ್ಲಿಯ ತನಕ ತರಗತಿಗಳು ನಡೆದಿವೆ ಎಂಬ ಎಲ್ಲಾ ವಿವರಗಳನ್ನು ಕೇಳಿ, ದಾಖಲಿಸಲಾಯ್ತು.

ಅಲ್ಲಿಗೆ ಡಾಕ್ಟರ್ ಸಹಿತ ಎಲ್ಲಾ ಸಾಕ್ಷಿಗಳ ವಿಚಾರಣೆ ಮುಗಿಯಿತು.

ನಂತರದ ದಿನ ಕೋರ್ಟಿನಲ್ಲಿ ವಾದ, ಪ್ರತಿವಾದದ (arguments) ಸಮಯದಲ್ಲಿ, ಆರೋಪಿ ಪರ ವಕೀಲರು ಹೇಳಿದ್ದು ಕೆಲವೇ ಮಾತುಗಳು.

ಆ ಮಗುವಿಗೆ ರಸ್ತೆ ಅಫಘಾತವಾದುದನ್ನು ನಾನು ಇಲ್ಲ ಎಂದು ಹೇಳುವುದಿಲ್ಲ. ಆದರೆ ಪೋಲೀಸರ ಪ್ರಕಾರ ಸೋಮವಾರ ದಿನಾಂಕ ಎಂಟರಂದು ಮಧ್ಯಾಹ್ನ ನಾಲ್ಕೂವರೆಗೆ, ಮಗು ಶಾಲೆ ಬಿಟ್ಟು ಮನೆಗೆ ಹೋಗುವಾಗ ಈ ಘಟನೆ ನಡೆದಿದೆ. ಆದರೆ ಸರಕಾರಿ ಆಸ್ಪತ್ರೆಯ ವೈದ್ಯರು ಇಲ್ಲಿ ಬಂದು ದಾಖಲೆಗಳ ಸಮೇತ ಸಾಕ್ಷಿ ಹೇಳಿದ್ದು, ಅಪಘಾತ ಏಳನೇ ತಾರೀಖು ಸಂಭವಿಸಿದೆ ಎಂದು. ಅಂದರೆ ಆ ಅಪಘಾತ ಭಾನುವಾರ ಸಂಜೆ ಮೂರುವರೆ ಘಂಟೆಗೆ, ಅದೇ ಹೆಸರಿನ ಮತ್ಯಾರೋ ಗಾಯಾಳುವಿನ ಬಗ್ಗೆ ಎಂದಾಯ್ತು. ಹಾಗಾಗಿ ಪೋಲೀಸರ ಕೇಸಿನಲ್ಲಿರುವ ಗಾಯಾಳುವನ್ನು ಪರೀಕ್ಷಿಸಿದ ವೈದ್ಯರನ್ನು ಕರೆಸಿ, ಅವರಿಂದ ಮಾಹಿತಿ ಬೇಕು ಎಂದರು.

ಇಷ್ಟು ಹೊತ್ತಿಗೆ ಅಲ್ಲಿ ಏನು ಆಗುತ್ತಿದೆ ಎಂಬ ವಿಷಯ ತಲೆಗೆ ಹೊಳೆದ ಸರಕಾರಿ ವಕೀಲರು, ‘ಮಹಾಸ್ವಾಮಿ, ಡಾಕ್ಟರ್ ಕೈ ತಪ್ಪಿ, ಎಂಟರ ಬದಲು ಏಳು ಎಂದು ಬರೆದಿದ್ದಾರೆ’ ಅಂದರು.

ನಗುತ್ತಾ ವಿರೋಧಿ ವಕೀಲರು ಹೇಳಿದರು. ಆಯ್ತು. ಅದನ್ನೂ ಒಪ್ಪುವ. ಆದರೆ ಸಂಜೆ ನಾಲ್ಕುವರೆ ಗಂಟೆಯವರಗೆ ಅಂದು ಆ ಶಾಲೆಯಲ್ಲಿ ತರಗತಿಗಳು ನಡೆಯುತ್ತಿದ್ದವು. ಮೂರುವರೆಗೆ ಡಾಕ್ಟರ್ ಬೇರೇ ಯಾವುದೋ ಗಾಯಾಳುವನ್ನು ಪರೀಕ್ಷಿಸಿದ್ದಾರೆ. ಅದು ಅಲ್ಲದೇ ಇವರು ಹೇಳುವ ಎಂಟನೇ ತಾರೀಕು ಸಂಜೆ ನಾಲ್ಕು ಗಂಟೆ ಹದಿನೈದು ನಿಮಿಷದವರೆಗೆ ಸದ್ರಿ ಆರೋಪಿಯು ಇದೇ ನ್ಯಾಯಾಲಯದಲ್ಲಿ ಬೇರೊಂದು ಕೇಸಿನ ಸಾಕ್ಷಿಯಾಗಿ ಕಟಕಟೆಯಲ್ಲಿ ನಿಂತಿದ್ದರು. ಹಾಗಿರುವಾಗ ಮೂರುವರೆಗೆ ಕೋರ್ಟಿನಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಇರುವ ಸ್ಥಳದಲ್ಲಿ, ನನ್ನ ಕಕ್ಷಿದಾರನಿಂದ ಆ ಅಪಘಾತ ಆಗಿರುವ ಸಾಧ್ಯತೆ ಇಲ್ಲವೇ ಇಲ್ಲ. ಆದ್ದರಿಂದ ನನ್ನ ಕಕ್ಷಿದಾರ ನಿರ್ದೋಷಿ ಎಂದು ತಮ್ಮ ವಾದವನ್ನು ಮುಗಿಸಿದರು. ವೈದ್ಯರು ಬರೆಯುವಾಗ ಸಂಖ್ಯೆಯಲ್ಲಿ ಎರಡು ಸಣ್ಣ ವ್ಯತ್ಯಾಸವಾಗಿ, ಎಂಟರ ಬದಲು ಏಳು ಆಗಿ, ನಾಲ್ಕರ ಬದಲು ಮೂರು ಆಗಿದೆ ಎಂಬ ಸರಕಾರಿ ವಕೀಲರ ವಾದವನ್ನು ನ್ಯಾಯಾಧೀಶರು ಒಪ್ಪಲು ತಯಾರಿರಲಿಲ್ಲ.

ನಿಜವಾಗಿ ಅಲ್ಲಿ ನಡೆದಿದ್ದದ್ದು ಕೈ ಗಡಿಯಾರದ ಒಂದು ಚಿಕ್ಕ ಚಮತ್ಕಾರ.

ಆಗೆಲ್ಲಾ ಆಟೋಮ್ಯಾಟಿಕ್ ಗಡಿಯಾರ ಹೆಚ್ಚಾಗಿ ಪ್ರಚಲಿತವಾಗಿರಲಿಲ್ಲ. ದಿನವೂ ಕೀಲಿ ಕೊಡುವಂತಹ ಕೈ ಗಡಿಯಾರಗಳು ಇದ್ದದ್ದೇ ಜಾಸ್ತಿ. ಕೆಲವು ವಾಚ್ ಗಳಲ್ಲಿ ಒಂದು ಕಡೆ ದಿನಾಂಕವನ್ನು ತೋರಿಸುತ್ತಿತ್ತು. ಭಾನುವಾರ ಕೀಲಿ ಕೊಡಲು ಮರೆತಿದ್ದ ಡಾಕ್ಟರ್, ಕೈ ಗಡಿಯಾರ ನಿಂತು ಹೋದದನ್ನು ಗಮನಿಸಿರಲಿಲ್ಲ. ಪುಸ್ತಕದಲ್ಲಿ ಬರೆಯುವಾಗ ಅಲ್ಲಿದ್ದ ದಿನಾಂಕ, ಸಮಯವನ್ನು ಹಾಗೆಯೇ ದಾಖಲಿಸಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಆರೋಪಿ ಪರ ವಕೀಲರು, ಅದನ್ನೇ ಗಟ್ಟಿಯಾಗಿ ಹಿಡಿದುಕೊಂಡು, ಅನುಮಾನದ ಲಾಭ (ಬೆನಿಫಿಟ್ ಆಫ್ ಡೌಟ್) ತನ್ನ ಕಕ್ಷಿದಾರನ ಪರ ಬರುವಂತೆ ಮಾಡಿ ವಿಜಯ ಸಾಧಿಸಿದ್ದಾರೆ. ಎರಡೇ ಸಂಖ್ಯೆಗಳ ಅದಲು ಬದಲು ಒಬ್ಬ ಆರೋಪಿಯನ್ನು ಬಿಡುಗಡೆ ಮಾಡಿದೆ.

ಪುಣ್ಯವಶಾತ್, ಮಗುವಿಗೆ ಹೆಚ್ಚು ಗಾಯಗಳು ಆಗಿರಲಿಲ್ಲ, ಹಾಲು ಹಲ್ಲು ಮುರಿದಿದ್ದು, ಮುಂದೆ ಶಾಶ್ವತ ಹಲ್ಲು ಬಂದಿರುವುದರಿಂದ ಯಾವುದೇ ತೊಂದರೆ ಇರಲಿಲ್ಲ.

*****

ಕೆಲವು ವರ್ಷಗಳ ನಂತರ ಒಂದು ದಿನ, ಮಧ್ಯಾಹ್ನ ಊಟಕ್ಕೆಂದು ಆಸ್ಪತ್ರೆಯ ಹೊರ ರೋಗಿ ವಿಭಾಗದಿಂದ ಹೊರಟ ನಾನು, ಗಂಡಸರ ಮೆಡಿಕಲ್ ವಾರ್ಡ್ ಹಾದು ಹೋಗುವಾಗ, ಅಲ್ಲೇ ಹೊರಗೆ ಬಾಗಿಲ ಬಳಿ ನಿಂತಿದ್ದ ದಾದಿಯನ್ನು,
“ಏನಮ್ಮಾ ಏನಾದರೂ ವಾರ್ಡಿನಲ್ಲಿ ತೊಂದರೆ ಇದೆಯೇ” ಎಂದು ಮಾಮೂಲಿನಂತೆ ವಿಚಾರಿಸಿದೆ. ಆಗ ಆಕೆ,
“ಅಂತಹ ತೊಂದರೆ ಏನು ಇಲ್ಲಾ ಸಾರ್. ಆದರೆ ಹೊಟ್ಟೆ ನೋವಿನಿಂದ ಮೊನ್ನೆ ದಿನ ದಾಖಲಾದ ರೋಗಿಯೊಬ್ಬರು, ಬೆಳಗ್ಗೆ ನೀವು ರೌಂಡ್ಸ್ ಮುಗಿಸಿ ಹೋದ ನಂತರ ಬೆಡ್ಡಿನಲ್ಲಿ ಇಲ್ಲಾ” ಎಂದರು.

“ಇಲ್ಲೇ ಎಲ್ಲೋ ಪೇಟೆಗೆ ಹೋಗಿರಬಹುದು” ಎಂದೆ.

“ಇರಬಹುದು ಸರ್, ಆದರೆ ಮಧ್ಯಾಹ್ನದ ಊಟ ಕೊಡುವ ಸಮಯ ದಾಟಿದೆ. ಇನ್ನೂ ಬಂದಿಲ್ಲ” ಎಂದರು. ಸುಮ್ಮನೇ ಕೂತು ಬೇಜಾರಾದಾಗ ಕೆಲವರು ಹೀಗೆ ಪೇಟೆಗೆ ಒಂದು ಸುತ್ತು ಹೊಡೆದು ಬರುವುದು ಒಮ್ಮೊಮ್ಮೆ ಇರುತ್ತಿತ್ತು. ಇನ್ನೂ ಕೆಲವೊಮ್ಮೆ ರೋಗ ಲಕ್ಷಣಗಳು ಕಡಿಮೆಯಾದಾಗ, ಹೇಳದೇ ಕೇಳದೆ ಮನೆಗೆ ಪರಾರಿ ಆಗುವವರೂ ಅಪರೂಪಕ್ಕೊಮ್ಮೆ ಇಲ್ಲದಿಲ್ಲ. ಹಾಗಾಗಿ, ಅದರ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳದ ನಾನು,
“ಕೇಸ್ ಶೀಟಿನಲ್ಲಿ ಅವರು ಎಷ್ಟು ಹೊತ್ತಿನಿಂದ ಹಾಸಿಗೆಯಲ್ಲಿ ಇಲ್ಲಾ ಅನ್ನೋದನ್ನ ಸಮಯ ಸಮೇತ ನಮೂದಿಸಿ, ಎರಡನೇ ಪಾಳಿಗೆ ಬರುವ ಬರುವ ಸಿಸ್ಟರ್ ಗೆ, ರೋಗಿ ಪುನಃ ಬಂದಾಗಿನ ಸಮಯವನ್ನೂ ಬರೆಯಲು ಹೇಳಿ ಹೋಗಿ” ಎಂದು ಹೇಳಿ ಮನೆಗೆ ಹೋದೆ.

ಮರುದಿನ ವಾರ್ಡಿಗೆ ಹೋದಾಗ ಅಲ್ಲಿದ್ದ ಅದೇ ರೋಗಿಯನ್ನು ನೋಡಿ, ನಗುತ್ತಾ ಕೇಳಿದೆ.

“ಏನ್ರಿ, ನಿನ್ನೆ ಎಲ್ಲಿ ಹೋಗಿತ್ತು ನಿಮ್ಮ ಸವಾರಿ?”

“ಸಾರ್, ನನಗೆ ಹೊಟ್ಟೆ ನೋವು. ನಿಮ್ಮ ಆಸ್ಪತ್ರೆಯ ಅರೆ ಬೆಂದ ಊಟ ನನಗೆ ಹಿಡಿಸಲಿಲ್ಲ. ಅದಕ್ಕೆ ಹೊರಗೆ ಹೋಟೆಲ್ ಗೆ ಹೋಗಿ ತಿಂದು ಬಂದೆ” ಅಂದ.

“ಇದು ಸರಿಯಲ್ಲ. ಹೊರಗೆ ಹೋಗುವುದಾದರೆ ಇಲ್ಲಿ ಹೇಳಿ ಹೋಗಬೇಕು” ಎಂದು ಹೇಳಿ, ಮುಂದಿನ ರೋಗಿಯ ಬಳಿ ಹೋದೆ. ಇನ್ನೂ ಎರಡು ದಿನ ಇದ್ದ ಅವರು, ಕಾಯಿಲೆ ಗುಣವಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಹೋದರು.

ಇದಾದ ಕೆಲವು ದಿನಗಳ ಬಳಿಕ ಒಮ್ಮೆ ತಾಲೂಕಿನ ಪೊಲೀಸ್ ಠಾಣೆಯ ಅಧಿಕಾರಿ ನಮ್ಮಲ್ಲಿಗೆ ಬಂದರು.

“ಸಾರ್, ಇತ್ತೀಚಿಗೆ  ಪೇಟೆಯ ಪಕ್ಕದ ಊರಿನಲ್ಲಿ ಒಂದು ಕೊಲೆಯಾಗಿದೆ. ನೋಡಿದವರು ಸದ್ಯಕ್ಕೆ ಯಾರು ಇಲ್ಲಾ. ಆದರೆ ನಮ್ಮ ಗುಮಾನಿ, ಅವರ ತಮ್ಮನ ಮೇಲಿದೆ. ಅವರು ಇದನ್ನು ಒಪ್ಪಿಕೊಳ್ಳುತ್ತಿಲ್ಲ. ಅವರ ಪ್ರಕಾರ, ಆ ಕೊಲೆಯಾದ ಸಮಯದಲ್ಲಿ ಅವರು ನಿಮ್ಮ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರು ಎನ್ನುತ್ತಾರೆ. ದಯವಿಟ್ಟು ವಿಚಾರಿಸಿ ನೋಡಿ” ಎಂದರು. ಕೆಲವೇ ದಿನದ ಹಿಂದಿನ ವಿಷಯವಾದ್ದರಿಂದ ಕೇಸ್ ಶೀಟ್ ಅಲ್ಲೇ ವಾರ್ಡಿನಲ್ಲಿ ಇತ್ತು. ತೆಗೆಸಿ ನೋಡಿದರೆ ಅದು ನಮ್ಮ ವಾರ್ಡಿನಲ್ಲಿ ಹೋಟೆಲ್ ಊಟದ ನೆಪ ಹೇಳಿ ಹೊರಹೋಗಿದ್ದ  ವ್ಯಕ್ತಿಯೇ ಆಗಿದ್ವದರು. ಅವರು ದಾಖಲಾಗಿ ಬಿಡುಗಡೆಯಾದ ವಿವರಗಳನ್ನು ಪೊಲೀಸರಿಗೆ ಕೊಡುವಾಗ, ಅವರು ಕೇಸ್ ಶೀಟ್ ನಲ್ಲಿ ಸಿಸ್ಟರ್ ಬರೆದಿಟ್ಟಿದ್ದ, ಆ ವ್ಯಕ್ತಿಯು ಅಲ್ಲಿ ಇಲ್ಲದೇ ಇದ್ದ ಸಮಯದ ವಿವರವನ್ನೂ ಬರೆದುಕೊಂಡು ಹೋದರು. ಅದು ಆ ಕೊಲೆಯಾದ ಸಮಯಕ್ಕೆ ತಾಳೆಯಾಗಿತ್ತು.

ಕೇಸ್ ಮುಂದುವರೆಯಿತು. ಪೋಲೀಸರ ಪ್ರಕಾರ ಆತ ಜಿಲ್ಲಾಸ್ಪತ್ರೆಯಿಂದ ಇಪ್ಪತ್ತು ಕಿಲೋಮೀಟರ್ ದೂರದ ಆ ಊರಿಗೆ ಹೋಗಿ ತನ್ನ ಅಣ್ಣನನ್ನು ಕೊಲೆ ಮಾಡಿ, ಯಾರಿಗೂ ತಿಳಿಯದಂತೆ, ಆಸ್ಪತ್ರೆಗೆ ಬಂದು ಹಾಸಿಗೆಯಲ್ಲಿ ಮಲಗಿಕೊಂಡಿದ್ದಾನೆ. ಕೇಸ್ ಶೀಟಿನಲ್ಲಿ ಸಿಸ್ಟರ್ ಬರೆದ ಎರಡು ವಾಕ್ಯ, ಸಮಯದ ದಾಖಲು ಆ ವ್ಯಕ್ತಿಯ ಸುಳ್ಳನ್ನು ಬಹಿರಂಗ ಪಡಿಸಿತ್ತು.

ನ್ಯಾಯದ ವಿಷಯದಲ್ಲಿ, ಹೀಗೇ ಒಮ್ಮೊಮ್ಮೆ, ಒಬ್ಬ ವೈದ್ಯನಿಂದ ಅರಿವಿಲ್ಲದೆಯೇ ನಡೆದು ಹೋಗುವ ಒಂದು ಚಿಕ್ಕ ತಪ್ಪು, ಹೇಗೆ ಬಹಳ ದೊಡ್ದ ಅನಾಹುತಕ್ಕೆ ಎಡೆಮಾಡಿ ಬಿಡಬಹುದೋ, ಹಾಗೇ ಬರೆಯುವ ಒಂದು ಸಣ್ಣ ವಿವರಣೆ ಕೂಡಾ ನ್ಯಾಯ ದೊರಕಿಸಿ ಕೊಡಲು ಸಹಾಯ ಮಾಡಬಹುದು ಎಂಬುದಕ್ಕೆ ಈ ಘಟನೆಗಳೇ ಸಾಕ್ಷಿ…!