“ಮೊದಮೊದಲು ಅದು ತಂದುಕೊಡು ಇದು ಕೊಡು ಎಂದು ಅವನನ್ನು ಅವಲಂಬಿಸುತ್ತಾ ಇದ್ದವಳು ಕಡೆಕಡೆಗೆ ಅವನೇ ಅವಳನ್ನು ಆವರಿಸಿಕೊಳ್ಳುವಷ್ಟು ಹತ್ತಿರವಾದರು. ಅವನಿಗೂ ಅವಳ ನಿಟ್ಟುಸಿರು ಹತ್ತಿರವಾಗಿತ್ತು. ಇಬ್ಬರೂ ಬಾವಿ ಕಟ್ಟೆಯ ಮೇಲೆ ಕೂತು, ಅವ ತಾನು ನೋಡಿದ ಸಿನಿಮಾ ಕತೆ ಹೇಳಿದರೆ, ಇವಳು ತಾನು ಓದಿದ ಕಾದಂಬರಿಯ ಕತೆ ಹೇಳುತ್ತಿದ್ದಳು. ಹೀಗೆ ಕತೆ ಹೇಳುತ್ತ, ಕೇಳುತ್ತ ಇಬ್ಬರೂ ಬೆಸೆದುಕೊಂಡರು.”
ಪತ್ರಕರ್ತೆ ಭಾರತಿ ಹೆಗಡೆ ಬರೆಯುವ ಸಿದ್ದಾಪುರ ಸೀಮೆಯ ಕಥೆಗಳ ನಾಲ್ಕನೆ ಕಂತು.

 

ಅವಳಿಗೆ ಈಚೀಚೆಗೆ ಶಬ್ದವೆಂದರೆ ಭಯವಾಗುತ್ತಿತ್ತು. ಒಂದು ಸಣ್ಣ ಶಬ್ದಕ್ಕೂ ಬೆಚ್ಚಿ ಬೀಳುತ್ತಿದ್ದಳು. ಅಡುಗೆ ಮನೆಯಲ್ಲಿ ಅಕಸ್ಮಾತ್ತಾಗಿ ಲೋಟವೋ ಪಾತ್ರೆಯೋ ಇನ್ನೇನೋ ಬಿದ್ದುಬಿಟ್ಟರೆ ಆ ಶಬ್ದಕ್ಕೆ ಬೆಚ್ಚಿ ಕಿರುಚಿಕೊಂಡುಬಿಡುತ್ತಿದ್ದಳು. ಕೆಲಸ ಇದ್ದಷ್ಟು ಹೊತ್ತು ಮಾಡಿಕೊಂಡು ನಂತರ ಸುಮ್ಮನೆ ಒಂದೆಡೆ ಅನ್ಯಮನಸ್ಕತೆಯಿಂದ ಕುಳಿತುಬಿಡುತ್ತಿದ್ದಳು.

ಒಮ್ಮೆಯಂತೂ ಅವಳು ದೋಸೆಗೆ ಅಕ್ಕಿ ರುಬ್ಬುತ್ತ ಕುಳಿತಿದ್ದಾಗ, ಅವಳ ತಂಗಿ ಪಾರ್ವತಿ ನಿಧಾನಕ್ಕೆ ಹಿಂದುಗಡೆ ಬಂದು ನಿಂತಳು. ಅವಳನ್ನು ನೋಡಿದವಳೇ ಬೆಚ್ಚಿ ಬಿದ್ದು ಎದ್ದು ನಿಂತಳು. ಯಾಕಿಷ್ಟು ಹೆದರಿಕೊಳ್ಳುತ್ತಿದ್ದೀಯ ಎಂದು ಕೇಳಿದ್ದಕ್ಕೆ, “ಎಂಗ್ಯಾರೋ ಹೊಡೆಯಲು ಬತ್ತಾ ಇದ್ದ…” ಎಂದಳು. ‘ಅಯ್ಯೋ… ಆ ಎಂತಕ್ಕೆ ನಿಂಗ ಹೊಡೀಲಿ ಅಕ್ಕಯ್ಯ, ನೀ ಎಂತಕ್ಕೆ ಹೀಂಗಿದ್ದೆ’ ಪಾರ್ವತಿ ಕಕ್ಕುಲಾತಿಯಿಂದ ಕೇಳಿದರೆ “ಎಂತೂ ಇಲ್ಲೆ..” ಎಂದು ಮುಖಮರೆಸಿಕೊಂಡು ಹೋದಳು. ಆಗ ಅವಳ ಮುಖದಲ್ಲಿದ್ದ ಭಯವನ್ನು ಎಂಥವರಾದರೂ ಗುರುತಿಸಬಹುದಿತ್ತು. ಮತ್ತೊಂದು ದಿನ ರಾತ್ರಿ ಎಲ್ಲರೂ ಮಲಗಿದ ಹೊತ್ತಲ್ಲಿ ಇದ್ದಕ್ಕಿದ್ದ ಹಾಗೆ ಜೋರಾಗಿ ಕಿರುಚುತ್ತ ಎದ್ದುಕುಳಿತಳು. “ಬ್ಯಾಡ್ದೋ… ಎನ್ನೆಂತದೂ ಮಾಡಡ್ಡೋ…” ಎಂದು ಕೂಗುತ್ತಿದ್ದಳು. ಮಾರನೆ ದಿನ ಕೇಳಿದರೆ, ನಂಗೇನೂ ನೆನಪೇ ಇಲ್ಲ ಎನ್ನುತ್ತಿದ್ದಳು.

ಹೀಗೆಲ್ಲ ಭಯ ಬೀಳುವ ಮೀನಾಕ್ಷಿ ಮೊದಲು ಹೀಗಿರಲಿಲ್ಲ. ಅವಳ ಊರು ಬಿಳಗಿ ಸಮೀಪದ ಒಂದು ಹಳ್ಳಿ. ಅವಳ ಅಪ್ಪ ಬುಡ್ಡಿ ಭಟ್ಟರೆಂದರೆ ಆ ಸೀಮೆಯಲ್ಲೆಲ್ಲ ಹೆಸರು ಮಾತಿನವರಾಗಿದ್ದರು. ತೋಟ, ಗದ್ದೆ ಎಲ್ಲ ಇತ್ತು. ಅದಕ್ಕಿಂತ ಹೆಚ್ಚಾಗಿ ಜಾತಕ, ಜ್ಯೋತಿಷ್ಯ ನೋಡುತ್ತಿದ್ದರು. ಅದಕ್ಕೂ ಹೆಚ್ಚಿನದಾಗಿ ಮಾಟ-ಮಂತ್ರಗಳನ್ನು ಮಾಡುತ್ತಿದ್ದರು. ಯಾರಿಗೆ ಯಾವುದೇ ರೀತಿಯ ದೆವ್ವ, ಭೂತ ಹಿಡಿದರೂ ಭಟ್ರುಬಂದು ಮಂತ್ರ ಹಾಕಿದರೆಂದರೆ ಎಂಥ ದೆವ್ವವಾದರೂ ಓಡಿಬಿಡುತ್ತದೆಂಬಷ್ಟು ಆ ಭಾಗದಲ್ಲಿ ಪ್ರತೀತಿ ಇತ್ತು. ಅಷ್ಟೇ ಅಲ್ಲ, ಯಾರಿಗೇ ಕೃತ್ರಿಮ ಮಾಡಿಸಿದರೂ ಅದನ್ನು ತೆಗೆಯಲು ಸಿದ್ಧಹಸ್ತರಾಗಿದ್ದರು. ಈ ಬುಡ್ಡಿ ಭಟ್ರ ಜೊತೆಗೆ ಇನ್ನೂ ಒಂದಿಬ್ಬರು ಇರುತ್ತಿದ್ದರು. ಮೂವರೂ ರಾತ್ರಿಹೊತ್ತು ಮನೆಯ ಹಿಂದಿನ ಉಪ್ಪುಚೀಲ ಇಡುವ ಜಾಗದಲ್ಲಿ ಕೂತು ಯಾವ್ಯಾವುದೋ ಕಡ್ಡಿಗಳನ್ನು ಸ್ವಸ್ತಿಕ ಆಕಾರದಲ್ಲಿಟ್ಟು, ಅದರ ಮೇಲೆಲ್ಲ ಅನ್ನದ ಉಂಡೆ, ಅದರ ಮೇಲೆ ಕರಿ ಎಳ್ಳು ಹೀಗೆ… ಏನೇನೋ ಇಟ್ಟು ರಾತ್ರಿ ತುಂಬ ಹೊತ್ತು ಪೂಜೆ ಮಾಡುತ್ತಿದ್ದದ್ದು ಸ್ವತಃ ಮೀನಾಕ್ಷಿಯೇ ಸಾಕಷ್ಟು ಬಾರಿ ಕಂಡಿದ್ದಳು.

ಬುಡ್ಡಿ ಭಟ್ಟರ ಐವರು ಹೆಣ್ಣು ಮಕ್ಕಳಲ್ಲಿ ಮೀನಾಕ್ಷಿಯೇ ದೊಡ್ಡವಳು. ನೋಡಲು ಎಣ್ಣೆಗಪ್ಪಾದರೂ ಎತ್ತರದ ನಿಲುವು, ಅಗಲವಾದ ಮೈಕಟ್ಟು, ಉದ್ದನೆಯ ಜಡೆ, ಇವೆಲ್ಲ ಒಂಥರದ ಆಕರ್ಷಣೆಯನ್ನು ತಂದುಕೊಟ್ಟಿದ್ದವು ಅವಳಿಗೆ. ಪ್ರತಿ ವಾರ ತಲೆ ಸ್ನಾನ ಮಾಡುವಾಗಲಂತೂ ಅವಳ ತಲೆಯನ್ನು ತಿಕ್ಕುವುದೇ ದೊಡ್ಡ ತಲೆನೋವಾಗುತ್ತಿತ್ತು. ಕೆಲಸಕ್ಕೆ ಬರುವ ಮಂಜಿ ಮತ್ತಿಸೊಪ್ಪು ತಂದು ಗಂಪು ಮಾಡಿ, ಶೀಗೆಪುಡಿ ಹಾಕಿ “ನಿನ್ನ ತಲೆ ಸ್ನಾನ ಮಾಡಿಸುವುದು ತೋಟದ ಕೆಲ್ಸ ಮಾಡೋದಕ್ಕಿಂತಲೂ ಕಷ್ಟ” ಎಂದು ಬೈದುಕೊಳ್ಳುತ್ತಲೇ ಅವಳ ತಲೆ ತಿಕ್ಕಿ ತಿಕ್ಕಿ ತೊಳೆಯುತ್ತಿದ್ದಳು. ಸ್ನಾನ ಮಾಡಿದ ಮೇಲೆ ಹರವಾಗಿ ಬೆನ್ನುತುಂಬ ಕೂದಲನ್ನು ಹರಡಿಕೊಂಡು ತಾಸೊಪ್ಪೊತ್ತು ಬಿಸಿಲಲ್ಲಿ ಕುಳಿತುಕೊಂಡೇ ಅವಳು ಒಳಬರುತ್ತಿದ್ದಳು. ಹೀಗೆ ಉದ್ದ ಜಡೆಯ ಆಕರ್ಷಕ ಮೈಕಟ್ಟಿನ ಮೀನಾಕ್ಷಿ ಎಸ್ಸೆಸ್ಸೆಲ್ಸಿಯಲ್ಲಿ ಎರಡುಬಾರಿ ಫೇಲ್ ಆಗಿ, ಕಡೆಗೆ ಓದಿನ ಆಸೆ ಬಿಟ್ಟು ಮನೆಗೆಲಸದ ಪ್ರಪಂಚದಲ್ಲಿ ಕಳೆದುಹೋದಳು. ಮಣ್ಣಿನ ನೆಲ ಮತ್ತು ಮಣ್ಣಿನದ್ದೇ ಗೋಡೆಯಾದ್ದರಿಂದ ಎಷ್ಟು ಚೊಕ್ಕ ಮಾಡಿದರೂ ಸಾಲುತ್ತಿರಲಿಲ್ಲ. ಕೈಯಿಂಡ್ಲೆ ಕಾಯಿ ತಂದು ಮಶಿ ಮಾಡಿ, ನೆಲ, ಒಲೆಯನ್ನೆಲ್ಲ ಸಾರಿಸಿ ಚೊಕ್ಕವಾಗಿಡುತ್ತಿದ್ದಳು. ಹಾಡು, ಹಸೆಯಲ್ಲೆಲ್ಲ ಚುರುಕಾಗಿದ್ದಳು. ರಂಗೋಲಿ ಚೆಂದವಾಗಿ ಬಿಡಿಸುತ್ತಿದ್ದಳು. ಹಬ್ಬಹರಿದಿನಗಳಲ್ಲಿ ಅಂಗಳದ ತುಂಬೆಲ್ಲ ದೊಡ್ಡ ದೊಡ್ಡ ರಂಗೋಲಿ ಬಿಡಿಸಿ ತಾನು ಬಿಡಿಸಿದ ರಂಗೋಲಿಗೆ ತಾನೇ ಮರುಳಾದವಳಂತೆ ನೋಡುತ್ತ ಕುಳಿತಿರುತ್ತಿದ್ದಳು. ಬಾಕಿಯವರೆಲ್ಲ ಬಿಡಿಸುವ ಹಾಗೆ ಚುಕ್ಕಿ, ಬಳ್ಳಿ ರಂಗೋಲಿಗಳಿಗಿಂತ ಹಾವಿನ ಹೆಡೆಯನ್ನು ಮೆಟ್ಟಿದ ಕೃಷ್ಣ, ಧನಸ್ಸನ್ನು ಮುರಿದ ರಾಮ, ಕಮಲದ ಹೂವಿನ ಮೇಲೆ ಕುಳಿತ ಲಕ್ಷ್ಮಿ ಮುಂತಾದ ರಂಗೋಲಿಗಳನ್ನು ಹಾಕುತ್ತಿದ್ದಳು. ಬುಡ್ಡಿಭಟ್ರ ಮಗಳು ಮೀನಾಕ್ಷಿಹಾಕಿದ ರಂಗೋಲಿ ನಿಂತು ನೋಡುವ ಹಾಗೆನಿಸುತ್ತದೆ ಎಂದು ಊರವರೆಲ್ಲ ಹೇಳುವಷ್ಟು ಅವಳು ರಂಗೋಲಿ ಬಿಡಿಸುವುದರಲ್ಲಿ ಪ್ರಸಿದ್ಧಳಾಗಿದ್ದಳು. ಅಷ್ಟೇ ಅಲ್ಲ, ತಾಲೂಕಾ ಮಟ್ಟದಲ್ಲಿ ನಡೆದ ಯುವಜನೋತ್ಸವದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನೂ ಪಡೆದಿದ್ದಳು.

ಯಾರೇನು ಹೇಳಿದರೇನು. ಎಷ್ಟು ಬಹುಮಾನ ಪಡೆದರೇನು, ಅವಳ ಮದುವೆ ಮಾತ್ರ ಆಗದೇ ಹಾಗೆಯೇ ಕುಳಿತಿದ್ದಳು. ಬುಡ್ಡಿ ಭಟ್ರು ಅವಳ ಜಾತಕ ಹೊರಹಾಕಿ ಆಗಲೇ 5-6 ವರ್ಷಗಳೇ ಕಳೆದು ಹೋಗಿದ್ದವು. ಜಾತಕ ಹೊಂದಿದರೂ, ತಾರಾನುಕೂಲ ಸರಿಯಾಗಿದ್ದರೂ, ನೋಡಲು ಪರವಾಗಿಲ್ಲ ಎಂದೆನಿಸಿದರೂ, ಗಂಡಿನ ಕಡೆಯವರು ಬೇಡುವಂಥ ಎಲ್ಲ ಗುಣಗಳೂ ಅವಳಲ್ಲಿದ್ದರೂ, ವರದಕ್ಷಿಣೆಕೊಡಲು ತಯಾರಿದ್ದರೂ ಅವಳ ಮದುವೆ ಮಾತ್ರ ಆಗಲೇ ಇಲ್ಲ. ಬಂದ ಗಂಡುಗಳೆಲ್ಲ ಉಪ್ಪಿಟ್ಟು, ಕೇಸರಿ ಬಾತ್ ತಿಂದು ಡರ್ ಎಂದು ತೇಗಿ, ಕಡೆಗೆ ಅವಳನ್ನು ಒಪ್ಪುತ್ತಿರಲಿಲ್ಲ. ಒಪ್ಪದಿರಲು ಕಾರಣವೇ ತಿಳಿಯುತ್ತಿರಲಿಲ್ಲ. ಪ್ರತಿ ಸಲ ಉಪ್ಪಿಟ್ಟು ಕೇಸರಿ ಬಾತ್ ಮಾಡುವಾಗಲೂ ಅವಳ ಅಮ್ಮ ಜಾನಕಮ್ಮ, ಕೇಸರಿಬಾತ್ ಗೆ ತುಪ್ಪ ಸ್ವಲ್ಪ ಜಾಸ್ತಿ ಹಾಕು, ಸಕ್ಕರೆಯನ್ನೂ ಜಾಸ್ತಿಯೇ ಹಾಕು ಎನ್ನುತ್ತಿದ್ದಳು. ಮೀನಾಕ್ಷಿ ವ್ಯಂಗ್ಯವಾಗಿ ನಕ್ಕು, ಇನ್ನೂ ಎಷ್ಟು ಸಲ ಹೀಗೆಯೇ ಉಪ್ಪಿಟ್ಟು ಕೇಸರಿ ಬಾತ್ ಮಾಡುತ್ತಿರಲಿ ಎಂದು ನಿಟ್ಟುಸಿರು ಬಿಡುತ್ತಲೇ ಮತ್ತೆ ಮತ್ತೆ ಅದದೇ ತಿಂಡಿ ತಟ್ಟೆಯನ್ನು ಬಂದ ಗಂಡುಗಳೆದುರು ಇಟ್ಟು ಗೊಂಬೆಯಂತೆ ನಿಲ್ಲುತ್ತಿದ್ದಳು. ಪ್ರತಿ ಗಂಡುಗಳೆದುರಿಗೂ ಬುಡ್ಡಿ ಭಟ್ರು ಮತ್ತು ಅವಳ ಸೋದರ ಮಾವಂದಿರು, ನೆಂಟರಿಷ್ಟರೆಲ್ಲ ಅವಳು ಹಾಕುವ ರಂಗೋಲಿಯನ್ನು ಹೊಗಳಿ ಹೊಗಳಿ ಇಡುತ್ತಿದ್ದರು. ಯಾವ ರಂಗೋಲಿಯೂ ಅಲ್ಲಿ ಕೆಲಸಕ್ಕೆ ಬರಲಿಲ್ಲ.

ಆಗೆಲ್ಲ ಇಂಥ ಮೀನಾಕ್ಷಿಯರು ಮನೆಮನೆಯಲ್ಲಿ ಒಬ್ಬೊಬ್ಬರು ಇರುತ್ತಿದ್ದರು. ವಯಸ್ಸು 30 ಮೀರಿದರೂ ಮದುವೆಯಾಗದೆ, “ಎಮ್ಮನೆ ಕೂಸಿಗೊಂದು ಎಲ್ಲೂ ವರ ಇಲ್ಲೆ ಕಾಣಸ್ತು, ಇನ್ನು ಇವಳನ್ನು ಮಹಾರಾಷ್ಟ್ರದ ಕಡೆ ಕೊಡದೇ ಆಗ್ತೇನ…” ಎಂದು ಹೇಳಿ ನಿಟ್ಟುಸಿರು ಬಿಡುತ್ತಿದ್ದರು. ಆಗೆಲ್ಲ ಹಾಗೆ, ಖರ್ಚಾಗದೆ ಉಳಿದ ಹೆಣ್ಣುಮಕ್ಕಳನ್ನು ಮದುವೆ ಮಾಡಿ ಮಹಾರಾಷ್ಟ್ರಕ್ಕೆ ಅಟ್ಟಿಬಿಡುತ್ತಿದ್ದರು. ಎಮ್ಮನೆ ಪಾರ್ವತಿಯನ್ನು, ಶಾರದೆಯನ್ನು, ವಿಮಲಳನ್ನು .. ಹೀಗೆ ಇನ್ನೂ ಎಷ್ಟೋ ಹೆಣ್ಣುಮಕ್ಕಳನ್ನು ಅಂತೂ ಮದುವೆ ಮಾಡಿ ಮುಗ್ಸಿಬಿಟ್ವಿ. ಅವ ಚೊಲೋ ಇದ್ದ, ಒಂದು ಪೈಸೆ ಕೂಡ ಎಂಗಕ್ಕಿಗೆ ಖರ್ಚಾಯ್ದಿಲ್ಲೆ. ಎಲ್ಲ ಖರ್ಚನ್ನೂ ಗಂಡಿನ ಕಡೆಯವರೇ ಹಾಕ್ಯಂಡು ಮದುವೆ ಮಾಡಕ್ಯಂಡು ಹೋಯ್ದ’ ಎಂದು ಹೇಳಿಕೊಂಡು ಬೀಗುತ್ತಿದ್ದ ಕನ್ಯಾಪಿತೃಗಳ್ಯಾರೂ ನಂತರ ಅವರೆಲ್ಲ ಏನಾದರು, ಹೇಗಿದ್ದಾರೆಂದು ಕೇಳುವ ಗೋಜಿಗೇ ಹೋದವರಲ್ಲ. ಒಟ್ಟಿನಲ್ಲಿ ಅವರ ಹೆಣ್ಣುಮಕ್ಕಳನ್ನು ಮದುವೆ ಮಾಡಿ ಕೈ ತೊಳೆದುಕೊಳ್ಳುವುದಷ್ಟೇ ಅವರ ಕೆಲಸವಾಗಿತ್ತು. ಈ ಪೈಕಿ ಕೆಲವರು ಚೆನ್ನಾಗಿ ಸಂಸಾರ ಮಾಡಿಕೊಂಡು ಚೆಂದರೀತಿಯಲ್ಲಿ ಬದುಕಿದವರೂ ಇದ್ದರು.

ಆ ಸಮಯದಲ್ಲಿ ಗಂಡಿನ ಕಡೆಯವರು ಜೀಪಿನಲ್ಲಿ ಒಂದೊಂದು ಊರಿಗೆ ಹೋಗಿ ನಾಲ್ಕಾರು ಹೆಣ್ಣುಮಕ್ಕಳನ್ನು ನೋಡಿ, ಎಲ್ಲರ ಮನೆಯಲ್ಲೂ ತಿಂಡಿ ತಿಂದು, ಕಡೆಗೆ ಈ ಪೈಕಿ ಒಬ್ಬಳನ್ನು ಆಯ್ಕೆ ಮಾಡುತ್ತಿದ್ದರು. ಎಮ್ಮೆ ವ್ಯಾಪಾರದಲ್ಲಿ ಎಮ್ಮೆಯನ್ನು ಆಯ್ಕೆ ಮಾಡುವ ಹಾಗೆ. ಅದೇ ಈಗ ಆ ಭಾಗದಲ್ಲಿ ಹೆಣ್ಣುಮಕ್ಕಳ ಕೊರತೆಯಾಗಿ, ಮನೆಯಲ್ಲೇ ಇರುವ ಗಂಡುಮಕ್ಕಳಿಗೆ ಮದುವೆಯೇ ಆಗುತ್ತಿಲ್ಲ. ಅದಕ್ಕೆಇದೊಂದು ಸಾಮಾಜಿಕ ಸಮಸ್ಯೆ ಎಂಬಂತಾಗಿ, ಪತ್ರಿಕೆಗಳಲ್ಲಿ ಲೇಖನ, ಹೋದಹೋದ ಕಡೆಗಳಲ್ಲೆಲ್ಲ ಜಾಗೃತಿ ಶಿಬಿರ, ಅಷ್ಟೇ ಏಕೆ, ಮಠಾಧಿಪತಿಗಳೂ ಬಂದು ಹೆಣ್ಣುಮಕ್ಕಳಿಗೆ ಬುದ್ಧಿಹೇಳತೊಡಗಿದ್ದಾರೆ. ಆದರೆ ಆಗ ಇದೇ ಪರಿಸ್ಥಿತಿ ಹೆಣ್ಣುಮಕ್ಕಳಿಗಿರುವಾಗಿ ಯಾರೊಬ್ಬರೂ ಕೇಳುವವರೇ ಇರಲಿಲ್ಲ. ಅಕಸ್ಮಾತ್ತಾಗಿ ಒಳ್ಳೆಕಡೆ ಸಂಬಂಧ ಕುದುರಿ ಬಂದುಬಿಟ್ಟರೆ ಅದು ಆ ಹುಡುಗಿಯ ಅದೃಷ್ಟವಾಗಿರುತ್ತಿತ್ತು.

ಹೀಗೇ.. ಮೀನಾಕ್ಷಿಗೂ ತುಂಬ ದಿನ ಮದುವೆಯಾಗದೇ ನಿಟ್ಟುಸಿರು ಬಿಡುತ್ತಿದ್ದರು ಅವಳ ಅಪ್ಪ-ಅಮ್ಮ. ಅವಳ ವಯಸ್ಸು 20 ಆಗಿ, 30 ಆಗಿ ಮೂವತ್ತೈದೂ ಆಗಿ, ಮುಖದ ಮೇಲೆಲ್ಲ ಗೆರೆ ಬೀಳುವಷ್ಟಾಗಿಹೋಗಿತ್ತು. ಅವಳ ಯೌವನವೆಲ್ಲ ರಂಗೋಲಿ ಬಿಡಿಸುವುದರಲ್ಲಿ, ಉಪ್ಪಿಟ್ಟು, ಕೇಸರಿ ಬಾತ್ ಗಳನ್ನು ಮಾಡುವುದರಲ್ಲಿ ಕಳೆದು ಹೋಗುವಷ್ಟರಲ್ಲಿಯೇ… ಬೊಗಸೆ ತುಂಬ ಪ್ರೀತಿ ಹಿಡಿದಿಟ್ಟು ಅವಳಲ್ಲಿ ಜೀವನೋತ್ಸಾಹವನ್ನು ತುಂಬಿದವನು ಶಂಕ್ರ್ಯಾ. ಅವಳ ಮಡಿಲ ತುಂಬ ಸುರಗಿ ಹೂವನ್ನು ತುಂಬಿ ಸುರಗಿ ಪರಿಮಳವನ್ನು ಪಸರಿಸಲು ಕಾರಣನಾದವನೂ ಅವನೇ.

ಶಂಕ್ರ್ಯಾ ಅವಳ ಮನೆಯ ಆಳು. ತೋಟ-ಗದ್ದೆ ಕೆಲಸ ಮಾಡಿಕೊಂಡಿದ್ದವನು. ಅವನ ಅಪ್ಪ ಬುದ್ಯಾನೂ ಅಲ್ಲೇ ಕೆಲಸ ಮಾಡಿಕೊಂಡಿದ್ದ. ಈಗ ಕೆಲವು ವರ್ಷಗಳ ಹಿಂದೆ ಹಾವು ಕಡಿದು ಸತ್ತು ಹೋಗಿದ್ದ. ಅವ ಹೋದ ಮೇಲೆ ಮಗ ಶಂಕ್ರ್ಯಾನೇ ಅವರ ಮನೆಗೆ ಕೆಲಸಕ್ಕೆ ಬರುತ್ತಿದ್ದ. ಅವರ ಮನೆಯಲ್ಲಿ ತೋಟ, ಗದ್ದೆ ಕೆಲಸದಿಂದ ಹಿಡಿದು, ಕೊಟ್ಟಿಗೆ ಕೆಲಸ, ಪ್ರತಿಯೊಂದನ್ನೂ ಇವನೇ ಮಾಡುತ್ತಿದ್ದ. ಕೊನೆಕೊಯ್ಲಿರಲಿ, ಗದ್ದೆ ಕೊಯ್ಲು, ಗದ್ದೆ ನಾಟಿ, ತೋಟಕ್ಕೆ ಕೊಳೆ ಔಷಧಿ ಹೊಡೆಸೋದಿರಲಿ, ಅಲ್ಲಿ ಶಂಕ್ರ್ಯಾ ಇರಲೇ ಬೇಕು. ಅಷ್ಟೇ ಅಲ್ಲ, ಅವರ ಮನೆಯ ದನಕ್ಕೆ, ಎಮ್ಮೆಗೆ ಹುಷಾರಿಲ್ಲದಿದ್ದರೆ, ಮೇವಿಗೆ ಹೋದ ದನ ಬರದಿದ್ದರೆ ಅದನ್ನು ಹುಡುಕಿಕೊಂಡು ಬರಲೂ ಅವನೇ ಬೇಕಿತ್ತು. ಹೀಗೆ ಬುಡ್ಡಿ ಭಟ್ರ ಮನೇಲಿ ಶಂಕ್ರ್ಯಾ ಇಲ್ಲದಿದ್ದರೆ ಒಂದು ಹುಲ್ಲು ಕಡ್ಡಿಯೂ ಆಡುವುದಿಲ್ಲ ಎಂಬಷ್ಟು ಅವ ಅವರ ಮನೆಗೆ ಒಗ್ಗಿಕೊಂಡು ಬಿಟ್ಟಿದ್ದ. ಬುಡ್ಡಿ ಭಟ್ರಿಗೂ ಅಷ್ಟೆ, ಗಂಡುಮಕ್ಕಳಿಲ್ಲದ ಕಾರಣ, ಶಂಕ್ರ್ಯನ ಅವಶ್ಯಕತೆ ತುಂಬ ಇತ್ತು. ಅವರ ಪೂಜೆ ಪುನಸ್ಕಾರ, ಮುಖ್ಯವಾಗಿ ಕೃತ್ರಿಮ ತೆಗೆಸುವುದು, ಮಾಟ-ಮಂತ್ರಗಳಲ್ಲೇ ಸಮಯ ಹೋಗುವುದರಿಂದ ಅವರಿಗೆ ತೋಟ ಗದ್ದೆ ಕೆಲಸಗಳಿಗೆ ಅಷ್ಟೆಲ್ಲ ಗಮನ ಹರಿಸಲಾಗುತ್ತಿರಲಿಲ್ಲ. ಜಾತಿ ಬೇರೆ ಆದರೇನು, ಮಗ ಇದ್ಹಾಗಿದ್ದಾನೆಂದು ಸ್ವತಃ ಭಟ್ರೇ ಅವರಿವರಲ್ಲಿ ಹೇಳಿಕೊಂಡಿದ್ದರು.

ಹೇಗೆ ಬುಡ್ಡಿ ಭಟ್ರು ಶಂಕ್ರ್ಯಾನನ್ನು ಅವಲಂಬಿಸಿದ್ದರೋ ಅದೇ ರೀತಿ ಆ ಮನೆಯ ಹೆಂಗಸರೂ ಅವನನ್ನು ಅವಲಂಬಿಸಿದ್ದರು. ಪೇಟೆಗೆ ಹೋಗಿ ಏನೇ ಸಾಮಾನು ತರುವುದಿದ್ದರೂ ಶಂಕ್ರ್ಯನೇ ಆಗಬೇಕಾಗಿತ್ತು. ಅದೇ ರೀತಿ ಮೀನಾಕ್ಷಿಗೂ ಆಗಿತ್ತು. ಮೊದಮೊದಲು ಅದು ತಂದುಕೊಡು ಇದು ಕೊಡು ಎಂದು ಅವನನ್ನು ಅವಲಂಬಿಸುತ್ತಾ ಇದ್ದವಳು ಕಡೆಕಡೆಗೆ ಅವನೇ ಅವಳನ್ನು ಆವರಿಸಿಕೊಳ್ಳುವಷ್ಟು ಹತ್ತಿರವಾದರು. ಅವನಿಗೂ ಅವಳ ನಿಟ್ಟುಸಿರು ಹತ್ತಿರವಾಗಿತ್ತು. ಇಬ್ಬರೂ ಬಾವಿ ಕಟ್ಟೆಯ ಮೇಲೆ ಕೂತು, ಅವ ತಾನು ನೋಡಿದ ಸಿನಿಮಾ ಕತೆ ಹೇಳಿದರೆ, ಇವಳು ತಾನು ಓದಿದ ಕಾದಂಬರಿಯ ಕತೆ ಹೇಳುತ್ತಿದ್ದಳು. ಹೀಗೆ ಕತೆ ಹೇಳುತ್ತ, ಕೇಳುತ್ತ ಇಬ್ಬರೂ ಬೆಸೆದುಕೊಂಡರು.

ಇಷ್ಟಲ್ಲದೆ ಶಂಕ್ರ್ಯನಿಗೆ ಹಾಡುವ ಹುಚ್ಚಿತ್ತು. ದೊಡ್ಡಹಬ್ಬದ ಸಮಯದಲ್ಲಿ ಬರುವ ಬಿಂಗಿ ಹಾಡುವವರ ತಂಡಕ್ಕೆ ಇವನೂ ಸೇರಿಕೊಂಡಿದ್ದ. ಬಿಂಗಿ ತಂಡದವರು ಬರುವುದೇ ರಾತ್ರಿ 12ರ ನಂತರ. ದೇವಸ್ಥಾನದಿಂದ ದೀಪ ಹಚ್ಚಿಕೊಂಡು ಮನೆಮನೆಗೂ ಹೋಗಿ ಹಾಡಿ ಅವರು ತಂದ ದೀಪವನ್ನು ಮನೆಗೆ ಕೊಟ್ಟು ಊರೆಲ್ಲ ತಿರುಗಿದ ನಂತರ ವಾಪಾಸು ದೇವಸ್ಥಾನಕ್ಕೇ ಹೋಗಿ ದೀಪ ಹಚ್ಚಿ ಬರುತ್ತಾರೆ. ಆಗಿನ್ನೂ ಮೀನಾಕ್ಷಿ ಮತ್ತು ಅವನ ನಡುವೆ ಪ್ರೇಮಾಂಕುರವಾಗಿತ್ತು. ಅಂಥ ಸಮಯದಲ್ಲೇ ದೊಡ್ಡಹಬ್ಬದ ಮರುದಿವಸ ಕೋಲಾಟವಾಡುತ್ತ ಬುಡ್ಡಿ ಭಟ್ರ ಮನೆಗೂ ಬಂದಿತು ತಂಡ. ಜೋರು ನಿದ್ದೆಯಲ್ಲಿದ್ದ ಮೀನಾಕ್ಷಿಯನ್ನು ಹಾಡು ಎಬ್ಬಿಸಿತು.

ಕಂಚಿನ ಕದವೋ ಬೆಳ್ಳಿಯ ಮಿಡವೋ
ಒತ್ತೊತ್ತಿ ತೆಗಿಯೋ ಮನೆ ಒಡೆಯಾ
ಚಿನ್ನದ ಮಿಡವೋ ಬೆಳ್ಳಿಯ ಕದವೋ
ಒತ್ತೊತ್ತಿ ತೆಗಿಯೋ ಮನೆ ಅಳಿಯಾ..

ಹಾಡುತ್ತಿದ್ದ ಹಾಗೇ ಅವರ ಮನೆಯ ಬಾಗಿಲು ತೆರೆಯಿತು. ಎಲ್ಲರೂ ಹೊರಬಂದು ಅಲ್ಲಲ್ಲಿ ಕುಳಿತು ಇವರ ಹಾಡು, ಕುಣಿತ, ಕೋಲಾಟಗಳನ್ನು ನೋಡಹತ್ತಿದರು. ಬಾಗಿಲು ತೆಗೆದ ಮೇಲೆ ಅವರ ಹಾಡಿನ ದಾಟಿ ಬದಲಾಗುತ್ತದೆ.

ಬಲ್ಲಾಳ ಬಲಿವೇಂದ್ರನೋ ರಾಜಾಕೋ…
ಗೆಲ್ಲಾರ ಸಲಹುವನೋ…
ಬಲ್ಲಾಳ ಬಲಿವೇಂದ್ರ ಬಲ್ಲೆದ್ದು ಬರುವಾಗ
ಕಲ್ಲಂಥ ಮಳೆಯೇ ಸುರಿದಾವೋ…

ಹಾಡುತ್ತ ಹೆಜ್ಜೆ ಹಾಕುತ್ತಿದ್ದ ಶಂಕ್ರ್ಯನನ್ನೇ ನೋಡುತ್ತಿದ್ದಳು ಮೀನಾಕ್ಷಿ. ತಾಳಕ್ಕೆ ತಪ್ಪದ ಶಂಕ್ರ್ಯ ಕೋಲಾಟದಲ್ಲಿ ಒಳ್ಳೆ ಕಸುಬು ತೋರುತ್ತಿದ್ದ. ಅಷ್ಟೊತ್ತಿಗಾಗಲೇ ಬುದ್ಯಾನ ಮಗ ಶಂಕ್ರ್ಯಾ ಕೋಲಾಟದಲ್ಲಿ ಒಳ್ಳೆ ಕಸುಬುದಾರನೆಂದು ಊರಲ್ಲಿ ಹೆಸರೂ ಪಡೆದಿದ್ದ. ಅವತ್ತು ಮೀನಾಕ್ಷಿಯ ಮುಂದೆ ಇನ್ನೂ ಒಳ್ಳೆಯ ಕಸುಬನ್ನೇ ತೋರಿದ್ದ. ಪದವೆಲ್ಲ ಮುಗಿದ ಮೇಲೆ ಶಂಕ್ರ್ಯಾನೇ ದೀಪ ತಂದು ಮೀನಾಕ್ಷಿಯ ಖಾಲಿಹಣತೆಗೆ ದೀಪ ಹಚ್ಚಿ, ಆ ದೀಪದ ಮಂದ ಬೆಳಕಲ್ಲಿ ಅವಳ ಮುಖವನ್ನೇ ನೋಡುತ್ತ ನಿಂತಿದ್ದ. ಇನ್ನೂ ದೀಪ ಹಚ್ಚಿ ಮುಗಿಲಿಲ್ವೇನೋ ಶಂಕ್ರ್ಯಾ ಎಂದು ಮತ್ತೊಬ್ಬ ಕೂಗಿದ ಮೇಲೆಯೇ ಎಚ್ಚರಾಗಿದ್ದು ಅವನು.

ನೋಡಲು ಪರವಾಗಿಲ್ಲ ಎಂದೆನಿಸಿದರೂ, ಗಂಡಿನ ಕಡೆಯವರು ಬೇಡುವಂಥ ಎಲ್ಲ ಗುಣಗಳೂ ಅವಳಲ್ಲಿದ್ದರೂ, ವರದಕ್ಷಿಣೆಕೊಡಲು ತಯಾರಿದ್ದರೂ ಅವಳ ಮದುವೆ ಮಾತ್ರ ಆಗಲೇ ಇಲ್ಲ. ಬಂದ ಗಂಡುಗಳೆಲ್ಲ ಉಪ್ಪಿಟ್ಟು, ಕೇಸರಿ ಬಾತ್ ತಿಂದು ಡರ್ ಎಂದು ತೇಗಿ, ಕಡೆಗೆ ಅವಳನ್ನು ಒಪ್ಪುತ್ತಿರಲಿಲ್ಲ. ಒಪ್ಪದಿರಲು ಕಾರಣವೇ ತಿಳಿಯುತ್ತಿರಲಿಲ್ಲ. ಪ್ರತಿ ಸಲ ಉಪ್ಪಿಟ್ಟು ಕೇಸರಿ ಬಾತ್ ಮಾಡುವಾಗಲೂ ಅವಳ ಅಮ್ಮ ಜಾನಕಮ್ಮ, ಕೇಸರಿಬಾತ್ ಗೆ ತುಪ್ಪ ಸ್ವಲ್ಪ ಜಾಸ್ತಿ ಹಾಕು, ಸಕ್ಕರೆಯನ್ನೂ ಜಾಸ್ತಿಯೇ ಹಾಕು ಎನ್ನುತ್ತಿದ್ದಳು. ಮೀನಾಕ್ಷಿ ವ್ಯಂಗ್ಯವಾಗಿ ನಕ್ಕು, ಇನ್ನೂ ಎಷ್ಟು ಸಲ ಹೀಗೆಯೇ ಉಪ್ಪಿಟ್ಟು ಕೇಸರಿ ಬಾತ್ ಮಾಡುತ್ತಿರಲಿ ಎಂದು ನಿಟ್ಟುಸಿರು ಬಿಡುತ್ತಲೇ ಮತ್ತೆ ಮತ್ತೆ ಅದದೇ ತಿಂಡಿ ತಟ್ಟೆಯನ್ನು ಬಂದ ಗಂಡುಗಳೆದುರು ಇಟ್ಟು ಗೊಂಬೆಯಂತೆ ನಿಲ್ಲುತ್ತಿದ್ದಳು

ಅದಾಗಿ ಸ್ವಲ್ಪ ದಿವಸವಿರಬಹುದು. ಬುಡ್ಡಿ ಭಟ್ರಿಗೆ ಅದೇನಾಯ್ತೋ. ಆಚೆ ಕೇರಿಯ ದ್ಯಾವ್ರ ಭಟ್ರ ಮಗ ದೇವಸ್ಥಾನದ ಪೂಜೆ ಮಾಡಿಕೊಂಡಿದ್ದ ಮಂಜಭಟ್ಟನಿಗೆ ಮೀನಾಕ್ಷಿಯ ಜಾತಕ ಕೊಟ್ಟರು. ಅವನನ್ನು ಎಡಬಟ್ಟು ಮಂಜನೆಂದೇ ಕರೆಯುತ್ತಿದ್ದರು. ದ್ಯಾವರ ಭಟ್ಟರಿಗೆ ಇರುವ ಏಕೈಕ ಪುತ್ರ ಮಂಜಭಟ್ಟನಿಗೆ ಬುದ್ಧಿ ಸರಿಇರಲಿಲ್ಲ. ಯಾವಾಗಲೂ ಏನೇನೋ ಹಲುಬುತ್ತ, ಅಷ್ಟು ದೊಡ್ಡವನಾದರೂ ಕಂಡವರ ಮನೆಗೆ ತಿಂಡಿ, ಊಟ ಮಾಡಲು ಹೋಗಿ ಅವರಿಂದಲೂ, ಮನೆಯವರಿಂದಲೂ ಬೈಸಿಕೊಳ್ಳುತ್ತಿದ್ದ. ಯಾರೇ ಬೈದರೂ ಕವಳ ಜಗಿದು ಕೆಂಪಗೆ ತಿರುಗಿದ ಹಲ್ಲುಗಳನ್ನು ಕಿರಿದು ನಿಲ್ಲುತ್ತಿದ್ದ. ಈ ಬುಡ್ಡಿಭಟ್ರ ಮನೆಗೂ ಬಂದು ಗಡದ್ದಾಗಿ ತಿಂಡಿ ತಿನ್ನುವುದಲ್ಲದೆ, ಮೀನಾಕ್ಷಿಯ ಉದ್ದನೆಯ ಜಡೆಯನ್ನು ಎಳೆಯುತ್ತ ಇನ್ನೊಂದು ದ್ವಾಸೆ ಹಾಕೆ, ಎಂದು ಬೇಡುತ್ತಿದ್ದ. ಸಿಡುಕುತ್ತ ಮೀನಾಕ್ಷಿ ದೋಸೆ ಹಾಕುತ್ತಿದ್ದಳು. ಯಾವ ಕೆಲಸವೂ ಅವನಿಂದ ಸಾಧ್ಯವಾಗದಾಗ, ದ್ಯಾವರು ಭಟ್ರು ತಾವು ಮಾಡುತ್ತಿದ್ದ ದೇವಸ್ಥಾನದ ಪೂಜೆಯನ್ನೇ ಮಗನಿಗೆ ವಹಿಸಿದ್ದರು. ಅದನ್ನಾದರೂ ಮಾಡಿಕೊಂಡಿರಲಿ ಎಂದು.

ಇಷ್ಟಲ್ಲದೆ ಅವನಿಗೆ ಒಂದುಕಣ್ಣು ಮೆಳ್ಳಗಣ್ಣು. ಆದರೂ ಪರವಾಗಿರಲಿಲ್ಲ. ಗಂಡು ತಾನೇ? ಅವನಿಗೆ ಮೀನಾಕ್ಷಿಯ ಜಾತಕ ಸರಿಹೊಂದುತ್ತದೆ. ನಾಡಿದ್ದು ದ್ಯಾವ್ರ ಭಟ್ರ ಕುಟುಂಬ ಮನೆಗೆ ಬರುತ್ತಾರೆಂದು ಮೀನಾಕ್ಷಿಗೆ ಕೇಳುವಂತೆಯೇ ಹೆಂಡತಿಗೆ ಜೋರಾಗಿ ಹೇಳಿದರು. ಬುಡ್ಡಿ ಭಟ್ರು ಹಾಗೆ ತಾಪಡ್ ತೋಪಡಾಗಿ ಮಗಳ ಮದುವೆ ನಿಕ್ಕಿ ಮಾಡಲು ಕಾರಣವಿತ್ತು. ಅಷ್ಟೊತ್ತಿಗಾಗಲೇ ಮೀನಾಕ್ಷಿ-ಶಂಕ್ರ್ಯನ ಸುದ್ದಿ ದಿವರಕೇರಿ ದಾಟಿ, ಊರೆಲ್ಲ ಗುಸುಗುಸು ಎಂದಾಗಿ, ಭಟ್ರ ಕಿವಿಗೂ ಮುಟ್ಟಿತ್ತು. ಅದಕ್ಕೆ ಇಂಬು ಕೊಡುವಂತೆ ದೊಡ್ಡ ಹಬ್ಬದ ದಿವಸ ಶಂಕ್ರ್ಯ ಕುಣಿಯುತ್ತ ಬೇಕೆಂದೇ ಮೀನಾಕ್ಷಿ ಹತ್ರ ಬಂದದ್ದು, ಮೀನಾಕ್ಷಿ ಮೈಮರೆತು ನಿಂತದ್ದು, ಅವಳಿಗೇ ಅವ ದೀಪ ಕೊಟ್ಟದ್ದು, ಇಬ್ಬರೂ ನೋಡುತ್ತ ಪ್ರಪಂಚವನ್ನೇ ಮರೆತವರಂತೆ ನಿಂತದ್ದೆಲ್ಲ ನೋಡಿ ಅರಿಯಲಾರದಷ್ಟು ದಡ್ಡರೇನಾಗಿರಲಿಲ್ಲ ಭಟ್ರು. ಅದಕ್ಕೇ ಇನ್ನು ಹೀಗೆಬಿಟ್ಟರೆ ಪೂಜೆ ಪುನಸ್ಕಾರ ಎಂದು ತಲೆತಲಾಂತರದಿಂದ ಹೆಸರುಮಾತಾದ ಮನೆತನಕ್ಕೆ ಮಸಿ ಬಳಿಯುವ ಕೆಲಸ ಇವಳಿಂದಲೇ ಆದೀತೆಂದು ಯೋಚಿಸಿ ಈ ತೀರ್ಮಾನಕ್ಕೆ ಬಂದಿದ್ದರು. ಆದರೆ ಸುದ್ದಿ ತಿಳಿದಾಗಿನಿಂದ ಮೀನಾಕ್ಷಿ ನಿದ್ರಿಸಲಿಲ್ಲ. ಹೊಟ್ಟೆಯಲ್ಲಿ ಹೇಳಲಾಗದ ಸಂಕಟ. ಮಾರನೇ ದಿನ ಶಂಕ್ರ್ಯ ಕೆಲಸಕ್ಕೆ ಬರುವವರೆಗೂ ಕಾಯದೇ ಏನೋ ನೆವ ಇಟ್ಟುಕೊಂಡು ತಾನೇ ತೋಟದ ಹಾದಿ ಹಿಡಿದು, ಶಂಕ್ರ್ಯನಿಗೆಲ್ಲ ವರದಿ ಒಪ್ಪಿಸಿದಳು. ಅವತ್ತು ಅವರಿಬ್ಬರೂ ಊರು ಬಿಡುವವರಿದ್ದರು.

“ಕರೆಕ್ಟಾಗಿ ಸಂಜೆ 4ರ ಬಸ್ಸಿಗೆ ಹೊರಟುಬಿಡು. ನಾನು ಸಿದ್ದಾಪುರದಲ್ಲಿ ಕಾಯುತ್ತಿರುತ್ತೇನೆ. ಅಲ್ಲಿಂದ ಎಲ್ಲಿಗಾದರೂ ಹೊರಡುವ” ಎಂದಿದ್ದ ಶಂಕ್ರ್ಯ ಅವಳ ಕೈಮೇಲೆ ಕೈ ಹಾಕಿ. ಅದರಂತೆಯೇ ಇಡೀ ದಿವಸ ಆತಂಕದಲ್ಲಿಯೇ ಕಳೆಯಿತು ಅವಳಿಗೆ. ಮಧ್ಯಾಹ್ನ ಎರಡರ ಹೊತ್ತಿಗೆ ಬಟ್ಟೆಯನ್ನು ಬ್ಯಾಗಿಗೆ ತುಂಬಿ, ನೆಂಟರ ಮನೆಗೆ ಹೋಗಿ ಬರುತ್ತೇನೆಂದು ಹೊರಟಳು. ಅವತ್ತು ಅಪ್ಪ ಇರಲಿಲ್ಲ ಊರಲ್ಲಿ. ಇನ್ನೇನು ಅಂಗಳ ದಾಟಿ ದಣಕಲು ತೆಗೆದು ಹೊರಡಬೇಕು ಅನ್ನುವಷ್ಟರಲ್ಲಿ ಅಪ್ಪ ಅವಳೆದುರು ಪ್ರತ್ಯಕ್ಷವಾಗಿಬಿಟ್ಟ, ಮೊದಲೇ ಎಲ್ಲವೂ ಗೊತ್ತು ಎಂಬಂತೆ. ಹೆದರಿ ಅದುರಿ ಹೋದಳು ಮೀನಾಕ್ಷಿ. “ಎತ್ಲಾಗೆ..” ಎಂದು ಕೇಳಿದರು ಬುಡ್ಡಿ ಭಟ್ರು.
ಅದೂ.. ಅಪ್ಪಯ್ಯ… ಅಪ್ಪಯ್ಯ… ಸಾವಿತ್ರತ್ತೆ ಮನೆಗೆ ಹೋಗ್ಬತ್ತಿ. ಅವಳಿಗೆ ಹುಷಾರಿಲ್ಯಡ. ಹೇಳಿ ಕಳಿಸಿದ್ದು ಅದಕ್ಕೆ… ಎಂದು ತಡೆತಡೆದು ಹೇಳಿದಳು.

“ಈಗ ಆನು ಅಲ್ಲಿಂದಲೇ ಬತ್ತಾ ಇದ್ದಿ, ಎಲ್ಲ ಆರಾಮಿದ್ದ, ನಡಿ ಒಳಗೆ” ಎಂದು ಅವಳ ಕೈ ಹಿಡಿದು ಎಳೆದುಕೊಂಡು ಬಂದು ಮನೆ ಒಳಕ್ಕೆ ನೂಕಿ ಹೆಂಡತಿಯನ್ನು ಕೂಗಿದರು. ಗಾಬರಿಯಿಂದ ಓಡಿ ಬಂದ ಹೆಂಡತಿಗೆ, “ಇದು ಎತ್ಲಾಗೆ ಹೊಂಟಿದ್ದು ಹೇಳೇನಾದ್ರೂ ಗೊತ್ತಿದ್ದ ನಿಂಗೆ… ಎಂಗೆಲ್ಲ ಗೊತ್ತಾಗ್ತಿಲ್ಲೆ ಹೇಳಿ ಮಾಡಿದ್ಯನೆ ಹಲ್ಕಟ್ ರಂಡೆ. ಆ ಬೋಸುಡ್ಕೆ ಜೊತಿಗೆ ಹೊಂಟಿದ್ದೆ ಅಲ್ದಾ… ನಿಂಗೆ ಗಂಡು ಸಿಗದೇ ಇದ್ರೆ ಮದುವೆನೇ ಇಲ್ಲೆ ಹೇಳಿ ರಾಮ ಶಿವಾ ಹೇಳಿಕ್ಯಂಡಿರು. ಎಂತ ನಿನ್ನ ಬಸವಿಗೆ ಬಿಟ್ಟಿದ್ಯ ಮಾಡಿದ್ಯನು…” ಎಂದು ಕೂಗಿದರು.
ಅಪ್ಪನ ಅವತ್ತಿನ ರೌದ್ರಾವತಾರ ಹೇಗಿತ್ತೆಂದರೆ ಅವ ಮಾಡುವ ಮಾಟ-ಮಂತ್ರಗಳ ದೆವ್ವಗಳೆಲ್ಲ ಅವನ ಮೈಮೇಲೇ ಆವಾಹಿಸಿಕೊಂಡು ಬಿಟ್ಟವಾ ಎಂದೆನಿಸುವಷ್ಟು. ಮೀನಾಕ್ಷಿ ಥರಗುಟ್ಟಿ ಹೋದಳು. ಅಳುತ್ತ ಎದ್ದು ಹೋದವಳ ಹಿಂದೆ ಅಮ್ಮನೂ “ಎಂಗ್ಳ ಮರ್ಯಾದೆ ತೆಗ್ಯಲೇ ಹುಟ್ಟಿದ್ದೆ ಕಾಣ್ತು ನೀನು. ನೀ ಹೀಂಗೆಲ್ಲ ಮಾಡಕ್ಯಂಡ್ರೆ ತಂಗ್ಯರ ಮದುವೆ ಮಾಡದು ಹೆಂಗೆ…” ಎಂದು ಬಯ್ಯುತ್ತಲೇ ಅವಳನ್ನು ಕೋಣೆಯಲ್ಲಿ ಕೂಡಿ ಹಾಕಿದಳು. ಉಳಿದ ತಂಗಿಯರೆಲ್ಲ ಭಯದಿಂದ ಮೂಲೆಗೆ ಸೇರಿದ್ದರು. ಪಾಪ, ಶಂಕ್ರ್ಯ ತನಗಾಗಿ ಕಾದು ಕಾದು, ಸಿಟ್ಟು ಮಾಡಿಕೊಂಡನೋ ಏನೋ… ಅವನಿಗೆ ಸುದ್ದಿ ಮುಟ್ಟಿಸುವುದಾದರೂ ಹೇಗೆ.. ಎಂದು ಯೋಚಿಸುತ್ತಲೇ ರಾತ್ರಿಯೆಲ್ಲ ಕಳೆದಳು ಮೀನಾಕ್ಷಿ.

ಮಾರನೇ ದಿನ ಶಂಕ್ರ್ಯ ಕೆಲಸಕ್ಕೆ ಬರಲಿಲ್ಲ. ಅವನು ಯಾಕೆ ಬರಲಿಲ್ಲವೆಂದು ಯಾರೊಬ್ಬರೂ ಕೇಳಲೂ ಇಲ್ಲ. ಇದಾಗಿ 2-3 ದಿವಸಗಳ ನಂತ್ರ ಶಂಕ್ರ್ಯನ ಅಮ್ಮ ನಾಗಿ, ಅಳುತ್ತ ಮನೆಬಾಗಿಲಿಗೆ ಬಂದು ಬುಡ್ಡಿ ಭಟ್ರ ಹತ್ರ “ಸ್ವಾಮೀ… ನನ್ನ ಮಗ ಕಾಣಾಕಿಲ್ಲ… ಹುಡುಕ್ಕೊಡಿ” ಎಂದು ಎಂದು ಅಳ ಹತ್ತಿದಳು. “ನಿನ್ನ ಮಗ ಎಲ್ಲಿ ಹಾಳಾಗಿ ಹೋದ್ನೋ.. ಬತ್ತಾನಬಿಡು.. ಹೋಗು” ಎಂದು ನಿರ್ಲಕ್ಷ್ಯದಿಂದ ಹೇಳಿದರು ಭಟ್ರು. “ಇಲ್ಲ ಸ್ವಾಮಿ. ಬುದ್ಯಾ ಒಂಟೋದ್ ಮ್ಯಾಲೆ ಅವ ಇಂಗೆಲ್ಲ ಮನೆ ಬುಟ್ಟು ಓದಂವಲ್ಲ. ಅವಂಗೇನೋ ಆಗೈತೆ ಅನಿಸ್ತೈತೆ.. ಏನಾರ ಚೀಟು, ಭಸ್ಮ ಮಾಡ್ಕೊಡಿ ಸ್ವಾಮಿ” ಎಂದು ಅಂಗಲಾಚಿದಳು. “ಅವನಿಗೆಂಥ ಬೂದಿನೇ ನಾಗಿ. ಯಾರ್ಯಾರಿಗೆಲ್ಲ ಬೂದಿ ಎರಚವ ಅವ” ಎಂದು ಜೋರು ಮಾಡಿದರೂ ಮತ್ತೇನೋ ನೆನಪಾದವರಂತೆ “ಲೇ ಇವಳೇ.. ದೇವರ ಮುಂದಿರುವ ಭಸ್ಮ ತಗಂಬಾ” ಎಂದುಹೆಂಡತಿಗೆ ಹೇಳಿ ತರಿಸಿ ಭಸ್ಮವನ್ನು ಮಂತ್ರಿಸಿ ನಾಗಿಗೆ ಕೊಟ್ಟು ಕಳಿಸಿದರು. ಅಳುತ್ತಲೇ ನಾಗಿ ಭಸ್ಮವನ್ನು ಹಿಡಿದು ಮನೆ ಹಾದಿ ಹಿಡಿದಳು. ಹಾಗೆ ನಾಗಿ ಹೋದ ಮತ್ತೆರಡು ದಿವಸಗಳ ನಂತರ ಶಂಕ್ರ್ಯ ಹೊಳೆಯಲ್ಲಿ ಈಜಲು ಹೋಗಿ ಸೆಳವು ಹೆಚ್ಚಾಗಿ ಸತ್ತು ಹೋದ ಸುದ್ದಿ ಸಿಕ್ಕಿತು.

ಸುದ್ದಿ ಕೇಳಿದ ಮೀನಾಕ್ಷಿಗೆ ತಲೆ ಸುತ್ತಿ ಬಂದಂತಾಗಿ ಕುಸಿದಳು. ಅಷ್ಟು ಅದ್ಭುತ ಈಜುಗಾರ, ಎಂಥ ಸೆಳವಿಗೂ ಹೆದರುವ ಪೈಕಿಯಲ್ಲ, ಕಟ್ಟುಮಸ್ತಾದ ಆಳು, ಅವನಿಗೆ ಸೆಳವು ಹೆಚ್ಚಾಗಿ ನದಿ ನೀರು ಎಳೆದುಕೊಂಡು ಹೋಯಿತು ಎಂದರೇನು…? ಯಾರ್ಯಾರೋ ಮುಳಗಕ್ಕೆ ಹೋದವರನ್ನೆಲ್ಲ ಎತ್ತಿ ದಡಕ್ಕೆ ಹಾಕಿದವನು, ಎಂಥ ದೊಡ್ಡ ಮರ ಇರಲಿ ಹತ್ತಿಳಿಯುವಂಥ ಎದೆಗಾರಿಕೆ ಇರುವಂಥವನು, ಎಂಥದೊಡ್ಡ ನದಿ ಇರಲಿ ಈಜು ಹೊಡೆಯುವ, ಎಂಥ ಆಳವಾದ ಬಾವಿ ಇದ್ದರೂ ಇಳಿಯುವವ ಶಂಕ್ರ್ಯಾ ನದಿಯಲ್ಲಿ ಮುಳುಗಿ ಸತ್ತನೆಂದರೆ… ನಂಬಲು ಸಾಧ್ಯವೇ? ಅಲ್ಲಿಯೇ ಕುಳಿತ ಅಪ್ಪನ ಮುಖವನ್ನು ನೋಡಿದಳು. ಅಪ್ಪನ ಮುಖ ಕೆಂಪಗೆ ಕೆಂಡದ ಹಾಗೆ ಉರಿಯುತ್ತಿತ್ತು. ಅವ ಮಾಡುತ್ತಿದ್ದ ಮಾಟ-ಮಂತ್ರಗಳೆಲ್ಲ ನೆನಪಾದವು. ಅಂದರೆ… ಅಂದರೆ… ಏನೋ ಹೊಳೆದಂತಾಗಿ ನಡುಗಿದಳು ಮೀನಾಕ್ಷಿ.

ಅಷ್ಟರ ನಂತರ ತುಂಬ ಮಂಕಾದಳು ಮೀನಾಕ್ಷಿ. ದೀಪದ ಬೆಳಕು ನೋಡಿದರೆ ಭಯ ಬೀಳುತ್ತಿದ್ದಳು. ಸಣ್ಣ ಶಬ್ದಕ್ಕೂ ಬೆಚ್ಚಿ ಬೀಳುತ್ತಿದ್ದಳು. ಹೀಗೇ ಒಂದಷ್ಟು ದಿನಗಳು ಕಳೆದವು. ಮೀನಾಕ್ಷಿಯಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಮಗಳನ್ನು ನೋಡಿ ಭಟ್ರ ಹೆಂಡತಿ ಜಾನಕಮ್ಮ ದಿಗಿಲಾದಳು. ಜಾನಕಮ್ಮ ದಿಗಿಲಾದದ್ದು ಮಗಳು ಮಂಕಾಗಿದ್ದಕ್ಕಲ್ಲ, ಅಥವಾ ಮಗಳು ಶಬ್ದಕ್ಕೆ ಬೆಚ್ಚಿಬೀಳುತ್ತಿದ್ದುದಕ್ಕೂಆಗಿರಲಿಲ್ಲ. ಬದಲಾಗಿ ಅವಳು ಹೊರಗೆ ಕೂರದೆ ತುಂಬ ದಿನಗಳಾಗಿದ್ದವು. ಅಮ್ಮನಿಗೇನೋ ಅನುಮಾನ, ಮೀನಾಕ್ಷಿಯನ್ನೇ ಒಂದುದಿನ ಕೇಳಿಯೂ ಬಿಟ್ಟಳು, “2 ತಿಂಗಳಿಂದ ನೋಡ್ತಾ ಇದ್ದಿ, ನೀನು ಹೊರಗೆ ಕುಂತಿದ್ದಿಲ್ಲೆ…” ಎಂದು ಅವಳ ಕೈ ಹಿಡಿದು ಅಲುಗಿಸಿ ಕೇಳಿದಳು. ಸುಮ್ಮನೇ ಅಮ್ಮನ ಮುಖ ನೋಡಿದಳೇ ವಿನಾ ಏನೊಂದನ್ನೂ ಹೇಳಲಿಲ್ಲ ಮೀನಾಕ್ಷಿ. ಅನುಮಾನ ಬಂದು ಗಂಡನಿಗೂ ಹೇಳಿದಳು. ಈಗ ನಿಜಕ್ಕೂ ಬುಡ್ಡಿ ಭಟ್ರ ತಲೆ ಕೆಟ್ಟು ಹೋಯಿತು. ಸಾಯುವ ಥರ ಹೊಡೆಯಬೇಕೆಂದು ಒಳಬಂದವರು ಎಲ್ಲಿಯೋ ನೋಡುತ್ತ ಮೌನವಾಗಿ ಕುಳಿತ ಮೀನಾಕ್ಷಿಯನ್ನು ನೋಡಿ ಏನೂ ಮಾಡದೇ ಸೀದ ಹೊರಹೋದರು. ಮಾರನೇ ದಿನ ಜಾನಕಮ್ಮ ಆಳು ದ್ಯಾವನಿಗೆ ಹೇಳಿ ಅವನ ಹೆಂಡತಿ ಮಂಜಿನ ಕರೆಸಿ, ಬಸಿರು ಇಳಿಸೋ ಔಷಧ ತಯಾರು ಮಾಡಲು ಹೇಳಿದಳು. “ಯಾರಿಗಮ್ಮ, ಏಟುತಿಂಗ್ಲಾಗೈತೇ” ಎಂದು ಕೇಳಿದ್ದಕ್ಕೆ, “ಅದೆಲ್ಲ ನಿಂಗೆಂತಕ್ಕೆ, ಹೇಳಿದಷ್ಟು ಮಾಡು” ಎಂದು ಜೋರುಮಾಡಿದಳು. ತನಗ್ಯಾಕೆಂದು ತಲೆ ಅಲ್ಲಾಡಿಸಿ ಮಂಜಿ ಔಷಧ ತಯಾರಿಸಲು ಹೋದಳು. ಮಂಜಿ ತಂದುಕೊಟ್ಟ ಔಷಧವನ್ನು ಬೆಳಗಿನ ಜಾವವೇ ಮೀನಾಕ್ಷಿಗೆ ತಂದು ಕುಡಿಸಿದಳು ಜಾನಕಮ್ಮ. ಮೀನಾಕ್ಷಿಗೆ ತಾನೇನು ಮಾಡುತ್ತಿದ್ದೇನೆ, ಏನನ್ನು ಕುಡಿಯುತ್ತಿದ್ದೇನೆಂಬ ಕಬರೂ ಇರಲಿಲ್ಲ. ಕೊಟ್ಟಿದ್ದನ್ನು ತಿನ್ನುತ್ತ, ಸುಮ್ಮನೆ ನೋಡುತ್ತ ಕುಳಿತಿರುತ್ತಿದ್ದಳು. ಆದರೆ ಮಂಜಿ ಔಷಧ ಯಾವ ಕೆಲಸವನ್ನೂ ಮಾಡಲಿಲ್ಲ.

ಯಾವ ಔಷಧಕ್ಕೂ ಬಗ್ಗದಂತೆ ಅವಳ ಹೊಟ್ಟೆಯಲ್ಲಿ ಭ್ರೂಣ ಬೆಳೆಯುತ್ತಿತ್ತು. ಭಟ್ಟರನ್ನು ಅಣಕಿಸುವಂತೆ ದಿನೇ ದಿನೇ ಅವಳ ಹೊಟ್ಟೆ ದಪ್ಪಗಾಗುತ್ತಿತ್ತು. ಅವಳಿಗೆ ಔಷಧ ಕುಡಿಸಿ ಅವಳ ದೇಹ ಇಳಿಸಿ, ಏನೋ ಸಬೂಬು ಹೇಳಿ ಎಡಬಟ್ಟು ಮಂಜನಿಗೆ ಕೊಟ್ಟು ಮದುವೆ ಮಾಡಿ, ನಂತರ ಅವಳ ತಂಗಿ ಪಾರ್ವತಿಗೂ ಮದುವೆಮಾಡಿಬಿಡುವ ಯೋಚನೆಯಲ್ಲಿದ್ದ ಭಟ್ಟರಿಗೆ ಇಳಿಯದ ಅವಳ ಮೈ ನೋಡಿ ಶಂಕ್ರ್ಯನೇ ಬಂದು ಎದೆಗೆ ಒದ್ದಂತಾಗುತ್ತಿತ್ತು. ಎಂಥ ಔಷಧಕ್ಕೂ ಜಪ್ಪಯ್ಯ ಅನ್ನದ ಅವನದ್ದದೆಂಥ ಗಟ್ಟಿ ಪಿಂಡ ಹಾಗಿದ್ರೆ ಎಂದು ಮನಸ್ಸಿನಲ್ಲೇ ಹಲ್ಲುಕಡಿದರು. ಎದುರಿಗೆ ಓಡಾಡುತ್ತಿದ್ದ ಪಾರ್ವತಿಯನ್ನು ನೋಡಿ ಹಾಗೆಯೇ ನಿಂತರು. ಇನ್ನೊಂದು ವಾರಕ್ಕೆ ಅವಳನ್ನು ನೋಡಲು ಗಂಡಿನ ಕಡೆಯವರು ಬರುವವರಿದ್ದಾರೆ. ಆ ಕಡೆಘಟ್ಟದ ಕೆಳಗಿನ ಶ್ರೀಮಂತರ ಮನೆತನದ ಗಂಡು. ಗಂಡಿನವರು ಬಂದಾಗ ಮೀನಾಕ್ಷಿಯನ್ನು ನೋಡಿಬಿಟ್ಟರೆ, ಅವಳ ಹೊಟ್ಟೆಯನ್ನು ನೋಡಿದರೆ… ಪಾರ್ವತಿಯಷ್ಟೇ ಅಲ್ಲ, ಇನ್ನೂ ಸಾಲಾಗಿ ಮೂವರು ಇದ್ದಾರೆ ಮದುವೆಗೆ. ಅವರನ್ನೆಲ್ಲ ಸಾಗಹಾಕಬೇಕಿತ್ತು, ಹಾಗೆಯೇ ಕ್ಷಣಹೊತ್ತು ನಿಂತರು. ಅವತ್ತು ರಾತ್ರಿ ತುಂಬ ಹೊತ್ತು ದೇವರ ಮುಂದೆ ಕೂತಿದ್ದರು. ಕೃತ್ರಿಮ ತೆಗೆಯುವಾಗ ಮಾಡುವಂತೆ ಯಾವ್ಯಾವುದೋ ಕಡ್ಡಿಗಳನ್ನಿಟ್ಟು, ಮಂಡಲ ಹಾಕಿ ಅದರ ಮುಂದೆ ಕಣ್ಣುಮುಚ್ಚಿ ಕುಳಿತಿದ್ದರು. ಊಟಕ್ಕೂ ಬರಲಿಲ್ಲ. ಪಾರ್ವತಿಯೂ ಸೇರಿದಂತೆ ಉಳಿದ ಮೂವರು ಮಕ್ಕಳೂ ಅಪ್ಪನನ್ನು ಮಾತನಾಡಿಸಲು ಧೈರ್ಯ ಬಾರದೇ, ಅಮ್ಮನನ್ನೂ ಏನನ್ನೂ ಕೇಳದೇ ಹಾಗೇ ಮಲಗಿ ನಿದ್ದೆ ಹೋದರು.

ಅದಾಗಿ ಒಂದು ವಾರದ ನಂತರ ಗಂಡಿನ ಕಡೆಯವರು ಬಂದು ಪಾರ್ವತಿಯನ್ನು ನೋಡಿ ಒಪ್ಪಿ ಹೋದರು. ಅವರ ಬಳಿ ಭಟ್ರು ನನ್ನ ದೊಡ್ಡ ಮಗಳು ಮೀನಾಕ್ಷಿ ಬಾವಿ ನೀರು ಸೇದಲು ಹೋಗಿ, ಅಕಸ್ಮಾತ್ತಾಗಿ ಬಿದ್ದು ಸತ್ತು ಹೋದಳು. ಎಲ್ಲ ಆ ದುಃಖದಲ್ಲೇ ಇದ್ದೇವೆ ಎಂದು ಕಣ್ಣೊರೆಸಿಕೊಂಡರು. ಬಂದವರು ಪಾಪ, ಎಂತ ಮಾಡಲೆ ಬತ್ತು. ಕೆಲವ್ರ ಆಯುಷ್ಯವೇ ಅಷ್ಟು…” ಎಂದು ಭಟ್ಟರನ್ನುಸಾಂತ್ವನಗೊಳಿಸಿದರು. ಆದರೆ ಪಾರ್ವತಿ ಮಾತ್ರ ಅಪ್ಪನ ಮುಖವನ್ನು ನೋಡಲೂ ಭಯಗೊಂಡು ತಲೆತಗ್ಗಿಸಿ ಒಳಗೆದ್ದು ಹೋದಳು. ನಂತರ ಭಟ್ರು ಪಾರ್ವತಿಯನ್ನೂ, ಉಳಿದವರನ್ನೂ ಮದುವೆ ಮಾಡಿ ಕೈ ತೊಳೆದುಕೊಂಡು, ಈಗಲೂ ಅವರಿವರ ಮನೆಯ ಕೃತ್ರಿಮವನ್ನು ತೆಗೆಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.