ನೀಲಿ ಫ್ರಾಕಿನ ಪೋರಿ..

ಆ ಪುಟ್ಟ ಪಾದಗಳಿಡುವ
ಕಚಗುಳಿ ಎಣಿಸುವ
ಹಾದಿ,
ಅಂಗಾಲಿನೊಳಗಿನ
ಗೀರುಗಳನು ಕಣ್ಣಿಗೊತ್ತಿಕೊಳ್ಳಲು
ಕಾದ
ಉದ್ದದ ಕಾರಿಡಾರು,
ನೀಲಿ ಬಣ್ಣದ ಫ್ರಾಕು ತೊಟ್ಟ
ಆ ಪೋರಿ,
ಎತ್ತಿಕಟ್ಟಿದ ಎರಡೂ ಜಡೆಗೂ
ನಕ್ಷತ್ರ ಮುಡಿದ
ಆ ಸೊಗಸು..
ಎಲ್ಲವೂ ಗಲಗಲ!

ಹಕ್ಕಿಗಳ ಸಂಗೀತದ ಕಛೇರಿಯಂತಹ
ಒಡ್ಡೋಲಗ
ಮಾತೂ ನಾದದ ಬೆನ್ನು ಹತ್ತಿದ
ಈ ಕ್ಷಣಕೆ
ನನ್ನೊಳಗೊಂದು ದಿವ್ಯ ಮೌನ

ಮೌನದೊಳಗಿನಿಂದ ಎಷ್ಟೊಂದು
ಮಾತು ಕೇಳಿಸುತ್ತಿವೆ
ಎದೆಗೆ ಬಡಿಯುತ್ತಿವೆ ಉಮ್ಮಳಿಕೆಗಳು
ಹಸಿದೊಡಲಿನಿಂದ ಚಿಮ್ಮಿದ ಉಸಿರು
ಗಾಳಿಯೊಂದಿಗೆ ಬೆರೆಯಲು
ಯೋಚಿಸುತ್ತದೆ..

ಬೆನ್ನಿಗೆ ಮಣಭಾರದ ಬೂಟಾಟಿಕೆ
ಹೊರಿಸಿ
ಹಳದಿ ಬಸ್ಸಿಗೆ ತಳ್ಳಿ
ಕೈ ಮೂಳೆ ಮುರಿದುಕೊಂಡವರಂತೆ
ಬೀಸುತ್ತಾ ನಿಂತವರನು;
ಬಸ್ಸಲ್ಲಿ ಬುರ್ರನೆ ಹೋದ
ತನ್ನದೇ ವಯಸ್ಸಿನವರನು
ನೋಡಿ ನೋಡಿ
ಕಣ್ಣಲಿ ರಕ್ತ ಹೆಪ್ಪುಗಟ್ಟಿದೆ..

ಕಾಲ ಕರ್ಮದ ಭಾರವು,
ಅದಕ್ಕಿಂತ ತೂಕದ
ನೋವುಗಳು
ಬ್ಯಾಗಿನ ರೂಪದಲಿ ಅವಳ
ಬೆನ್ನುಹತ್ತಿವೆ..
ತೂತು-ತೂತುಗಳೇ ಇರುವ
ಆ ಬ್ಯಾಗಿನಿಂದ ಒಂದಾದರೂ
ನೋವು,
ಶತಮಾನದ ಕರ್ಮ ಕಾಠಿಣ್ಯ
ಜಾರಿ ಹೋಗದ್ದು
ಎಂತಹ ವಿಪರ್ಯಾಸ!?

ಎಳೆಯ ಕೈಗಳಲಿ ಪಾತ್ರೆ ತಿಕ್ಕಿದ
ಕಪ್ಪು ಬೂದಿ
ಹಾಗೆಯೇ ಇದೆ
ಸಹಸ್ರಮಾನದಿಂದಲೂ ಉಳಿದಿರುವ
ಕೊಳೆಯಂತೆ;
ಅದ ತೊಳೆಯುವ
ಒಂದು ಬೊಗಸೆಯಷ್ಟಾದರೂ
ನೀರು
ಎಲ್ಲಿಯೂ ಸಿಗಲಿಲ್ಲವೇಕೆ?

ಇಂಗ್ಲಿಷ್ ಕಂಗ್ಲಿಷ್ ರ್ಯಾಂಕು
ನೌಕರಿಗಳ ಪರಿವೆ ಇಲ್ಲದೆ
ಈ ಪೋರಿ
ಮುರುಕು ಪೆನ್ಸಿಲ್ನಲ್ಲಿ
ರ ಗ ಸ ದ ಅ ತಿದ್ದುತ್ತಿದ್ದಾಳೆ
ಹಾಡಿದ್ದಾಳೆ
‘ಬಲಗೈಯಲ್ಲಿ ಗೀತೆ ಎಡಗೈಯಲ್ಲಿ ರಾಟೆ
ಇವರು ಯಾರು ಗೊತ್ತೆ?’

ಗಾಂಧೀ ನೀವು ಇರಬೇಕಿತ್ತು
ಈ ಪೋರಿಗಾದರೂ!
ಇಂತಹ ಪೋರಿಗಳಿಗಾದರೂ!

ಕಿಲ ಕಿಲ ನಗುವೊಂದು
ಮುಖದಾಚೆಯಲ್ಲೆಲ್ಲೊ
ಅವಿತುಕೊಳ್ಳುತ್ತದೆ
ಶಾಲೆಯಿಂದ ಹೊರಟ
ಹೆಜ್ಜೆಗಳು ಈಗ ಭಾರ

ನಡೆಯುವ ಈ ಪೋರಿಗೆ
ಕವಲುದಾರಿಯೊಂದು
ಏಕೆ ಎದುರಾಗುವುದಿಲ್ಲ?
ಆ ಇನ್ನೊಂದು ಹಾದಿಯಲಿ
ನಡೆಸಿ
ಈ ಪೋರಿಯರಿಗೆ
ಬೇರೊಂದು ಲೋಕವನು
ಏಕೆ
ತೋರುವುದಿಲ್ಲ!?

ಪ್ರಶ್ನೆಯೂ ಇದೆ
ಉತ್ತರವೂ ಇದೆ..

ಆದರೆ!???

ಹೊಸತಲೆಮಾರಿನ ಕವಿ ಸದಾಶಿವ್ ಸೊರಟೂರು ಹುಟ್ಟಿದ್ದು, ಬೆಳೆದಿದ್ದು ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ.
ಈಗ ಚಿಂತಾಮಣಿಯ ದೊಡ್ಡಬೊಮ್ಮನಹಳ್ಳಿ ಪ್ರೌಢಶಾಲೆಯಲ್ಲಿ ಕನ್ನಡ ‌ಕಲಿಸುವ ಮೇಷ್ಟ್ರು.
‘ಹೆಸರಿಲ್ಲದ ಬಯಲು’ ಮತ್ತು ‘ ತೂತು ಬಿದ್ದ ಚಂದಿರ’ ಕವನ ಸಂಕಲನಗಳು ಹಾಗೂ ಮೂರು ಪ್ರಕಟಿತ ಲೇಖನಗಳ ಕೃತಿಗಳು ಪ್ರಕಟವಾಗಿವೆ.
ಸಂಯುಕ್ತ ಕರ್ನಾಟಕ ಪತ್ರಿಕೆಯ ಅಂಕಣಕಾರರೂ ಹೌದು.